
ಕಂಗಳೇಕೆ ʼನೋಡಬೇಡಾʼ ಎಂದರೆ ಮಾಣವು?
ಶ್ರೋತ್ರಂಗಳೇಕೆ ʼಆಲಿಸಬೇಡಾʼ ಎಂದರೆ ಮಾಣವು?
ಜಿಹ್ವೆ ಏಕೆ ʼರುಚಿಸಬೇಡಾʼ ಎಂದರೆ ಮಾಣದು?
ನಾಸಿಕವೇಕೆ ʼವಾಸಿಸಬೇಡಾʼ ಎಂದರೆ ಮಾಣದು?
ತ್ವಕ್ಕು ಏಕೆ ʼಸೋಂಕಬೇಡಾʼ ಎಂದರೆ ಮಾಣದು?
ಈ ಭೇದವನರಿದು ನುಡಿಯಲು ಸಮಧಾತುವಾಯಿತ್ತು!
ಗುಹೇಶ್ವರಲಿಂಗಕ್ಕೆ ಒಲಿದ ಕಾರಣ,
ಅಭಿಮಾನ ಲಜ್ಜೆ ಬೇಸತ್ತು ಹೋಯಿತ್ತು.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-146 / ವಚನ ಸಂಖ್ಯೆ-98)
ಬಾಳಿನ ಆಸಕ್ತಿಗಳು ಹಲವಾರು. ಅವು ಮಾನವನ ಹುಟ್ಟಿನಿಂದ ಎಲ್ಲ ಕಾಲಕ್ಕೂ ಇರುವಂಥವೇ. ತನ್ನ ಆಸಕ್ತಿ ಮೂಲವಾಗಿಯೇ ಜಗತ್ತಿನಲ್ಲಿ ಮನುಷ್ಯ ಎಲ್ಲವನ್ನೂ ಸೃಜಿಸುತ್ತ ಬಂದಿದ್ದಾನೆ. ಕಣ್ಣು ಕನಸಿದ್ದು, ಮನ ಊಹಿಸಿದ್ದು, ಕೈಯ ಸಾಹಸದ ಮೂಲಕ ಒಂದು ವಸ್ತು ರೂಪ ಪಡೆದು ನಮ್ಮ ಮುಂದೆ ನಿಲ್ಲುತ್ತದೆ. ನಾವು ಎಷ್ಟೇ ಹೇಳಿದರೂ ಕಣ್ಣು ನೋಡುವದನ್ನು ಬಿಡದು. ಕಿವಿಗಳು ಕೇಳುವದನ್ನು ಬಿಡವು, ನಾಲಗೆ ರುಚಿ ರುಚಿಯಾದ ಆಹಾರ ಬಯಸದೇ ಇರದು. ಮೂಗು ಸುವಾಸನೆಯ ಅರಸುತ್ತದೆ, ಚರ್ಮಕ್ಕೆ ಸ್ಪರ್ಶ ಸುಖ ಬೇಕೇ ಬೇಕು. ಇವು ಜೀವನ ಇರುವವರೆಗೂ ಅಪರಿಹಾರ್ಹ. ಅಂದರೆ ಬಿಡಲಾಗದಂಥವುಗಳು.
ಆದರೆ ತಾತ್ವಿಕ ಸಾಹಿತ್ಯದ ಗರಿಮೆ ಇರುವದು ಇವೆಲ್ಲವೂ ಒಂದು ದಿನ ಹೋಗುತ್ತವೆ ಎನ್ನುವದನ್ನು ಸಾರುವುದೆ ಆಗಿದೆ. ಇವುಗಳ ಚಾಂಚಲ್ಯತೆಯನ್ನು ಅರಿತರೆ ಮಾತ್ರ ನಿಜವಾದ ಆನಂದ ಅರಿಯಲು ಸಾಧ್ಯ. ಆ ನಿಜವಾದ ಆನಂದ ಎನ್ನುವದು ಇರುವದು ಗುಹೇಶ್ವರನ ಸಂಗದಲ್ಲಿ ಮಾತ್ರ ಎನ್ನುವ ಸತ್ಯವನ್ನು ಅಲ್ಲಮಪ್ರಭುಗಳು ಒಂದು ವಚನದಲ್ಲಿ ಸುಂದರವಾಗಿ ನಿರೂಪಿಸಿದ್ದಾರೆ.
