
ಸಾಮಾಜಿಕ ಅಸಮಾನತೆಯ ಮಾತು ಬಂದಾಗ ನಮ್ಮ ವ್ಯವಸ್ಥೆ ಸಾಮಾನ್ಯವಾಗಿ ಹೆಚ್ಚು ಮಾತನಾಡುವುದು ವರ್ಗ ಮತ್ತು ವರ್ಣ ಅಸಮಾನತೆಗಳ ಬಗ್ಗೆ ಮಾತ್ರ. ಇವುಗಳನ್ನೂ ಒಳಗೊಂಡ ಹಾಗೆ, ಪುರುಷಪ್ರಧಾನ ವ್ಯವಸ್ಥೆಯ ಕ್ರೌರ್ಯ ಮತ್ತು ಶೋಷಣೆಗೆ ಸಿಕ್ಕು ನಿರಂತರ ನಲುಗುತ್ತ ಬಂದ ಮಹಿಳೆಯರ ವಿಷಯಕವಾದ ಅಸಮಾನತೆಯ ಬಗ್ಗೆ ಅದು ಅಷ್ಟಾಗಿ ತಲೆಕೆಡಿಸಿಕೊಳ್ಳುವುದೇ ಇಲ್ಲ. ಇದು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದ ಅತ್ಯಂತ ಹೀನ ನಡೆ.
“ಮನು” ಕುಲದ ಆರಂಭದಿಂದ ನಡೆದೇ ಇರುವ ಮಹಿಳಾ ಅಸಮಾನತೆಯಾಚರಣೆಯು ಕಾಲ ಕಾಲಕ್ಕೆ ವಿವಿಧ ರೂಪಗಳನ್ನು ತಾಳುತ್ತ ಬಂದಿದೆಯಷ್ಟೇ ಅಲ್ಲ, ಈಗಂತೂ ಕ್ರೌರ್ಯದ ಪರಮಾವಧಿಯನ್ನೇ ಪಡೆದು, ಅವಳ ಬದುಕನ್ನು ನೋವು, ಯಾತನೆ ಮತ್ತು ಸಂಕಟದ ಕೂಪವನ್ನಾಗಿಸಿದೆ. ಇದಕ್ಕೆ ಅಸಂಖ್ಯ ಉದಾಹರಣೆ ಕೊಡಬಹುದು. ಜನಾಂಗ ದ್ವೇಷದ ದಳ್ಳುರಿಗೆ ಸಿಕ್ಕ ಮಣಿಪುರದಲ್ಲಿ ಹೆಣ್ಣು ಮಕ್ಕಳನ್ನು ಬತ್ತಲೆ ಮಾಡಿ ಮೆರವಣಿಗೆ ಮಾಡಿದ ಘಟನೆ, ಓಲಿಂಪಿಕ್ಸ್ ನಲ್ಲಿ ಪದಕ ಪಡೆದ ಮಹಿಳೆಯರ ಮೇಲೆ ನಡೆಯಿತೆನ್ನಲಾದ ಅತ್ಯಾಚಾರದ ಆರೋಪದ ಕಾರಣಕ್ಕಾಗಿ ನಡೆಯುತ್ತಿರುವ ರಾಜಕೀಯ, ಬೆಳಗಾವಿ ಜಿಲ್ಹೆ ವಂಟಮುರಿಯಲ್ಲಿ ಮಹಿಳೆಯನ್ನು ಬೆತ್ತಲಾಗಿಸಿ, ಅಟ್ಟಾಡಿಸಿ ಥಳಿಸಿದ ಪ್ರಸಂಗ, ಮಂಡ್ಯ ಜಿಲ್ಹೆಯ ಹಾಡ್ಯಾ ಗ್ರಾಮದ ಹತ್ತಿರದ ಕಬ್ಬಿನ ಗದ್ದೆಯಲ್ಲಿ ವೈದ್ಯರಿಂದಲೇ ನಡೆಯುತ್ತಿದ್ದ ಹೆಣ್ಣು ಭ್ರೂಣ ಹತ್ಯೆಯಂಥ ಅಮಾನವೀಯ ಕೃತ್ಯಗಳು, ಮಹಿಳೆಯರ ಮೇಲೆ ನಡೆಯುತ್ತಿರುವ ಬಲಾತ್ಕಾರ ಮತ್ತು ಅತ್ಯಾಚಾರದ ಘಟನೆಗಳು, ಎಸಿಡ್ ಎರಚುವ ಪ್ರಕರಣಗಳು, ಧರ್ಮಪೀಠದ ಮೇಲೆ ಕುಳಿತ ಈ ದೇಶದ ಸ್ವಾಮಿಯೊಬ್ಬ ಮುಟ್ಟಾಗುವ ಹೆಣ್ಣುಮಗಳು ಮಾಡಿದ ಅಡಿಗೆ ಉಂಡರೆ ಮುಂದೆ ನಾಯಿಯಾಗಿ ಹುಟ್ಟುತ್ತಾರೆಂದು ಹೊರಡಿಸಿದ ಫರ‍್ಮಾನು, ಮಠ-ಪೀಠಸ್ಥ ಧರ್ಮ ಗುರುಗಳೇ ಕಾಮದಾಟದಲ್ಲಿ ನಿರತರಾದ ಆರೋಪಗಳು-ಹೀಗೇ ಈ ಯಾದಿಯನ್ನು ಬೆಳೆಸುತ್ತಲೇ ಹೋಗಬಹುದು … …
