
ಜನಪದರ ಶರಣ ಧರ್ಮದ ಹರಹು ವಿಶಾಲವಾದದ್ದು. ಅದನ್ನು ನಿರ್ದಿಷ್ಟ ಅರ್ಥದಲ್ಲಿ ಕಟ್ಟಿ ಹಾಕಲಾಗುವುದಿಲ್ಲ. ಹೀಗಾಗಿ ಮೌಖಿಕ ಜನಪದ ಸಾಹಿತ್ಯ ಮುಗ್ಧಶರಣರ ಸತ್ಯದ ಅನೇಕ ಮುಖಗಳನ್ನು ಅನಾವರಣಗೊಳಿಸುತ್ತದೆ. ಅನಕ್ಷರಸ್ಥರ ಆಡುಮಾತಿನ ಸರಳತೆ ಖಚಿತತೆಯನ್ನು ಶರಣಧರ್ಮದ ಪವಿತ್ರತೆಯನ್ನು ಸ್ಪಷ್ಟಪಡಿಸುತ್ತದೆ. ತಾವು ಕಂಡ ಜೀವನದ ಚಿಕ್ಕ ಚಿಕ್ಕ ಘಟನೆಯ ಅನುಭವಗಳನ್ನು ಜೀವದುಂಬಿ ದಾಖಲಿಸುವ ಅವರ ಜ್ಞಾನದ ತೀಕ್ಷ್ಣಣತೆಯೂ ಅನವರತ. ತಮ್ಮ ಎದೆಯಾಳದಲ್ಲಿ ನೈತಿಕ ಪ್ರೀತಿ ಬಿಂಬಿಸುತ್ತಾ ತಾಯಿ ಭಾವ ವ್ಯಕ್ತಪಡಿಸುವುದೂ ಒಂದು ರೋಮಾಂಚನ. ಪ್ರಕೃತಿಯ ಸತ್ಯವನ್ನೇ ದೇವರೆಂದು ತಿಳಿದ ಜನಪದರು ನಿಸರ್ಗದ ಮೂಲಕವೇ ಸಂಭಾಷಣೆಗೆ ತೊಡಗುತ್ತಾರೆ. ಏಕೆಂದರೆ ಅವರ ಒಡಲೊಳಗೆ ಶರಣಧರ್ಮದ ಅನುಕರಣೆಗಳಿದ್ದವು. ಕಲ್ಯಾಣ ನಾಡಿನ ಸಾಮೂಹಿಕ ಶಕ್ತಿಗಳ ಪ್ರಚೋದನೆಗಳಿದ್ದವು. ಇವುಗಳನ್ನು ಸ್ಪಟಿಕದಷ್ಟೇ ಶುದ್ಧಗೊಳಿಸಿ ನೋಡಿದವರು ಜನಪದ ರಾಗಿದ್ದರು.
ಶರಣರ ನೆನೆದಾರೆ ಸುರಗೀಯ ಇಟ್ಟಾಂಗ
ಅರಳ ಮಲ್ಲೀಗೆ ಮುಡಿದಾಂಗ
ಕಲ್ಯಾಣ ಶರಣರ ನೆನೆಯೋ ನನ ಮನವೇ
ಜನಪದರಿಗೆ ಶರಣ ಸಂಸ್ಕೃತಿಯನ್ನು ಅಭಿಮಾನಿಸಿ ಹಾಡು ಕಟ್ಟುವ ಕಾವ್ಯಾತ್ಮಕ ಮನಸ್ಸು ಅವರದು. ಅವರ ಮಾತೇ ಶಬ್ದಗಳ ಹಾಡಾಗಿ ಜನಪದ ಸಂಸ್ಕೃತಿಯನ್ನು ಪ್ರೀತಿಸುವಂತೆ ಮಾಡುತ್ತದೆ. ಮದುವೆಯ ಸಮಯದಲ್ಲಿ ಕಂಕಣ ಅರಿಶಿನ ಸುರಗಿಯ ನೀರು ಹಸಿರನ್ನು ಹೊತ್ತು ತರುವ ಪವಿತ್ರದ ವಾತಾವರಣವಾಗಿರುತ್ತದೆ. ಜನಪದರಿಗೆ ಶರಣರನ್ನು ನೆನೆಯುವುದೆಂದರೆ ಮದುವೆಯ ಸಂಭ್ರಮದ ನೆನಪಿನ ಹಂದರವಾಗಿದೆ. ತಮ್ಮ ಶರಣಮಯ ಜೀವನವನ್ನು ಅರಳುವ ಮಲ್ಲಿಗೆಯನ್ನಾಗಿಸಿ ಮುಡಿಗೇರಿಸಿಕೊಂಡಾಗಲೇ ಸಾರ್ಥಕ್ಯ ಕಾಣುತ್ತಾರೆ. ಜನಪದರಿಗೆ ಕಲ್ಯಾಣವೆಂದರೆ ತಾತ್ವಿಕ ಭಾವದ ಶಿವ ಸಂಕಲ್ಪದ ನಾಡದು. ಶರಣಧರ್ಮದ ಚಾರಿತ್ರಿಕ ರೂಪವದು. ಬಸವ ಬೆಳಗಿನಲ್ಲಿ ನೆನೆಯುವ ಉತ್ಕಟ ಬಯಕೆಯದು. “ಕಲ್ಯಾಣ ಕೈಲಾಸವಾಗಿತ್ತು ಬಸವ” ಎನ್ನುವ ಅಕ್ಕನ ಮಾತಿನಂತೆ ಕಲ್ಯಾಣ ಪಟ್ಟಣ ಬಸವ ಮೌಲ್ಯದ ಪವಿತ್ರ ಕ್ಷೇತ್ರವಾಗಿತ್ತು.
ಕಲ್ಯಾಣದ ಶರಣರನ್ನು ಅನುಭಾವಿಗಳನ್ನಾಗಿ ಕಾಣುವ ಮತ್ತೆ ಮನದಲ್ಲಿ ನೆನೆಯುವ ಭಾವದೀಪ್ತಿಯದು. ಆಧ್ಯಾತ್ಮದ ಬೀಜ ಬಿತ್ತುವ ಸುಕ್ಷೇತ್ರ. ಹೀಗಾಗಿ ಜನಪದ ಲೋಕದಲ್ಲಿ ಬಸವನೆಂಬ ದೇವರು ರೋಮಾಂಚನ. ತಮ್ಮ ಸೃಜನಶೀಲತೆಯಲ್ಲಿ ಶಿವತತ್ವವನ್ನು ಶಿವ ಮಂತ್ರವನ್ನು ಕಥಾತ್ಮಕವಾಗಿ ಸಮರ್ಥಿ ಸುತ್ತಾರೆ.
ಎಲ್ಲಿ ಬಲಿದನಯ್ಯ ಕಲ್ಯಾಣ ಬಸವಯ್ಯ
ಚೆಲ್ಲಿದನು ತಂದು ಶಿವ ಬೆಳಕ
ನಾಡೊಳಗೆ ಸೊಲ್ಲೆತ್ತಿ ಜನವು ಹಾಡುವುದು
ಮೌಖಿಕ ಜನಪದರಲ್ಲಿ ಬಸವಣ್ಣನು ಎಷ್ಟು ಮುಖ್ಯವೋ ಶಿವನು ಅಷ್ಟೇ ಪೂಜ್ಯನೀಯ. ಬಸವಣ್ಣ ಶಕ್ತಿಯ ಸಂಚಾಲಕ. ಧಾರ್ಮಿಕ ವ್ಯವಸ್ಥೆಯನ್ನು ವರ್ತಮಾನದ ಒಳನೋಟಗಳ ಮೂಲಕ ಬಸವಧರ್ಮವನ್ನು ಶ್ರೇಷ್ಠವಾಗಿಸುವ ಪ್ರೀತಿಯ ಹಂಬಲ ಶರಣರದು. “ಬಲ್ಲಿದನಯ್ಯ” ಎಂಬ ವಾಕ್ಯವೇ ಜೀವದುಂಬಿ ಬಸವ ಶೋಧನೆಯಲ್ಲಿ ಹರಳುಗಟ್ಟುತ್ತದೆ. ಧರ್ಮ ಕಲ್ಯಾಣದ ನಾಡೊ ಳಗೆ ಶಿವ ಬೆಳಕಿನ ಘನತೆಯನ್ನು ಹಂಚಿಕೊಳ್ಳುವ ಕಾತುರತೆ ಅವರಿಗೆ. ಶಿವನ ಬೆಳಗು ಆಧ್ಯಾತ್ಮಿಕ ಸ್ವಗತದ ಸಮಷ್ಟಿ ಪ್ರಜ್ಞೆಯಾಗಿದೆ. ಶಿವ-ಶಕ್ತಿಯ ಚೈತನ್ಯತೆಯನ್ನು ಪ್ರಕೃತಿಯಲ್ಲಿ ಬೆಳಕಾಗಿ ಕಂಡಂತಹ ಜನಪದರು