“ಶರಣ ಸಿದ್ದರಾಮೇಶ್ವರರ ವಚನಗಳಲ್ಲಿ ಲಿಂಗ ದರ್ಪಣ”/ ಡಾ. ಸರ್ವಮಂಗಳ ಸಕ್ರಿ

ವ್ಯಕ್ತಿ ಮತ್ತು ಮಾನವ ಸಂಬಂಧಗಳ ಸಮಾಜದಲ್ಲಿ ಆಧ್ಯಾತ್ಮಕ್ಕೆ ವಿಶೇಷವಾದ ಸ್ಥಾನವಿದೆ. ಶರಣರ ಸಾಮಾಜಿಕ ಕಾಳಜಿ ಸ್ವತಂತ್ರ ವಚನಗಳು ನಮಗೆ ಮುಖಾಮುಖಿಯಾಗುತ್ತವೆ. ಇಂದ್ರಿಯ ಅಗೋಚರ ಭೌತಿಕ ಪ್ರಪಂಚವನ್ನು ಮೀರಿದ ಜ್ಞಾನದ ಹರವು ಹಾಗು ಆಧ್ಯಾತ್ಮದ ತಿಳುವಳಿಕೆ ಧರ್ಮವಾಗಿದೆ. ವಚನ ಧರ್ಮ ಭಾಷೆಯ ಹಿಂದೆ ಧಾರ್ಮಿಕ ನಂಬಿಕೆ ತಾತ್ವಿಕ ಆ‍ಚರಣೆಗಳು ಶರಣ ಸಂಸ್ಕ್ರತಿಯ ಸಂಗಮವೆಂದು ಸ್ಪಷ್ಟ ಪಡಿಸಬಹುದು.

ಯಾವುದೇ ಧರ್ಮ ಶೂನ್ಯದಿಂದ ಹುಟ್ಟಿರುವುದಿಲ್ಲ. ಚರಿತ್ರೆಯ ನಿರ್ಧಿಷ್ಟ ಒತ್ತಡಗಳಿಂದ ಹುಟ್ಟಿರುತ್ತದೆ. 12 ನೇ ಶತಮಾನದ ಲಿಂಗಾಯತ ಧರ್ಮ ಇದಕ್ಕೆ ಹೊರತಲ್ಲ. ಅನೇಕ ಧಾರ್ಮಿಕ ಪಂಥಗಳ ದಶ೯ನಗಳನ್ನು ಒಡಲಲ್ಲಿಟ್ಟುಕೊಂಡು ಅಷ್ಟಾವರಣ ತತ್ವಗಳನ್ನು ಜೋಪಾನ ಮಾಡುತ್ತ ವಿಶಾಲವಾಗಿಸಿದರು. ಪರಿಣಾಮಕಾರಿಯಾಗಿ ಗಟ್ಟಿಗೊಳಿಸಿದರು.

ಈ ಹಿನ್ನೆಲೆಯಿಂದ ನೋಡಿದಾಗ ಶರಣ ಧರ್ಮವು ಪಂಚಾಚಾರ ಷಟಸ್ಥಲ, ಅಷ್ಟಾವರಣಗಳ ತತ್ವಗಳನ್ನು ಒಡಲಲ್ಲಿಟ್ಟುಕೊಂಡು ಬೆಳೆದು ಬಂದಿದೆ. ಇವುಗಳನ್ನು ಅಂಗ, ಪ್ರಾಣ ಮತ್ತು ಆತ್ಮ ಎಂಬ ವ್ಯಾಖ್ಯಾನವನ್ನು ನೀಡಲಾಗಿದೆ. ಅಷ್ಟಾವರಣ ಉಸಿರಾದರೆ, ಪಂಚಾಚಾರಗಳು ನಮ್ಮ ನಡವಳಿಕೆಯನು ಎತ್ತಿ ತೋರಿಸುತ್ತವೆ. ಷಟಸ್ಥಲಗಳಲ್ಲಿ ಲಿಂಗಾಂಗ ಸಾಮರಸ್ಯವನ್ನು ಪ್ರೇರೇಪಿಸುವ ಶಾಸ್ತ್ರೀಯ ತತ್ವಗಳಾಗಿವೆ. ಅಂದರೆ ಎಂಟು ಆವರಣಗಳು, ಐದು ಸನ್ನಡತೆಗಳು ಮತ್ತು ಆರು ಸ್ಥಲಗಳು ಭಕ್ತಿ-ಜ್ಞಾನ-ಕ್ರಿಯೆಗಳ ತಾತ್ವಿಕ ನೆಲೆಗಟ್ಟಾಗಿವೆ. ಅಷ್ಟಾವರಣಗಳು ಭಕ್ತನ ಮಾನಸಿಕ ಸದೃಢತೆಯನ್ನು ಕೊಡುವುದರ ಜೊತೆಗೆ ಅಜ್ಞಾನ ಮತ್ತು ಅಹಂಕಾರಗಳ ಆವರಣಗಳಿಂದ ನಮ್ಮನ್ನು ಸದಾ ರಕ್ಷಿಸುತ್ತವೆ.

ಅಷ್ಟಾವರಣಗಳಲ್ಲಿ ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ, ಪಾದೋದಕ ಮತ್ತು ಪ್ರಸಾದ ಇವುಗಳಲ್ಲಿ ಗುರು ಲಿಂಗ ಜಂಗಮ ತಾತ್ವಿಕ ವಿವೇಚನೆಯ ಆಚರಣಾ ಮಾರ್ಗವೇ ಲಿಂಗ. ಸಾಮಾಜಿಕ ಮತ್ತು ನೈತಿಕ ನಿಷ್ಠೆಗಳಲ್ಲಿ ಲಿಂಗವೇ ಕೇಂದ್ರ ಶಕ್ತಿ. ಸಮಾಜದಲ್ಲಿ ಸಮಾನತೆಯನ್ನು ಬೆಳೆಸುವುದಕ್ಕೆ ಲಿಂಗ ಸಾಧನವಾಯಿತು.

