ಶರಣ ಢಕ್ಕೆಯ ಬೊಮ್ಮಣ್ಣನವರ ವಚನ – ನಿರ್ವಚನ | ಶ್ರೀಮತಿ. ಅರುಣಾ ಬಾವಿ, ಕಲಬುರಗಿ.

ಸತಿಯ ಗುಣವ ಪತಿ ನೋಡಬೇಕಲ್ಲದೆ
ಪತಿಯ ಗುಣವ ಸತಿ ನೋಡಬಹುದೆ ಎಂಬರು.
ಸತಿಯಿಂದ ಬಂದ ಸೋಂಕು ಪತಿಗೆ ಕೇಡಲ್ಲವೆ?
ಪತಿಯಿಂದ ಬಂದ ಸೋಂಕು ಸತಿಯ ಕೇಡಲ್ಲವೆ?
ಒಂದಂಗದ ಕಣ್ಣು ಉಭಯದಲ್ಲಿ ಒಂದು ಹಿಂಗಲಿಕ್ಕೆ
ಭಂಗವಾರಿಗೆಂಬುದ ತಿಳಿದಲ್ಲಿಯೆ
ಕಾಲಾಂತಕ ಬ್ಥೀಮೇಶ್ವರಲಿಂಗಕ್ಕೆ ಸಲೆ ಸಂದಿತ್ತು.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-331/ವಚನ ಸಂಖ್ಯೆ-976)

ಶರಣ ಢಕ್ಕೆಯ ಬೊಮ್ಮಣ್ಣನವರು ಅನುಭವಮಂಟಪದ ಶರಣರೊಳಗೆ ಒಬ್ಬರಾಗಿರುವರು. ಇವರ ಸ್ವ-ವಿವರಗಳಾವವು ಲಭ್ಯವಿಲ್ಲ, ಇವರ ಕಾಯಕ ಜನಪದ ವೇಷಭೂಷಣಗಳನ್ನು ಧರಿಸಿ ಧರ್ಮ, ತತ್ವ, ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳನ್ನು ಬಿತ್ತರಿಸುವದರೊಂದಿಗೆ ಜನರಿಗೆ ಅರಿವಿನ ದಾಸೋಹವನ್ನು ಮಾಡಿ ಜ್ಞಾನಿಗಳನ್ನಾಗಿಸುವದಾಗಿತ್ತು. “ಕಾಲಾಂತಕ ಭೀಮೇಶ್ವಲಿಂಗ” ಎನ್ನುವ ವಚನಾಂಕಿತದಿಂದ ಬರೆದ ಇವರ 90 ವಚನಗಳು ಇಲ್ಲಿಯವರೆಗೆ ಲಭ್ಯವಾಗಿವೆ. ಈ 90 ವಚನಗಳು ನಡೆ-ನುಡಿ ತತ್ವ ಸಿದ್ಧಾಂತಗಳನ್ನು ತಿಳಿಸುವಲ್ಲಿ ಶ್ರೇಷ್ಠತೆಯಲ್ಲಿ ಜ್ಯೇಷ್ಠತೆಯನ್ನು ನಿರೂಪಣೆ ಮಾಡುತ್ತವೆ. ಈ ಮೂಲಕ ಇವರು ಸಾಧಿಸಿದ ಅರಿವಿನ ಪ್ರಜ್ಞೆಗೆ ಸಾಕ್ಷಿಯಾಗಿವೆ.

ವಚನ ನಿರ್ವಚನ:
ಈ ವಚನವು ಅಂದು ಬಸವಾದಿ ಪ್ರಮಥರು ಸಾಧಿಸಿದ ಲಿಂಗ ಸಮಾನತೆಯ ತತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ಜೊತೆಗೆ ಆಧ್ಯಾತ್ಮಿಕ ಶಕ್ತಿತ್ವ ಇದರಲ್ಲಿದೆ. ಶರಣಸತಿ-ಲಿಂಗಪತಿ ತತ್ವದ ಅರ್ಥ ಒಳಗೊಂಡಿದೆ. ಜಾತಿ, ಮತ, ಪಂಥ, ಲಿಂಗ ಸಮಾನತೆಗೈಯುವ ಮೂಲಕ ಎಲ್ಲರೊಳಗೆ ಅಡಗಿರುವ ಪ್ರತಿಭೆಯನ್ನು ತೋರಿಸಿಕೊಟ್ಟರು. ಲಿಂಗ ಸಮಾನತೆಯ ಮುಖಾಂತರ ಎಲ್ಲ ಶ್ರೇಣೀಕೃತ ಸಮಾಜದಲ್ಲಿ ಶೋಷಣೆಗಳಿಗೊಳಗಾದ ಸ್ತ್ರೀಯರ ಅರಿವಿನ ಸಬಲೀಕರಣಗೈದರು. ಮೌಲಿಕ ಹಾಗೂ ದಿಟ್ಟತನದಿಂದ ಪ್ರಶ್ನೆ ಹಾಕುವುದರ ಮೂಲಕ ಢಕ್ಕೆಯ ಬೊಮ್ಮಣ್ಣ ಶರಣರು ಸ್ತ್ರೀಯರ ಪ್ರಾಮುಖ್ಯತೆ ಎತ್ತಿ ಹಿಡಿಯುವರು.

