
ಬೇಡೆನೆಗೆ ಕೈಲಾಸ, ಬಾಡುವುದು ಕಾಯಕವು
ನೀಡೆನಗೆ ಕಾಯಕವ – ಕುಣಿದಾಡಿ
ನಾಡಿ ಹಂದರಕೆ ಹಬ್ಬಿಸುವೆ!
… … … ಜನಪದ ಕವಿ ಸಾವಳಿಗೇಶ
ಇಡೀ ಶರಣ ಪರಂಪರೆಯಲ್ಲಿ ಬಹುಮುಖ್ಯವಾಗಿ ಕಾಯಕಕ್ಕೆ ಪ್ರಾಮುಖ್ಯತೆ ಇದೆ. ಶಿವಶರಣರ ವೈಶಿಷ್ಟ್ಯವೆಂದರೆ ಕಾಯಕವನ್ನು ವೃತದಂತೆ ಕಟ್ಟುನಿಟ್ಟಾಗಿ ಪರಿಪಾಲಿಸುವುದು. ಶ್ರಮದ ಬೆವರಹನಿಯಲ್ಲಿ ಅವರು ಲಿಂಗದ ಮೈ ತೊಳೆದವರು. ಆ ಲಿಂಗಪ್ಪನಿಗೂ ಅಷ್ಟೇ ಈ ಶ್ರಮಜೀವಿ ಶರಣರ ಮೈಬೆವರಿನ ಮಜ್ಜನವು ಗಂಗಾಜಲದ ಮಜ್ಜನಕ್ಕಿಂತ ಶ್ರೇಷ್ಠ ಎಂಬುದು. ನುಲಿಯ ಚಂದಯ್ಯ, ಮಾದಾರ ಚನ್ನಯ್ಯ, ಮೋಳಿಗೆಯ ಮಾರಯ್ಯ, ಸತ್ಯಣ್ಣ, ಮುಂತಾದ ಶಿವಶರಣ ಪುಣ್ಯಕಥೆಗಳನ್ನಾಲಿಸಿದಾಗ ಅವರು ಕಾಯಕಕ್ಕೆ ಕೊಟ್ಟ ಮಹತ್ವ ಅದರಲ್ಲಿ ಅವರು ತೋರುವ ಶ್ರದ್ಧೆ, ನಿಷ್ಠೆ, ಅಚಲತೆ ಅಚ್ಚರಿಗೊಳಿಸುವಂತಹದ್ದು. ಇವರುಗಳೆಲ್ಲಾ ತಮ್ಮ ತಮ್ಮ ವೃತ್ತಿಗಳಲ್ಲೇ ಆಧ್ಯಾತ್ಮ ಯೋಗವನ್ನು ಸಾಧಿಸಿದವರಾಗಿದ್ದಾರೆ. ಇಂತಹ ಕಾಯಕಯೋಗಿ ಸಾಧಸಿದ ಶರಣರಲ್ಲಿ ನಿಲ್ಲಬಲ್ಲ ಕುಂಬಾರ ಗುಂಡಯ್ಯ ಬಸವಯುಗದ ಶಿವಶರಣರಲ್ಲಿ ಒಬ್ಬರು. ಕುಂಬಾರ ಗುಂಡಯ್ಯ ಕಾಯಕಯೋಗಿ ಹೇಗೋ ಹಾಗೆಯೇ ಭಕ್ತಿ ಪಾರಮ್ಯತೆಯನ್ನು ಎತ್ತಿ ಹಿಡಿದ ಶಿವಶರಣನಾಗಿದ್ದಾನೆ. “ಬೇಡೆನೆಗೆ ಕೈಲಾಸ ಬಾಡುವುದು ಕಾಯಕ’’ ಎನ್ನುವ ಗುಂಡಯ್ಯ ಕೈಲಾಸಕ್ಕಿಂತ ಕಾಯಕ ದೊಡ್ಡದು ಎನ್ನುತ್ತಲೇ ಕೈಲಾಸದ ಕಲ್ಪನೆಯನ್ನು ಒಡೆದವನು.
ಕೈಲಾಸವೆಂಬುದೊಂದು ಬೆಳ್ಳಿಯ ಬೆಟ್ಟ,
ಅಲ್ಲಿದ್ದಾತ ರುದ್ರನೊಬ್ಬ.
ಆ ಬೆಟ್ಟಕ್ಕೂ ಆ ರುದ್ರಂಗೆಯೂ ಪ್ರಳಯವುಂಟೆಂಬುದ
ಗುಹೇಶ್ವರಾ ನಿಮ್ಮ ಶರಣ ಬಲ್ಲನು
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-422/ವಚನ ಸಂಖ್ಯೆ-1134)
ಅಲ್ಲಮಪ್ರಭುಗಳ ವಾಣಿಯಂತೆ ಕೈಲಾಸದ ರುದ್ರನನ್ನೇ ತನ್ನ ಭಕ್ತಿ, ಕಾಯಕದಿಂದ ಮರ್ತ್ಯಲೋಕದಲ್ಲಿ ನರ್ತಿಸುವಂತೆ ಮಾಡಿದ ಕುಂಬಾರ ಗುಂಡಯ್ಯನ ಕಥೆ ಜನಜನಿತವಾಗಿದೆ.
ಮಣ್ಣಿನ ಮಡಕೆಯ ಕಾಯಕವನ್ನು ಮಾಡಿಕೊಂಡಿದ್ದ ಕುಂಬಾರ ಗುಂಡಯ್ಯನವರ ಕಥೆ ಜನಪ್ರಿಯವಾಗಿದೆ. ಕುಂಬಾರ ಗುಂಡಯ್ಯನವರ ಕಾಯಕವು ಶಿವನನ್ನು ಒಲಿಸಿಕೊಳ್ಳುವ ಸಾಧನವಾಯಿತು. ಶಿವಶರಣರಲ್ಲಿ ಮುಖ್ಯವಾಗಿ ಎರಡು ವರ್ಗಗಳಿವೆ. ಮೊದಲನೆಯದು ಕಾಯಕ ನಿರತರಾಗಿ ಆಧ್ಯಾತ್ಮ ಸಾಧನೆ ಮಾಡುತ್ತಾ. ವಚನಗಳ ರಚನೆ ಮಾಡಿದ ಶಿವಶರಣರದು. ಎರಡನೆಯದು ಕಾಯಕ ನಿರತರಾಗಿ ಆಧ್ಯಾತ್ಮ ಸಾಧನೆ ಮಾಡುತ್ತಾ ಶಿವಪಾರಮ್ಯ (ಲಿಂಗಾಂಗ ಸಾಮರಸ್ಯ) ಪಡೆದ ಶಿವಶರಣರು ವಚನಗಳು ರಚನೆ ಮಾಡದೇ ಇರುವುದು ಮತ್ತೊಂದು ವರ್ಗ. ಎರಡನೇಯ ಸಾಲಿನಲ್ಲಿ ಕುಂಬಾರ ಗುಂಡಯ್ಯನವರು ಸೇರುತ್ತಾರೆ. ಗುಡ್ಡಾಪುರ ದಾನಮ್ಮನವರು ಸಹ ಲಿಂಗಾಂಗ ಸಾಮರಸ್ಯ ಸಾಧಿಸಿದ್ದರೂ ಅವರು ವಚನಗಳ ರಚನೆ ಮಾಡಿಲ್ಲ. ಅದರಂತೆ ಇದುವರೆಗೂ ಕುಂಬಾರ ಗುಂಡಯ್ಯನವರ ವಚನಗಳಾಗಲಿ ಅಥವಾ ಅವರು ವಚನಗಳನ್ನು ಬರೆದಿರುವ ಕುರಿತಾಗಲಿ ಮಾಹಿತಿಗಳು ಲಭ್ಯವಿಲ್ಲ.
