ಹೌದಪ್ಪಾ ಹೌದೋ ನೀನೇ ದೇವರೋ / ಡಾ. ಬಸವರಾಜ ಸಾದರ, ಬೆಂಗಳೂರು.

ದೇವರನ್ನು ಕುರಿತ ನಮ್ಮ ನಂಬಿಕೆ ಮತ್ತು ಪರಿಕಲ್ಪನೆಗಳು ವೈವಿಧ್ಯಪೂರ್ಣವಾಗಿರುವಂತೆ ವಿಚಿತ್ರತರವೂ ಆಗಿವೆ. ದೇವರು ಎಲ್ಲಿದ್ದಾನೆ? ಹೇಗಿದ್ದಾನೆ? ಅವನನ್ನು ಕಾಣುವುದು ಹೇಗೆ? ಎಂಬ ಅಸಂಖ್ಯ ಪ್ರಶ್ನೆಗಳಿಗೆ ತರಹೇವಾರಿ ಉತ್ತರಗಳು ಹೊರಡುತ್ತವೆ. ಸಾಮಾನ್ಯವಾಗಿ ಮನುಷ್ಯನು ದೇವರನ್ನು ತನಗಿಂತ ಭಿನ್ನವಾದ ಅವತಾರ, ಸ್ವರೂಪ ಮತ್ತು ಸ್ಥಳಗಳಲ್ಲಿ ಕಾಣುವುದೇ ಹೆಚ್ಚು. ಈ ಕಾರಣಗಳಿಂದಾಗಿಯೇ ದೇವರಿಗೆ ತರತರದ ರೂಪಗಳನ್ನು ಆರೋಪಿಸಿ, ಪೋಷಾಕುಗಳನ್ನು ತೊಡಿಸಿ, ಗುಡಿ, ಗುಂಡಾರ, ದೇವಾಲಯ, ಬಸದಿ, ಚರ್ಚುಗಳಂಥ ಇಮಾರತುಗಳನ್ನು ನಿರ್ಮಿಸಿ, ಅದರಲ್ಲಿ ಆತನನ್ನು ಪ್ರತಿಷ್ಠಾಪಿಸಿ ಪೂಜಿಸುವ ಪರಂಪರೆ ಹಿಂದಿನಿಂದಲೂ ಬೆಳೆದುಕೊಂಡು ಬಂದಿದೆ. ಇವೆಲ್ಲ ನಂಬಿಕೆಗಳ ಹಿಂದೆ ದೇವರು ನಮ್ಮಿಂದ ಅನ್ಯ ಮತ್ತು ಭಿನ್ನನಾಗಿದ್ದಾನೆ, ಹಾಗೂ ದೂರವಿದ್ದಾನೆ ಎಂಬ ವಿಚಾರವೇ ಪ್ರಧಾನವಾಗಿರುವುದು ವಾಸ್ತವ.

ಹಾಗಿದ್ದರೆ, ದೇವರು ನಮ್ಮಿಂದ ದೂರವಿದ್ದಾನೆಯೇ? ಬೇರೆ ಇದ್ದಾನೆಯೆ? ಅವನ ಸ್ವರೂಪ ಎಂಥದು? ಇವು ನಮ್ಮ ಪರಂಪರೆಯುದ್ದಕ್ಕೂ ಕಾಡಿದ ಪ್ರಶ್ನೆಗಳು. ಈ ಪ್ರಶ್ನೆಗಳನ್ನೇ ಪ್ರಧಾನ ಚರ್ಚೆಗೆ ಎತ್ತಿಕೊಳ್ಳುವ ಶರಣ ಗಜೇಶ ಮಸಣಯ್ಯನವರು, ಇಂಥ “ಹೊರಗಿನ ದೇವರ” ಕುರಿತ ನಂಬಿಕೆಗಳೆಲ್ಲವೂ ಹೇಗೆ ಅರ್ಥರಹಿತವಾದವುಗಳು ಎಂಬುದನ್ನು ತಮ್ಮ ವಚನವೊಂದರಲ್ಲಿ ತಾರ್ಕಿಕವಾಗಿ ಮಂಡಿಸುತ್ತಾರೆ. ದೇವರನ್ನು ನಿರಾಕರಿಸದ, ಆದರೆ “ಬಾಹ್ಯ ದೇವರ” ಬಗೆಗಿನ ಕಲ್ಪಿತ ನಂಬಿಗೆಗಳನ್ನು ವಿಡಂಬಿಸುವ ಅವರ ಈ ವಿಚಾರಗಳು ಪರಂಪರಾಗತ ಹುಸಿ ಮತ್ತು ಮೂಢ ಆಲೋಚನೆಗಳನ್ನು ಪ್ರಶ್ನಿಸುತ್ತವೆಯಷ್ಟೇ ಅಲ್ಲ, ಆ ಪ್ರಶ್ನೆ ಮತ್ತು ನಿರಾಕರಣೆಗೆ ವೈಚಾರಿಕ ಮತ್ತು ವಾಸ್ತವ ಸಾಕ್ಷಿಗಳನ್ನೂ ಕೊಡುತ್ತವೆ.