ಇಂಥ ಅಸಂಖ್ಯ ಘಟನೆಗಳನ್ನು ಅವಲೋಕಿಸಿದರೆ, ನಮ್ಮ ಸಮಾಜದಲ್ಲಿ ಮಹಿಳೆಯರಿಗೆ ಯಾವ ಸ್ಥಾನವಿದೆ? ಅವರಿಗೆ ಸಮಾಜ ಎಂಥ ಮರ್ಯಾದೆ ಕೊಡುತ್ತಿದೆ? ಅವರು ಎಂಥ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ? ಎಂಬೆಲ್ಲದರ ಸ್ಪಷ್ಟ ಚಿತ್ರಣ ಕಣ್ಮುಂದೆ ರಾಚುತ್ತದೆ. ತಾಯಿ, ಅಕ್ಕ-ತಂಗಿ, ಮಗಳು, ಹೆಂಡತಿ-ಹೀಗೆ ಏನೆಲ್ಲವೂ ಆಗಿ ಗಂಡಿನ ಬದುಕಿಗೆ ನಿಜವಾದ ಅರ್ಥ ತಂದುಕೊಡುವ ಮಹಿಳೆಯ ಬಗ್ಗೆ ನಮ್ಮ ಸಮಾಜಕ್ಕೆ ಯಾಕೆ ಇಷ್ಟೊಂದು ತಾತ್ಸಾರ, ಕೀಳರಿಮೆ? ಯಾಕೆ ಅವಳ ಮೇಲೆ ಇಷ್ಟೊಂದು ಶೋಷಣೆ? ಯಾಕೆ ಈ ಅಸಮಾನತೆ? ನಮ್ಮ ಸಂವಿಧಾನದ ಪೀಠೀಕೆಯಲ್ಲಿ ಮತ್ತು ಮೂಲಭೂತ ಹಕ್ಕುಗಳ ಪ್ರಸ್ತಾಪವಿರುವ ಮೂರನೆಯ ಪರಿಚ್ಛೇದದ ಕಲಮು 14-15ರಲ್ಲಿ ಮಹಿಳಾ ಸಮಾನತೆಯ ಮತ್ತು ತಾರತಮ್ಯ ನಿಷೇಧದ ಕಾನೂನುಗಳ ಸ್ಪಷ್ಟ ನಿರ್ದೇಶನವಿದ್ದರೂ ಯಾಕೆ ಇಂಥ ದುಃಸ್ಥಿತಿಯನ್ನು ನಿಯಂತ್ರಿಸಲಾಗುತ್ತಲಿಲ್ಲ? ಕಾನುನೂಗಳು ಯಾಕೆ ಸೋಲುತ್ತಿವೆ? ಇಂಥಲ್ಲಿ ಮಹಿಳೆಗೆ ಸಿಬೇಕಾದ ನ್ಯಾಯ ಸಿಗಲು ಸಾಧ್ಯವೆ? ಸಮಾನತೆಯೆಂಬುದು ದೊರೆಯಲು ಸಾಧ್ಯವೆ?
“ಸ್ತ್ರೀಮತವನುತ್ತರಿಸಲಾಗದೆ ಧರ್ಮಶಾಸ್ತ್ರದೋಳು?” ಎಂಬ ಕುಮಾರವ್ಯಾಸನ ಪ್ರಶ್ನೆಗೆ ಯಾವ ಕಾಲದ ಸಮಾಜವೂ ಉತ್ತರ ಕೊಡಲಾಗಿಲ್ಲ. ವೈಜ್ಞಾನಿಕವಾಗಿ ಮುಂದುವರೆದಿರುವ ಹಾಗೂ ಉಗ್ರ ಕಾನೂನುಗಳೂ ಇರುವ ವರ್ತಮಾನದಲ್ಲೇ ಮಹಿಳೆಯ ಸ್ಥಿತಿ ಹೀಗಿರಬೇಕಾದರೆ, ಪುರಾತನ ಕಾಲದಲ್ಲಿ ಇನ್ನೂ ಹೇಗಿರಬೇಡ? ಸತ್ಯ ಸ್ಥಿತಿ ಹೀಗಿರುವಾಗ “ಸ್ತ್ರೀ ಸಮಾನತೆ” ಎಂಬ ಶಬ್ದಕ್ಕೆ ಏನಾದರೂ ಅರ್ಥವಿದೆಯೆ? ಇದಕ್ಕೆ ಸಂಬಂಧಿಸಿದ ಕಾನೂನು ಎಂದಾದರೂ ಜಾರಿಗೆ ಬಂದಿದೆಯೆ? ಹಾಗೆ ಬಂದಿದ್ದರೆ, ಮೇಲೆ ಪಟ್ಟಿ ಮಾಡಿದಂಥ ಘಟನೆಗಳು ಏಕೆ ನಡೆಯುತ್ತವೆ? ನಮ್ಮ ಮೂಲಭೂತವಾದಿ ವ್ಯವಸ್ಥೆ ಈ ಭೂಮಿಯ ಮೇಲೆ ಎಂದಾದರೂ ಮಹಿಳೆಗೆ ಸಮಾನತೆಯ ಸ್ಥಾನಮಾನ ಕೊಟ್ಟಿದೆಯೆ? ಪ್ರಶ್ನೆಗಳೇ ಪ್ರಶ್ನೆಗಳು! ದುರಂತವೆಂದರೆ, ಮಹಾಮುನಿ ಮನು ಮಹಾಶಯನಿಂದ ಕೊಡುಗೆಯಾಗಿ ಬಂದಿರುವ ಶೋಷಣಾ ಮೂಲದ ಕಾನೂನುಗಳೇ ಈ ವ್ಯವಸ್ಥೆಯಲ್ಲಿ ಇಂದಿಗೂ ಆಚರಣೆಯಲ್ಲಿದ್ದು, ಅವು ಮಹಿಳೆಯರಿಗೆ ಮಹಾಶಾಪವಾಗಿ ಪರಿಣಮಿಸಿವೆ. ಇದರಿಂದಾಗಿ ಇಡೀ ಮನುಕುಲವೇ ತಲೆ ತಗ್ಗಿಸುವಂಥ ಘಟನೆಗಳು ನಡೆಯುತ್ತಲೇ ಇವೆ. ಇಂಥಲ್ಲಿ ಮಹಿಳಾ ಸಮಾನತೆಯ ಮಾತೆಲ್ಲಿ?
ದೇವರುಗಳನ್ನೂ ಒಳಗೊಂಡಂತೆ, ಸಕಲ ಜೀವಜಂತುಗಳಿಗೂ ಜನ್ಮ ಕೊಟ್ಟ ಜೀವ ಹೆಣ್ಣೆಂಬುದು ಜಗತ್ ಸತ್ಯ. ಅದೇ ನಿಸರ್ಗ ಸತ್ಯ ಕೂಡ. ಜೀವ ಸೃಷ್ಟಿಯ ಸಾಮರ್ಥ್ಯವಿರುವ ಹೆಣ್ಣು ಜೀವವನ್ನು ತಾಯಿ ದೇವರೆಂದೇ ಗೌರವಿಸಲಾಗಿದೆ. ಆದರೆ, ಒಂದೆಡೆ ಹೀಗೆ ದೇವತ್ವದ ಪಟ್ಟ ಕಟ್ಟುತ್ತ, ಚಿತ್ರಪಟಗಳಲ್ಲಿ ಪೂಜಿಸುತ್ತ, ಮತ್ತೊಂದೆಡೆ ತನ್ನೆಲ್ಲ ಸುಖ-ಸಂತೋಷಗಳಿಗೆ ಹೆಣ್ಣು ಜೀವವನ್ನೇ ಬಳಸಿಕೊಂಡು, ಕಡೆಗೆ ಅವಳನ್ನು ಅಸ್ಪೃಶ್ಯಳನ್ನಾಗಿಸಿ, ಪ್ರಾಣಿಯಂತೆ ಶೋಷಿಸಿ, ಇನ್ನಿಲ್ಲದಂತೆ ಅವಮಾನಿಸುತ್ತಿರುವುದು ನಮ್ಮ ವ್ಯವಸ್ಥೆಯ ದ್ವಂದ್ವ ನೀತಿಗೆ ಸಾಕ್ಷಿಯಲ್ಲವೆ? ದೈಹಿಕ ಮತ್ತು ಜೈವಿಕ ಭಿನ್ನತೆಗಳ ಕಾರಣ ಕೊಟ್ಟು, ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕ್ಷೇತ್ರಗಳಿಂದ ಅವಳನ್ನು ದೂರವಿಟ್ಟದ್ದಂತೂ ಅಮಾನವೀಯ ಕೃತ್ಯವಲ್ಲವೆ? ಮನು ಪ್ರಣೀತ ವರ್ಣಾಶ್ರಮ ಧರ್ಮದಲ್ಲಂತೂ ಸ್ತ್ರೀಯರು ಪುರುಷನ ಕಾಮತೃಪ್ತಿಯ ವಸ್ತು ಮತ್ತು ಮಕ್ಕಳನ್ನು ಹೆರುವ ಯಂತ್ರವೆಂದೇ ಘೋಷಿತಳಾಗಿರುವುದು ಈ ಮಹಾ ಪರಂಪರೆ ತಳೆದಿರುವ ಕೀಳು ಮನೋಭಾವಕ್ಕೆ ಸಾಕ್ಷಿಯಲ್ಲವೆ?
