
ಮನದೊಡೆಯ ಮಹಾದೇವ ಮನವ ನೋಡಿಹೆನೆಂದು
ಮನುಜರ ಕೈಯಿಂದ ಒಂದೊಂದ ನುಡಿಸುವನು.
ಇದಕ್ಕೆ ಕಳವಳಿಸದಿರು ಮನವೆ, ಕಾತರಿಸದಿರು ತನುವೆ,
ನಿಜವ ಮರೆಯದಿರು ಕಂಡಾ, ನಿಶ್ಚಿಂತನಾಗಿರು ಮನವೆ.
ಬಸವಣ್ಣಪ್ರಿಯ ಚೆನ್ನಸಂಗಯ್ಯನು ಬೆಟ್ಟದನಿತಪರಾಧವನು
ಒಂದು ಬೊಟ್ಟಿನಲ್ಲಿ ತೊಡೆವನು.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-311/ವಚನ ಸಂಖ್ಯೆ-798)
ಮನಸಿದ್ದರೆ ಮಾರ್ಗ ಎಂಬ ಗಾದೆ ಮಾತಿದೆ, ಮನಸ್ಸಿಗೆ ಮಹಾದೇವನೇ ಒಡೆಯ ಅಂತ ಅಕ್ಕನಾಗಮನವರು ಮನಸ್ಸಿನ ಆಗಾಧ ಶಕ್ತಿಯ ಬಗ್ಗೆ ಈ ವಚನದಲ್ಲಿ ಹೇಳಿದ್ದಾರೆ. ಈ ವಚನ ಅವರ ಘನ ವ್ಯಕ್ತಿತ್ವವನ್ನ ಮತ್ತು ಉಚ್ಛ ವಿಚಾರವನ್ನು ತೋರಿಸುವ ಕನ್ನಡಿಯಂತೆ ಇದೆ.
ಅಕ್ಕ ನಾಗಮ್ಮನವರದು 12 ನೇ ಶತಮಾನದಲ್ಲಿನ ಶಿವಶರಣೆಯರಲ್ಲಿ ಅಗ್ರಗಣ್ಯ ಹೆಸರು. ಬಸವಾದಿ ಶರಣರ ಸಾಕ್ಷಿ ಪ್ರಜ್ಞೆಯಾಗಿ, ಮಹಾಮನೆಯ ಪ್ರಮುಖಳಾಗಿ, ಇಡೀ ಶರಣ ಸಂಕುಲ ಮತ್ತು ವಚನ ಸಾಹಿತ್ಯವನ್ನು ರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಧೀರ ಮಹಿಳೆ. ಶರಣರ ಸಮ ಸಮಾಜದ ನಿರ್ಮಾಣ ಕಾರ್ಯದಲ್ಲಿ ಅಕ್ಕ ನಾಗಮ್ಮನವರ ನಿಸ್ವಾರ್ಥ ಸೇವೆ ಅಜರಾಮರ. ಬಸವಣ್ಣನವರ ಎಲ್ಲಾ ಹೋರಾಟಗಳಿಗೆ ಬೆಂಬಲವಾಗಿ ನಿಂತು ಅವರನ್ನ ಸ್ವತಂತ್ರ ವಿಚಾರವಾದಿಯನ್ನಾಗಿ ಬೆಳೆಸಿದ ಮಹಾನ ಶಕ್ತಿ ಅಕ್ಕ ನಾಗಮ್ಮನವರು.
ಬಾಲ ಬಸವಣ್ಣನವರ ಜಿಜ್ಞಾಸೆಗೆ ನೀರರೆದು, ಅವರ ಮನದಲ್ಲಿ ಸಮಾನತೆಯ ಬೀಜ ಬಿತ್ತಿ, ಅದು ಹೆಮ್ಮರವಾಗಿ ಪೋಷಿಸಿ ಪ್ರೋತ್ಸಾಹಿಸಿ ಬೆಳೆಸಿದರು. ಮುಂದೆ ಬಸವಣ್ಣನವರ ವಿದ್ಯಾಭ್ಯಾಸಕ್ಕೆ ದೃಢವಾಗಿ ಅವರ ಜೊತೆಗೆ ನಿಂತು ಮಾರ್ಗದರ್ಶನ ನೀಡಿದರು.
ಅಕ್ಕ ನಾಗಮ್ಮ, ನಾಗಲಾಂಬಿಕೆ, ನಾಗಾಯಿ, ನಾಗಿಲೆ ಅಂತೆಲ್ಲ ಕರೆಸಿಕೊಳ್ಳುವ ನಾಗಮ್ಮ ತಾಯಿಯವರು ಹುಟ್ಟಿದ್ದು ಅವರ ತಾಯಿಯ ತವರು ಮನೆಯಾದ ಇಂಗಳೇಶ್ವರದಲ್ಲಿ. ತಂದೆ ಮಾದರಸ, ತಾಯಿ ಮಾದಲಾಂಬಿಕೆ. ಬಸವಣ್ಣನವರಂತಹ ಸಹೋದರ ಮತ್ತು ಚೆನ್ನಬಸವಣ್ಣನಂತಹ ಮಗನನ್ನು ಪಡೆದ ಮಹಾತಾಯಿ. ಮಹಾಮನೆಯ ಸಮಸ್ತ ಕಾರ್ಯಕ್ರಮ ಮತ್ತು ಜಂಗಮ ದಾಸೋಹಕ್ಕೆ ಟೊಂಕ ಕಟ್ಟೆ ನಿಂತಿದ್ದ ಗಂಗಾಂಬಿಕೆ ಮತ್ತು ನೀಲಾಂಬಿಕೆಯರಿಗೆ ಅಕ್ಕನಾಗಿ, ಸ್ನೇಹಿತೆಯಾಗಿ, ತಾಯಿಯಾಗಿ ನೋಡಿಕೊಳ್ಳುತ್ತಿದ್ದರು. ಬಸವಣ್ಣನವರ ಅನುಭವ ಮಂಟಪದ ಮತ್ತು ಮಹಾಮನೆಯ ಆತ್ಮವಾಗಿದ್ದರು.
ಸಿದ್ಧರಾಮೇಶ್ವರರ ಒಂದು ವಚನದಲ್ಲಿ ಯಾವ ಯಾವ ಶರಣರು ಎಷ್ಟೆಷ್ಟು ವಚನಗಳನ್ನ ರಚಿಸಿದ್ದರು ಅಂತ ಉಲ್ಲೇಖವಿದೆ.
ಅಲ್ಲಯ್ಯಗಳ ವಚನ ಎರಡೆಂಬತ್ತು ಕೋಟಿ.
ಅಪ್ಪಯ್ಯಗಳ ವಚನ ನಾಲ್ಕು ಲಕ್ಷದ ಮೂವತ್ತಾರು ಸಾಸಿರ.
ಎಮ್ಮಯ್ಯಗಳ ವಚನ ವಚನಕ್ಕೊಂದು.
ನೀಲಮ್ಮನ ವಚನ ಲಕ್ಷದ ಹನ್ನೊಂದು ಸಾಸಿರ.
ಗಂಗಾಂಬಿಕೆಯ ವಚನ ಲಕ್ಷದ ಎಂಟು ಸಾಸಿರ.
ಎಮ್ಮಕ್ಕ ನಾಗಾಯಿಯ ವಚನ
ಮೂರುಲಕ್ಷದ ತೊಂಬತ್ತಾರು ಸಾಸಿರ.
ಮಡಿವಾಳಣ್ಣನ ವಚನ ಮೂರು ಕೋಟಿಮುನ್ನೂರು.
ಹಡಪದಯ್ಯಗಳ ವಚನ ಹನ್ನೊಂದು ಸಾಸಿರ.
ಮರುಳಸಿದ್ಧನ ವಚನ ಅರುವತ್ತೆಂಟು ಸಾಸಿರ.
