
ಕುಂಬಾರ ಗುಂಡಯ್ಯ ತುಂಬಿ ತಿಗರಿಗ ಕೆಸರ
ಶಂಭು ಹರನೆಂದು ತಿರುಗಿಸಲು | ಶಿವಕುಣಿದ
ಹಂಬಲಿಸಿ ಜಂಗ ಕಟಗೊಂಡು
12 ನೇಯ ಶತಮಾನದ ವಚನ ಚಳುವಳಿಯ ಸಂದರ್ಭದಲ್ಲಿ ಬಸವಾದಿ ಶಿವಶರಣರು ತೋರಿದ ಸಮಾನತೆ ತತ್ವ ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿದೆ ಒಕ್ಕಟ್ಟಿನಲ್ಲಿ ಬಲವಿದೆಯೆಂಬುದನ್ನು ತೋರಿಸಿಕೊಟ್ಟವರು ಬಸವಾದಿ ಪ್ರಮಥರು. ಮೇಲು-ಕೀಳು, ಹೆಣ್ಣು-ಗಂಡು, ಸ್ತ್ರೀ-ಪುರುಷ, ಬಡವ-ಬಲ್ಲಿದವೆಂಬ ಭೇದಗಳನ್ನೆಲ್ಲ ತೊಲಗಿಸಿ ಸಮಾನತೆ ತತ್ವದ ಅನುಭವ ಮಂಟಪದಲ್ಲಿ ಒಂದಾಗಿ ಕುಳಿತು ಎಲ್ಲರೂ ಅನುಭಾವಿಗಳಾಗಿ ಶರಣರೆನಿಸಿಕೊಂಡರು. ಅಂತಹ ಶರಣರತ್ನಗಳಲ್ಲಿ ಕುಂಬಾರ ಗುಂಡಯ್ಯ ಶರಣರು ಒಬ್ಬರು.
ಕುಂಬಾರ ಗುಂಡಯ್ಯ ಮುಗ್ಧ ಶರಣರು, ಕಾಯಕ ಜೀವಿಗಳು, ದಾಸೋಹ ನಿಷ್ಠರಾಗಿದ್ದ ಈ ಶರಣರ ಶಿವಭಕ್ತಿ ಅಪಾರವಾದುದು. ಇಂದಿಗೂ ಉತ್ತರ ಕರ್ನಾಟಕದ ಮದುವೆಯ ಮುನ್ನಾದಿನ ಕುಂಬಾರ ಮನೆಗೆ ಹೋಗಿ ಗಡಿಗೆಗಳನ್ನು ತರುವ ಸಂಪ್ರದಾಯವಿದೆ. ಆ ಸಂದರ್ಭದಲ್ಲಿ ಹಾಡುವ ಹಾಡುಗಳು ವೈಶಿಷ್ಠ್ಯಪೂರ್ಣವಾಗಿದ್ದು ಗುಂಡಯ್ಯನ ಸುತ್ತಮುತ್ತತ್ತಲೂ ಹೆಣೆದುಕೊಂಡಿರುತ್ತವೆ. ಅಲ್ಲದೆ ಹಂತಿ ಪದಗಳು ಹೇರಳವಾಗಿ ಲಭ್ಯವಾಗಿವೆ.
ಬೀದರ ಜಿಲ್ಲೆಯ ಭಾಲ್ಕಿಯು ಕುಂಬಾರಗುಂಡಯ್ಯನ ಜನ್ಮಸ್ಥಳ.
ಭಾಲ್ಕಿಯ ಪುರದಾಗ ಹುಟ್ಯಾನ ಗುಂಡಯ್ಯ
ಕಲ್ಯಾಣ ಊರಾಗ ಬೆಳದಾನ | ಅಲ್ಲೆಲ್ಲ
ಬಲ್ಲಂತ ಶರಣ ಎನಿಸ್ಯಾನ
ಎಂದು ಹಂತಿಪದದಲ್ಲಿ ಉಲ್ಲೇಖಿಸಲಾಗಿದೆ. ಮನೆತನ ನಂಬಿಕೊಂಡು ಬಂದ ಮಣ್ಣು ತುಳಿಯುವ ಕಾಯಕವನ್ನೆ ಗುಂಡಯ್ಯನು ಚಿಕ್ಕವನಾಗಿದ್ದಾಗಿನಿಂದಲೇ ಮಾಡುತ್ತಿದ್ದ. ಕಾಯಕದ ಶ್ರದ್ಧೆ ಆವಾಗಿನಿಂದಲೇ ಆತನಲ್ಲಿ ಬೆಳೆದು ಬಂತು. ಲಿಂಗ ಮಾಟದ ಗಡಗಿಯು ಮಾಡುವದರಲ್ಲಿ ಗುಂಡಯ್ಯ ಬಲು ನಿಪುಣ. ತಂದೆ ಹಾಗೆ ಮಾಡಬೇಡವೆಂದು ಹೊಡೆದು, ಬಡಿದು ಹೇಳಿದರೂ ಗುಂಡಯ್ಯ ತನ್ನ ಹಠ ಬಿಡಲಿಲ್ಲ. ತನ್ನ ಲಿಂಗದ ಮಾಟದ ಗಡಿಗಿಯಲ್ಲಿ ಎಷ್ಟು ಬೇಕಾದಷ್ಟು ನೀರು ಹಿಡಿಯುತ್ತದೆಂದು ನಂಬಿದವ.