ಭೌತಿಕ ಪ್ರಪಂಚಕ್ಕೂ – ಪಾರಮಾರ್ಥ ಲೋಕಕ್ಕೊ ಕಾಯಕ ಭಾಷೆಯಿಂದ ಸೇತುವೆ ಕಟ್ಟಿದವರು ಕುಂಬಾರ ಜನಾಂಗಂದ ಮೂಲ ಪುರುಷ ಕುಂಬಾರ ಗುಂಡಯ್ಯನವರು. ಇವರ ಕುರಿತು ಚಾರಿತ್ರಿಕ ಮಾಹಿತಿಗಳು ಅಷ್ಟೊಂದು ಲಭ್ಯವಾಗಿಲ್ಲ. ಕುಂಬಾರ ಗುಂಡಯ್ಯನವರು ಚರಿತ್ರೆಯ ಮೇಲೆ ಬೆಳಕು ಚೆಲ್ಲುವ ಶಾಸನವಿದ್ದು ಅದೇ “ಮರಡಿಪುರ ಶಾಸನ’’ ವಾಗಿದೆ. ಕುಂಬಾರಿಕೆ ನಮ್ಮ ಪ್ರಾಚೀನ ಕಲೆಗಳಲ್ಲಿ ಒಂದು. ಕುಂಬಾರಿಕೆಯ ಕಲೆಯಲ್ಲಿ ಸಿದ್ಧಿ ಸಾಧಿಸಿದ ಗುಂಡಯ್ಯನವರ ಕುರಿತು ಹರಿಹರ “ಕುಂಬಾರ ಗುಂಡಯ್ಯನ ರಗಳೆ’’ ಯನ್ನು ಬರೆದಿರುವುದು ಕಂಡು ಬರುವುದರಿಂದ ಹರಿಹರನ ಕಾಲಾವಧಿಗಿಂತ ಪೂರ್ವದಲ್ಲಿ ಕುಂಬಾರ ಗುಂಡಯ್ಯನವರು ಜೀವಿಸಿರಬಹುದು ಎಂದು ಊಹಿಸಲು ಸಾಧ್ಯವಿದೆ. ಮರಡಿಪುರ ಶಾಸನದಲ್ಲಿ ಕುಂಬಾರ ಗುಂಡಯ್ಯನವರ ಉಲ್ಲೇಖವಿರುವಂತೆ, ಅಬಲೂರು ಸೋಮೇಶ್ವರ ದೇವಾಲಯದಲ್ಲಿ “ಕುಂಬಾರ ಗುಂಡಯ್ಯನ ಮುಂದೆ ಬಂದಾಡಿದ ನಮ್ಮ ಶಿವನು’’ ಎಂಬ ಬರಹವಿದ್ದು, ಅದರ ಕೆಳಗೆ ಗಡಿಗೆಯನ್ನು ಬಾರಿಸುತ್ತ ಕುಳಿತ ಕುಂಬಾರ ಗುಂಡಯ್ಯನವರ ಶಿಲ್ಪಚಿತ್ರವಿದೆ. ಶಾಸನ, ಕಾವ್ಯ, ಪುರಾಣ, ವಚನ ಜನಪದ ಕಾವ್ಯಗಳಲ್ಲಿ ಗುಂಡಯ್ಯನವರ ಕುರಿತು ಮಾಹಿತಿ, ಕಥೆಗಳು ಲಭ್ಯವಾಗುತ್ತವೆ.
ಕುಂಬಾರ ಗುಂಡಯ್ಯನ ತಂದೆ ಸತ್ಯಣ್ಣ ತಾಯಿ ಸಂಗಮ್ಮ. ಧರ್ಮಪತ್ನಿ ಕೇತಲದೇವಿ. ಸಂಸಾರಿಯಾಗಿ ಕಾಯಕ ಯೋಗಿಯಾಗಿ ಶಿವಸಿದ್ಧಿ ಪಡೆದ ಭಕ್ತ ಗುಂಡಯ್ಯನವರು. ಕಾಯಕ ಸಿದ್ಧಾಂತಕ್ಕೆ ಮುನ್ನುಡಿ ಬರೆದ ಕುಂಬಾರ ಗುಂಡಯ್ಯನವರ ಕಾಲಾವಧಿ ಸುಮಾರು 1160 ಎಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಬೀದರ ಜಿಲ್ಲೆಯ “ಭಾಲ್ಕಿ’’ ಗುಂಡಯ್ಯನವರು ಜನ್ಮಸ್ಥಳ. ಈ “ಭಾಲ್ಕಿ” ನಗರ ಶಾಸನಗಳಲ್ಲಿ ಭಲ್ಲೂ ನಗರ, ಭಲ್ಲೂಕೆ, ಭಾಲಕ ಎಂದೂ ಕರೆಯಲ್ಪಟ್ಟಿದೆ. ಇವತ್ತಿಗೂ ಭಾಲ್ಕಿಯಲ್ಲಿ ಕುಂಬಾರ ಗುಂಡಯ್ಯನವರ ಸ್ಮಾರಕವನ್ನು ಕಾಣಬಹುದಾಗಿದೆ. ಕುಂಬಾರ ಓಣಿಯಲ್ಲಿ ನೂರಾರು ಕುಂಬಾರ ಮನೆಗಳನ್ನು ಭಾಲ್ಕಿಯಲ್ಲಿ ನೋಡಬಹುದಾಗಿದೆ. ಆ ಓಣಿಯಲ್ಲೇ “ಕುಂಭೇಶ್ವರ’’ ಎಂಬ ದೇವಾಲಯವೂ ಇದೆ. ಅಲ್ಲಿ ಕುಂಬಾರ ಗುಂಡಯ್ಯ ಮಡಕೆ ಮಾಡುವಂತಹ ದೃಶ್ಯ ಕಲ್ಲಿನ ಮೇಲಿದೆ.
