ಕಾಯಕ ನಿಷ್ಠೆಯ ಕುಂಬಾರ ಗುಂಡಯ್ಯನವರು / ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ಕುಂಬಾರರೆಲ್ಲರು ಗುಂಡಯ್ಯನಾಗಬಲ್ಲರೆ?
ಮಡಿವಾಳರೆಲ್ಲರು ಮಾಚಯ್ಯನಾಗಬಲ್ಲರೆ?
ಜೀಡರೆಲ್ಲರು ದಾಸಿಮಯ್ಯನಾಗಬಲ್ಲರೆ?
ಎನ್ನ ಗುರು ಕಪಿಲಸಿದ್ಧಮಲ್ಲೇಶ್ವರಯ್ಯಾ,
ಪ್ರಾಣಿಗಳ ಕೊಂದು ಪರಿಹರಿಸಬಲ್ಲಡೆ
ತೆಲುಗ ಜೊಮ್ಮಯ್ಯನಾಗಬಲ್ಲರೆ?
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-447/ವಚನ ಸಂಖ್ಯೆ-1431)

ಸಿದ್ಧರಾಮೇಶ್ವರರ ಈ ವಚನವೊಂದೆ ಸಾಕು ಗುಂಡಯ್ಯನವರ ಘನತೆಯನ್ನು ತಿಳಿಯಲು.
ಕೆಲಸಕ್ಕೆ ಹೊಸ ಅರ್ಥವನ್ನು ಕೊಟ್ಟು ಕೀಳು ಮಟ್ಟದ ಕಸಬನ್ನು ಕಾಯಕವೆನ್ನುವ ದೈವತ್ವದೆಡೆಗೆ ಕರೆದೊಯ್ದದ್ದು ಬಸವಾದಿ ಶರಣ-ಶರಣೆಯರು. ಮಡಿವಾಳ, ಬಡಗಿ, ಕುಂಬಾರ, ಕಮ್ಮಾರ, ನೇಕಾರ ಹಾರುವ ಎಲ್ಲರೂ ಒಂದೇ ಎಂಬ ತತ್ವವನ್ನು ವಿಶ್ವಕ್ಕೆ ತಿಳಿಸಿದ ಮಹಾನ್ ಮಾನವತಾವಾದಿ ಬಸವಣ್ಣನವರ ಅನುಭವ ಮಂಟಪದ 770 ಅಮರಗಣಂಗಳ ಶರಣರಲ್ಲಿ ಒಬ್ಬರು ನಮ್ಮ ಕುಂಬಾರ ಗುಂಡಯ್ಯನವರು.

ಗುಂಡಯ್ಯನವರ ಜನ್ಮ ಸ್ಥಳ ಬೀದರಿನ ಭಲ್ಲುಕೆ (ಈಗಿನ ಭಾಲ್ಕಿ). ತಂದೆ ಸತ್ಯಣ್ಣ ಮತ್ತು ತಾಯಿ ಸಂಗಮ್ಮ. ಅವರ ಸಹೋದರಿ ನೀಲಲೋಚನೆ. ಏಕೆ ಬ್ರಹ್ಮಯ್ಯನವರನ್ನು ಮದುವೆ ಆಗಿದ್ದರು. ಈ ನೀಲಲೋಚನೆ ಹಾಗೆಯ ಏಕೆ ಬ್ರಹ್ಮಯ್ಯನವರ ತಂಗಿ ಕೇತಲಾದೇವಿಯವರನ್ನು ಗುಂಡಯ್ಯನವರು ಮದುವೆ ಆಗಿದ್ದರು. ಇವರ ಕಾಯಕ ಕುಂಬಾರಿಕೆ (ಮಣ್ಣನ್ನು ಹದ ಮಾಡುವುದು).

