ಶರಣರ ದೃಷ್ಟಿಯಲ್ಲಿ ನೇಮ-ಶೀಲ | .ಬಸವರಾಜ ಕಡ್ಡಿ, ಜಮಖಂಡಿ.

ನೇಮವೆಂದರೆ ಕಟ್ಟಾಚರಣೆ. ಕೆಲವರು ದೇವರಿಗೆ ವಿಶೇಷ ಪದಾರ್ಥಗಳನ್ನು ಅರ್ಪಿಸುವ ನೇಮ ಹಿಡಿದರೆ ಮತ್ತೆ ಕೆಲವರು ದೇವರ ಹೆಸರಿನಲ್ಲಿ ಕೆಲವು ಪದಾರ್ಥಗಳ ಬಿಡುವ ನೇಮ ಹಿಡಿದಿರುತ್ತಾರೆ. ಶೀಲವೆಂದರೆ ಮಡಿವಂತಿಕೆ. ಶರಣರು ಅರ್ಥವಿಲ್ಲದ ನೇಮ-ಶೀಲಗಳನ್ನು ನಿರಾಕರಿಸಿ ನಿಜವಾದ ನೇಮ-ಶೀಲಗಳನ್ನು ವಚನಗಳ ಮೂಲಕ ತಿಳಿಸಿದ್ದಾರೆ. ಅನೇಕರು ಅರ್ಥವಿಲ್ಲದ ವ್ರತ, ನೇಮ, ಶೀಲಗಳಲ್ಲಿ ಸಿಲುಕಿ ಅವುಗಳ ಆಚರಣೆಯಲ್ಲಿ ವ್ಯರ್ಥ ಪ್ರಯಾಸ ಪಡುತ್ತಿದ್ದಾರೆ. ಅಂಥವರ ಕುರಿತು ಸತ್ಯಕ್ಕನವರ ವಚನ:

ಅರ್ಚನೆ ಪೂಜನೆ ನೇಮವಲ್ಲ;
ಮಂತ್ರ ತಂತ್ರ ನೇಮವಲ್ಲ;
ಧೂಪ ದೀಪಾರತಿ ನೇಮವಲ್ಲ;
ಪರಧನ ಪರಸ್ತ್ರೀ ಪರದೈವಗಳಿಗೆರಗದಿಪ್ಪುದೆ ನೇಮ.
ಶಂಭುಜಕ್ಕೇಶ್ವರನಲ್ಲಿ ಇವು ಕಾಣಿರಣ್ಣಾ ನಿತ್ಯನೇಮ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-438/ವಚನ ಸಂಖ್ಯೆ-1205)

ಅರ್ಚನೆ ಪೂಜನೆ ನೇಮವಲ್ಲ: ಕೆಲವರು ಬಿಲ್ವಾರ್ಚನೆ, ಕುಂಕುಮಾರ್ಚನೆ ನೇಮ ಹಿಡಿದಿರುತ್ತಾರೆ. ಕೆಲವರು ಲಕ್ಷ್ಮಿಪೂಜೆ, ಗೌರಿಪೂಜೆ, ಸತ್ಯನಾರಾಯಣಪೂಜೆ ಮುಂತಾದ ಪೂಜೆಯ ನೇಮ ಹಿಡಿದಿರುತ್ತಾರೆ. ಅದನ್ನು ನಿಯಮಿತವಾಗಿ ಆಚರಿಸಿಕೊಂಡು ಬರುತ್ತಾರೆ. ಅದು ನಿಜವಾದ ನೇಮವಲ್ಲ. ಮಂತ್ರ ತಂತ್ರ ನೇಮವಲ್ಲ: ಕೆಲವರು ವಿಶೇಷ ಮಂತ್ರವನ್ನು ನಿರ್ದಿಷ್ಟ ಸಂಖ್ಯೆಯಲ್ಲಿ ಪಠಿಸುವ ನೇಮ ಹಿಡಿದಿರುತ್ತಾರೆ. ಇನ್ನೂ ಕೆಲವರು ತಾಮ್ರದ ತಗಡಿನ ಮೇಲೆ ಬರೆದ ಧನಲಕ್ಷ್ಮಿಯಂತ್ರ, ಶನಿಯಂತ್ರ ಮುಂತಾದ ಯಂತ್ರಗಳನ್ನು ಓದುವ, ಪೂಜಿಸುವ ನೇಮ ಹಿಡಿದಿರುತ್ತಾರೆ. ಇದೂ ಕೂಡ ನಿಜವಾದ ನೇಮವಲ್ಲ.

ಧೂಪ ದೀಪಾರತಿ ನೇಮವಲ್ಲ : ಕೆಲವರು ದೇವರಿಗೆ ವಿಶೇಷವಾದ ಧೂಪವನ್ನು ಅರ್ಪಿಸುವ ನೇಮ ಹಿಡಿದಿರುತ್ತಾರೆ. ಮತ್ತೆ ಕೆಲವರು ತುಪ್ಪದ ದೀಪ ಬೆಳಗುವ, ನಂದಾದೀಪ ಬೆಳಗುವ ನೇಮ ಹಿಡಿದಿರುತ್ತಾರೆ. ಇವು ಸಹ ಅರ್ಥವಿಲ್ಲದ ನೇಮ ಎಂದು ಸತ್ಯಕ್ಕ ಹೇಳಿದ್ದಾರೆ.
ಪರಧನ, ಪರಸ್ತ್ರೀ, ಪರದೈವಗಳಿಗೆರಗದಿಪ್ಪುದೆ ನೇಮ.