ಪ್ರಕೃತಿಯ ತತ್ವಗಳ ಮೂಲಕ ಆತ್ಮೀಯ ಕಂಪನ ಕಟ್ಟುತ್ತಾರೆ. ಶಿವ ಬೆಳಗಿನ ಕಾರಣಕ್ಕೆ ಇವರ ಕೃಷಿ-ಬದುಕು ಸಹಿತಾ ಕಾರಣ. ಪ್ರಕೃತಿ ಪರಿಸರದ ಹಂಬಲದಲ್ಲಿ ತಾದಾತ್ಮಕತೆ ಕಾಣಬೇಕಾದರೆ ಬಸವಧರ್ಮ ಸಂಕಲ್ಪಕ್ಕೆ ಶಿವನೆಂಬ ಸಮರ್ಥನೆಯನ್ನು ಅವರು ಮರೆಯುವುದಿಲ್ಲ. ಶಿವ ಸ್ಮರಣೆಯಲ್ಲಿ ಬದುಕಿನ ಸಂಕಷ್ಟಗಳು ದೂರವಾಗಿ ಬಸವ ಬೆಳಗನ್ನು ಪ್ರೀತಿಸುತ್ತಾರೆ. ಪಿಂಡಾಂಡಕ್ಕೂ ಬ್ರಹ್ಮಾಂಡಕ್ಕೂ ಶಿವಲಿಂಗ ಸ್ವರೂಪಿಯಾದ ಶಿವ ಕಾಯದ ಪ್ರೀತಿಯಾಗಿದೆ. ತಮ್ಮ ಮುಗ್ಧ ಭಕ್ತಿಯನ್ನು ನಿಷ್ಕಲ್ಮಶ ಮನದಿಂದ ಬಸವ ಸಂಸ್ಕೃತಿಗೆ ಶರಣಾಗುತ್ತಾರೆ ಜನಪದರು. ಅಕ್ಕನ ಈ ವಚನವನ್ನು ಗಮನಿಸಬೇಕು.
“ದೇವಲೋಕದವರಿಗೂ ಬಸವಣ್ಣನೇ ದೇವರು ಮರ್ತ್ಯ ಲೋಕದವರೆಗೂ ಬಸವಣ್ಣನೇ ದೇವರು ವಚನಕಾರರ ಜನಪದರ ಮುಖಾಮುಖಿಯು, ಆಧ್ಯಾತ್ಮಿಕ ಆಶಯಗಳು ಏಕತೆಯನ್ನು ಬಿಂಬಿಸುತ್ತವೆ.
ಪಾಡನ್ನು ಹಾಡಾಗಿಸುವ ತೀವ್ರತೆಯನ್ನು ಜನಪದರಲ್ಲಿಯೇ ಕಾಣಲು ಸಾಧ್ಯ. ಮೌಖಿಕ ಹಾಡುಗಾರ ಕವಿಮನದ ವನಾದರೂ ಅಭಿವ್ಯಕ್ತಿಸುವ ಪ್ರಕ್ರಿಯೆಯಲ್ಲಿ ತನ್ನ ಸೃಜನ ಶೀಲ ಮನಸನ್ನು ಅನುಭವದ ಭಾವ ಶಬ್ದಗಳ ದೀಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಾನೆ. ನಾಡೊಳಗೆ ಸೊಲ್ಲೆತ್ತು ಹಾಡುವುದು. ಸೊಲ್ಲು ಎನ್ನುವ ಪರಿಕ್ರಮದಲ್ಲಿ ಉದ್ಘೋಷದ ಕಂಪನಗಳು ಹಾಡಾದಾಗ ಜನಪದರಲ್ಲಿ ಗಟ್ಟಿ ಸ್ಥಾನವನ್ನು ತೀವ್ರವಾಗಿಸಿಕೊಳ್ಳುವ ಭಾವದ ಹಂಬಲವಾಗುತ್ತದೆ. ಭಾವದ ಸೊಲ್ಲಿಗೆ ಜನಮಾನಸದಲ್ಲಿ ಅಳಿಸಲಾರದ ಶಕ್ತಿ ಇರುತ್ತದೆ. ಸೊಲ್ಲು ಎಂಬ ತೀವ್ರತೆ ಜನಪದರ ಶಬ್ದಗಳ ಹಾಡಿನ ಶಕ್ತಿಯದು.