ಇಂತಪ್ಪ ವಚನದ ರಚನೆಯ ಬಿಟ್ಟು,
ಹುಡಿಮಣ್ಣ ಹೊಯ್ಯದೆ ಮಾಬನೆ,
ಕುತ್ಸಿತ ಕಾವ್ಯಾಲಂಕಾರ ನೋಡುವರ ನೋಡಿ,
ಮಹಾದೇವ ಕಪಿಲಸಿದ್ಧಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-493/ವಚನ ಸಂಖ್ಯೆ-1587)
ಅಂದರೆ ಶಿವ ಶರಣೆಯರಲ್ಲಿ ಅತಿ ಹೆಚ್ಚು ವಚನಗಳನ್ನ ರಚಿಸಿದ್ದು ಅಕ್ಕ ನಾಗಮ್ಮನವರು. ಇದರಿಂದಲೇ ಅವರ ಜ್ಞಾನದ ಮತ್ತು ಕ್ರಿಯಾಶೀಲ ರಚನೆಯ ಕಲ್ಪನೆ ಆಗುತ್ತದೆ. ಆದರೆ ಈಗ ನಮಗೆ ಲಭ್ಯವಿದ್ದಿದ್ದು ಕೇವಲ 15 ವಚನಗಳು. ಅಕ್ಕ ನಾಗಮ್ಮನವರ ವಚನಗಳ ಅಂಕಿತ “ಬಸವಣ್ಣಪ್ರಿಯ ಚನ್ನಸಂಗಯ್ಯ” ಎಷ್ಟು ಅರ್ಥಗರ್ಭಿತವಾದ ಅಂಕಿತ ಅಂದರೆ ತಾನು ಎತ್ತಿ ಆಡಿಸಿ ಬೆಳೆಸಿದ ತಮ್ಮ ಬಸವಣ್ಣ ಮತ್ತು ಪ್ರೀತಿಯ ವೀರಜ್ಞಾನಿ ಪುತ್ರ ಚನ್ನಬಸವಣ್ಣ ಮತ್ತು ಆರಾಧ್ಯ ದೈವ ಸಂಗಯ್ಯರ ಮಿಶ್ರಣ ಅವರ ಅಂಕಿತದಲ್ಲಿದೆ.
ಕಲ್ಯಾಣ ಕ್ರಾಂತಿಯ ನಂತರ ಸಹಸ್ರಾರು ಶರಣರನ್ನು ಕಲ್ಯಾಣದಿಂದ ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ಬಂದವರು ಅಕ್ಕನಾಗಮನವರು. ಕಲ್ಯಾಣದಿಂದ ಉಳಿಯುವವರೆಗೂ ಶರಣರನ್ನ ಸಲುಹಿ, ವಚನ ಸಾಹಿತ್ಯವನ್ನು ಉಳಿಸಲು ಇಷ್ಟಲಿಂಗ ಹಿಡಿವ ಕೈಯಲ್ಲಿ ಖಡ್ಗ ಹಿಡಿದು ಹೋರಾಡಿದ ವೀರ ಮಾತೆ ಅಕ್ಕನಾಗಮ್ಮನವರು. ಅತಿ ಹೆಚ್ಚು ವಚನಗಳನ್ನ ಬರೆದರೂ, ಕ್ರಾಂತಿಯ ನಂತರ ತಮ್ಮ ವಚನಗಳನ್ನ ಬೆನ್ನಿಗೆ ಕಟ್ಟಿಕೊಂಡು ಅಲ್ಲಮರ ಬಸವಣ್ಣನವರ ಉಳಿದ ಶರಣರ ವಚನಗಳನ್ನ ಉಳಿಸಿದ ನಿಸ್ವಾರ್ಥ, ನಿರ್ಮಲ, ನಿಷ್ಕಲ್ಮಶ ಹೃದಯದ ವೀರ ಶಿವಯೋಗಿಣಿ ಅಕ್ಕ ನಾಗಮ್ಮನವರು.
ಶರಣರ ದೃಷ್ಟಿಯಲ್ಲಿ ಅಕ್ಕ ನಾಗಮ್ಮನವರು:
ಭೀಮಕವಿಯ ಬಸವ ಪುರಾಣದಲ್ಲಿ ಅಕ್ಕ ನಾಗಮ್ಮನವರ ಪ್ರಸ್ತಾಪ ಕಾಣಬರುತ್ತದೆ.
