ಶರಣ ಅಂಬಿಗರ ಚೌಡಯ್ಯನವರ ವಚನ ವಿಶ್ಲೇಷಣೆ | ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ಅಡವಿಯೊಳಗರಸುವಡೆ ಸಿಡಿಗಂಟಿ ತಾನಲ್ಲ.
ಮಡುವಿನೊಳಗರಸುವಡೆ ಮತ್ಸ್ಯ ಮಂಡೂಕನಲ್ಲ.
ತಪಂಬಡುವಡೆ ವೇಷಕ್ಕೆ ವೇಳೆಯಲ್ಲ.
ಒಡಲ ದಂಡಿಸುವಡೆ ಕೊಡುವ ಸಾಲಿಗನಲ್ಲ.
ಅಷ್ಟತನುವಿನೊಳಗೆ ಹುದುಗಿದ್ದ ಲಿಂಗವ
ನಿಲುಕಿ ನೋಡಿಯೆ ಕಂಡನಂಬಿಗರ ಚೌಡಯ್ಯ
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-12/ವಚನ ಸಂಖ್ಯೆ-25)

ಕಾನನದ ಅತ್ಯಂತ ಸುಂದರ ಪ್ರಕೃತಿಯಲ್ಲಿ, ನೈಸರ್ಗಿಕ ಸೊಬಗಿನ ತಾಣದಲ್ಲಿ ಅತ್ಯುತ್ತಮ ಸಂಪತ್ತು ಇರುವುದೇ ಹೊರತು ಸಿಡಿದು ಬೀಳುವ ಮುಳ್ಳಿನ ಕಂಟಿಯಲ್ಲ. ಭೌತಿಕವಾಗಿ ಕಾಣುವ ವಸ್ತು ತಾನಲ್ಲ. ಅದೇ ರೀತಿ ಸಂಸಾರವೆಂಬ ಮಡುವಿನೊಳಗೆ ಸಿಗುವುದು ಮೋಹವೆಂಬ ಮೀನಲ್ಲ, ಮುಕ್ತಿ ಮಾರ್ಗವನ್ನರಸಲು ತಪಸ್ಸು ಮಾಡುವೆನು ಎಂದು ಕಷಾಯ ವಸ್ತ್ರಗಳನ್ನು ಧರಿಸುವ ಢಾಂಬಿಕರ ತರಹ ನನಗೆ ವೇಳೆ ಇಲ್ಲ. ನಿಜವಾದ ವ್ಯಕ್ತಿಯನ್ನು ಪರೀಕ್ಷಿಸಲು ಅಥವಾ ದಂಡಿಸಲು ಬಂದಾಗ ಅದಕ್ಕೆ ಪರಿಹಾರವಾಗಿ ಬೇರೆ ಏನನ್ನೂ ನೀಡಲಾಗುವುದಿಲ್ಲ. ಇಲ್ಲಿ ಸಾಲಿಗ ಅಂದರೆ ಒಂದು ವಸ್ತುವನ್ನು ಇನ್ನೊಂದಕ್ಕೆ ಹೊಂದಿಸುವವ ಎಂದು ಅರ್ಥೈಸಿಕೊಳ್ಳಬಹುದು. ವ್ಯಕ್ತಿಯನ್ನ ದಂಡಿಸುವುದು ಹೊರಗಿನ ವಸ್ತುಗಳಿಂದ ಅಲ್ಲ. ಆತ್ಮದ ಅಥವಾ ಆಂತರಿಕ ಶುದ್ಧೀಕರಣದಿಂದ ಮಾತ್ರ ಸಾಧ್ಯ. ಪೃಥ್ವಿ, ಅಪ್ಪು, ಅಗ್ನಿ, ವಾಯು, ಆಕಾಶ, ಆತ್ಮ, ಸೂರ್ಯ ಮತ್ತು ಚಂದ್ರ ಎಂಬ ಈ ಎಂಟು ಘಟಕಗಳಿಂದ ಕೂಡಿರುವ ನಮ್ಮ ತನುವಿನಲ್ಲಿ ಹುದುಗಿರುವ ಇಷ್ಟಲಿಂಗದ ನಿಜ ಸ್ವರೂಪವನ್ನು, ಮಾತು ಮನಸ್ಸುಗಳಿಗೆ ಮೀರಿದ ಈ ದೈವತ್ವವನ್ನು ಮಾನವನ ಬುದ್ಧಿಯು ಅರಿಯಲಾಗದು.

ಶಿವನು ಅರಣ್ಯ ಅಥವಾ ಕೆರೆಗಳಲ್ಲಿ ಹುಡುಕಿದರೆ ಸಿಗುವಂತಹ ವಸ್ತುವಲ್ಲ. ಹೊರಗಿನ ವೇಷಭೂಷಣಗಳಿಂದ ಅಥವಾ ಕಠಿಣ ತಪಸ್ಸಿನಿಂದ ಪಡೆಯಲು ಸಾಧ್ಯವಿಲ್ಲ. ಬದಲಿಗೆ ಆತ್ಮ ಸಾಕ್ಷಾತ್ಕಾರದಿಂದ ಪಡೆಯಬೇಕು. ಇದು ಅನುಭವದಿಂದ ಅರಿಯಬೇಕಾದ ದೈವೀಸ್ವರೂಪ. ಈ ವಚನದಲ್ಲಿ ಬಾಹ್ಯ ಆಚರಣೆಗಳಿಗಿಂತ ಅಂತರಂಗದ ಅನುಭಾವಕ್ಕೆ ಪ್ರಾಮುಖ್ಯತೆಯನ್ನು ನೀಡಲಾಗಿದೆ.

ಶ್ರೀಮತಿ. ಅನುಪಮ ಪಾಟೀಲ,
ನಂ. 10, ದೇಸಾಯಿ ಪಾರ್ಕ್‌,
ಕುಸೂಗಲ್‌ ರಸ್ತೆ, ಕೇಶ್ವಾಪೂರ,
ಹುಬ್ಬಳ್ಳಿ – 580 023.
ಮೋ. ಸಂ. +91 9845810708.

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನಸಾಹಿತ್ಯ ಮಂದಾರ ಫೌಂಡೇಶನ್ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in

Loading

Leave a Reply