
ಅಡವಿಯೊಳಗರಸುವಡೆ ಸಿಡಿಗಂಟಿ ತಾನಲ್ಲ.
ಮಡುವಿನೊಳಗರಸುವಡೆ ಮತ್ಸ್ಯ ಮಂಡೂಕನಲ್ಲ.
ತಪಂಬಡುವಡೆ ವೇಷಕ್ಕೆ ವೇಳೆಯಲ್ಲ.
ಒಡಲ ದಂಡಿಸುವಡೆ ಕೊಡುವ ಸಾಲಿಗನಲ್ಲ.
ಅಷ್ಟತನುವಿನೊಳಗೆ ಹುದುಗಿದ್ದ ಲಿಂಗವ
ನಿಲುಕಿ ನೋಡಿಯೆ ಕಂಡನಂಬಿಗರ ಚೌಡಯ್ಯ
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-12/ವಚನ ಸಂಖ್ಯೆ-25)
ಹನ್ನೆರಡನೆಯ ಶತಮಾನದ ಅಂದಿನ ವ್ಯವಸ್ಥೆಯ ಭಾಗವಾಗಿದ್ದ ತೋರಿಕೆಯ ಭ್ರಮಾಧೀನ ಆಚರಣೆಗಳನ್ನು ಶರಣರು ಅಲ್ಲಗಳಿದಿದ್ದಾರೆ. ಅದಕ್ಕಾಗಿ ಉಪಮೆಗಳನ್ನು, ನಿದರ್ಶನಗಳನ್ನು ಬಳಸಿ ಸಾಮಾನ್ಯರಿಗೆ ತಿಳಿಯುವಂತೆ ಸರಳವಾಗಿ, ಸಹಜವಾಗಿ ವಚನಗಳ ಮೂಲಕ ತಿಳಿಸಲು ಯತ್ನಿಸಿದ್ದಾರೆ. ಮಾಯೆಯಲ್ಲಿ ಮುಳುಗಿದ ಮನುಷ್ಯನ ಹುಡುಕಾಟ ಯಾವತ್ತೂ ಹೊರಗಿನ ವಸ್ತು, ವಿಷಯಗಳ ಮೇಲೆಯೇ ಇದೆ. “ತಮ್ಮೊಳಿದ್ದ ಮಹಾಘನವ ಅರಿಯರು” ಎಂಬ ಶರಣ ನುಡಿಯು ಮತ್ತೆ ಮತ್ತೆ ಇದೇ ವಿಷಯದತ್ತ ಗಮನ ಸೆಳೆಯುವುದು.
ಮಠವೇಕೋ ಪರ್ವತವೇಕೋ
ಜನವೇಕೋ ನಿರ್ಜನವೇಕೋ
ಚಿತ್ತ ಸಮಾಧಾನವುಳ್ಳ ಶರಣಂಗೆ?
ಮತ್ತೆ_ಹೊರಗಣ ಚಿಂತೆ
ಧಾನ್ಯ ಮೌನ ಜಪತಪವೇಕೋ
ತನ್ನ ತಾನರಿದ ಶರಣಂಗೆ ಗುಹೇಶ್ವರಾ?
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-537/ವಚನ ಸಂಖ್ಯೆ-1417)
ಎಂದು ಅಲ್ಲಮರು ದೇವರನ್ನು ಹುಡುಕುತ್ತ ಮಠ, ಪರ್ವತಗಳಿಗೆ ಹೋಗುವ ಸಂಪ್ರದಾಯಗಳನ್ನು ಪ್ರಶ್ನಿಸುವರು. ಚಿತ್ತ ಸಮಾಧಾನವಿರುವವರಿಗೆ ನಿರ್ಜನ ಪ್ರದೇಶಗಳನ್ನು ಹುಡುಕಿಕೊಂಡು ಹೋಗುವ ಅವಶ್ಯಕತೆಯೇ ಇಲ್ಲ. ತನ್ನ ತಾನರಿದ ಶರಣನಿಗೆ ಇವಾವುದರ ಅವಶ್ಯಕತೆಯಿಲ್ಲ. ಹೊರಗಿನ ಚಿಂತೆ, ಧ್ಯಾನ, ಮೌನ, ಜಪ, ತಪ ಎಂದು ಅಲೆದಾಡುವ ನಿಷ್ಪ್ರಯೋಜಕ ಲೋಕದ ರೀತಿಯನ್ನು ತೀಕ್ಷ್ಣವಾಗಿ ಹೇಳುವರು.