ಜನಪದರು ಬಸವಣ್ಣನವರನ್ನು ಭಿನ್ನ ಆಯಾಮಗಳ ನೆಲೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಬಸವ ವ್ಯಕ್ತಿತ್ವವನ್ನು ಕಲ್ಯಾಣ ನಗರದ ಧರ್ಮವನ್ನು ಪುನರ್ ವ್ಯಾಖ್ಯಾನಗಳ ಮೂಲಕ ಹೇಳಿಕೊಂಡಿದ್ದಾರೆ. ಮುಗ್ಧ ಜನರ ನೆಲೆಯಲ್ಲಿ ಬಸವ ಧರ್ಮದ ಜಾನಪದ ಲೋಕವು ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ಜನಪದರ ನಡೆ-ನುಡಿ ಆಚರಣೆ ಹಾಡು, ಕತೆಗಳಾದರೂ ಆಗಿರಬಹುದು. ಹೀಗೆ ಬಹುಮುಖಿ ಆಯಾಮದ ಮೂಲಕ ಬಸವಣ್ಣನವರ ವ್ಯಕ್ತಿತ್ವದ ಘಟನೆಗಳು ಲಭ್ಯವಾಗುತ್ತವೆ.
ಮಲ್ಲಿಗೆ ಇರುವಾಗ ಮುಳ್ಯಾಕ ಮುಡಿಯುತಿ
ಕಲ್ಯಾಣದ ಬಸವಣ್ಣ ಇರುವಾಗ
ಕಲ್ಲಿಗ್ಯಾಕ ಕೈಮುಗೀತಿ
ಅಂದು ಶರಣಧರ್ಮ ಕಟ್ಟುವಾಗ ದಮನಿತರಿಗೆ, ಶೋಷಿತರಿಗೆ ಕಷ್ಟಗಳು ಎದುರಾದಾಗ “ಮಲ್ಲಿಗೆ ಇರುವಾಗ ಮುಳ್ಯಾಕ ಮುಡಿಯುತ್ತಿ” ಅಂತಃಕರಣ ಭಾವದ ಎಚ್ಚರಿಕೆಯ ನುಡಿಗಳಾಗಿವೆ. ವಾಕ್ ಸ್ವಾತಂತ್ರ್ಯ, ಲಿಂಗ ಸಮಾನತೆಗಳು ಬಸವಧರ್ಮವನ್ನು ಗಟ್ಟಿಗೊಳಿಸುವ ಆಶಯಗಳಾಗಿದ್ದವು. ಕಲ್ಯಾಣದ ತು0ಬೆಲ್ಲಾ ವಚನಗಳು ಮಲ್ಲಿಗೆಯ ಕಂಪಾಗಿದ್ದವು. ಜನಪದರ ದೇಸಿ ನುಡಿಗಳು ಹಾಡಾಗಿ ಅಭಿವ್ಯಕ್ತಿಗೊಳ್ಳುವಾಗ ತಾತ್ವಿಕ ಮುಖಾಮುಖಿಯ ಪ್ರೇರಣೆಯದು.
ಕಲ್ಯಾಣದ ಜ್ಞಾನದೀವಿಗೆಯಲ್ಲಿ ಅಣ್ಣನೇ ದೈವವಾಗಿದ್ದ ಎಂಬ ಬೌತಿಕ ಸತ್ಯ ಜನಪದರದು. ದೇವರನ್ನು ನಿರಾಕರಿಸುವ ಬಂಡಾಯ ಮನೋಭಾವವಾಗಿತ್ತು. “ಅಷ್ಟವಿಧಾರ್ಚನೆ ಷೋಡಶೋಪಚಾರಕ್ಕೆ ಲಿಂಗವು ಒಳಗಾದ ಕಾರಣ ಲಿಂಗವೆಂಬುದು ಕಲ್ಲು ಎಂದು ಆಮುಗೆ ರಾಯಮ್ಮ ಹೇಳುವಳು. ಜನಪದರ ವಚನಕಾರರ ಮುಖಾಮುಖಿ ಸನ್ನಿವೇಶಗಳು ಕಲ್ಲ ದೇವರನ್ನು ನಿರಾಕರಿಸುವ ಅನುಭಾವಿಕ ನುಡಿಗಳ ಆಗಿದ್ದವು. ಅಣ್ಣನು ದೇಹವೇ ದೇಗುಲ ಎಂದು ಹೇಳಿದ್ದನ್ನು ನೆನಪಿಸಿಕೊಳ್ಳುತ್ತಾ ಸ್ಥಾವರ ದೇವರನ್ನು ನಿರಾಕರಿಸುವುದುದಾಗಿದೆ. ಕಲ್ಲ ದೇವರ ನೆಪದಲ್ಲಿ ಮೋಸ ವಂಚನೆಗಳನ್ನು ಕಂಡ ಜನಪದರದು ಅರಿವಿನ ಕುರುಹನ್ನು ಶರಣಧರ್ಮದ ಲಾಂಛನವಾಗಿಸಿದರು. ಬಸವ ಸಂಸ್ಕೃತಿಯನ್ನು ಅಭಿಮಾನಿ ಸಿದರು.
