
ಲಿಂಗಾಯತರು ಅಂದರೆ ಯಾರು?
ಅಷ್ಟಾವರಣಗಳಾದ ಗುರು, ಲಿಂಗ ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ, ಪ್ರಸಾದ ಪಾದೋದಕಗಳನ್ನ ಅಳವಡಿಸಿಕೊಂಡು, ಪಂಚಾಚಾರಗಳಾದ ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ ಮತ್ತು ಭೃತ್ಯಾಚಾರಗಳನ್ನ ಆಚರಿಸುತ್ತ, ಷಟ್ಸ್ಥಲಗಳ ಭಕ್ತ, ಮಹೇಶ, ಪ್ರಾಣಲಿಂಗಿ, ಪ್ರಸಾದಿ, ಶರಣ ಮತ್ತು ಐಕ್ಯ ಮೂಲಕ ಸಾಧನೆಗೈದು ಬಯಲಾಗುವವರೇ ಲಿಂಗಾಯತರು.
ಅಷ್ಟಾವರಣಗಳು ಅಂಗವಾದರೆ, ಪಂಚಾಚಾರಗಳು ಪ್ರಾಣ ಮತ್ತು ಷಟ್ಸ್ಥಲಗಳು ನಮ್ಮ ಆತ್ಮ ಅನಿಸಿಕೊಳ್ಳುತ್ತವೆ. ಈ ಅಷ್ಟಾವರಣಗಳು ನಮ್ಮನ್ನು, ನಮ್ಮ ಮನಸ್ಸನ್ನು ಕೆಟ್ಟ ವಾತಾವರಣಗಳಿಂದ, ಮಾನಸಿಕ ಕ್ಲೇಷಗಳಿಂದ ರಕ್ಷಿಸೊ ರಕ್ಷಾ ಕವಚ ಇದ್ದ ಹಾಗೆ. ಈ ಅಷ್ಟಾವರಣಗಳು ಮಾನವನ ಲೌಕಿಕ ಮತ್ತು ಆಧ್ಯಾತ್ಮಿಕ ಸಾಧನೆಗೆ ಮತ್ತು ಅಂತರಂಗ-ಬಹಿರಂಗದ ಸಾಧನೆಗಳಿಗೂ ಪ್ರಯೋಜನಕಾರಿಯಾಗಿದೆ. ಅರಿಷಡ್ವರ್ಗ, ಮಲತ್ರಯ, ಅಷ್ಟಮದಗಳಂತ ದುಷ್ಟ ಶಕ್ತಿಗಳಿಂದ ಕಾಪಾಡುತ್ತವೆ.
ಈ ಅಷ್ಟಾವರಣಗಳಲ್ಲಿ ಮೂರು ಆವರಣಗಳಾದ ಗುರು, ಲಿಂಗ, ಜಂಗಮಗಳು ಪೂಜೆಗೆ ಅರ್ಹವಾದ ತತ್ವಗಳು. ಮುಂದಿನ ಮೂರು ಆವರಣಗಳಾದ ವಿಭೂತಿ, ರುದ್ರಾಕ್ಷಿ, ಮಂತ್ರಗಳು ಪುಜಾ ಸಾಧನಗಳು. ಕೊನೆಯ ಎರಡು ಆವರಣಗಳು ಪ್ರಸಾದ ಮತ್ತು ಪಾದೋದಕಗಳು ಪೂಜಾ ಫಲಗಳಾಗಿವೆ.
ಇವೆಲ್ಲ ಅಂಶಗಳು ಮೊದಲಿಂದನೂ ಇದ್ದವು. ಆದರೆ ಅವು ಬಾಹ್ಯ ಆಚರಣೆಗೆ ಮಾತ್ರ ಸೀಮಿತ ಆಗಿದ್ದವು. ಬಸವಣ್ಣನವರು ಇವುಗಳಿಗೆಲ್ಲ ಒಂದು ಹೊಸ ಆಯಾಮ ನೀಡಿ ಒಂದು ಸೂತ್ರ ರೂಪದಲ್ಲಿ ಜೋಡಿಸಿ ಕೊಟ್ಟರು. ಅಷ್ಟಾವರಣಗಳನ್ನು ಬಾಹ್ಯ ತೋರಿಕೆಗಾಗಿ ಬಳಸದೆ ನಮ್ಮ ಅಂತರಂಗದ ಅರಿವನ್ನು ಹೆಚ್ಚಿಸಲು, ಆಚಾರವನ್ನು ಶುದ್ಧಿಗೊಳಿಸಲು ಉಪಯೋಗಿಸಿದರು, ಸ್ಥಾವರಲಿಂಗ ಅಥವಾ ಚರಲಿಂಗದ ಸ್ಥಾನದಲ್ಲಿ ಇಷ್ಟಲಿಂಗವನ್ನು ನಮ್ಮ ಕೈಗೆ ನೀಡಿದರು.
ಮಾನವನ ದೇಹ ಅಷ್ಟತನುಗಳಿಂದ ಕೂಡಿದೆ.
- ಸ್ಥೂಲ
- ಸೂಕ್ಷ್ಮ
- ಕಾರಣ
- ನಿರ್ಮಲ
- ಆನಂದ
- ಚಿದ್ರೂಪ
- ಚಿನ್ಮಯ
- ಸರ್ವಾಂಗ
ಎನ್ನುವ ಎಂಟು ತನುಗಳ ಘಟಕ. ಯಾವ ತನುವಿನಲ್ಲಿ ಯಾವ ಆವರಣ ಧರಿಸಬೇಕು ಎಂದು ಶರಣ ಗುರುಸಿದ್ಧದೇವರು ಈ ವಚನದಲ್ಲಿ ತಿಳಿಸಿದ್ದಾರೆ.
ಅಯ್ಯ ನಿನ್ನ ಅಷ್ಟತನುವಿನ ಮಧ್ಯದಲ್ಲಿ
ಆ ಪರಬ್ರಹ್ಮನಿಜವಸ್ತುವೆ ನಿನ್ನ ಪಾವನ ನಿಮಿತ್ಯಾರ್ಥವಾಗಿ
ಅಷ್ಟಾವರಣಸ್ವರೂಪಿನದಿಂದ ನೆರದಿರ್ಪುದು ನೋಡ.
ಅದರ ವಿಚಾರವೆಂತೆಂದಡೆ:
ನಿನ್ನ ಸ್ಥೂಲತನುವಿನ ಮಧ್ಯದಲ್ಲಿ
ಅರಿವೆ ಗುರುವಾಗಿ ನೆಲಸಿರ್ಪರು ನೋಡ.
ನಿನ್ನ ಸೂಕ್ಷ್ಮತನುವಿನ ಮಧ್ಯದಲ್ಲಿ
ಸುಜ್ಞಾನವೆ ಲಿಂಗವಾಗಿ ನೆಲಸಿರ್ಪರು ನೋಡ.
ನಿನ್ನ ಕಾರಣತನುವಿನ ಮಧ್ಯದಲ್ಲಿ
ಸ್ವಾನುಭಾವಜಂಗಮವಾಗಿ ನೆಲಸಿರ್ಪರು ನೋಡ.
ನಿನ್ನ ನಿರ್ಮಲತನುವಿನ ಮಧ್ಯದಲ್ಲಿ
ಕರುಣಾಮೃತ ಪಾದೋದಕವಾಗಿ ನೆಲಸಿರ್ಪರು ನೋಡ.
ನಿನ್ನ ಆನಂದತನುವಿನ ಮಧ್ಯದಲ್ಲಿ
ಕೃಪಾಪ್ರಸಾದವಾಗಿ ನೆಲಸಿರ್ಪರು ನೋಡ.
ನಿನ್ನ ಚಿದ್ರೂಪತನುವಿನ ಮಧ್ಯದಲ್ಲಿ
ಚಿತ್ಪ್ರಕಾಶಭಸಿತವಾಗಿ ನೆಲಸಿರ್ಪರು ನೋಡ.
ನಿನ್ನ ಚಿನ್ಮಯತನುವಿನ ಮಧ್ಯದಲ್ಲಿ
ಚಿತ್ಕಾಂತೆ ರುದ್ರಾಕ್ಷಿಯಾಗಿ ನೆಲಸಿರ್ಪರು ನೋಡ.
ಇಂತು ನಿನ್ನ ಸರ್ವಾಂಗದಲ್ಲಿ ಅಷ್ಟಾವರಣಸ್ವರೂಪಿನಿಂದ
ಪರಾತ್ಪರ ನಿಜವಸ್ತು ನೆರದಿರ್ಪುದು ನೋಡ.
ನಿನ್ನ ನಿರ್ಮಾಯಚಿತ್ತ ಮಹಾಜ್ಞಾನ ನಿಜದೃಷ್ಟಿಯಿಂದ
ನಿನ್ನ ನೀ ತಿಳಿದು ನೋಡ.
ಎಂದು ಗಣಸಾಕ್ಷಿಯಾಗಿ
ಶ್ರೀಗುರು ನಿಷ್ಕಳಂಕ ಚೆನ್ನಬಸವರಾಜೇಂದ್ರನು
ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ
ಉಪಮಾದೀಕ್ಷೆ ಇಂತುಂಟೆಂದು
ನಿರೂಪಂ ಕೊಡುತ್ತಿರ್ದರು ನೋಡ
ಸಂಗನಬಸವೇಶ್ವರ.
