
“ವೈರಾಗ್ಯಕ್ಕೆ ಅಲ್ಲಮ, ಭಕ್ತಿಯೋಗಕ್ಕೆ ಬಸವಣ್ಣ, ಅನುಭಾವಕ್ಕೆ ಅಕ್ಕಮಹಾದೇವಿ, ಕಾಯಕಕ್ಕೆ ಸಿದ್ದರಾಮ” ಜಗತ್ತು ಕಂಡ ಶ್ರೇಷ್ಠ ಕರ್ಮಯೋಗಿಗಳಲ್ಲಿ ಯೋಗತಪಸ್ವಿ ಶಿವಯೋಗಿ ಸಿದ್ದರಾಮೇಶ್ವರರ ಆದರ್ಶಮಯ ಜೀವನ ಚರಿತ್ರೆಯ ಕುರಿತು ಲೇಖನ.
ಹನ್ನೆರಡನೇಯ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಕಲ್ಯಾಣದ ಕ್ರಾಂತಿ ಕರ್ನಾಟಕದ ಇತಿಹಾಸದಲ್ಲಷ್ಟೇ ಅಲ್ಲ ಜಾಗತಿಕ ಮಟ್ಟದಲ್ಲಿಯೂ ಮಹತ್ವಪೂರ್ಣವಾದುದು. ಅದು ಯಾವುದೇ ಒಂದು ವರ್ಗದ ಹಿತ ಕಾಪಾಡುವ ಚಳುವಳಿಯಾಗದೆ, ಸಮಾಜದಲ್ಲಿನ ಕೆಳ ವರ್ಗದವರಿಂದ ಹಿಡಿದು ಎಲ್ಲಾ ವರ್ಗಗಳ ಹಿತವನ್ನು ಕಾಪಾಡಲು ಸಮಾನತೆಯ ತಳಹದಿಯ ಮೇಲೆ ನಡೆಸಿದ ಮುಕ್ತ ಮನಸ್ಸುಗಳ ಒಂದು ವಿಶಿಷ್ಟ ಅಂದೋಲನವಾಗಿತ್ತು. ಬಸವಾದಿ ಶರಣರು ಜನಭಾಷೆಯಲ್ಲಿ ತಮ್ಮ ಕಾಯಕದ ಅನುಭವದಿಂದಲೇ ವಚನ ರಚಿಸಿ ಕನ್ನಡ ಸಾಹಿತ್ಯದಲ್ಲಿ ಹೊಸ ಸಂಚಲನ ಮೂಡಿಸಿದರು.
ಶರಣರ ವಚನಗಳು ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ದಿಕ್ಸೂಚಿಯಾಗಿವೆ. ಈ ಕಾಲಘಟ್ಟದಲ್ಲಿ ವಿವಿಧ ಸ್ಥಳಗಳಿಂದ ಬಂದ ಅನೇಕ ವಚನಕಾರರು ಮತ್ತು ವಚನಕಾರ್ತಿಯರು ವೈಚಾರಿಕ ಮತ್ತು ವೈಜ್ಞಾನಿಕ ಜೀವಾಂಶಗಳನ್ನು ಕುರಿತು ಅನುಭಾವಿಕ ನೆಲೆಯಲ್ಲಿ ವಚನ ರಚನೆ ಮಾಡಿದರು. ಬಸವಣ್ಣನವರ ನೇತೃತ್ವದಲ್ಲಿ ನಡೆದ ಈ ಕಾರ್ಯದಲ್ಲಿ ಸೊಲ್ಲಾಪುರದಿಂದ ಕಲ್ಯಾಣಕ್ಕೆ ಬಂದ ಶಿವಯೋಗಿ ಸಿದ್ದರಾಮೇಶ್ವರೂ ಕೂಡ ಒಬ್ಬರು.
ಜಗತ್ತು ಕಂಡ ಶ್ರೇಷ್ಠ ಕರ್ಮಯೋಗಿಗಳಲ್ಲಿ ಯೋಗತಪಸ್ವಿ ಸಿದ್ದರಾಮೇಶ್ವರರು ಅಗ್ರಗಣ್ಯರು. ಜ್ಞಾನ, ಭಕ್ತಿ ಮತ್ತು ಕರ್ಮ ಯೋಗಗಳ ಅನುಭಾವಿಯಾಗಿ ಅವರು ಲೋಕಕ್ಕೆ ಉಪದೇಶಿಸಿದ ಜೀವನ ಮೌಲ್ಯದ ತತ್ವ ಸಂದೇಶಗಳು ಅತ್ಯಂತ ಮೌಲಿಕವುಳ್ಳದ್ದು. ಸೊನ್ನಲಿಗೆಯಲ್ಲಿ ಕಾರ್ಯರೂಪಕ್ಕೆ ತಂದ ಜಂಗಮಮುಖಿ ಕಾರ್ಯಗಳು ವಿಶ್ವಕ್ಕೆ ಆದರ್ಶನೀಯ. ಒಂದು ಸುಸಂಸ್ಕೃತ ನಾಡು ಯಾವ ರೀತಿ ರೂಪಗೊಳ್ಳಬೇಕು, ಯಾವ ರೀತಿ ಅರ್ಥಪೂರ್ಣ ಬದುಕು ಕಟ್ಟಿಕೊಳ್ಳಬೇಕೆಂಬ ತತ್ವ ಸಿದ್ಧಾಂತಗಳನ್ನು ಲೋಕಕ್ಕೆ ಅರ್ಥೈಸಿದ ಶ್ರೇಷ್ಠತೆ ಶಿವಯೋಗಿ ಸಿದ್ದರಾಮೇಶ್ವರರದು. ಭಕ್ತಿಯು ಜ್ಞಾನಯುಕ್ತ ನೆಲೆಯಲ್ಲಿ ಸಾಗಿದ್ದಾಗ ಮಾತ್ರ ಬದುಕು ಅರ್ಥಪೂರ್ಣತೆಯ ಪಥ ಕಾಣಲು ಸಾಧ್ಯ ಎಂದು ವ್ಯಾಖ್ಯಾನಿಸುವ ಅವರ ವಚನಗಳಲ್ಲಿ ಮನಸ್ಸಿನ ವಿಕಾಸದ ನೆಲೆಗಳನ್ನು ಕಾಣಲು ಸಾಧ್ಯ.
