
ಬಸವಣ್ಣ ಎಂಬ ಹೆಸರೇ ಮಂತ್ರಮುಗ್ಧವಾದದ್ದು. ಬಸವಣ್ಣನವರು 12 ನೇ ಶತಮಾನದ ಉತ್ಸಾಹದ ಚಿಲುಮೆ ಎಂತೊ 21 ನೇ ಶತಮಾನದಲ್ಲಿ ಅವರ ಹೆಸರೇ ಚೇತೋಹಾರಿಯಾದದ್ದು. ಯುಗದ ಉತ್ಸಾಹ, ಯುಗ ಪುರುಷ, ವಿಭೂತಿ ಪುರುಷ, ವಿಶ್ವಗುರು, ಜಗಜ್ಯೋತಿ ಎಂಬ ಮಾತುಗಳು ಬಸವಣ್ಣನವರಿಗೆ ಅಲಂಕಾರಿಕವಾಗಿ ತೊಡಿಸುವ ಪದಗಳಲ್ಲ. ಅವುಗಳು ಅತಿಶಯೋಕ್ತಿ ಪದಗಳೂ ಅಲ್ಲ. 12 ನೇ ಶತಮಾನದಲ್ಲಿ ಅವರ ಪ್ರಭಾವಕ್ಕೊಳಗಾಗಿ ಶಿವ-ಶರಣರು ತಮ್ಮ ವಚನಗಳಲ್ಲಿ ಬಸವಣ್ಣನವರನ್ನು ಸ್ಮರಿಸಿಕೊಂಡದ್ದನ್ನು ನಾವು ನೋಡಿದರೆ ಒಂದು ಕಾಲಘಟ್ಟದಲ್ಲಿ ಒಬ್ಬ ವ್ಯಕ್ತಿ ಎಷ್ಟು ಪ್ರಭಾವಶಾಲಿಯಾಗಿದ್ದರು ಎಂಬುದು ತಿಳಿಯುತ್ತದೆ.
ಸುಖವೊಂದು ಕೊಟ್ಯಾನುಕೋಟಿ ಬಂದಲ್ಲಿ ಬಸವಣ್ಣನ ನೆನೆವೆ.
ದುಃಖವೊಂದು ಕೊಟ್ಯಾನುಕೋಟಿ ಬಂದಲ್ಲಿ ಬಸವಣ್ಣನ ನೆನೆವೆ.
ಲಿಂಗಾರ್ಚನೆಯ ಮಾಡುವಲ್ಲಿ ಬಸವಣ್ಣನ ನೆನೆವೆ.
ಜಂಗಮಾರ್ಚನೆಯ ಮಾಡುವಲ್ಲಿ ಬಸವಣ್ಣನ ನೆನೆವೆ.
ಬಸವಣ್ಣನ ನೆನೆದಲ್ಲದೆ ಭಕ್ತಿಯಿಲ್ಲ;
ಬಸವಣ್ಣನ ನೆನೆದಲ್ಲದೆ ಮುಕ್ತಿಯಿಲ್ಲ;
ಇದು ಕಾರಣ ಬಸವಣ್ಣ ಬಸವಣ್ಣ
ಎನುತಿರ್ದೆನು ಕಾಣಾ, ಕಲಿದೇವಯ್ಯ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-310/ವಚನ ಸಂಖ್ಯೆ-760)
ಆದಿ ಬಸವಣ್ಣ, ಅನಾದಿ ಲಿಂಗವೆಂಬರು,
ಹುಸಿ ಹುಸಿ ಈ ನುಡಿಯ ಕೇಳಲಾಗದು.
ಆದಿ ಲಿಂಗ, ಅನಾದಿ ಬಸವಣ್ಣನು!
ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು,
ಜಂಗಮವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು,
ಪ್ರಸಾದವು ಬಸವಣ್ಣನನುಕರಿಸಲಾಯಿತ್ತು.
ಇಂತಿ ತ್ರಿವಿಧಕ್ಕೆ ಬಸವಣ್ಣನೇ ಕಾರಣನೆಂದರಿದೆನಯ್ಯಾ
ಕೂಡಲಚನ್ನಸಂಗಮದೇವಾ.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-6/ವಚನ ಸಂಖ್ಯೆ-5)
ದೇವಲೋಕದವರಿಗೂ ಬಸವಣ್ಣನೆ ದೇವರು.
ಮರ್ತ್ಯಲೋಕದವರಿಗೂ ಬಸವಣ್ಣನೆ ದೇವರು.
ನಾಗಲೋಕದವರಿಗೂ ಬಸವಣ್ಣನೆ ದೇವರು
ಮೇರುಗಿರಿ ಮಂದರಗಿರಿ ಮೊದಲಾದವಕ್ಕೂ
ಬಸವಣ್ಣನೆ ದೇವರು.
ಚನ್ನಮಲ್ಲಿಕಾರ್ಜುನಯ್ಯಾ ನಿಮಗೂ ಎನಗೂ
ನಿಮ್ಮ ಶರಣರಿಗೂ ಬಸವಣ್ಣನೇ ದೇವರು.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-83/ವಚನ ಸಂಖ್ಯೆ-234)
ಬಸವಣ್ಣನೇ ತಾಯಿ, ಬಸವಣ್ಣನೇ ತಂದೆ
ಬಸವಣ್ಣನೇ ಪರಮ ಬಂಧುವೆನಗೆ,
ವಸುಧೀಶ ಕಪಿಲಸಿದ್ಧ ಮಲ್ಲಿಕಾರ್ಜುನಾ,
ನಿಮ್ಮ ಹೆಸರಿಟ್ಟ ಗುರು ಬಸವಣ್ಣನಯ್ಯಾ.
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-244/ವಚನ ಸಂಖ್ಯೆ-798)
“ಬ” ಎಂಬಲ್ಲಿ ಎನ್ನ ಭವ ಹರಿದಿತ್ತು.
“ಸ” ಎಂಬಲ್ಲಿ ಆನು ಸರ್ವಜ್ಞನಾದೆನು.
“ವ” ಎಂಬಲದಲಿ ವಚಿಸುವಡೆ ವಸ್ತು ಚೈತನ್ಯಾತ್ಮಕನಾದೆನು.
ಇಂತಿ ಬಸವಾಕ್ಞರತ್ರಯವೆನ್ನ ಸರ್ವಾಂಗದಲ್ಲಿ
ತೊಳಗಿ ಬೆಳಗುವ ಭೇದವನರಿದು
ಆನೂ ನೀನೂ “ಬಸವಾ“ “ಬಸವಾ“ “ಬಸವಾ“
ಎನುತಿರ್ದೆವಯ್ಯಾ ಗುಹೇಶ್ವರಾ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-513/ವಚನ ಸಂಖ್ಯೆ-1356)
ಬಸವಣ್ಣನವರ ಗಾಢ ಪ್ರಭಾವಲಯಕ್ಕೆ ಒಳಗಾದವರಲ್ಲಿ ಶ್ರೀ ಮಲ್ಲಿಕಾರ್ಜುನ ಪಂಡಿತಾರಾಧ್ಯರೂ ಒಬ್ಬರು. ಶೈವಾಚಾರ್ಯರೊಬ್ಬರು ಬಸವಣ್ಣನವರ ವ್ಯಕ್ತಿತ್ವಕ್ಕೆ, ಅವರ ತತ್ವ ಸಿದ್ಧಾಂತಗಳಿಗೆ ಮಾರುಹೋಗುವುದೆಂದರೆ ಸಾಮಾನ್ಯವಾದ ವಿಚಾರವೇ ಅಲ್ಲ. ಬಸವಣ್ಣನವರೆಂದರೆ ಒಂದು ಚುಂಬಕ ಶಕ್ತಿ. ಉತ್ತರ ಧೃವದಿಂದ ದಕ್ಷಿಣ ಧೃವದವರೆಗೂ ಅವರ ಆ ಚುಂಬಕ ಶಕ್ತಿಯ ಗಾಳಿ ಬೀಸಿ ಅಸಂಖ್ಯಾತ ಶರಣರನ್ನು ಸೆಳೆದದ್ದು ಶರಣ ಸಾಹಿತ್ಯ ಓದಿದವರಿಗೆಲ್ಲ ಗೊತ್ತಿರುವ ವಿಷಯ. ಹೊರ ರಾಜ್ಯದಿಂದ ಸಾಕಷ್ಟು ಶರಣರು ಬಸವಣ್ಣನವರು ಕಟ್ಟಿದ ಅನುಭವ ಮಂಟಪದಲ್ಲಿ ನೆಲೆ ನಿಂತು ತಮ್ಮ ಅನುಭಾವದ ಸಾಹಿತ್ಯದ ಅಡುಗೆಯನ್ನು ಸಿದ್ಧಪಡಿಸಿಕೊಂಡರು. ಮೊಟ್ಟ ಮೊದಲಿಗೆ ಯಾವ ರಾಜಾಶ್ರಯವಿಲ್ಲದೆ ಮುಕ್ತವಾದ, ಸ್ವತಂತ್ರವಾದ ಸಾಹಿತ್ಯ ರಚನೆ ಮತ್ತು ತತ್ವ ಸಿದ್ಧಾಂತಗಳನ್ನು ಮಂಡಿಸಿ ಚರ್ಚೆಗೆ ಅನುಭವ ಮಂಟಪ ಸಾಕ್ಷಿಯಾಗಿತ್ತು.