ಬಸವಣ್ಣನ ಪ್ರಸಾದವ ಕೊಂಡು,
ಎನ್ನ ಕಾಯ ಶುದ್ಧವಾಯಿತ್ತಯ್ಯಾ.
ಚೆನ್ನಬಸವಣ್ಣನ ಪ್ರಸಾದವ ಕೊಂಡು,
ಎನ್ನ ಜೀವ ಶುದ್ಧವಾಯಿತ್ತಯ್ಯಾ.
ಮಡಿವಾಳಯ್ಯನ ಪ್ರಸಾದವ ಕೊಂಡು,
ಎನ್ನ ಭಾವ ಶುದ್ಧವಾಯಿತ್ತಯ್ಯಾ.
ಶಂಕರದಾಸಿಮಯ್ಯನ ಪ್ರಸಾದವ ಕೊಂಡು,
ಎನ್ನ ತನು ಶುದ್ಧವಾಯಿತ್ತಯ್ಯಾ.
ಸಿದ್ಧರಾಮಯ್ಯನ ಪ್ರಸಾದವ ಕೊಂಡು,
ಎನ್ನ ಮನ ಶುದ್ಧವಾಯಿತ್ತಯ್ಯಾ.
ಘಟ್ಟಿವಾಳಯ್ಯನ ಪ್ರಸಾದವ ಕೊಂಡು,
ಎನ್ನ ಪ್ರಾಣ ಶುದ್ಧವಾಯಿತ್ತಯ್ಯಾ.
ಅಕ್ಕನಾಗಾಯಮ್ಮನ ಪ್ರಸಾದವ ಕೊಂಡು,
ಎನ್ನ ಅಂತರಂಗ ಶುದ್ಧವಾಯಿತ್ತಯ್ಯಾ.
ಮುಕ್ತಾಯಕ್ಕಗಳ ಪ್ರಸಾದವ ಕೊಂಡು,
ಎನ್ನ ಬಹಿರಂಗ ಶುದ್ಧವಾಯಿತ್ತಯ್ಯಾ.
ಪ್ರಭುದೇವರ ಪ್ರಸಾದವ ಕೊಂಡು,
ಎನ್ನ ಸರ್ವಾಂಗ ಶುದ್ಧವಾಯಿತ್ತಯ್ಯಾ.
ಇವರು ಮುಖ್ಯವಾದ ಏಳುನೂರೆಪ್ಪತ್ತು
ಅಮರಗಣಂಗಳ ಪ್ರಸಾದವ ಕೊಂಡು ಬದುಕಿದೆನಯ್ಯಾ,
ಮಾರೇಶ್ವರಪ್ರಿಯ ಅಮಲೇಶ್ವರಾ,
ನಿಮ್ಮ ಶರಣರ ಪಾದಕ್ಕೆ ಅಹೋರಾತ್ರಿಯಲ್ಲಿ,
ನಮೋ ನಮೋ ಎನುತಿರ್ದೆನು.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-272/ವಚನ ಸಂಖ್ಯೆ-719)
“ಅಕ್ಕನಾಗಾಯಮ್ಮನ ಪ್ರಸಾದವ ಕೊಂಡು, ಎನ್ನ ಅಂತರಂಗ ಶುದ್ಧವಾಯಿತ್ತಯ್ಯಾ.” ಅಂತ ಆಯ್ದಕ್ಕಿ ಲಕ್ಕಮ್ಮನವರು ಹೇಳತಾರೆ.
