
ಸೊನ್ನಲಿಗೆಯ ಸಿದ್ಧರಾಮೇಶ್ವರರು ಕಾಯಕಜೀವಿ. ಸಾಮಾಜಿಕ ಜವಾಬ್ದಾರಿಗಳನ್ನು ಜತನದಿಂದ ಕೈಗೊಂಡ ಕರ್ಮಯೋಗಿ. ಲೋಕ ಕಲ್ಯಾಣಾರ್ಥವಾಗಿ ತಮ್ಮ ಬದುಕನ್ನು ಸವೆಸಿದ ಸಿದ್ಧ ಶಿವಯೋಗಿ. ಸಿದ್ಧರಾಮೇಶ್ವರರು ತಮ್ಮ ಇಡಿ ಬದುಕಿನುದ್ದಕ್ಕೂ ಕಾಯಕವನ್ನೇ ಉಸಿರಾಗಿರಿಸಿಕೊಂಡಿದ್ದರು. ಬದ್ಧತೆಗೆ ತುಡಿದ ಸಿದ್ಧರಾಮೇಶ್ವರರು ಶರಣ ತತ್ವಗಳನ್ನು ರೂಢಿಸಿಕೊಂಡವರು. ಮಾನವೀಯತೆಯ ಮೌಲ್ಯಗಳಿಂದ ವ್ಯಷ್ಟಿಯಿಂದ ಸಮಷ್ಟಿಯನ್ನು ಬೆಸೆದವರು. ತಮ್ಮ ವಚನಗಳ ಮೂಲಕ ಶ್ರೇಷ್ಠ ಮಾನವೀಯ ಸಂವೇದನೆಗಳನ್ನು ಹಂಚಿದವರು ಮತ್ತು ಚಿಂತಿಸಿದವರು. ಇವರದು ಅಪರೂಪದಲ್ಲೇ ಅಪರೂಪದ ವ್ಯಕ್ತಿತ್ವ. ಸಕಲ ಚರಾ-ಚರ ಚೇತನವನ್ನು ಪ್ರೀತಿಸಿದ ಇವರಲ್ಲಿ ತಾಯ್ತನವಿದೆ. ಹೆಂಗರುಳಿದೆ. ಈ ಕಾರಣದಿಂದಲೇ ಸಿದ್ಧರಾಮೇಶ್ವರರು ಪಶು, ಪಕ್ಷಿ ಮುಂತಾದ ಜೀವ ಚೇತನಗಳಿಗಾಗಿ ಕೆರೆ-ಕಟ್ಟೆ ಬಾವಿಗಳನ್ನು, ದೇವಾಲಯಗಳನ್ನು ನಿರ್ಮಿಸಿ ಕುಗ್ರಾಮವಾಗಿದ್ದ ಸೊನ್ನಲಿಗೆಯನ್ನು ಭೂ-ಕೈಲಾಸವಾಗಿಸಿದರು.
ಜೀವ ದಯಾಪರತೆ 12 ನೇ ಶತಮಾನದ ಎಲ್ಲಾ ಶರಣ ಸಂಕುಲದ ಮೂಲ ಜೀವ ಸೆಲೆಯಾಗಿತ್ತು. ದಯೆಯೇ ಧರ್ಮದ ಮೂಲವಾಗಿತ್ತು. ಈ ಮೂಲ ದ್ರವ್ಯವನ್ನೇ ತಮ್ಮ ಜೀವಿತಾವಧಿಯವರೆಗೆ ಗಂಧವ್ರತದಂತೆ ಪಾಲಿಸಿದವರು ನಮ್ಮ ಶರಣರು. ಸಮ ಸಮಾಜದ ಪರಿಕಲ್ಪನೆಯ ಅಡಿಯಲ್ಲಿ ಇವರು ಜಾರಿಗೆ ತಂದ ಸಿದ್ಧಾಂತಗಳು ಇಂದಿಗೂ ನಿಬ್ಬೆರಗುಗೊಳಿಸುತ್ತವೆ. ವರ್ಗ, ವರ್ಣ, ಲಿಂಗ ತಾರತಮ್ಯರಹಿತ ಸಮಾಜ ರಚನೆಯು ಶರಣರ ಮೂಲ ಉದ್ದೇಶವಾಗಿತ್ತು. ಅನುಭವವನ್ನು ಅನುಭಾವದೆತ್ತರಕ್ಕೆ ಕೊಂಡೊಯ್ದು ಶರಣರು ಅನುಭವ ಮಂಟಪದಲ್ಲಿ ವಚನ ರಚನೆಯಂತಹ ಶ್ರೇಷ್ಠ ಕಾರ್ಯವನ್ನು ಮಾಡಿದರು. ಶರಣರ ರಚನೆಗಳೆಲ್ಲಾ ಲೋಕಾಂತದಲ್ಲಿ ಅರಳಿದ ಹೂಗಳು. ನಡೆ-ನುಡಿ ಶರಣರ ವಚನ ಸಾಹಿತ್ಯದ ತಿರುಳಾಗಿರುವುದರಿಂದ ಅವು ಸರ್ವಕಾಲಕ್ಕೂ ಸಲ್ಲುತ್ತವೆ.
ಶರಣ ಸಂಕುಲದಲ್ಲಿ ಸಿದ್ಧರಾಮೇಶ್ವರರದು ತುಂಬಾ ಪ್ರಮುಖ ಪಾತ್ರವಾಗಿದೆ. ವಿಶಿಷ್ಟ ಆಲೋಚನೆಯುಳ್ಳ ಇವರು ಅದ್ಭುತ ಕನಸುಗಾರರಾಗಿದ್ದರು. “ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ, ಶಿವಯೋಗಿಯ ಶರೀರಂ ವೃಥಾ ಸವೆಯಲಾಗದು. ಅನುಗೊಂಬನಿತು ಕಾಯಕ ನಡೆಯಬೇಕು” ಎಂಬುದು ಇವರ ಧ್ಯೇಯವಾಕ್ಯವಾಗಿತ್ತು. ಒಂದು ಗ್ರಾಮದ ಜೀವನಾಡಿಯಾಗಿ ಅಲ್ಲಿಯ ಮಕ್ಕಳು-ಹೆಣ್ಣುಮಕ್ಕಳು-ಮುದುಕರು, ಪಶು-ಪಕ್ಷಿ, ದನ-ಕರುಗಳಿಗೆ ದಯಾಪರರಾಗಿ “ದುಷ್ಟ ನಿಗ್ರಹ-ಶಿಷ್ಟ ರಕ್ಷಕ” ಎಂಬಂತೆ ಎಲ್ಲರ ಹಿತ ಕಾಯ್ದ ಇವರು ಜನರೆದೆಯಲ್ಲಿ ನೆಲೆಗೊಂಡವರು. ಜನಪದರು ಈ ಕಾರಣಗಳಿಂದಲೇ ತಮ್ಮ ತ್ರಿಪದಿಗಳಲ್ಲಿ ಸಿದ್ಧರಾಮೇಶ್ವರರನ್ನು ಜೀವಂತವಾಗಿರಿಸಿದ್ದಾರೆ.
ಮಲ್ಲಿಗೆ ಇರುವಾಗ ಮುಳ್ಯಾಕ ಮುಡಿಯೂತಿ
ಸೊಲ್ಲಾಪುರದಾಗ ಸಿದ್ಧರಾಮನಿರುವಾಗ
ಕಲ್ಲಿಗ್ಯಾಕೆ ಕೈಯ ಮುಗಿಯೂತಿ
ಎಂಬ ಜನಪದರ ಭಾವದಲ್ಲಿ ಸಿದ್ಧರಾಮೇಶ್ವರ ವ್ಯಕ್ತಿತ್ವ ಅಡಗಿದೆ. ಅವರ ವಚನಗಳಲ್ಲೂ ಅಷ್ಟೇ ಮಾತಿಗಿಂತ ಕೃತಿಗೆ ಹೆಚ್ಚು ಪ್ರಾಧಾನ್ಯತೆ ಇದೆ. ಪಾಂಡಿತ್ಯಕ್ಕಿಂತ ಅರಿವು, ತಿಳುವಳಿಕೆಗೆ ಪ್ರಾಶಸ್ತ್ಯವಿದೆ.
ವಚಿಸಿ ಅನುಭಾವಿಯಾಗದವ ಪಿಶಾಚಿಯಯ್ಯಾ:
ವಚಿಸಿ ಅನುಭಾವಿಯಾದವ ಪಂಡಿತನಯ್ಯಾ.
ವಿದ್ಯೆ ಎಂಬುದು ಅಭ್ಯಾಸಿಕನ ಕೈವಶ.
ಅವಿದ್ಯೆ ಎಂಬುದು ಸರ್ವರಲ್ಲಿ ವಶ.
ವಿದ್ಯಾವಿದ್ಯೆಯನರಿತು ಜಗದ್ವೇದ್ಯನಾಗಬಲ್ಲಡೆ,
ಮಹಾಪಂಡಿತ ನೋಡಾ, ಕಪಿಲಸಿದ್ದಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-706 / ವಚನ ಸಂಖ್ಯೆ-1591)
ಎಂಬ ವಚನದಲ್ಲಿ ‘ವಿದ್ಯೆ’ ‘ಅವಿದ್ಯೆ’ಗಳ ಅಂತರವನ್ನು ಹೇಳುತ್ತಾರೆ. ಜೀವದಯಾಪರತೆ ಹೊಂದಿದ್ದ ಸಿದ್ಧರಾಮೇಶ್ವರರದು ಹೆಂಗರಳು. ಈ ಕಾರಣದಿಂದ ಅವರ ವಚನಗಳಲ್ಲಿ ಸ್ತ್ರೀ ಸಂವೇದನೆಗಳು ‘ಅವ್ವಾ’ ‘ತಾಯಿ’ ‘ಕೆಳದಿ’ ‘ಎಲೆಯವ್ವ’ ‘ಕೇಳವ್ವಾ’, ‘ಕಾಣೆನವ್ವಾ’, ‘ಹೋಗೆಲಗವ್ವಾ’ ‘ಹೆಂಗೂಸು’ ಎಂಬ ಪದಗುಚ್ಚಗಳ ಪುನರುಕ್ತಿಯನ್ನು ಮೇಲಿಂದ ಮೇಲೆ ಕಾಣುತ್ತೆವೆ. ಶರಣಸತಿ-ಲಿಂಗಪತಿ ಭಾವದಲ್ಲಿ ಸಿದ್ಧರಾಮೇಶ್ವರರ ಹೆಂಗರುಳಿನ ಭಾವ ಸ್ಪಷ್ಟವಾಗಿ ಗೋಚರಿಸುತ್ತದೆ.
