ಶರಣೆ ಆಮುಗೆ ರಾಯಮ್ಮ | ಡಾ. ಸರ್ವಮಂಗಳ ಸಕ್ರಿ, ರಾಯಚೂರು,

ಭಕ್ತಿ ಜ್ಞಾನ ವೈರಾಗ್ಯದಿಂದ ವಿರಕ್ತನಾಗಿ
ನನ್ನವರು ತನ್ನವರೆಂದು ನುಡಿವ ಕುನ್ನಿಗಳ
ವಿರಕ್ತರೆಂಬೆನೆ ಅಯ್ಯಾ?
ಪಕ್ಷ ಪರಪಕ್ಷಂಗಳನರಿತು
ಹೇಹಂಗಳ ಜರಿಯಬಲ್ಲಡೆ ವಿರಕ್ತನೆಂಬೆನು.
ತ್ರಿವಿಧವನತಿಗಳೆದು ವಿರಕ್ತನಾದ ಬಳಿಕ
ತ್ರಿವಿಧವ ಹಿಡಿದ ಗುರುವ ಕಂಡಡೆ,
ಅವನ ಅಡಿಗೆರಗಿದೆನಾದಡೆ
ಅಘೋರ ನರಕ ತಪ್ಪದು, ಅದೇನು ಕಾರಣವೆಂದಡೆ
ಭವಪಾಶಂಗಳ ಹರಿದು ಅವಿರಳನಾದ ಕಾರಣ,
ವ್ರತಭ್ರಷ್ಟ ಲಿಂಗಬಾಹ್ಯನ ಮುಖವ ನೋಡೆನು.
ಹೊನ್ನು ಹೆಣ್ಣು ಮಣ್ಣು ಹಿಡಿವರ ಕಂಡಡೆ,
ಎನ್ನ ಗುರುವೆಂದು ಅಡಿಗೆರಗೆನು,
ಬಸವಣ್ಣನೆ ಸಾಕ್ಷಿಯಾಗಿ ಅಮುಗೇಶ್ವರಲಿಂಗವೆ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-255/ವಚನ ಸಂಖ್ಯೆ-668)

 ಶರಣೆ ಆಮುಗೆ ರಾಯಮ್ಮ:
 ಶರಣ ಅಮುಗೆ ದೇವಯ್ಯನವರ ಧರ್ಮಪತ್ನಿ ಶರಣೆ ಅಮುಗೆ ರಾಯಮ್ಮನವರು ವಿಜಯಪುರ ಜಿಲ್ಲೆಯ ಪುಳಜೆ ಎಂಬ ಗ್ರಾಮದವರು. ಇವರು ಕಂಬಳಿ ನೇಯಗೆ ಕಾಯಕದಲ್ಲಿ ತೊಡಗಿಸಿಕೊಂಡವರು. ಶರಣೆ ಅಮಗೆ ರಾಯಮ್ಮನವರ ಮೊದಲ ಹೆಸರು ವರದಾನಿಯಮ್ಮ. ಇವರು “ಅಮುಗೇಶ್ವರಲಿಂಗ” ವಚನಾಂಕಿತದಿಂದ ಬರೆದ 116 ವಚನಗಳು ಇಲ್ಲಿಯವರೆಗೆ ಲಭ್ಯವಾಗಿವೆ.