  1. ಪರರ ಸಂಪತ್ತಿಗೆ ಆಸೆ ಪಡದಿರುವುದು.
  2. ಪರಸ್ತ್ರೀಗೆ ಆಸೆ ಪಡದಿರುವುದು.
  3. ಏಕದೇವ ಉಪಾಸನೆ ಮಾಡುವುದು.

ಶಂಭುಜಕ್ಕೇಶ್ವರ ಲಿಂಗದಲ್ಲಿ ಇವು ಕಾಣಿರಣ್ಣಾ ನಿತ್ಯ ನೇಮ: ಜನರು ವ್ರತ, ನೇಮಗಳನ್ನು ತಮ್ಮ ಸಮಸ್ಯೆಗಳ ಪರಿಹಾರಕ್ಕೆಂದು ಹಿಡಿದು ನಿರ್ದಿಷ್ಟ ಅವಧಿಯ ನಂತರ ಅವುಗಳನ್ನು ಬಿಡುತ್ತಾರೆ. ಕೆಲವರು ಶ್ರಾವಣ ತಿಂಗಳದಲ್ಲಿ ಮಾತ್ರ ನೇಮಗಳನ್ನು ಪಾಲಿಸುತ್ತಾರೆ. ಕೆಲವರು ಮಾಲೆ ಧರಿಸಿದಾಗ ಕಟ್ಟುನಿಟ್ಟಾದ ವ್ರತನೇಮಗಳನ್ನು ಪಾಲಿಸಿ ಮಾಲೆ ತೆಗೆದ ನಂತರ ಮತ್ತೆ ಮೊದಲಿನಂತಾಗುತ್ತಾರೆ. ಇವೆಲ್ಲ ತಮ್ಮ ಸ್ವಾರ್ಥಕ್ಕಾಗಿ ಪಾಲಿಸುವ ನೇಮಗಳು. ಸತ್ಯಕ್ಕನವರು ತಾನು ತಿಳಿಸಿದ ನೇಮಗಳನ್ನು ಪ್ರತಿದಿನ ಪಾಲಿಸಲು ಸೂಚಿಸುತ್ತಾರೆ. ಪ್ರತಿದಿನ ಅವುಗಳನ್ನು ಎಲ್ಲರೂ ಪಾಲಿಸಿದರೆ ಇಂದಿನ ಜ್ವಲಂತ ಸಮಸ್ಯೆಗಳಾದ ಭ್ರಷ್ಟಾಚಾರ, ಅತ್ಯಾಚಾರ ಮತ್ತು ದೇವರು ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಕಲಹ ನಿಲ್ಲುವುದರಲ್ಲಿ ಯಾವ ಸಂದೇಹವಿಲ್ಲ.

ಸರಳ, ಸಹಜ, ಸುಂದರ ಬದುಕಿಗೆ ಬಸವಣ್ಣನವರ ಪಂಚ ನೇಮಗಳು:

ಬಂದುದ ಕೈಕೊಳ್ಳಬಲ್ಲಡೆ ನೇಮ,
ಇದ್ದುದ ವಂಚನೆಯ ಮಾಡದಿದ್ದಡೆ ಅದು ನೇಮ.
ನಡೆದು ತಪ್ಪದಿದ್ದಡೆ ಅದು ನೇಮ,
ನುಡಿದು ಹುಸಿಯದಿದ್ದಡೆ ಅದು ಮುನ್ನವೆ ನೇಮ.
ನಮ್ಮ ಕೂಡಲಸಂಗನ ಶರಣರು ಬಂದಡೆ
ಒಡೆಯರಿಗೊಡವೆಯನೊಪ್ಪಿಸುವುದೆ ನೇಮ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-63/ವಚನ ಸಂಖ್ಯೆ-231)

ಬಂದುದ ಕೈಕೊಳ್ಳಬಲ್ಲಡೆ ನೇಮ: ಬದುಕಿನಲ್ಲಿ ಸುಖ-ದುಃಖ, ಸೋಲು-ಗೆಲುವು, ಲಾಭ-ಹಾನಿ, ಮಾನ-ಅಪಮಾನ ಮುಂತಾದ ಏರಿಳಿತಗಳು ಬರುವುದು ಸಹಜ. ಆದರೆ, ಕಷ್ಟಗಳು ಬಂದಾಗ ಅನೇಕರು ಕುಗ್ಗುತ್ತಾರೆ, ಚಿಂತೆಯಲ್ಲಿ ತೊಡಗುತ್ತಾರೆ. ಬಂದುದೆಲ್ಲವೂ ಪರಮಾತ್ಮನ ಪ್ರಸಾದವೆಂದು ಸ್ವೀಕರಿಸಿ ಆತ್ಮಸ್ಥೆೈರ್ಯದಿಂದ ಮುಂದೆ ಸಾಗುವುದೇ ನೇಮ ಎಂದು ಬಸವಣ್ಣನವರು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಾರೆ.