ಎದ್ದಾನ ಗುಂಡಯ್ಯ ತಂದಾನ ಕೊಡ ನೀರು
ಶಿವಶಿವ ಎನುತ ಬರಕ್ಯಾನ | ಆ ನೀರು
ತಳದಾಗ ಹೋಗಿ ಕುಂತಾದ
ಮಗ ಮಾಡಿದ ಲಿಂಗ ಮಾಟದ ಗಡಿಗಿಯಲ್ಲಿ ನೀರು ಹಿಡಿಯುವದಿಲ್ಲವೆಂಬುದು ತಂದೆಯ ವಾದವಾದರೆ ಮಗ ಅಲ್ಲಿ ಪವಾಡವೇ ಮಾಡಿ ತೋರಿಸಿದ್ದಾನೆ. ಊರ ಜನರೆಲ್ಲ ತಂದು ನೀರು ಹಾಕಿದರೂ ನೀರು ತಳದಲ್ಲಿಯೇ ಹೋಗಿ ನಿಲ್ಲುತ್ತಿದೆ ಇದೊಂದು ಪವಾಡವೇ ಆಗಿ ಗುಂಡಯ್ಯನಿಗೆ ಎಲ್ಲರೂ ನಮಸ್ಕರಿಸುತ್ತಾರೆನ್ನುತ್ತಾರೆ ಜನಪದರು. ಅಂದಿನಿಂದ ಆ ಪುರದಲ್ಲಿ ಗುಂಡಯ್ಯ ಒಬ್ಬ ಮಹಾಪುರುಷನಾದ. ತಂದೆ, ತಾಯಿ ಊರ ಜನರೆಲ್ಲ ಆತನಿಗೆ ಗುರು ಎಂದು ತಿಳಿಯತೊಡಗಿದರು.
ಆದರೆ ಗುಂಡಯ್ಯಗೆ ಇವಾವುದರ ಕಡೆಗೆ ಗಮನವಿಲ್ಲ. ಆತನ ಗಮನವೆಲ್ಲ ಆತನ ಕಾಯಕದೆಡೆಗೆ. ತನು-ಮನದಲ್ಲಿ ಭಕ್ತಿತುಂಬಿದ ಷಡಕ್ಷರಿ ಮಂತ್ರ ಬಾಯಲ್ಲಿದೆ.
ಓಂ ಯಂಬುದು ಮಣ್ಣಾಗಿ ನವೆಂಬುದ ನೀರಾಗಿ
ಮಾಯೆಂಬುದು ಆತನ ಕರವಾಗಿ | ಗುಂಡಯ್ಯ
ಗಡಿಗೆ ಮಾಡ್ಯಾನ ಶಿವಾಯೆನುತಾ
ಇಂತಹ ಶಿವಭಕ್ತನ ಹೆಂಡತಿ ಕೇತಲದೇವಿ. ಇವಳು ಕೂಡಾ ಶಿವಭಾವದವಳು, ಶಿವಪ್ರಜ್ಞೆಯುಳ್ಳವಳು ಗಂಡ ನಂಬಿದ ಕಾಯಕದಲ್ಲಿ ಅಚಲ ವಿಶ್ವಾಸ ವಿಟ್ಟವಳು. ಕಾಯಕ ಮಾಡಿದ್ದವರಿಗಿಲ್ಲ ಬಡತನ ಎಂಬ ಧ್ಯೇಯ ವಾಕ್ಯ ಅವರದು. ಹೆಚ್ಚಿನ ಭೋಗ-ಭಾಗ್ಯದಜೀವನ ಬಯಸಿದವರಲ್ಲ ನೆಮ್ಮದಿಯ ಜೀವನಕ್ಕೆ ಎಷ್ಟು ಬೇಕು ಅಷ್ಟೆ ಸಾಕು-ಎಂದು ಅರಿತು ಸಂಸಾರ ಮಾಡಿದವರು
ಗಡಗಿಯ ಮಾಡುತ್ತಾ ಮೃಢನಿಗಿ ಬೇಡ್ಯಾರ
ಕೊಡುಶಿವ ನಿಮಗ ರಟ್ಟಿಬಲ | ಕೊನಿತನ
ದುಡಿದುಣ್ಣೋ ಶಕ್ತಿ ನಿನ್ನಿಂದ
ಶಿವನಿಗೆ ಅವರು ಬೇಡಿದ್ದು ರಟ್ಟಿಯೊಳಗೆ ಬಲ. ಆ ಬಲದಿಂದ ದುಡಿದುಣ್ಣುತ್ತೇವೆ, ಹೊರತು ಯಾರ ಮುಂದೆ ಕೈ ಚಾಚುವದಿಲ್ಲ ಎಂಬ ಸ್ವಾಭಿಮಾನದ ಬದುಕು ಅವರದಾಗಿತ್ತು. ಅವರ ಬೇಡಿಕೆಯ ಸ್ವರೂಪ ಇಲ್ಲಿ ಗಮನಿಸುವಂತಹದೇ ಆಗಿದೆ. ಬಸವಾದಿ ಪ್ರಮಥರು ತಮ್ಮ ಜೀವನದಲ್ಲಿ ಹೆಚ್ಚು ಪ್ರಾಶಸ್ತ್ಯ ಕೊಟ್ಟಿದ್ದು ಕಾಯಕಕ್ಕೆ. ಅದರ ಮುಂದೆ ಗುರು, ಲಿಂಗ, ಜಂಗಮರ ಪೂಜೆಯು ಅವರಿಗೆ ಬೇಡ. ಕಾಯಕದಲ್ಲಿ ಕೈಲಾಸ ಪಡೆಯಬೇಕೆಂಬುದೆ ಅವರ ಹಿರಿಯಾಸೆ. ಆದ್ದರಿಂದ ಗುಂಡಯ್ಯನಿಗೆ
ಕಾಯಕವೇ ಶಿವಭಕ್ತಿ ಕಾಯಕವೆ ಶಿವಭಜನೆ
ಕಾಯಕವೇ ಲಿಂಗಶಿವಪೂಜೆ | ಶಿವಯೋಗ
ಕಾಯಕವೇ ಕಂಡ ಕೈಲಾಸ.
