ಶರಣರ ಚಿಂತನೆಯ ಆಧುನಿಕತೆ / ಡಾ. ವೈ. ಎಂ. ಯಾಕೊಳ್ಳಿ ಸವದತ್ತಿ.

ನಮ್ಮ ಸಮಕಾಲೀನ ಬದುಕನ್ನು ಕುರಿತು ಚಿಂತಿಸಲಾರದ ಸಾಹಿತ್ಯ ಅರ್ಥಪೂರ್ಣ ಎನಿಸಲಾರದು. ಇಹದ ಮತ್ತು ಪರದ ಲೌಕಿಕ ಬದುಕಿನ ಬೇಸಾಯಗಾರರಾದ ಶರಣರು ತಮ್ಮ ವರ್ತಮಾನಕ್ಕೆ ಸ್ಪಂದಿಸಿ ಬದುಕಿದವರಾಗಿದ್ದವರು. ಹಾಗೆಯೇ ಬರೆದವರಾಗಿದ್ದರು. ಅಂತೆಯೇ ಅವರ ವಚನಗಳು ಅಂದಿಗೂ ಇಂದಿಗೂ ಮುಖ್ಯವೆನಿಸಿವೆ. ಶರಣರ ವಿಚಾರಗಳು ಇಂದಿನ ಆಧುನಿಕ ಜಗತ್ತಿನ ಹಲವು ಸಮಸ್ಯೆಗಳಿಗೆ ಹೇಗೆ ಪರಿಹಾರವಾಗಿವೆ ಎಂಬುದನ್ನು ಹಿರಿಯ ಸಾಹಿತಿಗಳಾದ ಡಾ. ದೇ. ಜವರೇಗೌಡ ಅವರು ಬಸವಣ್ಣನವರು ಒಂದೇ ಒಂದು ವಚನದಲ್ಲಿ ಸಾರಿರುವದನ್ನು ವಿವರಿಸಿದ್ದಾರೆ. ಸಧ್ಯದ ಬದುಕು ಸಾರ್ಥಕಗೊಳ್ಳುವ ಪರಿ ಯಾವುದು ಎಂಬುದನ್ನು ತಮ್ಮ ಸಪ್ತಸೂತ್ರಗಳನ್ನು ಸಮಾಹಿತಗೊಳಿಸಿರುವ “ಕಳಬೇಡ ಕೊಲಬೇಡ” ಎಂಬ ವಚನದಲ್ಲಿ ಚರ್ಚಿಸಿರುವದನ್ನು ಗಮನಿಸಿದ ಅವರು ಆ ವಚನದ ಕುರಿತು ಬರೆಯುತ್ತ:

ಜಗತ್ತಿನ ನೀತಿ ಸಂಹಿತೆಯ ಸಾರವನ್ನು ಈ ಏಳು ಸೂತ್ರಗಳಲ್ಲಿ ಬಸವಣ್ಣನವರು ಸಂಗ್ರಹಿಸಿದ್ದಾರೆ. ಅವುಗಳಲ್ಲಿ ಕೆಲವು ಇತರ ಧರ್ಮಗಳಲ್ಲಿಯೂ ಸಿಗುತ್ತವೆ. ಆದರೆ “ಅನ್ಯರಿಗೆ ಅಸಹ್ಯ ಪಡಬೇಡ” ಎಂಬ ಸೂತ್ರ ಮಾತ್ರ ಬೇರೆಲ್ಲಿಯೂ ಸಿಗದಂಥಹದು. ಜಗತ್ತಿನ ಜನ ಈ ನೀತಿ ಸೂತ್ರವನ್ನು ತಮ್ಮ ತಮ್ಮ ಧರ್ಮದಲ್ಲಿ ಹಾಗೂ ಜೀವನದಲ್ಲಿ ಅಳವಡಿಸಿಕೊಂಡರೆ ತಾಲಿಬಾನಿನಲ್ಲಿ ಇಂದು ನಡೆಯುತ್ತಿರುವ ಕ್ರೂರ ಕೃತ್ಯಗಳು ನಿಂತು ಜಗತ್ತು ಶಾಂತಿಯ ನೆಲೆಯಾಗುವದರಲ್ಲಿ ಸಂದೇಹವಿಲ್ಲ.
(ಬಸವ ಪಥ: ಆಗಸ್ಟ್-2016 ಪುಟ ಸಂ. 36)

ಬದುಕನ್ನು ಕುರಿತಂತೆ ಶರಣರು ಅರ್ಥಪೂರ್ಣವಾಗಿ ಚಿಂತಿಸಿದ ಹಾಗೆ ಚಿಂತಿಸಿದ ಇನ್ನೊಂದು ಸಾಹಿತ್ಯ ಅತ್ಯಂತ ವಿರಳ. ಅವರು ಮುಖ್ಯವಾಗಿ ಬದುಕನ್ನು ಸುಂದರಗೊಳಿಸಲು ಪ್ರಯತ್ನಿಸಿದವರು. ಅವರದು ಇಹದ ಸುಂದರ ಬದುಕನ್ನು ಕಟ್ಟಿದ ಆಲೋಚನೆಯಾಗಿತ್ತು. ಅವರ ಪ್ರಕಾರ “ಈ ಜಗತ್ತು ಇಹದ ಪರಿಮಳದ ಹಾದಿ”. ಬೇರೆಲ್ಲೋ ಮೇಲಿನ ಲೋಕದಲ್ಲಿ ಮುಕ್ತಿಯನ್ನು ಬಯಸಿ ಇಹದ ಸದ್ಯದ ಬದುಕನ್ನು ಬರುಡುಗೊಳಿಸಿಕೊಳ್ಳುವದನ್ನು ವಚನಕಾರರು ಬಯಸುವದಿಲ್ಲ. ಅವರು ಇರುವ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕೆಂದು ಚಿಂತಿಸಿದವರು. ಈ ದಿಶೆಯಲ್ಲಿ ಶರಣರ ಬದುಕಿನ ಕುರಿತಂಥ ಆಲೋಚನೆಗಳು ಸಾರ್ವಕಲಿಕ ಮಾನ್ಯವಾದ ಚಿಂತನೆಗಳಾಗಿವೆ.

ಮನುಷ್ಯ ಹುಟ್ಟಿ ಬಂದ ಮೇಲೆ ಏನಾದರೂ ಸಾಧಿಸಬೇಕು ಎಂಬುದು ಎಲ್ಲ ತತ್ವಗಳ ಆಶಯ. ಮನುಷ್ಯ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ದಾಸವರೇಣ್ಯರು ಸಾರಿದ್ದರು. ಈ ಬಗೆಯ ಚಿಂತನೆ ಶರಣರಲ್ಲಿಯೂ ಕಂಡು ಬಂದಿದೆ. ಶಿವಯೋಗಿ ಸಿದ್ಧರಾಮರ ಈ ಕೆಳಗಿನ ಒಂದು ವಚನ ಮನುಷ್ಯನಾಗಿ ಹುಟ್ಟಿ ಬಂದ ಮೆಲೆ ಏನನ್ನಾದರೂ ಸಾಧಿಸಬೇಕು. ಹಾಗೆಯೇ ಹೋಗಬಾರದು ಎನ್ನುತ್ತದೆ.

