ಶರಣ ಘಟ್ಟಿವಾಳಯ್ಯನವರ ವಚನ ನಿರ್ವಚನ | ಶ್ರೀಮತಿ. ಶಶಿಕಲಾ. ಬಿ. ಕೆ. ಬೆಂಗಳೂರು.

ನೀರೊಳಗೆ ಕಿಚ್ಚಿರ್ದು ನೆಳಲ ಸುಟ್ಟಿತ್ತು!
ನೆಳಲ ಸುಟ್ಟ ಬೂದಿಯನಿಟ್ಟು ಕೊಂಡಡೆ ಭೂಮಿ ಸತ್ತಿತ್ತು!
ಆಕಾಶ ಹೊತ್ತಿತ್ತು! ದೇವನ ದೇವತ್ವ ಕೆಟ್ಟಿತ್ತು!
ದೇವಿಯ ಒಕತನ ಮುರಿಯಿತ್ತು!
ಕೇಳಬಾರದ ಠಾವಿನಲ್ಲಿ ಕಾಣಬಾರದ ಲಿಂಗ ಮೂರ್ತಿಗೊಂಡಿರೆ
ನೋಡಬಾರದ ಪೂಜೆಯಾಯಿತ್ತು!
ಚಿಕ್ಕಯ್ಯಪ್ರಿಯ ಸಿದ್ಧಲಿಂಗಾ
ಪ್ರಭುದೇವ[ರ] ನಿಲವ ಕಂಡು ಇಲ್ಲ ಇಲ್ಲವೆನುತಿರ್ದೆನು.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-188/ವಚನ ಸಂಖ್ಯೆ-490)

ಘಟ್ಟಿವಾಳಯ್ಯ ಶರಣರು ಅನುಭವ ಮಂಟಪದ ಅನುಭಾವಿಗಳು. ಧೀರೋದಾತ್ತ ನಡೆ ನುಡಿಯ ಗಟ್ಟಿಗ ಶರಣರಿವರು. ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವೆಯವರೆಂಬುದು ಸಂಶೋಧಕರ ಅಭಿಪ್ರಾಯ. ಅಲ್ಲಿರುವ ಮಧುಕೇಶ್ವರ ದೇವಾಲಯದಲ್ಲಿ ಮದ್ದಳೆ  ಬಾರಿಸುವ ಕಾಯಕ ಕೈಗೊಂಡವರು. ಸಂಸಾರಿಗಳಾಗಿದ್ದ ಈ ಶರಣರು ಸಂತೋಷದಿದಲೆ ಸಂಸಾರ ಮಾಡಿದವರಾಗಿದ್ದವರು. ಆದರೆ ಮುಂದೆ ಮಡದಿ ಮಾಡಿದ ಕುಕೃತ್ಯದಿಂದ ಬೇಸತ್ತು ಕಲ್ಯಾಣದ ಕಡೆಗೆ ಬಂದು ಅಲ್ಲಿಯೂ ಮದ್ದಳೆ ಬಾರಿಸುವ ಹಾಗೂ ನೃತ್ಯ ಮಾಡುವ ಕಾಯಕ ಮುಂದುವರಿಸಿದವರು. ಇವರು “ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ” ಎಂಬ ಅಂಕಿತನಾಮದಲ್ಲಿ ವಚನಗಳು ರಚಿಸಿರುವರು. ಇವರ 147 ವಚನಗಳು ಲಭ್ಯವಾಗಿವೆ. ಮುಂದೆ ಇವರು ಕಲ್ಯಾಣದಲ್ಲಿಯೆ ಲಿಂಗೈಕ್ಯರಾಗುವರು. ಕಲ್ಯಾಣದ ಸಮೀಪದ ಹಂದ್ರಾಳ ಎನ್ನುವ ಹಳ್ಳಿಯಲ್ಲಿ ಇವರ ಸಮಾಧಿ ಮತ್ತು ಶಿವಯೋಗದ ಗದ್ದುಗೆ ಕಾಣಬಹುದು.

ನಿರ್ವಚನ:
ಪ್ರಸ್ತುತ ಈ ವಚನ ಶರಣ ಘಟ್ಟಿವಾಳಯ್ಯನವರ ಐಕ್ಯಸ್ಥಲದ ವಚನ. ಭಕ್ತಸ್ಥಲದ ಮುಖಾಂತರ ಸಾಧನೆಗೈಯುತ್ತಾ ಹೊರಟ ಸಾಧಕನೊಳಗೆ ನಡೆಯುವ ಪ್ರಕ್ರಿಯೆಗಳನ್ನೆಲ್ಲಾ ಈ ವಚನ ತಿಳಿಸಿ ಕೊಡುವದು. ಮನಸ್ಸು ಚಂಚಲವಾದುದು. ಸಾಧಕನ ಅಂತರಂಗದಲ್ಲಿ ನಾನಾ ಬಗೆಯಲ್ಲಿ ಕಾಡುತ್ತಲೇ  ಹೋಗುವದು. ಆದರೆ ಶರಣನಾದವನು ತನ್ನ ಸಾಧನೆಯೊಳಗೆ ಮುಂದುವರಿಯುವ ಮೂಲಕ ಆ ಚಂಚಲತೆಯನ್ನು ಸುಟ್ಟು ಭಸ್ಮಗೊಳಿಸುವನು. ನೆಳಲಿನಂತಿರುವ ಅಜ್ಞಾನ ಅದರಿಂದ ಅಳಿದು ಹೋಯಿತೆನ್ನುತ್ತಾರೆ ಶರಣ ಘಟ್ಟಿವಾಳಯ್ಯನವರು. ಹೀಗೆ ಆದಾಗಲೇ ಮಾತ್ರ ನನ್ನವು ನನ್ನವು ಎಂದು ಕಾಡುವ ಹೆಣ್ಣು, ಹೊನ್ನು, ಮಣ್ಣಿನ ದಾಹಗಳೆಲ್ಲ ತಮ್ಮಷ್ಟಕ್ಕೆ ತಾವೇ ದೂರವಾಗುವವು. ಅಹಂಕಾರ ಅಳಿಯುವದು, ಆರುಚಕ್ರಗಳೆಲ್ಲಾ ಸ್ಪುರಣಗೊಂಡು ಆತ್ಮದ ಅರಿವಿನಲ್ಲಿ ಸಾಧಕ ಲಿಂಗಾಂಗ ಸಾಮರಸ್ಯ ಹೊಂದುವನು.