ನಿಜಾರ್ಥದಲ್ಲಿ ಗಂಡು-ಹೆಣ್ಣು ಎಂಬ ಉಭಯಭಾವವೇ ಸಲ್ಲದು. ಈ ಮಾತಿಗೆ ಸಮರ್ಥನೆ ನೀಡಬಹುದಾದರೆ ಗಂಡಿನಲ್ಲಿ ಹೆಣ್ಣಿನ ಗುಣಗಳು, ಹೆಣ್ಣಿನಲ್ಲಿ ಗಂಡಿನ ಗುಣಗಳು ಇದ್ದೇ ಇವೆ. ಎಲ್ಲದ್ದಕ್ಕೂ ಮರುಗುವ ಗಂಡಿನಲ್ಲಿ ಅಕ್ಕರೆ, ಮಮತೆ ತುಂಬಿರುತ್ತದೆ. ಇಂತಹವರನ್ನು “ಹೆಂಗರುಳಿನವ” ಎನ್ನುತ್ತಾರೆ. ಹೆಣ್ಣಿನಲ್ಲಿ ಎದೆಗಾರಿಕೆ, ಛಲಗಾರಿಕೆ, ಧೈರ್ಯ, ಸ್ಥೈರ್ಯ ಇದ್ದಾಗ ಅವಳನ್ನು “ಗಂಡುಬೀರಿ” ಎನ್ನುತ್ತಾರೆ. ಈ ಉಭಯತರ ಗುಣಗಳು ಪರಸ್ಪರ ಗಂಡು-ಹೆಣ್ಣಿನಲ್ಲಿರುವಾಗ ಲಿಂಗ ತಾರತಮ್ಯ ಎಂಬುದು ಪ್ರಶ್ನಾತೀತವಾಗುತ್ತದೆ. ಜೈವಿಕ ರಚನೆಯಲ್ಲಿ ಗಂಡು ಹೆಣ್ಣು ಇಬ್ಬರಲ್ಲೂ ಜನನಾಂಗವೊಂದನ್ನು ಹೊರತು ಪಡಿಸಿ ಎಲ್ಲಾ ಅವಯವಗಳೂ ಸಮವಾಗಿವೆ. ಕಣ್ಣು, ಕಿವಿ, ಮೂಗು, ಬಾಯಿ, ಕೈ, ಕಾಲು, ಚರ್ಮ, ತಲೆ, ಮುಂತಾದವುಗಳಲ್ಲಿ ವ್ಯತ್ಯಾಸ ಇಲ್ಲ. ಸಂತಾನೋತ್ಪತ್ತಿಗಾಗಿ ಜನನಾಂಗದಲ್ಲಿ ಭೇದವಿದೆ. ಇದನ್ನು “ಲಿಂಗಭೇದ” ಎನ್ನಬಹುದೇ ವಿನ: “ಲಿಂಗತಾರತಮ್ಯ” ಎಂದು ಭಾವಿಸಲಾಗದು.
ವಿಪರ್ಯಾಸವೆಂದರೆ ಈ ಲಿಂಗಭೇದದಿಂದಲೇ ಲಿಂಗತಾರತಮ್ಯ ಪ್ರಾರಂಭವಾಗಿ ಗಂಡು ಶ್ರೇಷ್ಠ-ಹೆಣ್ಣು ಕನಿಷ್ಠ ಎಂದು ನಂಬಿಸಲಾಯಿತು. ಆದರೆ ಸಂತಾನೋತ್ಪತ್ತಿಯಲ್ಲಿ ಇಬ್ಬರೂ ಸಮಾನರೇ. ಇದೇ ವೈಜ್ಞಾನಿಕ ಸತ್ಯ. ಮೌಢ್ಯತೆ ತುಂಬಿದ ಸಮಾಜದಲ್ಲಿ ಹೆಣ್ಣಿನ ಹೆಣ್ತನವೆ ಪ್ರಶ್ನೆಯಾಯಿತು. ಅದೇ ಮೈಲಿಗೆಯೆಂದು ಬಿಂಬಿತವಾಯಿತು. ಯಾವುದು ಸರ್ವಶ್ರೇಷ್ಠ ಸಂತಾನ ಉತ್ಪತ್ತಿಗೆ ಕಾರಣವಾಗಿತ್ತೋ ಆ ಋತುಚಕ್ರವೇ ಹೆಣ್ಣಿನ ಶೋಷಣೆಯ ಮೂಲವಾದುದ್ದು ದುರಂತ. ಈ ಎಲ್ಲಾ ಕಾರಣಗಳಿಂದ ಸ್ತ್ರೀ ಸಂವೇದನೆಗಳು ನಲುಗಿದವು. ಪಾಪಭೀರು, ಕುಲೀನೆ, ಅಮಂಗಲೆ, ಅಪವಿತ್ರಾತ್ಮೆ, ನಡೆದಾಡುವ ಸ್ಮಶಾನ, ಹೃದಯ ಭೇದಿಸುವಳು, ಕಿರುಬನ ಹೃದಯದವಳು, ಚಂಚಲೆ ಮುಂತಾದ ಹಲವಾರು ಅವಹೇಳನಕಾರಿ ಪದಗಳು ಸ್ತ್ರೀಗೆ ಸರ್ವೆ ಸಾಮಾನ್ಯವಾಗಿದ್ದವು. ವೈರುಧ್ಯದ ನೆಲೆಯಲ್ಲಿ ಸ್ತ್ರೀಯನ್ನು ನೋಡಲಾಗಿತ್ತು. “ದೇವತೆ” ಎಂದು ಹೇಳಿದ ನಾಲಿಗೆಯೇ “ರಾಕ್ಷಸಿ” “ಪರಾವಲಂಬಿ” ಎಂಬ ಧಿಕ್ಕಾರದ ನಿಕೃಷ್ಟ ನುಡಿಗಳಿಂದ ಅವಳನ್ನು ಘಾಸಿಗೊಳಿಸಿತ್ತು. ವೇದಕಾಲದಿಂದ ಹಿಡಿದು ಜಗತ್ತಿನ ಶ್ರೇಷ್ಠ ಧರ್ಮಗಳು ಮಹಿಳೆಗೆ ಉತ್ತಮಸ್ಥಾನ ನೀಡಲು ನಿರಾಕರಿಸಿದಾಗ ಮಹಿಳೆಗೆ ಧ್ವನಿಯಾಗಿ ನಿಂತವರು ಶರಣರು. ಶತಶತಮಾನದ ಮೌನ ಮುರಿದು ಮಹಿಳೆ ಮಾತನಾಡಿದ್ದು, ಹಾಡಿದ್ದು, ಬರೆದದ್ದು, ಸ್ವಾತಂತ್ರ್ಯತೆಯನ್ನು ಅನುಭವಿಸಿದ್ದು, ಅನುಭವದೆತ್ತರಕ್ಕೆ ಏರಿದ್ದು, ಆಧ್ಯಾತ್ಮ ಶಿಖರವನ್ನೇರಿದ್ದು 12 ನೇ ಶತಮಾನದಲ್ಲೇ. ಜಗತ್ತಿನ ಮೊದಲ ಪಾರ್ಲಿಮೆಂಟ ಎನಿಸಿದ ಅನುಭವ ಮಂಟಪದಲ್ಲಿ ಕನ್ನಡದ ಮೊದಲ ಅಗಾಧ ಪ್ರಮಾಣದ ಮಹಿಳಾ ಸಾಹಿತ್ಯ ರಚನೆಯಾದದ್ದು ದಾಖಲಾರ್ಹವಾದ ಮಹತ್ವದ ಕಾರ್ಯ. ಈ ಹಿನ್ನಲೆಯನ್ನು ಇಟ್ಟುಕೊಂಡು ಸಿದ್ಧರಾಮೇಶ್ವರರ ವಚನಗಳಲ್ಲಿ ಸ್ತ್ರೀ ಸಂವೇದನೆಯನ್ನು ಹುಡುಕಬಹುದಾಗಿದೆ.
ಹೆಣ್ಣನ್ನು ಮಾಯೆಯೆಂದು ಕರೆದು ಅವಳಿಂದ ಪುರುಷನ ಸಾಧನೆಗಳು ಶೂನ್ಯವಾಗುತ್ತವೆ ಎಂದು ಭಾವಿಸಿ ಅವಳನ್ನು ದೂರವಿರಿಸಿ ಸಂನ್ಯಾಸತ್ವ ಸ್ವೀಕರಿಸಿ ಆಧ್ಯಾತ್ಮ ಸಾಧನೆ ಮಾಡಲು ಹೊರಟವರಿಗೆ ಶರಣಧರ್ಮವು ಸನ್ಯಾಸತ್ವಕ್ಕಿಂತ ಸಂಸಾರವೇ ಶ್ರೇಷ್ಠ ಎಂದು ಸಾಧಿಸಿ ತೋರಿತು. “ಮನದ ಮುಂದಿನ ಆಸೆಯೇ ಮಾಯೆ”, “ಗಂಡಿಗೆ ಹೆಣ್ಣು ಮಾಯೆ ಆದರೆ ಹೆಣ್ಣಿಗೆ ಗಂಡು ಮಾಯೆ”, “ಒಳಗೆ ಸುಳಿಯುವ ಆತ್ಮ ಹೆಣ್ಣು ಅಲ್ಲಾ; ಗಂಡು ಅಲ್ಲಾ” “ಲಿಂಗಕ್ಕೂ ಹೆಣ್ಣಿಗೂ ವಿರುದ್ಧವೇ” ಎಂಬ ಶರಣರ ವೈಚಾರಿಕ ನಿಲುವುಗಳು ಹೆಣ್ಣು ಮಾಯೆ ಅಲ್ಲ ಎಂಬುದನ್ನು ಮನದಟ್ಟು ಮಾಡಿತು. ಸತಿ-ಪತಿಗಳೊಂದಾದ ಭಕ್ತಿಯೇ ಶಿವನಿಗೆ ಹಿತವಾದದ್ದು, ಸಂಸಾರದಲ್ಲಿದ್ದುಕೊಂಡೇ ಮುಕ್ತಿ ಕಾಣಲು ಸಾಧ್ಯ, ಮೊಕ್ಷ ಸಾಧನೆಗೆ ಸಂಸಾರ ತ್ಯಜಿಸುವುದು ಬೇಕಿಲ್ಲ ಎಂಬುದೇ ಶರಣರ ನಿಲುವು-ಒಲವು ಆಗಿತ್ತು.
ಅಂಗನೆಯರು ಮೂವರ ಸಂಗವ ಮಾಡಿದ ಕಾರಣ
ಇತರ ಸಂಗಕ್ಕೆ ಸಮನಿಸದಾದೆ,
ಅಂಗನೆಯ ಮೂವರನೊಂದು ಮಾಡಿ ಕೂಡಿದಡೆ
ಲಿಂಗ ನೀನಾದೆ ಕಪಿಲಸಿದ್ಧಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-565 / ವಚನ ಸಂಖ್ಯೆ-4)
ಸಿದ್ಧರಾಮೇಶ್ವರರು ತಾಳಿದ ಈ ನಿಲುವು ತುಂಬಾ ಶ್ರೇಷ್ಠತಮವಾದದ್ದು. “ಅಂಗನೆಯರು ಮೂವರ ಸಂಗವ ಮಾಡಿದ ಕಾರಣ”, “ಅಂಗನೆಯ ಮೂವರನೊಂದು ಮಾಡಿ ಕೂಡಿದಡೆ ಲಿಂಗ ನೀನಾದೆ” ಎಂಬ ಎರಡು ಸಾಲುಗಳಲ್ಲಿ ಸಿದ್ಧರಾಮೇಶ್ವರರ ಸ್ತ್ರೀ ಪರ ಚಿಂತನೆ ಅಭಿವ್ಯಕ್ತವಾಗುತ್ತದೆ. ಈ ಮೂವರು ಯಾರು? ಎಂಬುದು ಇಲ್ಲಿ ಪ್ರಮುಖವಾದದ್ದು. ಶಿವಯೋಗಿ ಶ್ರೇಷ್ಠನಾದ ಸಿದ್ಧರಾಮರು ತಮ್ಮದೊಂದು ವಚನದಲ್ಲಿ ಈ ಮೂರರ ವಿಚಾರವನ್ನು ಹೀಗೆ ಹೇಳುತ್ತಾರೆ;
ಯೋಗದ ನೆಲೆಯನರಿದೆನೆಂಬಾತ
ಲಿಂಗಾರ್ಚನೆಯ ಮಾಡಯ್ಯ.
ಮನತ್ರಯ ಮದತ್ರಯ ಮಲತ್ರಯಂಗಳ ಕಳೆದು
ತನುತ್ರಯಂಗಳನೇಕೀಭವಿಸಿ
ಲಿಂಗತ್ರಯದಲ್ಲಿ ಶಬ್ದಮುಗ್ಧನಾಗಿ
ಲಿಂಗಾರ್ಚನೆಯ ಮಾಡಯ್ಯ.