ಬದುಕಿನಲ್ಲಿ ನಮ್ಮಿಂದ ಬದಲಾಯಿಸಲು ಸಾಧ್ಯವಾಗದ ಸಂಗತಿಗಳು ಕೆಲವೊಮ್ಮೆ ಬರುತ್ತವೆ. ಸಂಗತಿಗಳನ್ನು ಒಪ್ಪಿಕೊಳ್ಳುವ ಸಹನೆಯನ್ನು ಬೆಳೆಸಿಕೊಳ್ಳಬೇಕು. ಬಂದ ಪರಿಸ್ಥಿತಿಗೆ ಪ್ರತಿಕ್ರಿಯೆ ಒಡ್ಡಿದರೆ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಸಹಜವಾಗಿದ್ದರೆ ಒತ್ತಡ ಕಡಿಮೆಯಾಗುತ್ತದೆ. ದೇವನಲ್ಲಿ ನಂಬಿಕೆಯಿಟ್ಟು ಬಂದುದನ್ನು ಒಪ್ಪಿಕೊಂಡು ಆತ್ಮಸ್ಥೆೈರ್ಯದಿಂದ ಮುನ್ನುಗ್ಗಬೇಕು. ಅದುವೇ ಬಂದುದ ಕೈಕೊಳ್ಳಬಲ್ಲಡೆ ನೇಮ. ಅರ್ಥವಿಲ್ಲದ ನೇಮ ಪಾಲಿಸುವುದಕ್ಕಿಂತ ಈ ನೇಮವನ್ನು ಪಾಲಿಸಿದರೆ ಸಮಾಧಾನದಿಂದಿರಲು ಸಾಧ್ಯ.

ಕೆನಡಾದ ಟೊಕಿಯೊ ವಿಶ್ವವಿದ್ಯಾನಿಲಯದ ಸಂಶೋಧಕರು ನಡೆಸಿದ ಅಧ್ಯಯನದ ಪ್ರಕಾರ ದೇವರಲ್ಲಿನ ನಂಬಿಕೆಯು ಮೆದುಳಿನ ಮೇಲೆ ಶಾಂತ ಪರಿಣಾಮ ಬೀರಿ, ಚಿಂತೆಯನ್ನು ತಡೆಗಟ್ಟಿ, ಮಾನಸಿಕ ಒತ್ತಡ ತಗ್ಗಿಸುತ್ತದೆ ಎಂಬುದು ದೃಢಪಟ್ಟಿದೆ. ಮೆದುಳಿನ ಚಟುವಟಿಕೆಗಳ ಅಧ್ಯಯನ ಆಧರಿಸಿ ಈ ತೀರ್ಮಾನಕ್ಕೆ ಬರಲಾಗಿದೆ. ಚಿಂತೆ ಒತ್ತಡದ ಸಂದರ್ಭದಲ್ಲಿ (ನಾಸ್ತಿಕರಿಗೆ ಹೋಲಿಸಿದರೆ) ಆಸ್ತಿಕರಿಗೆ ಮೆದುಳಿನಲ್ಲಿ ಕಡಿಮೆ ಚಟುವಟಿಕೆಗಳು ನಡೆಯುವುದು ದೃಢಪಟ್ಟಿದೆ. ಹಾಗೆಂದು ಹಲವು ದೇವರುಗಳಿಗೆ ಬೇಡಿಕೊಳ್ಳುವುದಲ್ಲ.

ಇದ್ದುದ ವಂಚನೆಯ ಮಾಡದಿದ್ದಡೆ ಅದು ನೇಮ:
ಬದುಕಿನಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಪಾತ್ರವಿದೆ. ಕೃಷಿಕ, ಸೈನಿಕ, ಶಿಕ್ಷಕ, ವಕೀಲ, ವೈದ್ಯ, ನ್ಯಾಯಾಧೀಶ, ತಂದೆ, ತಾಯಿ, ಮಗ, ಮಗಳು ಮುಂತಾದ ಪಾತ್ರಗಳಿವೆ. ಪ್ರತಿಯೊಂದು ಪಾತ್ರಕ್ಕೆ ತನ್ನದೆ ಆದ ಇತಿಮಿತಿಗಳಿವೆ, ನಿಯಮಗಳಿವೆ. ಮಕ್ಕಳನ್ನು ಬೆಳೆಸುವುದು, ವಿದ್ಯಾವಂತರನ್ನಾಗಿ ಮಾಡುವುದು ತಂದೆ-ತಾಯಿಗಳ ಕರ್ತವ್ಯವಾಗಿದೆ. ತಂದೆ-ತಾಯಿಗಳ ಸೇವೆ ಮಾಡುವುದು ಮಕ್ಕಳ ಜವಾಬ್ದಾರಿಯಾಗಿದೆ. ಖಾಕಿ ಮತ್ತು ಖಾದಿಧಾರಿಗಳದು ದೇಶ ರಕ್ಷಣೆಯ ಜವಾಬ್ದಾರಿಯಾಗಿದೆ. ಕಾವಿಧಾರಿಗಳದು ಸಮಾಜ ಸುಧಾರಣೆ ಜವಾಬ್ದಾರಿಯಾಗಿದೆ. ಹೀಗೆ ಪ್ರತಿಯೊಬ್ಬರಿಗೂ ಒಂದೊಂದು ಜವಾಬ್ದಾರಿಯುತ ಪಾತ್ರವಿದೆ. ತಮ್ಮ ಪಾತ್ರಕ್ಕೆ ಭಂಗ ಬರದಂತೆ ಪ್ರಾಮಾಣಿಕತೆಯಿಂದ, ನಿಷ್ಠೆಯಿಂದ, ಪ್ರಮಾಣವಚನ ಸ್ವೀಕರಿಸಿದಂತೆ ಪಾತ್ರ ನಿಭಾಯಿಸಬೇಕು. ನಮ್ಮ ಪಾತ್ರ ನಾಟಕ, ಸಿನೇಮಾಗಳಲ್ಲಿಯ ಪಾತ್ರದಂತೆ ಕೇವಲ ತೋರಿಕೆಯ ಪಾತ್ರವಾಗಬಾರದು. ಪಾತ್ರಕ್ಕೆ ವಂಚನೆ ಎಸಗದಿರುವುದೇ ಎರಡನೆಯ ನೇಮ. ವಂಚಕರೆ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಈ ನೇಮದ ಅವಶ್ಯಕತೆ ಬಹಳವಿದೆ.

ಈ ನೇಮವನ್ನು ಪ್ರತಿಯೊಬ್ಬರೂ ಪಾಲಿಸಿದರೆ ಜಗತ್ತಿನಲ್ಲಿ ಭ್ರಷ್ಟಾಚಾರ, ಮೋಸ, ವಂಚನೆ, ಹಿಂಸೆ ಮುಂತಾದ ಹೇಯ ಕೃತ್ಯಗಳು ನಡೆಯುವ ಸಂಭವವೇ ಇಲ್ಲದಾಗುತ್ತದೆ. ಸಮಿತಿ, ಆಯೋಗ, ತನಿಖೆ ಮತ್ತು ಲೋಕಾಯುಕ್ತ ಮುಂತಾದವುಗಳ ಅವಶ್ಯಕತೆಯೇ ಇಲ್ಲ.

ನಡೆದು ತಪ್ಪದಿದ್ದಡೆ ನೇಮ:
ಸತ್ಯ, ಧರ್ಮದ ದಾರಿಯಲ್ಲಿ ನಡೆಯುವಾಗ ಯಾವ ಕಾರಣಕ್ಕೂ ಮಾರ್ಗ ಬದಲಾಯಿಸದಿರುವುದೇ ನೇಮ. ಸತ್ಯದ ಮಾರ್ಗದಲ್ಲಿ ಸಾಗುವಾಗ ಕೆಲವರು ವ್ಯಂಗ್ಯವಾಗಿ ನುಡಿಯುತ್ತಾರೆ. ಮತ್ತೆ ಕೆಲವರು ಪರೀಕ್ಷಿಸಲು ಆಸೆ, ಆಮಿಷಗಳನ್ನು ತೋರಿಸಿ ಮಾರ್ಗ ಬದಲಾಯಿಸುವಂತೆ ವಿಚಲಿತಗೊಳಿಸುತ್ತಾರೆ. ಯಾರು ಏನೇ ಹೇಳಿದರೂ ವಿಚಾರದಲ್ಲಿ ಸ್ವಂತಿಕೆಯಿರಬೇಕು. ಸತ್ಯಕ್ಕಾಗಿ ಏನನ್ನಾದರೂ ತ್ಯಾಗ ಮಾಡಲು ಸಿದ್ಧವಿರಬೇಕು. ಕೆಲವರು ದುರಾಸೆಗಾಗಿ ಸತ್ಯವನ್ನೇ ತ್ಯಾಗ ಮಾಡಿ ಪ್ರಾಮಾಣಿಕತೆಯನ್ನು ಗಾಳಿಗೆ ತೂರಿ ನಂತರ ಗಾಳಕ್ಕೆ ಬಿದ್ದು ಪರಿತಪಿಸುತ್ತಾರೆ. ಸದಾ ಸನ್ಮಾರ್ಗದಲ್ಲಿ ಸಾಗುವುದೇ ಮೂರನೆಯ ನೇಮ. ಈ ನೇಮವನ್ನು ಪಾಲಿಸುವವರಿಗೆ ಯಾರ ಭಯವಿಲ್ಲ. ಅವರು ಸ್ವತಂತ್ರಧೀರರಾಗಿ ಬದುಕಬಲ್ಲರು.

ನುಡಿದು ಹುಸಿಯದಿದ್ದಡೆ ನೇಮ:
ಕೊಟ್ಟ ಮಾತಿನಂತೆ ನಡೆಯುವುದು, ವಚನ ಭ್ರಷ್ಟನಾಗದಿರುವುದು ನಾಲ್ಕನೆಯ ನೇಮ. ವಚನ ಭ್ರಷ್ಟರಾದರೆ ಜನರ ನಂಬಿಕೆ, ವಿಶ್ವಾಸ ಕಳೆದುಕೊಳ್ಳುತ್ತೇವೆ. ಪ್ರಾಣ ಹೋದರೂ ವಚನ ಹೋಗಬಾರದು ಎಂಬ ಗಾದೆ ಮಾತಿನಂತೆ ಯಾವ ಕಾರಣಕ್ಕೂ ಮಾತು, ವ್ಯವಹಾರ ಬದಲಾಯಿಸಬಾರದು. ಈ ನೇಮವನ್ನು ಪಾಲಿಸುವುದರಿಂದ ಪ್ರಾಮಾಣಿಕತೆ ಹೆಚ್ಚುತ್ತದೆ. ಜನರ ನಂಬಿಕೆ, ವಿಶ್ವಾಸಕ್ಕೆ ಪಾತ್ರರಾಗುತ್ತೇವೆ.