ಲಿಂಗದ ಪರಿಕಲ್ಪನೆ ಬಹು ಪ್ರಾಚೀನವಾದದ್ದು. ಇಡೀ ಬ್ರಹ್ಮಾಂಡದ ಸಮಸ್ಟಿ ಪ್ರಜ್ಞೆಯನ್ನು ಲಿಂಗ ರೂಪದಲ್ಲಿ ಕಂಡವರು ಶರಣರು. ಈ ಸೃಷ್ಟಿಗೆ ಕಾರಣಕರ್ತನು ಶಿವ. ಶಕ್ತಿ ವಿಶಿಷ್ಟ ಶಿವನಾಗಿದ್ದಾನೆ. ಲಿಂಗ ಪದವನ್ನು ವಚನವಾಙಯದ ಶರಣ ಧರ್ಮದಲ್ಲಿ ಮಾತ್ರ ಕಾಣಲು ಸಾಧ್ಯವಾಗುತ್ತದೆ. ತತ್ವಶಾಸ್ತ್ರಗಳಲ್ಲಿ ಲಿಂಗಕ್ಕೆ ವಿಶೇಷ ಅರ್ಥವಿದೆ. ಚರ-ಚರಾತ್ಮಕವಾದ ಈ ಜಗತ್ತು ಯಾವ ವಸ್ತುವಿನಲ್ಲಿ ಲೀನವಾಗುತ್ತದೆಯೋ ಎಲ್ಲಿಂದ ಉತ್ಪತ್ತಿ ಪಡೆಯುತ್ತದೆಯೋ ಆ ವಸ್ತುವೇ ಲಿಂಗವೆಂದು ಲಿಂಗ ತತ್ವವನ್ನು ಬಲ್ಲವರು ಹೇಳುತ್ತಾರೆ. ಹೀಗಾಗಿ ಶರಣರು ಅಖಂಡ ಬ್ರಹ್ಮಾಂಡದ ಶಕ್ತಿಯನ್ನು ಲಿಂಗರೂಪದಲ್ಲಿ ತಿಳಿಸಿ ಹೇಳಿದ್ದಾರೆ.

ಅಷ್ಟಾವರಣದಲ್ಲಿ ಲಿಂಗದ ಮಹತ್ವವನ್ನು ಶರಣ ಸಿದ್ದರಾಮೇಶ್ವರ ವಚನಗಳ ಮೂಲಕ ವಚನ ಮೀಮಾಂಸೆಯ ಹಿನ್ನೆಲೆಯಿಂದ ಪ್ರವೇಶ ಪಡೆಯುವ ಪ್ರಯತ್ನ ಈ ಲೇಖನದ್ದಾಗಿದೆ.

ಇಷ್ಟಲಿಂಗ ಪ್ರಾಣಲಿಂಗ ಅರಿವಿನ ಕುರುಹಾಗಿ ಭಕ್ತಿಯ ಚೈತನ್ಯವನ್ನು ಎತ್ತಿ ತೋರಿಸುತ್ತದೆ. ಲಿಂಗ ದೀಕ್ಷೆಯ ನಂತರ ಶರಣ ಸಿದ್ದರಾಮರಿಗೆ ಶರಣ ಧರ್ಮದ ಅಸ್ಪಷ್ಟತೆಯನ್ನು ಈ ವಚನದಲ್ಲಿ ಕಾಣಬಹುದು. ಸಾಕಾರ ಲಿಂಗ ಪೂಜೆ ಮಾಡಿದ ಸಿದ್ದರಾಮನು ನಿರಾಕಾರ ಲಿಂಗದಲ್ಲಿ ಚೈತನ್ಯವನ್ನು ಕಾಣದೆ ತೊಳಲಾಡಿದ ಪರಿಕಲ್ಪನೆ ಇಲ್ಲಿದೆ. ಇಷ್ಟ ಲಿಂಗವೇ ಅರಿವಿನ ಕುರುಹಾಗಿ ಶಕ್ತಿಯ ತತ್ವವಾಗಿದೆ. ಹೀಗಾಗಿ ಸಿದ್ದರಾಮನು ಅಧ್ಯಾತ್ಮದ ಗುರು ಮಾತ್ರವಲ್ಲ ಸಾಮಾಜಿಕ ವ್ಯಕ್ತಿತ್ವದ ಅನುಭಾವಿಯೂ ಹೌದು.
ಅಂದು ಸಿದ್ದರಾಮನು ಅಲ್ಲಮಪ್ರಭುಗಳನ್ನು ಗುರುವಾಗಿ ಸ್ವೀಕರಿಸಿದ್ದನು. ತಾತ್ವಿಕತೆಯ ನೇತಾರನಾದ ಶಿಷ್ಯನ ಮನಃಪರಿವರ್ತನೆಗಾಗಿ ಕಾದಿದ್ದನು ಪ್ರಭು.

12 ನೇ ಶತಮಾನದ ವಚನ ಚಳುವಳಿ ಧರ್ಮದ ಹೆಸರಿನಲ್ಲಿ ನಡೆಯುವ ಸುಲಿಗೆ ಶೋಷಣೆಯನ್ನು ತಪ್ಪಿಸಲು ಇಷ್ಟಲಿಂಗ ಪರಿಣಾಮಕಾರಿಯಾದ ಪ್ರಭಾವ ಬೀರಿತು. ಸ್ಥಾವರ ಲಿಂಗದ ನಿರಾಕರಣೆ ಆಂತರಿಕ ಶುದ್ಧೀಕರಣಕ್ಕೆ ಕಾರಣವಾಯಿತು. ಜನಸಾಮಾನ್ಯರ ನೋವಿಗೆ ಸ್ಪಂದಿಸುವ ಕರಸ್ಥಲದ ಲಿಂಗ ದೇವರಾಯಿತು. ಹೀಗಾಗಿ ಕುಲ ಜಾತಿ ಅಂತಸ್ತುಗಳ ಅಧಿಕಾರದ ಹಂಗಿಲ್ಲದೆ ಎಲ್ಲರೂ ಧರಿಸಬಹುದಾದ ಕುರುಹು ಲಿಂಗವಾಯಿತು. ಇಷ್ಟಲಿಂಗ ಜಂಗಮಗಳು ಪರಿವರ್ತನೆಯಾದದ್ದು ಈ ಕಾಲ ಘಟ್ಟದಲ್ಲಿಯೇ ಎಂದು ಹೇಳಬಹುದು. “ಕಪಿಲಸಿದ್ದ ಮಲ್ಲಿಕಾರ್ಜುನ” ಅಂಕಿತದ ಮೂಲಕ ಸುಮಾರು 1379 ವಚನಗಳು ಲಭ್ಯವಾಗಿವೆ.

