ಶ್ರಾವಣ ವಚನ ಚಿಂತನ-08: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಜಲದೊಳಗಿರ್ದು ಕಿಚ್ಚು ಜಲವ ಸುಡದೆ,
ಜಲವು ತಾನಾಗಿಯೇ ಇದ್ದಿತ್ತು ನೋಡಾ,
ನೆಲೆಯನರಿದು ನೋಡಿಹೆನೆಂದಡೆ, ಅದು ಜಲವು ತಾನಲ್ಲ.
ಕುಲದೊಳಗಿರ್ದು ಕುಲವ ಬೆರೆಸದೆ, ನೆಲೆಗೆಟ್ಟುನಿಂದುದನಾರು ಬಲ್ಲರೋ?
ಹೊರಗೊಳಗೆ ತಾನಾಗಿರ್ದು-ಮತ್ತೆ ತಲೆದೋರದಿಪ್ಪುದು,
ಗುಹೇಶ್ವರಾ ನಿಮ್ಮ‌ ನಿಲವು ನೋಡಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-138 / ವಚನ ಸಂಖ್ಯೆ-3)

ದೇವನ ಇರವನ್ನು ಕುರಿತು ಶರಣರು ಮಾಡಿದ ಚಿಂತನೆ ಅದ್ಭುತವಾದುದು. ಅವನು ಎಲ್ಲೆಡೆಯೂ ಇದ್ದರೂ ಅವನ ಇರುವಿಕೆ ನಮ್ಮ ಸಾಮಾನ್ಯತೆಯ ಅರಿವಿಗೆ ಬರಲಾರದು. ವಿಶೇಷವಾದ ದೃಷ್ಟಿಕೋನ ಇದ್ದರೆ ಮಾತ್ರ ಅವನ ಅರಿವು ನಮಗೆ ಆಗಲು ಸಾಧ್ಯ. ಇದು ಒಂದು ರೀತಿಯಲ್ಲಿ ಹಾಲಿನಲ್ಲಿ ತುಪ್ಪ ಇರುವಂತೆ, ನೀರಿನಲ್ಲಿ ಬೆಂಕಿ ಇರುವಂತೆ ಇರುವ ಭೇದ. ನಮ್ಮ ಹೊರಗಿನ ಚಕ್ಷುಗಳಿಗೆ ಹಾಲಿನೊಳಗಿರುವ ತುಪ್ಪವಾಗಲಿ ನೀರಿನಲ್ಲಿರುವ ಬೆಂಕಿಯಾಗಲಿ ಕಾಣಿಸಲಾರವು. ಆದರೆ ಅವು ಇಲ್ಲವೆಂಬ ವಾದ ವಿತಂಡವಾದವಾದೀತು. ಅವುಗಳ ಇರುವಿಕೆ ಕೇವಲ ಅನುಭವೈಕವಾದುದು. ಹಾಗೆಯೇ ದೇವನ ಇರುವಿಕೆ ಕುರಿತು ಅಲ್ಲಪ್ರಭುಗಳ ಪ್ರಸ್ತುತ ಈ ವಚನ ಚಿಂತನೆಯನ್ನು ಮಂಡಿಸುತ್ತದೆ.

ನಮ್ಮ ಮನಸ್ಸು ಸದಾ ಪ್ರಶ್ನೆ ಮತ್ತು ಸಂಶಯಗಳಿಂದ ಕೂಡಿರುವಂಥದೆ. ಜಲದಲ್ಲಿ ಕಿಚ್ಚು ಇದೆಯನ್ನುವಿರಿ, ಹಾಗಾದರೆ ನೀರನ್ನೇಕೆ ಸುಡುತ್ತಿಲ್ಲ? ಎಂಬ ಗೊಂದಲ, ಸಂಶಯ ಸಾಮಾನ್ಯರ ಮನಸ್ಸಿಗೆ ಆಗುವಂಥದ್ದೇ! ಅದು ಏಕೆ ಸುಡುತ್ತಿಲ್ಲ ಎಂಬ ನಮ್ಮ ಸಂಶಯಕ್ಕೆ ಅಲ್ಲಮ ಪ್ರಭುಗಳು ಉತ್ತರ‌ ಕೊಡುತ್ತ “ನೆಲೆಯನರಿದು ನೋಡಿದರೆ ಅದು ಜಲವು ತಾನಲ್ಲ” ಎನ್ನುವ ಉತ್ತರ‌ ಕೊಡುತ್ತಾರೆ. ಅಂದರೆ ಜಲವಾಗಲಿ ಕಿಚ್ಚಾಗಲಿ ಯಾವುದೂ ಅವುಗಳಲ್ಲ. ಮಹಾಶಕ್ತಿಯೇ ಆ ರೂಪದಲ್ಲಿರುತ್ತದೆ ಎನ್ನುವ ಉತ್ತರ ಕೊಡುತ್ತಾರೆ.

