
ವಚನ ಸಾಹಿತ್ಯ ಶರಣರು ಸಾರಿದ ಮೌಲ್ಯಯುತ, ಘನತೆವೆತ್ತ ಸತ್ಯ ಸಂದೇಶ. ಭಕ್ತಿ ಮಾರ್ಗದಿಂದ ಮುಕ್ತಿ ಮಾರ್ಗದ ಕಡೆಗೆ ನಮ್ಮನ್ನು ಕೊಂಡೊಯ್ಯುವ ಯುಕ್ತ ರೂಪ. ಜಗದೊಂದಿಗೆ ಅನುಶೃತಗೊಂಡ ಜಗದ್ವಂದ್ಯ ಮಾರ್ಗ. “ಲಿಂಗ ಮಧ್ಯೆ ಜಗತ್ ಸರ್ವಂ” ಎಂಬಂತೆ ಲಿಂಗದಲ್ಲಿಯೆ ಸರ್ವವನ್ನು ಕಂಡವರು, ಲಿಂಗವೆ ಸಂಗಯ್ಯನನ್ನು ಸೇರುವ ಮಾರ್ಗವೆಂದು ಅರಿತವರು ನಮ್ಮ ಶರಣರು. ಲಿಂಗನಿಷ್ಟೆಯಿಂದಲೆ ಜಗಕೆ ಮಾದರಿಯಾದವರು. ಅರುಹಿನ ಕುರುಹು “ಲಿಂಗ”. ಲಿಂಗಸಾಮರಸ್ಯದಿ ಪರಶಿವನ್ನು ಕೂಡುವ ಪರಿಯೆ ತ್ರಾಟಕ ಯೋಗ. ಅದುವೆ ಶಿವಯೋಗ.
“ಯೋಗ” ಎಂಬ ಪದವು “ಯುಜ್” ಎಂಬ ಧಾತುವಿನಿಂದ ವ್ಯುತ್ಪತ್ತಿಯಾಗಿದೆ. ಅದಕ್ಕೆ ಕೂಟ (ಕೂಡುವದು, ಬೇರೆಯುವದು) ಎಂಬ ಅರ್ಥವಿದೆ. ಅಂದರೆ ಆತ್ಮ ಪರಮಾತ್ಮನಲ್ಲಿ ಬೇರೆಯುವದು. ಜೀವನು ಪರಶಿವನಲ್ಲಿ ಬೇರೆಯುವದೆ “ಶಿವಯೋಗ”. ಮಾನವ ಜನ್ಮದ ಮೂಲ ಉದ್ಧೇಶ ಭಕ್ತಿಯ ಮೂಲಕ ಮುಕ್ತಿ ಸಾಧನೆ.
ಯೋಗ ಎಂಬ ಪದಕ್ಕೆ ಮಾರ್ಗ ಎಂಬ ಪರ್ಯಾಯ ಪದವು ಇದೆ. ಭಕ್ತಿ ಯೋಗ, ಕರ್ಮ ಯೋಗ, ರಾಜಯೋಗ, ಎಂಬ ಪದಗಳಿಗೆ ಭಕ್ತಿ ಮಾರ್ಗ, ಕರ್ಮ ಮಾರ್ಗ, ರಾಜ ಮಾರ್ಗ ಹೀಗೆ ಪರ್ಯಾಯ ಪದಗಳನ್ನು ಬಳಸುತ್ತೆವೆ. ಶಿವಯೋಗ ಅಂದರೆ ಶಿವನನ್ನು ಸೇರುವ ಮಾರ್ಗ. ಅಂದರೆ ಪಥ ಎಂಬರ್ಥವು ಇದೆ.
