ಶರಣ ನಗೆಯ ಮಾರಿತಂದೆಯವರ ವಚನ ನಿರ್ವಚನ | ಶ್ರೀಮತಿ. ಶಾಂತಾ ಪಸ್ತಾಪೂರ, ಕಲಬುರಗಿ.

ಕಲ್ಲಿಯ ಹಾಕಿ ನೆಲ್ಲವ ತುಳಿದು
ಗುಬ್ಬಿಯ ಸಿಕ್ಕಿಸುವ ಕಳ್ಳನಂತೆ;
ವಾಗದ್ವೈತವ ಕಲಿತು
ಸಂಸ್ಕೃತದ ಮಾತಿನ ಪಸರವ ಮುಂದೆ ಇಕ್ಕಿಕೊಂಡು
ಮತ್ಸದ ವಕ್ತ್ರದಲ್ಲಿ ಗ್ರಾಸವ ಹಾಕುವನಂತೆ
ಅದೇತರ ನುಡಿ? ಮಾತಿನ ಮರೆ.
ಆತುರವೈರಿ ಮಾರೇಶ್ವರಾ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-420/ವಚನ ಸಂಖ್ಯೆ-1191)

ಭಕ್ತಿಯನ್ನು ಹಾಸ್ಯದ ಮುಖಾಂತರ ಅರುಹಿದ ಮಹಾನುಭಾವಿಗಳು ಶರಣ ನಗೆಯ ಮಾರಿತಂದೆಯವರು. ಇವರ ಜನ್ಮಸ್ಥಳ “ಹಾದರಿಗೆ” ಎಂಬುದಾಗಿಯೆಂದು ಸಂಶೋಧಕರು ಹೇಳಿದ್ದರೂ ಕೂಡ ನಿಖರವಾದ ಮಾಹಿತಿಗಳು ದೊರೆಯದೆ ಇರುವುದರಿಂದ ಕಲಬುರಗಿ ಜಿಲ್ಲೆಯ ಏಲೇರಿ ಇವರ ಜನ್ಮಸ್ಥಳವೂ ಹೌದು ಮತ್ತು ಲಿಂಗೈಕ್ಯರಾದುದು ಇಲ್ಲಿಯೇ. ಕಲ್ಯಾಣದಲ್ಲಿ ಶರಣತ್ವವನ್ನು ಸ್ವೀಕಾರ ಮಾಡಿ ಶರಣರಾಗಿ ನಗುತ್ತ, ನಗಿಸುವ ಕಾಯಕ ಕೈಗೊಂಡವರು. ಶರಣ ನಗೆಯ ಮಾರಿತಂದೆಯವರು “ಆತುರವೈರಿ ಮಾರೇಶ್ವರ” ಎನ್ನುವ ವಚನಾಂಕಿತದಿಂದ ಬರೆದ 103 ವಚನಗಳು ಇಲ್ಲಿಯವರೆಗೆ ಲಭ್ಯವಾಗಿವೆ.

ನಿರ್ವಚನ:
“ರಸಗಳು” ಎಂಬ ಪದಕ್ಕೆ ಸಂದರ್ಭಕ್ಕೆ ತಕ್ಕಂತೆ ಬೇರೆ ಬೇರೆ ಅರ್ಥಗಳಿವೆ, ಆದರೆ ಸಾಮಾನ್ಯವಾಗಿ ನಾಟಕ ಮತ್ತು ಕಾವ್ಯದಲ್ಲಿ ನವರಸಗಳು (9 ರಸಗಳು) ಇವೆ. ಭಾರತೀಯ ಕಲೆ ಮತ್ತು ಸಾಹಿತ್ಯದಲ್ಲಿ (ನವರಸಗಳು):

ಶೃಂಗಾರ: ಪ್ರೀತಿ.
ಹಾಸ್ಯ: ನಗು.
ಕರುಣ: ದುಃಖ.
ರೌದ್ರ: ಕೋಪ.
ವೀರ: ಧೈರ್ಯ.
ಭೀಭತ್ಸ: ಅಸಹ್ಯ.
ವಿಸ್ಮಯ: ಆಶ್ಚರ್ಯ.
ಭಯ: ಭಯ.
ಶಾಂತ: ಶಾಂತಿ.

