ಶ್ರೀಮನ್ಮಹಾದಾಸೋಹಿ ಪರಮ ಪೂಜ್ಯ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು | ಡಾ. ಡಿ. ಎನ್. ಯೋಗೀಶ್ವರಪ್ಪ | ತುಮಕೂರು.

ಜನಮಾನಸದಲ್ಲಿ ನಡೆದಾಡುವ ದೇವರೆಂದೇ ಭಾವಿಸಲ್ಪಟ್ಟ ಪದ್ಮಭೂಷಣ ಕರ್ನಾಟಕ ರತ್ನ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಲಿಂಗೈಕ್ಯರಾಗಿ ಇಂದಿಗೆ ಆರು ವರ್ಷಗಳು ಕಳೆದಿದೆ. ಕರ್ನಾಟಕ ಸರ್ಕಾರ ಸ್ವಾಮೀಜಿಯವರು ಸಮಾಜದ ಉನ್ನತಿಗಾಗಿ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗೌರವಿಸಿ ಜನವರಿ 21 ನ್ನು ದಾಸೋಹ ದಿನವೆಂದು ಘೋಷಿಸಿ ರಾಜ್ಯಾದ್ಯಂತ ಆಚರಿಸಲಾಗುತ್ತಿದೆ.

ದಾಸೋಹ ಎಂಬುದು ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರಿಂದ ರೂಪುಗೊಂಡ ವಿಶಿಷ್ಟವಾದ ಪರಿಕಲ್ಪನೆ. ಇದು ದಾನಕ್ಕೆ ಪರ್ಯಾಯವಾಗಿ ಹುಟ್ಟಿಕೊಂಡ ವ್ಯವಸ್ಥೆಯಾಗಿದೆ. ಅಂದು ವ್ಯಕ್ತಿಯೊಬ್ಬ ತನ್ನ ಜೀವನದಲ್ಲಿ ತಾನು ಗಳಿಸಿದ್ದರಲ್ಲಿ ಒಂದು ಪಾಲನ್ನು ದೇವರಿಗಾಗಲೀ ಅಥವಾ ಪುರೋಹಿತ ವರ್ಗಕ್ಕಾಗಲೀ ದಾನ ನೀಡಿದಾಗ ಮಾತ್ರ ಆತನಿಗೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆಯನ್ನು ಅಂದಿನ ಧರ್ಮ ಪ್ರತಿಪಾದಿಸಿತ್ತು. ಈ ರೀತಿ ಜನರು ಗಳಿಸಿದ ಸಂಪತ್ತನ್ನು ದಾನದ ಮೂಲಕ ಅಂದಿನ ಪ್ರಭುತ್ವ ಮತ್ತು ಪುರೋಹಿತ ವರ್ಗಗಳು ಭೋಗಿಸುತ್ತಿದ್ದವು. ಇದನ್ನು ಗಮನಿಸಿದ ಬಸವಾದಿ ಶರಣರು ಜನರು ಗಳಿಸಿದ ಸಂಪತ್ತು ಜನರಿಗೆ ವಿನಿಯೋಗವಾಗಬೇಕು ಎಂಬ ಉದ್ದೇಶದಿಂದ ದಾನಕ್ಕೆ ಪರ್ಯಾಯವಾಗಿ ದಾಸೋಹ ಸಿದ್ಧಾಂತವನ್ನು ರೂಪಿಸಿದರು. ದಾಸೋಹ ಎಂದರೆ “ಸತ್ಯ ಶುದ್ಧ ಕಾಯಕದಿಂದ ಗಳಿಸಿದ ಸಂಪತ್ತನ್ನು ತನಗೆ ಅಗತ್ಯವಿರುವಷ್ಟು ಇಟ್ಟುಕೊಂಡು ಉಳಿದಿದ್ದನ್ನು ಸಮಾಜಕ್ಕೆ ಅರ್ಪಿಸುವುದು” ಈ ಕ್ರಿಯೆಯಲ್ಲಿ ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೂ ಕೂಡಾ ಗೊತ್ತಾಗಬಾರದು. ಅಂದರೆ ದೇವರು ಕೊಟ್ಟಿದ್ದು ದಾನ ಅದನ್ನು ಪರಸ್ಪರ ವಿನಿಯೋಗಿಸುವುದು ದಾಸೋಹ ಇಂಥಹ ಪರಿಕಲ್ಪನೆಯನ್ನು ಸೃಷ್ಟಿಸಿದ ಬಸವಣ್ಣ “ಸೋಹಂ ಎನಿಸದೆ ದಾಸೋಹಂ ಎಂದೆನಿಸಯ್ಯ” ಎಂದು ನುಡಿದರೆ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಸಿದ್ಧರಾಮೇಶ್ವರರು ತಮ್ಮ ವಚನದಲ್ಲಿ ದಾಸೋಹದ ಪರಿಕಲ್ಪನೆಗೆ ವ್ಯಾಖ್ಯಾನವನ್ನು ನೀಡುತ್ತಾರೆ.

