ಶ್ರಾವಣ ವಚನ ಚಿಂತನ-12: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಶಿಲೆಯೊಳಗಣ ಪಾವಕನಂತೆ,
ಉದಕದೊಳಗಣ ಪ್ರತಿಬಿಂಬದಂತೆ,
ಬೀಜದೊಳಗಣ ವೃಕ್ಷದಂತೆ,
ಶಬ್ದದೊಳಗಣ ನಿಶ್ಶಬ್ದದಂತೆ,
ಗುಹೇಶ್ವರಾ ನಿಮ್ಮ ಶರಣ-ಸಂಬಂಧ.
(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-7 / ವಚನ ಸಂಖ್ಯೆ-1)

ಶರಣರ ಪ್ರಕಾರ ಅಂಗವೇ ಲಿಂಗದ ಆಶ್ರಯ ತಾಣ. ಅದು ಲಿಂಗಕ್ಕೆ ಆಧಾರವಾದುದು. ಅಂಗ ಲಿಂಗವನ್ನು ಗರ್ಭದಲ್ಲಿ ಅಡಗಿಸಿಕೊಂಡಿರುತ್ತದೆ. ಅಂಗವಿರದಿದ್ದರೆ ಲಿಂಗಕ್ಕೆ ಆಸರೆ ಇಲ್ಲ. ಅಂಗ‌ ಮತ್ತು‌ ಲಿಂಗದ ಸಂಬಂಧವನ್ನು‌ ಕುರಿತಂತೆ ಹಿರಿಯ ವಿದ್ವಾಂಸರಾದ ಶ್ರೀಮತಿ ಜಯಾ ರಾಜಶೇಖರ್ ಅವರು:

“ಶಿವತತ್ವವನ್ನು ಗುಪ್ತವಾಗಿರಿಸಿಕೊಂಡ ನೆಲೆ ಅಂಗ. ಅಂಗವನ್ನು ಆಶ್ರಯಿಸಿ ಆತ್ಮವು ಸಾಧನ ಮಾರ್ಗದಲ್ಲಿ ಸಾಗಬೇಕು. ಅಂಗವೇ ಲಿಂಗವನ್ನು ಗರ್ಭದಲ್ಲಿ ಅಡಗಿಸಿಕೊಂಡಿರುವ ತಾಯಿ. ಅಂಗದ ಆಧಾರದಿಂದಲೇ ಶಿವತತ್ವದ ಬೆಳಗಿನ ದರ್ಶನ”

ಶರಣನ ದೇಹವೇ ಲಿಂಗಕ್ಕೆ ಆಧಾರ ಎಂಬುದು ಅಲ್ಲಮಪ್ರಭುಗಳ ವಿಚಾರ.

ಮೂರೇ ಸಾಲಿನ ಈ ವಚನ‌ ಅಲ್ಲಮಪ್ರಭುದೇವರ ಅದ್ಭುತ ಕಾವ್ಯ ಶಕ್ತಿಗೆ ನಿದರ್ಶನ. ಮುಖ್ಯವಾಗಿ ವಚನ ಹೇಳಬಯಸುವದು ಶರಣ‌ ಮತ್ತು ಗುಹೇಶ್ವರನ ಸಂಬಂಧವನ್ನು ಅಥವಾ ಲಿಂಗ ಮತ್ತು ಅಂಗದ ಸಂಬಂಧವನ್ನು. ಅಂಗವೇ ಲಿಂಗಕ್ಕೆ ಆಶ್ರಯ ತಾಣ. ಹಾಗಾದರೆ ದೇಹದಲ್ಲಿ ವಿಶ್ವ ವ್ಯಾಪಕನಾದ ಲಿಂಗಯ್ಯ ಬಂದು ಹೇಗೆ ಅಡಗಿಕೊಂಡಿದ್ದಾನೆ. ಇದು ವಿಸ್ಮಯಕಾರಿಯಲ್ಲವೇ ಎಂಬ ಪ್ರಶ್ನೆಯೂ ಅಡಗಿದೆ. ವಿಶ್ವತೋ ಬಾಹು ವಿಶ್ವತೋಚಕ್ಷುವಾದ ಈ‌ ಪರಮ‌ ಹೇಗೆ ಅಂಗದಲ್ಲಿ ಅಡಗಲು ಸಾಧ್ಯ? ಶರಣರ ದೇಹದಲ್ಲಿವರುವ ಲಿಂಗ ಯಾವ ರೂಪದಲ್ಲಿ ಎನ್ನುವದರ ಚಿಂತನೆ ಈ ವಚನದ ವಸ್ತು. ಇಲ್ಲಿ ಶರಣ ಎತ್ತಿಕೊಂಡಿರುವ ಉದಾಹರಣೆಗಳಲ್ಲಿ ಒಂದು ವ್ಯಕ್ತರೂಪವೂ ಇನ್ನೊಂದು‌ ಅಮೂರ್ತದಲ್ಲಿ ಇರುವವೂ ಆಗಿದೆ. ಕಲ್ಲೊಳಗೆ ಬೆಂಕಿಯಿದೆ ಆದರೆ ಕಾಣಿಸದು. ಉದಕದೊಳಗೆ ಪ್ರತಿಬಿಂಬವಿದೆ ಆದರೆ ಅದು ಅದರದಲ್ಲ, ಬೀಜದೊಳಗೆ ವೃಕ್ಷವಿದೆ ಗೊತ್ತಾಗದು. ಹೀಗೆ ಅಂಗದಲ್ಲಿ ಇರುವ ಲಿಂಗದ ಇರುವಿಕೆಯೂ ಮಾತಿನಲ್ಲಿ ವರ್ಣಿಸಲಾಗದ್ದು.