ಅಲ್ಲಮ ಪ್ರಭು ಸಿದ್ದರಾಮರ ಸಂವಾದದಲ್ಲಿ ಕರಸ್ಥಲದ ಲಿಂಗ ಪ್ರಾಣ ಲಿಂಗವಾಗಿದೆ. ಸ್ಥಾವರ ಲಿಂಗವನ್ನು ಖಂಡಿಸಿದ ಶರಣರು ಅಷ್ಟಾವರಣ ತತ್ವದ ಮೂಲಕ ಇಷ್ಟಲಿಂಗವೆಂಬ ಸಾಕಾರವನ್ನು ಕರಸ್ಥಲದ ಪೂಜೆಗೆ ಬಳಸಿದರು. ಇಷ್ಟಲಿಂಗವೆಂಬ ತತ್ವ ಪ್ರತಿಮೆಯಾಯಿತು. ಕುರುಹು ಮತ್ತು ಅರಿವಿನ ಮಧ್ಯದ ಸಂಬಂಧವೇ ಲಿಂಗಾಯತ ಧರ್ಮವಾಯಿತು.

ಶರಣ ಸಿದ್ದರಾಮರು ಸೊನ್ನಲಿಗೆಯಲ್ಲಿ ಸ್ಥಾವರ ಲಿಂಗ ಪ್ರತಿಷ್ಠಾಪನೆ ಕೆರೆಗಳ ನಿರ್ಮಾಣದಲ್ಲಿ ತನ್ನನ್ನು ತೊಡಗಿಸಿಕೊಂಡು, ಹಠಯೋಗ, ರಾಜಯೋಗಗಳ ಮೂಲಕ ಸಮಾಧಿ ಸ್ಥಿತಿಯನ್ನು ಪಡೆಯಬಲ್ಲವನಾಗಿದ್ದ. ಸೊನ್ನಲಾಪುರಕ್ಕೆ ಮರಳಿದ ಸಿದ್ದರಾಮನು ಪ್ರಭು ನನ್ನಿದೇವನ ಪಟ್ಟದರಸಿ ಮಹಾರಾಣಿ ಚಾಮಲಾದೇವಿ ನೀಡಿದ ನೂರು ಎಕರೆ ಭೂಮಿಯ ಕಾಯಕದಲ್ಲಿ ತೊಡಗಿಸಿಕೊಂಡ್ದನ್ನು ಕಾಣಬಹುದು. ಜ್ಞಾನ ದಾಸೋಹದ ಜೊತೆಗೆ ದೇವಾಲಯಗಳ ನಿರ್ಮಾಣ ಬಡವರ ಕಲ್ಯಾಣ, ಸಾಮೂಹಿಕ ವಿವಾಹ, ಸ್ತ್ರೀ ಪುರುಷರ ಭೇದ ನಿರಾಕರಣೆ ಮುಂತಾದ ಸಾಮಾಜಿಕ ಕಾರ್ಯಗಳಲ್ಲಿ ನಿರತನಾಗಿದ್ದನು. ಆತ್ಮ ಜಾಗೃತಿಯ ಎಚ್ಚರಿಕೆಯ ಜೊತೆಗೆ ಸಾಮಾಜಿಕವಾಗಿ ತನ್ನನ್ನು ತೊಡಗಿಸಿ ಕೊಂಡಿದ್ದನು. ಸೊನ್ನಲಿಗೆಯ ಜನರ ನೀರಿನ ದಾಹವನ್ನು ಇಂಗಿಸಿದ ಶರಣ ಸಿದ್ದರಾಮ, ನಾಲ್ಕು ಸಾವಿರ ಶಿವಶರಣರ ಸಹಕಾರದಿಂದ ಕಟ್ಟಿಸಿದ ಕೆರೆ ಇನ್ನೂ ಬತ್ತಿಲ್ಲವೆಂಬ ಸ್ಪಷ್ಟವಾದ ಹೇಳಿಕೆ ಈಗಲೂ ಇದೆ.

ಲಿಂಗ ಯೋಗದ ಸುಖದಲ್ಲಿ ಸಹಜ ಸಮಾಧಿ ಸ್ಥಿತಿಯ ಕೊರತೆಯನ್ನು ಕಂಡು ತ್ರಾಟಕ ಯೋಗದ ಮೂಲಕ ಲಿಂಗ ಶರೀರವನ್ನು ಪಡೆದುಕೊಂಡವನಾಗಿದ್ದನು. “ಅಂತರಂಗದ ಶಬ್ದಕ್ಕೆ ಬಹಿರಂಗ ಮುದಗೊಂಡಿಪ್ಪುದು ಬಹಿರಂಗ ಶಬ್ದಕ್ಕೆ ಅಂತರಂಗ ಮುದಗೊಂಡಿಪ್ಪುದು” ಈ ವಚನದ ಸಾಲು ಸಿದ್ದರಾಮರ ವಚನದ ತೌಲನಿಕತೆಗೆ ಹೋಲಿಸಬಹುದು.