ಗುಂಡಯ್ಯನವರನ್ನು ಕುರಿತಂತೆ ಮರಡಿಪುರ ಶಾಸನದಲ್ಲಿ ಉಲ್ಲೇಖವಿದೆ. ಅಬಲೂರಿನ ಸೋಮೇಶ್ವರ ದೇವಸ್ಥಾನದಲ್ಲಿ ಇವರು ಕಾಯಕ ನಿರತರಾಗಿದ್ದ ಚಿತ್ರ ಮತ್ತು ಒಂದು ಬರಹ “ಗುಂಡಯ್ಯನ ಮುಂದೆ ಬಂದಾಡಿದ ನಮ್ಮ ಶಿವನು” ಎಂದು ಉಲ್ಲೇಖಿಸುತ್ತಾ ಅದರ ಕೆಳಗೆ ಗಡಿಗೆ ಬಾರಿಸುತ್ತ ಕುಳಿತ ಗುಂಡಯ್ಯನವರ ವಿಗ್ರಹ ಕೆತ್ತಲಾಗಿದೆ. ಜಗವೆಲ್ಲ ಆಡಿಸುವ ಶಿವನನ್ನು ಗುಂಡಯ್ಯ ತ್ನ ಮಡಿಕೆಯ ಧ್ವನಿಯಿಂದ ಆಡಿಸಿದ ಎಂದು ಹರಿಹರ ಗುಂಡಯ್ಯನವರ ಕಾಯಕದ ನಿಷ್ಠೆ ಮತ್ತು ಶಿವನ ಮೇಲಿದ್ದ ಭಕ್ತಿಯನ್ನು ಎತ್ತಿ ತೋರಿಸಿದ್ದಾರೆ.

ಕುಂಬಾರ ಗುಂಡಯ್ಯನವರ ಬಗ್ಗೆ ಅಷ್ಟೊಂದು ಚಾರಿತ್ರಿಕ ಅಂಶಗಳು ಲಭ್ಯವಾಗಿಲ್ಲ. ಇವರು ಬಸವಣ್ಣನ ಕಾಲದಲ್ಲಿ ಅಥವಾ ಬಸವ ಪೂರ್ವ ಯುಗದವರು ಅಂತ ಖಚಿತವಾಗಿ ತಿಳಿದು ಬಂದಿಲ್ಲ. ಹೆಚ್ಚಿನ ವಿದ್ವಾಂಸರು ಬಸವ ಪೂರ್ವ ಯುಗದವರು ಅಂತ ಅಭಿಪ್ರಾಯಪಡುತ್ತಾರೆ. ರಗಳೆ ಕವಿ ಹರಿಹರನು ತನ್ನ ಕುಂಬಾರ ಗುಂಡಯ್ಯನ ರಗಳೆಯಲ್ಲಿ ಗುಂಡಯ್ಯನವರ ಶಿವನ ಭಕ್ತಿಯನ್ನು ಮತ್ತು ಕಾಯಕ ನಿಷ್ಠೆಯನ್ನು ಕೊಂಡಾಡಿ ಬರೆದುದದರಿಂದ ಹರಿಹರನಿಗಿಂತ ಹಿಂದಿನ ಕಾಲದವರು ಅಂತ ಹೇಳಬಹುದು.

ಕಾಯಕವೇ ಕೈಲಾಸ ಎನ್ನುವದು ಶರಣ ಪರಂಪರೆಯ ಧ್ಯೇಯ. ಆದರೆ ಕುಂಬಾರ ಗುಂಡಯ್ಯನವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಾಯಕ್ಕೆ ಕೈಲಾಸಕ್ಕಿಂತಲೂ ಹೆಚ್ಚು ಮನ್ನಣೆ ನೀಡುತ್ತಾರೆ. ಈ ವಿವರಣೆ ಸಿಗುವುದು ಜನಪದ ಕವಿ ಸಾವಳಿಗೇಶನ ಕೃತಿಯಲ್ಲಿ

ಬೇಡೆನಗೆ ಕೈಲಾಸ ಬಾಡುವುದು ಕಾಯಕವು
ನೀಡೆನಗೆ ಕಾಯಕವ – ಕುಣಿದಾಡಿ ನಾಡ
ಹಂದರಕ ಹಬ್ಬಿಸುವೆ

ಎಂದು ಕೈಲಾಸವನ್ನು ನಿರಾಕರಿಸಿ ನನಗೆ ಕಾಯಕವೆ ಇರಲಿ ಎಂದು ಬೇಡುತ್ತಾರೆ.

ಹರಿಹರ ಕವಿಯು ತನ್ನ ಕುಂಬಾರ ಗುಂಡಯ್ಯ ರಗಳೆಯಲ್ಲಿ ಈ ರೀತಿ ಹೇಳುತ್ತಾರೆ.