ಮಣಿಯನೆಣಿಸಿ ದಿನವ ಕಳೆಯಬೇಡ.
ಕಣಿಯ ಪೂಜಿಸಿ ದಿನವ ಕಳೆಯಬೇಡ.
ಕ್ಷಣವಾದಡೆಯೂ ಆಗಲಿ
ನಿಜದ ನೆನಹೆ ಸಾಕು,
ಬೆಂಕಿಯಲುಳ್ಳ ಗುಣ ಬಿಸಿನೀರಲುಂಟೆ
ಗುಹೇಶ್ವರಾ?
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-537/ವಚನ ಸಂಖ್ಯೆ-1418)
ಮಣಿಯನ್ನು ಎಣಿಸುವುದು, ಕಣಿಯನ್ನು ಪೂಜಿಸುವುದು ಎಲ್ಲವೂ ಬಹಿರಂಗದ ಆಚರಣೆಗಳು. ಬೆಂಕಿಯಲ್ಲಿದ್ದ ಗುಣ ಬಿಸಿನೀರಿನಲ್ಲಿ ಉಂಟೆ ಎಂದು ಅರ್ಥವತ್ತಾದ ಪ್ರಶ್ನೆಯನ್ನು ಕೇಳುವರು. ಬೆಂಕಿಯ ಮೇಲೆ ನೀರು ಇಟ್ಟರೆ ಬಿಸಿಯಾಗಿಸುವುದು ಅದರ ಸ್ವಭಾವ ಆದರೆ ಒಮ್ಮೆ ಬಿಸಿಯಾದ ನೀರಿಗೆ ಬೇರೆ ವಸ್ತುವನ್ನು ಬಿಸಿ ಮಾಡುವ ಶಕ್ತಿ ಇರದು. ಮತ್ತೆ ನೀರನ್ನು ಬಿಸಿ ಮಾಡಬೇಕೆಂದರೆ ಬೆಂಕಿಯನ್ನೇ ಆಶ್ರಯಿಸಬೇಕು. ಆದರೆ ನಾವು ಬಿಸಿ ನೀರನ್ನು ಹಿಡಿದು ನೀರನ್ನು ಬಿಸಿ ಮಾಡು ಎಂದು ಕೇಳುವ ಭ್ರಮೆಯಲ್ಲಿದ್ದೇವೆ. ಮೂಲ ವಸ್ತು ಬೆಂಕಿ, ಅದನ್ನೇ ಮರೆತುಬಿಟ್ಟಿದ್ದೇವೆ. ಅದಕ್ಕಾಗಿ ಅರೆಕ್ಷಣವಾದರೂ ಆಗಲಿ ನನ್ನನ್ನು ಸತ್ಯದ ಜೊತೆಗಿರಿಸು, ಈ ಭ್ರಮೆಯ ಜಗತ್ತಿನಿಂದ ದೂರ ಮಾಡು ಎಂದು ಅಲ್ಲಮರು ಹೇಳುತ್ತಾರೆ.
ಉಸುರಿನ ಪರಿಮಳವಿರಲು
ಕುಸುಮದ ಹಂಗೇಕಯ್ಯಾ?
ಕ್ಷಮೆ ದಮೆ ಶಾಂತಿ ಸೈರಣೆಯಿರಲು
ಸಮಾಧಿಯ ಹಂಗೇಕಯ್ಯಾ?
ಲೋಕವೆ ತಾನಾದ ಬಳಿಕ
ಏಕಾಂತದ ಹಂಗೇಕಯ್ಯಾ ಚೆನ್ನಮಲ್ಲಿಕಾರ್ಜುನಾ?