ದೇವರ ನೆನೆದು ಮುಕ್ತರಾದೆವೆಂಬ
ಯುಕ್ತಿಶೂನ್ಯರ ಮಾತ ಕೇಳಲಾಗದು.
ಅದೇನು ಕಾರಣವೆಂದಡೆ:
ದೇವರ ನೆನೆವಂಗೆ ದೇವರುಂಟೆ?
ದೂರದೂರದಲ್ಲಿದ್ದವರ ನೆನೆವರಲ್ಲದೆ
ಸಮೀಪದಲ್ಲಿದ್ದವರ ನೆನೆವವರಿಲ್ಲ.
ಇದನರಿದು ನೀನೆನ್ನೊಳಡಗಿ
ನಾ ನಿನ್ನ ನೆನೆಯಲಿಲ್ಲ;
ನೀನೆನಗೆ ಮುಕ್ತಿಯನೀಯಲಿಲ್ಲ.
ನೀನಾನೆಂದೆನಲಿಲ್ಲ ಮಹಾಲಿಂಗ ಗಜೇಶ್ವರಾ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-95/ವಚನ ಸಂಖ್ಯೆ-231)

ದೇವರನ್ನು ನೆನೆದು ಮುಕ್ತಿ ಪಡೆಯುತ್ತೇವೆಂಬ ನಂಬಿಕೆಯ ಜನರನ್ನು ವಚನದ ಮೊದಲ ಪಂಕ್ತಿಯಲ್ಲೇ ಶರಣ ಗಜೇಶ ಮಸಣಯ್ಯನವರು ಯುಕ್ತಿಶೂನ್ಯರೆಂದು ನೇರವಾಗಿ ವಿಡಂಬಿಸುತ್ತಾರೆ. ಆ ವಿಡಂಬನೆಗೆ ಕಾರಣ ಹೇಳುತ್ತ, ದೇವರನ್ನು ನೆನೆಯುವವರಿಗೆ ದೇವರು ಇರಲು ಸಾಧ್ಯವೆ? ಎಂಬ ಪ್ರಶ್ನೆಯನ್ನೂ ಕೇಳುತ್ತಾರೆ. ಹೀಗೆ ಬಾಹ್ಯ ದೇವರ ಅಸ್ತಿತ್ವವನ್ನು ನೇರವಾಗಿ ನಿರಾಕರಿಸುವ ಶರಣ ಗಜೇಶ ಮಸಣಯ್ಯನನವರು ತಮ್ಮ ಈ ನಿರಾಕರಣೆಗೆ ಮುಂದೆ ತರ್ಕಬದ್ಧವಾದ ಸಮರ್ಥನೆಯನ್ನೂ ಕೊಡುತ್ತಾರೆ.