ಹೊರ ರಾಜ್ಯದಿಂದ ಬಂದ ಶರಣರಲ್ಲಿ ಕಾಶ್ಮೀರದಿಂದ ಮಹಾದೇವ ಭೋಪಾಲ ದಂಪತಿ ಹಾಗೂ ಬೊಂತಾದೇವಿಯವರು, ಆಂಧ್ರಪ್ರದೇಶದಿಂದ ಕಿನ್ನರಿ ಬ್ರಹ್ಮಯ್ಯನವರು, ಅಫಘಾನಿಸ್ತಾನದಿಂದ ಮರುಳಶಂಕರದೇವರು, ತಮಿಳುನಾಡಿನಿಂದ ಮಾದಾರ ಚನ್ನಯ್ಯನವರು ಹಾಗೂ ಕೊಟ್ಟಣದ ಸೋಮವ್ವೆಯವರು, ಕೇರಳದಿಂದ ಗೊಗ್ಗವ್ವೆಯವರು, ಗುಜರಾತಿನಿಂದ ಆದಯ್ಯನವರು, ಮಹಾರಾಷ್ಟ್ರದಿಂದ ಪರವಳಿಗೆ (ಪರಳಿ) ವೈಜವ್ವೆಯವರು, ಮಹಾರಾಷ್ಟ್ರದಿಂದ ಸಿದ್ಧರಾಮೇಶ್ವರರು ಹಾಗೂ ಗುಡ್ಡವ್ವೆಯವರು ಮುಂತಾದವರು ಪ್ರಮುಖರಾಗಿದ್ದಾರೆ. ಇವರೆಲ್ಲರೂ ಬಸವಣ್ಣನವರು ಕಟ್ಟಿದ “ಆತ್ಮ” ಕಲ್ಯಾಣಕ್ಕೆ ಆಗಮಿಸಿದ್ದುದು ಸಾಮಾನ್ಯ ಸಂಗತಿಯೇನಲ್ಲ. ಕಾಯಕ, ದಾಸೋಹ, ಭಕ್ತಿ, ಏಕದೇವೋಪಾಸನೆ (ಇಷ್ಟಲಿಂಗಪೂಜೆ), ಸಮತೆ, ಮಮತೆ, ಮಾತೃತ್ವ, ಭ್ರಾತೃತ್ವ, ಮಾನವೀಯತೆಯೆಂಬ ಹೃದಯ ರಸವನ್ನೇ ಬಸಿದು ಕಟ್ಟಿದ ಬಸವಣ್ಣನವರ ಕಲ್ಯಾಣವನ್ನು ಪ್ರವೇಶಿಸುದೂ ಸಹ ಅಷ್ಟೊಂದು ಸುಲಭವಾಗಿರಲಿಲ್ಲ. ಬಸವ ಕಲ್ಯಾಣವನ್ನು ಪ್ರವೇಶ ಮಾಡುವವರಿಗೆ ಅರ್ಹತೆಗಳು ಇರಬೇಕಿತ್ತು. ವೈರಾಗ್ಯನಿಧಿ ಅಕ್ಕ ಮಹಾದೇವಿಯವರು ತಮ್ಮದೊಂದು ವಚನದಲ್ಲಿ ಸ್ಪಷ್ಟವಾಗಿ ಅದನ್ನು ಅಭಿವ್ಯಕ್ತಿಗೊಳಿಸಿದ್ದಾರೆ.
ಕಲ್ಯಾಣವೆಂಬುದಿನ್ನಾರಿಗೆ ಹೊಗಬಹುದು?
ಹೊಗಬಾರದು, ಅಸಾಧ್ಯವಯ್ಯಾ.
ಆಸೆ ಆಮಿಷ ಅಳಿದಂಗಲ್ಲದೆ
ಕಲ್ಯಾಣದತ್ತಲಡಿಯಿಡಬಾರದು.
ಒಳಹೊರಗು ಶುದ್ಧನಾದಂಗಲ್ಲದೆ
ಕಲ್ಯಾಣವ ಹೊಗಬಾರದು.
ನೀನಾನೆಂಬುದ ಹರಿದಂಗಲ್ಲದೆ
ಕಲ್ಯಾಣದ ಒಳಗು ತಿಳಿಯಬಾರದು.
ಚನ್ನಮಲ್ಲಿಕಾರ್ಜುನಂಗೊಲಿದು
ಉಭಯ ಲಜ್ಜೆ ಅಳಿದೆನಾಗಿ
ಕಲ್ಯಾಣವಂ ಕಂಡು ನಮೋ ನಮೋ ಎನುತಿದ್ದೆನು.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-54/ವಚನ ಸಂಖ್ಯೆ-147)
ಯಾರಿಗೆ ಆಸೆ, ಆಮಿಷ, ರೋಷ, ಮದ, ಮತ್ಸರ, ಮೋಹ ಮುಂತಾದ ಅರಿಷಡ್ವರ್ಗಗಳನ್ನು, ನಾನು-ನೀನು ಎಂಬ ಉಭಯ ಭಾವ ತ್ಯಜಿಸಲು ಸಾಧ್ಯವಿದೆಯೋ ಅಂಥವರಿಗೆ ಮಾತ್ರ ಕಲ್ಯಾಣದಲ್ಲಿ ಪ್ರವೇಶವಿತ್ತು. ಇಂತಹ ಆತ್ಮ ಕಲ್ಯಾಣ ಮತ್ತು ಅದರೊಳಗಿನ ಅನುಭವ ಮಂಟಪದ ಶರಣರ ಸಂಘಟನೆಯಲ್ಲಿ ನಡೆದ ತಾತ್ವಿಕ ಚರ್ಚೆಗಳಿಂದ ಪ್ರಭಾವಿತರಾದವರು ಮಲ್ಲಿಕಾರ್ಜುನ ಪಂಡಿತಾರಾಧ್ಯರು. 770 ಅಮರ ಗಣಂಗಳು, ಲಕ್ಷದ ತೊಂಭತ್ತಾರು ಸಾವಿರ ಶರಣ ಬಳಗ ಹೊಂದಿದ ಕಲ್ಯಾಣವು ಸಾಮಾನ್ಯವಾದುದಲ್ಲ. ಆ ಸಂಘಟನೆಯ ಮಹಾಶಕ್ತಿ ಬಸವಣ್ಣನವರು ಅಸಾಮಾನ್ಯರು ಎಂಬುದು ಮಲ್ಲಿಕಾರ್ಜುನ ಪಂಡಿತಾರಾಧ್ಯರಿಗೆ ಖಚಿತವಾಗಿತ್ತು. ಆಂಧ್ರ ಪ್ರದೇಶದಿಂದ ಕರ್ನಾಟಕದೆಡೆಗೆ ಬಸವಣ್ಣನವರನ್ನು ನೋಡಲು ತವಕಿಸಿ ಬಂದವರು ಅವರು. ದುರದೃಷ್ಟವಶಾತ್ ಇವರಿಬ್ಬರೂ ಸಂಧಿಸಲಾಗಲಿಲ್ಲ. ಅಕಸ್ಮಾತ್ ಇವರಿಬ್ಬರೂ ಸಂಧಿಸಿದ್ದರೆ ಶರಣ ಲೋಕದಲ್ಲಿ ಮತ್ತೊಂದು ಸಂಚಲನವೇ ಆಗುತ್ತಿತ್ತೇನೋ? ಘನವು ಘನ ಬೆರೆತಾಗ ಮಹಾಘನವಾಗುವಂತೆ, ಬೆಳಕು ಬೆಳಕನ್ನು ಸಂಧಿಸಿದಾಗ ಮಹಾಬೆಳಕಾಗುವಂತೆ, ಸಾಗರ ಸಾಗರವನ್ನು ಬೆರೆತಾಗ ಮಹಾಸಾಗರವೇ ಆಗುವಂತೆ, ಭಕ್ತಿ ಭಕ್ತಿಯನ್ನು ಬೆಸೆದಾಗ ಸದ್ಭಕ್ತಿ ಹುಟ್ಟುವಂತೆ ಆಗುತ್ತಿತ್ತು. ಅಂತಹ ಅಪರೂಪದ ವ್ಯಕ್ತಿತ್ವ ಬಸವಣ್ಣನವರದ್ದೂ ಮತ್ತು ಮಲ್ಲಿಕಾರ್ಜುನ ಪಂಡಿತಾರಾಧ್ಯರದೂ ಆಗಿತ್ತು. ಸಮಕಾಲೀನರಾದ ಇವರಿಬ್ಬರ ವ್ಯಕ್ತಿತ್ವ ದಿವ್ಯವೂ ಉದಾತ್ತವೂ ಆಗಿತ್ತು.
ಬಸವಣ್ಣನವರ ಸಮಕಾಲೀನರಾಧ ಮಲ್ಲಿಕಾರ್ಜುನ ಪಂಡಿತಾರಾಧ್ಯರ ಕಾಲಾವಧಿ ಸುಮಾರು ಕ್ರಿ. ಶ. 1160 ಎಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಮಲ್ಲಿಕಾರ್ಜುನ ಪಂಡಿತಾರಾಧ್ಯರ ಜೀವನದ ಮೇಲೆ ಬೆಳಕು ಚೆಲ್ಲುವ ಕೃತಿಗಳು ಇಂತಿವೆ:
- ಪಾಲ್ಕುರಿಕೆ ಸೋಮನಾಥ: ಮಲ್ಲಿಕಾರ್ಜುನ ಪಂಡಿತಾರಾಧ್ಯ ಚರಿತೆ (ತೆಲುಗು).
- ಗುರುರಾಜ ಕವಿ: ಪಂಡಿತ ಚಾರಿತ್ರ್ಯಂ (ಸಂಸ್ಕೃತ).
- ನೀಲಕಂಠಾಚಾರ್ಯ: ಆರಾಧ್ಯ ಚಾರಿತ್ರ್ಯ (ಕನ್ನಡ).
- ಸಿದ್ಧನಂಜೇಶ: ಗುರುರಾಜ ಚಾರಿತ್ರ್ಯ (ಕನ್ನಡ).
ಸರಿ ಸುಮಾರು ನಾಲ್ಕು ಪ್ರಮುಖ ಕವಿಗಳು ಮಲ್ಲಿಕಾರ್ಜುನ ಪಂಡಿತಾರಾಧ್ಯರ ಮೇಲೆ ಬೆಳಕನ್ನು ಚೆಲ್ಲಿದ್ದಾರೆ. ಇಂತಹ ದಿಗ್ಗಜ ಕವಿಗಳು ಮಲ್ಲಿಕಾರ್ಜುನ ಪಂಡಿತಾರಾಧ್ಯರನ್ನು ನಾಯಕನನ್ನಾಗಿಸಿಕೊಂಡು ಕೃತಿಗಳನ್ನು ರಚಿಸಿದ್ದಾರೆ ಎಂದರೆ ಮಲ್ಲಿಕಾರ್ಜುನ ಪಂಡಿತಾರಾಧ್ಯರೂ ಕೂಡ ಮಹಾಮಹಿಮರಾದ ಘನ ವ್ಯಕ್ತಿತ್ವ ಹೊಂದಿದ್ದರೆಂದು ತಿಳಿದು ಬರುತ್ತದೆ.
