440 ಜಂಗಮರ ಶಿರಚ್ಛೇಧನಕ್ಕೆ ವೀರಶೈವ ಜೋಡಣೆ | ಮೈಸೂರಿನ ಹತ್ಯಾಕಾಂಡ ಸಾರುವ ನಂಜನಗೂಡಿನ ಶಿರೋಭಾವಿ | ಡಾ. ಸತೀಶ ಕೆ.  ಇಟಗಿ, ಮುದ್ದೇಬಿಹಾಳ.

ನಚ್ಚಿದೆನೆಂದಡೆ ಮಚ್ಚಿದೆನೆಂದಡೆ,
ಸಲೆ ಮಾರುವೋದೆನೆಂದಡೆ
ತನುವನಲ್ಲಾಡಿಸಿ ನೋಡುವೆ ನೀನು.
ಮನವನಲ್ಲಾಡಿಸಿ ನೋಡುವೆ ನೀನು.
ಧನವನಲ್ಲಾಡಿಸಿ ನೋಡುವೆ ನೀನು.
ಇವಕ್ಕಂಜದಿದ್ದಡೆ ಭಕ್ತಿಕಂಪಿತ [ನೀನು] ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-58/ವಚನ ಸಂಖ್ಯೆ-214)

ಕ್ರಿ. ಶ. 1673 ರಲ್ಲಿ ಮೈಸೂರಿನ ಒಡೆಯರ ಸಂಸ್ಥಾನಕ್ಕೆ 14 ನೆ ಅಧಿಪತಿಯಾಗಿ ಸಿಂಹಾಸನವೇರಿದ ಚಿಕ್ಕದೇವರಾಜ ಒಡೆಯರ ಅವರು ಮ್ಮ 28 ನೇ ವಯಸ್ಸಿನಿಂದ ರಾಜ್ಯಭಾರ ವಹಿಸಿಕೊಂಡಿದ್ದರು. ಬಾಲ್ಯ ಸ್ನೇಹಿತರಾಗಿದ್ದ ಯಳಂದೂರು ಮೂಲದ ವಿಶಾಲಾಕ್ಷ ಪಂಡಿತ ಮೂಲತಃ ಜೈನ ಮತಾವಲಂಬಿಯಾಗಿ, ಅಪ್ರತಿಮ ರಾಜನೀತಿಯ ಚಾಣಕ್ಯರಾಗಿದ್ದರು. ಇವರನ್ನು ತಮ್ಮ ಮಂತ್ರಿ (ಟ್ಯೂಟರ್) ಯನ್ನಾಗಿ ನೇಮಿಸಿಕೊಂಡ ಚಿಕ್ಕದೇವರಾಜ ಒಡೆಯರ ಅವರು ರಾಜ್ಯಭಾರದ ಮೊದಲ ವರ್ಷಗಳನ್ನು ಕೇವಲ ಒಳಾಡಿತ ಸುಧಾರಣೆಗೆ ಮೀಸಲಾಗಿರಿಸಿದ್ದರು. ನಂತರ ಕಂದಾಯ ಸುಧಾರಣೆಯತ್ತ ಗಮನವಹಸಲು ನಿಯುಕ್ತಿಗೊಳಿಸಿದರು.