ಗುರು ಬಸವಣ್ಣನವರಿಂದ ಸಂಸ್ಥಾಪಿಸಲ್ಪಟ್ಟ ಅನುಭವ ಮಂಟಪದ ಅಧ್ಯಕ್ಷರಾದ ವ್ಯೋಮಕಾಯ ಅಲ್ಲಮ ಪ್ರಭುದೇವರು ಹಾಗೂ ಚಿಙ್ಮಯಜ್ಞಾನಿ ಚನ್ನಬಸವಣ್ಣನವರ ನಡುವೆ ಅವರು ನಡೆಸಿದಂತಹ ತಾತ್ವಿಕ ಚಿಂತನೆಗಳು ತತ್ವಜ್ಞಾನದ ಅನುಭಾವ ಲೋಕವನ್ನೇ ಅನಾವರಣಗೊಳಿಸಿರುವುದನ್ನು ನಾವು ಕಾಣಬಹುದು. ಅದು ಜಗದ ಮುಂದೆ ಜ್ಞಾನದ ದರ್ಶನ ಶಾಸ್ತ್ರವನ್ನೇ ತೆರೆದಿಟ್ಟಿರುವುದು ಅತ್ಯಂತ ಗಮನಾರ್ಹ ಸಂಗತಿ. ಲಿಂಗಾಯತ ಧರ್ಮದ ತತ್ವ ವಿಚಾರಗಳನ್ನು ತಮ್ಮ ಪ್ರಾಣ ಸಮಾನವಾಗಿ ಆರಾಧಿಸಿದ ಅವರು, ಲೋಕ ಕಲ್ಯಾಣಾರ್ಥವಾಗಿ ನೀಡಿದ ತತ್ವ ಸಂದೇಶಗಳು ಅತ್ಯಂತ ಮೌಲಿಕ. ಇಷ್ಟಲಿಂಗ ಪೂಜೆಯ ಯೋಗ ಸೂತ್ರ ಹಾಗೂ ಜಂಗಮುಖಿ ಕಾರ್ಯಗಳ ಮೂಲಕ ಮಹಾಲಿಂಗ ತತ್ವದ ಜ್ಞಾನದ ಬೆಳಕನ್ನು ಅನುಭಾವಪೂರ್ಣವಾಗಿ ಕಂಡಿದ್ದ ಅವರು ಇಷ್ಟಲಿಂಗ ಯೋಗದ ಶ್ರೇಷ್ಠ ಅನುಭಾವಿ. ಗುರು ಬಸವಣ್ಣನವರ ಜ್ಞಾನ ಮತ್ತು ಭಕ್ತಿಯ ತತ್ವ ಸಂದೇಶಗಳನ್ನು ಆಚಾರಾತ್ಮಕವಾಗಿ ಸಾಧಿಸಿ ಬಸವಯೋಗಿ ಎನಿಸಿಕೊಂಡ ಶ್ರೇಷ್ಠತೆ ಅವರಿಗೆ ಸಲ್ಲುತ್ತದೆ.
ಬದುಕಿನ ಅನುಕ್ಷಣವೂ ಗುರು ಬಸವಣ್ಣನವರ ನಾಮಸ್ಮರಣೆಯನ್ನು ತನು ಮನ ಭಾವದಲ್ಲಿ ಭಕ್ತಿಯಿಂದ ಜಪಿಸಿದ ಅವರು ನಾಡು ಕಂಡ ಶ್ರೇಷ್ಠ ಸಮಾಜ ಸುಧಾರಕರಾಗಿ ಬಸವತತ್ವ ಪ್ರಸಾರ ಕಾರ್ಯದಲ್ಲಿ ಸಮರ್ಪಿಸಿಕೊಂಡ ಅವರ ತನ್ಮಯತೆಯ ನಿಲುವು ಅವರನ್ನು ಒಬ್ಬ ಆದರ್ಶ ಜಂಗಮ ಯೋಗಿ ಎನಿಸಿದೆ. ಸೊಲ್ಲಾಪುರದ ಮೂಲ ಹೆಸರು ಸೊನ್ನಲಿಗ. ಅಂದು ಅದೊಂದು ಅತ್ಯಂತ ಕುಗ್ರಾಮವಾಗಿತ್ತು. ಅಲ್ಲಿನ ಜನ ಅತ್ಯಂತ ಬಡತನ, ಅಜ್ಞಾನ, ಮೂಡನಂಬಿಕೆ, ಮೌಢ್ಯತೆಗಳಿಂದ ನಲುಗಿ ಹೋಗಿದ್ದರು. ಸದಾ ಬರಗಾಲದಿಂದ ಕೂಡಿರುವ ಈ ಹಳ್ಳಿಯಲ್ಲಿ ಕುಡಿಯುವ ನೀರಿಗೂ ಪರದಾಡುತ್ತಿದ್ದರು. ಸೊನ್ನಲಿಗೆಯ ಮೊರಡಿಯ ಮುದ್ದೇಗೌಡ ಮತ್ತು ಸುಗ್ಗೆವ್ವ ದಂಪತಿಗಳ ಉದರದಲ್ಲಿ ಸಿದ್ದರಾಮರ ಜನನವಾಗುತ್ತದೆ. ಹೀಗೆ ಸಿದ್ದರಾಮರ ಜನನದ ನಂತರ ಆ ಗ್ರಾಮದಲ್ಲಿ ಬದಲಾವಣೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದನ್ನು ಜನಪದ ಕವಿಯೊಬ್ಬ ತನ್ನ ಡೊಳ್ಳಿನ ಹಾಡೊಂದರಲ್ಲಿ ತುಂಬಾ ಸೊಗಸಾಗಿ ಹೇಳುತ್ತಾರೆ
ಸಿದ್ಧನುದಯವಾದಾಗ ಸಂದಿ ಸಂದಿಗೆ ಬೆಳಕೇನೋ
ಕಲ್ಲು ಕಲ್ಲಿಗೆ ಉಸುರೇನೋ
ಹುಲ್ಲು ಹುಲ್ಲಿಗೆ ಆಸರೆ ಸಿಕ್ಕುದೋ
ಮಾಯಾದೇವಿ ಭೋರ್ಯಾಡತಾಳೋ
ದುರಗವ್ವ ಮರಗವ್ವ ಅಳುತ್ತಾರೆ
ಕ್ವಾಣ ಕುರಿಗೊಳು ನಗುತ್ತಾವೆ