(ಸಮಗ್ರ ವಚನ ಸಂಪುಟ: ಹತ್ತು-2021/ಪುಟ ಸಂಖ್ಯೆ-455/ವಚನ ಸಂಖ್ಯೆ-711)
ಇವುಗಳಲ್ಲಿ ಕ್ರಮವಾಗಿ ಸಾಧಕನ ಅರಿವೇ ಗುರುವಾಗಿ ಸ್ಥೂಲತನುವಿನಲ್ಲಿಯೂ, ಸುಜ್ಞಾನವೇ ಲಿಂಗವಾಗಿ ಸೂಕ್ಷ್ಮತನುವಿನಲ್ಲಿಯೂ, ಸ್ವಾನುಭಾವವೇ ಜಂಗಮವಾಗಿ ಕಾರಣತನುವಿನಲ್ಲಿಯೂ, ಕರುಣೆಯೇ ಪಾದೋದಕ ವೆನಿಸಿಹುದು. ನಿರ್ಮಲ ತನುವೆನಿಸಿಯೂ, ಕೃಪೆಯೇ ಪ್ರಸಾದವಾಗಿ ಆನಂದತನುವೆನಿಸಿಯೂ, ಚಿತ್ಪ್ರಕಾಶವೇ ಭಸಿತವಾಗಿಹುದೇ ಚಿದ್ರೂಪ ತನು, ಚಿತ್ಕಾಂತೆಯೇ ರುದ್ರಾಕ್ಷಿಯೆನಿಸಿಹುದೇ ಚಿನ್ಮಯತನುವೆಂದೂ, ಈ ತೆರನಾಗಿ ಅಖಂಡ ಸ್ವರೂಪನಾಗಿ ಪರಶಿವ ತತ್ವವು ಆಷ್ಟಾಂಗಗಳಲ್ಲಿಯೂ ನೆಲೆಸಿರುವುದಾಗಿ ಶರಣನ ಕಾಯವೇ ಕೈಲಾಸವಾಗುವ ಅವಿರಳ ಅನುಭಾವವನ್ನು ಶರಣ ಪಡೆಯುತ್ತಾನೆ.
ಇಲ್ಲಿ:
ಅರಿವು ಗುರುವಾಗಿ ಸ್ಥೂಲ ತನು (ದೇಹ) ವಿನಲ್ಲಿ,
ಸುಜ್ಞಾನ ಲಿಂಗವಾಗಿ ಸೂಕ್ಷ್ಮ ತನು (ಮನಸ್ಸು) ವಿನಲ್ಲಿ,
ಸ್ವಾನುಭವ ಜಂಗಮವಾಗಿ ಕಾರಣ ತನು (ಆತ್ಮ) ವಿನಲ್ಲಿ,
ನಮ್ಮ ಕರುಣೆಯೆ ಪಾದೋದಕವಾಗಿ ನಿರ್ಮಲ ತನು (ಪಂಚೆಂದ್ರೀಯಗಳು) ವಿನಲ್ಲಿ,
ಕೃಪೆಯೆ ಪ್ರಸಾದವಾಗಿ ಆನಂದ ತನು (ಸುಖ-ದುಃಖಗಳನ್ನೂ ಮೀರಿದ) ವಿನಲ್ಲಿ,
ಚಿತ್ಪ್ರಕಾಶವೆ ಭಸಿತವೆ ಚಿದ್ರೂಪ ತನುವಿನಲ್ಲಿ (ಜ್ಞಾನೇಂದ್ರಿಯಗಳು) ವಿನಲ್ಲಿ,
ಚಿತ್ಕಾಂತಿಯೆ ರುದ್ರಾಕ್ಷಿಯಾಗಿ ಚಿನ್ಮಯ ತನು (ಪಂಚಪ್ರಾಣ) ವಿನಲ್ಲಿ,
ಸರ್ವಾಂಗದಲ್ಲಿ ಅಷ್ಟಾವರಣಸ್ವರೂಪಿಯಾಗಿ ಸರ್ವಾಂಗದಲ್ಲಿ,
ಹೀಗೆ ನಮ್ಮ ಶೃದ್ಧೆಯೇ ಗುರು ಲಿಂಗ ಜಂಗಮ ಅನಿಸಿಕೊಳ್ಳುತ್ತವೆ. ನಿಷ್ಠೆಯೆ ಮಂತ್ರ, ಅನುಭಾವವೆ ರುದ್ರಾಕ್ಷಿ, ಆನಂದವೆ ಪಾದೋದಕ, ಸಮರಸವೆ ವಿಭೂತಿ, ಪ್ರಸನ್ನತೆಯೆ ಪ್ರಸಾದ ಅನಿಸಿಕೊಳ್ತಾವೆ.
ಅಷ್ಟಾವರಣದಲ್ಲಿ ಗುರುತತ್ವ
ನರ ಜನ್ಮವ ತೊಡೆದು
ಹರ ಜನ್ಮವ ಮಾಡಿದ ಗುರುವೆ ನಮೋ.
ಭವಬಂಧನವ ಬಿಡಿಸಿ
ಪರಮಸುಖವ ತೋರಿದ ಗುರುವೆ ನಮೋ.
ಭವಿ ಎಂಬುದ ತೊಡೆದು
ಭಕ್ತೆ ಎಂದೆನಿಸಿದ ಗುರುವೆ ನಮೋ.
ಚೆನ್ನ ಮಲ್ಲಿಕಾರ್ಜುನನ ತಂದೆನ್ನ
ಕೈವಶಕ್ಕೆ ಕೊಟ್ಟ ಗುರುವೆ, ನಮೋ ನಮೋ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-86/ವಚನ ಸಂಖ್ಯೆ-245)
ಗುರುವಿನ ಮಹತ್ವವನ್ನ ಮಹಾದೇವಿ ಅಕ್ಕ ಈ ರೀತಿ ವರ್ಣಿಸಿದ್ದಾರೆ. ಅಷ್ಟಾವರಣಗಳಲ್ಲಿ ಮೊದಲ ತತ್ವ ಗುರು. ಇದು “ಗು” ಮತ್ತು “ರು” ಎಂಬ ಎರಡು ಅಕ್ಷರಗಳಿಂದ ಕೂಡಿದೆ. ಗು ಅಂದರೆ ಅಂಧಕಾರ ಅಥವಾ ಅಜ್ಞಾನ ಮತ್ತು ರು ಅಂದರೆ ಇಲ್ಲದ್ದು. ಯಾರಲ್ಲಿ ಅಜ್ಞಾನ ಇರುವುದಿಲ್ಲವೊ ಅವರು ಗುರು. ಗುರುವಿಗೆ ಜ್ಞಾನಿ, ತಿಳಿದವರು, ಮಾರ್ಗದರ್ಶಕ ಅಂತೆಲ್ಲ ಕರಿತಾರೆ. ಆತ್ಮದ ಅಂಧಕಾರವನ್ನ ಆಧ್ಯಾತ್ಮದ ಬೆಳಕಿನಿಂದ ತೊಲಗಿಸುವ ವ್ಯಕ್ತಿ ಗುರು ಅನಿಸಿಕೊಳ್ಳುತ್ತಾರೆ.
ಬಾಹ್ಯ ಆವರಣವಾದ ಈ ಗುರು ಅಂತರಂಗದ ಆವರಣವಾದ ಅರಿವಿನ ಕುರುಹು. ಅರಿವು ಅಂದರೆ ತಿಳುವಳಿಕೆ. ಸರಿ-ತಪ್ಪು, ಸತ್ಯ-ಅಸತ್ಯದ ಪರಿಜ್ಞಾನ ಅಥವಾ ವಿವೇಕ. ಈ ವಿವೇಕ ನಮ್ಮೊಳಗೆ ಮೂಡುವದು ಬಾಹ್ಯ ಗುರುವಿನ ಮೂಲಕ. ಈ ರೀತಿ ಗುರುವಿನ ಮೂಲಕ ಎಚ್ಚರವಾದ ಅರಿವು ನಮ್ಮನ್ನು ಕತ್ತಲೆಯಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನದ ಕಡೆಗೆ, ಭವದಿಂದ ಅನುಭಾವದ ಕಡೆಗೆ ಕರೆದೊಯ್ಯುತ್ತದೆ. ಅದಕ್ಕಾಗಿಯೆ ಬಸವಣ್ಣನವರು ತಮ್ಮ ಒಂದು ವಚನದಲ್ಲಿ
ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ,
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯಾ,
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ,
ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯಾ,
ಕೂಡಲಸಂಗನ ಶರಣರ ಅನುಭಾವದ ಬಲದಿಂದ
ಎನ್ನ ಭವದ ಕೇಡು ನೋಡಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-235/ವಚನ ಸಂಖ್ಯೆ-842)
ಅಂತ ಹೇಳಿದ್ದಾರೆ.
ಈ ಗುರು ತತ್ವ ಬೇರೆ ಧರ್ಮಗಳಲ್ಲೂ ಇದೆ ಮತ್ತು ಮಹತ್ವದ ಸ್ಥಾನವನ್ನೂ ಕೊಟ್ಟಿದ್ದಾರೆ. ಆದರೆ ಗುರು ಆಗುವ ಅರ್ಹತೆ ಕೇವಲ ನಿರ್ದಿಷ್ಟ ವ್ಯಕ್ತಿಗಳಿಷ್ಟೆ ಇದೆ. 15-16 ನೇ ಶತಮಾನದ ನಂತರ ಬಂದ ವೀರಶೈವರಲ್ಲಿ ಜಾತಿ ಜಂಗಮರಷ್ಟೆ ಗುರು ಆಗಬಲ್ಲವರಾಗಿದ್ದಾರೆ. ಆದರೆ ನಮ್ಮ ಲಿಂಗಾಯತರಲ್ಲಿ ಅರ್ಹತೆಯಿಂದ ಗುರುಗಳಾಗತ್ತಾರೆ. 12 ನೇ ಶತಮಾನದಲ್ಲಿ ಶೂದ್ರರಾಗಿದ್ದ ಅಲ್ಲಮರು ಗುರು ಸ್ಥಾನದಲ್ಲಿ ಇದ್ದರು. ಅನುಭವ ಮಂಟಪದ ಶೂನ್ಯ ಸಿಂಹಾಸನದ ಅಧ್ಯಕ್ಷರಾದರು. ಇನ್ನೂ ಹಿರಿಯರಾದ ಶಿವಯೋಗಿ ಸಿದ್ಧರಾಮರಿಗೆ ಲಿಂಗ ದೀಕ್ಷೆ ನೀಡಿದವರು ಕಿರಿಯ ವಯಸ್ಸಿನವರಾದ ಚೆನ್ನಬಸವಣ್ಣನವರು. ಬೇರೆ ಕಡೆಗಳಲ್ಲಿ ಗುರುಗಳು ಗುರುಗಳಾಗೆ ಇರ್ತಾರೆ, ಶಿಶ್ಯರು ಶಿಶ್ಯರಾಗಿಯೇ ಉಳಿತಾರೆ. ಆದರೆ ಲಿಂಗಾಯತರಲ್ಲಿ ಜ್ಯೋತಿ ಮುಟ್ಟಿ ಜ್ಯೋತಿ ಆಗುವ ಹಾಗೆ ಗುರು ಮುಟ್ಟಿ ತಮ್ಮ ಜ್ಞಾನದಿಂದ ಗುರುಗಳಾಗಿ ಬದಲಾಗುತ್ತಾರೆ.