ಎನಗೆ ಹಾಲೂಟವನಿಕ್ಕುವ ತಾಯೆ,
ಎನಗೆ ಪರಿಣಾಮವ ತೋರುವ ತಾಯೆ,
ಪರಮಸುಖದೊಳಗಿಪ್ಪ ತಾಯೆ,
ಪರವಸ್ತುವ ನಂಬಿದ ತಾಯೆ, ಬಸವನ ಗುರುತಾಯೆ,
ಸಂಗಯ್ಯನಲ್ಲಿ ಸ್ವಯಲಿಂಗಿಯಾದೆಯಾ, ಅಕ್ಕನಾಗಮ್ಮ ತಾಯೆ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-335/ವಚನ ಸಂಖ್ಯೆ-878)
“ಸಂಗಯ್ಯನಲ್ಲಿ ಸ್ವಯಂ ಲಿಂಗಯಾದೆಯ ಅಕ್ಕ ನಾಗಮ್ಮ ತಾಯಿ” ಎಂದು ನೀಲಮ್ಮನವರು ಸ್ಮರಿಸುತ್ತಾರೆ.
ಎನಗುಣಲಿಕ್ಕಿದರಯ್ಯ ಸಿರಿಯಾಳ-ಚೆಂಗಳೆಯರು.
ಎನಗುಡ ಕೊಟ್ಟರಯ್ಯಾ ದಾಸ- ದುಗ್ಗಳೆಯವರು.
ಎನ್ನ ಮುದ್ದಾಡಿಸಿದರಯ್ಯಾ ಅಕ್ಕನಾಗಮ್ಮನವರು.
ಎನ್ನ ಸಲಹಿದರಯ್ಯಾ ಅಮ್ಮವ್ವೆ ಕೊಡಗೂಸು
ಚೋಳಿಯಕ್ಕ ನಿಂಬವ್ವೆ ನೀಲಮ್ಮ
ಮಹಾದೇವಿ ಮುಕ್ತಾಯಕ್ಕಗಳು.
ಇಂತಿವರ ಒಕ್ಕುಮಿಕ್ಕ ತಾಂಬೂಲ
ಪ್ರಸಾದವ ಕೊಂಡು ಬದುಕಿದೆನಯ್ಯಾ
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-82/ವಚನ ಸಂಖ್ಯೆ-190)
“ಎನ್ನ ಮುದ್ದಾಡಿಸಿದರಯ್ಯ ಅಕ್ಕ ನಾಗಮ್ಮನವರು” ಎಂದು ಕೋಲಶಾಂತಯ್ಯನವರು ಹೇಳಿದ್ದಾರೆ,
ಬಸವಣ್ಣ ಚನಬಸವಣ್ಮ ಪ್ರಭುದೇವ ಮಡಿವಾಳ ಮಾಚಯ್ಯಾ
ಸಿದ್ಧರಾಮಯ್ಯ ಸೊಡ್ಡಳ ಬಾಚರಸರು ಹಡಪದಪ್ಪಣ್ಣ
ಪಡಿಹಾರಿ ಉತ್ತಣ್ಣ ಅವ್ವೆ ನಾಗಾಯಿ ಕೋಲಶಾಂತಯ್ಯ
ಡೋಹರ ಕಕ್ಕಯ್ಯ ಮೊಗವಾಡದ ಕೇಶಿರಾಜದೇವರು
ಖಂಡೆಯ ಬೊಮ್ಮಣ್ಣ ಮೊದಲಾದ ಅಸಂಖ್ಯಾತ ಮಹಾಪ್ರಮಥಗಣಂಗಳ
ಪರಮಪ್ರಸಾದವ ಕೊಂಡು ಬದುಕಿದೆನಯ್ಯಾ,
ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ,
ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-419/ವಚನ ಸಂಖ್ಯೆ-1104)
“ಅವ್ವೆ ನಾಗಾಯಿ” ಎಂದು ಮರುಳಶಂಕರದೇವರು ಕೊಂಡಾಡಿದ್ದಾರೆ.
ಕೆಲವು ಜನಪದರ ಹಾಡುಗಳಲ್ಲಿಯೂ ಕೂಡ ಅಕ್ಕ ನಾಗಮ್ಮನವರ ಪ್ರಸ್ತಾಪವಿದೆ.