ಅದು ನಿಸ್ತಾರ ಸಮಸ್ತ ಯೋಗಿಗಳ ಮೀರಿದುದು
ನಿಮ್ಮ ಕೂಡಿ ಬೆರೆಸುವ ಶಿವಯೋಗವೆಂತುಟಯ್ಯಾ,
ಕಪಿಲಸಿದ್ದಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-646 / ವಚನ ಸಂಖ್ಯೆ-943)
ಸಿದ್ಧರಾಮೇಶ್ವರರು ಹೇಳಿದ ಮನತ್ರಯ, ಮದತ್ರಯ, ಮಲತ್ರಯ, ತನುತ್ರಯ, ಲಿಂಗತ್ರಯಗಳೆಂಬುವೇ ಆ ಮೂರು. ಸುಬುದ್ಧಿ, ನಿ:ಕಾಮ, ಅನುಕೂಲೆ ಇವು ಮನತ್ರಯಗಳು, ತನು, ಮನ, ಧನ, ಇವುಗಳು ಮದತ್ರಯಗಳು. ಅಣವ, ಮಾಯಾ, ಕಾರ್ಮಿಕ ಇವು ಮಲತ್ರಯಗಳು. ಸ್ಥೂಲ, ಸೂಕ್ಷ್ಮ, ಕಾರಣ ಎಂಬುವುಗಳೇ ತನುತ್ರಯಗಳು. ಅಂಗನೆಯರು ಮನತ್ರಯ, ಮದತ್ರಯ, ಮಲತ್ರಯಗಳ ಸಂಗವನ್ನು ಕಳೆದುಕೊಂಡು ತನುತ್ರಯಗಳಲ್ಲಿ ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗ (ಲಿಂಗತ್ರಯ) ಗಳನ್ನು ಕೂಡಿದರೆ ಅವರು ಲಿಂಗಸ್ವರೂಪಿಗಳೇ ಆಗುತ್ತಾರೆ. “ಈ ಮೂವರ ಸಂಗವ ಮಾಡಿದ ಅಂಗನೆಯ ಕೂಡಿದಡೆ ನೀನು ಲಿಂಗಸ್ವರೂಪಿಯೇ” ಎಂದು ಸಿದ್ಧರಾಮೇಶ್ವರರು ಸ್ತ್ರೀಯನ್ನು ಸ್ತ್ರೀತ್ವದ ನೆಲೆಯಿಂದ ಬಿಡುಗಡೆಗೊಳಿಸಿ ಅವರನ್ನು ಗೌರವಿಸಿದ ಉದಾತ್ತ ಭಾವವನ್ನು ಈ ವಚನದ ಮೂಲಕ ಕಂಡುಕೊಳ್ಳಬಹುದು. ಈ ಮೂರರಲ್ಲಿ ಶುದ್ಧಭಾವ ಹೊಂದುವುದೇ ಸಮಾಗಮ. ಕೂಡುವಿಕೆ ಆಗಿದೆ.
ಮೊದ ಮೊದಲು ಪರಮ ಶಿವಯೋಗಿಯಾಗಬೇಕೆಂಬ ಉತ್ಕಟ ಹಂತದಲ್ಲಿ ಸಿದ್ಧರಾಮೇಶ್ವರರು ಸಾಕಷ್ಟು ಸಂದರ್ಭಗಳಲ್ಲಿ ಸ್ತ್ರೀಯನ್ನು ‘ಆಸೆ’, ‘ಮಾಯೆ’ ಎಂದು ಜರಿದದ್ದು ಕಂಡು ಬರುತ್ತದೆ. ಶರಣ ಚಳುವಳಿಯು, ‘ಲಿಂಗಸಮಾನತೆ’ ಯನ್ನು ಬಯಸಿದ ಸಂದರ್ಭದಲ್ಲೂ ಹೆಣ್ಣಿನ ದೇಹ ಮತ್ತು ಅವಳ ಚಂಚಲತೆ ಸಾಕಷ್ಟು ಜಿಜ್ಞಾಸೆಗೆ ಒಳಪಟ್ಟಿದ್ದನ್ನು ಕಾಣುತ್ತೇವೆ. ಸ್ತ್ರೀಯನ್ನು ತೊರೆಯುವುದೇ ದೊಡ್ಡ ಸಾಧನೆ ಎಂಬುದನ್ನು ಗಮನಿಸುತ್ತೇವೆ. ಮಾಯಾ, ಮೋಹ, ಮೋಹಿನಿಯಾದ ಸ್ತ್ರೀಯನ್ನು ತೊರೆಯುವುದೇ ಮೋಕ್ಷಕ್ಕೆ ಮೊದಲ ಮೆಟ್ಟಿಲು ಎಂದು ನಂಬಲಾದ ಸಂದರ್ಭದಲ್ಲಿ ಶರಣ ಚಳುವಳಿಯು ಸ್ತ್ರೀ, ಪುರುಷ ಅಸಮಾನತೆಯನ್ನು ಹೋಗಲಾಡಿಸಲು ಉತ್ತಮ ವೇದಿಕೆಯನ್ನು ಹಾಕಿ ಕೊಟ್ಟಿತು.
ತನ್ನ ದೇಹ ರಚನೆಯ ಕುರಿತು, ತಾನು ಹೇಗಿರಬೇಕು ಎಂಬುದರ ಕುರಿತು ತನ್ನನ್ನು ತಾನು ಯಾವ ನೆಲೆಯಲ್ಲಿ ಗುರುತಿಸಿಕೊಳ್ಳಬೇಕು? ಕುಟುಂಬದ ಒಳಗೆ, ಕುಟುಂಬದಾಚೆ ತನ್ನ ಅಸ್ತಿತ್ವ ಏನು? ಎಂದು ಹಲವು ನೆಲೆಯಲ್ಲಿ ಸ್ತ್ರೀ ತನ್ನ ಬಗ್ಗೆ ಆಲೋಚಿಸಿದ್ದು ಬಹಳವಿದೆ. ಅಡುಗೆಮನೆ ಹೆರಿಗೆ ಮನೆಗೆ ಸೀಮಿತವಾದ ತನ್ನನ್ನು ಬಯಲಾಯಲಕ್ಕೆ ಕರೆದೊಯ್ಯುವವರಿಲ್ಲದೇ ಕೊರಗುತ್ತಿದ್ದ, ಸ್ವತಂತ್ರ, ಸ್ವಚ್ಛಂದ ಬದುಕಿಗೆ ಹಂಬಲಿಸುತ್ತಿದ್ದ, ತನ್ನೊಳಗೆ ಬೂದಿ ಮುಚ್ಚಿದ ಕೆಂಡದಂತಿರುವ ವ್ಯಕ್ತಿತ್ವ ವಿರಚಿಸಿಕೊಳ್ಳುವ ಧಾವಂತದಲ್ಲಿದ್ದ ಮಹಿಳೆಯ ಚೇತನಕ್ಕೆ ಮುಕ್ತ ಬಾಗಿಲು ತೆರೆದವರೆಂದರೆ ಬಸವಾದಿ ಶರಣರು. ಇದು ಇಡೀ ಜಾಗತಿಕ ಮಟ್ಟದಲ್ಲೇ ಅತ್ಯಂತ ಗಮನಾರ್ಹ ಸಂಗತಿ.
ಪ್ರಾರಂಭದ ಹಂತದಲ್ಲಿ ಸಿದ್ಧರಾಮೇಶ್ವರರು ಹಲವು ನೆಲೆಗಳಲ್ಲಿ ತಮ್ಮನ್ನು ತಾವು ಸಾಂಪ್ರದಾಯಿಕವಾಗಿ ಕಟ್ಟಿಹಾಕಿಕೊಳ್ಳುವುದು ಕಂಡು ಬರುತ್ತದೆ. ಶಿವಯೋಗಿಯಾಗುವವ ಮಾಯಾ-ಮೋಹ ಕಳಚಿಕೊಳ್ಳಬೇಕು, ಆಶಾ-ಪಾಷಗಳಿಂದ ಮುಕ್ತನಾಗಿರಬೇಕು ಎಂದು ಭಾವಿಸಿದ್ದ ಹಂತದಲ್ಲಿ ಸಿದ್ಧರಾಮರಿಗೆ ಸ್ತ್ರೀಯೆಂಬುವಳು ಮಾಯೆಯಾಗಿ, ಆಸೆಯಾಗಿ ಕಂಡು ಬಂದಿದ್ದಾಳೆ. ಅವರ ಎರೆಡು ವಚನಗಳು ಏಕಕಾಲಕ್ಕೆ ಈ ಆಸೆಯೆಂಬುವಳಿಂದಲೇ ತನಗೆ ಕಪಿಸಿದ್ಧಮಲ್ಲಿಕಾರ್ಜುನನಲ್ಲಿ ಅನುಸಂಧಾನವಾಗಲು ವಿಳಂಬವಾಗುತ್ತಿದೆ ಎಂಬ ಭಾವವನ್ನು ವ್ಯಕ್ತಪಡಿಸಿವೆ.
ಆ ಎರೆಡು ವಚನಗಳು ಇಂತಿವೆ;
ಆಸೆಯೆಂಬವಳು ಆರನಾದಡೆಯೂ ತನ್ನತ್ತಲೆಳೆವಳು ನೋಡಾ,
ಈ ಆಸೆಯೆಂಬವಳು ಅವರಿವರೆನ್ನದೆ ಆರನಾದಡೆಯೂ
ಕೊಲಲಿಕ್ಕೆ ಬಗೆವಳು.
ಈ ಆಸೆಯೆಂಬವಳಿಂದವೆ ನಿಮ್ಮಡಿಗಾಣದೆಪ್ಪೆ
ಈ ಆಸೆಯೆಂಬವಳನೆಂದಿಗೆ ನೀಗಿ
ಎಂದು ನಿಮ್ಮನೊಡಗೂಡಿ ಬೇರಾಗದಂತಿಪ್ಪೆನೋ
ಎನ್ನ ಕಪಿಲಸಿದ್ಧಮಲ್ಲಿಕಾರ್ಜುನಾ
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-586 / ವಚನ ಸಂಖ್ಯೆ-227)
ಈ ಆಸೆಯೆಂಬವಳು ನೋಡಾ
ಜಲಸಮುದ್ರಂಗಳಂ ಕಟ್ಟಿಸುವಳು,
ಕ್ಷಣ ಬೇಗದಿ ಮೂಷೆಗಳಂ ಮಾಡಿ ರಸಂಗಳಂ ಪಡೆವಳು.
ಈ ಆಸೆಯೆಂಬವಳಿಂದವೆ ನಿಮ್ಮೆಡೆಗಾಣದಿಪ್ಪೆನು
ಈ ಆಸೆಯಂಬವಳನೆಂದಿಂಗೆ ನೀಗಿ
ಎಂದು ನಿಮ್ಮನೊಡಗೂಡಿ ಬೇರಾಗದೆಂದಿಪ್ಪನು
ಕಪಿಲಸಿದ್ಧಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-588 / ವಚನ ಸಂಖ್ಯೆ-261)
ಒಂದೇ ರೀತಿಯ ಆಶಯವನ್ನುಳ್ಳ ಎರಡು ವಚನಗಳು ಇವು. ಮೇಲ್ನೋಟಕ್ಕೆ ಆಸೆಯ ಕುರಿತು ಹೇಳುವಂತಿದ್ದರೂ, ಸ್ತ್ರೀಲಿಂಗವಾಚಕ ಪದ “ಆಸೆಯೆಂಬವಳು” ಎಂಬುದು ಪುನರುಕ್ತಿಯಾಗಿರುವುದರಿಂದ ‘ಆಸೆ’ ಗೂ ‘ಸ್ತ್ರೀ’ ಗೂ ನಿಕಟಪೂರ್ವ ಸಂಭಂದವನ್ನು ತೋರ್ಪಡಿಸುತ್ತದೆ. ‘ಆಸೆಯೆಂಬವಳುʼ ಎಂಬ ಪದವನ್ನು “ಆಸೆಯೆಂಬವನು” ಎಂದೇಕೆ ಬಳಸಲಿಲ್ಲ? ಆಸೆಯೆಂಬವಳನ್ನು ನೀಗಿದಾಗ ಮಾತ್ರ ಕಪಿಲಸಿದ್ದಮಲ್ಲಿಕಾರ್ಜುನನಲ್ಲಿ ಬೆರೆಯಲು ಸಾಧ್ಯ ಎಂಬ ಆತ್ಯಂತಿಕ ನಿಲುವಿಗೆ ಸಿದ್ಧರಾಮೇಶ್ವರರು ಬಂದು ನಿಲ್ಲುತ್ತಾರೆ. ಆಸೆಯನ್ನು ಹೆಣ್ಣಿಗೆ ಹೋಲಿಸಿ ನೋಡುವ ಪರಿಯೂ ಸಿದ್ಧರಾಮರು ಶಿವಯೋಗದ ನೆಲೆಗೇರುವ ಪರಮೋಚ್ಛ ಹಂಬಲದಲ್ಲಿ ಸ್ತ್ರೀಯನ್ನು ನೋಡಿದ ನೆಲೆ ಇದು.