ಹುಟ್ಟಿದ ಕಲ್ಲು ಲಿಂಗವಾಯಿತ್ತು;
ಹುಟ್ಟಿದ ಕಲ್ಲು ದೇವಾಲಯವಾಯಿತ್ತು;
ಹುಟ್ಟಿದ ಪಶು ಹೊಲಕ್ಕೆ ಬಂದಿತ್ತು;
ಹುಟ್ಟಿದ ಮರ ಕಟ್ಟಳೆಯಾದವು.
ಹುಟ್ಟಿ ಕೀರ್ತಿಯ ಮೆಟ್ಟಿದವ
ಇಟ್ಟ ಇಟ್ಟ ಹುಳಿಯನ್ನದಂತೆ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-487/ವಚನ ಸಂಖ್ಯೆ-1563)

ಕಲ್ಲು, ಮರ ಇವುಗಳು ಜಡ ವಸ್ತುಗಳು. ಪಶು ಬುದ್ಧಿಯಿಲ್ಲದ ಪ್ರಾಣಿ. ಆದರೆ ಅವುಗಳೇ ಇತರರಿಗೆ ಉಪಯುಕ್ತವಾಗುವಂತೆ ಬದುಕುತ್ತವೆ. ಅಂಥವುಗಳೇ ಜಗತ್ತಿಗೆ ಉಪಯುಕ್ತ ಆಗುವ ರೀತಿಯಲ್ಲಿ ಪರಿವರ್ತನೆಯಾಗುತ್ತ ಹೋಗುತ್ತವೆ, ಮತ್ತೆ ಮನುಷ್ಯನಾಗಿ ಹುಟ್ಟಿ ಬಂದು ಹಾಗೆಯೇ ಉಣ್ಣಲು ದೊರಕದೆ ಇಟ್ಟು ಇಟ್ಟು ಕೆಟ್ಟು ಹೋದ ಹುಳಿ ಅನ್ನದಂತೆ ನೀನೇಕೆ ವ್ಯರ್ಥ ಜೀವನ ಸಾಗಿಸುತ್ತೀ ಮನುಷ್ಯನೇ? ಎಂದು ಸಿದ್ಧರಾಮ ಶರಣರು ನೇರವಾಗಿ ಪ್ರಶ್ನಿಸುತ್ತಾರೆ.

ಮನೆ ಆಧುನಿಕ ಜಗತ್ತಿನ ಬಹು ದೊಡ್ಡ ಸಂಘಟನೆ. ಇದನ್ನು ಕುಟುಂಬ, ದಾಂಪತ್ಯ ಎಂಬ ಅರ್ಥದಲ್ಲಿಯೂ ವಿಸ್ತರಿಸಬಹುದು. ಮನೆಯಲ್ಲಿ ಸಾಮರಸ್ಯವಿಲ್ಲದಿದ್ದಡೆ ಬದುಕು ಅರ್ಥಹೀನವಾಗುತ್ತದೆ. ಪರಸ್ಪರ ನಂಬಿಕೆ, ಗೌರವ ಮನೆಯೆಂಬ ಸಂಘಟನೆಯ ಪ್ರಮುಖ ಸಂಗತಿಗಳು. ಮನೆಯೇ ಅಶಾಂತಿಯ ಕೂಟವಾದರೆ ಅಲ್ಲಿ ಬದುಕುವದಕ್ಕಿಂತ ಹಾಳು ಅರಣ್ಯ ಸೇರುವದು ಲೇಸು ಎನ್ನುವ ಶರಣರು ಅಂತಹ ಮನೆ ಅಥವ ಸುತ್ತಲಿನ ಜಗತ್ತನ್ನು ವಿಡಂಬಿಸುತ್ತಾರೆ.

ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ
ಧರೆ ಹತ್ತಿ ಉರಿದಡೆ ನಿಲಲುಬಾರದು.
ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ,
ನಾರಿ ತನ್ನ ಮನೆಯಲ್ಲಿ ಕಳುವಡೆ,
ತಾಯ ಮೊಲೆವಾಲು ನಂಜಾಗಿ ಕೊಲುವಡೆ,
ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ!
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-12/ವಚನ ಸಂಖ್ಯೆ-26)

ಇಲ್ಲಿ ಬಸವಣ್ಣನವರು ಕೇವಲ ಮನೆಯ ಬಗ್ಗೆ ಮಾತನಾಡದೇ ಸುತ್ತಲಿನ ಒಟ್ಟಾರೆ ಸಮಷ್ಟಿಯ ಬಗ್ಗೆ ಚರ್ಚಿಸುತ್ತಾರೆ. ಒಟ್ಟಾರೆ ನಾವು ಬದುಕುವ ವಾತಾವರಣ ಹೇಗೆ ನೆಮ್ಮದಿ, ನಂಬಿಕೆಗಳಿಂದ ಕೂಡಿರಬೇಕು ಎಂಬುದನ್ನು ದರ್ಶಿಸುತ್ತಾರೆ.

ನಾವು ಎಚ್ಚರಿರುವಷ್ಟು ಹೊತ್ತೂ ಅವರಿವರನ್ನು ದೂಷಿಸುವದರಲ್ಲಿ, ಪರನಿಂದೆಯನ್ನು ಮಾಡುವದರಲ್ಲಿ ಕಾಲ ಕಳೆಯುತ್ತೇವೆ. ನಾವು ಎಷ್ಟು ಯೋಗ್ಯರು? ಎಂಬ ಪ್ರಶ್ನೆ ಒಮ್ಮೆಯೂ ನಮಗೆ ಎದುರಾದುದಿಲ್ಲ. ತನ್ನನ್ನು ಹೊರತು ಪಡಿಸಿ ಇತರರೆಲ್ಲರೂ ಬದಲಾಗಬೇಕು ಎನ್ನುವ ಮನುಷ್ಯ ತಾನು ಮಾತ್ರ ಪರಿವರ್ತನೆಯಗಲು ಸಿದ್ಧನಿರುವದಿಲ್ಲ. ಆದುನಿಕ ಬದುಕಿನ ಈ ಸಮಸ್ಯೆಯನ್ನು ವಚನಗಳು ಚಿಂತಿಸಿರುವದು ವಿನೂತನವಾಗಿದೆ. ಈ ಬಗೆಯ ಜನರಿಗೇ ಬಸವಣ್ಣನವರು

ಲೋಕದ ಡೊಂಕ ನೀವೇಕೆ ತಿದ್ದುವಿರಿ?
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ;
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.
ನೆರೆಮನೆಯ ದಃಖಕ್ಕೆ ಅಳುವವರ ಮೆಚ್ಚ
ಕೂಡಲಸಂಗಮದೇವ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-36/ವಚನ ಸಂಖ್ಯೆ-124)

ಎನ್ನುತ್ತಾರೆ.

ಕಿವಿ ಇದ್ದೃೂ ಕಿವುಡರಾಗಿರುವ ನಮಗೆ ಮೌನ ಧ್ವನಿಯ ಪ್ರೇರಣೆಯ ಸೂಕ್ಷ್ಮ ಸಂವೇದನೆ ಅಂತರಂಗದಲ್ಲಿ ಮೊಳೆದೋರದಿದ್ದಾಗ ಬಸವಣ್ಣನವರು ನಮಗಾಗಿ ಮಮತೆಯಿಂದ ನೀಡಿದ ಎಚ್ಚರಿಕೆ ಮೇಲಿನ ವಚನದಲ್ಲಿ ಪಡಿಮೂಡಿದೆ. ಲೋಕದ ಡೊಂಕು ತಿದ್ದುವವರ ಡೊಂಕು-ಬಟ್ಟೆ ಮಡಿ ಮಡುವಾಗ ನಮ್ಮ ಕೈ ಹಾಗೂ ಒಗೆಯುವ ಕಲ್ಲಿನಂತೆ ತನಾಗಿಯೆ ಶುದ್ಧಿಗೊಳ್ಳುವದು ವಾಸ್ತವ ಸತ್ಯ, ಹಾಗೆ ಆಗದಿದ್ದಾಗ ನಮ್ಮ ನಡೆ-ನುಡಿಗಳಲ್ಲಿ ಎಲ್ಲಿಯೋ ಅಪಸ್ವರವಿದೆ ಎನ್ನುವ ಎಚ್ಚರಿಕೆ ನಮ್ಮದಾಗದಿದ್ದಲ್ಲಿ ನಮ್ಮ ಬಾಳಿಗೆ ನೆಲೆ-ಬೆಲೆ ಬರಲು ಸಾಧ್ಯವಿಲ್ಲ. ನಮ್ಮ ಬದುಕು ಬೋಧನೆಗಳಲ್ಲಿ ಸಮರಸವಿಲ್ಲದೆ ಹೊರಗಣ ಶೃಂಗಾರ ಒಳಗಣ ರಣರಂಗದ ಇಬ್ಬಂದಿತನವಿದ್ದರೆ ನಾವು ಡಂಬಕರಾಗುತ್ತೇವೆ. ಹೀಗಾಬಾರದೆಂಬ ಕಳಕಳಿ ಬಸವಣ್ಣನವರದು. ಬೆಂಗಳೂರಿನ ಬೇಲಿಮಠದ ಶಿವಾನುಭವ ಚರಮೂರ್ತಿ ಶ್ರೀ ಶಿವರುದ್ರ ಮಹಾಸ್ವಾಮಿಗಳು ನಿರೂಪಣೆ ಮಾಡುವಂತೆ:

ನಮ್ಮ ನ್ಯೂನ್ಯತೆಗಳು ಎರಡು ಮುಖವಾಗಿ ಕಾಣುತ್ತವೆ. ಒಂದು ತನುವಿನ ಮೂಲಕ ಮತ್ತೊಂದು ಮನದ ಮೂಲಕ. ಇವುಗಳನ್ನು ಎಚ್ಚರದಿಂದ ಗಮನಿಸಿ ಸಂತೈಸಿಕೊಳ್ಳಬೇಕು. ತನು-ಮನ ಎರಡೂ ಶುದ್ಧವಾಗಬೇಕು ಎಂಬ ಸ್ಪಷ್ಟ ನಿಲುವು ಬಸವಣ್ಣವರದು. ಹಾಗಿಲ್ಲದೆ ಅವರಿವರನ್ನು ದೂಷಿಸುವ ಅಧಿಕಾರ ನಮಗಿಲ್ಲ ಎನ್ನುವದು ಅಷ್ಟೇ ಮುಖ್ಯ.
(ಬಸವ ಪಥ: ಮೇ-2008 ಸಂಪಾದಕೀಯ)

ಶರಣರು ಬೋಧಿಸಿದ ಕಾಯಕ ತತ್ವ ಇಂದಿನ ಆಧುನಿಕ ಕಾಲಕ್ಕೆ ಆ ಕಾಲದ ಬಹುದೊಡ್ಡ ಅಗತ್ಯವಾಗಿದೆ. ಶರಣರು ಪ್ರತಿಯೊಬ್ಬರೂ ಬದುಕಿನ ಸಾರ್ಥಕತೆಯತ್ತಲೇ ಚಿಂತಿಸುತ್ತಿದ್ದರು. ಬಸವಣ್ಣ, ಚೆನ್ನಬಸವಣ್ಣ, ಅಲ್ಲಮಪ್ರಭು ಇಂಥಹ ಪ್ರಮುಖ ಶರಣರು ಮತ್ತು ಇನ್ನೂ ಮುಂದುವರೆದು ಸಾಮಾನ್ಯ ಶರಣರೂ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೆಕಾದ ಅಗತ್ಯ ಸಂಗತಿಗಳತ್ತಲೇ ಗಮನ ಹರಿಸಿರುವದು ಮುಖ್ಯವಾಗಿದೆ. ಕಾಯಕದಂತಹ ತತ್ವವನ್ನು ಕುರಿತು ಕಾಯಕಯೋಗಿ ಶರಣ ನುಲಿಯ ಚಂದಯ್ಯನವರು ಹೇಳುವ ಈ ವಚನ ನೋಡಬೇಕು. ತುಂಬ ಪ್ರಸಿದ್ಧವಾದ ಈ ವಚನ ನುಲಿಯ ಚಂದಯ್ಯನವರ ವಚನವೆಂಬುದೇ ಮಹತ್ವದ ಅಂಶವಾಗಿದೆ. ಪ್ರತಿಯೊಬ್ಬರೂ ಕಾಯಕವನ್ನು ತಪ್ಪದೇ ಮಾಡುವದು ಸಮಜದ ಸ್ವಾಸ್ಥ್ಯಕ್ಕೆ ತುಂಬ ಅಗತ್ಯ ಎಂಬ ಬಸವಣ್ಣನವರ ತತ್ವವನ್ನು ನುಲಿಯ ಚಂದಯ್ಯ ಬಹಳ ಸ್ಪಷ್ಟವಾಗಿ ನಿರೂಪಣೆ ಮಾಡುತ್ತಾರೆ.

ಗುರುವಾದಡೂ ಕಾಯಕದಿಂದವೆ ಜೀವನ್ಮುಕ್ತಿ.
ಲಿಂಗವಾದಡೂ ಕಾಯಕದಿಂದವೆ ವೇಷದ ಪಾಶ ಹರಿವುದು.
ಗುರುವಾದಡೂ ಚರಸೇವೆಯ ಮಾಡಬೇಕು.
ಲಿಂಗವಾದಡೂ ಚರಸೇವೆಯ ಮಾಡಬೇಕು.
ಜಂಗಮವಾದಡೂ ಚರಸೇವೆಯ ಮಾಡಬೇಕು
ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗದ ಅರಿವು.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-455/ವಚನ ಸಂಖ್ಯೆ-1304)

ದಾಸೋಕ್ಕೆ ತನ್ನ ಜೀವನವನ್ನೇ ಮೀಸಲಗಿಟ್ಟ ಶರಣ ನುಲಿಯ ಚಂದಯ್ಯನವರಿ ಈ ಮಾತುಗಳನ್ನು ಹೇಳುವದು ಯೋಗ್ಯವಾಗಿದೆ. ಮುಂದಿನ ಒಂದು ವಚನದಲ್ಲಿ ಈ ತತ್ವವನ್ನು ಇನ್ನೂ ಸ್ಪಷ್ಟ ಪಡಿಸುವ ಶರಣ ನುಲಿಯ ಚಂದಯ್ಯನವರು ದುಡಿದು ತಂದುದು ಮಾತ್ರ ಲಿಂಗಕ್ಕೆ ಅರ್ಪಿತ. ಹಾಗೆಯೇ ದುಡಿಯದೇ ಬಂದುದು ಅನರ್ಪಿತ ಎನ್ನುತ್ತಾರೆ.

ಕಂದಿಸಿ ಕುಂದಿಸಿ ಬಂಧಿಸಿ ಕಂಡವರ ಬೇಡಿತಂದು
ಜಂಗಮಕ್ಕೆ ಮಾಡಿದೆನೆಂಬ ದಂದುಗದೋಗರ ಲಿಂಗಕ್ಕೆ
ನೈವೇದ್ಯ ಸಲ್ಲ.
ತನು ಕರಗಿ ಮನ ಬಳಲಿ ಬಂದ ಚರದ ಅನುವರಿತು
ಸಂದಿಲ್ಲದೆ ಸಂಶಯವಿಲ್ಲದೆ ಜಂಗಮಲಿಂಗಕ್ಕೆ
ದಾಸೋಹವ ಮಾಡುವುದೆ ಮಾಟ.
ಕಾಶಿಯ ಕಾಯಿ ಕಾಡಿನ ಸೊಪ್ಪಾಯಿತ್ತಾದಡೂ
ಕಾಯಕದಿಂದ ಬಂದುದು ಲಿಂಗಾರ್ಪಿತ.
ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗಕ್ಕೆ ನೈವೇದ್ಯ ಸಂದಿತ್ತು.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-452/ವಚನ ಸಂಖ್ಯೆ-1291)

ಎನ್ನುತ್ತಾರೆ. ದೇಹ ದಂಡಿಸದೇ ಬಂದುದುನ್ನು ಲಿಂಗಕ್ಕೆ ಅರ್ಪಿಸಬಾರದು, ಹಾಗಾದರೆ ಲಿಂಗದ ಅರ್ಪಣೆಗೆ ಎಂತಹ ನೈವೇದ್ಯ ಸಲ್ಲುತ್ತದೆ? ಎಂದು ಪ್ರಶ್ನೆಗೆ ಶರಣ ನುಲಿಯ ಚಂದಯ್ಯನವರು “ತನು ಕರಗಿ ಮನ ಬಳಲಿ ಬಂದ ಚರದ ಅನುವರಿತು” ತಂದುದು ಮಾತ್ರ ಅರ್ಪಿತವೆನ್ನುತ್ತಾರೆ. ಕಾಯಕವೆಂದರೆ ಕೇವಲ ದೇಹ ದಂಡನೆ ಮಾತ್ರವಲ್ಲ. ಅದು ಕಾಯಾ ವಾಚಾ ಮನಸಾ ಕೈಗೊಂಡದ್ದು ಎನ್ನುವದು ಮಹತ್ವದ್ದಾಗಿದೆ.