ಸ್ಥಾವರ ಲಿಂಗ ಜಡವಾದುದು. ಸ್ಥೂಲ, ಸೂಕ್ಷ್ಮ ಶರೀರದಲ್ಲಿ ಭಾವಲಿಂಗ ಪ್ರಾಣಲಿಂಗವಿದೆ. ಆತ್ಮನೊಡನೆ ಸೇರಿದ ಅತಿಂದ್ರಿಯ ಸೂಕ್ಷ್ಮಶರೀರವೇ ಲಿಂಗವಾಗಿದೆ. ಜ್ಞಾನವೇ ಲಿಂಗವಾದರೂ ಆಧ್ಯಾತ್ಮದಲ್ಲಿ ವಿಲೀನವಾದ ಈ ಮನಸ್ಸು ಲಿಂಗದ ಮೊನೆಯಲ್ಲಿ ಜ್ಞಾನವನ್ನು ಕಂಡಂತವರು ಶರಣರಾಗಿದ್ದರು. ಲಿಂಗಾಂಗ ಸಾಮರಸ್ಯದಲ್ಲಿ ಲಿಂಗ ಜ್ಞಾನ ಭಕ್ತನ ಕಲಿಕಾ ವಿಧಾನದ ಮನ ಸಾಮರ್ಥ್ಯವನ್ನು ಹೆಚ್ಚಿಸುವ ತಾತ್ವಿಕ ಕಲಿಕೆಗಳಾಗಿವೆ. ಲಿಂಗವೇ ದರ್ಪಣ ದರ್ಪಣ ಹಿಡಿದು ನೋಡುತ್ತಾ ದರ್ಪಣ ಭಾವವನ್ನು ಮೀರಬೇಕು. ಜ್ಯೋತಿಯನ್ನು ಹಿಡಿದು ನೋಡುತ್ತಾ ತಾನೇ ಜ್ಯೋತಿಯಾಗಿ ಪರಿಣಮಿಸಬೇಕು. ಅನುಭವಕ್ಕೆ ಅರಿವಾಗುವ ಶಬ್ದದ ಆಚೆಗಿರುವ ಚಿತ್ ಶಕ್ತಿಯ ಬಯಲು ಅದು.

ಲಿಂಗವು ಕೂಡ ಸಿದ್ದರಾಮನ ವಚನಗಳಲ್ಲಿ ರೂಪಕವಾಗಬಲ್ಲ ವಸ್ತು. ಅಂದಿನ ಚರಿತ್ರೆಗೆ ಕಥನವಾಗುತ್ತಾ ಲಿಂಗದ ಮೂಲಕ ಪಡೆದುಕೊಳ್ಳುವ ಅರ್ಥಪೂರ್ಣತೆಯದು. ಕರಸ್ಥಲದ ಲಿಂಗವು ಉದರದಲ್ಲಿ ಅಗ್ನಿಯಾಗಿ ಕಾಡುವ ನಿಗೂಢತೆ ಅರ್ಥವಾಗದಿದ್ದರೂ ಬೆಡಗಿನ ವೈಚಾರಿಕ ಪ್ರಜ್ಞೆಗೆ ದಕ್ಕುವ ಪರಿ,

ಶರಣ ಸಿದ್ದರಾಮರ ವಚನಗಳನ್ನು ಪ್ರಾಮಾಣಿಕರಿಸಿ ವಿಮರ್ಶಿಸುವುದಾದರೆ ಅಷ್ಟಾವರಣದ ಲಿಂಗ ಪ್ರಜ್ಞೆಯು ನಮ್ಮ ಆತ್ಮಾವಲೋಕನಕ್ಕೆ ತೆರೆದುಕೊಳ್ಳುತ್ತದೆ. ಈ ಕರದಲ್ಲಿ ಪ್ರಾಣವನ್ನೇ ಲಿಂಗವನ್ನಾಗಿಸಿಕೊಂಡು ಶಿವಮಯವಾಗಿ ಕಾಣುವ ಸೂಕ್ಷ್ಮತೆಯನ್ನು ಕಾಣಬಹುದು. ಕರಲಿಂಗ ಅಧ್ಯಾತ್ಮದ ಅರಿವಿನ ಕುರುಹು ಮತ್ತು ಧಾರ್ಮಿಕ ತತ್ವದ ಆಯುಧವು ಹೌದು. ಲಿಂಗ ಎನ್ನುವ ದೈವದ ಅನುಭವ ಅಗ್ನಿಯಂತೆ ದಹಿಸುವುದು ಎಂಬ ಮಾತು ಧಾರ್ಮಿಕ ಹೋರಾಟದ ಮುನ್ಸೂಚನೆ ಎಂಬುದನ್ನು ಗಮನಿಸಬೇಕು.

ಪಂಚಭೂತಗಳಲ್ಲಿ ಒಂದಾದ ಅಗ್ನಿ ತತ್ವವು ಮುಕ್ತವಾಗಿ ಪ್ರೇರೇಪಿಸುತ್ತದೆ. ಮರ ಗಿಡ ಪಕ್ಷಿ ….. ಮನುಷ್ಯರಲ್ಲೂ ಸ್ಥಾವರ ಜಂಗಮಾತ್ಮಕವಾದ … ಸಕಲ ಪದಾರ್ಥಗಳಲ್ಲೂ ಅಂತರ್ಯಾಮಿಯಾಗಿ ಮನುಷ್ಯನಲ್ಲಿ ಅಗ್ನಿ ತತ್ವಕ್ಕೆ ಕಾರಣವಾಗಿದೆ. ಅಗ್ನಿ ಸಮಷ್ಟಿ ಪ್ರಜ್ಞೆಗೆ ದಕ್ಕುವ ಲಿಂಗಾನುಭಾವಕ್ಕೆ ನಿಲುಕುವ ಅಗೋಚರ ಶಕ್ತಿಯದು. ಉದರದಲ್ಲಿ ಅಗ್ನಿ ಪರಿಯಂತ ಶರಣ ಸಿದ್ದರಾಮನು ಅಗ್ನಿಯನ್ನು ಲಿಂಗ ಪ್ರಸಾದವೆಂದು ಹೇಳುವ ವಾಸ್ತವತೆ ವೈಜ್ಞಾನಿಕ ತಳಹದಿಯ ಮನಃಶಾಸ್ತ್ರದ ಅಧ್ಯಯನವೂ ಅದಾಗಿದೆ.

