
ಆನೆ ಕುದುರೆ ಭಂಡಾರವಿರ್ದಡೇನೊ?
ತಾನುಂಬುದು ಪಡಿಯಕ್ಕಿ, ಒಂದಾವಿನ ಹಾಲು, ಮಲಗುವುದರ್ಧ ಮಂಚ.
ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ.
ಒಡಲು ಭೂಮಿಯ ಸಂಗ, ಒಡವೆ ತಾನೇನಪ್ಪುದೊ?
ಕೈವಿಡಿದ ಮಡದಿ ಪರರ ಸಂಗ, ಪ್ರಾಣ ವಾಯುವಿನ ಸಂಗ.
ಸಾವಿಂಗೆ ಸಂಗಡವಾರೂ ಇಲ್ಲ ಕಾಣಾ,
ನಿಃಕಳಂಕ ಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-560/ವಚನ ಸಂಖ್ಯೆ-1504)
770 ಅಮರಗಣಂಗಳಲ್ಲಿ ಒಬ್ಬರು ಮೋಳಿಗೆ ಮಾರಯ್ಯ ಶರಣರು. ಮೂಲತ ಇವರು ಕಾಶ್ಮೀರದ ಮಾಂಡವ್ಯಪುರದ ಅರಸರು. ಬಸವಣ್ಣನವರ ಕೀರ್ತಿವಾರ್ತೆ ಕೇಳಿ ಕಲ್ಯಾಣಕ್ಕೆ ಬಂದು ಆ ಕಾಯಕ ನೆಲದಲ್ಲಿ ಮೋಳಿಗೆ (ಕಟ್ಟಿಗೆ) ಕಾಯಕಗೈದು ಕಲ್ಯಾಣದಲ್ಲಿಯೆ ಲಿಂಗೈಕ್ಯರಾದರು. ಇವರ ಮಡದಿ ಮಹಾದೇವಿ, ಮೋಳಿಗೆ ಮಹಾದೇವಿಯೆಂದೆ ಪ್ರಸಿದ್ಧರಾಗಿರುವರು. ತಂಗಿ ಬೊಂತಾದೇವಿ. ಈ ತಾಯಿ ಸಹ ವಚನಕಾರ್ತಿ. ಮಗ ಲಿಂಗಾರತಿ. ಆತನಿಗೆ ಪಟ್ಟಕಟ್ಟಿ ತಾವು ಕಲ್ಯಾಣಕ್ಕೆ ಬಂದ ಈ ದಂಪತಿಗಳು ಕಾಯಕದ ಮಹತ್ವವನ್ನು ಅರಿತು ಆ ತತ್ವದ ಹಿನ್ನೆಲೆಯೊಳಗೆ ವಚನಗಳನ್ನು ರಚಿಸಿರುವರು. ಇಲ್ಲಿಯವರೆಗೆ ಲಭ್ಯವಾಗಿರುವ ವಚನಗಳು 823. ಇವರ ಅಂಕಿತನಾಮ ನಿಃಕಳಂಕ ಮಲ್ಲಿಕಾರ್ಜುನ.
ನಿರ್ವಚನ _
ಅವರ ಅಂತರಂಗದ ಜ್ಞಾನದೀಪ್ತಿ ಈ ವಚನ. ಅನಿತ್ಯ ಸಂಸಾರದಲ್ಲಿದ್ದುಕೊಂಡು ಭೋಗದ ಬೆನ್ಹತ್ತಿರುವ ಮಾನವ ಲೋಕಕ್ಕೆ ಎಚ್ಚರಿಸುವ ವಚನವಿದು. ಸಮಾನತೆ ತತ್ವ ಹೇಳುತ್ತ ಜೀವನದ ಮರ್ಮ ಕಟ್ಟಿಕೊಡುವ ಶರಣರ ಅರಿವು ಗಮನಿಸಬೇಕಾದುದಾಗಿದೆ. ರಾಜ_ಭೀಕಾರಿ, ಶ್ರೀಮಂತ_ಬಡವ, ಬ್ರಾಹ್ಮಣ_ಅಸ್ಪ್ರಶ್ಯ, ಗಂಡು_ಹೆಣ್ಣು ಇವರೆಲ್ಲರ ಜೀವನ ಏಕಮುಖವಾದುದು. ಹುಟ್ಟುವದು, ಸಾಯುವದು ಒಂದೇ. ಒಳಗಿರುವ ಭಾವನೆಗಳು ಒಂದೇ, ಎಲ್ಲರಿಗೂ ನೀರು ಗಾಳಿ, ಬೆಳಕು, ಭೂಮಿ ಬೇಕು. ಅಂದಮೇಲೆ ನಾ ಮೇಲೆ ನೀ ಮೇಲೆ ಎಂದು ಬಡಿದಾಡುವುದು ಬಿಡಬೇಕೆನ್ನುವರು.