ಜೀವನದಲ್ಲಿ ಸಾಕಷ್ಟು ಕರ್ಮಗಳನ್ನು ಮಾಡುತ್ತೆವೆ. ಕರ್ಮಗಳನ್ನು ಕಳೆದು ಭವ ಬಂಧನದಿಂದ ಪಾರಾಗಿ ತಾನು ದೇಹೇಂದ್ರಿಯಾದಿ ಕರಣಗಳಲ್ಲ. ಶಿವನ ಅಂಗವಾದ ಆತ್ಮ ಎಂಬ ಜ್ಞಾನ ಪಡೆದು ಶಿವನೊಂದಿಗೆ ಸಾಮರಸ್ಯ ಪಡೆಯುವದೆ ಲಿಂಗಾಂಗ ಸಾಮರಸ್ಯ. ಗುರುವಿನ ಮಾರ್ಗದರ್ಶನದಿಂದ ಗುರು ಲಿಂಗ ಜಂಗಮವನ್ನು ಜಾಗ್ರತಗೊಳೊಸಿ ಶಿವಾಭಿಮುಖವಾಗಿ ಮಾಡಿದರೆ ಶಿವಯೋಗ ಸಫಲವಾದಂತೆ.
ಶಿವಯೋಗವು ಶಕ್ತಿಗಳಲ್ಲಿ ಸಂಚಾರವಾಗುತ್ತದೆ. ಶಕ್ತಿಗಳಾದ ಚಿತ್ ಶಕ್ತಿ, ಪರಾ ಶಕ್ತಿ, ಆದಿಶಕ್ತಿ, ಇಚ್ಛಾಶಕ್ತಿ, ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿ ಈ ಆರು ಶಕ್ತಿಗಳು ಭಕ್ತಿಯಾಗಿ ಪರಿವರ್ತಿತವಾದಾಗ ಶ್ರದ್ಧಾ ಭಕ್ತಿ, ನಿಷ್ಠಾ ಭಕ್ತಿ, ಅವಧಾನ ಭಕ್ತಿ, ಅನುಭಾವ ಭಕ್ತಿ, ಆನಂದ ಭಕ್ತಿ, ಸಮರಸ ಭಕ್ತಿ ಎಂದೆನಿಸಿಕೊಳ್ಳುತ್ತವೆ.
ಈ ಶಕ್ತಿಯನ್ನು ಭಕ್ತಿಯನ್ನಾಗಿ ಪರಿವರ್ತಿಸುವಲ್ಲಿ ಆರು ಮೈಲುಗಲ್ಲುಗಳಿವೆ. ಅವುಗಳೇ ಷಟಸ್ಥಲಗಳು. ಭಕ್ತ, ಮಹೇಶ, ಪ್ರಸಾದ, ಪ್ರಾಣಲಿಂಗಿ ಶರಣ, ಐಕ್ಯ. ಶಿವಯೋಗವು ಆರು ಹಂತದಲ್ಲಿ ಅಂದರೆ ಷಟಸ್ಥಲ ಮಾರ್ಗದಲ್ಲಿ ನಡೆಯುವ ಒಂದು ಆಧ್ಯಾತ್ಮಿಕ ಪ್ರಯೋಗ.
ಈ ಶಕ್ತಿಗಳು ಸ್ಥೂಲ ಶರೀರ, ಸೂಕ್ಷ್ಮ ಶರೀರ, ಕಾರಣ ಶರೀರ ಎಂದು ಮೂರು ರೀತಿಯ ಅಂಗಗಳಾಗಿ ರೂಪಾಂತರಗೊಂಡು ಇವು ಕ್ರಮವಾಗಿ ತ್ಯಾಗಾಂಗ, ಭೋಗಾಂಗ, ಯೋಗಾಂಗಗಳಾಗಿ ಪರಿವರ್ತಿಸಬೇಕು.