ಮಡಕೆಯ ಮಾಡುವೊಡೆ ಮಣ್ಣೇ ಮೊದಲು,
ತೊಡಿಗೆಯ ಮಾಡುವೊಡೆ ಹೊನ್ನೇ ಮೊದಲು,
ಶಿವಪಥ ಅರಿವೊಡೆ ಗುರುಪಥ ಮೊದಲು,
ಕೂಡಲಸಂಗಮ ದೇವರನರಿವಡೆ,
ಶರಣರ ಸಂಗವೇ ಮೊದಲು.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-22/ವಚನ ಸಂಖ್ಯೆ-70)
ಎಂಬ ಬಸವಣ್ಣನವರ ವಚನದಂತೆ ಶಿವಪಥವನ್ನ ಅರಿಯಲು ಗುರುಪಥವೆ ಮೂಲ. ಗುರುವಿನ ಮುಖಾಂತರ ಮಾತ್ರ ಜೀವಾತ್ಮ ಪರಮಾತ್ಮ ಆಗಲು ಸಾಧ್ಯ.
ಈ ಗುರುವಿನಲ್ಲಿ ಮೂರು ಪ್ರಕಾರ:
- ದೀಕ್ಷಾ ಗುರು.
- ಶಿಕ್ಷಾ ಗುರು.
- ಮೋಕ್ಷಾ ಗುರು ಅಥವಾ ಜ್ಞಾನ ಗುರು.
ಈ ಮೂವರೂ ಒಬ್ಬರಿಂದಲೆ ಘಟಿಸುತ್ತದೆ. ಈ ಮೂವರಲ್ಲಿ ಯಾವ ಗುರುವಿನಿಂದ ಯಾವ ಕೆಲಸ ನೆರವೇರುತ್ತದೆ ಅಂತ ಶರಣ ಶಿವಲೆಂಕ ಮಂಚಣ್ಣನವರು ಈ ವಚನದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.
ಅಂಗಕ್ಕೆ ಲಿಂಗವ ಕೊಟ್ಟವ ಆಚಾರ್ಯನಾದ.
ಮನಕ್ಕರಿವ ತೋರಿದಾತ ಮೋಕ್ಷ ಆಚಾರ್ಯನಾದ.
ಮೋಕ್ಷ ವಿಮೋಕ್ಷವಾಗಿ ಉಭಯದ ಗೊತ್ತ ತೋರಿ,
ಕಾಯದ ಕರ್ಮವ ಕೆಡಿಸಿ, ಜೀವನ ಭವವ ಛೇದಿಸಿ,
ತದ್ರೂಪ ತೋರಿದ ಜ್ಞಾನಗುರು.
ಆತ ಪ್ರಕಾಶ, ಈಶಾನ್ಯಮೂರ್ತಿ
ಮಲ್ಲಿಕಾರ್ಜುನಲಿಂಗವು ತಾನೆ.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-73/ವಚನ ಸಂಖ್ಯೆ-154)
ಅಂಗಕ್ಕೆ ಅಂದರೆ ನಮಗೆ ಲಿಂಗವನ್ನು (ಇಷ್ಟಲಿಂಗ) ಕೊಟ್ಟವರು ದೀಕ್ಷಾಗುರು ಆದರೆ, ಮನದಲ್ಲಿ ಅರಿವನ್ನ ಮೂಡಿಸುವವರು ಶಿಕ್ಷಾಗುರು. ಮತ್ತು ನಮ್ಮ ಕಾಯದ ಕರ್ಮವ ಕೆಡಿಸಿ, ಜೀವದ ಭಯವ ಬಿಡಿಸಿ ಮೊಕ್ಷ ವಿಮೋಕ್ಷಗಳ ಮಾರ್ಗ ತೋರಿಸುವವರು ಮೋಕ್ಷಗುರು ಅಥವಾ ಜ್ಞಾನಗುರು ಅನಿಸಿಕೊಳ್ಳುತ್ತಾರೆ. ಈ ಗುರುವಿಗೆ ಪರಮ ಪ್ರಕಾಶ ಹೊಂದಿದ ಪರಮ ಶಿವ ಅಂತಾರೆ.
ವಚನ ಸಾಹಿತ್ಯ ಪರಂಪರೆಯ ಕೊನೆಯ ಕೊಂಡಿಯೆಂದು ಕರೆಯಲ್ಪಡುವ ಜೇವರ್ಗಿಯ ಷಣ್ಮುಖ ಶಿವಯೋಗಿಗಳು ಗುರುವಿನ ಕರುಣೆಯಿಂದ ತಾನಾದೆನು ಅಂತ ಬಹು ಸುಂದರವಾಗಿ ತಮ್ಮ ಒಂದು ವಚನದಲ್ಲಿ ಚಿತ್ರಿಸಿದ್ದಾರೆ.
ಗುರುಚರಣವ ಪೂಜಿಸಿ
ಎನ್ನ ಹಸ್ತಂಗಳು ಪರುಷವಾದವು.
ಗುರುಚರಣವ ನೋಡಿ
ಎನ್ನ ಕಂಗಳು ಪರುಷವಾದವು.
ಗುರುಚರಣವ ಹಾಡಿ ಹರಸಿ
ಎನ್ನ ಜಿಹ್ವೆ ಪರುಷವಾಯಿತ್ತು.
ಗುರುಚರಣವ ನೆನೆದು
ಎನ್ನ ಮನ ಪರುಷವಾಯಿತ್ತು.
ಗುರುಚರಣವ ಧ್ಯಾನಿಸಿ
ಎನ್ನ ಭಾವ ಪರುಷವಾಯಿತ್ತು
ನೋಡಾ ಅಖಂಡೇಶ್ವರಾ.
(ಸಮಗ್ರ ವಚನ ಸಂಪುಟ: ಹದಿನಾಲ್ಕು-2021/ಪುಟ ಸಂಖ್ಯೆ-181/ವಚನ ಸಂಖ್ಯೆ-184)
ಇಲ್ಲಿ ಷಣ್ಮುಖ ಶಿವಯೋಗಿಗಳು ಗುರುವಿನ ಮಹಿಮೆ, ಮಹತ್ವವನ್ನು ಅತ್ಯಂತ ಸರಳವಾಗಿ ಸುಂದರವಾಗಿ ಹಾಡಿ ಹೊಗಳಿದ್ದಾರೆ.
ಅಷ್ಟಾವರಣಗಳು ಅಂದರೆ ಎನು? ಷಟಸ್ಥಲಗಳು ಅಂದರೆ ಎನು? ಪಂಚಾಚಾರಗಳು ಅಂದರೆ ಎನು? ಅಂತ ತಿಳಿಸಿ ಕೊಡುವವನು ಗುರು. ಗುರು ಮುಖದಿಂದ ತಿಳಿದು ಆಚರಣೆಯಲ್ಲಿ ತರುವವನು, ಗುರುವಿಗೆ ತನುವನರ್ಪಿಸಿ, ಲಿಂಗಕ್ಕೆ ಮನವನರ್ಪಿಸಿ ಜಂಗಮಕ್ಕೆ ಧನವನ್ನು ತ್ರಿಕರಣಪೂರ್ವಕವಾಗಿ ಅರ್ಪಿಸುವವನೆ ನಿಜವಾದ ಶರಣ.
ಅಷ್ಟಾವರಣಗಳಲ್ಲಿ ಲಿಂಗತತ್ವ
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ,
ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ,
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ,
ಕೂಡಲಸಂಗಮದೇವಯ್ಯಾ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-202/ವಚನ ಸಂಖ್ಯೆ-744)
ಲಿಂಗದ ಮಹತ್ವವನ್ನ ಸಾರುವದಕ್ಕೆ ಇದಕ್ಕಿಂತ ಒಳ್ಳೆಯ ವಚನ ಇರಲಿಕ್ಕಿಲ್ಲ. ಮೊದಲು ಶೈವರು ಸ್ಥಾವರ ಲಿಂಗವನ್ನು ಪೂಜಿಸುತ್ತಿದ್ದರು. ನಂತರ ಶೈವರಲ್ಲಿನ ಪಾಶುಪತರು ಚರಲಿಂಗವನ್ನು ಪೂಜಿಸುತಿದ್ದರು. ಆದರೆ ಚರಲಿಂಗವನ್ನು ಗದ್ದುಗೆಯ ಮೇಲಿಟ್ಟು ಪೂಜೆ ಮಾಡಿ ಕೊರಳಲ್ಲಿ ಧರಿಸದೆ ಪೂಜಾ ಗ್ರಹದಲ್ಲಿ ಇಡುತ್ತಿದ್ದರು. ಶೈವರು ಸ್ಥಾವರಲಿಂಗ ಮತ್ತು ಚರಲಿಂಗವನ್ನು ಪೂಜಿಸಿದರೆ, 15 ನೇ ಶತಮಾನದ ನಂತರ ಬಂದ ವೀರಶೈವರು ಸ್ಥಾವರಲಿಂಗ ಮತ್ತು ಇಷ್ಟಲಿಂಗ ಎರಡನ್ನೂ ಪೂಜೆ ಮಾಡಲು ಪ್ರಾರಂಭಿಸಿದರು.
ಇಷ್ಟ ಲಿಂಗದ ಅವಶ್ಯಕತೆ ಏನಿತ್ತು?