ಸಾಧು ಸಂತರು ಸಾಧಕರೆಲ್ಲ ಹಿರಿಹಿರಿ ಹಿಗ್ಗಾರೆ
ಸ್ವರ್ಗ ಭೂಮೀಗಿ ಬರುತಾದ ಅಂದಾರೆ
ಹೀಗೆ ಸಿದ್ದರಾಮ ಸೊನ್ನಲಿಗೆಯ ಸೌಭಾಗ್ಯವಾಗಿ, ಅಲ್ಲಿನ ಜನರ ಆಶಾಕಿರಣವಾಗಿ ಜನಿಸುತ್ತಾರೆ. ನಂತರ ಸಿದ್ದರಾಮರು ಸೊನ್ನಲಿಗೆಯಲ್ಲಿ ವಿಶಾಲವಾದ ಕೆರೆ ಕಟ್ಟಿಸಿದರು. ಕೆರೆಯ ನೀರು ಮನುಷ್ಯ ಮಾತ್ರವಲ್ಲ ಇಡೀ ಸೊನ್ನಲಿಗೆಯ ಪರಿಸರದ ಸಕಲ ಜೀವಿಗಳಿಗೆ ಆಧಾರವಾಯಿತು. ಹೀಗೆ ತಮ್ಮ ವೈಯಕ್ತಿಕ ಜೀವನವನ್ನು ಸಂಪೂರ್ಣವಾಗಿ ತ್ಯಾಗ ಮಾಡಿ ಅದನ್ನು ಲೋಕ ಕಲ್ಯಾಣಕ್ಕಾಗಿ ಸಮರ್ಪಿಸಿಕೊಂಡರು. ಶರಣ ತತ್ವದ ನಿಜವಾದ ಧ್ಯೇಯವೇ ಕಾಯಕ ಎಂದು ಅರಿತುಕೊಂಡರು. ಇಡೀ ಬಸವಾದಿ ಶರಣರ ಇತಿಹಾಸದಲ್ಲೇ ಕಾಯಕ ಹಾಗೂ ಕರ್ಮಯೋಗವನ್ನು ತತ್ವಬದ್ದವಾಗಿ ಸಮಾಜಕ್ಕೆ ನಿರೂಪಿಸಿದವರು ಕಾಯಕಯೋಗಿ ಸೊನ್ನಲಿಗೆಯ ಸಿದ್ದರಾಮರು.
ಅವರ ವಚನಗಳಲ್ಲಿ ಪ್ರಸ್ತುತ ಸಮಸ್ಯೆಗಳಿಗೆ ಉತ್ತರ ನೀಡಿದ್ದಾರೆ. ಬರೀ ಸ್ವರ್ಗ-ನರಕಗಳ ಭ್ರಮೆಯಲ್ಲಿದ್ದರೆ ಬದುಕನ್ನು ಕಟ್ಟಿಕೊಳ್ಳಲಾಗದು. ಸಾಮಾಜಿಕ, ಆರ್ಥಿಕ, ಸಾಸ್ಕೃತಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಸಬಲರಾಗಬೇಕಾದರೆ ಹೆಣ್ಣು ಗಂಡಿನ ಮಧ್ಯೆ ತಾರತಮ್ಯ ಇರಬಾರದು. ಹಾಗಾದಾಗ ಮಾತ್ರ ಸ್ವಸ್ಥ ಸಮಾಜ ಕಟ್ಟಲು ಸಾಧ್ಯ. ಸಾಮಾಜಿಕ ಬದುಕಿನಲ್ಲಿ ಪ್ರೀತಿ, ವಿಶ್ವಾಸ, ದಯೆಗಳಿಗೆ ಪ್ರಾಧಾನ್ಯತೆ ನೀಡಿ, ಅಲ್ಲಿ ಮೌಢ್ಯ, ಕಂದಾಚಾರಗಳಿಗೆ ಅವಕಾಶ ನೀಡಬಾರದೆಂದು ಖಾರವಾಗಿ ತಮ್ಮ ವಚನಗಳಲ್ಲಿ ತಿಳಿಸಿದ್ದಾರೆ. ಸದಾ ನಿಕೃಷ್ಟ ಸ್ಥಿತಿಯಲ್ಲಿರುವವರ, ದೀನ-ದಲಿತರ ಹಾಗೂ ದುರ್ಬಲರ ಬಗೆಗಿನ ಚಿಂತನೆ ಜೀವನದಲ್ಲಿ ಮುಖ್ಯ ಧ್ಯೇಯವಾಗಿರಬೇಕು. ಸಾಮಾಜಿಕ ಕೆಲಸಗಳಲ್ಲಿ ಸವಾಲುಗಳು ಹೆಚ್ಚು ಸ್ತುತಿನಿಂದನೆಗೆ ಅಂಜದೆ, ಹೊಗಳಿಕೆಯಾಗಲಿ, ತೆಗಳಿಕೆಯಾಗಲಿ ಮುಂದಿಟ್ಟ ಹೆಜ್ಜೆ ಹಿಂತೆಗೆಯದಿರುವ ಧೃಡ ನಿರ್ಧಾರ ನೈತಿಕತೆಯ ಜೊತೆಗೆ ಗುರಿ ಮುಟ್ಟುವ ಛಲ ಸಾಮಾಜಿಕ ಹೊಳೆಗಾರಿಕೆಯಲ್ಲಿ ಮುಖ್ಯವಾದುದು ಎಂದು ಅರಿತಿದ್ದರು.
ಕಾಯ ಸೊನೆಯರತಲ್ಲದೆ ಹಣ್ಣಿನ ರಸ ಚಿಹ್ನದೋರದು.
ಕಾಯ ಕರ್ಮವ ಮಾಡಿ, ಜೀವ ಜ್ಞಾನವನರಿದು,
ತ್ರಿವಿಧಭಾವ ಶುದ್ಧಿಯಾದಲ್ಲದೆ ಮೇಲೆ ಕಾಣಲಿಲ್ಲ,
ಕಪಿಲಸಿದ್ಧಮಲ್ಲಿಕಾರ್ಜುನ ಲಿಂಗವ
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-423/ವಚನ ಸಂಖ್ಯೆ-1352)
ಈ ವಚನ ಕಾಯಕ ಯೋಗದ ದಿವ್ಯತೆಯನ್ನು ವಿವರಿಸುತ್ತದೆ.
