ಶರಣರ ಸಮನ್ವಯ ಸಂಸ್ಕೃತಿ / ಡಾ. ಬಸವರಾಜ ಕಡ್ಡಿ, ಜಮಖಂಡಿ.

ಸಮನ್ವಯತೆ ಎಂದರೆ ಒಂದಾಗಿಸಿಕೊಳ್ಳುವಿಕೆ. ಬದುಕು-ಬರಹ ಒಂದೆಯಾಗಿದ್ದರೆ ಬರಹಕ್ಕೆ ಬೆಲೆ ಬರುತ್ತದೆ. ಬದುಕಿದಂತೆ ಬರೆದ ಬರಹ ಬಹುಕಾಲ ಬದುಕುತ್ತದೆ. ಅದಕ್ಕಾಗಿ ಶರಣರು ತಾವು ಬದುಕಿದಂತೆ ಬರೆದ ವಚನಗಳು ಇನ್ನೂ ನಮ್ಮ ಮಧ್ಯೆದಲ್ಲಿವೆ. ಯಾವಾಗಲೂ ಇರುತ್ತವೆ. ವೈಜ್ಞಾನಿಕ, ವೈಚಾರಿಕ ಆಧಾರವಿಲ್ಲದ ಪವಾಡ, ಪುರಾಣಗಳಂತಹ ಸಾಹಿತ್ಯ ಪರೀಕ್ಷೆಗೊಳಪಡುತ್ತ ಹಂತ ಹಂತವಾಗಿ ಅಳಿಯುತ್ತದೆ.

ಶರಣರದು ಜ್ಞಾನ-ಕ್ರಿಯೆ, ನಡೆ-ನುಡಿ, ಲೌಕಿಕ-ಪಾರಮಾರ್ಥ, ಅಂತರಂಗಕೃಷಿ-ಬಹಿರಂಗಕೃಷಿ, ಆತ್ಮಕಲ್ಯಾಣ-ಸಮಾಜಕಲ್ಯಾಣಗಳನ್ನು ಒಂದಾಗಿಸಿಕೊಂಡ ಸಮನ್ವಯಸಂಸ್ಕೃತಿಯಾಗಿದೆ.

ಜ್ಞಾನ-ಕ್ರಿಯೆಗಳ ಸಮನ್ವಯತೆ:

ಶರಣರು ಕೇವಲ ಅರಿವು (ಜ್ಞಾನ) ಬೆಳೆಸಿಕೊಂಡವರಲ್ಲ. ಅರಿವು, ಆಚಾರ ಎರಡನ್ನೂ ಸಮೀಕರಿಸಿಕೊಂಡವರು. ಆಚಾರದ ಮೂಲಕ ಅರಿವಿಗೆ ಮನ್ನಣೆ ನೀಡಿದವರು. ಜ್ಞಾನವೆಂದರೆ ತಿಳಿಯುವುದು. ಕ್ರಿಯೆಯೆಂದರೆ ತಿಳಿದಂತೆ ಮಾಡುವುದು. ಜ್ಞಾನ-ಕ್ರಿಯೆಗಳು ಅಭೇದ್ಯವಾಗಿವೆ. ತಿಳಿದಂತೆ ಮಾಡದವನು ಅಜ್ಞಾನಿ ಎಂದು ಅವಿರಳಜ್ಞಾನಿ ಚೆನ್ನಬಸವಣ್ಣನವರು ಹೇಳುತ್ತಾರೆ:

ಕ್ರಿಯೆಯೆ ಜ್ಞಾನ, ಆ ಜ್ಞಾನವೆ ಕ್ರಿಯೆ.
ಜ್ಞಾನವೆಂದಡೆ ತಿಳಿಯುವುದು,
ಕ್ರಿಯೆಯೆಂದಡೆ ತಿಳಿದಂತೆ ಮಾಡುವುದು.
ಪರಸ್ತ್ರೀಯ ಭೋಗಿಸಬಾರದೆಂಬುದು ಜ್ಞಾನ;
ಅದರಂತೆ ಆಚರಿಸುವುದು ಕ್ರಿಯೆ.
ಅಂತು ಆಚರಿಸದಿದ್ದಡೆ ಅದೆ ಅಜ್ಞಾನ ನೋಡಾ,
ಕೂಡಲಚೆನ್ನಸಂಗಮದೇವಾ.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-536/ವಚನ ಸಂಖ್ಯೆ-1171)

ಸರಿ-ತಪ್ಪುಗಳನ್ನು ತಿಳಿದುಕೊಳ್ಳಬೇಕು. ತಿಳಿದುದನ್ನು ಆಚರಣೆಯಲ್ಲಿ ತರಬೇಕು. ಆಗ ಮಾತ್ರ ತಿಳಿದುಕೊಂಡುದಕ್ಕೆ ಬೆಲೆ ಬರುತ್ತದೆ. ಎಲ್ಲರೂ ತಿಳಿದುದನ್ನು ಆಚರಿಸಿದರೆ ನೈತಿಕಮೌಲ್ಯಗಳು ಹೆಚ್ಚಿ ಸುಸ್ಥಿರಸಮಾಜ ನಿರ್ಮಾಣವಾಗುತ್ತದೆ. ಅನೈತಿಕತೆ, ಭ್ರಷ್ಟಾಚಾರ ಮುಂತಾದವುಗಳಿಗೆ ಎಡೆಯೇ ಇಲ್ಲದಂತಾಗುತ್ತದೆ. ಉದಾಹರಣೆಗೆ ಪರಸ್ತ್ರೀಯ ಭೋಗಿಸಬಾರದೆಂಬ ಜ್ಞಾನವನ್ನು ಆಚರಣೆಯಲ್ಲಿ ತಂದರೆ ಜಗತ್ತಿನಲ್ಲಿ ಅತ್ಯಾಚಾರವೆಂಬುದು ಇರುವುದಿಲ್ಲ. ಪರಧನ ಸ್ವೀಕರಿಸಬಾರದೆಂಬ ಜ್ಞಾನವನ್ನು ಎಲ್ಲರೂ ಕ್ರಿಯೆಯಲ್ಲಿ ತಂದರೆ ಭ್ರಷ್ಟಾಚಾರ ಕೊನೆಗೊಳ್ಳುತ್ತದೆ. ಮದ್ಯಪಾನ, ತಂಬಾಕು ಸೇವನೆ ಮುಂತಾದವುಗಳು ಆರೋಗ್ಯಕ್ಕೆ ಹಾನಿಕಾರಕ ಎಂಬುದನ್ನು ತಿಳಿದು ಅವುಗಳನ್ನು ಬಿಟ್ಟರೆ ದುರ್ವ್ಯಸನಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಆದರೆ, ಜನ ಇವುಗಳ ಜ್ಞಾನವಿದ್ದರೂ ಆಚರಣೆಗೆ ತರದೆ ಅವುಗಳನ್ನು ಹಿಂಬಾಲಿಸುತ್ತಾರೆ. ‘ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ’ ಎಂದು ಸಿಗಾರೇಟ್ ಪ್ಯಾಕೆಟ್‌ನ ಮೇಲೆ ಬರೆದಿದ್ದನ್ನು ಓದಿಯೂ ಸಿಗಾರೇಟ್ ಸೇದುವವರನೇಕರಿದ್ದಾರೆ. ಗುಟ್ಕಾ ತಿಂದು ಗಂಟಲು ಕ್ಯಾನ್ಸರ್‌ನಿಂದ ಬಳಲುತ್ತಿದ್ದವರನ್ನು ನೋಡಿಯೂ ಗುಟ್ಕಾ ತಿನ್ನುವವರನೇಕರಿದ್ದಾರೆ. ವಿವೇಕದ ಕೊರತೆಯೇ ಇದಕ್ಕೆ ಕಾರಣ. ಅಂಥವರನ್ನು ಅಜ್ಞಾನಿಗಳೆಂದು ಚೆನ್ನಬಸವಣ್ಣನವರು ಹೇಳಿದ್ದು ತುಂಬಾ ಮಾರ್ಮಿಕವಾಗಿದೆ.

ಜ್ಞಾನ-ಕ್ರಿಯೆಗಳ ಸಮನ್ವಯತೆ ಇದ್ದರೆ ಮನುಷ್ಯನ ಯೋಗ್ಯತೆ ಹೆಚ್ಚುತ್ತದೆ. ಅವನೊಬ್ಬ ಆದರ್ಶ ವ್ಯಕ್ತಿಯೆಂದು ಸಮಾಜದಲ್ಲಿ ಗುರುತಿಸಲ್ಪಡುತ್ತಾನೆ. ಕೇವಲ ಜ್ಞಾನವಿದ್ದು ಕ್ರಿಯೆಯಿಲ್ಲದಿದ್ದರೆ ಅವನ ಮಾತುಗಳಿಗೆ ಬೆಲೆಯಿರುವುದಿಲ್ಲ. ಕುಡಿದು ಕುಡಿದು ಲಿವ್ಹರ್ ಕೆಡಿಸಿಕೊಂಡಾತ ಸಿಗರೇಟ್ ಸೇದುವವರಿಗೆ ಲಂಗ್ಸ್ ಕೆಡಸಿಕೊಳ್ಳಬೇಡ ಎಂದು ಉಪದೇಶ ಮಾಡಿದಂತಾಗುತ್ತದೆ.

ಬಹುದೂರದವರೆಗೆ ಸಾಗಲು ಕಣ್ಣು, ಕಾಲು ಸುಸ್ಥಿತಿಯಲ್ಲಿರಬೇಕಾಗುತ್ತದೆ. ಹಾಗೆಯೇ ಆಧ್ಯಾತ್ಮಿಕ ಸಾಧನೆಗೆ ಜ್ಞಾನ-ಕ್ರಿಯೆಗಳ ಸಮನ್ವಯತೆ ಅವಶ್ಯಕವಾದುದು ಎಂಬ ಸತ್ಯವನ್ನು ಸ್ವತಂತ್ರ ಸಿದ್ಧಲಿಂಗೇಶ್ವರರು ತಿಳಿಸುತ್ತಾರೆ:

ಕಣ್ಣು ಕಾಲು ಎರಡುಳ್ಳವ ದೂರ ಎಯ್ದುವನಲ್ಲದೆ,
ಕಣ್ಣು ಕಾಲೆರಡರೊಳಗೊಂದಿಲ್ಲದವನು.
ದೂರವನೈಯ್ದಲರಿಯನೆಂಬಂತೆ,
ಜ್ಞಾನರಹಿತನಾಗಿ ಕ್ರಿಯನೆಷ್ಟು ಮಾಡಿದರೇನು?
ಅದು ಕಣ್ಣಿಲ್ಲದವನ ನಡೆಯಂತೆ.
ಕ್ರೀರಹಿತವಾಗಿ ಜ್ಞಾನಿಯಾದಡೇನು?
ಅದು ಕಾಲಿಲ್ಲದವನ ಇರವಿನಂತೆ.
ನಿಜಗುರು ಸ್ವತಂತ್ರಲಿಂಗೇಶ್ವರನ ನಿಜವ ಬೆರಸುವಡೆ
ಜ್ಞಾನವೂ ಕ್ರೀಯೂ ಎರಡೂ ಬೇಕು.
(ಸಮಗ್ರ ವಚನ ಸಂಪುಟ: ಹನ್ನೊಂದು-2021/ಪುಟ ಸಂಖ್ಯೆ-449/ವಚನ ಸಂಖ್ಯೆ-877)

ಕಣ್ಣು, ಕಾಲು ಸುಸ್ಥಿತಿಯಲ್ಲಿದ್ದರೆ ಮಾತ್ರ ದೂರದವರೆಗೆ ನಡೆಯಲು ಸಾಧ್ಯ. ಇವೆರಡರಲ್ಲಿ ಒಂದು ಊನವಾಗಿದ್ದರೂ ದೂರದ ದಾರಿ ಕ್ರಮಿಸುವುದು ಕಷ್ಟ. ಹಾಗೆಯೇ ಆಧ್ಯಾತ್ಮಿಕ ಸಾಧನೆಗೆ ಜ್ಞಾನ-ಕ್ರಿಯೆಗಳೆರಡೂ ಬೇಕು. ಅವುಗಳಲ್ಲಿ ಒಂದರ ಕೊರತೆಯಾದರೆ ಆಧ್ಯಾತ್ಮಿಕ ಸಾಧನೆ ಕುಂಠಿತಗೊಳ್ಳುತ್ತದೆ. ನಿಜವ ಬೆರೆಸುವಲ್ಲಿ ವಿಫಲರಾಗುತ್ತೇವೆ. ಜ್ಞಾನವಿಲ್ಲದ ಕ್ರಿಯೆಯು ಕಣ್ಣಿಲ್ಲದ ನಡೆಯಂತೆ ಸರಿಯಾದ ಮಾರ್ಗ ಕಾಣದು. ಕ್ರಿಯೆಯಿಲ್ಲದ ಜ್ಞಾನವು ಕಾಲಿಲ್ಲದವನ ಇರುವಿನಂತೆ ಗುರಿ ತಲುಪಲಾಗದು. ಅದು ಪಂಗುಳನ ಪಯಣದಂತಾಗುತ್ತದೆ. ಗುರಿ ತಲುಪಲು ಕಣ್ಣು-ಕಾಲು ಎರಡೂ ಬೇಕಾದಂತೆ ಪರವಸ್ತುವನ್ನು ಬೆರೆಸಲು ಜ್ಞಾನ-ಕ್ರಿಯೆ ಎರಡೂ ಬೇಕೆಂದು ಸ್ವತಂತ್ರ ಸಿದ್ಧಲಿಂಗೇಶ್ವರರು ಆಧ್ಯಾತ್ಮಿಕ ಸಾಧನೆಯ ರಹಸ್ಯ ಬಿಚ್ಚಿಟ್ಟಿದ್ದಾರೆ.

