ಸಿದ್ಧಗಂಗಾ ಎಂಬ ಹೆಸರೇ ಮಂತ್ರಪೂರ್ಣ, ಜ್ಞಾನಪ್ರಸಾರದ ಮಹಾವಿದ್ಯಾಲಯ / ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ಡಾ. ವಚನ ಕುಮಾರಸ್ವಾಮಿ

ಸಿದ್ಧಗಂಗೆ :ಸಿದ್ಧಗಂಗಾ ಎಂಬ ಹೆಸರೇ ಮಂತ್ರಪೂರ್ಣ. ಪರಿಶುದ್ಧಾತ್ಮರ ದಿವ್ಯ ತಪಸ್ಸು, ಶ್ರದ್ಧೆ ಮತ್ತು ನಿಷ್ಠೆಗಳ ಭದ್ರ ಬುನಾದಿಯ ಮೇಲೆ ನೆಲೆಗೊಂಡಿರುವಂತಹ ಒಂದು ಪವಿತ್ರ ಕ್ಷೇತ್ರ ಎಂದು ಮೈಸೂರಿನ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ಡಾ. ವಚನ ಕುಮಾರಸ್ವಾಮಿ ಹೇಳಿದರು. ಶ್ರೀ ಸಿದ್ಧಗಂಗಾ ಮಠದಲ್ಲಿ ಶ್ರೀ ಶಿವಕುಮಾರಮಹಾಶಿವಯೋಗಿಗಳವರ ೧೧೭ನೇ ಜಯಂತಿ ನಿಮಿತ್ತ ಮಂಡ್ಯದ ಕಾಯಕಯೋಗಿ ಫೌಂಡೇಷನ್ ಮತ್ತು ಮೈಸೂರಿನ ಶರಣು ವಿಶ್ವವಚನ ಫೌಂಡೇಷನ್ ಸಹಯೋಗದೊಂದಿಗೆ ಶ್ರೀ ಶಿವಕುಮಾರಮಹಾಶಿವಯೋಗಿಗಳವರ ಬಗ್ಗೆ ಆಯೋಜಿಸಿದ್ದ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಆಶಯ ಭಾಷಣ ಮಾಡಿ ಮಾತನಾಡಿ

ಸಿದ್ಧಗಂಗಾ ಎನ್ನುವ ಶಬ್ದವೇ ಪವಿತ್ರವಾದುದು ಈ ಪದವನ್ನು ಕೇಳಿದ ಕೂಡಲೇ ಒಂದು ರೀತಿಯ ಮೈರೋಮಾಂಚನವಾಗುತ್ತದೆ. ಈ ಪದ ಕಿವಿಗೆ ಬಿದ್ದೊಡನೇ ನಮ್ಮ ನೆನಪಿಗೆ ಬರುವುದು ದಾಸೋಹದ ಮಹಾಮನೆ, ಮಕ್ಕಳ ಕ್ಷೀರಸಾಗರ, ಅಧ್ಯಾತ್ಮಯೋಗದ ಅನುಭವಮಂಟಪ, ಧರ್ಮಸಂದೇಶದ ದಿವ್ಯಧಾಮ, ಕಾಯಕ ತತ್ವದ ಕ್ರಿಯಾಕೇಂದ್ರ, ಜ್ಞಾನಪ್ರಸಾರದ ಮಹಾವಿದ್ಯಾಲಯ, ಶ್ರೀಮಠದ ಆಶ್ರಯದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು, ಆಸ್ಥಿಕರು, ಧರ್ಮಾಭಿಮಾನಿಗಳು ಸಾತ್ವಿಕ ಜೀವನದ ಮಾರ್ಗ ಕಂಡುಕೊಂಡಿದ್ದಾರೆ”