ಹೀಗೆ ನವರಸಗಳಲ್ಲಿ ಒಂದಾದ ಹಾಸ್ಯರಸವೂ ಕೂಡ ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಿದೆ. ಮನುಷ್ಯನಿಗೆ ಇದು ಟಾನಿಕ್‌ದಂತೆ ಕೆಲಸ ಮಾಡುತ್ತದೆ. ಆದರೆ ಅದು ಅಪಹಾಸ್ಯ ಅಥವಾ ಕೆಟ್ಟಹಾಸ್ಯ ಆಗಬಾರದು. ಒಂದು ವೇಳೆ ಆದರೆ ಮಹಾಭಾರತವೇ ನಡೆದು ಹೋಗುತ್ತದೆ. ಅದಕ್ಕಾಗಿ ಅರಿತವನಿಗೆ ಈ ಜೀವನ ಆನಂದಮಯ. ಇನ್ನೊಬ್ಬರೂ ಕೂಡ ಹಾಗೆಯೇ ಬಾಳಬೇಕೆಂಬ ಇಚ್ಛೆಯಿಸಿ ನಡೆಯುತ್ತಾರೆ.

ಆಧ್ಯಾತ್ಮವನ್ನು ಕಠಿಣಗೊಳಿಸದೆ ಅದನ್ನು ಸರಳಗೊಳಿಸಿ ಎಲ್ಲರೂ ಅನುಸರಿಸುವಂತೆ ಮಾಡಿದ ಶ್ರೇಯಸ್ಸು ಬಸವಾದಿ ಪ್ರಮಥರಿಗೆ ಸಲ್ಲುತ್ತದೆ. ಅವರ ಭಕ್ತಿಯು ಪರಶಿವನೊಂದಿಗೆ ನಗುವಿನ (ಸಂತೋಷ) ಮೂಲಕ ಕೈಗೊಂಡದ್ದಾಗಿದೆ. ಈ ಶರಣರು ಇದಕ್ಕೆ ನಿದರ್ಶನ. ಹಾಸ್ಯದ ಮೂಲಕವೇ ಜೀವನದ ಮಹಾತತ್ವ ನಿರೂಪಿಸಿರುವರು. ಈ ವಚನದ ಮೂಲಕ ಶರಣ ನಗೆಯ ಮಾರಿತಂದೆಯವರು ಜೀವನ ಎನ್ನುವುದು ಇನ್ನೊಬ್ಬರಿಗೆ ಮೋಸ, ವಂಚನೆ ಮಾಡುವುದಕ್ಕಲ್ಲ ಎಂಬ ಸತ್ಯವನ್ನು ಅರುಹುತ್ತಾರೆ.

ಮೂಕ ಸಂಕುಲಕ್ಕೆ ಅಂದರೆ ಹಕ್ಕಿಗಳಿಗೆ ತಿನ್ನಲು ಕಾಳು ಕಡ್ಡಿ ಹಾಕಿ ಅವು ಆಸೆಯಿಂದ ತಿನ್ನಲು ಬಂದಾಗ ಅವುಗಳ ಕಡೆ ಬಲೆ ಬೀಸಿ ಸೆರೆ ಹಿಡಿದು ಕೊಂದು ತಿನ್ನುವ ಬೇಡನಂಥ ಮುಗ್ಧ ಜನರನ್ನು ಮಾತಿನ ಮೂಲಕ ಸೆಳೆದು ಇಲ್ಲದ ಆಸೆಗಳನ್ನು ಹುಟ್ಟಿಸಿ ಅವರಿಂದ ದುಡ್ಡು ಸೆಳೆಯುವ, ಮೌಢ್ಯತೆಗಳನ್ನು ಚೀಟಿ ಚಪಾಟೆ ಹಾಕಿ ಮೋಸ ಮಾಡುವ ಪಂಚಾಂಗ ಭವಿಷ್ಯ ಹೇಳುತ್ತ ಜನರೊಳು ಭಯ ಹುಟ್ಟಿಸುವ ಕುಮನುಜರನ್ನು ಶರಣ ನಗೆಯ ಮಾರಿತಂದೆಯವರು ಈ ವಚನದ ಮೂಲಕ ಎಚ್ಚರಿಸುವರು.