ತ್ರಿವಿಧ ಭಾವ ಶುದ್ದಿಯಾಗಿಲ್ಲದೆ ದೇವರ ಸಾಕ್ಷಾತ್ಕಾರವೂ ಸಾಧ್ಯವಾಗದು. ಆದ್ದರಿಂದ ಕಾಯಕ ಯೋಗವೇ ಬದುಕಿನ ನಿಜವಾದ ಮಾರ್ಗ ಎಂಬುದನ್ನು ಸಿದ್ದರಾಮೇಶ್ವರರು ತಾತ್ವಿಕವಾಗಿ ತಿಳಿಸುತ್ತಾರೆ.
ಬೀದಿ ಬೀದಿಗೆ ಗುಡಿಯ
ಹಾದಿ ಹಾದಿಗೆ ಕೆರೆಯ
ಸಾದಿಸಿದ ಕಟ್ಟಿ ಸಿದ್ದರಾಮ!
ಸೊನ್ನಲಿಗೆ ಸಾಧು ಸಿದ್ದರಿಗೆ ಮನೆಯಾಯಿತು
ಎಂದು ಸೊನ್ನಲಿಗೆಯ ಜನರು ಸಿದ್ದರಾಮನನ್ನು ಶ್ಲಾಘಿಸಿದರು.
ಮೂಲಭೂತ ಸೌಕರ್ಯಗಳನ್ನು ಸಮಾಜಕ್ಕೆ ಒದಗಿಸುತ್ತ ಸಾಧು ಸಂತರಿಗೆ ಆಶ್ರಯ ತಾಣವಾಗಿದ್ದ ಸೊಲ್ಲಾಪುರಕ್ಕೆ ಅಲ್ಲಮರು ಬರುತ್ತಾರೆ. ಲೋಕ ಕಲ್ಯಾಣದಲ್ಲಿಯೇ ನಿರತನಾದ ಕರ್ಮಯೋಗಿ ಸಿದ್ದರಾಮರನ್ನು ಶಿವಯೋಗಿಯಾಗಿಸುವ ಗುರಿ ಅಲ್ಲಮರದಾಗಿತ್ತು. ಬಾಹ್ಯ ಸುಖಗಳಲ್ಲಿ ನಿರತರಾದ ಅನೇಕ ಸಾಧಕರಿಗೆ ಅಂತರಂಗದ ಅರಿವು ಅಲ್ಲಮರು ಮೂಡಿಸುತ್ತಾರೆ. ಹಮ್ಮು-ಬಿಮ್ಮು ಬಯಲಿಗೆಳೆದು ಪುಟಕ್ಕಿಟ್ಟ ಚಿನ್ನವಾಗಿಸುವ ಕಾಯಕ ಅಲ್ಲಮರದ್ದು. ಹೀಗೆ ಸಾಕಾರ ನಿಷ್ಠೆ ಬೆಳೆಸಿಕೊಂಡಿದ್ದ ಸಿದ್ದರಾಮನಿಗೆ ನಿರಾಕಾರ ನಿಷ್ಠೆ, ಅರಿವು ಮೂಡಿಸುವದಕ್ಕಾಗಿ ಇಬ್ಬರಲ್ಲಿ ಸಂಭಾಷಣೆ ಪ್ರಾರಂಭವಾಗುತ್ತದೆ. ಅಲ್ಲಮರು ಹೇಳುತ್ತಾರೆ:
ಕಲ್ಲು ಕಡೆದು ಮಾಡಿದ ಶಿವಲಿಂಗವಾಗಲಿ, ದೇವಾಲಯವಾಗಲಿ ಅವು ಶಿಲಾ ರಚನೆಗಳು. ಅರವಟ್ಟಿಗೆ, ನಿಟ್ಟು ನೀರು ಕುಡಿದರೆ ಮತ್ತೆ ನೀರಡಿಕೆಯಾಗುತ್ತದೆ. ಅನ್ನವನಿಕ್ಕಿದರೂ ಪದೇ ಪದೇ ಹಸಿವಾಗುತ್ತದೆ, ಕಟ್ಟಿದ ಕೆರೆ ಒಂದಾನೊಂದು ದಿನ ಹೊಡೆದು ಹೋಗುತ್ತದೆ. ಆದರೆ ಶರಣರಿಗೆ ತನುವೆಂಬುದೇ ಒಡ್ಡು, ಮನವೇ ಕೆರೆ, ಆಚಾರಗಳೇ ಮೆಟ್ಟಲುಗಳು, ಸದಾ ದೇಹದೊಳಗೆ ಸುಳಿದಾಡುವ ಪ್ರಣವ. ಷಟಚಕ್ರಗಳ ಮುಖಾಂತರ ಶಿಖಾ ಪಶ್ಚಿಮ ಬ್ರಹ್ಮರಂಧ್ರಗಳಲ್ಲಿ ಸಂಚರಿಸುವ ಉದರ ಪರಮಾನಂದವನ್ನುಂಟು ಮಾಡಿ ಘನಲಿಂಗ ದರ್ಶನ ಮಾಡಿಸುತ್ತದೆ. ಇದು ಇಷ್ಟಲಿಂಗದಿಂದ ಮಾತ್ರ ಸಾಧ್ಯ.