“ಸೋಹಂ” ಎಂಬುದದು ಅಂತರಂಗದ ಮದ ನೋಡಯ್ಯಾ.
“ಶಿವೋಹಂ” ಎಂಬುದದು ಬಹಿರಂಗದ ಮದ ನೋಡಯ್ಯಾ.
ಈ ದ್ವಂದ್ವವನಳಿದು “ದಾಸೋಹಂ” ಎಂದೆನಿಸಯ್ಯಾ
ಕಪಿಲಸಿದ್ಧಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-458/ವಚನ ಸಂಖ್ಯೆ-1463)

ದಾಸೋಹಿಯಾದವನು ತಾನೊಬ್ಬ ಸಮಾಜದ ಸೇವಕನೆಂದು ಭಾವಿಸಬೇಕು. ಸಂಗ್ರಹ ಬುದ್ಧಿ ಮತ್ತು ಅಹಂಕಾರವನ್ನು ಸಂಪೂರ್ಣವಾಗಿ ತ್ಯಾಗ ಮಾಡಿ ತಾನೊಬ್ಬ ಸೇವಕನೆಂಬ ವಿನೀತ ಭಾವದಿಂದ ಸಮಾಜಕ್ಕೆ ಅರ್ಪಿಸಬೇಕು. ಈ ಮೂಲಕ ವ್ಯಕ್ತಿಯ ಆತ್ಮೋನ್ನತಿಯ ಜೊತೆಗೆ ಸಾಮಾಜಿಕ ಅಭಿವೃದ್ಧಿಯೂ ಆಗುತ್ತದೆ ಎಂಬುದು ಬಸವಾದಿ ಶರಣರ ಸಂದೇಶವಾಗಿತ್ತು. ಈ ಸಂದೇಶವನ್ನು ತಮ್ಮ ಬದುಕಿನುದ್ದಕ್ಕೂ ಅಳವಡಿಸಿಕೊಂಡು ತಾವು ನೆಲೆನಿಂತ ಶ್ರೀ ಸಿದ್ಧಗಂಗಾ ಮಠವನ್ನು ದಾಸೋಹದ ಪ್ರಯೋಗಶಾಲೆಯನ್ನಾಗಿ ಪರಿವರ್ತಿಸಿ ಅದಕ್ಕೆ ಮತ್ತಷ್ಟು ವಿಸ್ತೃತ ಅರ್ಥ ನೀಡಿದವರು ಪರಮ ಪೂಜ್ಯ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳು. ಇವರು ದಾಸೋಹ ತತ್ವವನ್ನು ಮೂರು ಭಾಗವಾಗಿ ಪ್ರತ್ಯೇಕಿಸಿ ಅದನ್ನು ಜಾರಿಗೊಳಿಸಿದರು. ಸಾಮಾನ್ಯವಾಗಿ ಕರ್ನಾಟಕದಲ್ಲಿರುವ ಮಠ ಮಾನ್ಯಗಳಲ್ಲಿ ನಿರ್ದಿಷ್ಟ ಸಮಯದಲ್ಲಿ ಪ್ರಸಾದ ನೀಡುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಶ್ರೀ ಸಿದ್ಧಗಂಗಾ ಮಠದಲ್ಲಿ ದಿನದ 24 ಗಂಟೆಯೂ ಹಸಿದು ಬಂದವರಿಗೆ ಅನ್ನ ದಾಸೋಹ ನೀಡುತ್ತಿರುವುದಲ್ಲದೆ, ಅಕ್ಷರ ದಾಸೋಹವನ್ನು ಕೊಡುತ್ತಿದೆ. ಅಲ್ಲದೆ ಆಶ್ರಯವನ್ನು ಕಲ್ಪಿಸಿದೆ. ಹೀಗೆ ಪರಮ ಪೂಜ್ಯ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಹನ್ನೆರಡನೇ ಶತಮಾನದ ಬಸವಾದಿ ಶರಣರ ದಾಸೋಹ ಪರಿಕಲ್ಪನೆಗೆ ತಮ್ಮ ಮಠದಲ್ಲಿ ಅನ್ನ-ಅಕ್ಷರ-ಆಶ್ರಯಗಳ ಮೂಲಕ ವಿಸ್ತಾರವಾದ ಅರ್ಥ ನೀಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಇಪ್ಪತ್ತನೇ ಶತಮಾನದಲ್ಲಿ ಅಕ್ಷರದಿಂದ ವಂಚಿತರಾಗಿದ್ದ ಸರ್ವ ಜನಾಂಗದ ಮಕ್ಕಳಿಗೆ ತಮ್ಮ ಮಠದಲ್ಲೇ ವಸತಿ ಕಲ್ಪಿಸುವುದರ ಜೊತೆಗೆ ಅವರಿಗೆ ಅಲ್ಲಿಯೇ ಶಾಲಾ ಶಿಕ್ಷಣವನ್ನು ನೀಡಲು ಆರಂಭಿಸಿದ ಸ್ವಾಮೀಜಿಯವರು ವಸತಿಯುಕ್ತ ಶಾಲೆಗಳ ಆರಂಭಕ್ಕೆ ನಾಂದಿ ಹಾಡಿ ಸಮಾಜದಲ್ಲಿ ಮೊಟ್ಟಮೊದಲ ಬಾರಿಗೆ ವಸತಿ ಶಾಲೆಗಳ ಪಿತಾಮಹಾರೆನಿಸಿಕೊಂಡಿದ್ದಾರೆ. ತಾವು ಆರಂಭಿಸಿದ ಶಾಲೆಯಲ್ಲಿ ಉಚಿತವಾಗಿ ವಸತಿ, ಅಕ್ಷರ ಜ್ಞಾನ ಮತ್ತು ಅನ್ನವನ್ನು ನೀಡಲಾಗುತ್ತಿತ್ತು. ಪ್ರತಿವರ್ಷ ಹತ್ತು ಸಾವಿರ ವಿದ್ಯಾರ್ಥಿಗಳು ಇದರ ಲಾಭವನ್ನು ಪಡೆದು ಅಕ್ಷರವಂತರಾಗಿ ಪ್ರಪಂಚದ ಎಲ್ಲೆಡೆ ನೆಲೆನಿಂತಿದ್ದಾರೆ. ಇದು ಪೂಜ್ಯ ಶ್ರೀಗಳ ಬಹುದೊಡ್ಡ ಸಾಮಾಜಿಕ ಕೊಡುಗೆಯಾಗಿದೆ. ಇಂತಹ ತ್ರಿವಿಧ ದಾಸೋಹದ ಮೂಲಕ ಶತಾಯುಷಿಗಳಾಗಿ ಸಾಮಾಜಿಕ ಅಭಿವೃದ್ದಿಗೆ ಕಾರಣರಾಗಿ 21.01.2019 ರಂದು ಶ್ರೀ ಸಿದ್ಧಗಂಗಾ ಮಠದಲ್ಲಿ ಲಿಂಗೈಕ್ಯರಾದರು. ಅವರ ಲಿಂಗದೇಹವನ್ನು ಶ್ರೀ ಸಿದ್ಧಗಂಗಾ ಮಠದಲ್ಲಿ ಕ್ರಿಯಾಸಮಾಧಿ ಮಾಡಿ ಗದ್ದುಗೆ ದೇವಾಲಯ ನಿರ್ಮಾಣ ಮಾಡಲಾಗಿದೆ. ಪ್ರತಿನಿತ್ಯ ಸಾವಿರಾರು ಭಕ್ತರು ಆ ಗದ್ದುಗೆಯಲ್ಲಿ ಪೂಜ್ಯರ ಆಶೀರ್ವಾದ ಪಡೆಯುತ್ತಿದ್ದಾರೆ. ಇಂತಹ ಪೂಜ್ಯರ ಸ್ಮರಣಾರ್ಥವಾಗಿ ಈ ಶಾಸನ ರಚನೆಯನ್ನು ಮಾಡಿದ್ದೇನೆ.