ಅಕ್ಕ ನಾಗಮ್ಮನು | ಚಿಕ್ಕ ಒನಕೆ ಹಿಡಿದು ||
ಅಕ್ಕಿ ಒಮ್ಮಾನ ತೊಳೆಸುತ್ತ | ಪಾಡಿದಳು ||
ಅಕ್ಕ ನಾಗುಲಿ ಕಂಡು | ದಾರಿ ಕಾಣದೆ ||
ದುಃಖ ಮಾಡುತ್ತಾ | ಬಸವನಪಿಕೊಂಡಳು ||
ತಮ್ಮ ಬಸವನೆ | ನಮಗಿನ್ನಾರು ಗತಿಯಂದು ||
ಒಮ್ಮೆಯಾದರೂ | ಹೇಳಿ ಹೋಗಬಾರದೆ ||
ಎಂದು ಮನೆ ಮನೆಗಳಲ್ಲಿ ಜನಪದರು ಅಕ್ಕ ನಾಗಮ್ಮನವರ ಮೇಲೆ ಪದ ಕಟ್ಟಿ ಹಾಡಿ ಜನಮನದಲ್ಲಿ ಉಳಿಯುವಂತೆ ಮಾಡಿದರು.
ಎನ್ನ ತನು ಚೆನ್ನಬಸವಣ್ಣನ ಬಯಲ ಬೆರಸಿತ್ತು.
ಎನ್ನ ಮನ ಸಂಗನಬಸವಣ್ಣನ ನಿಜಪದವ ಬೆರಸಿತ್ತು.
ಎನ್ನ ಪ್ರಾಣ ಅಲ್ಲಮಪ್ರಭುದೇವರ ಅರಿವ ಬೆರಸಿತ್ತು.
ಇಂತೀ ಮೂವರು ಒಂದೊಂದ ಹಂಚಿಕೊಂಡ ಕಾರಣ,
ಎನಗೇನೂ ಇಲ್ಲದೆ, ಬಸವಣ್ಣಪ್ರಿಯ ಚೆನ್ನಸಂಗಯ್ಯನ
ಹೃದಯಕಮಲದಲ್ಲಿ ನಿಜನಿವಾಸಿಯಾಗಿದ್ದೆನು.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-308/ವಚನ ಸಂಖ್ಯೆ-791)
ತಮ್ಮ ತನು ಮನ ಪ್ರಾಣಗಳನ್ನೆಲ್ಲ ಚೆನ್ನಬಸವಣ್ಣ ಬಸವಣ್ಣ ಮತ್ತು ಅಲ್ಲಮ ಪ್ರಭುಗಳಿಗೆ ಅರ್ಪಿಸಿ ತಾವು ತಮ್ಮ ಆರಾಧ್ಯ ದೈವ ಸಂಗಯ್ಯನ ಹೃದಯದಲ್ಲಿ ನಿಶ್ಚಿಂತೆಯಿಂದ ನೆಲೆಸಿದೆನು ಅಂತ ನಿಷ್ಕಲ್ಮಶ ನಿರ್ಮಲ ಮನಸ್ಸನ್ನು ವಿವರಿಸುತ್ತಾರೆ.
ಶ್ರೀ ಗುರುವೇ ತಾಯಿತಂದೆಯಾಗಿ, ಲಿಂಗವೇ ಪತಿಯಾಗಿ,
ಜಂಗಮವೆ ಅತ್ತೆಮಾವಂದಿರಾಗಿ, ಶಿವ ಭಕ್ತರೇ ಬಾಂಧವರಾಗಿ,
ಸತ್ಯಸದಾಚಾರವೆಂಬ ಮನೆಗೆ ಕಳುಹಿದರಾಗಿ,
ಶರಣ ಸತಿ ಎಂಬ ನಾಮ ನಿಜವಾಯಿತ್ತು.
