
ಗಂಡಗಂಡರ ಎದೆಯ ಮೆಟ್ಟಿ ನಡೆವರುಂಟೆ?
ಗಂಡಗಂಡರ ಚಲ್ಲಣವ ಮಾಡಿ ಉಟ್ಟವರುಂಟೆ?
ಗಂಡಗಂಡರ ಚರ್ಮವ ಹೊದ್ದವರುಂಟೆ?
ಗಂಡಗಂಡರ ತೊಟ್ಟವರುಂಟೆ?
ಗಂಡಗಂಡರ ತುರುಬಿದವರುಂಟೆ?
ಗಂಡಗಂಡರ ಭಸ್ಮವಮಾಡಿ ಹೂಸಿದವರುಂಟೆ?
ಗಂಡಗಂಡರಿಗೆ ಗಂಡನ ಕಣ್ಣು ಕಾಲಲ್ಲದೆ.
ಗಂಡಗಂಡರಿಗೆ ಗಂಡನ ಶಿರ ಕರದಲ್ಲದೆ.
ಗಂಡುವೇಷವೆಂಬುದು ನಿಮ್ಮ ಶಕ್ತಿರೂಪು.
ಗಂಡರಿಗೆ ಗಂಡನು ನಡೆಯಿತ್ತೆ ಬಟ್ಟೆ
ಎಂಬುದು ನಿಮಗೆ ಸಂದಿತ್ತು.
ಶಂಭುಜಕ್ಕೇಶ್ವರ ಶರಣ ಜಗದೊಳಗೊಬ್ಬನೆ ಗಂಡನು.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-442/ವಚನ ಸಂಖ್ಯೆ-1214)
ಈ ವಚನದಲ್ಲಿ ಬರುವ ಪಾರಿಭಾಷಿಕ ಪದಗಳ ಅರ್ಥ:
ಗಂಡ: ಪತಿ, ಲಿಂಗ, ಗುರು.
ಚಲ್ಲಣ: ಪಾಯಜಾಮು, ಸಡಿಲ ಉಡುಪು.
ತುರುಬಿದವರು: ಲಂಪಟ, ಹೆಣ್ಣಿನ ಮೋಹದ ಧ್ಯಾನದಲ್ಲಿರುವವ.
ಬಟ್ಟೆ: ದಾರಿ, ಮಾರ್ಗ.
ಶಿವಶರಣೆಯರಲ್ಲಿ ಸತ್ಯಕ್ಕನವರು ಏಕದೇವೋಪಾಸನೆಗೆ ಹೆಸರಾದವರು. ಇವರ ವಚನಗಳಲ್ಲಿಯೂ ಕೂಡ ಏಕದೇವೋಪಾಸನೆ ತತ್ವ ಪ್ರಮುಖವಾಗಿ ಕಂಡು ಬರುತ್ತದೆ. ಇದು “ಶರಣೆ ಸತ್ಯಕ್ಕನವರ ಅಚಲವಾದ ಶಿವಭಕ್ತಿ” ಎಂದೇ ಗುರುತಿಸಿಕೊಂಡಿದೆ. ಇದುವರೆಗೂ ಶಿವಶರಣೆ ಸತ್ಯಕ್ಕನವರ 27 ವಚನಗಳು ದೊರೆತಿವೆ. “ಶಂಭುಜಕ್ಕೇಶ್ವರ” ಎನ್ನುವುದು ಇವರ ವಚನಾಂಕಿತ.