“ಶಾಸನ ಪಾಠ”
|| ಓಂ ನಮಃ ಶಿವಾಯ ||
||ಓಂ ಶ್ರೀ ಗುರು ಬಸವಲಿಂಗಾಯನಮಃ|| ಓಂ ಶ್ರೀ ಗುರು ಸಿದ್ಧಲಿಂಗಾಯ ನಮಃ||

|| ನಮಸ್ತುಂಗ ಶಿರಶ್ಚುಂಬಿ ಚಂದ್ರ ಚಾಮರ ಚಾರವೆ | ತ್ರೆೈಲೋಕ್ಯನಗರಾರಂಭ ಮೂಲ ಸ್ತಂಭಾಯ ಶಂಭವೇ || ಜ್ಞಾನಶಕ್ತಿ ಸ್ವರೂಪ ಸರ್ವಾಂಗಲಿಂಗಿ ಷಟ ಸ್ಥಲಜ್ಞಾನಿ ಸರ್ವಾಚಾರ ಸಂಪನ್ನರಪ್ಪ ಪಾದೋದಕ ಪ್ರಸಾದ ಪ್ರತಿಷ್ಠಾಪನಾಚಾರ್ಯರುಮಪ್ಪ ದಿವ್ಯಶಿವಯೋಗಿ ಶ್ರೀ ಶಿವಕುಮಾರೇಶ್ವರರ ಮಹಿಮೆಯೆಂತೆಂದಡೆ || ವದನಂ ವಾಣಿ ನರ್ತನ ಸದನಂ | ನಿಜಹೃದಯ ಅಮಳ ಮಣಿಮಯ ಸದನಂ ಮದನಹರಂಗೆ ಎನೆ ಭೂತಳ ವಿದಿತ ಯಶಂ ಶ್ರೀ ಶಿವಕುಮಾರಯತೀಶಂ| ಭೂಲೋಕದ ಕೈಲಾಸವೆಂಬ ನಾಮವುಳ್ಳ ಶ್ರೀ ಸಿದ್ಧಗಂಗೆಯ ಮಠಾಧ್ಯಕ್ಷರಾದ ಶ್ರೀಮನ್ನಿರಂಜನ ಪ್ರಣವ ಸ್ವರೂಪಿ ಉದ್ದಾನೇಶ್ವರಯತಿವರ್ಯರ ಕರಕಮಲ ಸಂಜಾತ ಶ್ರೀ ಶಿವಕುಮಾರೇಶ್ವರರ ಕೀರ್ತಿಯೆಂತೆಂದಡೆ || ಕ್ರಿ. ಶ. 1908 ಏಪ್ರಿಲ್ 01 ರಂದು ವೀರಾಪುರದೋಳ್ ಜನಿಸಿ 1930 ಮಾರ್ಚಿ 03 ರಂದು ಶ್ರೀ ಸಿದ್ಧಗಂಗಾ ಮಠದ ಉತ್ತರಾಧಿಕಾರತ್ವವಂ ಪಡೆದು | ಶ್ರೀ ಗುರು ಉದ್ದಾನೇಶ್ವರ ತರುವಾಯ 1941 ರಲ್ಲಿ ಮಠಾಧ್ಯಕ್ಷರಾಗಿ | ಶ್ರೀ ಸಿದ್ಧಗಂಗಾ ಮಠವಂ ತ್ರಿವಿಧ ದಾಸೋಹ ಕೇಂದ್ರವನ್ನಾಗಿಸಿ ಸಹಸ್ರ ಸಹಸ್ರ ವಿದ್ಯಾರ್ಥಿಗಳಿಗೆ ಮಠದಲ್ಲಿಯೇ ಅಕ್ಷರ ಜ್ಞಾನ ಹಾಗು ಅನ್ನ ದಾಸೋಹಂ ನೀಡಿ ಲೋಕ ಕಲ್ಯಾಣವ ಮಾಡಿದರ್ | ಬಸವ ತತ್ವದ ಪ್ರಚಾರವಂ ಗ್ರಾಮ ಗ್ರಾಮಗಳಲ್ಲಿ ನಾಟಕ ಮುಖೇನ ವಿಸ್ತರಿಸಿ ಸಿದ್ಧಗಂಗೆಯಂ ಕಲ್ಯಾಣವಾಗಿಸಿದರ್ | ಶತಾಯುಷಿಯಾಗಿ, ತ್ರಿಕಾಲ ಪೂಜಾ ನಿಷ್ಠರಾಗಿ ಸಿದ್ಧಗಂಗೆಯಂ ದಾಸೋಹದ ನಂದನವನವಾಗಿಸಿದರ್ | ಜನಮಾನಸದಲ್ಲಿ ನಡೆದಾಡುವ ದೇವರಾಗಿದ್ದ ಶ್ರೀ ಶಿವಕುಮಾರಸ್ವಾಮಿಗಳ್ ಕ್ರಿಸ್ತಶಕ 2019 ಜನವರಿ ಮಾಹೆ 21 ಸೋಮವಾರದಂದು