ರುದ್ರಂಗೆ ಪಾರ್ವತಿಯು, ವಿಷ್ಣುವಿಗೆ ಲಕ್ಷ್ಮಿಯು,
ಬ್ರಹ್ಮಂಗೆ ಸರಸ್ವತಿಯೂ
ಮತ್ತೆ ತೃಣದಶನದ ಫಲದ ಆಹಾರದವರ
ಸುತ್ತ ಮುತ್ತಿತ್ತು ನೋಡಾ ಮಾಯೆ;
ಸಪ್ತಧಾತುವ ಮೀರಿ ಪಂಚಭೂತವ ಜರಿದ
ಶರಣರಿಗೋಡಿತ್ತು ಮಾಯೆ, ಕಪಿಲಸಿದ್ಧಮಲ್ಲಿಕಾರ್ಜುನ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-647 / ವಚನ ಸಂಖ್ಯೆ-954)
‘ರುದ್ರಂಗೆ ಪಾರ್ವತಿಯೂ, ವಿಷ್ಣುವಿಗೆ ಲಕ್ಷ್ಮಿಯೂ, ಬ್ರಹ್ಮಂಗೆ ಸರಸ್ವತಿಯೂ, ಮಾಯೆಯಾಗಿ ಮುತ್ತಿತ್ತು. ಎಂಬಲ್ಲಿ ಸ್ತ್ರೀ ಮಾಯೆ ಎಂದು ಕರೆದು, ಇಂತಹ ಮಾಯೆಯನ್ನು ಶರಣರು ಮಾತ್ರ ಗೆಲ್ಲಲ್ಲು ಸಾಧ್ಯ ಎಂಬುದನ್ನು “ಸಪ್ತಧಾತುವ ಮೀರಿ ಪಂಚಭೂತವ ಜರಿದ ಶರಣರಿಗೋಡಿತ್ತು ಮಾಯೆ” ಎಂದು ಸಿದ್ಧರಾಮರು ಹೇಳುತ್ತಾರೆ.
ವೈಚಾರಿಕ ಚಿಂತನೆಯೇ ಬೇರೆ ಅದನರಿತು ನಡೆಯುವ ಆಚರಣೆಯೇ ಬೇರೆ. ಇವೆರೆಡೂ ಭಿನ್ನ ನೆಲೆಯಲ್ಲಿ ನಿಲ್ಲುತ್ತವೆ. ವೈಚಾರಿಕತೆಯನ್ನು ಅರ್ಥೈಸಿಕೊಂಡರೆ ಸಾಲದು, ಅದರ ಆಚರಣೆಯೇ ಬಹುಮುಖ್ಯವಾದದ್ದು. ಈ ಹಿನ್ನಲೆಯಲ್ಲಿ ವೈಚಾರಿಕತೆಗೆ ತೆರೆದುಕೊಳ್ಳುತ್ತಿರುವ ಪೂರ್ವದಲ್ಲಿ ಸಾಂಪ್ರದಾಯಕ ಚೌಕಟ್ಟಿನಲ್ಲಿ ಸುತ್ತುತ್ತಿರುವ ಸಂದರ್ಭದಲ್ಲಿ ಸಿದ್ಧರಾಮೇಶ್ವರರು ಸ್ತ್ರೀಯನ್ನು ನೋಡಿದ ದೃಷ್ಟಿಯಲ್ಲಿ ಭಿನ್ನತೆ ಇದೆ. ಸಾಂಪ್ರದಾಯಕ ಚೌಕಟ್ಟಿನಿಂದ ಸಿದ್ಧರಾಮರು ಹೊರಬಂದಾಗ ಈ ಹಂತದಲ್ಲಿ ಸಿದ್ಧರಾಮೇಶ್ವರರು ಸ್ತ್ರೀಯನ್ನು ನೋಡುವ ಪರಿ ತುಂಬಾ ಭಿನ್ನವಾಗಿದೆ. ಆ ಹಂತ ಅವರ ಪರಿಪೂರ್ಣ ವ್ಯಕ್ತಿತ್ವದ ಪ್ರತೀಕವಾಗಿದೆ. ವೈಚಾರಿಕ ಪ್ರಜ್ಞೆಯೊಂದಿಗೆ ಸ್ತ್ರೀಯ ಅಂತರಂಗ-ಬಹಿರಂಗಗಳು ಅವರ ದೃಷ್ಠಿಗೆ ಪ್ರಕಟವಾಗಿವೆ. ಯಾವಾಗ ಸಿದ್ಧರಾಮೇಶ್ವರರು ಕಲ್ಯಾಣಕ್ಕೆ ಬಂದು ಬಸವಾದಿ ಶರಣರೊಂದಿಗೆ ಬೆರೆತು ಲಿಂಗಾಂಗ ಸಾಮರಸ್ಯ ಸಾಧಿಸುವರೋ ಆಗ ಅವರಿಗೆ ಲಿಂಗಪೂಜೆಯ ಕುರಿತು ಪೂರ್ಣಜ್ಞಾನ ಬಂದಂತೆ, ಸ್ತ್ರೀ ಕುರಿತಾದ ಅಲ್ಪಜ್ಞಾನ ಹಂತ ಹಂತವಾಗಿ ದೂರವಾಗುತ್ತದೆ. ಶರಣ ಸತಿ ಲಿಂಗಪತಿ ಭಾವ ಉತ್ಕಟವಾದಾಗ ಸಿದ್ಧರಾಮೇಶ್ವರರಲ್ಲಿ ಸತಿತ್ವ, ಹೆಣ್ತನದ ಭಾವ ಉದ್ಧೀಪನವಾಗುತ್ತದೆ. ಗಂಡು-ಹೆಣ್ಣು ಎಂಬ ಉಭಯತ್ವ ಅಳಿದು ಲಿಂಗಪತಿಯಲ್ಲಿ ಅನುಸಂಧಾನವೇರ್ಪಡುತ್ತದೆ.
ಶರಣನಾದಡೆ ಸತಿಯ ಗೊಡ್ಡಾಟವೇಕಯ್ಯಾ?
ಇಂದ್ರಿಯಂಗಳು ಹರಿಯಲೇಕೆ?
ತಾನೆ ಸತಿ ಲಿಂಗವೆ ಪತಿಯಾದ ಬಳಿಕ,
ಸರ್ವ ಸಂಯೋಗಕ್ಕೆ ಲಿಂಗವೇ ಪತಿ, ತಾನೆ ಸತಿಯಾದಾತ
ಅನ್ಯ ಸತಿಯರಿಗೆರಗ; ಕರಣಂಗಳ ಹರಿಯಲೀಯ;
ಕಾರ್ಪಣ್ಯಕ್ಕೊದಗ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಒಡಗೂಡಿದ ಶರಣ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-651 / ವಚನ ಸಂಖ್ಯೆ-993)
ಲಿಂಗಪತಿಯಾಗಿ ಶರಣ ಸತಿಯಾದ ಸ್ಥಿತಿಯಲ್ಲಿ ಸಿದ್ಧರಾಮೇಶ್ವರರು ಸ್ತ್ರೀ ಕುರಿತು ತಾಳಿದ ನಿಲುವುಗಳು ಉದಾತ್ತವಾಗಿವೆ. “ತಾನೆ ಸತಿಯಾದಾತ ಅನ್ಯ ಸತಿಯರಿಗೆರಗ” ಎಂತಹ ನಿಲುವು ಇದು! ಶ್ರೇಷ್ಠತಮವಾದ ದಿವ್ಯಭಾವ. ಸತಿಯಾಗುವುದು ಎಂದರೆ ಕರಗುವಿಕೆಯ ಹಂತ. ನಾನೇ ಶ್ರೇಷ್ಠ ಎಂಬ ಭಾವದಿಂದ ಹೊರಬರುವುದು ನಾನು ಎಂಬುದನ್ನು ಮೀರುವುದು.
ಹೆಣ್ಣು ಗಂಡು ಎಂಬ ಉಭಯಭೇದವನ್ನು ಮೀರಬೇಕೆಂದು ಶರಣಧರ್ಮ ಹೇಳುತ್ತದೆ. ಉಭಯಲಿಂಗಗಳಲ್ಲಿ ವ್ಯತ್ಯಾಸ ಇದೆ. ಆದರೆ ಒಬ್ಬರಿಂದ ಒಬ್ಬರು ಹೆಚ್ಚು ಎಂಬ ಹೆಚ್ಚುಗಾರಿಕೆಯಿಲ್ಲ. ಇಬ್ಬರೂ ಸಮಾನರು ಎಂಬುದನ್ನು ಶರಣರು ಒಪ್ಪಿಕೊಂಡು ಪ್ರತಿಪಾದಿಸಿದ್ದಾರೆ. ಸಿದ್ಧರಾಮೇಶ್ವರರು ಸ್ತ್ರೀ ಕುರಿತು ಮೊದ ಮೊದಲು ಹೊಂದಿದ ದ್ವಂದ್ವತೆಯಿಂದ ದೂರವಾಗಿ ಸ್ತ್ರೀ ನಿಲುವುಗಳನ್ನು ಹೆಚ್ಚು ಸ್ಪಷ್ಟಪಡಿಸುತ್ತಾ ಸಾಗುತ್ತಾರೆ. ಲಿಂಗಪತಿಗೆ ತಾನೇ ಸತಿಯಾದಾಗ ‘ಸತೀತ್ವ’ (ಹೆಣ್ಣಾಗುವ) ದ ಪರಿಪಾಕ ಇವರ ಅನುಭವಕ್ಕೆ ಬರುತ್ತದೆ.
ಭಾವಿಸಿದರೆ ಹೆಂಗೂಸು
ನಡುವೆ ನಿಂದರೆ ಹೆಂಪುಳ್ಳ ಗಂಡುಗೂಸು!
ಒಬ್ಬ ತನಗೆಂಬ ಒಬ್ಬ ತನಗೆಂಬ
ಸುತ್ತಿ ನೋಡಿ ಸುಯ್ವಳು ಹೋ!
