ಸುಯಿಧಾನಿ ಅಕ್ಕ ಮಹಾದೇವಿ / ಡಾ. ಹೇಮಾ ಪಟ್ಟಣಶೆಟ್ಟಿ, ಧಾರವಾಡ.

ಕದಳಿ ಎಂಬುದು ತನು, ಕದಳಿ ಎಂಬುದು ಮನ,
ಕದಳಿ ಎಂಬುದು ವಿಷಯಂಗಳು.
ಕದಳಿ ಎಂಬುದು ಭವಘೋರಾರಣ್ಯ.
ಈ ಕದಳಿ ಎಂಬುದ ಗೆದ್ದು ತವೆ ಬದುಕಿ ಬಂದು
ಕದಳಿಯ ಬನದಲ್ಲಿ ಭವಹರನ ಕಂಡೆನು.
ಭವ ಗೆದ್ದು ಬಂದ ಮಗಳೆಂದು
ಕರುಣದಿ ತೆಗೆದು ಬಿಗಿದಪ್ಪಿದಡೆ
ಚೆನ್ನಮಲ್ಲಿಕಾರ್ಜುನನ ಹೃದಯಕಮಲದಲ್ಲಿ ಅಡಗಿದೆನು.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-52 / ವಚನ ಸಂಖ್ಯೆ-139)

ಎಂದು ಪ್ರತೀಕಾತ್ಮಕವಾಗಿ ನುಡಿದು, ಕದಳಿಯಲ್ಲೇ ಲೀನಳಾದ ಮಹಾದೇವಿಯಕ್ಕನವರು ಕನ್ನಡದ ಮೊಟ್ಟಮೊದಲ ಕವಯಿತ್ರಿ ಅಷ್ಟೇ ಅಲ್ಲ ಶ್ರೇಷ್ಠ ಕವಯಿತ್ರಿಯೂ ಕೂಡ. ಕರ್ನಾಟಕದ ಮೊದಲ ಅನುಭಾವಿ ಮಹಿಳೆಯೂ ಹೌದು. ಜೀವನದಲ್ಲಿ ಹಲವಾರು ಏರಿಳಿತ, ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿ, ಸಾಧನೆಯ ಮಾರ್ಗ ಕ್ರಮಿಸಿದವರು ಅಕ್ಕ ಮಹಾದೇವಿಯವರು. ಸ್ವಭಾವತಃ ವಿರಾಗಿಯೂ ಅಧ್ಯಾತ್ಮಜೀವಿಯೂ ಆದ ಅಕ್ಕ ಪರಾತತ್ವ ಸಾಧನೆಗಾಗಿ ಸತ್ಯಾನ್ವೇಷಣೆಯನ್ನೇ ಗುರಿಯಾಗಿಸಿಕೊಂಡು ನಿರಂತರ ಹೋರಾಡಬೇಕಾಯಿತು. ಅಸಾಮಾನ್ಯ, ಅಪವಾದಾತ್ಮಕ ಬದುಕನ್ನು ತನ್ನ ಆತ್ಮಸ್ಥೈರ್ಯದಿಂದ ಎದುರಿಸಿ ಜಯಿಸಿದ ಮಹಾದೇವಿಯಕ್ಕನವರ ವ್ಯಕ್ತಿತ್ವ, ಜೀವನವೇ ಮಹಾಕಾವ್ಯವಾಗಿದೆ, ಹಲವು ಬಣ್ಣಗಳ ಬೆಡಗು ಹೊಂದಿದೆ. ಅಕ್ಕನವರನ್ನು ದರ್ಶಿಸಲು ಅವರ ವಚನಗಳೇ ಪ್ರಮಾಣ.

ಸಾಮಾನ್ಯವಾಗಿ ಸಂತ ಕವಯಿತ್ರಿಯರಾದ 14 ನೇ ಶತಮಾನದ ಕಾಶ್ಮೀರದ ಲಲ್ಲಾದೇವಿ ಹಾಗೂ 16 ನೇ ಶತಮಾನದ ರಾಜಸ್ಥಾನದ ಮೀರಾಬಾಯಿಯವರನ್ನು ಮಹಾದೇವಿಯಕ್ಕನವರ ಜೀವನ ಹಾಗೂ ಆಧ್ಯಾತ್ಮಿಕ ಸಾಧನೆಯೊಂದಿಗೆ ಹೋಲಿಸಲಾಗುತ್ತದೆ. ಅವರ ನಡುವೆ ಹಲವು ಸಾದೃಶ್ಯಗಳಿದ್ದರೂ ಅಕ್ಕನವರ ಶಿವಯೋಗ ಸಿದ್ಧಿಯೊಂದಿಗೆ ಅವರ ವ್ಯಕ್ತಿತ್ವದಲ್ಲಿಯ ಅನನ್ಯ ಸ್ವಂತಿಕೆ, ಪ್ರತಿಭಟನಾತ್ಮಕ ನಿಲುವು, ವೀರ ಮನೋವೃತ್ತಿ ಹಾಗೂ ಅಭಿವ್ಯಕ್ತಿಯಲ್ಲಿಯ ಸ್ವೋಪಜ್ಞತೆ, ಕಲಾತ್ಮಕತೆ ಮೊದಲಾದ ಸತ್ವಪೂರ್ಣ ಗುಣಗಳಿಂದಾಗಿ ಮಹಾದೇವಿಯಕ್ಕನವರು ಅದ್ವಿತೀಯರಾಗಿ ನಿಲ್ಲುತ್ತಾರೆ.

ಮಹಾದೇವಿಯಕ್ಕನವರ ಅನುಭವ-ಅನುಭಾವ-ಅನುಭೂತಿಗಳನ್ನು, ದರ್ಶನ-ಸಿದ್ಧಿ-ಸಂದೇಶಗಳನ್ನು, ಒಟ್ಟೂ ಅವರ ಬದುಕಿನ ಅಪೂರ್ವ ಔನ್ನತ್ಯವನ್ನು ಹೇಳಿತೀರದು. ಅವರು ಮಹಿಳೆಯರ ಅಸ್ಮಿತೆಯನ್ನು ಮತ್ತು ಬದುಕನ್ನು ಕೌಟುಂಬಿಕ ಚೌಕಟ್ಟಿನ ಹೊರಗೆ, ಸಮಾಜ ಮುಂತಾದ ಆಯಾಮಗಳ ಆಚೆಗೆ ಅಧ್ಯಾತ್ಮದತ್ತ, ಮೋಕ್ಷ ಸಾಧನೆಯೆಡೆಗೆ ಕೊಂಡೊಯ್ದವರು. ತನ್ನ ವೈಯಕ್ತಿಕ ಸಾಧನೆಯ ಮೂಲಕ ಶರಣ ಆಂದೋಲನ ಮತ್ತು ಆ ಯುಗಕ್ಕೇ ವಿಶಿಷ್ಟ ಕಾಣಿಕೆ ನೀಡಿದವರು. ಅಸಾಧಾರಣವಾದ, ಅನುಪಮ ವ್ಯಕ್ತಿಮತ್ವವನ್ನು ಹೊಂದಿದ ಅಕ್ಕನವರ ಬದುಕು ನಂತರದ ಹಾಗೂ ಇಂದಿನ ಕವಿಗಳಿಗೆ ಒಂದು ಆದರ್ಶ, ನಡೆಯಲಾಗದ ಮಾದರಿ, ಪವಾಡದಂತೆ ತೋರಿದ್ದರಲ್ಲಿ ಅಚ್ಚರಿಯೇನಿಲ್ಲ. ಆಧುನಿಕ ಕವಯಿತ್ರಿಯರಿಗಂತೂ ಅಕ್ಕ ಸ್ವಾತಂತ್ರ್ಯದ ಸಂಕೇತ, ಹೆಣ್ತನದ ಘನತೆಯ ಪ್ರತೀಕ, ಸದಾ ಪ್ರೇರಕ ಶಕ್ತಿಯಾಗಿದ್ದಾರೆ. ಈಗಲೂ ಅನೇಕಾನೇಕ ಸಂಶೋಧಕರ, ವಿದ್ವಾಂಸರ ಜಿಜ್ಞಾಸೆಗೆ ಅಕ್ಕನವರ ಅತುಲ್ಯ ಜೀವನ, ಸಾಧನೆಗಳು ಬೆರಗಿನಂತೆ ತೆರೆದುಕೊಳ್ಳುತ್ತಲೇ ಇವೆ.

12 ನೇ ಶತಮಾನದಲ್ಲಿ ಕಲ್ಯಾಣವನ್ನು ಕೇಂದ್ರವಾಗಿಸಿಕೊಂಡು ಬಸವಾದಿ ಶರಣರು ನಡೆಸಿದ ಸಾಮಾಜಿಕ, ಸಾಂಸ್ಕೃತಿಕ ಕ್ರಾಂತಿಯ ಕಹಳೆ ದಶದಿಕ್ಕುಗಳಿಗೂ ಗುಂಜಾಯಿಸಿತ್ತು. ಆ ಚಳುವಳಿ ತಾತ್ವಿಕ ನಿಲುವು ಹೊಂದಿ ಬೆಳೆದ ಕೆಲ ಕಾಲದ ನಂತರವೇ ಮಹಾದೇವಿ ಅಕ್ಕ ಕಲ್ಯಾಣಕ್ಕೆ ಬರುತ್ತಾರೆ. ಶರಣರ ಕೀರ್ತಿ ಕೇಳಿಯೇ ಬಂದವರು. ಅಲ್ಲಿಗೆ ಬರುವುದಕ್ಕಿಂತ ಮೊದಲೇ ಅವರು ಪರಾತ್ಪರ ಯೋಗ ಸಾಧನೆಯಲ್ಲಿ ತೊಡಗಿದ್ದಂಥವರು. ಹಲವಾರು ತಾತ್ವಿಕ ನಿಲುವುಗಳನ್ನೂ ಹೊಂದಿದ್ದರು. ಲೋಕ ವ್ಯವಹಾರ ಅರಿತಿದ್ದರು. ಅಂದರೆ, ಕಲ್ಯಾಣಕ್ಕೆ ಬರುವ ಮೊದಲೇ, ಶಿವಶರಣರ ಸಂಗಕ್ಕಿಂತ ಮೊದಲೇ ಅಕ್ಕಮಹಾದೇವಿಯವರು ಸ್ವಂತ ವ್ಯಕ್ತಿತ್ವವೊಂದನ್ನು ರೂಪಿಸಿಕೊಂಡಿದ್ದರು. ಅವರ ಧೀರ, ಮೇರು ವ್ಯಕ್ತಿತ್ವ ಮತ್ತು ಆನುಭಾವಿಕ ನಿಲುವುಗಳು ಶರಣ ಸಮುದಾಯವನ್ನು ವಿಸ್ಮಯಗೊಳಿಸಿದವು. ಅವರ ವೈರಾಗ್ಯ, ವೈಚಾರಿಕ ಪಕ್ವತೆಗಳನ್ನು ಕಂಡು ಶಿವಶರಣರು ಅವರನ್ನು ‘ಅಕ್ಕ’ ಎಂದು ಕರೆಯತೊಡಗಿದರು. ಹೆಣ್ಣೊಬ್ಬಳು ತನ್ನ ಕಾಲದ ಸಾಧಕ ಪುರುಷರ ಮನ್ನಣೆಗೆ ಪಾತ್ರಳಾಗಿದ್ದು ಇದು ಮೊದಲ ದೃಷ್ಟಾಂತವೆನ್ನಬಹುದು.

ಶರಣ ಚಳುವಳಿಯ ಕಾಲದಲ್ಲಿ ಅನೇಕ ಶಿವಶರಣೆಯರು ಅಧ್ಯಾತ್ಮದ ದಾರಿ ಕಂಡುಕೊಂಡರು, ಕುಟುಂಬದೊಳಗಿದ್ದೂ ವಿರಕ್ತಿಯ ಜೀವನ ನಡೆಸಿದರು. ಆದರೆ ಅಕ್ಕ ಮಾತ್ರ ಕುಟುಂಬ ವ್ಯವಸ್ಥೆಯನ್ನೇ ಧಿಕ್ಕರಿಸುವ ಧಾರ್ಷ್ಟ್ಯ ತೋರಿದವರು. ಅವರ ಜೀವನ ಪಥವೇ ಭಿನ್ನ ಹಾಗೂ ಉಜ್ವಲವಾದುದು. ಅಕ್ಕ ತನ್ನ ಬದುಕಿನ ದಾರಿಯನ್ನು ತಾನೇ ಆಯ್ದುಕೊಳ್ಳುವುದರ ಮೂಲಕ ಹೆಣ್ಣಿನ ವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದಂಥವರು. ತನ್ನ ಆಯ್ಕೆಯ ಹೊಸ ಮಾರ್ಗದಲ್ಲಿ ಎದುರಾದ ಲೌಕಿಕ ಹಾಗೂ ಸಾಮಾಜಿಕ ಅಡ್ಡಿ, ಅನಿಷ್ಟತೆಗಳನ್ನು ತನ್ನ ಮನೋಬಲ, ದೃಢತೆಗಳಿಂದ ಎದುರಿಸಿ ಹೋರಾಡಿ ಗೆಲುವು ಸಾಧಿಸಿದವರು. ಇದಲ್ಲದೆ, ತಾನು ತನ್ನ ಜೀವನ ಹಾಗೂ ಪರತತ್ವ ಸಾಧನೆಯಲ್ಲಿ ನಡೆಸಿದ ಅವಿರತ ಹೋರಾಟವನ್ನು ಮತ್ತು ಆಧ್ಯಾತ್ಮಿಕ ಅನುಭವ-ಅನುಭಾವಗಳನ್ನು ಭಾವವಿಭೋರರಾಗಿ ಸ್ವಂತಿಕೆಯ ಮುದ್ರೆಯಲ್ಲಿ, ವಿಶಿಷ್ಟ ನುಡಿಗಟ್ಟಿನಲ್ಲಿ ಅಭಿವ್ಯಕ್ತಿಸಿದವರು. ಈ ಎಲ್ಲ ಅಪೂರ್ವತೆಗಳಿಂದ ಸಾಂದ್ರಗೊಂಡ ಅಕ್ಕನ ಚರಿತ್ರೆ ಇಂದಿಗೂ ಜನಸಾಮಾನ್ಯರ, ಅಲ್ಲದೆ ಇತಿಹಾಸಕಾರರ ವಿಶೇಷ ಆಸಕ್ತಿಗೆ ಜೀವದ್ರವ್ಯವಾಗಿದೆ.

