ಸರಳತೆ ಮತ್ತು ಉದಾರತೆಯ ಹರಿಕಾರ: ಹರ್ಡೇಕರ ಮಂಜಪ್ಪನವರು | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ತನುವ ತೋಂಟವ ಮಾಡಿ, ಮನವ ಗುದ್ದಲಿ ಮಾಡಿ,
ಅಗೆದು ಕಳೆದೆನಯ್ಯಾ ಭ್ರಾಂತಿನ ಬೇರ.
ಒಡೆದು ಸಂಸಾರದ ಹೆಂಟೆಯ,
ಬಗಿದು ಬಿತ್ತಿದೆನಯ್ಯಾ ಬ್ರಹ್ಮಬೀಜವ.
ಅಖಂಡಮಂಡಲವೆಂಬ ಬಾವಿ, ಪವನವೆ ರಾಟಾಳ,
ಸುಷುಮ್ನನಾಳದಿಂದ ಉದಕವ ತಿದ್ದಿ,
ಬಸವಗಳೈವರು ಹಸಗೆಡಿಸಿಹವೆಂದು
ಸಮತೆ ಸೈರಣೆಯೆಂಬ ಬೇಲಿಯನಿಕ್ಕಿ,
ಆವಾಗಳೂ ಈ ತೋಂಟದಲ್ಲಿ ಜಾಗರವಿದ್ದು
ಸಸಿಯ ಸಲಹಿದೆನು ಕಾಣಾ ಗುಹೇಶ್ವರಾ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-95/ವಚನ ಸಂಖ್ಯೆ-231)

ಜಂಗಮ ಜ್ಯೋತಿಯಾಗಿ ಲೋಕಪರ್ಯಟನೆಯ ಮೂಲಕ ಸತ್ಯದ ಕಾಣಿಕೆಯನ್ನು ಗುರುತಿಸಿ ಸಕಲರ ಎದೆಯಲ್ಲಿ ಅರಿವಿನ ಬೀಜ ಬಿತ್ತಿದ ವ್ಯೋಮಕಾಯ ಮೂರ್ತಿಗಳಾದ ಅಲ್ಲಮ ಪ್ರಭುಗಳ ವಚನದಂತೆ ಸತ್ಯದ ಬದುಕನ್ನು ಬದುಕಿದ ಹರ್ಡೇಕರ ಮಂಜಪ್ಪನವರು ಸರಳತೆ ಮತ್ತು ಉದಾರತೆ ಎಂಬ ತತ್ವಗಳಡಿಯಲ್ಲಿ ತಮ್ಮ ಬದುಕನ್ನು ಸವೆಯಿಸಿದವರು.

ತಮ್ಮ ತನುವಿಗೊಂದು ದೀಕ್ಷೆ ಕೊಟ್ಟು ನಿರಂತರ ಬ್ರಹ್ಮಚಾರಿಗಳಾಗಿ ಮನವನ್ನು ಗುದ್ದಲಿಯನ್ನಾಗಿಸಿಕೊಂಡು ಬದುಕಿನ ಭ್ರಾಂತಿಯ ಬೇರನ್ನೇ ಕಿತ್ತೆಸೆದು ವಾಸ್ತವತೆಯನ್ನು ಅಪ್ಪಿಕೊಂಡ ಸಂತರಿವರು. ತಮ್ಮ ಬದುಕಿನ ಸಿದ್ಧಾಂತಕ್ಕೆ ತಾವೇ ಕಂಕಣ ತೊಟ್ಟು ಹೊರಟ ನಿಜ ಸಂನ್ಯಾಸಿಗಳು ಇವರು. ಸಂಸಾರದ ಬಂಧನಕ್ಕೆ ಸಿಲುಕದೆ ತಮ್ಮೊಳಗೆ ಬಿತ್ತಿದ ಬ್ರಹ್ಮಬೀಜಗಳನ್ನು ಅಕ್ಷರ ದಾಸೋಹದ ಮೂಲಕ ಜನಮಾನಸಕ್ಕೆ ಹಂಚಿದ ಅಕ್ಷರ ಯೋಗಿಯಾಗಿ ಹೆಸರು ಮಾಡಿದರು. ತಮ್ಮ ಸಿದ್ಧಾಂತದ ಬದುಕು ಳಿತಪ್ಪಿ ಹೋಗದಂತೆ ಬಸವಗಳೈವರನ್ನು ಸಮತೆ-ಸೈರಣೆ-ನಿಷ್ಠೆ-ದೃಢತೆಗಳೆಂಬ ಹಗ್ಗದಿಂದ ಕಟ್ಟಿ ಹಾಕಿ ಮಾನಸ ಕಲ್ಯಾಣದ ಪಥವ ತುಳಿದ ಸಂತರು ಹರ್ಡೆಕರ ಮಂಜಪ್ಪನವರು.

ನಡೆಯುವುದನ್ನು ಮರೆತರೆ ಹೆಜ್ಜೆ ತಪ್ಪುತ್ತದೆ, ಮಾತನಾಡುವದ ಮರೆತರೆ ಮಾತು ತಪ್ಪುತ್ತದೆ, ಬರೆಯುವುದ ಮರೆತರೆ ಪದ ತಪ್ಪುತ್ತದೆ. ಹಾಗೆಯೇ ಆದರ್ಶಗಳನ್ನೇ ಮರೆತರೆ ಜೀವನ ಕ್ರಮವೇ ತಪ್ಪುತ್ತದೆ. ಒಂದು ಆದರ್ಶ ಜೀವನವನ್ನು ಬದುಕುವುದು ಎಂದರೆ ಮಾತನಾಡಿದಷ್ಟು, ಬರೆದಷ್ಟು ಸುಲಭವಾದುದಲ್ಲ.

ಆದರ್ಶದ ನೆರಳಿನಲ್ಲಿ ಮಹಾನ್ ತತ್ವಗಳನ್ನು ರೂಢಿಸಿಕೊಂಡು ಜೀವಿತಾನಧಿಯವರೆಗೂ ಅವುಗಳಿಗೆ ಚ್ಯುತಿ ಬಾರದಂತೆ ಬದುಕಿದ ಶ್ರೀಮಾನ್ ಹರ್ಡೇಕರ ಮಂಜಪ್ಪನವರು ಸಾಕಷ್ಟು ವಿಸ್ಮಯತೆಗಳಿಗೆ ಕಾರಣರಾಗುತ್ತಾರೆ. ಒಬ್ಬ ಸಾಮಾನ್ಯ ವ್ಯಕ್ತಿ ಒಂದು ವಿಶ್ವವಿದ್ಯಾಲಯದೆತ್ತರದಷ್ಟು ಬೆಳೆದು ನಿಲ್ಲುವುದು ಸಾಮಾನ್ಯ ಸಂಗತಿಯೇನಲ್ಲ. ಹೀಗಾಗಿ ಹರ್ಡೇಕರ ಮಂಜಪ್ಪನವರು ಅವರು ಹುಟ್ಟಿದ ದಿನದಂದೆ ಸ್ಮರಣೆ ಮಾಡಿಕೊಳ್ಳುವುದಕ್ಕಷ್ಟೇ ಸೀಮಿತವಾಗುವುದಿಲ್ಲ ಎಂಬುದನ್ನು ಬರೆಯುವ ಹಾಗೂ ಓದುವ ವಲಯ ಸದಾ ಸ್ಮರಣೆಯಲ್ಲಿಟ್ಟುಕೊಳ್ಳಬೇಕಾಗುತ್ತದೆ. ಆಧುನಿಕ ಭಾರತಕ್ಕೆ ಇವರು ನೀಡಿದ ಸಲಹೆ-ವಿಚಾರಗಳು ಸ್ವಾತಂತ್ರ್ಯ ಪೂರ್ವದಷ್ಟು ಹಳೆಯದಾದರೂ ಪ್ರಸ್ತುತ ಕಾಲಘಟ್ಟದ ಸಂದರ್ಭಕ್ಕೆ ಅವುಗಳು ಬೆಳಕಿನ ಕಿರಣಗಳಾಗಿವೆ. ಸಾಧುತ್ವ ಸ್ವಭಾವದಲ್ಲೇ ಪ್ರಖರವಾದ ವಿಚಾರಗಳನ್ನು ಗರ್ಭೀಕರಿಸಿಕೊಂಡಿದ್ದ ಹರ್ಡೇಕರ ಮಂಜಪ್ಪನವರು ಮತ್ತು ಅವರ ವಿಚಾರಧಾರೆಗಳು ಪ್ರಸ್ತುತ ಸಂದರ್ಭಕ್ಕೂ ಅಪ್ಯಾಯಮಾನವಾಗುತ್ತವೆ.