ಮೊದಲನೇಯ ಸಾಲು ಓದಿದಾಗ ಥಟ್ಟನೆ ನಮಗೆ ಗೋಚರವಾಗುವುದು ಸತಿ ಪತಿಗಳ ನಡುವೆಯಿರುವ ಭೇದಭಾವವನ್ನು ಎತ್ತಿ ತೋರಿಸುವದು ಅಂತ ಎನಿಸುತ್ತದೆ. ಅಂದರೆ ಪತಿಯ ಕೇಡು ದೌರ್ಬಲ್ಯಗಳು ಸತಿ ಒಪ್ಪಿಕೊಂಡು ನಡೆಯಬೇಕು, ಆದರೆ ಸತಿಯಿಂದ ಇಂತಹ ಅನುಚಿತ ಕಾರ್ಯಗಳು ನಡೆದಾಗ ಪತಿ ಅವಳಿಗೆ ಯಾವ ಮಟ್ಟಿಗಾದರೂ ನೋವು ಕೊಡಬಹುದು ಎನ್ನುವ ಅರ್ಥದಲ್ಲಿ ಇದನ್ನು ಅರಿಯಬಹುದು. ಆದರೆ ಇಲ್ಲಿ ಇಂತಹ ಒಂದು ಉದಾಹರಣೆ ಅಥವಾ ಒಂದು ರೂಪಕವನ್ನು ಬಳಸಿಕೊಂಡು ವಕಾರರು ಯಾರಿಗೆ ಕೇಡಾದರೂ ಅದು ಸಂಸಾರಕ್ಕೆ ಕೊಡಲಿ ಪೆಟ್ಟು ನೀಡಿ ಹದಗೆಡುವದೆಂಬ ಎಚ್ಚರಿಕೆಯನ್ನು ಕೊಡುತ್ತಾರೆ.

ಮುಂದುವರೆದು ಕಣ್ಣುಗಳ ಉಪಮೆಯ ಮೂಲಕ ಎಚ್ಚರಿಸುವುದನ್ನೂ ಸಹ ಢಕ್ಕೆಯ ಬೊಮ್ಮಣ್ಣನವರು ಈ ವಚನದಲ್ಲಿ ನಿರೂಪಣೆ ಮಾಡಿದ್ದಾರೆ. ಕಣ್ಣುಗಳು ನಮಗೆ ಅವಶ್ಯಕ ಅಂಗವಾಗಿದೆ. ಒಂದು ಕಣ್ಞಿಗೇನಾದರೂ ಹಾನಿಯಾದರೆ ಇನ್ನೊಂದು ಕಣ್ಣು ತನ್ನ ದುರ್ಬಲಾಗಿ ತನ್ನ ಶಕ್ತಿಯನ್ನು ಕಳೆದುಕೊಳ್ಳುವದು. ಹಾಗೆಯೇ ಪತಿ ಎಷ್ಟೆ ಬಲಾಢ್ಯನಾದರೂ ಸತಿಯಿಲ್ಲದೆ ನಡೆಯಲಾರದೆಂಬ ವಾಸ್ತವಿಕ ಸತ್ಯವನ್ನು ಬಿಚ್ಚಿಡುವರು. ಹೀಗಾಗಿ ಈರ್ವರೂ ಸಮರತಿ, ಸಮರಭಾವನೆಯಿಂದ ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ನಡೆಯಬೇಕೆಂದು ಢಕ್ಕೆಯ ಬೊಮ್ಮಣ್ಣ ಶರಣರು ಹೇಳುತ್ತಾರೆ.

ಸಾಧಕನ ಸಾಧನೆಗೂ ಕೂಡ ಈ ವನ ನಿದರ್ಶನವಾಗಿದೆ. ಸತಿ ಮತ್ತು ಪತಿಗಳಂತೆ ಅಂಗ ಲಿಗಗಳ ಸಂಬಧಗಳು ಕೂಡಾ ಭಕ್ತಿ, ಪ್ರೀತಿ, ಗೌರವ, ಶ್ರದ್ಧೆಗಳಿಂದ ಕೂಡಿರಬೇಕಾಗಿರುತ್ತದೆಂಬ ತಾತ್ವಿಕ ಚಿಂತನೆಯು ಈ ವಚನದಲ್ಲಿ ಇದೆ.

ಅಂಗ ಲಿಂಗದೊಳು ಸಮರಸಗೈಯುವ ಪ್ರಕ್ರಿಯೆಯು ಇದರಲ್ಲಿ ಅಡಗಿದೆ. ಅಂಗ ಬಿಟ್ಟು ಲಿಂಗವಿಲ್ಲ, ಲಿಂಬಿಟ್ಟು ಅಂಗವಿಲ್ಲ. ಇವರೆಡು ಒಂದಾಗಬೇಕಾದರೆ ಅಂಗದಿದ ಲಿಂಗಪೂಜೆ, ನಡೆಯಲೇಬೇಕಾಗುವದು. ಲಿಂಗ ಜಗದಗಲದಂತೆ ಹಿರಿದಾಗಿರಬಹುದು, ಆದರೆ ಅಂಗದ ಹೊರತು ನಡೆಯುವುದಿಲ್ಲ. ಇವೆರಡರ ಸಮರಸವೆ ಕಾಲಾಂತಕ ಭೀಮೇಶ್ವರ ಲಿಂಗಕ್ಕೆ ಸಂದಿತ್ತು ಎನ್ನುತ್ತಾರೆ ವಚನಕಾರರು.

ಶ್ರೀಮತಿ. ಅರುಣಾ ಬಾವಿ,
ಶರಣಸಾಹಿತ್ಯ ಚಿಂತಕರು,
ಗೋದೂತಾಯಿ ನಗರ,
ಕಲಬುರಗಿ.
ಮೋಬೈಲ್‌ ಸಂ. +91 94816 44068

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in

Loading

Leave a Reply