ಮೊದಲನೆಯದಾಗಿ ವೈದಿಕರ ಶೋಷಣೆಯ ವಿರುದ್ಧ ಬಹುದೇವತಾ ಪೂಜೆಯ ಪರ್ಯಾಯವಾಗಿ ಒಂದು ಮಾರ್ಗ ಬೇಕಿತ್ತು. ಇಷ್ಟಲಿಂಗ ಪೂಜೆ ಮಾಡೋದು ಅಂದರೆ ನಮ್ಮೊಳಗಿನ ಅರಿವನ್ನ ಪೂಜೆ ಮಾಡೋದು. ಈ ಅರಿವು ಅನ್ನುವುದು ನಮ್ಮೊಳಗೆ ಇದೆ. ಮೊದಲು ದೇವರುಗಳನ್ನ ಪಂಚಭೂತಗಳಲ್ಲಿ ನೋಡುತ್ತಿದ್ದರು. ಭಯಂಕರ ಮಳೆ ಬಿರುಗಾಳಿ ಕಾಳ್ಗಿಚ್ಚು ಎಲ್ಲವನ್ನೂ ನೋಡಿ ನೀರು, ವಾಯು, ಬೆಂಕಿ ಅಂದರೆ ಶಕ್ತಿಶಾಲಿ ಅಂತ ಅಂದುಕೊಂಡು ಪೂಜೆ ಮಾಡುವುದಕ್ಕೆ ಶುರು ಮಾಡಿದರು. ಆಮೇಲೆ ಇವೆಲ್ಲವನ್ನೂ ನಿಯಂತ್ರಿಸುವ ಶಕ್ತಿ ಬೇರೆ ಏನೋ ಇದೆ ಅಂದುಕೊಂಡು ದೇವರುಗಳನ್ನು ಸೃಷ್ಟಿ ಮಾಡಿದರು. ಅವಕ್ಕೆ ಆಕಾರ ಕೊಟ್ಟರು. ಇದೆ ಮುಂದುವರೆದು ಪೂಜೆ ಮಾಡಲು ಮಧ್ಯವರ್ತಿಗಳು ಅಂದರೆ ಪೂಜಾರಿಗಳು ಹುಟ್ಟಿಕೊಂಡರು. ಶೋಷಣೆಗೆ ದಾರಿ ಮಾಡಿಕೊಟ್ಟರು. ಮುಂದೆ ದೇವರುಗಳಿಗಿಂತ ಪೂಜಾರಿಗಳದ್ದೇ ಆಟ ಶುರು ಆಯ್ತು. ಆಗ ಬಂದಿದ್ದೆ ಇಷ್ಟಲಿಂಗದ ಪರಿಕಲ್ಪನೆ. ದೇವರು ಯಾವ ಗುಡಿಯೊಳಗೂ ಇಲ್ಲ. ಕಲ್ಲು, ಮಣ್ಣು, ಮರದ ರೂಪದಲ್ಲಿಯೂ ಇಲ್ಲ. ಅದು ನಮ್ಮೊಳಗೆ ಇದೆ. ನಿರಾಕಾರ ರೂಪದಲ್ಲಿದೆ. ಅದು ನಮ್ಮ ಒಳಿತು ಕೆಡಕುಗಳನ್ನ ನಿರ್ಧರಿಸಲು ಅರಿವಿನ ರೂಪದಲ್ಲಿ ಇದೆ.
ನಾವು ಪೂಜಿಸುವ ಇಷ್ಟಲಿಂಗ ಗಂಡೂ ಅಲ್ಲ, ಹೆಣ್ಣೂ ಅಲ್ಲ. ಅದು ಬ್ರಹ್ಮಾಂಡದ ರೂಪ ನಿರಾಕಾರ ಚೈತನ್ಯದ ರೂಪ. ಇಲ್ಲಿ ದ್ವಂದ್ವಗಳು ಇಲ್ಲ. ದೇವರ ಬಿಟ್ಟು ನಾನಿಲ್ಲ, ನನ್ನ ಬಿಟ್ಟು ದೇವರಿಲ್ಲ. ಪೂಜೆಗೊಳ್ಳುವುದು ಲಿಂಗವಾದರೆ ಪೂಜೆ ಮಾಡುವವನು ಭಕ್ತ ಎಂಬ ದ್ವೈತ ಭಾವ ಅಳೆಯುತ್ತಾ ಪೂಜಿಸುವವನು ನಾನೇ ಪೂಜೆಗೊಳ್ಳುವವನು. ನನ್ನ ಒಳಗಿನ ಅರಿವೆ ಶಿವ ಎಂಬ ಭಾವ ಬಂದಾಗ, ನಮ್ಮ ಕಣ್ಣ ಮುಂದೆ ಇರುವ ಶಿವನ ರೂಪ ಕರಗಿ, ಅರಿವಿನ ಬೆಳಕು ಮೂಡುತ್ತದೆ. ಇಷ್ಟ ಲಿಂಗದ ಕಲ್ಪನೆಯನ್ನು ನೀಡಿದ ಬಸವಣ್ಣನವರನ್ನು ಕುರಿತು ಅಲ್ಲಮಪ್ರಭುಗಳು ಈ ರೀತಿ ಹೇಳುತ್ತಾರೆ.
ನೆನೆದೆಹೆನೆಂದಡೆ ಮನಕ್ಕೆ ಸಿಲುಕದು,
ಅರಿದೆಹೆನೆಂದಡೆ ಕುರುಹಿಂಗೆ ಬಾರದು,
ಕಂಡೆಹೆನೆಂದಡೆ ಮೂರ್ತಿಯಲ್ಲ.
ತನುವಿನೊಳಗಿಲ್ಲದ ಮನದೊಳಗಿಲ್ಲದ ಘನವು,
ನಿಮ್ಮ ಮನಕ್ಕೆ ವೇದ್ಯವಾದ ಪರಿ, ಎಂತಯ್ಯಾ?
ಗುಹೇಶ್ವರನೆಂಬ ಲಿಂಗವು
ಜಗದ ಕಣ್ಣಿಂಗೆ ಕತ್ತಲೆಯ ಕವಿಸಿ,
ತನ್ನ ತಪ್ಪಿಸಿಕೊಂಡಿಪ್ಪ [ಆ] ಭೇದ
ನಿನ್ನೊಳಗಡಗಿದ ಪರಿ ಎಂತು
ಹೇಳಾ ಸಂಗನಬಸವಣ್ಣಾ?
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-488/ವಚನ ಸಂಖ್ಯೆ-1309)
ಈ ಅಗಮ್ಯನಾದ, ಅಗೋಚರನಾದ ದೇವ ನಮ್ಮಂತಹ ಹುಲು ಮಾನವರ ಮನದೊಳಗೆ ಹೊಳೆಯಲಿಲ್ಲ. ಯಾರ ದೃಷ್ಟಿಗೂ ಸಿಗದೇ ಇದ್ದ ದೇವ ನಿನ್ನಲ್ಲಿ ಇಷ್ಟಲಿಂಗದ ಕುರುಹಾಗಿ ಹೇಗೆ ರೂಪಗೊಂಡಿತು? ಅಂತ ಬಸವಣ್ಣನವರ ಆಗಾಧ ಶಕ್ತಿಯನ್ನು ವರ್ಣಿಸುತ್ತಾರೆ.
ಇನ್ನು ಈ ಇಷ್ಟಲಿಂಗ ಅಂದರೆ ಏನು ಅಂತ ನೋಡೋಣ.
ಇಷ್ಟ ಅಂದರೆ ಪ್ರಿಯವಾದದ್ದು. ಅದರ ಇನ್ನೊಂದು ಅರ್ಥ ಪರಮಾತ್ಮ. ಲಿಂಗ ಅಂದರೆ ಕುರುಹು ಅಥವಾ ಚಿಹ್ನೆ. ಆದರೆ ಇಲ್ಲಿ ಆ ಪರಮಾತ್ಮ ನಾವು ನಿತ್ಯ ನೋಡುವ, ಎಲ್ಲಾ ಕಡೆ ನಂಬುವ ಶಿವ ಅಥವಾ ರುದ್ರನಾಗಿರದೆ, ಆತ್ಮ ಸಾಧನೆಯ ಪ್ರತೀಕ ಆಗಿದ್ದಾನೆ. ಬಹಿರಂಗದ ಆವರಣದ ಇಷ್ಟಲಿಂಗ ಗುರು ದೀಕ್ಷೆ ಕೊಡುವಾಗ ಕರಸ್ಥಳದ ಲಿಂಗ ಆದರೂ ಕೂಡ ಅದು ತನ್ನೊಳಗೆ ಇರುವ ಪ್ರಾಣಲಿಂಗವಾಗಿ ಪರಿವರ್ತನೆ ಆಗುತ್ತದೆ.
ಬಸವಣ್ಣನವರು ಆಧ್ಯಾತ್ಮಕ್ಕೆ ವಿಜ್ಞಾನವನ್ನು ಕೊಟ್ಟ ಜಗತ್ತಿನ ಮೊದಲ ಮೊಟ್ಟಮೊದಲ ವ್ಯಕ್ತಿಯಾಗಿದ್ದಾರೆ. ಅವರು 12 ನೇ ಶತಮಾನದಲ್ಲಿ ಪೀನಿಯಲ್ ಗ್ರಂಥಿ ಎಂಬ ಗ್ರಂಥಿಯ ಬಗ್ಗೆ ಅರಿತಿದ್ದರು. ಅದು ಮನುಷ್ಯನ ಆತ್ಮದ ಮೂಲಸ್ಥಾನ. 16 ನೇ ಶತಮಾನದಲ್ಲಿ ಫ್ರಾನ್ಸ್ ನ “ರೆನೇ ಡೆಸ್ಕಾರ್ಟೆಸ್” ಎಂಬ ತತ್ವಜ್ಞಾನಿ ಮತ್ತು ವಿಜ್ಞಾನಿ “ಆಧುನಿಕ ತತ್ವಶಾಸ್ತ್ರ ಜನಕ” ಎಂದೇ ಪ್ರಸಿದ್ಧಿಯಾದವರು. ಇವರು ಈ ಪೀನಿಯಲ್ ಗ್ರಂಥಿಯನ್ನು ಕುರಿತು ಮಾತನಾಡಿದ ಪ್ರಥಮ ತತ್ವಶಾಸ್ತ್ರಜ್ಞ ಎಂಬ ಶ್ರೇಯಸ್ಸನ್ನು ಪಡೆದವರು. ಈ ಗ್ರಂಥಿ ಮೆಲೋಟಾನ್, ಸೆರಾಟೋನ್ ಮತ್ತು ಡೈ ಮಿಥೈಲ್ ಟ್ರಿಪೊಮೈನ್ ಎಂಬ ಮೂರು ಮುಖ್ಯ ಹಾರ್ಮೋನುಗಳನ್ನು ಸ್ರವಿಸುತ್ತದೆ.
