ಅಲ್ಲಮ ಅನುಭಾವದ ಅನರ್ಘ್ಯ ರತ್ನ / ಡಾ. ಸಿದ್ದು ಯಾಪಲಪರವಿ, ಗದಗ.

ಜಾತಿ ಜಾತಿ ಮಧ್ಯೆ ಸಂಘರ್ಷ, ಕಂದಾಚಾರ, ಮೂಢನಂಬಿಕೆ ಅಟ್ಟಹಾಸ, ಅಸಮಾನತೆಯ ತಾಂಡವ ನೃತ್ಯ ಮೇಲು ಕೀಳೆಂಬ ಜಂಜಾಟದ ಮಧ್ಯೆಯ 12 ನೇಯ ಶತಮಾನ ವೈಚಾರಿಕ ವೈಜ್ಞಾನಿಕ ತಳಹದಿ ಹಾಸು ಹೊಕ್ಕಾಗಿಸಿ ಅನುಭವ ಮಂಟಪವೆಂಬ ಶರಣರ ಅನುಭವ ಚಿಂತನ ಮಂಥನಕ್ಕೆ ಗ್ರಾಸ ಒದಗಿಸಿದ್ದು, ಅದರ ಪೀಠಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಅಲ್ಲಮ ಪ್ರಭು ದೇವರು ಅನುಭಾವದ ಅನರ್ಘ್ಯರತ್ನ.

ಇಂದಿನ ಪಾರ್ಲಿಮೆಂಟ್ ಜನಸಾಮಾನ್ಯರ ಆಶೋತ್ತರಗಳನ್ನು ಪೂರೈಸಿದರೆ, ಅಂದಿನ ಅನುಭವ ಮಂಟಪ ಜೀವ ಸಂಕುಲದ ಸರ್ವಾಂಗೀಣ ಬದುಕಿಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಪೂರೈಸಿ ಇಂದು ನಮ್ಮ ಗಮನಕ್ಕೂ ಬಾರದ ಸಾವಿರಾರು ಸಂಕಷ್ಟದ ಸಂಕೋಲೆಗಳಿಗೆ ವಚನ ಮುಖಾಂತರ ಪರಿಹಾರ ಒದಗಿಸಿದೆ. ಕಾಯಕ ಜೀವಿಗಳಿಗೆ ಜೀವನದ ಬೆಳಕನ್ನು ತೋರಿಸಿ ಸಮ ಸಮಾಜ ನಿರ್ಮಿಸಿ ಶ್ರಮ ಸಂಸ್ಕ್ರತಿ ನಾಡು ನುಡಿ ಕಟ್ಟಲು ಆರ್ಥಿಕ ಕ್ರಾಂತಿಗೆ ನಾಂದಿ ಹಾಡಿರುವುದು 12 ನೇಯ ಶತಮಾನ. ಪ್ರಪಂಚದ ಇತಿಹಾಸದಲ್ಲಿ ಸಾಂಸ್ಕೃತಿಕ, ಸಾಹಿತ್ಯ, ಧಾರ್ಮಿಕ ಚಟುವಟಿಕೆಗಳು ಅಚ್ಚಳಿಯದೆ ಉಳಿದಿವೆ. ಅಂದಿನ ಶರಣರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ.