ಸತ್ತು ಹುಟ್ಟಿ ಕೆಟ್ಟವರೆಲ್ಲರು,
ದೇವಲೋಕಕ್ಕೆ ಹೋದರೆಂಬ
ಬಾಲಭಾಷೆಯ ಕೇಳಲಾಗದು.
ಸಾಯದ ಮುನ್ನ ಸ್ವಯವನರಿದಡೆ,
ದೇವನೊಲಿವ ನಮ್ಮ ಗುಹೇಶ್ವರನು.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-189/ವಚನ ಸಂಖ್ಯೆ-606)

ಸ್ವರ್ಗ, ನರಕಗಳ ಕಲ್ಪನೆಯನ್ನೇ ಒಡೆಯುವ ಪ್ರಭುದೇವರ ನುಡಿಗಳು ಮಂಜಪ್ಪನವರಿಗೆ ನೇರವಾಗಿ ಅನ್ವಯಿಸುತ್ತವೆ. ಯಾರು ಹುಟ್ಟಿ ಸಾಯುವುದಕ್ಕೂ ಮೊದಲು ಹುಟ್ಟು, ಸಾವುಗಳ ನಿಜವಾದ ನೆಲೆಯನ್ನು ಅರಿತುಕೊಳ್ಳವರೋ ಅವರು ಮಾತ್ರ ತಮಗೆ ಸಂದ ಬದುಕನ್ನು ಹಸನು ಮಾಡಿಕೊಳ್ಳುತ್ತಾ ಸಾಗುತ್ತಾರೆ. ಒದಗಿ ಬಂದ ಬದುಕನ್ನು ಒಪ್ಪ ಮಾಡಿಕೊಂಡು ತಮ್ಮ ಸಹಚರರಿಗೂ ಸಹ್ಯವಾಗುತ್ತಾರೆ. ತಮ್ಮನ್ನು ತಾವು ಅರಿತುಕೊಂಡು ತಮ್ಮ ನೆಮ್ಮದಿ ಕಾಣುತ್ತಾರೆ. “ಸಾಯದ ಮುನ್ನ ಸ್ವಯವನರಿದಡೆ ದೇವನೊಲಿವ” ಎನ್ನುವ ವಚನದ ಸಾಲುಗಳಿಗೆ ಸಾಕ್ಷಿಯಾಗುತ್ತಾರೆ. ಹರ್ಡೇಕರ ಮಂಜಪ್ಪನವರೂ ಸಹ ಸಾಮಾನ್ಯರಂತೆ ಹುಟ್ಟಿ ಬಂದಿದ್ದಾರೆ. ಆದರೆ ಸ್ವಯನವರಿದುಕೊಂಡು ಅಸಾಮಾನ್ಯರಾಗಿದ್ದಾರೆ. ಭುವಿಯ ಬದುಕನ್ನು ಹಸಿರಾಗಿಸಿಕೊಂಡು ಆಲದಮರದಂತೆ ನೆರಳು ನೀಡುವ ಹೆಮ್ಮರವಾಗಿ ಬೆಳೆದಿದ್ದಾರೆ. ದೇವನೊಲುಮೆಗೆ ಪಾತ್ರರಾಗಿದ್ದಾರೆ. ಇವರ ದಿವ್ಯ ವ್ಯಕ್ತಿತ್ವದ ದರ್ಶನ ಈ ಲೋಕಕ್ಕೆ ಅಷ್ಟಾಗಿ ಕಾಣದಿರಬಹುದು. ಆದರೆ ಆ ದೇವನಿಗೆ ಇವರ ಮಹತ್ಕಾರ್ಯಗಳ ದರ್ಶನವಿದೆ. ಅದಕ್ಕೆಂದೇ ವಿಶ್ವಮಾನವ ಸಂದೇಶ ನೀಡಿದ ನಾಡು ಕಂಡ ಅಪರೂಪದ ಕವಿ ರಸಋಷಿ ಕುವೆಂಪು ಅವರು ಮಂಜಪ್ಪನವರನ್ನು ಅತ್ಯಂತ ಗೌರವಾದರಗಳಿಂದ “ನಮಸ್ಕಾರ” ಎಂಬ ಕವಿತೆಯಲ್ಲಿ ಸ್ಮರಿಸಿಕೊಳ್ಳುತ್ತಾರೆ.

     “ಲೋಕದ ಕಣ್ಣಿಗೆ ನೀ ಬೀಳದಿರಬಹುದು. ಲೋಕ ನಿನ್ನನ್ನು ಲೆಕ್ಕಿಸದಿರಬಹುದು. ಆದರೆ ಜಗದೀಶನ ಕಣ್ಣಲ್ಲೆಲ್ಲಾ ನೀನೇ ತುಂಬಿರುವೆ”

ಎಂದು ಮನದುಂಬಿ ಹೇಳಿದ್ದಾರೆ. ಅಷ್ಟೇ ಅಲ್ಲಾ ಇವರನ್ನು “ಅಜ್ಞಾತ ಮಹಾತ್ಮ” ಎಂದು ಕರೆದಿದ್ದಾರೆ.

ಲೋಕದಂತೆ ಬಾರರು, ಲೋಕದಂತೆ ಇರರು,
ಲೋಕದಂತೆ ಹೋಹರು, ನೋಡಯ್ಯ.
ಪುಣ್ಯದಂತೆ ಬಪ್ಪರು, ಜ್ಞಾನದಂತೆ ಇಪ್ಪರು,
ಮುಕ್ತಿಯಂತೆ ಹೋಹರು, ನೋಡಯ್ಯಾ.
ಉರಿಲಿಂಗದೇವಾ, ನೀವು ಶರಣರು ಉಪಮಾತೀತರಾಗಿ
ಉಪಮಿಸಬಾರದು.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-464/ವಚನ ಸಂಖ್ಯೆ-1255)

ಎಂಬ ಉರಿಲಿಂಗದೇವರ ವಚನದಂತೆ ಮಂಜಪ್ಪನವರು ಪುಣ್ಯದಂತೆ ಬಂದು, ಜ್ಞಾನದಂತೆ ಇದ್ದು ಮುಕ್ತಿಯಂತೆ ಮುಕ್ತರಾದವರು.

ಹರ್ಡೇಕರ ಮಂಜಪ್ಪನವರ ಜನನದ ಕುರಿತು ಇರುವ ಕೆಲವು ತಪ್ಪು ವಿಚಾರಗಳು, ಜಿಜ್ಞಾಸೆಗಳು ಇವರ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆಯಂತಿದ್ದವು. ಇಂತಹ ಊಹಾಪೋಷಿತ ಸಿದ್ಧಾಂತಗಳನ್ನು ಒಡೆದು ಹರ್ಡೇಕರ ಮಂಜಪ್ಪನವರ ತುಂಬು ಕುಟುಂಬದ ಮೇಲೆ ಬೆಳಕು ಚೆಲ್ಲಿ ಮಹದುಪಕಾರ ಮಾಡಿದ ನಾಡಿನ ಖ್ಯಾತ ಸಂಶೋಧಕರಾದ ಡಾ. ವೀರಣ್ಣ ದಂಡೆಯವರನ್ನು ನಾನು ಈ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸ್ಮರಿಸಿಕೊಳ್ಳುತ್ತೇನೆ. ಇದಕ್ಕೆ ಕಾರಣವೂ ಇಲ್ಲದಿಲ್ಲ.

“ತಂದೆಯಿಲ್ಲದ ಕಂದ” ಎಂದು ತಪ್ಪು ತಪ್ಪಾಗಿ ಗ್ರಹಿಸಿ ಕೆಲವರು ತಮಗೆ ತಿಳಿದಂತೆ ವ್ಯಾಖ್ಯಾನಿಸುತ್ತಿದ್ದುದು ಕಂಡು ಬಂದಿದೆ. ನಾನು ಪರಾಮರ್ಶಿಸಿದ ಕೃತಿಗಳಲ್ಲಿಯೂ ಮಂಜಪ್ಪನವರ ಜನನದ ದಿನಾಂಕ, ಇಸ್ವಿ ನಮೂದಾಗಿದ್ದನ್ನು ಬಿಟ್ಟರೆ ಅವರ ತಂದೆಯ ಹೆಸರು ಉಲ್ಲೇಖವಾಗದೇ ಇರುವುದು ಸತ್ಯವಾದ ಸಂಗತಿ. ಇನ್ನೂ ಆಶ್ಚರ್ಯಕರ ಸಂಗತಿಯೆಂದರೆ ಗೂಗಲ್‌ನಲ್ಲಿ ಏನಾದರೂ ಮಾಹಿತಿ ಸಿಗಬಹುದೇನೋ ಎಂದು ಹುಡುಕಾಡಿದಾಗ “ಮಧುಲಿಂಗಪ್ಪ” ನವರು ಇವರ ತಂದೆ ಎಂದು ಉಲ್ಲೇಖವಿದೆ. ಮಧುಲಿಂಗಪ್ಪನವರು ಮಂಜಪ್ಪನವರ ಅಣ್ಣ ಎಂಬುದು ಸತ್ಯವಾದುದು. ಆರ್ಥಿಕವಾಗಿ ತೀರ ಹಿಂದುಳಿದ ಮತ್ತು ಸಾಮಾಜಿಕವಾಗಿಯೂ ನಿರ್ಲಕ್ಷಿತವಾದ ಕುಟುಂಬದಲ್ಲಿ ಜನಿಸಿದ್ದಾರೆ. ಇವರ ಕುಟುಂಬದ ಹಿನ್ನಲೆಗಳ ಬಗ್ಗೆ ವಿಶೇಷ ಮಾಹಿತಿಗಳು ದೊರೆಯುವುದಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ಮಂಜಪ್ಪನವರು ತಂದೆಯವರನ್ನು ಕಳೆದುಕೊಂಡಿದ್ದರು ಮುಂತಾಗಿ ಕೃತಿಗಳಲ್ಲಿ ಉಲ್ಲೇಖವಿದೆ. ಆದರೆ ಇದರಾಚೆಯ ಸತ್ಯ ಬೇರೆಯೇ ಇದೆ. ಅದು ತುಂಬಾ ಮಹತ್ವದ್ದು ಹೌದು.