ಆಧ್ಯಾತ್ಮಿಕ ಸಾಧನೆಗೆ ಅಂತರಂಗದ ಅರಿವು ಬಹಿರಂಗದ ಕ್ರಿಯೆ ಎರಡೂ ಅವಶ್ಯಕವಾಗಿವೆ ಎಂದು ಹೇಳುವ ಚೆನ್ನಬಸವಣ್ಣನವರ ವಚನ:

ಅಂತರಂಗದಲ್ಲಿ ಅರಿವಾದಡೇನಯ್ಯಾ
ಬಹಿರಂಗದಲ್ಲಿ ಕ್ರೀ ಇಲ್ಲದನ್ನಕ್ಕ?
ದೇಹವಿಲ್ಲದಿರ್ದಡೆ ಪ್ರಾಣಕ್ಕಾಶ್ರಯವುಂಟೆ?
ಕನ್ನಡಿಯಿಲ್ಲದಿರ್ದಡೆ ತನ್ನ ಮುಖವ ಕಾಣಬಹುದೆ?
ಸಾಕಾರ ನಿರಾಕಾರ ಏಕೋದೇವ
ನಮ್ಮ ಕೂಡಲಚೆನ್ನಸಂಗಯ್ಯನು.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-365/ವಚನ ಸಂಖ್ಯೆ-906)

ಅಂತರಂಗದಲ್ಲಿ ನಾನು ಸಚ್ಚಿದಾನಂದ ಶಿವಸ್ವರೂಪವೆಂಬ ಅರಿವಾದರೇನಾಯಿತು. ಆ ಅರಿವು ಸಾಕಾರಗೊಂಡು ಬಹಿರಂಗದಲ್ಲಿ ಸತ್‌ಕ್ರಿಯೆಯಾಗದೆ ಪ್ರಯೋಜನವೇನು? ಕ್ರಿಯಾ ಸ್ವರೂಪವಾದ ದೇಹವಿಲ್ಲದಿದ್ದರೆ ಚೇತನ ಸ್ವರೂಪವಾದ ಪ್ರಾಣಕ್ಕೆ ಆಶ್ರಯವುಂಟೆ? ತನ್ನಲ್ಲಿ ತನ್ನ ಮುಖವಿದೆಯೆಂದ ಮಾತ್ರಕ್ಕೆ ಅದು ಕನ್ನಡಿಯಿಲ್ಲದೆ ತನಗೆ ಕಾಣುವುದೆ? ಕಾಣದೆಂಬಂತೆ, ಕ್ರಿಯೆಯೆಂಬ ಸಾಕಾರ, ಜ್ಞಾನವೆಂಬ ನಿರಾಕಾರ ಇವೆರಡರ ಸಾಮರಸ್ಯದ ಕೂಟವೆ ಸಾಕ್ಷಾತ್ ಶಿವ ಸ್ವರೂಪವೆಂದು ಚೆನ್ನಬಸವಣ್ಣನವರು ಜ್ಞಾನ-ಕ್ರಿಯೆಗಳ ಮಹತ್ವವನ್ನು ತಿಳಿಸಿದ್ದಾರೆ.

ಜ್ಞಾನ-ಕ್ರಿಯೆಗಳ ಸಂಬಂಧ ಅಗ್ನಿ-ವಾಯುಗಳ ಸಬಂಧದಂತೆ ಎಂದು ಜೇಡರ ದಾಸಿಮಯ್ಯನವರು ಹೇಳುತ್ತಾರೆ:

ಅಗ್ನಿ ಸುಡಲಲ್ಲದೆ ಸುಳಿಯಲರಿಯದು.
ವಾಯು ಸುಳಿವುದಲ್ಲದೆ ಸುಡಲರಿಯದು
ಆ ಅಗ್ನಿ ವಾಯು ಕೂಡಿದಲ್ಲದೆ ಅಡಿ ಇಡಲರಿಯದು
ಈ ಪರಿಯಂತೆ ನರರರಿವರೆ ಕ್ರಿಯಾ ಜ್ಞಾನ ಭೇದವ?
ರಾಮನಾಥಾ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-262/ವಚನ ಸಂಖ್ಯೆ-714)

ಅಗ್ನಿ ವಸ್ತುವನ್ನು ಸುಡಬಲ್ಲದು. ಆದರೆ, ವಾಯುವಿನ ಸಹಾಯವಿಲ್ಲದೆ ವಿಸ್ತಾರವಾಗಿ ವ್ಯಾಪಿಸಲಾರದು. ವಾಯುವಿನಲ್ಲಿ ವ್ಯಾಪಕತ್ವ ಗುಣವಿದೆ. ಆದರೆ, ಸುಡುವ ಗುಣವಿಲ್ಲ. ಅಗ್ನಿ-ವಾಯು ಎರಡೂ ಸೇರಿದಾಗ ಮಾತ್ರ ಅಗ್ನಿ ವ್ಯಾಪಕವಾಗಿ ಹರಡಬಲ್ಲದು. ಹಾಗೆಯೇ ಜ್ಞಾನವೆಂಬ ಅಗ್ನಿ, ಕ್ರಿಯೆಯೆಂಬ ವಾಯು ಇವೆರಡರ ಸಂಗದ ರಹಸ್ಯ ತಿಳಿಯಬೇಕು. ಕ್ರಿಯೆಯಿಲ್ಲದ ಜ್ಞಾನ ವಾಯುವಿಲ್ಲದ ಅಗ್ನಿಯಂತೆ ವ್ಯಾಪಿಸಲಾರದು. ಜ್ಞಾನವಿಲ್ಲದ ಕ್ರಿಯೆ ಅಗ್ನಿಯಿಲ್ಲದ ವಾಯುವಿನಂತೆ ಅಜ್ಞಾನವನ್ನು ಸುಡದು ಎಂಬ ಜ್ಞಾನ-ಕ್ರಿಯೆಗಳ ಸಮಾಗಮದ ಮಹತ್ವವನ್ನು ಜೇಡರ ದಾಸಿಮಯ್ಯನವರು ವೈಜ್ಞಾನಿಕವಾಗಿ ತಿಳಿಸಿದ್ದಾರೆ.

ಕೆಲವರು ಆಧ್ಯಾತ್ಮಿಕಸಾಧನೆಗೆ ಜ್ಞಾನವೊಂದೆ ಸಾಕು ಎನ್ನುತ್ತಾರೆ. ಇನ್ನು ಕೆಲವರು ಕ್ರಿಯೆವೊಂದೆ ಸಾಕು ಎಂದು ವಾದಿಸುತ್ತಾರೆ. ಅಂಥವರಿಗೆ ಷಣ್ಮುಖ ಶಿವಯೋಗಿಗಳು ತಮ್ಮ ವಚನದ ಮೂಲಕ ವಾಸ್ತವಿಕತೆಯನ್ನು ತಿಳಿಸುತ್ತಾರೆ:

ಕ್ರಿಯವೇ ಅಧಿಕವೆಂಬ
ಗೊಡ್ಡ ಸಿದ್ಧಾಂತಿಗಳ ಮಾತು ಸೊಗಸದಯ್ಯಾ ಎನಗೆ.
ಜ್ಞಾನವೇ ಅಧಿಕವೆಂಬ
ದಡ್ಡ ವೇದಾಂತಿಗಳ ಮಾತು ಸೊಗಸದಯ್ಯಾ ಎನಗೆ.
ಅದೇನು ಕಾರಣವೆಂದೊಡೆ:
ಅವುದಾನೊಂದು ಪಕ್ಷಿಯು
ಉಭಯ ರೆಕ್ಕೆಯಿಂದ ಗಗನಕ್ಕೆ ಹಾರುವಂತೆ
ಅಂತರಂಗದಲ್ಲಿ ಸಮ್ಯಕ್‌ಜ್ಞಾನ
ಬಹಿರಂಗದಲ್ಲಿ ಶಿವಸತ್‌ಕ್ರಿಯಾಸನ್ನಿಹಿತವಿಲ್ಲದೆ
ಪರವಸ್ತುವ ಕೂಡಬಾರದಾಗಿ.
ಇದು ಕಾರಣ,
ಸತ್‌ಕ್ರಿಯಾ ಸಮ್ಯಕ್ ಜ್ಞಾನಸಂಪನ್ನರಾದ
ಮಹಾಶರಣರ ತೋರಿ ಬದುಕಿಸಯ್ಯಾ
ಎನ್ನ ಅಖಂಡೇಶ್ವರಾ.
(ಸಮಗ್ರ ವಚನ ಸಂಪುಟ: ಹದಿನಾಲ್ಕು-2021/ಪುಟ ಸಂಖ್ಯೆ-263/ವಚನ ಸಂಖ್ಯೆ-392)

ಅಂತರಂಗದಲ್ಲಿ ಜ್ಞಾನವಿಲ್ಲದೆ ಅಂಧಶ್ರದ್ಧೆಯಿಂದ ಮಾಡುವ ಕ್ರಿಯೆಯೆ ಅಧಿಕವೆಂಬ ಸಿದ್ಧಾಂತಿಗಳ ಮಾತು ಸಮಂಜಸವೆನಿಸದು. ಬಹಿರಂಗದಲ್ಲಿ ಸತ್‌ಕ್ರಿಯೆಯಿಲ್ಲದೆ ಬರಿ ಮಾತಿನಲ್ಲಿ ಅಹಂಬ್ರಹ್ಮಾಸ್ಮಿ ಎನ್ನುತ್ತ ಜ್ಞಾನವೇ ಅಧಿಕವೆಂಬ ವೇದಾಂತಿಗಳ ಮಾತೂ ಸಮಂಜಸವೆನಿಸದು. ಏಕೆಂದರೆ ಯಾವುದಾದರೊಂದು ಪಕ್ಷಿಯು ತನ್ನ ಎರಡೂ ರೆಕ್ಕೆಯಿಂದಲೆ ಆಕಾಶಕ್ಕೆ ಹಾರುವಂತೆ, ಭಕ್ತನ ಅಂತರಂಗದಲ್ಲಿ ಸ್ವಸ್ವರೂಪದ ಸಮ್ಯಗ್‌ಜ್ಞಾನ ಮತ್ತು ಬಹಿರಂಗದಲ್ಲಿ ಸತ್ಕೀೃಯೆ ಇಲ್ಲದೆ ಪರವಸ್ತುವನ್ನು ಕೂಡಲಾಗದು. ಅದಕ್ಕಾಗಿ ಅವೆರಡರ ಸಮನ್ವಯತೆ ಮಹತ್ವಪೂರ್ಣವಾದುದು ಎಂದು ಷಣ್ಮುಖ ಶಿವಯೋಗಿಗಳು ತಿಳಿಸಿದ್ದಾರೆ.

ಕ್ರಿಯೆಯ ಮಹತ್ವ ಕುರಿತು ಶರಣ ಮೆರಮಿಂಡಯ್ಯನವರ ವಚನ:

ನೀರೊಳಗಣ ಕಿಚ್ಚು ತಾಯಲ್ಲಿ ಅಡಗಿತ್ತು.
ಶಿಲೆಯೊಳಗಣ ಕಿಚ್ಚು ತಾಯನುಳುಹಿ, ಇದಿರ ಸುಟ್ಟಿತ್ತು.
ಮರದೊಳಗಣ ಕಿಚ್ಚು ಮರನನೂ ಸುಟ್ಟು,
ಇದಿರನೂ ಸುಟ್ಟು, ಪರಸ್ಪಂದಕ್ಕೆ ಹರಿಯಿತ್ತು.
ಇಂತೀ ತ್ರಿವಿಧ ಭೇದದಿಂದ, ಜ್ಞಾನದ ಭೇದವನರಿ
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-511/ವಚನ ಸಂಖ್ಯೆ-1344)

ನೀರೊಳಗೆ ಅಗ್ನಿ ಇದೆ. ಅದು ಯಾರನ್ನೂ ಸುಡದೆ ನೀರೊಳಗೆ ಅಡಗಿದೆ. ಶಿಲೆಯೊಳಗೆ ಅಗ್ನಿ ಇದೆ. ಅದು ಶಿಲೆಯನ್ನು ಸುಡದೆ ತನ್ನ ಸಮೀಪದ ವಸ್ತುವನ್ನು ಸುಡುತ್ತದೆ. ಉದಾಹರಣೆಗೆ: ಚಕಮಕಿ ಕಲ್ಲುಗಳ ಮಧ್ಯೆ ಇರುವ ದೂದಿ ಸುಡುತ್ತದೆ. ಆದರೆ, ಕಲ್ಲುಗಳು ಸುಡುವುದಿಲ್ಲ. ಮರದಲ್ಲಿಯ ಅಗ್ನಿ ಮರವನ್ನೂ ಸುಟ್ಟು ತನ್ನ ಸಮೀಪದ ವಸ್ತುವನ್ನೂ ಸುಡುತ್ತದೆ. ಹಾಗೆಯೇ, ಕೆಲವರಲ್ಲಿ ಅಪಾರ ಜ್ಞಾನವಿದೆ. ಆದರೆ, ತಮ್ಮಲ್ಲಿಯ ಹಾಗೂ ಪರರ ಅಜ್ಞಾನವನ್ನು ಕಳೆಯಲು (ಸುಡಲು) ಬಳಸಿಕೊಳ್ಳಲಿಲ್ಲ. ಅದು ನೀರೊಳಗಣ ಕಿಚ್ಚಿನಂತಹದ್ದು. ಕೆಲವರು ತಮ್ಮಲ್ಲಿಯ ಜ್ಞಾನವನ್ನು ಪರರಿಗೆ ಉಪದೇಶ ನೀಡಲು ಮಾತ್ರ ಉಪಯೋಗಿಸುತ್ತಾರೆ. ತಮ್ಮಲ್ಲಿಯ ಅಜ್ಞಾನವನ್ನು ಕಳೆದುಕೊಳ್ಳಲಿಲ್ಲ. ಅಂಥವರ ಜ್ಞಾನ ಶಿಲೆಯೊಳಗಣ ಕಿಚ್ಚು ಇದ್ದಂತೆ. ಕೆಲವರು ತಮ್ಮ ಜ್ಞಾನವನ್ನು ತಮ್ಮಲ್ಲಿಯ ಹಾಗೂ ಪರರ ಅಜ್ಞಾನ ಕಳೆಯಲು ಬಳಸುತ್ತಾರೆ. ಅಂತವರ ಜ್ಞಾನ ಮರದೊಳಗಣ ಕಿಚ್ಚಿನಂತಹದ್ದು. ಇಲ್ಲಿ ಜ್ಞಾನ ಮತ್ತು ಕ್ರಿಯೆಗಳೆರಡೂ ಇವೆ. ಅಂತವರು ಮಾತ್ರ ರಾಮೇಶ್ವರಲಿಂಗವನರಿಯಲು ಸಾಧ್ಯವೆಂದು ಮೆರಮಿಂಡಯ್ಯನವರು ಹೇಳುತ್ತಾರೆ.

