
ಕೆರೆಯ ನೀರು, ಮರದ ಪುಷ್ಪ ಧರಿಸಿದಡೇನು ಅಯ್ಯಾ,
ಆಗುವುದೆ ಆಗುವುದೆ ಲಿಂಗಾರ್ಚನೆ?
ನೀರೆರೆಯಲಿಕ್ಕಾತನೇನು ಬಿಸಿಲಿನಿಂದ ಬಳಲಿದನೆ?
ಪುಷ್ಪದಿಂದ ಧರಿಸಲಿಕ್ಕಾತನೇನು ವಿಟರಾಜನೆ?
ನಿನ್ನ ಮನವೆಂಬ ನೀರಿಂದ,
ಜ್ಞಾನವೆಂಬ ಪುಷ್ಪದಿಂದ ಪೂಜಿಸಬಲ್ಲಡೆ
ಭಕ್ತನೆಂಬೆ, ಮಹೇಶ್ವರನೆಂಬೆ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-439/ವಚನ ಸಂಖ್ಯೆ-1401)
ನಮ್ಮ ಪರಂಪರಾಗತ ಪೂಜಾ ವಿಧಾನಗಳು ಬಹುತೇಕ ಬಾಹ್ಯಾಡಂಬರದ ಆಚರಣೆಗಳಾಗಿವೆ. ಇಂಥ ಪೂಜೆಗಳು ಪೂಜಿಸುವವರ ಒಳಗನ್ನು ಬೆಳಗಿಸುವುದಕ್ಕಿಂತ ಹೆಚ್ಚಾಗಿ, ನೋಡುವವರ ಕಣ್ಣುಗಳಿಗೆ ಆಕರ್ಷಕ ಮತ್ತು ವರ್ಣರಂಜಿತವಾಗಿ ಕಾಣಬೇಕೇಂಬ ಬಯಕೆಯಿಂದಲೇ ನಡೆಯುವಂಥವು. ನಮ್ಮ ಕೋಟಿ ಕೋಟಿ ದೇವಾಲಯಗಳಲ್ಲಿರುವ ಮೂರ್ತಿಗಳಿಗೆ ನಿತ್ಯವೂ ನಡೆಸಲಾಗುವ ವಿವಿಧ ಪೂಜೆ, ಅಭಿಷೇಕ ಮತ್ತು ಮಾಡುವ ಹೂವಿನ ಅಲಂಕಾರಗಳು ಇದನ್ನೇ ಸಾಕ್ಷೀಕರಿಸುತ್ತವೆ. ಇದು ಎಲ್ಲ ಧರ್ಮದ ದೇವರುಗಳ ಪೂಜೆಯಲ್ಲೂ ಸಾಮಾನ್ಯವಾಗಿ ನಡೆಯುತ್ತ ಬಂದಿರುವ ಹಾಗೂ ಈಗಲೂ ನಡೆಯುತ್ತಿರುವ ವಿದ್ಯಮಾನ. ಇದರ ಮೂಲ ಬೇರುಗಳು ವರ್ಣಾಶ್ರಮಧರ್ಮದ ‘ಪೂಜಾವಿಧಿ’ಗಳಲ್ಲಿಯೇ ಇರುವುದನ್ನು ಅಲ್ಲಗಳೆಯಲಾಗದು.