ಅಕ್ಕಮಹಾದೇವಿಯಕ್ಕನವರ 343 ವಚನಗಳು, ಯೋಗಾಂಗ ತ್ರಿವಿಧಿ, ಸೃಷ್ಟಿಯ ವಚನ ಹಾಗೂ ಹಲವು ತತ್ವಪದಗಳು – ಹೀಗೆ ವಿವಿಧ ಪ್ರಕಾರದ ರಚನೆಗಳಲ್ಲಿ ಅವರ ಭಾವಲೋಕ, ತಾತ್ವಿಕ ಚಿಂತನೆ, ಅನುಭಾವಗಳನ್ನು ಕಾಣಬಹುದು. ಅವುಗಳ ಕೇಂದ್ರ ದೈವ ಸಾಕ್ಷಾತ್ಕಾರದ ನಿತಾಂತ ಹಂಬಲವೇ ಆಗಿದ್ದರೂ ಅದನ್ನು ಅವರು ಅನೇಕ ತೆರನಾದ ಭಾವಭಿತ್ತಿಯಲ್ಲಿ ಸೃಜಿಸುತ್ತಾರೆ. ಅವುಗಳಲ್ಲಿ ಅರ್ಥ ಸಾಂದ್ರತೆ, ಧ್ವನಿ, ಚಿತ್ರಕ ಶಕ್ತಿ ಅಪಾರವಾಗಿವೆ. ತನ್ನ ಅಧ್ಯಾತ್ಮ ಸಾಧನೆಯ ಅನುಭವಗಳನ್ನು, ವಿವಿಧ ಹಂತಗಳನ್ನು ಅವಳು ಪ್ರತೀಕಾತ್ಮಕವಾಗಿ, ತುಂಬ ಕಾವ್ಯಾತ್ಮಕತೆಯಿಂದ ಅಭಿವ್ಯಕ್ತಿಸಿದ್ದಾರೆ. ಚೆನ್ನಮಲ್ಲಿಕಾರ್ಜುನನಿಗಾಗಿ ಹಲುಬುವ ಭಕ್ತಿಯ ಪರಾಕಾಷ್ಠೆಯಲ್ಲಿ ಅತ್ಯಂತ ಆರ್ತತೆ, ಮಧುರ ಭಾವ, ಉತ್ಕಟ ಪ್ರಣಯ, ವಿಪ್ರಲಂಭ ಶೃಂಗಾರ, ಹೋರುವ ವೀರಾವೇಶ, ಕೆಚ್ಚು, ಯೋಗಿನಿಯ ಸಮ್ಯಕ್ ಸ್ಥಿತಿ ಮೊದಲಾದ ಹಲವು ಅಪರೂಪದ ಪಲಕುಗಳು ಕಾಣಸಿಗುತ್ತವೆ. ಪಾರಮಾರ್ಥಿಕ ಸಿದ್ಧಿ, ದಾರ್ಶನಿಕತೆ ಮಾತ್ರವಲ್ಲ; ಮಾನವೀಯ ಆರ್ದ್ರತೆಯೂ ಅವುಗಳಲ್ಲಿ ವ್ಯಕ್ತವಾಗಿರುವುದು ಅವರ ವ್ಯಕಿತ್ವವನ್ನು ಉಜ್ವಲಗೊಳಿಸಿದೆ.

ಹಿಂದಿನ ಕವಿಗಳೆಲ್ಲರೂ ಮಹಾದೇವಿಯಕ್ಕನವರ ಚರಿತ್ರೆಯನ್ನು ಪುರಾಣ ಸಹಜವಾದ ದೈವಿಕ ಹಿನ್ನೆಲೆಯಿಂದಲೇ ಆರಂಭಿಸಿದ್ದಾರೆ. ಆದರೆ ಮದುವೆಯ ಪ್ರಸಂಗದಲ್ಲಿ ಭಿನ್ನಾಭಿಪ್ರಾಯಗಳಿವೆ. ಮಹಾದೇವಿಯಕ್ಕಬವರು ಕೌಶಿಕನನ್ನು ವರಿಸಿದರು ಅಥವಾ ಇಲ್ಲ ಎಂಬುದರ ಬಗ್ಗೆ; ದಿಗಂಬರೆಯಾಗಿ ಅಥವಾ ಕೇಶಾಂಬರೆಯಾಗಿ ಅರಮನೆಯನ್ನು, ಉಡುತಡಿಯನ್ನು ಬಿಟ್ಟು ಹೊರನಡೆದರು ಎಂಬುದರ ಬಗ್ಗೆ ಒಮ್ಮತವಿಲ್ಲ. ಬಾಲ್ಯಾವಸ್ಥೆಯಲ್ಲಿಯೇ, ದೇಹದಲ್ಲಿ ಹೆಣ್ತನ ಮೂಡುವ ಮೊದಲೇ ಅವರಲ್ಲಿ ವಿರಾಗ ಭಾವ, ಅಧ್ಯಾತ್ಮದ ಹಂಬಲ ಮೊಳೆತದ್ದನ್ನು ಅವಳು ಹೀಗೆ ಹೇಳುತ್ತಾರೆ:

ಉರಕ್ಕೆ ಜವ್ವನಗಳು ಬಾರದ ಮುನ್ನ,
ಮನಕ್ಕೆ ನಾಚಿಕೆಗಳು ತೋರದ ಮುನ್ನ,
ನಮ್ಮವರಂದೆ ಮದುವೆಯ ಮಾಡಿದರು
ಸಿರಿಶೈಲ ಚೆನ್ನಮಲ್ಲಿಕಾರ್ಜುನಂಗೆ.
ಹೆಂಗೂಸೆಂಬ ಭಾವ ತೋರುವ ಮುನ್ನ
ನಮ್ಮವರಂದೆ ಮದುವೆಯ ಮಾಡಿದರು.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-35 / ವಚನ ಸಂಖ್ಯೆ-81)

ಮುಂದುವರೆದು ‘ಸಂಸಾರವೆಂಬ ಹಗೆ’ಯ ಬಗ್ಗೆ ಮಹಾದೇವಿಯಕ್ಕನವರು ಎಚ್ಚರಿಸುತ್ತಾರೆ:

ಬೆಂದಸಂಸಾರ ಬೆಂಬಿಡದೆ ಕಾಡಿಹುದಯ್ಯ,
ಏವೆನೇವೆನಯ್ಯಾ?
ಅಂದಂದಿನ ದಂದುಗಕ್ಕೆ ಏವೆನೇವೆನಯ್ಯಾ?
ಬೆಂದ ಒಡಲ ಹೊರೆವುದಕ್ಕೆ ನಾನಾರೆ.
ಚೆನ್ನಮಲ್ಲಿಕಾರ್ಜುನಯ್ಯಾ,
ಕೊಲ್ಲು ಕಾಯಿ, ನಿಮ್ಮ ಧರ್ಮ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-105 / ವಚನ ಸಂಖ್ಯೆ-300)

ಪರಸಾಕ್ಷಾತ್ಕಾರಕ್ಕೆ ಸಂಸಾರವನ್ನು ನಿರಾಕರಿಸುವುದು ಅಕ್ಕನವರ ಮೊದಲ ಅಗತ್ಯವಾಗಿತ್ತು. ದಾಂಪತ್ಯ-ಸಂಸಾರಗಳ ವಿಷಯದಲ್ಲಿ ತನ್ನ ಆಯ್ಕೆ ಮತ್ತು ದಾರಿಗಳು ಭಿನ್ನ ಎಂಬುದನ್ನು ಅವಳು ಒತ್ತಿ ಹೇಳುತ್ತಾರೆ. ಆದರೆ ಅದೇ ಶ್ರೇಷ್ಠ, ಸರ್ವಮಾನ್ಯ ಎಂದು ಎಲ್ಲಿಯೂ ಹೇಳಿಲ್ಲ.

ಹಾವಿನ ಹಲ್ಲ ಕಳೆದು ಹಾವನಾಡಿಸಬಲ್ಲಡೆ
ಹಾವಿನ ಸಂಗವೇ ಲೇಸು ಕಂಡಯ್ಯಾ.
ಕಾಯದ ಸಂಗವ ವಿವರಿಸಬಲ್ಲಡೆ
ಕಾಯದ ಸಂಗವೆ ಲೇಸು ಕಂಡಯ್ಯಾ.
ತಾಯಿ ರಕ್ಕಸಿಯಾದಂತೆ ಕಾಯವಿಕಾರವು.
ಚೆನ್ನಮಲ್ಲಿಕಾರ್ಜುನಯ್ಯಾ,
ನೀನೊಲಿದವರು ಕಾಯಗೊಂಡಿದ್ದರೆನಬೇಡ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-147 / ವಚನ ಸಂಖ್ಯೆ-416)

ಎನ್ನುವುದು ಸಂಸಾರದಲ್ಲಿದ್ದುಕೊಂಡೇ ಶಿವಸಾಧನೆ ಮಾಡುವುದು ಸಾಧ್ಯವಾದರೆ ಅದು ಉತ್ತಮ ಮಾರ್ಗ ಎಂಬ ನಿಲುವನ್ನು ಸ್ಪಷ್ಟಪಡಿಸುತ್ತದೆ.

ಹೆಣ್ಣು ಹೆಣ್ಣಾದಡೆ ಗಂಡಿನ ಸೂತಕ.
ಗಂಡು ಗಂಡಾದಡೆ ಹೆಣ್ಣಿನ ಸೂತಕ.
ಮನದ ಸೂತಕ ಹಿಂಗಿದಡೆ ತನುವಿನ ಸೂತಕಕ್ಕೆ ತೆರಹುಂಟೆ?
ಅಯ್ಯಾ, ಮೊದಲಿಲ್ಲದ ಸೂತಕಕ್ಕೆ ಮರುಳಾಯಿತ್ತು ಜಗವೆಲ್ಲ.
ಎನ್ನ ದೇವ ಚೆನ್ನಮಲ್ಲಿಕಾರ್ಜುನನೆಂಬ ಗರುವಂಗೆ
ಜಗವೆಲ್ಲಾ ಹೆಣ್ಣು ನೋಡಾ ಅಯ್ಯಾ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-151 / ವಚನ ಸಂಖ್ಯೆ-426)

ದೇಹದ ಮಿತಿಯನ್ನು ಮೀರಿದಾಗ ದೇಹದ ಉಪಾಧಿ ಅಥವಾ ಅಸ್ತಿತ್ವ ಮುಖ್ಯವಾಗುವುದಿಲ್ಲ ಎಂಬುದನ್ನು ಬದುಕಿ ತೋರಿದ ಅಕ್ಕನವರು, ದೇಹದ ಬಗ್ಗೆ ಯಾವುದೆ ಕಟು ಅಥವಾ ಹೀನ ಭಾವವಿಲ್ಲದೆ ಅಸಂಪೃಕ್ತವಾಗಿ ಮಾತಾಡಬಲ್ಲ ಮೇಲ್ಮೆ ಸಾಧಿಸಿದ್ದರು.

ನಾಣಮರೆಯ ನೂಲು ಸಡಿಲಲು
ನಾಚುವರು ನೋಡಾ ಗಂಡು ಹೆಣ್ಣೆಂಬ ಜಾತಿಗಳು.
ಪ್ರಾಣದೊಡೆಯ ಜಗದೊಳಗೆ ಮುಳ್ಳುರ ತೆರಹಿಲ್ಲದಿರಲು
ದೇವರ ಮುಂದೆ ನಾಚಲೆಡೆಯುಂಟೆ?
ಚೆನ್ನಮಲ್ಲಿಕಾರ್ಜುನ ಜಗವೆಲ್ಲ ಕಣ್ಣಾಗಿ ನೋಡುತ್ತಿರಲು
ಮುಚ್ಚಿ ಮರಸುವ ಠಾವಾವುದು ಹೇಳಯ್ಯಾ?
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-86 / ವಚನ ಸಂಖ್ಯೆ-246)

ತನ್ನ ಶಿವಪರವಶ ವಿಕಳಾವಸ್ಥೆಗೆ “ಮರೆಯ ನೂಲು ಸರಿಯೆ” ಎಂದೂ ಪ್ರಶ್ನಿಸಿಕೊಂಡಿದ್ದಾರೆ.

ಕೈ ಸಿರಿಯ ದಂಡವ ಕೊಳಬಹುದಲ್ಲದೆ,
ಮೈಸಿರಿಯ ದಂಡವ ಕೊಳಲುಂಟೆ?
ಉಟ್ಟಂತಹ ಉಡಿಗೆ ತೊಡಿಗೆಯನೆಲ್ಲ ಸೆಳೆದುಕೊಳಬಹುದಲ್ಲದೆ,
ಮುಚ್ಚಿರ್ದ ಮುಸುಕಿರ್ದ ನಿರ್ವಾಣವ ಸೆಳೆದುಕೊಳಬಹುದೆ?
ಚೆನ್ನಮಲ್ಲಿಕಾರ್ಜುನದೇವರ ಬೆಳಗನುಟ್ಟು ಲಜ್ಜೆಗೆಟ್ಟವಳಿಗೆ
ಉಡುಗೆ ತೊಡುಗೆಯ ಹಂಗೇಕೋ ಮರುಳೆ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-63 / ವಚನ ಸಂಖ್ಯೆ-179)

ಹರನೆ ನೀನೆನಗೆ ಗಂಡನಾಗಬೇಕೆಂದು
ಅನಂತಕಾಲ ತಪಸ್ಸಿದ್ದೆ ನೋಡಾ.
ಹಸೆಯಮೇಲಣ ಮಾತ ಬೆಸಗೊಳಲಟ್ಟಿದಡೆ,
ಶಶಿಧರನ ಹತ್ತಿರಕೆ ಕಳುಹಿದರೆಮ್ಮವರು.
ಭಸ್ಮವನೆ ಹೂಸಿ, ಕಂಕಣವನೆ ಕಟ್ಟಿದರು
ಚೆನ್ನಮಲ್ಲಿಕಾರ್ಜುನ ತನಗೆ ನಾನಾಗಬೇಕೆಂದ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-144 / ವಚನ ಸಂಖ್ಯೆ-407)

ಎನ್ನುವ ಮಹಾದೇವಿಯನವರ ಹಂಬಲವು ಮುಂದೆ ತೀವ್ರತರವಾದ ಅಪೇಕ್ಷೆ, ಅನುರಕ್ತಿಯಾಗಿ ಬೆಳೆಯುತ್ತ ಗಟ್ಟಿಗೊಳ್ಳುತ್ತ ಹೋಗುವುದು ಇನ್ನೊಂದು ಹಂತದ ಬೆಳವಣಿಗೆ.