ಕೃತಿಗಳನ್ನಾಧರಿಸಿ ಮಲ್ಲಿಕಾರ್ಜುನ ಪಂಡಿತಾರಾಧ್ಯರ ಜನನ ವೃತ್ತಾಂತವನ್ನು ಅವಲೋಕಿಸುವುದಾದರೆ ಇವರ ಜನನದ ಕಾಲಘಟ್ಟವು ಬಸವಣ್ಣನವರ ಜನನದ ಕಾಲಘಟ್ಟದೊಂದಿಗೆ ತಳುಕು ಹಾಕಿಕೊಂಡಿರುವುದು ಕಂಡು ಬರುತ್ತದೆ.
ಶಿವನು ಶ್ರೀನಂದಿಯನ್ನು “ಬಸವ” ನೆಂದು ಹೆಸರಿಟ್ಟು ಕಳುಹಿಸಲು ನಿಶ್ಚಯಿಸಿ “ಬಸವನೆಂಬ ನಾಮದಿಂದ ಭೂಲೋಕಕ್ಕೆ ನೀನು ಹೋಗಿ ಉತ್ತಮ ಭಕ್ತಿ ಬೆಳೆಸು” ಎಂದು ಆಜ್ಞಾಪಿಸಿದನು. ಅದೇ ಸಮಯದಲ್ಲಿ ಶಿವನು “ನಿರುಪಮ ಪರಮಾನಂದವನ್ನು ನೀಡುವ ತಮ್ಮ ಪಾದಭಕ್ತಿಯನ್ನು ಶ್ರೀ ನಂದೀಶ್ವರನ ಸರ್ವಜ್ಞತೆಯನ್ನು, ಭೃಂಗಿಯ ಸಹಜ ನಿಷ್ಠೆಯನ್ನು, ದೂರ್ವಾಸರು ಮುಂತಾದ ಶಿವಭಕ್ತರ ಧೃಢವಾದ ಶಾಪಶಕ್ತಿಯನ್ನು, ಅಕ್ಷಪಾದ ಮುಂತಾದ ಶಿವಭಕ್ತರ ಅಸಮಾನವಾದ ಮಾತಿನ ಸಾಮರ್ಥ್ಯವನ್ನು, ಸದ್ಗುರುತ್ವವನ್ನು, ಮಹನೀಯರಾದ ರುದ್ರಗಣಂಗಳ ಪ್ರಮಥ ನಾಯಕರ ಸ್ವತಸಿದ್ಧವಾದ ನಿಜ ಪ್ರಸಾದಾಭಿಲಾಷೆಯನ್ನು, ಪುರಾತನ ನವೀನ ಭಕ್ತ ಸಮೂಹದ ಲೋಕಾನುಭಾವ ರೂಪವಾದ ಪ್ರತ್ಯಕ್ಷ ಮಹಿಮಾ ಸಮಗ್ರತೆಯನ್ನು, ಘನವೀರಭದ್ರನ ಪ್ರಖ್ಯಾತವಾದ ಶೌರ್ಯವನ್ನು ಇವೆಲ್ಲವುಗಳನ್ನೂ ಒಂದೆಡೆ ಮೂರ್ತಿರ್ಭವಿಸುವಂತೆ ಮಾಡಿದ ಶಿವಮಹಿಮಾವತಾರ ಮೂರ್ತಿಯಾಗುವಂತೆ ಸಂಕಲ್ಪಿಸಿದನು.
ಹೀಗೆ ಶಿವನು ಸಂಕಲ್ಪಿಸಿದ ಸಂಕಲ್ಪ ಮೂರ್ತಿಯಾಗಿ ದಾಕ್ಷಾರಾಮಪುರದಲ್ಲಿ ಭೀಮೇಶ್ವರ ಲಿಂಗವನ್ನು ಪೂಜಿಸುವ ಅರ್ಚಕರಾದ ಭೀಮಪಂಡಿತ ಮತ್ತು ಗೌರಾಂಬಿಕೆಯವರ ಪುತ್ರರಾಗಿ ಜನಿಸುತ್ತಾರೆ. ಜನಿಸಿದ ಪುತ್ರನಿಗೆ ದಂಪತಿಗಳು “ಮಲ್ಲಿಕಾರ್ಜುನ” ಎಂದು ನಾಮಕರಣ ಮಾಡುತ್ತಾರೆ. ಬೆಳೆದು ದೊಡ್ಡವನಾದಾಗ ಮಲ್ಲಿಕಾರ್ಜುನನು ತನ್ನ ಅಪಾರವಾದ ಪಾಂಡಿತ್ಯದಿಂದ ಮಲ್ಲಿಕಾರ್ಜುನ ಪಂಡಿತನೆಂದು ಪ್ರಸಿದ್ಧನಾದನು. ಮಲ್ಲಿಕಾರ್ಜುನ ಪಂಡಿತಾರಾಧ್ಯ ಗುರುಗಳು “ಕೋಟಿಪಲಾರಾಧ್ಯ”. ಇವರ ಶಿಷ್ಯ “ದೋನಮಾರ್ಯ” ನೆಂದು ಕಾವ್ಯಗಳಿಂದ ತಿಳಿದು ಬರುತ್ತದೆ.
ಮಲ್ಲಿಕಾರ್ಜುನ ಪಂಡಿತಾರಾಧ್ಯರು ಪ್ರಕಾಂಡ ಪಂಡಿತರು. ಇವರದು ತುಂಬಾ ವಿಶಿಷ್ಠವಾದ ವ್ಯಕ್ತಿತ್ವ. ಇವರು ಶೈವಾಚಾರ್ಯರಾಗಿದ್ದರೂ ಸಹ ಬಸವಣ್ಣನವರ ತತ್ವಗಳಿಗೆ ಮಾರುಹೋದವರು. ಇಷ್ಟಲಿಂಗ ಧರಿಸಿ ಇಷ್ಟಲಿಂಗವನ್ನು ಪೂಜಿಸಿದವರು. ಇದಲ್ಲದೆ ಶಿವಯೋಗ ಸಾಧನೆಯನ್ನು ಸಾಧಿಸಿದ ಇವರು ಶಿವಯೋಗ ಸಾಧನೆಯಲ್ಲಿ ಬಸವಣ್ಣನವರಿಗೆ ಸಮಾನವಾದ ಸಾಧನೆಗೈದವರು. ಇದರಿಂದ ಇವರು ಬಸವಣ್ಣನವರ ಅಸಾಧಾರಣ ಭಕ್ತರಾಗಿದ್ದರು ಎಂದು ತಿಳಿದು ಬರುತ್ತದೆ. ಬಸವಣ್ಣನವರ ಮೇಲೆ ಇವರಿಗೆ ಅಪಾರವಾದ ಪ್ರೀತಿ, ಗೌರವಾದರಗಳು ಇದ್ದವು. ಈ ಕಾರಣಗಳಿಂದ ಬಸವಣ್ಣನವರನ್ನು ಕಾಣುವ ಅವರೊಂದಿಗೆ ಬೆರೆಯುವ ಅಪಾರ ಹಂಬಲ ಹೊಂದಿದ್ದರು. ಆದರೆ ತಮ್ಮ ಜೀವಿತಾವಧಿಯಲ್ಲಿ ಬಸವಣ್ಣನವರನ್ನು ನೋಡಲು ಆಗಲೇ ಇಲ್ಲ. ಈ ಸಂಗತಿ ನೋಡುವಾಗ ಗಮನಿಸಬೇಕಾದ ಗಮನಾರ್ಹ ವಿಚಾರವೆಂದರೆ 12 ನೇ ಶತಮಾನದ ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಪ್ರಚಾರ ಮಾಡುವ ಚರ ಜಂಗಮರಿಂದ ಬೇರೆ ರಾಜ್ಯ, ಪ್ರದೇಶಗಳಿಂದ ಕಲ್ಯಾಣಕ್ಕೆ ಹೋಗಿ ಬರುವ ಶರಣರಿಂದ ಮಲ್ಲಿಕಾರ್ಜುನ ಪಂಡಿತಾರಾಧ್ಯರು ಬಸವಣ್ಣನವರ ವ್ಯಕ್ತಿತ್ವ ಅರಿತು ಬಸವಣ್ಣನವರ ಧರ್ಮತತ್ವ ತಿಳಿದುಕೊಂಡು ಇವರೂ ಸಹ ಇಷ್ಟಲಿಂಗ ಧರಿಸುತ್ತಾರೆ. ಹೀಗೆ ಬಸವಣ್ಣನವರು ಬದುಕಿದ ಕಾಲಾವಧಿಯಲ್ಲಿ ಲಿಂಗಾಯತರು ಬಸವಣ್ಣನವರ ಬಗ್ಗೆ ಹೊಂದಿದ ಗಾಢಭಕ್ತಿಗೆ ಮತ್ತು ಅವರ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಅದನ್ನು ಅನುಸರಿಸುತ್ತಿದ್ದರು ಮತ್ತು ಪ್ರಚಾರ ಮಾಡುತ್ತಿದ್ದರು ಎಂಬುದಕ್ಕೆ ಇದು ಒಂದು ಸಾಕ್ಷಿ ಎಂಬುದನ್ನು ಗಮನಿಸಬೇಕು. ಸಾಕಷ್ಟು ಸಂದರ್ಭದಲ್ಲಿ ಕಾವ್ಯಗಳಲ್ಲಿ ಇದು ಸಾಬೀತಾಗುತ್ತದೆ.
ಮಲ್ಲಿಕಾರ್ಜುನ ಪಂಡಿತಾರಾಧ್ಯರಿಗೆ ಕನ್ನಡ ಭಾಷೆ ಕೈಗೂಡಿದುದು ಬಸವೇಶ್ವರರಿಂದಲೇ ಎಂಬುದು ನೀಲಕಂಠಾಚಾರ್ಯರ ಆರಾಧ್ಯ ಚಾರಿತ್ರದಿಂದ ತಿಳಿದು ಬರುತ್ತದೆ.