ಇಂತಹ ಆದರ್ಶ ಸಿದ್ಧಾಂತ ಉಳ್ಳ ಗುಂಡಯ್ಯ ಮತ್ತು ಕೇತಲದೇವಿ ದಂಪತಿಗಳು ಓದಿದವರಲ್ಲ, ಯಾವ ವೇದ-ಉಪನಿಷತ್ತುಗಳು ಅವರಿಗೆ ಗೊತ್ತಿಲ್ಲ. ಗೊತ್ತಿರುವದು ಕಾಯಕವೊಂದೆ. ಆತ ಗೈದ ಕಾಯಕವನ್ನು ಎಷ್ಟು ಹೊಗಳಿದರೂ ಜನಪದರಿಗೆ ತೃಪ್ತಿಯಿಲ್ಲ.
ಗಡಗಿಯ ಮಾಡಲು ಹೊತ್ತು ಮಣ್ಣುತಂದಾನ
ಹದಮಾಡಿ ಮಣ್ಣು ತುಳಿತಾನ | ಕ್ಷಣದಾಗ
ಮೈಮರೆತು ಕುಣಿದ ಅದರಾಗ’
ಪಂಚಾಕ್ಷರಿ ಮಂತ್ರ ಜಪಿಸುತ್ತಾ ಮಣ್ಣ ತುಳಿಯುವ ಗುಂಡಯ್ಯನ ಅರ್ಭಟಕ್ಕೆ ಸಾಕ್ಷಾತ ಶಂಭೊ ಶಂಕರನೆ ಕುಣಿದ ಎನ್ನುತ್ತಾನೆ.
ಕುಣಿಕುಣಿದ ಮಣ್ಣ ಹದಮಾಡಿ ಗುಂಡಯ್ಯ
ಕುಣಿಯಿತು ಮರ್ತ್ಯದೇವಲೋಕ | ಶಂಕರ ತಾ
ಕುಣದಾನ ಗುಂಡಯ್ಯನ ಜೊತೆಯಲ್ಲಿ
ಗುಂಡಯ್ಯನ ಈ ಶಿವ ಪಾರಮ್ಯಕ್ಕೆ ಜಾತಿ ವಾದಿಗಳು ಅಸೂಯೆ ಪಟ್ಟರು. ಅಷ್ಟೇ ಅಲ್ಲ ಮರುದಿನ ಆತ ತುಳಿಯುವ ಮಣ್ಣಿನೊಳಗೆ ಮುಳ್ಳು-ಗಾಜು ತಂದು ಹಾಕಿದರು. ಇದನ್ನು ಬಲ್ಲ ಗುಂಡಯ್ಯ. ಆದರೆ ಸುಮ್ಮನಾಗಿ ಮಣ್ಣು ತುಳಿಯಲು ಭಕ್ತಿಯಿಂದ ಪ್ರಾರಂಭಿಸುತ್ತಾನೆ. ಮುಳ್ಳು-ಕಲ್ಲುಗಳೆಲ್ಲ ಆತನ ಕಾಲೊಳಗ ನಟ್ಟು ರಕ್ತ ಹರಿಯಲು ಪ್ರಾರಂಭಿಸುವದು. ಖಬರಿಲ್ಲ ಗುಂಡಯ್ಯಗೆ. ಆದರೆ ಶಿವನು ಬಿಡಬೇಕಲ್ಲ. ಶಿವಶರಣರ ನೋವು ಅವನ ನೋವಲ್ಲವೇ ಹೀಗೆ ಮಾಡಿದವರಿಗೆ ಕುಡಿಯಲು ಹನಿ ನೀರು ಸಿಗುತ್ತಿಲ್ಲ. ನೀರೆಲ್ಲ ರಕ್ತದ ರೂಪ ತಾಳಿದೆ. ಅವರಿಗೆ ತಮ್ಮ ತಪ್ಪಿನ ಅರಿವಾಗಿದೆ. ತಕ್ಷಣವೇ ಗುಂಡಯ್ಯನ ಹತ್ತಿರ ಓಡೋಡಿ ಬರುತ್ತಾರೆ. ಆತನ ಪಾದ ಹಿಡಿಯಲು ಮುಂದಾಗುತ್ತಾರೆ. ಆದರೆ
ಒಂದರ ಸಿಗುವಲ್ದು ಎರಡರ ಸಿಗವಲ್ದು
ಒಂಭತ್ತು ಪಾದತರ್ಯಾವ | ಬ್ರಾಹ್ಮಣರ
ಜಂಭವುಅಡಗಿ ಹೋಗ್ಯಾದ.