ಒಮ್ಮೆ ಡಾ. ವೀರಣ್ಣ ದಂಡೆಯವರ ಆಪ್ತ ಮಿತ್ರರಾದ ಡಾ. ಚಂದ್ರಶೇಖರ ಅವರು ದಂಡೆಯವರಿಗೆ ಫೋನ್ ಮಾಡಿ ತಿಳಿಸಿದ ಸಂಗತಿ ಇಲ್ಲಿ ತುಂಬಾ ಮಹತ್ವವಾದುದು “ಮಂಜಪ್ಪನವರ ತಂದೆಯ ಹೆಸರು ಸಖಾರಾಮ ಎಂದೂ ಅವರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು” ಎಂದಷ್ಟೇ ಮಾಹಿತಿ ನೀಡಿ ಈ ವಿಷಯ ತಿಳಿಸಿದ ಮಂಜಪ್ಪನವರ ಸಂಬಂಧಿಕರ ಫೋನ್ ನಂಬರ್ ನೀಡಿ, “ನೀವು ಬೆಂಗಳೂರಿಗೆ ಬನ್ನಿ, ನಾವಿಬ್ಬರೂ ಅವರ ಮನೆಗೆ ಹೋಗಿ ಬರೋಣ” ಎಂದಿದ್ದರು. ದುರದೃಷ್ಟವಶಾತ್ ಅವರು ಕಾಲುಜಾರಿ ಬಿದ್ದು ಕೆಲವು ತಿಂಗಳಲ್ಲಿಯೇ ಮರಣ ಹೊಂದಿದರು. ಆದರೆ ಡಾ. ವೀರಣ್ಣ ದಂಡೆಯವರು ಡಾ. ಚಂದ್ರಶೇಖರ ಅವರು ನೀಡಿದ್ದ ಮಂಜಪ್ಪನವರ ಸಂಬಂಧಿಕರ ಫೋನ್ ನಂಬರ್ ಮೂಲಕ ಅವರನ್ನು ಸಂಪರ್ಕಿಸಿ ಬೆಂಗಳೂರಿಗೆ ಹೋಗಿ ಎಲ್ಲವನ್ನೂ ಕೂಲಂಕುಷವಾಗಿ ಚರ್ಚಿಸಿದರು. ಆ ಸಂಬಂಧಿಕರು ಹೈಕೋರ್ಟ್ ವಕೀಲರಾಗಿದ್ದು ಅವರ ಹೆಸರು ವಕೀಲ ಶ್ರೀ ನರಹರಿ ಫಡಕೆ ಎಂದು. ಆಗ ಅವರು ತಿಳಿಸಿದ ವಿಚಾರ; “ಹರ್ಡೇಕರ ಮಂಜಪ್ಪನವರ ತಂದೆ ಸಖಾರಾಮ ಅವರು ಮೂಲತಃ ಬನವಾಸಿಯವರೆ. ಅವರು ಮಧುಕೇಶ್ವರ ದೇವಾಲಯದ ಆಡಳಿತ ಮಂಡಳಿಯ ಸದಸ್ಯರಾಗಿದ್ದರು. ಮಂಜಪ್ಪನವರ ತಾಯಿ ಮಂಜಮ್ಮನವರು ಮಧುಕೇಶ್ವರ ದೇವಾಲಯದಲ್ಲಿ ನೃತ್ಯ ಸೇವೆ ಸಲ್ಲಿಸುವವರಾಗಿದ್ದರು. ಸಹಜವಾಗಿ ಸಖಾರಾಮ ಮತ್ತು ಮಂಜಮ್ಮನವರಲ್ಲಿ ಪ್ರೀತಿ ಉಂಟಾಗಿ, ಇಬ್ಬರೂ ಗಂಡ-ಹೆಂಡತಿಯರಾಗಿ ಬದುಕಿದರು. ಅವರಿಗೆ ಮಧುಲಿಂಗಪ್ಪ, ಮಂಜಪ್ಪ ಎಂಬ ಇಬ್ಬರು ಗಂಡು ಮಕ್ಕಳಾದರು.

ಸಖಾರಾಮ ಒಬ್ಬ ಜಮೀನ್ದಾರ ಬ್ರಾಹ್ಮಣ. ನೂರಾರು ಎಕರೆ ಜಮೀನು ಹೊಂದಿದ್ದವರು. ಆಗಿನ ಕಾಲಕ್ಕೆ ಎರಡೆರದು ಹೆಂಡತಿಯನ್ನು ಮಾಡಿಕೊಳ್ಳುವುದು ಸಹಜವಾಗಿತ್ತು. ಮಂಜಮ್ಮನವರು ದೇವದಾಸಿ ಕುಟುಂಬಕ್ಕೆ ಸೇರಿದವರು. ದೇವದಾಸಿ ಎಂದರೆ ವೇಶ್ಯೆ, ಸೂಳೆ ಎಂದರ್ಥವಲ್ಲ. ದೇವರಿಗೆ ಸೇವೆ ಸಲ್ಲಿಸುವವರನ್ನು ದೇವದಾಸಿಯರು ಎಂದು ಕರೆಯುವುದು ಪದ್ದತಿ. ಮಂಜಮ್ಮನವರು ಎರಡನೇ ಹೆಂಡತಿಯಾಗಿ ಮರ್ಯಾದೆಯಿಂದಲೇ ಬಾಳಿ ಬದುಕಿದ ಮಹಾನ್ ಸ್ತ್ರೀ.

ಸಖಾರಾಮ ಅವರ ಮೊದಲನೆ ಹೆಂಡತಿ ಶ್ರೀಮತಿ ಗೌರಮ್ಮ. ಸಖಾರಾಮ ಅವರ ಇಬ್ಬರು ಹೆಂಡತಿಯರು ಅನ್ಯೋನ್ಯವಾಗಿದ್ದರು. ಹರ್ಡೇಕರ ಮಂಜಪ್ಪನವರು ಮಗುವಾಗಿದ್ದಾಗ ಬಹಳ ಸುಂದರವಾಗಿದ್ದರತೆ. ಆ ಚಲುವಾದ ಕೂಸನ್ನು ಎತ್ತಿಕೊಂಡು ಶ್ರೀಮತಿ ಗೌರಮ್ಮನವರು ಮುದ್ದಾಡಿಸುತ್ತಿದ್ದರಂತೆ. “ಈ ಚೆಲುವಾದ ಕೂಸು ನನ್ನ ಹೊಟ್ಟಯಲ್ಲಾದರೂ ಹುಟ್ಟಬಾರದಿತ್ತೆ” ಎಂದು ಬಯಸುತ್ತಿದ್ದರಂತೆ. ಅವರ ಇಬ್ಬರು ಹೆಂಡದಿರೂ ಬೇರೆ ಬೇರೆ ಮನೆಯಲ್ಲಿದ್ದರು. ಮಂಜಮ್ಮನವರು ತಾನಿರುವ ಮನೆಯಲ್ಲಿಯೇ ಇದ್ದರು. ಇಬ್ಬರು ಸವತಿಯರ ಸಂಬಧ ಕೊನೆಯವರೆಗೂ ಚೆನ್ನಾಗಿತ್ತು ಆದರ್ಶಪ್ರಾಯವಾಗಿತ್ತು ಎಂದು ನರಹರಿ ಫಡಕೆಯವರೇ ಹೇಳಿದ್ದಾರೆ. ಸಖಾರಾಮ ಅವರ ತಾಯಿಯ ಅಜ್ಜ ಎಂದು ಹೇಳಿ ಸಾಕಷ್ಟು ಮಾಹಿತಿಯನ್ನು ಡಾ. ವೀರಣ್ಣ ದಂಡೆಯವರಿಗೆ ಒದಗಿಸಿದ್ದಾರೆ. ಈ ಸಂಗತಿಗಳನ್ನೆಲ್ಲಾ ಡಾ. ವೀರಣ್ಣ ದಂಡೆಯವರು ಸಚಿತ್ರವಾಗಿ “ತುಂಬು ಕುಟುಂಬದ ಹರ್ಡೇಕರ ಮಂಜಪ್ಪನವರು” ಎಂಬ ತಮ್ಮ ಲೇಖನದಲ್ಲಿ ಸವಿಸ್ತಾರವಾಗಿ ದಾಖಲೆ ಸಹಿತ ಕಟ್ಟಿಕೊಟ್ಟಿದ್ದಾರೆ.

ಈ ಹಿನ್ನೆಲೆಯಿಂದ ಹರ್ಡೇಕರ ಮಂಜಪ್ಪನವರ ಕುಟುಂಬಕ್ಕೊಂದು ಸಚ್ಚಾರಿತ್ರ್ಯದ ಚೌಕಟ್ಟು ಇರುವುದು. ಮಂಜಪ್ಪನವರನ್ನು ಕೌಟುಂಬಿಕ ತಪ್ಪು ಕಲ್ಪನೆಗಳಿಂದ ಬಿಡುಗಡೆಗೊಳಿಸಿ ಹೊಸ ಚಾರಿತ್ರಿಕ ಹಿನ್ನಲೆಯಲ್ಲಿ ಕಟ್ಟಿಕೊಳ್ಳಬೇಕಾಗುತ್ತದೆ. ಹಾಗಾಗಿ ಮಂಜಪ್ಪನವರ ಕುಟುಂಬವು ಸಚ್ಚಾರಿತ್ರದಷ್ಟೇ ಶುದ್ಧವಾದದ್ದು ಎಂಬುದನ್ನು ಗ್ರಹಿಸಿಕೊಳ್ಳಬೇಕಾಗುತ್ತದೆ. ಇವೆಲ್ಲ ಅಧ್ಯಯನದಿಂದ ಹರ್ಡೇಕರ ಮಂಜಪ್ಪನವರು ಬನವಾಸಿಯಲ್ಲಿ ತುಳುಕಾಡಿದ ಬೆಳಕಾಗಿ:

ತ್ಯಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂದುಗ
ಳ್ಗಾಗರಮಾದ ಮಾನಸರೆ ಮಾನಸರಂತವರಾಗಿ
ಪುಟ್ಟಲೇನಾಗಿಯುಮೇನೊ ತೀರ್ದಪುದೆ ತೀರದೊಡಂ
ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು
ನಂದನದೊಳ್ ಬನವಾಸಿ ದೇಶದೊಳ್

ಎಂದು ಕನ್ನಡದ ವಾಲ್ಮೀಕಿಯೆನಿಸಿಕೊಂಡ ಪಂಪನು ಬಣ್ಣಿಸಿದ ಶಿರಸಿ ತಾಲೂಕಿನ ಬನವಾಸಿಯಲ್ಲಿ 1886 ನೇ ಇಸ್ವೀ ಫೆಬ್ರವರಿ ತಿಂಗಳಿನ 18 ರಂದು ಸಖಾರಾಮ ಮತ್ತು ಮಂಜಮ್ಮ ದಂಪತಿಗಳ ದರದಲ್ಲಿ ಜನಿಸುತ್ತಾರೆ ಎಂದು ಹೊಸ ಚರಿತ್ರೆಯನ್ನು ಸಂತಯೋಗಿ ಹರ್ಡೇಕರ ಮಂಜಪ್ಪನವರ ಬಗ್ಗೆ ಬರೆಯಬೇಕಾಗುತ್ತದೆ.