ಸಾಮಾನ್ಯವಾಗಿ ನಮ್ಮಿಂದ ದೂರವಿದ್ದವರನ್ನು ಮಾತ್ರ ನಾವು ನೆನೆಸುತ್ತಿರುತ್ತೇವೆ. ಇದು ಲೋಕಸತ್ಯ ಮತ್ತು ಕ್ರಮ. ನಮ್ಮ ಪಕ್ಕದಲ್ಲೋ ಅಥವಾ ಜೊತೆಯಲ್ಲೋ ಇರುವವರನ್ನು ನೆನೆಸುವ ಅಗತ್ಯವೇ ಇರುವುದಿಲ್ಲ. ಲೋಕರೂಢಿಯ ಇಂಥ ಆಚರಣೆಯನ್ನೇ ಆಧಾರವಾಗಿಟ್ಟುಕೊಂಡು ತಮ್ಮ ತರ್ಕ ಪ್ರಮೇಯ ಮಂಡಿಸುವ ಶರಣ ಗಜೇಶ ಮಸಣಯ್ಯನವರು, ದೇವರೆಲ್ಲಿದ್ದಾನೆ? ಎಂಬ ಮುಖ್ಯ ಪ್ರಶ್ನಗೆ ವೈಚಾರಿಕ ಉತ್ತರ ಕೊಡುತ್ತಾರೆ. ಆತನ ‘ಇದನರಿದು ನೀನೆನ್ನೊಳಡಗಿ, ನಾ ನಿನ್ನ ನೆನೆಯಲಿಲ್ಲ’ ಎಂಬ ಉಕ್ತಿಯನ್ನೇ ಆಧರಿಸಿ ಹೇಳುವುದಾದರೆ, ದೇವರೆಂಬುವವನು ಬೇರೆಲ್ಲೂ ಹೊರಗಿಲ್ಲ, ನನ್ನೊಳಗೇ ಇದ್ದಾನೆ-ಅಡಗಿದ್ದಾನೆ. ಅಂದರೆ, ಈ ರೀತಿ ನಮ್ಮೊಳಗೇ ಇರುವ ಅಥವಾ ಅಡಗಿರುವ ದೇವರು, ಬೇರೊಬ್ಬ ವ್ಯಕ್ತಿ ಆಗಿರದೆ, ನಾನೇ ಅಥವಾ ನಾವೇ ಆಗಿರುತ್ತೇವೆ. ಹೀಗೆ ನನ್ನೊಳಗಿರುವ ಅಥವಾ ನಾನೇ ಆಗಿರುವ ದೇವರನ್ನು ದೂರದಲ್ಲಿ ಇರುವವರನ್ನು ನೆನೆಸುವಂತೆ ನೆನೆಯಲು ಸಾಧ್ಯವೆ? ಖಂಡಿತ ಇಲ್ಲ. ಅದಕ್ಕಾಗಿಯೇ ಶರಣ ಗಜೇಶ ಮಸಣಯ್ಯನವರು ಹೇಳಿದ್ದು, ‘ನಾ ನಿನ್ನ ನೆನೆಯಲಿಲ್ಲ’ ಎಂದು.