ಪೂಜೆಯ ನಿಜವಾದ ಅರ್ಥವನ್ನೇ ಅರಿಯದೆ, ಬಾಹ್ಯಾಡಂಬರದಿಂದ ನಡೆಸಲಾಗುವ ಇಂಥ ಆಚರಣೆಗಳ ಬಗ್ಗೆ ಹನ್ನೆರಡನೆಯ ಶತಮಾನದ ಶರಣರು ಕಟುವಾದ ವಿರೋಧ ವ್ಯಕ್ತಪಡಿಸುತ್ತಾರೆ. ಇದು ಅವರ ವೈಚಾರಿಕ ಮನೋಧರ್ಮಕ್ಕೆ ಸಾಕ್ಷಿ. ಇಂಥ ಪೂಜೆಗಳಿಗೆ ಕೇವಲ ವಿರೋಧವನ್ನು ಮಾತ್ರ ವ್ಯಕ್ತಪಡಿಸಿ ಸುಮ್ಮನಾಗದ ಅವರು, ನಿಜವಾದ ಪೂಜೆ ನಡೆಯಬೇಕಾದ ಕ್ರಮ ಹೇಗೆ ಎಂಬುದರ ಬಗೆಗೆ ಅರ್ಥಪೂರ್ಣವಾದ ತಿಳುವಳಿಕೆಯನ್ನೂ ಕೊಡುತ್ತಾರೆ. ತಪ್ಪುಗಳ ನಿರಾಕರಣೆಯ ಜೊತೆಗೆ ಪರ್ಯಾಯ ಮಾರ್ಗವನ್ನೂ ಸೂಚಿಸುವ ಶರಣರ ಈ ಕ್ರಮವೇ ಒಂದು ಚಲನಶೀಲ ಹಾಗೂ ವಿನೂತನ ವ್ಯವಸ್ಥೆಯ ನಿರ್ಮಾಣದ ದಾರಿ. ಈ ಬಗೆಯ ಪರಂಪರಾಗತ ಪೂಜೆಗೆ ವಿರೋಧ ವ್ಯಕ್ತಪಡಿಸುತ್ತಲೇ, ನಿಜವಾದ ಪೂಜೆಯ ಕ್ರಮವನ್ನೂ ತಿಳಿಸುತ್ತದೆ ಶಿವಯೋಗಿ ಸಿದ್ಧರಾಮೇಶ್ವರರ ಪ್ರಸ್ತುತ ವಚನ. ಅದು ಈ ವಚನದ ಮುಖ್ಯ ಆಶಯ ಕೂಡ.
ಪೂಜೆಗಳಲ್ಲಿ ಸಾಮಾನ್ಯವಾಗಿ ಮೊದಲು ಅಭಿಷೇಕವಿರುತ್ತದೆ. ಇದಕ್ಕೆ ಬಳಸುವ ನೀರು (ಅಥವಾ ಇನ್ನಿತರ ದ್ರವವಸ್ತುಗಳು) ಪೂಜಿಸುವವನ ಸ್ವಂತದ ಸ್ವತ್ತಲ್ಲ. ಆ ನೀರು ಕೆರೆಯಿಂದ ತಂದದ್ದು. ಇನ್ನೂ ಮುಂದೆ ಹೋಗಿ ಹೇಳಬಹುದಾದರೆ, ಅದು ಪಂಚಭೂತಗಳಲ್ಲಿ ಒಂದಾದ ‘ಅಪ್’ ತತ್ವದ ಕೊಡುಗೆ. ಇನ್ನು, ದೇವರಿಗೆ ಪೂಜೆಯಲ್ಲಿ ಏರಿಸುವ ಹೂವಾದರೂ ಅವನದೇ? ಖಂಡಿತ ಅಲ್ಲ. ಅದು ಮರ ಅಥವಾ ಬಳ್ಳಿಗಳಿಂದ ತಂದದ್ದು. ಭೂಮಿ, ನೀರು, ಬಿಸಿಲು, ವಾತಾವರಣ ಎಲ್ಲವೂ ಸಮನ್ವಯದಿಂದ ಕೂಡಿದಾಗ ಆ ಹೂವು ಅರಳಿರುತ್ತದೆ. ಪೂಜೆ ಮಾಡುವವ ಅದನ್ನು ಹರಿದು ತಂದಿದ್ದಾನೆ ಮಾತ್ರ. ಹೀಗೆ ಯಾರದೋ ವಸ್ತುಗಳನ್ನು ತಂದು, ಅವು ತನ್ನವೇ ಎಂಬಂತೆ ಅರ್ಪಿಸಿ, ಲಿಂಗಪೂಜೆ ಮಾಡಿದರೆ ಅದು ಅರ್ಚನೆ ಆಗಲು ಸಾಧ್ಯವೇ? ಎಂಬುದು ಸಿದ್ಧರಾಮೇಶ್ವರರ ಮೊದಲ ಪ್ರಶ್ನೆ.