ಅವರ ಧರ್ಮಪತ್ನಿ ಕೇತಲಾದೇವಿ “ಕುಂಭೇಶ್ವರ’’ ಎಂಬ ಅಂಕಿತದಲ್ಲಿ ವಚನಗಳನ್ನು ಬರೆದಿದ್ದಾರೆ. ಇದರಿಂದ ಈ ದಂಪತಿಗಳ ಇಷ್ಟದೈವ ಮತ್ತು ಆತ್ಮಸಾಕ್ಷಿಯ ಪ್ರಜ್ಞೆ “ಕುಂಭೇಶ್ವರ’’ ಎಂಬುದಾಗಿತ್ತು. ಕೇತಲಾದೇವಿಯೂ ಶ್ರೇಷ್ಠ ಶಿವಭಕ್ತೆಯಾಗಿದ್ದಳು. ತನ್ನ ಪತಿಯ ಕಾಯಕ್ಕೆ ಚ್ಯುತಿ ಬಾರದಂತೆ ನಡೆದುಕೊಂಡ ಸಾದ್ವಿಸತಿಯವಳು. ಪತಿಯ ಕಾಯಕದೊಳಗೆ ಜೊತೆಯಾದ ಕೇತಲಾದೇವಿಯವರು ಅನುಭಾವಿ ಶಿವಶರಣೆಯಾದವರು. “ಕೇತಲದೇವಿ ನಿತ್ಯ ಲಿಂಗಕ್ಕೆ ಪಾವುಡವನ್ನು ಹಾಕುವ ವ್ರತವನ್ನು ಕೈಗೊಂಡಿದ್ದರಂತೆ. ಒಮ್ಮೆ ಅದು ದೊರೆಯದೆ ಹೋಗಲು ತನ್ನ ಎದೆಯ ಚರ್ಮವನ್ನೇ ತೆಗೆದು ಹಾಕಲು ಶಿವನು ಮೆಚ್ಚಿದನಂತೆ.’’ ಈ ಕಥೆ ಕೇತಲಾದೇವಿಯವರ ವ್ರತನಿಷ್ಠೆಯನ್ನು ಎತ್ತಿ ತೋರುತ್ತದೆ. ಇವರ ಎರಡು ವಚನಗಳನ್ನು ಬರೆದಿರುತ್ತಾರೆ.
ಹದ ಮಣ್ಣಲ್ಲದೆ ಮಡಕೆಯಾಗಲಾರದು.
ವ್ರತಹೀನನ ಬೆರೆಯಲಾಗದು.
ಬೆರೆದಡೆ ನರಕ ತಪ್ಪದು
ನಾನೊಲ್ಲೆ ಬಲ್ಲೆನಾಗಿ, ಕುಂಭೇಶ್ವರಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-299/ವಚನ ಸಂಖ್ಯೆ-772)
ಲಿಂಗವಂತರು ಲಿಂಗಾಚಾರಿಗಳ ಅಂಗಳಕ್ಕೆ ಹೋಗಿ
ಲಿಂಗಾರ್ಪಿತವ ಮಾಡುವಲ್ಲಿ ಸಂದೇಹವಿಲ್ಲದಿರಬೇಕು.
ಅದೆಂತೆಂದಡೆ:
“ಭಕ್ತಸ್ಯ ಮಂದಿರಂ ತಥಾ | ಭಿಕ್ಷಲಿಂಗಾರ್ಪಿತಂ ತಥಾಃ
ಜಾತಿ ಜನ್ಮ ರಜೋಚ್ಫಿಷ್ಠಃ | ಪ್ರೇತಸೂತಕ ವಿವರ್ಜಿತಃ ||”
ಇಂತೆಂದುದಾಗಿ,
ಕಾಣದುದನೆಚ್ಚರಿಸದೆ, ಕಂಡುದನು ನುಡಿಯದೆ.
ಕಾಣದುದನು ಕಂಡುದನು ಒಂದೆ ಸಮವೆಂದು ಅರಿಯಬಲ್ಲರೆ
ಕುಂಭೇಶ್ವರಲಿಂಗವೆಂಬೆನು.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-299/ವಚನ ಸಂಖ್ಯೆ-771)
ಕೇತಲಾದೇವಿಯವರ ಎರಡು ವಚನಗಳಲ್ಲೂ ತಮ್ಮ ಕುಂಬಾರಿಕೆಯ ಕಾಯಕದ ಭಾಷೆಯನ್ನು ಆಧ್ಯಾತ್ಮಕ್ಕೆ ಬಳಸಿರುವುದನ್ನು ಕಾಣಬಹುದು. ಪತಿಯ ಕಾಯಕಕ್ಕೆ ಇವರು ಸಹ ತಮ್ಮನ್ನು ಸಮರ್ಪಿಸಿಕೊಂಡಿರುವುದನ್ನು ಇಲ್ಲಿ ಗಮನಿಸಬಹುದು.
ಕುಂಬಾರ ಗುಂಡಯ್ಯನವರು ಮಡಕೆಯನ್ನು ಮಾಡುವ ಬಗೆಯು ವಿನೂತನವಾದುದು. ಅವರು ತನು-ಮನಗಳ ತುಂಬಾ ಭಕ್ತಿಯನ್ನು ಹೊದ್ದುಕೊಂಡು ಮಡಕೆ ಮಾಡುವಾಗ ಆ ಕಾಯಕದಲ್ಲಿ ಸಂಪೂರ್ಣವಾಗಿ ಲೀನವಾಗಿ ಬಿಡುತ್ತಿದ್ದರು. ಇದೇ ಕಾಯಕದ ತನ್ಮಯತೆ, ಇದೆ ಕಾಯಕಯೋಗ ನಿದ್ರೆ. ಮಣ್ಣು ತುಳಿದು ಹದ ಮಾಡುವಲ್ಲಿ, ತಟ್ಟಿ-ತಟ್ಟಿ ಮಡಕೆ ಮಾಡುವಲ್ಲಿ ಶಿವಧ್ಯಾನದಲ್ಲಿ ಮೈಮರೆಯುತ್ತಿದ್ದ ಕುಂಬಾರ ಗುಂಡಯ್ಯನವರ ಕಾಯಕ ಭಕ್ತಿ ಹೆಸರುವಾಸಿಯಾದದ್ದು. ಮಡಕೆ ಮಾಡುತ್ತಾ ಅದನ್ನು ತಟ್ಟಿ-ತಟ್ಟಿ ಅದರಿಂದ ಹೊಮ್ಮುತ್ತಿದ್ದ ಓಂಕಾರ ನಾದಕ್ಕೆ ಮೈ ಮರೆತು ಗುಂಡಯ್ಯನವರು ಕುಣಿಯುತ್ತಿದ್ದದ್ದೂ ಉಂಟು.
