ಮಣ್ಣೆತ್ತಿನ ಅಮವಾಸ್ಯೆಯ ಹಿನ್ನಲೆ | ಡಾ.ಶರಣು ಪಾಟೀಲ,ವಿಜಯಪುರ.

ನನಗೆ ಎಲ್ಲ ಹಬ್ಬ ಹರಿದಿನಗಳ ಮಾಹಿತಿಯನ್ನು ನೀಡುತ್ತಿದ್ದ ಹಿರಿಯ ಗೆಳೆಯ ನನ್ನ ಹೆಣ್ಣಜ್ಜ. ಅಪ್ಪನ ತಂದೆಗೆ ಗಂಡಜ್ಜ ಅಂತಾ ಮತ್ತು ತಾಯಿಯ ತಂದೆಗೆ ಹೆಣ್ಣಜ್ಜ ಅಂತಾ ಉತ್ತರ ಕರ್ನಾಟಕದಲ್ಲಿ ಕರೆಯುವ ಪದ್ಧತಿ ಇದೆ. ಗಂಡಜ್ಜ ತುಂಬಾ ಸೌಮ್ಯ ಸ್ವಭಾವದ ಕಾಯಕ ಜೀವಿ. ಆದರೆ ಹೆಣ್ಣಜ್ಜ ಮಾತ್ರ ತುಂಬಾ ಸ್ನೇಹಜೀವಿ. ಹೀಗಾಗಿ ಚಿಕ್ಕವರಿದ್ದಾಗ ಶಾಲೆಗೆ ಸೂಟಿ ಕೊಟ್ಟ ತಕ್ಷಣ ತಾಯಿಯ ತವರು ಮನೆಗೆ ಓಡಿ ಹೋಗುತ್ತಿದ್ದೆ. ಅಜ್ಜನ ಮಡಿಲಲ್ಲಿ ಮಲಗುವುದು. ಅವನ ಜೊತೆ ತೋಟ ಸುತ್ತಾಡೋದು. ಅದೇ ತೋಟದಲ್ಲಿ ಮೂರು ಕಲ್ಲು ಹಾಕಿ ಅಲ್ಲಿಯೇ ಬಿದ್ದಿರುವ ಕಟ್ಟಿಗೆಯ ಚೂರಿನಿಂದ ಹಾಲಿಲ್ಲದ ಕಡಕ್ ಚಹಾ ಮಾಡಿ ಕುಡಿಸುತ್ತಿದ್ದ. ಆಗಿನ ಕಾಲದಲ್ಲಿ ಮುಲ್ಕಿ ಪರೀಕ್ಷೆ ಪಾಸಾಗಿ ಮಾಸ್ತರ ನೌಕರಿ ಬಿಟ್ಟು ಕೋರ್ಟು ಕಚೇರಿ ಅಂತಾ ಜನರ ಕೆಲಸ ಮಾಡಿಕೊಡುತ್ತಾ ಎಲ್ಲರ ಬಾಯಲ್ಲೂ “ದೇಸಾಯಿ” ಆಗಿದ್ದ. ಯಾವಾಗಲೂ ಕಪ್ಪನೆಯ ಕೋಟು, ಧೋತರ, ತಲೆಯ ಮೇಲೊಂದು ಕರಿ ಟೊಪ್ಪಿಗೆ, ಕೈಯಲ್ಲಿ ಕೋಲು ಹಿಡಿದು ಮನೆಯಿಂದ ಹೊರಬಿದ್ದರೆ ಅಜ್ಜನ ಪಯಣ ಸರಕಾರಿ ಕಚೇರಿಗಳತ್ತ ಅಂತಾ ಎಲ್ಲರಿಗೂ ಗೊತ್ತಾಗುತ್ತಿತ್ತು.

ಇಂತಹ ನನ್ನಜ್ಜ ರಾತ್ರಿ ಮಲಗುವಾಗ ನಾನು ಕೇಳುವ ಕುತೂಹಲದ ಪ್ರಶ್ನೆಗಳಿಗೆ ಅಷ್ಟೇ ಕುತೂಹಲದ ಉತ್ತರ ನೀಡುತ್ತಿದ್ದ. ಆಗ ಚಿಕ್ಕ ವಯಸ್ಸಿನಲ್ಲಿದ್ದ ನನಗೆ ಯಾವ ಆಶ್ಚರ್ಯ ಅನ್ನಿಸುತ್ತಿರಲಿಲ್ಲ. ಆದರೆ ಈಗ ಅವನು ಹೇಳಿದ ಪ್ರತಿ ಮಾಹಿತಿ ಎಲ್ಲಾದರೂ ಸಿಗುತ್ತಾ ಅಂತಾ ಹುಡುಕಾಡಿದರೆ ಫಲಿತಾಂಶ ಮಾತ್ರ ಶೂನ್ಯ. ಅವನಿಗೆ ಅವನ ತಂದೆ ಹೇಳುತ್ತಿದ್ದನಂತೆ. ಯಾಕೆ ಇವೆಲ್ಲ ಲಿಖಿತ ರೂಪದಲ್ಲಿ ದಾಖಲಾಗಲಿಲ್ಲವೋ ಗೊತ್ತಿಲ್ಲ. ಇಂದು ಆಚರಿಸುತ್ತಿರುವ ಮಣ್ಣೆತ್ತಿನ ಅಮಾವಾಸ್ಯೆಯ ಬಗ್ಗೆಯೂ ಎಲ್ಲೂ ದಾಖಲಿಸಿದ ಮಾಹಿತಿ ಹೇಳಿದ್ದ ನನ್ನ ಅಜ್ಜ. ಅದನ್ನೇ ನಿಮ್ಮ ಮುಂದೆ ಒಪ್ಪಿಸುವೆ ಇಷ್ಟೇ.

ಕಾರ ಹುಣ್ಣಿಮೆಯ ನಂತರ ಬರುವುದೇ ಮಣ್ಣೆತ್ತಿನ ಅಮವಾಸ್ಯೆ. ಈ ಅಮವಾಸ್ಯೆಯಂದು ರೈತರು ಹೊಲಕ್ಕೆ ಹೋಗಿ ಜಿಗುಟಾಗಿರುವ ಮಣ್ಣನ್ನು ಮನೆಗೆ ತಂದು, ಅದರಿಂದ ಜೋಡಿ ಎತ್ತುಗಳನ್ನು ಮಾಡುತ್ತಾರೆ. ಮಣ್ಣಿನ ಎತ್ತುಗಳಿಗೆ ಸಿಂಗಾರ ಮಾಡುತ್ತಾರೆ. ಬಳಿಕ ದೇವರ ಕೋಣೆಯಲ್ಲಿಟ್ಟು ಪೂಜಿಸುತ್ತಾರೆ. ಇದು ಸಾಮಾನ್ಯವಾಗಿ ಜ್ಯೇಷ್ಠ ಮಾಸದ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ, ರೈತರು ತಮ್ಮ ಕೃಷಿ ಚಟುವಟಿಕೆಗಳಲ್ಲಿ ಎತ್ತುಗಳ ಪಾತ್ರವನ್ನು ಸ್ಮರಿಸಿ, ಅವುಗಳನ್ನು ಪೂಜಿಸುತ್ತಾರೆ. ಇಂದು ರೈತ ಕುಟುಂಬಗಳ ಮನೆಯಲ್ಲಿ ತರಹೇವಾರಿ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಹೋಳಿಗೆ, ಹುಗ್ಗಿ, ಬೆಲ್ಲದ ಬೇಳೆ, ಕರಿಗಡಬು, ಸಂಡಿಗೆ, ಹಪ್ಪಳ, ಭಜಿ ಇತ್ಯಾದಿಗಳನ್ನು ಮಾಡಿ ಮಣ್ಣೆತ್ತಿಗೆ ನೈವೇದ್ಯ ಮಾಡಲಾಗುತ್ತದೆ. ನಂತರ ಸಾಯಂಕಾಲ ಅವುಗಳನ್ನು ಮೆರವಣಿಗೆಯಲ್ಲಿ ಹೋಗಿ ವಿಸರ್ಜಿಸಿ ಬರುತ್ತಾರೆ.