ಕೂಡಲಸಂಗನ ಶರಣರು ಬಂದಡೆ ಒಡೆಯರಿಗೊಡವೆಯನೊಪ್ಪಿಸುವುದೆ ನೇಮ:
ಶರಣರು, ಅಸಹಾಯಕರು ಮನೆಗೆ ಬಂದರೆ ಅವರು ಪರಮಾತ್ಮನ ಪ್ರತಿರೂಪವೆಂದು ಭಾವಿಸಿ ಪರಮಾತ್ಮ ಕರುಣಿಸಿದ ಸಂಪತ್ತನ್ನು ದಾಸೋಹ ಭಾವದಿಂದ ಅವರಿಗೆ ಅರ್ಪಿಸುವುದೇ ಐದನೆಯ ನೇಮ.

ಶೀಲ, ವ್ರತಗಳ ಕುರಿತು ಮೋಳಿಗೆಯ ಮಾರಯ್ಯನವರ ವಚನ:

ತಾವು ಸತ್ಯರೆಂದು ನುಡಿಯದಿಪ್ಪುದೆ ಶೀಲ.
ತಾವು ವ್ರತಿಗಳೆಂದು ಇದಿರಂಗೆ ಹೇಳದಿಹುದು ವ್ರತ.
ಗುರುಲಿಂಗಜಂಗಮವ ದೂಷಿಸದಿಹುದೆ ವ್ರತ.
ಸಹಪಂಕ್ತಿಯಲ್ಲಿ ವಿಶೇಷವ ಕೊಳ್ಳದಿಪ್ಪುದೆ ವ್ರತ.
ಇಂತಪ್ಪ ವ್ರತಕ್ಕೆ ನಮೋ ನಮೋ ಎಂಬೆ.
ಇಂತಲ್ಲದೆ ಜಗವ ಸಿಕ್ಕಿಸುವ ಬಹುಮುಖಿಗಳಿಗೆಲ್ಲಿಯದೊ ಮುಕ್ತಿ?
ಮಾತಿನಲ್ಲಿ ಭಕ್ತಿ, ಮನದಲ್ಲಿ ಕತ್ತರಿ, ಭಕ್ತಿಯಲ್ಲಿ ಬಲೆ,
ಚಿತ್ತದಲ್ಲಿ ಕತ್ತಲೆಯಿಪ್ಪವರಿಗೆಲ್ಲಿಯದೊ ಭಕ್ತಿಶೀಲ?
ಇಂತಿವ ಬಲ್ಲೆನಾಗಿ ಭಕ್ತಿ ನನಗಿಲ್ಲ,
ಇನ್ನೆತ್ತಣ ಮುಕ್ತಿಯೋ, ನಿಃಕಳಂಕ ಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-660/ವಚನ ಸಂಖ್ಯೆ-1810)

ತಾವು ಸತ್ಯವಂತರು, ವ್ರತಸ್ಥರು ಎಂದು ಇತರರಿಗೆ ಹೇಳಿಕೊಳ್ಳದಿರುವುದೆ ಶೀಲ. ಏಕೆಂದರೆ “Values are not to be taught, they are to be demonstrated” ಎಂಬಂತೆ ಸತ್ಯ, ಅಹಿಂಸೆ, ಪ್ರಾಮಾಣಿಕತೆ, ನ್ಯಾಯ ಮುಂತಾದ ಮೌಲ್ಯಗಳನ್ನು ಹೇಳುವುದಲ್ಲ, ಆಚರಿಸುವುದು. ಹಾಗೆ ಹೇಳಿಕೊಳ್ಳುವುದರಿಂದ ಸೂಕ್ಷ್ಮ ಅಹಂಕಾರ ಅಂಟಿಕೊಳ್ಳುವ ಸಂಭವವಿರುತ್ತದೆ.

ಪರನಿಂದೆ ಮಾಡದಿರುವುದೆ ವ್ರತ, ಪಂಕ್ತಿಭೇದ ಮಾಡದಿರುವುದೆ ವ್ರತ. ಮಾತಿನಲ್ಲಿ ವಿನಯ, ಮನದಲ್ಲಿ ಕುಹಕ, ತನುವಿನಲ್ಲಿ ತೋರಿಕೆಯ ಭಕ್ತಿ, ಮನದಲ್ಲಿ ಅಜ್ಞಾನ ಹೀಗೆ ದ್ವಂದ್ವ ನೀತಿಯುಳ್ಳವರಿಗೆ ಭಕ್ತಿ, ಮುಕ್ತಿ ಎಂಬುದಿಲ್ಲ ಎಂದು ಮೋಳಿಗೆಯ ಮಾರಯ್ಯನವರು ತಿಳಿಸಿದ್ದಾರೆ.

ಹಿಂಸೆ ಮಾಡದಿರುವುದೇ ಧರ್ಮ. ಮೋಸ, ವಂಚನೆ, ಭ್ರಷ್ಟಾಚಾರ ಮುಂತಾದ ವಾಮಮಾರ್ಗದಿಂದ ಬಂದುದನ್ನು ನಿರಾಕರಿಸುವುದೆ ನೇಮ. ಎಂಥ ಪರಿಸ್ಥಿತಿಯಲ್ಲೂ ಎದೆಗುಂದದೆ ಸ್ಥಿತಪ್ರಜ್ಞನಾಗಿರುವುದೇ ವ್ರತ. ಇದೇ ಸತ್ಯದ ಪಥ, ಮಿಕ್ಕಿದುದು ಮಿಥ್ಯ ಎಂದು ಎಚ್ಚರಿಸುವ ಸೊಡ್ಡಳ ಬಾಚರಸನ ವಚನ:

ಲಿಂಗದೇವನೆ ಕರ್ತ, ಶಿವಭಕ್ತನೆ ಶ್ರೇಷ್ಠ.
ಕೊಲ್ಲದಿರ್ಪುದೆ ಧರ್ಮ.
ಅಧರ್ಮದಿಂದ ಬಂದುದನೊಲ್ಲದಿರ್ಪುದೆ ನೇಮ.
ಅಳುಪಿಲ್ಲದಿರ್ಪುದೆ ವ್ರತ.
ಇದೇ ಸತ್ಪಥ, ಉಳಿದುದೆಲ್ಲ ಮಿಥ್ಯವೆಂದೆ ಕಾಣಾ,
ದೇವರಾಯ ಸೊಡ್ಡಳಾ.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-323/ವಚನ ಸಂಖ್ಯೆ-807)

ಶಿವನೆ ಸೃಷ್ಟಿಕರ್ತ, ಇಂಥ ಸೃಷ್ಟಿಕರ್ತನಿಗೆ ಶರಣಾಗುವ ಭಕ್ತನೆ ಶ್ರೇಷ್ಠ. ಕೊಲ್ಲದಿರುವುದೇ ಆತನ ಧರ್ಮ. ಅಧರ್ಮದಿಂದ ಬಂದುದನ್ನು ಬೇಡ ಎನ್ನುವುದೇ ಆತನ ನೇಮ. ಧೈರ್ಯದಿಂದ ಬದುಕುವುದೇ ಆತನ ವ್ರತ. ಹೀಗೆ ಸಾಗುವ ದಾರಿಯೇ ಸತ್ಪಥ. ಇವುಗಳಿಗೆ ಹೊರತಾದ ಜೀವನವಿಧಾನ ಅಸತ್ಯದಿಂದ ಕೂಡಿದ್ದಾಗಿರುತ್ತದೆ. ಹೀಗೆ ಸತ್ಪಥದ ಪಂಚಸೂತ್ರಗಳನ್ನು ಬಾಚರಸರು ನೀಡಿದ್ದಾರೆ.

ಮನಸ್ಸನ್ನು, ಇಂದ್ರಿಯಗಳನ್ನು ನಿಯಂತ್ರಿಸಿಕೊಳ್ಳುವ ನೇಮ, ವ್ರತ ಹಿಡಿಯಬೇಕು. ಆ ನೇಮ, ವ್ರತಗಳನ್ನು ತಪ್ಪದೇ ಕ್ರಿಯೆಯಲ್ಲಿ ತರಬೇಕು. ಆದರೆ, ಬಹಜನರು ಅವುಗಳನ್ನು ಆಚರಣೆಗೆ ತರುವುದಿಲ್ಲ. ಅಂಥವರು ವ್ರತಸ್ಥರಲ್ಲ. ಮನಸ್ಸಿಗೆ ಬಂದಂತೆ ನಡೆದು, ಬಾಯಿಗೆ ಬಂದಂತೆ ನುಡಿದು ಮತ್ತೆ ನಾ ವ್ರತಸ್ಥ ಎಂದು ಜಂಭ ಕೊಚ್ಚಿಕೊಳ್ಳುವವರನ್ನು ಪರಮಾತ್ಮನು ಮೆಚ್ಚಲಾರ ಎಂದು ಏಲೇಶ್ವರ ಕೇತಯ್ಯನವರು ತುಂಬಾ ಮಾರ್ಮಿಕವಾಗಿ ಹೇಳಿದ್ದಾರೆ:

ಮನಕ್ಕೆ ವ್ರತವ ಮಾಡಿ,
ತನುವಿಗೆ ಕ್ರೀಯ ಮಾಡಬೇಕು.
ಇಂದ್ರಿಯಗಳಿಗೆ ಕಟ್ಟನಿಕ್ಕಿ,
ಆತ್ಮನ ಸಂದೇಹವ ಬಿಡಿಸಿ ಕ್ರೀಯ ಮಾಡಬೇಕು.
ಹೀಂಗಲ್ಲದೆ ವ್ರತಾಚಾರಿಯಲ್ಲ.
ಮನಕ್ಕೆ ಬಂದಂತೆ ಹರಿದು,
ಬಾಯಿಗೆ ಬಂದಂತೆ ನುಡಿದು,
ಇಂತೀ ನಾ ವ್ರತಿಯೆಂದರೆ
ಮೂಗನರಿಯದೆ ಮಾಣ ಏಲೇಶ್ವರಲಿಂಗನು.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-754/ವಚನ ಸಂಖ್ಯೆ-1703)

ಜನರು ಆಚರಿಸುವ ಅರ್ಥವಿಲ್ಲದ ಶೀಲಗಳನ್ನು ಪ್ರಶ್ನಿಸಿ ನಿಜವಾದ ಶೀಲಗಳನ್ನು ಚೆನ್ನಬಸವಣ್ಣನವರು ತಮ್ಮ ವಚನದ ಮೂಲಕ ತಿಳಿಸಿದ್ದಾರೆ:

ಅಗ್ಘವಣಿ ಮೀಸಲಾಗಬೇಕೆಂಬುದು ಶೀಲವೇ?
ಪುಷ್ಪ ಮೀಸಲಾಗಬೇಕೆಂಬುದು ಶೀಲವೇ?
ಓಗರ ಮೀಸಲಾಗಿರಬೇಕೆಂಬುದು ಶೀಲವೇ?
ಇವು ಶೀಲವಲ್ಲ ಕಾಣಿರಣ್ಣ!
ಪಂಚೇಂದ್ರಿಯ ಷಡ್ವರ್ಗ‌ ಸಪ್ತಧಾತು
ಅಷ್ಟಮದಂಗಳ ಕಳೆಯಬಲ್ಲಡೆ
ಕೂಡಲಚೆನ್ನಸಂಗಯ್ಯನಲ್ಲಿ ಅಚ್ಚಶೀಲ.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-244/ವಚನ ಸಂಖ್ಯೆ-605)