ಆಧಾರಮೆಯಾಧಾರ ಮದಾಗಿರೆ
ಮಿಗೆ ಷಟ್ಟಕ್ರಮ ಚಕ್ರಮದಾಗಿರೆ
ಸೊಗಯಿಪ ನಾಭಿಯೆ ನಾಭಿಯದಾಗಿರೆ
ಕನಸಿನ ಕಾಯಂ ಮೃತ್ತಿಕೆಯಾಗಿರೆ
ನೆನಹುಂ ಚಟದಾರಂಗಳವಾಗಿರೆ
ನಷಿಟಯ ತಿರುಗುವ ದಂಡವದಾಗಿರೆ
ಮಾಡುವ ಭಕ್ತಿ ರಟಾಹಮದಾಗಲು
ಕೂಡದ ಕರಣದೆ ಮರ್ದಿಸುತಾಗಲು
ಮಿಗೆ ಶೋಷಣದಾತಪದಿಂದಾರಿಸಿ
ಇಂತೊಳಗಣ ಘಟರಾತ ಮೊಪ್ಪಲು
ಸಂತತ ಹೊರಗಿನ ಮೊಟಮದೊಪ್ಪಲು ಕುಂಬಾರ
ನೆನೆಸಿರ್ಪಂ ಗುಂಡಯ್ಯಂ

ಕುಂಬಾರ ಗುಂಡಯ್ಯನವರ ಒಳಗಣ ಕಾಯಕ ಮತ್ತು ಹೊರಗಣ ಕಾಯಕ ಎರಡನ್ನೂ ಸಮನಾಗಿ ಜೊತೆ ಜೊತೆಯಾಗಿ ನಿರ್ವಹಿಸುತ್ತಿದ್ದ ಬಗೆಯನ್ನು ಇದು ಹೇಳುತ್ತದೆ.

ಹೊರಗೆ ಚಕ್ರಕ್ಕೆ ಆಧಾರವಾಗಿ ಹುಗಿದ ಮರದ ತುಂಡೆ ಅವರಿಗೆ ಆಧಾರ ಚಕ್ರ. ಅದರ ಮೇಲಿನ ತಿಗರಿಯೆ ಅವರ ಷಟ್ಚಕ್ರ. ತಿಗಗರಿಯಲ್ಲಿರುವ ಮೂಳೆ ನೆಡುವ ರಂಧ್ರವೆ ನಾಭಿ (ಮಣಿಪೂರಕ ಚಕ್ರ). ಶರೀರವೆ ಮಡಿಕೆ ಮಾಡುವ ಮಣ್ಣು, ನಿಷ್ಠೆಯೇ ದಂಡ, ಅದರಿಂದ, ತಿರುಗಿಸಿ ಮಾಡಿದ ಮಡಕೆಗಳನ್ನು ನೆನೆಹೆಂಬ ಚಟದಾರಗಳಿಂದ ಕೊಯ್ದು ಕರಣಗಳಿಂದ ತಿದ್ದಿ ಬಡಿದು, ಅರಸಿ, ಭಕ್ತಿಯೆಂಬ ಆವಿಗೆಯಲ್ಲಿ ಹಾರೆ, ಉದರಾಗ್ನಿಗಳಿಂದ ಸುಟ್ಟು ಗಟ್ಟಿ ಮಾಡುತ್ತಿದ್ದರು. ಆ ಮಡಿಕೆಗಳನ್ನು ಬಾರಿಸುತ್ತ ಕುಣಿಯುತ್ತಿದ್ದರು.

ಕಾಯಕ ಪ್ರೇಮಿ ಕುಂಬಾರ ಗುಂಡಯ್ಯ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಜನ ಜೀವನದ ಭಾಗ ಆಗಿದ್ದಾರೆ. ಒಕ್ಕಲಿಗರು ತಮ್ಮ ಬೆಳೆಗಳ ರಕ್ಷಣೆಗಾಗಿ ಒಂದು ಕೋಲಿಗೆ ಗಡಿಗೆ ಮುಗುಚಿ ಹಾಕಿ ಸುಣ್ಣ ಬಳಿದು ಬೆದರು ಬೊಂಬೆ ಮಾಡಿ ನಿಲ್ಲಿಸುತ್ತಾರೆ. ಅದನ್ನು ಗುಂಡನೆಂದು ಕರೆದು ಕುಂಬಾರ ಗುಂಡಯ್ಯ ಹೊಲದ ರಕ್ಷಣೆ ಮಾಡುತ್ತಾನೆ ಅಂತ ನಂಬುತ್ತಾರೆ.

ಬೆಚ್ಚು ಹಾಕಿದ ಗಡಿಗೆ ಮುಚ್ಚಿಟ್ಟ ಹೊಲ
ಹುಲುಸು ಬಚ್ಚಾದ ಬೆಳೆಯ ಕಣವುಕ್ಕಿ
ಗುಂಡಯ್ಯ ಹೆಚ್ಚಾಯ್ತು ನಿನ್ನ ಶಿವಭಕ್ತಿ

ಎಂದು ಹಾಡುವ ಜನಪದರು ಗುಂಡಯ್ಯನ ಗಡಿಗೆ ಹೊಲವನ್ನು ಕಾಯುವದು ಮಾತ್ರವಲ್ಲ, ಚಳಿಗಾಲದಲ್ಲಿ ಬೆಳೆಗಳಿಗೆ ಬೆಚ್ಚನೆಯ ಹಿತಕರವಾದ ಗಾಳಿಯನ್ನು ಬೀಸಿ ತರುತ್ತಾನೆ ಅಂತ ನಂಬುತ್ತಾರೆ.