ಎಷ್ಟೆಷ್ಟು ಹುಡುಕಿದರೂ ಗುಂಡಯ್ಯನ ಪಾದ ಸಿಗುತ್ತಿಲ್ಲ ಆ ದುಷ್ಟರಿಗೆಲ್ಲ. ಆದರೆ ಅವರ ಹೆಂಡತಿ-ಮಕ್ಕಳು ಬಂದು ನೀರಿನ ದಾಹದಿಂದ ಗುಂಡಯ್ಯನ ಮುಂದೆ ನಿಂತು ಅಳಲು ಪ್ರಾರಂಭಿಸುತ್ತಾರೆ. ಶರಣ ಹೃದಯವಲ್ಲವೆ? ತಕ್ಷಣವೇ ತನ್ನ ಕಾಲಿನಲ್ಲಿಯೇ ಆ ರಕ್ತವನ್ನು ಅಡಗಿಸಿಕೊಂಡು ಎಲ್ಲರಿಗೂ ನೀರುದೊರೆಯುವಂತೆ ಮಾಡುತ್ತಾನೆ.
ಹೀಗೆ ಬಂದವರ, ಹೋದವರ ಬಗ್ಗೆ ಏನೊಂದು ಅರಿಯದೆ ಒಂದೇ ಕಾಯಕದಲ್ಲಿ ಮಗ್ನರಾಗಿರುತ್ತಿದ್ದಾಗ ಕಲ್ಯಾಣದ ಬಸವಾದಿ ಪ್ರಮಥರನ್ನು ಅರಿತುಕೊಂಡು ತಾನು ಕಲ್ಯಾಣಕ್ಕೆ ಮಡದಿ ಕೇತಲದೇವಿಯೊಡನೆ ಬರುತ್ತಾನೆ. ಅಲ್ಲಿಯೂ ಆತನ ಕಾಯಕ ಗಡಿಗೆ ಮಾಡುವದೇ|
ಹರುಷದಲ್ಲಿ ಗಡಿಗೆಗಳ ಶರಣರಿಗೆ ಮಾರುವದು
ಸರಸದಲ್ಲಿ ಇದ್ದ ಸತಿಯೊಡನೆ | ಗುಂಡಯ್ಯಗ
ಸರಿಯಾರು ಶಿವನೆ ನೋಡ್ಹಾಂಗ
ಶರಣರು ಪ್ರಪಂಚ ಮಾಡಿ ಪಾರಮಾರ್ಥಗೆದ್ದವರು. ಮನೆ, ಮಡದಿ, ಮಕ್ಕಳು ಅವರ ಸಾಧನೆಗೆ ಅಡ್ಡಿಯಾಗಲಿಲ್ಲ, ತನ್ನಆತ್ಮೋದ್ಧಾರದೊಂದಿಗೆ ಅವರ ಆತ್ಮೋದ್ಧಾರಕೂಡ ಮಾಡಿದವರು. ಹಾಗೇಯೇ ಗುಂಡಯ್ಯ ಮಡದಿ ಕೇತಲೆಯೊಡನೆ ಸರಸದಿಂದ ಸಂಸಾರ ಮಾಡುತ್ತಾ ಶರಣರಿಗೆ ಮಾತ್ರ ಗಡಿಗೆಯನ್ನು ಮಾರುತ್ತ ದಾಸೋಹಿಯಾಗಿ ಕಲ್ಯಾಣದಲ್ಲಿ ಅನುಭವಮಂಟಪಕ್ಕೆ ಶಿವಾನುಭವಿಯಾಗಿ ಜೀವಿಸುತ್ತಿದ್ದ.
ಹದವಾಗುವಂತಹಗಡಗಿಯ ಮಾಡ್ಯಾರ
ಚದುರಾದ ಮುಚ್ಚಳ ಮ್ಯಾಲಿಟ್ಟು | ಸತಿಪತಿ
ಮಾರಿ ತಾ ದಾಸೋಹ ನಡಿಸ್ಯಾರ
ಕಲ್ಯಾಣದ ಶರಣರ ಸಿದ್ಧಾಂತವೆಂದರೆ ತಮ್ಮ ಕಾಯಕದ ವಸ್ತುಗಳನ್ನು ಅವರು ಕೊಡುವದು ಶರಣರಿಗೆ, ಭಕ್ತರಿಗೆ ಮಾತ್ರ. ಭವಿಗಳಿಗೆ ಅವರು ಕೊಡುವದಿಲ್ಲವೆಂದು ಶಿವ ಪ್ರಮಾಣ ಮಾಡಿದವರು ಕುಂಬಾರ ಗುಂಡಯ್ಯ ಇದಕ್ಕೆ ಹೊರತಾಗಿಲ್ಲ ಕಸಪಯ್ಯ, ನಾರಾಯಣರು-ಮುಂತಾದವರು ಬಂದುಗಡಿಗೆ ಕೇಳಿದಾಗ “ಭವಿಗಳಿಗ್ಯಾಕ ನನಗಡಿಗೆ” ಎನ್ನುತ್ತಾರೆ. ಸಿಟ್ಟಿಗೇರಿದ ಆ ಜನರು ಹೋಗಿ ಬಿಜ್ಜಳನಿಗೆ ದೂರುಕೊಡುತ್ತಾರೆ. ಅವರ ಸೊಕ್ಕು ನೀನು ಮುರಿಯ ಬೇದೆನ್ನುತ್ತಾರೆ. ಸಿಟ್ಟಿಗೇರಿದ ಬಿಜ್ಜಳ.