ಇಲ್ಲಿಂದ ವಚನ ಮತ್ತೊಂದು ಪ್ರಮೇಯದತ್ತ ಸಾಗುತ್ತದೆ. ಯಾರಿಗಾದರೂ ನೀರು ಹಾಕುವುದು ಯಾವಾಗ? ಬಳಲಿ ಬೆಂಡಾಗಿ ಬಂದಾಗ ಅಲ್ಲವೆ? ಈ ವಾಸ್ತವವನ್ನೇ ಗಮನದಲ್ಲಿಟ್ಟುಕೊಂಡು ಸಿದ್ಧರಾಮೇಶ್ವರರು ಕೇಳುವ ಮುಂದಿನ ಪ್ರಶ್ನೆ ಏನೆಂದರೆ, ನೀನು ಹೀಗೆ ಲಿಂಗಕ್ಕೆ ನೀರು ಹಾಕುವಿಯಲ್ಲ? ಈ ಲಿಂಗದೇವನೇನಾದರೂ ಬಿಸಿಲಿಂದ ಬಳಲಿ ಬಂದಿದ್ದಾನೆಯೇ? ಎಂದು. ಖಂಡಿತವಾಗಿಯೂ ಲಿಂಗದೇವ ಬಿಸಿಲಿಂದ ಬಳಲಿ ಬಂದವನಲ್ಲ. ಹಾಗಾದರೆ ಹೀಗೆ ನೀರು ಹಾಕುವುದೂ ಅನಗತ್ಯ ಎಂದಾಯಿತು. ಇನ್ನು, ಹೂವನ್ನು ಏರಿಸುವುದು ಇನ್ನೂ ಮೋಜಿನ ಸಂಗತಿ! ವೇಶ್ಯೆಯರ ಹತ್ತಿರ ಹೋಗುವ ವಿಟರು ಸಾಮಾನ್ಯವಾಗಿ ಸುವಾಸನೆಯ ಹೂವುಗಳನ್ನು ಇಟ್ಟುಕೊಂಡಿರುತ್ತಾರೆ. ಆ ಹೂವುಗಳು ಅನೈತಿಕ ಸಂಬಂಧದ ಬೆಸುಗೆಯ ಮಧ್ಯವರ್ತಿಗಳೇ ಸರಿ. ಲಿಂಗದೇವನೇನಾದರೂ ಆ ರೀತಿಯಲ್ಲಿ ವಿಟನೇ? ಎಂಬುದು ಸಿದ್ಧರಾಮೇಶ್ವರರ ಮತ್ತೊಂದು ಪ್ರಶ್ನೆ. ಇದು ಬರೀ ಪ್ರಶ್ನೆಯಲ್ಲ; ಕಟು ವ್ಯಂಗ್ಯ.
ಒಟ್ಟಾರೆ ಅರ್ಥವೆಂದರೆ, ಈ ರೀತಿ ಬಾಹ್ಯದ ಆಚರಣೆಗಳ ಮೂಲಕ ಪೂಜೆ ಮಾಡುವುದು ಅರ್ಥರಹಿತ ಕ್ರಿಯೆ ಎಂದು. ಇದನ್ನು ಸ್ಪಷ್ಟೀಕರಿಸಿ ತೋರಿಸಲು ಸಿದ್ಧರಾಮೇಶ್ವರರು ಎರಡೂ ಉದಾಹರಣೆಗಳನ್ನು ಕೊಡುತ್ತಾರೆ. ಹಾಗಾದರೆ, ನಿಜವಾದ ಪೂಜೆಯನ್ನು ಹೇಗೆ ಮಾಡಬೇಕು? ಅದನ್ನೇ ವಚನದ ಮುಂದಿನ ಭಾಗದಲ್ಲಿ “ನಿನ್ನ ಮನವೆಂಬ ನೀರಿಂದ, ಜ್ಞಾನವೆಂಬ ಪುಷ್ಪದಿಂದ ಪೂಜಿಸಬಲ್ಲಡೆ ಭಕ್ತನೆಂಬೆ, ಮಹೇಶ್ವರನೆಂಬೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ” ಎಂದು ಅತ್ಯಂತ ಸ್ಪಷ್ಟವಾಗಿ ವಿವರಿಸುತ್ತಾರೆ. ಈ ಮಾತುಗಳಿಗೆ ಅರ್ಥವಿವರಣೆ ಬೇಕಾಗುವುದೇ ಇಲ್ಲ. ಅಷ್ಟು ಸರಳ ಮತ್ತು ಸುಲಭವಾಗಿವೆ ಅವು.