ಬಸವಣ್ಣ ನಿನ್ನೆಸರು ದೆಸೆಗೆ ಶಿವ ಮಂತ್ರ
ಹೊಸ ಮತಕೆ ಮಂತ್ರ ನಿತ್ಯದಲಿ
ಒಕ್ಕಲಿಗ ಹೊಸ ಮಂತ್ರ ಬಸವ ಜಪಿಸುವನು.
ಇಂದು ವಿಶ್ವವನ್ನೇ ಆಕರ್ಷಿಸುವ ಬಸವ ಧರ್ಮ ಸಂದೇಶಗಳು ಶರಣರ ಶೋಧಿತ ಮಂತ್ರ ಗಳಾಗಿವೆ. ಜನಪದರು ಬಸವಣ್ಣನವರ ಸಾಮೀಪ್ಯದಲ್ಲಿ ದೈವ ದರ್ಶನವನ್ನು ಕಂಡಿದ್ದರು. ಕಾಯದಲ್ಲಿ ಲಿಂಗವಾಗುವ ಭಕ್ತಿಯ ತುರಿಯಾವಸ್ಥೆಯಾಗಿದೆ. ಶಿವ ಮಂತ್ರವು ಜನಪದರ ಸಮಷ್ಟಿ ಸಂಘಟನೆಯ ಲಾಂಛನವದು. ಶಿವ ಮಂತ್ರದ ಉಚ್ಚಾರಣೆ ಸತ್ಯವಾದರೂ ಬಸವನೆಂಬ ಮಂತ್ರವು ಗಟ್ಟಿಯಾಗಿ ದೆಸೆದೆಸೆಗೂ ಪ್ರತಿಧ್ವನಿಸಿತ್ತು.
ಸರ್ವಜ್ಞನು ಬಸವ ಪ್ರೇಮವನ್ನು ಮತ್ತು ವೈಚಾರಿಕಾ ಆತ್ಮೀಯತೆಯನ್ನು ಅಭಿಮಾನಿ ಸುತ್ತಾನೆ.
ಬಸವ ಗುರುವಿನ ಹೆಸರ ಬಲ್ಲವರಾರಿಲ್ಲ
ಪುಸಿ ಮಾತನಾಡಿ ಕೆಡದಿರಿ
ಲೋಕಕ್ಕೆ ಬಸವನೇ ಕತೃ ಸರ್ವಜ್ಞ
ವಿದ್ಯೆಯ ಪರ್ವತವೇ ಆದ ಸರ್ವಜ್ಞನಿಗೆ ಶರಣಧರ್ಮದ ವ್ಯವಸ್ಥೆ ಸಂಸ್ಕೃತಿಯ ಬಗ್ಗೆ ಅಪಾರ ಗೌರವ. ಹೀಗಾಗಿ ಸರ್ವಜ್ಞ 17 ನೇ ಶತಮಾನದಲ್ಲಿ ತನ್ನ ತ್ರಿಪದಿಯ ಮೂಲಕ ನೀತಿಯನ್ನು ಬೋಧಿಸಿ ಬಸವಾದಿ ಶರಣರಂತೆ ಕಿಡಿ ನುಡಿಗಳ ಮೂಲಕ ಎಚ್ಚರಿಸಿದ ಹರಿಕಾರ. ಶರಣ ಮಾರ್ಗದ ವೀರ ಗಣಾಚಾರಿ ಬಸವಣ್ಣನನ್ನೇ ಗುರುವೆಂದು ಗೌರವಿಸಿ ಶ್ಲಾಘನೆ ಮಾಡಿದ ಆಧ್ಯಾತ್ಮದ ಕವಿ. ಧಾರ್ಮಿಕ ತತ್ವಜ್ಞಾನಿ ಭಕ್ತಿಚಳುವಳಿಯ ಹರಿಕಾರನನ್ನು ವ್ಯಕ್ತಿ ವಿಶಿಷ್ಟತೆಯ ಮೂಲಕ ಅಣ್ಣನನ್ನು ಬಸವ ಗುರು ಎಂದು ಹೇಳಿದ್ದನ್ನು ಗಮನಿಸಬೇಕು. ಸಮಾಜದಲ್ಲಿ ಮನೆಮಾಡಿದ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಿ, ಅರಿವೇ ಗುರು ಬಸವಣ್ಣ ಗುರು ಎಂದು ನೆನಪಿಸಿ ಬಸವ ಆಶಯಗಳ ಏಕತೆಯನ್ನು ಗೌರವಿಸುತ್ತಾನೆ. “ಬಸವನೆ ನಿನ್ನನ್ನು ಬಲ್ಲವರಾರಿಲ್ಲ ಎಂದು ಸರ್ವಜ್ಞ ಮುಕ್ತವಾಗಿ ಶ್ಲಾಘಿಸಿದ್ದಾನೆ. ಅಣ್ಣನ ವಚನ “ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ” – “ಪುಸಿ ಮಾತನಾಡಿ ಕೆಡದಿರು” ಎನ್ನುವ ಸರ್ವಜ್ಞನು ಧರ್ಮ ಸಂಘಟನೆಯ ಮೂರನೇ ಘಟ್ಟದಲ್ಲಿ ಮರುಚಿಂತನ ಮೂಲಕ ಹೇಳಿದ್ದನ್ನು ಕಾಣಬಹುದು. ಸರ್ವಜ್ಞ ತನ್ನ ಬಂಡಾಯ ಮಾತುಗಳಿಂದ ರೂಪಕ ಪ್ರತಿಮೆಗಳನ್ನು ಸಮಾಜದಲ್ಲಿ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿದ್ದನ್ನು ಕಾಣಬಹುದು.
ಬಸವ ಕ್ರಾಂತಿಯ ಸಂಘರ್ಷಗಳನ್ನು ಜಾನಪದೀಯ ಭಾಷೆಯಲ್ಲಿ ಈ ಲೋಕಕ್ಕೆಲ್ಲಾ ಬಸವನೇ ಕತೃ ಎಂದು ಅಭಿಮಾನಿಸುತ್ತಾನೆ. ವಚನಗಳೇ ಸಂವಿಧಾನ ಭಾಷೆಯಾಗಿ ಮರು ಹುಟ್ಟು ಪಡೆಯುವತ್ತ ದಾಖಲಿಸುವುದನ್ನು ಕಂಡರೆ ಜನಪದ ಭಾಷೆಯ ಸಂವಹನಕಾರ ಸರ್ವಜ್ಞನೆಂದು ಪ್ರಾಮಾಣಿಕರಿಸಬಹುದು.
