ಪ್ರಾಣಲಿಂಗಿ ಸ್ಥಲ / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಅಂತರಂಗದೊಳಗಿರ್ದ ನಿರವಯಲಿಂಗವನು
ಸಾವಯವ ಲಿಂಗವ ಮಾಡಿ,
ಶ್ರೀಗುರುಸ್ವಾಮಿ ಕರಸ್ಥಲಕ್ಕೆ ತಂದುಕೊಟ್ಟನಾಗಿ,
ಆ ಇಷ್ಟಲಿಂಗವೆ ಅಂತರಂಗವನಾವರಿಸಿ
ಅಂತರಂಗದ ಕರಣಂಗಳೆ ಕಿರಣಂಗಳಾಗಿ
ಬೆಳಗುವ ಚಿದಂಶವೆ ಪ್ರಾಣಲಿಂಗವು,
ಆ ಮೂಲಚೈತನ್ಯವೆ ಭಾವಲಿಂಗವು.
ಇದನರಿದು, ನೋಡುವ ನೋಟ ಭಾವಪರಿಪೂರ್ಣವಾಗಿ
ತಾನು ತಾನಾದಲ್ಲದೆ, ಇದಿರಿಟ್ಟು ತೋರುವುದಿಲ್ಲವಾಗಿ
ಅಖಂಡ ಪರಿಪೂರ್ಣವಪ್ಪ ನಿಜವು ತಾನೆ,
ಕೂಡಲಸಂಗಮದೇವ.
(ಸಮಗ್ರ ವಚನ ಸಂಪುಟ: ಒಂದು-2021 / ಪುಟ ಸಂಖ್ಯೆ-280 / ವಚನ ಸಂಖ್ಯೆ-971)

ಅಂತರಂಗದೊಳಗೆ ನೆಲೆಗೊಂಡ ನಿರಾಕಾರವಾದ ಲಿಂಗವನ್ನು ಸಾಕಾರ ರೂಪದ ಲಿಂಗವ ಮಾಡಿ ಶ್ರೀಗುರುಸ್ವಾಮಿ ಕರಸ್ಥಲದಲ್ಲಿ ಇಷ್ಟಲಿಂಗ ರೂಪದಲ್ಲಿ ತಂದು ಕೊಟ್ಟನು. ಸಾಧಕ ಅಥವಾ ಶರಣ ಗುರುಮುಖವಾಗಿ ಬಂದ ಆ ಇಷ್ಟಲಿಂಗವನ್ನು ಪೂಜಿಸುತ್ತಾ ಪೂಜಿಸುತ್ತಾ ಮತ್ತೆ ಆ ಲಿಂಗವನ್ನು ತನ್ನ ಅಂತರಂಗದೊಳಗೆ ನೆಲೆಗೊಳಿಸುತ್ತಾನೆ. ಹೀಗೆ ಅಂತರಂಗವನ್ನಾವರಿಸಿಕೊಂಡ ಆ ಲಿಂಗವು ಶುದ್ಧೀಕರಣ ಕ್ರಿಯೆಗೆ ತೊಡಗುತ್ತದೆ. ಈ ಶುದ್ಧೀಕರಣದಿಂದ ಅಂತರಂಗ (ಮನಸ್ಸು) ದಿಂದ ಉದ್ದೀಪನಗೊಳ್ಳುವ, ನಿಯಂತ್ರಣಕ್ಕೆ ಒಳಪಡುವ ಕರಣ (ಪಂಚೇಂದ್ರಿಯ) ಗಳು ಜ್ಯೋತಿ ಸ್ವರೂಪದ ಕಿರಣಗಳಂತೆ ಕಂಗೊಳಿಸುತ್ತವೆ. ಅಂದರೆ ಇಲ್ಲಿ ಅಂಗವು ಲಿಂಗವಾಗುವ, ಲಿಂಗವು ಅಂಗವಾಗುವ, ಸರ್ವಾಂಗ ಲಿಂಗಮಯವಾಗುವ ರಾಸಾಯನಿಕ ಕ್ರಿಯೆ ನಡೆಯುತ್ತದೆ. ಇದು ಬಹು ದೊಡ್ಡ ಪ್ರಯೋಗ. ಸಾಧಕ ಅಥವಾ ಶರಣನ ಅಂತರಂಗವೇ ಪ್ರಯೋಗಾಲಯ. ಈ ಲಿಂಗಾಂಗ ಸಾಮರಸ್ಯದಿಂದ ಬೆಳಗುವ ಕಾಂತಿಯುತವಾದ ಚಿದಂಶದ ಉತ್ಪತ್ತಿಯಾಗುತ್ತದೆ. ಅದೇ ಪ್ರಾಣಲಿಂಗವಾಗಿ ಪರಿವರ್ತನೆಯಾಗುವ ಹಂತ. ಈ ಪ್ರಾಣಲಿಂಗವು ಅಮೂಲ್ಯ ಚೈತನ್ಯರೂಪವಾಗಿ ಭಾವಲಿಂಗವಾಗಿ ಪರಿವರ್ತಿತವಾಗುತ್ತದೆ. ಭಾವಲಿಂಗ ಭಾವಂತರಂಗವನ್ನು ಆವರಿಸುತ್ತಾ ಹೋದಂತೆ ಸಾಧಕ ಅಥವಾ ಶರಣನಾದವನ ನೋಡುವ ನೋಟ ಲಿಂಗಮಯ, ಮಾತನಾಡುವ ಭಾಷೆ ಲಿಂಗಮಯ, ಸೇವಿಸುವ ಪ್ರಸಾದ ಲಿಂಗಮಯ, ಕೇಳುವ ಕ್ರಿಯೆ ಲಿಂಗಮಯ, ಆಘ್ರಾಣಿಸುವ ವಾಸನೆ ಲಿಂಗಮಯ. ಒಟ್ಟಾರೆ ನಡೆ-ನುಡಿ ಎಲ್ಲವೂ ಲಿಂಗಮಯವೇ ಆಗುವುದು. ಮುಂದುವರೆದು ಸಾಧಕ ಅಥವಾ ಶರಣ ಲಿಂಗವೇ ಆಗಿ ಪರಿವರ್ತನೆ ಹೊಂದುವನು. ಇದೇ ಭಾವಪೂರ್ಣತೆ, ಅಖಂಡ ಪರಿಪೂರ್ಣವಾದ ನಿಜದ ನಿಲುವು. ಒಟ್ಟಿನಲ್ಲಿ ಸಾಧಕ ಶರಣನಾಗುವ, ಶರಣ ಶಿವಯೋಗಿಯಾಗುವ ಹಂತಗಳು. ವಿಶ್ವಗುರು ಬಸವಣ್ಣನವರು ಈ ತತ್ವಗಳನ್ನು ಅತ್ಯಂತ ಸರಳವಾಗಿ, ಸುಲಭವಾಗಿ, ಸುಂದರವಾಗಿ ತಮ್ಮ ಪ್ರಸ್ತುತ ಮೇಲಿನ ವಚನದಲ್ಲಿ ಅನುಸಂಧಾನಗೊಳಿಸಿದ್ದಾರೆ. ಪ್ರಾಣಲಿಂಗಿ ಸ್ಥಲವನ್ನು ಕೇಂದ್ರೀಕರಿಸಿಕೊಂಡಿರುವ ಈ ಲೇಖನಕ್ಕೆ ಗುರು ಬಸವಣ್ಣನವರ ಪ್ರಸ್ತುತ ವಚನ ಪೂರಕವಾಗಿ ನಿಲ್ಲುತ್ತದೆ.

12 ನೇ ಶತಮಾನದ ಬಸವಾದಿ ಶಿವ ಶರಣರು ಅಂತಿಮವಾಗಿ ಕಂಡುಕೊಂಡ “ಸತ್ಯದರ್ಶನ” ಎಂಬುದು ಮುಕ್ತಿಯಾಗಿತ್ತು. ಈ ಮುಕ್ತಿ ಎಂದರೆ ಜೀವ ಜಂಜಡದಿಂದ ಅಲಿಪ್ತವಾಗುವುದು. ಸಾಮಾನ್ಯವಾಗಿ “ಮುಕ್ತಿ” ಎಂದರೆ ಮರಣದ ನಂತರದ ಬಿಡುಗಡೆ ಎಂಬ ಭಾವನೆ ಇದೆ. ಆದರೆ ಬಸವಾದಿ ಶಿವ ಶರಣರ ದೃಷ್ಟಿಯಲ್ಲಿ ಮುಕ್ತಿ ಎಂದರೆ “ಲಿಂಗ ಹಿಡಿದು ಲಿಂಗಿ” ಆಗುವುದು. ಅಂದರೆ ತಮ್ಮ ಜೀವಿತಾವಧಿಯಲ್ಲಿಯೇ “ಮುಕ್ತಿ (ಬಿಡುಗಡೆ)” ಯ ಸೌಖ್ಯವನ್ನು ಅನುಭವಿಸುವುದಾಗಿದೆ. ಇದೊಂದು ಕಾರಾಗೃಹದಿಂದ ಖೈದಿಯನ್ನು ಬಿಡುಗಡೆಗೊಳಿಸಿದಂತೆ, ಜೀವ-ಜಂಜಡದಿಂದ ಮುಕ್ತವಾಗಿ ಆತ್ಮಸುಖದ ಪರಮಾನಂದ ಅನುಭವಿಸುವುದಾಗಿದೆ.

ಪರಮಾನಂದದ ಪರಮಸುಖ ಅನುಭವಿಸಲು ಸಾಧಕನು ಸಾಧನಾ ಮಾರ್ಗಗಳನ್ನು ಅವಲಂಬಿಸಬೇಕಾಗುತ್ತದೆ. ಹೀಗೆ ಸಾಧಕ ಅಥವಾ ಶರಣನು ಅನುಸರಿಸಬೇಕಾದ ಸಾಧನಾ ಮಾರ್ಗಗಳು ಮುಖ್ಯವಾಗಿ ಮೂರು ಇವೆ. ಅವುಗಳೇ ಅಷ್ಟಾವರಣ, ಪಂಚಾಚಾರ ಮತ್ತು ಷಟಸ್ಥಲಗಳು. ಇವುಗಳನ್ನೇ ಲಿಂಗಾಯತ ಧರ್ಮದ ತತ್ವಗಳು, ಮಾನವ ಕಲ್ಯಾಣ ಮಾರ್ಗದ ದೀವಿಗೆಗಳು ಎಂದೂ ಕರೆಯಬಹುದಾಗಿದೆ.

ಮಾನವನ ಬದುಕು ಸನ್ಮಾರ್ಗದಲ್ಲಿ ನಡೆದು ಸುಖಮಯವಾಗಲು ಧರ್ಮಗಳು ದಾರಿದೀಪವಾಗಿ ಬೆಳಕನ್ನು ನೀಡಿವೆ. ಲಿಂಗಾಯತ ಧರ್ಮವೂ ಸಹ ಮಾನವರ ಬದುಕನ್ನು ಹಸನು ಮಾಡಲು ವೈಚಾರಿಕ, ವೈಜ್ಞಾನಿಕ ತಳಹದಿಯ ಮೇಲೆ ತನ್ನದೇ ಆದ ತತ್ವ ಸಿದ್ಧಾಂತಗಳನ್ನು ರೂಪಿಸಿತು. 12 ನೇ ಶತಮಾನದಲ್ಲಿ ಉದಯಿಸಿದ ಶರಣ ಧರ್ಮ ಅಸಂಖ್ಯಾತ ಶರಣರಿಂದ ಕಾರ್ಯ ರೂಪಕ್ಕೆ ಬಂದಿತು. ಬಸವಾದಿ ಶಿವ ಶರಣರು ಲಿಂಗಾಯತ ಧರ್ಮದ ತತ್ವ-ಸಿದ್ಧಾಂತಗಳನ್ನು ನಡೆಯಲ್ಲಿ ರೂಢಿಸಿಕೊಂಡಿದ್ದರಿಂದ ಲಿಂಗಾಯತ ಧರ್ಮ ನಡೆಯ ಧರ್ಮವಾಯಿತು. ನುಡಿದಂತೆ ನಡೆದ, ನಡೆದಂತೆ ನುಡಿದ ಧರ್ಮವಾಯಿತು. ಈ ನಡೆ ಸಿದ್ಧಾಂತವು ಮತ್ತು ನುಡಿ ಸಿದ್ಧಾಂತವು ಏಕೀರ್ಭವಿಸಿ ನಡೆ-ನುಡಿ ಸಾಮರಸ್ಯದ ಸಿದ್ಧಾಂತವಾಯಿತು. ನಡೆಗೂ ನುಡಿಗೂ ಲಿಂಗವೇ ಸಾಕ್ಷಿಯಾಗಿದ್ದು ಆ ಲಿಂಗವನ್ನು ಅಂಗದಲ್ಲಿ ಆಯತವಾಗಿಸಿಕೊಂಡು ಲಿಂಗಾಯತರೆಂದು ಶರಣರು ಕರೆಯಿಸಿಕೊಂಡರು. ಹೀಗೆ ಲಿಂಗವನ್ನು ಆಯತ ಮಾಡಿಕೊಂಡ ಶರಣರು ಲಿಂಗಾಯತರಾದರೆ, ಈ ಲಿಂಗಾಯತರು ಕಾಯಾ, ವಾಚಾ, ಮನಸಾ ಲಿಂಗತತ್ವ ಅನುಸರಿಸಿದ್ದರಿಂದ ಈ ಆಚರಣೆ ಲಿಂಗಾಯತ ಧರ್ಮವಾಯಿತು.

ಬಸವಾದಿ ಶಿವ ಶರಣರ ತತ್ವ ಸಿದ್ಧಾಂತ, ನಡೆ-ನುಡಿ ಸಾಮರಸ್ಯ, ಕ್ರಿಯಾ, ಜ್ಞಾನ, ಭಕ್ತಿಗಳ ಉದ್ದೀಪನಕ್ಕೆ ಲಿಂಗಾಯತ ಧರ್ಮದ ತತ್ವಗಳಾದ ಅಷ್ಟಾವರಣ, ಪಂಚಾಚಾರ, ಷಟಸ್ಥಲಗಳು ಮಾನವರ ಕಲ್ಯಾಣದ ದೀವಿಗೆಗಳಾಗಿವೆ. ಇವುಗಳಲ್ಲಿ ಅಷ್ಟಾವರಣ ಲಿಂಗಾಯತ ಧರ್ಮದ ಅಂಗವೆನಿಸಿದರೆ, ಪಂಚಾಚಾರ ಪ್ರಾಣವೆನಿಸಿದೆ ಮತ್ತು ಷಟಸ್ಥಲ ಅದರ ಆತ್ಮವೆನಿಸಿದೆ.

ಇವುಗಳು ಭವಿಯನ್ನು ಭಕ್ತನನ್ನಾಗಿಸಿ, ಭಕ್ತನನ್ನು ಜ್ಞಾನಿಯನ್ನಾಗಿಸಿ, ಜ್ಞಾನಿಯನ್ನು ಜಂಗಮವನ್ನಾಗಿಸಿ ಅಂತಿಮವಾಗಿ ನಿರಾಕಾರ ಶಿವನಲ್ಲಿ ನೆಲೆಗೊಳಿಸಿ ಜೀವಿತಾವಧಿಯಲ್ಲಿಯೇ ಜೀವಾತ್ಮನನ್ನು ಮುಕ್ತಾತ್ಮನನ್ನಾಗಿಸುವ ಸಾಧನಾ ರಂಗಗಳಾಗಿವೆ.