ಎಂದಾಗ ಸಿದ್ದರಾಮರಿಗೆ ಇಲ್ಲಿಯವರಿಗೆ ತಾನೆ ಮಾಡಿದ ಜನಹಿತ ಕಾರ್ಯಗಳೆಲ್ಲವೂ ನಿರರ್ಥಕವೇ? ಜನ ಕಲ್ಯಾಣೀಚ್ಚೆ ಫಲಾಫೇಕ್ಷಯಿಂದ ಮಾಡುವ ಕಾರ್ಯ ಕರ್ಮವೇ? ಎಂದು ಸಿದ್ದರಾಮರು ಪ್ರಶ್ನೆ ಮಾಡುತ್ತಾರೆ. ತನ್ನ ಬಾಹ್ಯ ಕರ್ಮಗಳಲ್ಲಿ ಪರಮಾತ್ಮನ ಕಾಣುವ ಸಾಕಾರ ನಿಷ್ಠೆ ಬೆಳಸಿಕೊಂಡಿದ್ದ ಸಿದ್ದರಾಮರಿಗೆ ಅಲ್ಲಮರು ದೇಹವನ್ನು ದೇವಾಲಯ ಮಾಡಿ, ಪ್ರಾಣವನ್ನೇ ಲಿಂಗ ಮಾಡಿ, ಸಮತೆ ಚಿತ್ತ ಸಮಾಧಾನವುಳ್ಳ ಶರಣಂಗೆ ಬಾಹ್ಯ ಮಠ ಪರ್ವತಗಳ ಹಂಗು ಬೇಡ. ಇಷ್ಟಲಿಂಗದ ಪೂಜೆ ಒಂದೇ ಸಾಕು ಎನ್ನುತ್ತಾರೆ. ಆಗ ಸಿದ್ದರಾಮರು ಗುಡಿಯಲ್ಲಿ ಮಾಡುವ ಶಿವಲಿಂಗ ಪೂಜೆ, ಕೈಯಲ್ಲಿ ಹಿಡಿದು ಮಾಡುವ ಇಷ್ಟಲಿಂಗಪೂಜೆ, ಸಾಕಾರ ಕರ್ಮಗಳೇ. ಕಾಯವೇ ಪೀಠಿಕೆ, ಪ್ರಾಣವೇ ಲಿಂಗವಾಗಿರಲು ಬೇರೆ ಕುರುಹೇಕಯ್ಯ ಎಂದು ಅಲ್ಲಮರು ಕೇಳುತ್ತಾರೆ. ಆಗ ಸಿದ್ದರಾಮರು ಸ್ಥಾವರಲಿಂಗ, ಇಷ್ಟಲಿಂಗದ ಭಿನ್ನತೆ ಹೇಗೆ ಎಂದು ಕೇಳುತ್ತಾರೆ. ಆಗ ಅಲ್ಲಮರು ಬಸವಣ್ಣನವರು ಶೋಧಿಸಿ, ಸಾಧಿಸಿ, ಸಿದ್ಧಿಸಿ ಕೊಟ್ಟ ಇಷ್ಟಲಿಂಗ ಅನುಸಂಧಾನದ ಬಗ್ಗೆ ಬಸವಣ್ಣನವರ ವಚನದ ಉದಾಹರಣೆಯೊಂದಿಗೆ ಮನವರಿಕೆ ಮಾಡಿಸುತ್ತಾರೆ.
ಅಂತರಂಗದೊಳಗಿರ್ದ ನಿರವಯಲಿಂಗವನು
ಸಾವಯವಲಿಂಗವ ಮಾಡಿ,
ಶ್ರೀಗುರುಸ್ವಾಮಿ ಕರಸ್ಥಲಕ್ಕೆ ತಂದುಕೊಟ್ಟನಾಗಿ,
ಆ ಇಷ್ಟಲಿಂಗವೆ ಅಂತರಂಗವನಾವರಿಸಿ
ಅಂತರಂಗದ ಕರಣಂಗಳೆ ಕಿರಣಂಗಳಾಗಿ
ಬೆಳಗುವ ಚಿದಂಶವೆ ಪ್ರಾಣಲಿಂಗವು,
ಆ ಮೂಲಚೈತನ್ಯವೆ ಭಾವಲಿಂಗವು.
ಇದನರಿದು, ನೋಡುವ ನೋಟ ಭಾವಪರಿಪೂರ್ಣವಾಗಿ
ತಾನು ತಾನಾದಲ್ಲದೆ, ಇದಿರಿಟ್ಟು ತೋರುವುದಿಲ್ಲವಾಗಿ
ಅಖಂಡ ಪರಿಪೂರ್ಣವಪ್ಪ ನಿಜವು ತಾನೆ, ಕೂಡಲಸಂಗಮದೇವ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-280/ವಚನ ಸಂಖ್ಯೆ-971)
ಕುರುಹುವಿಡಿದು ಕುರುಹಗೆಡಬೇಕು ಎಂದು ಅಲ್ಲಮರು ಸಿದ್ದರಾಮರಿಗೆ ಹೇಳುತ್ತಾ ಇಂತಹ ಸಾಧನೆಗಾಗಿ ಕಲ್ಯಾಣ ಮಂಟಪ ವೇದಿಕೆ ಆಗಿದೆ. ಬಸವಣ್ಣನವರು ಮಾಡಿದ ಮಹತ್ಕಾರ್ಯವನ್ನು ತಿಳಿಸುತ್ತಾ ಮಹಾಮನೆಯ ಮರ್ತ್ಯಲೋಕ ಶಿವಲೋಕಕೆ ನಿಚ್ಚಣಿಕೆ ಆಗಿದೆ. ಕರ್ತೃ ಬಸವಣ್ಣನೆಂದಾಗ ಕಲ್ಯಾಣ ನೋಡುವ ಇಚ್ಛೆ ವ್ಯಕ್ತಪಡಿಸಿತ್ತಾ ಸೊಲ್ಲಾಪುರ ತೊರೆದು ಅಲ್ಲಮ ಪ್ರಭುಗಳ ಜೊತೆ ಕಲ್ಯಾಣಕ್ಕೆ ಬರುತ್ತಾರೆ.
ಸಿದ್ದರಾಮ, ಅಲ್ಲಮರು ಬಲ್ಲಿದವರೆಲ್ಲರೂ ಬರಲು ಅನುಭವ ಮಂಟಪಕ್ಕೆ ಕಳೆ ಬಂತು! ಬಸವಯ್ಯ ಎಲ್ಲಿ ಹೋದಲ್ಲಿ ಬೆಲ್ಲಾದ. ಹೀಗೆ ಅನೇಕ ಸಾಧಕ, ಬೋಧಕರು ಅನುಭಾವಿಗಳಿಂದ ಶೋಭಿಸುತ್ತಿರುವ ಅನುಭವ ಮಂಟಪಕ್ಕೆ ಅಲ್ಲಮ, ಸಿದ್ದರಾಮರ ಆಗಮನ ಹೊಸ ಕಳೆ ತಂದಿತು. ಲಿಂಗಾನುಸಂಧಾನದ ನೆಲೆ ಕಲೆಗಳನ್ನರಿತ ಅವಿರಳಜ್ಞಾನಿ ಚೆನ್ನಬಸವಣ್ಣನವರ ಐವತ್ತು ಆಚಾರಗಳನ್ನು ಸಿದ್ದರಾಮರಿಗೆ ತಿಳಿಸಿ ಇಷ್ಟಲಿಂಗ ದೀಕ್ಷೆ ನೀಡಿದರು. ಅಷ್ಟಾಂಗ ಯೋಗವನರಿತ ಸಾಧನೆ ಮಾಡಿದ ಸಿದ್ದರಾಮರು ಶಿವಯೋಗ ಸಾಧನೆಗೆ ತೊಡಗಿ ಶಿವಯೋಗ ಸಾಧಿಸಿ ಶಿವಯೋಗಿ ಸಿದ್ದರಾಮರಾದರು. ಶಿವಯೋಗಿ ಸಿದ್ದರಾಮರು ನಾಡಿನಾದ್ಯಂತ ಇಷ್ಟಲಿಂಗದ ಮಹತ್ವ ತಿಳಿಸಿ ವಚನಗಳ ರಚನೆ ಮಾಡಿ ಕಾಯಕ-ದಾಸೋಹಗಳ ಮಹತ್ವ ತಿಳಿಸುತ್ತಾರೆ.