ಹರಸದಿಂ ಬಸವೇಶನಟ್ಟಿದಾಭೂತಿಯೋ
ಗುರುಪಂಡಿತೇಶಂಗೆ ಕೊಟ್ಟರಾ ಭಕ್ತರ್ಕರ್
ಉರುತರ ಪ್ರೇಮದಿಂ ಬಸವಮಹಾತ್ಮಮಂ ಸ್ಮರಿಸುತ್ತ ಪಂಡಿತೇಶಂ
ವರ ಬಸವ ಹಸ್ತದಿಂ ಬಂದ ತದ್ಭಸಿತಂ
ಧರಿಸಿಕೊಳಲನಿತರೋಳ್ ಕರ್ನಾಟ ಭಾಷೆ ಭಾ
ಸುರಮಾಗಿ ಬರಲದರಿಷ್ಟಲಿಂಗ ಸ್ತ್ರೋತ್ರಮಂ ಮಾಡಿದಂ ಭಕ್ತಿಯಿಂ
(ನೀಲಕಂಠಾಚಾರ್ಯರ ಆರಾಧ್ಯಚಾರಿತ್ರ/ಸಂ. ಎನ್ ಬಸವಾರಾಧ್ಯ-198೦/ಪುಟ ಸಂ. XXXVI/ಶ್ಲೋಕ. 4-9-4)
ಬಸವಣ್ಣನವರು ಕಳಿಸಿದ ವಿಭೂತಿಯನ್ನು ಅತ್ಯಂತ ಪ್ರೀತಿಯಿಂದ ಮಲ್ಲಿಕಾರ್ಜುನ ಪಂಡಿತಾರಾಧ್ಯರು ನೊಸಲಿಗೆ ಧರಿಸಲು ಕನ್ನಡ ಭಾಷೆ ಅವರಿಗೆ ಆ ಕ್ಷಣ ಸಿದ್ಧಿಸಿತು. ತಕ್ಷಣವೇ ಅವರು ಇಷ್ಟಲಿಂಗ ಸ್ತ್ರೋತ್ರ ಮಾಡಿದರೆಂದು ಕವಿ ಭಾವಾವೇಶದಲ್ಲಿ ಹೇಳಿರಬಹುದೆಂದುಕೊಂಡರೂ ಮಲ್ಲಿಕಾರ್ಜುನ ಪಂಡಿತಾರಾಧ್ಯರ ಮೇಲೆ ಕನ್ನಡದ ವಚನ ಭಾಷೆ ಪ್ರಭಾವ ಬೀರಿದ್ದಂತೂ ಸತ್ಯ. ಅದರಲ್ಲೂ ಬಸವಣ್ಣನವರ ಸರಳ, ಸುಂದರವಾದ ಕನ್ನಡ ಬಾಷೆ ಆಕರ್ಷಿಸಲು ಸಾಧ್ಯವಿದೆ. ಈ ಕಾರಣದಿಂದ ಮಲ್ಲಿಕಾರ್ಜುನ ಪಂಡಿತಾರಾಧ್ಯರು ಕನ್ನಡ ಭಾಷೆ ಕಲಿತಿರಲು ಸಾಧ್ಯವಿದೆ.
ಮಲ್ಲಿಕಾರ್ಜುನ ಪಂಡಿತಾರಾಧ್ಯರು ಮತ್ತು ಬಸವೇಶ್ವರರು ಇಬ್ಬರೂ ಧರೆಯಲ್ಲಿ ಗುರು, ಲಿಂಗ, ಜಂಗಮ ಪಾದೋದಕ, ಪ್ರಸಾದ, ವಿಭೂತಿ, ರುದ್ರಾಕ್ಷಿ, ಭಕ್ತಿ, ಕಾಯಕ, ದಾಸೋಹ ಮಹತ್ವ ತಿಳಿಸಲು ಬಂದ ವಿಭೂತಿ ಪರುಷರು. ಇಬ್ಬರ ಜೀವಿತಾವಧಿಯೂ ಈ ಕಾರ್ಯಕ್ಕೆ ಮೀಸಲಾಯಿತು. ಆಂಧ್ರ ಪ್ರದೇಶದಲ್ಲಿ ಮಲ್ಲಿಕಾರ್ಜುನ ಪಂಡಿತಾರಾಧ್ಯರು ಕರ್ನಾಟಕದಲ್ಲಿ ಬಸವೇಶ್ವರರು ಇಬ್ಬರೂ ಮೇರು ವ್ಯಕ್ತಿತ್ವ ಹೊಂದಿದ ಮಹಾಪುರುಷರಾಗಿದ್ದಾರೆ.
ಬಸವ ಮಹಾತ್ಮ್ಯ ಗೀತಂಗಳಂ ಸೊಗಸುಮಿಗೆ
ಮಸಕದಿಂ ಕರ್ನಾಟಭಾಷೆಯೊಳ್ ಪಾಡುತೆ
ಬಸವನಂ ನೆನೆದು ವಂದಿಸುತ್ತೆ ತದ್ಬಸವನ ಮಹಿಮೆಯ ಕೇಳುತಳ್ಳರಿದಂ
ಬಸವನಿರವಂ ಕೇಳ್ದ ಸೌಖ್ಯದಿಂ ತನುವುರ್ಬಿ
ಪಸರಿಸಲ್ ಪುಳಕಾಳಿ ಹರ್ಷಾಶ್ರು ಸುರಿಯೆ ತ
ದ್ಬಸವನಂ ನೋಳ್ಪುತ್ಸುಕಂ ಪಂಡಿತೇಶ್ವರನ ಮನಮನೆಡೆಗೊಂಡಿತಂದು
(ನೀಲಕಂಠಾಚಾರ್ಯರ ಆರಾಧ್ಯಚಾರಿತ್ರ/ಸಂ. ಎನ್ ಬಸವಾರಾಧ್ಯ-1980/ಪುಟ ಸಂ. XXXVI/ಶ್ಲೋಕ. 4-9-5)
ಹೀಗೆ ಬಸವ ಮಹಾತ್ಮಗೀತೆಗಳನ್ನು ಮಲ್ಲಿಕಾರ್ಜುನ ಪಂಡಿತಾರಾಧ್ಯರು ಸೊಗಸಾದ ಕನ್ನಡ ಭಾಷೆಯಲ್ಲಿ ಹಾಡುತ್ತ ಬಸವಣ್ಣನವರನ್ನು ನೆನೆದು ಬಸವ ಮಹಿಮೆಯನ್ನು ಭಕ್ತಿ, ಗೌರವದಿಂದ, ಪ್ರೀತಿಯಿಂದ ಹಾಡಿದರು. ಬಸವಣ್ಣನವರ ಮಹಿಮೆಯನ್ನು ಕೇಳಿ ಮಲ್ಲಿಕಾರ್ಜುನ ಪಂಡಿತಾರಾಧ್ಯರಿಗೆ ತನು ಉಬ್ಬಿ ಪುಳಕಗೊಂಡರು. ಹರ್ಷಾಶೃಗಳನ್ನು ಸುರಿಸಿದರು. ಬಸವಣ್ಣನವರನ್ನು ನೋಡುವ ಉತ್ಸುಕತೆಯಿಂದ ಭರದಿಂದ ಹೊರಟ ಮಲ್ಲಿಕಾರ್ಜುನ ಪಂಡಿತಾರಾಧ್ಯರು ಕಲ್ಯಾಣದೆಡೆಗೆ ಸಾಗುವಾಗ ಹಾನಗಲ್ಲಿಗೆ ಬಂದಾಗ ಭಕ್ತನೊಬ್ಬನಿಂದ:
“ಕಲ್ಯಾಣ ಹಾಳಾಯಿತು, ಶಿವಭಕ್ತಿ ಕೆಟ್ಟಿತು, ಕೂಡಲಸಂಗಮದಲ್ಲಿ ಬಸವಣ್ಣನವರು ಐಕ್ಯರಾದರು”
ಎಂಬ ದಾರುಣ ವಿಷಯ ತಿಳಿಯುತ್ತದೆ. ಈ ವಿಷಯವನ್ನು ಕೇಳಿದ ಮಲ್ಲಿಕಾರ್ಜುನ ಪಂಡಿತಾರಾಧ್ಯರು ಕುಸಿದು ಬೀಳುತ್ತಾರೆ. ಪರಮ ದುಃಖಿಗಳಾಗುತ್ತಾರೆ. ಬಹುವಿಧದಲ್ಲಿ ಬಸವಣ್ಣನವರನ್ನು ಸ್ಮರಿಸಿಕೊಂಡು ಪ್ರಲಾಪಿಸುತ್ತಾರೆ.
ಬಸವ ಸಂಸ್ಕೃತಿದೂರ ಬಸವ ಶಮಿತವಿಕಾರ
ಬಸವ ಶಂಭುಕುಮಾರ ಬಸವಣ್ಣ ಸುವಿಚಾರ
ಬಸವ ನಿಜಸಮಯೋಚಿತಾಚಾರಬಸವ ಸದ್ವಿಚಾರಾ ಬಸವನೆ
ಎಸೆವ ಸದಯಾಪ್ರಚಾರಾ ಬಸವ ಬಸವೇಶ
ಬಸವ ಸದ್ಭಕ್ತಿಶರಣಾ ಶೈವವಿಸ್ಫುರಣ
ಬಸವ ಶಾಂತಿಸ್ಥಲೀವಿಹರಣಾ ಬಾವಣ್ಣ ನಿಜಮತೋದ್ಧರಣ ಬಸವಂ
(ನೀಲಕಂಠಾಚಾರ್ಯರ ಆರಾಧ್ಯಚಾರಿತ್ರ/ಸಂ. ಎನ್ ಬಸವಾರಾಧ್ಯ-1980/ಪುಟ ಸಂ. 593/ಶ್ಲೋಕ. 8)
ಎಂದು ಮಲ್ಲಿಕಾರ್ಜುನ ಪಂಡಿತಾರಾಧ್ಯರು ಬಸವಣ್ಣನವರನ್ನು ಸ್ಮರಿಸಿಕೊಂಡು ದುಃಖಿಸುತ್ತಾರೆ.