ಶರಣೆ ಅಮಗೆ ರಾಯಮ್ಮನವರ ಜೀವನ ವೃತ್ತಾಂತ:
ಜನಪದ ತ್ರಿಪದಿಗಳಲ್ಲಿ, ಕೆಲವು ಶಾಸನಗಳಲ್ಲಿ,  ರಾಘವಾಂಕ ಚರಿತ್ರೆ, ಸಿದ್ದರಾಮಯ್ಯ ಚಾರಿತ್ರ್ಯ ಮತ್ತು ಹಲವಾರು ಕಾವ್ಯಗಳಲ್ಲಿ ಈ ಶರಣೆ ಆಮುಗೆ ರಾಯಮ್ಮನವರ ಬದಕನ್ನು ಕುರಿತಂತೆ ಮಾಹಿತಿಗಳು ಸಿಗುತ್ತವೆ. ಅಮುಗೆರಾಯಮ್ಮ ಮತ್ತು ಅಮುಗೆ ದೇವಯ್ಯ ಶರಣ ದಂಪತಿಗಳು ಕಲ್ಯಾಣದಲ್ಲಿ  ಶರಣರಿಗೆ ಕಂಬಳಿ ನೆಯ್ಗೆ ಮಾಡಿ ಕೊಡುವ ಕಾಯಕ ಮಾಡುತ್ತಿದ್ದರು. ಅನುಭವ ಮಂಟಪದ ಚರ್ಚೆಗಳಲ್ಲಿ ಪಾಳ್ಗೊಳ್ಳುತ್ತಿದ್ದರು. ತನ್ಮೂಲಕ ವಚನ ರಚನೆಗೆ ತೊಡಗಿಸಿಕೊಂಡಿದ್ದರು. 

ಈ ವಚನದ ಮುಖ್ಯ  ಆಶಯವೆಂದರೆ ಭಕ್ತಿ, ಜ್ಞಾನ ಮತ್ತು ವೈರಾಗ್ಯದ ತಾತ್ವಿಕ ರೂಪಕವಾಗಿದೆ. ಶಿವನ ಮೇಲಿನ  ಭಕ್ತಿಯು ನಿಸ್ವಾರ್ಥವನ್ನಾಗಿಸುವ ಜೊತೆಗೆ ಭಯ, ದುರಾಸೆಯನ್ನು ನಾಶಪಡಿಸುತ್ತದೆ. ನಿಜವಾದ ಭಕ್ತಿ ಎಂದರೆ ತ್ಯಾಗವಾಗಿರುತ್ತದೆ. ಶರಣರಲ್ಲಿ ಆತ್ಮ ನಿವೇದನೆಯ ಪ್ರಾಮುಖ್ಯತೆಯನ್ನು ಕಾಣಬಹುದು. ಭಕ್ತಿಯನ್ನು ಪರಸ್ಪರ ಪೂರಕವಾಗಿ ಕಾಣಬೇಕಾದರೆ  ಷಟ್‌ಸ್ಥಲ ತತ್ವಗಳನ್ನು ಪ್ರೇರೇಪಿಸುತ್ತದೆ. ಭಕ್ತಿಯ ಶ್ರೇಷ್ಠತೆಯಲ್ಲಿ ಶರಣನಾಗಲು ಸಾಧ್ಯ, ಶಿವನಾಗಲು ಸಾಧ್ಯ. ಭಕ್ತಿಯ ಪ್ರಾರಂಭಿಕ ಹಂತ ಭಕ್ತಸ್ಥಲವಾದರೆ ವೈರಾಗ್ಯವು ಭಕ್ತಿಯನ್ನು  ಬಲಪಡಿಸುವ ಪರಿಶುಭ್ರತೆಯನ್ನು ಹಸನಾಗಿಸುವ  ಮಾರ್ಗವಾಗಿದೆ. ಭಕ್ತಿ, ಜ್ಞಾನ, ವೈರಾಗ್ಯಗಳು ಶರಣ ಧರ್ಮದಲ್ಲಿ ಕಾಣುವ ಮುಖಾಮುಖಿಯ ನಿವೇದನೆಗಳೂ ಸಹಿತ ಹೌದು. ನಿಜವಾದ ಭಕ್ತಿ ಸರಳತೆಯನ್ನು ಹೊಂದಿರುತ್ತದೆ. ಆದರೆ ಕಪಟಿಗಳು ಡಾಂಭಿಕ ಭಕ್ತಿ ಶ್ರೇಷ್ಠವಾದದ್ದೆಂದು ನಂಬಿದ್ದಾರೆ.