ಶರಣೆ ಸತ್ಯಕ್ಕನವರು ಶಿವಮೊಗ್ಗೆ ಜಿಲ್ಲೆಯ ಶಿರಾಳಕೊಪ್ಪ ತಾಲೂಕಿನ ಹಿರೇಜಂಬೂರಿನವರು. ಇದೇ ಊರಿನಲ್ಲಿರುವ ಜಕ್ಕೇಶ್ವರ ದೇವಾಲಯದ ಜಂಬುಕೇಶ್ವರ ಅವರ ಆರಾಧ್ಯದೈವ. ಈ ಕಾರಣದಿಂದಲೋ ಏನೋ ಅವರ ವಚನಾಂಕಿತವು ಶಂಭುಜಕ್ಕೇಶ್ವರ ಆಗಿರಬಹುದು. ಕಾಯಕ ನಿಷ್ಠೆ, ಪಾಯಕ ಪ್ರೀತಿಯನ್ನು ಹೊಂದಿದ ಶರಣೆ ಸತ್ಯಕ್ಕನವರು ಶಿವ-ಶರಣರ ಮನೆಯ ಅಂಗಳವನ್ನು ಗುಡಿಸುವ ಕಾಯಕದಲ್ಲಿ ನಿರತರಾಗಿದ್ದರು. ಶರಣೆ ಸತ್ಯಕ್ಕನವರ ವಚನಗಳನ್ನು ಗಮನಿಸಿದಾಗ ಸಾಕಷ್ಟು ಪ್ರಬುದ್ಧತೆ ಕಂಡು ಬರುತ್ತದೆ. ಆ ಕಾಲಘಟ್ಟದಲ್ಲಿ ಶರಣೆ ಸತ್ಯಕ್ಕನವರು ಹೊಂದಿದ್ದ ಪ್ರಬುದ್ಧ ಮನಸ್ಥಿತಿ, ಭಾಷಾ ಪ್ರೌಢಿಮೆ ಅಪ್ರತಿಮವಾಗಿದೆ. ಇವರ ಪ್ರೌಢ ಜಾಣ್ಮೆಯನ್ನು ಶರಣ ಆದಯ್ಯನವರು ತಮ್ಮ ವಚನಗಳಲ್ಲಿ ಕೊಂಡಾಡಿದ್ದು ಕಂಡು ಬರುತ್ತದೆ. ಹರಿಹರನು “ಲಿಂಗಾರ್ಚನೆಯ ರಗಳೆ” ಗಳಲ್ಲಿ ಇವರನ್ನು ಸ್ತುತಿಸಿದ್ದಾನೆ. ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರ ರತ್ನಾಕರ, ಶಿವತತ್ವ ಚಿಂತಾಮಣಿ, ಚೆನ್ನಬಸವಪುರಾಣ, ಪಾಲ್ಕುರಿಕೆ ಸೋಮನಾಥಪುರಾಣ, ಬಸವರಾಜ ವಿಜಯಂ, ಪುರಾತನ ದೇವಿಯವರ ತ್ರಿವಿಧಿ, ಸರ್ವಜ್ಞನ ವಚನ, ಮುಪ್ಪಿನ ಷಡಕ್ಷರಿಯ ಹಾಡು, ಜನಪದ ಸಾಹಿತ್ಯದಲ್ಲಿಯೂ ಕೂಡ ಇವರ ಕುರಿತು ಇಲ್ಲೇಖಗಳು ಕಂಡು ಬರುತ್ತವೆ.
