
ವಂದನೆಗೆ ನಿಲ್ಲಬೇಡ, ನಿಂದೆಗಂಜಿ ಓಡಲಿಬೇಡ.
ಹಿಂದು ಮುಂದು ಆಡಲಿಬೇಡ, ಸಂದೇಹಗೊಳಲಿಬೇಡ.
ದ್ವಂದ್ವಬುದ್ಧಿಯ ಕಳೆದು ನಿಂದಿರೆ,
ಬಸವಪ್ರಿಯ ಕೂಡಲಚೆನ್ನಬಸವಣ್ಣ.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-423/ವಚನ ಸಂಖ್ಯೆ-1030)
ಬಸವಣ್ಣನವರ ಮಹಾಮನೆಯ ಮೇಲ್ವಿಚಾರಕರಾಗಿ ಅವರಿಗೆ ಅತ್ಯಂತ ಸಮೀಪದಲ್ಲಿದ್ದು ಬಸವಣ್ಣನವರು ಲಿಂಗೈಕ್ಯರಾಗುವತನಕವೂ ಅವರೊಂದಿಗಿದ್ದ ಮಹಾಶರಣರು ಹಡಪದ ಅಪ್ಪಣ್ಣನವರು. ಇವರು ಮೂಲತಃ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯ ಮುಸಬಿನಾಳ ಗ್ರಾಮದವರು. ಇವರ ತಂದೆಯ ಹೆಸರು ಚೆನ್ನವೀರಪ್ಪ ಮತ್ತು ತಾಯಿಯವರ ಹೆಸರು ದೇವಕ್ಕಮ್ಮ. ಮಡದಿ ಸುಪ್ರಸಿದ್ಧ ವಚನಕಾರ್ತಿ ಲಿಂಗಮ್ಮ ತಾಯಿ. ಇವರ ಅಂಕಿತನಾಮ “ಬಸವಪ್ರಿಯ ಕೂಡಲ ಚೆನ್ನಬಸವಣ್ಣ”. ಸಿಕ್ಕ ಒಟ್ಟು ವಚನಗಳು 250. ಕಾಯಕ ಕ್ಷೌರಿಕ ವೃತ್ತಿ.
ನಿರ್ವಚನ:
ಹಡಪದ ಅಪ್ಪಣ್ಣನವರು ತಮ್ಮ ಈ ವಚನದಲ್ಲಿ ಮಾನವನು ಹೇಗೆ ಬದುಕಬೇಕೆಂದು ತಿಳಿಸಿಕೊಡುತ್ತಾರೆ. ಬಸವಣ್ಣನವರು ಸಪ್ತಸೂತ್ರಗಳ ಮುಖಾಂತರ ಜೀವನದ ಮರ್ಮ ತಿಳಿಸಿದರೆ, ಅಪ್ಪಣ್ಣನವರು ಪಂಚಸೂತ್ರಗಳ ಮೂಲಕ ಜೀವನ ಮಾರ್ಗವನ್ನು ಹೇಳುತ್ತಾರೆ. ಈ ಸೂತ್ರಗಳು ಅವರ ಜೀವನದ ಕ್ರಮವೂ ಹೌದು.
ಮೊದಲಿಗೆ ವಂದನೆಗೆ ನಿಲ್ಲಬೇಡ ಎನ್ನುತ್ತಾರೆ. ಹೊಗಳಿಕೆ, ಹೊಗಳಿಸಿಕೊಳ್ಳುವುದು ಮಾನವನ ದೌರ್ಬಲ್ಯವಾಗಿದೆ. ಅಂತೆಯೇ ಬಸವಣ್ಣನವರು “ಹೊಗಳಿ ಹೊಗಳಿ ಎನ್ನ ಹೊನ್ನಶೂಲಕ್ಕಿಕ್ಕದಿರಯ್ಯಾ” ಎನ್ನುತ್ತಾರೆ. ಹಾಗೆಯೆ ಅಪ್ಪಣ್ಣನವರೂ ಸಹ ಹೊಗಳುವುದಕ್ಕೂ, ಹೊಗಳಿಸಿಕೊಳ್ಳುವುದಕ್ಕೂ ಹೋಗಬೇಡ ಎಂಬ ಎಚ್ಚರಿಕೆಯನ್ನು ಕೊಡುತ್ತಾರೆ. ಏಕೆಂದರೆ ಹೊಗಳುವವರೆ ತೆಗಳುವರೆಂಬುದು ಅವರಿಗೆ ಗೊತ್ತು.