ಹೀಗೆ ಪರಂಪರೆಯುದ್ದಕ್ಕೂ ಕ್ರೌರ್ಯ ಹಾಗೂ ಶೋಷಣೆಗೆ ಸಿಕ್ಕು ನಲುಗುತ್ತ ಬಂದ ಮಹಿಳೆಯನ್ನು ಎಲ್ಲ ರೀತಿಯಲ್ಲೂ ಪುರುಷನ ಸಮಾನ ನೆಲೆಗೆ ತಂದು ನಿಲ್ಲಿಸಿದ ಶ್ರೇಯಸ್ಸು ಖಂಡಿತವಾಗಿ ಹನ್ನೆರಡನೆಯ ಶತಮಾನದ ಬಸವಾದಿ ಶರಣರಿಗೆ ಸಲ್ಲುತ್ತದೆ. ಜಾಗತಿಕವಾಗಿ, ಸ್ತ್ರೀ ಪರವಾದ ಗಟ್ಟಿ ದನಿಯನ್ನು ಮೊಟ್ಟಮೊದಲು ಎತ್ತಿದವರೇ ಕನ್ನಡ ನಾಡಿನ ಶರಣರು. ಅವರು ಮಹಿಳೆಯ ಪರವಾಗಿ ದನಿ ಎತ್ತಿದ್ದಷ್ಟೇ ಅಲ್ಲ, ಅವಳಿಗೆ ಪುರುಷನ ಸರಿ ಸಮನಾದ ಸ್ಥಾನ-ಮಾನ-ಗೌರವಗಳನ್ನು ಕಲ್ಪಿಸಿ, ಅವಳ ಸ್ವಂತಿಕೆ, ಸ್ವೋಪಜ್ಞತೆ, ಮತ್ತು ಅಸ್ಮಿತೆಗಳನ್ನು ಅರುಹಿಕೊಟ್ಟು, ಅವಳೂ ಸ್ವತಂತ್ರವಾಗಿ ಚಿಂತಿಸುವ, ಮುಕ್ತವಾಗಿ ಮಾತಾಡುವ. ನೇರವಾಗಿ ಪ್ರಶ್ನಿಸುವ ಹಾಗೂ ತನ್ನ ಹಕ್ಕುಗಳಿಗಾಗಿ ಹೋರಾಡುವ ಧೈರ್ಯವನ್ನೂ ತುಂಬಿದರು. ಅಂತೆಯೇ ಪುರುಷನಿಗೆ ಸಮಾನವಾಗಿ ಕುಳಿತು ಸ್ಥಾವರ ವ್ಯವಸ್ಥೆಗೆ ಚಿಕಿತ್ಸೆ ಮಾಡುವ ಕೆಲಸದಲ್ಲಿ ತೊಡಗಿದರು ಅಸಂಖ್ಯ ಮಹಿಳೆಯರು. ಶರಣ ಕ್ರಾಂತಿಯಲ್ಲಿ ನೂರಾರು ಮಹಿಳೆಯರು ಪಾಲ್ಗೊಂಡಿದ್ದೇ ಇದಕ್ಕೆ ಸಾಕ್ಷಿ. ಅವರಲ್ಲಿ ಕೆಲವರು ಉಗ್ರ ಹೋರಾಟಗಾರರೂ ಇದ್ದರು.
ದೈಹಿಕ ಭಿನ್ನತೆಗಳೇನೇ ಇದ್ದರೂ ಮಹಿಳೆಯ ಆತ್ಮವೂ ಪುರುಷರ ಆತ್ಮದಷ್ಟೇ ಶ್ರೇಷ್ಠವಾದದ್ದು ಎಂದು ಸಾರಿದ್ದು ಶರಣರು ಮಾಡಿದ ಬಹುದೊಡ್ಡ ಕ್ರಾಂತಿ. ಹತ್ತಾರು ತರ್ಕರಹಿತ “ಸೂತಕ” ಗಳಿಂದ ಬಂಧಿತಳಾಗಿದ್ದ ಅವಳನ್ನು ಆ ಎಲ್ಲ ಬಂಧನಗಳಿಂದ ಮುಕ್ತ ಮಾಡಿ, ಅವಳಿಗೆ ಸಾಮಾಜಿಕ, ಧಾರ್ಮಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲೆಲ್ಲ ಸಮಾನ ಅವಕಾಶ ಕಲ್ಪಿಸಿ ಒಂದು ಮಹಾನ್ ಕ್ರಾಂತಿಯನ್ನೇ ಶರಣರು ಮಾಡಿದರು. ಆದರೆ ಶರಣರು ಎಷ್ಟೆಲ್ಲ ಪ್ರಯತ್ನ ಮಾಡಿದರೂ, ಮೇಲ್ವರ್ಣದವರ ಅನಗತ್ಯ ಮಡಿ-ಮೈಲಿಗೆತನದಿಂದಾಗಿ ಮತ್ತು ವರ್ಣಾಶ್ರಮ ಧರ್ಮದ ಕಟ್ಟಳೆಗಳಿಂದಾಗಿ ಅವಳು ಸೂತಕಗಳ ಮೂಲ ಕೇಂದ್ರವೆಂದೇ ಪರಿಗಣಿತಳಾಗಿ ಮತ್ತೆಯೂ ಕೆಳದರ್ಜೆಯ ಪ್ರಜೆಯಾಗಿಯೇ ಬದುಕಬೇಕಾಗಿ ಬಂತು. ಮೂಲಭೂತವಾದಿಗಳ ಅಂಥ ಕ್ರೌರ್ಯದ ನಡೆಯನ್ನು ಮತ್ತು ಶೋಷಣೆಯನ್ನು ತಡೆಗಟ್ಟಲು ಶರಣರು