ವೃತ, ನೇಮ, ನಿಷ್ಠೆಯ ಕುರಿತು ಕಠಿಣ ಸಾಧನೆಗೈದ ಶರಣೆ ಸತ್ಯಕ್ಕನವರು ಸಮಷ್ಠಿ ಹಿತಪ್ರಜ್ಞೆಯನ್ನು ಇಟ್ಟುಕೊಂಡವರು. ಪರಮಾತ್ಮನ ನಿರಾಕಾರ ತತ್ವದಲ್ಲಿ ನಂಬಿಕೆ ಇಟ್ಟುಕೊಂಡಿದ್ದ ಶರಣೆ ಸತ್ಯಕ್ಕನವರು ಸಾಕಾರ ರೂಪ ಪರಿಕಲ್ಪನೆಯನ್ನು ಅಲ್ಲಗಳೆದವರು. ವಾಸ್ತವಕ್ಕೆ ಹತ್ತಿರವಿಲ್ಲದ ಸಂಗತಿಗಳನ್ನು ನಿರಾಕರಿಸಿದ ಪ್ರಜ್ಞಾಸ್ಥಿತಿ ಇವರದು. ತನ್ನ ಅಚಲ ಭಕ್ತಿ, ನಿಶ್ಚಲ ಮನಸ್ಥಿತಿ, ನಿಷ್ಠೂರ ವ್ಯಕ್ತಿತ್ವದಿಂದ ದೇವರನ್ನೂ ಕೂಡ ಪ್ರಶ್ನಿಸುವ ಎದೆಗಾರಿಕೆ ಶರಣೆ ಸತ್ಯಕ್ಕನವರದಾಗಿತ್ತು. ಲಿಂಗ ತಾರತಮ್ಯದ ವಿರುದ್ಧ ಗಟ್ಟಿ ಧ್ವನಿ ಎತ್ತಿದ ಶರಣೆ ಇವರು. ಸತಿ-ಪತಿ ಭಾವದ ವಚನಗಳು ಸತ್ಯಕ್ಕನವರಲ್ಲಿ ಅತಿ ವಿಶಿಷ್ಠವಾಗಿ ನಿರೂಪಿತವಾಗಿರುವುನ್ನು ಗಮನಿಸಬಹುದು. ಭಾಷೆಯ ಗಟ್ಟಿತನದಷ್ಟೇ ತಾತ್ವಿಕತೆಯೂ ಗಟ್ಟಿಯಾಗಿದೆ. ಗುರು-ಲಿಂಗ-ಜಂಗಮದಂತಹ ತತ್ವಗಳ ಕುರಿತಾದ ಜಿಜ್ಞಾಸೆ ಇವರ ವಚನಗಳಲ್ಲಿ ಭಿನ್ನವಾಗಿಯೇ ಗೋಚರಿಸುತ್ತದೆ. ಶರಣೆ ಸತ್ಯಕ್ಕನವರ ಸತಿ-ಪತಿ ಭಾವದ ಗುರು-ಲಿಂಗ-ಜಂಗಮದ ಮಹತ್ವವನ್ನು ತಿಳಿಸುವ ವಚನಗಳಲ್ಲಿ ಪ್ರಸ್ತುತ ಈ ವಚನವೂ ಕೂಡ ಒಂದು.
“ಗಂಡಗಂಡರ ಎದೆಯ ಮೆಟ್ಟಿ” ಎನ್ನುವ ಈ ಪ್ರಸ್ತುತ ವಚನವನ್ನು ಸೂಕ್ಷ್ಮವಾಗಿ ಅವಲೋಕನೆ ಮಾಡಿದಾಗ “ಗಂಡರಗಂಡ” ಎನ್ನುವ ಪದ ಸುಮಾರು ಆರು ಸಲ ಪುನರುಚ್ಛರಿಸಲ್ಪಟ್ಟಿದೆ. ಇಡೀ ವಚನವೇ ಈ ಪದದ ಮೇಲೆಯೇ ಅವಲಂಬಿತವಾಗಿದೆ. ಈ ವಚನದ ತಾತ್ಪರ್ಯವೆಂದರೆ ಗುರು, ಲಿಂಗದ ಮಹತ್ವವನ್ನು ತಿಳಿಸುತ್ತದೆ. ಶಿವಯೋಗ ಸಾಧನೆಗೆ ಮುಖ್ಯವಾಗಿ ಬೇಕಾಗಿರುವುದು ಗುರುವಿನಿಂದ ದೊರೆಯುವ ಉಪದೇಶ (ಅರಿವು) ಮತ್ತು ಗುರುವಿನಿಂದ ದೊರೆಯುವ ಇಷ್ಟಲಿಂಗ. ಇವುಗಳ ಸಾಮರಸ್ಯವನ್ನು ಈ ವಚನ ನಿರೂಪಣೆ ಮಾಡುತ್ತದೆ. ಪ್ರಮುಖವಾಗಿ ಈ ವಚನ ಸತಿ-ಪತಿ ಭಾವದಲ್ಲಿ ಕೊನೆಗೊಳ್ಳುವುದು ಗಮನಾರ್ಹ.