ಕಂದಾಯ ಸುಧಾರಣೆಯ ಮೊದಲನೇಯ ಹೆಜ್ಜೆಯಾಗಿ ವಿಶಾಲಾಕ್ಷ ಪಂಡಿತರು ಕ್ರಿ. ಶ. 1678 ರಲ್ಲಿ ರೈತರ ಮೇಲೆ ವಿರೀತ ಆದಾಯ ತೆರಿಗೆ (ಭೂ ಕಂದಾಯ) ವಿಧಿಸಲು ನಿರ್ಧರಿಸಿದರು. ಹೀಗಾಗಿ ರೈತರು ತಮ್ಮ ಉತ್ಪನ್ನದ ಆರಾಂಶ (1/6)  ವನ್ನು ಅಂದ್ರೆ ಆರು ಮಣಕ್ಕೆ ಒಂದು ಮಣ ರಾಜ್ಯದ ಬೊಕ್ಕಸಕ್ಕೆ ಕೊಡಬೇಕೆಂದು ಫರ್ಮಾನು ಹೊರಡಿಸಲಾಯಿತು. ರೈತರ ಆದಾಯದ ಬಹುಪಾಲನ್ನು ಕಿತ್ತುಕೊಳ್ಳುವ ಈ ಹುನ್ನಾರವನ್ನು ವಿರೋಧಿಸಿದ ರೈತರು ನಿರ್ಧಾರದ ವಿರುದ್ಧ ದಂಗೆ ಎದ್ದರು. ಲಿಂಗಾಯತ ರೈತರನ್ನು ಅಂದಿನ ಬಹುತೇಕ ಜಂಗಮ ಮಠಗಳು ಬೆಂಬಲಿಸಿದ್ದವು. ರಾಜನ ಬೊಕ್ಕಸದ ಬದಲು, ತಮ್ಮ ಮಠಗಳಿಗೆ ದೇಣಿಗೆ ರೂಪದಲ್ಲಿ ತೆರಿಗೆ ಸಂದಾಯಿಸುವತೆ ಒತ್ತಾಯಿಸಿವು. ಯಾವುದಕ್ಕೂ ಹೆದರದೆ ಕೆಲವು ರೈತಾಪಿ ವರ್ಗದವರು ಬೇರೆ ಕಡೆಗೆ ಲಾಯನ ಮಾಡಲು ಪ್ರಯತ್ನಿಸಿರು. ತಮ್ಮ ಭೂಮಿಗಳನ್ನು ಉಳುಮೆ ಮಾಡದೇ ಬೀಳುಗೆಡವಿದ್ದರು. ವರ್ಷ ಕಳೆದರೂ ರೈತರ ತಕರಾರು ಮತ್ತು ಕರ ನಿರಾಕರಣೆಯ ದಂಗೆ ಹತೋಟಿಗೆ ಬರಲಿಲ್ಲ.

ಈ ಪರಿಸ್ಥಿತಿಯನ್ನು ಅರಿತ ಮೈಸೂರು ಅರಮನೆಯ ಚಾಣಾಕ್ಷ ಮಂತ್ರಿ ವಿಶಾಲಾಕ್ಷ ಪಂಡಿತ, ಕೊನೆಗೆ ರೈತರೊಂದಿಗೆ ಒಪ್ಪಂದ ನಾಟಕವಾಡಲು ಶುರು ಹಚ್ಚಿಕೊಂಡನು. ಪ್ರತಿಭಟನೆನ್ನು ಹೇಗಾದರೂ ಮಾಡಿ ಹತ್ತಿಕ್ಕಲೇಬೇಕೆಂದು ಎಲ್ಲಾ ರೈತರನ್ನು ಹಾಗೂ ಮಠಾಧೀಶರನ್ನು ಮಾತುಕತೆಗೆ ಆಹ್ವಾನಿಸಿದನು. ಅದಕ್ಕೆಂದು ನಂಜನಗೂಡಿನಲ್ಲಿ ಸಭೆ ಕರೆದನು. ಆ ಸಭೆಗೆ ಒಟ್ಟು 770 ಮಠಗಳ ಸ್ವಾಮಿಗಳು ಆಗಮಿಸಿದ್ದರು. ಮೊದಲೆ ನಂಜನಗೂಡಿನ ಹಳ್ಳವೊಂದರ ದಡದಲ್ಲಿ ನಾಲ್ಕು ಗೋಡೆಗಳ ಅಂಗಳ ಅಥವಾ ತಾತ್ತಾಲಿಕ ಟೆಂಟ್‌ಗಳನ್ನು ನಿರ್ಮಿಸಿದ್ದರು. ಅಲ್ಲಿಯೇ ಭಾವಿ ತೋಡಿ, ಸುತ್ತಲೂ ಡೇರೆಗಳನ್ನು ನಿರ್ಮಿಸಿದ್ದರು. ಡೇರೆಗಳ ಹಿಂದಿದ್ದ ಹಳ್ಳದ ಮೊಗಸಾಲೆಯಲ್ಲಿ ನಿಂತರೆ ಸಾರ್ವಜನಿಕರ ಕಣ್ಣಿಗೆ ಏನೂ ಕಾಣಿಸದಂತೆ ವ್ಯವಸ್ಥೆ ಮಾಡಿದ್ದರು. ಜಂಗಮ ಮಠಾದೀಶರನ್ನು ಸೈನಿಕರು ರಾಜ ಮರ್ಯಾದೆಯಲ್ಲಿ ಒಬ್ಬೊಬ್ಬರಂತೆ ಸರದಿ ಸಾಲಿನಲ್ಲಿರಿಸಿ, ಸ್ವತಃ ಚಿಕ್ಕದೇವರಾಜ ಒಡೆಯರ್ ಒಳಗೆ ಬರಮಾಡಿಕೊಳ್ಳಲು ನಿಂತಿದ್ದರು. ಸಂಜೆಯಾದರೂ ಅವರನ್ನು ಮಾತುಕತೆಗೆ ಕರೆದಿರಲಿಲ್ಲ. ಎಲ್ಲರೂ ಹೊರಾಂಗಣದಲ್ಲಿಯೇ ನೆರೆದಿದ್ದಕ್ಕೆ ಬಹುತೇಕರು ತೀವ್ರ ಹಸಿವಿನಿಂದ ಬಳಲುತ್ತಿದ್ದರು. ಒಳಗೆ ರಾಜ ಮರ್ಯಾದೆಯಿಂದ ಬರಮಾಡಿಕೊಳ್ಳುತ್ತಿದ್ದ ಜಂಗಮ ಮಠಾದೀಶರಿಗೆ ವಿಶೇಷ ಭೋಜನ ವ್ಯವಸ್ಥೆ ಇರಬಹುದೆಂದು ಭಾವಿಸಿ ಪ್ರತಿಯೊಬ್ಬರೂ ಗೌರವ ಮತ್ತು ಹಂಬಲದಿದ ಒಳ ಹೋಗುತ್ತಿದ್ದರು. ಮೂರು ಗಂಟೆ ಕಳೆದರೂ ಒಳಗೆ ಹೋದವರಲ್ಲಿ ಒಬ್ಬರೂ ಹೊರ ಬಂದಿರಲಿಲ್ಲ. ಹೊರಗಿದ್ದವರಿಗೆ ಅಷ್ಟು ಹೊತ್ತು ಒಳಗೆ ಏನೂ ಸಂಭವಿಸುತ್ತಿದೆ ಎಂದು ತಿಳಿದುಕೊಳ್ಳುವ ಕುತೂಹಲವೂ ಕಾಡುತ್ತಿತ್ತು.