ಕೆಲವರು ಪ್ರತಿದಿನ ಮಡಿಯಿಂದ ಪೂಜೆ ನೀರು ತರುವುದು ಶೀಲವೆಂದು ತಿಳಿದಿರುತ್ತಾರೆ. ಇನ್ನು ಕೆಲವರು ಪ್ರತಿದಿನ ದೇವನಿಗೆ ವಿಶೇಷವಾದ ಪುಷ್ಪವನ್ನು ಅರ್ಪಿಸುವುದೇ ಶೀಲವೆಂದು ತಿಳಿದಿರುತ್ತಾರೆ. ಮತ್ತೆ ಕೆಲವರು ಪ್ರತಿದಿನ ದೇವನಿಗೆ ವಿಶೇಷವಾದ ಪದಾರ್ಥಗಳಿಂದ ತಯಾರಿಸಿದ ನೈವೇದ್ಯವನ್ನು ಅರ್ಪಿಸುವುದೇ ಶೀಲವೆಂದು ತಿಳಿದಿರುತ್ತಾರೆ. ಅವುಗಳಿಗಾಗಿ ಪರದಾಡುತ್ತಾರೆ. ಈ ಶೀಲ ತಪ್ಪಿದರೆ ನೊಂದುಕೊಳ್ಳುತ್ತಾರೆ. ಆದರೆ, ಚೆನ್ನಬಸವಣ್ಣನವರು ಇವು ನಿಜವಾದ ಶೀಲವಲ್ಲ ಎಂದಿದ್ದಾರೆ.

ಪಂಚೇಂದ್ರಿಯಗಳ ಪಂಚವಿಷಯಗಳಾದ ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳನ್ನು, ಅರಿಷಡ್ ವೈರಿಗಳಾದ ಕಾಮ, ಕ್ರೋಧ, ಮೋಹ, ಲೋಭ, ಮದ, ಮತ್ಸರಗಳನ್ನು, ಸಪ್ತವ್ಯಸನಗಳಾದ ತನು, ಮನ, ಧನ, ರಾಜ್ಯ, ವಿಶ್ವ, ಉತ್ಸಾಹ, ಸೇವಕ ವ್ಯಸನಗಳನ್ನು ಮತ್ತು ಅಷ್ಟಮದಗಳಾದ ಕುಲ, ಛಲ, ಧನ, ರೂಪು, ಯೌವನ, ವಿದ್ಯೆ, ರಾಜ್ಯ ತಪೋಮದ ಇವುಗಳನ್ನು ನಿಗ್ರಹಿಸುವುದೇ ಶ್ರೇಷ್ಠ ಶೀಲವೆಂದು ವೈಚಾರಿಕ ಶೀಲದ ಬಗ್ಗೆ ಚೆನ್ನಬಸವಣ್ಣನವರು ತಿಳಿಸಿದ್ದಾರೆ.

ಪದಾರ್ಥಗಳನ್ನು ಪರಮಾತ್ಮನಿಗೆ ಮೀಸಲು ಇಡುವುದಕ್ಕಿಂತ ತನು, ಮನ, ಇಂದ್ರಿಯಗಳನ್ನು ಮೀಸಲಾಗಿಟ್ಟರೆ ಅವು ಪ್ರಸಾದಮಯವಾಗಿ ಪರಮಾತ್ಮನ ಸ್ವರೂಪವೇ ಆಗಲು ಸಾಧ್ಯ ಎಂಬ ನೇಮವನ್ನು ಜೇಡರ ದಾಸಿಮಯ್ಯನವರು ಕೊಡುತ್ತಾರೆ:

ಕಣ್ಣು ಮೀಸಲು ಶಿವನ; ಕೈ ಮೀಸಲು ಶಿವನ.
ಕಾಲು ಮೀಸಲು ಶಿವನ; ನಾಲಿಗೆ ಮೀಸಲು ಶಿವನ.
ಕಿವಿ ಮೀಸಲು ಶಿವನ; ನಾಸಿಕ ಮೀಸಲು ಶಿವನ.
ತನು ಮನವೆಲ್ಲ ಮೀಸಲು ಶಿವನ.
ಈ ಮೀಸಲು ಬೀಸರವಾಗದಂತಿರ್ದಡೆ
ಆತನೆ ಜಗದೀಶ ಕಾಣಾ! ರಾಮನಾಥ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-274/ವಚನ ಸಂಖ್ಯೆ-769)

ಈ ಮೀಸಲು ಯಾವ ಕಾರಣಕ್ಕೂ ಕೆಡದಂತೆ ಎಚ್ಚರದಿಂದ ಇರಬೇಕು ಎಂಬ ಎಚ್ಚರಿಕೆಯ ಸಂದೇಶವನ್ನು ದಾಸಿಮಯ್ಯನವರು ನೀಡಿದ್ದು ವಿಶೇಷವಾಗಿದೆ.