ಶರಣರ ಪ್ರಕಾರ ಪ್ರಸಾದವೆಂದರೆ ಸುಜ್ಞಾನವಾಗಿದೆ. ಆತ್ಮದ ಮೂಲಕ ಹುಟ್ಟಿಕೊಂಡ ಅಂತರಂಗದ ಅರಿವು ಜಂಗಮ ಪ್ರಸಾದ … ಇದುವೇ ಪ್ರಾಣವಾಗಿದೆ. ಗುರುಲಿಂಗ ಜಂಗಮದ ಮೂಲಕ ಅರಿವು ಆಚಾರ ಸುಜ್ಞಾನಗಳು ಅನುಷ್ಠಾನಗೊಂಡು ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದಗಳಾಗಿವೆ ಎಂದು ಶರಣರು ಹೇಳಿದ್ದಾರೆ. ಅಂಗ ಗುಣಗಳನ್ನಳಿದು ಲಿಂಗಗುಣ ಪಡೆಯುವುದೇ ಪ್ರಸಾದ. ಲಿಂಗವನ್ನು ಮನಃ ಪ್ರಸಾದವೆಂದು ಅರ್ಪಿಸಿಕೊಳ್ಳುವ ಸಮರ್ಥನೆಯನ್ನು ಕಾಣಬಹುದು. ಲಿಂಗವನ್ನು ಒಡಲೆಂದು ಹೇಳುವ ಪ್ರಸಾದದಿಂದ ಸ್ವೀಕರಿಸುವ ಶರಣರ ದೃಷ್ಟಾಂತಗಳು ಒಂದು ರೀತಿಯಲ್ಲಿ ವಿರಕ್ತ ಮನಸ್ಥಿತಿಯಾಗಿದೆ.

ಶರಣ ಸಿದ್ದರಾಮರು ಮಲತ್ರಯಗಳನ್ನು ಪ್ರವೇಶಿಸುವ ಪರಿಕಲ್ಪನೆ ಲಿಂಗ ಧರ್ಮದ
ಮುಖಾಮುಖಿಯಾಗಿ ವ್ಯಕ್ತವಾಗಿದೆ. ತನುಮಲಕ್ಕೆ … ಮಲತ್ರಯಕ್ಕೆ ಶುದ್ಧತೆಯನ್ನು ಕೊಡಬೇಕಾದರು ಲಿಂಗ ಬೇಕು. ಈ ದೇಹಕ್ಕೆ ಪಾಶ ದೋಷಗಳು ಅಂಟಿಕೊಂಡಿರುತ್ತವೆ. ಅಣವ ಕರ್ಮ ಮಾಯ ತ್ರಿಮಲಗಳು ಘನಪಾಶ ವರ್ಗವನು ಬಂಧನದಲ್ಲಿ ಸಿಲುಕಿಸುತ್ತದೆ. ನೆನಹಿನಲ್ಲಿ ಸುಡುತ್ತದೆ. ಬಂಧನ ಕಳೆದುಕೊಳ್ಳಲು ಲಿಂಗಸಂಗದ ಜೊತೆಗೆ ದೇಹವು ಶಿವಲಿಂಗವಾಗಬೇಕು. ನೆನಹುನಲ್ಲಿಯೇ ಅಗ್ನಿ ಅಡಕವಾಗಿದೆ.

ಹೀಗಾಗಿ ಶಕ್ತಿಯ ಪ್ರಧಾನವಾದ ಶಿವಶಕ್ತಿ ತತ್ವದಲ್ಲಿ ಪರಾಶಕ್ತಿ ಸೇರಿದರೆ ಪ್ರಾಣ ಲಿಂಗವೇ ಪ್ರಸಾದ ಲಿಂಗವಾಗುತ್ತದೆ. ಈ ದೇಹದ ಎಲ್ಲಾ ಅಂಗಗಳಲ್ಲಿ ಲಿಂಗವಡಗಿದೆ. ತಾನು ಅದರ ಪುತ್ರ. ಪ್ರಸಾದವನ್ನು ಸೇವಿಸುವ ಭಕ್ತನಾಗುತ್ತಾನೆ. ಈ ಕಾಯವನ್ನು ಪ್ರಸಾದವಾಗಿಸುವ ಆತುರತೆ. ಏಕೆಂದರೆ ಪ್ರಸಾದ ಲಿಂಗದಿಂದ ನಮ್ಮ ಕಷ್ಟಗಳು ನಿವಾರಣೆಯಾಗುತ್ತವೆ. ಲಿಂಗ ಶಕ್ತಿಯ ಮೂಲಕ ಆರೋಗ್ಯ ಲಭಿಸುತ್ತದೆ. ಚಿತ್ತ ಶುದ್ದಿಯಾಗುತ್ತದೆ. ಅದರ ಮೂಲ ಇರುವುದು ಸಕಲವನ್ನು ತೋರುವ ಪ್ರಮಾಣ ಪ್ರಸಾದ ಲಿಂಗದಲ್ಲಿ ಎನ್ನುತ್ತಾನೆ ಶರಣ ಸಿದ್ದರಾಮನು.