ಅನೇಕ ಬಗೆಯಲ್ಲಿ ಪ್ರಯತ್ನಿಸಿದರು. ಇಂಥ ಪ್ರಯತ್ನಗಳಲ್ಲಿ ಅವರು ಇಟ್ಟ ಒಂದು ಮಹತ್ವದ ಹೆಜ್ಜೆಯೆಂದರೆ, ವೈಜ್ಞಾನಿಕ ಪ್ರಯೋಗ ಮತ್ತು ಪ್ರಾತ್ಯಕ್ಷಿಕೆಗಳ ಮೂಲಕ ಸ್ತ್ರೀಸಮಾನತೆಯ ತಾರ್ಕಿಕತೆಯನ್ನು ನೈಜ ನೆಲೆಯಲ್ಲಿ ಪ್ರತಿಪಾದಿಸಿದ್ದು. ಇದು ಅವರ ಕ್ರಾಂತಿಕಾರಕ ಹೆಜ್ಜೆಯೇ ಹೌದು. ಇಂಥ ಮಾರ್ಗಕ್ರಮಣವು ಅವರ ವಚನಗಳಲ್ಲೂ ದಾಖಲೆಯಾದದ್ದು ಕೂಡ ವಿನೂತನ ದಾಖಲೆ. ಶರಣ ಜೇಡರ ದಾಸಿಮಯ್ಯನವರ ಒಂದು ವಚನ ಅಂಥ ವೈಜ್ಞಾನಿಕ ಪ್ರಯೋಗಕ್ಕೆ ಮಾದರಿಯಂತಿದೆ.
ನಿಡಿದೊಂದು ಕೋಲುವನು ಕಡಿದು ಎರಡು ಮಾಡಿ
ಅಡಿಯ ಹೆಣ್ಣ ಮಾಡಿ, ಒಡತಣದ ಗಂಡ ಮಾಡಿ
ನಡುವೆ ಹೊಸೆದಡೆ ಹುಟ್ಟಿದ ಕಿಚ್ಚು ಹೆಣ್ಣೊ ಗಂಡೊ?
ರಾಮನಾಥ.
(ಸಮಗ್ರ ವಚನ ಸಂಪುಟ: ಏಳು-2021 / ಪುಟ ಸಂಖ್ಯೆ-285 / ವಚನ ಸಂಖ್ಯೆ-815)
ಶರಣ ಜೇಡರ ದಾಸಿಮಯ್ಯನವರ ಈ ವಚನದಲ್ಲಿ ಹೇಳಲಾಗಿರುವ ಪ್ರಯೋಗವನ್ನು ಯಾರು ಬೇಕಾದರೂ ಮಾಡಿ ನೋಡಬಹುದು. ಇದರ ಪ್ರಾತ್ಯಕ್ಷಿಕೆಗಾಗಿ ಮೊದಲು ಒಂದು ಉದ್ದ ಕೋಲನ್ನು ತೆಗೆದುಕೊಳ್ಳಬೇಕು. ನಂತರ ಆ ಕೋಲನ್ನು ಕತ್ತರಿಸಿ ಎರಡು ತುಂಡು ಮಾಡಬೇಕು. ಹೀಗೆ ಕತ್ತರಿಸಿದ ನಂತರ ಕೋಲಿನ ಕೆಳಗಿನ ಭಾಗವನ್ನು ಹೆಣ್ಣೆಂದೂ, (ಹೆಣ್ಣು ಕೀಳೆಂಬ ಮೂರ್ಖ ಆಚರಣೆ ಆಗ ಇದ್ದ ಕಾರಣಕ್ಕೆ, ಆತ ಬೇಕಂತಲೇ ಹೆಣ್ಣನ್ನು ಕೆಳಭಾಗದಲ್ಲಿ ಇಡಲೆಂದೇ ಸೂಚಿಸುತ್ತಾನೆ) ಕೋಲಿನ ಮೇಲ್ಭಾಗವನ್ನು ಗಂಡೆಂದೂ (ಏಕೆಂದರೆ ಗಂಡು ಯಾವಾಗಲೂ ಮೇಲು ಎಂಬ ದುರಹಂಕಾರದ ನಡೆ ಇದ್ದ ಕಾರಣಕ್ಕೆ) ಕರೆಯಲು ಹೇಳುತ್ತಾನೆ. ಹಾಗೆ ಮಾಡಿ, ಎರಡೂ ತುಂಡುಗಳ ಕೊನೆಯ ತುದಿಗಳನ್ನು ಜೋರಾಗಿ ತಿಕ್ಕಿದಾಗ (ಹಿಂದಿನ ಕಾಲದಲ್ಲಿ ಅಗ್ನಿಯನ್ನು ಹೊತ್ತಿಸುವ ವಿಧಾನ ಅದೇ ಆಗಿತ್ತು) ಅಲ್ಲಿ ಸಹಜವಾಗಿಯೇ ಬೆಂಕಿ ಹೊತ್ತಿಕೊಳ್ಳುತ್ತದೆ. ಹೀಗೆ ಒಂದೆಡೆ ಹೆಣ್ಣು ಮತ್ತು ಇನ್ನೊಂದೆಡೆ ಗಂಡು ತುದಿಗಳು ಘರ್ಷಿಸುವಾಗ, ಹೊತ್ತಿಕೊಳ್ಳುವ ಬೆಂಕಿಯನ್ನು ಗಂಡು ಎನ್ನಬೇಕೋ ಅಥವಾ ಹೆಣ್ಣು ಎನ್ನಬೇಕೋ? ಇದು ಶರಣ ಜೇಡರ ದಾಸಿಮಯ್ಯನವರು ಸ್ತ್ರೀಶೋಷಕರಿಗೆ ಕೇಳುವ ಬಹಳ ತೀಕ್ಷ್ಣವಾದ ಮತ್ತು ಬಹು ಮುಖ್ಯ ಪ್ರಶ್ನೆ.