ಭಂಡಬಿಜ್ಜಳಗ ಸಿಟ್ಟರ್ಯಾದೆ ನೆತ್ತಿಗಿ
ಗುಂಡಯ್ಯನ ಮನೆಗೆ ಆಳಿಗಿ | ಖಳುವ್ಯಾನ
ಒಡೆಯಿರಿ ಗಡಿಗಿ ಎನುತಾನ.
ಆ ಭಟರು ಗುಂಡಯ್ಯನ ಗಡಿಗೆಗಳೆಲ್ಲ ಒಂದೂಂದಾಗಿ ತೆಗೆದು ಬೀಸಾಡುವಾಗ ಅವೆಲ್ಲ ಹೋಗಿ ಭೂಮಿ-ಆಕಾಶದ ಮಧ್ಯೆ ನಿಂತು ಬಿಡುತ್ತವೆ. ಬಸವಣ್ಣನವರಿಗೆ ಈ ಸುದ್ದಿ ಹತ್ತುತಲೇ ಅವರು ಶರಣರೊಂದಿಗೆ ಗುಂಡಯ್ಯನ ಮನೆಗೆ ಬರುತ್ತಾರೆ. ಅಲ್ಲಿ ಜನಜಾತ್ರೆ ಆದರೆ ಗುಂಡಯ್ಯ-ಕೇತಲದೇವಿ ಅಲ್ಲಿಲ್ಲ. ಅವರಿಬ್ಬರು ಅನುಭವಮಂಟಪದಲ್ಲಿ ಅಲ್ಲಮಪ್ರಭುಗಳ ಶಿವಾನುಭವದಲ್ಲಿ ಮಗ್ನರಾಗಿದ್ದಾರೆ. ಬಸವಣ್ಣನವರು ಶರಣರೊಂದಿಗೆ ಅನುಭವಮಂಟಪದತ್ತ ಹೊರಡುತ್ತಾರೆ.
ಅನುಭವ ಮಂಟಪಕ ಹೊಂಟಾರ ಬಸವಣ್ಣ
ಬೆನ್ನಹಿಂದ ನಡೆದಾವ ಗಡಿಗೆಲ್ಲಾ | ಆ ಊರಾಗ
ಶರಣರ ಲೀಲೆ ನಡಿದಾವ
ಅಷ್ಟೇ ಅಲ್ಲ,
ಶರಣರ ಲೀಲೆಯು ಕಲ್ಯಾಣ ಊರಾಗ
ಕೈಲಾಸ ಪತಿಯು ಆಕಾಶದೊಳಗ | ಕುಂತಾರ
ಶರಣರು ಎಲ್ಲ ಮಂಟಪದೊಳಗ.
ಬಸವಣ್ಣನವರು ಆ ಶರಣ ದಂಪತಿಗಳಿಗೆ ಬಾಗಿ ನಮಿಸಿ ಪ್ರಭುದೇವರಿಗೆ ನಡೆದದ್ದು ಎಲ್ಲಾ ತಿಳಿಸುತ್ತಾರೆ. ಬಿಜ್ಜಳನ ಹತ್ತಿರವೂ ಹೋಗಿ “ಶರಣರ ಹೆಸರಿಗೆ ಹೋಗಬ್ಯಾಡ” ಎಂದು ಬುದ್ಧಿ ಹೇಳಿದರೂ ಆತ ಕೇಳುವದಿಲ್ಲ. “ಮಣ್ಣಿನ ಗಡಿಗಿ ಅವು ನನಗೇನು ಮಾಡ್ಯಾವು” –ಎಂದು ತಿರಸ್ಕಾರದ, ಅವಹೇಳನದ ಮಾತುಗಳನ್ನು ಆಡುತ್ತಾನೆ ತಕ್ಷಣವೇ ಅಲ್ಲಿ ನಡದದ್ದನ್ನು ಅದ್ಭತವಾಗಿ ಚಿತ್ರಸುತ್ತಾರೆ ಜನಪದರು.