ಲಿಂಗಾಯತ ಧರ್ಮದಲ್ಲಿ ಶಿವ (ಶೂನ್ಯ), ಪರಮಾತ್ಮ (ಲಿಂಗಾತ್ಮ), ಜೀವಾತ್ಮಗಳ ಪರಿಕಲ್ಪನೆಯನ್ನು ಅವಲೋಕನ ಮಾಡಿಕೊಂಡು ಮುಂದೆ ಹೋಗೋಣ. ಲಿಂಗಾಯತ ಧರ್ಮದಲ್ಲಿ “ಶಿವ” ಎಂದರೆ ಏನು? ಎಂಬುದು ತುಂಬಾ ಮಹತ್ವದ ವಿಚಾರವಾಗಿದೆ. ಜೊತೆಗೆ ಈ ಪರಮಾತ್ಮ ಮತ್ತು ಜೀವಾತ್ಮಗಳ ಕುರಿತಾದ ಸೂಕ್ಷ್ಮ ವಿಚಾರಗಳ ತಿಳುವಳಿಕೆಯೂ ಮುಖ್ಯವಾಗಿದೆ.

ಲಿಂಗಾಯತ ಧರ್ಮದಲ್ಲಿ ಶಿವನೆಂದರೆ ಶೂನ್ಯ. ಶೂನ್ಯವೆಂದರೆ ಪರಿಪೂರ್ಣ. ಮುಖ್ಯವಾಗಿ ತಿಳಿದುಕೊಳ್ಳುವ ವಿಷಯವೇನೆಂದರೆ ಶಿವನೆಂದರೆ ನಾವೆಲ್ಲರೂ ತಿಳಿದುಕೊಂಡಂತೆ ಪರಬ್ರಹ್ಮ ತ್ರಿಮೂರ್ತಿ (ಬ್ರಹ್ಮ-ವಿಷ್ಣು-ಮಹೇಶ್ವರ) ಗಳಲ್ಲಿ ಒಬ್ಬನಾದ ಶಿವನಲ್ಲ ಎನ್ನುವುದು. ಹಾಗಾದರೆ ಆ ಶಿವನು ಯಾರು ಎಂದರೆ ಅವನು ನಿರಾಕಾರನಾದ ಪರವಸ್ತು, ಒಡಲಿಲ್ಲದ ಬಯಲು. ಅದೇ ಮಹಾಲಿಂಗ.

ಈ ಲಿಂಗದ ನಿಲುವು ಎರಡು ಹಂತದಲ್ಲಿ ನೆಲೆಗೊಳ್ಳುವುದು. ಒಂದು ವಿಶ್ವ ಹಂತದಲ್ಲಿ ಹಾಗೂ ಎರಡನೇಯದು ವ್ಯಕ್ತಿಯ ಹಂತದಲ್ಲಿ. ಈ ಶೂನ್ಯ ನಿಲುವಿನ ನಂತರದ ನಿಲುವೇ ವಿಶ್ವ ರಚನೆಯ ಹಂತ. ಈ ವಿಶ್ವ ರಚನೆಯ ಹಂತವು ಶೂನ್ಯವನ್ನು ದಾಟಿ ಒಂದೇ ಒಂದು ರೂಪವನ್ನು ತಾಳುತ್ತದೆ. ಇದನ್ನೇ ಅದ್ವೈತ ಎನ್ನಲಾಗುವುದು. ಅಂದರೆ ದ್ವೈತ (ಎರಡು) ಇಲ್ಲದ್ದು ಎಂದು ಅರ್ಥ. ಅದು ಒಂದೇ ವಿಶ್ವ ಎಂದೆನಿಸಿಕೊಳ್ಳುತ್ತದೆ. ಈ ವಿಶ್ವದ ನಿಲುವನ್ನೇ ಶರಣರ ಭಾಷೆಯಲ್ಲಿ “ಮಹಾಲಿಂಗ ಎಂದು ಕರೆಯಲಾಗಿದೆ.

“ಈ ವಿಶ್ವ ರಚನೆಯ ವಿಶ್ವ ಚೈತನ್ಯವನ್ನೇ ಲಿಂಗಚೈತನ್ಯವೆಂದು ಲಿಂಗವಂತ ದರ್ಶನವು ಮೂಲಭೂತವಾಗಿ ಪರಿಗ್ರಹಿಸುತ್ತದೆ. ಲಿಂಗವಂತರ ಪರಿಭಾಷೆಯಲ್ಲಿ ಲಿಂಗವೆಂದರೆ ವ್ಯಕ್ತಿಯ ಅಂಗದ ಮೇಲೆ ಧರಿಸುವ ಇಷ್ಟಲಿಂಗದಿಂದ ಹಿಡಿದು ವಿಶ್ವ ಚೈತನ್ಯವಾದ ಮಹಾಲಿಂಗದವರೆಗೂ ವ್ಯಾಪಿಸಿಕೊಂಡಿರುತ್ತದೆ ಎನ್ನುವುದನ್ನು ಜಾಗ್ರತೆಯಿಂದ ಪರಾಮರ್ಶಿಸಬೇಕು” ಇದನ್ನು ಡಾ. ಸಿದ್ಧರಾಮ ಶರಣರು ಬೆಲ್ದಾಳ ಅವರು ತಮ್ಮ “ಬಸವತತ್ವ ಪ್ರದೀಪಿಕೆ” ಪುಟ ಸಂಖ್ಯೆ-249 ರಲ್ಲಿ ಉಲ್ಲೇಖಿಸಿದ್ದಾರೆ.

ವ್ಯಕ್ತಿಯ ವ್ಯಕ್ತಿಗತ ಹಂತದಲ್ಲಿ ಶರೀರಮಯವಾಗಿ ಮೂರು ಹಂತಗಳಲ್ಲಿ ಈ ಲಿಂಗವನ್ನು ನೋಡಬಹುದಾಗಿದೆ. ವ್ಯಕ್ತಿಯಲ್ಲಿ ಸ್ಥೂಲ, ಸೂಕ್ಷ್ಮ ಮತ್ತು ಕಾರಣ ಶರೀರಗಳೆಂದು ಮೂರು ಶರೀರಗಳಿವೆ.
 ಸ್ಥೂಲ ಶರೀರದಲ್ಲಿ ಕ್ರಿಯಾಲಿಂಗವಿರುತ್ತದೆ. ಅದೇ ಇಷ್ಟಲಿಂಗ. ಈ ಇಷ್ಟಲಿಂಗವನ್ನು ಪೂಜಿಸುತ್ತ ವ್ಯಕ್ತಿ ಅಥವಾ ಸಾಧಕ ವಿಷಯ ವಾಸನೆಗಳನ್ನು ಒಂದೊಂದಾಗಿ ಕಳಚುತ್ತಾ ತ್ಯಾಗಾಂಗ ಹೊಂದುತ್ತಾನೆ.
 ಸೂಕ್ಷ್ಮ ಶರೀರದಲ್ಲಿ ಜ್ಞಾನಲಿಂಗವಿದ್ದು ಅದೇ ಪ್ರಾಣಲಿಂಗ. ಈ ಪ್ರಾಣಲಿಂಗ ಹೊಂದಿದ ವ್ಯಕ್ತಿ ಅಥವಾ ಸಾಧಕ ಭೋಗಿಸುವುದೆಲ್ಲವೂ ಲಿಂಗಮಯ, ಲಿಂಗಾರ್ಪಿತವೆನಿಸುತ್ತದೆ. ಅದು ಭೋಗಾಂಗವಾಗಿತ್ತದೆ.
 ಕಾರಣ ಶರೀರದಲ್ಲಿ ಭಾವಲಿಂಗವಿದ್ದು ಅದೇ ಭಾವಲಿಂಗ. ಇದರಿಂದ ವ್ಯಕ್ತಿ ಅಥವಾ ಸಾಧಕ ಲಿಂಗಾಂಗ ಸಾಮರಸ್ಯ ಹೊಂದುತ್ತಾನೆ. ಇದು ಯೋಗಾಂಗವಾಗುತ್ತದೆ.

ಹೀಗೆ ಲಿಂಗ ಚೇತನವು ಮೂರೂ ಶರೀರಗಳಲ್ಲಿ ಸಂಚರಿಸಿದಾಗ ಅವುಗಳು ಶುದ್ಧವಾಗುತ್ತವೆ. ಶುದ್ಧವಾಗಿ ತ್ಯಾಗಾಂಗ, ಭೋಗಾಂಗ ಮತ್ತು ಯೋಗಾಂಗಗಳು ಎನಿಸಿಕೊಳ್ಳುತ್ತವೆ.

ಮುಂದುವರೆದು ನಾವು ತಿಳಿದುಕೊಳ್ಳಬೇಕಾದ ಬಹುಮುಖ್ಯವಾದ ಅಂಶಗಳೆಂದರೆ ಶರೀರತ್ರಯಗಳ ಕಾರ್ಯ ಮತ್ತು ಅವುಗಳು ಕಾರ್ಯನಿರ್ವಹಿಸುವ ಇಂದ್ರಿಯಗಳ ಕುರಿತು. ಸ್ಥೂಲ, ಸೂಕ್ಷ್ಮ ಮತ್ತು ಕಾರಣ ಶರೀರಗಳು ಐದು ಐದರಂತೆ ಹದಿನೈದು ಇಂದ್ರಿಯಗಳ ಮೂಲಕ ಕಾರ್ಯ ನಿರ್ವಹಿಸುತ್ತವೆ. ಅವುಗಳನ್ನು ಹೀಗೆ ನೋಡಬಹುದು.

ಇದು ಒಬ್ಬ ವ್ಯಕ್ತಿಯ ಶರೀರ ರಚನೆಯ ಒಂದು ಸಮಗ್ರ ನೋಟವಾಗಿದೆ.

ಈಗ ಜೀವಾತ್ಮದ ಪರಿಕಲ್ಪನೆಯನ್ನು ನೋಡೋಣ. ಜೀವ, ಜೀವಾತ್ಮದ ನಿರ್ಮಾಣವು ಸೃಷ್ಟಿ ಕ್ರಿಯೆಯಲ್ಲಿ ಒಂದು ಅತ್ಯದ್ಭುತವಾದ ರೋಚಕ ಕ್ರಿಯೆಯಾಗಿದೆ. ಜೀವಾತ್ಮ ಶಿವನ ಒಂದು ಆಂಶವಾಗಿದ್ದು ಯಾವಾಗ ಈ ಜೀವಾತ್ಮಕ್ಕೆ ಅಜ್ಞಾನದ ಕತ್ತಲೆಯು ಮುಸುಕಿಕೊಳ್ಳುತ್ತದೆಯೋ ಆಗ ಅದು ಅಂಗ ಎಂದು ಕರೆಯಿಸಿಕೊಳ್ಳುತ್ತದೆ.

ಶೂನ್ಯ ಹಂತದಲ್ಲಿ ಸತ್‌, ಚಿತ್‌, ಆನಂದಾದಿ ಷಟಸ್ಥಲ ಲಕ್ಷಣಗಳು ಘನೀಭೂತವಾಗಿ ಮಹಾಲಿಂಗವಾಗುತ್ತದೆ. ವಿಶ್ವದ ಹಂತದಲ್ಲಿರುವ ಈ ಮಹಾಲಿಂಗ ಚೇತನವು ಪುನಃ ಘನೀಭೂತವಾಗುತ್ತದೆ. ನಂತರ ಆತ್ಮ, ನೆಲ, ಆಕಾಶ, ಗಾಳಿ, ಬೆಂಕಿ ಮತ್ತು ನೀರು ಎಂಬ ಆರು ರೂಪಗಳಾಗಿ ಪರಿವರ್ತಿತವಾಗುತ್ತದೆ. ಆತ್ಮವನ್ನು ಹೊರತು ಪಡಿಸಿ ಉಳಿದ ಪಂಚಭೂತಗಳಾದ ನೆಲ, ಆಕಾಶ, ಗಾಳಿ, ಬೆಂಕಿ ಮತ್ತು ನೀರು ಇವುಗಳೆಲ್ಲಾ ಪರಸ್ಪರ ಸಂಯೋಜನೆಯಾಗಿ ನಂತರ ಮಾರ್ಪಾಟು ಹೊಂದಿ 84 ಲಕ್ಷ ಜೀವರಾಶಿಗಳಾಗಿ ರೂಪ ತಾಳುತ್ತದೆ.

ನಂತರ ವಿಶ್ವದ ಕರ್ಮ ಸಾದಾಖ್ಯ ಹಾಗೂ ನಿವೃತ್ತಿ ಕಲೆಯ ಹಂತದಲ್ಲಿ ಇಡೀ ವಿಶ್ವ ಚೈತನ್ಯವು “ಶ್ವೇತ ಮತ್ತು ಕೃಷ್ಣ” ಎಂಬ ಕಪ್ಪು ಬಿಳುಪಿನ ಎರಡು ವರ್ಣ ಲೋಕಗಳನ್ನು ಸೃಷ್ಟಿಸುತ್ತದೆ. ಇದನ್ನೇ Scientific ಭಾಷೆಯಲ್ಲಿ White Holes ಮತ್ತು Black Holes ಎಂದು ಕರೆಯಲಾಗಿದೆ. White Holes ನ್ನು “ಪ್ರಕಾಶ ವಲಯ” ಮತ್ತು Black Holes ನ್ನು “ತಮೋ ವಲಯ” ಎಂದು ಗುರುತಿಸಬಹುದಾಗಿದೆ.

ಪ್ರಕಾಶ ವಲಯ ಮತ್ತು ತಮೋ ವಲಯದಿಂದ ಎರಡು ಪ್ರತ್ಯೇಕ ಶಕ್ತಿಗಳ ಉತ್ಪತ್ತಿಯಾಗುತ್ತದೆ. ಪ್ರಕಾಶ ವಲಯದಿಂದ ಸತ್ವಗುಣ ಜಾಗೃತವಾಗಿ “ಸತ್‌ ಶಕ್ತಿ” ಯ ಉತ್ಪತ್ತಿಯಾಗುತ್ತದೆ. ಇದೇ ದೈವಿ ಚೇತನ (ಶಕ್ತಿ) ಯಾಗಿದ್ದು ಇದನ್ನು Divine Power ಎಂದು ಆದುನಿಕ ಪರಿಭಾಷೆಯಲ್ಲಿ ಕರೆಯಲಾಗಿದೆ. ತಮೋ ವಲಯದಿಂದ ರಜೋಗುಣ ಜಾಗೃತವಾಗಿ “ತಮೋಶಕ್ತಿ” ಯ ಉತ್ಪತ್ತಿಯಾಗುತ್ತದೆ. ಇದೇ ದೈತ್ಯ ಚೇತನ (ಶಕ್ತಿ) ಯಾಗಿದ್ದು ಇದನ್ನು ಆಧುನಿಕ ಪರಿಭಾಷೆಯಲ್ಲಿ Devil Power ಎಂದು ಕರೆಯಲಾಗಿದೆ. ಈ ತಮೋಶಕ್ತಿಯನ್ನೇ “ಮಾಯೆ” ಎಂದು ಶರಣರು ಕರೆದರು.