ನಡೆ-ನುಡಿ ಸಮನ್ವಯತೆ:

ಶರಣರು ನಡೆದಂತೆ ನುಡಿದರು, ನುಡಿದಂತೆ ನಡೆದರು. ಅವರು ನಡೆದಂತೆ ನುಡಿದ ಆತ್ಮಸಾಕ್ಷಿಯ ವಾಣಿಗಳೆ ವಚನಗಳಾದವು. ನಡೆ-ನುಡಿಗಳನ್ನು ಒಂದಾಗಿಸಿಕೊಳ್ಳಬೇಕೆಂದು ಬಸವಣ್ಣನವರು ತಮ್ಮ ವಚನದ ಮೂಲಕ ಬಹಳ ಮಾರ್ಮಿಕವಾಗಿ ಹೇಳುತ್ತಾರೆ:

ನುಡಿಯಲ್ಲಿ ಎಚ್ಚತ್ತು ನಡೆಯಲ್ಲಿ ತಪ್ಪಿದಡೆ
ಹಿಡಿದಿದ್ದ ಲಿಂಗವು ಘಟಸರ್ಪನಯ್ಯಾ.
ನುಡಿಯಲೂ ಬಾರದು, ನಡೆಯಲೂ ಬಾರದು,
ಲಿಂಗದೇವನೆ ದಿಬ್ಯವೊ ಅಯ್ಯಾ.
ಬಡವನ ಕೋಪ ಆವುಡಿಗೆ ಮೃತ್ಯುವಾದಂತೆ
ಕಡೆದಾಂಟದು ಕಾಣಾ,
ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-176/ವಚನ ಸಂಖ್ಯೆ-646)

ಒಳ್ಳೆಯ ಮಾತುಗಳನ್ನಾಡಿ ಅವುಗಳಂತೆ ನಡೆಯಿಲ್ಲದಿದ್ದಡೆ ಕರಸ್ಥಲದಲ್ಲಿದ್ದ ಲಿಂಗವು ಘಟಸರ್ಪದಂತೆ ಎಂದು ಬಸವಣ್ಣನವರು ಹೇಳುತ್ತಾ ನಡೆ-ನುಡಿಗಳ ಸಮನ್ವಯತೆ ಲಿಂಗಪೂಜೆಗಿಂತ ಶ್ರೇಷ್ಠವಾದುದು, ನಡೆ-ನುಡಿ ಒಂದಾಗದೆ ಮಾಡಿಕೊಳ್ಳುವ ಪೂಜೆ ವ್ಯರ್ಥಪ್ರಯಾಸವೆಂದು ತಿಳಿಸಿದ್ದಾರೆ.

ವಚನಗಳನ್ನು ಕೇವಲ ಹೇಳಿದರಾಗಲಿಲ್ಲ. ಅವುಗಳಂತೆ ನಡೆಯಬೇಕು. ಇಲ್ಲವಾದರೆ ಪರಮಾತ್ಮ ಮೆಚ್ಚನು ಎಂದು ಮೋಳಿಗೆ ಮಾರಯ್ಯನವರು ಹೇಳುತ್ತಾರೆ:

ಆದ್ಯರ ವಚನವ ನೋಡಿ, ಓದಿ ಹೇಳಿದಲ್ಲಿ ಫಲವೇನಿ ಭೋ?
ತನ್ನಂತೆ ವಚನವಿಲ್ಲ, ವಚನದಂತೆ ತಾನಿಲ್ಲ.
ನುಡಿಯಲ್ಲಿ ಅದ್ವೆೈತವ ನುಡಿದು, ನಡೆಯಲ್ಲಿ ಅಧಮರಾದಡೆ,
ಶಿವ ಶರಣರು ಮೆಚ್ಚುವರೆ?
ಇದು ಕಾರಣ, ಅವರ ನಡೆನುಡಿ ಶುದ್ಧವಿಲ್ಲವಾಗಿ,
ಅವರಿಗೆ ಗುರು ಲಿಂಗ ಜಂಗಮ ಪಾದೋದಕ ಪ್ರಸಾದ
ವಿಭೂತಿ ರುದ್ರಾಕ್ಷಿ ಪಂಚಮ ಪಂಚಾಕ್ಷರವಿಲ್ಲ.
ಇಂತಿವಿಲ್ಲದೆ ಬರಿಯ ಮಾತಿನಲ್ಲಿ ಬೊಮ್ಮವ ನುಡಿವ
ಬ್ರಹ್ಮೇತಿಕಾರರ ಮೆಚ್ಚ, ನಿಃಕಳಂಕ ಮಲ್ಲಿಕಾರ್ಜುನ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-558/ವಚನ ಸಂಖ್ಯೆ-1498)

ಬಹು ಜನರು ಬಸವಣ್ಣನವರ ಈ ವಚನವನ್ನು ಹೇಳಿದ್ದೇ ಹೇಳಿದ್ದು.

ಇವನಾರವ, ಇವನಾರವ,
ಇವನಾರವನೆಂದೆನಿಸದಿರಯ್ಯಾ,
ಇವನಮ್ಮವ, ಇವನಮ್ಮವ,
ಇವ ನಮ್ಮವನೆಂದೆನಿಸಯ್ಯಾ.
ಕೂಡಲಸಂಗಮದೇವಾ
ನಿಮ್ಮ ಮನೆಯ ಮಗನೆಂದೆನಿಸಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-20/ವಚನ ಸಂಖ್ಯೆ-62)

ಆದರೆ ಯಾರನ್ನೂ ಅಪ್ಪಿಕೊಳ್ಳಲಿಲ್ಲ. ಇವನು ನಮ್ಮ ಜಾತಿಯವ, ಇವನು ನಮ್ಮ ಪಕ್ಷದವ ಎಂದು ಹೇಳುತ್ತಿರುವುದು ಎಂಥ ವಿಪರ್ಯಾಸ? ಹುಸಿಯ ನುಡಿಯಲು ಬೇಡ ಎಂದು ಪರರಿಗೆ ಹೇಳುತ್ತಾ ತಾವು ಮಾತ್ರ ಅದನ್ನೇ ಮಾಡುವವರಿಗೇನೂ ಕೊರತೆ ಇಲ್ಲ. ಅವರ ನಡೆನುಡಿ ಶುದ್ಧವಿಲ್ಲವಾಗಿ ಅವರಿಗೆ ಅಧ್ಯಾತ್ಮ ಅಳವಡದು ಎಂದು ಮಾರಯ್ಯನವರು ಹೇಳುತ್ತಾರೆ. ನಡೆ-ನುಡಿ ಒಂದಾದರೆ ಯಾವ ಸೂತಕಗಳಿಲ್ಲವೆಂದು ಹೇಳುವ ಮಾದಾರ ಚೆನ್ನಯ್ಯನವರ ವಚನ ಈ ವಚನ ಅತ್ಯಂತ ಮನೋಜ್ಷವಾಗಿದೆ.

ನಡೆನುಡಿ ಸಿದ್ಧಾಂತವಾದಲ್ಲಿ, ಕುಲ ಹೊಲೆ ಸೂತಕವಿಲ್ಲ.
ನುಡಿ ಲೇಸು, ನಡೆಯಧಮವಾದಲ್ಲಿ,
ಅದು ಬಿಡುಗಡೆಯಿಲ್ಲದ ಹೊಲೆ.
ಕಳವು ಪಾರದ್ವಾರಂಗಳಲ್ಲಿ ಹೊಲಬನರಿಯದೆ,
ಕೆಟ್ಟು ನಡೆವುತ್ತ, ಮತ್ತೆ ಕುಲಜರೆಂಬ ಒಡಲದವರುಂಟೆ?
ಆಚಾರವೆ ಕುಲ, ಅನಾಚಾರವೆ ಹೊಲೆ.
ಇಂತೀ ಉಭಯವ ತಿಳಿದರಿಯಬೇಕು.
ಕೈಯುಳಿಕತ್ತಿ ಅಡಿಗೂಂಟಕ್ಕಡಿಯಾಗಬೇಡ,
ಅರಿ ನಿಜಾ[ತ್ಮ]ರಾಮರಾಮನಾ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-447/ವಚನ ಸಂಖ್ಯೆ-1153)

ವ್ಯಕ್ತಿಯ ನಡೆ-ನುಡಿಗಳು ಒಂದಾಗಿದ್ದರೆ ವ್ಯಕ್ತಿತ್ವಕ್ಕೆ ಯಾವ ದೋಷಗಳು ಅಂಟಿಕೊಳ್ಳುವುದಿಲ್ಲ. ನುಡಿ ಚೆನ್ನಾಗಿದ್ದು ನಡೆ ಮಾತ್ರ ಅಧಮವಾಗಿದ್ದರೆ ಬಿಡಿಸಿಕೊಳ್ಳದ ದೋಷ ಅಂಟಿಕೊಳ್ಳುತ್ತದೆ. ಕಳ್ಳತನ, ಭ್ರಷ್ಟಾಚಾರಗಳಲ್ಲಿ ತೊಡಗಿ ಮತ್ತೆ ನಾನು ಉತ್ತಮ ಕುಲದವ, ಉನ್ನತ ಅಧಿಕಾರಿ ಎಂದು ಹೇಳಿಕೊಳ್ಳುವುದು ನಾಚಿಕೆಗೇಡಿತನ ಮತ್ತು ಅವಿವೇಕದ ಪರಮಾವಧಿ. ಸದಾಚಾರದಲ್ಲಿ ಸಾಗುವವರೆ ಉತ್ತಮ ಕುಲದವರು, ಅನಾಚಾರದಲ್ಲಿದ್ದವರು ಕೆಟ್ಟ ಕುಲದವರು. ಇದನ್ನರಿತು ಬದುಕಬೇಕೆಂಬ ನಡೆ-ನುಡಿಗಳ ಸಮನ್ವಯದ ಸಂದೇಶವನ್ನು ಮಾದಾರ ಚೆನ್ನಯ್ಯನವರು ನೀಡಿದ್ದಾರೆ.

ನಮ್ಮ ನಡೆ-ನುಡಿಗಳಿಂದ ಮತ್ತೊಬ್ಬರ ಮನಸ್ಸಿಗೆ ನೋವಾಗಬಾರದು. ಪರರ ಜೊತೆಗೆ ಹೇಗೆ ನುಡಿಯಬೇಕು ಹೇಗೆ ನಡೆದುಕೊಳ್ಳಬೇಕು ಎಂದು ಮಾತನಾಡುವ ಕೌಶಲ ಮತ್ತು ವ್ಯವಹರಿಸುವ ಕೌಶಲ ತಿಳಿದುಕೊಳ್ಳಬೇಕು. ಅವು ಲಿಂಗ ಪೂಜೆಗಿಂತ ಶ್ರೇಷ್ಠವಾದವು, ನಮ್ಮ ನಡೆ-ನುಡಿಗಳಿಂದ ಇತರರ ಮನನೊಂದರೆ ಮಾಡಿದ ಪೂಜೆ ವ್ಯರ್ಥವೆಂಬ ಸಂದೇಶವನ್ನು ಬಸವಣ್ಣನವರು ತಮ್ಮ ಈ ವಚನದ ಮೂಲಕ ನೀಡಿದ್ದಾರೆ.

ನಡೆಯಲರಿಯದೆ, ನುಡಿಯಲರಿಯದೆ
ಲಿಂಗವ ಪೂಜಿಸಿ ಫಲವೇನು! ಫಲವೇನು!
ಅವರ ದುಃಖವೆನ್ನ ದುಃಖ, ಅವರ ಸುಖವೆನ್ನ ಸುಖ.
ಕೂಡಲಸಂಗನ ಶರಣರ ಮನನೊಂದಡೆ
ಆನು ಬೆಂದೆನಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-107/ವಚನ ಸಂಖ್ಯೆ-409)

ನುಡಿದಂತೆ ನಡೆವೆ, ನಡೆಯೊಳಗೆ ನುಡಿಯ ಪೂರೈಸುವೆ ಎಂದು ದೇವನಿಗೆ ಭಾಷೆ ಕೊಡುವ ಬಸವಣ್ಣನವರ ವಚನವಂತೂ ಅತ್ಯಂತ ಸೂಕ್ತವಾಗಿದೆ.

ಭಕ್ತಿ ಸುಭಾಷೆಯ ನುಡಿಯ ನುಡಿವೆ,
ನುಡಿದಂತೆ ನಡೆವೆ,
ನಡೆಯೊಳಗೆ ನುಡಿಯ ಪೂರೈಸುವೆ.
ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕೈಯಲ್ಲಿ.
ಒಂದು ಜವೆ ಕೊರತೆಯಾದಡೆ
ಎನ್ನನದ್ದಿ ನೀನೆದ್ದು ಹೋಗು,
ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-115/ವಚನ ಸಂಖ್ಯೆ-441)

ಮಂಗಳಕರವಾದ ನುಡಿಗಳನ್ನೆ ನುಡಿಯುತ್ತೇನೆ. ನುಡಿದಂತೆ ನಡೆಯುತ್ತೇನೆ. ಯಾವ ಸತ್ಯನಿಷ್ಠ ಸಾಧನೆಯ ಮಾತುಗಳನ್ನು ನುಡಿಯುತ್ತೇನೆಯೋ ಅದನ್ನು ನನ್ನ ನಡೆಯಲ್ಲಿ ಪೂರೈಸುತ್ತೇನೆ. ಎನ್ನ ನಡೆ ನುಡಿಯನ್ನು ಸಮನಾಗಿ ತೂಗುವ ನ್ಯಾಯದ ತಕ್ಕಡಿ ನಿನ್ನ ಕೈಯಲ್ಲಿದೆ ಶಿವನೆ. ನಡೆ ನುಡಿಯಲ್ಲಿ ಒಂದು ಕೂದಲೆಳೆಯಷ್ಟೂ ಅಂತರ ಕಂಡು ಬಂದರೆ ನನ್ನನ್ನು ಭವಸಾಗರದಲ್ಲಿ ತಳ್ಳಿ ಎನ್ನಂಗದಿಂದ ನೀನು ಎದ್ದು ಹೋಗು ದೇವಾ ಎಂದು ಬಸವಣ್ಣನವರು ನಡೆನುಡಿಗಳೊಂದಾದ ಚಾರಿತ್ರ್ಯ ಶುದ್ಧಿಯನ್ನು ದಿಟ್ಟತನದಿಂದ ನಿವೇದಿಸುತ್ತಾರೆ. ಎಲ್ಲವನ್ನು ಅಧ್ಯಯನ ಮಾಡಿ, ಜನರಿಗೆ ಹೇಳಿ ತಾನು ಮಾತ್ರ ಅವುಗಳಂತಿರದಿದ್ದರೆ ಅವನೊಬ್ಬ ಬರಿಮಾತಿನ ಭಟನಂತೆ ಎಂದು ಹೇಳುವ ಸಗರದ ಬೊಮ್ಮಣ್ಣನ ಈ ವಚನ ಸುಂದರವಾಗಿದೆ.

ಸಕಲ ಆಗಮಂಗಳ ಕಲಿತು, ಸರ್ವಜನಕ್ಕೆ ಹೇಳಿ,
ತಾ ನಿಃಕರುಣಿಯಾಗಿ,
ತ್ರಿವಿಧಮಲಕ್ಕೆ ಹೊರಗಾಗೆಂದು ತಾನೊಳಗಾಗಿ,
ಬರಿಮಾತಿನ ಭಟನಂತೆ ಅದರಾರೈಕೆ,
ಸಗರ ಬೊಮ್ಮನೊಡೆಯ
ತನುಮನ ಸಂಗಮೇಶ್ವರಾ.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-243/ವಚನ ಸಂಖ್ಯೆ-585)

ತತ್ವ ಪ್ರಚಾರಕನೇಕರು, ಪರಿಪಾಲಕರು ವಿರಳ. ಜನರಿಗೆ ವೈರಾಗ್ಯದ ಉಪದೇಶ ಮಾಡಿ ತಾವು ಮಾತ್ರ ಸ್ವೇಚ್ಛಾಚಾರದಲ್ಲಿ ಮೆರೆಯುವವರನೇಕರು. ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ನನ್ನ ಮಾತ್ರ ಕೇಳಬೇಡ ಎನ್ನುವವರಿಗೂ ಕೊರತೆ ಇಲ್ಲ. ಅವರೆಲ್ಲರೂ ಕೇವಲ ಮಾತಿನ ಭಟರು, ತತ್ವದ ಭಟರಲ್ಲ.

