ಶರಣ ಅಂಬಿಗರ ಚೌಡಯ್ಯನವರ ವಚನ ವಿಶ್ಲೇಷಣೆ | ಶ್ರೀ. ಎನ್. ಸಿ. ಶಿವಪ್ರಕಾಶ್, ಮಸ್ಕತ್, ಒಮಾನ್.

ಅಡವಿಯೊಳಗರಸುವಡೆ ಸಿಡಿಗಂಟಿ ತಾನಲ್ಲ.
ಮಡುವಿನೊಳಗರಸುವಡೆ ಮತ್ಸ್ಯ ಮಂಡೂಕನಲ್ಲ.
ತಪಂಬಡುವಡೆ ವೇಷಕ್ಕೆ ವೇಳೆಯಲ್ಲ.
ಒಡಲ ದಂಡಿಸುವಡೆ ಕೊಡುವ ಸಾಲಿಗನಲ್ಲ.
ಅಷ್ಟತನುವಿನೊಳಗೆ ಹುದುಗಿದ್ದ ಲಿಂಗವ
ನಿಲುಕಿ ನೋಡಿಯೆ ಕಂಡನಂಬಿಗರ ಚೌಡಯ್ಯ
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-12/ವಚನ ಸಂಖ್ಯೆ-25)

ಈ ವಚನದ ಮುಖೇನ ಶರಣರು ತಮ್ಮ ದೇಹದಲ್ಲಿ ಅಡಗಿರುವ ಲಿಂಗವನ್ನು ಸಾಕ್ಷಾತ್ಕರಿಸುವ ನಿಖರವಾದ ಪರಿಯ ಬಗ್ಗೆ ವಿವರಿಸಿದ್ದಾರೆ.

ನಮ್ಮ ದೇಹದಲ್ಲಿರುವ ಲಿಂಗ ಅಡವಿಯಲ್ಲಿ ಬೆಳೆಯುವ ಕಂಟಿ ಗಿಡವಲ್ಲ. ದಟ್ಟಾರಣ್ಯದಲ್ಲಿದ್ದಾರೂ ತನ್ನ ಕಾಯಿಗಳು ಬೇಸಿಗೆಯ ಬಿಸಿಲಿಗೆ ಸಿಡಿಯುವ ಕಾರಣದಿಂದಾಗಿಕಂಟಿ ಗಿಡ ತನ್ನ ಇರುವನ್ನು ಸುಲಭವಾಗಿ, ತನ್ನನ್ನು ಹುಡುಕುವ ವ್ಯಕ್ತಿಗೆ, ಬಿಟ್ಟು ಕೊಡುತ್ತದೆ.

ಹಾಗೆಯೇ ನಮ್ಮೊಳಗಿನ ಲಿಂಗ, ಮಡು (ಸಣ್ಣಕೆರೆ ಅಥವಾ ಕೊಳ) ದ ನೀರಿನಲ್ಲಿ ಇರುವ ಮೀನು ಅಥವಾ ಕಪ್ಪೆಗಳಂತೆಯೂ ಅಲ್ಲ. ಇಂತಹ ಜಲಚರಗಳು ತಾವು ಮಾಡುವ ಸದ್ದಿನಿಂದಾಗಿ, ತಮ್ಮ ಉಪಸ್ಥಿತಿಯ ಸುಳಿವನ್ನು ಸುಲಭವಾಗಿ ತಮ್ಮನ್ನು ಬಲೆಯಲ್ಲಿ ಸಿಲುಕಿಸುವವರಿಗೆ ಬಿಟ್ಟುಕೊಡುತ್ತವೆ.

ಇನ್ನು ನಾನು ತಪಸ್ಸಿಗೆ ಮುಂದಾಗಿ ಲಿಂಗವನ್ನು ಅರಸುತ್ತೇನೆ ಎಂದರೆ ನಮ್ಮೊಳಗಿನ ಲಿಂಗ, ಬಾಹ್ಯ ವೇಷಭೂಷಣಗಳಿಗೆ ಸಮರ್ಪಿತವಾಗಿರುವುದಲ್ಲ ಅಥವಾ ಮಾರು ಹೋಗುವುದಲ್ಲ.

ಇನ್ನು ದೇಹವನ್ನು ದಂಡಿಸುವ ಕ್ರಿಯೆಗಳಿಗೆ ಅಂದರೆ ಹಠಯೋಗದಂತಹ ಸಾಧನೆಗಳ ಮುಖಾಂತರ ಲಿಂಗವನ್ನು ದರ್ಶಿಸುವ ಪ್ರಯತ್ನಗಳನ್ನು ಮಾಡಿದಲ್ಲಿ, ಲಿಂಗ ಅಂತಹ ಪ್ರಯತ್ನಗಳಿಗೆ ಕರಗುವ ಸಾಲಿಗ ಅಂದರೆ ಸಾಲ ಕೊಡುವವನು ಅರ್ಥಾತ್ ದರ್ಶನ ಭಾಗ್ಯವನ್ನು ನೀಡುವಂತಹವನೂ ಅಲ್ಲ.

ದೇಹ (ಅಷ್ಟತನು) ದಲ್ಲಿ ಅಡಗಿರುವ ಲಿಂಗವನ್ನುಆತ್ಮೋನ್ನತಿಯ ಸಾಧನೆಯ ಮಾರ್ಗದಿಂದ, ಆಧ್ಯಾತ್ಮಿಕ ತುಡಿತದ ತೀವ್ರತೆಯ ಕಾರಣದಿಂದ ಮಾತ್ರ ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯ ಎನ್ನುವುದು ಚೌಡಯ್ಯ ಶರಣರ ಈ ವಚನದ ಆಶಯ.

ಶ್ರೀ. ಎನ್. ಸಿ. ಶಿವಪ್ರಕಾಶ್,
ಮಸ್ಕತ್, ಒಮಾನ್.
ಮೋಬೈಲ್.‌ ನಂ. +9689272906

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in

Loading

Leave a Reply