ಮನಸ್ಸನ್ನು ಶುದ್ಧವಾಗಿಟ್ಟುಕೊಂಡು, ಅಂದರೆ ಅರಿವನ್ನು ಜಾಗೃತ ಮಾಡಿಕೊಂಡು ನಡೆಸುವ ಪೂಜೆಯೇ ನಿಜವಾದ ಪೂಜೆ. ಅದೊಂದು ಬಗೆಯ ಆಂತರಿಕ ಅನುಸಂಧಾನ. ಇಂಥ ಪೂಜೆಯನ್ನು ಮಾಡುವವನೇ ನಿಜವಾದ ಭಕ್ತ. ಸಿದ್ಧರಾಮೇಶ್ವರರ ಪ್ರಕಾರ ಆ ರೀತಿ ಪೂಜೆ ಮಾಡುವವ ಕೇವಲ ಭಕ್ತ ಮಾತ್ರವಲ್ಲ, ಆತ ದೇವರೇ ಆಗುತ್ತಾನೆ. ಪೂಜೆಗೆ ಯಾವುದೇ ಬಾಹ್ಯ ಪರಿಕರಗಳ ಅಗತ್ಯವಿಲ್ಲ; ಪರಿಶುದ್ಧ ಮನಸ್ಸಿನಿಂದ ಮಾಡಿದರೆ ಸಾಕು ಎಂಬುದೇ ಇಲ್ಲಿರುವ ಪ್ರಧಾನ ಆಶಯ. “ಸಮತ್ವಂ ಯೋಗಮುಚ್ಚತೇ” ಎನ್ನುತ್ತಾರೆ ಯೋಗ ಮಾರ್ಗಿಗಳು. ಸಮತ್ವದ ಮನಸ್ಸೇ ಯೋಗದ ಮಾರ್ಗ ಹಾಗೂ ಗುರಿಯಲ್ಲವೆ? ಇದರರ್ಥ ಸಮತ್ವದ ಮನಸ್ಸಿನಿಂದ ಮಾಡುವುದೇ ನಿಜವಾದ ಪೂಜೆ. ಅದಕ್ಕೆ ಬಾಹ್ಯ ಪರಿಕರಗಳ ಅಗತ್ಯವೇ ಇರದು.
ಈ ವಚನದ ಮೊದಲ ಪಂಕ್ತಿಯಲ್ಲಿ “ಧರಿಸಿದಡೇನು?” ಎಂಬ ವಿಶಿಷ್ಟ ಶಬ್ದ ಪ್ರಯೋಗವೊಂದಿದೆ. ಇದು ಎರಡು ಅರ್ಥಗಳನ್ನು ಹೊರಡಿಸುವ ಶಬ್ದ. ಸಾಮಾನ್ಯವಾಗಿ ಪೂಜೆ ಮಾಡುವಾಗ ಜನರು ತಾವು ಮೊದಲು ನೀರಲ್ಲಿ ಜಳಕ ಮಾಡಿ ಕಿವಿ, ಜುಟ್ಟು ಮೊದಲಾದ ಕಡೆಗಳಲ್ಲಿ ಹೂವುಗಳನ್ನು ಹಾಕಿಕೊಂಡು ಕುಳಿತುಕೊಳ್ಳುತ್ತಾರೆ. ಈ ಅರ್ಥದಲ್ಲಿ ಯೋಚಿಸಿದರೂ ಹಾಗೆ “ಧರಿಸಿ” ಮಾಡುವ ಪೂಜೆ ನಿರರ್ಥಕ ಎಂಬ ಅರ್ಥವೇ ಹೊರಡುತ್ತದೆ. ಮತ್ತೊಂದು ಅರ್ಥದಲ್ಲಿ ಲಿಂಗಕ್ಕೆ ಕೆರೆಯ ನೀರನ್ನು ಎರೆದು, ಮರದ ಪುಷ್ಪಗಳನ್ನು ಏರಿಸಿದರೂ ಅರ್ಥವಿಲ್ಲ ಎಂಬ ಅರ್ಥವೇ ಹೊರಡುತ್ತದೆ. ಎರಡೂ ಅರ್ಥದಲ್ಲಿ ಬಾಹ್ಯದ ಪೂಜೆ ನಿರರ್ಥಕ ಎಂಬ ಸತ್ಯವೇ ಪ್ರತಿಪಾದಿತವಾಗಿದೆ.