ಇದೇ ಭಕ್ತಿಯ ಆವೇಶ. ಇದೇ ಭಕ್ತಿಯ ಪರಾಕಾಷ್ಠೆ. ಭಕ್ತಿಗೆ, ಭಕ್ತಿ ಎಂದರೇನು ಎಂಬುದಕ್ಕೆ ಕುಂಬಾರ ಗುಂಡಯ್ಯನವರೇ ಸಾಕ್ಷಿಯಾಗಿದ್ದರು. ಯಾವುದೇ ಕಾಯಕದಲ್ಲಿ ತನ್ಮಯತೆ ಇದ್ದರೆ ಅದೇ ಪರಮಾತ್ಮನನ್ನು ಒಲಿಸುವ ಸುಲಭ ಮಾರ್ಗ ಎಂಬುದಕ್ಕೆ ಶಾಸನದಂತಿದ್ದವರು ಗುಂಡಯ್ಯನವರು. ತಮ್ಮ ಕಾಯಕದಿಂದ ಬಂದುದನ್ನು ದಾಸೋಹಕ್ಕೆ ತಮ್ಮ ನಿತ್ಯ ಜೀವನಕ್ಕೆ ಪ್ರಾಮಾಣಿಕವಾಗಿ ಬಳಸುತ್ತಿದ್ದರು. ಜೀವನ ಸುಂದರವಾಗಲು, ಸಮಾಜ ಭದ್ರವಾಗಲು ಕಾಯಕವೇ ಮುಖ್ಯ ಎಂಬುದನ್ನು ಜೀವನದ ಉಸಿರಾಗಿಸಿಕೊಂಡು ಗುಂಡಯ್ಯನವರಿಗೆ ಕಾಯಕದ ಜೊತೆಗೆ ಲಿಂಗಪೂಜೆ, ಶಿವಯೋಗವೂ ಉಸಿರಾಗಿತ್ತು. ಕಾಯಕವೆಂದರೆ ಲಿಂಗಪೂಜೆ, ಅದೇ ಶಿವಯೋಗ ಆಗಿತ್ತು. ಕುಂಬಾರ ಗುಂಡಯ್ಯನವರ ಮಡಕೆ ಮಾಡುವ ಕಾಯಕಕ್ಕೆ ಷಟ್ವ್ರಕ್ರದ ಕ್ರಮವಿದೆ. “ಆಧಾರ ಚಕ್ರದಲ್ಲಿ ಕುಂಡಲಿನೀ ಶಕ್ತಿಯು ಪುಟವಾಗಿ ಬಳಿಕ ಊರ್ಧ್ವಮುಖವಾಗಿ ಏರಿ ಭ್ರೂಮಧ್ಯ ಸ್ಥಾನವನ್ನು ಸೇರಿ ಶಿವಸಾಕ್ಷಾತ್ಕಾರವಾಗುತ್ತದೆ. ಆಧಾರ ಚಕ್ರದಿಂದ ಪರಮಾತ್ಮನ ಅರಿವು ಜಾಗೃತವಾಗುತ್ತದೆ’’ ಎಂಬ ತತ್ವ ಅವರ ಮಡಕೆ ಕಾಯಕದಲ್ಲಿದೆ. “ಚಕ್ರಕ್ಕೆ ನೆಲಕ್ಕೆ ಪಟ್ಟಿಯೇ ಆಧಾರ. ತಿರುಗಲು ಸಹಾಯವಾಗುವ ಚಕ್ರದ ನಡುವಿನ ಮೊಳೆ ನಾಭಿ. ಶರೀರವೇ ಜೇಡಿ ಮಣ್ಣು. ನಿಷ್ಠೆಯೆಂಬ ಕೋಲಿನಿಂದ ಚಕ್ರವನ್ನು ತಿರುಗಿಸಿ ಜೇಡಿಮಣ್ಣಿನಿಂದ ಕಟಾಹ ಅಥವಾ ಮಡಿಕೆಯನ್ನು ರೂಪಿಸಲಾಗುತ್ತದೆ. ಅದನ್ನು ನೆನಹು ಎನ್ನುವ ಚಟದಾರದಿಂದ ಕೊಯ್ದು ತೆಗೆದು ಕರಣದಿಂದ ತಟ್ಟಿ ಬಡಿದು ಶೋಷಣವೆಂಬ ಬಿಸಿಲಿನಿಂದ ಆರಿಸಿ, ಒಣಗಿಸಿ ಉದರಾಗ್ನಿಯಿಂದ ಸುಟ್ಟು ಮಡಕೆಯನ್ನು ಮಾಡುತ್ತಾನೆ. ಹಸಿಯ ಮಣ್ಣಿನ ಮಾನವದೇಹ ಭಕ್ತಿ ಮತ್ತು ಸಾಧನೆಗಳ ಮೂಲಕ ಒಣಗಿ ಬೆಂದು ಪಕ್ವವಾಗಿ ಶಿವನಿಗೆ ಅರ್ಹವಾಗುತ್ತದೆ, ಎಂಬದು ಕುಂಬಾರ ಗುಂಡಯ್ಯನವರ ಕಾಯಕದ ಸಂದೇಶವಾಗಿತ್ತು.