ಮುಂದುವರಿದು ಸರಳ, ಸುಂದರ ಕನ್ನಡ ಭಾಷೆ ಬಿಟ್ಟು ಸಂಸ್ಕೃತ ಭಾಷೆಯ ಮುಖಾಂತರ ಮಂತ್ರ ಪಠಿಸುತ್ತಾ ಇಲ್ಲದ್ದೊಂದು ಕಲ್ಪಿಸಿಕೊಂಡು ಜನರ ಜ್ಞಾನಕ್ಕೆ ಪೆಟ್ಟು ಕೊಡುವ ಪ್ರಯತ್ನ ಮಾಡುವುದು ಸರಿಯಲ್ಲ ಎಂಬುದು ಅವರ ಅನುಭವದ ನುಡಿ. ಇಂತಹ ಜನರು ಅಂದು ಇದ್ದರು, ಇಂದು ಇರುವರು, ಮುಂದೆಯೂ ಇರುವವರೇ! ಇವರ ಈ ನಡೆ-ನುಡಿ ಎರಡೂ ಶರಣರಿಗೆ ಬೇಡವೇ ಬೇಡ. ಆದ್ದರಿಂದ ಮಾನವ ದುಡ್ಡು, ವೇಳೆ ಕಳೆದುಕೊಳ್ಳುವನು ವಿನಃ ಸತ್ಯದ ನಿಲುವು ಅರಿಯುವುದಿಲ್ಲ. ಸತ್ಯತೆ ಎನ್ನುವುದು ಸುಲಭವಾಗಿ ದೊರಕುವಂಥದ್ದಲ್ಲ. ಅದು ಪಂಚಾಂಗ, ತಾಯಿತ, ಚೀಟಿಗಳಲ್ಲಿ ಕುಳಿತಿರುವುದಿಲ್ಲ. ಅದನ್ನು ಪಡೆಯಬೇಕಾದರೆ ಮೊದಲು ಅರಿಷಡ್ವರ್ಗ ಅಳಿದುಕೊಂಡು ಮಾನವೀಯತೆ ಬೆಳೆಸಿಕೊಂಡು ಇಷ್ಟಲಿಂಗದ ಮುಖಾಂತರ ನಿರಂತರ ಸಾಧನೆಗೈಯಬೇಕಾಗುವುದು. ಆಗ ಮಾತ್ರ ಸತ್ಯ ಯಾವುದು ಎಂಬುದರ ಪ್ರಖರತೆ ನಮಗೆ ಗೊತ್ತಾಗುವುದು.

ಎಲ್ಲ ಕಾಲದಲ್ಲಿ ಎಲ್ಲರಿಗೂ ಮೋಸ ಮಾಡಲು ಬರುವುದಿಲ್ಲ. ಏಕೆಂದರೆ ಎಲ್ಲದಕ್ಕೂ ಸಮಯ ಎಂಬುದಿದೆ. ಅದು ಬರಲೇಬೇಕು. ಅಂತಹ ಸಂದರ್ಭಗಳಲ್ಲಿ ಸತ್ಯ ಯಾವುದು ಸುಳ್ಳು ಯಾವುದು ಎಂಬುದು ನಮಗೆ ಗೊತ್ತಗುವುದು. ಅದಕ್ಕಾಗಿಯೇ ಹೇಳುತ್ತಾರೆ “ಶಿವಶರಣರೆಂಬ ಗಾಳಿ ಬಿಟ್ಟಾಗ ತೂರಿಕೊಳ್ಳಿರೆಂದು”. ಏಕೆಂದರೆ ಯಾರಿಗೂ ಮೋಸ ವಂಚನೆಗೈಯ್ದೆ ತಮ್ಮ ಕಾಯಕ, ದಾಸೋಹಗಳ ಮೂಲಕ ಶರಣರು ಸತ್ಯವಂತರಾಗಿ ಬಾಳಿದವರು.

ಆದ್ದರಿಂದ ಶರಣ ನಗೆಯ ಮಾರಿತಂದೆಯವರು ಬೇಡನಂತೆ ಬದುಕುವುದು ಬೇಡ. ಮಾನವೀಯತೆಯನ್ನು ಅಳವಡಿಸಿಕೊಂಡು ತಾನು ಬದುಕಬೇಕು ಹಾಗೂ ಇನ್ನೊಬ್ಬರು ಬದುಕುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂಬ ಸತ್ಯವನ್ನು ಈ ಮೇಲಿನ ವಚನದ ಮುಖಾಂತರ ಅರುಹುತ್ತಾರೆ.

ಶ್ರೀಮತಿ. ಶಾಂತಾ ಪಸ್ತಾಪೂರ,
ಸಾಹಿತಿಗಳು,
ಗೋದೂತಾಯಿ ನಗರ,
ಕಲಬುರಗಿ.
ಮೋಬೈಲ್‌ ಸಂ. 94489 30815

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನಸಾಹಿತ್ಯ ಮಂದಾರ ಫೌಂಡೇಶನ್‌ (ರಿ) ದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in

Loading

Leave a Reply