ಅಲ್ಲಮ 64 ವಿದ್ಯೆಗಳನ್ನು ಕರಗತ ಮಾಡಿಕೊಂಡು ಅನೇಕ ತಂತ್ರಗಳ ಅನುಭವ ಹೊಂದಿದವನು. ಹಿಮಾಲಯಕ್ಕೆ ಹೋಗಿ ಯೋಗವನ್ನು ಕಲಿತು ವೈಚಾರಿಕ ನಿಲುವನ್ನು ಪ್ರತಿಪಾದಿಸಿದವರು. ತನ್ನ ತನವನ್ನು ಬದಿಗೊತ್ತಿ ಶರಣರ ನಿಲುವು ಹಾಗೂ ಬಸವಣ್ಣನವರ ವಿಚಾರಧಾರೆಗಳಿಗೆ ಮಾರು ಹೋಗಿ ಕಲ್ಯಾಣಕ್ಕೆ ಬಂದು ಅವರ ಒಡನಾಟದಲ್ಲಿದ್ದುಕೊಂಡು ಶರಣರ ದಿವ್ಯ ದೂರದೃಷ್ಟಿಯ ಕಲ್ಪನೆಯ ಸದಾಚಾರಿಗಳ ಸಮ್ಮಿಲನದ ಕೂಟವಾದ ಅನುಭವ ಮಂಟಪದ ಪೀಠಾಧ್ಯಕ್ಷ ಪದವಿ ಸ್ವೀಕರಿಸಿ ಇಡೀ ನಾಡಿನ ವೈಚಾರಿಕ ಕ್ರಾಂತಿಗೆ ಬುನಾದಿ ಹಾಕಿದರು. ಅಲ್ಲಮ ಪ್ರಭುಗಳು ಅಂದಿನ ಮದ್ದಳೆ ಬಾರಿಸುವ ಜನಾಂಗದವರಾದರೂ ಕೂಡ ಬಸವಣ್ಣನವರು ಅದನ್ನು ಎಳ್ಳಷ್ಟು ಗಣನೆಗೆ ತೆಗೆದುಕೊಳ್ಳದೆ ಅವರ ಅನುಭವ ಮತ್ತು ಅನುಭಾವಕ್ಕೆ ಗೌರವ ತಂದುಕೊಟ್ಟರು. ಇದು ಇಡೀ ವಿಶ್ವಕ್ಕೆ ಹೊಸ ಸಂದೇಶ ರವಾನೆಯಾಗಿ ಸಮಾನತೆ ಬಾನೆತ್ತರಕ್ಕೆ ಹಾರಲು ಪ್ರೇರಣೆ ನೀಡಿದಂತಾಯಿತು.

“ಎನಗೆಯೂ ಗುರು, ನಿನಗೆಯೂ ಗುರು, ಜಗವೆಲ್ಲಕ್ಕೂ ಗುರು ಕಾಣಾ ಗುಹೇಶ್ವರಾ” ಎಂಬ ವಚನ ಇಡೀ ಮನು ಕುಲಕ್ಕೆ ಬಸವಣ್ಣನವರ ವ್ಯಕ್ತಿತ್ವ ಕನ್ನಡಿಯಂತೆ ತೋರಿಸಿ ಅನುಷ್ಠಾನಕ್ಕೆ ತಂದವರು ಅಲ್ಲಮಪ್ರಭು ದೇವರು. ದೂರದ ಶಿವಮೊಗ್ಗದ ಉಡತಡಿಯಿಂದ ವೈರಾಗ್ಯನಿಧಿ ಅಕ್ಕಮಹಾದೇವಿಯವರು ಬರುವ ಸುಳಿವು ಅರಿತ ಅಲ್ಲಮ ಪ್ರಭುಗಳು ಅವರ ವೈರಾಗ್ಯವನ್ನು ಇಡೀ ಜಗತ್ತಿಗೆ ತಿಳಿಪಡಿಸಲು ಮಾಡಿರುವ ಪರೀಕ್ಷೆ, ವಾದ ವಿವಾದ ಎಂಥವರನ್ನು ಬೆಚ್ಚಿ ಬೀಳಿಸಬಲ್ಲದು. ಸಂಘರ್ಷದ ಸವಾಲಿಗೆ ಸಮರ್ಪಕವಾಗಿ ಉತ್ತರ ನೀಡಿದ ಅಕ್ಕ ಮಹಾದೇವಿಯವರು ತತ್ವನಿಷ್ಠೆ, ವೈರಾಗ್ಯದಖಣಿ ಏಕದೇವ ನಿಷ್ಠೆಗೆ ಶರಣಾಗಿ ಭಲೆ ಭಲೆ ಅಕ್ಕ ಮಹಾದೇವಿಗೆ ಶರಣು ಶರಣಾರ್ಥಿ ಎಂದು ಹೇಳಿ ಅನುಭವ ಮಂಟಪಕ್ಕೆ ಬರ ಮಾಡಿಕೊಂಡು ನಾಡಿಗೆ ಅಕ್ಕನ ಅಪಾರವಾದ ಜ್ಞಾನವನ್ನು ತೋರಿಸಿದವರು ಅಲ್ಲಮ ಪ್ರಭುಗಳು.