ಸತ್ಯ, ಸದಾಚಾರ, ಪ್ರಾಮಾಣಿಕತೆಯಲ್ಲಿ ಸಾಗುವುದೇ ನಿಜವಾದ ವ್ರತ, ಶೀಲ, ನೇಮ ಇವುಗಳನ್ನು ಪಾಲಿಸದವರು ವ್ರತಹೀನರು. ಅಂಥವರ ಸಂಗ ಕೂಡ ಮಾಡಬಾರದೆಂದು ಕಾಳವ್ವೆ ಹೆಸರಿನ ನಾಲ್ಕೂ ಶರಣೆಯರು ಹೇಳಿದ್ದು ವಿಶೇಷ:

ಉರಿಲಿಂಗ ಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ:
ವ್ರತಹೋದಾಗಳೆ ಇಷ್ಟಲಿಂಗದ ಕಳೆ ನಷ್ಟವವ್ವಾ.
ಅವರು ಲಿಂಗವಿದ್ದೂ ಭವಿಗಳು.
ಅದು ಹೇಗೆಂದಡೆ ಪ್ರಾಣವಿಲ್ಲದ ದೇಹದಂತೆ.
ಉರಿಲಿಂಗಪೆದ್ದಿಗಳರಸ ಬಲ್ಲನೊಲ್ಲನವ್ವಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-280/ವಚನ ಸಂಖ್ಯೆ-739)

ಸಿದ್ಧಬುದ್ಧಯ್ಯಗಳ ಪುಣ್ಯಸ್ತ್ರೀ ಕಾಳವ್ವೆ:
ವ್ರತಭ್ರಷ್ಟನ, ಲಿಂಗಬಾಹ್ಯನ ಕಂಡಡೆ
ಸತ್ತನಾಯ, ಕಾಗೆಯ ಕಂಡಂತೆ.
ಅವರೊಡನೆ ನುಡಿಯಲಾಗದು ಭೀಮೇಶ್ವರಾ,
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-448/ವಚನ ಸಂಖ್ಯೆ-1231)

ಬಾಚಿಕಾಯಕದ ಬಸವಯ್ಯಗಳ ಪುಣ್ಯಸ್ತ್ರೀ ಕಾಳವ್ವೆ;
ಕೈತಪ್ಪಿ ಕೆತ್ತಲು ಕಾಲಗೆ ಮೂಲ,
ಮಾತ ತಪ್ಪಿ ನುಡಿಯಲು ಬಾಯಿಗೆ ಮೂಲ,
ವ್ರತಹೀನರ ನೆರೆಯಲು ನರಕಕ್ಕೆ ಮೂಲ,
ಕರ್ಮಹರಾ ಕಾಳೇಶ್ವರಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-390/ವಚನ ಸಂಖ್ಯೆ-1089)

ಕದಿರ ಕಾಯಕದ ಕಾಳವ್ವೆ:
ಕದಿರು ಮುರಿಯೆ ಏನೂ ಇಲ್ಲ.
ವ್ರತಹೀನನ ನೆರೆಯಲಿಲ್ಲ, ಗುಮ್ಮೇಶ್ವರಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-282/ವಚನ ಸಂಖ್ಯೆ-741)

ಬತ್ತಲೇಶ್ವರನ ಪುಣ್ಯಸ್ತ್ರೀ ಗುಡ್ಡವ್ವೆ ಎಂಬ ಶರಣೆ ವ್ರತದ ಆಚರಣೆಯಿಲ್ಲದವರ ಸಂಗ ನರಕಕ್ಕೆ ಮೂಲ ಎಂದು ಹೇಳಿದ್ದಾರೆ:
ತನು ಬತ್ತಲೆಯಾದಡೇನು
ಮನ ಬತ್ತಲೆಯಾಗದನ್ನಕ್ಕ?
ವ್ರತವಿದ್ದಡೇನು ವ್ರತಹೀನನಾದ ಬಳಿಕ?
ನೆರೆದಡೆ ನರಕ ನೋಡಾ ನಿಂಬೇಶ್ವರಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-389/ವಚನ ಸಂಖ್ಯೆ-1087)

ವ್ರತಹೀನರ ಸಂಗವನ್ನು ನಾನೆಂದೂ ಮಾಡಲಾರೆ. ನೀನು ಬೇಕಾದರೆ ಮಾಡು ಎಂದು ಪರಮಾತ್ಮನಿಗೇ ಸವಾಲು ಹಾಕುವ ಕಾಟಕೂಟಯ್ಯಗಳ ಪುಣ್ಯಸ್ತ್ರೀ ರೇಚವ್ವೆ ಎಂಬ ಶರಣೆಯ ವಚನ:
ಬಂಜೆಯಾವಿಂಗೆ ಕ್ಷೀರವುಂಟೆ?
ವ್ರತಹೀನನ ಬೆರೆಯಲುಂಟೆ?
ನೀ ಬೆರೆದಡೂ ಬೆರೆ,
ನಾನೊಲ್ಲೆ ನಿಜಶಾಂತೇಶ್ವರಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-286ವಚನ ಸಂಖ್ಯೆ-747)

ಪ್ರೊ. ಬಸವರಾಜ ಕಡ್ಡಿ,
ಆಡಳಿತಾಧಿಕಾರಿಗಳು,
ಬಸವಜ್ಯೋತಿ ಶಿಕ್ಷಣ ಸಮೂಹ ಸಂಸ್ಥೆಗಳು,
ಜಮಖಂಡಿ.
ಮೋಬೈಲ್‌ ಸಂ. 94497 13204

 ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in

Loading

Leave a Reply