ತನ್ನ ಸಾಧನೆಯ ಹಾದಿಯಲ್ಲಿ ಎದುರಾಗುವ ಲೌಕಿಕ ಅಡೆತಡೆಗಳನ್ನು- ಕೌಶಿಕನೊಂದಿಗಿನ ಮದುವೆ ಮೊದಲ್ಗೊಂಡು, ಅವನಂಥ ಅನ್ಯ ಪುರುಷರು ಅವಳನ್ನು ಹೊಂದಲು ಕೈ ಚಾಚುವುದನ್ನು ತಾಳಲಾಗದೆ ಅಕ್ಕ ಅವರಿಂದ ತನ್ನನ್ನು ಪಾರುಗಣಿಸಲು ತನ್ನ ಗಂಡ ಚೆನ್ನಮಲ್ಲಿಕಾರ್ಜುನನೇ ಸಮರ್ಥ ಎಂದು ನಂಬಿ ನಚ್ಚಿದ್ದಾರೆ.

ವೃಷಭನ ಹಿಂದೆ ಪಶುವಾನು ಬಂದೆನು;
ನಂಬಿ ನಚ್ಚಿ ಪಶುವಾನುಬಂದೆನು.
ಸಾಕಿ ಸಲಹಿಹನೆಂದು ಸಲೆ ನಚ್ಚಿ ಬಂದೆನು.
ಒಲಿದಹ ಒಲಿದಹನೆಂದು ಬಳಿಯಲ್ಲಿ ಬಂದೆನು.
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮ ನಂಬಿ ಬಂದ ಹೆಂಗೂಸ ಹಿಂದೊಬ್ಬರೆಳದೊಯ್ದರೆ
ಎಂತು ಸೈರಿಸಿದೆ ಹೇಳಾ, ಎನ್ನ ದೇವರದೇವಾ?
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-128 / ವಚನ ಸಂಖ್ಯೆ-367)

ನಿಮ್ಮ ನಂಬಿ ಬಂದ ಹೆಂಗೂಸ ಹಿಂದೊಬ್ಬರೆಳೆದೊಯಿದರೆ ಎಂತು ಸೈರಿಸಿದೆ ಹೇಳಾ ಎನ್ನ ದೇವರ ದೇವಾ ಎಂದು ಕೇಳುತ್ತಾರೆ ಮಹಾದೇವಿಯಕ್ಕನವರು.

ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವಾ.
ಏರಿಲ್ಲದ ಗಾಯದಲ್ಲಿ ನೊಂದೆನವ್ವಾ.
ಸುಖವಿಲ್ಲದೆ ಧಾವತಿಗೊಂಡೆನವ್ವಾ.
ಚೆನ್ನಮಲ್ಲಿಕಾರ್ಜುನದೇವಂಗೊಲಿದು
ಬಾರದ ಭವಂಗಳಲ್ಲಿ ಬಂದೆನವ್ವಾ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-60 / ವಚನ ಸಂಖ್ಯೆ-166)

ನಿಮಗೆತ್ತಿದ ಕೈಯ ಅನ್ಯರು ಹಿಡಿದರೆ ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆ ಕಾಣಯ್ಯ ಎನ್ನುತ್ತಾರೆ.

ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟಿ ಬೆಳೆದ ಮಹಾದೇವಿಯಕ್ಕನವರು ಸಾಮಾಜಿಕವಾದ ಹತ್ತು ಹಲವು ಕಂದಾಚಾರ ಕಟ್ಟಳೆಗಳ ವಿರುದ್ಧ ಸೆಣೆಸಬೇಕಿತ್ತು. ಇದು ಬಹಿರಂಗದ ಹೋರಾಟವಾದರೆ ಅಂತರಂಗದ ಭಾವನಾತ್ಮಕ ಹಾಗೂ ಐಂದ್ರಿಕ ಅರಿಷಡ್ವರ್ಗಗಳಿಗೂ ಮುಖಾಮುಖಿಯಾಗಬೇಕಿತ್ತು. ದೇಹ-ಮನಸ್ಸುಗಳ ನಡುವಿನ ಆಂತರಿಕ ತಾಕಲಾಟವನ್ನು ಜಯಿಸಿಯೇ ಅಂತರಂಗ ಬಹಿರಂಗ ಶುದ್ಧಿ ಹೊಂದಬೇಕಿತ್ತು. ಅದಕ್ಕಾಗಿ ಅಕ್ಕ ತನ್ನ ಪಾರಮಾರ್ಥಿಕ ನಡೆಯಲ್ಲಿ ಸವಾಲಾಗಿರುವ ಹಲವು ನೆಲೆಗಳಲ್ಲಿ ಮೊದಲು ತನ್ನ ವೈಯಕ್ತಿಕ ನೆಲೆಯನ್ನೇ ಮಥಿಸುತ್ತಾರೆ.

ವಿಷಯದ ಸುಖ ವಿಷವೆಂದರಿಯದ ಮರುಳೆ,
ವಿಷಯಕ್ಕೆ ಅಂಗವಿಸದಿರಾ.
ವಿಷಯದಿಂದ ಕೆಡನೆ ರಾವಣನು?
ವಿಷಯದಿಂದ ಕೆಡನೆ ದೇವೇಂದ್ರನು?
ವಿಷಯದಿಂದಾರು ಕೆಡರು ಮರುಳೆ?
ವಿಷಯ ನಿರ್ವಿಷಯವಾಯಿತ್ತೆನಗೆ ನಿನ್ನಲ್ಲಿ.
ಚೆನ್ನಮಲ್ಲಿಕಾರ್ಜುನಂಗೆ ಒಲಿದವಳ ನೀನಪ್ಪಿಹೆನೆಂದಡೆ
ಒಣಗಿದ ಮರನಪ್ಪುವಂತೆ ಕಾಣಾ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-128 / ವಚನ ಸಂಖ್ಯೆ-366)

ಲೌಕಿಕ ಸುಖಾಕಾಂಕ್ಷೆ, ಇಂದ್ರಿಯ ಲಾಲಸೆಗಳು ಮನುಷ್ಯ ಮುಖಾಮುಖಿಯಾಗಿ, ದುಷ್ಟ ಶಕ್ತಿಯಾಗಿ ತನ್ನನ್ನು ಕಾಡುವುದನ್ನು, ಚೋದಿಸುವುದನ್ನು ಹಲವು ವಚನಗಳಲ್ಲಿ ಅವಳು ಹೇಳುತ್ತಾರೆ. ಅವುಗಳನ್ನು ‘ಮರುಳು’ ಎಂದಿದ್ದಾರೆ.

ಹಿಡಿಯದಿರು ತಡೆಯದಿರು ಬಿಡುಬಿಡು ಕೈಯ ಸೆರಗ,
ಭಾಷೆಯ ಬರೆದುಕೊಟ್ಟು ಸತ್ಯಕ್ಕೆ ತಪ್ಪಿದರೆ
ಅಘೋರ ನರಕವೆಂದರಿಯಾ?
ಚೆನ್ನಮಲ್ಲಿಕರ್ಜುನನ ಕೈವಿಡಿದ ಸತಿಯ ಮುಟ್ಟದರೆ
ಕೆಡುವಡ ಕಾಣಾ ಮರುಳೆ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-148 / ವಚನ ಸಂಖ್ಯೆ-419)

ಹಸಿವೇ ನೀನು ನಿಲ್ಲು ನಿಲ್ಲು,
ತೃಷೆಯೇ ನೀನು ನಿಲ್ಲು ನಿಲ್ಲು,
ನಿದ್ರೆಯೇ ನೀನು ನಿಲ್ಲು ನಿಲ್ಲು,
ಕಾಮವೇ ನೀನು ನಿಲ್ಲು ನಿಲ್ಲು,
ಕ್ರೋಧವೇ ನೀನು ನಿಲ್ಲು ನಿಲ್ಲು,
ಮೋಹವೇ ನೀನು ನಿಲ್ಲು ನಿಲ್ಲು,
ಲೋಭವೇ ನೀನು ನಿಲ್ಲು ನಿಲ್ಲು,
ಮದವೇ ನೀನು ನಿಲ್ಲು ನಿಲ್ಲು,
ಮಚ್ಚರವೆ ನೀನು ನಿಲ್ಲು ನಿಲ್ಲು
ಸಚರಾಚರವೇ ನೀನು ನಿಲ್ಲು ನಿಲ್ಲು,
ನಾನು ಚೆನ್ನಮಲ್ಲಿಕಾರ್ಜುನದೇವರ
ಅವಸರದ ಓಲೆಯನೊಯ್ಯುತ್ತಲಿದ್ದೇನೆ ಶರಣಾರ್ಥಿ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-146 / ವಚನ ಸಂಖ್ಯೆ-412)

ತನ್ನ ಮನಃಶಕ್ತಿಯಿಂದಲೇ ಸಚರಾಚರಗಳನ್ನು ತಡೆದು ನಿಲ್ಲಿಸಬಲ್ಲವಳು ಅವಳು. ‘ನಿಲ್ಲು ನಿಲ್ಲು’ ಎಂದು ಹೇಳುವಲ್ಲಿ ಚೆಂದದ ನಾಟಕೀಯತೆ ಅನುರಣನಗೊಂಡಿದೆ.

ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ
ತನ್ನ ನೂಲು ತನ್ನನೆ ಸುತ್ತಿ ಸಾವಂತೆ,
ಮನಬಂದುದನು ಬಯಸಿ ಬೇವುತ್ತಿದ್ದೇನಯ್ಯಾ.
ಎನ್ನ ಮನದ ದುರಾಶೆಯ ಮಾಣಿಸಿ ನಿಮ್ಮತ್ತ ತೋರಾ
ಚೆನ್ನಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-82 / ವಚನ ಸಂಖ್ಯೆ-231)

ರೇಷ್ಮೆ ಹುಳು ತನ್ನ ಸ್ನೇಹ ಅಂದರೆ ದೇಹದಿಂದ ಸೂಸುವ ದ್ರವದ ಎಳೆಯಿಂದ ಗೂಡು ಕಟ್ಟಿಕೊಳ್ಳುತ್ತದೆ. ಅದರಲ್ಲಿ ಸಿಲುಕಿ ಸಾಯುತ್ತದೆ. ಅಂಥ ತೆರಣಿ ಹುಳುವಿಗೆ ತನ್ನನ್ನು ಹೋಲಿಸಿಕೊಳ್ಳುವ ಮಹಾದೇವಿಯಕ್ಕನವರು “ಎನ್ನ ಮನದ ದುರಾಸೆಯ ಮಾಣಿಸಿ ನಿಮ್ಮತ್ತ ತೋರಾ” ಎಂದು ಪರಶಿವನಲ್ಲಿ ಮೊರೆಯಿಡುತ್ತಾರೆ. ತನ್ನಂತೆ ಇನ್ನಿತರ ಭಕ್ತರೂ ಮನಬಂದಂತೆ ಲೌಕಿಕ ಮೋಹಕ್ಕೆ ಬಲಿಯಾಗುವ ಅಸಹಾಯಕ ಸ್ಥಿತಿಯನ್ನು ಅಕ್ಕ ಸಾರ್ಥಕ ಪ್ರತಿಮೆಯ ಮೂಲಕ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ.

ಬಿಟ್ಟೆನೆಂದಡೆ ಬಿಡದೀ ಮಾಯೆ,
ಬಿಡದಿದ್ದಡೆ ಬೆಂಬತ್ತಿತ್ತು ಮಾಯೆ.
ಯೋಗಿಗೆ ಯೋಗಿಣಿಯಾಯಿತ್ತು ಮಾಯೆ,
ಸವಣಂಗೆ ಸವಣಿಯಾಯಿತ್ತು ಮಾಯೆ.
ಯತಿಗೆ ಪರಾಕಿಯಾಯಿತ್ತು ಮಾಯೆ.
ನಿನ್ನ ಮಾಯೆಗೆ ನಾನಂಜುವಳಲ್ಲ,
ಚೆನ್ನಮಲ್ಲಿಕಾರ್ಜುನಾ, ನಿಮ್ಮಾಣೆ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-104 / ವಚನ ಸಂಖ್ಯೆ-298)

ಯೋಗಿ, ಸವಣ, ಯತಿ – ಎಂಥವರನ್ನೂ ಕಾಡದೇ ಬಿಡದ ಮಾಯೆಯ ಆಟ ನನ್ನೆದುರು ನಡೆಯದು, ಎಂಥ ವ್ಯಾಮೋಹಗಳಿಗೂ ನಾನು ಅಂಜುವವಳಲ್ಲ ಎಂದು ಹೇಳುವಲ್ಲಿ ಅವರ ದೃಢ ಭಕ್ತಿ, ಆತ್ಮವಿಶ್ವಾಸ ಎದ್ದು ತೋರುತ್ತದೆ.

ಲೌಕಿಕದ ಸಂಬಂಧವನ್ನು ಹಲವು ತೆರದಲ್ಲಿ ನಿರಾಕರಿಸುವ, ಬಿಡಿಸಿಕೊಳ್ಳುವ ಪ್ರಯತ್ನದಲ್ಲಿ ಯಶಸ್ವಿಯಾದ ಮಹಾದೇವಿಯಕ್ಕ ತನ್ನ ತನು ಮನ ಪ್ರಾಣ ಸಕಲವನ್ನೂ ಚೆನ್ನಮಲ್ಲಿಕಾರ್ಜುನನಿಗೆ ಅರ್ಪಿಸಿದ ನಂತರ, ತನ್ನ ದೇಹ ನಿಷ್ಪ್ರಾಣ, ನಿಸ್ಸಾರ ಗೊಳ್ಳುವುದರಿಂದ ಪ್ರಾಪಂಚಿಕ ನೆಲೆಯಲ್ಲಿ ಅಂಥ ಶರೀರಕ್ಕೆ ಏನಾದರೇನು ಎಂಬ ತಾತ್ವಿಕತೆ ಹೊಂದುತ್ತಾರೆ.