ಎಮ್ಮಿಂದ ನಿಮಗ ವಿವಾಹ ಬೇಡಯ್ಯಾ,
ಎನ್ನ ಗಂಡ ಬಾಯಾಳು, ಕಪಿಲಸಿದ್ಧಮಲ್ಲಿನಾಥಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-638 / ವಚನ ಸಂಖ್ಯೆ-844)
“ಭಾವಿಸಿದರೆ ಹೆಂಗೂಸು; ನಡುವೆ ನಿಂದಿರೆ ಹೆಂಪುಳ್ಳ ಗಂಡುಗೂಸು” ಎಂಬಲ್ಲಿ ಉಭಯತರರಲ್ಲಿ ಉಭಯ ಭಾವದ ಜಾಗೃತಿಯ ಸುಳಿವನ್ನು ಸಿದ್ಧರಾಮೇಶ್ವರರು ತರುವಾಗ ಗಂಡು-ಹೆಣ್ಣುಗಳಲ್ಲಿ ಗೆರೆ ದಾಟಬಲ್ಲ ಗುಣಗಳಿವೆ. ಹೀಗಾಗಿ ಇಬ್ಬರೂ ದ್ವಿ-ಲಿಂಗಿಗಳಾಗುತ್ತಾರೆ. ಭಾರತೀಯ ಸಂಸ್ಕೃತಿಯಲ್ಲಿ ಅರ್ಧನಾರೀಶ್ವರ ಪರಿಕಲ್ಪನೆ ಅತಿಶಯವಲ್ಲ ಎಂಬ ಸತ್ಯ ಇವರಲ್ಲಿ ಕಾಣಿಸಿಕೊಳ್ಳುತ್ತದೆ.
ಪುರುಷಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆ ಚಿತ್ರಿತಗೊಳ್ಳುವುದು ಎರಡು ವಿಧದಲ್ಲಿ. ಒಂದು ತಾಯಿಯಾಗಿ, ಮತ್ತೊಂದು ಮಾಯೆಯಾಗಿ. ಮಾತೆಯಾಗಿ ಅವಳನ್ನು ಚಿತ್ರಿಸುವಾಗ ಅತ್ಯಂತ ಪೂಜ್ಯನೀಯ ಸ್ಥಾನದಲ್ಲಿಟ್ಟು ನೋಡಲಾಗಿದೆ. ಆದರೆ ತಾಯಿಯಾಗುವ ಕನ್ಯೆಯನ್ನು (ಹೆಣ್ಣನ್ನು) ಮಾಯೆಯೆಂದು ಕರೆಯಲಾಗಿದೆ. ತಾಯಿಯಾಗುವ ಪೂರ್ವದಲ್ಲಿ ಅವಳು ‘ಹೆಣ್ಣು’ ಆಗಿರುತ್ತಾಳೆ. ಆ ಸ್ಥಿತಿಯಲ್ಲಿದ್ದಾಗ ಆಕೆ ಮಾಯೆಯಾಗಿ ಮೋಹಿನಿಯಾಗಿ, ಚಿತ್ತ ಚಂಚಲೆಯಾಗಿ ಪುರುಷನಿಗೆ ಕಾಡುತ್ತಾಳೆ. ಹೀಗಾಗಿ ಅವಳಿಂದ ದೂರ ಹೋಗಿ ಮೋಕ್ಷ ಸಾಧಿಸುವ ಹಟ ಪುರಷನದಾಗಿತ್ತು. ಹೆಣ್ಣಿನಿಂದ ದೂರ ಹೋಗುವುದು ಎಂದರೆ ಬ್ರಹ್ಮಚರ್ಯ ಸ್ವೀಕರಿಸುವುದು, ಅಥವಾ ಸನ್ಯಾಸಿಯಾಗಿ ಕಾಡು-ಮೇಡು ಅಲೆದು ತಪಸ್ಸು ಮಾಡಿ ಜ್ಞಾನ ಸಂಪಾದಿಸುವುದು ಎಂಬುದಾಗಿತ್ತು. ಒಟ್ಟಿನಲ್ಲಿ ಪುರುಷನ ಸಾಧನೆಗೆ ಸ್ತ್ರೀಯು ಅಡ್ಡ ಬರುತ್ತಾಳೆ ಎಂದು ನಂಬಲಾದ ಸಂದರ್ಭದಲ್ಲಿ ಆ ನಂಬಿಕೆಯನ್ನು ಮುರಿದು ಶರಣರು ಸ್ತ್ರೀಯನ್ನು ಹೊಂದಿ ನಾವು ಸುಖಿಗಳೂ ಆಗಿದ್ದೇವೆ ಮತ್ತು ಮುಕ್ತಿಯನ್ನೂ ಕಂಡುಕೊಂಡಿದ್ದೇವೆ ಎಂದು ಸಾರಿದರು. “ದುಗ್ಗಳೆಯ ಹೊಂದಿ ನಾನು ಸುಖಿಯಾದೆನಯ್ಯಾ” ಎಂಬ ಜೇಡರ ದಾಸಿಮಯ್ಯನವರ ಮಾತೇ ಸಾಕಾಗುತ್ತದೆ ನಮಗೆ. ಆಯ್ದಕ್ಕಿ ಮಾರಯ್ಯನವರ ಹಿಂದಿನ ಶಕ್ತಿ ಆಯ್ದಕ್ಕಿ ಲಕ್ಕಮ್ಮ, ಮೋಳಿಗೆಯ ಮಹಾದೇವನವರ ಹಿಂದಿನ ಶಕ್ತಿ ಮೋಳಿಗೆ ಮಹಾದೇವಿ, ಹಡಪದ ಅಪ್ಪಣ್ಣನವರ ಹಿಂದಿನ ಶಕ್ತಿ ಹಡಪದ ಲಿಂಗಮ್ಮ, ಉರಿಲಿಂಗಪೆದ್ದಿ ಶರಣರ ಹಿಂದಿನ ಶಕ್ತಿ ಕಾಳವ್ವೆ, ಇಂತಹ ಶ್ರೇಷ್ಠ ಸ್ತ್ರೀ ಶಕ್ತಿಗಳನ್ನು ತಿಳಿದುಕೊಳ್ಳಲೇಬೇಕು. ಈ ಸತಿಪತಿಗಳೊಂದಾದ ಭಕ್ತಿ ಶಿವನಿಗೆ ಪ್ರಿಯವಾಗಿತ್ತು. ನೀಲಮ್ಮನವರಂತಹ, ಗಂಗಾಂಬಿಕೆಯವರಂತಹ ಸ್ತ್ರೀ ರತ್ನಗಳಿಂದ ಶರಣರ ಬಾಳು ಬಂಗಾರವಾಗಿತ್ತು. ಅವರೆಂದೂ ತಮ್ಮ ತಮ್ಮ ಪುರಷರ (ಪತಿ) ಸಾಧನೆಗೆ ಅಡ್ಡಿಯಾಗಲಿಲ್ಲ. ಮಾಯೆಯಾಗಿ ಕಾಡಲಿಲ್ಲ. ಇಂತಹ ಸಮರಸದ ಸಾಮರಸ್ಯ ಸ್ಥಿತಿಯು ಲಿಂಗಾಂಗ ಸಾಮರಸ್ಯಕ್ಕೆ ತೊಂದರೆ ಮಾಡಲಿಲ್ಲ. ಕಾರಣ ಶರಣರೆಂದೂ ಸಂಸಾರವನ್ನು ತುಚ್ಚಿಕರಿಸಲಿಲ್ಲ. ಇಂದ್ರಿಯಗಳನ್ನು ನಿಗ್ರಹಿಸುವುದೇ ದೊಡ್ಡ ಸಾಧನೆ ಎಂದು ಪರಿಭಾವಿಸದೇ ಸಂಸಾರಕ್ಕೆ ಗೌರವಸ್ಥಾನವನ್ನು ನೀಡಿದರು. ಸಂಸಾರದಲ್ಲಿದ್ದುಕೊಂಡೇ ಸದ್ಗತಿ ಸಾಧಿಸಬಹುದೆಂದು ಸ್ವತ: ತಾವು ನಡೆದು ತೋರಿದರು. ಸಿದ್ಧರಾಮೇಶ್ವರರೂ ಇದನ್ನೇ ಕೇಂದ್ರಿಕರಿಸಿಕೊಂಡು ತಮ್ಮ ವಚನಗಳಲ್ಲಿ ಸ್ತ್ರೀಯನ್ನು ಮಾಯೆಯೆಂಬ ಪಟ್ಟದಿಂದ ಬಿಡುಗಡೆಗೊಳಿಸಿದ್ದಾರೆ.
ಭಕ್ತನ ಮನ ಹೆಣ್ಣಿನೊಳಗಾದಡೆ, ವಿವಾಹವಾಗಿ ಕೂಡುವುದು.
ಭಕ್ತನ ಮನ ಮಣ್ಣಿನೊಳಗಾದಡೆ,
ಕೊಂಡು ಆಲಯವ ಮಾಡುವುದು.
ಭಕ್ತನ ಮನ ಹೊನ್ನಿನೊಳಗಾದಡೆ, ಬಳಲಿ ದೊರಕಿಸುವುದು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-637 / ವಚನ ಸಂಖ್ಯೆ-827)
ಇದು ನಿಜವಾದ ಮಾತು. ವಾಸ್ತವದ ಸತ್ಯವಿದು. ಹೆಣ್ಣು, ಮಣ್ಣು, ಹೊನ್ನು ಇವುಗಳ ಮೇಲೆ ಮನಸ್ಸಾದರೆ ಅವುಗಳಲ್ಲಿ ಸಾತ್ವಿಕ ಅನುಸಂಧಾನ ಹೊಂದಬೇಕು ಎಂಬುದು ವೈಜ್ಞಾನಿಕವಾಗಿ, ವೈಚಾರಿಕವಾಗಿ ದಿಟವಾದದ್ದು. ಮನಸ್ಸು ಹೆಣ್ಣಿನ ಕಡೆ ವಾಲಿದರೆ ವಿವಾಹ ವ್ಯವಸ್ಥೆಯಲ್ಲಿ ಅವಳ ಜೊತೆ ಸುಖ ಸಂಸಾರ ನಡೆಸಿದರೆ ಯಾವ ತಪ್ಪೂ ಇಲ್ಲ. ಹೆಣ್ಣಿನಲ್ಲಿ ತಾಯ್ತನವಿದೆ. ಅದನ್ನು ಗೌರವಿಸಿ ಲಗ್ನ ಸಂಸ್ಥೆಯಲ್ಲಿ ಹೆಣ್ಣಿನೊಂದಿಗೆ ಬೆರೆಯುವುದರಿಂದ ಹೆಣ್ಣಿಗೆ ಸಮಾಜದಲ್ಲಿ ಬೆಲೆ ದೊರೆಯುವುದು. ಈ ದೃಷ್ಠಿಯಿಂದ ಹೆಣ್ಣು, ಮಣ್ಣು, ಹೊನ್ನು ಇವುಗಳಿಗೆ ಒಂದು ಮೌಲ್ಯವಿದೆ ಎಂಬುದನ್ನು ಸೂಕ್ಷ್ಮವಾಗಿ ಸಿದ್ಧರಾಮರು ಗುರುತಿಸುತ್ತಾರೆ. ಈ ಹಿನ್ನಲೆಯಲ್ಲಿ ಸಿದ್ಧರಾಮೇಶ್ವರ ವಚನಗಳು ಸ್ತ್ರೀ ನಿಲುವುಗಳನ್ನು ಗೌರವಯುತವಾಗಿ ಕಾಪಾಡಿಕೊಂಡು ಬಂದದ್ದನ್ನು ದರ್ಶಿಸುತ್ತೆವೆ. ಈ ಕಾರಣದಿಂದ ಸಿದ್ಧರಾಮೇಶ್ವರರು ಎಷ್ಟು ಎತ್ತರದಲ್ಲಿ ನಿಲ್ಲುತ್ತಾರೆ ಎಂದರೆ ಮುಕ್ತಿ, ಭಕ್ತಿ, ಜ್ಞಾನಗಳನ್ನು ಅಂಗನೆಗೆ ಹೋಲಿಸಿ ಸುಖಿಸುತ್ತಾರೆ. ಧನ್ಯತೆಯನ್ನು ಅನುಭವಿಸುತ್ತಾರೆ.
ಮುಕ್ತ್ಯಂಗನೆಯ ಸಂಯೋಗದಿಂದ
ಶುದ್ಧ ಮುಗ್ಧನಾದೆ.