“ಎತ್ತಣ ಮಾಮರ, ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಭಂಧವಯ್ಯಾ” ಎಂಬ ವಚನದಿಂದ ಶಾಶ್ವತವಾಗಿ ಶರಣರ ಜೊತೆ ಭಾತೃತ್ವ ಬೆಸೆಯುವ ಪರಿಯನ್ನು ಸಾಕ್ಷಿಗೊಳಿಸಿದ್ದಾರೆ. ಇವರ ಕನ್ನಡದ ಕಾವ್ಯ ಅತ್ಯದ್ಭುತ ರೋಮಾಂಚಕಾರಿ. ಸಾಹಿತ್ಯ ಸಾಮರಸ್ಯ ಪರಿಸರ ಪಕ್ಷಿ ಪ್ರಾಣಿ ಜೀವ ಕಾರುಣ್ಯ ಅವರ ವಚನಗಳಲ್ಲಿ ಹಾಸು ಹೊಕ್ಕಾಗಿದೆ. ಸೃಷ್ಠಿಯ ಸೊಬಗು ವ್ಯಕ್ತಿಯ ವ್ಯಕ್ತಿತ್ವದ ವಿಕಸನಕ್ಕೆ ಪ್ರೇರಣೆ ನೀಡಿದ್ದಾರೆ. “ಬಯಲು ಬಯಲನ್ನೇ ಬಿತ್ತಿ ಬಯಲು‌ ಬಯಲನ್ನೇ ಬೆಳೆದು ಬಯಲಲ್ಲಿ ಬಯಲಾದರೂ” ಎಂಬ ವಿಚಾರ ಹೇಳಿ ಎಲ್ಲವು ನಶ್ವರ ಆಶೆ ಆಕಾಂಕ್ಷೆಗಳಿಗೆ ಮೀರಿ ನಮ್ಮ ಜೀವನ ಪಾವನ ಮಾಡಿಕೊಳ್ಳುವ ವಿಚಾರ ಅತ್ಯಂತ ವೈಜ್ಞಾನಿಕ, ಪ್ರಾಯೋಗಿಕವಾಗಿ ಬೇರು ಮಟ್ಟದಿಂದ ತಿಳಿ ಹೇಳಿದ ಅಲ್ಲಮ ಪ್ರಭುಗಳು ಬಟ್ಟ ಬಯಲಿನ ಘನ ವ್ಯಕ್ತಿತ್ವ ಉಳ್ಳ ಭೌತ ವಿಜ್ಞಾನಿ ಎನ್ನಬಹುದಾಗಿದೆ.

ಅನುಭವ ಮಂಟಪದ 770 ಅಮರಗಣಂಗಳ ವಿಚಾರಧಾರೆಯ ಚಿಂತನ ಮಂಥನಕ್ಕೆ ಸಹಕಾರ ವಚನಗಳಿಗೆ ಹೊಸ ರೂಪ, ತಾತ್ವಿಕ ಸಿದ್ಧಾಂತಕ್ಕೆ ಒರೆ ಹಚ್ಚಿ ಬದುಕಿನ ಬವಣೆ ನೀಗಿಸಲು ಒಂದು ಹೊಸ ರೂಪ ಕೊಟ್ಟು, ಅವುಗಳನ್ನು ಚೆನ್ನಬಸವಣ್ಣನವರಿಂದ ಮುದ್ರೆ ಒತ್ತಿ ವಚನ ಕಟ್ಟುಗಳಾಗಿ ಮಾರ್ಪಡಿಸಿದವರು. ಶಿವಯೋಗಿ ಸಿದ್ಧರಾಮ ಸ್ಥಾವರಕ್ಕೆ ಅಂಟಿಕೊಂಡು ಕೆರೆ ಕಟ್ಟೆ ಕಟ್ಟುವಾಗ ಅವರಲ್ಲಿಗೆ ಹೋಗಿ ನೈಜತೆಯ ಅರಿವು ನೀಡಿ ಸ್ಥಾವರಕ್ಕಿಂತ ಜಂಗಮ ತತ್ತ್ವ ಮೇಲೆಂಬ ನಿಲುವು ಪ್ರತಿಪಾದಿಸಿ ಕಲ್ಯಾಣಕ್ಕೆ ಕರೆತಂದು ಶಿವಯೋಗಿಗಳನ್ನಾಗಿಸಿದವರು ಅಲ್ಲಮ ಪ್ರಭುದೇವರು.

ಡಾ. ಸಿದ್ದು ಯಾಪಲಪರವಿ,
ಆಂಗ್ಲ ಭಾಷಾ ಪ್ರಾಧ್ಯಾಪಕರು (ನಿ),
ಗದಗ. ಮೋಬೈಲ್‌ ಸಂ. 94483 58040.

ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in

Loading

This Post Has One Comment

  1. Maheshwarappa

    ಕಾರ್ಯ ಕ್ರಮ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಧನ್ಯ ವಾದಗಳು

Leave a Reply