ಈ ವಚನವನ್ನು ಇನ್ನೂ ಸೂಕ್ಷ್ಮವಾಗಿ ಗಮನಿಸಿದಾಗ ಇಷ್ಟಲಿಂಗ ಸಾಧನೆಯಿಂದ ಗೈದ ಲಿಂಗಾಂಗ ಸಾಮರಸ್ಯ ಇಲ್ಲಿ ನೋಡಬಹುದಾಗಿದೆ. ತನ್ನೊಳಗಿನ ಅರಿವನ್ನೆ ತಾನು ಲಿಂಗದ ಮೂಲಕ ಪಡೆದುಕೊಂಡು ತಾನೇ ಪರಂಜ್ಯೋತಿಯಾದ ಬಗೆಯು ಇಲ್ಲಿ ಧ್ವನಿಸುತ್ತದೆ. ಎರಡಳಿದು ಒಂದಾಗಿ ಮುಂದೆ ಆ ಒಂದೂ ಇಲ್ಲ ಏನೂ ಇಲ್ಲ ಎಂಬ ಅರಿವಿನ ನುಡಿಯರ್ಥವನ್ನು ಇಲ್ಲಿ ಕಾಣುತ್ತೇವೆ. ಅಂತಹ ಕಾಣಬಾರದ ಘನವಸ್ತು ಮನಸ್ಸಿಗೆ ಬುದ್ದಿಗೆ ಗೋಚರವಾಗುವದಿಲ್ಲ ಎನ್ನುವರು. ನಿರಪಾಧಿಕ ನಿರ್ಮಲ ಲಿಂಗವು ಅದು ಅಂತರಂಗದ ಅರಿವಿನಲ್ಲಿದೆ. ಭಾವದಲ್ಲಿದ್ದು ಭಾವಲಿಂಗವಾಗಿ ನಿತ್ಯ ಪರಿಪೂರ್ಣ ಆನಂದವಾಗಿದೆ ಎನ್ನುತ್ತಾರೆ, ಆ ನಿತ್ಯ ಪರಿಪೂರ್ಣ ಆನಂದ ಸ್ಥಿತಿಯಲ್ಲಿರುವ ವ್ಯೋಮಕಾಯ ಮೂರ್ತಿ ಅಲ್ಲಮ ಪ್ರಭುದೇವರ ನಿಲುವಿಗೆ ಗಾಬರಿಯಾಗಿರುವೆ ಎನ್ನುತ್ತ, ಆದರೂ ಅನೇಕರು ಆ ನಿಲುವಿನ ಸನ್ನಿಧಾನದಲ್ಲಿದ್ದು ಪ್ರಜ್ಞಾಹೀನರಾಗಿದ್ದಾರಲ್ಲ ಎಂಬ ಖೇದ ವ್ಯಕ್ತ ಪಡಿಸುತ್ತ ಆ ಪ್ರಜ್ಞೆ ಇವರಿಗೆ ಇಲ್ಲ ಇಲ್ಲ ಎಂದು ಸಾರುತ್ತಾರೆ.

ಹೀಗೆ ಈ ವಚನವು ಒಂದೆಡೆ ಇಷ್ಟಲಿಂಗ ಹಿಡಿದು ಮಹಾಲಿಂಗವಾದ ಅಲ್ಲಮ ಪ್ರಭುದೇವರ ವ್ಯಕ್ತಿತ್ವವನ್ನು ಸಾರುವುದರೊಂದಿಗೆ ಮನಸ್ಸು ಮಾಡಿದರೆ ಆ ನಿಲುವಿಗೆ ಏರಬಹುದು ಎಂಬ ಅರ್ಥ ನೀಡುತ್ತ ಘಟ್ಟಿವಾಳಯ್ಯ ಶರಣರು ಸಹ ಅಂತೆಯೇ ಬಾಳಿ ಬದುಕಿ ನಮಗೆಲ್ಲರಿಗೂ ಆದರ್ಶವಾಗಿದ್ದಾರೆ.

ಶ್ರೀಮತಿ. ಶಶಿಕಲಾ ಬಿ. ಕೆ.
ಶರಣ ತತ್ವ ಚಿಂತಕರು,
ಬೆಂಗಳೂರು.
ಮೋಬೈಲ್‌ ಸಂ. 99019 37178.

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನಸಾಹಿತ್ಯ ಮಂದಾರ ಫೌಂಡೇಶನ್ ದ ಸಂಚಾಲಕರನ್ನು ಸಂಪರ್ಕಿಸಬೇಕಾದ
    • ಮೋಬೈಲ್ ನಂ. 9741 357 132
    • e-Mail ID: info@vachanamandara.in / admin@vachanamandara.in

Loading

Leave a Reply