ಇನ್ನೂ ಮುಂದೆ ಹೋಗುವ ಮಸಣಯ್ಯನವರು, ‘ನೀನೆನಗೆ ಮುಕ್ತಿಯನೀಯಲಿಲ್ಲ’ ಎಂಬ ಮತ್ತೊಂದು ಮಾತನ್ನೂ ಸೇರಿಸುತ್ತಾರೆ. ನನ್ನನ್ನು ಬಿಟ್ಟು ದೇವರು ಬೇರೆ ಹೊರಗಿಲ್ಲವೆಂದ ಮೇಲೆ, ಇರಲಾರದ ಆ ದೇವರು ಮುಕ್ತಿಯನ್ನು ಕೊಡುವ ಸಾಧ್ಯತೆಯಾದರೂ ಎಲ್ಲಿದೆ? ಅದನ್ನೇ ಶರಣ ಗಜೇಶ ಮಸಣಯ್ಯನವರು ನೇರವಾಗಿ ಹೇಳಿದ್ದು. ಮತ್ತೂ ಮುಂದೆ ಹೋಗಿ ಶರಣ ಗಜೇಶ ಮಸಣಯ್ಯನವರು ಹೇಳುವ ‘ನೀನಾನೆಂದೆನಲಿಲ್ಲ ಮಹಾಲಿಂಗ ಗಜೇಶ್ವರಾ’ ಎಂಬ ಮಾತಂತೂ ದೇವರು ಮತ್ತು ಮನುಷ್ಯ ಬೇರೆ ಬೇರೆ ಅಲ್ಲ; ಅವರಿಬ್ಬರೂ ಒಂದೇ ಎಂಬ ಬಹುದೊಡ್ಡ ಸತ್ಯವನ್ನೇ ಪ್ರತಿಪಾದಿಸುತ್ತದೆ. ಮನುಷ್ಯ ಮತ್ತು ದೇವರು ಒಂದೇ ಎಂದರೆ, ಮನುಷ್ಯನೇ ದೇವರು ಎಂದಂತಲ್ಲವೆ? ಹೀಗಿರುವಾಗ ಅಲ್ಲಿ ನಾನು ಮತ್ತು ನೀನು ಎಂಬ ಭಿನ್ನತೆ (ದ್ವೆೈತ) ಇರಲು ಸಾಧ್ಯವೇ ಇಲ್ಲ. ಇದನ್ನೇ ‘ನೀನಾನೆಂದೆನಲಿಲ್ಲ’ ಎಂದು ಹೇಳಿ ಬಾಹ್ಯ ದೇವರ ಅಸ್ತಿತ್ವವನ್ನು ಸ್ಪಷ್ಟವಾಗಿ ನಿರಾಕರಿಸುವ ಶರಣ ಗಜೇಶ ಮಸಣಯ್ಯನವರು ದೇವರು ನಮ್ಮೊಳಗೇ ಇದ್ದಾನೆಂಬ ಸತ್ಯವನು ಸ್ಪಷ್ಟವಾಗಿ ಮನಗಾಣಿಸುತ್ತಾರೆ. ಮನುಷ್ಯನೇ ನಿಜವಾದ ದೇವರು ಎಂಬ ಅರ್ಥವನ್ನೇ ಸಾರುವ ಮಹತ್ವದ ವಿಚಾರವಿದು. ಶರಣ ಧರ್ಮದ ಮೇರು, ಅಲ್ಲಮ ಪ್ರಭುಗಳು ಈ ಸತ್ಯವನ್ನೇ ‘ನಾ ದೇವ ಕಾಣಾ ಗುಹೇಶ್ವರಾ’ ಎಂದು ಇನ್ನೂ ಎತ್ತರದ ಧ್ವನಿಯಲ್ಲಿ ಸಾರಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಇಂಥ ತಾರ್ಕಿಕ ಮತ್ತು ವೈಚಾರಿಕ ಸತ್ಯದ ಹಿನ್ನೆಲೆಯಲ್ಲಿಯೇ ಶರಣರು ದೇವಾಲಯ ನಿರ್ಮಾಣದಂಥ ಕೆಲಸಗಳನ್ನು ನಿರಾಕರಿಸುತ್ತಾರೆ.

ನಾನೇ ದೇವರು ಅಥವಾ ದೇವರು ನನ್ನೊಳಗೇ ಅಡಗಿದ್ದಾನೆಂದ ಮೇಲೆ ಆತನನ್ನು ನೆನಯುವ ಪ್ರಮೇಯವೇ ಬರಲಾರದು. ಇಲ್ಲದ ಇಂಥ ಬಾಹ್ಯ ದೇವರ ನೆನೆದರೆ ಮುಕ್ತಿಯೂ ಸಿಗಲಾರದು. ಈ ಎಲ್ಲ ಸತ್ಯವನ್ನು ತರ್ಕಬದ್ಧವಾಗಿ ಪ್ರತಿಪಾದಿಸುವ ಶರಣ ಗಜೇಶ ಮಸಣಯ್ಯನವರು, ಹೀಗಿದ್ದೂ ಮತ್ತೂ ಮೂಢಪರಂಪರೆಯನ್ನೇ ಅನುಸರಿಸುವವರನ್ನು ‘ಯುಕ್ತಿಶೂನ್ಯರು’ ಎಂದು ವ್ಯಂಗಿಸುತ್ತಾತ್ತಾರೆ. ಅವರು ಹೇಳುವ ಒಟ್ಟು ಅರ್ಥವೆಂದರೆ, ದೇವರು ಮತ್ತು ದೇವತ್ವದ ಗುಣ ಮನುಷ್ಯನಲ್ಲೇ ಇರುವ ಕಾರಣಕ್ಕೆ ಅವನೇ ದೇವರು ಎಂಬುದು. ಹಾಗಿದ್ದರೆ, ಈಗ ಆಗಬೇಕಿರುವ ಕೆಲಸವೆಂದರೆ, ನಮ್ಮೊಳಗೇ ಇರುವ ದೇವರನ್ನು ಜಾಗೃತಗೊಳಿಸಿಕೊಂಡು ನಾವೇ ನಿಜವಾದ ದೇವರಾಗಿ, ಆ ದೇವರ ನಿರ್ದೇಶನದಂತೆ ನಡೆಯುವುದು. ಇಷ್ಟು ಮಾಡಿದರೆ ಸಾಕು ಮತ್ತೆ ಹೊರಗಿನ ದೇವರ ಹಂಗೇ ಬೇಕಿಲ್ಲ. ಅಂತೆಯೇ ‘ದೇಹವೇ ದೇಗುಲ’ ಎಂಬ ವಿಚಾರವನ್ನು ಪ್ರತಿಪಾದಿಸಿದ ಶರಣರು, ದೇಹದಲ್ಲಿರುವ (ಅರಿವನ್ನೇ) ಆತ್ಮನನ್ನೇ ದೇವರೆಂದು ಕಂಡುಕೊಂಡರು. ಹೀಗೆ ಮಾಡುವ ಮೂಲಕ ದೇವರನ್ನು ಹೊರಗೆ ಹುಡುಕುವವರಿಗೆ, ಆತ ಒಳಗೇ ಇದ್ದಾನೆಂಬುದನ್ನು ಪ್ರಾಯೋಗಿಕವಾಗಿ ತೋರಿಸಿ ಕೊಟ್ಟರು ಕೂಡ.