ಪೂಜ್ಯ ಶ್ರೀ ಹರ್ಡೇಕರ ಮಂಜಪ್ಪನವರು ಹುಟ್ಟಿದ್ದು ಬನವಾಸಿಯಾದರೂ ಅವರ ಕಾರ್ಯಕ್ಷೇತ್ರಗಳು ದಾವಣಗೆರೆ ಜಿಲ್ಲೆ ಮತ್ತು ವಿಜಯಪುರ ಜಿಲ್ಲೆಗಳಾಗಿವೆ. ಬನವಾಸಿ ಮಲೆನಾಡಿನ ಪ್ರಕೃತಿ ರಮ್ಯ ತಾಣದಲ್ಲಿರುವ ಸುಂದರ ಪ್ರದೇಶ. ಇಲ್ಲಿ ಮಂಜಪ್ಪನವರು ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ನಂತರ ಶಿರಸಿಗೆ ಹೋಗಿ ಅಣ್ಣ ಮಧುಲಿಂಗಪ್ಪನವರ ಆಶ್ರಯದಲ್ಲಿದ್ದುಕೊಂಡು ಮುಂದಿನ ವಿದ್ಯಾಬ್ಯಾಸ ಪೂರೈಸಿ ಮೊದಲ ಹಂತದಲ್ಲೇ ಮುಲ್ಕಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಆಗ ಅವರಿಗೆ ಹದಿನೇಳು ವರ್ಷ ವಯಸ್ಸು. ಇವರು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿಷಯ ಶಾಲೆಯ ಮುಖ್ಯ ಮಾಸ್ತರರಾಗಿದ್ದ ಸಂನಬಸವಯ್ಯನವರ ಗಮನ ಸೆಳೆಯಿತು. ಅವರು ತಮ್ಮ ಶಾಲೆಯಲ್ಲಿ ಇವರನ್ನು ಏಳು ರೂಪಾಯಿಗಳ ಸಂಬಳ ಕೊಟ್ಟು ಶಿಕ್ಷಕರನ್ನಾಗಿ ನೇಮಿಸಿಕೊಂಡರು. ಇದು ಅವರು ಮಕ್ಕಳ ಸಾಹಿತ್ಯ ರಚಿಸಲು ಒಂದು ಸುವರ್ಣ ಅವಕಾಶವಾಯಿತು. ಇವರಿಗೆ ಸಂಸ್ಕೃತ ಕಲಿತು ಶಾಸ್ತ್ರಿ ಎನಿಸಿಕೊಳ್ಳುವ ಹುಚ್ಚು ಇದ್ದಿತ್ತು. ಆ ಬಯಕೆ ಅದೆಷ್ಟು ತೀವ್ರವಾಗಿತ್ತೆಂದರೆ ಮೈಸೂರು ಸ್ಟಾರ ಪತ್ರಿಕೆಗೆ ಸ್ವದೇಶಿ ಪದಾರ್ಥಗಳನ್ನೇ ಬಳಸಿ ಎಂಬ ವಿಷಯದ ಮೇಲೆ ಕವಿತೆಯೊಂದನ್ನು ಬರೆದು ಅದರ ಕೆಳಗೆ “ಮಂಜುನಾಥ ಶಾಸ್ತ್ರಿ” ಎಂದು ಹೆಸರು ಹಾಕಿ ಕಳುಹಿಸಿದ್ದರಂತೆ. “ಅಂತೂ ಒಮ್ಮೆ ಲೆಖನದಲ್ಲಿ ನಾನು ಶಾಸ್ತ್ರಿಯಾಗಿಯೇ ಬಿಟ್ಟಿದೇನೆ” ಎಂದು ಸ್ವತಃ ಮಂಜಪ್ಪನವರೇ “ನನ್ನ ಕಳೆದ 30 ವರ್ಷಗಳ ಕಾಣಿಕೆ” ಕೃತಿಯಲ್ಲಿ ದಾಖಲಿಸಿಕೊಂಡಿದ್ದಾರೆ. ಆದರೆ ಮುಂದೆ ಇವರು ಶಾಸ್ತ್ರಿಗಳಾಗದೇ ಶರಣಾಗಿದ್ದು ಕನ್ನಡಿಗರ ಸುದೈವ.

ಹರ್ಡೇಕರ ಮಂಜಪ್ಪನವರು ಮತ್ತು ಅವರ ಸಹೋದರ ಮಧುಲಿಂಗಪ್ಪನವರು ವಂಗಭಗ ಚಳುವಳಿ ಯಿಂದ ಪ್ರೇರೇಪಿತರಾಗುತ್ತಾರೆ. ಕೇಸರಿ ಪತ್ರಿಕೆಯ ಪ್ರಭಾವಕ್ಕೂ ಒಳಗಾಗುತ್ತಾರೆ. ಮಧುಲಿಂಗಪ್ಪನವರು ತಾವು ಮಾಡುತ್ತಿದ್ದ ಕೆಲಸಕ್ಕೆ ರಾಜೀನಾಮೆ ನೀಡುತ್ತಾರೆ. ತಾವಿಬ್ಬರೂ ಸೇರಿ ತಮ್ಮದೇ ಒಂದು ಪತ್ರಿಕೆ ತರಲು ನಿರ್ಧರಿಸುತ್ತಾರೆ. ಕೈಯಲ್ಲಿ ಕಾಸಿಲ್ಲ, ಸ್ವಂತದ್ದೊದು ಮುದ್ರಣಾಲಯವಿಲ್ಲ. ಪ್ರೆಸ್‌ನ ತಿಳುವಳಿಕೆಯೂ ಇಲ್ಲ. ಖಾಲಿ ಕಿಸೆ, ತುಂಬಿದ ತಲೆ, ದೃಢ ನಿರ್ಧಾರದ ಗಟ್ಟಿ ಗುಂಡಿಗೆ ಹೊತ್ತು ನಡೆದವರಿಗೆ ಲಿಂ. ಹಾನಗಲ್ಲ ಕುಮಾರಸ್ವಾಮಿಗಳವರ ಆಶೀರ್ವಾದ, ಕೇಸರಿ ಶೇಷಗಿರಿ ರಾಯರ ಪ್ರೋತ್ಸಾಹ ದಾವಣಗೆರೆಯ ದೊಡ್ಡ ಮನುಷ್ಯರಾದ ಶ್ರೀ ಮಾಗಾನಹಳ್ಳಿ ದೊಡ್ಡಪ್ಪನವರ ಆಶ್ವಾಸನೆಯೇ ಆಸರೆಯಾಯಿತು. ಮೂರು-ನಾಲ್ಕು ತಿಂಗಳ ಸತತ ಪ್ರಯತ್ನದಿಂದ ಕ್ರಿ.ಶ. 1906 ರ ಸೆಪ್ಟಂಬರ್ ತಿಂಗಳಿನಲ್ಲಿ ಧರ್ನುಧಾರಿ ಪತ್ರಿಕೆ ಪ್ರಕಟವಾಯಿತು. ಆಗ ಅವರಿಗೆ 21 ವರ್ಷ ವಯಸ್ಸು. ಇಲ್ಲಿಂದ ಪ್ರಾರಂಭವಾದ ಮಂಜಪ್ಪನವರ ಅಕ್ಷರಯಜ್ಞ ಅವರ ಕೊನೆಯುಸಿರಿನವರೆಗೂ ನಿರಂತರವಾಗಿ ನಡೆದೇ ಇತ್ತು. ಅಬಾಲ ವೃದ್ಧರಿಂದ ಮಹಿಳೆಯವರೆಗೂ ಎಲ್ಲಾ ಪ್ರಕಾರದ ಅಕ್ಷರ ಪುಷ್ಪ ಮಾಲೆಗಳನ್ನು ದಣಿವರೆಯದೇ ಕಟ್ಟುತ್ತಲೇ ಸಾಗಿದ ಅಕ್ಷರಯೋಗಿ, ಪುಸ್ತಕ ಪ್ರೇಮಿ ಇವರಾದರು. ಮಂಜಪ್ಪನವರು ಪ್ರಕಟಿಸಿದ ಒಟ್ಟು ಪತ್ರಿಕೆಗಳು ನಾಲ್ಕು. ಮೊದಲನೆಯದೇ “ಧನುರ್ಧಾರಿ” ಇದು ವಾರ ಪತ್ರಿಕೆಯಾಗಿದ್ದು 1906 ರಿಂದ 1915 ರ ವರೆಗೆ ಪ್ರಕಟವಾಯಿತು. ಎರಡನೆಯದು ಖಾದಿ ವಿಜಯ ಇದು ಮಾಸಪತ್ರಿಕೆಯಾಗಿದ್ದು 1928 ರಿಂದ 1929 ವರೆಗೆ ನಡೆಯಿತು. ಮೂರನೆಯದು ಉದ್ಯೋಗ ಇದು ಸಹ ಮಾಸ ಪತ್ರಿಕೆಯಾಗಿದ್ದು 1930 ರಿಂದ 1932 ರ ವರೆಗೆ ನಡೆಯಿತು. ನಾಲ್ಕನೆಯದು ಶರಣ ಸಂದೇಶ ಇದು ವಾರ ಪತ್ರಿಕೆಯಾಗಿದ್ದು 1931 ರಿಂದ 1947 ರ ವರೆಗೆ ಸುಧೀರ್ಘ ಅವಧಿ ನಡೆಯಿತು. ಇವರು ಸು. 84 ಕೃತಿಗಳನ್ನು ರಚಿಸಿದ್ದಾರೆ. ಇಷ್ಟೊಂದು ಸಂಖ್ಯೆಯ ಕೃತಿಗಳನ್ನು ಬರೆದದ್ದು ಒಂದು ದಾಖಲೆಯೇ ಸರಿ. ಹರ್ಡೇಕರ ಮಂಜಪ್ಪನವರನ್ನು ಕನ್ನಡದ ಮೊದಲ ಆತ್ಮಕಥೆಯ ಲೇಖಕರೆಂದು ಕನ್ನಡ ಸಾರಸ್ವತ ಲೋಕ ಗುರುತಿಸಿದೆ.