ಮೆಲಟೋನಿನ್: ಈ ಹಾರ್ಮೋನು ಕತ್ತಲೆ ಮತ್ತು ಕಪ್ಪು ಬಣ್ಣದ ಪ್ರಚೋದನೆಯಿಂದ ಹೆಚ್ಚಾಗಿ ಸ್ರವಿಸುತ್ತದೆ. ಜಾಗರಣೆ ಮತ್ತು ನಿದ್ರೆಯನ್ನು ನಿಯಂತ್ರಣ (Control the Circadian Rythm) ಚಕ್ರಕ್ಕೆ ಮೆಲಟೋನಿನ್ ಎನ್ನುವ ಹಾರ್ಮೋನು ಸ್ರವಿಸುತ್ತದೆ. ಮೆಲಟೋನಿನ್ ದ್ರವವು ದೇಹದ ಹಲವಾರು ಭಾಗಗಳ ಜೊತೆಗೆ ಸಮನ್ವಯಗೊಳಿಸುತ್ತದೆ. ಒಟ್ಟಾರೆ ದೇಹದ ಭಾವನೆಗಳನ್ನು ನಿಯಂತ್ರಿಸುತ್ತದೆ.
ಸೆರಾಟೋನ್: ಈ ಹಾರ್ಮೋನು ಕರುಳು ಮತ್ತು ನರಮಂಡಲದಲ್ಲಿ ಸ್ರವಿಸುವುದರ ಮೂಲಕ ಮನುಷ್ಯನ ಜೀರ್ಣಕ್ರಿಯೆ (Endocrine System) ಗಳನ್ನು ನಿಯಂತ್ರಿಸುತ್ತದೆ.
ಡೈ ಮಿಥೈಲ್ ಟ್ರಿಪಮೈನ: ಈ ಹಾರ್ಮೋನು ಪ್ರತಿನಿತ್ಯ ಸ್ರವಿಸದೆ, ಮನುಷ್ಯ ಪ್ರಜ್ಞೆಯ ವ್ಯವಸ್ಥೆ ಬುಡಮೇಲು ಆದಾಗ, ಮತ್ತು ಮನುಷ್ಯ ಅತ್ಯಂತ ಕಠಿಣ ಪರಿಸ್ಥಿತಿ ಮತ್ತು ಒತ್ತಡದ ಪರಿಸ್ಥಿತಿ ಎದುರಿಸುವಾಗ ಈ ಹಾರ್ಮೊನು ಸ್ರವಿಸುತ್ತದೆ.
ಇನ್ನು ಈ ಹಾರ್ಮೋನುಗಳು ನಮ್ಮ ಇಷ್ಟಲಿಂಗ ಮತ್ತು ಇಷ್ಟಲಿಂಗದ ಪೂಜೆಗೆ ಹೇಗೆ ಅಪ್ಲೈ ಆಗುತ್ತವೆ ಅಂತ ನೋಡೋಣ.
ಇಷ್ಟಲಿಂಗ ಪೂಜೆಯನ್ನ ಯಾವಾಗ ಮಾಡಬೇಕು?
ಗಾಂಧಾರಿ ಮಾಂಧಾರಿಯೆಂಬ ಅಹೋರಾತ್ರಿಯಲ್ಲಿ
ಲಿಂಗವ ಪೂಜಿಸಬೇಕು.
ಊರ ಕೋಳಿ ಕೂಗದ ಮುನ್ನ,
ಕಾಡ ನವಿಲು ಒದರದ ಮುನ್ನ,
ಲಿಂಗವ ಪೂಜಿಸಬೇಕು.
ಗೋವುಗಳ ಕೊಲುವ ಪಾಪಿಯ ದನಿಯ ಕೇಳದ ಮುನ್ನ,
ತುಂಬಿ ಮುಟ್ಟಿ ಪುಷ್ಪ ನಿರ್ಮಾಲ್ಯವಾಗದ ಮುನ್ನ
ಲಿಂಗವ ಪೂಜಿಸಬೇಕು.
ಅದೆಂತೆಂದಡೆ;
“ಯೋ ಲಿಂಗಮರ್ಧರಾತ್ರೌ ತು ಶುಚಿರ್ಭೂತ್ವಾ ಪ್ರಪೂಜಯೇತ್ |
ಅಗ್ನಿಷ್ಟೋಮಸಹಸ್ರಸ್ಯ ಧರ್ಮಸ್ಯ ಲಭತೇ ಫಲಮ್ ||” ಎಂದುದಾಗಿ,
ಶುದ್ಧಾಂತಃ ಶರಣನಾಗಿ ಶಿವಪೂಜೆಯ ಮಾಡಬೇಕು
ಆತಂಗೆ ಅಗ್ನಿಷ್ಟೋಮ ಸಹಸ್ರಫಲವಹುದು.
ತನ್ನೊಡನೆ ಮಲಗಿರ್ದ ಸತಿಯನೆಬ್ಬಿಸದೆ ಶಿವಲಿಂಗಕ್ಕೆರೆವ
ಸದ್ಭಕ್ತನ ಶ್ರೀಪಾದವ ತೋರಿ ಬದುಕಿಸಯ್ಯಾ,
ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-345/ವಚನ ಸಂಖ್ಯೆ-1169)
ಗಾಂಧಾರಿ ಎಂದರೆ 12 ರಿಂದ 3 ಗಂಟೆ ಮತ್ತು ಮಾಂಧಾರಿ ಎಂದರೆ 3 ರಿಂದ 6 ಗಂಟೆಯವರೆಗಿನ ಸಮಯ. ಇವೆರಡರ ಮಧ್ಯೆ ಕೋಳಿ ಕೂಗದ ಮುನ್ನ, ಗಿರಿಯ ನವಿಲು ಒದರದ ಮುನ್ನ, ಪುಷ್ಪಗಳು ಅರಳುವ ಮುನ್ನ ಅಂದರೆ ಸುಮಾರು ಬೆಳಗಿನ ನಾಲ್ಕರ ಜಾವದಲ್ಲಿ ಲಿಂಗವನ್ನು ಪೂಜಿಸಬೇಕು ಅಂತ ಹೇಳುತ್ತಾರೆ. ಆ ಸಮಯದಲ್ಲಿ ಗ್ಯಾಲಕ್ಸಿಯಿಂದ ನಿರಂತರವಾಗಿ ಶಕ್ತಿ ಕಿರಣಗಳು ಬೀಳುತ್ತಿರುತ್ತವೆ ಮತ್ತು ಮೆಲೊಟಿನ್ ಹಾರ್ಮೋನ್ ಸಹ ಕ್ರಿಯಾಶೀಲವಾಗಿರುತ್ತವೆ. ಲಿಂಗ ಪೂಜೆಯನ್ನು ಒಂದು ಕೆಲಸ ಅಥವಾ ಕರ್ತವ್ಯ ಅಂತ ಭಾವಿಸದೆ, ತನು ಮನದಿಂದ ಭಾವಕ್ಕೆ ಒಲಿದು ಪೂಜಿಸಬೇಕು.
ನಮ್ಮ ಅಂತರಾತ್ಮದಲ್ಲಿಯೇ ಭಗವಂತ ಇರುವಾಗ ಇಷ್ಟಲಿಂಗವನ್ನು ಯಾಕೆ ಪೂಜಿಸಬೇಕು?
ಹಸುವಿನಲ್ಲಿ ಹಾಲಿನ ರೂಪದಲ್ಲಿ ತುಪ್ಪ ಇದ್ದರೂ ಕೂಡ ದಷ್ಟಪುಷ್ಟವಾಗಿ ಬೆಳೆಯಲು ಚೆನ್ನಾಗಿ ಪೋಷಣೆ ಬೇಕೆಂದರೆ ಹಾಲನ್ನು ಕರೆದು ತುಪ್ಪವ ಮಾಡಿ ತಿನ್ನಬೇಕು. ಹಾಗೆಯೇ ನಮ್ಮೊಳಗೆ ಪರಮಾತ್ಮ ಇದ್ದರೂ ಕೂಡ, ಅದನ್ನ ಗುರು ಮುಖದಿಂದ ಕರಸ್ಥಳಕ್ಕೆ ಲಿಂಗ ರೂಪದಲ್ಲಿ ಪಡೆದು, ಸತ್ಕ್ರೀಯೆ, ಅರಿವು, ಆಚಾರ, ಅನುಭಾವಗಳ ಮೂಲಕ ಪ್ರಾಣಲಿಂಗಕ್ಕೆ ಅರ್ಪಿಸಿಕೊಂಡಾಗ ನಾನು ನನ್ನದು ಎಂಬ ಅಹಂಕಾರ ಅಳಿದು ಪರಮಾತ್ಮನ ಜೊತೆ ಒಂದು ಗಾಢವಾದ ಸಂಬಂಧ ಉಂಟಾಗುತ್ತದೆ.
ಇಷ್ಟಲಿಂಗ ಪೂಜೆ ಸಮಾಜದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ?
ಎರಡು ಮುಖದ ಗಂಡಭೇರುಂಡ ಪಕ್ಷಿಗೆ, ಒಂದು ತಲೆಯ ಬಾಯಿಯ ಮೂಲಕ ಹಾಲು ಕುಡಿಸಿ, ಇನ್ನೊಂದರ ಮೂಲಕ ವಿಷ ಕುಡಿಸಿದರೆ ಅದು ಸತ್ತು ಹೋಗುತ್ತದೆ. ಅದೇ ರೀತಿ ಭಗವಂತನ ಒಂದು ಮುಖ ಇಷ್ಟಲಿಂಗವಾದರೆ ಇನ್ನೊಂದು ಮುಖ ಸಮಾಜ. ಇಷ್ಟಲಿಂಗವನ್ನು ಪೂಜಿಸಿ ಸಮಾಜವನ್ನು ಕಡೆಗಣಿಸಬಾರದು.
ಯಾವ ರೀತಿ ಇಷ್ಟಲಿಂಗ ಪೂಜೆ ಮಾಡಬೇಕು?