12 ನೇ ಶತಮಾನದ ಕಾಲಘಟ್ಟದ ಆಸುಪಾಸಿನ ಸಮಾಜದಲ್ಲಿ ಆವರಿಸಿದ್ದ ಅಂಧ ಶ್ರದ್ಧೆ, ಕಂದಾಚಾರಗಳು ದಾಂಭಿಕ ಭಕ್ತಿಯ ಪ್ರದರ್ಶನದ ಜೊತೆಗೆ ಅವರ ಕೃತಕತೆಯು ಕಾರಣವಾಗಿತ್ತು. ಭಕ್ತಿಯನ್ನು ಪ್ರದರ್ಶಿಸುವ  ಪುರೋಹಿತಶಾಹಿ ತಮ್ಮ ಬಂಧು-ಬಳಗದ ಜೊತೆ ಒಲವನ್ನು ಪ್ರದರ್ಶಿಸಿ ಮಠದ ಸ್ವಾಮಿಗಳನ್ನಾಗಿ ಮಾಡುತ್ತಿದ್ದರು. ಇಂತಹ  ನಟನೆಯ ಸ್ವಾಮಿಗಳಿಗೆ ಕುನ್ನಿಗಳೆಂದು ಶರಣೆ ಆಮುಗೆ ರಾಯಮ್ಮನವರು ಹೇಳುತ್ತಾರೆ. ಸ್ವಜನ ಪಕ್ಷಪಾತಿಗಳು ವಿರಕ್ತರಾಗಲು ಸಾಧ್ಯವೇ? ಸನ್ಯಾಸತ್ವ ಎನ್ನುವುದು ದೇವರ ಸ್ವರೂಪವೆಂದು ನಂಬಿದ ಈ ಸಮಾಜದಲ್ಲಿ ಗುರುವಿಗೆ ಮತ್ತು ಧರ್ಮಕ್ಕೆ ಅನ್ಯಾಯವಾಗಬಾರದು. “ಪರ-ಪಕ್ಷಗಳನರಿತು ಹೇಯಂಗಗಳ ಜರಿಯಬಲ್ಲಡೆ ವಿರಕ್ತನೆಂಬನೆ?” ಭಿನ್ನ ಧರ್ಮದವರ ಮತ್ತು ತತ್ವಗಳು, ನಂಬಿಕೆಗಳು ವ್ಯತ್ಯಾಸವಾದಾಗ ಟೀಕೆಗಳು ಪ್ರಾರಂಭವಾಗುತ್ತವೆ. ಶರಣರು ಕಾಯಕ ಮತ್ತು ದಾಸೋಹಕ್ಕೆ ಪ್ರಾಮುಖ್ಯತೆಯನ್ನು ನೀಡಿದವರಾಗಿದ್ದರು. ದಾನ, ಧರ್ಮ, ಸತ್ಪಾತ್ರಕ್ಕೆ ನೀಡುವ ದಾನ ಬಹು ಶ್ರೇಷ್ಠವಾದದ್ದು. ತ್ರಿವಿಧ ಸೂತ್ರಗಳು ತೋರಿಕೆಯಾದರೆ ಅಂತಹ ಗುರುವಿನ ಪಾದವ ಹಿಡಿದೆನಾದರೆ ನನಗೆ ನರಕ ತಪ್ಪದು ಎಂಬ ಪ್ರತಿಭಟನೆ ಶರಣೆ ಆಮುಗೆ ರಾಯಮ್ಮನವರದು.

ವಿರಕ್ತರಿಗೆ ಅನುರಕ್ತದ ವ್ಯಾಮೋಹ ಬೇಕೆ? ಸನಾತನ ಧರ್ಮದ ಸಂಪ್ರದಾಯಗಳನ್ನು ಉಜ್ಜಿ ತೊಳೆಯಲು ಸಾಧ್ಯವಿಲ್ಲ ಎಂಬ ಆಕ್ರೋಶ ಆಮುಗೆ ರಾಯಮ್ಮನವರದು. ಈ ಸಂಪ್ರದಾಯಗಳು ಇನ್ನೂ ಜೀವಂತವಾಗಿವೆ ಎನ್ನುವ ಪ್ರತಿಭಟನೆ ಆಮುಗೆ ರಾಯಮ್ಮನವರದು.