ಸಾವಿರದ ಗಡಗಿಯು ಬಿಜ್ಜಳನ ಸುತ್ತಮುತ್ತ
ಕುಣಿತಾವ ಧನ್ನ ಧನ್ನ ಧನ್ನೆಂದು | ಬಿಜ್ಜಳ
ನಡುಗ್ಯಾನ ಗಡಿಗಿಯ ಸಪ್ಪಳಕ
ಬಿಜ್ಜಳನ ಎದೆ ಬಡಿದುಕೊಳ್ಳಲಾರಂಭಿಸಿತು. ಯಾರಿಗೂ ಅಂಜದ ಅರಸ! ಗಡಗಿಗಳ ಶಬ್ದಕ್ಕೆ ನಡುಗುತ್ತಿದ್ದಾನೆ. ಮಾತುಗಳು ಹೊರ ಬರುತ್ತಿಲ್ಲ. ಓಡುತ್ತಾ ಹೋಗಿ ಬಸವಣ್ಣನವರಲ್ಲಿ ಕ್ಷಮೆಯಾಚಿಸಿ ಗಡಿಗೆಗಳನ್ನು ವಾಪಸ್ಸು ಕಳುಹಿಸಲು ತಿಳಿಸುತ್ತಾನೆ ಬಿಜ್ಜಳನ ಮಾತಿಗೆ ನಗುತ್ತಾರೆ ಬಸವಣ್ಣ ಯಾವ ಗಡಿಗೆಗೆ ಕೀಳೆಂದು ಕರೆದಿರಿಯೋ ಆ ಗಡಿಗೆಗೆ “ಶರಣು ಹೋಗು” ಎನ್ನುತ್ತಾರೆ. ಏಕೆಂದರೆ ಸತಿ-ಪತಿಗಳಿಬ್ಬರ ಕಾಯಕದ ಬೆವರಿನಿಂದ ಗಡಿಗೆಗಳು ನಿರ್ಮಾಣಗೊಂಡಿವೆ; ಅವು ಸಾಮಾನ್ಯವಲ್ಲ ಎಂದು ಹೇಳಿದಾಗ
ಮಣ್ಣಿನಾ ಗಡಿಗಿಗಿ ಶರಣೆನ್ನು ಬಿಜ್ಜಳ
ಶರಣಿನ್ನು ಕುಂಬಾರ ಗುಂಡಯ್ಯಗ | ಬಿಜ್ಜಳ
ಬಾಗಿ ತಾ ಶರಣು ಎಂದಾನ.
ತಕ್ಷಣವೇ ಗುಂಡಯ್ಯ ಹೋಗಿ ಮಣ್ಣಿನ ಗಡಿಗೆಯ ಮೇಲೆ ಕೈಯಿಟ್ಟಾಗ ಅವೆಲ್ಲಾ ಹೊನ್ನಿನ ಗಡಿಗೆಗಳಾಗುತ್ತವೆ. ಅಲ್ಲಿ ಇರುವ ಕೊಂಡಿ ಮಂಚಣ್ಣರು ಓಡಿ ಹೋಗಿ-ಅವುಗಳನ್ನು ಎತ್ತಿಕೊಳ್ಳುತ್ತಾರೆ. ತಕ್ಷಣವೇ ಕೈಯೊಳಗೆ ಸರ್ಪ. ಬಿಟ್ಟು ಹೋಗುತ್ತಿಲ್ಲ. ಅಂಜುತ್ತಾ ಚೀರುತ್ತಾ ಗುಂಡಯ್ಯನ ಪಾದದ ಮೇಲೆ ಬಿದ್ದು ಹೊರಳಾಡಲು ಪ್ರಾರಂಭಿಸುತ್ತಾರೆ. ತಕ್ಷಣ ಕೈಯೊಳಗಿನ ಸರ್ಪ ಮಾಯವಾಗುತ್ತದೆ.
ಹೀಗೆ ಹತ್ತು ಹಲವು ಪವಾಡಗಳನ್ನು ನಡೆಸಿದ್ದ ಕುಂಬಾg ಗುಂಡಯ್ಯ ಕಲ್ಯಾಣದಲ್ಲಿ ಬಹು ಪ್ರಸಿದ್ಧಿಗೆ ಬಂದರು. ಆದರೂ ಒಂದಿಷ್ಟು ಅಹಂ ಪಡಲಿಲ್ಲ; ಹೊಗಳಿಕೆಗೆ ಉಬ್ಬಲಿಲ್ಲ ಎಲ್ಲವು ಪರಶಿವನ ಕೃಪೆ – ಎಂಬ ಶಿವಭಾವದಿಂದಲೇ ಬದುಕುತ್ತಿದ್ದರು.
ಭೂಮಿಯೊಳು ಗುಂಡಯ್ಯ ಸೀಮೆ ಮೀರಿದ ಭಕ್ತಿ
ನೇಮದಲ್ಲಿ ನುಡಿಸಿ ಗಡಿಗೆಗಳ | ಕುಣಿತಾನ
ತೋಮ ಧಿತ್ತಯ್ಯ ಹೆಜ್ಜೆಯೊಳು.