ಕಾಯಕ ಸತ್ಯ ಶುದ್ಧವಾಗಿರಬೇಕು. ಇನ್ನೊಬ್ಬರ ಮನ ನೋಯಿಸಿ ಕಾಡಿ ಬೇಡಿ ಕಾಟಾಚಾರಕ್ಕಾಗಿ ತಂದು ಜಂಗಮ ದಾಸೋಹ ಮಾಡುವಂತಿರಬಾರದು. ಸ್ವತ: ಬೆವರು ಸುರಿಸಿ ದುಡಿಯಬೇಕು. ಇಂತಹ ದುಡಿಮೆಯಿಂದ ಬಂದುದರಲ್ಲಿ ದಾಸೋಹ ಮಾಡಬೇಕು. ಶುದ್ಧ ಕಾಯಕದಿಂದ ಬಂದ ಹಣದಿಂದ ಮಾಡಿದ ದಾಸೋಹವೇ ಜಂಗಮ ಲಿಂಗಕ್ಕೆ ನೈವೇದ್ಯ. ಅದ್ದರಿಂದ ಮಾಡುವ ಜಂಗಮ ದಾಸೋಹವೇ ಜಂಗಮ ದಾಸೋಹ. ಇದರಿಂದ ಉಂಟಾಗುವ ಮಹಾನಂದವೇ ಮಹಾಪ್ರಸಾದ.
(ಬಸವ ಪಥ: ಅಗಸ್ಟ್-2016/ ಪುಟ ಸಂ-25/ಪಿ. ಎನ್. ರುದ್ರಪ್ಪ)

ಶರಣರು ಆಡಿದಂತೆ ನಡೆದುಕೊಳ್ಳಬೇಕೆಂಬುದರ ಕಡೆಗೆ ತುಂಬ ಮಹತ್ವ ಕೊಟ್ಟಿದ್ದರು. ನುಡಿ ಮತ್ತು ನಡೆ ಒಂದಾಗಿರಬೇಕೆಂಬುದೆ ಅ ಕಾಲದ ಬಹುದೊಡ್ಡ ತತ್ವವಾಗಿತ್ತು. ಬಸವಣ್ಣನವರು “ನುಡಿದಂತೆ ನಡೆ ಇದೇ ಜನ್ಮ ಕಡೆ” ಎಂದು ತಮ್ಮ ಒಂದು ವನಚದಲ್ಲಿ ಹೇಳಿದ್ದಾರೆ. ಆಡಿದ ಮಾತಿಗೆ ತಪ್ಪಿ ನಡೆದರೆ ಅದೇತರ ಬದುಕು? ಎನ್ನುವ ಶರಣ ನುಲಿಯ ಚಂದಯ್ಯನವರು ಬರೀ ನುಡಿ ತಪ್ಪುವದರ ಬಗ್ಗೆ ಮಾತ್ರ ಮಾತನಾಡದೇ ನಡೆ ತಪ್ಪುವದರ ಕುರಿತೂ ಚರ್ಚಿಸುತ್ತಾರೆ.

ನುಡಿದ ಮಾತಿಂಗೆ ತಡಬಡ ಬಂದಲ್ಲಿ
ನುಡಿದ ಭಾಷೆಗೆ ಭಂಗ ನೋಡಾ.
ಹಿಡಿದ ಕುಳಕ್ಕೆ ಹಾನಿ ಬಂದಲ್ಲಿ
ಒಡಲನಿರಿಸುವದೆ ಭಂಗ ನೋಡಯ್ಯಾ.
ಇದು ಕಾರಣ ನಡೆ ನುಡಿ ಶುದ್ಧವಿಲ್ಲದಿದ್ದಡೆ
ಚಂದೇಶ್ವರಲಿಂಗವಾದಡೂ ತಪ್ಪನೊಳಕ್ಕೊಳ್ಳ ಕಾಣಾ
ಮಡಿವಾಳಯ್ಯಾ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-459/ವಚನ ಸಂಖ್ಯೆ-1318)

ಮಾತು ಕೃತಿ ಎರಡೂ ಒಂದಾಗದಿದ್ದರೆ ದೇವರೂ ಕೂಡ ಸಹಿಸಲಾರ ಎನ್ನುವದೇ ಶರಣರ ಸ್ಪಷ್ಟ ನಿಲುವು.

ಆಧುನಿಕ ಬದುಕು ತುಂಬ ಆತಂಕಗಳಿಂದ, ತಲ್ಲಣಗಳಿಂದ ಕೂಡಿದ ಬದುಕು. ನಮ್ಮ ಹಲವು ಧಾವಂತಗಳೇ ನಮ್ಮ ತಲ್ಲಣ ತಳಮಳಗಳಿಗೆ ಕಾರಣವಾಗಿವೆ. ಈ ತಳಮಳ ತಲ್ಲಣಗಳೇ ರಕ್ತದೊತ್ತಡದಂತಹ ಖಾಯಿಲೆಗೆ ಕಾರಣವಾಗಿವೆ. ಅದರೆ ಶರಣರು ಸಮಾಧಾನದ ಬದುಕಿಗೆ ಅಗತ್ಯವಾದ ಹಲವು ಸೂತ್ರಗಳನ್ನು ಹೆಣೆದಿರುವದು ವಚನ ಸಾಹಿತ್ಯದ ಸಮಕಾಲೀನ ಮಹತ್ವವನ್ನು ಸಾರುವ ಅಂಶವಾಗಿದೆ. ಲೋಕದಲ್ಲಿ ಹುಟ್ಟಿದ ಬಳಿಕ ನಮ್ಮ ಸುತ್ತಲಿನ ಜಗತ್ತು ಹಲವು ಮಾತುಗಳನ್ನು ಆಡುವದೇ. ಅವರ ಮಾತಿಗೆ ಗಮನ ಕೊಡದೇ ನಮ್ಮ ಬದುಕಿನ ಗುರಿ ಹಿಡಿದು ನಾವು ಸಾಗಬೇಕು ಎಂಬುದನ್ನು ವೈರಾಗ್ಯನಿಧಿ ಅಕ್ಕಮಹಾದೇವಿಯಂಥ ಹೋರಾಟಗಾರ್ತಿಯರು ಸಾರಿ ಸಾರಿ ಹೇಳುತ್ತಾರೆ.

ಬೆಟ್ಟದ ಮೇಲೊಂದು ಮನೆಯ ಮಾಡಿ,
ಮೃಗಗಳಿಗಂಜಿದಡೆಂತಯ್ಯಾ?
ಸಮುದ್ರದ ತಡಿಯಲೊಂದು ಮನೆಯ ಮಾಡಿ,
ನೊರೆತೆರೆಗಳಿಗಂಜಿದಡೆಂತಯ್ಯಾ?
ಸಂತೆಯೊಳಗೊಂದು ಮನೆಯ ಮಾಡಿ,
ಶಬ್ದಕ್ಕೆ ನಾಚಿದಡೆಂತಯ್ಯಾ?
ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯಾ,
ಲೋಕದೊಳಗೆ ಹುಟ್ಟಿದ ಬಳಿಕ
ಸ್ತುತಿನಿಂದೆಗಳು ಬಂದಡೆ
ಮನದಲ್ಲಿ ಕೋಪವ
ತಾಳದೆ ಸಮಾಧಾನಿಯಾಗಿರಬೇಕು.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-106/ವಚನ ಸಂಖ್ಯೆ-302)

“ಸ್ತುತಿ ನಿಂದೆಗಳು ಬಂದಡೆ ಕೋಪವ ತಾಳದೇ ಸಮಾಧಾನಿಯಾಗಿರಬೇಕು” ಎನ್ನುತ್ತಾರೆ ವೈರಾಗ್ಯನಿಧಿ ಅಕ್ಕಮಹಾದೇವಿಯವರು. ವೈರಾಗ್ಯನಿಧಿ ಅಕ್ಕಮಹಾದೇವಿಯವರ ಹಾಗೆಯೆ ಹಲವು ಬಗೆಯ ಆತಂಕಗಳನ್ನು ಸ್ವಂತದ ಬದುಕಿನಲ್ಲಿ ಎದುರಿಸಿದವರು ಬಸವಣ್ಣನವರ ಸಹೋದರಿ ಅಕ್ಕ ನಾಗಲಾಂಬಿಕೆಯವರು.