ಅಲ್ಲಮ ಪ್ರಭುಗಳು ಚನ್ನಬಸವಣ್ಣ ಅನುಭವ ಮಂಟಪದ ಮೂಲಕ ಶರಣ ಸಿದ್ದರಾಮರ ಬದುಕಿಗೆ ಹೊಸ ತಿರುವು ನೀಡಿದರು. ಶರಣ ಧರ್ಮದ ಶರಣತ್ವಕ್ಕೆ ಮಾರು ಹೋಗಿ ಚನ್ನಬಸವಣ್ಣನನ್ನು ಗುರುವಾಗಿ ಸ್ವೀಕರಿಸಿದ ಸಿದ್ದರಾಮ ಶರಣರು … ಪ್ರಕಾಂಡ ಕಾಯಕ ಯೋಗಿಯಾಗಿ ಲಿಂಗ ಯೋಗತ್ವವನ್ನು ಪಡೆದುಕೊಂಡರು. ಧರ್ಮದ ಚೌಕಟ್ಟಿನಲ್ಲಿ ಲಿಂಗವನ್ನು ಕಾಣದೆ ಇಡೀ ಮಾನವ ಕುಲದ ಉದ್ದಾರಕ್ಕಾಗಿ ಆಚರಣೆಗೆ ತರಲು ಸಾದ್ಯವೆಂದು ತೋರಿಸಿದವರೆ ಸಿದ್ದರಾಮ ಶರಣರಾಗಿದ್ದರು.

ಅಂದು ಅನುಭವ ಮಂಟಪದ ವಚನಗಳು ಅಧ್ಯಾತ್ಮದ ಕ್ರಾಂತಿಯಾಯಿತು. ಪ್ರಭುಗಳ ಮಾತನ್ನು ಗಮನಿಸಬೇಕು. “ಅಂತರಂಗದ ಅರಿವು ಬಹಿರಂಗದ ಕ್ರಿಯೆಯಿಂದಲ್ಲದೆ ಸರ್ವಾಂಗಲಿಂಗ ಸಾಹಿತ್ಯವಾಗದು”. ವೇದಗಳಲ್ಲಿ ಕಂಡು ಬರುವ ನಾದ ಬಿಂದು ಕಳೆಗಳನ್ನು ಲಿಂಗ ಧರ್ಮದ ಅನುಭಾವದ ನೆಲೆಯಲ್ಲಿ ಎತ್ತಿ ತೋಸಿದ್ದಾರೆ. ಪ್ರಣವನಾದದ ಲಿಂಗಯೋಗವು ಶರಣ ಧರ್ಮದ ಅಗತ್ಯತೆಗಳಾಗಿ ಪರಸ್ಪರ ಪೂರಕ ಮತ್ತು ತಾದಾತ್ಮಕತೆಯ ವಿಶಿಷ್ಟತೆ ಹೀಗಿದೆ. ನಾದ ಬಿಂದು ಓಂ ಪ್ರಣವದ ಶಬ್ದವಾಗಿದೆ. ಭಕ್ತಿಯ ಸಂಪ್ರೀತಿಯಲ್ಲಿ ಶಿವನನ್ನು ಪ್ರೀತಿಸುವ ಓಂ ನಮಃ ಶಿವಾಯ ಶರಣ ಧರ್ಮದ ಮುಕ್ತ ಆಶಯವನ್ನು ಬಯಸುತ್ತದೆ.

ನಾದವೆಂಬ ಓಂಕಾರವನ್ನು ತತ್ವಶಾಸ್ತ್ರದ ಮೂಲಕ ವಿಶಾಲವಾಗಿಸಲು ಸಾಧ್ಯವಾಗುತ್ತದೆ. ವಚನಕಾರರ ನಾದ ಬಿಂದು ಕಳೆ ಶಿವಶಕ್ತಿಯ ಸಾಮರಸ್ಯ ಪ್ರಜ್ಞೆಯಾದರೂ ನಾದ ಬಿಂದು ಕಳೆಯ ಸ್ವತಂತ್ರತೆಯಲ್ಲಿ ಅಂಗ ಲಿಂಗ ಸಂಬಂಧವನ್ನು ಲಿಂಗಮಯವಾಗಿ ಕಾಣುವ ಮನಸ್ಥಿತಿಯಾಗಿದೆ ಅನುಭಾವಿಕ ಶಕ್ತಿಯ ಓಂಕಾರ ನಾದ ಸುಪ್ತ ಅಂತರಾತ್ಮದ ಕಂಪನಗಳನ್ನು ಪ್ರತಿನಿಧಿಸುತ್ತದೆ. ಓಂ ಎಂಬ ಗೀತ ದ್ವನಿಯು ಸಂಗೀತದ ನಾದಾನುಸಂಧಾನವಾಗಿದೆ. ಓಂ ಎಂಬ ಪ್ರಣವವು ಸೃಷ್ಟಿಯ ಶಬ್ದವಾದರೂ ಇದರ ಉಚ್ಚಾರಣೆಯಿಂದ ಧನಾತ್ಮಕ ಕಂಪನಗಳು ಜ್ಞಾನದ ಕಣ್ಣನ್ನು ತೆರೆಸುತ್ತದೆ. ನಾದವೇ ಓಂಕಾರದ ಪ್ರಣವವಾಗಿದೆ. ನಮಃ ಶಿವಾಯ ಭೌತಿಕ ಪ್ರಪಂಚದ ಪಂಚಭೂತಗಳ ಐದು ಅಗತ್ಯತೆಗಳನ್ನು ಒಳಗೊಂಡಿದೆ. ಶಕ್ತಿಯಿಂದ ನಾದವು ನಾದದಿಂದ ಬಿಂದುವು ಹುಟ್ಟಿದೆ. ಪ್ರಣವ ಮಂತ್ರದಲ್ಲಿ ಶಿವಶಕ್ತಿಯ ಸಾಮರಸ್ಯವನ್ನು ಕಾಣಲು ಸಾಧ್ಯವಾಗುತ್ತದೆ.

