ಶರಣ ಕೀಲಾರದ ಭೀಮಣ್ಣನವರ ವಚನ-ನಿರ್ವಚನ | ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ವಚನ:
ನಾನಾ ವರ್ಣದ ಗೋವುಗಳೆಲ್ಲವೂ ಕೂಡಿ
ಒಂದೇ ಹೊಲದಲ್ಲಿ ಮೇದು,
ಆರು ಕೆರೆಯ ನೀರ ಕುಡಿದು,
ಒಂದೇ ದಾರಿಯಲ್ಲಿ ಬಂದು,
ಮೂರು ಕೊಟ್ಟಿಗೆಯ ಗೊತ್ತಿಂಗೊಳಗಾದುವು.
ಬಿಟ್ಟು ಕರೆಯಲಾಗಿ ಗೋವಿಂಗೆ ಹಲವು,

ಹಾಲಿಗೆ ಏಕವರ್ಣ.
ಹಾಲ ತಂದು ಭಾಜನದಲ್ಲಿ ನೀಡಿ ಕಾಸುವಲ್ಲಿ
ಚಟ್ಟಿ ಹತ್ತದೆ, ಹಸುಕು ನಾರದೆ,
ಕೌರು ಏಳದೆ, ನೀರ ರಸ ತಪ್ಪಿ ಮಧುರ ರಸ ತುಂಬಿ
ಕಾಸಿ ಉಣಬಲ್ಲಡೆ ಆತನೆ ಭೋಗಿ.
ಆತ ನಿರತಿಶಯಾನುಭಾವ ಶುದ್ಧಾತ್ಮನು,
ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗ ತಾನೆ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-37/ವಚನ ಸಂಖ್ಯೆ-75)

ಈ ವಚನದಲ್ಲಿ ಬರುವ ಪಾರಿಭಾಷಿಕ ಶಬ್ದಗಳ ಅರ್ಥ:
ಕೊಟ್ಟಿಗೆ: ದನಕರುಗಳನ್ನು ಕಟ್ಟುವ ಸ್ಥಳ.
ಭಾಜನ: ಪಾತ್ರೆ.
ಚಟ್ಟಿ: ಮಣ್ಣಿನ ಪಾತ್ರೆ, ಮಡಿಕೆ.
ಕೌರು: ಸುಟ್ಟ ವಾಸನೆ, ಹೊಗೆ, ನಾತ.
ನಿರತಿಶಯ: ಹೆಚ್ಚಳವಿಲ್ಲದೆ, ಅಸಾಧಾರಣವಲ್ಲದ.

ಇದು ಶರಣ ಕೀಲಾರದ ಭೀಮಣ್ಣನವರ ವಚನ. ಈ ವಚನ ವಿಶ್ಲೇಷಣೆಗಿಂತಲೂ ಮೊದಲು ಕೀಲಾರದ ಭಿಮಣ್ಣನವರ ಬಗ್ಗೆ ತಿಳಿದುಕೊಳ್ಳೋಣ.