ಕುಂಬಾರ ವೃತ್ತಿಗೆ ಕಾಯಕದ ಪಾವಿತ್ರತೆ ತಂದುಕೊಟ್ಟ ಕುಂಬಾರ ಗುಂಡಯ್ಯನವರು ಶರಣಸಂಕುಲದಲ್ಲಿ ಕಾಂತಿಯುತವಾದ ಜ್ಯೋತಿ. ಕಾಯಕದೊಂದಿಗೆ ಅನುಸಂಧಾನವಾದ ಇವರ ಲಿಂಗಪೂಜೆ-ಶಿವನಿಷ್ಠೆ ಅಸಾಧಾರಣವಾದುದು. ಶಿವಯೋಗ ತತ್ವವನ್ನು ಕಾಯಕಕ್ಕೆ ಅಳವಡಿಸಿದ ಮಹಾ ಶಿವಯೋಗಿ ಕುಂಬಾರ ಗುಂಡಯ್ಯನವರು. ಇಂತಹ ಶ್ರೇಷ್ಠ ಶಿವಶರಣರನ್ನು ಶಿವಯೋಗಿ ಸಿದ್ಧರಾಮೇಶ್ವರರು, ಅಂಬಿಗರ ಚೌಡಯ್ಯನವರು, ಜೇಡರ ದಾಸಿಮಯ್ಯನವರು ತಮ್ಮ ವಚನಗಳಲ್ಲಿ ಸ್ಮರಿಸಿಕೊಂಡಿದ್ದಾರೆ.
ಶಿವಯೋಗಿ ಸಿದ್ಧರಾಮೇಶ್ವರರ ವಚನ;
ಕುಂಬಾರರೆಲ್ಲರು ಗುಂಡಯ್ಯನಾಗಬಲ್ಲರೆ?
ಮಡಿವಾಳರೆಲ್ಲರು ಮಾಚಯ್ಯನಾಗಬಲ್ಲರೆ?
ಜೀಡರೆಲ್ಲರು ದಾಸಿಮಯ್ಯನಾಗಬಲ್ಲರೆ?
ಎನ್ನ ಗುರು ಕಪಿಲಸಿದ್ಧಮಲ್ಲೇಶ್ವರಯ್ಯಾ,
ಪ್ರಾಣಿಗಳ ಕೊಂದು ಪರಿಹರಿಸಬಲ್ಲಡೆ
ತೆಲುಗ ಜೊಮ್ಮಯ್ಯನಾಗಬಲ್ಲರೆ?
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-447/ವಚನ ಸಂಖ್ಯೆ-1431)
ಅಂಬಿಗರ ಚೌಡಯ್ಯನವರ ವಚನ;
[ನಂಬಿಯಣ್ಣ] ಮಾಡುವ ಭಕ್ತಿ ನಾಡೆಲ್ಲ ಮಾಡಬಹುದಯ್ಯಾ,
ಕುಂಬಾರ ಗುಂಡಯ್ಯ ಮಾಡುವ ಭಕ್ತಿ ಊರೆಲ್ಲ ಮಾಡಬಹುದಯ್ಯಾ,
ಬಸವಣ್ಣ ಮಾಡುವ ಭಕ್ತಿ ಶಿಶುವೆಲ್ಲ ಮಾಡಬಹುದಯ್ಯಾ,
ಇದೇನು ದೊಡ್ಡಿತ್ತೆಂಬರು.
ಸರ್ವರಿಗೆ ವಶವಾಗದ ಭಕ್ತಿ ಅವರ ಮನ-ಜ್ಞಾನದಂತೆ ಇರಲಿ ಶರಣಾರ್ಥಿ.
ಈ ಸುಧೆಯೊಳಗೆ ಶುದ್ಧಭಕ್ತಿಯನರಿತು
ನಡೆದುದು ಬಟ್ಟೆಯಾಗದೆ? ನುಡಿದುದು ಸಿದ್ಧಿಯಾಗದೆ?
ದೇಹಕ್ಕೆ ಕಷ್ಟ-ನಷ್ಟ, ರೋಗ-ರುಜೆಗಳು ಬಂದು ಅಟ್ಟಿ ಮುಟ್ಟಿದವಾಗಿ,
ದೃಢವಾಗಿದ್ದು ಶರಣನ ಮನವು ನಿಶ್ಚಯಿಸಿ,
ದೃಢಶೀಲಂಗಳಂ ಬಿಡದೆ ನಡೆವಾತ ದೊಡ್ಡ ಭಕ್ತನೆಂದಾತ
ನಮ್ಮ ಅಂಬಿಗರ ಚೌಡಯ್ಯ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-64/ವಚನ ಸಂಖ್ಯೆ-166)
ಜೇಡರ ದಾಸಿಮಯ್ಯನವರ ವಚನ;
ನಂಬಿದ ಚೆನ್ನನ ಅಂಬಲಿಯನುಂಡ.
ಕೆಂಬಾವಿಯ ಭೋಗಯ್ಯನ ಹಿಂದಾಡಿಹೋದ.
ಕುಂಭದ ಗತಿಗೆ ಕುಕಿಲಿರಿದು ಕುಣಿದ.
ನಂಬದೆ ಕರೆದವರ
ಹಂಬಲನೊಲ್ಲನೆಮ್ಮ ರಾಮನಾಥ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-299/ವಚನ ಸಂಖ್ಯೆ-771)
ವಚನಗಳು ಕನ್ನಡದ ತವನಿಧಿಗಳು ಪ್ರಮುಖ ವಚನಕಾರರಲ್ಲಿ ಕುಂಬಾರ ಗುಂಡಯ್ಯನವರು ವ್ಯಕ್ತಿತ್ವ ಅರಲಿ ನಿಂತಿದೆ. ಅಂತೆಯೇ ಭಕ್ತಿ ಕವಿ ಎಂದೇ ಖ್ಯಾತನಾದ ಹರಿಹರ ಕುಂಬಾರ ಗುಂಡಯ್ಯನವರ ಭಕ್ತಿ-ಕಾಯಕ-ನಿಷ್ಠೆಗಾಗಿ ತನ್ನ ಒಂದು ರಗಳೆಯನ್ನೇ ಮೀಸಲಾಗಿರಿಸಿದ್ದಾನೆ. ವರ್ಣಕದಲ್ಲಿ ಬರೆಯಲ್ಪಟ್ಟ ಈ ರಗಳೆಯಲ್ಲಿ ಕುಂಬಾರ ಗುಂಡಯ್ಯನವರ ವ್ಯಕ್ತಿತ್ವವೇ ಅನಾವರಣವಾಗುತ್ತದೆ.