ಇಲ್ಲೇ ಇದೆ ಈ ವೈಜ್ಞಾನಿಕ ಪ್ರಯೋಗದ ಪಕ್ಕಾ ಪರಿಣಾಮ. ಭೌತವಿಜ್ಞಾನದ ಆಧಾರದಿಂದ ನಡೆಸುವ ಈ ಪ್ರಯೋಗದ ಒಟ್ಟು ಪರಿಣಾಮವೇ ಬೆಂಕಿ. ಹಾಗಿದ್ದರೆ ಈ ಬೆಂಕಿಯಲ್ಲಿ ಅಡಿಯಲ್ಲಿದ್ದ ಹೆಣ್ಣು ಕೋಲಿನ ಸ್ಥಾನ ಯಾವುದು? ಮೇಲಿದ್ದ ಗಂಡು ಕೋಲಿನ ಸ್ಥಾನ ಯಾವುದು? ಉತ್ತರ ಸ್ಪಷ್ಟ; ಎರಡೂ ಸೇರಿಯೇ ಬೆಂಕಿಯಾಗಿದೆ ಎಂದು. ಇಂಥ ಬೆಂಕಿ ಗಂಡೂ ಆಗಲಾರದು, ಹೆಣ್ಣೂ ಆಗಲಾರದು ಅಲ್ಲವೆ? ಭೌತಸತ್ಯದ ಈ ಪರಿಣಾಮವನ್ನೇ ಸಮಾಜದಲ್ಲಿಯ ಗಂಡು ಮತ್ತು ಹೆಣ್ಣಿನ ಸ್ಥಾನ-ಮಾನಗಳಿಗೆ ಅನ್ವಯಿಸುತ್ತ, ಎರಡೂ ಒಂದಾಗಿ ಕೂಡಿದಾಗ ಹೊಮ್ಮುವ ಏಕತ್ವದ (ಅದ್ವೆೈತದ) ಪರಿಣಾಮಕ್ಕೆ ಲಿಂಗ ವಿವಕ್ಷೆ (ತಾರತಮ್ಯ, Discrimination) ಇರಲಾರದು ಎಂಬ ವೈಜ್ಞಾನಿಕ ಸತ್ಯವನ್ನೇ ಶರಣ ಜೇಡರ ದಾಸಿಮಯ್ಯನವರು ಇಲ್ಲಿ ಪ್ರತಿಪಾದಿಸುತ್ತಾರೆ. ಇದೆಲ್ಲದರ ಮೂಲಕ ಆತ ಸಾಧಿಸಿ ತೋರಿಸ ಹೊರಟ ಸತ್ಯವೆಂದರೆ ಹೆಣ್ಣು ಕೀಳಲ್ಲ, ಗಂಡು ಮೇಲಲ್ಲ, ಎರಡೂ ಸಮಾನ ನೆಲೆಯಲ್ಲಿ ಕಾರ್ಯ ಪ್ರವೃತ್ತವಾದಾಗಲೇ ಒಂದು ಖಚಿತ ಪರಿಣಾಮ ದೊರೆಯುತ್ತದೆ ಎಂಬುದನ್ನು. ಹೀಗೆ ಸ್ತ್ರೀಸಮಾನತೆಯ ಸಮಾಜಿಕ ಸಿದ್ಧಾಂತವನ್ನು ವೈಜ್ಞಾನಿಕ ಪ್ರಾತ್ಯಕ್ಷಿಕೆಯ ಮೂಲಕ ಕಣ್ಣಿಗೆ ಕಾಣುವ ಹಾಗೆ ತೋರಿಸಿಕೊಟ್ಟದ್ದೇ ಒಂದು ವಿನೂತನ ಕ್ರಮ.