ಒಕ್ಕಲಿಗರ ಮುದ್ದಣ್ಣ, ಮಡಿವಾಳ ಮಾಚಯ್ಯ, ಕಿನ್ನರಿ ಬ್ರಹ್ಮಯ್ಯ, ಅಂಬಿಗರ ಚೌಡಯ್ಯ ಮುಂತಾದ ಶರಣರು ಕಾಯಕದೊಂದಿಗೆ ತಮ್ಮನ್ನು ತಾವು ಗುರುತಿಸಿಕೊಂಡಂತಹ ಶರಣರ ಸಾಲಿನಲ್ಲಿ ಕೀಲಾರದ ಭೀಮಣ್ಣನವರೂ ಕೂಡ ಒಬ್ಬರು. ಕೀಲಾರದ ಭೀಮಣ್ಣನವರ ಬಗ್ಗೆ, ಅವರ ಕುಟುಂಬದ ಬಗ್ಗೆ, ಅವರ ಜೀವನದ ಬಗ್ಗೆ ನಮಗೆ ಯಾವುದೇ ಮಾಹಿತಿ ದೊರೆಯುವುದಿಲ್ಲ. ಸ್ವಾನುಭವದಿಂದ ರಚಿಸಿದ ಭೀಮಣ್ಣನವರ ವಚನಗಳಿಂದ ಅವರ ಮನೋಭಾವವನ್ನು ಅರಿಯಲು ಪ್ರಯತ್ನ ಪಡಬಹುದು. ಅವರ ಹೆಸರಿನಲ್ಲಿರುವ ಕೀಲಾರ ಅಂದರೆ ಕ್ಷೀರಾಗಾರ ಅಥವಾ ಹಾಲು ಕರೆಯುವ ಸ್ಥಳ. ಕೀಲಾರಿ ಅಂದರೆ ಹಾಲು ಕರೆಯುವವನು, ಗೋವುಗಳನ್ನು ಸಾಕುವವನು. ಅದರಂತೆ ಭೀಮಣ್ಣನವರು ಗೋವುಗಳನ್ನು ಸಾಕುವ ಕಾಯಕದವರು. ಗೋಮಾಳಿಗರು. ಹಾಲು ಕರೆದು ಮಾರಿ ಅದರಿಂದ ಬಂದಂತಹ ಧನದಿಂದ ದಾಸೊಹವನ್ನ ನಡೆಸುತ್ತಿದ್ದರು. ಪಶುಪಾಲನೆ ವೃತ್ತಿಯನ್ನ ತನ್ನ ಬದುಕಿನ ಮುಖ್ಯ ಮಣಿಹವನ್ನಾಗಿ ಮಾಡಿಕೊಂಡಂತಹ ಭೀಮಣ್ಣನವರು “ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗ” ಎಂಬ ಅಂಕಿತದಿಂದ ವಚನಗಳನ್ನು ರಚಿಸಿದ್ದಾರೆ.

ನಮಗೆ ದೊರೆತ ಅವರ 10 ವಚನಗಳಲ್ಲಿ ಪಶು ಸಂಗೋಪನೆಯ ವೃತ್ತಿಗೆ ಸಂಬಂಧಿಸಿದಂತಹ ವಿವರಗಳಿವೆ. ಕೀಲಾರದ ಭಿಮಣ್ಣನವರ ಕಾಲ ನಮಗೆ ಸರಿಯಾಗಿ ತಿಳಿದು ಬಂದಿಲ್ಲ. ಏಕೆಂದರೆ ಅವರ 10 ವಚನಗಳಲ್ಲೂ ಯಾವುದೇ ಶರಣರ ಉಲ್ಲೇಖಗಳು ಸಿಗುವುದಿಲ್ಲ. ಆದರೆ ಅವರ ಅಂಕಿತನಾಮವಾದ “ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗ” ಎಂಬುದರಿಂದ ತಿಳಿದುಬರುವುದೇನೆಂದರೆ ಕಾಲಕರ್ಮವಿರಹಿತ ಅಂದರೆ ಕಾಲದ ಮತ್ತು ಕರ್ಮದ ಬಂಧನವಿಲ್ಲದಂತಹ ಸ್ಥಿತಿ. ಶರಣರು ಲೌತಿಕ ಪರಿಮಿತಿಗಳನ್ನ ಮೀರಿದಾಗ ತಲುಪುವ ಅತ್ಯುನ್ನತ ಜ್ಞಾನದ ಸ್ಥಿತಿ ಅಥವಾ ಲಿಂಗಾಂಗ ಸಾಮರಸ್ಯದ ಸ್ಥಿತಿಯನ್ನು ವರ್ಣಿಸುತ್ತದೆ. ಜನನ, ಮರಣ ಮತ್ತು ಕರ್ಮಫಲಗಳಿಂದ ಮುಕ್ತರಾದವರು ಅಂತಿಮ ಸತ್ಯವಾದ ಲಿಂಗಾಂಗ ಸಾಮರಸ್ಯದ ಸ್ಥಿತಿಯನ್ನು ತಲುಪುತ್ತಾರೆ. ಇದು ಆತ್ಮಸಾಕ್ಷಾತ್ಕಾರ ಮತ್ತು ಅಹಂಕಾರರಹಿತ ಸ್ಥಿತಿಯನ್ನು ಕೂಡ ತಿಳಿಸುತ್ತದೆ.