ಯಾವ ಬಸವಾದಿ ಶಿವ ಶರಣರು ಈ ತಮೋಶಕ್ತಿಯನ್ನು “ಮಾಯೆ” ಎಂದು ಕರೆದರೋ ಆ ಮಾಯೆಯ ಅಂತರಂಗ ಮತ್ತು ಶರೀರಾದಿ ಇಂದ್ರಿಯಗಳಲ್ಲಿ ದುಷ್ಟಭಾವ, ದುಷ್ಟಗುಣ ಮತ್ತು ದುಷ್ಟಕ್ರಿಯೆಗಳನ್ನು ಉಂಟು ಮಾಡುತ್ತದೆ. ಇವೆಲ್ಲವುಗಳೂ ಜೀವಾತ್ಮನಿಗೆ ತ್ರಿಮಲ, ತಾಪತ್ರಯ, ಅಷ್ಟಮದ, ಸಪ್ತವ್ಯಸನ, ಅರಿಷಡ್ವರ್ಗ, ಪಂಚಕ್ಲೇಷ, ತ್ರಿವಿಧಾವಸ್ಥೆ, ತ್ರಿದೋಷ, ಷಡ್ಭಾವ ಮತ್ತು ಭವರೋಗವಾಗಿ ಕಾಡುತ್ತವೆ.

ಇಂತಹ ಮಾಯೆಯನ್ನು ಕಳೆದುಕೊಂಡರೆ ಅಥವಾ ನಿವಾರಿಸಿಕೊಂಡರೆ ಜಗವು ದೇವನಲ್ಲಿ, ದೇವ ಭಕ್ತನಲ್ಲಿ ಅಡಗಲು ಸಾಧ್ಯವಾಗುತ್ತದೆ. ಇಂಥ ಮಾಯೆಯನ್ನು ಕುರಿತು ಬಸವಣ್ಣನವರು ತಮ್ಮ ವಚನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

ಜಗವ ಸುತ್ತಿಪ್ಪುದು ನಿನ್ನ ಮಾಯೆಯಯ್ಯಾ,
ನಿನ್ನ ಸುತ್ತಿಪ್ಪುದು ಎನ್ನ ಮನ ನೋಡಯ್ಯಾ.
ನೀನು ಜಗಕ್ಕೆ ಬಲ್ಲಿದನು,
ಆನು ನಿನಗೆ ಬಲ್ಲಿದನು, ಕಂಡಯ್ಯಾ.
ಕರಿಯು ಕನ್ನಡಿಯೊಳಗಡಗಿದಂತಯ್ಯಾ,
ಎನ್ನೊಳಗೆ ನೀನಡಗಿದೆ ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021 / ಪುಟ ಸಂಖ್ಯೆ-255 / ವಚನ ಸಂಖ್ಯೆ-904)

ಜಗವನ್ನು ಆವರಿಸಿಕೊಂಡಿರುವುದು ಈ ಮಾಯೆ. ಮಾಯೆಗೆ ಒಳಗಾಗುವ ನನ್ನ ಮನಸ್ಸು ಮಾತ್ರ ನಿನ್ನನ್ನೇ ಸುತ್ತಿಕೊಂಡಿದೆ. ಈ ಜಗತ್ತಿಗೆ ನೀನು ಬಲ್ಲಿದನಾದರೆ (ಶಕ್ತನಾದರೆ) ನಿನ್ನನ್ನು ಒಳಗೊಂಡ ನಾನು ಇನ್ನೂ ಹೆಚ್ಚಿನ ಶಕ್ತಿಶಾಲಿ. ಈ ಜಗತ್ತೇ ನಿನ್ನೊಳಗೆ ಇದ್ದರೆ ನೀನು ನನ್ನೊಳಗಿರುವೆ. ಜಗದಗಲ, ಮುಗಿಲಗಲ, ಮಿಗೆಯಗಲ, ಪಾತಾಳದಿಂದತ್ತತ್ತ, ಬ್ರಹ್ಮಾಂಡದಿಂದತ್ತತ್ತ, ಅಗಮ್ಯ, ಅಗೋಚರ, ಅಪ್ರತಿಮ, ಅಪ್ರಮಾಣ ಮಹಾಲಿಂಗವೇ ನೀನು. ಕರಿ (ಆನೆ) ಯನ್ನು ಕನ್ನಡಿಯೊಳಗೆ ಅಡಗಿಸಿದಂತೆ ನನ್ನಲ್ಲಿ ನೀನಿರುವೆ ಎಂಬ ಭಾವದ ಈ ವಚನವು ಮಾಯಾಪಾಶ ವಿಮೋಚನೆಗೆ ಮಹಾಲಿಂಗದ ಆರಾಧನೆಯೇ ಮುಖ್ಯ ಎಂಬ ಆಶಯದಿಂದ ಒಡಗೂಡಿದೆ. ಇಂತಹ “ಮಾಯೆ” ಯನ್ನು ಕಳೆದುಕೊಳ್ಳುವ ಸುಲಭ ಮಾರ್ಗಗಳನ್ನು ಬಸವಾದಿ ಶಿವ ಶರಣರು ಕಂಡುಕೊಂಡಿದ್ದರು. ಆ ಮಾರ್ಗಗಳು ಬಹು ಮುಖ್ಯವಾಗಿ ಮೂರು ಎಂದು ಬಸವಾದಿ ಶಿವ ಶರಣರು ಹೇಳಿದ್ದಾರೆ. ಇವೇ ಅವರ ಸಾಧನಾ ರಂಗಗಳಾಗಿದ್ದು ಜೀವಾತ್ಮ ಮುಕ್ತಾತ್ಮನಾಗಲು ಸಹಕರಿಸಿದ ತತ್ವಗಳೂ ಆಗಿದ್ದವು. ಆ ಮೂರು ಮಾರ್ಗಗಳು ಇಂತಿವೆ.

ಷಟಸ್ಥಲ ಪಥ: “ಷಟಸ್ಥಲ” ಈ ಪದದಲ್ಲಿ “ಷಟ್” ಮತ್ತು “ಸ್ಥಲ” ಎನ್ನುವ ಎರಡು ಪದಗಳಿವೆ. ಈ ಪದಗಳಲ್ಲಿ ಮೊದಲನೇಯ ಪದ ಷಟ್‌ ಎಂಬುದು “ಆರು” ಎಂಬ ಅರ್ಥವನ್ನು ಹೊಂದಿದೆ. ಮುಖ್ಯವಾಗಿ ಎರಡನೇಯ ಪದ ಸ್ಥಲವು ಹಂತ, ಮೆಟ್ಟಿಲು ಎಂದು ಅರ್ಥೈಸುತ್ತದೆ. ಸಾಧಕನಾದವನು ಈ ಆರೂ ಸ್ಥಲಗಳನ್ನು ಅಂದರೆ ಆರೂ ಹಂತಗಳ ಸಾಧನೆ ಮಾಡಿದಾಗ ಮಾತ್ರ ಪರಿಪೂರ್ಣನಾಗುತ್ತಾನೆ.

ಸ್ಥಲ ಪದದ ನಿಷ್ಪತ್ತಿ ಮತ್ತು ಅರ್ಥ: ಸ್ಥಲ ಎಂಬುದು ನಾಮಪದವಾಗಿದ್ದು ಅದು ನೆಲ, ಭೂಮಿ, ಸ್ಥಳ, ಜಮೀನು, ಹೊಲ, ಗ್ರಂಥದ ಒಂದು ಭಾಗ ಅಥವಾ ಪರಿಚ್ಛೇದ, ಮೆಟ್ಟಿಲು, ಹಂತ, ಪ್ರದೇಶ, ಜಾಗ ಎಂಬ ಅರ್ಥಗಳನ್ನು ನೀಡುತ್ತದೆ.

ಶರಣರ ಪಾರಿಭಾಷೆಯಲ್ಲಿ ಸ್ಥಲ ಪದಕ್ಕೆ ವಿಶಿಷ್ಠವಾದ ಅರ್ಥವಿದೆ. “ಚೇತನಾ ಚೇತನವಾದ ಈ ಜಗತ್ತು ಮೊದಲು ಸ್ಥಿತಿಯನ್ನು ನಂತರ ಲಯವನ್ನು ಯಾವ ತತ್ವದಲ್ಲಿ ಹೊಂದುವುದೋ ಅದೇ ಸ್ಥಲವೆಂದು ಹೇಳಲ್ಪಡುತ್ತದೆ”. ಸ್ಥಲ ಎಂಬ ಈ ಎರಡು ಅಕ್ಷರಗಳ ಪದದಲ್ಲಿ “ಸ್ಥ” ಎಂಬ ವರ್ಣವು ʼಸ್ಥಾನವಾಚಕʼ ವೆನಿಸಿದೆ. “ಲ” ಎಂಬ ವರ್ಣವು ʼಲಯವಾಚಕʼ ವಾಗಿದೆ.

ಷಟಸ್ಥಲಗಳ ವಿವರ: “ಷಟಸ್ಥಲ” ಎಂಬುದು ಒಂದು ಸಿದ್ಧಾಂತವಾಗಿದೆ. ಇದರಲ್ಲಿ ಆರು ತತ್ವಗಳಿವೆ. ಒಬ್ಬ ಸಾಧಕನು ಸುಜ್ಞಾನವನ್ನು ಪಡೆದುಕೊಂಡು ತನ್ನನ್ನು ತಾನು ಮೊದಲು ಅರಿತುಕೊಂಡು (ಅರಿವೆ ಗುರು) ನಂತರ ತನಗೆ ಸುತ್ತಿರುವ ಮಾಯಾ ಪ್ರಪಂಚವನ್ನು ಕಳೆದುಕೊಂಡು ಗುರು ಕರಸಂಜಾತನಾಗಿ, ಅಷ್ಟಾವರಣ ಸಂಪನ್ನನಾಗಿ, ಪಂಚಾಚಾರವನ್ನು ಪ್ರಾಣವಾಗಿರಿಸಿಕೊಂಡು, ತಾನು ಉದಿಸಿ ಬಂದ ಮಹಾಲಿಂಗದಲ್ಲಿ ಸಮರಸವಾಗಲು (ಕೂಡಿಕೊಳ್ಳಲು/ಅನುಸಂಧಾನಗೊಳ್ಳಲು) ಷಟಸ್ಥಲ ಸಿದ್ಧಾಂತವನ್ನು ಅನುಸರಿಸುತ್ತಾನೆ. ಅಂಗ (ಆತ್ಮ) ವು ಲಿಂಗ (ಪರಮಾತ್ಮ) ದಲ್ಲಿ ಸಮರಸವಾಗಲು ಈ ಷಟಸ್ಥಲಗಳೇ ಸುಲಭವೂ ಮತ್ತು ಶ್ರೇಷ್ಠವಾದವುಗಳಾಗಿವೆ. ಷಟಸ್ಥಲಗಳಲ್ಲಿ ಭಕ್ತಸ್ಥಲ, ಮಹೇಶಸ್ಥಲ, ಪ್ರಸಾದಿಸ್ಥಲ, ಪ್ರಾಣಲಿಂಗಿಸ್ಥಲ, ಶರಣಸ್ಥಲ ಮತ್ತು ಐಕ್ಯಸ್ಥಲ ಹೀಗೆ ಆರು ಸ್ಥಲಗಳಿವೆ. ಶರಣ ಬಹುರೂಪಿ ಚೌಡಯ್ಯನವರು ತಮ್ಮ ಒಂದು ವಚನದಲ್ಲಿ ಷಟಸ್ಥಲದ ವಾಖ್ಯಾನವನ್ನು ನೀಡುತ್ತಾರೆ;

ಷಡುಸ್ಥಲ ಷಡುಸ್ಥಲವೆಂದು ನುಡಿವುತ್ತಿರ್ಪಿರಿ, ಕೇಳಿರಣ್ಣಾ:
ಒಬ್ಬರಾಯನ ಕೆಳಗೆ ಆರು ಬಲ ಉಂಟಾಗಿಪ್ಪಂತೆ
ಆ ಪರಶಿವತತ್ವಕ್ಕೆ ಪ್ರಾಣಪದವಪ್ಪರು ಭಕ್ತರುಂಟು.
ಆ ಭಕ್ತರಿಗೆ ಗುರುಲಿಂಗ ಜಂಗಮದ ದಾಸೋಹ.
ಪಾದೋದಕ ಪ್ರಸಾದ, ಪಂಚ ಸದಾಚಾರ.
ಇಂತಿವೆಲ್ಲವೂ ಪ್ರಾಣಪದವಾಗಿಪ್ಪವು.
ಇವರೆಲ್ಲರಿಗೆಯೂ ಶರಣಸತಿ ಲಿಂಗಪತಿಗಳೆಂಬವೆ
ಪ್ರಾಣಪದವಾಗಿ, ರೇಕಣ್ಣಪ್ರಿಯ ನಾಗಿನಾಥನಲ್ಲಿ ನಿಂದರು.
(ಸಮಗ್ರ ವಚನ ಸಂಪುಟ ಎಂಟು-2021 / ಪುಟ ಸಂಖ್ಯೆ; 79 / ವಚನ ಸಂಖ್ಯೆ; 181)

ಷಟಸ್ಥಲದ ಮಹತ್ವವನ್ನು ಅತ್ಯಂತ ಸಮರ್ಥವಾಗಿ ತಿಳಿಸುವ ವಚನವಿದು. ಈ ಷಡುಸ್ಥಲಗಳು ಒಬ್ಬ ರಾಯ (ಅರಸ) ನಿಗಿರುವ ಆರು ಬಲಗಳಂತೆ ಒಬ್ಬ ಸಾಧಕನು ಪರಶಿವ ತತ್ವಕ್ಕೆ ಏರಲು ಬಲಗಳಿದ್ದಂತೆ. ನಿರಾಕಾರವಾದ ಶಿವನನ್ನು ಅಂತರಂಗದಿಂದಲೇ ಆರಾಧಿಸುವ ಸಾಧಕ ಷಟಸ್ಥಲಗಳ ಬಲದಿಂದ ಅವನಲ್ಲಿ ಒಂದಾಗುತ್ತಾನೆ. ಅಂದರೆ ಜೀವಾತ್ಮನು ಪರಮಾತ್ಮನಲ್ಲಿ ಒಂದಾಗಲು ಷಟಸ್ಥಲಗಳು ಮುಖ್ಯವಾಗಿವೆ. ಉಳಿದಂತೆ ಅಷ್ಟಾವರಣ ಮತ್ತು ಪಂಚಾಚಾರಗಳು ಸಾಧಕನಿಗೆ ಪ್ರಾಣಪದವಾಗಿರುತ್ತವೆ ಎಂಬ ವಿವರಣೆ ಶರಣ ಬಹುರೂಪಿ ಚೌಡಯ್ಯನವರ ಈ ವಚನದಿಂದ ದೊರೆಯುವುದು.