ಜನರನ್ನು ಮೆಚ್ಚಿಸಲು ಮಾತನಾಡುವವರು, ನಡೆ-ನುಡಿ, ವೇಷ-ಭಾಷೆಗಳಲ್ಲಿ ಸಾಮ್ಯತೆ ಇಲ್ಲದವರು ಗುಪ್ತಪಾತಕಿಗಳು. ಅಂಥವರಿಗೆ ದೇವರು ಒಲಿಯಲಾರನೆಂದು ಹೇಳುವ ಸಕಲೇಶ ಮಾದರಸರ ಈ ವಚನವಿ ತಿಳಿಸುತ್ತದೆ.

ಜನಮೆಚ್ಚೆ ಶುದ್ಧನಲ್ಲದೆ, ಮನಮೆಚ್ಚೆ ಶುದನಲ್ಲವಯ್ಯಾ
ನುಡಿಯಲ್ಲಿ ಜಾಣನಲ್ಲದೆ, ನಡೆಯಲ್ಲಿ ಜಾಣನಲ್ಲವಯ್ಯಾ.
ವೇಷದಲ್ಲಿ ಅಧಿಕನಲ್ಲದೆ, ಭಾಷೆಯಲ್ಲಿ ಅಧಿಕನಲ್ಲವಯ್ಯಾ.
ಧನ ದೊರಕದಿದ್ದಡೆ ನಿಸ್ಪೃಹನಲ್ಲದೆ,
ಧನ ದೊರಕಿ ನಿಸ್ಪೃಹನಲ್ಲವಯ್ಯಾ.
ಏಕಾಂತದ್ರೋಹಿ, ಗುಪ್ತಪಾತಕ, ಯುಕ್ತಿಶೂನ್ಯಂಗೆ
ಸಕಳೇಶ್ವರದೇವ ಒಲಿ ಒಲಿಯೆಂದೆಡೆ,
ಎಂತೊಲಿವನಯ್ಯಾ?
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-192/ವಚನ ಸಂಖ್ಯೆ-429)    

ನಡೆ ಮತ್ತು ನುಡಿ ಇವು ಕ್ರಿಯೆ ಮತ್ತು ಜ್ಞಾನಕ್ಕೆ ಸಾಕ್ಷಿ. ಮತ್ತೆ ಬೇರೆ ಸಾಕ್ಷಿಯ ಅಗತ್ಯವಿಲ್ಲವೆಂದು ಷಣ್ಮುಖ ಶಿವಯೋಗಿಗಳು ಹೇಳುತ್ತಾರೆ.

ಕ್ರಿಯೆಯಲ್ಲಿ ಬಲ್ಲಿದರು, ಜ್ಞಾನದಲ್ಲಿ ಸಂಪನ್ನರು
ಎಂದು ಹೇಳಲೇತಕೊ?
ನಡೆನುಡಿಯಲ್ಲಿ ಕಾಣಬಹುದು.
ನಡೆನುಡಿ ಶುಧ್ದವಿಲ್ಲದವರಲ್ಲಿ
ಇರಲೊಲ್ಲ ನೋಡಾ ನಮ್ಮ ಅಖಂಡೇಶ್ವರ.
(ಸಮಗ್ರ ವಚನ ಸಂಪುಟ: ಹದಿನಾಲ್ಕು-2021/ಪುಟ ಸಂಖ್ಯೆ-285/ವಚನ ಸಂಖ್ಯೆ-445)

ಲೌಕಿಕ-ಪಾರಮಾರ್ಥ ಸಮನ್ವಯತೆ:

ಅನೇಕ ದಾರ್ಶನಿಕರು ಬದುಕನ್ನು ‘ಪರ’ದ ದೃಷ್ಟಿಯಲ್ಲಿ ನೋಡಿದರೆ, ಶರಣರು ಬದುಕನ್ನು ‘ಇಹ’ ಮತ್ತು ‘ಪರ’ದ ದೃಷ್ಟಿಯಲ್ಲಿ ನೋಡಿದ್ದಾರೆ. ಅವರು ಲೌಕಿಕದಲ್ಲಿದ್ದು (ಇಹ) ಪಾರಮಾರ್ಥ (ಪರ) ಸಾಧಿಸಿದ ಮಹಾನುಭಾವಿಗಳು. ಅವರು ಆಧ್ಯಾತ್ಮಿಕ ಸಾಧನೆಗಾಗಿ ಸಂಸಾರ ಬಿಟ್ಟು ಅಡವಿಗೆ ಹೋಗಲಿಲ್ಲ. ಸಂಸಾರದಲ್ಲಿದ್ದುಕೊಂಡು ಸಂಸಾರಕ್ಕೆ ಹೆಚ್ಚು ಅಂಟಿಕೊಳ್ಳದೆ ಸರಳ, ಸಹಜ, ಸುಂದರವಾಗಿ ಬದುಕಿದರು. ಶರಣರ ಇರುವಿಕೆಯ ಕುರಿತು ಚೆನ್ನಬಸವಣ್ಣನವರ ವಚನ:

ಇದ್ದು ಬದ್ಧನಲ್ಲ, ಸುಳಿದು ಸೂತಕಿಯಲ್ಲ,
ಆವ ಸಂಗವೂ ಇಲ್ಲದ ನಿಜೈಕ್ಯನು.
ಬೇಕು ಬೇಡೆನ್ನದೆ, ಅಳಿದುಳಿದು
ಕರ್ಪುರದ ಗಿರಿಯನುರಿ ತಾಗಿದಂತೆ
ಕೂಲಚೆನ್ನಸಂಗನಲ್ಲಿ ಲಿಂಗೈಕ್ಯನು.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-302/ವಚನ ಸಂಖ್ಯೆ-755)

ಶರಣರು ಎಲ್ಲರ ಮಧ್ಯದಲ್ಲಿಯೆ ಇರುತ್ತಾರೆ. ಆದರೆ, ಯಾವ ಸದ್ದು ಗದ್ದಲವಿಲ್ಲದೆ ಇದ್ದೂ ಇಲ್ಲದ ಹಾಗಿರುತ್ತಾರೆ. ಅವರು ಎಲ್ಲರಂತೆ ಸುಳಿಯುತ್ತಾರೆ, ಸಂಚರಿಸುತ್ತಾರೆ. ಆದರೆ, ಯಾವ ಸೂತಕಗಳಿಗೆ, ದೋಷಗಳಿಗೆ ಅಂಟಿಕೊಳ್ಳುವುದಿಲ್ಲ. ಪಂಚ ವಿಷಯಗಳ, ಅರಿಷಡ್ವೆೈರಿಗಳ, ಸಪ್ತವ್ಯಸನಗಳ, ಅಷ್ಟಮದಗಳ ಸಂಗವಿಲ್ಲದ ಸದಾಚಾರಿಗಳು. ಅವರು ಬೇಕು, ಬೇಕು ಎಂಬ ಹಪಾಹಪಿತನವಿಲ್ಲದ ನಿತ್ಯ ಸಂತೃಪ್ತರು. ಕರ್ಪೂರದಗಿರಿಗೆ ಉರಿ ತಗುಲಿದರೆ ಯಾವ ಅವಶೇಷಗಳೂ ಉಳಿಯುವುದಿಲ್ಲ. ಹಾಗೆಯೇ ಜ್ಞಾನಾಗ್ನಿಯಲ್ಲಿ ಎಲ್ಲ ಅವಗುಣಗಳನ್ನು ಸುಟ್ಟು ಹಾಕಿದ ನಿರ್ಮಲರು. ಹೀಗೆ ಲೌಕಿಕದಲ್ಲಿದ್ದುಕೊಂಡು ನಿಜೈಕ್ಯಶರಣರಾಗಿ ಬದುಕುತ್ತಾರೆ.

ಶುದ್ಧವಾದವರು ಅಶುದ್ಧತೆಯನರಸರು, ಬಯಲು ಬಯಲಾಗಿಯೇ ಇರುತ್ತದೆ. ಅದು ಮೂರ್ತಿಯಾಗಲಾರದು. ಹಾಗೆಯೇ ಪರಿಶುದ್ಧತೆ, ವಿಶಾಲ ಮನೋಭಾವದ ಸಂಕೇತ ರೂಪವಾದ ಶರಣರು ವಿಶಾಲತೆಯಿಂದ ಸಂಕುಚಿತತೆಯೆಡೆಗೆ ಸಾಗಲಾರರು. ಗಾಳಿ ಬೀಸುತ್ತದೆ. ಆದರೆ, ಧೂಳನ್ನು ಅಂಟಿಸಿಕೊಳ್ಳುವುದಿಲ್ಲ. ಹಾಗೆಯೇ ಶರಣರು ಪ್ರಾಪಂಚಿಕ ಧೂಳನ್ನು ಅಂಟಿಸಿಕೊಳ್ಳದೆ ಬದುಕುತ್ತಾರೆಂಬ ವಾಸ್ತವಿಕತೆಯನ್ನು ಶರಣ ಅಮುಗೆ ದೇವಯ್ಯನವರು ಈ ವಚನದ ಮೂಲಕ ತಿಳಿಸುತ್ತಾರೆ,

ಮಂಗಳ ಮಣ್ಣ ಬೆರೆಸದಂತೆ, ಬಯಲು ಮೂರ್ತಿಯಾಗದಂತೆ,
ಬಿಸಿಲು ಮಳೆಯಲ್ಲಿ ನಾಂದದಂತೆ, ಗಾಳಿ ಧೂಳ ಹತ್ತದಂತೆ,
ಸಿದ್ಧಸೋಮನಾಥಲಿಂಗಾ ನಿಮ್ಮ ಶರಣ ಬಳಸಿ ಬೇರಿಪ್ಪ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-132/ವಚನ ಸಂಖ್ಯೆ-337)

ವಿಷಯ ವಾಸನೆಗಳ ಬಂಧನವೇ ಸಂಸಾರ ಬಂಧನವೆಂದು ತೋಂಟದ ಸಿದ್ಧಲಿಂಗ ಶಿವಯೋಗಿಗಳು ಈ ಕೆಳಗಿನ ವಚನದ ಮೂಲಕ ಹೇಳುತ್ತಾರೆ.

ಕಾಯವೆಂಬ ವನಿತೆಗೆ ಆತ್ಮನೆಂಬ ಪುರುಷನು ನೋಡಾ.
ಆ ದೇಹದ ಆತ್ಮನ ಸಂಪರ್ಕದಿಂದ ಹುಟ್ಟಿದ
ಸಕಲ ಕರಣೇಂದ್ರಿಯಗಳೆ ಮಕ್ಕಳು ನೋಡಾ.
ಇದೇ ಸಂಸಾರವೆಂಬುದನರಿಯದೆ
ಬಹಿರಂಗದಲ್ಲಿ, ನಾನು ಹೊನ್ನು ಹೆಣ್ಣು ಮಣ್ಣು ಬಿಟ್ಟು
ವಿರಕ್ತನಾದೆನೆಂಬ ಅಜ್ಞಾನಿಯ ಪರಿಯ ನೋಡಾ.
ಇದು ವಿರಕ್ತಿಯೆ? ಅಲ್ಲ.
ದೇಹೇಂದ್ರಿಯ ಮನಃಪ್ರಾಣಾದಿಗಳ
ಮಹದಲ್ಲಿ ಒಡಗೂಡಿದಾತನೇ ಪರಮ ವಿರಕ್ತನು.
ಆತಂಗೆ ನಮೋ ನಮೋಯೆಂಬೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
(ಸಮಗ್ರ ವಚನ ಸಂಪುಟ: ಹನ್ನೊಂದು-2021/ಪುಟ ಸಂಖ್ಯೆ-213/ವಚನ ಸಂಖ್ಯೆ-472)

ಅನೇಕರು ಪತಿ, ಪತ್ನಿ, ಮಕ್ಕಳು, ಆಸ್ತಿ ಮುಂತಾದವುಗಳೆ ಸಂಸಾರವೆಂದುಕೊಂಡಿದ್ದಾರೆ. ಅವು ಆಧ್ಯಾತ್ಮಿಕ ಸಾಧನೆಗೆ ಮಾರಕವೆಂದು ಅವುಗಳಿಂದ ದೂರವಿರಬೇಕೆಂದಿದ್ದಾರೆ. ಅವುಗಳನ್ನು ತೊರೆಯುವುದೇ ವಿರಕ್ತಿ ಎಂದು ಭಾವಿಸಿದ್ದಾರೆ. ಅಂಥವರನ್ನು ತೋಂಟದ ಸಿದ್ಧಲಿಂಗ ಶಿವಯೋಗಿಗಳು ಅಜ್ಞಾನಿಗಳೆಂದಿದ್ದಾರೆ. ಏಕೆಂದರೆ ನಿಜವಾದ ಸಂಸಾರ ನಮ್ಮಲ್ಲಿಯೇ ಇದೆ. ದೇಹವೇ ಪತ್ನಿ, ಆತ್ಮವೇ ಪತಿ, ಇವರ ಸಂಪರ್ಕದಿಂದ ಹುಟ್ಟಿದ ಕರಣೇಂದ್ರಿಯಗಳೆಂಬ ಮಕ್ಕಳು. ಇದೆ ಸಂಸಾರ.

ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮಗಳೆಂಬ ಐದು ಜ್ಞಾನೇಂದ್ರಿಯಗಳು, ಚಿತ್ತ, ಬುದ್ಧಿ, ಮನ, ಅಹಂಕಾರವೆಂಬ ನಾಲ್ಕು ಅಂತಃಕರಣಗಳು, ಹೀಗೆ ಒಟ್ಟು ಒಂಬತ್ತು ಕರಣೇಂದ್ರಯಗಳೇ ಒಂಬತ್ತು ಮಕ್ಕಳು. ಇದೊಂದು ತುಂಬಿದ ಸಂಸಾರ. ಒಂಬತ್ತು ಮಕ್ಕಳ ಬಯಕೆ ಒಂದೊಂದು ತೆರನಾಗಿವೆ. ಅವುಗಳ ಬಯಕೆಯನ್ನು ಈಡೇರಿಸಲು ಪ್ರಯತ್ನಿಸಿದರೆ ಬೆಂಕಿಯಲ್ಲಿ ತುಪ್ಪ ಹಾಕಿದಂತೆ ಅವು ಮತ್ತಷ್ಟು ವಿಕಾರಗೊಳ್ಳುತ್ತವೆ. ಅದಕ್ಕಾಗಿ ಅವುಗಳನ್ನು ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿ ಎಂಬಂತೆ ವಿವೇಕದಿಂದ ಪ್ರಸಾದೀಕರಣಗೊಳಿಸಿ ಪರವಸ್ತುವಿನ ಧ್ಯಾನದಲ್ಲಿ ಅವುಗಳನ್ನು ತೊಡಗಿಸುವವನೇ ಶ್ರೇಷ್ಠವಿರಕ್ತನು. ಇದುವೇ ಲೌಕಿಕದಲ್ಲಿದ್ದು ಪಾರಮಾರ್ಥ ಸಾಧಿಸುವ ಬಗೆಯಾಗಿದೆ.