ಆತನ ಆ ಕುಣಿತದ ನಾದಕ ಮಾನವಲೋಕವಲ್ಲ ದೇವಲೋಕವು ಸಹ ಸಂಪ್ರೀತಗೊಂಡಿತು. ಸಾಕ್ಷಾತ ಪರಶಿವನೆ ತಲೆದೂಗುತ್ತಿದ್ದ ಆತನ ಆ ಭಾವಕ್ಕೆ. ಒಂದು ದಿನ ಪಾರ್ವತಿ ಕೇಳುತ್ತಾಳೆ ‘ಹೊಸತು ತಲೆಯೇಕೆ ತೂಗುವಿರಿ’ ಎಂದಾಗ ಶಿವನ
ನಾದಗಾಳಿಯು ತುಂಬಿ ಭೇದಿಸಲು ನನ್ನೆದೆಯ
ಸಾಧಿಸುವೆ ದೇವ ಗುಂಡಯ್ಯ | ನೆದೆಯೊಳಗ
ಮೋದಿಸಲು ಕುಣಿವೆ ತಲೆದೂಗಿ
ಎಂದು ಗಂಡಯ್ಯನ ಕುಣಿತವನ್ನು ಮೈಮರೆತು ಶಿವನು ವರ್ಣಿಸುತ್ತಿದ್ದಾಗ ಪಾರ್ವತಿಯು ಅದನ್ನು ನೋಡಬೇಕೆಂದು ಅಪೇಕ್ಷಿಸುತ್ತಾಳೆ ಇಬ್ಬರು ಕಲ್ಯಾಣ ಪುರಕೆ ಆಗಮಿಸುತ್ತಾರೆ. ಆದರೆ ಗುಂಡಯ್ಯ ಕಾಯಕದ ಗುಂಗಿನಲ್ಲಿ ಮಡಿಕೆಗಳನ್ನು ಬಾರಿಸುತ್ತ ಕುಣಿತದಲ್ಲಿ ತೊಡಗಿದ್ದ. ನಾನು ಹೇಗೆ ಈತನಿಗೆ ಕಾಣಬೇಕು ಎಂದು ವಿಚಾರಿಸುತ್ತ ಪರಮಾತ್ಮ ಆತನ ಪ್ರಾಣಲಿಂಗವನ್ನು ಹಿಡಿದೆತ್ತಿದ್ದ ಆತನ ಧ್ಯಾನ ಕೆಡಿಸಲು ಶಿವನು ಹೀಗೆ ಮಾಡಲು ಗುಂಡಯ್ಯ ಗೋಣಿತ್ತಿ ನೋಡಿ ಆ ಜಂಗಮನನ್ನು ಕಂಡು ಇನ್ನೂ ಹಿಗ್ಗಿನಿಂದ ಕುಣಿಯತೊಡಗಿದ. ಆ ನಾದಕ್ಕೆ ಶಿವನು ಕೂಡಾ ಆದರದಿಂದ ಕುಣಿಯಲು ಪ್ರಾರಂಭಿಸಿದ
ಜಡೆಕೆದರಿ ಹರಿದಾಡಿ ಮಡುಗಿದವು ದಿಕ್ಕುಗಳು
ಮುಡಿಯೊಳೆಗೆ ಗಂಗೆ ತುಳುಕಾಡಿ | ಲೋಕಗಳು
ನಡುಗಿದವು ಶಿವನ ಹೆಜ್ಜೆಯೊಳು.
ಇಡೀ ಪ್ರಕೃತಿಯ ಇವರಿಬ್ಬರ ನೃತ್ಯಕ್ಕೆ ಕುಣಿಯತೊಡಗಿತು. ಗಿಡ-ಮರಗಳಿಂದ ಗಾಳಿ ಭೋರೆಂದು ಬೀಸಿತು. ಸಾಗರವು ಉಕ್ಕಿ ಹರಿಯತೊಡಗಿತು. ಆಗ ಶಿವಗಣಗಳೆಲ್ಲ ಹೌಹಾರಿ ಪಾರ್ವತಿಯಲ್ಲಿಗೆ ಬಂದು
ಜಗದಂಬೆ ಶಿವಮರೆತು ಜಗದೊಳಗೆ ಕುಣಿಯುವನು
ಜಗಮುಳುಗಿ ಗೋಳು ಶಿವಲೋಕ | ಉಳಿಯುವದೆ
ನಗೆಯಲ್ಲ ನಿಲಿಸು ಶಿವ ಕುಣಿತ
ಆಗ ಶಿವನು ಕುಣಿಯುವದನು ನಿಲ್ಲಿಸುವನು. ಎಲ್ಲೆಲ್ಲೂ ಶಾಂತ ತೆನೆಲೆಸುವದು ಆಗ ಮೈಮರೆತು ಗುಂಡಯ್ಯ ಕಾಮವೈರಿಯ ಕಂಡು ನಮಸ್ಕರಿಸಿದ. ಶಿವನು ಸಂತೋಷದಿಂದ ‘ಶಿವಲೋಕದಲ್ಲಿ ನಿನಗೆ ಶಿವ ಪದವಿ ಎಣಿಸುವೆನಂ, ನಡೆ ನೀನು ಕೈಲಾಸಕೆ ಎನ್ನಲು ಗುಂಡಯ್ಯ.
ಬೇಡೆನಗೆ ಕೈಲಾಸ ಬಾಡುವದುಕಾಯಕವು
ನೀಡೆನಗೆ ಶಿವನೆ ಕಾಯಕವು | ಕುಣಿದಾಡಿ
ನಾಡ ಹಂದರಕೆ ಹಬ್ಬಿಸುವ
ಎಂದು ಕೇಳಲು ಶಿವನು ಅಭಿಮಾನದಿಂದಆತನಿಗೆ ವರಕೊಡುತ್ತಾನೆ.
ಮಡಿಕೆಯನ್ನು ನುಡಿಸುವನು ಕೇಳಲಿ ನಿಮಗೆ
ಮಿಡಿಯುವದಕೆ ಕೊಡತಿ ಬೆರಳಾಗಿ | ವರನೀಡು
ಮಿಡಿದು ಶಿವನಾದ ಬೆರೆಯುದಕೆ||
ಗುಂಡಯ್ಯನ ಕಾಯಕದ ಪರೀಕ್ಷೆ ಮಾಡಲು ಶಿವನು ಜಂಗಮರೂಪ ತಾಳಿ ಕಲ್ಯಾಣಕ್ಕೆ ಬಂದ ಆಗ
ಭೋರೆಂಬ ಗಾಳಿಯು ಘೋರೆಂಬ ಮಳೆಯದು
ಜೋರಾಗಿ ಬಂದು ನೆಲನಡುಗಿ | ಗುಂಡಯ್ಯ
ಮಾಡಿದ್ದುಎಲ್ಲ ನೀರುಪಾಲು.