ಈಸರನ ನೆನಸಿದರೆ ವಿಸವೆಲ್ಲಾ ಅಮರೂತ
ಬಿಸಿಲೆ0ಬ ದಾರಿ ನೆರಳಾಗಿ
ಎಲೆ ಮನವೆ ಬಸವಯ್ಯನೆನಿಸು ಕೈಲಾಸ
ಜನಪದರ ಕಲ್ಪನೆಯಲ್ಲಿ ಈಶ್ವರನೂ ದೈವ. ನಿರಾಕಾರನಾದ ಶಿವನನ್ನು ಒಲಿಸಿಕೊಳ್ಳುವ ಪರಿ ಅನಂತವಾದದ್ದು. ಏಕೆಂದರೆ ಜನಪದರಿಗೆ ಶಿವನು ಸುಲಭವಾಗಿ ಒಲಿಯುವ ಮಂಗಳಕರನು. ತಮ್ಮ ಭಕ್ತಿಯನ್ನು ಸಂತುಷ್ಟಗೊಳಿಸಬೇಕಾದರೆ ಅವರಿಗೆ ಪ್ರತಿನಿತ್ಯ ಶಿವ ಮಂತ್ರ ರಕ್ಷಾ ಕವಚವಾಗಿದೆ. ಬದುಕಿನಲ್ಲಿ ಕಷ್ಟಗಳು ಬೆಂಬತ್ತಿ ಕಾಡಿದಾಗ ಶಿವ ಶಿವ ಎನ್ನುವ ಮಂತ್ರ ಅವರ ನಾಲಿಗೆಯ ತುದಿಯ ಮೇಲೆ ಇರುತ್ತದೆ. ತಮ್ಮ ಸಾಂಸಾರಿಕ ಕಷ್ಟಗಳಿಂದ ಹೊರಬರಲು “ಈಸರನ ನೆನೆದರೆ ವಿಸವೆಲ್ಲಾ ಅಮರೂತ” ಭಕ್ತಿಯ ಸ್ವರೂಪದಲ್ಲಿ ಶಿವ ಸತ್ಯತೆಯನ್ನು ತಮ್ಮ ಹಾಡುಗಳ ಮೂಲಕ ಹಂಚಿಕೊಂಡಿದ್ದಾರೆ. ಬಸವಣ್ಣನನ್ನು ಸಾಕ್ಷಾತ್ ಶಿವನ ಸ್ವರೂಪ ಎಂಬ ನಂಬಿಕೆ ಜನಪದರದು. ಸಂಘಟನಾಕಾರನಾದ ಅಣ್ಣನನ್ನು ಶಿವನಿಗಿಂತ ಭಿನ್ನನಲ್ಲ. ತಮ್ಮ ದೈವ ಲೋಕದಲ್ಲಿ ನಾಯಕನನ್ನಾಗಿ ಕಂಡರು. ಇವರಿಗೆ ಶರಣಧರ್ ದ ಆದರ್ಶಗಳು ಆಲದ ನೆರಳದು. ಬಸವಪ್ರಜ್ಞೆಯಲ್ಲಿ ತಮ್ಮ ಬದುಕಿಗೆ ಹೊಸ ಹೊಳಪನ್ನು ತಂದು ಕೊಡುವ ದಾರ್ಶನಿಕ ಅಣ್ಣನಾಗಿದ್ದ. ಒಂದರ್ಥದಲ್ಲಿ ಜನಪದರ ಸಂಸ್ಕೃತಿಯು ಸರ್ವವೂ ಬಸವ ಮಯವಾಗಿತ್ತು. ಶಿವನ ವಾಸಸ್ಥಾನ ಎಂಬ ಹೇಳಿಕೆಯಲ್ಲಿ ಬಸವ ಧರ್ಮದ ಉದ್ದೇಶವನ್ನು ಸರಳೀಕರಿಸಿ ಹೇಳುವ ಪ್ರಯತ್ನದಲ್ಲಿ ತಮ್ಮ ಬಾಳಿಗೊಂದು ಅರ್ಥ ಕಲ್ಪಿಸಿದರು.
ಬಸವ ಭಕ್ತಿಯ ಬೀಜ ಬಸವ ಮುಕ್ತಿಯ
ತೇಜ ಬಸವ ಕಾಯಕದ ಗುರು ಬೀಜ
ಶಿವಮತಕೆ ಬಸವ ಓಂಕಾರ ಶಿವನಾಮೋ
ಜನಪದರು ಬಸವಣ್ಣನ ಆದರ್ಶವನ್ನು ಕುಸಿದು ಹೋಗದ ಹಾಗೆ ಎಚ್ಚರವಹಿಸಿದರು. ಪ್ರಕೃತಿಯಲ್ಲಿ ಮನಃಶಾಸ್ತ್ರದ ವಿಜ್ಞಾನವನ್ನು ಮಾನ್ಯೀಕರಿಸಿ ನಿಸರ್ಗದಲ್ಲಿಯೇ ಬಸವ ಬೆಳಗನ್ನು ಕಂಡು ಆನಂದಿಸಿದರು. ಶಿವ ಪಥದಲ್ಲಿ ವಿಲೀನವಾಗುವ ಭಕ್ತಿಯ ಸಾಮರಸ್ಯವದು. ಬಸವ ಭಕ್ತಿಯ ಬೀಜ ಆಧ್ಯಾತ್ಮಿಕ ಶಕ್ತಿಯಾಗಿ ಗುರು ಬೀಜವಾಗಿ ಬಸವ ಮಂತ್ರವಾಗಿದೆ. ನಿಸ್ವಾರ್ಥ ಬದುಕನ್ನು ಅಪೇಕ್ಷಿಸಿದ ಜನಪದರು ಬಸವಧರ್ಮದ ಮುಕ್ತತೆಗೆ ತಮ್ಮನ್ನು ಸಮರ್ಪಿಸಿಕೊಂಡರು. ಪ್ರಕೃತಿಯ ಲೀಲೆಯಲ್ಲಿ ಬಸವನೇ ಇರುವಾಗ ಮನದುಂಬಿ ಮುಕ್ತಿಯ ತೇಜ ಎನ್ನುವ ಅನಂತತೆ ಇವರದು. ಶರಣರ ಬಯಲನ್ನು ಕಾಣುವ ತವಕ.