ಕೀಲಾರದ ಭೀಮಣ್ಣನವರ ಕಾಲಘಟ್ಟ ಯಾವುದೆಂದು ಉಲ್ಲೇಖ ದೊರೆಯದಿದ್ದರೂ ಕೂಡ ವಚನ ರಚನೆಯ ಬೆಡಗಿನ ಭಾಷೆ ವಚನಗಳಲ್ಲಿ ಕಂಡುಬರುವ ತತ್ವ ಸಿದ್ಧಾಂತಗಳನ್ನ ಗಮನಿಸಿದರೆ ಕಿಲಾರದ ಭೀಮಣ್ಣನವರು 12 ನೇ ಶತಮಾನದ ಕಾಲಘಟ್ಟದ ಶರಣರು ಎಂದು ಭಾವಿಸಬಹುದು. ವಚನಾಂಕಿತದಲ್ಲಿರುವ ತ್ರಿಪುರಾಂತಕ ಎಂಬ ಶಬ್ದ ಕಲ್ಯಾಣದಲ್ಲಿರುವ ತ್ರಿಪುರಾಂತಕ ಕೆರೆಯನ್ನು ಮತ್ತು ತ್ರಿಪುರಾಂತಕ ದೇವಸ್ಥಾನವನ್ನು ಸೂಚಿಸುವುದರಿಂದ ಕೀಲಾರದ ಭೀಮಣ್ಣನವರು ಕಲ್ಯಾಣದಲ್ಲಿ ಬಸವಾದಿ ಶರಣರಲ್ಲಿ ಗುರುತಿಸಿಕೊಂಡು 770 ಅಮರ ಗಣಂಗಳಲ್ಲಿ ಒಬ್ಬರಾಗಿದ್ದರು ಎಂಬುದು ಗಮನಾರ್ಹ.

ನಿರ್ವಚನ:
ಈ ವಚನ ಮೇಲ್ನೋಟಕ್ಕೆ ಪಶು ಸಂಗೋಪನೆಯ ಬಗೆಗಿನ ವಚನ ಅಂತ ಅನ್ಸಿದ್ರೂ ಹಸುಗಳು ಬೇರೆ ಬೇರೆ ಬಣ್ಣದವುಗಳಾಗಿದ್ರು ಕೂಡ ಅವುಗಳ ಹಾಲು ಒಂದೇ ವರ್ಣದ್ದಾಗಿರುತ್ತದೆ. ಅದೇ ರೀತಿ ಮನುಷ್ಯರ ಜಾತಿ ಮತಗಳು ಬೇರೆ ಬೇರೆ ಆಗಿದ್ದರೂ ಕೂಡ ಆತ್ಮವೊಂದೆ. ಅಂತಿಮವಾಗಿ ಜ್ಞಾನ ಅಥವಾ ಅರಿವಿನ ಹಾದಿಯಲ್ಲಿ ಎಲ್ಲರೂ ಒಂದಾಗುತ್ತಾರೆ ಎಂಬ ತತ್ವವನ್ನು ಈ ವಚನ ತಿಳಿಸುತ್ತದೆ.

ದನ ಕಾಯುವವರು ಅಂದ್ರೆ ಸಾಮಾನ್ಯವಾಗಿ ಕೆಲಸಕ್ಕೆ ಬಾರದ ಅಜ್ಞಾನಿಗಳಿಂದೆ ತಿಳಿದು ಅವರನ್ನ ಹಿಯಾಳಿಸಿ ನೋಡಲಾಗುತ್ತದೆ. ಆದರೆ ಬಸವಾದಿ ಶರಣರು ಕಾಯಕಕ್ಕೆ ಮಹತ್ವವನ್ನು ನೀಡಿ ಎಲ್ಲರನ್ನ ಶ್ರೇಷ್ಠ ಅನುಭಾವಿಗಳನ್ನಾಗಿ, ಶರಣರನ್ನಾಗಿ ಮತ್ತು ವಚನಕಾರರನ್ನಾಗಿ ರೂಪಿಸಿದರು. ಈ ಹಿನ್ನಲೆಯಲ್ಲಿ ಕೀಲಾರದ ಭೀಮಣ್ಣನವರ ಅನುಭಾವಿಕ ನೆಲೆಯ ಸಾಧನೆಗೆ ಈ ವಚನ ಕನ್ನಡಿ ಹಿಡಿಯುತ್ತದೆ.