ಲೌಕಿಕದಲ್ಲಿದ್ದು ಪಾರಮಾರ್ಥದ ಉತ್ತುಂಗ ಸ್ಥಿತಿಗೇರಿದ ಬಸವಣ್ಣನವರ ಕುರಿತು ಅಲ್ಲಮರ ವಚನ:

ಕುಂಡಲಿಗನ ಕೀಟದಂತೆ,
ಮೈಮಣ್ಣಾಗದಂತೆ ಇದ್ದೆಯಲ್ಲಾ ಬಸವಣ್ಣಾ.
ಜಲದೊಳಗಣ ತಾವರೆಯಂತೆ,
ಹೊದ್ದಿಯೂ ಹೊದ್ದದಂತೆ ಇದ್ದೆಯಲ್ಲಾ ಬಸವಣ್ಣಾ.
ಜಲಗೊಳಗಣ ಮೌಕ್ತಿಕದಂತೆ,
ಜಲವು ತಾನಾಗದಂತೆ ಇದ್ದೆಯಲ್ಲಾ ಬಸವಣ್ಣಾ.
ಗುಹೇಶ್ವರಲಿಂಗದ ಅಣತಿವಿಡಿದು,
ತನುಗುಣ ಮತ್ತರಾಗಿದ್ದ ಐಶ್ವರ್ಯಾಂಧಕರ
ಮತವನೇನ ಮಾಡಿಬಂದೆಯಯ್ಯಾ,
ಸಂಗನಬಸವಣ್ಣಾ?
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-416/ವಚನ ಸಂಖ್ಯೆ-1116)

ಕುಂಡಲಿಗನ ಕೀಟವು ಕೀಡಿಯನ್ನು ತಂದು ಮಣ್ಣಿನ ಗೂಡಿನಲ್ಲಿಟ್ಟು ಭ್ರಮರವನ್ನಾಗಿಸುತ್ತದೆ. ಆದರೆ, ತನ್ನ ಮೈಗೆ ಮಣ್ಣನ್ನು ಅಂಟಿಸಿಕೊಳ್ಳುವುದಿಲ್ಲ. ಹಾಗೆಯೇ ಬಸವಣ್ಣನವರು ಅನೇಕರಲ್ಲಿಯ ದೋಷಗಳನ್ನು ನಿವಾರಿಸಿ ತಾವು ಮಾತ್ರ ಯಾವ ದೋಷಕ್ಕಂಟಿಕೊಳ್ಳದೆ ನಿರ್ಮಲವಾಗಿದ್ದರು.

ತಾವರೆಯು ಜಲದೊಳಗಿದ್ದರೂ ಜಲದ ಗುಣದೋಷಗಳಿಗೆ ಅಂಟಿಕೊಂಡಿರುವುದಿಲ್ಲ. ಹಾಗೆಯೇ ಬಸವಣ್ಣನವರು ಸಂಸಾರದಲ್ಲಿದ್ದರೂ ಸಂಸಾರವನ್ನು ಹಚ್ಚಿಕೊಳ್ಳದಂತೆ ನಿರ್ಲಿಪ್ತವಾಗಿದ್ದರು. ನೀರಿನಿಂದಾದ ಮುತ್ತು ಮರಳಿ ನೀರಾಗದು. ಹಾಗೆಯೇ ಬಸವಣ್ಣನವರು ಸಾಧನೆಯ ಶಿಖರವನ್ನೇರಿ ಯಾವ ಕಾರಣಕ್ಕೂ ಕೆಳಕ್ಕೆ ಜಾರದೆ ನಿಶ್ಚಲವಾಗಿದ್ದರು. ಹೀಗೆ ನಿರ್ಮಲತೆ, ನಿರ್ಲಿಪ್ತತೆ, ನಿಶ್ಚಲತೆಯಿಂದ ಲೌಕಿಕ-ಪಾರಮಾರ್ಥ ಸಮನ್ವಯತೆ ಸಾಧ್ಯವೆಂಬುದಕ್ಕೆ ಬಸವಣ್ಣನವರು ನಿದರ್ಶನರಾಗಿದ್ದಾರೆ.

ಕಾಯಕ-ದಾಸೋಹ ಮಾಡುತ್ತಾ ಲೌಕಿಕದಲ್ಲಿದ್ದುಕೊಂಡು ಪ್ರಸಾದಜೀವನ ನಡೆಸುವವನೆ ನಿಜಶರಣವೆಂಬ ಸಕಲೇಶ ಮಾದರಸರ ವಚನ:

ಆರುವನೊಲ್ಲೆನೆಂದು ಅರಣ್ಯವ ಹೋಗುವದು,
ಕಾರ್ಯವಲ್ಲ, ದುರುಳತನ.
ಉರೊಳಗಿದ್ದಡೆ ನರರ ಹಂಗು.
ಅರಣ್ಯದಲ್ಲಿದ್ದಡೆ ತರುಗಳ ಹಂಗು.
ಬಂದ ಪದಾರ್ಥವ ಲಿಂಗಾರ್ಪಿತ ಮಾಡಿಕೊಂಬ
ಶರಣನೇ ಜಾಣ, ಸಕಳೇಶ್ವರದೇವಾ.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-179/ವಚನ ಸಂಖ್ಯೆ-386)

ಜಗವೆಲ್ಲ ಹುಸಿ, ನಶ್ವರವೆಂದು ಭಾವಿಸಿ, ಈ ಲೋಕದ ಜನರ ಸಂಬಂಧವು ನನಗೆ ಬೇಡ ಎಂದು ಅರಣ್ಯಕ್ಕೆ ಹೋಗಿ ಮುಕ್ತಿಯ ಪಡೆಯಬೇಕೆಂಬ ನಿರ್ಣಯ ಸರಿಯಾದುದಲ್ಲ. ಅದು ವಿನಾಕಾರಣ ಲೋಕಕ್ಕೆ ಕೊಡುವ ಅಪಚಾರವೆನಿಸುವುದು. ಶಿವಭಕ್ತನು ಊರೊಳಗಿದ್ದು ಭಿಕ್ಷಾಟನೆಯಿಂದ ಜೀವಿಸಿದರೆ ಅದು ದುಡಿದು ಜೀವಿಸುತ್ತಿರುವ ಮಾನವ ಹಂಗಿನೊಳಗೆನಿಸುವುದು. ಅಡವಿಯಲ್ಲಿ ಏಕಾಂಗಿಯಾಗಿ ಹಣ್ಣು ಹಂಪಲಿನಿಂದ ಜೀವಿಸಿದರೆ ಹಣ್ಣು ಕೊಡುವ ಮರದ ಹಂಗಿನೊಳಗೆನಿಸುವುದು. ಆದುದರಿಂದ ಕಾಯಕವ ಮಾಡಿ ಬಂದ ಪದಾರ್ಥವ ಲಿಂಗಕ್ಕೆ ಜಂಗಮಕ್ಕರ್ಪಿಸಿ ಶೇಷ ಪ್ರಸಾದವ ಸವಿದು ಸಂತೃಪ್ತನಾಗಿರುವ ಲೌಕಿಕ-ಪಾರಮಾರ್ಥಗಳನ್ನು ಸಮನ್ವಯಗೊಳಿಸಿಕೊಂಡ ಶರಣನೆ ನಿಜಜ್ಞಾನಿಯೆಂದು ಸಕಲೇಶ ಮಾದರಸರು ಹೇಳುತ್ತಾರೆ.

ಬಹಿರಂಗ ಕೃಷಿ-ಅಂತರಂಗ ಕೃಷಿ ಸಮನ್ವಯತೆ:

ಭಾರತವು ಕೃಷಿ ಪ್ರಧಾನವಾದ ದೇಶ. ಜಗತ್ತಿನಲ್ಲಿ ಸಾವಯವಕೃಷಿ, ಶೂನ್ಯಬೇಸಾಯ, ರಾಸಾಯನಿಕಕೃಷಿ, ಜೈವಿಕತಂತ್ರಜ್ಞಾನ, ಪಾರ್ಶ್ವಕೃಷಿ ಮುಂತಾದ ಬಾಹ್ಯಕೃಷಿ ಪದ್ಧತಿಗಳು ಬಳಕೆಯಲ್ಲಿವೆ. ಕಡಿಮೆ ಸ್ಥಳಾವಕಾಶ, ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯುವುದೇ ಇವುಗಳ ಉದ್ದೇಶ.

ಅಂತರಂಗ ಕೃಷಿಯು ಅಂತರಂಗವನ್ನು ಪರಿಶುದ್ಧಗೊಳಿಸಿ ಅಂತರಂಗದಲ್ಲಿರುವ ಪರಮಾನಂದವನ್ನು ಅನುಭವಿಸುವ ಕೃಷಿಯಾಗಿದೆ. ಬಾಹ್ಯ ಕೃಷಿಯೊಂದಿಗೆ ಅಂತರಂಗ ಕೃಷಿಯನ್ನು ಅಳವಡಿಸಿಕೊಂಡರೆ ಆರ್ಥಿಕ ಸಬಲತೆಯೊಂದಿಗೆ ಆಂತರಿಕ ಶಾಂತಿ, ಸಮಾಧಾನ ಹೆಚ್ಚುತ್ತದೆ.

ಅಲ್ಲಮಪ್ರಭುದೇವರು ಅಜ್ಞಾನಿಗಳನ್ನು ಎಚ್ಚರಿಸಲು ಮತ್ತು ಸಾಧಕರಿಗೆ ಮಾರ್ಗದರ್ಶನ ನೀಡಲು ಚರಜಂಗಮರಾಗಿ ಸಂಚರಿಸುತ್ತಿರುವಾಗ ಗೊಗ್ಗಯ್ಯನೆಂಬ ಕೃಷಿಕನ ಪರಿಚಯವಾಗುತ್ತದೆ. ಗೊಗ್ಗಯ್ಯನು ಅನುಸರಿಸುತ್ತಿರುವ ಕೃಷಿ ಪದ್ಧತಿ ಕುರಿತು ಅಲ್ಲಮರು ಕೇಳಲು ಗೊಗ್ಗಯ್ಯನು ತಾನು ಮಾಡುತ್ತಿರುವ ಬಾಹ್ಯಕೃಷಿಯನ್ನು ಐದು ಹಂತಗಳಲ್ಲಿ ತಿಳಿಸುತ್ತಾನೆ:

  1. ಭೂಮಿಯಲ್ಲಿ ಆಳವಾಗಿ ಬೇರೂರಿದ ಕರಿಕೆಯಂತಹ ಕಳೆಯನ್ನು ಗುದ್ದಲಿಯಿಂದ ಬೇರು ಸಹಿತ ಅಗೆದು ತೆಗೆದು ಆಳವಾಗಿ ಉಳುಮೆ ಮಾಡುವುದು.
  2. ಮಣ್ಣಿನ ಹೆಂಟೆಗಳನ್ನು ಒಡೆದು ಭೂಮಿಯನ್ನು ಹದಗೊಳಿಸುವುದು.
  3. ಹದವಾದ ಭೂಮಿಯಲ್ಲಿ ಆರೋಗ್ಯವಂತ ಬೀಜ ಬಿತ್ತುವುದು.
  4. ಬೀಜ ಅಂಕುರಿಸಲು ನೀರು ಹಾಕುವುದು.
  5. ಬೆಳೆಯನ್ನು ಪ್ರಾಣಿಗಳಿಂದ ಸಂರಕ್ಷಿಸಲು ಹೊಲದ ಸುತ್ತಲೂ ಬೇಲಿ ಹಾಕಿ ಫಸಲು ಕೈ ಸೇರುವವರೆಗೆ ಸದಾ ಎಚ್ಚರದಿಂದ ಇರುವುದು.

ಈ ವಿವರವನ್ನು ಕೇಳಿದ ಅಲ್ಲಮರು ಬಾಹ್ಯ ಕೃಷಿಯ ಜೊತೆಗೆ ಅಂತರಂಗಕೃಷಿಯನ್ನು ಅಳವಡಿಸಿಕೊಳ್ಳಲು ಗೊಗ್ಗಯ್ಯನಿಗೆ ತಮ್ಮ ವಚನದ ಮೂಲಕ ತಿಳಿಸುತ್ತಾರೆ:

ತನುವ ತೋಂಟವ ಮಾಡಿ, ಮನವ ಗುದ್ದಲಿ ಮಾಡಿ,
ಅಗೆದು ಕಳೆದನಯ್ಯಾ ಭ್ರಾಂತಿನ ಬೇರ.
ಒಡೆದು ಸಂಸಾರದ ಹೆಂಟೆಯ,
ಬಗಿದು ಬಿತ್ತಿದೆನಯ್ಯಾ ಬ್ರಹ್ಮ ಬೀಜವ.
ಅಖಂಡಮಂಡಲವೆಂಬ ಬಾವಿ, ಪವನವೆ ರಾಟಾಳ,
ಸುಷುಮ್ನನಾಳದಿಂದ ಉದಕವ ತಿದ್ದಿ.
ಬಸವಗಳೈವರು ಹಸಗೆಡಸಿಹವೆಂದು
ಸಮತೆ ಸೈರಣೆ ಎಂಬ ಬೇಲಿಯನಿಕ್ಕಿ,
ಅವಾಗಳೂ ಈ ತೋಂಟದಲ್ಲಿ ಜಾಗರವಿದ್ದು
ಸಸಿಯ ಸಲಹಿದೆನು ಕಾಣಾ ಗುಹೇಶ್ವರಾ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-454/ವಚನ ಸಂಖ್ಯೆ-1217)

ಬಾಹ್ಯ ಕೃಷಿಯಂತೆ ಅಂತರಂಗ ಕೃಷಿಯನ್ನು ಅಲ್ಲಮರು ಐದು ಹಂತಗಳಲ್ಲಿ ವಿವರಿಸುತ್ತಾರೆ:

  1. ಭ್ರಾಂತಿನ ಬೇರನ್ನು ಅಗೆದು ತೆಗೆಯುವುದು.
  2. ಸಂಸಾರದ ಹೆಂಟೆಯ ಒಡೆಯುವುದು.
  3. ಬ್ರಹ್ಮಬೀಜ ಬಿತ್ತುವುದು.
  4. ಯೋಗಜಲ ಹಾಕುವುದು.
  5. ಸಮತೆ ಸೈರಣೆಯ ಬೇಲಿಯ ಹಚ್ಚಿ ಸದಾ ಎಚ್ಚರದಿಂದಿರುವುದು.