ಅದಕ್ಕಾಗಿಯೆ ಹೇಳುವರು ನಿಂದೆಗಂಜಿ ಓಡಬೇಡ ಎಂದು. ಏಕೆಂದರೆ ಹೊಗಳುವ ಬಾಯಿಗಳೇ ನಿಂದೆ ಮಾಡುವವು. ಮುಂದುವರೆದು ಆಡಬೇಕಾದ ಮಾತುಗಳು ಮಾನವರ ಎದುರಿಗೆ ಇರಲಿ. ಹಿಂದೆ ಮುಂದೆ ಆಡಿ ನಮ್ಮದೇ ವ್ಯಕ್ತಿತ್ವ ಸಣ್ಣದಾಗಿಸಿಕೊಳ್ಳುವುದು ಬೇಡ. ತಪ್ಪಿತಸ್ಥರ ಎದುರಿಗೆ ಆಡಿದರೆ ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳುವರು. ಅಂತೆಯೇ ನಾವಾಡುವ ಮಾತಿನಿಂದ ಒಬ್ಬ ವ್ಯಕ್ತಿ ಸುಧಾರಣೆಗೊಳ್ಳುತ್ತಾನೆಂದರೆ ಆತನ ಎದುರಿಗೆ ಮಾತನಾಡಬೇಕೆ ವಿನಃ ಹಿಂದೆ ಮುಂದೆ ಆಡಿ ಹೇಡಿಯಾಗಬೇಡ ಎಂಬುವುದು ಅವರ ವಿಚಾರ. ಏಕೆಂದರೆ ಮಾತುಗಳನ್ನು ಆಡಿದರೆ ಕೈಯೊಳು ಹಿಡಿದ ಇಷ್ಟಲಿಂಗವೂ ಕೂಡ ಹೌದು ಹೌದು ಎಂದು ತಲೆಯ ಹಾಕುತ್ತದೆ. ಅಂದಮೇಲೆ ಮಾನವ ಬದಲಾವಣೆಗೊಳ್ಳವುದು ಸಹಜ ತಾನೆ.
ಮುಂದುವರೆದು ಯಾರ ಮೇಲೆಯೂ ಸಂಶಯಪಡದೆ ಅಂದವರು, ಅನ್ನದವರು ನನ್ನವರೇ ಎನ್ನುತ್ತ ನಡೆಯಬೇಕು. ಸಂಶಯ ಒಳ್ಳೆಯದಲ್ಲ ಎಂದು ಹೇಳುತ್ತ ದ್ವಂದ್ವಬುದ್ಧಿಯ ಕಳೆದುಕೊಂಡು ಏಕಬುದ್ಧಿಯವರಾಗಿ ಒಂದೇ ವಿಚಾರಧಾರೆಯುಳ್ಳವರಾಗಿ ನಡೆದಾಗ ಪರಶಿವನು ಒಲಿಯುವನು, ಆನಂದಗೊಳ್ಳುವನು ಎಂದು ಹಡಪದ ಅಪ್ಪಣ್ಣನವರು ವಿವೇಚಿಸುತ್ತಾರೆ.
ಒಟ್ಟಿನಲ್ಲಿ ಈ ವಚನವು ಮಾನವನು ಎತ್ತರ ಮಟ್ಟಕ್ಕೆ ಬೆಳೆಯಬೇಕಾದರೆ ಹೇಗೆ ನಡೆಯಬೇಕು ಎಂಬುವುದು ಸೂಚಿಸುತ್ತದೆ.
ಶ್ರೀಮತಿ. ಶಿವಲೀಲಾ ಭೀಮಳ್ಳಿ,
ವಚನ ಸಂಗೀತಗಾರರು.
ಗೋದೂತಾಯ ನಗರ,
ಕಲಬುರಗಿ.
ಮೋಬೈಲ್ ಸಂ. 77601 71431.
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ ಸಂಚಾಲಕರನ್ನು ಸಂಪರ್ಕಿಸಬೇಕಾದ:
- ಮೋಬೈಲ್ ನಂ. 9741 357 132
- e-Mail ID: info@vachanamandara.in / admin@vachanamandara.in
![]()






Total views : 51395