ಬಸವಣ್ಣನ ವಿರಾಟ ವ್ಯಕ್ತಿತ್ವದ ಕೈಂಕರ್ಯದ ಶರಣ ಭಾವವಾಗಿದೆ. ಜನಪದರ ಲೋಕಾನುಭವವು ಅನುಭಾವಕ್ಕೆ ದಕ್ಕಿದ ಶಾಶ್ವತ ಮೌಲ್ಯ ಶರಣ ಸಂಸ್ಕೃತಿಯಾಗಿತ್ತು. ಮೌಖಿಕತೆಗೆ ಗಟ್ಟಿ ಧ್ವನಿ ಎಂದರೆ ಜನ ಸಮುದಾಯದ ಒಳಗೆ ನೆಲೆಸಿದ್ದ ಬಸವಣ್ಣನ ಭಕ್ತಿಯ ಬೇರುಗಳಾಗಿದ್ದವು. ಬಸವನೆಂಬ ಜ್ಞಾನದಲ್ಲಿ ಲೀನವಾಗಿ ಮುಕ್ತಿಯನ್ನು ಕಾಣುವ ಬಯಕೆ. ಪ್ರಕೃತಿಯ ತತ್ವದಲ್ಲಿ ಬಸವನೆಂಬ ತೇಜವು ಪ್ರಖರವಾದಂತೆಲ್ಲಾ ಜನಪದರ ಹಾಡುಗಳಲ್ಲಿ ಬಸವ ಕಥನಗಳು ಬಸವ ಪಥದಲ್ಲಿ ಅನಾವರಣವಾಗಿ ನೆನಪಿಸುತ್ತವೆ. ಹೀಗಾಗಿ ಜನಪದರು ವೈಚಾರಿಕತೆಯ ಜೊತೆಗೆ ಪವಾಡ ರೂಪಗಳಲ್ಲಿ ಬಸವಣ್ಣನನ್ನು ಕಾಣಲು ಪ್ರಯತ್ನಿಸಿದ್ದಾರೆ. ಕವಿ ಮನದಿಂದ ತಮ್ಮಹಾಡುಗಳಲ್ಲಿ ಬಿಂಬಿಸಿದ್ದಾರೆ.
ಡಾ. ಸರ್ವಮಂಗಳ ಸಕ್ರಿ
ಉಪನ್ಯಾಸಕರು (ನಿ),
ಅಧ್ಯಕ್ಷರು, ಜಾಗತಿಕ ಲಿಂಗಾಯತ ಮಹಾಸಭಾ-ಮಹಿಳಾ ಘಟಕ, ರಾಯಚೂರು.
ಮ. ನಂ. 6-2-74/8/4
ಮಾಣಿಕ ಪ್ರಭು ದೇವಸ್ಥಾನ ರಸ್ತೆ,
ಪಂಚಲಿಂಗೇಶ್ವರ ಕಾಲೋನಿ,
ರಾಯಚೂರು – 584 101
ಮೋಬೈಲ್ ಸಂ: 94499 46839
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ
ಹಂಚಿಕೊಳ್ಳಬಹುದು.
ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 /
e-Mail ID: info@vachanamandara.in
ತುಂಬಾ ಚನ್ನಾಗಿದೆ ಲೇಖನ.. ಜನಪದರು ಮತ್ತು ಶರಣರ ಭಾಂದವ್ಯ ಮತ್ತು ನಂಟು, ಶಿವನಲ್ಲಿ ಬಸವಣ್ಣ ನವರ ಕಾಣುವ ಪರಿ.ಧನ್ಯವಾದಗಳು ಮೇಡಂ 🙏🙏
ಧನ್ಯವಾದಗಳು ಪ್ರೀತಿಯವರೆ