ಇನ್ನೂ ಮುಂದೆ ಹೋಗಿ ನೋಡಿದರೆ, ಪಂಚಭೂತಗಳಲ್ಲಿ ಒಂದಾದ ಅಗ್ನಿತತ್ವದ ಬೆಂಕಿಯ ಗುಣವು ಹೆಣ್ಣು ಮತ್ತು ಗಂಡು ಎರಡೂ ಜೀವಗಳಲ್ಲಿ ಸಮನಾಗಿಯೇ ಇರುತ್ತದೆಯಷ್ಟೇ ಅಲ್ಲ; ಆ ಎರಡೂ ಜೀವಗಳು ಒಟ್ಟುಗೂಡಿದಾಗಲೂ ಅದೇ ಗುಣ ಪ್ರಕಟವಾಗುತ್ತದೆಯೆಂಬ ದರ್ಶನ ಇಲ್ಲಿ ಹೊಳೆಯುತ್ತದೆ. ಹೀಗಿರುವಾಗ ಇದರಲ್ಲಿ ಹೆಣ್ಣು-ಗಂಡೆಂಬ ಭೇದ-ಭಾವ ಎಲ್ಲಿಂದ ಬಂತು? ಇದೇ ಮೂಲ ಪ್ರಶ್ನೆ. ಗಂಡು ಮೇಲು ಮತ್ತು ಹೆಣ್ಣು ಕೀಳು ಎಂದೇ ನಿರ್ಧರಿಸಿ, ಅವಳನ್ನು ಅದೇ ಕಾರಣಕ್ಕೆ ಶೋಷಿಸುವ ನಮ್ಮ ಸಮಾಜ ಇಂಥ ಪ್ರಯೋಗದ ವಾಸ್ತವ ಪರಿಣಾಮವನ್ನು ಕಣ್ತೆರೆದು ನೋಡಬೇಕು. ಹಾಗೆ ನೋಡಿ ತಮ್ಮ ನಿರ್ಧಾರವನ್ನು ಬದಲಿಸಿಕೊಳ್ಳಲಿ ಎಂಬುದೇ ಶರಣ ಜೇಡರ ದಾಸಿಮಯ್ಯನವರ ಮುಖ್ಯ ಆಶಯ-ಅಪೇಕ್ಷೆ.
ಪಂಚಭೂತ ತತ್ವದ ಹಿನ್ನೆಲೆಯಲ್ಲಿ ಅಗ್ನಿಯು ಬೆಂಕಿ ಮತ್ತು ಬೆಳಕು ಎರಡೂ ಆಗುವ ವಾಸ್ತವವನ್ನೂ ಇಲ್ಲಿ ಗಮನಿಸಬೇಕು. ಹೆಣ್ಣು-ಗಂಡು “ಇಬ್ಬರೂ” ಸಮ-ಸಮನಾಗಿ ನಿಂತಾಗ ಸಮಾಜದ ಕತ್ತಲೆಯನ್ನು ಓಡಿಸುವ ಬೆಳಕೂ ಆಗಬಲ್ಲರು, ಅಥವಾ ಇಲ್ಲಿರುವ (ಕೀಳುತನದ) ಕಸವನ್ನು ಸುಟ್ಟುಹಾಕುವ ಬೆಂಕಿಯೂ ಆಗಬಲ್ಲರು. ಹೀಗಿರುವಾಗ ಹೆಣ್ಣು ಕಡಿಮೆ, ಗಂಡು ಹೆಚ್ಚು ಎನ್ನುವ ತರತಮದ ಮಾತು ಮತ್ತು ಆಚರಣೆಗೆ ಅರ್ಥವೇ ಇಲ್ಲ. ಆ ನೆಲೆಯಲ್ಲೂ ಗಂಡು ಮತ್ತು ಹೆಣ್ಣು ಇಬ್ಬರೂ ಸಮಾನರೆಂಬ ತಾರ್ಕಿಕ ಸತ್ಯವೇ ಇಲ್ಲಿ ಪ್ರತಿಪಾದಿತವಾಗುತ್ತದೆ.