ಹರಿಹರನ ರಗಳೆಯಲ್ಲಿ ಕುಂಬಾರ ಗುಂಡಯ್ಯನ ವ್ಯಕ್ತಿತ್ವ ದರ್ಶನ:
. . . . ಉತ್ತರಭಾಗದೊಳಿರ್ಪುದು
ಸಂತತ ಬಲ್ಲುಕೆಪುರವೆನಿಸಿರ್ಪುದು
ಅಲಿರ್ಪಂ ಶಶಿಮೌಳಿಯ ಶರಣಂ
ಸಲ್ಲಲಿತಂ ಮಾಯಾನಿರುಹರಣಂ
ಘಟಕಾಯಕವಾಯತವಾಗಿರ್ಪುದು
ನಿಟಿಲಾಕ್ಷನ ನಟನೆಗೆ ನಲಿವಪ್ಪುದು
ನಾಮಂ ಕುಂಬರ ಗುಂಡನೆನಿಪ್ಪುದು
ಸೋಮಧರನ ಕಿವಿಗಿನಿದಾಗಿರ್ಪುದು
ನೇಮಸ್ಥಂ ನೇಮಸ್ಥಂ ಶಿವಶಿವ
ಭೂಮಿಯೊಳುತ್ತಮ ಭಕ್ತಂ ಶಿವಶಿವ
ಮಾಡುವ ಕಾಯಕವದನೇನೆಂಬೆಂ
ನೋಡುವಡೆನಗರಿದಿನ್ನೆಂತೆಂಬೆಂ
ಶಶಿಮೌಳಿಯ ಶರಣ (ಶಿವಶರಣ), ಸಲ್ಲಲಿತ, ಮಾಯೆಯನ್ನು ಗೆದ್ದವ, ನೇಮಸ್ಥ, ಭೂಮಿಯಲ್ಲಿ ಉತ್ತಮ ಭಕ್ತ, ಮಡಕೆ ಕಾಯಕದವ ಕುಂಬರ ಗುಂಡ ಎಂದು ಕುಂಬಾರ ಗುಂಡಯ್ಯನ ಪರಿಚಯವನ್ನು ಈ ರೀತಿ ಹರಹರ ಮಾಡಿ ಧನ್ಯನಾಗಿದ್ದಾನೆ.
ಹರಿಹರನ ರಗಳೆಯಲ್ಲಿ ಕುಂಬಾರ ಗುಂಡಯ್ಯನ ಕಾಯಕ ದರ್ಶನ:
ಆಧಾರವೆಯಾಧಾರಮದಾಗಿರ್
ವೇಧೆಯೆ ಚಕ್ರದ ಮೊಳೆ ತಾನಗಿರೆ
ಮಿಗೆ ಷಟ್ಚ್ರಕ್ರಮೆ ಚಕ್ರಮದಾಗಿರೆ
ಸೊಗಯಿಪ ನಾಭಿಯೆ ನಾಭಿಯದಾಗಿರೆ
ಕನಸಿನ ಕಾಯಂ ಮೃತ್ತಿಕೆಯಾಗಿರೆ
ನೆನಹಂ ಚಟಿದಾರಂಗಳವಾಗಿರೆ
ನಿಷ್ಠೆಯೆ ಪಿಡಿವುರುದಂಡಮದಾಗಿರೆ
ಮುಟ್ಟಿ ತಿರುಗುವುದು ಜೀವನಮಾಗಿರೆ
ಮಾಡುವ ಭಕ್ತಿ ಕಟಾಹಮದಾಗಲು
ಕೂಡಿದ ಕರಣದೆ ಮರ್ದಿಸುತಾಗಲು
ಮಿಗೆ ಶೋಷಗಣದಾತಪದಿಂದಾರಿಸಿ
ಬಗೆ ಮಿಗಿಲುದರಾಗ್ನಿಗಳಿಂ ದಾಹಿಸಿ
ಆನಂದಜಲಪ್ಲಾವನ ಮಾಗಿರೆ
ನಾನಾ ಭಕ್ತಿ ಕಟಾಹಮದಾಗಿರೆ
ಶಿವಕಾರುಣ್ಯಂಬುಗಳಿಂ ತೀವುತೆ
ಶಿವಭಕ್ತರ್ಗಾನಂದದೊಳೀವುತೆ
ಹೀಗೆ ಹಸಿ ಮಣ್ಣಿನ ಮಡಕ್ಕೆ ತುಳಿಸಿಕೊಂಡು, ತಟ್ಟಿಸಿಕೊಂಡು, ಕಾಯಿಸಿಕೊಂಡು, ಸುಡಿಸಿಕೊಂಡು ಗಟ್ಟಿಯಾಗುವಂತೆ, ಹಸಿ ಮಾಂಸದ ಮುದ್ದೆಯಾದ ಈ ಶರೀರವೂ ವ್ರತ, ನಿಷ್ಠೆ, ಕಾಯಕ, ಭಕ್ತಿ, ಸಾಧನೆಗಳಿಂದ ಒಣಗಿ ಬೆಂದು ಪಕ್ವವಾಗಬೇಕು ಎಂಬ ಸಂದೇಶವನ್ನು ಕುಂಬಾರ ಗುಂಡಯ್ಯನವರ ಕಾಯಕ ಪ್ರತಿನಿಧಿಸುತ್ತದೆ.
ಹರಿಹರನ ರಗಳೆಯಲ್ಲಿ ಗುಂಡಯ್ಯನ – ಲಿಂಗಯ್ಯನ ನರ್ತನ ದೃಶ್ಯ:
ಕುಂಬಾರ ಗುಂಡಯ್ಯ ಹಗಲು – ಇರುಳು ಎನ್ನದೆ ಚಲುವಾದ ಮಡಿಕೆ ಮಾಡುತ್ತಾ, ಮೈ ಮರೆತು ಅವುಗಳನ್ನು ಬಾರಿಸುತ್ತಾ ನರ್ತಿಸಿದರೆ ಅವನ ಬಳಗಿರುವ ಲಿಂಗಯ್ಯನು ಸಂತೋಷದಿಂದ ನರ್ತಿಸಿದನಂತೆ;
ಚೆಲುವೆನಿಸುವ ಪೊಸಘಟಮಂ ಮಾಡುತೆ
ಬಾರಿಸುವಿಚ್ಛೆಗೆ ತನುವಲ್ಲಾಡಲು
ಸೇರಿಸುತೊಳಗಣ ಲಿಂಗಮದಾಡಲು
ಹೆಚ್ಚಿದನುಬ್ಬಿದನುತ್ತಮ ಭಕ್ತಂ
ಮೆಚ್ಚಿದನಾಡಿಸುವದನಾ ಭಕ್ತಂ
ಅಂತಃಸ್ಥಲದೊಳ್ಕಂಡಂ ಗುಂಡಂ
ಸಂತೋಷವನೊಳಕೊಂಡಂ ಗುಂಡಂ
ಇರುಳೆಲ್ಲಂ ನಿಲ್ಲದೆ ಬಾರಿಸುತಿರೆ
ಕರಣದೊಳಗೆ ಹರನೊಲಿದಾಡುತ್ತಿರೆ
ಮತ್ತಂಮತ್ತಂ ಹಿಂಗದೆ ಪೊಂಗುತೆ
ಸುತ್ತಂ ಸುಳಿವುತ್ತುರ್ಬಾತೆ ಕೊರ್ಬುತೆ
ಬಾರಿಪ ಕೈ ಮುಚ್ಚಿದ ಕಣ್ಣೊಪ್ಪಿರೆ
ತೀರದ ಪುಳಕಂ ಮೈಯ್ಯೊಳ್ತಳ್ತಿರೆ
ನೆನೆದಂದಲ ಮಡಕೆಗಳಾಗುತ್ತಿರೆ
ಮನದಂದದೆ ಶಿವನೊಳಗಾಡುತ್ತಿರೆ
ಹೀಗೆ ಅಂತರಂಗದಲ್ಲಿ ಲಿಂಗವು ಗುಂಡಯ್ಯನ ಮಡಕೆಯ ತಾಳಗತಿಗೆ ಕುಣಿಯುವ ಚಿತ್ರಣ ಮುಂದೆ ಲಿಂಗಯ್ಯ ಬಹಿರಂಗದಲ್ಲಿ ನರ್ತಿಸುವ ದೃಶ್ಯ ರಗಘಳೆಯಲ್ಲಿ ಅಮೋಘವಾಗಿದೆ.