ಹಣ್ಣ ಮೆದ್ದ ಬಳಿಕ ಆ ಮರನನಾರು ತರಿದಡೇನು?
ಹೆಣ್ಣ ಬಿಟ್ಟ ಬಳಿಕ ಆಕೆಯನಾರು ಕೂಡಿದಡೇನು?
ಮಣ್ಣ ಬಿಟ್ಟ ಬಳಿಕ ಆ ಕೆಯ್ಯನಾರು ಉತ್ತಡೇನು?
ಚೆನ್ನಮಲ್ಲಿಕಾರ್ಜುನನರಿಯದ ಬಳಿಕ
ಆ ಕಾಯವ ನಾಯಿ ತಿಂದಡೇನು,
ನೀರು ಕುಡಿದಡೇನು?
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-144 / ವಚನ ಸಂಖ್ಯೆ-406)

ಆತ್ಮಸಂಗಾತಿ ಚೆನ್ನಮಲ್ಲಿಕಾರ್ಜುನನರಿದ ಬಳಿಕ ಆ ಕಾಯವ ನಾಯಿ ತಿಂದರೇನು, ನೀರ ಕುಡಿದರೇನು? ತಾನು ಲಿಂಗಾರ್ಪಿತವಾದ ನಂತರ ದೇಹಕ್ಕೆ ಏನು ಒದಗಿ ಬಂದರೆ ಏನು? ಅದರ ಪರಿವೆ ತನಗೆ ಬೇಕಿಲ್ಲ ಎಂಬ ಕಠೋರ ನಿಲುವು ಮಹಾದೇವಿಯಕ್ಕನವರದು. ಇಂಥ ಸಮಸ್ಥಿತಿಯನ್ನು ಸಾಧಿಸಲು ಅವರು ಎಂಥ ಹೋರಾಟ ನಡೆಸಿರಬಹುದು ಎಂಬುದನ್ನು ಊಹಿಸಲಾಗದು.

ಹೆಣ್ಣೊಬ್ಬಳು ಸಾಂಸಾರಿಕ ಹಾಗೂ ಪ್ರಾಪಂಚಿಕ ಜೀವನದಿಂದ ದೂರವಾಗಿ, ಸ್ವ-ಇಚ್ಛೆಯಿಂದ ಅಧ್ಯಾತ್ಮದ ಕಠಿಣಾತಿ ಕಠಿಣ ಮಾರ್ಗವನ್ನು ಕ್ರಮಿಸಿ, ಸಾಧನೆಗೈದು ವಿರಾಗಿಣಿಯಾಗಿದ್ದನ್ನು ಸಮಾಜ ಅಪನಂಬಿಕೆಯಿಂದ ಕಾಣುತ್ತದೆ. ಸಂಶಯದ ಕುತ್ಸಿತ ನಡವಳಿಕೆಯಿಂದ ಟೀಕೆ, ನಿಂದನೆ, ಅಪಹಾಸ್ಯ ಮಾಡುತ್ತದೆ. ತಿರಸ್ಕಾರ ತೋರುತ್ತದೆ. ಆ ನಂಜು ನುಂಗಿದ ಮಹಾದೇವಿಯಕ್ಕನವರು ಜನಾಪವಾದಗಳನ್ನು ಮೆಟ್ಟಿ, ಅದನ್ನು ಸ್ವೀಕರಿಸಿದ ರೀತಿ ಮತ್ತು ಅವರ ಪ್ರತಿಕ್ರಿಯೆ ಅನ್ಯಾದೃಶವಾಗಿವೆ.

ಬಟ್ಟಿಹ ಮೊಲೆಯ ಭರದ ಜವ್ವನದ
ಚೆಲುವ ಕಂಡು ಬಂದಿರಣ್ಣಾ
ಅಣ್ಣಾ, ನಾನು ಹೆಂಗೂಸಲ್ಲ;
ಅಣ್ಣಾ, ನಾನು ಸೂಳೆಯಲ್ಲ
ಅಣ್ಣಾ, ಮತ್ತೆ ನನ್ನ ಕಂಡು ಕಂಡು
ಆರೆಂದು ಬಂದಿರಣ್ಣಾ?
ಚೆನ್ನಮಲ್ಲಿಕಾರ್ಜುನನಲ್ಲದ ಮಿಕ್ಕಿನ ಪರಪುರುಷನು
ನಮಗಾಗದ ಮೋರೆ ನೋಡಣ್ಣ!
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-100 / ವಚನ ಸಂಖ್ಯೆ-287)

ಎಂದು ತಿವಿಯುತ್ತಾಳೆ.

ಹೆಣ್ಣಿನ ದೇಹವನ್ನು ಭೋಗದ ವಸ್ತುವನ್ನಾಗಿ ನೋಡುವ ಪುರುಷ ದೃಷ್ಟಿಯನ್ನು ಅವಳು ಹೀಗಳೆಯುತ್ತಾಳೆ:

ನೋಡುವ ಕಂಗಳಿಗೆ ರೂಪಿಂಬಾಗಿರಲು
ನೀವು ಮನ ನಾಚದೆ ಬಂದಿರಣ್ಣಾ.
ಕೇಳಿದ ಶ್ರೋತ್ರಸೊಗಸಿಗೆ ನೀವು ಮರುಳಾಗಿ ಬಂದಿರಣ್ಣಾ.
ನಾರಿಯೆಂಬ ರೂಪಿಂಗೆ ನೀವು ಒಲಿದು ಬಂದಿರಣ್ಣಾ.
ಮೂತ್ರವು ಬಿಂದು ಒಸರುವ ನಾಳವೆಂದು ಕಂಗಾಣದೆ ಮುಂದುಗೆಟ್ಟು ಬಂದಿರಣ್ಣಾ.
ಬುದ್ಧಿಗೇಡಿತನದಿಂದ ಪರಮಾರ್ಥದ ಸುಖವ ಹೋಗಲಾಡಿಸಿಕೊಂಡು
ಇದಾವ ಕಾರಣವೆಂದರಿಯದೆ,
ನೀವು ನರಕಹೇತುವೆಂದರಿತು ಮನ ಹೇಸದೆ ಬಂದಿರಣ್ಣಾ.
ಚೆನ್ನಮಲ್ಲಿಕಾರ್ಜುನನಲ್ಲದೆ,
ಮಿಕ್ಕಿಹ ಪುರುಷರೆನಗೆ ಸಹೋದರರು.
ಛೀ ಹೋಗಾ ಮರುಳೆ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-94 / ವಚನ ಸಂಖ್ಯೆ-267)

“ಛೀ” ಎನ್ನುವ ಒಂದಕ್ಷರ ಪುರುಷರ ಕಾಮುಕ ಮನೋಭಾವದ ಬಗೆಗಿನ ಅವರ ಹೇವರಿಕೆಯನ್ನು ವ್ಯಕ್ತಪಡಿಸುತ್ತದೆ. ಲೋಕದೃಷ್ಟಿಯನ್ನು ತಿದ್ದುವ ಪ್ರಯತ್ನವೂ ಇಲ್ಲಿ ಕಾಣುತ್ತದೆ.

ಆರಂಭದ ಹಂತದಲ್ಲಿ “ಪಂಚೇಂದ್ರಿಯಗಳ ಉರವಣಿ” ಯ ಜೊತೆ ಸೆಣೆಸುವಾಗ ಅವಳ ಅಂತರಂಗದ ತೊಳಲಾಟದಲ್ಲಿ ಅಸಹಾಯಕತೆ, ಆರ್ತತೆಗಳು ಕಂಡುಬಂದರೆ, ನಂತರದಲ್ಲಿ ಆತ್ಮವಿಶ್ವಾಸ, ಸಂಕಲ್ಪದ ದೃಢತೆ, ಛಲಗಳು ಕಂಡುಬರುತ್ತವೆ.

ಎರೆಯಂತೆ ಕರಕರಗಿ, ಮಳಲಂತೆ ಜರಿಜರಿದು,
ಕನಸಿನಲ್ಲಿ ಕಳವಳಿಸಿ, ಆನು ಬೆರಗಾದೆ.
ಆವಿಗೆಯ ಕಿಚ್ಚಿನಂತೆ ಸುಳಿಸುಳಿದು ಬೆಂದೆ.
ಆಪತ್ತಿಗೆ ಸಖಿಯರನಾರನೂ ಕಾಣೆ.
ಅರಸಿ ಕಾಣದ ತನುವ, ಬೆರಸಿ ಕೂಡದ ಸುಖವ,
ಎನಗೆ ನೀ ಕರುಣಿಸಾ, ಚೆನ್ನಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-42 / ವಚನ ಸಂಖ್ಯೆ-106)

ಆರೂ ಇಲ್ಲದವಳೆಂದು ಆಳಿಗೊಳಲುಬೇಡ ಕಂಡೆಯಾ?
ಏನ ಮಾಡಿದಡೂ ಆನಂಜುವಳಲ್ಲ.
ತರಗೆಲೆಯ ಮೆಲಿದು ಆನಿಹೆನು, ಸರಿಯ ಮೇಲೊರಗಿ ಆನಿಹೆನು.
ಚೆನ್ನಮಲ್ಲಿಕಾರ್ಜುನಯ್ಯಾ, ಕರ ಕೇಡನೊಡ್ಡಿದಡೆ
ಒಡಲನು ಪ್ರಾಣವನು ನಿಮಗರ್ಪಿಸಿ ಶುದ್ಧಳಹೆನು.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-29 / ವಚನ ಸಂಖ್ಯೆ-63)

ಯಾವುದಕ್ಕೂ ಯಾರಿಗೂ ಬೆದರದ ನಿರ್ಭೀತ ನಿಲುವು ಹೊಂದಿದ ಮಹಾದೇವಿಯಕ್ಕನವರು ಹೆಣ್ಣಿನ ಜೀವಪರ ಆಶಯಗಳಿಗೆ ಒಂದು ಮೂರ್ತಸ್ವರೂಪವಾಗಿದ್ದರು. ಜೀವನದ ಕಷ್ಟ-ಕಾರ್ಪಣ್ಯಗಳಿಗೆ ಅವರು ಎಂದೂ ಬೆನ್ನು ತೋರಲಿಲ್ಲ. ಪಲಾಯನ ಮಾಡಲಿಲ್ಲ. ಎಲ್ಲ ಜಂಜಾಟಗಳನ್ನು ನಿಭಾಯಿಸಿಯೂ ತನ್ನ ಸಾಧನೆಯ ದಾರಿಯನ್ನು ಪ್ರಶಸ್ತಗೊಳಿಸಿಕೊಂಡರು. ಬದುಕಿನ ಸಂಕಷ್ಟ, ವಿಷಮತೆಗಳನ್ನು ಸ್ವೀಕರಿಸಿ, ನಿರ್ವಹಿಸಿಯೇ ಸಮಾಧಾನದ ಮಾಗಿದ ಮನಸ್ಥಿತಿಯನ್ನು ತಲುಪಿದರು.

ಬೆಟ್ಟದ ಮೇಲೊಂದು ಮನೆಯ ಮಾಡಿ,
ಮೃಗಗಳಿಗಂಜಿದಡೆಂತಯ್ಯಾ?
ಸಮುದ್ರದ ತಡಿಯಲೊಂದು ಮನೆಯ ಮಾಡಿ,
ನೊರೆತೆರೆಗಳಿಗಂಜಿದಡೆಂತಯ್ಯಾ?
ಸಂತೆಯೊಳಗೊಂದು ಮನೆಯ ಮಾಡಿ,
ಶಬ್ದಕ್ಕೆ ನಾಚಿದಡೆಂತಯ್ಯಾ?
ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯಾ,
ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದಡೆ
ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-106 / ವಚನ ಸಂಖ್ಯೆ-302)

ಮುಂಗೈಯಲ್ಲಿ ವೀರಗಂಕಣವಿಕ್ಕಿ,
ಮುಂಗಾಲಲ್ಲಿ ತೊಡರು ಬಾವುಲಿಯ ಕಟ್ಟಿದೆ.
ಗಂಡುಡಿಗೆಯನುಟ್ಟೆನೆಂಬ ಮಾತಿನ ಬಿರಿದ ನುಂಗಿದೆನು.
ಚೆನ್ನಮಲ್ಲಿಕಾರ್ಜುನಾ,
ನಿಮ್ಮಾಣೆಗೆ ಊಣೆಯವ ತಂದೆನಾದಡೆ,
ನಿಮ್ಮ ತೊತ್ತಿನ ಮಗಳಲ್ಲಯ್ಯಾ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-117 / ವಚನ ಸಂಖ್ಯೆ-333)

ಮಹಾದೇವಿಯಕ್ಕನವರು ಏಕಾಂಗಿಯಾಗಿ ಚೆನ್ನಮಲ್ಲಿಕಾರ್ಜುನನನ್ನು ಅರಸಿಕೊಂಡು ತನ್ನ ಗಮ್ಯಸ್ಥಾನ ಶ್ರೀಶೈಲದ ಹಾದಿಯಲ್ಲಿ ಊರೂರು ಅಲೆಯುತ್ತಾರೆ. ಕಾಡು ಮೇಡು, ನದಿ ಬೆಟ್ಟ ಸುತ್ತುತ್ತಾರೆ. ಹುಡುಕಾಟದ ತನ್ನ ಅವಧೂತ ಮಾರ್ಗದಲ್ಲಿ,

ಹಸಿವಾದಡೆ ಊರೊಳಗೆ ಭಿಕ್ಷಾನ್ನಗಳುಂಟು.
ತೃಷೆಯಾದಡೆ ಕೆರೆ ಹಳ್ಳ ಬಾವಿಗಳುಂಟು.
ಅಂಗಶೀತಕ್ಕೆ ಬೀಸಾಟ ಅರಿವೆಗಳುಂಟು.
ಶಯನಕ್ಕೆ ಹಾಳು ದೇಗುಲಗಳುಂಟು.
ಚೆನ್ನಮಲ್ಲಿಕಾರ್ಜುನಯ್ಯಾ,
ಆತ್ಮಸಂಗಾತಕ್ಕೆ ನೀನೆನಗುಂಟು.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-145 / ವಚನ ಸಂಖ್ಯೆ-409)

ಎಂಬ ನಿರಾಳತೆ ಅವಳದು. ಈ ಪಯಣದಲ್ಲಿ ಮರ, ಬಳ್ಳಿ ಹೂ, ಪಶು, ಪಕ್ಷಿ ದುಂಬಿಗಳನ್ನು ಸಂಧಿಸುವ ಮಹಾದೇವಿಯಕ್ಕ ಎಲ್ಲರನ್ನೂ ತನ್ನ ಚೆನ್ನಮಲ್ಲಿಕಾರ್ಜುನನ ಸುಳಿವು ನೀಡಿರೆಂದು ಅನುನಯದಲ್ಲಿ ಕೇಳಿಕೊಳ್ಳುತ್ತಾರೆ, ಮೊರೆಯಿಡುತ್ತಾರೆ.