ಮನದೊಡೆಯ ಮಹಾದೇವ ಮನವ ನೋಡಿಹನೆಂದು
ಮನುಜರ ಕೈಯಿಂದ ಒಂದೊಂದು ನುಡಿಸುವನು.
ಇದಕ್ಕೆ‌ ಕಳವಳಿಸದಿರು ಮನವೇ, ಇದಕೆ ಕಾತರಿಸದಿರು ತನುವೇ,
ವಿಷಯ ಮರೆಯದಿರು ಕಂಡಾ, ನಿಶ್ಚಿಂತವಾಗಿರು ಮನವೆ.
ಬಸವಣ್ಣಪ್ರಿಯ ಸಂಗಯ್ಯನು ಬೆಟ್ಟದನಿತಪರಾಧವನು
ಒಂದು ಬೊಟ್ಟಿನಲಿ ತೊಡೆವನು.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-311/ವಚನ ಸಂಖ್ಯೆ-798)

ಎನ್ನುತ್ತಾರೆ. ಲೋಕದಲ್ಲಿ ಹುಟ್ಟಿದ ಮೇಲೆ ಅನೇಕ ಮಾತುಗಳು ಬರುವವೇ, ಅವಕ್ಕೆ ಗಮನ ಕೊಡುತ್ತ ಹೋದರೆ ನಮ್ಮ ಬದುಕಿನ ಗುರಿಯೇ ಪಲ್ಲಟಗೊಳ್ಳಬಹುದು. ಆದ್ದರಿಂದ ಅವಕ್ಕೆಲ್ಲ ಗಮನ ಕೊಡದೇ ನಾವು ಗುರಿ ಹಿಡಿದು ನಡೆಯಬೇಕು ಎನ್ನುತ್ತಾರೆ ಬಸವಾದಿ ಶರಣರು. ಇದನ್ನೇ ಬಸವಣ್ಣನವರು:

ಮೌನದಲುಂಬುದು ಆಚಾರವಲ್ಲ.
ಲಿಂಗಾರ್ಪಿತವ ಮಾಡಿದ ಬಳಿಕ
ತುತ್ತಿಗೊಮ್ಮೆ “ಶಿವಶರಣೆ” ನುತ್ತಿರಬೇಕು.
ಕರಣವೃತ್ತಿಗಳಡಗುವವು,
ಕೂಡಲಸಂಗನ ನೆನೆವುತ್ತ ಉಂಡಡೆ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-217/ವಚನ ಸಂಖ್ಯೆ-787)

ಸಂಸಾರವನ್ನು ಕುರಿತು ಶರಣರ ಚಿಂತನೆ ತುಂಬ ಆಧುನಿಕವಾದದ್ದು. ಅವರು ಸಂಸಾರವನ್ನು ದೂರೀಕರಿಸಿದವರಲ್ಲ. ಸಂಸಾರವನ್ನು ಬಳಸಿದವರು. ಹೆಣ್ಣು, ಹೊನ್ನು, ಮಣ್ಣು ಇವನನ್ನು ಅತಿಯಾಗಿ ಒಪ್ಪಿಕೊಳ್ಳದಿದ್ದರೂ ಅಗತ್ಯವಿರುವಷ್ಟು ಬಾಳಿಗೆ ಬೇಕು ಎನ್ನುವದು ಅವರ ಸಿದ್ಧಾಂತವಾಗಿತ್ತು. ಹೆಣ್ಣು ಮಾಯೆ ಎಂಬ ಪಾರಂಪರಿಕವಾದ ಸಿದ್ಧಾಂತವನ್ನು ಅವರು ತಿರಸ್ಕರಿಸಿ “ಮನದ ಮುಂದಣ ಆಸೆಯೇ ಮಾಯೆ” ಎಂದರು. ಬದುಕಿನಲ್ಲಿ ಬರುವ ಸುಖ-ದು:ಖಗಳು ಪಾಪ-ಪುಣ್ಯದ ಫಲ ಎನ್ನುವದನ್ನು ಶರಣರು ಒಪ್ಪಿಕೊಳ್ಳುವದಿಲ್ಲ. ಆದ್ದರಿಂದಲೇ ಬಸವಣ್ಣನವರು:

ಸುಖ ಬಂದಡೆ ಪುಣ್ಯದ ಫಲವೆನ್ನೆನು,
ದುಃಖ ಬಂದಡೆ ಪಾಪದ ಫಲವೆನ್ನೆನು.
ನೀ ಮಾಡಿದಡಾಯಿತ್ತೆಂದೆನ್ನೆನು,
ಕರ್ಮಕೆ ಕರ್ತುವೆ ಕಡೆಯೆಂದೆನ್ನೆನು,
ಉದಾಸೀನವಿಡಿದು ಶರಣೆನ್ನೆನು.
ಕೂಡಲಸಂಗಮದೇವಾ,
ನೀ ಮಾಡಿದುಪದೇಶವು ಎನಗೀ ಪರಿಯಲ್ಲಿ-
ಸಂಸಾರವ ಸವೆಯೆ ಬಳಸುವೆನು.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-189/ವಚನ ಸಂಖ್ಯೆ-695)

ಎನ್ನುತ್ತಾರೆ. ಸುಖ-ದು:ಖಗಳು ಪಾಪ-ಪುಣ್ಯದ ಫಲವೆನ್ನುವದು ತುಂಬಾ ಪಾರಂಪರಿಕವಾದ ನಂಬಿಕೆ. ನಾವು ಮಾಡಿದ ಕಾರ್ಯದಿಂದ ನಮಗೆ ಫಲಾ-ಫಲಗಳು ದೊರಕುತ್ತವೆಯೇ ಹೊರತು ಪಾಪ-ಪುಣ್ಯಗಳ ಕಾರಣದಿಂದಲ್ಲ. ಇದು ದೈವ ನೀಡುವ ಪ್ರತಿಫಲವೂ ಅಲ್ಲ ಎನ್ನುವ ಬಸವಣ್ಣನವರು ಇದಕ್ಕಾಗಿ ನಿಮ್ಮನ್ನು ದೂಷಿಸಲಾರೆ ಎಂದು ತಮ್ಮ ಕೂಡಲಸಂಗಮದೇವರಿಗೆ ಹೇಳುತ್ತಾರೆ. ಹೀಗೆ ಕರ್ಮ ಸಿದ್ಧಾಂತವನ್ನು ವಿರೋಧಿಸುವ ಮೂಲಕ ಶರಣರು ಆದುನಿಕ ವಿಚಾರದ ಬೆಳಕು ಹಚ್ಚಿದವರು.

ಇಹದ ಬದುಕನ್ನು ಒಪ್ಪಿಕೊಂಡ ಶರಣರು ಕೈಲಾಸ ಮತ್ತು ಮರ್ತ್ಯದ ನಡುವೆ ಅಂತಹ ಅಂತರವನ್ನೇನು ಕಾಣುವದಿಲ್ಲ. ಅವೆರಡರ ನಡೆಯೂ ಒಂದೇ ಎನ್ನುತ್ತಾರೆ. ಶರಣೆ ಹಡಪದ ಅಪ್ಪಣ್ಣನವರ ಪುಣ್ಯಸ್ತ್ರೀ ಲಿಂಗಮ್ಮನವರು:

ಕೈಲಾಸ ಮರ್ತ್ಯಲೋಕ ಎಂಬರು.
ಕೈಲಾಸವೆಂದಡೇನೊ, ಮರ್ತ್ಯಲೋಕವೆಂದಡೇನೊ?
ಅಲ್ಲಿಯ ನಡೆಯೂ ಒಂದೆ, ಇಲ್ಲಿಯ ನಡೆಯೂ ಒಂದೆ.
ಅಲ್ಲಿಯ ನುಡಿಯೂ ಒಂದೆ, ಇಲ್ಲಿಯ ನುಡಿಯೂ ಒಂದೆ
ಕಾಣಿರಯ್ಯಾ ಎಂಬರು.
ಕೈಲಾಸದವರೆ ದೇವರ್ಕಳೆಂಬರು;
ಸುರಲೋಕದೊಳಗೆ ಸಾಸಿರಕಾಲಕ್ಕಲ್ಲದೆ ಅಳಿದಿಲ್ಲವೆಂಬರು.
ನರಲೋಕದೊಳಗೆ ಸತ್ತು ಸತ್ತು ಹುಟ್ಟುತಿಹರೆಂಬರು.
ಇದ ಕಂಡು ನಮ್ಮ ಶರಣರು
ಸುರಲೋಕವನು ನರಲೋಕವನು ತೃಣವೆಂದು ಭಾವಿಸಿ,
ಭವವ ದಾಂಟಿ ತಮ್ಮ ತಮ್ಮ ಹುಟ್ಟನರಿದು,
ಮಹಾಬೆಳಗನೆ ಕೂಡಿ, ಬೆಳಗಿನಲ್ಲಿ ಬಯಲಾದರಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-471/ವಚನ ಸಂಖ್ಯೆ-1284)

ಸುರಲೋಕ ನರಲೋಕವೆರಡನ್ನೂ ತೃಣವಾಗಿ ಕಂಡವರು ಎನ್ನುವ ಮೂಲಕ ಇವೆರಡನ್ನೂ ಮೀರಿದ ಲೋಕವೇ ಅದು ನಮ್ಮ ಲೋಕ, ಸಾಧನೆಯ ಲೋಕ ಎನ್ನುತ್ತಾರೆ. ಇಹವನ್ನೇ ಕೈಲಾಸವಾಗಿಸಿಕೊಳ್ಳುವದರತ್ತ ನಾವು ಮನಸ್ಸು ಮಾಡಬೇಕು ಎಂದು ಬೋದಿಸುತ್ತಾರೆ.

ದುಡ್ಡು ಲೋಕದಲ್ಲಿ ಮಹತ್ವದ ಸಂಗತಿ ನಿಜ, ಆದರೆ ಅದನ್ನೇ ಮುಖ್ಯ ಎಂದು ತಿಳಿಯುವದನ್ನು ಶರಣರು ವಿರೋಧಿಸುತ್ತಾರೆ. ಭಕ್ತರನ್ನು ತಮ್ಮ ಮಠಕ್ಕೆ ಬನ್ನಿ ಎಂದು ಅವರಿಗೆ ನಡೆಮುಡಿ ಹಾಸುವ, ಬಡವರನ್ನು ಕಂಡರೆ ಅತ್ತ ಹೋಗಿ ಎನ್ನುವ ಡಂಭದ ಮಠಾಧೀಶರು ಆಗಲೂ ಇದ್ದಿರಿಬೇಕು. ಇಂತಹ ಮಠದ ಹಿರಿಯರನ್ನು ಅಂಬಿಗರ ಚೌಡಯ್ಯ:

ದೊಡ್ಡ ದೊಡ್ಡ ಶೆಟ್ಟಿಗಳ ಕಂಡು ಅಡ್ಡಗಟ್ಟಿ ಹೋಗಿ,
ಶರಣಾರ್ಥಿ ಎಂಬರು
ಎಡ್ಡುಗಳ್ಳತನಕ್ಕೆ ತಮ್ಮ ಮಠಕ್ಕೆ ಬನ್ನಿ ಹಿರಿಯರೇ ಎಂಬರು.
ಹೋಗಿ ಶರಣಾರ್ಥಿ ಭಕ್ತನೆಂದೊಡೆ ಕೇಳದ ಹಾಗೆ
ಅಡ್ಡ ಮೋರೆಯನಿಕ್ಕಿಕೊಂಡು ಸುಮ್ಮನೆ ಹೋಗುವ
ಹೆಡ್ಡ ಮೂಳರಿಗೆ ದುಡ್ಡೇ ಪ್ರಾಣವಾಯಿತ್ತು.
ದುಡ್ಡಿಸ್ತರ ಕುರುಹನರಿಯದೆ ಮೊಳಪಾದದ ಮೇಲೆ
ಹೊಡಹೊಡಕೊಂಡು ನಗುತಿರ್ದಾತ
ನಮ್ಮ ಅಂಬಿಗರ ಚೌಡಯ್ಯ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-64/ವಚನ ಸಂಖ್ಯೆ-165)

ದಿಟ್ಟ ಗಣಾಚಾರಿ ಶರಣ ಅಂಬಿಗರ ಚೌಡಯ್ಯನವರು ಮಹಾನ್ ವಿಚಾರವಾದಿ ಮತ್ತು ವೈಚಾರಿಕ ಚಿಂತನೆಯುಳ್ಳಂಥವರು. ಅಂತೆಯೇ ಬರೀ ಶ್ರೀಮಂತರಿಗೆ ಎಡೆ ಹಾಸುವ ಸ್ವಾಮಿಗಳಿಗೆ ದುಡ್ಡೇ ಮುಖ್ಯವಾಯಿತ್ತು ಎಂದು ತಮ್ಮ ಉಗ್ರ ಭಾಷೆಯಲ್ಲಿ ಅಂಥವರನ್ನು ಶಿಕ್ಷಿಸಬೇಕು ಎನ್ನುತ್ತಾರೆ.

ಮಾತು ಎಲ್ಲ ಕಾಲಕ್ಕೂ ಸಮಾಜದ ಮಾಧ್ಯಮ. ಮಾತು ಮಲೀನವಾಗಬಾರದು ಎಂಬ ಆಧುನಿಕ ಚಿಂತನೆ ಶರಣರಿಗೂ ಸಮ್ಮತವೇ. ನಡೆಗೆ ಎಷ್ಟು ಪ್ರಾಧಾನ್ಯ ಕೊಟ್ಟರೋ ಅಷ್ಟೇ ಪ್ರಾಧಾನ್ಯವನ್ನು ನುಡಿಗೂ ಕೊಟ್ಟರು. ಇಂದು ಮಾತು ಮಲೀನವಾದುದರಿಂದ ಎಷ್ಟೆಷ್ಟು ಅನಾಹುತಗಳ ಸಮಾಜದಲ್ಲಿ ಆಗುತ್ತಿವೆ ಎನ್ನವುದನ್ನು ನೋಡಿದರೆ ಶರಣರು ನುಡಿಗೆ ನೀಡಿದ ಪ್ರಾಮುಖ್ಯತೆಯ ಅರ್ಥವಾಗುತ್ತದೆ. ಅವರು ನುಡಿ ಸತ್ಯ ಶುದ್ಧವಿರಬೇಕು, ನುಡಿದಂತೆ ನಡೆಯಬೇಕು ಎಂಬ ಎರಡು ಆಯಮಗಳನ್ನು ನಮಗೆ ನೀಡಿದ್ದಾರೆ. ಮೊದಲನೆಯ ನೆಲೆಯಲ್ಲಿ ಮಾತು ಸತ್ಯವೂ ಶುದ್ಧವೂ ಆಗಿರಬೇಕು. ಅಂದರೆ ಇನ್ನೊಬ್ಬರಿಗೆ ಮನಸ್ಸು ಘಾಸಿ ಮಾಡದಂತೆಯೂ ಇರಬೇಕು ಎನ್ನುತ್ತಾರೆ. “ಸದುವಿನಯವೇ ಸದಾಶಿವನ ಒಲುಮೆಯಯ್ಯ” ಎನ್ನುವ ಬಸವಣ್ಣನವರು ಮೃದು ವಚನದ ಮಹತ್ವ ಸಾರಿದ್ದಾರೆ.