ಭವ ಪಾಶಂಗಳು ಹರಿದು ಅವಿರಳಾದ ಕಾರಣ ಸಂಸಾರದ ಬಂಧನಗಳು ಸಂಕೋಲೆಗಳು ಬಂಧನವಾದಾಗ, ಭವ ಎಂದರೆ ಸಂಸಾರ, ಹುಟ್ಟು ಲೋಕ ಶಿವ ಸಂದರ್ಭನು ಸಾರ ಈ ಪದಗಳ ಬಳಕೆ ಶರಣರಲ್ಲಿದೆ. ಭವ ಪಾಶದ ಬಂಧನಗಳು ವ್ಯಕ್ತಿಯ ಆಸೆಗಳನ್ನು  ಉದ್ದೀಪನಗೊಳಿಸುತ್ತವೆ. ಲೌಕಿಕ ಜೀವನದ  ಆಗುಹೋಗುಗಳು, ವ್ಯವಹಾರ ಬಂಧನವು ಸಂಸಾರದ ಬಂಧನಗಳಾದಾಗ ವ್ಯಕ್ತಿ ನಿರಾಳನಾಗಬೇಕಾದರೆ ಮುಕ್ತಿಯನ್ನು ಹೊಂದಬೇಕು. ಲೌಕಿಕ ಬಂಧನಗಳ ಜೊತೆಗೆ ವ್ಯಾಮೋಹ ಹೆಚ್ಚಿಸಿಕೊಂಡರೆ ಶರಣಧರ್ಮಕ್ಕೆ ವ್ರತ ಭ್ರಷ್ಟನಾಗುತ್ತಾನೆ. ನಮ್ಮ ಧರ್ಮ ಲಾಂಛನ ಲಿಂಗಕ್ಕೆ ಅವಮಾನವಾಗುತ್ತದೆ. ಇಂಥವರ ಮುಖವ ನೋಡೆನು.

ಹೆಣ್ಣು ಹೊನ್ನು ಮಣ್ಣುಗಳು  ಭೋಗದ ಮನಸ್ಸನ್ನು ಉದ್ದೀಪನಗೊಳಿಸುತ್ತದೆ. ಶರಣರು ಹೆಣ್ಣು, ಹೊನ್ನು ಮತ್ತು ಮಣ್ಣನ್ನು ಮಾಯೆ ಎಂದರು. ಹೆಣ್ಣು ಹೊನ್ನು ಮಣ್ಣಿಗಾಗಿ ರಾಜ್ಯವನ್ನೇ ಕಳೆದುಕೊಂಡಂತಹ ಘಟನೆಗಳಿವೆ. ತಂದೆ ಮಕ್ಕಳ ವಿರಸ ಅಣ್ಣ ತಮ್ಮಂದಿರ ಜಗಳಗಳಲ್ಲಿ ತಮ್ಮ ಗೌರವದ ವ್ಯಕ್ತಿತ್ವಗಳನ್ನು ಕಳೆದುಕೊಂಡಿದ್ದಾರೆ. ಹೆಣ್ಣು, ಹೊನ್ನು, ಮಣ್ಣು ಇದು ತಾವಾಗಿಯೇ ಒಲಿದು ಬರಬೇಕು. ಈ ಲೌಕಿಕ ಆಸೆಗಳ ಬೆನ್ನತ್ತಿದವರು ನೆಮ್ಮದಿಯನ್ನು ಕಳೆದುಕೊಂಡವರೆಷ್ಟೋ ಜನರಿದ್ದಾರೆ. ಅಮುಗೆ ರಾಯಮ್ಮ ಹೇಳುವಂತೆ ಶರಣತ್ವವನ್ನು ಸ್ವೀಕರಿಸಿದವರು ಆಧ್ಯಾತ್ಮದಲ್ಲಿ ಭಕ್ತಿಯಿಂದ ಗುರು-ಲಿಂಗ-ಜಂಗಮ ಸೇವೆಗಯ್ಯಬೇಕು.