12 ನೇ ಶತಮಾನದ ಬಸವಾದಿ ಶಿವಶರಣರು ನಡೆಸಿದ ಸಮಸಮಾಜ ಕಟ್ಟುವ ಆಂದೋಲನದಿಂದ ಹರ್ಡೇಕರ ಮಂಜಪ್ಪನವರು ತುಂಬಾ ಪ್ರಭಾವಿತರಾಗಿದ್ದರು. ಸುಮಾರು 21 ಕ್ಕೂ ಹೆಚ್ಚು ಕೃತಿಗಳನ್ನು ಬಸವಾದಿ ಶಿವಶರಣ-ಶರಣೆಯರಿಗಾಗಿ ಮೀಸಲಾಗಿಟ್ಟಿದ್ದಾರೆ.

  1. ಅಕ್ಕನ ಉಪದೇಶ.
  2. ಅಣ್ಣನವರ ಅರ್ಪಣ ಯೋಗ.
  3. ಅರವತ್ತಮೂರು ಪುರಾತನರ ಚರಿತ್ರೆ.
  4. ಬಸವ ಚರಿತ್ರೆ.
  5. ಬಸವ ಬೋಧಾಮೃತ.
  6. ಅಣ್ಣನ ಕ್ರಾಂತಿ.
  7. ಕಾಯಕವೇ ಕೈಲಾಸ.
  8. ಚೆನ್ನಬಸವಣ್ಣನವರ ಸಂದೇಶ.
  9. ಪ್ರಭುದೇವರ ಕಥೆ.
  10. ಬಸವಣ್ಣನವರ ಚರಿತ್ರೆ.
  11. ಬಸವಣ್ಣನವರ ನೈತಿಕ ವಚನಗಳು.
  12. ಭಕ್ತಿಯ ಬೆಳಕು.
  13. ಮಹಾನುಭಾವರಾದ ಬಸವಣ್ಣನವರ ಉಪಮೆಗಳು.
  14. ಲಿಂಗಪೂಜೆಯ ಐತಿಹಾಸಿಕ ವಿವೇಚನೆ.
  15. ಲಿಂಗವತರ ಪ್ರಾಚೀನತೆ.
  16. ಬಸವ ಭಕ್ತಿ.
  17. ಬಸವ ಸಂದೇಶ.
  18. ಚನಕಾರರ ಸಮಾಜ ರಚನೆ.
  19. ಶರಣ ಬಸವೇಶ್ವರ ಚರಿತ್ರೆ.
  20. ಬಸವ ಮಹಾನುಭಾವನ ಶುದ್ಧಿ ಮತ್ತು ಸಂಘಟನೆ.
  21. ಸಿದ್ಧರಾಮ ಶಿವಯೋಗಿಗಳ ಉಪದೇಶ.

ಹೀಗೆ ಹರ್ಡೇಕರ ಮಂಜಪ್ಪನವರ ಕೃತಿಗಳು ಬಸವಾದಿ ಶಿವಶರಣದ ತತ್ವ ಸಿದ್ಧಾಂತ ಸಾರುವ ಮಹತ್ವದ ಕೃತಿಗಳಾಗಿವೆ.

ಹರ್ಡೇಕರ ಮಂಜಪ್ಪನವರು ಸ್ವತಂತ್ರ ವಿಚಾರವಾದಿಗಳಾಗಿದ್ದರು. ಅವರೆಂದೂ ಅಂಧಾನುಕರಣೆಯತ್ತ ಮನಸ್ಸು ಮಾಡಲಿಲ್ಲ. ಕಟುವಾದ ಸತ್ಯವನ್ನು ಬಿಟ್ಟು ಪ್ರಿಯವಾದ ಸುಳ್ಳನ್ನು ಹೇಳಲಿಲ್ಲ. ಇದಕ್ಕೆಲ್ಲಾ ಅವರು ಬಸವಣ್ಣನವರ ವಿಚಾರಗಳಿಂದ ಪ್ರಭಾವಿತರಾಗಿದ್ದರು ಎಂಬುದು ಸತ್ಯವಾದ ಮಾತು. ಇವರು ಬಸವಣ್ಣನವರ ವಚನಗಳ ಅಧ್ಯಯದಿಂದ ಪ್ರೇರಿತರಾದರು. ಸುವರ್ಣ ಪುಷ್ಪಕ್ಕೆ ಸುವಾಸನೆ ಸೇರುವಂತೆ ಅವರಿಗೆ ಮಾರ್ಗದರ್ಶಕರಾಗಿ ಅಂದಿನ ದಾವಣಗೆರೆಯ ವಿರಕ್ತಮಠದ ಪೂಜ್ಯರಾದ ಮೃತ್ಯುಂಜಯ ಮಹಾಸ್ವಾಮಿಗಳು ದೊರೆತರು. ಮೃತ್ಯುಂಜಯಪ್ಪಗಳು ಬಸವ ಪ್ರೇಮಿಗಳು. ಇವರಿಬ್ಬರ ಸಮಾಗಮ ರಾಮಕೃಷ್ಣ ಪರಮಹಂಸ-ವಿವೇಕಾನದರತೆ ಇತ್ತು. ಇಬ್ಬರೂ ಸಮಾ ಮನಸ್ಕರಾಗಿದ್ದರು.

ದಿನಾಂಕ 26.06.1911 ರಂದು ದಾವಣಗೆರೆಯ ವಿರಕ್ತಮಠದಲ್ಲಿ ಭಜನಾಸಂಘ ಪ್ರಾರಂಭವಾಗಿ ಪ್ರತಿ ಸೋಮವಾರ ಸಾಯಂಕಾಲ ಶ್ರೀಮಠದಲ್ಲಿ ನಿಜಗುಣ ಶಿವಯೋಗಿಗಳ, ಸರ್ಪಭೂಷಣ ಶಿವಯೋಗಿಗಳ ರಚನೆಗಳ ಭಜನೆ ಮಂಜಪ್ಪನವರ ಮತ್ತು ಪೂಜ್ಯರ ಸಲಹೆಯ ಮೇರೆಗೆ ನಡೆಯಲಾರಂಭಿಸಿದವು. ಕ್ರಮೇಣ ಮಂಜಪ್ಪನವರಿಗೆ ಬಸವ ಜಯಂತಿಯನ್ನು ಆಚರಿಸುವ ಆಲೋಚನೆಯೂ ಹುಟ್ಟಿತು. ಇದಕ್ಕಾಗಿ ಇವರು ಅತ್ಯಂತ ಶ್ರಮವಹಿಸಿ ಬಸವಣ್ಣನವರ ಜನ್ಮದಿನವನ್ನು ವಿದ್ವಾಂಸರ ವಲಯದಿಂದ ತಿಳಿದುಕೊಂಡರು. ಅಷ್ಟೇ ಅಲ್ಲದೆ ಮುಂದುವರೆದು 1913 ವೈಶಾಖ ಶುದ್ಧ 4, ರೋಹಿಣಿ ನಕ್ಷತ್ರದಲ್ಲಿ ದಾವಣಗೆರೆಯಲ್ಲಿ ಪ್ರಪ್ರಥಮ “ಬಸವ ಜಯಂತ್ಯೋತ್ಸವ” ಮಾಡಿದರು.

ಅಂದು ಅವರು ಹಚ್ಚಿದ ಬಸವ ಜಯಂತಿಯ ಜ್ಯೋತಿ ಎಷ್ಟು ಬೆಳದಿದೆ ಎಂದರೆ ಗ್ರಾಮ, ನಗರ, ಪಟ್ಟಣ, ದೇಶ, ವಿದೇಶಗಳಲ್ಲಿಯೂ ಮಾತ್ರವಲ್ಲದೆ ಕರ್ನಾಟಕ ಸರ್ಕಾರ ಮಟ್ಟದಲ್ಲಿ ಬಸವ ಜಯಂತಿಯ ಆಚರಣೆ ಬಹು ಸಡಗರದಿಂದ ಬಹು ವಿಜೃಂಭಣೆಯಿದ ನಡೆಯುತ್ತಿದೆ. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಇದರ ಹರಿಕಾರರು ಹರ್ಡೇಕರ ಮಂಜಪ್ಪನವರು ಮತ್ತು ಪೂಜ್ಯ ಮೃತ್ಯುಂಜಯ ಮಹಾಸ್ವಾಮಿಗಳು ಎಂಬುದನ್ನು ನಾವು ಮರೆಯಬಾರದು.

ಬಸವಣ್ಣನವರ ಕುರಿತು ಅಪಾರವಾದ ಭಕ್ತಿ ಗೌರವ ಹೊಂದಿದ್ದ ಮಂಜಪ್ಪನವರು ಬಸವ ಜಯಂತಿಯ ಸಾವಿರಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಸವಾದಿ ಪ್ರಮಥರ ವಿಚಾರಧಾರೆಗಳನ್ನು ಮನಸಾರೆ ದಣಿವರಿಯದೆ ತಮ್ಮ ಉಪನ್ಯಾಸಗಳ ಮೂಲಕ ಜನಮಾನಸಕ್ಕೆ ತಲುಪಿಸಿದರು. ಬಸವ ಚರಿತ್ರೆ, ಬಸವಬೋಧಾಮೃತ ಕೃತಿಗಳನ್ನು ಬರೆದರು. ಬಸವಣ್ಣನವರ ಆಯ್ದ ನೂರೆಂಟು ವಚನಗಳು ಎಂಬ ಕಿರುಪುಸ್ತಕ ಮಾಡಿ ಪ್ರಕಟಿಸಿ ಲಕ್ಷಾಂತರ ಜನರಿಗೆ ಉಚಿತವಾಗಿ ಹಂಚಿದರು.

