
ಮರ್ತ್ಯಲೋಕದಮಾನವರು;
ದೇಗುಲದೊಳಗೊಂದು ದೇವರ ಮಾಡಿದಡೆ, ಆನು ಬೆರಗಾದೆನು.
ನಿಚ್ಚಕ್ಜೆ ನಿಚ್ಚ ಅರ್ಚನೆ ಪೂಜೆಯ ಮಾಡಿಸಿ,
ಭೋಗವ ಮಾಡುವವರ ಕಂಡು ನಾನು ಬೆರಗಾದೆನು.
ಗುಹೇಶ್ವರಾ ನಿಮ್ಮ ಶರಣರು, ಹಿಂದೆ ಲಿಂಗವನಿರಿಸಿ ಹೋದರು.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-152 / ವಚನ ಸಂಖ್ಯೆ-176)
ಶರಣರು ಮಾಡಿದ ದೈವ ಚಿಂತನೆ ವಿಶೇಷವಾದುದು. ದೇವರನ್ನು ನಮಗಾಗಿ ನಮ್ಮ ಮನಸಿಗೆ ಬಂದಂತೆ ಸೃಷ್ಟಿಸಿಕೊಳ್ಳುವ ನಮ್ಮ ವ್ಯವಹಾರಿಕ ಬುದ್ದಿಯನ್ನು ಶರಣರು ಒಪ್ಪುವದಿಲ್ಲ. ಅವನು ಅನೂಹ್ಯ ಮತ್ತು ಎಲ್ಲೆಲ್ಲಿಯೂ ಇರುವವನು ಎಂಬುದನ್ನು ಮರೆತ ನಾವು ದೇವರು ಇಲ್ಲಿ ಮಾತ್ರ ಇದ್ದಾನೆ ಎಂದು ಭಾವಿಸಿ ದೇವರಿಗಾಗಿ ದೇವಾಲಯ ನಿರ್ಮಿಸಿ, “ಇದು ದೇವಾಲಯ, ಇಲ್ಲಿ ಮಾತ್ರ ದೇವರಿದ್ದಾನೆ, ನಿಮಗೆ ದೇವರು ಬೇಕಾದರೆ ಇಲ್ಲಿಗೆ ಮಾತ್ರ ಬನ್ನಿ” ಎಂಬರ್ಥದ ನಡತೆ ನಮ್ಮದಾಗಿದೆ. ಇದು ಕಾಲಾನಂತರದಲ್ಲಿ ಕೆಲವರು ಮಾತ್ರ ಸೇರಿ ಬಹುಸಂಖ್ಯಾತರನ್ನು ಶೋಷಿಸುವ ವ್ಯವಸ್ಥೆಯೂ ಆಯಿತು. ದೇವಸ್ಥಾನ ಕೆಲವರಿಗೆ ಮಾತ್ರ ಪ್ರವೇಶ ಕೊಟ್ಟು ಉಳಿದವರಿಗೆ ನಿರ್ಬಂಧ ಹಾಕಿರುವ ಇತಿಹಾಸವೂ ಇದೆ. ಹೀಗೆ ದೇವರಿಗೆ ದೇವಾಲಯ ಕಟ್ಟಿ ಅಲ್ಲಿ ಮಾತ್ರ ದೇವರ ಇರಲು ಸಾಧ್ಯ ಎನ್ಹುವ ನಮ್ಮ ಸಂಕುಚಿತ ಬುದ್ದಿಯನ್ನು ಶರಣರು ಒಪ್ಪುವದಿಲ್ಲ ಎನ್ನುವದಕೆ ಅವರ ಹಲವಾರು ವಚನಗಳೇ ಸಾಕ್ಷಿಯಾಗಿವೆ. “ದೇಹಾರವ ಮಾಡುವ ಅಣ್ಣಗಳಿರಾ ದೇಹಾರದ ಬದಲು ಒಂದು ತುತ್ತು ಆಹಾರವನಿಕ್ಕಿರೇ” ಎನ್ಜುವ ಅಂಬಿಗರ ಚೌಡಯ್ಯ, ದೇವಾಲಯ ನನ್ನಿಂದ ಮಾಡಲಾಗದು “ಎನ್ನ ಕಾಲೆ ಕಂಬ ದೇಹವೇ ದೇಗುಲ” ಎಂದು ಚಿಂತಿಸಿದ ಬಸವಣ್ಣನವರು ಇವರ ವಿಚಾರಗಳಲ್ಲಿ ಅದು ವ್ಯಕ್ತವಾಗಿದೆ. ಇದು ದೇವಾಲಯದಲ್ಲಿ ಮಾತ್ರ ದೇವರಿದ್ದಾನೆ ಎಂಬ ನಮ್ಮ ಸೀಮಿತತೆಗೆ ಶರಣರ ವಿರೋಧವಿದೆ. ಹೀಗೆ ದೇವರಿಗಾಗಿ ದೇವಾಲಯ ಮಾಡಬೇಕೆನ್ನುವ ನಮ್ಮ ಯೋಚನೆಯನ್ನು ತುಂಡರಿಸುವ ಪ್ರಯತ್ನವನ್ನು ಅಲ್ಲಮಪ್ರಭುಗಳು ಈ ವಚನದ ಮೂಲಕ ಮಾಡಿದ್ದಾರೆ.