ಬಸವಣ್ಣ ಬಸವಕುಮಾರ ಬಸವೇಶ್ವರನೆ
ಬಸವ ಎನ್ನಣ್ಣ ಎನ್ನಯ್ಯ ಎನ್ನಯೆ ಮನೋ
ಬಿಸಜವಿಕಸನಸೂರ್ಯನೇ ಎನ್ನನಿಲ್ಲಿರಿಸಿ ನೀನೋರ್ವನೇ ಮುದದೊಳು
ಕುಸುಮಶರಹರಗರ್ಭಮಂ ಪುಗುವುದುಚಿತಮೇ
ಬಸವಣ್ಣ ಹಾ ಬಸವೇಶ ಹಾ ಎನ್ನಾಳ್ದ
ಬಸವಯ್ಯ ಹಾ ಬಸವಗುರುವೆ ಹಾ ಬಸವಲಿಂಗನೆ ಹಾ ಎನುತ್ತಳಲುತೆ
(ನೀಲಕಂಠಾಚಾರ್ಯರ ಆರಾಧ್ಯಚಾರಿತ್ರ/ಸಂ. ಎನ್ ಬಸವಾರಾಧ್ಯ-1980/ಪುಟ ಸಂ. 593/ಶ್ಲೋಕ. 11)
ಎಂದು ಪ್ರಲಾಪಿಸುವುದನ್ನು ಕವಿ ನೀಲಕಂಠಾಚಾರ್ಯರು ತಮ್ಮ ಆರಾಧ್ಯ ಚರಿತೆಯಲ್ಲಿ ಉಲ್ಲೇಖಿಸಿದ್ದಾರೆ. ಇದು ಮಲ್ಲಿಕಾರ್ಜುನ ಪಂಡಿತಾರಾಧ್ಯರು ಬಸವಣ್ಣನವರ ಮೇಲಿಟ್ಟ ಪ್ರೇಮವನ್ನು ತೋರಿಸುತ್ತದೆ.
ಮಲ್ಲಿಕಾರ್ಜುನ ಪಂಡಿತಾರಾಧ್ಯರು ತ್ರಿಭಾಷಾ ಪಂಡಿತರಾಗಿದ್ದರು. ತೆಲುಗು, ಸಂಸ್ಕೃತ, ಕನ್ನಡ ಭಾಷೆಗಳಲ್ಲಿ ಇವರು ಪ್ರಾವೀಣ್ಯತೆ ಪಡೆದವರಾಗಿದ್ದರು. ಇವು ಮಲ್ಲಿಕಾರ್ಜುನ ಪಂಡಿತಾರಾಧ್ಯರ ಕೃತಿಗಳಾಗಿವೆ.
- ಗಣಸಹಸ್ರನಾಮ
- ಇಷ್ಟಲಿಂಗಸ್ತ್ರೋತ್ರ
- ಬಸವಗೀತ
- ಶಿವತತ್ವ ಸಾರ (ತೆಲುಗು)
- ವಚನಗಳು
ಮಲ್ಲಿಕಾರ್ಜುನ ಪಂಡಿತಾರಾಧ್ಯರು ಹುಟ್ಟು ವೈದಿಕರಾಗಿದ್ದರೂ ಕೂಡ ಇಷ್ಟಲಿಂಗ ದೀಕ್ಷೆ ಪಡೆದು ಇಷ್ಟಲಿಂಗ ಪೂಜಕರಾದರು. ಇದು ಸ್ವಧರ್ಮೀಯರಿಗೆ ಸಹಿಸಲು ಅಸಾಧ್ಯವಾಯಿತು. ಅವರೆಲ್ಲಾ ಮಲ್ಲಿಕಾರ್ಜುನ ಪಂಡಿತಾರಾಧ್ಯರನ್ನು ಕುರಿತು:
ಪಂಡಿತಯ್ಯಾ ನೀನು ಪೌರಾಣಿಕನು, ಉತ್ತಮ ಬ್ರಾಹ್ಮಣನು, ಸಚ್ಚರಿತನು, ವಿದ್ವಾಂಸನು, ವೇದವಿಡಿದವನು. ಹೀಗಿದ್ದೂ ನೀನು ವಿಭೂತಿ, ರುದ್ರಾಕ್ಷಿ ಧರಿಸಬಹುದೆ? ಲಿಂಗವನ್ನು ಧರಿಸುವುದು ಸರಿಯೇ? ಹರಿಬ್ರಹ್ಮಾದಿ ದೇವತೆಗಳು, ಅಸುರರು, ಮುನಿಗಳು ಯಾರಾದರೂ ಹಿಂದೆ ಇದರಂತೆ ಧರಿಸಿರುವರೇ?
ಎಂದು ನಾನಾ ವಿಧವಾಗಿ ಪ್ರಶ್ನಿಸುತ್ತಾರೆ. ಇದಕ್ಕೆ ಉತ್ತರವನ್ನು ಮಲ್ಲಿಕಾರ್ಜುನ ಪಂಡಿತಾರಾಧ್ಯರು ಸಮರ್ಥವಾಗಿ ನೀಡುತ್ತಾರೆ. ಇದರಿಂದ ಮಲ್ಲಿಕಾರ್ಜುನ ಪಂಡಿತಾರಾಧ್ಯರಿಗೆ ಬಸವ ತತ್ವಗಳ ವೈಜ್ಞಾನಿಕ ಪರಿಚಯ ಇರುವುದು ಸ್ಪಷ್ಟವಾಗಿ ಗೋಚರಿಸುವುದು.
ಪ್ರಶ್ನಿಸಿದ ವಿಪ್ರರಿಗೆ ಮಲ್ಲಿಕಾರ್ಜುನ ಪಂಡಿತಾರಾಧ್ಯರು ವೇದ, ಶಾಸ್ತ್ರ, ಪುರಾಣ, ಉಪನಿಷತ್ತು, ಮನುಸ್ಮೃತಿ, ವಿಜ್ಞಾನೇಶ್ವರನ ಗ್ರಂಥಗಳ ಉಲ್ಲೇಖ ಮಾಡಿ ವಿಭೂತಿಯೆಂಬುದು ಶಿವನ ಮೈಬೆಳಗು ಇದನ್ನು ಮೂರು ಬೆರಳಿನಿಂದ ಹಣೆಯ ಮೇಲೆ ಧರಿಸಿರುವುದರಿಂದ ಮುಖದ ಮೇಲೆ ಕಾಂತಿ ಬರುತ್ತದೆ. ಹೀಗಾಗಿ ಬ್ರಾಹ್ಮಣರಾದಿಯಾಗಿ ಶೂದ್ರರು ವಿಭೂತಿ ಧರಿಸಬೇಕು. ವಿಭೂತಿ ಸ್ನಾನ ಅತ್ಯಂತ ಶ್ರೇಯಸ್ಕರ. ವಿಭೂತಿ ಪಾಪನಾಶನವಾದುದು ಎಂದು ಉತ್ತರಿಸುತ್ತಾರೆ.
ರುದ್ರಾಕ್ಷಿ ಧರಿಸುವುದರಿಂದ ಆಗುವ ಲಾಭವನ್ನು ವಿವರಿಸುತ್ತಾರೆ. ತಲೆಯಲ್ಲಿ, ಕೊರಳಲ್ಲಿ, ಕಂಠದಲ್ಲಿ ರುದ್ರಾಕ್ಷಿಗಳನ್ನು ಧರಿಸುವುದರಿಂದ ಸದ್ಗತಿ ಒದಗುವುದು. “ರುದ್ರಾಕಿಯನ್ನು ಕಂಠದಲ್ಲಿ ಧರಿಸಿದ ನಾಯಿ ಸತ್ತು ಸದ್ಗತಿ ಹೊಂದಿದ ಕಥೆ” ಹೇಳಿ ಮಲ್ಲಿಕಾರ್ಜುನ ಪಂಡಿತಾರಾಧ್ಯರು ವಿಪ್ರರ ಬಾಯಿ ಮುಚ್ಚಿಸುತ್ತಾರೆ.
ಮಹಾದೇವನ ಪಾದೋದಕ ಶ್ರೇಷ್ಠವೆಂದು ವೇದಗಳು ಹೇಳಿವೆ. ಯಾವ ತೀರ್ಥಕೇತ್ರಗಳೂ ಶಿವನ ಪವಿತ್ರ ಪಾದೋದಕಕ್ಕಿಂತ ಶೇಷ್ಠವಲ್ಲ ಎಂದು ಪಾದೋದಕದ ಮಹತ್ವವನ್ನು ಹೇಳುತ್ತಾರೆ.
ಸಕಲ ಪದಾರ್ಥಗಳೂ ಶಿವನಿಂದ ಹುಟ್ಟುವುದರಿಂದ ಅದೆಲ್ಲವೂ ಶಿವನಿಗೆ ಅರ್ಪಿತ. ಶಿವಪ್ರಸಾದ ತಿರಸ್ಕರಿಸುವವನು “ವೇದವನ್ನು ಹೊತ್ತ ಕತ್ತೆಯಂತೆ” ಎನ್ನುತ್ತಾರೆ. ಇಷ್ಟಲಿಂಗಕ್ಕೆ ಸಮರ್ಪಿತವಾದ ಯಾವುದೇ ಪದಾರ್ಥವು ಪ್ರಸಾದ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಇಷ್ಟಲಿಂಗಕ್ಕೆ ಪದಾರ್ಥ ತೋರಿ ಪ್ರಸಾದವಾಗಿ ಸ್ವೀಕರಿಸಬೇಕು ಎಂದು ಪ್ರಸಾದದ ಮಹಿಮೆಯನ್ನು ಎತ್ತಿ ಹಿಡಿಯುತ್ತಾರೆ.
ಇಷ್ಟಲಿಂಗ ಪೂಜೆ ಮತ್ತು ಮಂತ್ರದ ಮಹತ್ವವನ್ನು ಕುರಿತು ವಿಪ್ರರಿಗೆ ತಿಳಿಸುತ್ತಾರೆ. ಲಿಂಗದೀಕ್ಷೆಗೆ ಗುರು ಬೇಕು. ಗುರುವಿನ ಹಸ್ತಮಸ್ತಕದಿಂದ ತನು-ಅರಿವು ಶುದ್ಧವಾಗುತ್ತದೆ. ಆತ್ಮ ಶುದ್ಧವಾಗುತ್ತದೆ ಎಂದು ಹೇಳಿದ ಮಲ್ಲಿಕಾರ್ಜುನ ಪಂಡಿತಾರಾಧ್ಯರು ಸ್ವತಃ ಶಿವಯೋಗ ಸಾಧಕರಾಗಿದ್ದರು.