ಹೀಗೆ ಸಿದ್ದರಾಮರು ಅಲ್ಲಮಪ್ರಭುವಿನ ಇಚ್ಛೆಯಂತೆ ಕಲ್ಯಾಣದ ಅನುಭವ ಮಂಟಪಕ್ಕೆ ಬಂದು ಆಧ್ಯಾತ್ಮಿಕ ಜ್ಞಾನವನ್ನು ಸಂಪಾದಿಸುತ್ತಾರೆ. ಸರ್ವ ಜನರ ಒಳಿತನ್ನು ಬಯಸುತ್ತಾ ದೇಹ ಭಿನ್ನವಾದರೂ ಆತ್ಮ ಭಾವ ಒಂದೇ ಎಂದು ಹೇಳುತ್ತಾರೆ. ಇಲ್ಲಿ ಅಲ್ಲಮ ಪ್ರಭುಗಳು ಸಿದ್ದರಾಮರ ಬಗ್ಗೆ ಹೀಗೆ ಹೇಳುತ್ತಾರೆ
ಕರ್ಮ ಚರಣಾದಿಗಳು ಬೇರಾದವಲ್ಲದೆ
ಅರಿದು ಮುಟ್ಟುವುದು ಒಂದೆ ಆತ್ಮ.
ಬಿಂದುವಿನ ಒಂದು ಸಾರದಲ್ಲಿ,
ಸಸಿ ಹಲವು ನಾಮ ಬೆಳೆವಂತೆ
ಗುಹೇಶ್ವರಲಿಂಗದಲ್ಲಿ “ನಾ” “ನೀ”
ಎಂಬ ಭಾವವಿಲ್ಲ ಸಿದ್ಧರಾಮಯ್ಯಾ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-392/ವಚನ ಸಂಖ್ಯೆ-1048)
ಹೀಗೆ ಆತ್ಮ ಜ್ಞಾನಿ ಎನಿಸಿಕೊಂಡ ಅಲ್ಲಮಪ್ರಭುಗಳು ಸಿದ್ದರಾಮಯ್ಯನವರನ್ನು ಕುರಿತು ನನಗೂ ನಿನಗೂ ಭೇದವಿಲ್ಲ. ನಾನೇ ನೀನು, ನೀನೇ ನಾನು, ಆತ್ಮ ಆತ್ಮಗಳು ಒಂದಾದಾಗ ವ್ಯಕ್ತಿತ್ವಕಷ್ಠೇ ಬೆಲೆ. ಅಲ್ಲದೆ ವ್ಯಕ್ತಿಗೂ ಉನ್ನತ ಸ್ಥಾನ ಇದೆ ಎಂಬುದನ್ನು ತಿಳಿಸುತ್ತಾರೆ. ಸಿದ್ದರಾಮರ ಸಮತೆ, ಏಕೋಭಾವ ನಿಷ್ಠೆ, ಶಿವಯೋಗ ಸಿದ್ಧಿ, ಆಧ್ಯಾತ್ಮಿಕ ಅತ್ಯುನ್ನತೆ ಇವುಗಳನ್ನು ಸಮಕಾಲಿನ ಶರಣರು ಮೆಚ್ಚಿ ಮುಕ್ತಕಂಠದಿಂದ ಪ್ರಶಂಶಿಸಿದ್ದಾರೆ.
ಚನ್ನಬಸವಣ್ಣನವರು ತಮ್ಮ ವಚನದಲ್ಲಿ ಈ ರೀತಿ ಹೇಳಿದ್ದಾರೆ:
ಲಿಂಗಲಕ್ಷಣವಂತ ಬಸವಣ್ಣ, ಲಿಂಗಸಿರಿವಂತ ಬಸವಣ್ಣ,
ಲಿಂಗಸೌಭಾಗ್ಯವಂತ ಬಸವಣ್ಣ.
ಜಂಗಮಲಕ್ಷಣವಂತ ಬಸವಣ್ಣ, ಜಂಗಮಸಿರಿವಂತ ಬಸವಣ್ಣ,
ಜಂಗಮಸೌಭಾಗ್ಯವಂತ ಬಸವಣ್ಣ.
ಪ್ರಸಾದಲಕ್ಷಣವಂತ ಬಸವಣ್ಣ, ಪ್ರಸಾದಸಿರಿವಂತ ಬಸವಣ್ಣ
ಪ್ರಸಾದಸೌಭಾಗ್ಯವಂತ ಬಸವಣ್ಣ.
ಕೂಡಲಚೆನ್ನಸಂಗಯ್ಯನಲ್ಲಿ
ಸಂಗನಬಸವಣ್ಣನ ಶ್ರೀಪಾದಕ್ಕೆ
ನಮೋ ನಮೋ ಎನುತಿದ್ದೆನು
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-774/ವಚನ ಸಂಖ್ಯೆ-1583)
ಅದೇ ರೀತಿ ಬಸವಣ್ಣನವರು ಅಭಿಮಾನದಿಂದ ಸಿದ್ದರಾಮರ ಚಿತ್ಕಳೆಯನ್ನು ಮನದುಂಬಿ ಈ ವಚನದಲ್ಲಿ ಹೇಳಿದ್ದಾರೆ.