ಆಸೆಗೆ ಸತ್ತುದು ಕೋಟಿ, ಆಮಿಷಕ್ಕೆ ಸತ್ತುದು ಕೋಟಿ,
ಹೊನ್ನು ಹೆಣ್ಣು ಮಣ್ಣಿಂಗೆ ಸತ್ತುದು ಕೋಟಿ.
ಗುಹೇಶ್ವರಾ ನಿಮಗಾಗಿ ಸತ್ತವರನಾರನೂ ಕಾಣೆ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-35/ವಚನ ಸಂಖ್ಯೆ-91)

ಬಲದಿದ ಒಳ ಪ್ರವೇಶಿಸಿದ ಒಬ್ಬೊಬ್ಬರ ತಲೆಯನ್ನೇ ಶಿರಚ್ಛೇಧನ ಮಾಡುತ್ತಿದ್ದರು. ಅವರ ಶವವನ್ನು ಡೇರೆಯ ಹಿಂದಿದ್ದ ಹಳ್ಳಕ್ಕೆ ತಳ್ಳುತ್ತಿದ್ದರು. ರುಂಡವನ್ನು ಭಾವಿಗೆ ದೂಡುತ್ತಿದ್ದರು. ಹೀಗೆ ಒಟ್ಟು 440 ಜಂಗಮ ಮಠಾದೀಶರ ಶಿರಚ್ಚೇಧನವಾಗಿತ್ತು. ಈ ಸಂದರ್ಭದಲ್ಲಿ ಹೊರಗಿನ ಮೊಗಸಾಲೆಯಲ್ಲಿ ನೆರೆದ ಇತರೆ ಸಭಿಕರು ಜಯಘೋಷ ಹಾಕುವುದರಲ್ಲೇ ಮಗ್ನರಾಗಿದ್ದರು. ಒಳ ಹೋದವರ ಶಿರಚ್ಛೇಧನ ನಡೆದಿದ್ದರ ಕುರಿತು ಗಮನವಹಿಸಿರಲಿಲ್ಲ. ನಂತರ ಸೈನಿಕರನ್ನು ಬಳಸಿ ಉಳಿದವರನ್ನು ಚದುರಿಸಿ ಅವರವರ ಮನೆಗೆ ಅಟ್ಟಿದ್ದರು. 