ಆನೆ ಕುದುರೆ ಭಂಡಾರದ ಆಗರವೆ ನನ್ನಲ್ಲಿರಬಹುದು, ಆದರೆ ಅವು ಕ್ಷಣಿಕ, ಒಂದಲ್ಲ ಒಂದು ದಿನ ಅವು ಬಿಟ್ಟು ಹೋಗಲೇಬೇಕು. ಇಷ್ಟೆಲ್ಲ ಇದ್ದರೂ ಒಂದು ಮುಷ್ಟಿ ಅನ್ನ, ಒಂದು ಗಾಸು ಹಾಲು, ಅರ್ಧಮಂಚ ಇದ್ದರೆ ಜೀವನವೇ ಮುಗಿದು ಹೋಗುವದು. ಅಂದ ಮೇಲೆ ಹುರುಳಿಲ್ಲದ ಸಂಸಾರ ನೆಚ್ಚಿ ಕೆಡಬೇಡ ಮಾನವ ಎನ್ನುತ್ತಾರೆ. ಒಂದು ವೇಳೆ ಭ್ರಮೆಯಿಂದ ನಂಬಿದರೆ ಈ ದೇಹ ಒಂದಲ್ಲ ಒಂದು ದಿನ ಭೂಮಿಯೊಳಗೆ ಸೇರುವುದು.
ಮಡದಿ ಮಕ್ಕಳು ಸಂಗಡ ಬರುವದಿಲ್ಲ, ಜೀವ ಇರುವತನಕ ಎಲ್ಲ ನನ್ನೊಂದಿಗೆ. ಆದರೆ ಪ್ರಾಣ ಹೋಯಿತ್ತೆಂದರೆ ಈ ದೇಹ ಶವ ಆಗುವದು. ಅರಸನ ಶವ ಎಂದರೆ ಕೊಂಡುಕೊಳ್ಳುವವರೂ ಇಲ್ಲ. ಏಕೆಂದರೆ ಈ ಶರೀರ ಶವವಾದರೆ ಹೊಲಸು ವಾಸನೆಯಿಂದಾಗಿ ಹೆಂಡತಿ ಮಕ್ಕಳು, ಬಂಧು-ಬಳಗ, ಗೆಳೆಯರು, ಆರೂ ಅಲ್ಲಿ ನಿಲ್ಲುವದಿಲ್ಲ, ಅಷ್ಟರಮಟ್ಟಿಗೆ ಅದು ಹೊಲಸಾಗುವದು. ಆದ್ದರಿಂದ ಸಾವಿನ ಸಂಗಡ ಯಾರು ಬರುತ್ತಾರೆ ಎಂಬ ಮೂಲ ಪ್ರಶ್ನೆಯನ್ನು ಎತ್ತುತ್ತಾ ಜನರ ಅಂತರಂಗ ಬಹಿರಂಗಗಳ ಕಣ್ಣುಗಳೆರಡನ್ನು ತೆರೆಸುವ ಮೂಲಕ ಮಾರಯ್ಯ ಶರಣರು ಮಹತ್ವ ಪೂರ್ಣರಾಗುತ್ತಾರೆ.
ಹೀಗಾಗಿಯೇ ಅಂತಹ ವೈಭವಪೂರಿತ ರಾಜವೈಭೋಗಕ್ಕೆ ತಿಲಾಂಜಲಿ ಕೊಟ್ಟು ಈ ಜಂಗಮ ಲೋಕದಲ್ಲಿ ಮಹಾ ಜಂಗಮನಾಗಿ ಕಟ್ಟಿಗೆ ಕಾಯಕ ಮಾಡುತ್ತ, ಲಿಂಗ ಗುಣಗಳನ್ನು ಅಳವಡಿಸಿಕೊಂಡು, ಇಷ್ಟಲಿಂಗ ಪೂಜೆಯೊಳು ಆನಂದ ಭರಿತನಾಗಿ (ಏಕೆಂದರೆ ನಾಳೆ ನಮ್ಮೊಂದಿಗೆ ಅದೇ ತಾನೆ ಬರುವದು) ಅನುಭವ ಮಂಟಪದ ಒಡನಾಡಿಯಾಗಿ ಮಹಾನಭಾವಿಯಾದರು.
ಶ್ರೀ ಗುರುಪ್ರಸಾದ ಕುಚ್ಚಂಗಿ,
ನಿವೃತ್ತ ಬ್ಯಾಂಕ್ ಅಧಿಕಾರಿ ಮತ್ತು ಶರಣ ತತ್ವ ಚಿಂತಕರು,
ಬೆಂಗಳೂರು.
ಮೋಬೈಲ್ ಸಂ. 98445 31248
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ ದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in
![]()





Total views : 51410