ಷಟಸ್ಥಲಗಳನ್ನು ಕ್ರಮಿಸುವ ಹಂತಗಳು ಏಕಾಏಕಿ ಘಟಿಸುವುದಿಲ್ಲ. ಒಂದೊಂದು ಸ್ಥಲವನ್ನು ಸಾಧಕನಾದ ಭಕ್ತನು ಅತ್ಯಂತ ಸಾವಧಾನ, ಸಂಯಮತೆ, ಧೃಢವಾದ ನಿಷ್ಠೆ, ವಿಶ್ವಾಸದಿಂದ ಏರಬೇಕಾಗುತ್ತದೆ. ಅಂದಾಗ ಮಾತ್ರ ನಿರವಯಸ್ಥಲ ತಲುಪಲು ಸಾಧ್ಯ. ವಿಶ್ವಗುರು ಬಸವಣ್ಣನವರು ಷಟಸ್ಥಲದ ಹಂತಗಳನ್ನು ತಮ್ಮ ವಚನದ ಮೂಲಕ ವಿವರಿಸುತ್ತಾರೆ. ಕ್ರಮವಾದ ಷಟಸ್ಥಲದ ಹಂತಗಳನ್ನು ಸೂಕ್ಷ್ಮವಾಗಿ ಗ್ರಹಿಸುವ ವಚನವಿದು.

ಮೆಲ್ಲಮೆಲ್ಲನೆ ಭಕ್ತನೆನಿಸಿಕೊಂಬೆ,
ಮೆಲ್ಲಮೆಲ್ಲನೆ ಮಾಹೇಶ್ವರನೆನಿಸಿಕೊಂಬೆ,
ಮೆಲ್ಲಮೆಲ್ಲನೆ ಪ್ರಸಾದಿ ಎನಿಸಿಕೊಂಬೆ,
ಮೆಲ್ಲಮೆಲ್ಲನೆ ಪ್ರಾಣಲಿಂಗಿ ಎನಿಸಿಕೊಂಬೆ,
ಮೆಲ್ಲಮೆಲ್ಲನೆ ಶರಣನೆನಿಸಿಕೊಂಬೆ,
ಮೆಲ್ಲಮೆಲ್ಲನೆ ಐಕ್ಯನೆನಿಸಿಕೊಂಬೆ,
ಮೆಲ್ಲಮೆಲ್ಲನೆ ಷಟಸ್ಥಲವ ಮೀರಿ
ನಿರವಯಸ್ಥಲವನೆಯ್ದುವೆನಯ್ಯ,
ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು 2021 / ಪುಟ ಸಂಖ್ಯೆ: 395 / ವಚನ ಸಂಖ್ಯೆ: 1321)

ಷಟಸ್ಥಲವ ಮೀರಿ “ನಿರವಯಸ್ಥಲ” ವನ್ನು ತಲುಪುವಾಗ ತುಂಬಾ ಸಾವಧಾನದಿಂದ ಕೂಡಿರಬೇಕು. ಮಹಾಲಿಂಗ ತಲುಪುವ ಹಂತ ಅವಸರದ್ದಲ್ಲ. ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯವೆಂಬ ಆರೂ ಮೆಟ್ಟಿಲುಗಳನ್ನು ಏರಲು ಸಾವಧಾನದ ಕೋಲನ್ನು ಸಾಧಕ ಕೈಯಲ್ಲಿ ಹಿಡಿದಿರಬೇಕು. ಮೇರುಗಿರಿಯನ್ನು ಹಾಗೆಯೇ ಏರಲಾದೀತೇ? ಅಂತೆಯೇ ಸಾವಧಾನ ಮತ್ತು ನಿಷ್ಠೆಯ ಕೋಲನ್ನು ಹಿಡಿದು ಅದರ ಸಹಾಯದಿಂದ ಸಾಧಕ ಒಂದೊಂದು ಮೆಟ್ಟಿಲಲ್ಲಿ ಒಂದೊಂದು ತನು ಗುಣಗಳನ್ನು ನಾಸ್ತಿ ಮಾಡಿಕೊಳ್ಳುತ್ತಾ ಸಾಗಬೇಕು. ಈ ಪಯಣ ಕಠಿಣವಾದುದೇ ಸರಿ.

ಶಿವಯೋಗಿ ಸಿದ್ಧರಾಮೇಶ್ವರರು ಈ ಸ್ಥಲಗಳನ್ನು ಅರಿತವರು. ಸ್ವಾನುಭಾವದ ಮೂಲಕ ಇವರು ತಮ್ಮ ಒಂದು ವಚನದಲ್ಲಿ ಷಟಸ್ಥಲವನ್ನು ಕ್ರಮಿಸುವ ಸಾಧಕ ಹೇಗಿರಬೇಕು? ಒಂದೊಂದು ಸ್ಥಲದ ಲಕ್ಷಣಗಳೇನು? ಸಾದಕ ಒಂದೊಂದು ಸ್ಥಲವನ್ನು ಏರಿದಂತೆ ಅವನು ಕೈಗೊಳ್ಳಬೇಕಾದ ಮುಖ್ಯವಾದ ಕ್ರಿಯೆಗಳೇನು? ಎಂಬುದರ ಸ್ಪಷ್ಟ ಚಿತ್ರಣವನ್ನೇ ನೀಡುತ್ತಾರೆ.

ಭಕ್ತನಾದ ಬಳಿಕ ಜಂಗಮದ ಗುಣವನರಸಲೇಕೋ?
ಮಹೇಶನಾದ ಬಳಿಕ ವಿಷಯಕ್ಕೆಳುಸುವುದದೇಕೋ?
ಪ್ರಸಾದಿಯಾದ ಬಳಿಕ ಕಂಡುದಕ್ಕೆ ಕೈದುಡುಕುವುದೇಕೋ?
ಪ್ರಾಣಲಿಂಗಿಯಾದ ಬಳಿಕ ಪ್ರಪಂಚದ ಹಂಗದೇಕೋ?
ಶರಣಾರದ ಬಳಿಕ ಮೋಕ್ಷದ ಹಂಗೇಕೋ?
ಐಕ್ಯನಾದ ಬಳಿಕ ಕಪಿಲಸಿದ್ದಮಲ್ಲಯ್ಯನ
ನಾಮಸ್ಮರಣೆಯದೇಕೋ?
(ಸಮಗ್ರ ವಚನ ಸಂಪುಟ; ನಾಲ್ಕು / 2021 / ಪುಟ ಸಂಖ್ಯೆ; 367 / ವಚನ ಸಂಖ್ಯೆ; 1171)

 ಭಕ್ತನಾಗುವ ಹಂತದಲ್ಲಿ ಸಾಧಕನು ತನ್ನ ಪೂರ್ವಾಶ್ರಯದ ವಿಷಯವಾಸನೆಯನ್ನು ಕಳೆದುಕೊಳ್ಳಬೇಕು. ಅಣವ ಮಲ, ಮಾಯಾಮಲ, ಕಾರ್ಮಿಕ ಮಲಗಳೆಂಬ ಮಲತ್ರಯಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಇದು ಭಕ್ತ ಸ್ಥಲದಲ್ಲಿ ಸಾಧಕ ಅನುಸರಿಸಬೇಕಾದ ಕ್ರಮ..
 ಮುಂದುವರೆದು, ಸಾಧಕ ಅರಿಷಡ್ವರ್ಗಗಗಳನ್ನು ಕಳೆದುಕೊಂಡು ಅಂತರಂಗದ ಅರಿವಿನಿಂದ ತಾನು ಸ್ವಯಂ ಗುರುವಾಗಿ ಮಾನಸಿಕ ಶಾಂತಿ ನೆಮ್ಮದಿಗಳಿಂದ ಕೂಡಿದವನಾಗುವುದೇ “ಮಹೇಶ್ವರ” ಸ್ಥಲ. ಇದು ಮಹೇಶ್ವರ ಸ್ಥಲದಲ್ಲಿ ಸಾಧಕ ಸ್ವಯಂ ಗುರುವಾಗಬೇಕಾಗುವ ಹಂತ.
 ಸಾಧಕನಲ್ಲಿರಬೇಕಾದ ಮನಸ್ಸು, ಬುದ್ದಿ, ಚಿತ್ತ, ಅಹಂಕಾರ ಎಂಬ ಈ ಕರಣ ಚತುಷ್ಟಯಗಳನ್ನು ಸಾಧಕ ತನ್ನ ನಿಯಂತ್ರಣದಲ್ಲಿ ಇರಿಸಿಕೊಂಡು ಸೂಕ್ಷ್ಮವಾದ ಈ ನಾಲ್ಕು ಇಂದ್ರಿಯಗಳನ್ನು ಜಾಗೃತಗೊಳಿಸಿಕೊಂಡು “ಪ್ರಸಾದಿ” ಯಾಗುವುದೇ “ಪ್ರಸಾದಿ ಸ್ಥಲ”. ಷಟಸ್ಥಲದಲ್ಲಿ ಇದು ನಾಲ್ಕನೇಯ ಸಾಧನಾರಂಗ. ಅರಿವೇ ಗುರುವಾಗುವ ಮಾರ್ಗ. ಅಂತರಂಗವು ಅರಿವಿನ ಬೆಳಕನ್ನು ಹೊಂದುವ ಸಮಯ. ಇದು ಪ್ರಸಾದಿ ಸ್ಥಲದಲ್ಲಿ ಸಾಧಕ ಅನುಸರಿಸಬೇಕಾದ ಕ್ರಮ.
 ಭೋಗ ವಸ್ತುವೆ ಪ್ರಾಣವಾಗಿರುವ ಸಾಧಕನು ಹತ್ತು ಪ್ರಕಾರದ ವಾಯು ಪ್ರಾಣವ ನಿಲ್ಲಸಿ, ಪ್ರಾಣವನ್ನ ಲಿಂಗದಲ್ಲಿರಿಸಿ, ಪ್ರಾಣವೇ ಲಿಂಗವಾಗಿ, ಲಿಂಗವೇ ಪ್ರಾಣವಾಗಿ “ಪ್ರಾಣಲಿಂಗಿ” ಎನಿಸಿಕೊಳ್ಳುವನು. ಇದು ಪ್ರಾಣಲಿಂಗಿ ಸ್ಥಲದಲ್ಲಿ ಸಾಧಕನು ಅನುಸರಿಸಬೇಕಾದ ಕ್ರಮ. ಬಹಳ ಮುಖ್ಯವಾಗಿ ಗಮನಿಸಬೇಕಾದ ಸಂಗತಿಯಂದರೆ “ಪ್ರಾಣಲಿಂಗಿ” ಆಗಬೇಕಾದರೆ ಆತ್ಮ ವಿಶ್ವಾಸ (ಆತ್ಮಶಕ್ತಿ) ಮತ್ತು ಅತ್ಯಂತ ಶ್ರದ್ಧಾ ಭಕ್ತಿಗಳು ಬೇಕು.
 ಸಾಧಕನು ತನ್ನ ಪ್ರಾಣದಲ್ಲಿ ಲಿಂಗವನ್ನು ಧರಿಸಿದ ಬಳಿಕ ತನ್ನ ತನು-ಮನವನ್ನು ಲಿಂಗಕ್ಕೆ ಅರ್ಪಿಸಿ ಲಿಂಗಕ್ಕೆ ಶರಣಾಗುವುದೇ “ಶರಣ” ನಾಗುವುದು. ಇದು ಶರಣ್ಯ ಭಾವ. ಲಿಂಗಪತಿ-ಶರಣಸತಿಯಾಗುವ ಹಂತ. ನಾನು ಎಂಬ ಅಹಂಕಾರ ನಿರಸನವಾಗುವ ಹಂತ. ಇದೇ ಶರಣ ಸ್ಥಲ. ನಾನು ನನ್ನದು ಎಂಬ ಅಹಂಕಾರ ನಿರಸನ ಸಿದ್ಧಾಂತ ಸಾಧಿಸಿ ಸಕಲವೂ ನೀನೆ ಎಂಬ ಭಾವವನ್ನು ಸಾಧಕ ಈ ಸ್ಥಲದಲ್ಲಿ ಅನುಸರಿಸಬೇಕಾದ ಕ್ರಮ.
 “ನಾನು” ಎಂಬ ಭಾವ ದೂರವಾಗಿ ನೀನೇ ಎಂಬ ಭಾವ ಬಲಿತು ಮಹಾಲಿಂಗದಲ್ಲಿ ನಾನು-ನೀನು ಎಂಬ ಉಭಯ ಭಾವನೆಯನ್ನು ಕಳಚಿ ಅಂಗವೇ ಲಿಂಗ, ಲಿಂಗವೇ ಅಂಗ ಎಂಬ ಲಿಂಗಾಂಗ ಸಾಮರಸ್ಯ ಸಾಧಿಸುವುದು, ಜೀವಾತ್ಮ ಪರಮಾತ್ಮನಲ್ಲಿ ಐಕ್ಯನಾಗುವುದು, ದೇಹಭಾವ ಕಳಚಿ ದೇವಭಾವ ಹೊಂದುವ ಐಕ್ಯಸ್ಥಿತಿಯ ಪರಮೋಚ್ಛ ಹಂತವೇ “ಐಕ್ಯಸ್ಥಲ”. ದೇಹಭಾವದಿಂದ ಸಂಪೂರ್ಣ ಮುಕ್ತವಾಗಿ ದೇವನಲ್ಲಿ ವಿಲೀನವಾಗುವ ಕ್ರಿಯೆಯೇ ಮುಕ್ತಾತ್ಮನಾಗುವ ಹಂತ. ಇಲ್ಲಿ ಸಾಧಕ ಭಕ್ತನಾಗಿ ದೇವನಲ್ಲಿ ಒಂದಾಗಿ ಶಿವಯೋಗ ಸಾಧಿಸುವ ಕೊನೇಯ ಹಂತ. ಐಕ್ಯಸ್ಥಲದಲ್ಲಿ ಸಾಧಕ ಭಕ್ತನಾಗಿ, ಭಕ್ತ ದೇವನಲ್ಲಿ, ದೇವ ಭಕ್ತನಲ್ಲಿ ಒಂದಾಗುವ ಸ್ಥಿತಿ. ಇದು “ಮರಣ” ಸ್ಥಿತಿಯ ಐಕ್ಯವಲ್ಲ. ಜೀವಂತಿಕೆಯ ಅರಿವಿನಿಂದ ಕೂಡಿದ ಐಕ್ಯಸ್ಥಿತಿ. ಜೀವಿತಾವಧಿಯಲ್ಲಿ ಮಹಾಲಿಂಗದಲ್ಲಿ ಜೀವಾತ್ಮ ಐಕ್ಯನಾಗುವ ಹಂತ.

ಪ್ರಾಣಲಿಂಗಿ ಸ್ಥಲ:

ಈ ಲೇಖನದ ಕೇಂದ್ರ ವಿಷಯ ಪ್ರಾಣಲಿಂಗಿ ಸ್ಥಲವಾಗಿದೆ. ಷಟಸ್ಥಲಗಳಲ್ಲಿ ಇದು ನಾಲ್ಕನೇಯ ಸಾಧನಾ ಸ್ಥಲವಾಗಿದೆ. ಇದು ಅರಿವೇ ಗುರುವಾಗುವ ಹಂತವಾಗಿದೆ. ಈ ಸಮಯದಲ್ಲಿ ಅಂತರಂಗವು ಬೆಳಕನ್ನು ಹೊಂದುವ ಸಮಯವಾಗಿದೆ.