ಷಟಸ್ಥಲ ಮಾರ್ಗದಲ್ಲಿ ಸಾಧಕನು ಕ್ರಮಿಸುತ್ತಿರುವಾಗ ಪ್ರಾಪಂಚಿಕ ವಿಷಯ ವಾಸನೆಗಳು, ಅರಿಷಡ್ವರ್ಗಗಳು, ಅಷ್ಟಮದಗಳು, ತ್ರಿಮಲಗಳು ಅವನನ್ನು ಭಾಧಿಸುತ್ತಲೇ ಇರುತ್ತವೆ. ಇವುಗಳೇ ಶಕ್ತಿಶಾಲಿಯಾಗುವ ಲಕ್ಷಣಗಳು ಗೋಚರಿಸುವಾಗ ಇವುಗಳನ್ನು ಮೆಟ್ಟಿ ಸಾಧಕನು ಮುಂದುವರಿಯಬೇಕು. ತನ್ನ ಸಾಧನೆಯ ಮಾರ್ಗಕ್ಕೆ ಇವು ಅಡ್ಡಿ-ಆತಂಕ ಎಂದು ಅವನಿಗೆ ಗೊತ್ತಿದ್ದರೂ ಒಮ್ಮೊಮ್ಮೆ ಅವುಗಳ ಮಾಯಾ ಮುಸುಕಿನಲ್ಲಿ ಸಾಧಕನು ದಾರಿಯನ್ನು ತಪ್ಪುತ್ತಾನೆ. ಕಾರಣ ಸಾಧಕನಿಗೆ ಮುಸುಕಿದ ಈ ಮಾಯಾ ಮುಸುಕನ್ನು ತೆಗೆಯುವುದಕ್ಕೆ ಕಾಲಕಾಲಕ್ಕೆ ಸಶಕ್ತ ಗುರುವಿನ ಮಾರ್ಗದರ್ಶನ ಬೇಕಾಗುತ್ತದೆ. ಅಂತಹ ಸಶಕ್ತ ಗುರುವನ್ನು ಶರಣೆ ಸತ್ಯಕ್ಕನವರು “ಲಿಂಗಶಕ್ತಿಯ ಪ್ರತಿರೂಪ” ಎಂದು ಗುರುತಿಸುತ್ತಾರೆ. ಅದನ್ನೇ ಪ್ರಸ್ತುತ ವಚನದಲ್ಲಿ “ಗಂಡುವೇಷವೆಂಬುದು ನಿಮ್ಮ ಶಕ್ತಿಯ ರೂಪ” ಎಂದು ಉಲ್ಲೇಖ ಮಾಡಿದ್ದಾರೆ. ಹೀಗಾಗಿ ಈ ವಚನದಲ್ಲಿ “ಗಂಡು” ಎಂಬ ಪದವು “ಗುರು ಮತ್ತು ಲಿಂಗ” ಎಂಬ ಅರ್ಥದಲ್ಲಿ ಪ್ರಯೋಗವಾಗಿರುವುದು ವಿಶೇಷ.
ವಚನದ ಪ್ರಾರಂಭದ ಸಾಲುಗಳನ್ನು ಅವಲೋಕಿಸಿದಾಗ “ಗಂಡಗಂಡರ ಎದೆಯ ಮೆಟ್ಟಿ” ಎಂದರೆ ಪ್ರಾಪಂಚಿಕ ವಿಷಯ ವಾಸನೆ, ಅರಿಷಡ್ವರ್ಗ, ಅಷ್ಟಮದ, ತ್ರಿಮಲ ಇವೆಲ್ಲವುಗಳನ್ನು ಮೆಟ್ಟಿ ನಡೆಯುವುದರ ಸಂಕೇತ. ಸಾಮಾನ್ಯವಾಗಿ ಪ್ರಾಪಂಚಿಕ ವಿಷಯ ವಾಸನೆ, ಅರಿಷಡ್ವರ್ಗ, ಅಷ್ಟಮದ, ತ್ರಿಮಲ ಇವೆಲ್ಲವುಗಳನ್ನು ಮೆಟ್ಟಿ ನಿಲ್ಲುವುದು ಅಷ್ಟು ಸುಲಭದ ಕೆಲಸವಲ್ಲ. ಅದನ್ನೇ ಶರಣೆ ಸತ್ಯಕ್ಕನವರು ಇವುಗಳನ್ನು
- ಮೆಟ್ಟಿ ನಡೆದವರುಂಟೇ?