ಕಂಡ ಭಕ್ತರಿಗೆ ಕೈಮುಗಿಯುವಾತನೆ ಭಕ್ತ,
ಮೃದುವಚನವೆ ಸಕಲ ಜಪಂಗಳಯ್ಯಾ,
ಮೃದುವಚನವೆ ಸಕಲ ತಪಂಗಳಯ್ಯಾ,
ಸದುವಿನಯವೆ ಸದಾಶಿವನ ಒಲುಮೆಯಯ್ಯಾ.
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-66/ವಚನ ಸಂಖ್ಯೆ-244)

ಎನ್ನುವಲ್ಲಿ ನಮ್ಮ ಮಾತು ದೈವವನ್ನು ಒಲಿಸುವಂತಿರಬೇಕು ಎನ್ನುವ ಹಂಬಲವಿದೆ. ಎರಡನೆಯ ನೆಲೆಯಲ್ಲಿ ಮಾತು ಬರೀ ಸುಂದರವಾಗಿದ್ದರೆ ಸಾಲದು. ಅದು ನಡೆಯೂ ಆಗಬೇಕು ಎನ್ನುವದು ಶರಣರ ನಿಲುವಾಗಿತ್ತು. ಅಂದರೆ “ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು” ಆಗ ಮಾತ್ರ ಸಾಧ್ಯ. ನಡೆಯಿಲ್ಲದ ನುಡಿ ಜಾಣರನ್ನು ವೀರಗಂಟಿ ಶರಣ ಮಡಿವಾಳ ಮಾಚಿದೇವರು ಹೀಗೆ ವಿಡಂಬಿಸುತ್ತಾರೆ.

ವಚನದ ರಚನೆಯ ನುಡಿವ ಬಯಲುರಂಜಕರೆಲ್ಲ
ಭಕ್ತರಪ್ಪರೆ ಅಯ್ಯಾ?
ವಚನ ತನ್ನಂತಿರದು, ತಾನು ವಚನದಂತಿರ.
ಅದೆಂತೆಂದಡೆ:
ತನುಮನಧನವನೆಲ್ಲ ಹಿಂದಿಟ್ಟುಕೊಂಡು,
ಮಾತಿನ ಬಣಬೆಯ ಮುಂದಿಟ್ಟುಕೊಂಡು,
ಒಡೆಯನ ಕಂಡು ನಾಯಿ ಬಾಲವ ಬಡಿದುಕೊಂಬಂತೆ,
ಆ ತೆರನಾಯಿತೆಂದ ಕಲಿದೇವರದೇವಯ್ಯ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-295/ವಚನ ಸಂಖ್ಯೆ-725)

ಪ್ರಶ್ನೆಯೊಂದಿಗೆ ಪ್ರಾರಂಭವಾಗುವ ಈ ವಚನ ಉತ್ತರದೊಂದಿಗೆ ಮುಕ್ತಾಯವಾಗುತ್ತದೆ. ಈ ಬಗೆಯ ಸಂಭಾಷಣೆಯ ರೂಪದಲ್ಲಿರುವುದು ವಚನಗಳ ವಿಶೇಷತೆಯಾಗಿದೆ. ವೀರಗಂಟಿ ಶರಣ ಮಡಿವಾಳ ಮಾಚಿದೇವರು ನುಡಿಯಲ್ಲಿಯೆ ಖಡ್ಗ ಝಳಪಿಸುತ್ತಿದ್ದಾರೆ. ಬರೀ ಮಾತು ಅಡುವ ಇಂಥವರನ್ನು ಒಡೆಯನ ಮುಂದೆ ಬಾಲವಾಡಿಸುತ್ತ ಬಿದ್ದ ನಾಯಿಗೆ ಹೋಲಿಸುತ್ತಾರೆ. ನುಡಿದ ಮಾತಿಗೆ ತಪ್ಪಿದರೆ ಒಡಲನಿರಿಸುವದೇ ದಂಡ ಎನ್ನುವ ಶರಣರು ನುಡಿದು ತಪ್ಪ ನಿಜಧೀರರಾಗಿದ್ದರು.

ಇಂದಿನ ಆಧುನಿಕ ಜಗತ್ತು ರಕ್ತದೊತ್ತಡ, ಸಕ್ಕರೆ ಖಾಯಿಲೆಗಳ ಆಗರವಾಗಿದೆ. ಇದಕ್ಕೆ ಹೊರಗಿನ ಜಗತ್ತು ಎಷ್ಟು ಕಾರಣವೋ ಒಳಗಿನ ವಿಕಾರಗಳೂ ಅಷ್ಟೇ ಕಾರಣ. ವೈದ್ಯ ವಿಜ್ಞಾನಿಗಳ ಮಾತನ್ನೇ ನಂಬುವದಾದರೆ ನಮ್ಮ ಅತಿಯಾದ ರಕ್ತದೊತ್ತಡಕ್ಕೆ ನಮ್ಮ ಅತಿ ಕೋಪವೆ ಕಾರಣ ಎನ್ನವುದನ್ನು ಒಪ್ಪಲೇಬೇಕು. ಆದ್ದರಿಂದ “ಕೋಪವೆಂಬುದು ಅನರ್ಥ ಸಾಧನ” ಎಂಬ ಪರಮ ಸತ್ಯವನ್ನು 12 ನೇ ಶತಮಾನದಲ್ಲಿಯೇ ಶರಣರು ತಿಳಿದಿದ್ದರು. ಮತ್ತು ಕೋಪಿಸುವದನ್ನು ವಿರೋಧಿಸಿದ್ದರು. ಬಸವಣ್ಣನ

ತನಗೆ ಮುನಿವರಿಗೆ ತಾ ಮುನಿಯಲೇಕಯ್ಯಾ?
ತನಗಾದ ಆಗೇನು? ಅವರಿಗಾದ ಚೇಗೆಯೇನು?
ತನುವಿನ ಕೋಪ ತನ್ನ ಹಿರಿಯತನದ ಕೇಡು.
ಮನದ ಕೋಪ ತನ್ನ ಅರಿವಿನ ಕೇಡು.
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ
ನೆರೆಮನೆಯ ಸುಡದು ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-67/ವಚನ ಸಂಖ್ಯೆ-248)

ಪ್ರಶ್ನೆ, ಸಂದೇಹ ಪರಿಹಾರ ಎಲ್ಲ ಬಗೆಯ ಸಮ್ಮಿಶ್ರ ಪ್ರಶ್ನೋತ್ತರಗಳಿಂದ ವಚನ ಸಂಗಮಿತವಾಗಿದೆ. ಕೋಪಿಸುವದರಿಂದ ಏನು ಲಾಭ ಎಂದು ಪ್ರಶ್ನಿಸುವ ಬಸವಣ್ಣನವರು ತನುವಿನ ಕೊಪ ಮತ್ತು ಮನದ ಕೋಪ ಎರಡರ ಬಗ್ಗೆಗೂ ಮಾತನಾಡಿ ಬಹಳ ಸುಂದರವಾದ ಉಪಮೆಯೊಂದಿಗೆ ವಚನ ಮುಗಿಸುತ್ತಾರೆ.

ನಮ್ಮ ಮೇಲೆ ಯಾರಾದರೂ ಕೋಪಿಸಿಕೊಂಡರೆ ನಾವು ಪ್ರತಿಯಾಗಿ ಕೋಪಿಸಿಕೊಳ್ಳಬಾರದು. ಅದರಿಂದ ನಮಗೆ ಯಾವ ಲಾಭವೂ ಇಲ್ಲ. ಹಿತವೂ ಇಲ್ಲ. ಅವರಿಗೆ ಕೇಡಾದರೆ ನಮಗೆ ಏನಾಗುವದಿದೆ? ಕೋಪದಿಂದಾಗುವ ದೈಹಿಕ ಪ್ರತಿಕ್ರಿಯೆಗಳಿಂದ ರಕ್ತದ ಪರಿಚಲನೆ, ಹೃದಯದ ಬಡಿತ ಹೆಚ್ಚಾಗಿ ಉದ್ವಿಗ್ನತೆ ಅಧಿಕವಾಗುತ್ತದೆ. ಮಾನಸಿಕ ಒತ್ತಡವೂ ಏರುಮುಖವಾಗುತ್ತದೆ. ಇದರಿಂದ ಮನಸ್ಸು ಅಶಾಂತವಾಗಿ ನಮಗೆ ಹಾನಿಯಾಗುತ್ತದೆ. ಇದು ಅತಿಯಾದಾಗ ಬುದ್ಧಿ ಭ್ರಮಣೆಯಾಗುತ್ತದೆ. ಮನೋರೋಗಿಯಾಗಿಯೂ ಪರಿವರ್ತಿತವಾಗಬಹುದು. ಈ ಸಿಟ್ಟು ನಮ್ಮ ಮನೆ ದೇಹಗಳನ್ನು ಮೊದಲು ಸುಟ್ಟು ಹಾಕುತ್ತದೆಯೇ ಹೊರತು ಪರರಿಗೆ ಏನೂ ಮಾಡಲಾರದು”
(ಬಸವಪಥ/ಅಕ್ಟೋಬರ-1999/ಪುಟ ಸಂ-60/ ಪ್ರೊ. ಬಿ. ಜಿ. ಅಮ್ಮಣಗಿ)