ಪ್ರಾಣಲಿಂಗಿ ಸ್ಥಲದಲ್ಲಿ ಸಾಧಕ “ಪ್ರಾಣಲಿಂಗಿ” ಆಗಬೇಕಾದರೆ ಆತ್ಮ ವಿಶ್ವಾಸ (ಆತ್ಮಶಕ್ತಿ) ಹಾಗೂ ಅತ್ಯಂತ ಶ್ರದ್ಧಾಭಕ್ತಿಗಳನ್ನು ಕೇಂದ್ರೀಕರಿಸಿಕೊಳ್ಳಬೇಕಾಗುತ್ತದೆ. ಇದನ್ನು ಶರಣರ ಪರಿಭಾಷೆಯಲ್ಲಿ “ಆದಿಶಕ್ತಿ” ಹಾಗೂ “ಅನುಭಾವ ಭಕ್ತಿ” ಎಂದು ಕರೆಯಲಾಗಿದೆ. ಇದನ್ನೇ ನಮ್ಮ ಆಧುನಿಕ ಭಾಷೆಯಲ್ಲಿ ಹೇಳುವುದಾದರೆ Will Power + Force of Experience ಎನ್ನಬಹುದಾಗಿದೆ. ಪ್ರಾಣಲಿಂಗಿ ಸ್ಥಲದಲ್ಲಿ ಪ್ರಾಣವು ಲಿಂಗವಾಗಿ, ಲಿಂಗವು ಪ್ರಾಣವಾಗಿ ಒಂದರಲ್ಲಿ ಒಂದು ಸಮನ್ವಯ ಸಾಧಿಸುವ ಯೋಗ ಸ್ಥಿತಿಯಾಗಿದೆ. ಯೋಗ ಸ್ಥಿತಿಯ ಭಾವವು ತೀವ್ರಗೊಂಡು ಪ್ರಾಣಚೇತನವು ಲಿಂಗಚೇತನವಾಗಿ ಪರಿವರ್ತನೆಗೊಳ್ಳುತ್ತಾ ಸಾಗುವುದು. ಈ ರೀತಿಯಲ್ಲಿ ಪ್ರಾಣಲಿಂಗ ಸ್ಥಲಕ್ಕೆ ತಲುಪಿದ ಸಾಧಕನು ಲಿಂಗದಲ್ಲಿಯೇ ಪ್ರಾಣವಿರಿಸಿ ಪ್ರಾಣದಲ್ಲಿ ಲಿಂಗವನಿರಿಸಿಕೊಂಡು ಲಿಂಗ-ಪ್ರಾಣ ಭಿನ್ನವಿಲ್ಲದ ಭಾವ ಹೊಂದಿ ಏಕಚಿತ್ತದಿಂದ ಧ್ಯಾನಿಸುವ ಕಾರಣ ಭಕ್ತನ ಅಂಗ ಪ್ರಾಣಲಿಂಗವಾಗುತ್ತದೆ.

ಪ್ರಾಣವೇ ಲಿಂಗವಾಗುವ ಲಿಂಗವೇ ಪ್ರಾಣವಾಗುವ‌ ಈ ಹಂತದಲ್ಲಿ ಶರೀರ ಮಾಂಸಪಿಂಡವನ್ನು ಕಳೆದುಕೊಂಡು ಮಂತ್ರಪಿಂಡವಾಗುತ್ತದೆ. ಈ ಹಂತವನ್ನು ಶರಣ ಸ್ವತಂತ್ರ ಸಿದ್ಧಲಿಂಗೇಶ್ವರರು ತಮ್ಮ ವಚನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

ಲಿಂಗದಲ್ಲಿ ಪ್ರಾಣವನಿರಿಸಿ, ಪ್ರಾಣದಲ್ಲಿ ಲಿಂಗವನಿರಿಸಿ
ನೆನೆವುತ್ತಿದ್ದ ಕಾರಣ, ಪ್ರಾಣಲಿಂಗವಾಯಿತ್ತು.
ಆ ಲಿಂಗ ಸರ್ವಕರಣಂಗಳ ವೇಧಿಸಿ, ಕರಣಂಗಳು
ಲಿಂಗಕಿರಣಂಗಳಾದ ಕಾರಣ
ಒಳಗೆ ಕರತಳಾಮಳಕದಂತೆ ಲಿಂಗ ನೆಲೆಗೊಂಡಿತ್ತಾಗಿ
ಹೊರಗೇನೆಂದೂ ಅರಿಯೆನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ,
ನೀವು ಪ್ರಾಣಲಿಂಗವಾಗಿ.
(ಸಮಗ್ರ ವಚನ ಸಂಪುಟ; ಹನ್ನೊಂದು / 2021 / ಪುಟ ಸಂಖ್ಯೆ; 509 / ವಚನ ಸಂಖ್ಯೆ; 1035)

ಅಂಗ ಕರಣಂಗಳು ಲಿಂಗ ಕರಣಂಗಳಾದಾಗ ಶರೀರ ಮಾಂಸಪಿಂಡದಿಂದ ಮಂತ್ರಪಿಂಡವಾಗುತ್ತದೆ. ಇದನ್ನೇ ಬಸವಾದಿ ಶಿವ ಶರಣರು “ಸರ್ವಾಂಗ ಲಿಂಗಮಯ” ಎಂಬ ಪಾರಿಭಾಷಿಕ ಪದವನ್ನು ಬಳಸಿದ್ದಾರೆ. ಸರ್ವ ಅಂಗಗಳು ಲಿಂಗವಾಗುವುದು ಎಂದರೆ ಮಂಗಳಮಯವಾಗುವುದು ಹಾಗೂ ಲಿಂಗಭಾವವನ್ನೇ ಹೊಂದುವುದು ಎಂದರ್ಥ. ಅಂಗವೆಲ್ಲಾ ಲಿಂಗಮಯವಾಗಿ ಅಂತರಂಗದ ಪ್ರಾಣವು ಲಿಂಗವಾದಾಗ ಬಾಹ್ಯ ಪ್ರಪಂಚದ ಅರಿವು ಸಾಧಕ ಭಕ್ತನಿಗೆ ದೂರವಾಗುತ್ತಾ ಹೋಗುವುದು. ಇದೇ ಯೋಗ ಸ್ಥಿತಿಯ ಮೊದಲ ಹಂತ. ಈ ತತ್ವವನ್ನು ಜ್ಞಾನವೈರಾಗ್ಯನಿಧಿ ಅಲ್ಲಮ ಪ್ರಭುಗಳು ಕಂಡುಕೊಂಡಿದ್ದಾರೆ. ಪ್ರಾಣಲಿಂಗಿ ಸ್ಥಲದ ತತ್ವವನ್ನು ಅಲ್ಲಮ ಪ್ರಭುಗಳ ಒಂದು ವಚನದಲ್ಲಿ ಕಾಣಬಹುದು.

ಲಿಂಗವೆ ಪ್ರಾಣ, ಪ್ರಾಣವೆ ಲಿಂಗವಾಯಿತ್ತು.
ಆ ಲಿಂಗವೆ ಲಿಂಗಾಂಗವಾಯಿತ್ತು.
ಗುಹೇಶ್ವರಲಿಂಗದಲ್ಲಿ
ಸರ್ವಾಂಗ ಪ್ರಾಣಲಿಂಗ ಸ್ವಾಯತವಾಯಿತ್ತು
ಕಾಣಾ ಚೆನ್ನಬಸವಣ್ಣಾ.
(ಸಮಗ್ರ ವಚನ ಸಂಪುಟ; ಎರಡು / 2021 / ಪುಟ ಸಂಖ್ಯೆ; 566 / ವಚನ ಸಂಖ್ಯೆ; 1486)

ಇದು ಸರ್ವಾಂಗ ಲಿಂಗಮಯವಾಗುವ ತತ್ವ. ಅನುಭವ ಮಂಟಪದಲ್ಲಿ ಇಂತಹ ಚರ್ಚೆಗಳು ನಡೆಯುತ್ತಿದ್ದವು ಎಂಬುದಕ್ಕೆ ಅಲ್ಲಮ ಪ್ರಭುಗಳು ಚೆನ್ನಬಸವಣ್ಣನವರೊಂದಿಗೆ ನಡೆಸಿದ ಸಂಭಾಷಣಾ ರೂಪದಲ್ಲಿರುವ ಈ ವಚನವು ಸಾಕ್ಷಿಯಾಗಿ ನಿಲ್ಲುತ್ತದೆ.

ಪ್ರಾಣಲಿಂಗಿಯಾಗಲು ಸಾಧಕ ಭಕ್ತನು ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಉತ್ಪತ್ತಿ-ಸ್ಥಿತಿ-ಲಯ ಇವುಗಳಿಗೆ ಕಾರಣಗಳಾದ ಆಕಾಶ, ವಾಯು, ಅಗ್ನಿ, ನೀರು, ಪೃಥ್ವಿ ಎಂಬ ಪಂಚಭೂತಗಳನ್ನು ಗೌರವಿಸಬೇಕಾದುದು ಶರಣರ ಕರ್ತವ್ಯ. ಪಂಚಸೂತಕಗಳಾದ ಜನನ, ಮರಣ, ಜಾತಿ, ರಜ, ಉಚ್ಛಿಷ್ಠ (ಜಂಗಮರಿಗೆ ಅರ್ಪಿಸಿ ಉಳಿದಿದ್ದೆಲ್ಲವೂ ಎಂಜಲು ಎನ್ನುವ ಭಾವನೆ) ಈ ಐದೂ ಸೂತಕಗಳನ್ನು ನಿರಾಕರಿಸಬೇಕು. ಲಿಂಗವು ಪ್ರಾಣವಾದ ಮೇಲೆ ಪ್ರಾಣವು ಲಿಂಗವಾದ ಮೇಲೆ ಶರಣ ಅಥವಾ ಭಕ್ತನು ಮೈಲಿಗೆಗಳನ್ನು ದಾಟಿ ಆ ಭಾವದಿಂದ ಮುಕ್ತನಾಗಿ ಶುದ್ಧಾತ್ಮನಾಗಬೇಕು. ಅಂಧಶ್ರದ್ಧೆಗಳನ್ನು ದೂರ ಮಾಡಿ ಅದರಿಂದಾಗುವ ಶೋಷಣೆಗಳನ್ನು ತಪ್ಪಿಸಬೇಕು. (ಸಂಗ್ರಹ: ಶರಣ ಸಿದ್ಧಾಂತಗಳು ಮತ್ತು ಶೂನ್ಯ ಸಂಪಾದನೆಯಲ್ಲಿ ಅಕ್ಕಮಹಾದೇವಿ ಮತ್ತು ಮುಕ್ತಾಯಕ್ಕನವರು/ಲೇಖಕರು; ಡಾ. ವಿಜಯಕುಮಾರ ಕಮ್ಮಾರ/ಪುಟ ಸಂ. 19). ಈ ಮಾತುಗಳಿಗೆ ಪೂರಕವಾಗಿ ಅವಿರಳಜ್ಞಾನಿ ಚೆನ್ನಬಸವಣ್ಣನವರ ವಚನವನ್ನು ನೋಡಬಹುದು.

ಪ್ರಾಣಲಿಂಗಿಗೆ ವಾಯುವೆ ಅಂಗ,
ಆ ಅಂಗಕ್ಕೆ ಸುಮನವೆ ಹಸ್ತ,
ಆ ಹಸ್ತಕ್ಕೆ ಅಮೂರ್ತಿಸಾದಾಖ್ಯ,
ಆ ಸಾದಾಖ್ಯಕ್ಕೆ ಆದಿಶಕ್ತಿ,
ಆ ಶಕ್ತಿಗೆ ಜಂಗಮಲಿಂಗ,
ಆ ಲಿಂಗಕ್ಕೆ ಶಾಂತಿಯೇ ಕಳೆ,
ಆ ಕಳೆಗೆ ತ್ವಗಿಂದ್ರಿಯವೆ ಮುಖ,
ಆ ಮುಖಕ್ಕೆ ಸ್ಪರ್ಶದ್ರವ್ಯಂಗಳನು
ರೂಪುರುಚಿತೃಪ್ತಿಯನರಿದು
ಅನುಭಾವಭಕ್ತಿಯಿಂದರ್ಪಿಸಿ,
ಆ ಸುಸ್ಪರ್ಶಪ್ರಸಾದವನು
ಭೋಗಿಸಿ ಸುಖಿಸುತ್ತಿಹನು
ಕೂಡಲಚೆನ್ನಸಂಗಾ, ನಿಮ್ಮ ಪ್ರಾಣಲಿಂಗಿ.
(ಸಮಗ್ರ ವಚನ ಸಂಪುಟ; ಮೂರು / 2021 / ಪುಟ ಸಂಖ್ಯೆ; 676 / ವಚನ ಸಂಖ್ಯೆ; 1414)

ಪ್ರಾಣಲಿಂಗಿ ಯಾವಾಗ ಸದಾಸುಖಿಯಾಗುವನು ಎನ್ನುವುದಕ್ಕೆ ಚೆನ್ನಬಸವಣ್ಣನವರು ಬಹಳ ಸುಂದರವಾಗಿ ನಿರೂಪಿಸುತ್ತಾರೆ. ಪ್ರಾಣಲಿಂಗಿಗೆ ವಾಯು (ಪ್ರಾಣವಾಯು) ಅಂಗವಾದಾಗ ಅಂಗದೊಳಗಿನ ನಿರ್ಮಲವಾದ ಮನವೇ ಹಸ್ತವಾಗುವುದು. ಸುಮನವೆಂಬ ಆ ಹಸ್ತದಲ್ಲಿ ನಿರಾಕಾರವಾದ ಲಿಂಗದ ಸ್ಪರ್ಷವಾಗುವುದು. (ಅಮೂರ್ತ: ನಿರಾಕಾರ / ಸಾದಾಖ್ಯ: ಸ್ಪರ್ಷ). ಗಮನಿಸಬೇಕಾದ ವಿಚಾರವೆಂದರೆ ಇಷ್ಟಲಿಂಗ ಸಾಕಾರವಾಗಿ ಅಂಗದ ಕೈಯಲ್ಲಿರುವ ಹಂತ ಅದು ಭಕ್ತಸ್ಥಲ. ಪ್ರಾಣಲಿಂಗಿ ಸ್ಥಲದಲ್ಲಿ ನಿರಾಕಾರ ದೇಹ ಎಂದರೆ ದೇಹಭಾವ ಕಳಚಿಕೊಂಡ ಸ್ಥಿತಿ. ಅದುವೇ ವಾಯು (ಪ್ರಾಣವಾಯು) ಅಂಗವಾಗುವುದು ಮತ್ತು ಯಾರಿಗೂ ಕಾಣದ ಮನಸ್ಸು (ಆತ್ಮ) ದಲ್ಲಿ ನಿರಾಕಾರ ಲಿಂಗದ ಸ್ಪರ್ಷವಾಗುವುದು. ತನುವ ಮೀರಿದ ಆತ್ಮಲಿಂಗಾನುಭವ ಸ್ಥಿತಿ ಇದು. ಶರಣ ಜೇಡರ ದಾಸಿಮಯ್ಯನವರು ಹೇಳುವಂತೆ:

ಮರನೊಳಗಣ ಮಂದಾಗ್ನಿಯ ಉರಿಯದಂತಿರಿಸಿದೆ
ನೊರೆವಾಲೊಳಗೆ ತುಪ್ಪವ ಕಂಪಿಲ್ಲದಂತಿರಿಸಿದೆ
ಶರೀರದೊಳಗಾತ್ಮನನಾರು ಕಾಣದಂತಿರಿಸಿದೆ
ನೀ ಬೆರಸುವ ಭೇದಕ್ಕೆ ಬೆರಗಾದೆನಯ್ಯ! ರಾಮನಾಥ.
(ಸಮಗ್ರ ವಚನ ಸಂಪುಟ; ಏಳು / 2021 / ಪುಟ ಸಂಖ್ಯೆ; 297 / ವಚನ ಸಂಖ್ಯೆ; 841)

ಮರದೊಳಗಿನ ಮಂದಾಗ್ನಿಯಂತೆ ನೊರೆವಾಲೊಳಗಿರುವ ಕಂಪಿಲ್ಲದ ತುಪ್ಪದಂತೆ ಶರೀರದೊಳಗಿರುವ ಆತ್ಮನನ್ನು ಕಾಣದಂತಿರಿಸಿದ ಚೋದ್ಯ. ಇಂತಹ ಆತ್ಮನ ಕೈಯಲ್ಲಿ ನಿರಾಕಾರ ಲಿಂಗದ ಸ್ಪರ್ಷಸುಖ. ಇದು ಮುಟ್ಟಿದರೂ ಮುಟ್ಟದಂತಿರುವ ಸ್ಥಿತಿ. ಇಂತಹ ಶಕ್ತಿಯೇ ಮೂಲ (ಆದಿ) ಶಕ್ತಿ. ಅದನ್ನು ಜಂಗಮಲಿಂಗದಲ್ಲಿ ಕಾಣುವುದು. ಈ ಜಂಗಮಲಿಂಗವು ಶಾಂತಿಯ ಕಳೆಯಿಂದ ಕಂಗೊಳಿಸುತ್ತದೆ. ಜಂಗಮದ ಮುಖ ಈಗ ನಿರಾಕಾರವಲ್ಲ. ಅದು ತ್ವಗಿಂದ್ರಿಯ (ತ್ವಗಿಂದ್ರಿಯ: ತ್ವಕ್‌, ಚರ್ಮ) ವಾಗಿರುತ್ತದೆ. ಜಂಗಮಲಿಂಗದ ಮುಖಕ್ಕೆ ರೂಪು-ರುಚಿ-ತೃಪ್ತಿಯನರಿದು ಅನುಭಾವ ಭಕ್ತಿಯಿಂದ ಪ್ರಸಾದವನು ಅರ್ಪಿಸಿ ತೃಪ್ತಿಗೊಳಿಸಬೇಕು. ಆ ಜಂಗಮಲಿಂಗಕ್ಕೆ ಅರ್ಪಿಸಿದ್ದೇ ಸುಸ್ಪರ್ಷಗೊಂಡ ಪ್ರಸಾದ. ಇಂತಹ ಪ್ರಸಾದವನ್ನು ಎಂಜಲು ಎಂದು ಭಾವಿಸದೇ ಅದನ್ನು ಭೋಗಿಸುವವನೇ ಪ್ರಾಣಲಿಂಗಿ. ಇಲ್ಲಿ ಎಂಜಲು, ಮಡಿ-ಮೈಲಿಗೆ ಎಂಬ ಭಾವದಿಂದ ಸಾಧಕ ಮುಕ್ತನಾಗಬೇಕು. ಬಸವಾದಿ ಶಿವ ಶರಣರು ಸಾಧಿಸಿದ್ದು ಇದನ್ನೇ. ಎಂಜಲು ಎಂಬುದು ಎಲ್ಲಿಲ್ಲ? ಭಾವಿಸಿ ನೋಡಿದರೆ ಸಕಲವೂ ಎಂಜಲುಮಯ. ಇದು ಅರಿತಾಗ ಸಕಲರಲ್ಲಿ ಸಹಭಾವ, ಸಜಬಾಳ್ವೆ ತನ್ನಿಂದ ತಾನೇ ಉಂಟಾಗುವುದು. ಈ ಭಾವ ಪ್ರಾಣಲಿಂಗಿ ಸ್ಥಲಕ್ಕೆ ಏರಿದ ಸಾಧಕ ಭಕ್ತನಿಗೆ ಸಿದ್ಧಿಸಬೇಕು. ಅಲ್ಲಮ ಪ್ರಭುಗಳ ಒಂದು ವಚನ ಈ ತತ್ವ ಸಿದ್ಧಾಂತಕ್ಕೆ ಸಂವಾದಿಯಾಗಿ ನಿಲ್ಲುತ್ತದೆ.

ಶಬ್ದವೆಂಬೆನೆ? ಶ್ರೋತ್ರದೆಂಜಲು.
ಸ್ಪರ್ಶವೆಂಬೆನೆ? ತ್ವಕ್ಕಿನೆಂಜಲು.
ರೂಪೆಂಬೆನೆ? ನೇತ್ರದೆಂಜಲು.
ರುಚಿಯೆಂಬೆನೆ? ಜಿಹ್ವೆಯೆಂಜಲು.
ಪರಿಮಳವೆಂಬೆನೆ? ಘ್ರಾಣದೆಂಜಲು.
ನಾನೆಂಬೆನೆ? ಅರಿವಿನೆಂಜಲು.
ಎಂಜಲೆಂಬ ಭಿನ್ನವಳಿದ, ಬೆಳಗಿನೊಳಗಣ ಬೆಳಗು
ಗುಹೇಶ್ವರನೆಂಬ ಲಿಂಗವು.
(ಸಮಗ್ರ ವಚನ ಸಂಪುಟ; ಎರಡು / 2021 / ಪುಟ ಸಂಖ್ಯೆ; 175 / ವಚನ ಸಂಖ್ಯೆ; 564)

ಅಲ್ಲಮ ಪ್ರಭುಗಳ ಈ ವಚನವೇ ಸಾಕು “ಎಂಜಲು” ಎಂಬ ಭಾವ ಕಳಚಲು. ಇದು ಪ್ರಾಣಲಿಂಗಿ ಸ್ಥಲಕ್ಕೆ ಏರಿದ ಸಾಧಕ ಭಕ್ತ ಸಾಧಿಸಬೇಕಾದ ಭಾವ. ಪ್ರಾಣಲಿಂಗಿಯು ಸಾಧಿಸಬೇಕಾದದ್ದು ಬಹು ಮುಖ್ಯವಾಗಿ ಇಂದ್ರಿಯ ಸುಖಗಳಿಂದ ದೂರವಾಗುತ್ತಾ ಅರಿಷಡ್ವರ್ಗ, ಅಷ್ಟಮದಗಳನ್ನು ಕಳೆದುಕೊಳ್ಳುವ ಹಂತ.

ಶಬ್ದ ಸ್ಪರ್ಶ ರೂಪು ರಸ ಗಂಧ-ಪಂಚ ಇಂದ್ರಿಯ,
ಸಪ್ತಧಾತು ಅಷ್ಟಮದದಿಂದ
ಮುಂದುಗಾಣದವರು ನೀವು ಕೇಳಿರೆ;
ಲಿಂಗದ ವಾರ್ತೆಯ ವಚನದಲ್ಲಿ
ರಚನೆಯ ಮಾಡುವಿರಯ್ಯಾ,
ಸಂಸಾರದ ಮಚ್ಚು ಬಿಡದನ್ನಕ್ಕ,
ಸೂಕ್ಷ್ಮ ಶಿವಪಥವು ಸಾಧ್ಯವಾಗದು.
ಗುಹೇಶ್ವರಲಿಂಗದಲ್ಲಿ ವಾಕು ಪಾಕವಾದಡೇನೊ,
ಮನ ಪಾಕವಾಗದನ್ನಕ್ಕ?
(ಸಮಗ್ರ ವಚನ ಸಂಪುಟ; ಎರಡು / 2021 / ಪುಟ ಸಂಖ್ಯೆ; 65 / ವಚನ ಸಂಖ್ಯೆ; 175)

ಸೂಕ್ಷ್ಮವಾದ ಶಿವಪಥ ಅನಿರ್ವಚನೀಯವಾದದ್ದು. ಅದನ್ನು ಮಾತಿನಲ್ಲಿ ಹೇಳುವುದು ಅಸಾಧ್ಯ. ಲಿಂಗಾಂಗ ಸಾಮರಸ್ಯವು ಇಂದ್ರಿಯಾತೀತವಾದದ್ದು. ಕುರುಡ ಕರಿಯನ್ನು ಸ್ಪರ್ಷಿಸಿದಂತೆ. ಯಾವಾಗ ಸಂಸಾರ ಮೋಹದ ಸಿಪ್ಪೆಯನ್ನು ಶರೀರ ಕಳಚಿಕೊಳ್ಳುವುದೋ ಆಗ ಮಾತ್ರ ಶಿವಪಥ ಗೋಚರಿಸುವುದು. ಮಾತು ಹದವಾಗುವುದಕ್ಕಿಂತ ಮನಸ್ಸು ಪಕ್ವವಾಗುವುದು ಮುಖ್ಯ. ಪ್ರಾಣಲಿಂಗಿಗೆ ಇಂತಹ ಮನದ ಪಕ್ವತೆ ಬೇಕಾಗುತ್ತದೆ. ಪಕ್ವವಾದ ಹಣ್ಣು ತೊಟ್ಟು ಕಳಚಿ ಉದುರುವಂತೆ ಪಕ್ವವಾದ ಮನದಿಂದ ಇವೆಲ್ಲವೂ ಉದುರಿ ಹೋಗಬೇಕು. ಅಂದಾಗ ಮನ ಬತ್ತಲೆಯಾಗುತ್ತದೆ. ಮನದ ಬತ್ತಲೆಯನ್ನು ಪ್ರಾಣಲಿಂಗಿ ಸಾಧಿಸಿಕೊಳ್ಳಬೇಕು. ಸಂಸಾರದ ಅತಿ ಮೋಹ ಬಿಡದೆ ಮನ ಬತ್ತಲೆ ಆಗದು. ಮನ ಬತ್ತಲೆ ಆಗದೇ ಸೂಕ್ಷ್ಮ ಶಿವಪಥ ಸಾಧ್ಯವಾಗದು. ಇದನ್ನು ವೀರ ವೈರಾಗ್ಯನಿಧಿ ಅಕ್ಕಮಹಾದೇವಿಯವರು ಅತ್ಯಂತ ಪ್ರಬುದ್ಧವಾಗಿ ತಮ್ಮ ಒಂದು ವಚನದಲ್ಲಿ ತಿಳಿಸಿದ್ದಾರೆ.

ಅರ್ಥ ಸನ್ಯಾಸಿಯಾದಡೇನಯ್ಯಾ,
ಆವಂಗದಿಂದ ಬಂದಡೂ ಕೊಳದಿರಬೇಕು.
ರುಚಿ ಸನ್ಯಾಸಿಯಾದಡೇನಯ್ಯಾ,
ಜಿಹ್ವೆಯ ಕೊನೆಯಲ್ಲಿ ಮಧುರವನರಿಯದಿರಬೇಕು.
ಸ್ತ್ರೀ ಸನ್ಯಾಸಿಯಾದಡೇನಯ್ಯಾ,
ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ತಟ್ಟಿಲ್ಲದಿರಬೇಕು.
ದಿಗಂಬರಿಯಾದಡೇನಯ್ಯಾ,
ಮನ ಬತ್ತಲೆ ಇರಬೇಕು.
ಇಂತೀ ಚತುರ್ವಿಧದ
ಹೊಲಬನರಿಯದೆ ವೃಥಾ ಕೆಟ್ಟರು
ಕಾಣಾ ಚನ್ನಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-21 / ವಚನ ಸಂಖ್ಯೆ-45)

ವೀರ ವೈರಾಗ್ಯನಿಧಿ ಅಕ್ಕಮಹಾದೇವಿಯವರ ಈ ವಚನ ಸಂಸಾರ ಮೋಹದಿಂದ ಕಳಚಿಕೊಳ್ಳುವ ಬಗೆಯನ್ನು ಸ್ಪಷ್ಟವಾಗಿ ಹೇಳುತ್ತದೆ. ಅರ್ಥ (ಸಂಪತ್ತು) ಸನ್ಯಾಸಿಯಾಗುವುದಾದರೆ ಯಾವ ಮೂಲದಿಂದಲೂ ಬಂದ ದ್ರವ್ಯವನ್ನು ತೆಗೆದುಕೊಳ್ಳದಂತಿರಬೇಕು. ರುಚಿ ಸನ್ಯಾಸಿಯಾದರೆ ನಾಲಿಗೆಯ ತುದಿಯಿಂದಲೂ ಎಂತಹ ಮೃಷ್ಟಾನ್ನವನ್ನು ಸ್ಪರ್ಷಿಸದಂತಿರಬೇಕು. ಅಂದರೆ ಸ್ವಲ್ಪವೂ ಅದರ ಮಧುರತೆಯನ್ನು ನಾಲಿಗೆ ಅರಿಯದಂತಿರಬೇಕು. ಸ್ತ್ರೀ ಸನ್ಯಾಸಿಯಾದರೆ ಜಾಗೃತವಾಗಿದ್ದಾಗ, ಸುಪ್ತಾವಸ್ಥೆಯಲ್ಲಿದ್ದಾಗಲೂ ಮುಟ್ಟದಂತಿರಬೇಕು. ತನು ಬತ್ತಲೆ ಅಗುವುದು ಮುಖ್ಯವಲ್ಲ. ಮನ ಬತ್ತಲೆಯಾಗಬೇಕು. ಈ ಕಟು ಸತ್ಯ ಅರಿಯದೆ ವಿನಾಕಾರಣ ನಾನು ಸನ್ಯಾಸಿ ಎಂಬ ಪಟ್ಟ ಹೊತ್ತು ವೃಥಾ ಕೆಟ್ಟಿರಿ ಎಂಬ ಅಕ್ಕಮಹಾದೇವಿಯವರ ನುಡಿಗಳಲ್ಲಿ ಪ್ರಾಣಲಿಂಗಿ ಸ್ಥಲಕ್ಕೆ ಏರುವ ಸಾಧಕ ಭಕ್ತ ಎಷ್ಟು ಕಠೋರ ಕ್ರಮದಲ್ಲಿ ಸಂಸಾರ ಮೋಹ ತ್ಯಜಿಸಬೇಕು ಎಂಬುದು ವಿಧಿತವಾಗಿದೆ.

ಪ್ರಾಣಲಿಂಗಿ ಸ್ಥಲದ ಮಹತ್ವವನ್ನು ಅದರ ಹೆಸರೇ ಸೂಚಿಸಿದೆ. ಸಾಧಕ ಭಕ್ತನಾದವನು ಪ್ರಾಣಲಿಂಗಿ ಸ್ಥಲವನ್ನು ಏರಿದಾಗ ಸದಾ ಲಿಂಗ ಸಹಿತನಾಗಿರಬೇಕು. ಅಂಗದಲ್ಲಿ ಲಿಂಗ ಧರಿಸದಿದ್ದರೆ ಅವನು ಪ್ರಾಣವಿಲ್ಲದ ಶವದಂತಾಗುತ್ತಾನೆ. ಈ ವಿಚಾರವನ್ನು ಬಸವಣ್ಣನವರು ತಮ್ಮ ವಚನದಲ್ಲಿ ಬಹಳ ಸ್ಪಷ್ಟವಾಗಿ ಹೇಳುತ್ತಾರೆ.