ವರ್ಗ ಮತ್ತು ವರ್ಣಸಮಾನತೆಯ ಜೊತೆಗೇ ಶರಣರು ವೈಜ್ಞಾನಿಕವಾಗಿ ಸಾಧಿಸಿ ತೋರಿಸ ಹೊರಟದ್ದು ಲಿಂಗ ಸಮಾನತೆಯನ್ನು. ಅವರ ಇಂಥ ಪ್ರಯತ್ನದ ಪರಿಣಾಮವಾಗಿಯೇ ಶರಣ ಕ್ರಾಂತಿಯಲ್ಲಿ ಅಸಂಖ್ಯ ಮಹಿಳೆಯರ ದನಿ ಕೇಳುವಂತಾಯ್ತು, ಸಮಾಜದ ಎಲ್ಲ ಚಟುವಟಿಕೆಗಳಲ್ಲೂ ಮಹಿಳೆ ಪುರುಷನ ಸಮನಾಗಿ ನಿಲ್ಲುವಂತಾಯಿತು. ಮನುಕುಲದ ಚರಿತ್ರೆಯಲ್ಲಿ ಇದು ಬಹುದೊಡ್ಡ ಕ್ರಾಂತಿ. ಶರಣ ಜೇಡರ ದಾಸಿಮಯ್ಯನವರ ಪ್ರಸ್ತುತ ವಚನ ಅಂಥ ಕ್ರಾಂತಿಗೆ ಹೊಸ ದಿಕ್ಕನ್ನು ತಂದುಕೊಟ್ಟ ಶರಣರ ಪ್ರಾಯೋಗಿಕ ನಡೆಗೆ ಗಮನಾರ್ಹ ಸಾಕ್ಷಿಯಾಗಿದೆ. ಸ್ತ್ರೀ-ಪುರುಷ ಎಂಬ ಅಸಮಾನತೆ ತಾಂಡವಿಸುತ್ತಿರುವ, ಮತ್ತು ಅದೇ ಕಾರಣಕ್ಕಾಗಿ ಮಹಿಳೆಯರ ಮೇಲೆ ನಿತ್ಯ ನಡೆಯುತ್ತಿರುವ ಶೋಷಣೆಯ ನಿಯಂತ್ರಣಕ್ಕೆ ಶರಣರ ಇಂಥ ವೈಜ್ಞಾನಿಕ ನಡೆ-ನುಡಿ ಎರಡೂ ಮಹತ್ವದ ಮಾರ್ಗದರ್ಶಿಯಾಗಿವೆ.
ಡಾ. ಬಸವರಾಜ ಸಾದರ.
ನಿಲಯದ ನಿರ್ದೇಶಕರು (ನಿ), ಆಕಾಶವಾಣಿ, ಬೆಂಗಳೂರು.
#303, ಎಸ್. ಎಲ್. ವಿ. ತೇಜಸ್, 3 ನೇ ಮಹಡಿ,
2 ನೇ ಅಡ್ಡ ರಸ್ತೆ, ಭುವನೇಶ್ವರಿ ನಗರ,
(ಹೆಬ್ಬಾಳ-ಕೆಂಪಾಪೂರ)
ಬೆಂಗಳೂರು – 560 024
ಮೋಬೈಲ್ ಸಂ. +91 98869 85847
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in
ನಿಮ್ಮ ಲೇಖನಗಳು ಸಂಗ್ರಹ ಯೋಗ್ಯ.
ಇಷ್ಟು ಸರಳವಾಗಿ, ಸುಂದರವಾಗಿ ಅರ್ಥ ಮತ್ತು ವಿವರಣೆ ಹೋಳಿಗೆ ಸೀಕರಣೆಯ ರುಚಿ.
ವಚನ ವಿಶ್ಲೇಷಿಸುವ ನಿಮ್ಮ ಬರೆಹ ಅದ್ಭುತವಾಗಿದೆ ಆದರೂ ಇಂದಿನ ದಿನ ಮಾನದಲ್ಲಿ ಮಹಿಳೆಯರಿಗೆ ಅಂತರಿಕ್ಷದಲ್ಲಿ ಆಟೋ ರಿಕ್ಷ ಎರಡೂ ಸುರಕ್ಷಿತ!ಅಲ್ಲ ಎನ್ನುವ ಭಯ ಮಹಿಳೆಯರಿಗೆ ವಾಸ್ತವ್ಯ ವಾಸ್ತವಿಕತೆಯ ಭಯಾನಕ ಗುಹೆಯೇ ಎನ್ನುವ ಅನುಮಾನ ಅವರಿಗೆ
ಅಂತಹ ಸ್ಥಿತಿಯಲ್ಲಿರುವ ಅಸುರಕ್ಷಿತವಾದ ಮನಸ್ಸಿನ ಗೆ ಸುಶೀಲ ಭಾವ ನೀಡುವ ಲೇಖನ ಅದ್ಭುತ ಅನುಭವ ಅಭಿನಂದನೆ ಸರ್
ಹೆಣ್ಣು ಗಂಡು ಎಂಬ ಭೇದ ಭಾವದ, ವೈಚಾರಿಕ ಪ್ರಜ್ಞೆಯ,ವೈಜ್ಞಾನಿಕ ಸಿದ್ಧಾಂತದ, ಜೇಡರ ದಾಸಿಮಯ್ಯನವರ ವಚನವನ್ನು ಅತ್ಯಂತ ಸರಳವಾಗಿ ಸ್ಪಷ್ಟವಾಗಿ ವಿಶ್ಲೇಷಣೆ ಮಾಡಿದ್ದೀರಿ ಸರ್,ತಮ್ಮ ವಚನ ಯಾನ , ವಚನ ವಿಶ್ಲೇಷಣೆ ಸಮಾಜಮುಖಿ ಚಿಂತನೆಗಳ ಜೊತೆಗೆ ಸಾಹಿತ್ಯಕ ಮೌಲ್ಯಗಳಿಗೆ ಪುಷ್ಠಿ ನೀಡುತ್ತವೆ ಸರ್.