ಚಿಲಿಮಿಲಿ ಎಂದು ಓದುವ ಗಿಳಿಗಳಿರಾ,
ನೀವು ಕಾಣಿರೆ, ನೀವು ಕಾಣಿರೆ.
ಸರವೆತ್ತಿ ಪಾಡುವ ಕೋಗಿಲೆಗಳಿರಾ,
ನೀವು ಕಾಣಿರೆ, ನೀವು ಕಾಣಿರೆ.
ಎರಗಿ ಬಂದಾಡುವ ತುಂಬಿಗಳಿರಾ,
ನೀವು ಕಾಣಿರೆ, ನೀವು ಕಾಣಿರೆ.
ಕೊಳನತಡಿಯೊಳಾಡುವ ಹಂಸೆಗಳಿರಾ,
ನೀವು ಕಾಣಿರೆ, ನೀವು ಕಾಣಿರೆ.
ಗಿರಿ ಗಹ್ವರದೊಳಗಾಡುವ ನವಿಲುಗಳಿರಾ,
ನೀವು ಕಾಣಿರೆ, ನೀವು ಕಾಣಿರೆ.
ಚೆನ್ನಮಲ್ಲಿಕಾರ್ಜುನನೆಲ್ಲಿದ್ದಹನೆಂದು ಹೇಳಿರೆ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-73 / ವಚನ ಸಂಖ್ಯೆ-204)

ಪ್ರಕೃತಿ ಬಗ್ಗೆ ಅವರ ನೇಹ, ಅಕ್ಕರೆ, ಅದರೊಂದಿಗೆ ಅವರು ಏಕಾಕಾರಗೊಳ್ಳುವ ಪರಿ ಅನುಪಮವಾಗಿದ್ದು ಮಾನವ ಶ್ರೇಷ್ಠ ನಡೆಗೆ ಮಾದರಿಯಾಗಿದೆ. ಯಾವ ಸೌಲಭ್ಯ, ಭದ್ರತೆಗಳೂ ಇಲ್ಲದ ಅಲೆಮಾರಿ ಯಾತ್ರೆಯನ್ನು ಪರಿವ್ರಾಜಕತೆಯನ್ನು ಅದೂ ಒಬ್ಬ ಹೆಣ್ಣಾಗಿ ಮಹಾದೇವಿಯಕ್ಕನವರು ನಿರ್ವಹಿಸಿದ ಪರಿ ಅತ್ಯಂತ ಅಮೋಘವಾದುದು. ಈ ಪಯಣದಲ್ಲಿ ಅವರ ಸಂಕಲ್ಪ, ಮನೋಬಲಗಳೇ ಅವರಿಗೆ ಪ್ರಾಣ-ಶಕ್ತಿ. “ಚೆನ್ನಮಲ್ಲಿಕಾರ್ಜುನಯ್ಯ ಆತ್ಮಸಂಗಾತಕ್ಕೆ ನೀನೆನಗುಂಟು” ಎನ್ನುವಲ್ಲಿ ಮಹಾದೇವಿಯಕ್ಕನವರು ಹೊಸ ಪರಿಕಲ್ಪನೆಯೊಂದನ್ನು ತೆರೆದಿಡುತ್ತಾರೆ. ಅದುವರೆಗೆ ಪಾರಮಾರ್ಥಿಕ ಸಾಧನೆಯಲ್ಲಿ ಆತ್ಮ-ಪರಮಾತ್ಮಗಳ ಸಂಬಂಧ “ಶರಣಸತಿ-ಲಿಂಗಪತಿ” ನಡೆಯಾಗಿತ್ತು. ಈ ತತ್ವವನ್ನು ಸರ್ವಾರ್ಥದಲ್ಲಿ ಸಾಕ್ಷಾತ್ಕಾರ ಮಾಡಿಕೊಂಡ ಮಹಾದೇವಿಯಕ್ಕನವರು ಸಖತ್ವದ, ಆತ್ಮಸಂಗಾತದ ಮತ್ತೊಂದು ವಿಭಿನ್ನ ನೆಲೆಯನ್ನು ದರ್ಶಿಸುವುದು ತುಂಬ ಆಪ್ತವೆನಿಸುತ್ತದೆ.

ಮಹಾದೇವಿಯಕ್ಕನವರ ಇಷ್ಟದೈವ ಸ್ವರೂಪದ ವರ್ಣನೆ, ಆ ಬಗ್ಗೆ ಅವರ ಅಂತರಂಗದ ತೀವ್ರತರ ಭಾವನೆ, ಹಂಬಲ, ಅನುರಕ್ತಿಗಳು ಅವರ ವಚನಗಳಲ್ಲಿ ಹೊಡೆಯಾಡಿವೆ. ಚೆನ್ನಮಲ್ಲಿಕಾರ್ಜುನನ ದಿವ್ಯ ಸೊಬಗನ್ನು ದರ್ಶಿಸುವಲ್ಲಿ ಅವರದು ತಣಿಯದ ಉತ್ಸಾಹ.

ಹೊಳೆವ ಕೆಂಜೆಡೆಯ ಮೇಲೆ ಎಳೆವೆಳದಿಂಗಳು,
ಫಣಿಮಣಿ ಕರ್ಣಕುಂಡಲ ನೋಡವ್ವಾ;
ರುಂಡಮಾಲೆಯ ಕೊರಳವನ ಕಂಡಡೆ,
ಒಮ್ಮೆ ಬರಹೇಳವ್ವಾ?
ಗೋವಿಂದನ ನಯನ ಉಂಗುಟದ ಮೇಲಿಪ್ಪುದು,
ಚೆನ್ನಮಲ್ಲಿಕಾರ್ಜುನದೇವನ ಕುರುಹವ್ವಾ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-152 / ವಚನ ಸಂಖ್ಯೆ-430)

ಎಲ್ಲರ ಗಂಡರ ಶೃಂಗಾರದ ಪರಿಯಲ್ಲ,
ಎನ್ನ ನಲ್ಲನ ಶೃಂಗಾರದ ಪರಿ ಬೇರೆ.
ಶಿರದಲ್ಲಿ ಕಂಕಣ, ಉರದಮೇಲಂದುಗೆ, ಕಿವಿಯಲ್ಲಿ ಹಾವುಗೆ,
ಉಭಯ ಸಿರಿವಂತನ ಮೊಳಕಾಲಲ್ಲಿ ಜಳವಟ್ಟಿಗೆ.
ಉಂಗುಟದಲ್ಲಿ ಮೂಗುತಿ-ಇದು ಜಾಣರಿಗೆ ಜಗುಳಿಕೆ.
ಚೆನ್ನಮಲ್ಲಿಕಾರ್ಜುನಯ್ಯನ ಶೃಂಗಾರದ ಪರಿ ಬೇರೆ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-44 / ವಚನ ಸಂಖ್ಯೆ-113)


ಕಂಗಳೊಳಗೆ ತೊಳಗಿ ಬೆಳಗುವ
ದಿವ್ಯ ರೂಪವ ಕಂಡು ಮೈಮರೆದೆನವ್ವಾ.
ಮಣಿಮುಕುಟದ ಫಣಿಕಂಕಣದ ನಗೆಮೊಗದ
ಸುಲಿಪಲ್ಲ ಸೊಬಗನ ಕಂಡು ಮನಸೋತೆನವ್ವಾ.
ಇಂತಾಗಿ ಚೆನ್ನಮಲ್ಲಿಕಾರ್ಜುನನೆನ್ನ ಮದುವಣಿಗ,
ಆನು ಮದುವಣಿಗಿ ಕೇಳಾ ತಾಯೆ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-44 / ವಚನ ಸಂಖ್ಯೆ-113)

ತನ್ನ ದೈವದಲ್ಲಿ ಐಕ್ಯಗೊಳ್ಳಲು ಅವರು ಪರಿತಪಿಸುವಲ್ಲಿ ದೀನತೆ, ಆರ್ತತೆ, ನೋವು, ವ್ಯಥೆಗಳು ಮಡುಗಟ್ಟಿವೆ. ಪ್ರಾಪಂಚಿಕ ಸ್ಥರದಲ್ಲಿ ಹೆಣ್ತನವನ್ನು ನಿರಾಕರಿಸಿದ ಮಹಾದೇವಿಯಕ್ಕ ಪಾರಮಾರ್ಥಿಕ ಪಯಣದಲ್ಲಿ ತನ್ನನ್ನು ಸಂಪೂರ್ಣ ಸ್ತ್ರೀಯಾಗಿಯೇ ಪರಿಭಾವಿಸುತ್ತಾರೆ. ಸೃಷ್ಟಿಯ ಪ್ರತೀಕವಾಗಿ ಹೆಣ್ತನವನ್ನು ಒಪ್ಪಿಕೊಳ್ಳುತ್ತಾರೆ. ಹೆಣ್ಣು-ಗಂಡಿನ ಪ್ರಣಯ, ವಿರಹಗಳ ಮೂರ್ತ ಸ್ವರೂಪದಲ್ಲಿಯೇ ತಾನು ಚೆನ್ನಮಲ್ಲಿಕಾರ್ಜುನನಲ್ಲಿ ಲಿಂಗೈಕ್ಯಗೊಳ್ಳುವ, ಸಾಯುಜ್ಯದ ಅಮೂರ್ತ ಅನುಭವವನ್ನು ಶಾಬ್ದಿಕವಾಗಿ ವಚನಗಳಲ್ಲಿ ಕಟ್ಟಿಕೊಡುತ್ತಾರೆ. ಸಾಂಪ್ರದಾಯಿಕ ವಿವಾಹ ಪದ್ಧತಿಯ ಉಪಮೆ, ಪ್ರತಿಮೆಗಳನ್ನೇ ಅವರು ಬಳಸುತ್ತಾರೆ. ಸತಿ-ಪತಿ ಭಾವ ಹೊಂದಿ ತಾನು ವಧುವಾಗಿ ವರನ ನಿರೀಕ್ಷೆಯಲ್ಲಿ ಕಾಯುವುದು, ಅವನು ಕಾಣದೆ ಹೋದಾಗ ವಿರಹದ ದಳ್ಳುರಿಯಲ್ಲಿ ಬೇಯುವುದು, ಅವನು ಕಂಡಾಗ ಮಿಲನದ ಸಂಭ್ರಮ ಸಂತೃಪ್ತಿಗಳನ್ನು ತನ್ನೆಲ್ಲ ತೀವ್ರತೆಯಲ್ಲಿ ಪ್ರಕಟಿಸುತ್ತಾರೆ.

ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆಲುವಂಗೆ ನಾನೊಲಿದೆ.
ಎಡೆಯಿಲ್ಲದ ಕಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದ
ಚೆಲುವಂಗೆ ನಾನೊಲಿದೆ ಎಲೆ ಅವ್ವಗಳಿರಾ?
ಭವವಿಲ್ಲದ ಭಯವಿಲ್ಲದ
ನಿರ್ಭಯ ಚೆಲುವಂಗೊಲಿದೆ ನಾನು.
ಸೀಮೆಯಿಲ್ಲದ ನಿಸ್ಸೀಮಂಗೊಲಿದೆ ನಾನು.
ಚೆನ್ನಮಲ್ಲಿಕಾರ್ಜುನನೆಂಬ ಗಂಡಂಗೆ
ಮಿಗೆ ಮಿಗೆ ಒಲಿದೆ ಎಲೆ ಅವ್ವಗಳಿರಾ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-141 / ವಚನ ಸಂಖ್ಯೆ-394)


ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು.
ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು.
ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು.
ಅರಿವು ಕಣ್ದೆರೆಯದವರಲ್ಲಿ ಆರತಿಯನೊಲ್ಲೆಯಯ್ಯಾ ನೀನು.
ಭಾವಶುದ್ಭವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯಾ ನೀನು.
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯಾ ನೀನು.
ತ್ರಿಕರಣ ಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯಾ ನೀನು.
ಹೃದಯಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯಾ ನೀನು.
ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ
ಹೇಳಾ ಚೆನ್ನಮಲ್ಲಿಕಾರ್ಜುನಯ್ಯಾ?
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-76 / ವಚನ ಸಂಖ್ಯೆ-211)

ಕನಸಿನಲ್ಲಿ ಚೆನ್ನಮಲ್ಲಿಕಾರ್ಜುನನನ್ನು ಕಂಡ ದರ್ಶನದ ಅನುಭವವನ್ನು ತನ್ನ ಆಪ್ತಸಖಿಗೆ ಹೇಳಿಕೊಳ್ಳುವ ಧಾಟಿ ಸಹಜವೂ ಸುಂದರವೂ ಆಗಿದೆ:

ಅಕ್ಕ ಕೇಳೌ, ನಾನೊಂದು ಕನಸ ಕಂಡೆ.
ಅಕ್ಕಿ ಅಡಕೆ ಓಲೆ ತೆಂಗಿನಕಾಯ ಕಂಡೆ.
ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವನು
ಭಿಕ್ಷಕ್ಕೆ ಮನೆಗೆ ಬಂದುದ ಕಂಡೆನವ್ವಾ.
ಮಿಕ್ಕು ಮೀರಿ ಹೋಹನ ಬೆಂಬತ್ತಿ ಕೈವಿಡಿದೆನು.
ಚೆನ್ನಮಲ್ಲಿಕಾರ್ಜುನನ ಕಂಡು ಕಣ್ತೆರೆದೆನು.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-5 / ವಚನ ಸಂಖ್ಯೆ-12)

ಮಹಾದೇವಿಯಕ್ಕನವರ ಏಕದೇವೋಪಾಸನೆಯ ಸತಿವ್ರತದ ನಿಷ್ಠೆ ಅನುಪಮವಾದುದು. ಗಂಡುಗಲಿಯ ಪ್ರತೀಕದಲ್ಲಿ ಅವರ ವೀರ ನಿಷ್ಠೆಯ ಪಾರಮ್ಯನ್ನು ಗುರುತಿಸಬಹುದು:

ಮುಂಗೈಯಲ್ಲಿ ವೀರಗಂಕಣವಿಕ್ಕಿ,
ಮುಂಗಾಲಲ್ಲಿ ತೊಡರು ಬಾವುಲಿಯ ಕಟ್ಟಿದೆ.
ಗಂಡುಡಿಗೆಯನುಟ್ಟೆನೆಂಬ ಮಾತಿನ ಬಿರಿದ ನುಂಗಿದೆನು.
ಚೆನ್ನಮಲ್ಲಿಕಾರ್ಜುನಾ,
ನಿಮ್ಮಾಣೆಗೆ ಊಣೆಯವ ತಂದೆನಾದಡೆ,
ನಿಮ್ಮ ತೊತ್ತಿನ ಮಗಳಲ್ಲಯ್ಯಾ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-117 / ವಚನ ಸಂಖ್ಯೆ-333)

ಮಹಾದೇವಿಯಕ್ಕನವರು ಭವಂಗಳಲಿ ಬಸವಳಿದು ಪಾರಮಾರ್ಥಿಕ ಸಾಧನೆಯ ಹಲವು ಹಂತಗಳನ್ನು ದಾಟಿ ಮಾಗಿದ ಮನಸ್ಥಿತಿಯನ್ನು ಹೊಂದಿದ್ದು, ಅರಿವು ಸ್ವಾಯತಗೊಂಡದ್ದು ಸ್ಪಷ್ಟವಿದೆ. ಅಲೌಕಿಕ ಅನುಭವ, ಅನುಭಾವಗಳನ್ನು ಅವರು ಲೌಕಿಕವಾದ ಸಾಮಾನ್ಯ ಬಳಕೆಯಲ್ಲಿರುವ ಪದಗಳ ಮೂಲಕವೇ ಸುಂದರವಾಗಿ ಒಡಮೂಡಿಸಿದ್ದಾರೆ. ಸ್ವಗತ ಸ್ವರೂಪದ ಅವರ ವಚನಗಳಲ್ಲಿ ಸಾಮಾಜಿಕತೆ ಢಾಳವಾಗಿ ತೋರಿಬರುವುದಿಲ್ಲವಾದರೂ ಕೇಳುಗನಲ್ಲಿ ಜಾಗೃತಿ ಉಂಟುಮಾಡುವ ನಿಚ್ಚಳ ಅಂಶಗಳಿವೆ.

ಪುರುಷನ ಮುಂದೆ ಮಾಯೆ
ಸ್ತ್ರೀಯೆಂಬ ಅಭಿಮಾನವಾಗಿ ಕಾಡುವುದು.
ಸ್ತ್ರೀಯ ಮುಂದೆ ಮಾಯೆ
ಪುರುಷನೆಂಬ ಅಭಿಮಾನವಾಗಿ ಕಾಡುವುದು.
ಲೋಕವೆಂಬ ಮಾಯೆಗೆ ಶರಣಚಾರಿತ್ರ್ಯ
ಮರುಳಾಗಿ ತೋರುವುದು.
ಚೆನ್ನಮಲ್ಲಿಕಾರ್ಜುನನೊಲಿದ ಶರಣಂಗೆ
ಮಾಯೆಯಿಲ್ಲ, ಮರಹಿಲ್ಲ, ಅಭಿಮಾನವೂ ಇಲ್ಲ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-98 / ವಚನ ಸಂಖ್ಯೆ-278)

ಈ ವಚನ ಮಾಯೆಯ ಪರಿಕಲ್ಪನೆಯನ್ನು ಭಿನ್ನ ಬಗೆಯಲ್ಲಿ ನಿರ್ವಚಿಸುತ್ತದೆ. ಲೋಕದ ದೃಷ್ಟಿಯಲ್ಲಿ ಹೆಣ್ಣು, ಹೊನ್ನು ಮಣ್ಣು ಮಾಯೆ. ಇದರ ಆಚೆ ಮಹಾದೇವಿಯಕ್ಕನವರ ದೃಷ್ಟಿ ಹರಿದಿದೆ. ಗಂಡಿಗೆ ಹೆಣ್ಣು ಮಾಯೆಯಾದರೆ, ಹೆಣ್ಣಿಗೆ ಗಂಡು ಮಾಯೆ; ಅಲ್ಲದೆ, ಸಂಸಾರ ತ್ಯಾಗ ಮಾಡಿದ ನಂತರವೂ ಮಾಯೆ ಸ್ತ್ರೀಯೆಂಬ ಅಭಿಮಾನ, ಪುರುಷನೆಂಬ ಅಭಿಮಾನವಾಗಿ ಬೆನ್ನತ್ತುವುದನ್ನು ಶೋಧಿಸುತ್ತಾರೆ. ಇದು ಅವರ ಚಿಂತನೆಯ ಸೂಕ್ಷ್ಮತೆಯನ್ನು ಕಾಣಿಸುತ್ತದೆ.

ಮನುಷ್ಯನ ನಡೆ-ನುಡಿಗೆ ವಿಶೇಷ ಮಹತ್ವ ಕೊಡುವ ಮಹಾದೇವಿಯಕ್ಕನವರು ಶರಣ ಧರ್ಮದ ಮುಖ್ಯ ತತ್ವಗಳಲ್ಲೊಂದಾದ ಸದಾಚಾರದ ಬಗ್ಗೆ ಒತ್ತಿ ಹೇಳುತ್ತಾರೆ. ಅಂತರಂಗ-ಬಹಿರಂಗ ಶುದ್ಧಿ, ಆಚಾರ-ವಿಚಾರ ಪಾವಿತ್ರ್ಯತೆಗಳ ಮೌಲ್ಯಗಳನ್ನು ಎತ್ತಿ ಹಿಡಿದು ಅನಾಚಾರ, ಡಾಂಭಿಕತೆ, ಕಪಟ ನಡತೆಗಳನ್ನು ಬಲವಾಗಿ ಖಂಡಿಸುತ್ತಾರೆ.

ವೇದ ಶಾಸ್ತ್ರ ಆಗಮ ಪುರಾಣಗಳೆಲ್ಲವು
ಕೊಟ್ಟಣವ ಕುಟ್ಟಿದ ನುಚ್ಚು ತೌಡು ಕಾಣಿಭೋ.
ಇವ ಕುಟ್ಟಲೇಕೆ ಕುಸುಕಲೇಕೆ?
ಅತ್ತಲಿತ್ತ ಹರಿವ ಮನದ ಶಿರವನರಿದಡೆ
ಬಚ್ಚಬರಿಯ ಬಯಲು ಚೆನ್ನಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-129 / ವಚನ ಸಂಖ್ಯೆ-368)

ಮಹಾದೇವಿಯಕ್ಕನವರು ಕುಟ್ಟುವ ಕ್ರಿಯೆಯ ಸುಂದರ ಪ್ರತೀಕವನ್ನು ಬಳಸಿ ವೈದಿಕ ಧರ್ಮದ ಆಚರಣೆಯನ್ನು ವಿರೋಧಿಸುತ್ತಾರೆ. ಮುಂದುವರಿದು, ಅತ್ತಲಿತ್ತ ಹರಿವ ಮನದ ಶಿರವನರಿದಡೆ ಬಚ್ಚಬರಿಯ ಬಯಲು. ಶಿವನನ್ನು ಅರಿಯುವುದೇ ಬಯಲು, ಶೂನ್ಯ, ಮೋಕ್ಷ ಹೊಂದಲು ಸರಿದಾರಿ ಎಂಬ ಪರ್ಯಾಯ ನೀಡುತ್ತಾರೆ.

ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದ
ಎನ್ನ ತನು ಶುದ್ಧವಾಯಿತ್ತು.
ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದ
ಎನ್ನ ಮನ ಶುದ್ಧವಾಯಿತ್ತು.
ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದ
ಎನ್ನ ಪ್ರಾಣ ಶುದ್ಧವಾಯಿತ್ತು.
ಅಯ್ಯಾ, ನಿಮ್ಮ ಅನುಭಾವಿಗಳು
ಎನ್ನ ಒರೆದೊರೆದು ಆಗುಮಾಡಿದ ಕಾರಣ
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮಗಾನು ತೊಡಿಗೆಯಾದೆನು.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-10 / ವಚನ ಸಂಖ್ಯೆ-27)

ಅನುಭಾವಿಗಳ ಸಂಗದಿಂದ, ಅವರು “ಒರೆದೊರೆದು ಆಗುಮಾಡಿದ ಕಾರಣ” ತನ್ನ ತನು-ಮನ-ಪ್ರಾಣಗಳು ಶುದ್ಧಗೊಂಡವು ಎಂಬ ಧನ್ಯತಾ ಭಾವ ಅವರಿಗಿದೆ.

ಬಸವಣ್ಣನ ಮನೆಯ ಮಗಳಾದ ಕಾರಣ
ಭಕ್ತಿಪ್ರಸಾದವ ಕೊಟ್ಟನು.
ಚೆನ್ನಬಸವಣ್ಣನ ತೊತ್ತಿನ ಮಗಳಾದ ಕಾರಣ
ಒಕ್ಕಪ್ರಸಾದವ ಕೊಟ್ಟನು.
ಪ್ರಭುದೇವರ ತೊತ್ತಿನ ತೊತ್ತಿನ ಮರಿದೊತ್ತಿನ
ಮಗಳಾದ ಕಾರಣ ಜ್ಞಾನಪ್ರಸಾದವ ಕೊಟ್ಟನು.
ಸಿದ್ಧರಾಮಯ್ಯನ ಶಿಶುಮಗಳಾದ ಕಾರಣ
ಪ್ರಾಣಪ್ರಸಾದವ ಸಿದ್ಧಿಸಿಕೊಟ್ಟನು.
ಮಡಿವಾಳಯ್ಯನ ಮನೆಯ ಮಗಳಾದ ಕಾರಣ
ನಿರ್ಮಲಪ್ರಸಾದವ ನಿಶ್ಚೈಸಿಕೊಟ್ಟನು.
ಇಂತೀ ಅಸಂಖ್ಯಾತ ಗಣಂಗಳೆಲ್ಲರು
ತಮ್ಮ ಕರುಣದ ಕಂದನೆಂದು ತಲೆದಡಹಿದ ಕಾರಣ
ಚೆನ್ನಮಲ್ಲಿಕಾರ್ಜುನಯ್ಯನ
ಶ್ರೀಪಾದಕ್ಕೆ ಯೋಗ್ಯಳಾದೆನು.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-102 / ವಚನ ಸಂಖ್ಯೆ-293)

ತಾನು ಬಸವಣ್ಣ, ಮಡಿವಾಳಯ್ಯರ ಮನೆ ಮಗಳು, ಚೆನ್ನಬಸವಣ್ಣನ ತೊತ್ತಿನ ಮಗಳು, ಪ್ರಭುದೇವರ ತೊತ್ತಿನ ತೊತ್ತಿನ ಮರಿದೊತ್ತಿನ ಮಗಳು, ಸಿದ್ಧರಾಮಯ್ಯನ ಶಿಶು ಮಗಳು. ಅವರ ಜ್ಞಾನ, ಭಕ್ತಿ, ಕಾರುಣ್ಯದ ನಿರ್ಮಲ ಪ್ರಸಾದದಿಂದಲೇ ತಾನು ಶ್ರೀಪಾದಕ್ಕೆ ಯೋಗ್ಯಳಾದೆನು ಎನ್ನುತ್ತಾರೆ.

ಹುಟ್ಟಿದೆ ಶ್ರೀಗುರುವಿನ ಹಸ್ತದಲ್ಲಿ,
ಬೆಳೆದೆನು ಅಸಂಖ್ಯಾತರ ಕರುಣದೊಳಗೆ.
ಭಾವವೆಂಬ ಹಾಲು, ಸುಜ್ಞಾನವೆಂಬ ತುಪ್ಪ,
ಪರಮಾರ್ಥವೆಂಬ ಸಕ್ಕರೆಯನಿಕ್ಕಿದರು ನೋಡಾ.
ಇಂತಪ್ಪ ತ್ರಿವಿಧಾಮೃತವನು ದಣಿಯಲೆರೆದು ಸಲಹಿದಿರೆನ್ನ.
ವಿವಾಹವ ಮಾಡಿದಿರಿ, ಸಯವಪ್ಪ ಗಂಡಂಗೆ ಕೊಟ್ಟಿರಿ,
ಕೊಟ್ಟ ಮನೆಗೆ ಕಳುಹಲೆಂದು ಅಸಂಖ್ಯಾತರೆಲ್ಲರೂ ನೆರೆದು ಬಂದಿರಿ.
ಬಸವಣ್ಣ ಮೆಚ್ಚಲು ಒಗತನವ ಮಾಡುವೆ.
ಚೆನ್ನಮಲ್ಲಿಕಾರ್ಜುನನ ಕೈವಿಡಿದು
ನಿಮ್ಮ ತಲೆಗೆ ಹೂವ ತಹೆನಲ್ಲದೆ ಹುಲ್ಲ ತಾರೆನು.
ಅವಧರಿಸಿ, ನಿಮ್ಮಡಿಗಳೆಲ್ಲರೂ ಮರಳಿ ಬಿಯಂಗೈವುದು, ಶರಣಾರ್ಥಿ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-150 / ವಚನ ಸಂಖ್ಯೆ-423)

ಗುರು-ಹಿರಿಯರ ಬಗೆಗಿನ ವಿನಯ, ಕೃತಜ್ಞತೆ ಅವರನ್ನು ಪರಿಪಕ್ವಗೊಳಿಸಿವೆ. ಅವರ ವಚನಗಳಲ್ಲಿ ಶಿವಶರಣರ ಸಂಗದ ಮಹಿಮೆಯ ಪ್ರಶಂಸೆ, ದಯೆ ದಾನ ಧರ್ಮಗಳ ಹಿರಿಮೆ ಸಾರುವುದು, ಜೀವ ಹಿಂಸೆ ವಿರೋಧ, ಅಹಿಂಸೆ ಪರಮತತ್ವವೆಂಬ ಪ್ರತಿಪಾದನೆ, ಪರಸ್ತ್ರೀ ಪರಧನಗಳನ್ನು ನಿರಾಕರಿಸಬೇಕೆಂಬ ಹಲವು ನೈತಿಕ ನೆಲೆಗಳನ್ನು ಕಾಣಬಹುದು.