ನಾದವು ಆತ್ಮನ ಸ್ವರೂಪವನ್ನು ಬಿಂದುವು ಅವನ ಚಿದ್ರೂಪವನ್ನು ಕಳೆಯು ಅದರ ಆನಂದವನ್ನು ಪ್ರತಿನಿಧಿಸುತ್ತದೆ. ಹೀಗಾಗಿ ಪ್ರಭು ಗುರುವಾಗಿ ನಿಂತಿದ್ದು, ಚೆನ್ನಬಸವಣ್ಣ ಜ್ಞಾನಿಯಾಗಿ ಮಾರ್ಗ ತೋರಿದ್ದನ್ನು ಸ್ಪಷ್ಟಪಡಿಸಬಹುದು. ಕಾಯದ ಮೂಲಕ ಲಿಂಗ ಕಾಣಬೇಕಾದರೂ ನಾದ ಪ್ರಾಣಬಿಂದು ಕಾಯವಾದ ಕಾರಣ ಎಂದು ಇನ್ನೊಂದು ವಚನದಲ್ಲಿ ವಿವರಿಸುತ್ತಾನೆ ಶರಣ ಸಿದ್ದರಾಮ.

ನಾದ ಸ್ವರವಲ್ಲ, ಬಿಂದು ಕಾಯವಲ್ಲ. ನಾದ ಶಬ್ದವೊಂದರ ಶಕ್ತಿ. ಓಂಕಾರ ಮಂತ್ರ ಚರ್ಚೆಯಾದದ್ದು ವೇದ ಮಂತ್ರಗಳ ಚರ್ಚೆಯಲ್ಲಿ ಮಾತ್ರ … ಶರಣರ ಪ್ರಕಾರ ವೇದ ಮಂತ್ರಗಳು ಅರ್ಥಹೀನ. ಶರಣರು ಒಪ್ಪದೇ ಇರುವ ಅನೇಕ ಅಂಶಗಳು ವೇದಗಳಲ್ಲಿವೆ. ಸಿದ್ದರಾಮ ಶರಣರು ಹೇಳುವಂತೆ ವೇದಗಳ ಶಕ್ತಿ ಇರುವುದು ಅದರ ಅರ್ಥದಲ್ಲಿ ಅಲ್ಲ. ಅದರ ಶಕ್ತಿಯಲ್ಲಿ ಪ್ರಾಣಲಿಂಗ ಪೂಜೆಯ ನಮಃ ಶಿವಾಯ ಅರ್ಥದಲ್ಲಿ. ಉಭಯ ಸೂತಕ ರಹಿತ ಕಂಡಯ್ಯ. ನಾದ ಬಿಂದು ಕಳೆಯನ್ನು ಉಭಯ ಸೂತಕವೆಂದು ಹೇಳಬೇಕಾದರೆ ಸೂತಕ ಶಬ್ದದಲ್ಲಿ ವಚನದ ಜೀವಾಳವನ್ನು ಕಾಣಬಹುದು. ಚಿದಾಕಾರವಾಗಿರುವ ಪ್ರಾಣಲಿಂಗವನ್ನು ಭಾವ ಪುಷ್ಪಗಳಿಂದ ಪೂಜಿಸಬೇಕು. ಪಂಚಭೂತಗಳ ಘೋಷವೇ ನಾದ. ಓಂಕಾರ ನಾದದಲ್ಲಿ ಪಂಚಭೂತಗಳ ಶಕ್ತಿ ಇರುವುದರಿಂದ “ನಾದ ಬಿಂದುವಿನ ಒಡ್ಡತೋರಿ ಮನ ಮಗ್ನವಾದ” ಪ್ರಜ್ಞೆಯೇ ಪ್ರಾಣ ಶರೀರ ಪ್ರಾಣ ಲಿಂಗವದು. ಈ ಹೃದಯ ಕಮಲದಲ್ಲಿ ಕಪಿಲಸಿದ್ದ ಮಲ್ಲಿಕಾರ್ಜುನನೆಂಬ ಪ್ರಾಣ ಲಿಂಗವಿರುವಾಗ ವೇದಗಳ ನಾದ ಬಿಂದುಗಳು ಅಪನಂಬಿಕೆ ಸಂದೇಹದಿಂದ ಕಾಣುತ್ತಾನೆ. ಅಂಗಕ್ಕೆ ಲಿಂಗೋಪದೇಶವಾದರು. ಮನಕ್ಕೆ ಓಂಕಾರ ಮಂತ್ರ ಕ್ರಿಯಾತ್ಮಕವಾಯಿತು. ಲಿಂಗ ಪ್ರಜ್ಞೆಯ ಅಂಗಶುದ್ದಿ. ಸತ್ಯ ಸ್ವತಂತ್ರ ತರ್ಕವಾಯಿತು. ಶರಣ ಸಿದ್ದರಾಮರ ಲಿಂಗತತ್ವದಲ್ಲಿ … ಕಲ್ಯಾಣ ಕ್ರಾಂತಿಯ ನಂತರ ಸೊನ್ನಲಿಗೆಯಲ್ಲಿ ಐಕ್ಯನಾದ ನಾಥ ಸಿದ್ದ ಸಂಪ್ರದಾಯದಲ್ಲಿ ಸಿದ್ದರಾಮನೆಂದು ಖ್ಯಾತಿ ಪಡೆದನು.

ಸಾವಿನಲ್ಲಿ ಸಿಗುವ ಮೋಕ್ಷಕ್ಕೆ ಶರಣರು ಗಮನಕೊಡಲಿಲ್ಲ. ಈ ದೇಹ ಇರುವಾಗಲೇ ಶಿವನೊಂದಿಗೆ ಐಕ್ಯವನ್ನು ಕಾಣಬೇಕು. ಲಿಂಗಾತ್ಮವಾಗಬೇಕೆಂದು ಬಯಸಿದರು.