ಪರಶಿವನಲ್ಲಿ ಇರುವ ಶಕ್ತಿಯೆ ಚಿತ್ ಶಕ್ತಿ ಇವು ಮುಂತಾದ ಶಕ್ತಿಗಳಾಗಿ ವಿಕಾಸಗೊಂಡು ಮನುಷ್ಯನಲ್ಲಿ ಪಂಚಭೂತಗಳಿಂದಾದ ದೇಹ, ಅಂತಃಕರಣಗಳು, ಜ್ಞಾನೇಂದ್ರೀಯ ಮತ್ತು ಕರ್ಮೇಂದ್ರೀಯಗಳಾಗಿ ರೂಪಾಂತರಗೊಂಡಿದೆ. ಅವುಗಳನ್ನು ಭಕ್ತಿಯಾಗಿ ಪರಿವರ್ತಿಸುವುದೆಂದರೆ ಅವು ಶಿವನ ಕೇಂದ್ರೀಯ ವರ್ತನೆಯಲ್ಲಿ ಮಾತ್ರ ತೊಡಗುವಂತೆ ಪ್ರೇರೆಪಿಸುವದು. ಅಂದರೆ ಲೌಕಿಕ ವಿಷಯಗಳಿಗೆ ಸತತವಾಗಿ ಹರಿದಾಡುವ ಮನಸ್ಸನ್ನು ನಿಯಂತ್ರಿಸುವದು.
ಶಿವಯೋಗದಲ್ಲಿ ಮೂರು ಪ್ರಕಾರವಾದ ಭಕ್ತಿಯೋಗ, ಕರ್ಮಯೋಗ, ಜ್ಞಾನಯೋಗಗಳು ಅಡಕವಾಗಿವೆ.
ಭಕ್ತಿಯೋಗ: ಗುರು, ಲಿಂಗ, ಜಂಗಮಕ್ಕೆ ತೋರಿಸುವ ಭಕ್ತಿ. ಅದಕ್ಕೆ ಪೂರಕವಾದ ಆಚಾರಗಳು ಭಕ್ತಿ ಯೋಗ.
ಕರ್ಮಯೋಗ: ತಾನು ಎನನ್ನು ಭೋಗಿಸುವದಿಲ್ಲ. ಭೋಗಿಸುವದೆಲ್ಲವು ಶಿವನೆ ಎಂದು ತಿಳಿದು ಆಚರಿಸುವದು.ಕರ್ಮ ಯೋಗ.
ಜ್ಞಾನಮಾರ್ಗ: ನಾನು ಶಿವಾಂಶಿಕ, ಸ್ವತಂತ್ರನಲ್ಲ. ಶಿವನ ಅಂಗ ಎಂದು ತಿಳಿಯುವದು.
ಇವುಗಳಿಗೆ ಪೂರಕವಾಗಿ ಆಧಾರಚಕ್ರದಲ್ಲಿ ಆಚಾರಲಿಂಗವು, ಸ್ವಾಧಿಷ್ಟಾನ ಚಕ್ರದಲ್ಲಿ ಗುರುಲಿಂಗವು, ಮಣಿಪೂರಕ ಚಕ್ರದಲ್ಲಿ ಶಿವಲಿಂಗವು, ಅನಾಹತ ಚಕ್ರದಲ್ಲಿ ಜಂಗಮಲಿಂಗವು, ವಿಶುದ್ಧಿ ಚಕ್ರದಲ್ಲಿ ಪ್ರಸಾದಲಿಂಗವು, ಮತ್ತು ಆಜ್ಞಾ ಚಕ್ರದಲ್ಲಿ ಮಹಾಲಿಂಗವು ಹೀಗೆ ಆರು ಚಕ್ರಗಳನ್ನು ಜಾಗ್ರತ ಮಾಡಿಕೊಂಡು ಆರು ಚಕ್ರಗಳಲ್ಲಿ ಆರು ಲಿಂಗಗಳ ದರ್ಶನಮಾಡಿದಾಗಲೇ ಶಿವಯೋಗ ಸಂಪೂರ್ಣ.
ವೈರಾಗ್ಯನಿಧಿ ಅಕ್ಕಮಹಾದೇವಿಯವರು ತಮ್ಮ ಒಂದು ವಚನದಲ್ಲಿ:
ದೂರದಲ್ಲಿಹನೆಂದು ಆನು
ಬಾಯಾರಿ ಬಳಲುತಿರ್ದೆನಯ್ಯಾ.