ಮಾಡಿರುವ ಗಡಿಗೆಯಲ್ಲಾ ನೀರುಪಾಲು, ಇದ್ದ ಗುಡಿಸಲೊಳೆಗೆ ನೀರು. ಕೂಡಲು ಜಾಗವಿಲ್ಲ, ಆ ಸಮಯದಲ್ಲಿ ಜಗಕ್ಕೊಡೆಯ ಶಿವನು ಜಂಗಮನಾಗಿ ದಾಸೋಹಂ ಎನ್ನುತ್ತ ಬಂದು ಬಿಟ್ಟ.
ಮನಿಯಲ್ಲ ಮಾರಿಲ್ಲ ನಿನಗೆಲ್ಲಿ ಕೂಡಿಸಲಿ
ಎನುತಲಿ ಚಿಂತಿ ಮಾಡ್ಯಾನ | ಗುಂಡಯ್ಯ
ಎತ್ತಿ ತಾ ತಂದ ದೊಡ್ಡಕಲ್ಲು.
ಆ ಕಲ್ಲಿನ ಮೇಲೆ ಜಂಗಮನಿಗೆ ಕೂಡಿಸಿ ಆತನ ಕೈಕಾಲುಗಳೆಲ್ಲ ಒರಸುತ್ತಾನೆ. ಆದರೆ ಜಂಗಮ ‘ಹಸಿವು, ನೀರು. ಹಸಿವು, ನೀರು ಎಂದು ಚೀರಲು ಸತಿ-ಪತಿ ಇಬ್ಬರೂ ಕೂಡಿ.
ಕಾಯಕದ ಗಡಿಗಿಯು ಎತ್ತಿ ತಾ ಹಿಡದಾರ
ಜಂಗಮನ ಜೋಳಿಗ್ಯಾಗ ಬರಕ್ಯಾರ | ಆಗಳಿಗೆ
ಬಿಸಿ ಅನ್ನ ರೊಟ್ಟಿ ಜೊಳಿಗ್ಯಾಗ
ಶಿವನು ಆ ಶರಣ ದಂಪತಿಗಳ ಕಾಯಕದ ರೀತಿಗೆ ಆಶ್ಚರ್ಯ ಪಡುತ್ತಾನೆ. ಕಾಯಕದ ಮುಖಾಂತರ ಕಲ್ಯಾಣದ ಶರಣರು ತನ್ನ ಸರಿಸಮ ಬೆಳೆದಿದ್ದಾರೆಂದು ತಿಳಿದು ಅಭಿಮಾನ ಪಡುತ್ತಾನೆ. ವರವ ಕೊಡಲು ಮುಂದಾಗುತ್ತಾನೆ. ಆದರೆ ಗುಂಡಯ್ಯ ಬೇಡಿದ್ದೇನು?
ನೀಕುಂತ ಈ ಕಲ್ಲ ನನಗರ ನೆಲೆಯಾಗಲಿ
ನೀ ಕೊಟ್ಟಕಾಯಕ ನನಗಿರಲಿ | ಶಿವರಾಯ
ನೀ ಇಳಿದ ಈ ಧರೆ ಸುಖವಿರಲಿ||
ಶಿವನು ಆತ ಕೇಳಿದ ವರಕೊಟ್ಟು ವಾಪಸ್ಸಾಗುತ್ತಾನೆ. ಅದೇ ಇಂದು ಭಾಲ್ಕಿಯ ಪುರದಲ್ಲಿ ಐತಿಹಾಸಿಕ ಸ್ಥಳವಾಗಿದೆ ಜನರ ಭಕ್ತಿಗೆ ನೆಲೆಯಾಗಿದೆ.
ಶಿವಕುಂತ ಕಟ್ಟೆಯು ಗುಂಡಯ್ಯನ ಮನೆಯಾಗಿ
ಭಾಲ್ಕಿ ಊರಾಗ ಗುಡಿಯಾಗಿ | ಮೆರೆದಾದ
ಗುಂಡಯ್ಯನ ಹೆಸರಲಿ ಆ ಊರು
ಅನುಭವ ಮಂಟಪದ ಒಡನಾಡಿಯಾಗಿದ್ದ ಈ ಶರಣದಂಪತಿಗಳು ಅನುಭಾವಿಗಳು ಹೌದು! ಗುಂಡಯ್ಯನ ವಚನಗಳು ಸಿಕ್ಕಿಲ್ಲ. ಆದರೆ ‘ಕುಂಭೇಶ್ವರಾ’-ಎನ್ನುವ ಅಂಕಿತದಲ್ಲಿ ವಚನಗಳನ್ನು ಬರೆದಿದ್ದಾಳೆ ಶರಣಿ ಕೇತಲದೇವಿ.
ಡಾ. ನೀಲಾಂಬಿಕಾ ಪೊಲೀಸಪಾಟೀಲ,
“ಗುರು ಶರಣ ನಿಲಯ”
ಮನೆ ನಂ. 1495/101 ಮತ್ತು 102/310,
ಗೋದುತಾಯಿ ನಗರ,
ನ್ಯೂ ಜೇವರ್ಗಿ ರಸ್ತೆ,
ಕಲಬುರಗಿ – 585 102.
ಮೋಬೈಲ್ ನಂ. 94821 47084.