ಸ್ವರ್ಗ ಸದೃಶವಾದ ಈ ಪುಣ್ಯಭೂಮಿ ಸಿದ್ಧಗಂಗೆ ನೆಲೆಯಲ್ಲಿ ಪೂಜ್ಯ ಶ್ರೀ ಶಿವಕುಮಾರಶಿವಯೋಗಿಗಳವರ ಬಗ್ಗೆ ಕವಿತೆಯನ್ನು ರಚಿಸಿ ಕವಿತಾ ವಾಚನ ಮಾಡಿದ ಕವಿಗಳು ಧನ್ಯರು. ಕವಿತೆಗೆ ಸ್ಪೂರ್ತಿ ಹೇಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕುವೆಂಪುರವರು ರಾಮಯಣದರ್ಶನಂ ಮಹಾಕಾವ್ಯ ಬರೆಯುತ್ತಿರುವಾಗ ವಾರಗಟ್ಟಲೇ ಪದಗಳು ಹೊಳೆಯದೆ ನಿಸ್ತೇಜರಾಗಿ ಕುಳಿತುಬಿಡುತ್ತಾರೆ. ಆಗ ಅವರ ಮಗ ತೇಜಸ್ವಿ ಮಗುವಾಗಿದ್ದ ಸಂದರ್ಭದಲ್ಲಿ ಅಳುತ್ತಿರುತ್ತಾನೆ ಆಗ ಕುವೆಂಪುರವರು ಏಕೆ ಅಳುವೆ ತೇಜಸ್ವಿ ಎಂದು ಹೇಳುತ್ತಾರೆ ಆ ಸಾಲು ಮಗುವನ್ನು ಸಮಾಧಾನ ಮಾಡದಿದ್ದರೂ ಕುವೆಂಪುರವರ ಕಾವ್ಯಕ್ಕೆ ಸ್ಪೂರ್ತಿ ನೀಡಿ ರಾಮಾಯಣದರ್ಶನಂ ಕಾವ್ಯ ಪೂರ್ಣಗೊಳಿಸಿ ಜ್ಞಾನಪೀಠ ಪ್ರಶಸ್ತಿ ಬರೆಯಲು ಕಾರಣವಾಗುತ್ತದೆ ಎಂದರು.

ಕಾಯಕಯೋಗಿ ಫೌಂಡೇಷನ್ ಸಂಸ್ಥಾಪಕ ಎಂ. ಶಿವಕುಮಾರ್ ಮಾತನಾಡಿ ರಾಜ್ಯದ ವಿವಿಧ ಕವಿಗಳು ಮತ್ತು ಕವಯಿತ್ರಿಯವರು ಶ್ರೀ ಶಿವಕುಮಾರಮಹಾಸ್ವಾಮಿಗಳವರ ಬಗ್ಗೆ ಹೊಂದಿರುವ ಪೂಜ್ಯ ಭಾವನೆಯನ್ನು ಕೋಟಿಗೊಬ್ಬ ಶರಣ ಕೃತಿಯಲ್ಲಿ ಕವಿತೆಗಳ ಮೂಲಕ ಹೊರತರಲಾಗಿದೆ. ಈ ಕೃತಿಯಲ್ಲಿ ಇರುವ ಕವಿತೆಗಳು ಕಲ್ಪನೆಯ ಕವಿತೆಗಳಾಗಿರದೆ ಅನುಭಾವದ ಕವಿತೆಗಳಾಗಿರುವುದರಿಂದ ಈ ಕವಿಗೋಷ್ಠಿ ಹೆಚ್ಚು ಅರ್ಥಪೂರ್ಣವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಗಮಕಿ ವಿದ್ವಾನ್ ಎಂ.ಜಿ ಸಿದ್ಧರಾಮಯ್ಯ ಕವಿಗಳು ಮತ್ತು ಕವಯತ್ರಿಯವರು ಪೂಜ್ಯರ ಬಗ್ಗೆ ಹೊಂದಿದ್ದ ಗೌರವ ಭಾವನೆಯನ್ನು ಕವಿತೆಗಳ ಮೂಲಕ ವಾಚಿಸಿದ ರೀತಿ ನೋಡಿದರೆ ಕೂಡಲಸಂಗನ ಶರಣರು ಮನದೆರೆದು ಮಾತನಾಡಿದರೆ ಲಿಂಗವ ಕಾಣಬಹುದು ಎಂಬಂತೆ ಕವಿತೆಯ ರೂಪದಲ್ಲಿ ಶ್ರೀ ಶಿವಕುಮಾರಸ್ವಾಮಿಗಳನ್ನು ಕಂಡಂತೆ ಭಾಸವಾಗುತ್ತಿದೆ ಎಂದರು

ನಂತರ ನಡೆದ ಕವಿಗೋಷ್ಠಿಯಲ್ಲಿ ನೂರಕ್ಕೂ ಹೆಚ್ಚು ಕವಿಗಳು ಮತ್ತು ಕವಯಿತ್ರಿಯರು ಕವನ ವಾಚನ ಮಾಡಿದರು. ಕವಯತ್ರಿ ನಿಶಾ ಮುಳಗುಂದ ಕವಿಗೋಷ್ಠಿ ನಡೆಸಿಕೊಟ್ಟರು. ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ನಿರೂಪಣೆ ಮಾಡಿದರು. ಶ್ರೀ ಸಿದ್ಧಗಂಗಾ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ನಿರ್ದೇಶಕ ಪಂಪನಗೌಡ ಮುದ್ಧನಗೌಡ, ಮಂಡ್ಯ ಜಿಲ್ಲಾಧ್ಯಕ್ಷ ಎಂ.ಎಸ್ ಮಂಜುನಾಥ್, ಬೆಂಗಳೂರಿನ ಡಾ.ಸಿ.ಬಿ ಶಶಿಧರ್ ಉಪಸ್ಥಿತರಿದ್ದರು.

 

Loading

Leave a Reply