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-36/ವಚನ ಸಂಖ್ಯೆ-84)
ಎನ್ನುವ ವೈರಾಗ್ಯನಿಧಿ ಅಕ್ಕಮಹಾದೇವಿಯವರ ವಚನವೂ ಕೂಡಾ ಸನ್ಮಾರ್ಗ, ಸನ್ನಡತೆ, ಸಚ್ಚಾರಿತ್ರ್ಯ, ಸತ್ಯಸಂಧತೆಯ ಉಸಿರೇ ಪರಿಮಳವಾಗಿ ಹರಿಯುತ್ತಿರಲು ಹೊರಗಿನ ಕುಸುಮಗಳ ಅವಶ್ಯಕತೆ ಇದೆಯೆ? ಕ್ಷಮಾಗುಣ, ದಯೆ, ಅಖಂಡ ಶಾಂತಿ, ಸಹನೆ ತನ್ನೊಳಗೇ ಅನವರತವಾಗಿರಲು ಸಮಾಧಿಯ ಸ್ಥಿತಿಗೆ ತಲುಪಬೇಕು ಎಂಬ ಹಂಬಲವೇಕೆ? ಇದೇ ಸಮಾಧಿಯಲ್ಲವೆ? ಎಂದು ವೈರಾಗ್ಯನಿಧಿ ಅಕ್ಕಮಹಾದೇವಿಯವರು ಪ್ರಶ್ನಿಸುತ್ತಾರೆ. ಲೋಕವೇ ತಾನಾಗುವ ಅಂದರೆ ತಾನು ಹಾಗೂ ಈ ಜಗತ್ತು ಎಂಬ ಭಿನ್ನವಿಲ್ಲದ ತಾದ್ಯಾತ್ಮ ಭಾವ ಹೊಂದಿದ ಬಳಿಕ ಏಕಾಂತವನ್ನು ಬಯಸುವ ಪ್ರಮೇಯವೇ ಇಲ್ಲ ಎಂದು ವೈರಾಗ್ಯನಿಧಿ ಅಕ್ಕಮಹಾದೇವಿಯವರು ಉಲ್ಲೇಖಿಸುತ್ತಾರೆ. ಅಂತರಂಗ ಬಹಿರಂಗಗಳನ್ನು ತೌಲನಿಕವಾಗಿ ಹೇಳುತ್ತಾ ಅದರ ಪ್ರಸ್ತುತತೆಯ ಬಗೆಗೆ ಕೂಡಾ ವೈರಾಗ್ಯನಿಧಿ ಅಕ್ಕಮಹಾದೇವಿ ಸ್ಪಷ್ಟತೆಯನ್ನು ನೀಡುವರು.
ಅದೇ ರೀತಿಯಾಗಿ ಇಂಥ ವಿಷಯದ ಮೇಲೆ ಬೆಳಕು ಚೆಲ್ಲುವ ಶರಣ ಅಂಬಿಗರ ಚೌಡಯ್ಯನವರ ಈ ವಚನದ ಕಟ್ಟನ್ನು ಎರಡು ರೀತಿಯಲ್ಲಿ ವಿಭಾಗಿಸಬಹುದು. ಒಂದು ಆ ಕಾಲಘಟ್ಟದಲ್ಲಿ ಪ್ರಚಲಿತವಾಗಿದ್ದ ದೇವರನ್ನು ಅನ್ವೇಷಿಸುವ ಧಾರ್ಮಿಕ ನಂಬಿಕೆಗಳು ಇನ್ನೊಂದೆಡೆ ವೈಚಾರಿಕವಾಗಿ, ವಸ್ತುನಿಷ್ಠವಾಗಿ ಯೋಚಿಸಿದಾಗ ಅವು ದಕ್ಕುವ ಪರಿ ಅಥವಾ ಅವು ಪಡೆವ ಸಾರ್ಥಕತೆ.