ಗುಂಡಯ್ಯನವರು ಬರೆದ ಯಾವುದೇ ವಚನಗಳು ಇದೂವರೆಗೊ ಲಭ್ಯವಾಗಿಲ್ಲ. ಕುಂಬಾರ ಗುಂಡಯ್ಯನವರ ಪುಣ್ಯಸ್ತಿ ಕೇತಲಾದೇವಿಯವರು ಕುಂಭೇಶ್ವರ ಲಿಂಗ ಅನ್ನುವ ಅಂಕಿತದಲ್ಲಿ ಬರೆದ ಎರಡು ವಚನಗಳು ಲಭ್ಯವಾಗಿವೆ.

ಹದ ಮಣ್ಣಲ್ಲದೆ ಮಡಕೆಯಾಗಲಾರದು.
ವ್ರತಹೀನನ ಬೆರೆಯಲಾಗದು.
ಬೆರೆದಡೆ ನರಕ ತಪ್ಪದು
ನಾನೊಲ್ಲೆ ಬಲ್ಲೆನಾಗಿ, ಕುಂಭೇಶ್ವರಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-299/ವಚನ ಸಂಖ್ಯೆ-772)


ಲಿಂಗವಂತರು ಲಿಂಗಾಚಾರಿಗಳ ಅಂಗಳಕ್ಕೆ ಹೋಗಿ
ಲಿಂಗಾರ್ಪಿತವ ಮಾಡುವಲ್ಲಿ ಸಂದೇಹವಿಲ್ಲದಿರಬೇಕು.
ಅದೆಂತೆಂದಡೆ:
“ಭಕ್ತಸ್ಯ ಮಂದಿರಂ ತಥಾ | ಭಿಕ್ಷಲಿಂಗಾರ್ಪಿತಂ ತಥಾಃ
ಜಾತಿ ಜನ್ಮ ರಜೋಚ್ಫಿಷ್ಠಃ | ಪ್ರೇತಸೂತಕ ವಿವರ್ಜಿತಃ ||”
ಇಂತೆಂದುದಾಗಿ,
ಕಾಣದುದನೆಚ್ಚರಿಸದೆ, ಕಂಡುದನು ನುಡಿಯದೆ.
ಕಾಣದುದನು ಕಂಡುದನು ಒಂದೆ ಸಮವೆಂದು ಅರಿಯಬಲ್ಲರೆ
ಕುಂಭೇಶ್ವರಲಿಂಗವೆಂಬೆನು.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-299/ವಚನ ಸಂಖ್ಯೆ-771)

ಕಾಯಕವೆ ಶಿವಭಕ್ತಿ, ಕಾಯಕವೆ ಶಿವ ಭಜನೆ ಕಾಯಕವೆ ಲಿಂಗಪೂಜೆ, ಶಿವಪೂಜೆ, ಶಿವಯೋಗಿ, ಕಾಯಕವೇ ಕಾಯುವ ಕೈಲಾಸ ಎಂದು ನಂಬಿ ಅದರಂತೆ ನಡೆದ ಕುಂಬಾರ ಗುಂಡಯ್ಯನವರ ಜಯಂತಿ ಮಣ್ಣಿತ್ತಿನ ಅಮವಾಸ್ಯೆಯೆಂದು ಅಂದರೆ ಇದೆ ತಿಂಗಳ 25.06.2025 ರಂದು ಅವರ ಸ್ಮರಣಾರ್ಥ ಈ ಪುಟ್ಟ ಲೇಖನ.

ಶ್ರೀಮತಿ. ಅನುಪಮ ಪಾಟೀಲ,
ನಂ. 10, ದೇಸಾಯಿ ಪಾರ್ಕ್‌,
ಕುಸೂಗಲ್‌ ರಸ್ತೆ, ಕೇಶ್ವಾಪೂರ,
ಹುಬ್ಬಳ್ಳಿ – 580 023.
ಮೋ. ಸಂ. +91 9845810708.

 ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನಸಾಹಿತ್ಯ ಮಂದಾರ ಫೌಂಡೇಶನ್ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in

Loading

Leave a Reply