ನಾನಾ ವರ್ಣದ ಗೋವುಗಳೆಲ್ಲವೂ ಕೂಡಿ
ಒಂದೇ ಹೊಲದಲ್ಲಿ ಮೇದು,
ಆರು ಕೆರೆಯ ನೀರ ಕುಡಿದು,
ಒಂದೇ ದಾರಿಯಲ್ಲಿ ಬಂದು,
ಮೂರು ಕೊಟ್ಟಿಗೆಯ ಗೊತ್ತಿಂಗೊಳಗಾದುವು.

ಮೊದಲ 7 ಸಾಲುಗಳಲ್ಲಿ ಕಂಡು ಬರುವುದೇನಂದ್ರೆ ನಾನಾ ವರ್ಣಗಳ ಗೋವುಗಳು ಕೂಡಿ ಜ್ಞಾನೇಂದ್ರಿಯಗಳು, ಕರ್ಮೆಂದ್ರಿಯಗಳು ಎಂಬ ವಿವಿಧ ವರ್ಣದ ಗೋವುಗಳು ತನು, ಅಂಗ ಅಥವಾ ಶರೀರವೆಂಬ ಒಂದೇ ಹೊಲದಲ್ಲಿ ಮೇಯ್ದು ಷಟಸ್ಥಲವೆಂಬ 6 ಕೆರೆಯ ನೀರನ್ನು ಕುಡಿದು (ಅರಿತು) ಅಥವಾ ಅರಿಷಡ್ವರ್ಗಗಳನ್ನ ಗೆದ್ದು ಇಷ್ಟ ಲಿಂಗದ ಅರಿವಿನ ಸದ್ಭಕ್ತಿಯ ದಾರಿಯಲ್ಲಿ ಹಾಯ್ದು ತನು (ಇಷ್ಟಲಿಂಗ) ಮನ (ಕಾರಣಲಿಂಗ) ಪ್ರಾಣಗಳೆಂಬ (ಭಾವಲಿಂಗ) ಎಂಬ 3 ಕೊಟ್ಟಿಗೆಗಳಲ್ಲಿ ನೆಲೆಯಾದವು ಎಂಬುದನ್ನ ಈ ವಚನದಲ್ಲಿ ಅನುಭಾವಿಕ ನೆಲೆಯ ಪರಿಭಾಷೆಯಲ್ಲಿ ಅತ್ಯಂತ ಸುಂದರವಾಗಿ ಬಿಚ್ಚಿಡುತ್ತದೆ.

ಇನ್ನು ಮುಂದಿನ ಸಾಲುಗಳನ್ನು ನೋಡಿದಾಗ

ಬಿಟ್ಟು ಕರೆಯಲಾಗಿ ಗೋವಿಂಗೆ ಹಲವು,
ಹಾಲಿಗೆ ಏಕವರ್ಣ.

ಮುಂದಿನ 2 ಸಾಲುಗಳು ಹಾಲನ್ನ ಹಿಂಡುವ ಮೊದಲು ಅವುಗಳ ಕಂದಮ್ಮಗಳಾದ ಕರುಗಳನ್ನ ಬಿಟ್ಟು ನಂತರ ಹಾಲನ್ನು ಹಿಂಡಿದಾಗ ಎಲ್ಲಾ ಹಾಲಿಗೂ ಒಂದೇ ಬಣ್ಣ. ಅದೇ ರೀತಿ ಜ್ಞಾನದ ಅರಿವನ್ನು ತಿಳಿಯುವ ಮಾರ್ಗಗಳು ಬೇರೆ ಬೇರೆ ಆದರೂ ಕೊನೆಯಲ್ಲಿ ಅರಿವ ಜ್ಞಾನ ಒಂದೇ ಎಂದು ಈ ಸಾಲಿನ ತಾತ್ಪರ್ಯ.