ವಚನದ ಮುಂದಿನ ಭಾಗ ಇದನ್ನೇ ಇನ್ನೂ ಸ್ಪಷ್ಟವಾಗಿ “ಹೊರಗೊಳಗೆ ತಾನಾಗಿರ್ದು” ಎಂಬ ಸಾಲು ಸೂಚಿಸುತ್ತದೆ. ಒಂದು ರೀತಿಯಲ್ಲಿ ಹಸಿವು ಮತ್ತು ಆಹಾರ ಎರಡರ ಹೋಲಿಕೆಯನ್ನು ಇಲ್ಲಿ ಬಳಸಬಹುದು. ನಿಜವಾಗಿ‌ ನೋಡಿದರೆ ಮನುಷ್ಯನ ಉದರದಲ್ಕಿ ಹಸಿವು ಇದ್ದು ನಮಗೆ ಕಾಣುವದಿಲ್ಲ. ಹಸಿವೇ ತಾನಾಗಿ ಉದರವೇ ತಾನಾಗಿ ಕೊನೆಗೆ ತೃಪ್ತಿಯೂ ಆಗಿ ಎಲ್ಲದಕ್ಕೂ ಕಾರಣವಾಗುವ ಚೇತನದಂತೆ ಈ ಇರುವಿಕೆ ಕಾಣುತ್ತದೆ. ಆದರೂ ಆ ಇರುವಿಕೆ ಕಣ್ಣಿಗೆ ಕಾಣದಂತೆ ಇರುತ್ತದೆ. ಮತ್ತೆ ತಲೆದೋರದೆ ಇರುವ ಈ ಸ್ಥಿತಿಯೇ ಅಂತಿಮ ಎನ್ನುತ್ತಾರೆ ಪ್ರಭುಗಳು.

ಜಲದೊಳಗೆ ಬೆಂಕಿಯಿದೆ ಆದರೆ ಉರಿಯುವದಿಲ್ಲ, ನಮ್ಮೊಳಗೆ ದೈವನೂ ಇದ್ದಾನೆ. ಅವನೂ ಕಾಣುವದಿಲ್ಲ. ಒಳ-ಹೊರಗೆ ತಾನೇ ಇದ್ದು ಇಲ್ಲದಂತೆ ಇರುವ ಅವನ ಅಸ್ತಿತ್ವ ಅನುಭವಕ್ಕೆ ಮಾತ್ರ ಬರುವಂಥದು ಎನ್ನುತ್ತಾರೆ. ಇದನ್ನು ಹೇಳಲು

ಕುಲದೊಳಗಿರ್ದು ಕುಲವ ಬೆರೆಸದೆ, ನೆಲೆಗೆಟ್ಟುನಿಂದುದನಾರು ಬಲ್ಲರೋ?
ಹೊರಗೊಳಗೆ ತಾನಾಗಿರ್ದು-ಮತ್ತೆ ತಲೆದೋರದಿಪ್ಪುದು,
ಗುಹೇಶ್ವರಾ ನಿಮ್ಮ‌ ನಿಲವು ನೋಡಾ.

ಎನ್ನುವ ಸಾಲುಗಳು ಅವನ ಇರುವಿಕೆಯ ವಿಸ್ಮಯವನ್ನೇ ಸೂಚಿಸುತ್ತವೆ. ಅಲ್ಲಿ‌ ಪ್ರಶ್ನೆಗೆ ಅರ್ಥವಿಲ್ಲ ಎನ್ನುವ ಸೂಚನೆಯನ್ನೂ ನೀಡುತ್ತಾರೆ. ಇದು ಹೇಗೆ ಎಂದರೆ ಜೇಡರ ದಾಸಿಮಯ್ಯನವರು ಸಾರುವಂತೆ:

ಸಾಗರದೊಳಗಣ ಕಿಚ್ಚಿನ ಸಾಕಾರದಂತೆ,
ಸಸಿಯೊಳಗಣ ಫಲಪುಷ್ಪ ರುಚಿಯ ಪರಿಮಳದಂತೆ,
ಮನದ ಮರೆಯ ಮಾತು
ನೆನಹಿನಲ್ಲಿ ಅರಿದು, ನಾಲಗೆಯ ನುಡಿವಾಗಲಲ್ಲದೆ
ಕಾಣಬಾರದು, ಕೇಳಬಾರದು
ಒಂದಂಗದೊಳಗಡಗಿದ ನೂರೊಂದರ ಪರಿ, ರಾಮನಾಥ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-138 / ವಚನ ಸಂಖ್ಯೆ-3)

ಎನ್ನುವದೇ ಸರಿಯಾದದ್ದು. ಎಲ್ಲದಕ್ಕೂ‌ ಮಾತಾಗುವೆನೆನ್ನುವುದು ನಮ್ಮ ಮೂರ್ಖತನ. ಸುಮ್ಮನೆ ಅನುಭವಿಸುವದು ಜ್ಞಾನಿಯ ಜಾಣ್ಮೆ.

ಡಾ. ಯಲ್ಲಪ್ಪ ಯಾಕೊಳ್ಳಿ.
ಪ್ರಾಚಾರ್ಯರು,
ಸರ್ಕಾರಿ ಪದವಿ ಪೂರ್ವ ಕಾಲೇಜು,
ಯಕ್ಕುಂಡಿ, ಬೆಳಗಾವಿ ಜಿಲ್ಲೆ.
ಮೋಬೈಲ್‌ ಸಂ. 97319 70857

ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in

Loading

Leave a Reply