ಭ್ರಾಂತಿನ ಬೇರನ್ನು ಅಗೆದು ತೆಗೆಯುವುದು:

ಭ್ರಾಂತಿ ಎಂದರೆ ಇದ್ದದ್ದನ್ನು ತಪ್ಪಾಗಿ ತಿಳಿದುಕೊಳ್ಳುವುದು ಮತ್ತು ಇಲ್ಲದ್ದನ್ನು ಇದೆ ಎಂದು ನಂಬುವುದು. ಉದಾಹರಣೆಗೆ:

  • ಆತ್ಮಭಿನ್ನವಾದ ದೇಹವೇ ತಾನೆಂದು ತಪ್ಪಾಗಿ ತಿಳಿಯುವುದು.
  • ಸೌರಮಂಡಲದಲ್ಲಿ ರಾಹು-ಕೇತುಗಳ ಭೌತಿಕ ಅಸ್ತಿತ್ವವೇ ಇಲ್ಲದಿದ್ದರೂ ರಾಹು, ಕೇತುಗಳಿವೆ ಎಂದು ಭ್ರಮಿಸಿ ರಾಹುಕಾಲ, ಗುಳಿಕಾಲಗಳನ್ನು ನಂಬುವುದು.

ಶರೀರವೆಂಬ ತೋಟದಲ್ಲಿ ಇಂಥ ಅನೇಕ ಭ್ರಾಂತಿಯ ಕಳೆಗಳು ಆಳವಾಗಿ ಬೇರು ಬಿಟ್ಟಿವೆ. ಭ್ರಾಂತಿ ಎಂಬ ಗ್ರಹಣ ಆತ್ಮಪ್ರಕಾಶವನ್ನು ಮಂಕಾಗಿಸುತ್ತದೆ. ಅದಕ್ಕಾಗಿ ಭ್ರಾಂತಿಯ ಬೇರುಗಳನ್ನು ವಿವೇಕವೆಂಬ ಗುದ್ದಲಿಯಿಂದ ಅಗೆದು ತೆಗೆಯಬೇಕೆಂದು ಅಲ್ಲಮರು ಹೇಳುತ್ತಾರೆ. ವಿವೇಕವೆಂದರೆ ಸರಿ-ತಪ್ಪು ಇವುಗಳಲ್ಲಿಯ ವ್ಯತ್ಯಾಸವನ್ನು ಗುರುತಿಸುವ ಸಾಮರ್ಥ್ಯ ಮತ್ತು ಸರಿಯಾದುದನ್ನು ಸ್ವೀಕರಿಸುವ ಯೋಗ್ಯತೆ. ಸಕ್ಕರೆ-ಮರಳು ಮಿಶ್ರಣದಲ್ಲಿ ಇರುವೆ ಮರಳನ್ನು ಪಕ್ಕಕ್ಕಿಟ್ಟು ಸಕ್ಕರೆಯನ್ನೇ ಸ್ವೀಕರಿಸುವಂತೆ ವಿವೇಕಿಯು ತಪ್ಪಾದುದನ್ನು ಪಕ್ಕಕ್ಕಿಟ್ಟು ಸರಿಯಾದುದನ್ನೇ ಆಯ್ದುಕೊಳ್ಳತ್ತಾನೆ. ಕೆಟ್ಟದ್ದನ್ನು ಬಿಟ್ಟು ಒಳ್ಳೆಯದನ್ನೇ ಸ್ವೀಕರಿಸುತ್ತಾನೆ.

ಸಂಸಾರದ ಹೆಂಟೆಯ ಒಡೆಯುವುದು:

ಬೀಜವನ್ನು ಬಿತ್ತುವ ಭೂಮಿ ಹದವಾಗಿರಬೇಕು. ಭೂಮಿ ಬಿರುಸಾಗಿದ್ದರೆ, ಭೂಮಿಯಲ್ಲಿ ಮಣ್ಣಿನ ಹೆಂಟೆಗಳು ಹೆಚ್ಚಿದ್ದರೆ ಬಿತ್ತನೆ ಸರಿಯಾಗುವುದಿಲ್ಲ. ಅದಕ್ಕಾಗಿ ಆಳವಾದ ಉಳುಮೆಯಿಂದ ಉಂಟಾದ ಮಣ್ಣಿನ ಹೆಂಟೆಗಳನ್ನು ರೆಂಟೆ ಕುಂಟೆಯಿಂದ ಒಡೆದು ಭೂಮಿಯನ್ನು ಹದಗೊಳಿಸಬೇಕು. ಹಾಗೆಯೇ ಅಂತರಂಗದಲ್ಲಿ ಕಾಠಿಣ್ಯತೆಯಿದ್ದರೆ ಸಾಧನೆಯ ಬೀಜ ಸರಿಯಾಗಿ ಅಂಕುರಿಸದು. ಅದಕ್ಕಾಗಿ ಸಂಸಾರವೆಂಬ ಹೆಂಟೆಯ ಒಡೆಯಬೇಕೆಂದು ಅಲ್ಲಮರು ಹೇಳುತ್ತಾರೆ. ಸಂಸಾರದ ಹೆಂಟೆಯ ಒಡೆಯುವುದೆಂದರೆ ಸಂಸಾರ ಬಿಟ್ಟು ಅಡವಿಗೆ ಹೋಗುವುದಲ್ಲ. ಸಂಸಾರವೆಂದರೆ ಗಂಡ, ಹೆಂಡತಿ, ಮನೆ, ಮಕ್ಕಳು ಮುಂತಾದ ವ್ಯವಹಾರಗಳಲ್ಲ. ಸಂಸಾರವೆಂದರೆ ಅಜ್ಞಾನ, ವಿಕಾರಗಳಿಗೆ ಒಳಗಾಗುವುದು. ಸಂಸಾರ ಹೆಂಟೆಯ ಒಡೆಯುವುದೆಂದರೆ ಅಂತರಂಗದಲ್ಲಿರುವ ಕುಹಕ, ಕಪಟತನ, ಸ್ವಾರ್ಥ, ದ್ವೇಷ, ಮದ, ಮತ್ಸರ, ಆಸೆ, ರೋಷ ಮುಂತಾದ ಅವಗುಣಗಳನ್ನು ತೆಗೆದುಹಾಕುವುದು. ‘ಅವಗುಣಿಗಳ ಮೆಚ್ಚ ಕೂಡಲಸಂಗಮದೇವ’ ಎಂದು ಬಸವಣ್ಣನವರು ಹೇಳುವಂತೆ ಅವಗುಣಗಳಿದ್ದರೆ ಅಂತರಂಗದಲ್ಲಿಯೇ ಇರುವ ಪರಮಾತ್ಮನ ಅನುಭವವಾಗದು. ಅದಕ್ಕಾಗಿ ಅವಗುಣಗಳೆಂಬ ಹೆಂಟೆಯ ಒಡೆದು ಸದ್ಗುಣಗಳನ್ನು ಬೆಳೆಸಿಕೊಂಡು ಅಂತರಂಗವನ್ನು ಹದಗೊಳಿಸಬೇಕು.

ಬ್ರಹ್ಮ ಬೀಜ ಬಿತ್ತುವುದು: ಬೀಜದಂತೆ ಫಲ, ಇದು ನಿಸರ್ಗದ ನಿಯಮ.

ಬೇವಿನ ಬೀಜವ ಬಿತ್ತಿ, ಬೆಲ್ಲದ ಕಟ್ಟೆಯ ಕಟ್ಟಿ,
ಆಕಳ ಹಾಲನೆರೆದು, ಜೇನು ತುಪ್ಪವ ಹೊಯ್ದಡೆ,
ಸಿಹಿಯಾಗಬಲ್ಲುದೆ, ಕಹಿಯಹುದಲ್ಲದೆ?
ಶಿವಭಕ್ತರಲ್ಲದವರ ಕೂಡೆ ನುಡಿಯಲಾಗದು,
ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-170/ವಚನ ಸಂಖ್ಯೆ-626)

ಎಂದು ಬಸವಣ್ಣನವರು ಹೇಳುವಂತೆ ಬೇವಿನ ಬೀಜವನ್ನು ಬಿತ್ತಿ ಸಿಹಿಫಲ ಪಡೆಯುವುದು ಅಸಾಧ್ಯ. ಹಾಗೆಯೇ ಸಂಕುಚಿತತೆಯನ್ನು ಬಿತ್ತಿ ಉದಾತ್ತತೆಯನ್ನು ಬೆಳೆಯುವುದು ಅಸಾಧ್ಯ. ಅದಕ್ಕಾಗಿ ಬ್ರಹ್ಮಬೀಜವನ್ನು ಬಿತ್ತಬೇಕೆಂದು ಅಲ್ಲಮರು ಹೇಳುತ್ತಾರೆ. ಬ್ರಹ್ಮ ಎಂದರೆ ವಿಶಾಲವಾದುದು, ಉದಾತ್ತವಾದುದು. ಪರಂಜ್ಯೋತಿ ಸ್ವರೂಪವಾದ ಪರಶಿವನೇ ತಾನು ಎಂಬ ಸ್ವಸ್ವರೂಪದ ನಿಜದ ಅರಿವಿನಬೀಜ ಬಿತ್ತಬೇಕು.

ಯೋಗಜಲ ಹಾಕುವುದು:

ಭೂಮಿಯನ್ನು ಹದಗೊಳಿಸಿ, ಸದೃಢ ಬೀಜ ಬಿತ್ತಿ, ಬೀಜ ಅಂಕುರಿಸಲು ನೀರು ಹಾಕುವಂತೆ ಅಂತರಂಗವನ್ನು ಹದಗೊಳಿಸಿ ಸ್ವಸ್ವರೂಪದ ಅರಿವಿನ ಬೀಜ ಬಿತ್ತಿ ಅಂತರಂಗದ ಬಾವಿಯಿಂದ ಪ್ರಾಣವಾಯು ಎಂಬ ಗಡಗಡೆಯ ಸಹಾಯದಿಂದ ಸುಷುಮ್ಮನಾಳದ ಮೂಲಕ ಪರಮಾನಂದ ಜಲವನ್ನು ಹಾಕುವಂತೆ ಅಲ್ಲಮರು ತಿಳಿಸುತ್ತಾರೆ.

ಮನುಷ್ಯನ ದೇಹದಲ್ಲಿ ಪ್ರಾಣಶಕ್ತಿಯಿದೆ. ದೈಹಿಕ ಶಕ್ತಿಯನ್ನು ಕಂಡಂತೆ ಪ್ರಾಣಶಕ್ತಿಯನ್ನು ಕಾಣಲು ಬರುವುದಿಲ್ಲ. ಪ್ರಾಣಶಕ್ತಿ ನಾಡಿಗಳ ಮೂಲಕ ಹರಿಯುತ್ತದೆ. ನಮ್ಮ ದೇಹದಲ್ಲಿ 72,000 ನಾಡಿಗಳಿದ್ದು, ಇವುಗಳಲ್ಲಿ ಪ್ರಮುಖವಾದವುಗಳೆಂದರೆ ಇಡಾ, ಪಿಂಗಳ ಮತ್ತು ಸುಷಮ್ನ.

ಇಡಾ ನಾಡಿ ಮೇರು ದಂಡ (Spinal cord) ದ ಬಲಗಡೆ, ಪಿಂಗಳನಾಡಿಯು ಎಡಗಡೆ ಹಾಗೂ ಸುಷುಮ್ನನಾಡಿಯು ಬೆನ್ನುಹುರಿಯನ್ನು ಹೊಂದಿಕೊಂಡು ಸಾಗಿದೆ. ನಾಡಿಗಳಿರುವಂತೆ ಮೇರುದಂಡದಲ್ಲಿ ಮೂಲಾಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ ಮತ್ತು ವಿಶುದ್ಧಿ ಎಂಬ ಐದು ಚಕ್ರಗಳಿವೆ. ಮೂಲಾಧಾರ ಚಕ್ರವು ಗುದ ಮತ್ತು ಸ್ವಾಧಿಷ್ಟಾನ ಚಕ್ರವು ಲಿಂಗಸ್ಥಾನದಲ್ಲಿ, ಮಣಿಪೂರಕ ಚಕ್ರವು ನಾಭಿಸ್ಥಾನದಲ್ಲಿ, ಅನಾಹತ ಚಕ್ರವು ಹೃದಯಭಾಗದಲ್ಲಿ ಮತ್ತು ವಿಶುದ್ಧಿ ಚಕ್ರವು ಕುತ್ತಿಗೆಯ ಮಧ್ಯಭಾಗದಲ್ಲಿರುತ್ತವೆ. ಇವುಗಳ ಮೇಲ್ಭಾಗದಲ್ಲಿ ಎರಡೂ ಕಣ್ಣಿನ ಹುಬ್ಬುಗಳ ಮಧ್ಯೆ ಅಜ್ಞಾ ಚಕ್ರ, ನೆತ್ತಿಯಲ್ಲಿ ಸಹಸ್ರಾರ ಅಥವಾ ಬ್ರಹ್ಮ ಚಕ್ರ ಮತ್ತು ತಲೆಯ ಹಿಂಭಾಗದಲ್ಲಿ ಪಶ್ಚಿಮ, ಶಿಖಾ ಚಕ್ರಗಳಿವೆ. ಈ ಚಕ್ರಗಳು ಸೂಕ್ಷ್ಮಶಕ್ತಿಯ ಕೇಂದ್ರಗಳಾಗಿವೆ. ಮನುಷ್ಯನು ಮೆದುಳಿನ ಮೂಲಕ ಮಾತ್ರ ಹೇಗೆ ವಿಚಾರಿಸಬಲ್ಲನೋ, ಹಾಗೆಯೇ ಚಕ್ರಗಳ ಮೂಲಕ ಮಾತ್ರ ಚೈತನ್ಯವನ್ನು ಅನುಭವಿಸಬಲ್ಲ.

ಈ ಚಕ್ರಗಳ ಮಧ್ಯೆ ಪ್ರಾಣ ಮತ್ತು ಮನಸ್ಸುಗಳು ಸಂಚರಿಸುತ್ತವೆ. ಮೇಲಿನಿಂದ ಕೆಳಗೆ ಹರಿಯುವುದು ಅಧೋಚಲನೆ. ಕೆಳಗಿನಿಂದ ಮೇಲೆ ಹೋಗುವುದು ಉರ್ಧ್ವಚಲನೆ. ಅಧೋಮುಖಿಯಾದ ಮನಸ್ಸು ವಿಷಯಗಳತ್ತ ಹರಿಯುತ್ತದೆ. ವಿಷಯಸುಖದಲ್ಲಿ ರಮಿಸುತ್ತದೆ. ಅದು ಉರ್ಧ್ವಮುಖಗೊಂಡಾಗ ವಿಷಯಗಳಿಂದ ನಿವೃತ್ತವಾಗುತ್ತದೆ.