ಸರಳ ಪೂಜೆಯಿಂದ, ಸದ್ಗುಣಗಳೆಂಬ ಪುಷ್ಪವನ್ನು ಪ್ರಾಣಲಿಂಗಕ್ಕೆ ಅರ್ಪಿಸಿ ಆ ಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವಂತಾದರೆ ಅಂತಹ ಸಹಜ ಪೂಜೆಯನ್ನು ಮಾಡಿದ ಮಾನವ ಮಹಾದೇವ ಆಗುತ್ತಾನೆ.
ಇಷ್ಟ ಲಿಂಗವನ್ನು ಶರೀರದ ಯಾವ ಭಾಗದಲ್ಲಿ ಧರಿಸಬೇಕು?
ನಮ್ಮ ಅಂತರಾತ್ಮದ ಕುರುಹಾದ ಇಷ್ಟಲಿಂಗವನ್ನು ಅನಾಹತ ಚಕ್ರದ ಸ್ಥಾನದಲ್ಲಿ ಅಂದರೆ ಹೃದಯಕ್ಕೆ ಹತ್ತಿರವಾಗಿ ಎದೆಯ ಮೇಲೆ ಧರಿಸಬೇಕು. ಮೂಲಾಧಾರ ಚಕ್ರದಲ್ಲಿ ಜೀವಾತ್ಮ ಮತ್ತು ಬ್ರಹ್ಮರಂದ್ರದಲ್ಲಿ ಪರಮಾತ್ಮ ಇರುತ್ತಾನೆ. ಅನಾಹತ ಚಕ್ರದಲ್ಲಿ ಅಂತರಾತ್ಮ ಇರುವುದು. ಅನುಷ್ಠಾನ ಪೂಜೆಗಳಿಂದ ಒಂದು ಶಕ್ತಿ (ಓಜಸ್ಸು) ಉದಯವಾಗಿ ಊರ್ಧ್ವ ಮುಖವಾಗಿ, ಒಂದೊಂದು ಚಕ್ರಗಳನ್ನು ಏರುತ್ತಾ ಬರುತ್ತದೆ ಮತ್ತು ಪರಮಾತ್ಮ ಬ್ರಹ್ಮ ರಂದ್ರದಿಂದ ಕೆಳಗೆ ಇಳಿಯುತ್ತಾ ಬರುತ್ತಾನೆ. ಜೀವಾತ್ಮ ಮತ್ತು ಪರಮಾತ್ಮ ಇಬ್ಬರೂ ಅನಾಹತ ಚಕ್ರ ಅಂದರೆ ಹೃದಯದ ಹತ್ತಿರ ಅಂತರಾತ್ಮದಲ್ಲಿ ಸಂಧಿಸುತ್ತಾರೆ. ಕೆಳಗಿನಿಂದ ಮೇಲೆ ಹೋಗುವ ಜೀವನ ಭಕ್ತಿ ಮತ್ತು ಮೇಲಿಂದ ಕೆಳಗೆ ಧುಮುಕುವ ಶಿವನ ಶಕ್ತಿಗಳು ಹೃದಯ ಕಮಲದಲ್ಲಿ ಬೆರೆತು ಒಂದಾಗುವುದೇ ಮುಕ್ತಿ. ಇಷ್ಟಲಿಂಗವು ಮುಕ್ತಿಯ ಪ್ರತಿನಿಧಿ. ಜೀವಾತ್ಮ ಮತ್ತು ಪರಮಾತ್ಮನ ಸಂಗಮಕ್ಕೆ ಸಜ್ಜೆ ಆಗಿರುವ ಹೃದಯದ ಮೇಲೆ ಲಿಂಗವನ್ನು ಧರಿಸುವುದು ತಾತ್ವಿಕವಾಗಿಯೂ ಸಾಂಕೇತಿಕವಾಗಿಯೂ ಶ್ರೇಷ್ಠವಾಗಿದೆ.
ಇಷ್ಟಲಿಂಗ ಯೋಗ ಸಾಧನೆಯ ಪ್ರತಿಯೊಂದು ಹಂತವೂ ವೈಜ್ಞಾನಿಕವಾಗಿ ಇದ್ದಾವೆ. ನಾವು ಲಿಂಗವನ್ನು ಎಡಗೈಯಲ್ಲಿ ಹಿಡಿದು ಅನಿಮಿಷ ದೃಷ್ಟಿ ಇಟ್ಟು ನೋಡುವಾಗ ಕಣ್ಣ ಮುಂದಿನ ಎಡ ಭಾಗದಿಂದ ಬರುವ ದೃಷ್ಟಿಯ ಕಿರಣಗಳು ಮನುಷ್ಯನ ಬಲ ಭಾಗದ ಮೆದುಳನ್ನು ಪ್ರಚೋದಿಸುತ್ತದೆ. ಈ ಬಲ ಮೆದುಳು ಮನುಷ್ಯನಲ್ಲಿ ಶಾಂತಿ, ಸಂಗೀತ, ಕಲೆ ಮತ್ತು ತ್ಯಾಗದ ಭಾವನೆಗಳನ್ನು ಮತ್ತು ಸೃಜನಶೀಲತೆಯನ್ನು ಹುಟ್ಟಿಸುತ್ತದೆ.
ಇಷ್ಟಲಿಂಗವನ್ನು ಕಂಥೆ, ಭಸ್ಮ ಮತ್ತು ತುಪ್ಪ ಅಥವಾ ಎಣ್ಣೆಯ ದೀಪದ ಕಾಡಿಗೆಯಿಂದ ತಯಾರು ಮಾಡುತ್ತಾರೆ. ಇದನ್ನು ಶರೀರದ ಮೇಲೆ ಧರಿಸಿದರೆ ಶರೀರದ ಉಷ್ಣತೆಯನ್ನು ಹೀರಿಕೊಳ್ಳುತ್ತದೆ.
ಬೇರೆ ಧರ್ಮಗಳಲ್ಲಿ ಅವುಗಳ ಸಂಕೇತಗಳು ಮನಸ್ಸಿನಲ್ಲಿ ಕೇವಲ ಭಾವನಾತ್ಮಕ ನಿಷ್ಠೆಯನ್ನ ಹುಟ್ಟಿಸಿದರೆ, ನಮ್ಮ ಲಿಂಗಾಯತ ಧರ್ಮದಲ್ಲಿ ಇಷ್ಟಲಿಂಗ ಭೌತಿಕ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಸತ್ಯವಾಗಿದ್ದು ಮನುಷ್ಯನಲ್ಲಿ ಆರೋಗ್ಯ ಸುಖ ನೆಮ್ಮದಿ ಮತ್ತು ದೀರ್ಘಾಯುಷ್ಯವನ್ನು ಸಾಧಿಸಿಕೊಳ್ಳುವ ಸಾಧನವಾಗಿದೆ.
ಅಷ್ಟಾವರಣಗಳಲ್ಲಿ ಜಂಗಮ ತತ್ವ
ಅಂಗದಲ್ಲಿ ಅಳವಟ್ಟಿಪ್ಪ ಆಚಾರವೆ ಲಿಂಗವೆಂದರಿದ ಬಸವಣ್ಣನು,
ಮನದಲ್ಲಿ ಬೆಳಗುತ್ತಿಪ್ಪ ಅರಿವೆ ಜಂಗಮವೆಂದರಿದ ಬಸವಣ್ಣನು,
ಈ ಎರಡರ ಸಂಗವೆ ತಾನೆಂದರಿದನು ಬಸವಣ್ಣನು,
ಮಾಡುವ ದಾಸೋಹವೆ ಲಿಂಗಜಂಗಮವೆಂದರಿದನು ಬಸವಣ್ಣನು,
ನಮ್ಮ ಗುಹೇಶ್ವರಲಿಂಗದಲ್ಲಿ,
ಸಂಗನಬಸವಣ್ಣನ ನಿಲವನರಿಯಬೇಕು ಕೇಳಾ ಚಂದಯ್ಯಾ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-220/ವಚನ ಸಂಖ್ಯೆ-707)
ಇಲ್ಲಿ ಅಲ್ಲಮ ಪ್ರಭುಗಳು ಬಸವಣ್ಣನವರ ಲಿಂಗವಾಗುವುದು, ಜಂಗಮವಾಗುವುದು ಎಂದು ಸ್ಪಷ್ಟವಾಗಿ ವಿವರಿಸಿದ್ದಾರೆ. ಮನದ ಒಳಗಿನಿಂದ ಬರುವ ಆಚಾರವೆ ಲಿಂಗ, ಮನದಲ್ಲಿ ಬೆಳಗುತ್ತಿರುವ ಅರಿವೇ ಜಂಗಮ, ಮಾಡುವ ದಾಸೋಹವೇ ಲಿಂಗ ಜಂಗಮವೆಂದು ಬಸವಣ್ಣನವರ ಪ್ರತಿಪಾದನೆ ಆಗಿತ್ತು.
ಲಿಂಗ ಜಂಗಮ, ಜಂಗಮ ಲಿಂಗವೆಂಬುದ
ಎನಗೆ ತೋರಿದವರಾರಯ್ಯಾ?
ಲಿಂಗವ ಪೂಜಿಸಿದಡೆ ಭವ ಹರಿಯದೆಂದು,
ಜಂಗಮ ಮುಖಲಿಂಗವಾಗಿ ಬಂದು ಶಿಕ್ಷಿಸಿ, ರಕ್ಷಿಸಿ,
ಎನ್ನ ಆದಿ ಅನಾದಿಯ ತೋರಿ,
ಪ್ರಾಣಲಿಂಗ ಜಂಗಮವೆಂದು
ಎನಗೆ ಪ್ರತಿಷ್ಠಿಸಿ ತೋರಿದಿರಾಗಿ,
ಕೂಡಲಸಂಗಮದೇವಾ,
ನಿಮ್ಮಿಂದಲಾನು ಬದುಕಿದೆನು ಕಾಣಾ, ಪ್ರಭುವೆ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-399/ವಚನ ಸಂಖ್ಯೆ-1332)
ಇಲ್ಲಿ ಬಸವಣ್ಣನವರು ಲಿಂಗ ಜಂಗಮಗಗಳ ಗಾಢ ಸಂಬಂಧವನ್ನು ಹೇಳಿದ್ದಾರೆ. ಇಲ್ಲಿ ಬಳಸಿರುವ ಪ್ರಾಣಲಿಂಗ ಅಂತರಂಗದ್ದು. ಈ ಪ್ರಾಣಲಿಂಗವೆ ಜಂಗಮವೆಂದು ನನಗೆ ಪ್ರಭು ತೋರಿಸಿದರೆಂದು ಬಸವಣ್ಣನವರು ತಿಳಿಸಿದ್ದಾರೆ.