ಮಲ್ಲಿಕಾರ್ಜುನ ಪಂಡಿತಾರಾಧ್ಯರು ಅಸಾಧಾರಣವಾದ ಪಾಂಡಿತ್ಯ ಪಡೆದವರು. ಇವರು ತಮಿಳುನಾಡಿನ ವೇಳ್ನಾಡ ಚೋಳನ ಆಸ್ಥಾನದಲ್ಲಿದ್ದ ಬೌದ್ಧಗುರು ಏರ್ಪಡಿಸಿದ್ದ ವಾದ ಸ್ಪರ್ಧೆಯಲ್ಲಿ ವೇದವಾದ, ಕರ್ಮವಾದ, ಕಾಲವಾದ, ವೇದಾಂತವಾದ, ಸಾಂಖ್ಯವಾದ, ಯೋಗವಾದ, ಚಾರ್ವಾಕವಾದ, ಪಾಂಚರಾತ್ರವಾದ, ಬೌದ್ಧವಾದ, ಜೈನವಾದ ನಿರಸನ ಮಾಡುತ್ತಾರೆ. ಹೀಗೆ ಅವರೆಲ್ಲರನ್ನೂ ವಾದದಲ್ಲಿ ಸೋಲಿಸುತ್ತಾರೆ. ಚೋಳರಾಜ ಇವರ ಕಣ್ಣುಗಳನ್ನು ಕೀಳಿಸಲು ಆಜ್ಞೆ ಮಾಡುತ್ತಾನೆ. ಮಲ್ಲಿಕಾರ್ಜುನ ಪಂಡಿತಾರಾಧ್ಯರ ಕಣ್ಣುಗಳನ್ನು ಕೀಳಿಸಲಾಗುತ್ತದೆ. ಆಗ ಮಲ್ಲಿಕಾರ್ಜುನ ಪಂಡಿತಾರಾಧ್ಯರು “ಚೋಳ ಅರಸನ ವಂಶವೇ ನಾಶವಾಗಲಿ” ಎಂದು ಶಪಿಸಿ ಅಮರರಾಮಕ್ಕೆ ಬಂದು ಗಣಸಹಸ್ರ ಜಪಿಸಿ ಶಿವಕೃಪೆಯಿಂದ ಮತ್ತೆ ಊರ್ಧ್ವನೇತ್ರ ಪಡೆಯುತ್ತಾರೆ ಎಂದು ಕಾವ್ಯಗಳಲ್ಲಿ ಉಲ್ಲೇಖವಾಗಿದೆ.
ಮಲ್ಲಿಕಾರ್ಜುನ ಪಂಡಿತಾರಾಧ್ಯರು ತಮ್ಮ ಕೊನೆಯ ದಿನಗಳಲ್ಲಿಯೂ ಕೂಡ ಬಸವಣ್ಣನವರನ್ನು ಸ್ಮರಿಸಿದ್ದಾರೆ.
ಪರಶಿವನೇ ನಿನ್ನನ್ನು ಧೃಢವಾದ ಭಕ್ತಿಯಿಂದ ಪೂಜಿಸಿರುವೆ. ಬಂದ ಕೆಲಸ ಮುಗಿಸಿರುವೆ. ಬಸವಣ್ಣನವರು ನಿನ್ನಲ್ಲಿ ಲೀನವಾದ ಬಳಿಕ ನಾನು ಯಾರವನಾಗಿ ಇರಬೇಕು? ಸಮಸ್ತಲೋಕಕ್ಕೆ ಬಸವಣ್ಣನಂತೆ ಭಕ್ತಿಗೆ ಆಧಾರಭೂತವಾಗಿ ಯಾರಿರುವರಯ್ಯಾ? ಜಂಗಮಕೋಟಿಗೆಲ್ಲಾ ನೀನೆ ರಕ್ಷೆಯೆಂದು ನಂಬಿದವರ ಬಯಕೆಗಳನ್ನು ಈಡೇರಿಸಿ ನಂಬದವರನ್ನು ನಂಬುವಂತೆ ಸಾಕ್ಷೀಕರಿಸಿ ಬಿಜ್ಜಳನ ಗರ್ವ ನೀಗಿಸಿ, ಮೌಢ್ಯ ಕಳೆದು ಪಾಪಿಗಳಾದ ತಾರ್ಕಿಕರ ಸೊಕ್ಕಡಗಿಸಿದ ವೀರ ಬಸವಯ್ಯನವರು ಇನ್ನಿಲ್ಲವಯ್ಯಾ? ಜಂಗಮವೇ ಲಿಂಗವೆಂದು ಪ್ರಸಾದ ಪರಮ ಸೌಖ್ಯವೆಂದು ಬಸವಣ್ಣನವರು ನಿರೂಪಿಸಿದರು. ಅವರಿಲ್ಲದ ಮೇಲೆ ನನಗಿನ್ನೇನಿದೆ? ನನ್ನನ್ನೂ ನಿನ್ನಲ್ಲಿಗೆ ಕರೆಯಿಸಿಕೋ
ಎಂದು ಪ್ರಾರ್ಥಿಸಿದರು. ಈ ವಿಚಾರ ನೋಡಿದರೆ ಅಕ್ಕ ನಾಗಮ್ಮನವರ ಪ್ರಾರ್ಥನೆಯ ರೀತಿಯಲ್ಲಿದೆ. ಅಕ್ಕ ನಾಮ್ಮನವರ ಆ ವಚನ ಇಂತಿದೆ.
ಬಸವಣ್ಣಾ, ನೀವು ಮರ್ತ್ಯಕ್ಕೆ ಬಂದು ನಿಂದಡೆ
ಭಕ್ತಿಯ ಬೆಳವಿಗೆ ದೆಸೆದೆಸೆಗಲ್ಲಾ ಪಸರಿಸಿತ್ತಲ್ಲಾ!
ಅಯ್ಯಾ, ಸ್ವರ್ಗ ಮರ್ತ್ಯ ಪಾತಾಳದೊಳಗೆಲ್ಲಾ
ನಿಮ್ಮ ಭಕ್ತಿಯ ಬೆಳವಿಗೆಯ ಘನವನಾರು ಬಲ್ಲರು?
ಅಣ್ಣಾ, ಶಶಿಧರನಟ್ಟಿದ ಮಣಿಹ ಪೂರೈಸಿತ್ತೆಂದು
ನೀವು ಲಿಂಗೈಕ್ಯವಾದೊಡೆ, ನಿಮ್ಮೊಡನೆ ಭಕ್ತಿ ಹೋಯಿತ್ತಯ್ಯಾ.
ನಿಮ್ಮೊಡನೆ ಅಸಂಖ್ಯಾತ ಮಹಾಗಣಂಗಳು ಹೋದರಣ್ಣಾ.
ಮರ್ತ್ಯಲೋಕದ ಮಹಾಮನೆ ಶೂನ್ಯವಾಯಿತ್ತಲ್ಲಾ ಬಸವಣ್ಣಾ.
ಎನ್ನನೊಯ್ಯದೆ ಹೋದೆಯಲ್ಲಾ
ಪಂಚಪರುಷಮೂರ್ತಿ ಬಸವಣ್ಣಾ.
ಬಸವಣ್ಣಪ್ರಿಯ ಚೆನ್ನಸಂಗಯ್ಯಂಗೆ
ಪ್ರಾಣಲಿಂಗವಾಗಿ ಹೋದೆಯ ಸಂಗನಬಸವಣ್ಣಾ?
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-309/ವಚನ ಸಂಖ್ಯೆ-794)
ಅಕ್ಕ ನಾಗಮ್ಮನವರಂತೆ ಮಲ್ಲಿಕಾರ್ಜುನ ಪಂಡಿತಾರಾಧ್ಯರು ದುಃಖಿಸುವುದು ಅವರು ಬಸವಣ್ಣನವರ ಮೇಲೆ ಇಟ್ಟಿರುವ ಗೌರವ ಪ್ರೀತಿ ಆದರಗಳಿಗೆ ಸಾಕ್ಷಿಯಾಗಿವೆ. ಬಸವಣ್ಣನವರ ಸಮಕಾಲೀನರಾದ ಮಲ್ಲಿಕಾರ್ಜುನ ಪಂಡಿತಾರಾಧ್ಯರು ಬಸವಣ್ಣನವರ ವ್ಯಕ್ತಿತ್ವಕ್ಕೆ ಮಾರು ಹೋಗಿದ್ದರು ಎಂಬುದು ಇಲ್ಲಿ ಸಾಬೀತಾಗುತ್ತದೆ.
ಮಲ್ಲಿಕಾರ್ಜುನ ಪಂಡಿತಾರಾಧ್ಯರ ವಚನಗಳ ಮೇಲೆ ಬಸವಣ್ಣನವರ ವಚನಗಳ ಛಾಯೆ ಇರುವುದು ಗಮನಾರ್ಹ. ಮಲ್ಲಿಕಾರ್ಜುನ ಪಂಡಿತಾರಾಧ್ಯರು “ಗುರುಸಿದ್ಧಮಲ್ಲ” ಮತ್ತು “ಶ್ರೀ ಮಲ್ಲಿಕಾರ್ಜುನ” ಎಂಬ ವಚನಾಂಕಿತಗಳಿಂದ ವಚನ ರಚನೆ ಮಾಡಿದ್ದಾರೆ. ಅಂತಹ ಕೆಲವು ವಚನಗಳನ್ನು ಇಲ್ಲಿ ನೋಡಬಹುದು.
- ಮಲ್ಲಿಕಾರ್ಜುನ ಪಂಡಿತಾರಾಧ್ಯರ ವಚನ:
ಅಜ್ಞಾನಿಗಳಪ್ಪವರ ಎನ್ನವರೆಂದಡೆ,
ಅಘಟಿತ ನಿಮ್ಮಾಣೆ, ಕೇಳಾ ತಂದೆ.
ಕರ್ತೃವೆ ಎನ್ನ ಮನದಲ್ಲಿ ಬುದ್ಧಿಗೊಡಾ
ಎಂದು ಉತ್ತರಗೊಡುವ ತಂದೆ.
ನಿನಗೆ ಶರಣೆಂದು ನಂಬಿದವರನು,
ಎನ್ನವರೆಂಬೆನು ಕೇಳಾ, ಶ್ರೀಮಲ್ಲಿಕಾರ್ಜುನ ತಂದೆ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-439/ವಚನ ಸಂಖ್ಯೆ-1133)
ಬಸವಣ್ಣನವರ ವಚನ:
ಅತ್ತಲಿತ್ತ ಹೋಗದಂತೆ, ಹೆಳವನ ಮಾಡಯ್ಯಾ ತಂದೆ.