ಮೊದಲನೆಯದು ಪ್ರವೃತ್ತಿ ಮಾರ್ಗ. ಎರಡನೆಯದು ನಿವೃತ್ತಿ ಮಾರ್ಗ. ಪ್ರವೃತ್ತಿ ಮಾರ್ಗದಲ್ಲಿ ನಡೆಯುವವನೇ ಸಂಸಾರಿ. ನಿವೃತ್ತಿ ಮಾರ್ಗದಲ್ಲಿ ನಡೆಯುವವನೇ ಭಕ್ತ, ಯೋಗಿ. ಭಕ್ತನು ಆಯಾ ಸ್ಥಾನಗಳಲ್ಲಿ ಮನಸ್ಸನ್ನು ಸ್ಥಿರಗೊಳಿಸಿ ಅಲ್ಲಿರುವ ದೈವೀ ಕಳೆಯೊಂದಿಗೆ ಸುಖಿಸಬೇಕು. ಪ್ರಪಂಚದ ಆಕರ್ಷಣೆಗಳಿಂದ ಮುಕ್ತವಾದ, ನಿಶ್ಚಿಂತ ನಿರಾಮಯಗೊಂಡ ಮನಸ್ಸು ಸಹಸ್ರಾರದಲ್ಲಿ ನಿಲ್ಲುತ್ತದೆ. ಅಲ್ಲಿ ಮನಸ್ಸು, ಅಮನಸ್ಸು, ಅಲ್ಲಿರುವ ಲಿಂಗಪ್ರಭೆಯಲ್ಲಿ ನಿಮಗ್ನ. ನಿರ್ವಿಷಯ ಸೌಖ್ಯವಾದ ಲಿಂಗಾನಂದದ ಅನುಭವ. ಅದುವೇ ಪರಮಾನಂದದ ಜಲ, ಯೋಗಜಲ.

ಸಮತೆ-ಸೈರಣೆ ಎಂಬ ಬೇಲಿ ಹಚ್ಚುವುದು:

ಪ್ರತಿದಿನ ಯೋಗದ ಜಲ ಹಾಕುವುದರಿಂದ ಹದವಾದ ಅಂತರಂಗದಲ್ಲಿ ಬಿತ್ತಿದ ಬ್ರಹ್ಮಬೀಜ ಅಂಕುರಿಸಿ ಬೆಳೆಯಲು ಪ್ರಾರಂಭಿಸುತ್ತದೆ. ಈ ಸಾಧನೆಯ ಬೆಳೆಯನ್ನು ತಿಂದುಹಾಕಲು ರೂಪ, ರಸ, ಗಂಧ, ಶಬ್ದ, ಸ್ಪರ್ಶ ಎಂಬ ಪಂಚವಿಷಯಗಳು ಸದಾ ಹೊಂಚು ಹಾಕುತ್ತಿರುತ್ತವೆ. ರೈತನು ಬೆಳೆಯನ್ನು ಪ್ರಾಣಿಗಳಿಂದ ಸಂರಕ್ಷಿಸಲು ಹೊಲದ ಸುತ್ತಲೂ ಬೇಲಿ ಹಾಕುವಂತೆ ಸಾಧಕನು ಪಂಚವಿಷಯಗಳಿಂದ ಸಾಧನೆಯ ಬೆಳೆಯನ್ನು ರಕ್ಷಿಸಲು ಸಮತೆ-ಸೈರಣೆ ಎಂಬ ಬೇಲಿಯನ್ನು ಹಾಕಲು ಅಲ್ಲಮರು ತಿಳಿಸುತ್ತಾರೆ. ಪಂಚೇಂದ್ರಿಯಗಳ ಬಯಕೆಯನ್ನು ತೃಪ್ತಿಪಡಿಸುವುದು ಅಸಾಧ್ಯ. ಅವುಗಳ ಬಯಕೆಯನ್ನು ಈಡೇರಿಸಲು ಹೋದರೆ ಬೆಂಕಿಯಲ್ಲಿ ತುಪ್ಪ ಹಾಕಿದರೆ ಬೆಂಕಿ ಮತ್ತಷ್ಟು ಪ್ರಜ್ವಲವಾಗಿ ಉರಿಯುವಂತೆ ಇಂದ್ರಿಯ ಬಯಕೆಗಳು ಇನ್ನಷ್ಟು ಹೆಚ್ಚುತ್ತವೆ. ಪಂಚವಿಷಯಗಳಲ್ಲಿ ಉದಾಸೀನತೆ, ಸಮತೆ, ಸೈರಣೆಯಿಂದ ಮಾತ್ರ ಪಂಚವಿಕಾರಗಳನ್ನು ತಡೆಯಲು ಸಾಧ್ಯ. ಅದಕ್ಕಾಗಿ ಸಮತೆ, ಸೈರಣೆ ಎಂಬ ಬೇಲಿಯನ್ನು ಹಾಕಿ ಎಚ್ಚರದಿಂದ ಸಾಧನೆಯ ಬೆಳೆಯನ್ನು ಸಲುಹಲು ಸೂಚಿಸುತ್ತಾರೆ.

ಭೂಮಿಯಲ್ಲಿ ಮೇಲಿಂದ ಮೇಲೆ ಕಳೆ ಏಳುವಂತೆ ಅಂತರಂಗದಲ್ಲಿ ಅವಗುಣಗಳೆಂಬ ಕಳೆ ಹುಟ್ಟಿಕೊಳ್ಳುತ್ತವೆ. ಕಿಟಕಿಯ ಮೂಲಕ ಮನೆಯಲ್ಲಿ ಧೂಳು ಬರುವಂತೆ ಇಂದ್ರಿಯಗಳ ಮೂಲಕ ಶರೀರವೆಂಬ ಮನೆಯಲ್ಲಿ ರಜ ಪ್ರವೇಶಿಸುತ್ತದೆ. ಅದಕ್ಕಾಗಿ ಸದಾ ಎಚ್ಚರದಿಂದ ಇರಬೇಕು. ಕಸ ಬೀಳದಂತೆ ಜಾಗರೂಕರಾಗಿರಬೇಕು. ಬಿದ್ದಾಗಲೆಲ್ಲ ವಿವೇಕವೆಂಬ ಗುದ್ದಲಿ, ಬಾರಿಗೆಯಿಂದ ಸ್ವಚ್ಛಗೊಳಿಸುತ್ತಿರಬೇಕು. ಇದೊಂದು ನಿರಂತರ ಕ್ರಿಯೆ. ಅದಕ್ಕಾಗಿ ಸದಾ ಎಚ್ಚರದಿಂದಿರಲು ಅಲ್ಲಮರು ಹೇಳಿದ್ದು ತುಂಬಾ ಅರ್ಥವತ್ತಾಗಿದೆ.

ಅಂತರಂಗ ಕೃಷಿಯ ಕುರಿತು ಸರ್ಪಭೂಷಣ ಶಿವಯೋಗಿಗಳ ವಚನ:

ಶರೀರವೆಂದೆಂಬುವ ಹೊಲನ ಹಸನ ಮಾಡಿ
ಪರತತ್ವ ಬೆಳೆಯನೆ ಬೆಳೆದುಣ್ಣಿರೋ || ಪ ||

ಶಮೆ-ದಮೆಯೆಂದೆಂಬುವೆರಡೆತ್ತುಗಳ ಹೂಡಿ
ವಿಮಲ ಮಾನಸದ ನೇಗಿಲವ ಮಾಡಿ |
ಮಮಕಾರವೆಂದೆಂಬ ಕರಿಕೆಯ ಕಳೆದಿಟ್ಟು
ಸಮತೆಯೆಂದೆಂಬ ಗೊಬ್ಬರವ ಚೆಲ್ಲಿ || 1 ||

ಗುರುವರನುಪದೇಶವೆಂಬ ಬೀಜವ ಬಿತ್ತಿ
ಮೆರೆವ ಸಂಸ್ಕಾರ ವೃಷ್ಟಿಯ ಬಲದಿ |
ಅರಿವೆಂಬ ಪೈರನೆ ಬೆಳೆಸುತೆ ಮುಸುಗಿರ್ದ
ದುರಿತ ದುರ್ಗುಣವೆಂಬ ಕಳೆಯ ಕಿತ್ತು || 2 ||

ಸ್ಥಿರ ಮುಕ್ತಿಯೆಂದೆಂಬ ಧಾನ್ಯವ ಬೆಳೆದುಂಡು
ಪರಮಾನಂದದೊಳು ದಣ್ಣನೆ ದಣಿದು |
ಗುರುಸಿದ್ಧನಡಿಗಳಗೆರಗುತ್ತೆ ಭವವೆಂಬ
ಬರವನು ತಮ್ಮ ಸೀಮೆಗೆ ಕಳುವೆ. || 3 ||

ದೇಹವೆಂಬ ಹೊಲದಲ್ಲಿಯ ಕಸ-ಕಳೆ ತೆಗೆದು ಹಸನ ಮಾಡಿ, ಇಂದ್ರಿಯ ನಿಗ್ರಹ ಮತ್ತು ಮನೋನಿಗ್ರಹ ಎಂಬೆರಡು ಎತ್ತುಗಳನ್ನು ಹೂಡಿ, ನಿರ್ಮಲವಾದ ಮನಸ್ಸೆಂಬ ನೇಗಿಲದಿಂದ ವ್ಯಾಮೋಹವೆಂಬ ಹುಲ್ಲು ಕರಿಕೆಯನ್ನೆಲ್ಲ ಕಿತ್ತು, ಚಿತ್ತಸ್ವಾಸ್ಥö್ಯವೆಂಬ ಗೊಬ್ಬರವ ಹಾಕಿ, ಗುರುಶ್ರೇಷ್ಠನ ಉಪದೇಶವೆಂಬ ಬೀಜಗಳನ್ನು ಬಿತ್ತಿ, ಜ್ಞಾನಸಂಸ್ಕಾರದ ಮಳೆಯ ನೆರವಿನಿಂದ, ಅರಿವು-ತಿಳಿವಳಿಕೆ ಎಂಬ ಪೈರನ್ನು ಬೆಳೆಸಿಕೊಂಡು, ದುರ್ಗುಣ-ದುರ್ಬುದ್ಧಿ ಎಂಬೆಲ್ಲ ಕಳೆಯ ಕಿತ್ತು ಹಾಕಿ, ಶಾಶ್ವತ ಮುಕ್ತಿ ಎಂಬ ಧಾನ್ಯಗಳನ್ನು ಬೆಳೆದು, ಉಂಡು ಚಿರಾನಂದದಲ್ಲಿ ಮನಸೋಕ್ತ ತಣಿದು, ಶ್ರೀಗುರುವಿನ ಪಾದಗಳಿಗೆ ತಲೆಬಾಗುತ್ತ ಈ ಭವವೆಂಬ ಬರವನ್ನು ಅವನ ಸೀಮೆಗೆ ಹಾಕುತ್ತ ಪರತತ್ವ ಬೆಳೆಯನ್ನೇ ಬೆಳೆಯಿರಿ ಎಂದು ಶಿವಯೋಗಿಗಳು ತಿಳಿಸುತ್ತಾರೆ.

ಅಂತರಂಗ ಕೃಷಿ ಕುರಿತು ಒಕ್ಕಲಿಗ ಮುದ್ದಣ್ಣನವರ ವಚನ:

ಭಕ್ತಿಯೆಂಬ ಪೃಥ್ವಿಯಲ್ಲಿ ಗುರೂಪದೇಶವೆಂಬ ನೇಗಿಲಂ ಪಿಡಿದು,
ಅಂತಃಕರಣ ಚತುಷ್ಟಯವೆಂಬ ಪಶುವಂ ಕಟ್ಟಿ
ಓಂಕಾರನಾದವೆಂಬ ಸೆಳೆಕೋಲಂ ಪಿಡಿದು
ಉತ್ತರ ಕ್ರೀಯೆಂಬ ಸಾಲನೆತ್ತಿ
ದುಃಕರ್ಮವೆಂಬ ಕಂಟಕದ ಗುಲ್ಮವಂ ಕಡಿದು
ಅರುಹೆಂಬ ರವಿಯ ಕಿರಣದಿಂದ ಒಣಗಿಸಿ
ಅವಂ ಕೂಡಲೊಟ್ಟಿ, ಜ್ಞಾನಾಗ್ನಿಯೆಂಬ ಅಗ್ನಿಯಿಂದ ಸುಟ್ಟುರುಹಿ
ಆ ಹೊಲನಂ ಹಸಮಾಡಿ, ಬಿತ್ತುವ ಪರಿ ಇನ್ನಾವುದಯ್ಯಾ ಎಂದಡೆ:
ನಾದ, ಬಿಂದು, ಕಳೆ, ಮಳೆಗಾಲದ ಹದಬೆದೆಯನರಿದು
ಸ್ಥೂಲವೆಂಬ ದಿಂಡಿಗೆ ತ್ರಿದೇವರೆಂಬ ತಾಳ ನಟ್ಟು
ಇಡಾಪಿಂಗಳ ಸುಷುಮ್ನಾನಾಳವೆಂಬ ಕೋವಿಗಳ ಜೋಡಿಸಿ,
ಮೇಲೆ ತ್ರಿಕೂಟಸ್ಥಾನವೆಂಬ ಬಟ್ಟಲಂ ಬಲಿದು,
ಕುಂಡಲೀಸರ್ಪನೆಂಬ ಹಗ್ಗವ ಸೇದಿ ಕಟ್ಟಿ, ಹಂಸನೆಂಬ ಎತ್ತಂ ಹೂಡಿ,
ಪ್ರಣವನೆಂಬ ಬೀಜವ ಪಶ್ಚಿಮ ಮುಖಕ್ಕೆ ಬಿತ್ತಿ,
ಸರ್ವಶಾಂತಿ ನಿರ್ಮಲವೆಂಬ ಮೇಘ ಸುರಿಯಲ್ಕೆ
ನೀಲಬ್ರಹ್ಮವೆಂಬ ಸಸಿ ಹುಟ್ಟಿತ್ತ.
ಆ ಸಸಿಯ ಮುಟ್ಟುವ ಸಪ್ತವರ್ಣದ ಸದೆಯ ಕಳೆದು
ಅಷ್ಟವರ್ಣದ ಅಲಬಂ ಕಿತ್ತು, ದಶವಾಯುವೆಂಬ ಕಸಮಂ ತೆಗೆದು,
ಆ ಸಸಿ ಪಸರಿಸಿ ಪ್ರಜ್ವಲಿಸಿ ಫಲಕ್ಕೆ ಬರಲಾಗಿ
ಚತುರ್ವಿಧವೆಂಬ ಮಂಚಿಗೆಯಂ ಮೆಟ್ಟಿ
ಬಾಲಚಂದ್ರನೆಂಬ ಕವಣೆಯಂ ಪಿಡಿದು
ಪ್ರಪಂಚುವೆಂಬ ಹಕ್ಕಿಯಂ ಸೋವಿ
ಆ ಬತ್ತ ಬಲಿದು ನಿಂದಿರಲು,
ಕೊಯ್ದುಂಬ ಪರಿ ಇನ್ನಾವುದಯ್ಯಾ ಎಂದಡೆ:
ಇಷ್ಟವೆಂಬ ಕುಡುಗೋಲಿಗೆ ಪ್ರಣವವೆಂಬ ಹಿಡಿಯಂ ತೊಡಿಸಿ,