ಭಕ್ತ್ಯಂಗನೆಯ ಸಂಯೋಗದಿಂದ
ಉರುತರ ನಿಷ್ಕಳವನೆಯ್ದಿದೆ.
ಜ್ಞಾನಾಂಗನೆಯ ಸಂಯೋಗದಿಂದ
ತತ್ವಾರ್ಥವನರಿದೆ.
ಕಪಿಲಸಿದ್ಧಮಲ್ಲಿಕಾರ್ಜುನನ ಸಂಯೋಗದಿಂದ
ತ್ವಮಸಿಯಾದೆ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-642 / ವಚನ ಸಂಖ್ಯೆ-895)
ಮುಕ್ತಿಯೆಂಬವಳ ಸಂಯೋಗದಿಂದ ಶುದ್ಧಮುಗ್ಧನಾದೆ, ಭಕ್ತಿಯೆಂಬವಳ ಸಂಯೋಗದಿಂದ ನಿಷ್ಕಳವಂತನಾದೆ, ಜ್ಞಾನಯೆಂಬವಳ ಸಂಯೋಗದಿಂದ ತತ್ವಾರ್ಥ ತಿಳಿದವನಾದೆ ಎಂಬ ಸಿದ್ಧರಾಮೇಶ್ವರರ ನಿಲುವುಗಳು ಸ್ತ್ರೀಪರವಾಗಿ ಉದಾತ್ತಗೊಳ್ಳುತ್ತಾ ಸಾಗುವುದನ್ನು ಗಮನಿಸಿಕೊಳ್ಳಬಹುದು. ಯಾವ ಹೆಣ್ಣನ್ನು ‘ಆಸೆಯಂಬವಳು’ ಎಂಬ ಸ್ತ್ರೀ ವಾಚಕದಿಂದ ಕರೆದಿದ್ದ ಸಿದ್ಧರಾಮೇಶ್ವರು ಅದೇ ಹೆಣ್ಣನ್ನು ಮುಕ್ತ್ಯಂಗನೆ, ಭಕ್ತ್ಯಂಗನೆ, ಜ್ಞಾನಾಂಗನೆ ಎಂದು ತುಂಬಾ ತುಂಬಾ ಗೌರವಯುತ ಸ್ತ್ರೀ ವಾಚಕದಿಂದ ಕರೆದಿರುವುದು ಅವರು ಸ್ತ್ರೀಗೆ ಕೊಟ್ಟ ಅನನ್ಯ ನೆಲೆಯ ಪ್ರತೀಕವಾಗಿ ಕಂಡು ಬರುತ್ತದೆ.
ಸೂತಕದ ಮನೆಯಿಂದ ಸ್ತ್ರೀಯನ್ನು ಹೊರಗೆ ತಂದದ್ದು ಶರಣ ಧರ್ಮದ ಅತ್ಯಂತ ಶ್ರೇಷ್ಠವಾದ ಮಹತ್ಕಾರ್ಯ. ಅವಳನ್ನು ಪುಣ್ಯಾತ್ಮಳೆಂದು ಪುರುಷ ಸಮಾನಳೆಂದು ಕರೆದು ಸಮಾಜದಲ್ಲಿ, ಕುಟುಂಬದಲ್ಲಿ ಅವಳು ಆತ್ಮವಿಶ್ವಾಸದಿಂದ ಬದುಕಲು ಮಾರ್ಗವನ್ನು ಕಲ್ಪಿಸಿದರು. ಅವಳಿಗೆ ಲಿಂಗ ದೀಕ್ಷೆ ನೀಡಿ ಭವಿತನದಿಂದ ಮುಕ್ತವಾಗಿಸಿದರು. ಯಾವಾಗ ಹೆಣ್ಣಿನ ಭವಿತನ ನೀಗಿತೋ ಅಂದೇ ಅವಳು ಭಕ್ತೆಯಾದಳು. ಅವಳಿಗೂ ಅಷ್ಟಾವರಣ, ಪಂಚಾಚಾರ, ಷಟಸ್ಥಲ ಮಾರ್ಗಗಳನ್ನು ಕಲ್ಪಿಸಿ ಶರಣರು ಸ್ತ್ರೀಯರನ್ನು ಆತ್ಮವಿಕಾಸದ ಹಾದಿಯಲ್ಲಿ ಮುನ್ನೆಡಿಸಿದರು. ಅವಳಲ್ಲಿ ಅರಿವಿನ ದೀಪ ಉದ್ದೀಪನವಾಗುವಂತೆ ಮಾಡಿದರು. ಆತ್ಮೋದ್ಧಾರಕ್ಕೆ, ಆತ್ಮ ದೇವನಾಗಲು ಹೆಣ್ಣು-ಗಂಡು ಎಂಬ ಭೇದವಿಲ್ಲ ಎಂಬ ವೈಚಾರಿಕ ನಿಲುವುಗಳಿಂದ ಸ್ತ್ರೀಯೂ ಕೂಡಾ ಆಧ್ಯಾತ್ಮದ ಮೆಟ್ಟಿಲುಗಳನ್ನು ಏರಲು ಅರ್ಹಳು ಎಂಬುದನ್ನು ಮುಕ್ತಮನಸ್ಸಿನಿಂದ ಹೇಳಿದರು. ಮಹಿಳೆಗೆ ಇಂತಹ ಮುಕ್ತ ಮಾರ್ಗ ತೆರೆದಾಗ ಸ್ವಾತಂತ್ರ್ಯದ ಹೊಸಗಾಳಿ ಬೀಸಿದಾಗ ಅವಳು ಅದನ್ನು ಮಹೋನ್ನತ ನೆಲೆಯಲ್ಲಿ ಸ್ವೀಕರಿಸಿ ಶಿವಯೋಗಸಿದ್ಧಿಯ ಪರಮೋಚ್ಛ ಹಂತಕ್ಕೆ ಹೋಗಿ ತಲುಪಿದಳು. ಇಂತಹ ಆಧ್ಯಾತ್ಮದ ಪರಿವರ್ತನೆಯ ಹಾದಿಯಲ್ಲಿ ನಡೆದು ಸ್ತ್ರೀ ಏರಿದ ಆ ಎತ್ತರ ಕಂಡ ಸಿದ್ಧರಾಮೇಶ್ವರರ ಮನಸ್ಸು ಅತ್ಯಂತ ಆಹ್ಲಾದತೆಯಿಂದ ನಲಿದಿದೆ.
ಶುದ್ಧ ಸಂಗಮದಲ್ಲಿ ಸಂಯೋಗವಾದಳವ್ವೆ,
ಸಿದ್ದಗುರುವಿನಲ್ಲಿ ನಿತ್ಯಳಾದಳವ್ವೆ,
ಪ್ರಸಿದ್ಧ ಜಂಗಮದಲ್ಲಿ ಪ್ರಾಣ ಸಂಯೋಗವಾದಳವ್ವೆ,
ಶುದ್ಧಸಿದ್ಧಪ್ರಸಿದ್ಧವ ಕೂಡಿದ
ಪ್ರಕಟಿತ ಸಂಯೋಗದಲ್ಲಿ ಸಮನಿಸಿದ್ದಳವ್ವೆ.
ಆಧಾರಮೂಲಪಂಚಿಕ ತೊಡಗಿ
ಬಹುವಿಧ ನಾಳಂಗಳಿಗೆ ಸಹಸ್ರ ಮುಚ್ಚಳಂ ಮುಚ್ಚಿದಳೆವ್ವೆ,
ಅಜ್ಞಾನವೆಂಬ ಬಿದ್ದಿನ ಬಂದಡೆ
ಇಕ್ಕಲಿಲ್ಲದಚ್ಚಿಗಂಬಟ್ಟು ಉದಾಸೀನಂ ಮಾಡಿದಳವ್ವೆ,
ಸುಜ್ಞಾನವೆಂಬ ಅತಂಗೆ
ನಿರ್ಮಳದಲೊಮ್ಮೆನವನಟ್ಟು,
ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ನಿತ್ಯರ್ಪಿತವಂ ಮಾಡಿ,
ಪ್ರಸಾದವ ಸ್ವೀಕಾರಂ ಮಾಡಿ ನಿತ್ಯಮುಕ್ತಳಾದಳವ್ವೆ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1013 / ವಚನ ಸಂಖ್ಯೆ-655)
ಯಾವುದು ತನು-ಮನ-ಪ್ರಾಣದಿಂದ ಶುದ್ಧವೋ ಅದನ್ನು ಸ್ವೀಕರಿಸಿ ಗುರುದೀಕ್ಷೆ ಪಡೆದುಕೊಂಡು, ಜಂಗಮಸೇವೆ ಮಾಡುತ್ತಾ, ಅಜ್ಞಾನವನ್ನು ಉದಾಸೀನ (ಕಳೆದುಕೊಂಡು) ಸುಜ್ಞಾನವೆಂಬ ಲಿಂಗಕ್ಕೆ ನಿರ್ಮಲವಾದ ಮನಸ್ಸುಕೊಟ್ಟು ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗಕ್ಕೆ ಪ್ರಸಾದ ಅರ್ಪಿಸಿ ನಂತರ ತಾನು ಆ ಪ್ರಸಾದ ಸ್ವೀಕರಿಸಿ ಪ್ರಸಾದ ಕಾಯಳಾಗಿ ಸ್ತ್ರೀ ಸ್ತ್ರೀತ್ವದಿಂದ ಹಣ್ಣು ಸಿಪ್ಪೆ ಕಳಚಿಕೊಂಡಂತೆ ಬಿಡುಗಡೆಗೊಂಡು ನಿತ್ಯಮುಕ್ತಳಾದಳು, ಎಂದು ವಚಿಸುವಲ್ಲಿ ಸಿದ್ಧರಾಮೇಶ್ವರರು ಸ್ತ್ರೀಯ ಪರಿವರ್ತನೆಯ ಪ್ರತಿಹಂತವನ್ನೂ ತುಂಬಾ ಸೂಕ್ಷ್ಮವಾಗಿ ಗುರುತಿಸಿದ್ದಾರೆ. ಹೀಗೆ ಹಂತ ಹಂತವಾಗಿ ತನ್ನರಿವಿನಿಂದ, ತಾನು ಕನಿಷ್ಟ ಎಂಬ ಭಾವದಿಂದ, ಸ್ವತ: ಸ್ತ್ರೀ ತನ್ನ ಪ್ರಜ್ಞೆಯಿಂದಲೇ ತನ್ನ ಕಟ್ಟುಗಳನ್ನು ಕಳಚಿಕೊಂಡು ನಿತ್ಯಮುಕ್ತಳಾದಳು ಎಂದು ಹೇಳುತ್ತಲೇ ಇವರು ಸ್ತ್ರೀಯನ್ನು ಸಾಕ್ಷಾತ್ ಕಪಿಲಸಿದ್ಧ ಮಲ್ಲಿಕಾರ್ಜುನ ಎಂಬ ತಾದ್ಯಾತ್ಮಭಾವಕ್ಕೆ ಹೋಗುತ್ತಾರೆ.