ಈ ಸಾಲುಗಳನ್ನ ಇನ್ನೊಂದು ಬಗೆಯಲ್ಲೂ ನೋಡಬಹುದು. ಸೃಷ್ಟಿಯಲ್ಲಿರುವ ವಿವಿಧ ಜಾತಿ ಪಂಥಗಳ ಮನುಜರು ಅಥವಾ ಜೀವಿಗಳು ನಾನಾ ವರ್ಣದ ಗೋವುಗಳನ್ನ ಸೂಚಿಸಿದ್ರೆ ಒಂದೇ ಹೊಲದಲ್ಲಿ ಮೇಯ್ದು ಅಂದ್ರೆ ಎಲ್ಲರೂ ಒಂದೇ ಭೂಮಿಯ ಮೇಲೆ ಬಾಳಿ ಬದುಕುತ್ತಾರೆ. ಆರು ಕೆರೆಗೆ ನೀರು ಕುಡಿದೆ ಅಂದರೆ ಭಿನ್ನ-ಭಿನ್ನ ಜೀವನ ಅನುಭವಗಳನ್ನು ಕರ್ಮಗಳನ್ನ ಅನುಭವಿಸಿದ್ರೂ ಅಂತಿಮವಾಗಿ ಎಲ್ಲರ ಆತ್ಮವು ಒಂದೇ ಆಗಿರುತ್ತದೆ ಶರಣರ ಇರುವಿಕೆ ಮತ್ತು ಅರಿವು ಎಲ್ಲರಲ್ಲೂ ಒಂದೇ ಇರುತ್ತದೆ.

ಹಾಲ ತಂದು ಭಾಜನದಲ್ಲಿ ನೀಡಿ ಕಾಸುವಲ್ಲಿ
ಚಟ್ಟಿ ಹತ್ತದೆ, ಹಸುಕು ನಾರದೆ,
ಕೌರು ಏಳದೆ, ನೀರ ರಸ ತಪ್ಪಿ ಮಧುರ ರಸ ತುಂಬಿ
ಕಾಸಿ ಉಣಬಲ್ಲಡೆ ಆತನೆ ಭೋಗಿ.

4  ಸಾಲುಗಳಲ್ಲಿ ಹಿಂಡಿದಂತಹ ಶುದ್ಧ ಹಾಲನ್ನು ಭಾಜನ ಅಂದರೆ ಪಾತ್ರೆಯಲ್ಲಿ ಹಾಕಿ ತಳ ಹತ್ತದಂತೆ, ಸುಟ್ಟು ಹೋಗದಂತೆ, ಹೊಗೆ ವಾಸನೆ ಹತ್ತದಂತೆ ನಿಧಾನವಾಗಿ ಕಾಯಿಸಿದಾಗ ನೀರಿನ ಪಸೆ ಆರಿ, ಮಧುರವಾದ ಹಾಲಿನ ರುಚಿ ಬಂದಾಗ ಅದನ್ನು ಉಣ್ಣುವವನೇ ಭೋಗಿ ಎನ್ನುವ ಮೇಲ್ನೋಟದ ಅರ್ಥ ಕಂಡರೂ ಕೂಡ ಆಧ್ಯಾತ್ಮದ ನೆಲೆಯಲ್ಲಿ ನೋಡಿದಾಗ ಅನುಭಾವದ ಅನುಭೂತಿಯ ಜ್ಞಾನಸುಧೆಯನ್ನು ಅರಿವಿನ ಪಾತ್ರೆಯಲ್ಲಿ ಹಾಕಿ ಧ್ಯಾನಸ್ಥ ಮನದಿಂದ ಕಾಯಿಸಿದಾಗ ಅದು ಸುಟ್ಟು ಹೋಗದೆ, ತಳ ಹಿಡಿದು ನಾರದೆ, ಉಕ್ಕಿ ಹರಿಯದೆ, ಅದರ ಲೌಕಿಕದ ನೀರು ಆರಿಹೋಗಿ ಉಳಿದಂತಹ ಆಲೌಕಿದ ಚಿನ್ಮಯ ಚಿತ್ರಸವನ್ನು ಉಣ್ಣುವವನೆ‌ ಭೋಗಿ ಎನ್ನುತ್ತದೆ ಈ ವಚನದ ಸಾರಾಂಶ.