ಕಣ್ಗೆ ಶೃಂಗಾರ ಗುರುಹಿರಿಯರ ನೋಡುವುದು.
ಕರ್ಣಕ್ಕೆ ಶೃಂಗಾರ ಪುರಾತನರ ಸುಗೀತಂಗಳ ಕೇಳುವುದು.
ವಚನಕ್ಕೆ ಶೃಂಗಾರ ಸತ್ಯವ ನುಡಿವುದು.
ಸಂಭಾಷಣೆಗೆ ಶೃಂಗಾರ ಸದ್ಭಕ್ತರ ನುಡಿಗಡಣ.
ಕರಕ್ಕೆ ಶೃಂಗಾರ ಸತ್ಪಾತ್ರಕ್ಕೀವುದು.
ಜೀವಿಸುವ ಜೀವನಕ್ಕೆ ಶೃಂಗಾರ ಗಣಮೇಳಾಪ
ಇವಿಲ್ಲದ ಜೀವಿಯ ಬಾಳುವೆ
ಏತಕ್ಕೆ ಬಾತೆಯಯ್ಯಾ ಚೆನ್ನಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-51 / ವಚನ ಸಂಖ್ಯೆ-138)

ಸದಾಚಾರ, ಸದ್ಭಕ್ತಿ, ಸಮ್ಯಕ್ ಜ್ಞಾನ, ಸದ್ವರ್ತನೆಗಳನ್ನು ಎತ್ತಿ ಹಿಡಿದ ಮಹಾದೇವಿಯಕ್ಕನವರಿಗೆ “ವಚನಕ್ಕೆ ಶೃಂಗಾರ ಸತ್ಯವ ನುಡಿವುದು”.

ಶರೀರಶಾಸ್ತ್ರ ಜ್ಞಾನವೂ ಅವರಿಗಿದೆ. ಇಂದು ಜಾಗತಿಕವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಅತಿಪೋಷಣೆ ರೋಗಕ್ಕೆ ದಾರಿ ಎಂದು ಒತ್ತಿ ಹೇಳುತ್ತಿದ್ದಾರೆ. ಕಾಯವನ್ನು ಕಾಯ್ದುಕೊಳ್ಳಬೇಕಾದುದನ್ನು ಮಹಾದೇವಿಯಕ್ಕನವರು ಕಾರ್ಯ-ಕಾರಣ ಸಂಬಂಧದೊಂದಿಗೆ ಮನಂಬುಗುವಂತೆ ತಿಳಿಯಪಡಿಸುತ್ತಾರೆ:

ಆಹಾರವ ಕಿರಿದು ಮಾಡಿರಣ್ಣಾ, ಆಹಾರವ ಕಿರಿದು ಮಾಡಿ.
ಆಹಾರದಿಂದ ವ್ಯಾಧಿ ಹಬ್ಬಿ ಬಲಿವುದಯ್ಯಾ.
ಆಹಾರದಿಂ ನಿದ್ರೆ, ನಿದ್ರೆಯಿಂ ತಾಮಸ, ಅಜ್ಞಾನ, ಮೈಮರಹು,
ಅಜ್ಞಾನದಿಂ ಕಾಮವಿಕಾರ ಹೆಚ್ಚಿ,
ಕಾಯವಿಕಾರ, ಮನೋವಿಕಾರ, ಇಂದ್ರಿಯವಿಕಾರ,
ಭಾವವಿಕಾರ, ವಾಯುವಿಕಾರವನುಂಟುಮಾಡಿ,
ಸೃಷ್ಟಿಗೆ ತಹುದಾದ ಕಾರಣ ಕಾಯದ ಅತಿಪೋಷಣ ಬೇಡ.
ಅತಿ ಪೋಷಣೆ ಮೃತ್ಯುವೆಂದುದು.
ಜಪ ತಪ ಧ್ಯಾನ ಧಾರಣ ಪೂಜೆಗೆ ಸೂಕ್ಷ್ಮದಿಂ ತನುಮಾತ್ರವಿದ್ದರೆ ಸಾಲದೆ?
ತನುವ ಪೋಷಿಸುವ ಆಸೆ ಯತಿತ್ವಕ್ಕೆ ವಿಘ್ನವೆಂದುದು.
ತನು ಪೋಷಣೆಯಿಂದ ತಾಮಸ ಹೆಚ್ಚಿ, ಅಜ್ಞಾನದಿಂ ವಿರಕ್ತಿ ಹಾನಿ,
ಅರಿವು ನಷ್ಟ, ಪರವು ದೂರ, ನಿರಕೆ ನಿಲವಿಲ್ಲದ ಕಾರಣ.
ಚೆನ್ನಮಲ್ಲಿಕಾರ್ಜುನನೊಲಿಸ ಬಂದ ಕಾಯವ
ಕೆಡಿಸದೆ ಉಳಿಸಿಕೊಳ್ಳಿರಯ್ಯಾ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-30 / ವಚನ ಸಂಖ್ಯೆ-68)

ಮಹಾದೇವಿಯಕ್ಕನವರ ವಚನಗಳಲ್ಲಿ ಆತ್ಮಶೋಧನೆ, ವ್ಯಕ್ತಿಗತ ಅನುಭವ, ಸಮಾಜದ ವಿಡಂಬನೆ, ವಿರಕ್ತಿ, ಶರಣ ಸತಿ ಲಿಂಗ ಪತಿ ಭಾವ, ಅಧ್ಯಾತ್ಮಿಕ ಕೆಚ್ಚು, ತಾತ್ವಿಕ ಜಿಜ್ಞಾಸೆ, ಯೋಗದ ಔನ್ನತ್ಯಗಳು ಪರಿಣಾಮಕಾರಿಯಾಗಿ ಅಭಿವ್ಯಕ್ತಿಗೊಂಡಿವೆ. ಅವುಗಳಲ್ಲಿ ಒಂದು ವಿಶೇಷ ಸೆಳೆತ, ಆಕರ್ಷಣೆ ಇದೆ. ಚುಂಬಕ ಶಕ್ತಿ ಇದೆ. ಪದದಿಂದ ಪದಕ್ಕೆ ಹೊಸ ಅರ್ಥ ಸ್ಫುರಿಸಬಲ್ಲ, ಪುನರುಕ್ತಿಯಲ್ಲಿ ಹೊಸ ಹೊಳಹು ತೋರಬಲ್ಲ ಕಾವ್ಯಸಿದ್ಧಿ ಅವರದು. ತೀವ್ರತರ ತನ್ಮಯತೆಯೇ ಅವರ ವಚನಗಳ ಜೀವಾಳ.

ಆದ್ಯರ ಅರವತ್ತು ವಚನಕ್ಕೆ ದಣ್ಣಾಯಕರ ಇಪ್ಪತ್ತು ವಚನ,
ದಣ್ಣಾಯಕರ ಇಪ್ಪತ್ತು ವಚನಕ್ಕೆ ಪ್ರಭುದೇವರ ಹತ್ತು ವಚನ.
ಪ್ರಭುದೆವರ ಹತ್ತು ವಚನಕ್ಕೆ ಅಜಗಣ್ಣನ ಅಯ್ದು ವಚನ.
ಅಜಗಣ್ಣನ ಅಯ್ದು ವಚನಕ್ಕೆ ಕೂಡಲ ಚೆನ್ನಸಂಗಯ್ಯನಲ್ಲಿ
ಮಹಾದೇವಿಯಕ್ಕಗಳ ಒಂದು ವಚನ ನಿರ್ವಚನ.
(ಸಮಗ್ರ ವಚನ ಸಂಪುಟ: ಮೂರು-2021 / ಪುಟ ಸಂಖ್ಯೆ-91 / ವಚನ ಸಂಖ್ಯೆ-225)

ಎಂದು ಚೆನ್ನಬಸವಣ್ಣನವರು ವರ್ಣಿಸಿದ್ದರಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ.

ಕನ್ನಡದಲ್ಲಿ ಮೊಟ್ಟ ಮೊದಲ ಶತಕ ಬರೆದ ಕೀರ್ತಿಗೆ ಮಹಾದೇವಿಯಕ್ಕನವರು ಭಾಜನಳಾಗಿದ್ದಾರೆ. ಅವರ ಜೊತೆಯಲ್ಲಿ ಶಿವಯೋಗಿ ಸಿದ್ಧರಾಮೇಶ್ವರರೂ ಸೇರಿದ್ದಾರೆ. ತ್ರಿಪದಿಯಲ್ಲಿರುವ ಅವರ “ಯೋಗಾಂಗ ತ್ರಿವಿಧಿ” ಶತಕ ರೂಪದಲ್ಲಿದೆ. ಇದು ಅರವತ್ತೇಳು ತ್ರಿಪದಿ ರೂಪದ ಪದ್ಯಗಳ ಕಿರುಕಾವ್ಯ. ಜೀವಾತ್ಮವು ಪರಮಾತ್ಮನಲ್ಲಿ ಐಕ್ಯಗೊಳ್ಳುವ ಪಾರಮ್ಯದ ವಿವರ ಇಲ್ಲಿದೆ. ಲಿಂಗಾಯತ ಧರ್ಮದ ಷಟ್‌ಸ್ಥಲ ಸಿದ್ಧಾಂತದ ಪರಿಭಾಷೆ, ತತ್ವಗಳ ಮೂಲಕ ಶಿವಯೋಗವನ್ನು ಪ್ರತಿಪಾದಿಸುತ್ತದೆ.

ವಚನ ಸಾಹಿತ್ಯಕ್ಕಿಂತ ಮೊದಲು ಕನ್ನಡದಲ್ಲಿ ಗೀತೆ ಅಥವಾ ಹಾಡಿನ ಪ್ರಕಾರದಂಥ ಭಾವಗೀತಾತ್ಮಕ ರಚನೆಗಳು ಕಂಡುಬಂದುದಿಲ್ಲ. ಶಿವಶರಣರು ಭಾವಾಭಿವ್ಯಕ್ತಿಯ ಗೀತ ರಚನೆ ಆರಂಭಿಸಿದ್ದು, ಆ ನಿಟ್ಟಿನಲ್ಲಿಯೂ ಮಹಾದೇವಿಯಕ್ಕನವರು ಮುಂಚೂಣಿಯಲ್ಲಿದ್ದಾರೆ. ಇಂಥ ಪದಗಳಲ್ಲಿ ಮಹಾದೇವಿಯಕ್ಕನವರ ಸ್ವರವಚನಗಳು ಸೇರುತ್ತವೆ. ಇಲ್ಲಿಯೂ ಮಹಾದೇವಿಯಕ್ಕನವರು ಆಧ್ಯಾತ್ಮಿಕ ಅನುಭವವನ್ನೇ ಪ್ರತೀಕಾತ್ಮಕವಾಗಿ ಹೇಳುತ್ತಾರೆ. ತಾತ್ವಿಕತೆಯೇ ಕೇಂದ್ರವಾಗಿರುವ ಈ ವಚನಗಳಲ್ಲಿ ಬೆಡಗಿನ ಲಕ್ಷಣಗಳಿವೆ, ಶ್ಲೇಷೆ ಇವುಗಳ ಜೀವ. ಅಲ್ಲದೆ ಒಂದು ಬಗೆಯ ತಾರ್ಕಿಕತೆಯೂ ಕಾಣಸಿಗುತ್ತದೆ. ಅವುಗಳಲ್ಲಿಯ ಪ್ರತಿಮಾಶಕ್ತಿ ಅಚ್ಚರಿದಾಯಕವಾಗಿದೆ.

ಮಹಾದೇವಿಯಕ್ಕನವರ ಸ್ವರವಚನಗಳು ಜಾನಪದ ಧಾಟಿಯಲ್ಲಿದ್ದು ಸಹಜವಾಗಿಯೇ ಜನಸಾಮಾನ್ಯರನ್ನು ಹೆಚ್ಚಾಗಿ ತಟ್ಟುತ್ತವೆ. ಒಂದು ಉದಾಹರಣೆಗೆ ಅವರ “ಅಂಬಿಗ” ಪದಪ್ರಯೋಗ:

ಹೊಳೆಯ ಭರವ ನೋಡಂಬಿಗ
ಸೆಳವು ಬಹಳ ಕಾಣಂಬಿಗ
ಸುಳುಹಿನೊಳಗೆ ಬಿದ್ದೆನಂಬಿಗ
ಸೆಳೆದುಕೊಳ್ಳೊ ನೀನಂಬಿಗ

ಸಾಮಾನ್ಯವಾಗಿ ಮಹಾದೇವಿಯಕ್ಕನವರ ಈ ಪದ್ಯವನ್ನು ಅಂಕಿತದಲ್ಲಿ ಬದಲು ಮಾಡಿ, ಪುರಂದರ ವಿಠಲ ಸೇರಿಸಿ ಇದನ್ನು ಪುರಂದರ ದಾಸರ ಪದವಾಗಿ ಹಾಡುತ್ತಾರೆ.