ಕಲಿಸಿಕೊಟ್ಟಂತೆ ಮಾಡಿದ್ದರೆ, ಶರಣರೇ ಅವಳನ್ನು ಮುಂಚೂಣಿಗೆ ಕೈಹಿಡಿದು ತಂದಿದ್ದರೆ ಸ್ತ್ರೀ ಕೇವಲ ಕೀಲಿ ಕೊಟ್ಟ ಗೊಂಬೆಯಂತಾಗುತ್ತಿದ್ದಳು. ಶರಣರು ಹೇಳಿದಂತೆ ಮಾತ್ರ ಅವರನ್ನು ಹಿಂಬಾಲಿಸುವ ಮಗುವಿನಂತಾಗುತ್ತಿದ್ದರು. ಇಂತಹ ತಪ್ಪನ್ನು ಶರಣರೆಂದೂ ಮಾಡಲಿಲ್ಲ. ಸ್ತ್ರೀಗೆ ಜಾಗೃತಿಯನ್ನುಂಟು ಮಾಡಿದರು. ಅವಳಲ್ಲಿ ಅರಿವನ್ನು ಉದ್ದೀಪನ ಮಾಡಿದರು. ಸರಿ-ತಪ್ಪುಗಳ ತಿಳುವಳಿಕೆ ಕೊಟ್ಟರು. ಅವಳನ್ನು ಅವಳ ಪಾಪಪ್ರಜ್ಞೆಯ, ಕೀಳಿರಿಮೆಯ ಕೂಪದಿಂದ ಸ್ವತ: ಅವರೇ ಹೊರಬರಲು ತರಬೇತಿ ನೀಡಿದರು. ದೇಹ ರಚನೆಯ ಸರಿಯಾದ ತಿಳುವಳಿಕೆ ನೀಡಿದರು. ಹೆಣ್ತನದ ಮಹತ್ವ ಹೇಳಿ ಅದರ ಶ್ರೇಷ್ಠತೆಯನ್ನು ವೈಚಾರಿಕವಾಗಿ ಚಿಂತಿಸುವಂತೆ ಮಾಡಿದರು. ಹೀಗಾಗಿ ಸ್ತ್ರೀ ಸ್ವಯಂ ಗುರುವಾದಳು. ಅರಿವಿನ ಮೂರ್ತಿಯಾದಳು. ಪ್ರತ್ಯಕ್ಷ ದೇವತೆಯಾದಳು. ಶಿವಯೋಗ ಸಿದ್ದಿ ಸಾಧಿಸಿದಳು. ಇಡೀ ತನ್ನ ಬದುಕಿಗೆ ತಾನೇ ಬೆಳಕಾದಳು. ಈ ಕಾರಣದಿಂದಲೇ ಅವಳೇರಿದ ಅತ್ಯಂತ ಮಹೋನ್ನತ ಸ್ಥಾನಗಳ ಸರ್ವಶೇಷ್ಠತೆಗೆಲ್ಲಾ ಸ್ತ್ರೀಯೇ ಕಾರಣಳು. ಜಗತ್ತಿನ ಆದ್ಯ ಶಕ್ತಿಯೇ ಅವಳು ಎಂದು ಸಾರಿದರು. ಶರಣರು ಕೊಟ್ಟ ಅರಿವಿನಿಂದ ಅವಳಿಗೆ ಹೊಸ ಹುಟ್ಟು ದೊರೆಯಿತು.
ತಾ ಮಾಡಿದ ಹೆಣ್ಣು ತನ್ನ ತಲೆಯನ್ನೇರಿತ್ತು.
ತಾ ಮಾಡಿದ ಹೆಣ್ಣು ತನ್ನ ತೊಡೆಯನೇರಿತ್ತು.
ತಾ ಮಾಡಿದ ಹೆಣ್ಣು ಬ್ರಹ್ಮನ ನಾಲಿಗೆಯನೇರಿತ್ತು.
ತಾ ಮಾಡಿದ ಹೆಣ್ಣು ನಾರಾಯಣನ ಎದೆಯನೇರಿತ್ತು.
ಅದು ಕಾರಣ, ಹೆಣ್ಣು ಹೆಣ್ಣಲ್ಲ ಹೆಣ್ಣು ರಕ್ಕಸಿಯಲ್ಲ;
ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧಮಲ್ಲಿಕಾರ್ಜುನ ನೋಡಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-618 / ವಚನ ಸಂಖ್ಯೆ-609)
ಶಿವಯೋಗಿ ಸಿದ್ಧರಾಮೇಶ್ವರರು ಸ್ತ್ರೀಯನ್ನು ಜೀವಜಲ ನೀಡುವ ಗಂಗೆಗೆ, ಶಕ್ತಿದೇವೆಯಾದ ಆದಿಶಕ್ತಿಗೆ, ವಿದ್ಯೆ ಅಧಿದೇವತೆ-ಶಾರದೆಗೆ, ಸಂಪತ್ತಿನ ಒಡತಿ ಶ್ರೀಲಕ್ಷ್ಮೀಗೆ ಸಮೀಕರಿಸುತ್ತಾರೆ. ತಾ ಮಾಡಿದ ಹೆಣ್ಣು ಗಂಗೆಯಾಗಿ ಶಿವನ ಶಿರದ ಮೇಲಿದ್ದಾಳೆ. ಇಂದು ಜೀವಜಲವಿಲ್ಲದೆ ಪ್ರಾಣಿ, ಪಕ್ಷಿ, ಮನುಷ್ಯಸಂಕುಲಕ್ಕೆ ಬದುಕಿಲ್ಲ. ಇಂತಹ ಜೀವಜಲವಾದ ಗಂಗೆ ಹೆಣ್ಣು. ಪ್ರತಿಯೊಬ್ಬರಿಗೆ ಧೈರ್ಯ, ಆತ್ಮವಿಶ್ವಾಸಗಳೆಂಬ ಶಕ್ತಿಯುತ ಆಯುಧ ಇದ್ದರೆ ಮಾತ್ರ ಬದುಕು, ಆ ಶಕ್ತಿ ತುಂಬುವ ಆದಿಶಕ್ತಿ ಪಾರ್ವತಿ ಹೆಣ್ಣು. ಅವಳು ಸಹ ಸೃಷ್ಟಿಯ ಭಾಗ. ಶಿವನ ತೊಡೆಯನ್ನೇ ಏರಿದ ಪಾರ್ವತಿ ಜಗತ್ತಿನ ಶಕ್ತಿಯ ಸಂಕೇತ. ವಿದ್ಯೆ ಇಲ್ಲದೇ ಇಂದು ಬದುಕು ನಡೆಯುವುದು ದುಸ್ತರ. ಎಲ್ಲಾ ರಂಗದಲ್ಲೂ ನಮಗೆ ಜ್ಞಾನಬೇಕು. ಅಂತಹ ಜ್ಞಾನದ ಅಧಿದೇವತೆ ಹೆಣ್ಣು. ಜ್ಞಾನದ ಆ ಶಕ್ತಿಯೇ ಸರಸ್ವತಿ. ಅವಳು ಪುರುಷನಾದ ಬ್ರಹ್ಮನ ನಾಲಿಗೆಯನ್ನೇ ಆಕ್ರಮಿಸಿಕೊಂಡಳು. ಹಣವೇ ಜೀವನ ಅಲ್ಲದಿದ್ದರೂ, ಇಂದು ಬದುಕಿನ ನಿರ್ವಹಣೆಗೆ ಹಣ ಬೇಕು. ಅಂತಹ ಸಂಪತ್ತಿನ ಒಡತಿಯೂ ಹೆಣ್ಣು. ಅವಳೇ ಶ್ರೀಲಕ್ಷ್ಮಿ. ಅವಳು ಸಹ ವಿಷ್ಣವಿನ ವಕ್ಷಸ್ಥಲವನ್ನೇ ಆಕ್ರಮಿಸಿಕೊಂಡಳು. ಹೀಗೆ ಸ್ತ್ರೀ ತನ್ನ ಅರಿವಿನಿಂದ ಪುರುಷನ ತಲೆ, ತೊಡೆ, ನಾಲಿಗೆ ವಕ್ಷಸ್ಥಲ ಹೀಗೆ ಶರೀರದ ಪ್ರಮುಖ ಚತುರ್ಭಾಗಗಳನ್ನೇ ಆವರಿಸಿದ್ದಾಳೆ. ಅವಳ ಅಜ್ಞಾನ ಅವಳನ್ನು ರಾಕ್ಷಸಿಯೆನಿಸಿತ್ತು ಆದರೆ ಅವಳ ಅರಿವು ಪುರುಷನ ಅವಿಭಾಜ್ಯ ಅಂಗವಾಗಿ ಅವನರ್ಧ ಭಾಗವನ್ನೇ ಆಕ್ರಮಿಸಿಕೊಂಡಿತು. ಈ ಎಲ್ಲಾ ಕಾರಣದಿಂದ ಸಿದ್ಧರಾಮೇಶ್ವರರು “ಹೆಣ್ಣು ಹೆಣ್ಣಲ್ಲ ಹೆಣ್ಣು ರಕ್ಕಸಿಯಲ್ಲ” ಎನ್ನುತ್ತಲೇ ಅವಳು ಗಂಗೆ, ಆದಿಶಕ್ತಿ, ಸರಸ್ವತಿ, ಲಕ್ಷ್ಮೀ ಸ್ವತ: ಪ್ರತ್ಯಕ್ಷ ದೇವತೆ ಎಂದೇ ಸಾಕ್ಷೀಕರಿಸಿ ಬಿಡುತ್ತಾರೆ. ಇದೇ ನಿಜವಾದ ಸ್ತ್ರೀ ಸಬಲೀಕರಣದ ವಚನ. ಸಿದ್ಧರಾಮೇಶ್ವರರ ಈ ಒಂದು ವಚನ ಸಾಕು ಅವರ ಸ್ತ್ರೀ ಸಂವೇದನೆಯನ್ನು ಅಭಿವ್ಯಕ್ತಿಗೊಳಿಸಲು.
ಉಳಿದಂತೆ ಶಿವಯೋಗಿ ಸಿದ್ಧರಾಮೇಶ್ವರರು ಎಲ್ಲ ಸ್ತ್ರೀಯರಲ್ಲಿ ತಾಯ್ತನದ ಭಾವವನ್ನೇ ಹೊಂದಿದ್ದಾರೆ. ಅವರ ಪಾಲಿಗೆ ಬಸವಣ್ಣನವರು ತಂದೆಯಾಗಿದ್ದರೆ, ತಾಯಿ ನೀಲಾಂಬಿಕೆ ಅವರಿಗೆ ತಾಯಿಯಾಗಿದ್ದರು. ನೀಲಮ್ಮನಿಗೆ ಮಾತೃಸ್ಥಾನ ನೀಡುವ ಸಿದ್ಧರಾಮೇಶ್ವರರು ನೀಲಾಂಬಿಕೆಯನ್ನು ಕುರಿತು:
ತಾಯೇ, ಪರಮಸುಖಾಕಾರದ ಮೂರ್ತಿಯನಡಗಿಸಿ
ನೀನೆಯಾದೆಯವ್ವಾ,
ತಾಯೆ, ಮಹಾಜ್ಞಾನಕಲ್ಪಿತದಲ್ಲಿ ನೀನೆಯಡಿಗಿದೆಯವ್ವಾ
ತಾಯೆ, ನೀಲಮ್ಮನೆಂಬ ಸುಖವಾಸಮೂರ್ತಿ,
ಕಪಿಲಸಿದ್ಧಮಲ್ಲಿನಾಥಯ್ಯ,
ನಮ್ಮ ತಾಯಿ ನೀಲಮ್ಮನಾದಳು.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-683 / ವಚನ ಸಂಖ್ಯೆ-1312)
ಸಿದ್ದರಾಮೇಶ್ವರರು ಪ್ರಾರಂಭದಲ್ಲಿ ಹೇಳಿದಂತೆ ಹೆಂಗರುಳಿನ ತಾಯ್ತನದ ಸಾಕಾರಮೂರ್ತಿ. ತಾಯಿ ನೀಲಮ್ಮನನ್ನು ಗೌರವಿಸಿದ ರೀತಿಯೇ ಅನನ್ಯವಾಗಿದೆ. ಮಹಾಜ್ಞಾನ ಕಲ್ಪಿತದಲ್ಲಿ ಬಸವಣ್ಣನ ವೈಚಾರಿಕ ಪತ್ನಿಯಾದ ನೀಲಮ್ಮನ ನಿಲುವನ್ನು ಗುರುತಿಸಿದ ಶಿವಯೋಗಿ ಸಿದ್ಧರಾಮರು “ನೀಲಮ್ಮನೆಂದರೆ ಸುಖವಾಸಮೂರ್ತಿ ಎಂದು ಸಂಬೋಧಿಸುತ್ತಾರೆ. ಮಹಾಜ್ಞಾನಿಯೆಂದು ಅವಳ ನಿಲುವನ್ನು ಒಪ್ಪಿಕೊಂಡು “ನಮ್ಮ ತಾಯಿ ನೀಲಮ್ಮ” ಎಂದು ಗೌರವಿಸುತ್ತಾರೆ. ಪೂಜ್ಯಭಾವವನ್ನು ಪೂಜನೀಯ ಸ್ಥಾನವನ್ನು ನೀಲಮ್ಮನಿಗೆ ನೀಡಿದ್ದಾರೆ. ಆ ಕಾಲಘಟ್ಟದಲ್ಲಿ ಸಿದ್ಧರಾಮೇಶ್ವರರು ಸ್ತ್ರೀಯರಲ್ಲಿ ಹೊಂದಿದ ಈ ಭಾವವೇ ಅನುಪವಾದುದಾಗಿದೆ.