“ಶರಣ ಸಂದೇಶ” ಎಂಬ ಅಭಿಯಾನ ಪ್ರಾರಂಭಿಸಿ ಹಳ್ಳಿಯಿಂದ-ಪಟ್ಟಣದವರೆಗೂ ಶರಣರ ತತ್ವ ಸಿದ್ಧಾಂತಗಳು ತಲುಪುವಂತೆ ಅವತ್ತಿನ ದಿನಮಾನದಲ್ಲಿ ಮಾಡಿದ್ದು ಮಂಜಪ್ಪನವರ ಶ್ರೇಯಸ್ಸು. ಇದಲ್ಲದೆ “ಬಸವೇಶ್ವರ ಸೇವಾದಳ” ಎಂಬ ಒಂದು ಸ್ವಯಂ ಸೇವಕ ದಳವನ್ನು ತಯಾರು ಮಾಡಿ ಬೆಳಗಾವಿಯ ರಾಷ್ಟ್ರೀಯ ಕಾಂಗ್ರೇಸ್ ಅಧಿವೇಶನಕ್ಕೆ ಕರೆದೊಯ್ದರು. “ಸತ್ಯಾಗ್ರಹಿ ಬಸವೇಶ್ವರ” ಎಂಬ ಒಂದು ಚಿಕ್ಕ ಪುಸ್ತಕವನ್ನು ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ಶ್ರೀ ಭಿಡೆ ಲಕ್ಷಣರಾಯರಿಂದ ಬರೆಯಿಸಿ ಎಲ್ಲರಿಗೂ ಹಂಚಿದರು. ಮಹಾತ್ಮಾ ಗಾಂಧೀಜಿಯವರಿಗೂ ಬಸವಣ್ಣನವರ ವಿಷಯ ವಿವರಿಸಿ ಅವರೂ ಸಹ ಬಸವಣ್ಣನವರ ವಿಚಾರಧಾರೆಗಳಿಗೆ ಮನಸೋಲುವಂತೆ ಮಾಡಿದರು. ಹರ್ಡೇಕರ ಮಂಜಪ್ಪನವರು ಭಾರತದ ಸ್ವಾತಂತ್ರಕ್ಕಾಗಿ, ಕರ್ನಾಟಕ ಏಕೀಕರಣಕ್ಕೆ ದುಡಿದಂತೆ ಬಸವಣ್ಣನವರು ಕಟ್ಟಿದ ಸರ್ವಾಂಗ ಸುಂದರ ಸಮಾಜವನ್ನು ಮತ್ತೊಮ್ಮೆ ಮೂಡಿಸಲು ಶ್ರಮಿಸಿದರು.

ತಮ್ಮ ತತ್ವ ಸಿದ್ಧಾಂತಗಳಿಗೆ ಹರ್ಡೇಕರ ಮಂಜಪ್ಪನವರು ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಅಂಗೀಕರಿಸಿಕೊಂಡಿದ್ದರು. ಅದನ್ನು ಸ್ವತಃ ಮಂಜಪ್ಪನವರ ಮಾತುಗಳೇ ಪ್ರತಿನಿಧಿಸುತ್ತವೆ;

ನನಗೆ ಸತ್ಯವೆಂದು ತೋರಿದ, ನನ್ನ ಸ್ವಭಾವಕ್ಕನುಗುಣವಾದ ಕಾರ್ಯಗಳನ್ನು ನಿರ್ದಾಕ್ಷಣ್ಯವಾಗಿ ಮಾಡುವುದರ ಕಡೆಗೆ ನನ್ನ ಒಲವು. ಅದರಿಂದ ಅನೇಕ ಸಲ ನನ್ನ ಆಪ್ತರೂ ವಿರೋಧ ಮಾಡಿದುದುಂಟು. ನನ್ನ ಕಾರ್ಯದಲ್ಲಿ ಬಸವಣ್ಣನವರ ಈ ಕೆಳಗಿನ ಎರಡು ವಚನಗಳು ನನಗೆ ಉತ್ಸಾಹವನ್ನು, ಸಾಹಸವನ್ನು ಉಂಟು ಮಾಡುವಂತಹವುಗಳಾಗಿವೆ. ಆದುದರಿಂದ ಇವುಗಳಲ್ಲಿ ಮೊದಲನೆಯದನ್ನು ನಾನು ನನ್ನ ಶರಣ ಸಂದೇಶ ಪತ್ರಿಕೆಯ ಶಿರೋಭಾಗದಲ್ಲಿಟ್ಟುಕೊಂಡಿದ್ದೇನೆ. ಎರಡನೆಯದು ನನ್ನ ಸತ್ಯ, ಧೈರ್ಯ, ಸ್ವಭಾವಕ್ಕೆ ನಿತ್ಯ ಜಪಿಸುತ್ತೇನೆ.

ಎಂದಿದ್ದಾರೆ.

ಆ ವಚನಗಳೇ ಇವುಗಳು;

ನ್ಯಾಯನಿಷ್ಠುರಿ; ದಾಕ್ಷಿಣ್ಯಪರ ನಾನಲ್ಲ,
ಲೋಕವಿರೋಧಿ; ಶರಣನಾರಿಗಂಜುವನಲ್ಲ,
ಕೂಡಲಸಂಗಮದೇವರ ರಾಜತೇಜದಲ್ಲಿಪ್ಪನಾಗಿ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-204/ವಚನ ಸಂಖ್ಯೆ-754)

ಜೋಳವಾಳಿಯಾನಲ್ಲ,
ವೇಳೆವಾಳಿಯವ ನಾನಯ್ಯಾ.
ಹಾಳುಗೆಟ್ಟೋಡುವ ಆಳು ನಾನಲ್ಲವಯ್ಯಾ.
ಕೇಳು, ಕೂಡಲಸಂಗಮದೇವಾ,
ಮರಣವೆ ಮಹಾನವಮಿ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-190/ವಚನ ಸಂಖ್ಯೆ-699)

ಬಸವ ತತ್ವ ಅಪ್ಪಿಕೊಂಡ ಮಂಜಪ್ಪನವರ ಕೆಲವು ವಿಚಾರಗಳು:

  1. ಹರ್ಡೇಕರ ಮಂಜಪ್ಪನವರು ಜನರ ಕರ್ತೃತ್ವ, ಕರ್ಮ, ಅದರ ಫಲ ಮತ್ತು ಅವುಗಳ ಸಂಯೋಗ ಇವುಗಳಿಗೆ ದೇವರೇನೂ ಸಂಬಧವಿಲ್ಲ. ಪ್ರಕೃತಿಯ ಸ್ವಭಾವದಿಂದ ಇವುಗಳು ನಡೆಯುತ್ತವೆ. ವೇದಾದಿ ಗ್ರಂಥಗಳು ದೇವರಿಂದ ರಚಿತವಾದವುಗಳು, ಆ ಗ್ರಂಥಗಳತೆ ನಡೆದರೆ ಸುಖ ಮತ್ತು ಸ್ವರ್ಗಗಳು ದೊರೆಯುತ್ತವೆ, ಅವುಗಳಿಗೆ ವಿರೋಧವಾಗಿ ನಡೆದರೆ ದುಃಖ ಮತ್ತು ನರಕ ಸಂಭವಿಸುತ್ತವೆ ಎಂದು ನಾನು ತಿಳಿದಿಲ್ಲ.

ದೇವಲೋಕ ಮತ್ರ್ಯಲೋಕವೆಂಬುದು ಬೇರಿಲ್ಲ ಕಾಣಿರೋ!
ಸತ್ಯವ ನುಡಿವುದೇ ದೇವಲೋಕ,
ಮಿಥ್ಯವ ನುಡಿವುದೇ ಮತ್ರ್ಯಲೋಕ.
ಆಚಾರವೆ ಸ್ವರ್ಗ, ಅನಾಚಾರವೆ ನರಕ.
ಕೂಡಲಸಂಗಮದೇವಾ, ನೀವೆ ಪ್ರಮಾಣು.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-65/ವಚನ ಸಂಖ್ಯೆ-239)

ಎಂಬ ಬಸವಣ್ಣನವರ ಈ ವಚನ ತತ್ವಕ್ಕೆ ಬದ್ಧರಾಗಿರುವೆ ಎಂದಿದ್ದಾರೆ.

  1. ಲಿಂಗಪೂಜೆಯ ವಿಚಾರವಾಗಿ ಮಂಜಪ್ಪನವರು ಹೇಳುವ ವಿಚಾರವೆಂದರೆ ನಮಗೆ ತೋರುವ ಈ ವಿಶ್ವದ ಒಂದು ಚಿಹ್ನೆ ಇಷ್ಟಲಿಂಗ. ವಿಶ್ವದ ಅನುಸಂಧಾನವೇ ಲಿಂಗಪೂಜೆ. ಲಿಂಗದ ಮೂಲಕವಾಗಿ ವಿಶ್ವಭಾವನೆಯನ್ನು ಬಲಿಸಿ ಮನಸ್ಸು ಅದರಲ್ಲಿ ಬೆರೆತು ಹೋಗುವಂತೆ ಮಾಡುವುದೇ ಲಿಂಗಪೂಜೆಯ ಫಲ.

ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ,
ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ,
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ,
ಕೂಡಲಸಂಗಮದೇವಯ್ಯಾ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-202/ವಚನ ಸಂಖ್ಯೆ-744)

ಎಂಬ ಬಸವಣ್ಣನವರ ವಚನವು ನನ್ನ ಲಿಂಗಪೂಜೆಯ ಗುಟ್ಟು ಎಂದಿದ್ದಾರೆ.

  1. ಲಿಂಗಪೂಜೆಯ ಫಲವನ್ನು ಈ ಕೆಳಗಿನ ವಚನವು ಸೂಚಿಸುವುದೆಂದು ನನ್ನ ತಿಳುವಳಿಕೆ; ಎಂದಿರುವ ಮಂಜಪ್ಪನವರು ಅದರಧ್ಯೋತಕವಾಗಿ ಈ ಕೆಳಗಿನ ವಚನವನ್ನು ಸ್ಮರಿಸಿದ್ದಾರೆ.