ಶರಣರ ಪರಿಕಲ್ಪನೆಯ ಪೂಜೆ ಆಡಂಬರದ್ದಲ್ಲ; ಅದೊಂದು ಪವಿತ್ರ ಕಾಯಕ. ಪವಿತ್ರ ಕಾಯಕ ಮಾಡುವಾಗ ಅದರ ಪರಿಕರಗಳೆಲ್ಲವೂ ಪವಿತ್ರವೇ ಆಗಿರಬೇಕೆಂಬುದು ಒಂದು ಅಗತ್ಯವಾದರೆ, ಅವೆಲ್ಲವೂ ತನ್ನ ಸ್ವಂತದವೇ ಆಗಿರಬೇಕು, ಯಾರಿಂದಲೂ ಎರವಲು ತಂದ ಸಾಮಗ್ರಿಗಳಾಗಿರಬಾರದು ಎಂಬುದು ಮತ್ತೊಂದು ನೀತಿ. ಒಂದರ್ಥದಲ್ಲಿ ಪೂಜೆ ಎಂಬುದು ನಮ್ಮ ಮನಸ್ಸಿನ ಏಕಾಗ್ರತೆ ಸಾಧಿಸಲು ಮತ್ತು ಆ ಮೂಲಕ ನಮ್ಮೊಳಗಿನ ಸಕಾರಾತ್ಮಕ ಭಾವನೆಗಳನ್ನು ಜಾಗೃತ ಮಾಡಿಕೊಂಡು ನಿಜವಾದ ಶರಣರಾಗಲು ಮತ್ತು ಮನುಷ್ಯರಾಗಲು ಅನುಸರಿಸುವ ಪವಿತ್ರ ಅನುಸಂಧಾನ. ಇದು ವೈಚಾರಿಕ ನೆಲೆಯಲ್ಲಿ ನಡೆಯಬೇಕಾದ ಕ್ರಮ. ಇಂಥ ಪೂಜೆಯನ್ನೇ ಶರಣರು ಪ್ರತಿಪಾದಿಸಿದ್ದು. ಸಿದ್ಧರಾಮೇಶ್ವರರ ಈ ವಚನ ಆ ಬಗೆಯ ಪೂಜೆಗೆ ರಹದಾರಿ ತೋರಿಸುತ್ತದೆ.
ಡಾ. ಬಸವರಾಜ ಸಾದರ.
ನಿಲಯದ ನಿರ್ದೇಶಕರು (ನಿ), ಆಕಾಶವಾಣಿ, ಬೆಂಗಳೂರು.
303, ಎಸ್. ಎಲ್. ವಿ. ತೇಜಸ್, 3 ನೇ ಮಹಡಿ,
2 ನೇ ಅಡ್ಡ ರಸ್ತೆ, ಭುವನೇಶ್ವರಿ ನಗರ,
(ಹೆಬ್ಬಾಳ-ಕೆಂಪಾಪೂರ)
ಬೆಂಗಳೂರು – 560 024
ಮೋಬೈಲ್ ಸಂ. +91 98869 85847
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನಸಾಹಿತ್ಯ ಮಂದಾರ ಫೌಂಡೇಶನ್ ದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in
ಬಹಳ ಪ್ರಸ್ತುತ ವಚನ . ವಿಶ್ಲೇಷಣೆ ಕೂಡಾ ಸರಳ ರಸುಂದರವಾಗಿದೆ. ಪೂಜೆ ಅಂದರೆ ಆಡಂಬರದಿಂದ ಹೂ ಪತ್ರಿ ನೀರು ಹಾಕುವುದು ಪತ್ರಿ ಸಲುವಾಗಿ ಹೂವಿನ ಸಲುವಾಗಿ ಸುಂದರ ಮರಗಳನ್ನೇ ಹಾಳು ಮಾಡುವುದನ್ನು ನೋಡುತ್ತೇವೆ. ಶರಣರ ತತ್ವ ಹೇಳುವ ಗುಡಿ ಮಠಗಳಲ್ಲಿಯೇ ಇಂಥ ಡಂಬಾಚಾರದ ಪೂಜೆಗಳು ನಡೆಯುತ್ತವೆ. ಅದನ್ನು ನೋಡಿದಾಗ ಮನಸ್ಸಿಗೆ ಖೇದವೆನಿಸುತ್ತದೆ ಸರ್. ಏನು ಮಾಡುವುದು? ಶರಣರು ನಮ್ಮವರು ಎಂದು ಹೇಳುತ್ತವೆ ಆದರೆ ಆಚರಣೆ ಮಾತ್ರ ಶೂನ್ಯ. ನಮಸ್ಕಾರ