ಜೋಳವಾಳಿಯಾನಲ್ಲ,
ವೇಳೆವಾಳಿಯವ ನಾನಯ್ಯಾ.
ಹಾಳುಗೆಟ್ಟೋಡುವ ಆಳು ನಾನಲ್ಲವಯ್ಯಾ.
ಕೇಳು, ಕೂಡಲಸಂಗಮದೇವಾ,
ಮರಣವೆ ಮಹಾನವಮಿ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-190/ವಚನ ಸಂಖ್ಯೆ-699)

ಹೀಗೆ 440 ಜಂಗಮ ಮಠಾದೀಶರ ಶೀರಚ್ಛೇಧನಗೊಳಿಸಿ ಆ ಭಾವಿಯಲ್ಲಿ ಹಾಕಿದ್ದಕ್ಕೆ ಶಿರೋಭಾವಿ ಎಂದು ಕರೆಯಲಾಗುತ್ತಿದೆ. ಈಗಲೂ ನಂಜನಗೂಡಿನಲ್ಲಿದ್ದು ನೋಡಲು ಸಿಗುತ್ತದೆ. ಈ ಸತ್ಯ ಘಟನೆ ಬ್ರಿಟಿಷ ಅಧಿಕಾರಿಯಾಗಿದ್ದ ವಿಲ್ಕಸ್ ಎಂಬಾತನಿದ ತಿಳಿಯುತ್ತಿದ್ದಂತೆ, ಒಂದಿನ ತಮ್ಮ ಮನೆಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದಾಗ ವಿಶಾಲಾಕ್ಷ ಪಂಡಿತನನ್ನು ರಾಜಬೀದಿಯಲ್ಲಿ ಸೈನಿಕರಿಬ್ಬರು ಹತ್ಯೆಗೈದರು.

ಶಿರಚ್ಛೇಧನದಿಂದ ಖಾಲಿಯಾದ ಅಂದಿನ ಮೈಸೂರು ಪ್ರಾಂತ್ಯದ ಒಟ್ಟು 770 ಜಂಗಮ ಮಠಗಳಿಗೆ ಆಂಧ್ರದ ಬ್ರಾಹ್ಮಣ ಪಂಡಿತರನ್ನು ನೇಮಿಸಲಾಯಿತು. ಅವರಿಗೆ ಜನಿವಾರದ ಜೊತೆಗೆ ಲಿಂಗವನ್ನೂ ಕಟ್ಟಿ ಸ್ವಾಮಿಗಳೆಂದು ಬಿಂಬಿಸಲಾಯಿತು. ಆ ಲಿಂಗಾಯತ ಮಠಗಳಲ್ಲಿ ವಚನಗಳ ಬದಲಾಗಿ ಸಂಸ್ಕೃತದ ವೇದ, ಆಗಮ, ಪುರಾಣಗಳ ಪಾರಾಯಣ, ಪಠಣ ಆರಂಭಗೊಡವು. ಅವಾಗಿನಿಂದ ಲಿಂಗಾಯತರ ಮನೆಗಳಲ್ಲಿ ವೈದಿ, ಶೈವ ಆಚರಣೆಗಳು ಬೆಳೆದವು. ಅಲ್ಲದೆ ಲಿಂಗಾಯತದೊದಿಗೆ ವೀರಶೈವವೂ ಸಮ್ಮಿಶ್ರಣವಾಯಿತು. ಇದೇ ಕಾರಣಕ್ಕೆ ಅತೀ ಹೆಚ್ಚು ಲಿಂಗಾಯತರನ್ನು ಹೊಂದಿದ್ದ ಮೈಸೂರು ಪ್ರಾಂತ್ಯದಲ್ಲಿ ಹಿಂದು ವೀರಶೈವರ ಸಂಖ್ಯೆ ಬೆಳೆಯ ತೊಡಗಿತು.

ಮನೆಯೊಳಗೆ ಮನೆಯೊಡೆಯನಿದ್ದಾನೊ, ಇಲ್ಲವೊ?
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ,
ಮನೆಯೊಳಗೆ ಮನೆಯೊಡೆಯನಿದ್ದಾನೊ, ಇಲ್ಲವೊ?
ತನುವಿನಲ್ಲಿ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿ
ಮನದೊಳಗೆ [ಮನದೊ]ಡೆಯನಿದ್ದಾನೊ, ಇಲ್ಲವೊ?
ಇಲ್ಲ, ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-29/ವಚನ ಸಂಖ್ಯೆ-97)