- ಉದಾಸೀನ ಮಾಡಿದವರುಂಟೇ?
- ಚರ್ಮ ಸುಲಿದು ಬೀಸಾಡಿದವರುಂಟೇ?
- ಮನದಿಂದ ಕಿತ್ತೊಗೆದು ಕಟ್ಟಿ ನಿಲ್ಲಿಸಿದವರುಂಟೇ?
- ಸುಟ್ಟು ಉರುಹಿ ಭಸ್ಮವ ಮಾಡಿ ನೊಸಲಿಗೆ ಧರಿಸಿದವರುಂಟೇ?
ಎಂದು ಪ್ರಶ್ನಿಸುತ್ತಾರೆ. ಇಂದ್ರಿಯನಿಗ್ರಹ, ಮನೋನಿಗ್ರಹ ಸುಲಭದ ಕಾರ್ಯಗಳಲ್ಲ. ಇವೆಲ್ಲವುಗಳಿಂದ ದೂರ ಸರಿಯುವುದು ಸರಳವಾದುದಲ್ಲ. ಇವುಗಳ ನಿಗ್ರಹಕ್ಕೆ ಅಂದರೆ ಈ “ಗಂಡಗಂಡರಿಗೆ ಗಂಡನ ಕಣ್ಣು-ಕಾಲು ಬೇಕು” ಎನ್ನುತ್ತಾರೆ ಶರಣೆ ಸತ್ಯಕ್ಕನವರು. ಗಂಡನ ಕಣ್ಣು ಎಂದರೆ ಗುರು ನೀಡುವ ಅರಿವು. ಗಂಡನ ಕಾಲು ಎಂದರೆ ಕ್ರಿಯೆ. ಯಾವಾಗ ಸಾಧಕನಿಗೆ ಗುರುವಿನಿಂದ ಅರಿವು ದೊರೆಯುವುದೋ ಆಗ ಅವನಲ್ಲಿ ಕ್ರಿಯೆ ಜಾಗೃತವಾಗುತ್ತದೆ. ಗಂಡನ ಕಾಲು ಎನ್ನುವುದೇ ಜಂಗಮ ತತ್ವದ ಪರಿಕಲ್ಪನೆಯ ಚಲನಶೀಲತೆ. ಅಂದರೆ ಅರಿವನ್ನು ಪಡೆದುಕೊಂಡು ಅದನ್ನು ಪಸರಿಸುವ ಅಥವಾ ಪ್ರಸಾರ ಮಾಡುವ ಹಂತ. ಈ ಅರಿವು ಕ್ರಿಯೆಗಳಿಂದ ಸಾಧಕ ಜಾಗೃತನಾಗುತ್ತಾನೆ. ಆಗ ಅವನನ್ನು ಆವರಿಸಿದ ವಿಷಯಾಸಕ್ತಿಗಳೆಲ್ಲವೂ ಆವಿಯಾಗಿ ತನ್ನಿಂದ ತಾನೇ ದೂರವಾಗುತ್ತವೆ. ಇದು ಜಂಗಮ ಸ್ವರೂಪಿಯಾಗುವ ಹಂತ. ಈ ಜಂಗಮ ತತ್ವ ಶಿವಯೋಗದತ್ತ ಕರೆದೊಯ್ಯುತ್ತದೆ.