ಆಚಾರ ವಿಡಿದು ಲಿಂಗ, ಅನುಭಾವವಿಡಿದು ಜಂಗಮ.
ತನುವಿನ ಪ್ರಾಣ ಆಚಾರ, ಮನದ ಪ್ರಾಣ ಅನುಭಾವ,
ಇದು ಕಾರಣ ಕೂಡಲಚನ್ನಸಂಗಮದೇವಾ,
ಲಿಂಗವನೂ ಜಂಗಮನೂ ಬೇರರಸಲಿಲ್ಲ.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-43/ವಚನ ಸಂಖ್ಯೆ-111)
ಈ ವಚನದಲ್ಲಿ ಚೆನ್ನಬಸವಣ್ಣನವರು ಕೂಡ ಲಿಂಗ ಜಂಗಮ ಬೇರೆ ಬೇರೆ ಅಲ್ಲವೆಂದು ಹೇಳಿದ್ದಾರೆ. ಹೊರಗಿನ ಇಷ್ಟಲಿಂಗ ಸಾಧನೆಯ ಮೂಲಕ ಮುನ್ನಡೆದಾಗ ಅಂತರಂಗದ ಲಿಂಗವು ಆಚಾರಲಿಂಗವಾಗುತ್ತದೆ. ಅದೆ ರೀತಿ ಹೊರಗಿನ ಮೂರ್ತ ರೂಪದ ಜಂಗಮನು ತರಂಗದ ಅನುಭವದ ಮೂಲಕ ಕಾಣಿಸಿಕೊಳ್ಳುತ್ತಾನೆ. ಕಾಯ ಜೀವ ಒಂದಾಗಿರುವಂತೆ ಲಿಂಗ ಜಂಗಮ ಒಂದಾಗಿವೆ ಅಂತ ಚನ್ನಬಸವಣ್ಣನವರು ಹೇಳುತ್ತಾರೆ.
ಲಿಂಗ ಬಿಟ್ಟು ಜಂಗಮವಿಲ್ಲ ಜಂಗಮ ಬಿಟ್ಟು ಲಿಂಗವಿಲ್ಲ ಎಂದು ಹಲವಾರು ಶರಣರು ತಮ್ಮ ವಚನಗಳಲ್ಲಿ ವಿವರಿಸಿದ್ದಾರೆ. ಗುರು-ಲಿಂಗ-ಜಂಗಮ ಪ್ರಾರಂಭದಲ್ಲಿ ಹೊರಗೆ ಕಂಡರೂ ನಿಜವಾಗಿ ಇರುವುದು ಭಕ್ತನ ಒಳಗಡೆ. ಇನ್ನು ಗುರು-ಲಿಂಗ-ಜಂಗಮ ಎಂಬುದು ತ್ರಿವಿಧೋಪಾಸನೆಯ ಒಂದು ಭಾಗ.
ಜಂಗಮ ಅಂದರೆ ಚಲಿಸುವ ಲಿಂಗ ಅಥವಾ ಜ್ಞಾನದ ಸ್ವರೂಪ. ಶರಣರ ದೃಷ್ಟಿಯಲ್ಲಿ ಜಂಗಮ ಜಾತಿ ವಾಚಕ ಶಬ್ದವಾಗಿರದೆ ತತ್ವ ವಾಚಕ ಶಬ್ದವಾಗಿದೆ. ಜಂಗಮ ಅಂದರೆ ಚಲಿಸುವ ಗತಿಯಲ್ಲಿರುವ ವ್ಯಕ್ತಿ ಅಥವಾ ಶಕ್ತಿ, ಜಂಗಮ ಅಂದರೆ ಚಲಿಸುವಂತಹದು, ಚೈತನ್ಯವಿರುವಂತಹದ್ದು, ಬೆಳೆಯುವಂತಹದ್ದು, ಸಾರ್ವಜನಿಕವಾಗಿ ಸಮಾಜಕ್ಕೆ ವಿನಿಯೋಗವಾಗುವಂತಹದ್ದು. ಇಷ್ಟಲಿಂಗ ಧರಿಸಿರುವವರು ಎಲ್ಲರೂ ಜಂಗಮರೆ,
ಲಿಂಗ ಮತ್ತು ಜಂಗಮ ಬೇರೆ ಬೇರೆ ಅಲ್ಲ ಅಂತ ಚೆನ್ನಬಸವಣ್ಣನವರು, ಅಲ್ಲಮಪ್ರಭುಗಳು, ಬಸವಣ್ಣನವರು ತಮ್ಮ ತಮ್ಮ ವಚನಗಳಲ್ಲಿ ಹೇಳಿದ್ದಾರೆ. ಜಂಗಮ ಅಂದರೆ ಗತಿಶೀಲವಾಗಿರುವುದು ಅದು ಜೀವಾತ್ಮ. ಆತ್ಮವನ್ನು ಅರಿವಿಗೆ ತಂದು ಕೊಡುವಂತಹ ಆತ್ಮಜ್ಞಾನಿಯೆ ಜಂಗಮ.
ಜನನ ಮರಣ ದೇಹಧರ್ಮವಲ್ಲದೆ ಜಂಗಮಕ್ಕೆಲ್ಲಿಹದೋ!
ಕ್ಷುದಾ-ತೃಷೆ ಪ್ರಾಣಧರ್ಮವಲ್ಲದೆ ಜಂಗಮಕ್ಕೆಲ್ಲಿಹದೊ!
ಸುಖ-ದುಃಖ ಮನೋಧರ್ಮವಲ್ಲದೆ ಜಂಗಮಕ್ಕೆಲ್ಲಿಹದೊ!
ಜ್ಞಾನಾಜ್ಞಾನಂಗಳು ಮುಮುಕ್ಷುವಿಂಗಲ್ಲದೆ,
ನಿಮ್ಮಲ್ಲಿ ಸಮರಸವಾದ ಸಚ್ಚಿದಾನಂದ ಶಿವಯೋಗಿ
ಜಂಗಮಕ್ಕೆಲ್ಲಿಹದೊ, ಕಪಿಲಸಿದ್ಧಮಲ್ಲಿಕಾರ್ಜುನಾ!
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-451/ವಚನ ಸಂಖ್ಯೆ-1443)
ಇಲ್ಲಿ ಸಿದ್ದರಾಮೇಶ್ವರರು ನಮ್ಮ ದೇಹ ಜಂಗಮವಲ್ಲ, ಪ್ರಾಣ ಜಂಗಮವಲ್ಲ, ಮನಸ್ಸು ಕೂಡ ಜಂಗಮವಲ್ಲ. ಇವಕ್ಕೆಲ್ಲಾ ಆಧಾರವಾಗಿರುವ ಆತ್ಮವೇ ಜಂಗಮ. ಆತ್ಮನಲ್ಲಿ ಸಮರಸ ಹೊಂದಿರುವ ಶಿವಯೋಗಿಯೆ ಜಂಗಮ ಅಂತ ಈ ವಚನದಲ್ಲಿ ಹೇಳುತ್ತಾರೆ.
ಬಸವಣ್ಣನವರು ಇನ್ನೂ ಮುಂದೆ ಹೋಗಿ ತಮ್ಮ ಒಂದು ವಚನದಲ್ಲಿ ಸಮಾಜವೇ ಜಂಗಮ ಅಂತ ಹೇಳುತ್ತಾರೆ. ದೀನರು, ದಲಿತರು, ದುಃಖಿತರು, ಪಶು ಪಕ್ಷಿ, ಪ್ರಾಣಿ, ಕ್ರಿಮಿಕೀಟ ಎಲ್ಲವೂ ಜಂಗಮವೆ. ಅದಕ್ಕಾಗಿ ಬಸವಣ್ಣನವರು:
“ಬಸವ ಬಾರೈ, ಮರ್ತ್ಯಲೋಕದೊಳಗೆ ಭಕ್ತರುಂಟೆ? ಹೇಳಯ್ಯಾ”
“ಮತ್ತಾರೂ ಇಲ್ಲಯ್ಯಾ, ಮತ್ತಾರೂ ಇಲ್ಲಯ್ಯಾ, ಮತ್ತಾರೂ ಇಲ್ಲಯ್ಯಾ.
ನಾನೊಬ್ಬನೆ ಭಕ್ತನು, ಮರ್ತ್ಯಲೋಕದೊಳಗಣ ಭಕ್ತರೆಲ್ಲರೂ ಜಂಗಮ,
ಲಿಂಗ ನೀನೇ ಅಯ್ಯಾ” ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-252/ವಚನ ಸಂಖ್ಯೆ-894)
ಅದಕ್ಕಾಗಿಯೇ ಇನ್ನೊಂದು ವಚನದಲ್ಲಿ:
ಮರಕ್ಕೆ ಬೇರು ಬಾಯಿಯೆಂದು ತಳಕ್ಕೆ ನೀರನೆರೆದಡೆ
ಮೇಲೆ ಪಲ್ಲವಿಸಿತ್ತು ನೋಡಾ,
ಲಿಂಗದ ಬಾಯಿ ಜಂಗಮವೆಂದು ಪಡಿ ಪದಾರ್ಥವ ನೀಡಿದಡೆ
ಮುಂದೆ ಸಕಳ ಪದಾರ್ಥವನೀವನು.