ಇನ್ನೂ ಒಂದು ಸೋಜಿಗದ ಮಾತೆಂದರೆ ಕಲ್ಲೊಳಗೆ ಬೆಂಕಿಯುದ್ದರೂ ಅದು ಸುಡದು. ನೀರೊಳಗಣ ಪ್ರತಿಬಿಂಬ ತೊಯ್ಯದು. ಬೀಜದೊಳಗಣ ವೃಕ್ಷ ಬೀಜವೊಡೆದು ಹೊರಬರದು. ಇದು ಅಂಗ ಮತ್ತು ಲಿಂಗಕ್ಕೂ ಅನ್ವಯವಾಗುವಂಥದು. ಹೀಗೆ ಅನುಪಮ ಚರಿತ ಶರಣರಾದ‌ ಅಲ್ಲಮಪ್ರಭುಗಳು ಲಿಂಗದ ಇರುವಿಕೆಯನ್ನು ಇನ್ನೂ ಒಂದು ವಚನದಲ್ಲಿ

ಕಲ್ಲೊಣಗಣ ಕಿಚ್ಚು ಉರಿಯಬಲ್ಲುದೆ,
ಬೀಜದೊಳಗಣ ವೃಕ್ಷ ಉಲಿಯಬಲ್ಲುದೆ?
ತೋರಲಿಲ್ಲಾಗಿ ಬೀರಲಿಲ್ಲಾರಿಗೆಯು,
ಗುಹೇಶ್ವರ ನಿಂದ ನಿಲವನನುಭವಸುಖಿ ಬಲ್ಲ.
(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-7 / ವಚನ ಸಂಖ್ಯೆ-2)

ಎನ್ನುತ್ತಾರೆ. ಈ ವಚನವೂ ಮೇಲಿನ ವಚನಕ್ಕೆ ಪೂರಕವಾಗಿಯೆ ಅಂಗವನ್ನಾಶ್ರಯಿಸಿ ಇರುವ ಲಿಂಗದ ಇರುವಿಕೆಯನ್ನು ಹೇಳುತ್ತದೆ. ಅನಿರ್ಭಾವ ಸಂಪನ್ನ ವಚನಗಳು ಅಲ್ಲಮಪ್ರಭುದೇವರ ಘನವ್ಯಕ್ತಿತ್ವಕ್ಕೆ ಸಾಕ್ಷ್ಯವಾಗಿವೆ.

ಡಾ. ಯಲ್ಲಪ್ಪ ಯಾಕೊಳ್ಳಿ.
ಪ್ರಾಚಾರ್ಯರು,
ಸರ್ಕಾರಿ ಪದವಿ ಪೂರ್ವ ಕಾಲೇಜು,
ಯಕ್ಕುಂಡಿ, ಬೆಳಗಾವಿ ಜಿಲ್ಲೆ.
ಮೋಬೈಲ್‌ ಸಂ. 97319 70857

ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in

Loading

Leave a Reply