ಜಗವ ಸುತ್ತಿಪ್ಪುದು ನಿನ್ನ ಮಾಯೆಯಯ್ಯಾ,
ನಿನ್ನ ಸುತ್ತಿಪ್ಪುದು ಎನ್ನ ಮನ ನೋಡಯ್ಯಾ.
ನೀನು ಜಗಕ್ಕೆ ಬಲ್ಲಿದನು,
ಆನು ನಿನಗೆ ಬಲ್ಲಿದನು, ಕಂಡಯ್ಯಾ.
ಕರಿಯು ಕನ್ನಡಿಯೊಳಗಡಗಿದಂತಯ್ಯಾ,
ಎನ್ನೊಳಗೆ ನೀನಡಗಿದೆ ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-255/ವಚನ ಸಂಖ್ಯೆ-904)

  1. ಪುನರ್ಜನ್ಮದಲ್ಲಿ ನಂಬಿಕೆ ಇಟ್ಟುಕೊಳ್ಳದ ಶರಣ ಹರ್ಡೇಕರ ಮಂಜಪ್ಪನವರು ಶಿವಶರಣರಂತೆ ನಡೆ, ಇದೇ ಜನ್ಮ ಕಡೆ ಎಂಬ ನಿಲುವಿನವರು. ಅದು ಸಹ ಅವರಿಗೆ ಬಸವಾದಿ ಶರಣರಿಂದಲೇ ಪ್ರಣೀತವಾದುದು. ಅದು ಅವರ ಮಾತುಗಳನ್ನೇ ಅಭಿವ್ಯಕ್ತವಾಗಿದೆ; ನಿರ್ವಿಷಯಿಯಾದ ಜೀವವು ದೇಹವನ್ನು ಬಿಟ್ಟೊಡನೆಯೇ ವಿಶ್ವದಲ್ಲಿ ಬೆರೆತು ಹೋಗುವುದು. ವಿಶ್ವತತ್ವಗಳಲ್ಲಿ ಜೀವವು ಹಾಗೆ ಬೆರೆಯುವುದಕ್ಕೆ ಮನಸ್ಸು ವಿಶ್ವಾನುಸಂದಾನದಲ್ಲಿಯೇ ನಿರತವಾಗಬೇಕು. ಬಸವಾದಿ ಶಿವಶರಣರು ಇದೇ ತತ್ವವನ್ನೇ ಬೋಧಿಸಿದ್ದಾರೆಂದು ನನ್ನ ತಿಳುವಳಿಕೆ. ಲಿಂಗಾಯತ ಮತತತ್ವದಂತೆ ನಡೆದವರಿಗೆ ಪುನರ್ಜನ್ಮವಿಲ್ಲವೆಂದು ಹೇಳುತ್ತಿರುವುದರ ಅಭಿಪ್ರಾಯವು ಹೀಗೆಂದೇ ನನ್ನ ಗ್ರಹಿಕೆ. ಹೀಗಾಗಿ ಬಸವಣ್ಣನವರು ಈ ಕೆಳಗಿನ ವಚನವು ಪುನರ್ಜನ್ಮದ ನನ್ನ ತಿಳುವಳಿಕೆಯನ್ನು ದೃಢಗೊಳಿಸಿತು, ಎಂದಿದ್ದಾರೆ.

ದೇವಲೋಕ ಮತ್ರ್ಯಲೋಕವೆಂಬ ಸೀಮೆಯುಳ್ಳನ್ನಕ್ಕ
ಕೇವಲ ಶರಣನಾಗಲರಿಯ.
ಸತ್ತು ಬೆರಸಿಹೆನೆಂದಡೆ ಕಬ್ಬಿನ ತುದಿಯ ಮೆಲಿದಂತೆ
ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-264/ವಚನ ಸಂಖ್ಯೆ-924)

ಎಂಬ ಅವರ ವಿಶ್ವಾಸ ಬಸವಾಧಾರಿತವಾಗಿತ್ತು.

  1. ಮನುಷ್ಯನಿಗೆ ಜಗತ್ತಿನ ಎಲ್ಲ ಸೌಲಭ್ಯಗಳನ್ನು ಅನುಭವಿಸಲು ಸಮಾನವಾದ ಅಧಿಕಾರವಿರಬೇಕು. ದೇಶ, ಜಾತಿ, ಪಂಥಗಳ ವ್ಯತ್ಯಾಸಗಳಿಂದ ಆತನು ಜನಾಂಗದಲ್ಲಿ ವಾಸಿಸಲು ಹೆಚ್ಚು-ಕಡಿಮೆ ಅಧಿಕಾರಗಳುಳ್ಳವನಾಗಬಾರದು. ಸ್ತ್ರೀಪುರುಷರಲ್ಲಿ ಸಮಾನವಾದ ಧಾರ್ಮಿಕ, ಸಾಮಾಜಿಕ ಸ್ವಾತಂತ್ರಗಳಿರಬೇಕು. ಜನ್ಮ ವಿಶಿಷ್ಟ ಜಾತಿಗಳಾಗಲಿ ಬ್ರಾಹ್ಮಣಾದಿ ವರ್ಣಗಳಾಗಲಿ ಸಮಂಜಸವಾದವುಗಳಲ್ಲ. ಅವು ಜನಾಂಗಕ್ಕೆ ಹಿತಕರವೂ ಅಲ್ಲ. ಅಂತೆಯೇ ಬಸವಣ್ಣನವರ ಈ ಕೆಳಗಿನ ವಚನವು ಸಾಮಾಜಿಕ ವಿಷಯದಲ್ಲಿ ಬಹು ಮಹತ್ವದ್ದೆಂದು ಅಮರವಾದುದೆಂದೂ ನನ್ನ ತಿಳುವಳಿಕೆ ಎಂದಿದ್ದಾರೆ ಮಂಜಪ್ಪನವರು ಆ ವಚನವೇ ಇದು;

ಅಪ್ಪನು ನಮ್ಮ ಮಾದಾರ ಚೆನ್ನಯ್ಯ,
ಬೊಪ್ಪನು ನಮ್ಮ ಡೋಹರ ಕಕ್ಕಯ್ಯ,
ಚಿಕ್ಕಯ್ಯನೆಮ್ಮಯ್ಯ ಕಾಣಯ್ಯ,
ಅಣ್ಣನು ನಮ್ಮ ಕಿನ್ನರ ಬೊಮ್ಮಯ್ಯ,
ಎನ್ನನೇತಕ್ಕರಿಯಿರಿ? ಕೂಡಲಸಂಗಯ್ಯಾ
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-91/ವಚನ ಸಂಖ್ಯೆ-349)

  1. ಮನುಷ್ಯನು ಜನಾಂಗದಲ್ಲಿ ಸುಖ-ಶಾಂತಿಗಳಿದ ಜೀವಿಸಲು ಅವಶ್ಯಕವಾಗಿರತಕ್ಕ ನಡುವಳಿಕೆಗಳೆಲ್ಲಾ ನೀತಿಗೆ ಸಂಬಧಪಟ್ಟಿವೆ. ಇವುಗಳಲ್ಲಿ ದಯೆಯೆ ಮುಖ್ಯವೆಂದು ನನ್ನ ತಿಳುವಳಿಕೆ. ಅತೆಯೇ ಬಸವಣ್ಣನವರ ಈ ಕೆಳಗಿನ ವಚನ ನನಗೆ ಬಹು ಮಾನ್ಯವಾದುದು ಎನ್ನತ್ತಾರೆ ಹರ್ಡೇಕರ ಮಂಜಪ್ಪನವರು. ಆ ವಚನವೇ ಇದು:

ದಯವಿಲ್ಲದ ಧರ್ಮವದೇವುದಯ್ಯಾ?
ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ.
ದಯವೇ ಧರ್ಮದ ಮೂಲವಯ್ಯಾ,
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-67/ವಚನ ಸಂಖ್ಯೆ-247)

ಒಟ್ಟಿನಲ್ಲಿ ಹರ್ಡೇಕರ ಮಂಜಪ್ಪನವರ ಬದುಕಿನ ಸಿದ್ಧಾಂತಗಳಿಗೆ ಬಸವಾದಿ ಶಿವಶರಣರ ತತ್ವ-ಸಿದ್ಧಾಂತಗಳು ಮಾರ್ಗಸೂಚಿಗಳಾಗಿದ್ದವು ಎಂಬುದನ್ನು ಸ್ವತಃ ಅವರ ಮಾತುಗಳಲ್ಲಿ ನಾವು ದರ್ಶಿಸಿದ್ದೇವೆ.

ಹಂತ ಹಂತವಾಗಿ ಮಹಿಳೆಯರಲ್ಲಿ ಜಾಗೃತಿ, ಅರಿವು ಉಂಟಾಗಬೇಕೆದು ಅರಿತುಕೊಂಡ ಮಂಜಪ್ಪನವರು ಮಹಿಳಾ ಜಾಗೃತಿಗಾಗಿ “ಚೈತ್ರ ಶುದ್ಧ ಹುಣ್ಣಿಮೆಯನ್ನು ಅಕ್ಕನ ಹುಣ್ಣೆಮೆ ಎಂದು ತಿಳಿದು ಆಚರಿಸುವ ಪದ್ಧತಿಯನ್ನು ಜಾರಿಗೆ ತಂದರು. ಹೀಗಾಗಿ 1935 ರಿಂದ ಅಕ್ಕನ ಹುಣ್ಣೆಮೆಯ ಆಚರಣೆ ಪ್ರಾರಂಭವಾಯಿತು. ಬರೆಯುತ್ತಾ ಹೋದಂತೆ ಮಜಪ್ಪನವರು ಅಕ್ಷರಗಳಿಗೆ ದಕ್ಕುವಂವರಲ್ಲ. ಲಿಂಗಾಯತ ಸಮುದಾಯದಲ್ಲಿ ಒಗ್ಗಟ್ಟು, ಜಾಗೃತಿಯನ್ನುಂಟು ಮಾಡಲು ಇವರು ಸಾಕಷ್ಟು ಶ್ರಮಿಸಿದರು. ನಿಜಾರ್ಥದಲ್ಲಿ ಲಿಂಗಾಯರ ಸಮುದಾಯವು ಹರ್ಡೇಕರ ಮಂಜಪ್ಪನವರನ್ನು ನಿತ್ಯವೂ ಸ್ಮರಿಸಿಕೊಳ್ಳಬೇಕು. ಸಾಕಷ್ಟು ಜನರಿಗೆ ಲಿಂಗದೀಕ್ಷೆ ಮಾಡಿಸಿದ ದಾಖಲೆಗಳು ಲಭ್ಯವಿವೆ. ಶರಣ ಧರ್ಮ ಪರಿಪಾಲಿಸಿದ ಇವರು ಸಮಾಜಮುಖಿಯಾಗಿ ಚಿಂತಿಸಿದವರು. ಮದುವೆಯಾದರೆ ಸಮಾಜ ಕಾರ್ಯಗಳಿಗೆ ತೊಂದರೆಯಾಗುತ್ತದೆ ಎಂದು ಬ್ರಹ್ಮಚರ್ಯವ್ರತ ವನ್ನು ಸ್ವೀಕರಿಸಿದರು.