ಸಾರಿ ಬೆರಸಿ ಎನ್ನ ಕರಸ್ಥಲದಲ್ಲಿ ಮೂರ್ತಿಗೊಂಡಡೆ
ಎನ್ನ ಆರತವೆಲ್ಲವೂ ಲಿಂಗಾ ನಿಮ್ಮಲ್ಲಿ ನೆಟ್ಟಿತ್ತು ನೋಡಯ್ಯಾ.
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮನ್ನು ಕರಸ್ಥಲದಲ್ಲಿ ನೋಡಿ
ಕಂಗಳೆ ಪ್ರಾಣವಾಗಿರ್ದೆನಯ್ಯಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-82/ವಚನ ಸಂಖ್ಯೆ-233)
ಈ ವಚನ ವೈರಾಗ್ಯನಿಧಿ ಅಕ್ಕಮಹಾದೇವಿಯವರ ಶಿವಯೋಗ ಸಾಧನೆಯ ಪ್ರತಿರೂಪದಂತಿದೆ. ಶಿವಯೋಗದ ಮೂಲಕ ಮಲ್ಲಕಾರ್ಜುನನನ್ನು ಸಾಕ್ಷಾತ್ಕರಿಸಿಕೊಂಡ ಪರಿಯನ್ನು ಈ ವಚನದಲ್ಲಿ ನೋಡುತ್ತೆವೆ.
ನೋಟವೆ ಕೂಟ, ಕೂಟವೆ ಪ್ರಾಣ,
ಪ್ರಾಣವೆ ಏಕ, ಏಕವೆ ಸಮರಸ,
ಸಮರಸವೆ ಲಿಂಗ, ಲಿಂಗವೆ ಪರಿಪೂರ್ಣ,
ಪರಿಪೂರ್ಣವೆ ಪರಬ್ರಹ್ಮ, ಪರಬ್ರಹ್ಮವೆ ತಾನು!
ಇಂತಿ ನಿಜವ ಗುಹೇಶ್ವರ ಬಲ್ಲನಲ್ಲದೆ,
ಕಣ್ಣಗೆಟ್ಟಣ್ಣಗಳು ಎತ್ತ ಬಲ್ಲರು ನೋಡಯ್ಯ?
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-493/ವಚನ ಸಂಖ್ಯೆ-1319)
ಈ ವಚನದಲ್ಲಿ ವ್ಯೊಮಕಾಯರಾದ ಅಲ್ಲಮಪ್ರಭುಗಳು ಲಿಂಗಾಂಗ ಸಾಮರಸ್ಯ ಸಾಧಿಸಿದ ಸಾಧಕನು ತಾನೆ ಪರಬ್ರಹ್ಮನಾಗುತ್ತಾನೆ ಎಂದು ಹೇಳಿದ್ದಾರೆ. ತ್ರಾಟಕ ಯೋಗದಿಂದ ಹಂತ ಹಂತವಾಗಿ ಸಾಗುವ ಪರಿಯನ್ನು ಅಲ್ಲಮಪ್ರಭುಗಳು ವಿವರಿಸಿದ್ದಾರೆ.
ಹೀಗೆ ಶಿವಯೋಗವು ಶಿವನನ್ನು ಕೂಡುವ ಕೂಟ. ಅಂತರಂಗದ ಆಧ್ಯಾತ್ಮದ ಪರಶಿವನ್ನು ಸೇರುವ ಪ್ರಯೋಗ. ಈ ಪ್ರಯೋಗವನ್ನು ಸಾಧಿಸಿದಾಗಲೆ ಮಾನವ ಜನ್ಮದ ಪ್ರಯೋಜನವಾದಂತೆ.
ಶ್ರೀಮತಿ. ಸವಿತಾ ಮಾಟೂರ,
ಶ್ರೀ ಗುರು ಮಹಂತ ಕಮ್ಯೂನಿಕೇಶನ್ ಸೆಂಟರ್,
ಕಂಠಿ ಸರ್ಕಲ್,
ಇಲಕಲ್ಲ, ಬಾಗಲಕೋಟ ಜಿಲ್ಲೆ.
ಮೋಬೈಲ್ ನಂ. 78927 10782
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in