ಸಿದ್ದರಾಮೇಶ್ವರರು ಸ್ತ್ರೀಯ ಮಾನಾಪಮಾನದ ಕುರಿತು ತಮ್ಮದೇ ಆದ ತಾತ್ವಿಕ ಜಿಜ್ಞಾಸೆ ಮಾಡಿದ್ದು ಅವರ ಒಂದು ವಚನದಿಂದ ತಿಳಿದು ಬರುತ್ತದೆ.
ಮೂರಳಿದು ಮೂರಳವಟ್ಟುವೆ ಭಕ್ತಸ್ಥಲ.
ಮೂರಳಿದು ಮೂರಳವಟ್ಟುದೆ ಜಂಗಮಸ್ಥಲ.
ಅಳಿದು ಎಂದಡೆ,
ಇದ್ದ ಮನ ಲಿಂಗಕ್ಕೆ ಕೊಟ್ಟಾಗಳೆ [ಹೆಣ್ಣ]ಳಿದುದು;
ಇದ್ದ ಧನ ಜಂಗಮಕ್ಕೆ ಕೊಟ್ಟಾಗಳೆ ಹೊನ್ನಳಿದುದು;
ಇದು ತನು ಗುರುವಿಂಗೆ ಕೊಟ್ಟಾಗಳೆ [ಮಣ್ಣ]ಳಿದುದು.
ಅವರವರಾಚರಣೆಯ ನೋಡಿ ಕೊಡುವುದಲ್ಲದೆ,
ಬೇಡಿದ ಪರಿಯಲ್ಲಿ ಕೊಡುವುದೇನೋ ಅಯ್ಯಾ?
ಸಿಂಧುಬಲ್ಲಾಳ ತನ್ನ ವಧುವ ಕೊಟ್ಟನೆಂದು ಹೇಳಿದಲ್ಲಿ,
ತನ್ನ ಹೆಂಡತಿಯನೇನಾದಡೂ ಕೊಟ್ಟನೆ? ಇಲ್ಲಿಲ್ಲ.
ಹೆಣ್ಣು ಎಂದಡೆ ತಾನು,
ಶರಣಶತಿ ಲಿಂಗಪತಿ ಎಂಬ ಭಾವದಿಂದ
ಲಿಂಗಕ್ಕೆ ಮನ ಕೊಟ್ಟು ವಧುವಾದನಲ್ಲದೆ
ತನ್ನಂಗನೆಯ ಕೊಡಲಿಲ್ಲವು.
[ಹೊನ್ನು] ಎಂದಡೆ ಜಂಗಮಕ್ಕೆ ಧನವ ಕೊಟ್ಟು
ನಿಧಿ ನಿಧಾನ ಒಲ್ಲವಾದನಲ್ಲದೆ, ತನ್ನಂಗನೆಯ ಕೊಡಲಿಲ್ಲವು.
[ಮಣ್ಣು] ಎಂದಡೆ ತನ್ನ ತನುವ ಗುರುವಿಂಗೆ ಕೊಟ್ಟು
ಸ್ವಯಂಭುವಾದನಲ್ಲದೆ ತನ್ನಂಗನೆಯ ಕೊಡಲಿಲ್ಲವು.
ಹೆಣ್ಣು ಸಲ್ಲದು ಜಂಗಮಕ್ಕೆ;
ಹೊನ್ನು ಸಲ್ಲದು ಲಿಂಗಕ್ಕೆ;
ಮಣ್ಣು ಸಲ್ಲದು ಗುರುವಿಂಗೆ.
ಇದರ ಭೇದವನಂತವುಂಟು: ತಿಳಿವಡೆ ಬಹು ದುರ್ಲಭ;
ತಿಳಿದು ನೋಡಿದಡೆ ಭಕ್ತಿಗೆ ಬಹು ಸುಲಭ.
ತಿಳಿದು ಮಾಡಿ ಮೋಕ್ಷವ ಹಡೆದರಲ್ಲದೆ,
ತಿಳಿಯದೆ ಮಾಡವರೇನು ಮೇರುವಿನೊಳಗಿರುವ
ಭಂಗಾರವನಾಗಲಿ,
ಸಮುದ್ರದೊಳಗಿರುವ ನಿಧಿನಿಧಾನಂಗಳಾಗಲಿ ತಂದಿಹರೇನೋ?
ಕಪಿಲಸಿದ್ಧಮಲ್ಲಿಕಾರ್ಜುನಾ, ಇದರಿರವ ಹೇಳಿಕೊಡಯ್ಯಾ,
ಎನ್ನ ಪ್ರಾಣಗುರು ಚೆನ್ನಬಸವಣ್ಣನಿಂದ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-678 / ವಚನ ಸಂಖ್ಯೆ-1270)
ಈ ವಚನದ ಸಾಲುಗಳಲ್ಲಿರುವ ಆರು ಸಾಲುಗಳನ್ನು ಗಮನಿಸುವುದಾದರೆ:
ಸಿಂಧುಬಲ್ಲಾಳ ವಧುವ ಕೊಟ್ಟನೆಂದು ಹೇಳಿದಲ್ಲಿ,
ತನ್ನ ಹೆಂಡತಿಯನೇನಾದರೂ ಕೊಟ್ಟನೇ? ಇಲ್ಲಿಲ್ಲ.
ಹೆಣ್ಣು ಎಂದಡೆ ತಾನು,
ಶರಣಸತಿ ಲಿಂಗಪತಿ ಎಂಬ ಭಾವದಿಂದ
ಲಿಂಗಕ್ಕೆ ಮನಕೊಟ್ಟು ವಧುವಾದನಲ್ಲದೆ
ತನ್ನಂಗನೆಯ ಕೊಡಲಿಲ್ಲವು
“ಶಿವನಿಗೆ ಸಿಂಧುಬಲ್ಲಾಳ ತನ್ನ ವಧು (ಹೆಂಡತಿ) ಕೊಟ್ಟೆನೆಂದು ಹೇಳಿಲ್ಲ. ನಾವು ಅದನ್ನು ತಪ್ಪಾಗಿ ತಿಳಿದಿದ್ದೇವೆ. ಹೆಣ್ಣು ಎಂದರೆ ಸ್ವತ: ಸಿಂಧುಬಲ್ಲಾಳನೆ. ಯಾಕೆಂದರೆ ಲಿಂಗವನ್ನು ಪತಿ ಎಂದಾಗ ಆ ಲಿಂಗಕ್ಕೆ ಅವನು ತನ್ನ ಮನವನ್ನು ಕೊಟ್ಟು ವಧುವಾದನೇ ಹೊರತು ತನ್ನ ಹೆಂಡತಿಯ ಕೊಡಲಿಲ್ಲ” ಎಂಬುದು ಸಿದ್ಧರಾಮರ ನಿಲುವು. ಇಲ್ಲಿ ಸ್ತ್ರೀಯ ಮಾನ, ಶೀಲ, ಗೌರವದ ರಕ್ಷಣೆಯನನ್ನು ತುಂಬಾ ಮುತುವರ್ಜಿಯಿಂದ ಇವರು ಮಾಡುವುದು ನಮಗೆ ಪ್ರತ್ಯಕ್ಷವಾಗಿ ಕಂಡುಬರುತ್ತದೆ. ಶರಣಸತಿ-ಲಿಂಗಪತಿ ಭಾವದ ಅನನ್ಯ ವ್ಯಾಖ್ಯಾನ ಇದಾಗಿದೆ.
ಒಟ್ಟಿನಲ್ಲಿ ಸಿದ್ಧರಾಮೇಶ್ವರರ ವಚನಗಳಲ್ಲಿ ಸ್ತ್ರೀ ಪರ ಸಂವೇದನೆಗಳು ಉತ್ತಮ ನೆಲೆಯಲ್ಲಿವೆ. ಇಂತಹ ಭಾವ ಸ್ವತ: ಹೆಣ್ಣಾದಾಗ ಮಾತ್ರ ಸಾಧ್ಯ. ಲಿಂಗಪತಿಯಲ್ಲಿ ಇವರು ಸತಿಯಾದಾಗ ಆ ಹೆಣ್ತನ ಅನುಭವಿಸಿ ಆ ಸಂವೇದನೆಗಳನ್ನೇ ತಮ್ಮ ವಚನಗಳಲ್ಲಿ ದಾಖಲಿಸುತ್ತಾರೆ. ಸ್ತ್ರೀ ಪರವಾಗಿ ಆಲೋಚಿಸುವ ಹೆಂಗರಳು ಇವರಿಗಿದೆ. ಆದ್ದರಿಂದ ಸ್ತ್ರೀ ಇವರಿಗೆ ತಾಯಿ, ಕೆಳದಿ, ದೇವತೆ, ಜಗದ ಶಕ್ತಿ ಆಗಿದ್ದಾಳೆ. ತಮ್ಮ ಹಂಬಲವನ್ನು ಮಗುವಾಗಿ ತಾಯಿಯಲ್ಲಿ ಹೇಳಿಕೊಳ್ಳುವ ಸದ್ಗುಣವಿದೆ. ಈ ಕಾರಣದಿಂದ ಸಿದ್ಧರಾಮೇಶ್ವರರ ವಚನಗಳಲ್ಲಿ ಸ್ತ್ರೀಗೆ ಒಂದು ಗೌರಯುತ ಸ್ಥಾನ ದೊರೆತಿದೆ.
ಡಾ. ಪುಷ್ಪಾವತಿ ಶಲವಡಿಮಠ
ಕನ್ನಡ ಉಪನ್ಯಾಸಕರು
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಚಿಕ್ಕಬಾಸೂರು,
ತಾ. ಬ್ಯಾಡಗಿ, ಜಿ. ಹಾವೇರಿ – 581 110
ಫೋನ್: 97407 38330
ಗ್ರಂಥಋಣ:
- ಬಸವಯುಗದ ವಚನ ಮಹಾಸಂಪುಟ-1. ಪ್ರಧಾನ ಸಂಪಾದಕರು. ಡಾ. ಎಂ. ಎಂ. ಕಲಬುರ್ಗಿ
- ಮತ್ತೆಕಲ್ಯಾಣ: ಸಂ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
- ವಚನ ಬೆಳಕು: ಶ್ರೀ. ರಂಜಾನ್ ದರ್ಗಾ
- ಬಸವತತ್ವ ಪ್ರದೀಪಿಕೆ: ಸಂ. ಡಾ ಸಿದ್ದರಾಮ ಶರಣರು ಬೆಳ್ದಾಳ
- ಶರಣ ಕಲ್ಯಾಣ: ಸಂ. ಡಾ. ಕಲ್ಯಾಣರಾವ್ ಜಿ. ಪಾಟೀಲ್, ಡಾ. ಈಶ್ವರಯ್ಯ ಮಠ.