ಸುತ್ತಿ ಸುಳಿದು ನೋಡದಂತೆ, ಅಂಧಕನ ಮಾಡಯ್ಯಾ ತಂದೆ.
ಮತ್ತೊಂದ ಕೇಳದಂತೆ, ಕಿವುಡನ ಮಾಡಯ್ಯಾ ತಂದೆ.
ನಿಮ್ಮ ಶರಣರ ಪಾದವಲ್ಲದೆ
ಅನ್ಯ ವಿಷಯಕ್ಕೆಳಸದಂತೆ ಇರಿಸು, ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-19/ವಚನ ಸಂಖ್ಯೆ-59) - ಮಲ್ಲಿಕಾರ್ಜುನ ಪಂಡಿತಾರಾಧ್ಯರ ವಚನ:
ಆರನಾದಡೂ ಅಯ್ಯಾ ಎಂದೆನಲಾರೆ.
ಆರನಾದಡೂ ದೇವಾ ಎಂದೆನಲಾರೆ.
ನೀನು ಜಗಭರಿತನಾಗಿ ನಾನು ನಿಮ್ಮನೇ ಅಯ್ಯಾ ಎಂಬೆ.
ಎನಗಾರೂ ಇಲ್ಲದ ಕಾರಣ
ನೀವೇ ಶರಣೆಂಬೆ, ಶ್ರೀಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-439/ವಚನ ಸಂಖ್ಯೆ-1134)
ಬಸವಣ್ಣನವರ ವಚನ:
ತಂದೆ ನೀನು-ತಾಯಿ ನೀನು,
ಬಂಧು ನೀನು-ಬಳಗ ನೀನು.
ನೀನಲ್ಲದೆ ಮತ್ತಾರೂ ಇಲ್ಲಯ್ಯಾ,
ಕೂಡಲಸಂಗಮದೇವಾ,
ಹಾಲಲದ್ದು, ನೀರಲದ್ದು.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-125/ವಚನ ಸಂಖ್ಯೆ-481) - ಮಲ್ಲಿಕಾರ್ಜುನ ಪಂಡಿತಾರಾಧ್ಯರ ವಚನ:
ಇರುಳು ಹಗಲು ಎಮ್ಮ ನೆನೆವುತ್ತ, ಮರೆವುತ್ತ,
ಮರುಗುತ್ತ, ಕುದಿಯುತ್ತ ಇಪ್ಪೆಯೋ ಕಂದಾಯೆಂದು,
ಇತ್ತಿತ್ತ ಬಾರಾ ಮಗನೆಯೆಂದು,
ನಿಮ್ಮ ಶ್ರೀಚರಣದಿಂದಯೆಂದು ಕರೆದಿರೆನ್ನ.
ಭಕ್ತಿಯ ಕೊಡಯ್ಯಾ.
ಶ್ರೀಮಲ್ಲಿಕಾರ್ಜುನಯ್ಯಾ ಎಂದಡೆ,
ಹಿಡಿಯೋ ಮಗನೆ ಎಂದೆಂಬಿರೆನ್ನ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-439/ವಚನ ಸಂಖ್ಯೆ-1135)
ಬಸವಣ್ಣನವರ ವಚನ:
ಕೆಸರಲ್ಲಿ ಬಿದ್ದ ಪಶುವಿನಂತೆ
ಆನು ದೆಸೆದೆಸೆಗೆ ಬಾಯ ಬಿಡುತ್ತಿದ್ದೇನೆ, ಅಯ್ಯಾ.
ಆರೈವವರಿಲ್ಲ, ಅಕಟಕಟ!
ಪಶುವೆಂದೆನ್ನ ಕೂಡಲಸಂಗಮದೇವ ಕೊಂಬ ಹಿಡಿದೆತ್ತುವನ್ನಕ್ಕ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-18/ವಚನ ಸಂಖ್ಯೆ-52) - ಮಲ್ಲಿಕಾರ್ಜುನ ಪಂಡಿತಾರಾಧ್ಯರ ವಚನ:
ಕಲ್ಪಿತೋದಕವೊಂದು, ಅರ್ಪಣೋದಕ ಮೂರು,
ಮತ್ತೆ ಅಂಗೋದಕತ್ರಯವಾಗಿಯೂ
ಮಿಕ್ಕ ಪ್ರಸಾದೋದಕ ಅವು ಮೂರು.
ಸತ್ವರಜತಮವನತಿಗಳೆದವರಿಗಲ್ಲದೆ,
ಹತ್ತುಪಾದೋದಕವನರಿಯಲರಿದು.
ತನು ಚಿತ್ತಶುದ್ಧನಾಗಿ ಗುರುಕರುಣದಿಂದವೆ
ಹತ್ತು ಪಾದೋದಕವ ಗ್ರಹಿಸುವ ಭಕ್ತರಿಗೆ ಸಂದಿಲ್ಲದಿಹೆ.
ಅವರು ನೀನು, ಮುತ್ತು ನೀರನು ಕೂಡಿದಾನಂದದ ಭೇದದೊಲು,
ತತ್ತ್ವಮಸಿಯಪ್ಪನೈ ಶ್ರೀಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-440/ವಚನ ಸಂಖ್ಯೆ-1136)
ಕಲ್ಪಿತೋದಕ
ಮಜ್ಜನೋದಕ, ಪ್ರಸಾದೋದಕ, ಅಭಿಷೇಕೋದಕ (ತ್ರಿವಿಧೋದಕ)
ಲಿಂಗಪಾದೋದಕ, ಗುರುಪಾದೋದಕ, ಜಂಗಮಪಾದೋದಕ (ತ್ರಿವಿಧೋದಕ)
ಅರ್ಪಣೋದಕ
ಅಂಗೋದಕ
ಪಾದೋದಕ
ಬಸವಣ್ಣನವರ ವಚನ:
ಕರುಣಜಲ ವಿನಯಜಲ ಸಮತಾಜಲ.
ಕರುಣಜಲವೆ ಗುರುಪಾದೋದಕ,
ವಿನಯಜಲವೆ ಲಿಂಗಪಾದೋದಕ,
ಸಮತಾಜಲವೆ ಜಂಗಮಪಾದೋದಕ.
ಗುರುಪಾದೋದಕದಿಂದ ಸಂಚಿತಕರ್ಮನಾಸ್ತಿ.
ಲಿಂಗಪಾದೋದಕದಿಂದ ಪ್ರಾರಬ್ಧಕರ್ಮನಾಸ್ತಿ.
ಜಂಗಮಪಾದೋದಕದಿಂದ ಆಗಾಮಿಕರ್ಮನಾಸ್ತಿ.
ಇಂತೀ ತ್ರಿವಿಧೋದಕದಲ್ಲಿ ತ್ರಿವಿಧಕರ್ಮನಾಸ್ತಿ.
ಇದು ಕಾರಣ-ಕೂಡಲಚೆನ್ನಸಂಗಮದೇವಾ
ತ್ರಿವಿಧೋದಕವ ನಿಮ್ಮ ಶರಣನೆ ಬಲ್ಲ.
(ಸಮಗ್ರ.ವಚನ.ಸಂಪುಟ: ಮೂರು-2021/ಪುಟ ಸಂಖ್ಯೆ-514/ವಚನ ಸಂಖ್ಯೆ-1124)
5.ಮಲ್ಲಿಕಾರ್ಜುನ ಪಂಡಿತಾರಾಧ್ಯರ ವಚನ:
ಗುರುವೆ, ಇಹ-ಪರ ಗುರುವೆ, ಗುರುವೆ ಕರುಣಾಕರನೆ,
ಗುರುವೆ, ಶುದ್ಧಾತ್ಮನೆ ನಿರ್ಮಳಾಂಗನೆ.
ಗುರುವೆ, ನಿನ್ನಂತೆ ಎನ್ನುವನು ಮಾಡಿದ
ಪರಮ ಗುರುವೆ, ನೀನು ಶ್ರೀ ಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-440/ವಚನ ಸಂಖ್ಯೆ-1138)
ಬಸವಣ್ಣನವರ ವಚನ:
ಗುರುವಚನವಲ್ಲದೆ ಲಿಂಗವೆಂದೆನಿಸದು,
ಗುರುವಚನವಲ್ಲದೆ ಜಂಗಮವೆಂದೆನಿಸದು,
ಗುರುವಚನವಲ್ಲದೆ ನಿತ್ಯವೆಂದೆನಿಸದು,
ಗುರುವಚನವಲ್ಲದೆ ನೇಮವೆಂದೆನಿಸದು.
ತಲೆಯಿಲ್ಲದ ಅಟ್ಟೆಗೆ ಪಟ್ಟವ ಕಟ್ಟುವ
ಭಯ ಭ್ರಷ್ಟರ ಮೆಚ್ಚುವನೆ,
ನಮ್ಮ ಕೂಡಲಸಂಗಮದೇವ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-23/ವಚನ ಸಂಖ್ಯೆ-72)
6.ಮಲ್ಲಿಕಾರ್ಜುನ ಪಂಡಿತಾರಾಧ್ಯರ ವಚನ:
ಧನ ಜವ್ವನವುಳ್ಳಲ್ಲಿ ಶಿವಶರಣೆಂಬೆ.
ಮಾನವಾ, ನೆನೆ ನೆನೆಯೋ, ನೀ ಕೆಡದ ಮುನ್ನ.
ಧನ ನಿಲ್ಲದು, ಜವ್ವನ ನಿಲ್ಲದು, ನಿನ್ನ ಪ್ರಾಣ ನಿಲ್ಲದು.
ಇದನರಿದು, ಶ್ರೀಮಲ್ಲಿಕಾರ್ಜುನನ ನೆನೆಯೋ,
ನೀ ಕೆಡದ ಮುನ್ನ.