ಶರಣರ ಆಧುನಿಕ ಚಿಂತನೆಗಳಲ್ಲಿ ಮತ್ತೊಂದು ಮಹತ್ವದ ಚಿಂತನೆ ಅವರು ಸ್ತ್ರೀಯರಿಗೆ ನೀಡಿದ ಸ್ವಾತಂತ್ರ್ಯ. ಜಗತ್ತಿನ ಇತಿಹಾಸದಲ್ಲಿಯೆ ಏಕಕಾಲಕ್ಕೆ ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ವಚನ ರಚಿಸುವ ಅವಕಾಶ ಸ್ತ್ರೀಯರಿಗೆ ದೊರೆಯುವಂತಾದುದು ಆಕೆ ತನ್ನ ಮನದ ತುಮುಲಗಳನ್ನು ವ್ಯಕ್ತ ಪಡಿಸುವಂತಾದುದು ಜಗತ್ತಿನ ಇತಿಹಾಸದಲ್ಲಿಯೇ ಮಹತ್ವದ್ದು. ಕೇವಲ ಹೆಣ್ಣು ಎಂಬ ಕಾರಣಕ್ಕೆ ದೂಷಿಸುವ ಪರಂಪರಾವಾದವನ್ನು ವಿರೋಧಿಸುವ ಶರಣರು ಸ್ತ್ರೀಯರನ್ನು ಗೌರವಿಸಿದರು. ಗಂಡು ಹೆಣ್ಣು ಎಂಬ ಲಿಂಗ ತಾರತಮ್ಯವನ್ನು ವಿರೋಧಿಸಿ “ನಡುವೆ ಸುಳಿವ ಆತ್ಮ ಹೆಣ್ಣೂ ಅಲ್ಲ ಗಂಡೂ ಅಲ್ಲ” ಎಂದು ಮೊದಲ ಬಾರಿಗೆ ಸಾರಿದರು. ಶರಣೆ ಸತ್ಯಕ್ಕನವರು ಗಂಡು ಹೆಣ್ಣು ಎಂದು ಅಂತರಗೈಯುವ ತಪ್ಪನ್ನು ಹೀಗೆ ವಿರೋಧಿಸುತ್ತ:

ಮೊಲೆ ಮುಡಿ ಇದ್ದುದೆ ಹೆಣ್ಣೆಂದು ಪ್ರಮಾಣಿಸಲಿಲ್ಲ.
ಕಾಸೆ ಮೀಸೆ ಕಠಾರವಿದ್ದುದೆ ಗಂಡೆಂದು ಪ್ರಮಾಣಿಸಲಿಲ್ಲ.
ಅದು ಜಗದ ಹಾಹೆ; ಬಲ್ಲವರ ನೀತಿಯಲ್ಲ.
ಏತರ ಹಣ್ಣಾದಡೂ ಮಧುರವೆ ಕಾರಣ,
ಅಂದವಿಲ್ಲದ ಕುಸುಮಕ್ಕೆ ವಾಸನೆಯೆ ಕಾರಣ.
ಇದರಂದವ ನೀನೇ ಬಲ್ಲೆ ಶಂಭುಜಕ್ಕೇಶ್ವರಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-446/ವಚನ ಸಂಖ್ಯೆ-1226)

ಎಂದು ದೈವಕ್ಕೆ “ನೀನೆ ನೋಡು” ಎಂದು ಶರಣೆ ಸತ್ಯಕ್ಕ ಕೇಳುತ್ತಾರೆ. “ಹಣ್ಣಿನಲ್ಲಿ ಅಡಗಿದ ಮಧುರದಂತೆ, ಹೂವಿನಲ್ಲಿ ಅಡಗಿದ ವಾಸನೆಯಂತೆ ದೇಹದಲ್ಲಿ ಒಂದಾಗಿರುವ ಆತ್ಮನಿಗೆ ಗಂಡು ಹೆಣ್ಣೆಂಬ ಭೇದ ಕಲ್ಪಿಸುವದು ಸರಿಯಲ್ಲ” ಎಂದು ಹೇಳಿದ್ದಾರೆ.
(ಬಸವ ಪಥ/ ಅಕ್ಟೋಬರ-1999 / ಪುಟ ಸಂ. 82 / ಶ್ರೀಮತಿ ಎಂ.ರೇಣುಕಮ್ಮ)

ನಮ್ಮ ಬದುಕು ಸರಾಗವಾಗುವದಕ್ಕೆ, ಸುಂದರವಾಗುವದಕ್ಕೆ ಎಷ್ಟು ಸರಳ ದಾರಿಯನ್ನು ಶರಣರು ನೀಡುತ್ತಾರೆ ಎಂದರೆ ಅದನ್ನು ಇಂದಿನ ನಾವು ಮೀರಲು ಸಾದ್ಯವಿಲ್ಲ. ಇರುವ ಲೋಕವನ್ನೆ ದೇವಲೋಕವನ್ನಾಗಿಸಬೆಕೆಂಬ ವಿಚಾರ ಇಲ್ಲಿದೆ.

ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ ಕಾಣಿರೋ!
ಸತ್ಯವ ನುಡಿವುದೇ ದೇವಲೋಕ,
ಮಿಥ್ಯವ ನುಡಿವುದೇ ಮರ್ತ್ಯಲೋಕ.
ಆಚಾರವೆ ಸ್ವರ್ಗ, ಅನಾಚಾರವೆ ನರಕ.
ಕೂಡಲಸಂಗಮದೇವಾ, ನೀವೆ ಪ್ರಮಾಣು.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-65/ವಚನ ಸಂಖ್ಯೆ-239)

ಇದಕ್ಕಿಂತ ಸರಳವಾಗಿ ಸ್ವರ್ಗ ನರಕಗಳನ್ನು ವ್ಯಾಖ್ಯಾನಿಸುವ, ಬದುಕಿನ ಸೌಂದರ‍್ಯಕ್ಕೆ ಮಾರ್ಗದರ್ಶನ ಮಡುವ ಸಾಹಿತ್ಯ ಜಗತ್ತಿನಲ್ಲಿ ಇದ್ದಿರಲಾರದು ಎಂದರೆ ಅತಿಶಯೋಕ್ತಿಯಲ್ಲ. ಹೀಗೆ ಶರಣರ ವಚನಗಳು ಚರ್ಚಿಸದ ವಿಷಯವೇ ಇಲ್ಲ. ಅವು ವರ್ತಮಾನದ ಬದುಕನ್ನು ಸುಂದರ ಗೊಳಿಸಿಕೊಳ್ಳಲು ಅಗತ್ಯವಾದ ಶಬ್ದ ಸೋಪಾನ ಗಳಾಗಿವೆ. ಆಧುನಿಕ ಕಾಲಕ್ಕೆ ಅಗತ್ಯವಾದ ಅತ್ಯಾಧುನಿಕ ಚಿಂತನೆಗಳನ್ನು ಒಳಗೊಂಡಿವೆ. ಅಂದಿಗೂ ಇಂದಿಗೂ, ಎಂದೆಂದಿಗೂ ಅಜರಾಮರ ಸಂಪತ್ತಾಗಿವೆ.

ಡಾ. ಯಲ್ಲಪ್ಪ ಯಾಕೊಳ್ಳಿ.
ಪ್ರಾಚಾರ್ಯರು (ನಿ),
ಸವದತ್ತಿ, ಬೆಳಗಾವಿ ಜಿಲ್ಲೆ.
ಮೋಬೈಲ್‌ ಸಂ. 97319 70857

 ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in

Loading

Leave a Reply