ಬೆಳಗ್ಗೆ ಸಮಯ 11:40 ಕ್ಕೆ ಶಿವಸಾಯುಜ್ಯ ಪದವಿಯಂ ಪಡೆದರ್ | ಇವರ್ಗೆ ಶ್ರೀ ಗುರುಕ್ರಿಯಾ ಸಮಾಧಿಯಂ ಲಕ್ಷಾಂತರ ಭಕ್ತ ಗಣಸಮೂಹದಿ ನೂರಾರು ಗುರುಗಳ ಸಮ್ಮುಖದಿ ಕ್ರಿ. ಶ. 2019 ಜನವರಿ ಮಾಹೆ 22 ಗೋಧೂಳಿ ಸಮಯ 5 ಗಂಟೆಯಿಂದ ರಾತ್ರಿ 12 ರವರೆಗೆ ಸಕಲ ಸರ್ಕಾರಿ ಗೌರವಗಳಿಂದ ನೆರವೇರಿತು | ಶ್ರೀ ಸಿದ್ದಗಂಗಾ ಕುಲಾಂಬರದ್ಯುಮಣಿ | ಆಶ್ರಿತಜನ ಕಲ್ಪವೃಕ್ಷ | ವಿಭೂತಿ ಪುರುಷ | ತ್ರಿಕಾಲಪೂಜಾನಿಷ್ಠ | ಸರ್ವಶರಣ ಚೂಡಾಮಣಿ | ಶೀಲಗುಣಸಂಪನ್ನರಪ್ಪ | ಶ್ರೀ ಸಿದ್ಧಲಿಂಗೇಶ್ವರಸ್ವಾಮಿ ಪಾದಾರಾಧಕರುಮಪ್ಪ | ಸಕಲ ವಿದ್ಯಾರ್ಥಿಕುಲ ನಂದಾದೀವಿಗೆಯರಪ್ಪ | ಯತಿಕುಲತಿಲಕ | ಕರ್ನಾಟಕ ರತ್ನ | ಪದ್ಮಭೂಷಣ | ತ್ರಿವಿಧ ದಾಸೋಹಿ ಶ್ರೀ ಶಿವಕುಮಾರಸ್ವಾಮಿಯವರ್ಗೆ || ಶ್ರೀಮತು ಸ್ವಸ್ತಿ ಕ್ರಿಸ್ತಶಕ 2019 ನವೆಂಬರ್ ಮಾಹೆ ಹನ್ನೊಂದನೇ ತಾರೀಕು ಸೋಮವಾರ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಶಿವಕುಮಾರಸ್ವಾಮಿಗಳ ಕರಕಮಲ ಸಂಜಾತ ಶ್ರೀ ಸಿದ್ದಗಂಗಾ ಮಠಾಧ್ಯಕ್ಷ ಶ್ರೀಮನ್ನಿರಂಜನಪ್ರಣವಸ್ವರೂಪಿ ಶ್ರೀ ಶ್ರಿ ಸಿದ್ಧಲಿಂಗಸ್ವಾಮಿಗಳು ಸಮಸ್ತ ಭಕ್ತಗಣ ಸಮ್ಮುಖದಲ್ಲಿ ಪ್ರತಿಷ್ಠಾಪಿಸಿದ ಶ್ರೀ ಶಿವಕುಮಾರೇಶ್ವರ ಲಿಂಗ ||

|| ಇದು ಆಚಂದ್ರಾರ್ಕ ಸ್ಥಾಯಿಯಾಗಿ ಭಕ್ತಗಣಮಂ ಪೊರೆಯುತ್ತಿರ್ಪುದು ||
|| ಶ್ರೀ ಶ್ರೀ ಶಿವಕುಮಾರೇಶ್ವರಾಯ ನಮಃ | ಮಂಗಳ ಮಹಾ ಶ್ರೀ ಶ್ರೀ ||

ಡಾ. ಡಿ. ಎನ್. ಯೋಗೀಶ್ವರಪ್ಪ,
ಇತಿಹಾಸ ಸಂಶೋಧಕರು,
“ಚಿತ್ಕಲಾ” 8 ನೇ ಅಡ್ಡ ರಸ್ತೆ, 4 ನೇ ಮುಖ್ಯ ರಸ್ತೆ,
ಸೋಮೇಶ್ವರಪುರಂ,
ತುಮಕೂರು.
ಮೋಬೈಲ್‌ ನಂ: 94486 80920

 ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in

Loading

Leave a Reply