ಶಿವಶರಣರು ಮಹಾದೇವಿಯಕ್ಕನವರ ಬಗ್ಗೆ ವಿಶೇಷ ಗೌರವದ ಭಾವ ಹೊಂದಿದ್ದರು. ಅವರ ಮಹೋನ್ನತ ಸತ್ವವನ್ನು ಮೆಚ್ಚಿದ ಅನೇಕ ಶರಣರು ಮನದುಂಬಿ ಪ್ರಶಂಸಿಸಿದ್ದಾರೆ. ಅಲ್ಲಮಪ್ರಭುಗಳು ನುಡಿದಂತೆ:

ಆದಿಶಕ್ತಿ ಅನಾದಿಶಕ್ತಿಯೆಂಬರು ಅದನಾರು ಬಲ್ಲರಯ್ಯಾ?
ಆದಿ' ಎಂದಡೆ ಕುರುಹಿಂಗೆ ಬಂದಿತ್ತು. ಅನಾದಿ’ ಎಂದಡೆ ನಾಮಕ್ಕೆ ಬಂದಿತ್ತು.
ಆದಿಯೂ ಅಲ್ಲ ಅನಾದಿಯೂ ಅಲ್ಲ,
ನಾಮವಿಲ್ಲದ ಸೀಮೆಯಿಲ್ಲದ
ನಿಜಭಕ್ತಿಯೆ ಚಿಚ್ಛಕ್ತಿಯಾಯಿತ್ತು ನೋಡಾ.
ಅಂತರಂಗದ ಪ್ರಭೆ ಬಹಿರಂಗವೆಲ್ಲಾ ತಾನೆಯಾಗಿ
ಗುಹೇಶ್ವರಲಿಂಗದಲ್ಲಿ ಸಂದಿಲ್ಲದಿಪ್ಪ
ಮಹಾದೇವಿಯಕ್ಕನ ಶ್ರೀಪಾದಕ್ಕೆ ನಮೋ ನಮೋ ಎಂಬೆನು.
(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-330 / ವಚನ ಸಂಖ್ಯೆ-899)

ಮಹಾದೇವಿಯಕ್ಕನವರ ಸ್ವಾಯತ್ತ ಅಸ್ತಿತ್ವದತ್ತ ಗಮನ ಸೆಳೆಯುವ ಬಸವಣ್ಣನವರು:

ಹೆಂಗೂಸಿನಂಗವ ನೋಡಿರೆ ಪುರಾತನರು,
ಬಾಲತನದಂಗವ ನೋಡಿರೆ ಪುರಾತನರು,
ಬ್ರಹ್ಮವನಾಚರಿಸಿ ತನ್ನ ಮರೆದಿಪ್ಪುದ ನೋಡಿರೆ ಲಿಂಗವಂತರು.
ತನ್ನಲ್ಲಿ ತಾನು ನಿಶ್ಚಯವಾಗಿ ಭಾಷೆ ಬೀಸರವೋಗದೆಯಿಪ್ಪ ಇರವು
ಕೂಡಲಸಂಗಮದೇವರಲ್ಲಿ ನಮ್ಮ ಮಹದೇವಿಯಕ್ಕಂಗಾಯಿತ್ತು.
(ಸಮಗ್ರ ವಚನ ಸಂಪುಟ: ಒಂದು-2021 / ಪುಟ ಸಂಖ್ಯೆ-425 / ವಚನ ಸಂಖ್ಯೆ-1407)

ಬಸವಣ್ಣನವರು ಇನ್ನೂ ಮುಂದುವರೆದು:

ಕಾಯದ ಲಜ್ಜೆಯ ಕಲ್ಪಿತವ ಕಳೆದು,
ಜೀವದ ಲಜ್ಜೆಯ ಮೋಹವನಳಿದು,
ಮನದ ಲಜ್ಜೆಯ ನೆನಹ ಸುಟ್ಟು,
ಭಾವದ ಕೂಟ ಬತ್ತಲೆಯೆಂದರಿದು,
ತವಕದ ಸ್ನೇಹ ವ್ಯವಹಾರಕ್ಕೆ ಹುಗದು.
ಕೂಡಲಸಂಗಮದೇವಯ್ಯಾ,
ಎನ್ನ ಹೆತ್ತ ತಾಯಿ ಮಹದೇವಿಯಕ್ಕನ
ನಿಲವ ನೋಡಯ್ಯಾ ಪ್ರಭುವೆ.
(ಸಮಗ್ರ ವಚನ ಸಂಪುಟ: ಒಂದು-2021 / ಪುಟ ಸಂಖ್ಯೆ-337 / ವಚನ ಸಂಖ್ಯೆ-1146)

ಮಹಾದೇವಿಯಕ್ಕನವರು “ನಮ್ಮ ಹೆತ್ತ ತಾಯಿ ಮಹಾದೇವಿಯಕ್ಕ” ಎಂದು ಬಸವಣ್ಣನವರು ನುಡಿಯುತ್ತಾರೆ.

ಅಹುದಹುದು ಮತ್ತೇನು? ಮರಹಿಂಗೆ ಹಿರಿದು ಕಿರಿದುಂಟಲ್ಲದೆ,
ಅರುಹಿಂಗೆ ಹಿರಿದು ಕಿರಿದುಂಟೆ? ಹೇಳಯ್ಯಾ.
ಸಾವಂಗ ಭಯವುಂಟಲ್ಲದೆ ಅಜಾತಂಗೆ ಭಯವುಂಟೆ? ಹೇಳಯ್ಯಾ.
ಕಪಿಲಸಿದ್ಧಮಲ್ಲಿನಾಥನಲ್ಲಿ, ಮಹಾದೇವಿಯಕ್ಕನ ನಿಲುವಿಂಗೆ
ಶರಣೆಂದು ಶುದ್ಧನಾದೆ ಕಾಣಾ, ಚೆನ್ನಬಸವಣ್ಣಾ.
(ಸಮಗ್ರ ವಚನ ಸಂಪುಟ: ನಾಲ್ಕು-2021 / ಪುಟ ಸಂಖ್ಯೆ-410 / ವಚನ ಸಂಖ್ಯೆ-1309)

“ಮಹಾದೇವಿಯಕ್ಕನ ನಿಲುವಿಂಗೆ ಶರಣೆಂದು ಶುದ್ಧನಾದೆನು” ಎಂದು ಶಿವಯೋಗಿ ಸಿದ್ಧರಾಮೇಶ್ವರರು ನಮಿಸುತ್ತಾರೆ.

ಅವಿರಳಜ್ಞಾನಿ ಚೆನ್ನಬಸವಣ್ಣನವರು:

ಅಜಕೋಟಿ ಕಲ್ಪ ವರುಷದವರೆಲ್ಲರು ಹಿರಿಯರೆ?
ಹುತ್ತೇರಿ ಬೆತ್ತ ಬೆಳೆದ ತಪಸ್ವಿಗಳೆಲ್ಲರು ಹಿರಿಯರೆ?
ನಡುಬಾಗಿ ಗುಡುಗೂರಿ ತಲೆ ನಡುಗಿ ನೆರೆತೆರೆ ಹೆಚ್ಚಿ, ಮತಿಗೆಟ್ಟು
ಒಂದನಾಡ ಹೋಗಿ ಒಂಬತ್ತನಾಡುವ ಅಜ್ಞಾನಿಗಳೆಲ್ಲರು ಹಿರಿಯರೆ?
ಅನುವನರಿದು, ಘನವ ಬೆರಸಿ ಹಿರಿದು ಕಿರಿದೆಂಬ ಭೇದವ ಮರೆದು,
ಕೂಡಲಚೆನ್ನಸಂಗಯ್ಯನಲ್ಲಿ ಬೆರಸಿ ಬೇರಿಲ್ಲದಿಪ್ಪ ಹಿರಿಯತನ
ನಮ್ಮ ಮಹಾದೇವಿಯಕ್ಕಂಗಾಯಿತ್ತು.
(ಸಮಗ್ರ ವಚನ ಸಂಪುಟ: ಮೂರು-2021 / ಪುಟ ಸಂಖ್ಯೆ-372 / ವಚನ ಸಂಖ್ಯೆ-921)

“ಭೇದವಿಲ್ಲದ ಹಿರಿಯತನ ನಮ್ಮ ಮಹಾದೇವಿಯಕ್ಕಂಗಾಯಿತ್ತು” ಎನ್ನುತ್ತಾರೆ.

ದಿಟ್ಟ ಗಣಾಚಾರಿ ಮಡಿವಾಳ ಮಾಚಯ್ಯನವರು:

ಕಂಗಳ ನೋಟ ಕರಸ್ಥಲದ ಪ್ರಾಣ.
ಅಂಗದ ವಿಕಾರ ನಿರ್ವಿಕಾರವಾಗಿತ್ತು.
ಸಂಗಸುಖ ನಿಸ್ಸಂಗವಾಯಿತ್ತು.
ಹೆಂಗೂಸೆಂಬ ಭಾವ ಬಯಲ ಬೆರಸಿತ್ತು.
ಕಲಿದೇವರದೇವಾ, ನಿಮ್ಮನೊಲಿಸಿ ಒಚ್ಚತವೋದ
ಮಹಾದೇವಿಯಕ್ಕನ ಪಾದವ ನೆನೆದು ನಾನು ಬದುಕಿದೆನು.
(ಸಮಗ್ರ ವಚನ ಸಂಪುಟ: ಎಂಟು-2021 / ಪುಟ ಸಂಖ್ಯೆ-225 / ವಚನ ಸಂಖ್ಯೆ-546)

“ಮಹಾದೇವಿಯಕ್ಕನ ಪಾದವ ನೆನೆದು ಬದುಕಿದೆನು” ಎಂದು ತನ್ನ ಸಕಲ ಸಿದ್ಧಿಯನ್ನೂ ಮಹಾದೇವಿಯಕ್ಕನವರಿಗೆ ಅರ್ಪಿಸುತ್ತಾರೆ.

ತನುವಿನೊಳಗಿದ್ದು ತನುವ ಗೆದ್ದಳು,
ಮನದೊಳಗಿದ್ದು ಮನವ ಗೆದ್ದಳು,
ವಿಷಯದೊಳಗಿದ್ದು ವಿಷಯಂಗಳ ಗೆದ್ದಳು,
ಅಂಗಸುಖವ ತೊರೆದು ಭವವ ಗೆದ್ದಳು,
ಕೂಡಲಚೆನ್ನಸಂಗಯ್ಯನ ಹೃದಯಕಮಲವ ಬಗಿದು ಹೊಕ್ಕು
ನಿಜಪದವನೈದಿದ ಮಹಾದೇವಿಯಕ್ಕನ ಶ್ರೀಪಾದಕ್ಕೆ
ನಮೋ ನಮೋ ಎಂಬೆನು.
(ಸಮಗ್ರ ವಚನ ಸಂಪುಟ: ಮೂರು-2021 / ಪುಟ ಸಂಖ್ಯೆ-602 / ವಚನ ಸಂಖ್ಯೆ-1291)

ಚೆನ್ನಬಸವಣ್ಣನವರ ಈ ನುಡಿ-ಗೌರವ ಮಹಾದೇವಿಯಕ್ಕನವರ ವ್ಯಕ್ತಿತ್ವದ ಮೇಲ್ಮೆಯನ್ನು ದಿವಿನಾಗಿ ಬಿಚ್ಚಿಡುತ್ತದೆ.

ಹೆಣ್ಣೆಂಬ ಉಪಾಧಿ, ಆರೋಪಿತ ಪ್ರತ್ಯಯಗಳನ್ನು ಮೀರಿ ತಾನೊಂದು ಲಿಂಗಾತೀತ ಚೈತನ್ಯವೆಂಬ ಅರಿವನ್ನು ಬೆಳೆಸಿಕೊಂಡ ಮಹಾದೇವಿಯಕ್ಕನವರು ನಮಗೆಲ್ಲರಿಗೂ ಮಾದರಿಯ ವ್ಯಕ್ತಿತ್ವ. “ಏನ ಮಾಡಿದಡೂ ನಾನಂಜುವಳಲ್ಲ” ಎಂಬ ಗಟ್ಟಿ ನಿಲುವು, ಸಿದ್ಧತೆಗಳಿಂದ ಇಂದಿನ ಮಹಿಳಾ ಆಂದೋಲನ ಮುನ್ನಡೆಯಬೇಕಿದೆ. ಮಹಾದೇವಿಯಕ್ಕನವರ ದಿಟ್ಟತನ, ಆತ್ಮ ಶೋಧನೆಯ ಗುಣ, ಬದುಕಿನ ಅನುಭವಕ್ಕೆ ತನ್ನನ್ನು ಒಡ್ಡಿಕೊಂಡ ಧೀರತೆ, ಆಚರಣೆ-ಅಭಿವ್ಯಕ್ತಿಗಳಲ್ಲಿಯ ಪ್ರಾಮಾಣಿಕತೆ, ಸುಯಿಧಾನ, ಪ್ರಕೃತಿ ಹಾಗೂ ಮನುಷ್ಯ ಸಂಬಂಧದಲ್ಲಿಯ ಅವರ ಅಂತಃಕರಣ ಮೊದಲಾಗಿ ಎಲ್ಲವೂ ಇಂದಿನ ತುರ್ತು ಮತ್ತು ಆದರ್ಶ. ಲಿಂಗ ಅಸಮಾನತೆಗಳ ಕುರೂಪವನ್ನು, ಭೀಭತ್ಸತೆಯನ್ನು ತೊಡೆದು ಪರ್ಯಾಯವಾಗಿ ಸಮಸಂಸ್ಕೃತಿಯ ಸಮಾಜ ಕಟ್ಟಬಯಸುವವರಿಗೆ ಶರಣ ತತ್ವಗಳು ಮಹಾಶಕ್ತಿ, ಒಂದು ದಿವ್ಯೌಷಧಿಯಾಗಬಲ್ಲುದು.

ಡಾ. ಹೇಮಾ ಪಟ್ಟಣಶೆಟ್ಟಿ,
“ಹೂಮನೆ”,
ಶ್ರೀದೇವಿ ನಗರ, ವಿದ್ಯಾಗಿರಿ,
ಧಾರವಾಡ – 580 004.
ಮೋಬೈಲ್‌ ಸಂ. 94488 61604.

ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in

Loading

Leave a Reply