ಕಾಲಲಿ ಕಟ್ಟಿದ ಗುಂಡು,
ಕೊರಳಲಿ ಕಟ್ಟಿದ ಬೆಂಡು,
ತೇಲಲೀಯದು ಗುಂಡು,
ಮುಳುಗಲೀಯದು ಬೆಂಡು,
ಇಂತಪ್ಪ ಸಂಸಾರಶರಧಿಯ ದಾಂಟಿಸಿ
ಕಾಲಾಂತಕನೆ ಕಾಯೋ,
ಕೂಡಲಸಂಗಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-338/ವಚನ ಸಂಖ್ಯೆ-1149)

ಎಂಬ ಬಸವಣ್ಣನವರ ವಚನ ಅವರಿಗೆ ಅರ್ಥವಾಗಿತ್ತು. ತೇಲಲು ಬಿಡದ ಗುಂಡು, ಮುಳುಗಲು ಬಿಡದ ಬೆಂಡು ಸಂಸಾರವೆಬ ಶರಧಿಯಾಗಿದೆ. ಇದರಲ್ಲಿ ಸಿಲುಕಿ ಹಲಬುವುದಕ್ಕಿಂತ ಬ್ರಹ್ಮಚರ್ಯವೇ ಲೇಸು ಎಂದು ಭಾವಿಸಿದ ಮಂಜಪ್ಪನವರು 1910 ಜುಲೈ 24 ರಂದು ಬ್ರಹ್ಮಚರ್ಯದ ನಿರ್ಧಾರ ಹೊಂದಿ ಸಾತ್ವಿಕ ಮಿತಾಹಾರಿಗಳಾಗಿ ಆಶ್ರಮವಾಸಿಗಳಾಗಿ ಬದುಕಿದರು. ಒಬ್ಬ ವ್ಯಕ್ತಿ ಒಂದು ಶಕ್ತಿಯಾಗಲು ರಂಗ ನಿರ್ಮಾಣ ಮಾಡಿಕೊಂಡರು.

ಗಾಂಧೀಜಿಯವರ ಮಾರ್ಗವನ್ನು ಅನುಸರಿಸಿದರೂ ಅವರ ಎಲ್ಲಾ ತತ್ವಗಳನ್ನು ಇವರು ಒಪ್ಪಿಕೊಳ್ಳಲಿಲ್ಲ. ಗಾಂಧಿಜಿಯವರು ಪರಿಶಿಷ್ಠರನ್ನು ಹರಿಯ ಜನ ಎಂದರು. ಆದರೆ ಮಂಜಪ್ಪನವರು ಅದನ್ನು ಒಪಪಿಕೊಳ್ಳದೇ ಆದಿಜನ ಎಂದು ಕರೆದರು. ಇವರು ನೋಡುವುದಕ್ಕೆ ಗಾಂಧೀಜಿಯವರತೆ ಇದ್ದು, ಖಾಕಿ ತೊಟ್ಟು ಗಾಂಧೀಜಿಯವರತೆ ಆಶ್ರಮವಾಸಿಗಳಾಗಿದ್ದರು. ಮೊಟ್ಟ ಮೊದಲ ಬಾರಿಗೆ ಇವರನ್ನು ಶ್ರೀ. ದೇಶಪಾಂಡೆ ಗಂಗಾಧರರಾಯರು ರ್ಕಾಟಕದ ಗಾಂಧಿ ಎಂದು ಕರೆದರು. ಶ್ರೀ. ಮುದವೀಡು ಕೃಷ್ಣರಾಯರು ತಪಸ್ವಿ ಮಂಜಪ್ಪನವರು, “ಶ್ರೇಷ್ಠ ಮಹಾ ಪುರುಷ ರೆಂದು ಕರೆದರು.

ಪ್ರಖ್ಯಾತ ಪತ್ರಕರ್ತರಾಗಿ, ಸತ್ಯಾಗ್ರಹ ಆಶ್ರಮದ ಸ್ಥಾಪಕರಾಗಿ, ಲಿಂಗಾಯತ ಸಮುದಾಯದ ಪ್ರಗತಿಗೆ ಶ್ರಮಿಸಿ, ಬಸವ ಜಯಂತಿ, ಅಕ್ಕನ ಹುಣ್ಣಿಮೆಗಳ ಹರಿಕಾರರಾಗಿ, ಹಳ್ಳಿ ಹಳ್ಳಿಗೆ ಭೇಟಿ ನೀಡಿ ಶಿಕ್ಷಣ, ಆರೋಗ್ಯ, ಸ್ವಚ್ಛತೆ, ಕಾಯಕದ ಮಹತ್ವ ಪ್ರಚಾರ ಮಾಡಿ, ಆಲಮಟ್ಟಿ ವಿದ್ಯಾಲಯ ಸ್ಥಾಪಿಸಿ, ದಲಿತ ವಿಮೋಚನೆ, ಪ್ರಗತಿ ಗ್ರಂಥಮಾಲೆ ಪುಸ್ತಕ ಪ್ರಕಟಣೆ, ಕೃಷಿಕರ ಸುಧಾರಣೆ ಮತ್ತು ಜಾಗೃತಿ ಮೂಡಿಸಿ, ದುಶ್ಚಟಗಳ ನಿವಾರಣೆ ಹೀಗೆ ನೂರಾರು ಸಾವಿರಾರು ಕಾರ್ಯ ಮಾಡಿದ ಏಕಾಂಗಿ ವೀರರು ಹರ್ಡೇಕರ ಮಂಜಪ್ಪ ನವರು. ದಣಿವರಿಯದ ಸಾಕಷ್ಟು ಕರ್ಯಗಳನ್ನು ಮಾಡಿ ಏನನ್ನೂ ಬಯಸದೇ ಜನವರಿ 3, 1947 ರಲ್ಲಿ ಈ ಬದುಕಿಗೆ ವಿದಾಯ ಹೇಳಿದ ಅಜ್ಞಾತ ಸಂತನನ್ನು ಅವರ ಜನ್ಮದ ದಿನವಾದ ಇಂದು ಆಪ್ತತತೆಯಿಂದ ಅಪ್ಪಿಕೊಳ್ಳೋಣ, ತುಂಬು ಹೃದಯದಿಂದ ಸ್ಮರಿಸಿಕೊಳ್ಳೋಣ, “ಭಾವನೆಗಳು ಶುದ್ಧವಾದರೆ ಭಾಗ್ಯಕ್ಕೆ ಎಣಿಯಿಲ್ಲ” ಎಂಬಂತೆ ಸದ್ಭಾವದಿಂದಲೇ ಸಂದ ಸಂತ ಶ್ರೀ ಹರ್ಡೇಕರ ಮಂಪ್ಪನವರ ದಿವ್ಯ ಚೇತನಕ್ಕೆ ಸದ್ಭಾವದ ನಮನ.

ಅಜ್ಞಾತ ಮಹಾತ್ಮನೆ
ನಿನಗಿದೋ ನಮಸ್ಕಾರ!
ಸಾಷ್ಟಾಂಗ ನಮಸ್ಕಾರ!
ನೀನಾರೆ ಆಗಿರಲಿ, ನೀನೆಲ್ಲಿಯೇ ಇರಲಿ
ನಿನಗಿದೋ ನಮಸ್ಕಾರ!
ಸಾಷ್ಟಾಂಗ ನಮಸ್ಕಾರ!
(ಕುವೆಂಪು ಅವರ ಕಿಂಕಿಣಿಯಿಂದ)

ಡಾ. ಪುಷ್ಪಾವತಿ ಶಲವಡಿಮಠ,
ಕನ್ನಡ ಪ್ರಾಧ್ಯಾಪಕರು,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಹಾನಗಲ್ಲ, ಹಾವೇರಿ ಜಿಲ್ಲೆ.
ಮೊಬೈಲ್ ಸಂ. 97407 38330

ಪರಾಮರ್ಶನ ಕೃತಿಗಳು:

  • ಕರ್ನಾಟಕದ ಗಾಂಧಿ: ಹರ್ಡೇಕರ ಮಂಜಪ್ಪನವರು – ಡಾ. ಸಿದ್ಧಯ್ಯ ಪುರಾಣಿಕ.
  • ಅಜ್ಞಾ ಸಂತ: ಹರ್ಡೇಕರ ಮಂಜಪ್ಪ – ಶ್ರೀ ಅರವಿಂದ ಚೊಕ್ಕಾಡಿ.
  • ಕರ್ನಾಟಕ ಗಾಂಧಿ; ಹರ್ಡೇಕರ ಮಂಜಪ್ಪ (ಹಿಂದಿ) – ಪ್ರೊ. ಶಾಲಿನಿ ದೊಡಮನಿ.
  • ತುಂಬು ಕುಟುಂಬದ ಹರ್ಡೇಕರ ಮಂಜಪವರು ಡಾ. ವೀರಣ್ಣ ದಂಡೆ.
  • ಬಸವ ಜಯಂತಿ ರೂವಾರಿ ಹರ್ಡೇಕರ ಮಂಜಪ್ಪನವರು – ಆರ್ ಆರ್. ಮಠಪತಿ
  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನಸಾಹಿತ್ಯ ಮಂದಾರ ಫೌಂಡೇಶನ್ ಸಂಚಾಲಕರನ್ನು ಸಂಪರ್ಕಿಸಬೇಕಾದ:
    • ಮೋಬೈಲ್ ನಂ. 9741 357 132
    • e-Mail ID: info@vachanamandara.in / admin@vachanamandara.in

Loading

Leave a Reply