ಅಂಗದ ಮೇಲೆ ಸ್ವಾಯತವಾಗಿರುವ ಲಿಂಗವ ಬಿಟ್ಟು, ದೇವಾಲಯದೊಳಗೆ ಏನೋ ಒಂದು ವಸ್ತುವನ್ನು ಇಟ್ಟು ಇದು ನಮ್ಮ ದೇವರು ಎಂದು ಸಾರುವ ಮನುಷ್ಯ ಬುದ್ಧಿಯನ್ನು ತರಾಟೆಗೆ ತಗೆದುಕೊಳ್ಳುತ್ತಾರೆ ಶರಣರು. ಇದು ನಾವು ಕಟೆದು ನಿಲ್ಲಿಸಿರುವ ದೇವಾಲಯ. ನಮ್ಮ ದೇವರಿಗಾಗಿ ಕಟ್ಟಿಸಿದೆ. ಇಲ್ಲ ದೇವರು ಇದ್ದಾನೆ ಎನ್ನುವದು ತಪ್ಪು. ಆತ ಸರ್ವಾಂತರ್ಯಾಮಿ. ಸರ್ವಜ್ಞ ಕವಿ ಹೇಳುವಂತೆ:
ಕಲ್ಲು ಕಾಷ್ಟದೊಳಗಿರುವ
ಮುಳ್ಳುಮೊನೆಯಲ್ಲಿ ಇರುವ
ಎಲ್ಲೆಲ್ಲೂ ಇರುವ ಹರನು ತಾ ತನ್ನೊಳಗೆ ಇರನೇ
ಎಂಬ ಮಾತೂ ಸಾಕ್ಷಿಯಾಗಿದೆ. ಅದ್ದರಿಂದ ದೇವರಿಗೆಂದು ಗುಡಿ ಕಟ್ಟುವ ನಮ್ಮ ಬುದ್ದಿ ಅಲ್ಲಮಪ್ರಭುಗಳಿಗೆ ನಗೆ ತರಿಸಿದೆ. ಸೂರ್ಯ ಚಂದ್ರಾದಿಗಳಿಗೆ ಅವನಿಗೆ ಅರ್ಚನೆ ಮಾಡುವಾಗ ಇಡೀ ನಿಸರ್ಗವೇ ಅವನ ಪೂಜೆಯಲ್ಲಿ ನಿರತವಾದಾಗ ನಮ್ಮ ಸೀಮಿತತೆಗೆ ಜಾಗವಿಲ್ಲ. ನಾವೂ ನಿಸರ್ಗದ ಒಂದು ಅಂಗವಾಗಬೇಕು. ಆದರೆ ನಮಗೆ ನಮ್ಮ ಭೋಗವೆ ಅಧಿಕವಾಗಿದೆ. ಅದರಲ್ಲಿ ಮುಳುಗಿ ಇದು ಮಾತ್ರ ನಮ್ಮ ದೇವರು ಎಂಬ ಸಂಕುಚಿತತೆಯನ್ನು ವಚನ ವಿರೋಧಿಸಿ ಎಲ್ಲೆಡೆ ಇರುವ ಮಹಾ ಮಹಿಮನ ಪೂಜೆ ನಿರಂತರ ಎಂದಿದೆ.
ನಮಗಾಗಿ ಶರಣರು ಇರಿಸಿ ಹೋಗಿರುವ ಲಿಂಗವ ಬಿಟ್ಟು “ತನಗೊಂದು ಮನೆಗೊಂದು ದೈವ” ಎನ್ನುವ ಬುದ್ದಿಗೆ ಇಲ್ಲಿ ಪಾಠ ದೊರಕಿದೆ.
ಡಾ. ಯಲ್ಲಪ್ಪ ಯಾಕೊಳ್ಳಿ.
ಪ್ರಾಚಾರ್ಯರು,
ಸರ್ಕಾರಿ ಪದವಿ ಪೂರ್ವ ಕಾಲೇಜು,
ಯಕ್ಕುಂಡಿ, ಬೆಳಗಾವಿ ಜಿಲ್ಲೆ.
ಮೋಬೈಲ್ ಸಂ. 97319 70857
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in