ಕಾಡಿನಲ್ಲಿ ದೇವರನ್ನರಸುವದು, ನೀರಿನಲ್ಲಿ ದೇವರನ್ನರಸುವದು, ತಪಸ್ಸೆಂಬ ವೇಷದಲ್ಲಿ ದೇವರನ್ನರಸುವದು, ವೃತ, ನೇಮ, ಉಪವಾಸಗಳಲ್ಲಿ ದೇವರನ್ನು ಅರಸುವದು ಹೀಗೆ ಏನೆಲ್ಲಾ ವಸ್ತು ವಿಷಯಗಳಲ್ಲಿ ಆತನನ್ನು ಅರಸುವದು ಎಂಬುದು ಒಂದೆಡೆ ಹೇಳುವರು. ಹಾಗೆ ಮುಂದುವರಿಯುತ್ತಾ ಆ ಪ್ರಶ್ನೆಗಳಿಗೆ ತಾವೇ ಉತ್ತರವನ್ನೂ ಕೊಡುವರು. ಅಡವಿಯಲ್ಲಿ ಅರಸಿದರೆ ಮುಳ್ಳು ಕಂಟಿಗಳು ಸಿಗುವವು. ಪುಷ್ಕರಣಿ, ಹೊಂಡ, ನದಿ ಮುಂತಾದೆಡೆ ನೀರಲ್ಲಿ ದೇವರನ್ನು ಅರಸಿದರೆ ಅಲ್ಲಿ ಮೀನು, ಕಪ್ಪೆಗಳು ಸಿಗುವವು. ತಪಗೈಯ್ಯಲು ಕಮಂಡಲು ಹಿಡಿದು, ಗಡ್ಡ, ಜಡೆ ಬಿಟ್ಟು, ದಂಡ ಹಿಡಿದು ಏನೆಲ್ಲಾ ವೇಷ ಧರಿಸಬಹುದು. ಅಲ್ಲಿ ಎಲ್ಲದಕ್ಕೂ ವೇಳೆ ಸಿಗಬಹುದು. ಆದರೆ ದೇವರಲ್ಲ. ಉಪವಾಸ, ವನವಾಸ, ವೃತ, ನಿಯಮ ಮಾಡಿ ದೇಹ ದಂಡಿಸಿ ದೇವರು ಒಲಿಯಬಹುದೆಂದರೆ ಆತನೇನು ಸಾಲಿಗನಲ್ಲ. ಕೊಡುವ ತೆಗೆದುಕೊಳ್ಳುವ ವಸ್ತು ಯಾವದು ಎಲ್ಲವೂ ಆತನದೇ ಇರುವಾಗ ಎಂದು ಹೇಳುವ ಚೌಡಯ್ಯನವರ ವಿಚಾರಗಳು ತಲತಲಾಂತರಗಳಿಂದ ನಡೆದುಬಂದ ಅರ್ಥವಿಲ್ಲದ ಆಚರಣೆಗಳಿಗೆ ನೇರವಾಗಿ ಕೊಟ್ಟ ಚಾಟಿ ಏಟಾಗಿದೆ.
ಶತಮಾನಗಳಿಂದ ದೇವರ ಹುಡುಕಾಟ ಹೊರಗಡೆಯೇ ನಡೆದಿದೆ. ಆದರೆ ಆತ ಅಲ್ಲೆಲ್ಲಿಯೂ ಇಲ್ಲ. ಆತ ಅಷ್ಟತನು (ಭೂಮಿ, ಆಕಾಶ, ವಾಯು, ಉದಕ, ಅಗ್ನಿ, ಸೂರ್ಯ, ಚಂದ್ರ, ಆತ್ಮ) ವಿನಿಂದ ಒಳಗೊಂಡ ಈ ದೇಹದಲ್ಲಿ ಕಾಣದಂತೆ ತದ್ಗತವಾಗಿದ್ದಾನೆ. ಆತನನ್ನು ಕಾಣಲು ಅಂತರಂಗದ ಅರಿವಿನ ಅಂತಃಚಕ್ಷುಗಳು ಬೇಕು ಎಂದು ಚೌಡಯ್ಯನವರು ಸತ್ವಪೂರ್ಣ ನುಡಿಗಳನ್ನು ಈ ವಚನದಲ್ಲಿ ನಿರೂಪಿಸುವರು.
ಶ್ರೀಮತಿ. ಸುನಿತಾ ಮೂರಶಿಳ್ಳಿ,
“ಶಿವಶಕ್ತಿ” ಮಂಜುನಾಥಪುರ,
ಮಾಳಮಡ್ಡಿ,
ಧಾರವಾಡ – 580 007.
ಮೋಬೈಲ್ ನಂ. 99864 37474
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ (ರಿ) ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in
![]()





Total views : 51410