ಆ ಜಂಗಮವ ಹರನೆಂದು ಕಂಡು, ನರನೆಂದು ಭಾವಿಸಿದಡೆ
ನರಕ ತಪ್ಪದು, ಕಾಣಾ ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-110/ವಚನ ಸಂಖ್ಯೆ-421)
ನಾವು ಮರದ ಬೇರಿಗೆ ನೀಡಿದರೆ ಯಾವ ರೀತಿ ಮರ ಬೆಳೆಯುತ್ತದೆಯೋ, ಪೋಷಣೆ ದೊರೆಯುತ್ತದೆಯೋ, ಅದೇ ರೀತಿ ಜಂಗಮ ಲಿಂಗದ ಬಾಯಿ. ಜಂಗಮವನ್ನು ಪೂಜಿಸಿದರೆ ಅದು ಲಿಂಗಕ್ಕೆ ಅರ್ಪಿತವಾಗುತ್ತದೆ. ಅದಕ್ಕಾಗಿ ಜಂಗಮರು ಲಿಂಗದ ಪ್ರತೀಕವಾಗಿ ಪೂಜಿಸಲ್ಪಡುತ್ತಾರೆ.
ಶರಣ ಧರ್ಮದ ಜ್ಞಾನವನ್ನು ಭಕ್ತರಿಗೆ ತಿಳಿಸಿ ಕೊಡುವುದು ಮತ್ತು ಅದನ್ನು ಅಲಕ್ಷಿಸಿದವರಿಗೆ ಸನ್ಮಾರ್ಗಿಗಳನ್ನಾಗಿ ಮಾಡುವುದು ಜಂಗಮರ ಕಾಯಕ. ಆದರೆ ಆ ಜಂಗಮ ಜ್ಞಾನಿಯು ವಿರಕ್ತನು ಆಗಿರಬೇಕು. ಅಂತಹ ಜಂಗಮರನ್ನು ಮಹದೇವನಂದು ಕಾಣದೆ ಮನುಷ್ಯನೆಂದು ಭಾವಿಸಿದರೆ ನರಕ ತಪ್ಪದು ಅಂತ ಬಸವಣ್ಣನವರು ಹೇಳುತ್ತಾರೆ.
ಇವೆಲ್ಲ ಅಂತರಂಗದ ಆವರಣವಾದ ಜಂಗಮನ ಬಗ್ಗೆ ಮಾಹಿತಿ ಆಯ್ತು. ಈಗ ಬಹಿರಂಗದ ಅಷ್ಟಾವರಣವಾದ ಜಂಗಮರ ಬಗ್ಗೆ ನೋಡೋಣ.
ಈ ಜಂಮರು ಹೆಚ್ಚು ಕಡಿಮೆ ಕಲ್ಯಾಣದಿಂದ ಬಂದವರು. ಬೇರೆ ಯಾವ ರಾಜ್ಯಗಳಲ್ಲಿ ಕಂಡು ಬರುವುದಿಲ್ಲ. ಇದ್ದರೂ ಕೂಡ ಕರ್ನಾಟಕದ ಮೂಲದವರು ಆಗಿರುತ್ತಾರೆ.
ಬಸವ ಬಿಲ್ಲಾಳಾಗಿ, ಹೊಸಭಕ್ತಿ ಅಂಬಾಗಿ,
ಎಸೆದನಯ್ಯಾ ಆ ಲಿಂಗವನು ಗುರಿಮಾಡಿ.
ಶಿಶುವ ಬಾಣ ಕೊಂಡು, ಬಸುರಮಧ್ಯವ ತಾಗೆ,
ಹೊಸದೆಸೆಗಳೆಲ್ಲಾ ಕಾಣಬಂದವಯ್ಯಾ!
ಭಸ್ಮದೆಣ್ಣೆಯ ಹೂಸಿ ಕೂಡಲಚೆನ್ನಸಂಗನಲ್ಲಿ
ಬಸವಪೂಯದ ಬಂದು ಆರೈದ ಲಿಂಗವನು.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-270/ವಚನ ಸಂಖ್ಯೆ-678)
ಈ ವಚನದೊಳಗೆ ಚನ್ನಬಸವಣ್ಣನವರು ಬಿಲ್ಲನ್ನು ಹಿಡಿದು ಹೊಸಭಕ್ತಿ ಎಂಬ ಬಾಣವನ್ನು ಹೊಡಿ ಇಷ್ಟಲಿಂಗವನ್ನು ಗುರಿಯಾಗಿಸಿ ಹೊಡೆದಾಗ ಆಗ ಇಷ್ಟಲಿಂಗದ ಶಿಶು ಹುಟ್ಟುತ್ತದೆ. ಆ ಶಿಶುವಿನ ಜೊತೆ ಹೊಸ ಮಾರ್ಗಗಳು ಅಂದರೆ ದಶೆಗಳು ಕಾಣಿಸಿಕೊಳ್ಳುತ್ತವೆ. ಅವು ಯಾವುವೆಂದರೆ ಕಾಯಕ, ದಾಸೋಹ, ಶರಣ. ಎಲ್ಲ ಚಲ್ಲಾಪಿಲ್ಲಿ ಆಗಿದ್ದ ಇವುಗಳನ್ನ ಸೈದ್ಧಾಂತಿಕವಾಗಿ ಜೋಡಿಸಿದಾಗ ಅವು ಅಷ್ಟಾವರಣಗಳಾದವು. ಸಾಮಾಜಿಕವಾಗಿ ನಿಯಮಗಳನ್ನು ಮಾಡಿ ಅವುಗಳನ್ನು ಪಂಚಾಚಾರಗಳು ಅಂತ ಕರೆದರು. ಅಂತರಂಗದ ಭಾವನಾತ್ಮಕ ಏಳಿಗೆಗೆ ಷಟ್ಸ್ಥಳಗಳನ್ನು ರೂಪಿಸಿದರು. ಇವೆಲ್ಲವಕ್ಕಾಗಿ ಒಂದು ಚರ್ಚೆ ಮಾಡಲು ಅನುಭವ ಮಂಟಪ ರೂಪಗೊಂಡಿತು. ಈ ವೇದಿಕೆಗೆ ಒಬ್ಬ ಹಿರಿಯರು ಮಾರ್ಗದರ್ಶಕರು, ಮುನ್ನಡೆಸುವವರು, ಬೇಕನಿಸಿದಾಗ ಅಲ್ಲಮರನ್ನು ಶೂನ್ಯ ಪೀಠಾಧ್ಯಕ್ಷರನ್ನಾಗಿ ಮಾಡಿದರು. ಮತ್ತೆ ಈ ಧರ್ಮದ ಎಲ್ಲಾ ವಿಷಯಗಳನ್ನು ಜನರಿಗೆ ತಲುಪಿಸಲು ಆಗಿನ ಕಾಲದಲ್ಲಿ ಯಾವುದೇ ರೀತಿಯ ಟಿವಿ, ರೇಡಿಯೋ, ದಿನಪತ್ರಿಕೆ, ಸಂಚಾರಿ ವಾಹನಗಳು ಇಂತಹ ತ್ವರಿತಗತಿಯ ಸಾಧನಗಳು ಇರಲಿಲ್ಲ. ಆಗ ಬಂದಿದ್ದೆ ಈ ಜಂಗಮರ ಕಲ್ಪನೆ. ಸಾಧನೆಯ ಹಂಬಲವುಳ್ಳ, ಬೋಧನೆ ಕಲೆ ಹೊಂದಿದಂತಹ ಯುವಕರನ್ನ ಹುರಿದುಂಬಿಸಿ, ತಾಡೋಲೆಗಳ ಕಟ್ಟುಗಳನ್ನು ಕೊಟ್ಟು ಎಲ್ಲಾ ಕಡೆ ಪ್ರಚಾರಕ್ಕೆ ಕಳುಹಿಸುತ್ತಿದ್ದರು. ಅವರೇ ಈ ಚಲಿಸುವ ಜ್ಞಾನಿಗಳಾದ ಜಂಗಮರು. ಈ ಜಂಗಮರು ಯಾವುದೇ ಜಾತಿ ಕುಲ ಆಗಿರಬಹುದು. ಕಲ್ಯಾಣದಲ್ಲಿ ಬಸವ ಧರ್ಮದ ತತ್ವವನ್ನು ಅರಿತುಕೊಂಡು, ಅದನ್ನು ಪ್ರಚಾರ ಮಾಡಲು ಹೊರಗೆ ಹೋಗುತ್ತದ್ದರು. ಹಳ್ಳಿಗಳಲ್ಲಿ ಒಂದು ರಾತ್ರಿ ಪಟ್ಟಣಗಳಲ್ಲಿ ಪಂಚ ರಾತ್ರಿ ಅಥವಾ ಐದು ರಾತ್ರಿ ಅಂತ ಸಂಚರಿಸುತ್ತಿದ್ದರು. ಆಗ ಜನರೆಲ್ಲಾ ಅವರಿಗೆ ಊಟ, ವಸತಿ, ಪೂಜೆಗೆ, ಪ್ರಸಾದಕ್ಕೆ ವ್ಯವಸ್ಥೆಯನ್ನು ಮಾಡಿಕೊಡುತ್ತಿದ್ದರು. ಬಹುಶಃ ಇವುಗಳೇ ಮುಂದೆ ಮಠಗಳಾದವು. ಇಂತಹ ಕೆಲ ಜಂಗಮರು ಮದುವೆಯಾಗಿ ಅಲ್ಲಲ್ಲಿ ಸಂಸಾರವನ್ನು ಹೂಡಿದರು. ಅವುಗಳೆ ಮುಂದೆ ಜಾತಿಗಳಾಗಿ ಬದಲಾದವು.
ಗುರುವಾಗಲು ಜಂಗಮರಾಗಲು ಕೇವಲ ಜ್ಞಾನ ಮತ್ತು ಆಚರಣೆ ಅಷ್ಟೇ ಬೇಕೆ ಹೊರತು ಜಾತಿ ಅಲ್ಲ. ಆತ್ಮವಿರುವ ಜೀವರಾಶಿ ಜಂಗಮ, ಆತ್ಮ ತಿಳಿದ ಯೋಗಿಯೆ ಜಂಗಮ.
ಶ್ರೀಮತಿ. ಅನುಪಮ ಪಾಟೀಲ,
ನಂ. 10, ದೇಸಾಯಿ ಪಾರ್ಕ್,
ಕುಸೂಗಲ್ ರಸ್ತೆ, ಕೇಶ್ವಾಪೂರ,
ಹುಬ್ಬಳ್ಳಿ – 580 023.
ಮೋ. ಸಂ. +91 9845810708.
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in