ಇನ್ನೂ ಈ ವಚನದ ಕೊನೆಯ ಸಾಲುಗಳನ್ನು ನೋಡಿದಾಗ

ಆತ ನಿರತಿಶಯಾನುಭಾವ ಶುದ್ಧಾತ್ಮನು,
ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗ ತಾನೆ.

ಇಲ್ಲಿ ಆಧ್ಯಾತ್ಮಿಕ ಅರಿವಿನಿಂದ ಉಪಲಬ್ದವಾದ ಚಿನ್ಮಯ ಚಿದಾನಂದದ ಚಿದ್ರಸವನ್ನು ತೂರ್ಯವಸ್ಥೆಯಲ್ಲಿದ್ದು ಅದನ್ನು ಉಣ್ಣಬಲ್ಲವನೆ ಶುದ್ಧಾತ್ಮನು. ಆತ ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗ ಅಲ್ಲವೇ? ಎಂದು ಪ್ರಶ್ನಿಸುತ್ತಾರೆ ಕೀಲಾರದ ಭೀಮಣ್ಣನವರು.

ಈ ತೂರ್ಯಾವಸ್ಥೆ ಅಂದರೆ ಜಾಗೃತಿ (ಎಚ್ಚರ) ಸ್ವಪ್ನ (ಕನಸು) ಸುಷುಪ್ತಿ (ಗಾಢ ನಿದ್ರೆ) ಎಂಬ ಮೂರು ಸಾಮಾನ್ಯ ಸ್ಥಿತಿಗಳನ್ನು ಮೀರಿದ ಆತ್ಮದ ನಾಲ್ಕನೇ ಮತ್ತು ಅತ್ಯುನ್ನತ ಜಾಗೃತ ಸ್ಥಿತಿ. ಆನಂದ ಮತ್ತು ಪರಮಾತ್ಮನೊಂದಿಗೆ ಐಕ್ಯವಾಗುವ ಅನುಭವವನ್ನು ನೀಡುವ ಪರಮಶಾಂತಿಯ ಸ್ಥಿತಿ. ಈ ಸ್ಥಿತಿಯನ್ನು ಹೊಂದಿದವನೇ ನಿಜವಾದ ಶುದ್ಧಾತ್ಮನು. ವಚನಕಾರರು ಮತ್ತು ಯೋಗಿಗಳು ಅಂತರಂಗ ಮತ್ತು ಬಹಿರಂಗದಲ್ಲಿ  ಅರಿವಿನ ಪರಮಾವಧಿಯನ್ನು ತುರಿಯಾವಸ್ಥೆ ಅಂತ ವರ್ಣಿಸಿದ್ದಾರೆ.

ಕೀಲಾರದ ಭೀಮಣ್ಣನವರು ಈ ವಚನದಲ್ಲಿ ಬದುಕಿನ ಲೌಕಿಕ ಮತ್ತು ಅಲೌಕಿಕ ತತ್ವದ ಮಹತ್ವವನ್ನ ಗಂಭೀರವಾಗಿ ಘನತರವಾಗಿ ಕಟ್ಟಿಕೊಟ್ಟಿದ್ದಾರೆ.

ಶ್ರೀಮತಿ. ಅನುಪಮ ಪಾಟೀಲ,
ನಂ. 10, ದೇಸಾಯಿ ಪಾರ್ಕ್‌,
ಕುಸೂಗಲ್‌ ರಸ್ತೆ, ಕೇಶ್ವಾಪೂರ,
ಹುಬ್ಬಳ್ಳಿ – 580 023.
ಮೋ. ಸಂ. +91 9845810708.

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನಸಾಹಿತ್ಯ ಮಂದಾರ ಫೌಂಡೇಶನ್ ಸಂಚಾಲಕರನ್ನು ಸಂಪರ್ಕಿಸಬೇಕಾದ:
    * ಮೋಬೈಲ್ ನಂ. 9741 357 132
    * e-Mail ID: info@vachanamandara.in / admin@vachanamandara.in

Loading

Leave a Reply