ಶರಣ ಸಿದ್ದರಾಮರ ಲಿಂಗ ತತ್ವದಲ್ಲಿ ಎರಡು ಮಾರ್ಗಗಳನ್ನು ಕಾಣಲು ಸಾಧ್ಯವಾಗುತ್ತದೆ. ಲಿಂಗದ ತರ್ಕ ಮತ್ತು ಲಿಂಗೈಕ್ಯ ತರ್ಕ. ಅಂಗ ದೇಹವಾದರೂ ಲಿಂಗ ಚೈತನ್ಯದ ಆವಾಸ ಸ್ಥಾನ. ಲಿಂಗವೆಂಬ ಪೂಜ್ಯತೆ ಲಿಂಗ ಯೋಗದಲ್ಲಿ ಅನುಭವಿಸಿದಾಗಲೇ ಲಿಂಗ ದೇಹವಾಗುವುದು. ಲಿಂಗೈಕ್ಯ ಎನ್ನುವುದು ಶರಣ ಧರ್ಮದಲ್ಲಿ ಮಾತ್ರ ಕಾಣಲು ಸಾಧ್ಯವಾಗುತ್ತದೆ. ಅಂಗ ಒಡಲಾದರೆ ಲಿಂಗೈಕ್ಯ ಜಡ. ಸಿದ್ದರಾಮರ ಪ್ರಕಾರ ಅಂಗದಲ್ಲಿ ಮೃತ್ಯು ಅಡಗಿರುವುದರಿಂದ ದೇಹದ ನಶ್ವರತೆಯನ್ನು ಸ್ಪಷ್ಟಪಡಿಸುತ್ತಾರೆ. ಜನನದಲ್ಲಿ ಲಿಂಗ ಸಂಸ್ಕಾರ ಮರಣದಲ್ಲಿ ಲಿಂಗವು ನಮ್ಮ ಜೊತೆಗೆ ಇರುವುದರಿಂದ ಲಿಂಗೈಕ್ಯ ಎನ್ನುವುದು ಗಮನಾರ್ಹ. ಲಿಂಗ ಮತ್ತು ಲಿಂಗಾಯಿತ ಪದಗಳು ಮಾನಸಿಕ ಮತ್ತು ಭಾವನಾತ್ಮಕ ಭಕ್ತಿಯ ಚೌಕಟ್ಟನ್ನು ಹೊಂದಿದೆ. ಲಿಂಗೈಕ್ಯವೆಂದು ಬಳಸುವ ಉದ್ದೇಶ. ವ್ಯಕ್ತಿ ಅಮರತ್ವವನ್ನು ಪಡೆದುಕೊಳ್ಳುವ ಮನಸ್ಥಿತಿಯಾಗಿದೆ. ಲಿಂಗೈಕ್ಯ ಎಂದರೆ ಕಾಯ ಬಯಸಿದಂತೆ ಲಿಂಗ. ಲಿಂಗ ಬಯಸಿದಂತೆ ಕಾಯವಾಗಿದೆ.

ಅಂತಃಕರಣದ ಈ ಮನಸ್ಸಿನಲ್ಲಿ ಪರವಸ್ತು ಸೂಕ್ಷ್ಮವಾಗಿರುತ್ತದೆ. ಅದನ್ನು ನೆನೆಯಲು ಮನಸ್ಸು ಶಾಂತವಗಿರಬೇಕು ಎಂಬ ವಾದ ಶರಣ‌ ಸಿದ್ದರಾಮರದ್ದಾಗಿತ್ತು. ಬಾಹ್ಯ ಪೂಜೆಯ ಆಡಂಬರದಲ್ಲಿ ಮನಸ್ಸು ಶಾಂತವಾಗಿರಬೇಕು. ಪೂಜೆಯ ಸಡಗರದಲ್ಲಿ ಮನಸ್ಸು ಶಾಂತತೆಯನ್ನು ಕಳೆದುಕೊಳ್ಳುತ್ತದೆ. ಧೂಪ ದೀಪ ಪತ್ರೆ ಪುಷ್ಪಗಳನ್ನು ಲಿಂಗಮಯವಾದ ಈ ಮನಸ್ಸು ಸ್ವೀಕರಿಸುವುದಿಲ್ಲ.

ಮಾತೆಂಬುದು ಜ್ಯೋತಿರ್ಲಿಂಗವಾಗಬೇಕೆಂದು ಅಲ್ಲಮಪ್ರಭುಗಳ ವಚನದ ಸಾಲು ಇದೇ ಅರ್ಥವನ್ನು ಕೊಡುತ್ತದೆ. ಭಾವಲಿಂಗ, ಪ್ರಾಣಲಿಂಗ, ಮನಲಿಂಗಗಳು ಆತ್ಮ ಲಿಂಗವಾದಾಗ ಲಿಂಗೈಕ್ಯತೆಯನ್ನು ಮನ ಸ್ವೀಕರಿಸುತ್ತದೆ. ಸರಳತೆಯನ್ನು ಉಸಿರಾಗಿಸಿಕೊಂಡ ಶರಣರು ತೋರಿಕೆಯ ಭಕ್ತಿಯನ್ನು ಖಂಡಿಸಿದರು. ವಚನಗಳ ಸೌಂದರ್ಯವಿರುವುದೇ ಮಾತುಗಳ ಸಂಭ್ರಮದಲ್ಲಿ ಗೀತಗಳ ಮಾಧುರ್ಯದಲ್ಲಿ … ಲಿಂಗ ಭಕ್ತಿಯೇ ಸ್ವರವಾದಾಗಿದೆ. ಅನಂತವಾದ ಸ್ವರದ ಆಲಾಪನೆಯಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನ ಪ್ರಾಣಲಿಂಗದಲ್ಲಿದ್ದಾನೆ.

ಡಾ. ಸರ್ವಮಂಗಳ ಸಕ್ರಿ
ಮ. ನಂ. 6-2-74/8/4
ಮಾಣಿಕ ಪ್ರಭು ದೇವಸ್ಥಾನ ರಸ್ತೆ,
ಪಂಚಲಿಂಗೇಶ್ವರ ಕಾಲೋನಿ,
ರಾಯಚೂರು – 584 101
ಮೋಬೈಲ್ ಸಂ: +91 94499 46839

Loading

Leave a Reply