
ಜಲದೊಳಗಿರ್ದ ಕಿಚ್ಚು ಜಲವ ಸುಡದೆ
ಜಲವು ತಾನಾಗಿಯೆ ಇದ್ದಿತ್ತು ನೋಡಾ
ನೆಲೆಯನರಿದು ನೋಡಿಹೆನೆಂದಡೆ,ಅದು ಜಲವು ತಾನಲ್ಲ.
ಕುಲದೊಳಗಿರ್ದು ಕುಲವ ಬೆರೆಸದೆ ,ನೆಲೆಗಟ್ಟುನಿಂದುದನಾರು ಬಲ್ಲರೋ?
ಹೊರಗೊಳಗೆವತಾನಾಗಿರ್ದು – ಮತ್ತೆ ತಲೆದೋರದಿಪ್ಪುದು
ಗುಹಾಎಶ್ವರಾ ನಿಮ್ಮಜಿಲುವು ನೋಡಾ
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-144 / ವಚನ ಸಂಖ್ಯೆ-71)
ಈ ವಚನ ಲಿಂಗದ ಇರುವಿಕೆಯ ಸ್ವರೂಪವನ್ನು ಕುರಿತು ಅಲ್ಲಮರು ಚರ್ಚಿಸಿದ ಒಂದು ವಚನ. ದೈವದ ಇರುವಿಕೆಯನ್ನು ಕುರಿತು ವ್ಯೋಮಕಾಯ ಅಲ್ಲಮ ಪ್ರಭುಗಳು ಮಾಡಿದ ಚಿಂತನೆ ಅಗಮ್ಯವಾದುದು. ಒಟ್ಟಾರೆ ಶರಣರ ಚಿಂತನೆಗೆ ಅಡಿಪಾಯವಾದುದು. ನಮ್ಮ ಹೊರಗಿನ ಕಣ್ಣಿಗೆ ಪರಮನ ಇರವು ಕಾಣಿಸಲಾರದು. ಅದು ಜಲದೊಳಗನ ಪಾವಕನಂತೆ. ಅಗ್ನಿಯೊಳಗಣ ಸುಡುವಿಕೆಯಂತೆ. ಗಾಳಿಯೊಳಗಿನ ಹರಿಯುವಿಕೆಯಂತೆ. ಹೀಗಾಗಿ ಅದನ್ನು ಪ್ರತ್ಯೇಕಿಸಿ ನೋಡಲಾಗದು. ಅನುಭವಿಸುವ ಅರ್ಹತೆ ಬೇಕು. ಅದು ತನ್ನ ಸರ್ವಾರ್ಪಣೆಯಿಂದ ಮಾತ್ರ ಸಾಧ್ಯ.
ಅತ್ಯಂತ ಸ್ಪಷ್ಟವಾಗಿ ದೈವದ ಇರುವಿಕೆಯನ್ನು ಈ ವಚನ ವಿವರಿಸುತ್ತದೆ. ನೀರಿನಲ್ಲಿ ಬೆಂಕಿ ಇದೆ. ಆದರೆ ಅದರ ಇರುವಿಕೆ ಗೋಚರಿಸದು. ಹಾಗೆಂದು ಅದು ಇಲ್ಲ ಎನ್ನಲಾಗದು. ಬೆಂಕಿ ನೀರಲ್ಲಿಯೇ ಇದೆ. ಆದರೆ ಪ್ರಸಂಗ ಬಂದಾಗ ತನ್ನ ಇರುವಿಕೆಯನ್ನು ತೋರುತ್ತದೆ.