ಆರಭದಿದಲೂ ಲಿಂಗಾಯತರಾಗಿದ್ದ ಮೈಸೂರು ಒಡೆಯರು ಕ್ರಿ. ಶ. 1610 ರಿಂದ ವೈಷ್ಣವರಾಗಿ ಪರಿವರ್ತನೆಗೊಂಡರು. ಬ್ರಿಟಿಷರ ಕಾಲದಲ್ಲಿ ಸ್ವತಂತ್ರ ಧರ್ಮವಾಗಿದ್ದ ಲಿಂಗಾಯತವನ್ನು ಜಾತಿಯನ್ನಾಗಿ ಮಾಡಿದ್ದೂ ಅವರೇ! 1871 ರ ಜನಗಣತಿಯಲ್ಲಿ ಬ್ರಿಟಿಷರು ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಿದ್ದರು. ಆಗ ಮೈಸೂರು ಪ್ರಾಂತ್ಯದಲ್ಲಿ 4,17,900 ರಷ್ಟು ಲಿಂಗಾಯತ ಕುಟುಂಬಗಳಿದ್ದವು. ಕ್ರಮೇಣ ಅವರೆಲ್ಲರಿಗೂ ವೀರಶೈವ ಪದ ಜೋಡಿಸಲಾಯಿತು. ಕ್ರಿ. ಶ. 1891 ರ ಜನಗಣತಿಯಲ್ಲಿ ಅಂದಿನ ದಿವಾನ್‌ರಾಗಿದ್ದ ರಂಗಾಚಾರ್ಲು ಅವರು ಲಿಂಗಾಯತರನ್ನು ಮೂಲೆಗುಂಪಾಗಿಸಿ ಉದ್ದೇಶಪೂರ್ವಕವಾಗಿಯೇ ಲಿಂಗಾಯತ ಧರ್ಮವನ್ನು ವಿಸರ್ಜಿಸಿ, ಹಿಂದು ಧರ್ಮದ ಶೂದ್ರ ಗುಂಪಿಗೆ ಸೇರಿಸಿದ್ದರು. ಇದೇ ಸಂದರ್ಭದಲ್ಲಿ ವೀರಶೈವ ಪದವನ್ನೂ ಜೋಡಿಸಲಾಯಿತು.  

ಆಧಾರ ಗ್ರಂಥಗಳು:
ಶರಣ ಚಳುವಳಿ ಮತ್ತು ವಚನ ಸಾಹಿತ್ಯ, ಡಾ. ಎಂ. ಎಂ. ಕಲಬುರ್ಗಿ.
ಸಮಗ್ರ ವಚನ ಸಂಪುಟ-2016: ಸಂ. ಡಾ. ಎಂ. ಎಂ. ಕಲಬುರ್ಗಿ.
ಮೈಸೂರು ಮಹಾರಾಜರ ಆಡಳಿತ ಮತ್ತು ಲಿಂಗಾಯತರು: ಶ್ರೀ. ಬಸಪ್ಪ ಬಿಸನಕೊಪ್ಪ, ವಿಶ್ವ ಲಿಂಗಾಯತ ಚಿಂತನ ವೇದಿಕೆ, 24.06.2019.
ವಿಶಾಲಾಕ್ಷ ಪಂಡಿತನೆಂಬ ಜೈನ ಮಂತ್ರಿ ಮತ್ತು ಜಂಗಮರ ಕಗ್ಗೊಲೆ: ರವಿ ಗೋಪಾಲರಾವ್, ಗಂಧಾಕ್ಷತೆ, 19.06.2018.
B. Lewis Rice, Mysore Gazetteer compiled by Government, Vol. I Mysore (Page No: 360-376)- 1897.
B. Puttaiya, Maharaja Chikkadevaraja Wadiyar of Mysore, The Quarterly Jornal of the Mythic Society Vol. XI, No-2 (January 1921)

ಡಾ. ಸತೀಶ ಕೆ. ಇಟಗಿ,
ಪತ್ರಿಕೋದ್ಯಮ ಉಪನ್ಯಾಸಕ,
ಅಂಚೆ: ಕೋಳೂರ – 586 129
ತಾ: ಮುದ್ದೇಬಿಹಾಳ, ಜಿ: ವಿಜಯಪುರ.
ಮೊ: 92412 86422
ಈ-ಮೇಲ್:‌ satshitagi10@gmail.com

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನಸಾಹಿತ್ಯ ಮಂದಾರ ಫೌಂಡೇಶನ್‌ (ರಿ) ದ ಸಂಚಾಲಕರನ್ನು ಸಂಪರ್ಕಿಸಬೇಕಾದ:
    • ಮೋಬೈಲ್ ನಂ. 9741 357 132
    • e-Mail ID: info@vachanamandara.in / admin@vachanamandara.in

Loading

Leave a Reply