ಸತ್ಯಮುಕ್ತಿಯ ಕಳೆಯ ನೋಡಾ,
ನಿತ್ಯತತ್ವದ ಇರವ ನೋಡಾ,
ಮೂರೊಂದಾದ ಆರೂಢನ ನೋಡಾ,
ಕೂಡಲಸಂಗಮದೇವರಲ್ಲಿ ತದ್ಗತನಾಗಿಪ್ಪ
ಮರುಳಶಂಕರದೇವರ ನಿಲವ
ಪ್ರಭು ಸಿದ್ಧರಾಮಯ್ಯದೇವರಿಂದ ಕಂಡು ಬದುಕಿದೆನು.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-414/ವಚನ ಸಂಖ್ಯೆ-1373)
ಬಸವಣ್ಣನವರು ಸಿದ್ದರಾಮರ ಕ್ರಿಯಾಜ್ಞಾನಕಳೆ, ಅನುಭಾವ, ನಿಷ್ಕಲಮನ ಈ ಗುಣಗಳನ್ನು ಕಂಡು ಧನ್ಯನಾದೆ ಎಂದು ಹೇಳುತ್ತಾರೆ.
ಹಾಗೆಯೇ ಮಹಾಗಣ ಪ್ರಸಾದಿ ಮರುಳಶಂಕರದೇವರು ಮಹಾಮಹಿಮ ಸಿದ್ದರಾಮರಲ್ಲಿರುವ ಮಹಾತೇಜಸ್ಸನ್ನು ಕಂಡು ಈ ರೀತಿ ಹೇಳುತ್ತಾರೆ.
ಎನ್ನ ಜ್ಞಾನಾತ್ಮನ ಚೇತನನಯ್ಯ ಪ್ರಭುದೇವರು.
ಎನ್ನ ಪರಮಾತ್ಮನ ಚೇತನನಯ್ಯ ಸಿದ್ಧರಾಮೇಶ್ವರದೇವರು.
ಎನ್ನ ಚಿನ್ಮಯಾತ್ಮನ ಚೇತನನಯ್ಯ ಬಸವಣ್ಣನು.
ಎನ್ನ ನಿರ್ಮಲಾತ್ಮನ ಚೇತನನಯ್ಯ ಷಟ್‌ಸ್ಥಲಬ್ರಹ್ಮಿ ಚೆನ್ನಬಸವಣ್ಣನು.
ಎನ್ನ ಮಹಾತ್ಮನ ಚೇತನನಯ್ಯ ಸಂಗನಬಸವಣ್ಣನ ನಿಜಸುಖಿ ಅಪ್ಪಣ್ಣನು.
ಎನ್ನ ಜೀವಾತ್ಮನ ಚೇತನನಯ್ಯ ಮಡಿವಾಳ ಮಾಚಯ್ಯನು.
ಎನ್ನ ಅಂತರಾತ್ಮನ ಚೇತನನಯ್ಯ ಸೊಡ್ಡಳ ಬಾಚರಸರು.
ಎನ್ನ ಅರಿವಿನ ಚೇತನಾತ್ಮಕನಯ್ಯ ಕಿನ್ನರ ಬೊಮ್ಮಯ್ಯನು.
ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ,
ನಿಮ್ಮ ಶರಣರ ಕರುಣವ ಪಡೆದೆನಾಗಿ,
ಎನ್ನ ಕರ್ಮ ನಿರ್ಮೂಲವಾಯಿತ್ತಯ್ಯ,
ನಿಮ್ಮ ಧರ್ಮ ನಿಮ್ಮ ಧರ್ಮ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-414/ವಚನ ಸಂಖ್ಯೆ-1094)
ಹೀಗೆ ಸಿದ್ದರಾಮರ ಸಿದ್ಧಿಯನ್ನು ಸ್ಮರಿಸಿದ್ದಾರೆ. ಸಿದ್ದರಾಮರ ಸಮಗ್ರ ಜೀವನವನ್ನು ಅವಲೋಕಿಸಿದಾಗ ಅವರ ಬದುಕಿನಲ್ಲಿ ಆದರ್ಶಗಳೇ ಕೇಂದ್ರ ಬಿಂದುಗಳಾಗಿ ಭಾವ, ಅನುಭಾವಗಳಿಂದ ಮಾನವೀಯತೆಯ ಪ್ರತೀಕವಾಗಿದ್ದಾರೆ ಎಂದು ಅಲ್ಲಮ ಪ್ರಭುದೇವರು ಈ ಕೆಳಗಿನ ವಚನದಲ್ಲಿ ಹೇಳುತ್ತಾರೆ
ಕಾಯದೊಳಗೆ ಕರಣವಿಲ್ಲ,
ಪ್ರಾಣದೊಳಗೆ ಭಾವವಿಲ್ಲ.
ಭಾವದೊಳಗೆ ಭ್ರಮೆಯಿಲ್ಲ,
ನವನಾಳದೊಳಗೆ ಸುಳುಹು ಮುನ್ನಿಲ್ಲ.
ಬ್ರಹ್ಮರಂಧ್ರದಲ್ಲಿ ಅರಿವು ಅರತ ಶಿವಯೋಗಿ;
ಗುಹೇಶ್ವರನ ಶರಣ ಸಿದ್ಧರಾಮಯ್ಯಾ
ನಿನ್ನ ಕಂಡು ಎನ್ನ ಭವಂ ನಾಸ್ತಿಯಾಯಿತ್ತು ಕೇಳಾ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-406/ವಚನ ಸಂಖ್ಯೆ-1088)
ಸಿದ್ದರಾಮರದು ಗುಪ್ತಗಾಮಿನಿಯ ಬದುಕು. ಮಹಾಸಮುದ್ರ ಸೇರಿದ ಬಳಿಕ ನದಿಯು ಲೀಲಾನಂದವನ್ನು ಹೊಂದುವಂತೆ ಅಲ್ಲಿ ತಾನೊಂದು ನದಿ ಎನ್ನಲುಂಟೇ? ಲೌಕಿಕ ಜಗತ್ತಿನ ಜಂಜಡದಲ್ಲಿ ಪಾರಮಾರ್ಥಿಕ ಪ್ರಭೆಯನ್ನು ಮೂಡಿಸಿದ್ದಾರೆ ಎಂದು ಅನೇಕ ಶರಣರು ತಮ್ಮ ತಮ್ಮ ವಚನಗಳಲ್ಲಿ ನುಡಿದಿದ್ದಾರೆ .
ಜೇಡರ ದಾಸಿಮಯ್ಯನವರ ಧರ್ಮಪತ್ನಿ ಶರಣೆ ದುಗ್ಗಳೆಯವರು:
ಭಕ್ತನಾದಡೆ ಬಸವಣ್ಣನಂತಾಗಬೇಕು.
ಜಂಗಮವಾದಡೆ ಪ್ರಭುದೇವರಂತಾಗಬೇಕು.