ಜಲದೊಳಗನ ಕಿಚ್ಚು ಜಲದೊಳಗಿದ್ದು ಜಲವ ಸುಡದೆ ಇರುವ ಪರಿ ಸೃಷ್ಟಿಯ ವೈಚಿತ್ರ್ಯ. ಇದನ್ನು ವಿವರಿಸುವೆನೆಂದರೆ ಮೂರ್ಖತನ. ಆ ಇರುವಿಕೆಯನ್ನು ಅರಿಯಬೇಕಷ್ಟೇ. ವಿಚಾರಿಸಿ ನೋಡಿದರೆ ಅದು ಜಲವೇ? ಅಲ್ಲ. ಹೀಗೆ ನೀರಿನೊಳಗೆ ಇದ್ದು ನೀರು ತಾನಾಗದೆ ಇರುವ ಈ ಭೇದವನು ಯಾರು ವಿವರಿಸಬಲ್ಲರು? ಎಂಬ ವಿಸ್ಮಯದ ಪ್ರಶ್ನೆಯ ಮೂಲಕ ಅಲ್ಲಮಪ್ರಭುಗಳು ಇನ್ನೊಂದು ಮಹತ್ವದ ಇರುವಿಕೆಯ ಕುರಿತು ಚಿಙತನೆ ಮಾಡುತ್ತಾರೆ. ಶರಣರ ಚಿಂತನೆಯೆ ಹಾಗೆ ಗೊತ್ತಿರುವ ಒಂದು ಉದಾಹರಣೆ ಹೇಳಿ ನಮಗೆ ಸುಲಭವಾಗಿ ವೇದ್ಯವಾಗದ ಒಂದು ಅನೂಹ್ಯ ಸಂಗತಿಯನ್ನು ನಮ್ಮ ಮನಸಿನ ಪಾತಳಿಗೆ ಸ್ಪಷ್ಟಗೊಳಿಸುವ ವಿಶೇಷ ವಿಧಾನ ಅವರದ್ದು.
ಬೆಂಕಿಯಾಗಿ ಅನುಭವಕೆ ಬರುವ ಆ ವಿಶೇಷ ಸಂಗತಿಯನ್ನು ಅದು ಹೌದೇ ಎಂದು ಸಂಶಯಿಸಿ ಅದರ ನೆಲೆಯ ಹುಡುಕ ಹೊರಡುವದು ಮನುಷ್ಯ ಬುದ್ದಿ. ಆದರೆ ಆ ಬುದ್ದಿಗೆ ಗೋಚರವಾಗುವ ಸಂಗತಿ ಇದಲ್ಲ ಎನ್ನುವದನ್ನು ಶರಣರು ಸಾರುತ್ತಾರೆ. ಅದೇ ಅರ್ಥ “ಕುಲದೊಳಗಿರ್ದು ಕುಲವ ಬೆರೆಸದೆ ನೆಲೆಗಟ್ಟು ನಿಂದುದನಾರು ಬಲ್ಲರೋ?” ಎಂಬ ಪ್ರಶ್ನೆ ವಿವರಿಸುತ್ತದೆ. ಬರಿ ಇರುವಿಕೆಯಲ್ಲ. ಅದರ ನೆಲೆಗಟ್ಟೂ ತಾನೇ ಆಗಿರುವದನ್ಜು ವಚನ ಸೂಕ್ಷ್ಮವಾಗಿ ಆಲೋಚಿಸುತ್ತದೆ. ನೀರಿನ ಕುಲದೊಳಗೆ ನೀರಿನ ರೂಪದಲ್ಲಿ ತಾನು ಒಂದಾಗಿರುವ ಬೆಂಕಿಯ ಇರುವಿಕೆಯನ್ನು ವಿವರಿಸಬಲ್ಲವರು ಯಾರು? ಎಂಬ ಈ ಪ್ರಶ್ನೆ. ಇದು ಸರಳ ಮತಿಗೆ ಹೊಳೆಯುವ ಸಂಗತಿಯೂ ಅಲ್ಲ ಎಂಬ ವಿಚಾರವನ್ನು ಸ್ಪಷ್ಟ ಮಾಡುತ್ತದೆ. ಹೊರಗಿನೊಳಗೆ ತಾನೇ ಆಗಿದ್ದರೂ ಆದರೆ ಕಾಣಿಸದ ವಿಸ್ಮಯ ಗುಹೇಶ್ವರನ ಇರವು ಎನ್ನುವದನ್ನು ಪ್ರಭುಗಳು ಈ ವಚನದಲ್ಲಿ ವಿವರಿಸಿದ್ದಾರೆ.
ಡಾ. ಯಲ್ಲಪ್ಪ ಯಾಕೊಳ್ಳಿ.
ಪ್ರಾಚಾರ್ಯರು,
ಸರ್ಕಾರಿ ಪದವಿ ಪೂರ್ವ ಕಾಲೇಜು,
ಯಕ್ಕುಂಡಿ, ಬೆಳಗಾವಿ ಜಿಲ್ಲೆ.
ಮೋಬೈಲ್ ಸಂ. 97319 70857
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in