ಭಾವವೆಂಬ ಹಸ್ತದಿಂ ಪಿಡಿದು, ಜನನದ ನಿಲವಂ ಕೊಯ್ದು,
ಮರಣದ ಸಿವುಡ ಕಟ್ಟಿ, ಆಕಾಶವೆಂಬ ಬಣವೆಯನೊಟ್ಟಿ
ಉನ್ಮನಿಯೆಂಬ ತೆನೆಯನ್ನರಿದು, ಮನೋರಥವೆಂಬ ಬಂಡಿಯಲ್ಲಿ ಹೇರಿ,
ಮುಕ್ತಿಯೆಂಬ ಕೋಟಾರಕ್ಕೆ ತಂದು,
ಅಷ್ಟಾಂಗಯೋಗವೆಂಬ ಜೀವಧನದಿಂದೊಕ್ಕಿ,
ತಾಪತ್ರಯದ ಮೆಟ್ಟನೇರಿ, ಪಾಪದ ಹೊಟ್ಟ ತೂರಿ,
ಪುಣ್ಯದ ಬೀಜಮಂ [ತ]ಳೆದು
ಷಡುವರ್ಗ ಷಡೂರ್ಮೆಯೆಂಬ ಬೇಗಾರಮಂ ಕಳೆದು
ಅಂಗಜಾಲನ ಕಣ್ಣ[ಮು]ಚ್ಚಿ,
ಚಿತ್ರಗುಪ್ತರೆಂಬ ಕರಣಿಕರ ಸಂಪುಟಕೆ ಬರಿಸದೆ
ಯಮರಾಜನೆಂಬರಸಿಗೆ ಕೋರನಿಕ್ಕದೆ
ಸುಖ ಶಂಕರೋತಿ ಶಂಕರೋತಿ ಎಂಬ ಸಯಿದಾನವನುಂಡು
ಸುಖಿಯಾಗಿಪ್ಪ ಒಕ್ಕಲಮಗನ ತೋರಿ ಬದುಕಿಸಯ್ಯಾ,
ಕಾಮಭೀಮ ಜೀವಧನದೊಡೆಯ ಪ್ರಭುವೆ
ನಿಮ್ಮ ಧರ್ಮ, ನಿಮ್ಮ ಧರ್ಮ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-767/ವಚನ ಸಂಖ್ಯೆ-1735)

ಆತ್ಮಕಲ್ಯಾಣ-ಸಮಾಜಕಲ್ಯಾಣ ಸಮನ್ವಯತೆ:

ಅನೇಕ ಧರ್ಮಗಳ ಅಂತಿಮ ಗುರಿ ಆತ್ಮ ಕಲ್ಯಾಣವಾಗಿದೆ. ಆದರೆ, ಶರಣಸಂಸ್ಕೃತಿಯು ಆತ್ಮಕಲ್ಯಾಣದೊಂದಿಗೆ ಸಮಾಜಕಲ್ಯಾಣವನ್ನು ಸಾಧಿಸುವ ಸಂಸ್ಕೃತಿಯಾಗಿದೆ. ಒಬ್ಬ ವ್ಯಕ್ತಿಯ ಸರ್ವಾಂಗೀಣ ಬೆಳವಣಿಗೆಯಾಗಬೇಕಾದರೆ ಅವನಲ್ಲಿ ಭೌತಿಕ, ಬೌದ್ಧಿಕ, ಮಾನಸಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಬೆಳವಣಿಗೆಯಾಗಬೇಕು. ಮೊದಲಿನ ನಾಲ್ಕು ಬೆಳವಣಿಗೆಗಳಿಂದ ಆತ್ಮಕಲ್ಯಾಣವಾದರೆ ಸಾಮಾಜಿಕ ಬೆಳವಣಿಗೆಯಿಂದ ಸಮಾಜ ಕಲ್ಯಾಣವಾಗುತ್ತದೆ. ಮರ ತಾನು ಬೆಳೆಯುವುದರ ಜೊತೆಗೆ ಪಶು, ಪಕ್ಷಿ, ಮನುಷ್ಯರಿಗೆ ನೆರಳು, ಆಶ್ರಯ, ಹಣ್ಣು, ಆಮ್ಲಜನಕ ನೀಡುವಂತೆ ಮನುಷ್ಯ ತನ್ನ ಬೆಳವಣಿಗೆಯ ಜೊತೆಗೆ ಸಮಾಜದ ಬೆಳವಣಿಗೆಯತ್ತ ಲಕ್ಷ್ಯ ಕೊಡುವುದೇ ಸಮಾಜಿಕ ಬೆಳವಣಿಗೆ. ಅಸಹಾಯಕರಿಗೆ ಸಹಾಯ ಮಾಡುವುದು, ಜ್ಞಾನದ ಮೂಲಕ ಸಮಾಜ ಪರಿವರ್ತನೆ ಮುಂತಾದವುಗಳಿಂದ ಸಮಾಜ ಸೇವೆ ಸಾಗಬೇಕು. ವ್ಯಕ್ತಿಯ ಶಕ್ತಿಸಾಮರ್ಥ್ಯಗಳು ಕೇವಲ ತನಗಾಗಿ ಮತ್ತು ತನ್ನ ಕುಟುಂಬಕ್ಕಾಗಿ ಬಳಕೆಯಾಗದೆ ಸಮಾಜದ ಒಳಿತಿಗಾಗಿಯೂ ಬಳಕೆಯಾಗಬೇಕು. ಶರಣರು ಆತ್ಮಕಲ್ಯಾಣದೊಂದಿಗೆ ಸಮಾಜಕಲ್ಯಾಣಕ್ಕೆ ಆದ್ಯತೆ ನೀಡಿದ್ದಾರೆ.

ಸಮಾಜಸೇವೆಯೇ ನಿಜವಾದ ಲಿಂಗಪೂಜೆ ಎಂದು ಹೇಳುವ ಬಸವಣ್ಣನವರ ವಚನ:

ಕನ್ನಡಿಯ ನೋಡುವ ಅಣ್ಣಗಳಿರಾ,
ಜಂಗಮವ ನೋಡಿರೆ.
ಜಂಗಮದೊಳಗೆ ಲಿಂಗಯ್ಯ ಸನ್ನಿಹಿತವಾಗಿಪ್ಪ.
“ಸ್ಥಾವರ ಜಂಗಮ ಒಂದೆ” ಎಂಬುದು
ಕೂಡಲಸಂಗನ ವಚನ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-52/ವಚನ ಸಂಖ್ಯೆ-187)

ಇಷ್ಟಲಿಂಗ (ಕನ್ನಡಿ) ಪೂಜಕರು ಸಮಾಜ(ಜಂಗಮ)ದ ಕಡೆಯೂ ಗಮನಹರಿಸಿರಿ, ದೇವರು ಸಮಾಜದಲ್ಲಿಯೇ ಇದ್ದಾನೆ. ಸಮಾಜ ಸೇವೆಯೇ ಲಿಂಗಪೂಜೆ. ಲಿಂಗ-ಜಂಗಮ ಬೇರೆ ಬೇರೆ ಅಲ್ಲ. ಅವೆರಡೂ ಒಂದೆ. ಸಮಾಜ ಸೇವೆಯಿಲ್ಲದ ಪೂಜೆ ವ್ಯರ್ಥ ಎಂಬ ದಿವ್ಯ ಸಂದೇಶವನ್ನು ಬಸವಣ್ಣನವರು ನೀಡಿದ್ದಾರೆ.

ಮರದ ಬೇರಿಗೆ ಹಾಕಿದ ನೀರು ರೆಂಬೆ-ಕೊಂಬೆಗಳವರೆಗೆ ಹೋಗಿ ಫಲವಾಗಲು ನೆರವಾಗುವಂತೆ ಸಮಾಜಸೇವೆ ‘ದೇವಕರುಣೆಗೆ’ ಪಾತ್ರವಾಗುತ್ತದೆ ಎಂಬ ವೈಜ್ಞಾನಿಕ ಸತ್ಯವನ್ನು ಬಸವಣ್ಣನವರು ತಮ್ಮ ಮತ್ತೊಂದು ವಚನದ ಮೂಲಕ ತಿಳಿಸುತ್ತಾರೆ:

ಮರಕ್ಕೆ ಬಾಯಿ ಬೇರೆಂದು ತಳಕ್ಕೆ ನೀರನೆರೆದಡೆ
ಮೇಲೆ ಪಲ್ಲವಿಸಿತ್ತು ನೋಡಾ.
ಲಿಂಗದ ಬಾಯಿ ಜಂಗಮವೆಂದು ಪಡಿಪದಾರ್ಥವ ನೀಡಿದಡೆ
ಮುಂದೆ ಸಕಳಾರ್ಥವನೀವನು.
ಆ ಜಂಗಮವ ಹರನೆಂದು ಕಂಡು, ನರನೆಂದು ಭಾವಿಸದಡೆ
ನರಕ ತಪ್ಪದು, ಕಾಣಾ ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-110/ವಚನ ಸಂಖ್ಯೆ-421)

ಬೇರು ಮರದ ಬಾಯಿ. ಬೇರಿಗೆ ಹಾಕಿದ ನೀರು ಬೇರು, ಕಾಂಡದ ಮೂಲಕ ಎಲೆ, ಹೂವುಗಳಿಗೆ ತಲುಪುತ್ತದೆ. ಹೂ ಹಣ್ಣಾಗಲು, ಹಣ್ಣಿನಲ್ಲಿ ರುಚಿ ತುಂಬಲು ಕಾರಣವಾಗುತ್ತದೆ. ಹಾಗೆಯೇ ಲಿಂಗದ ಬಾಯಿ ಸಮಾಜ. ಸಮಾಜ ಸೇವೆಯು ದೇವರ ಕರುಣೆಯ ಫಲಕ್ಕೆ ಕಾರಣವಾಗುತ್ತದೆ ಎಂದು ಬಸವಣ್ಣನವರು ವೈಜ್ಞಾನಿಕ ಉದಾಹರಣೆಯೊಂದಿಗೆ ಸಮಾಜ ಸೇವೆಯ ಮಹತ್ವವನ್ನು ತಿಳಿಸಿದ್ದಾರೆ.

ಕಲ್ಲಿನ ಲಿಂಗಕ್ಕೆ ನಿರಂತರವಾಗಿ ಅಭಿಷೇಕ ಮಾಡಿದರೂ ಅದು ನೆನೆಯುವುದಿಲ್ಲ. ಅಭಿಷೇಕ ಮಾಡುವುದನ್ನು ಮರೆತರೆ ಅದು ಬಾಡುವುದಿಲ್ಲ. ಹೀಗೆ ಹೊರಗಿನ ಉಪಚಾರಕ್ಕೆ ಮಾಡುವ ಪೂಜೆಯಲ್ಲಿ ಹುರುಳಿಲ್ಲ. ಸಮಾಜಸೇವೆಯಿಂದ ಮಾತ್ರ ಲಿಂಗಪೂಜೆ ಸಾರ್ಥಕಗೊಳ್ಳುತ್ತದೆ ಎಂದು ಬಸವಣ್ಣನವರು ಹೇಳುತ್ತಾರೆ:

ಎರೆದಡೆ ನೆನೆಯದು, ಮರೆದಡೆ ಬಾಡದು.
ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ.
ಕೂಡಲಸಂಗಮದೇವಾ, ಜಂಗಮಕ್ಕೆರೆದಡೆ ಸ್ಥಾವರ ನೆನೆಯಿತ್ತು.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-54/ವಚನ ಸಂಖ್ಯೆ-196)

ಕಲ್ಲಿನ ಮೂರ್ತಿಗೆ ಕಾಣಿಕೆ ಅರ್ಪಿಸುವುದಕ್ಕಿಂತ ಕಣ್ಣೀರ ಸುರಿಸುವವರಿಗೆ ಸಹಾಯ ಮಾಡುವುದು ಲೇಸು. ದೇವರ ಸೇವೆ ಎಂದರೆ ನೊಂದವರ ಸೇವೆ. ಅಸಹಾಯಕರ ಸೇವೆ. ಕಲ್ಲಿನ ಮೂರ್ತಿಗೆ ನೈವೇದ್ಯ ಅರ್ಪಿಸುವುದಕ್ಕಿಂತ ಹಸಿದು ಬಂದವರಿಗೆ ಅನ್ನ ನೀಡು. ಸೋತವರಿಗೆ ಧೈರ್ಯ ನೀಡು. ಅದೇ ನಿಜವಾದ ನೈವೇದ್ಯ.

ಬಸವಣ್ಣನವರು ಸಮಾಜಸೇವೆಗಾಗಿ ತಮ್ಮ ಬದುಕನ್ನೇ ಮೀಸಲಾಗಿಟ್ಟು ಸ್ವಯಂ ದೇವಸ್ವರೂಪರಾದರು. ಪರಹಿತಕ್ಕಾಗಿ ಬದುಕಿದವರು ಮಾತ್ರ ಅಮರರು ಎಂಬುದಕ್ಕೆ ಸಾಕ್ಷಿಯಾದರು. ಅದಕ್ಕಾಗಿ ಚೆನ್ನಬಸವಣ್ಣನವರು ಬಸವಣ್ಣನವರ ಕುರಿತು ತಮ್ಮ ವಚನದ ಮೂಲಕ ಹೀಗೆ ಹೇಳುತ್ತಾರೆ:

ಕವಿತ್ವ ಸಾಧಕರೆಲ್ಲರೂ ಕಳವಳಿಸಿ ಹೋದರು,
ವಿದ್ಯಾಸಾಧಕರೆಲ್ಲರೂ ಬುದ್ಧಿಗೆಟ್ಟರು,
ತತ್ವಸಾಧಕರೆಲ್ಲರೂ ಭಕ್ತಿಹೀನರಾದರು,
ಲಿಂಗಸಾಧಕರೆಲ್ಲರೂ ಭೂಭಾರಕರಾದರು,
ಕೂಡಲಚೆನ್ನಸಂಗಮದೇವಯ್ಯಾ
ನಿಮ್ಮ ಬಸವಣ್ಣ ಜಂಗಮಸಾಧಕನಾಗಿ
ಸ್ವಯಂಲಿಂಗವಾದನು.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-516/ವಚನ ಸಂಖ್ಯೆ-1127)

ಪ್ರೊ. ಬಸವರಾಜ ಕಡ್ಡಿ,
ಆಡಳಿತಾಧಿಕಾರಿಗಳು,
ಬಸವಜ್ಯೋತಿ ಶಿಕ್ಷಣ ಸಮೂಹ ಸಂಸ್ಥೆಗಳು,
ಜಮಖಂಡಿ.
ಮೋಬೈಲ್‌ ಸಂ. 94497 13204

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in

Loading

Leave a Reply