ನಮ್ಮೊಳಗೇ ದೇವರಿರುವಾಗ, ದೇವರು ಮತ್ತು ಮನುಷ್ಯ ಅನ್ಯ-ಭಿನ್ನರಾಗಿರಲು ಸಾಧ್ಯವೇ ಇಲ್ಲ. ಇದೇ ನಿಜವಾದ ಅದ್ವೆೈತ. ಹೀಗಿರುವಾಗ, ಒಬ್ಬನಿಗೆ ಮತ್ತೊಬ್ಬ ಮುಕ್ತಿಯನ್ನು ಕೊಡುವುದಾಗಲಿ, ಒಬ್ಬನನ್ನು ಮತ್ತೊಬ್ಬ ನೆನೆಯುವುದಾಗಲಿ ಅಗತ್ಯವೇ ಇಲ್ಲ. ಈ ಬಗೆಯ ವೈಜ್ಞಾನಿಕ ಸತ್ಯದ ಧ್ವನಿಯೇ ಹರಳುಗಟ್ಟಿದೆ ಶರಣ ಗಜೇಶ ಮಸಣಯ್ಯನವರ ಪ್ರಸ್ತುತ ವಚನದಲ್ಲಿ. ಒಬ್ಬ ಅನುಭಾವಿ ಕವಿ ಇದನ್ನೇ, ‘ಹೌದಪ್ಪಾ ಹೌದೋ ನೀನೇ ದೇವರೋ, ನಿಂದು ನಿನಗ ತಿಳಿದರ ನಿನಗಿಲ್ಲ ದೂರೋ’ ಎಂದು ಹೇಳಿರುವ ಮಾತು, ಶರಣರ ಇಂಥ ವೈಚಾರಿಕ ಮತ್ತು ವೈಜ್ಞಾನಿಕ ಸಿದ್ಧಾಂತವನ್ನೇ ಮತ್ತಷ್ಟು ಗಟ್ಟಿಗೊಳಿಸಿ ಹೇಳುತ್ತದೆ.

ಡಾ. ಬಸವರಾಜ ಸಾದರ.
ನಿಲಯದ ನಿರ್ದೇಶಕರು (ನಿ), ಆಕಾಶವಾಣಿ, ಬೆಂಗಳೂರು.
303, ಎಸ್. ಎಲ್. ವಿ. ತೇಜಸ್‌, 3 ನೇ ಮಹಡಿ,
2 ನೇ ಅಡ್ಡ ರಸ್ತೆ, ಭುವನೇಶ್ವರಿ ನಗರ,
(ಹೆಬ್ಬಾಳ-ಕೆಂಪಾಪೂರ)
ಬೆಂಗಳೂರು – 560 024
ಮೋಬೈಲ್‌ ಸಂ. +91 98869 85847

 ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in

Loading

This Post Has One Comment

  1. ಮೈಸೂರು ಮಹದೇವ

    ದೇವರು ಇರುವ ಸ್ಥಳವನ್ನು ಬಹಳ ಸ್ಪಷ್ಟವಾಗಿ ತಿಳಿಸಿಕೊಟ್ಟ ಅಪ್ಪ ಗಜೇಶ ಮಸಣಯ್ಯನವರಿಗೆ ಶರಣು ಶರಣಾರ್ಥಿಗಳು

Leave a Reply