ಪ್ರಾಣಲಿಂಗ ಪ್ರತಿಗ್ರಾಹಕನಾದ ಬಳಿಕ,
ಲಿಂಗವಿರಹಿತನಾಗಿ ನಡೆವ ಪರಿಯೆಂತೊ?
ಲಿಂಗವಿರಹಿತನಾಗಿ ನುಡಿವ ಪರಿಯೆಂತೊ?
ಪಂಚೇಂದ್ರಿಯ ಸುಖವನು
ಲಿಂಗವಿರಹಿತನಾಗಿ ಭುಂಜಿಸಲಾಗದು,
ಲಿಂಗವಿರಹಿತವಾಗಿ ಉಗುಳ ನುಂಗಲಾಗದು,
ಇಂತೆಂದುದು ಕೂಡಲಸಂಗನ ವಚನ.
(ಸಮಗ್ರ ವಚನ ಸಂಪುಟ: ಒಂದು-2021 / ಪುಟ ಸಂಖ್ಯೆ-223 / ವಚನ ಸಂಖ್ಯೆ-797)

ಪ್ರಾಣಲಿಂಗಿಯಾದವನು ಲಿಂಗ ಧರಿಸದೇ ನಡೆಯಬಾರದು. ಲಿಂಗ ಧರಿಸದೇ ನುಡಿಯಬಾರದು. ಲಿಂಗ ಧರಿಸದೇ ಪಂಚೇಂದ್ರಿಯ ಸುಖವನ್ನು ಅನುಭವಿಸಬಾರದು. ಅಷ್ಟೇ ಅಲ್ಲಾ ಲಿಂಗ ಧರಿಸದೆ ಉಗುಳನ್ನೂ ಸಹ ನುಂಗಲಾಗದು ಎಂಬ ಎಚ್ಚರಿಕೆಯನ್ನೂ ಕೂಡ ನೀಡುತ್ತಾರೆ. ಲಿಂಗ ಧರಿಸದಿದ್ದರೆ ಅಂತಹ ಭಕ್ತ ಬದುಕಿಯೂ ಸತ್ತಂತೆ. ಇಷ್ಟಲಿಂಗವನ್ನು ಯಾವ ಸ್ಥಿತಿಯಲ್ಲಾದರೂ ಧರಿಸಲೇಬೇಕಾದ್ದು ಪ್ರಾಣಲಿಂಗಿಯು ಪಾಲಿಸಲೇಬೇಕಾದ ಕರ್ತವ್ಯವಾಗಿದೆ.

ಇದನ್ನೇ ಅಲ್ಲಮ ಪ್ರಭುಗಳು ಪ್ರಶ್ನಿಸುತ್ತಾರೆ. ಬಹಳ ಸ್ಪಷ್ಟವಾಗಿ “ತೋರಿಕೆಯ ಲಿಂಗಪೂಜೆ ಪ್ರಾಣಲಿಂಗಿಯ ಲಕ್ಷಣವಲ್ಲ” ಎಂದು ಹೇಳುತ್ತಾರೆ. ಇಷ್ಟಲಿಂಗ ಧರಿಸುವುದು ಎಷ್ಟು ಮುಖ್ಯವೋ ಅಷ್ಟೇ ನಿಷ್ಠೆಯಿಂದ ಅದನ್ನು ಪೂಜಿಸಬೇಕು. ಆ ಪೂಜೆಯು ತೋರಿಕೆಯ ಪೂಜೆಯಾಗದೇ ಅಂತರಂಗದ ಅಂತಃಕರಣದಿಂದ ಪೂಜಿಸಬೇಕು ಎಂಬುದನ್ನು ಅಲ್ಲಮ ಪ್ರಭುಗಳು ಅತ್ಯಂತ ಸ್ಪಷ್ಟವಾಗಿ ಈ‌ ವಚನದಲ್ಲಿ ಉಲ್ಲೇಖಿಸುತ್ತಾರೆ.

ಅಂಗದ ಕೈಯಲ್ಲಿ ಲಿಂಗ, ಮನದ ಕೈಯಲ್ಲಿ ಸಂಸಾರ,
ಎಂತಯ್ಯಾ ನಿನ್ನ ಪ್ರಾಣಲಿಂಗವೆಂಬೆ?
ಹೊರಗೆ ಕುರುಹಾಗಿ ತೋರುತ್ತಿದೆ.
ತನುವಿಗೆ ತನು ಸಯವಾಗದು, ಮನಕ್ಕೆ ಮನ ಸಯವಾಗದು,
ಎಂತಯ್ಯಾ ನಿನ್ನ ಪ್ರಾಣಲಿಂಗಿಯೆಂಬೆ ಗುಹೇಶ್ವರಾ.
(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-218 / ವಚನ ಸಂಖ್ಯೆ-701)

ಅಂಗದ ಕೈಯಲ್ಲಿ ಲಿಂಗವಿದ್ದರೆ ಮಾತ್ರ ಸಾಧಕ ಭಕ್ತ ಪ್ರಾಣಲಿಂಗಿ ಎನಿಸಿಕೊಳ್ಳಲಾರ. ಮನದಲ್ಲಿ ಸಂಸಾರ ಮೋಹ, ವಿಷಯ ವಾಸನೆ ಹೊಂದಿ, ಕೈಯಲ್ಲಿ ಲಿಂಗ ಹಿಡಿದರೆ ಅದು ಕೇವಲ ಕುರುಹು (ಬಾಹ್ಯ ಚಿಹ್ನೆ) ಆಗುತ್ತದೆ. ಲಿಂಗಕ್ಕಾಗಿ ತನುವಿಗೆ ತನುವೇ ಶ್ರಮಿಸಬೇಕು. ಮನಕ್ಕೆ ಮನವೇ ಲೀನವಾಗಬೇಕು. ತನು-ಮನು ಒಳಗಾಗದ ತೋರಿಕೆಯ ಲಿಂಗಪೂಜೆ ಅಥವಾ ಲಿಂಗದ ಅನುಸಂಧಾನ ಪ್ರಾಣಲಿಂಗಿಯ ಲಕ್ಷಣವಲ್ಲ ಎಂಬುದು ಅಲ್ಲಮ ಪ್ರಭುಗಳ ಅಭಿಮತವಾಗಿದೆ.

ಮುಂದುವರೆದು ಪ್ರಾಣಲಿಂಗಿ ಸಾಧಕನು ಮುಖ್ಯವಾಗಿ ಹೊಂದಬೇಕಾಗಿರುವುದು ಲಿಂಗ ಸುಖವನ್ನು. ಲಿಂಗ ಸುಖವು ಸನ್ನಿಹಿತವಾಗಬೇಕಾದರೆ ಅಂಗ ಸುಖಗಳು ದೂರವಾಗಬೇಕು. ಅದರಲ್ಲೂ ಮುಖ್ಯವಾಗಿ ಸಪ್ತವ್ಯಸನಗಳು ಸಾಧಕನನ್ನು ಸಂಸಾರ ಬಂಧನದಲ್ಲಿ ಸಿಲುಕಿಸುತ್ತವೆ. ಯಾವಾಗ ಸಾಧಕ ಲಿಂಗ ವ್ಯಸನಿಯಾಗುವನೋ ಆಗ ಅವನು ಸಪ್ತವ್ಯಸನಗಳಿಂದ ದೂರವಾಗುತ್ತಾನೆ. ಸಪ್ತವ್ಯಸನಗಳನ್ನು ಬಿಟ್ಟು ಲಿಂಗವ್ಯಸನಿಯಾದಾತನೇ ಪ್ರಾಣಲಿಂಗಿ ಸಂಬಂಧಿ.

ತನುವ್ಯಸನ ಮನವ್ಯಸನ ಧನವ್ಯಸನ ವಾಹನವ್ಯಸನ
ಉತ್ಸಾಹವ್ಯಸನ ವಿಶ್ವವ್ಯಸನ ಸೇವಕವ್ಯಸನ
ಇಂತೀ ಸಪ್ತವ್ಯಸನಂಗಳು:
ತನುವ್ಯಸನ ವಸ್ತು ಆಭರಣ ವೀಳೆಯ ಬಯಸೂದು,
ಮನವ್ಯಸನ ಕಳವು ಹುಸಿ ಪಾರದ್ವಾರವ ಬಯಸೂದು,
ಧನವ್ಯಸನ ರಾಜ್ಯವ ಬಯಸೂದು.
ವಾಹನವ್ಯಸನ ಆನೆ ಕುದುರೆ ಸೇನೆ ಬಯಸೂದು,
ವಿಶ್ವವ್ಯಸನ ಚತುರ್ವಿಧಕರ್ತವ್ಯ ಬಯಸೂದು,
ಉತ್ಸಾಹವ್ಯಸನ ಪುತ್ರ ಮಿತ್ರ ಕಳತ್ರವ ಬಯಸೂದು,
ಸೇವಕವ್ಯಸನ ಉಣಲಾರೆ, ಉಡಲಾರೆ ತೊಡಲಾರೆನೆಂದೆನುತ್ತಿಹುದು.
ಈ ಸಪ್ತವ್ಯಸನಂಗಳಂ ಬಿಟ್ಟು ಲಿಂಗವ್ಯಸನಿಯಾಗಬಲ್ಲರೆ
ಕೂಡಲಚೆನ್ನಸಂಗಯ್ಯನಲ್ಲಿ ಪ್ರಾಣಲಿಂಗಿಗಳೆಂಬೆನು.
(ಸಮಗ್ರ ವಚನ ಸಂಪುಟ: ಮೂರು-2021 / ಪುಟ ಸಂಖ್ಯೆ-148 / ವಚನ ಸಂಖ್ಯೆ-338)

ಚೆನ್ನಬಸವಣ್ಣನವರು ಅತ್ಯಂತ ಸರಳವಾಗಿ, ಸುಂದರವಾಗಿ ಪ್ರಾಣಲಿಂಗ ಸಂಬಂಧಿ ಆಗುವ ವಿಧಾನವನ್ನು ಅರುಹಿದ್ದಾರೆ. ಅಂಗಪ್ರಾಣಿ ಲಿಂಗಪ್ರಾಣಿಯಾಗಲು ಮಮಕಾರಗಳನ್ನು ಕಳೆದುಕೊಳ್ಳಬೇಕು. ಪ್ರಾಣಲಿಂಗಿ ಆಗ ಬಯಸುವ ಅಂಗಪ್ರಾಣಿ ಮಮಕಾರಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಅಂದಾಗ ಅಂಗಪ್ರಾಣಿ ಲಿಂಗಪ್ರಾಣಿಯಾಗಿ ಪರಿವರ್ತಿತವಾಗಲು ಸಾಧ್ಯ.

ಪ್ರಾಣಲಿಂಗಿಗೆ ಪದಾರ್ಥಪ್ರೇಮವುಂಟೆ?
ಪ್ರಾಣಲಿಂಗಿಗೆ ಪ್ರಪಂಚದ ಮೋಹವುಂಟೆ?
ಪ್ರಾಣಲಿಂಗಿಗೆ ಸ್ಥಲಕುಲದ ಅಭಿಮಾನ,
ಕುಲಗೋತ್ರದ ಹಂಗು ಉಂಟೆ?
ಪ್ರಾಣಲಿಂಗಿಗೆ ಮಾತಾ-ಪಿತಾ, ಸತಿ-ಸುತ
ಬಂಧುಗಳ ಸ್ನೇಹಿತರ ಮೋಹವುಂಟೆ?
ಇಂತೀ ಸರ್ವರಲ್ಲಿ ಮಮಕಾರ ಉಳ್ಳಾತ ಅಂಗಪ್ರಾಣಿಯಲ್ಲದೆ
ಲಿಂಗಪ್ರಾಣಿ ಆಗಲರಿಯನು ನೋಡಾ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.
(ಸಮಗ್ರ ವಚನ ಸಂಪುಟ: ಹತ್ತು-2021 / ಪುಟ ಸಂಖ್ಯೆ-126 / ವಚನ ಸಂಖ್ಯೆ-168)

ಭೌತಿಕ ಪದಾರ್ಥಗಳ ಪ್ರೇಮ, ಪ್ರಪಂಚದ ಮೋಹ, ಸ್ಥಲ-ಕುಲ ಅಭಿಮಾನ, ಕುಲ-ಗೋತ್ರದ ಹಂಗು, ಮಾತಾ-ಪಿತಾ, ಸತಿ-ಸುತ, ಬಂಧುಗಳ-ಸ್ನೇಹಿತರ ಮೋಹ ಇದ್ದರೆ ಅವನು ಅಂಗಪ್ರಾಣಿಯಾಗುತ್ತಾನೆ. ಈ ಸರ್ವದರಲ್ಲಿ ಮತ್ತು ಸರ್ವರಲ್ಲಿ ಮಮಕಾರದಿಂದ ದೂರವಾಗುವವನೇ ಲಿಂಗಪ್ರಾಣಿ ಎಂದು ತುಂಬಾ ಮಾರ್ಮಿಕವಾಗಿ ಶರಣ ಕಾಡಸಿದ್ಧೇಶ್ವರರು ಪ್ರಾಣಲಿಂಗಿಯ ಲಕ್ಷಣಗಳನ್ನು ತಿಳಿಸುತ್ತಾರೆ.

ಇದಕ್ಕೆ ಪೂರಕವೆಂಬಂತೆ ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವರು ಪ್ರಾಣಲಿಂಗಿಗಳೆಂದು ಹೇಳುವ ಸಾಧಕರಿಗೆ ಕೆಲವೊಂದು ಸಲಹೆ ರೂಪದ ನಿಯಮಗಳನ್ನು ವಿವರಿಸುತ್ತಾರೆ.