ಇದು ನಮಗೆಲ್ಲ ಗೊತ್ತಿರುವ ಮಾಹಿತಿ. ಆದರೆ ನನ್ನಜ್ಜ ಹೇಳಿದ್ದೆ ಬೇರೆ. ನಿಜವಾಗಲೂ ಇದು ರೈತರ ಹಬ್ಬ ಅಲ್ಲವಂತೆ! ಬದಲಾಗಿ ರೈತರಿಗೆ ಸಹಾಯ ಮಾಡುವ ಕೂಲಿ ಕಾರ್ಮಿಕರ ಹಬ್ಬವಂತೆ. ಮೊನ್ನೆಯ ಹುಣ್ಣಿಮೆಯಂದು ರೈತರು ಎತ್ತುಗಳಿಗೆ ಪೂಜಿಸಿ ಕರಿ ಹರಿದು ಕಾರ ಹುಣ್ಣಿಮೆಯನ್ನು ವಿಜೃಂಭಣೆಯಿಂದ ಆಚರಿಸಿದ್ದಕ್ಕೆ ಜಮೀನುಗಳಲ್ಲಿ ಕೂಲಿ ಮಾಡುವ ಮತ್ತು ರೈತನಿಗೆ ಸಹಾಯ ಮಾಡುವ ಕಂಬಾರ, ಕಮ್ಮಾರ, ಚಮ್ಮಾರ, ಬಡಿಗ ಹೀಗೆ ಎಲ್ಲರೂ ಸೇರಿ ವಿಚಾರ ವಿನಿಮಯ ಮಾಡಿದಾಗ;

ರೈತ ಮೊನ್ನೆಯ ಹುಣ್ಣಿಮೆಯಂದು ಎತ್ತುಗಳಿಗೆ ಸಿಂಗಾರ ಮಾಡಿ ವೈಭವದಿಂದ ಹಬ್ಬ ಆಚರಿಸಿದ. ಆದರೆ, ನೆಲ ಮೂಲದಿಂದ ಬಂದ ನಾವು ರೈತರಲ್ಲ. ಬದಲಾಗಿ ಕೇವಲ ರೈತನ ಸಹಾಯಕರು ನಾವು. ನಮ್ಮಲ್ಲಿ ಎತ್ತುಗಳಿಲ್ಲ. ಏನು ಮಾಡೋಣ?

ಎಂದರಂತೆ. ಆಗ ”ನೀವೂ ನೆಲಮೂಲದ ಮಕ್ಕಳೇ. ಎತ್ತಿಗೆ ಜೀವಕಳೆ ತುಂಬುವಂತೆ ರೈತನ ಜಮೀನಿನ ಮಣ್ಣು ತೆಗೆದುಕೊಂಡು ಎತ್ತುಗಳನ್ನು ಮಾಡಿ ತುಂಬಾ ವಿಜೃಂಭಣೆಯಿಂದ ಹಬ್ಬ ಆಚರಿಸಿ. ಭಕ್ಷ್ಯ ಭೋಜನ ಮಾಡಿ ನಿಮ್ಮ ಮನೆಗೆ ವರ್ಷವಿಡೀ ದಣಿದ ರೈತನನ್ನು ಕರೆದು ಊಟ ಮಾಡಿಸಿ. ನಂತರ ಅದೇ ಭೂಮಿಯಲ್ಲಿ ಮಣ್ಣಿನ ಎತ್ತುಗಳನ್ನು ಪೂಜಿಸಿ ಇಟ್ಟು ಬನ್ನಿ. ಮುಂಗಾರು ಮಳೆ ಬಂದಾಗ ನೀವಿಟ್ಟ ಮಣ್ಣಿನ ಎತ್ತುಗಳಿಗೆ ನೀರುಣಿಸಿ ಮತ್ತೆ ಮಣ್ಣಲ್ಲಿ ಮಣ್ಣಾಗಿಸುತ್ತದೆ ಅಂತಾ ತೀರ್ಮಾನಿಸಿ ಮಣ್ಣೆತ್ತಿನ ಅಮಾವಾಸ್ಯೆ ಆಚರಿಸಲಾಗುತ್ತಿದೆ ಅಂತೆ.

ಇದೇ ಅಜ್ಜ ಹೇಳಿದ ಮಣ್ಣೆತ್ತಿನ ಅಮಾವಾಸ್ಯೆ ಬೆಳೆದು ಬಂದ ಕಥೆ.

ಡಾ. ಶರಣು ಪಾಟೀಲ,
ಪ್ರಾಂಶುಪಾಲರು,
ಸರ್ಕಾರಿ ಪ್ರಥಮ ದರ್ಜೆ ಮಾದರಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ವಸತಿ ವಿದ್ಯಾಲಯ,
ಹಡಲಗೇರಿ,
ಮುದ್ದೆಬಿಹಾಳ ತಾಲೂಕ,
ವಿಜಯಪುರ ಜಿಲ್ಲೆ.
ಮೋಬೈಲ್. ಸಂ. 94809 94142

ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನಸಾಹಿತ್ಯ ಮಂದಾರ ಫೌಂಡೇಶನ್ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in

Loading

Leave a Reply