ಆದಂತೆ ಇರುವೆ ಹಿಂದುಮುಂದರಿಯದೆ ನಡೆವೆ,
ಮನಕ್ಕೆ ಮನಸಾಕ್ಷಿಯಾಗಿ ಮಾಡುವೆ,
ಬಸವಣ್ಣಪ್ರಿಯ ಚೆನ್ನಸಂಗಯ್ಯ ನಿಮ್ಮಡಿಗಳಿಗೆ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-311/ವಚನ ಸಂಖ್ಯೆ-799)
ಹಿಂದೆ ಏನಾಯಿತು ಎಂದು ನೆನೆದು ಹಳಹಳಿಸದೆ ಮುಂದೆ ಏನಾಗುವುದು ಎಂದು ಕಳವಳಿಸದೆ ಏನಾಗುವುದು ಅದನ್ನ ಅನುಭವಿಸಿ ಮನಸ್ಸಾಕ್ಷಿಯಾಗಿ ಕಾಯಕ ಮಾಡುವೆ ಅಂತ ಸಂಗಯ್ಯನ ಪಾದದಡಿಗೆ ಅರ್ಪಿಸುತ್ತಾರೆ. ಈ ವಚನದಲ್ಲಿ ಅಕ್ಕನಾಗಮ್ಮನವರ ಆತ್ಮ ನಿವೇದನೆಯ ರೂಪ ಕಾಣುತ್ತದೆ.
ಕಲ್ಯಾಣದಿಂದ ಉಳುವಿಯ ಕಡೆಗೆ ಹೊರಟಾಗ, ವಚನಗಳ ಕಟ್ಟನ್ನು ಹೊತ್ತು, ಶರಣ ಪಡೆಯ ಮುಂದಾಳತ್ವವನ್ನ ವಹಿಸಿಕೊಂಡು ಧೈರ್ಯದಿಂದ ಮುನ್ನಡೆಸಿ, ವಚನಗಳನ್ನ ಸಂರಕ್ಷಣೆ ಮಾಡುವಲ್ಲಿ ಅಕ್ಕನಾಗಮ್ಮ ತಾಯಿಯವರ ತ್ಯಾಗ ಬಹು ದೊಡ್ಡದು.
ವಚನಗಳ ಮತ್ತು ಲಿಂಗಾಯತ ಧರ್ಮದ ರಕ್ಷಣೆಗಾಗಿ ಜೀವನಪೂರ್ತಿ ಗಂಧದ ಕೊರಡಿನಂತೆ ಜೀವ ತೇಯ್ದ ನಾಗಮ್ಮ ತಾಯಿಯವರ ಹೋರಾಟ ಇಂದಿಗೂ ನಮಗೆ ದಾರಿದೀಪವಾಗಿದೆ. ಅಕ್ಕ ನಾಗಮ್ಮನವರು ಕೇವಲ ವ್ಯಕ್ತಿಯಲ್ಲ ದಿವ್ಯ ಶಕ್ತಿ. ಚನ್ನಬಸವಣ್ಣನವರು ಉಳವಿಯಲ್ಲಿ ಬಯಲಲ್ಲಿ ಬಯಲಾದ ನಂತರ, ಉಳವಿಯನ್ನು ತೊರೆದು ಸಂಚಾರ ಹೊರಟ ಅಕ್ಕ ನಾಗಮ್ಮನವರು ಶಿವಮೊಗ್ಗ ಜಿಲ್ಲೆಯ ತರೀಕೆರೆಯ ಎಣ್ಣೆ ಹೊಳೆಯ ದಡದಲ್ಲಿ ಬಯಲಾಗುಗುತ್ತಾರೆ.
ಶ್ರಾವಣ ಶುದ್ಧ ಪಂಚಮಿ ಎಂದು ಅಕ್ಕ ನಾಗಮ್ಮನವರ ಜಯಂತಿ ಅವರ ಗೌರವ ಸಮರ್ಪಣೆಗಾಗಿ ಈ ಲೇಖನ.
ಶ್ರೀಮತಿ. ಅನುಪಮ ಪಾಟೀಲ,
ನಂ. 10, ದೇಸಾಯಿ ಪಾರ್ಕ್,
ಕುಸೂಗಲ್ ರಸ್ತೆ, ಕೇಶ್ವಾಪೂರ,
ಹುಬ್ಬಳ್ಳಿ – 580 023.
ಮೋ. ಸಂ. +91 9845810708.
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನಸಾಹಿತ್ಯ ಮಂದಾರ ಫೌಂಡೇಶನ್ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in