ನಾವು ಪ್ರಾಣಲಿಂಗಿಗಳೆಂದು ಹೇಳುವ ಅಣ್ಣಗಳಿರಾ,
ನೀವು ಪ್ರಾಣಲಿಂಗಿಗಳು ಎಂತಾದಿರಿ ಹೇಳಿರಣ್ಣ?
ಅರಿಯದಿರ್ದಡೆ ಕೇಳಿರಣ್ಣ, ಪ್ರಾಣಲಿಂಗವಾದ ಭೇದಾಭೇದವ.
ಕಾಯದ ಕಳವಳದಲ್ಲಿ ಕೂಡದೆ, ಮನದ ಭ್ರಾಂತಿಗೊಳಗಾಗದೆ,
ಕರಣಂಗಳ ಮೋಹಕ್ಕೀಡಾಗದೆ, ಪ್ರಾಣನ ಪ್ರಪಂಚಿನಲ್ಲಿ ಬೆರೆಯದೆ,
ಜೀವನ ಬುದ್ಧಿಯಲ್ಲಿ ಮೋಹಿಸದೆ, ಹಂಸನ ಆಸೆಗೊಳಗಾಗದೆ
ನಿಷ್ಪ್ರಪಂಚಿಯಾಗಿ, ಗುರುಲಿಂಗಜಂಗಮದ
ಪಾದೋದಕಪ್ರಸಾದದಲ್ಲಿ ಅತಿಕಾಂಕ್ಷೆವುಳ್ಳಾತನಾಗಿ,
ತ್ರಿವಿಧಲಿಂಗದಲ್ಲಿ ಸೂಜಿಗಲ್ಲಿನಂತೆ,
ಎರಕತ್ವವುಳ್ಳಾತನಾಗಿಪ್ಪಾತನೆ ಲಿಂಗಪ್ರಾಣಿ ನೋಡಾ,
ಕಲಿದೇವಯ್ಯ.
(ಸಮಗ್ರ ವಚನ ಸಂಪುಟ: ಎಂಟು-2021 / ಪುಟ ಸಂಖ್ಯೆ-263 / ವಚನ ಸಂಖ್ಯೆ-641)

ಅಷ್ಟಾವರಣಗಳಲ್ಲಿ ಅತಿ ಆಕಾಂಕ್ಷೆ ಹೊಂದಿರಬೇಕು. ತ್ರಿವಿಧದ (ಇಷ್ಟಲಿಣಗ, ಪ್ರಾಣಲಿಂಗ, ಭಾವಲಿಂಗ) ಲಿಂಗಕ್ಕೆ ಮನ ತೆರೆದ ಸಾಧಕ ಭಕ್ತ ಲಿಂಗಪ್ರಾಣಿ ಆಗಲು ಸಾಧ್ಯ. ಪ್ರಾಣಲಿಂಗಿ ಆಗಬೇಕಾದ ಸಾಧಕ ಕಾಯದ ಮೋಹಕ್ಕೆ ಒಳಗಾಗಬಾರದು. ಮನದ ಭ್ರಾಂತಿಗೆ ಒಳಗಾಗಬಾರದು. ಪಂಚೇಂದ್ರಿಯ ಸುಖಕ್ಕೆ ಎಳಸಬಾರದು. ಪ್ರಾಣವನ್ನು ಪ್ರಾಪಂಚಿಕ ಜಂಜಡದಲ್ಲಿ ಬೆರೆಸದೆ, ಜೀವವನ್ನು ಬುದ್ಧಿಯ ಭ್ರಮೆಯೊಳಗೆ ಸಿಲುಕಿಸದೆ ನಿಷ್ಪ್ರಪಂಚಿಯಾಗಬೇಕು. ಅಷ್ಟಾವರಣ, ಪಂಚಾಚಾರಗಳನ್ನು ಅಳವಡಿಸಿಕೊಳ್ಳಬೇಕು. ಇವೆಲ್ಲವುಗಳು ಪ್ರಾಣಲಿಂಗಿ ಸ್ಥಲಕ್ಕೇರುವ ಸಾಧಕ ಭಕ್ತ ಅನುಸರಿಸಬೇಕಾದ ನಿಯಮಗಳು ಎಂದು ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವರು ನಿರೂಪಿಸುತ್ತಾರೆ.

ಅಂತಿಮವಾಗಿ ಪ್ರಾಣಲಿಂಗಿ ಸ್ಥಲದಲ್ಲಿ ಸಾಧಕ ಭಕ್ತ ಇಷ್ಟಲಿಂಗ ಪ್ರೇಮದಲ್ಲಿ ತಪ್ತನಾಗಬೇಕು. ಇಷ್ಟಲಿಂಗ ಪೂಜೆಯಿಂದ ಮಾತ್ರ ಪ್ರಾಣಲಿಂಗದ ಅನುಭವ ವೇದ್ಯವಾಗುವುದು ಎಂಬುದೇ ನಿತ್ಯ ಸತ್ಯ.

ಒಂದು ದೀಪವು ಬೆಳಗುತ್ತಿರುವಾಗ ಅದು ಕತ್ತಲೆಯನ್ನು ಮಾತ್ರ ನಿವಾರಿಸುವುದಿಲ್ಲ. ಆ ದೀಪದ ಬೆಳಕಿನ ಕಿರಣಗಳು ಸುತ್ತ-ಮುತ್ತ ಎಲ್ಲ ಕಡೆ ಹರಡಿಕೊಳ್ಳುತ್ತವೆ. ಈ ತೆರನಾಗಿ ಇಷ್ಟಲಿಂಗದ ಪೂಜೆ, ಅರ್ಚನೆ, ಅರ್ಪಣೆಗಳಂತಹ ಸತ್‌ ಕ್ರಿಯಾಚರಣೆ, ಶ್ರದ್ಧಾ, ನಿಷ್ಠೆ, ಸಾವಧಾನ, ಶಾಂತಿ ಇಂತಹ ಅನುಭವ ಜನ್ಯ ಭಕ್ತಿಯ ರೂಪವಾಗಿ ಅಲ್ಲಿಂದ ಪ್ರಾಣಲಿಂಗದ ಅರಿವು ತನ್ನಿಂದ ತಾನೇ ಆಗುತ್ತದೆ. ಮುಂದುವರೆದು ಇಷ್ಟಲಿಂಗ-ಪ್ರಾಣಲಿಂಗ ಎಂಬ ಕಷ್ಟವೇ ಉಳಿಯುವುದಿಲ್ಲ.

ಇಷ್ಟಲಿಂಗವನು ಪ್ರಾಣಲಿಂಗವೆಂಬ ಕಷ್ಟವೆಲ್ಲಿಯದೊ?
ಇಷ್ಟಲಿಂಗ ಹೋದಡೆ ಪ್ರಾಣಲಿಂಗ ಹೋಗದು ನೋಡಾ.
ಇಷ್ಟಲಿಂಗ ಪ್ರಾಣಲಿಂಗದ ಭೇದವನು
ಗುಹೇಶ್ವರಾ, ನಿಮ್ಮ ಶರಣ ಬಲ್ಲ.
(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-67 / ವಚನ ಸಂಖ್ಯೆ-181)

ಇಷ್ಟಲಿಂಗವನ್ನು ಪೂಜಿಸುತ್ತಾ ಪ್ರಾಣಲಿಂಗವಾಗುತ್ತದೆ. ಮುಂದಿನ ಹಂತದಲ್ಲಿ ಇಷ್ಟಲಿಂಗ ಹೋದರೂ ಪ್ರಾಣಲಿಂಗ ಹೋಗುವುದಿಲ್ಲ. ಅದು ಇಷ್ಟವಾಗಿ, ಪ್ರಾಣವಾಗಿ ಪ್ರಾಣದಲ್ಲೇ ಇರುತ್ತದೆ. ಅಂಗಪ್ರಾಣಿ ಲಿಂಗಪ್ರಾಣಿಯಾಗಿ ಮರಣಿಸಿದಾಗಲೂ ಅದು ಅವನೊಂದಿಗೆ ಲೀನವಾಗುತ್ತದೆ ಎನ್ನುವುದು ಅಲ್ಲಮ ಪ್ರಭುಗಳ ನಿಲುವಾಗಿದೆ.

ಒಂದು ಬೀಜ ಮೊಳಕೆಯಾದಾಗ ಆ ಬೀಜಕ್ಕೂ ಮೊಳಕೆಗೂ ಹೇಗೆ ಭಿನ್ನತೆ ಇರುವುದಿಲ್ಲವೋ ಹಾಗೆಯೇ ಇಷ್ಟಲಿಂಗಕ್ಕೂ ಪ್ರಾಣಲಿಂಗಕ್ಕೂ ಭೇದ ಕಲ್ಪಿಸಲಾಗದು. ಆ ಇಷ್ಟಲಿಂಗದ ಕುರುಹಿನಲ್ಲಿ ಮನಸ್ಸು ಕೇಂದ್ರೀಕೃತವಾಗಿ ನಿಂತಾಗ ಅದೇ ಪ್ರಾಣಲಿಂಗವಾಗುತ್ತದೆ.

ಇಷ್ಟಲಿಂಗ ಪ್ರಾಣಲಿಂಗವೆಂದು
ಬೇರೊಂದು ಕಟ್ಟಳೆಯ ಮಾಡಬಹುದೆ ಅಯ್ಯಾ?
ಬೀಜವೊಡೆದು ಮೊಳೆ ತಲೆದೋರುವಂತೆ,
ಬೀಜಕ್ಕೂ ಅಂಕುರಕ್ಕೂ ಭಿನ್ನವುಂಟೆ ಅಯ್ಯಾ?
ಇಷ್ಟದ ಕುರುಹಿನಲ್ಲಿ ಚಿತ್ತ ನಿಂದು ಮಿಕ್ಕ ಗುಣಂಗಳನರಿಯಬೇಕು.
ಇದೆ ನಿಶ್ಚಯ ಸದಾಶಿವಮೂರ್ತಿಲಿಂಗವು ತಾನಾಗಿ.
(ಸಮಗ್ರ ವಚನ ಸಂಪುಟ: ಆರು-2021 / ಪುಟ ಸಂಖ್ಯೆ-152 / ವಚನ ಸಂಖ್ಯೆ-397)

ಶರಣ ಅರಿವಿನ ಮಾರಿತಂದೆಯವರ ವಚನವೂ ಕೂಡ ಇದೇ ತತ್ವ ಸಿದ್ಧಾಂತವನ್ನು ನಿರೂಪಣೆ ಮಾಡುತ್ತದೆ.

ಒಟ್ಟಿನಲ್ಲಿ ಸಾಧಕ ಭಕ್ತ ಸಾಧನೆಯ ಮಾರ್ಗದಲ್ಲಿ ಕ್ರಮಿಸುವಾಗ ಪ್ರಾಣಲಿಂಗಿ ಸ್ಥಲದಲ್ಲಿ ಬಹಿರಂಗವನ್ನು ಜಯಿಸುತ್ತಾ ಅಂತರಂಗವನ್ನು ಅರಿವಿನ ಜ್ಯೋತಿಯಿಂದ ಬೆಳಗಿಸಿಕೊಳ್ಳುವ ಅಂತರಂಗ-ಬಹಿರಂಗ ಸಾಧನೆಯ ಮೆಟ್ಟಿಲಾಗಿದೆ. ಗುರು-ಲಿಂಗ-ಜಂಗಮದ ಧ್ವನಿಯಾಗಿದೆ. ಭಕ್ತ-ಶಕ್ತಿಗಳ ಸಂಗಮವಾಗಿದೆ. ಹೀಗೆ ಈ ಪಯಣ ಅಂಗಪ್ರಾಣಿ ಲಿಂಗಪ್ರಾಣಿಯಾಗುವ ಅರಿವಿನ ಮಹಾ ಮಾರ್ಗವಾಗಿದೆ. ಷಟಸ್ಥಲಗಳಲ್ಲಿ ಪ್ರಮುಖವಾದ ಹಂತವಾಗಿದೆ.

12 ನೇ ಶತಮಾನದ ಶರಣರು ನಡೆ-ನುಡಿ ಸಿದ್ಧಾಂತದಲ್ಲಿ ನಂಬಿಕೆಯನ್ನಿಟ್ಟು ಅದೇ ದಾರಿಯಲ್ಲಿ ನಡೆದು ತಮ್ಮ ಗುರಿಯನ್ನು ಸಾಧಿಸಿದವರು. ಸಾಮಾನ್ಯರಂತೆ ಬದುಕಿ ಅಸಾಮಾನ್ಯ ತತ್ವಗಳನ್ನು ಜಗತ್ತಿಗೇ ನೀಡಿ ಬೆಳಕನ್ನಿತ್ತ ಶರಣರ ಬದುಕು ಇಂದಿಗೂ ನಮಗೆ ಆದರ್ಶಮಯ. ಇಂಥ ಆದರ್ಶಗಳನ್ನು ಮೌಲ್ಯಗಳನ್ನು ತಿಳಿದುಕೊಳ್ಳುವ, ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಇದೆ. ಹಾಗಾಗಿ ಒಂದು ಆತ್ಮಾವಲೋಕನದಿಂದ ಶರಣರನ್ನು ಅರಿಯೋಣ ಅಂತ ಹೇಳತಾ ಅಲ್ಲಮ ಪ್ರಭುಗಳ ಒಂದು ವಚನದೊಂದಿಗೆ ಈ ಲೇಖನಕ್ಕೆ ವಿರಾಮವನ್ನು ಹೇಳುತ್ತೇನೆ.

ಕಾಗೆಯ ತಿಂದವನಲ್ಲದೆ ಭಕ್ತನಲ್ಲ.
ಕೋಣನ ತಿಂದವನಲ್ಲದೆ ಮಹೇಶ್ವರನಲ್ಲ.
ಕೋಡಗನ ತಿಂದವನಲ್ಲದೆ ಪ್ರಸಾದಿಯಲ್ಲ.
ನಾಯ ತಿಂದವನಲ್ಲದೆ ಪ್ರಾಣಲಿಂಗಿಯಲ್ಲ.
ಹೇಯವ ತಿಂದವನಲ್ಲದೆ ಶರಣನಲ್ಲ.
ಇಂತೈವರ ತಿಂದವನಲ್ಲದೆ ಲಿಂಗೈಕ್ಯನಲ್ಲ ಗುಹೇಶ್ವರ!
(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-397 / ವಚನ ಸಂಖ್ಯೆ-1060)

ಡಾ. ಪುಷ್ಪಾವತಿ ಶಲವಡಿಮಠ,
ಕನ್ನಡ ಉಪನ್ಯಾಸಕರು,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಚಿಕ್ಕ ಬಾಸೂರು, ಹಾವೇರಿ ಜಿಲ್ಲೆ.
ಮೋಬೈಲ್‌. ಸಂ. 97407 38330

ಪರಾಮರ್ಶನ ಕೃತಿಗಳು:
• ಬಸವ ತತ್ವ ಪ್ರದೀಪಿಕೆ: ಡಾ. ಸಿದ್ಧರಾಮ ಶರಣರು ಬೆಲ್ದಾಳ ಮತ್ತು ಡಾ. ಬಸವರಾಜ ಧನ್ನೂರ
• ಶರಣರ ಸಿದ್ಧಾಂತಗಳು ಮತ್ತು ಶೂನ್ಯ ಸಂಪಾದನೆಯಲ್ಲಿ ಅಕ್ಕಮಹಾದೇವಿ ಮತ್ತು ಮುಕ್ತಾಯಕ್ಕನವರು: ಡಾ. ವಿಜಯಕುಮಾರ ಕಮ್ಮಾರ.
• ಶಿವಾಗಮಗಳು ಮತ್ತು ವಚನ ಸಾಹಿತ್ಯ ಒಂದು ವಿಮರ್ಶಾತ್ಮಕ ಅಧ್ಯಯನ: ಡಾ. ಶ್ರೀಕರ ದಿವಾಕರ ಸ್ವಾಮಿ ಹಿರೇಮಠ.
• ಸಮಗ್ರ ವಚನ ಸಂಪುಟಗಳು-2021: ಸಂ. ಎಮ್‌ ಎಮ್‌ ಕಲಬುರ್ಗಿ.
• ಸಾರ್ಥಕ ಬದುಕು, ವಚನಗಳು, ವಚನಕಾರರು, ಒಂದು ಸಂಶೋಧನಾತ್ಮಕ ದೃಷ್ಟಿಕೋನ, ಸಂಪುಟ-1 & 2: ಸಂ. ಡಾ. ಅಮರೇಶ ಯತಗಲ್.
• ಶೂನ್ಯ ಸಂಪಾದನೆಯ ಪರಾಮರ್ಶೆ: ಸಂ. ಸಂ. ಶಿ. ಭೂಸನೂರಮಠ.

 ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in

Loading

Leave a Reply