(ಸಮಗ್ರ.ವಚನ.ಸಂಪುಟ: ಎಂಟು-2021/ಪುಟ ಸಂಖ್ಯೆ-440/ವಚನ ಸಂಖ್ಯೆ-1139)
ಬಸವಣ್ಣನವರ ವಚನ:
ನರೆ ಕೆನ್ನೆಗೆ, ತೆರೆ ಗಲ್ಲಕೆ, ಶರೀರ ಗೂಡುವೋಗದ ಮುನ್ನ,
ಹಲ್ಲು ಹೋಗಿ, ಬೆನ್ನು ಬಾಗಿ,
ಅನ್ಯರಿಗೆ ಹಂಗಾಗದ ಮುನ್ನ,
ಕಾಲಮೇಲೆ ಕೈಯನೂರಿ ಕೋಲ ಹಿಡಿಯದ ಮುನ್ನ,
ಮುಪ್ಪಿಂದೊಪ್ಪವಳಿಯದ ಮುನ್ನ,
ಮೃತ್ಯು ಮುಟ್ಟದ ಮುನ್ನ
ಪೂಜಿಸು ಕೂಡಲಸಂಗಮದೇವನ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-45/ವಚನ ಸಂಖ್ಯೆ-161)
7.ಮಲ್ಲಿಕಾರ್ಜುನ ಪಂಡಿತಾರಾಧ್ಯರ ವಚನ:
ಧೃತಿಗೆಟ್ಟು ದೈವವೆಂಬಿರಲ್ಲಯ್ಯಾ.
ಧೃತಿಗೆಟ್ಟು ದೈವವ ಪೂಜಿಸುವಿರಲ್ಲಯ್ಯಾ.
ಧೃತಿಗೆಟ್ಟು ದೈವಂಗಳ ಬೇಡುವಿರಲ್ಲಯ್ಯಾ.
ಗತಿಯಲ್ಲ, ದುರ್ಗತಿಯ ಮಾನವರಿರಾ
ದಿಟದಿಟ, ಅಲ್ಲಿ ಬೇಡದಿರಿರೆ. ಶ್ರುತಿ ಸ್ಮೃತಿಗಳ ಕೇಳಿ,
ಅವೂ ಕೊಡಲರಿಯವೆಂಬುದ ನೆರೆನಂಬಿರೆ,
ನಮ್ಮ ಶ್ರೀಮಲ್ಲಿಕಾರ್ಜುನ ಕೊಡುವನು.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-441/ವಚನ ಸಂಖ್ಯೆ-1140)
ಬಸವಣ್ಣನವರ ವಚನ:
ಮಡಕೆ ದೈವ, ಮೊರ ದೈವ, ಬೀದಿಯ ಕಲ್ಲು ದೈವ,
ಹಣಿಗೆ ದೈವ, ಬಿಲ್ಲನಾರಿ ದೈವ, ಕಾಣಿರೊ!
ಕೊಳಗ ದೈವ, ಗಿಣ್ಣೆಲು ದೈವ, ಕಾಣಿರೊ!
ದೈವ ದೈವವೆಂದು ಕಾಲಿಡಲಿಂಬಿಲ್ಲ,
ದೈವನೊಬ್ಬನೆ ಕೂಡಲಸಂಗಮದೇವ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-151/ವಚನ ಸಂಖ್ಯೆ-562)
8.ಮಲ್ಲಿಕಾರ್ಜುನ ಪಂಡಿತಾರಾಧ್ಯರ ವಚನ:
ನಾದ ಬಿಂದುವಿನಲ್ಲಿ ಆದಿ ಅಕ್ಷರದ್ವಯವನೈದಿಸಿದ
ಗುರು ಬಸವಣ್ಣನೇ ಆಮೋದದಲಿ ಕೂಟ.
ಆನಂದ ಸಾನಂದ ತಾನೊಂದು ರೂಪಾಗಿ
ಸ್ವಾನುಭಾವದ ದೀಕ್ಷಾಪನ್ನವಯವಾ
ಭಾನುಮಂಡಲದಲ್ಲಿ ತಾರೆ ಮಧುಕರನೊಪ್ಪೆ
ಅನ್ವಯ (?) ನಿನ್ನ ಗುಣವರಿಯಲ್ಕೆ
ಚೆನ್ನಬಸವ ಅಯ್ಯನಾದನೆನಗೆ ಶ್ರೀಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-441/ವಚನ ಸಂಖ್ಯೆ-1141)
ಮಲ್ಲಿಕಾರ್ಜುನ ಪಂಡಿತಾರಾಧ್ಯರ ಈ ಮೇಲಿನ ವಚನ ಬಸವಣ್ಣನವರನ್ನು ಅರಿಯಲು ಚನ್ನಬಸವಣ್ಣ ಗುರುವಾದ ಅತ್ಯಂತ ಪ್ರಮುಖವಾದ ವಚನ.
9.ಮಲ್ಲಿಕಾರ್ಜುನ ಪಂಡಿತಾರಾಧ್ಯರ ವಚನ:
ಪುಣ್ಯಪಾಪಂಗಳನರಿಯದ ಮುನ್ನ,
ಅಲ್ಲಿ ಅನೇಕ ಭವಭವಂಗಳಲ್ಲಿ ಬಂದೆ ನಾನಯ್ಯಾ.
ನಂಬಿ ಶರಣುಹೊಕ್ಕೆನಯ್ಯಾ.
ನಿಮ್ಮನೆಂದೂ ಅಗಲದಂತೆ ಎನ್ನ ನಡೆಸಯ್ಯಾ.
ನಿಮ್ಮ ಧರ್ಮವು. ನಿಮ್ಮನೊಂದು ಬೇಡುವೆನು,
ಎನ್ನ ಕರ್ಮಬಂಧವ ಬಿಡಿಸುವಂತೆ ಮಾಡಯ್ಯಾ
ಶ್ರೀಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-442/ವಚನ ಸಂಖ್ಯೆ-1143)
ಬಸವಣ್ಣನವರ ವಚನ:
ಹೊನ್ನು ಹೆಣ್ಣು ಮಣ್ಣೆಂಬ ಕರ್ಮದ ಬಲೆಯಲ್ಲಿ ಸಿಲುಕಿ,
ವೃಥಾಯ ಬರುದೊರೆಹೋಹ ಕೆಡುಕ ಹಾರುವ ನಾನಲ್ಲ.
ಹಾರುವೆನಯ್ಯಾ ಭಕ್ತರ ಬರವ ಗುಡಿಗಟ್ಟಿ,
ಹಾರುವೆನಯ್ಯಾ ಶರಣರ ಬರವ ಗುಡಿಗಟ್ಟಿ,
ಕೂಡಲಸಂಗಮದೇವನು ವಿಪ್ರಕರ್ಮವ ಬಿಡಿಸಿ,
ಅಶುದ್ಧನ ಶುದ್ಧನ ಮಾಡಿದನಾಗಿ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-195/ವಚನ ಸಂಖ್ಯೆ-716)
10.ಮಲ್ಲಿಕಾರ್ಜುನ ಪಂಡಿತಾರಾಧ್ಯರ ವಚನ:
ಮೃಗಕ್ಕೆಂದು ಬಿಲ್ಲ ಹಿಡಿದು ಶರವ ತೊಟ್ಟೆ ನಾನು.
ಮೃಗ ತಪ್ಪಿ ಶಿವ ದೊರಕೊಂಡನೆನಗೆ.
ಅನುಪಮ ದುರಿತವ ಕೆಡಿಸಲೆಂದು,
ಹೊಲೆಯನ ಕುಲಜನ ಮಾಡಿದ, ಶ್ರೀಮಲ್ಲಿಕಾರ್ಜುನ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-95/ವಚನ ಸಂಖ್ಯೆ-231)
11.ಮಲ್ಲಿಕಾರ್ಜುನ ಪಂಡಿತಾರಾಧ್ಯರ ವಚನ:
ಸೀಮೆ ಸಾಯುಜ್ಯವ ಮೀರಿದಾತ ಗುರು[ವಯ್ಯಾ]
ನಾಮ ನಿರ್ನಾಮವಾದಾತ ಗುರುವಯ್ಯಾ.
ಸೋಮಪ್ರಭೆಯಿಂದತ್ತತ್ತ ಪಾವನನಾದಾತ ಗುರುವಯ್ಯಾ
ಆದಿ ಅಕ್ಷರವರಿತನಾ[ದಾ]ತ ಗುರುವಯ್ಯಾ.
ನಾದ ಬಿಂದು ಕಳೆಯಾದಿಯರಿದಾತ
ಅಭೇದ್ಯ ಗುರು ಬಸವಣ್ಣ, ಶ್ರೀಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-443/ವಚನ ಸಂಖ್ಯೆ-1147)
ಮಲ್ಲಿಕಾರ್ಜುನ ಪಂಡಿತಾರಾಧ್ಯರ ಈ ಮೇಲಿನ ವಚನ ಬಸವಣ್ಣನವರನ್ನು ಗುರು ಎಂದು ಗುರುವಿನ ಮಹತ್ವವನ್ನು ಕುರಿತು ಬರೆದ ವಚನ. ಹಾಗಾಗಿ ಬಸವಣ್ಣನವರನ್ನು ಅರಿಯಲು ಅತ್ಯಂತ ಪ್ರಮುಖವಾದ ವಚನ.
ಡಾ. ಪುಷ್ಪಾ ಶಲವಡಿಮಠ,
ಕನ್ನಡ ಉಪನ್ಯಾಸಕರು,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಚಿಕ್ಕ ಬಾಸೂರು, ಹಾವೇರಿ ಜಿಲ್ಲೆ.
ಮೋಬೈಲ್. ಸಂ. 97407 38330
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in
ವಿಶ್ವಗುರು ಬಸವಣ್ಣ ನವರ ತತ್ವ ಸಿದ್ದಾಂತಗಳು ಮೆಚ್ಚಿ ;
ಸ್ಕೀಕರಿಸಿ, ಅವರ ಪರಮ ಸಿಶ್ಯರಾದ, ,ವೈದಿಕ ಶ್ರೀ ಮಲ್ಲಿಕಾರ್ಜುನ ಪಂಡಿತರಾಧ್ಯರ ಈ ವಚನಗಳು ಅವಲೋಕನ ಮಾಡಿದಾಗ ,ವಿಶ್ವಗುರು ಬಸವಣ್ಣ ನವರ ವಚನಗಳಿಗೆ ಸಾಮ್ಯತೆ ಹೊಂದಿರುವುದು ಕಂಡುಬರುತ್ತದೆ