ಇಂದ್ರಿಯಗಳ ಕಾರಣಕ್ಕೆ ತನ್ನ ದೇಹ ಸೌಂದರ್ಯದ ಕಾರಣಕ್ಕೆ ಅದೇ ನಿಜವಾದದ್ದು ಎಂದು ನಂಬಿದ ನಾವು ಅದರಲ್ಕಿಯೇ ಮುಳುಗಿ ವ್ಯರ್ಥ ಸಮಯ ಕಳೆಯುತ್ತೇವೆ. ಅಲ್ಲಮ ಪ್ರಭುಗಳು ಈ ಅಭಿಮಾನ ಅಹಮ್ಮು ಕಳೆಯಲು ಒಂದೇ ಗಾರುಡವೆಂದರೆ ಅದು ಗುಹೇಶ್ವರನ ಸಂಗದಿಂದ ಮಾತ್ರ ಎನ್ನುತ್ತಾರೆ ಪ್ರಸ್ತುತ ಈ ವಚನದಲ್ಲಿ.
ಎತ್ತು ಎರೆಗೆ ಎರೆಗೆ ಎಳೆದರೆ ಕೋಣ ಕೆರೆಗೆ ಎಳೆದಂತೆ ಇಡೀ ಬದುಕಿನುದ್ದ ಮನುಷ್ಯ ಇಂದ್ರಿಯಗಳ ಆಸೆಯತ್ತಲೇ ಮುಳುಗಿ ನಿಜವಾದ ಸಂತೋಷವನ್ನು ಮರೆತಿದ್ದಾನೆ. ಆ ನಿಜವಾದ ಸಂತೊಷ ಗುಹೇಶ್ವರನ ಸಂಗದಲ್ಲಿದೆ. ಮಾತ್ರವಲ್ಲ ಈ ಎಲ್ಲ ಬಗೆಯ ಆಸೆಗಳನ್ನು ಇಲ್ಲವಾಗಿಸುವದು ಅಷ್ಟು ಸರಳವೂ ಅಲ್ಲ ಎಂಬ ಸತ್ಯವನ್ನು ವಚನ ಸಾರುತ್ತದೆ. ಅವುಗಳ ಆಸಕ್ತಿಯನ್ನು ಬದಲಿಸುವದೆ ದಾರಿ. ಹಾಗೆ ಬದಲಿಸಿದ್ದಾದರೆ ನಮ್ಮ ಇರುವಿಕೆ ಸಾರ್ಥಕ ಎಂಬ ಸಂದೇಶವನ್ನು ವಚನ ನೀಡಿದೆ. ಇಂದ್ರಿಯದ ಬಯಕೆಗಳನ್ನು ಸಂಸ್ಕರಿಸಿ ಕಣ್ಣು, ಕಿವಿ, ನಾಲಗೆ, ಮೂಗು ಮತ್ತು ಚರ್ಮಗಳಿಗೆ ಸರಿದಾರಿ ತೋರುವುದು ಮುಖ್ಯ. ಎರಡರ ನಡುವೆ ಇರುವ ಭೇದವನ್ನು ಇಲ್ಲವಾಗಿಸಿದಾಗಲೇ ಸಮತೆ (ಸಮಧಾತು) ಎಂಬುದು ಮೂಡಲು ಸಾಧ್ಯ. ತಾನು ಗುಹೇಶ್ವರನನೊಲಿದ ಕಾರಣ “ಅಭಿಮಾನ ಲಜ್ಜೆ ಬೇಸತ್ತು ಹೋಯಿತು” ಎಂಬ ಸತ್ಯವನ್ನು ಅವರು ಸಾರಿದ್ದಾರೆ. ನಮಗೂ ಇಂದ್ರಿಯಗಳ ಬೆನ್ನು ಹತ್ತುವದನ್ನು ಕಡಿಮೆ ಮಾಡಿ ಸಮತೂಕದಲಿ ಬಾಳಲು ಸಲಹೆ ವಚನದಲ್ಲಿದೆ.
ಡಾ. ಯಲ್ಲಪ್ಪ ಯಾಕೊಳ್ಳಿ.
ಪ್ರಾಚಾರ್ಯರು,
ಸರ್ಕಾರಿ ಪದವಿ ಪೂರ್ವ ಕಾಲೇಜು,
ಯಕ್ಕುಂಡಿ, ಬೆಳಗಾವಿ ಜಿಲ್ಲೆ.
ಮೋಬೈಲ್ ಸಂ. 97319 70857
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in