ಯೋಗಿಯಾದಡೆ ಸಿದ್ಧರಾಮಯ್ಯನಂತಾಗಬೇಕು.
ಭೋಗಿಯಾದಡೆ ಚೆನ್ನಬಸವಣ್ಣನಂತಾಗಬೇಕು.
ಐಕ್ಯನಾದಡೆ ಅಜಗಣ್ಣನಂತಾಗಬೇಕು.
ಇಂತಿವರ ಕಾರುಣ್ಯಪ್ರಸಾದವ ಕೊಂಡು
ಸತ್ತಹಾಗಿರಬೇಕಲ್ಲದೆ ತತ್ವದ ಮಾತು ಎನಗೇಕಯ್ಯಾ
ದಾಸಯ್ಯಪ್ರಿಯ ರಾಮನಾಥಾ?
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-305/ವಚನ ಸಂಖ್ಯೆ-785)
ಏಲೇಶ್ವರ ಕೇತಯ್ಯ:
ಬಸವೇಶ್ವರಂಗೆ ಸರ್ವಗುಣಶೀಲ,
ಚೆನ್ನಬಸವಣ್ಣಂಗೆ ದಿವ್ಯಜ್ಞಾನಗುಣಶೀಲ,
ಪ್ರಭುದೇವರಿಗೆ ಬಸವಣ್ಣ ಚೆನ್ನಬಸವಣ್ಣನ
ಉಭಯಗುಣ ಶೀಲ,
ಮಡಿವಾಳಯ್ಯಂಗೆ ವೀರಗುಣ ಶೀಲ,
ಅಜಗಣ್ಣಂಗೆ ಐಕ್ಯಗುಣ ಶೀಲ,
ಸಿದ್ಧರಾಮಯ್ಯಂಗೆ ಯೋಗಗುಣ ಶೀಲ,
ನಿಜಗುಣಂಗೆ ಆತ್ಮಗುಣ ಶೀಲ,
ಚಂದಯ್ಯಂಗೆ ವೈರಾಗ್ಯಗುಣ ಶೀಲ,
ಘಟ್ಟಿವಾಳಂಗೆ ತ್ರಿವಿಧಗುಣ ಶೀಲ,
ಮೋಳಿಗಯ್ಯಂಗೆ ಭೇದಗುಣ ಶೀಲ,
ಅಕ್ಕಗಳಿಗೆ ನಿರ್ವಾಣಗುಣ ಶೀಲ,
ಮಿಕ್ಕಾದ ಪ್ರಮಥರಿಗೆಲ್ಲಕ್ಕೂ ಸ್ವತಂತ್ರಗುಣ ಶೀಲ.
ಎನಗೆ ಏಲೇಶ್ವರಲಿಂಗವು ಕೊಟ್ಟುದೊಂದೆ ವಿಶ್ವಾಸಗುಣ ಶೀಲ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-751/ವಚನ ಸಂಖ್ಯೆ-1695)
ಸಿದ್ದರಾಮ ದೇವರು ಯೋಗಗುಣ ಶೀಲ ಭೂಷಣರು ಎನ್ನುತ್ತಾರೆ.
ಸಮತೆಯ ಸಾಕಾರ ಮೂರ್ತಿಯಾಗಿದ್ದ ಸಿದ್ದರಾಮರು ಮಹಿಳೆಯರನ್ನು ಸಾಕ್ಷಾತ್ ಕಪಿಲಸಿದ್ಧ ಮಲ್ಲಿಕಾರ್ಜುನ ಎಂದರು. ತನ್ನ ಹಿತ ಬಿಟ್ಟು ಅನ್ಯರ ಹಿತವನ್ನು ಬಯಸಿ ಸತ್ಕರ್ಮ, ದುಷ್ಕರ್ಮಗಳಿಗೆ ಈ ದೇಹವೇ ಕಾರಣವೆಂದು ಅರಿತು ಮನಕುಲದ ಸರ್ವಾಂಗಿಣ ಪ್ರಗತಿಗೆ ನೆಲೆಯಾದರು. ಗುರು ಬಸವಣ್ಣನವರ ವೈಚಾರಿಕ ಚಿಂತನೆಯಲ್ಲಿ ಅರಳಿದ ಬಸವ ಯೋಗಿ ಸಿದ್ದರಾಮೇಶ್ವರರು ಇಷ್ಟಲಿಂಗ ಯೋಗ ಸೂತ್ರದನ್ವಯ ಸೊನ್ನಲಿಗೆಯಲ್ಲಿ ಬದುಕಿದರು. ಮಹಾಲಿಂಗ ತತ್ವ ಸಾಧನೆ ದೇಶದಾದ್ಯಂತ ಗುರು ಬಸವಣ್ಣನವರ ತತ್ವ ಪ್ರಸಾರ ಹಾಗೂ ಸಮಾಜಮುಖಿ ಚಿಂತನೆಯ ಮೂಲಕ ಎಲ್ಲರ ಮನದಲ್ಲಿಯು ಅವರ ಬೆಳಗಿನ ಜ್ಞಾನ ಸಂದೇಶಗಳ ಬೆಳಕು ಚಿರಂತನವಾದದ್ದು. ಮಕರ ಸಂಕ್ರಾಂತಿಯಂದು ಅವರ ಜಯಂತೋತ್ಸವ. ನಾವೆಲ್ಲರು ಲೋಕ ಚಿಂತಕರಾಗಿ, ಆತ್ಮ ಚಿಂತಕರಾಗಿ, ಶಿವಯೋಗದ ಬೆಳಕಿನಲ್ಲಿಯೇ ಶಿವಯೋಗಿ ಸಿದ್ದರಾಮರನ್ನು ಕಾಣೋಣ.
ಶ್ರೀಮತಿ. ಅಮರವಾಣಿ ಐದನಾಳ,
ಅಧ್ಯಕ್ಷರು-ತಾಲೂಕು ಮಹಿಳಾ ಘಟಕ.
ಜಾಗತಿಕ ಲಿಂಗಾಯತ ಮಹಾಸಭಾ,
ಲಿಂಗಸಗೂರು.
ಮೋಬೈಲ್. ಸಂ. 99809 58759
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ ಸಂಚಾಲಕರನ್ನು ಸಂಪರ್ಕಿಸಬೇಕಾದ:
- ಮೋಬೈಲ್ ನಂ. 9741 357 132
- e-Mail ID: info@vachanamandara.in / admin@vachanamandara.in
![]()




Total views : 55850