ಆಗ ಒಬ್ಬ ಶಿವಯೋಗ ಸಾಧಕನಿಗೆ ಕರದ ಇಷ್ಟಲಿಂಗವು ಪ್ರಾಣದ ಪ್ರಾಣಲಿಂಗವಾಗುತ್ತದೆ. ಮುಂದುವರೆದು ಅದೇ ಭಾವದ ಭಾವಲಿಂಗವಾಗುತ್ತದೆ. ಈ ಲಿಂಗವನ್ನೇ ಸತ್ಯಕ್ಕನವರು “ಗಂಡನ ಶಿರ” ಎಂದು ಸಾಂಕೇತಿಸುತ್ತಾರೆ. ಇಂತಹ ಶಕ್ತಿಶಾಲಿಯಾದ ಗಂಡನ ಶಿರವನ್ನು ಕರಸ್ಥಲಕ್ಕೆ ಇರಿಸುವವನು ಅತ್ಯಂತ ಶಕ್ತಿಶಾಲಿಯಾಗಿಯೇ ಇರಬೇಕು. ಅಂತಹ ಶಕ್ತಿ ಹೊಂದಿರುವವನು ಗುರುವಾಗಿರುತ್ತಾನೆ. ಗುರುವಿಗೆ ಈ ಶಕ್ತಿ ಲಿಂಗಪೂಜೆಯಿಂದಲೇ ದೊರಕಿಕೊಂಡಿರುತ್ತದೆ. ಅದು “ಲಿಂಗದತ್ತ ಶಕ್ತಿ” ಆಗಿರುತ್ತದೆ. ಗುರುವೆಂಬುವವನೂ ಲಿಂಗದ ಶಕ್ತಿಯ ರೂಪ. ಇದನ್ನೇ “ಗಂಡುವೇಷವೆಂಬುದು ನಿಮ್ಮ ಶಕ್ತಿಯ ರೂಪ” ಎಂದು ಶರಣೆ ಸತ್ಯಕ್ಕನವರು ಗುರುವಿನ ಮಹತ್ವವನ್ನು ಪ್ರತಿಪಾದಿಸುತ್ತಾರೆ.
ವಚನದ ಅಂತಿಮ ಭಾಗದಲ್ಲಿ ಶರಣಸತಿ-ಲಿಂಗಪತಿ ಭಾವವು ಒಡಮೂಡುವುದು. ಲಿಂಗವೆಂಬ ಪತಿಗೆ ಶರಣ ಸಂಕುಲವೆಲ್ಲಾ ಸತಿ ರೂಪವಾಗಿ ನಿಲ್ಲುವ ಹಂತವನ್ನು ಶರಣ್ಯ ಭಾವದಲ್ಲಿ ಶರಣೆ ಸತ್ಯಕ್ಕನವರು ಪ್ರತಿಪಾದಿಸುತ್ತಾರೆ. “ಶಂಭುಜಕ್ಕೇಶ್ವರ ಶರಣ ಜಗದೊಳಗೊಬ್ಬನೆ ಗಂಡನು” ಎಂಬ ಸ್ಪಷ್ಟತೆಯನ್ನು ದರ್ಶಿಸಬುದಾಗಿದೆ.
ಸ್ವಲ್ಪ ಸುದೀರ್ಘ ಎನಿಸುವ ಈ ವಚನದ ಮೂಲಕ ಶರಣೆ ಸತ್ಯಕ್ಕನವರು ಪ್ರತಿಪಾದಿಸುವ ಈ ತತ್ವಗಳು ಅವರ ಭಾಷಾ ಪ್ರೌಢಿಮೆಗೆ ಮತ್ತು ಅವರ ಪ್ರಬುದ್ಧತೆಗೆ ಹಿಡಿದ ಕನ್ನಡಿಯಂತಿವೆ.
ಡಾ. ಪುಷ್ಪಾವತಿ ಶಲವಡಿಮಠ,
ಕನ್ನಡ ಉಪನ್ಯಾಸಕರು,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಚಿಕ್ಕ ಬಾಸೂರು, ಹಾವೇರಿ ಜಿಲ್ಲೆ.
ಮೋಬೈಲ್. ಸಂ. 97407 38330
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in