ಹರಿಹರನ ರಗಳೆಯಲ್ಲಿ ಬಹಿರಂಗದಲ್ಲಿ ಶಿವ ನೃತ್ಯ – ಗುಂಡಯ್ಯನ ಮಡಕೆಯ ತಾಳಕ್ಕೆ;
ಭಕ್ತಿ ಪರವಶಕ್ಕೆ ಒಳಗಾಗಿ ಗುಂಡಯ್ಯ ಬಾಹ್ಯ ಪ್ರಪಂಚವನ್ನೇ ಮರೆತು ನರ್ತಿಸುತ್ತಿದ್ದರೆ ಇತ್ತ ಬಾಹ್ಯಲೋಕಕ್ಕೆ ಬಂದು ಶಿವನು ಮೈಮರೆತು ನರ್ತಿಸಿದನು.
ಆಡುವ ಗುಂಡಯ್ಯನ ಹೊಸ ನೃತ್ಯಂ
ನೋಡುವ ಶಿವನಂ ಮುಟ್ಟಿತು ಸತ್ಯಂ’’ ಎನ್ನುವಂತೆ ಶಿವನು
ದಶಭುಜನುಂ ದಿಕ್ತಟಕಂ ಪಸರಿಸಿ
ಎಸೆವ ಕರಂಗಳನೆತ್ತಲ್ ನೇಮಿಸಿ
ಒಂದು ಪದಂ ಪಾತಾಳವನೊತ್ತಲ್
ಒಂದು ಪದಂ ಬ್ರಹ್ಮಾಂಡವನೊತ್ತಲ್
ಜಡೆಗಳ್ ಚೆಂಬಳಿವಿಡಿದಾಡುತ್ತಿರೆ
ಮುಡಿಯೊಳ್ ಸುರನದಿತುಳ್ತಾಡುತ್ತಿರೆ
ತಡಿಯೊಳ್ ಶಶಿ ಕಳೆಯಲ್ಲಾಡುತ್ತಿರೆ
ಕಡು ಚೆಲ್ವಳಕಂ ಕುಣಿದಾಡುತ್ತಿರೆ
ಮಿಸುಗುವ ಡಮರುಗ ಢಂಢಂ ಡಣಲೆನೆ
ಪೊಂಗೆಜ್ಜೆಗಳವರಂ ಘುಲು ಘುಲಕೆನೆ
ತೊಂಗಲ ಗಂಟೆ ಢಣಂ ಢಂ ಡಣಲೆನೆ
ಆಡಿದನಾಡಿದನಾಹಾ ಶಂಕರ
ಭಕ್ತನನ್ನು ನೋಡಿ ಶಿವನು, ಶಿವನನ್ನು ನೋಡಿ, ಗಣ ತಿಂಥಿಣಿ, ಕೈಲಾಸವೇಕೆ ಇಡೀ ಬ್ರಹ್ಮಾಂಡವೇ ನರ್ತಿಸುವ ದೃಶ್ಯವನ್ನು ಹರಿಹರ ಕಟ್ಟಿಕೊಡುತ್ತಾನೆ. ಭಕ್ತಿರಸದಲ್ಲೇ ಕುಂಬಾರ ಗುಂಡಯ್ಯನವರ ಚರಿತ್ರೆಯನ್ನು ಅದ್ದಿ ಬರೆದಿದ್ದಾನೆ ಹರಿಹರ.
ಜನಪದ ಕಾವ್ಯಗಳಲ್ಲಿ ಕುಂಬಾರ ಗುಂಡಯ್ಯನವರ ವ್ಯಕ್ತಿತ್ವ :
ಜನಪದ ಕವಿ ಸಾವಳಗೇಶನು ಕುಂಬಾರ ಗುಂಡಯ್ಯನ ಕಾಯಕವನ್ನು ಈ ರೀತಿ ವರ್ಣಿಸುತ್ತಾನೆ; ಕಾಯಕವೆ ಶಿವಭಕ್ತಿ, ಕಾಯಕವೆ ಶಿವಭಜನೆ
ಕಾಯಕವೆ ಲಿಂಗ ಶಿವಪೂಜೆ – ಶಿವಯೋಗ
ಕಾಯಕವೆ ಕಾಯ್ವ ಕೈಲಾಸ
ಕುಂಬಾರ ಗುಂಡಯ್ಯನಿಗೆ “ಕಾಯಕವೇ ಕಾಯುವ ಕೈಲಾಸ’’ ಎಂಬುದಾಗಿ ಈ ಜನಪದ ಕವಿ ಬಣ್ಣಿಸುತ್ತಾನೆ.