ಅಲ್ಲಮಪ್ರಭುಗಳು ಹೇಳುವಂತೆ:

ಹೊನ್ನು ಮಾಯೆ ಎಂಬರು,
ಹೊನ್ನು ಮಾಯೆಯಲ್ಲ.
ಹೆಣ್ಣು ಮಾಯೆ ಎಂಬರು,
ಹೆಣ್ಣು ಮಾಯೆಯಲ್ಲ.
ಮಣ್ಣು ಮಾಯೆ ಎಂಬರು,
ಮಣ್ಣು ಮಾಯೆಯಲ್ಲ.
ಮನದ ಮುಂದಣ ಆಸೆಯೆ ಮಾಯೆ
ಕಾಣಾ ಗುಹೇಶ್ವರಾ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-29/ವಚನ ಸಂಖ್ಯೆ-72)

ಈ ಮನಸ್ಸು ಅಷ್ಟಮದಗಳನ್ನು ಪ್ರೇರೇಪಿಸುವ ಕ್ಷಣಿಕ ಸುಖ ಕೊಡುವ ವಸ್ತುಗಳನ್ನು ಆಕೆ ಖಂಡಿಸುತ್ತಾಳೆ.

ಆದರೆ ರಾಯಮ್ಮ ಶರಣ ಸಂಪರ್ಕದಲ್ಲಿ ಅಧ್ಯಾತ್ಮದ ಮಾರ್ಗದಲ್ಲಿ ದೈವಿಶಕ್ತಿಯನ್ನು ಪಡೆದುಕೊಂಡಾಕೆ. ಬಸವಣ್ಣನವರನ್ನು ಗುರುವೆಂದು, ದೇವರೆಂದು ನಂಬಿದಾಕೆ. ಅಧ್ಯಾತ್ಮದ ಅನುಭೂತಿಯಲ್ಲಿ ಶರಣಧರ್ಮದ ನಂಬಿಕೆ ಒಲವನ್ನು ಪಡೆದುಕೊಂಡಾಕೆ. ರಾಯಮ್ಮನವರ ಅನುಪಮಗಳ ಒಟ್ಟು ಪ್ರತಿಕ್ರಿಯೆಗಳೇ ವಚನಗಳಾಗಿವೆ. ಅಂದು ಸಮಾಜದಲ್ಲಿ ಕಂಡು ಬಂದ ಅವಮಾನ ಶೋಷಣೆಗಳು ಕಾರಣವೂ ಹೌದು. ಆಕೆಯ ಧಾರ್ಮಿಕ ಹಿನ್ನೆಲೆ ಮತ್ತು ವೈಯಕ್ತಿಕ ಅನುಭವಗಳೆಂದರೂ ಸರಿ. ಬಸವಣ್ಣನವರ ಸಾಮಿಪ್ಯ, ಪ್ರಭಾವವನ್ನು ಪಡೆದ ರಾಯಮ್ಮನವರು ಬಸವಣ್ಣನವರನ್ನು ಗುರುವೆಂದು ದೇವರಂದೇ ಪೂಜಿಸಿದ್ದಳು. ಹೀಗಾಗಿ ಬಸವಣ್ಣನವರ ಸಾಕ್ಷಿಯಾಗಿ ಅಮುಗೇಶ್ವರಲಿಂಗ ಶ್ರೇಷ್ಠವೆಂದು ಜೀವನಾನುಭಾವದ ನೆಲೆಯಲ್ಲಿ ಎಚ್ಚರಿಸಿದ್ದಾಳೆ.


ಡಾ.ಸರ್ವಮಂಗಳ ಸಕ್ರಿ.

ಲೇಖಕರು,
ಜಿಲ್ಲಾಧ್ಯಕ್ಷರು-ಜಾಗತಿಕ ಲಿಂಗಾಯಿತ ಮಹಾಸಭಾ, ಮಹಿಳಾ ಘಟಕ,
ರಾಯಚೂರು.
ಮೋಬೈಲ್‌ ಸಂ. 94499 46839

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನಸಾಹಿತ್ಯ ಮಂದಾರ ಫೌಂಡೇಶನ್ ಸಂಚಾಲಕರನ್ನು ಸಂಪರ್ಕಿಸಬೇಕಾದ:
    • ಮೋಬೈಲ್ ನಂ. 9741 357 132
    • e-Mail ID: info@vachanamandara.in / admin@vachanamandara.in

Loading

Leave a Reply