ಕುಂಬಾರ ಗುಂಡಯ್ಯನವರ ಕಾಯಕದ ಕುರಿತು ಜನಪದ ವಿದ್ವಾಂಸರಲ್ಲಿ ಒಬ್ಬರಾದ ಡಾ. ಬಿ. ಎಸ್. ಗದ್ದಗಿಮಠ ತಮ್ಮ ಸಂಶೋಧನಾ ಕೃತಿಯಲ್ಲಿ ಹೀಗೆ ಬರೆಯುತ್ತಾರೆ;
ಅನುಭಾವ ಆವಿಗೆಗೆ ಕನಲೆಂಬ ಕಿಚ್ಚಿಟ್ಟು
ತಣಿವಂತೆ ಸುಡುಲು ಶಿವಭಕ್ತಿ ಮಡಿಕೆಗಳ
ದಣುವಾರಿಹೋಯ್ತು | ಕಾಯಕದ
ಹರುಷದಲ್ಲಿ ಗಡಿಗೆಗಳ ಶರಣರಿಗೆ ಮಾರುತಲಿ
ಸರಸದಲ್ಲಿ ಇದ್ದ ಸತಿಯೊಡನೆ ಗುಂಡಯ್ಯ
ಸರಿಯಾರು ಶಿವನೆ ಶರಣರಿಗೆ
ಒಟ್ಟಿನಲ್ಲಿ ಜನಪದ ಕಾವ್ಯಗಳಲ್ಲೂ ಕುಂಬಾರ ಗುಂಡಯ್ಯನವರ ಬದುಕಿನ ನೋಟಗಳು ಕಾಣಿಸಿಕೊಳ್ಳುತ್ತವೆ.
ಕರ್ನಾಟಕದ ಗ್ರಾಮೀಣ ಜನಜೀವನದ ಭಾಗವಾಗಿ ಕಾಯಕಯೋಗಿ ಕುಂಬಾರ ಗುಂಡಯ್ಯನವರ ಕಾಣಿಸಿಕೊಳ್ಳುತ್ತಾರೆ. ಇವತ್ತಿಗೂ ಒಕ್ಕಲಿಗರು ತಮ್ಮ ಬೆಳೆಗಳ ರಕ್ಷಣೆಗಾಗಿ ಹೊಲಗಳಲ್ಲಿ ಕೋಲಿಗೆ ಗಡಿಗೆ ಮಗುಚಿ ಹಾಕಿರುತ್ತಾರೆ. ಅದಕ್ಕೆ ಸುಣ್ಣ ಬಿಳಿದು ಬೆದರು ಬೊಂಬೆ ಮಾಡಿ ನಿಲ್ಲಿಸಿರುತ್ತಾರೆ. ಅದನ್ನು ಅವರು ಗುಂಡು ಎಂದು ಕರೆಯುತ್ತಾರೆ. ಕುಂಬಾರ ಗುಂಡಯ್ಯ ತಮ್ಮ ಹೊಲಗಳ ರಕ್ಷಣೆ ಮಾಡುತ್ತಾನೆ ಎಂದು ನಂಬಿದ್ದಾರೆ.
ಬೆಚ್ಚುಹಾಕಿದ ಗಡಗಿ ಮುಚ್ಚಿಟ್ಟ ಹೊಲ ಹುಲುಸು
ಬಚ್ಚಾದ ಬೆಳೆಯ ಕಣವುಕ್ಕಿ – ಗುಂಡಯ್ಯ
ಹೆಚ್ಚಾಯ್ತು ನಿನ್ನ ಶಿವಭಕ್ತಿ
ಎಂದು ಜನಪದರು ಹಾಡುತ್ತಾರೆ. ಗುಂಡಯ್ಯನ ಈ ಗಡಿಗೆ ಹೊಲವನ್ನು ಮಾತ್ರ ಕಾಯುವುದಿಲ್ಲ, ಚಳಿಗಾಲದಲ್ಲಿ ಬೆಳೆಗಳಿಗೆ ಬೆಚ್ಚನೆಯ ಹಿತಕರವಾದ ಗಾಳಿಯನ್ನು ತರುವುದಂತೆ ಆ ಚಳಿಗಾದ ಗಾಳಿಯನ್ನು “ಕುಂಬಾರನ ಗಾಳಿ’’ ಎಂದೂ ಕರೆಯುತ್ತಾರೆ ಜನಪದರು. ಕುಂಬಾರನ ಈ ಗಾಳಿ ವರ್ಷಕ್ಕೊಮ್ಮೆ ಬೀಸಿದರೆ ಕುಂಬಾರ ಗುಂಡಯ್ಯನ ಕಾಯಕ-ಭಕ್ತಿಯ ಗಾಳಿ ಬದುಕಿನುದ್ದಕ್ಕೂ ಬೀಸುತ್ತಲೇ ಇದೆ. ಕುಂಬಾರ ಗುಂಡಯ್ಯನವರ ಜಯಂತಿ ನಿಮಿತ್ತ ನನ್ನ ಈ ಲೇಖನದ ಮೂಲಕ ಸ್ಮರಿಸಿಕೊಂಡಿದ್ದೇನೆ.
ಡಾ. ಪುಷ್ಪಾ ಶಲವಡಿಮಠ,
ಕನ್ನಡ ಉಪನ್ಯಾಸಕರು,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಚಿಕ್ಕ ಬಾಸೂರು, ಹಾವೇರಿ ಜಿಲ್ಲೆ.
ಮೋಬೈಲ್. ಸಂ. 97407 38330
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನಸಾಹಿತ್ಯ ಮಂದಾರ ಫೌಂಡೇಶನ್ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in
ಪರಾಮರ್ಶನ ಕೃತಿಗಳು:
- ಬಸವಯುಗ ವಚನ ಸಂಪುಟ: ಪ್ರ ಸಂ : ಡಾ. ಎಂ.ಎಂ ಕಲಬುರ್ಗಿ.
- ಹರಿಹರ ವಿರಚಿತ ಕುಂಬಾರ ಗುಂಡಯ್ಯನ ರಗಳೆ: ಸಂ. ಡಾ. ಹಿರೇಮಲ್ಲೂರ ಈಶ್ವರನ್.
- ಹರಿಹರನ ರಗಳೆಗಳಲ್ಲಿ ಭಕ್ತಿ: ಶ್ರೀ ಕೆ.ಎಸ್. ಕೃಷ್ಣಮೂರ್ತಿ ಅ.ಭಾ.ಶ.ಸಾ.ಪ, ಮೈಸೂರು.
- ಶರಣ ಚರಿತಾಮೃತ: ಡಾ. ಸಿದ್ಧಯ್ಯ ಪುರಾಣಿಕ.
- ಕುಂಬಾರ ಗುಂಡಯ್ಯ: ಡಾ. ವಿಜಯಕುಮಾರ ಕಮ್ಮಾರ.
ಮೇಡಂ ನಿಮ್ಮ ಕುಂಬಾರ ಗುಂಡಯ ಶರಣರ ಕಾಯಕ ಲೇಖನ ಚೆನ್ನಾಗಿ ಮೂಡಿಬಂದಿದೆ👌👌💐