ಗುರು ಪೂರ್ಣಿಮೆಗೊಂದು ಗುರು ಕರುಣೆಯ ಪ್ರಸಾದ | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಜಗತ್ತಿನಲ್ಲಿ ಗುರುವಿನ ಸ್ಥಾನ ಅತ್ಯಂತ ಮಹತ್ವಪೂರ್ಣವಾದದ್ದು. ಅಂಧಕಾರವನ್ನು ಕಳೆದು ಜ್ಞಾನದ ಬೆಳಕನ್ನು ನೀಡಿ ಪೊರೆಯುವ ಸದ್ಗುರುವಿನ ಮಹಿಮೆ ಅಪಾರವಾದದ್ದು. ಗುರು ಎಂಬ ಶಬ್ದವೇ ಈ ಮಾತನ್ನು ಪುಷ್ಟೀಕರಿಸುತ್ತದೆ. “ಗು” ಎಂದರೆ ಕತ್ತಲು, “ರು” ಎಂದರೆ ಹೋಗಲಾಡಿಸು ಎಂಬುದಾಗಿದ್ದು “ಗುರು ಎಂದರೆ ಅಜ್ಞಾನದ ಕತ್ತಲನ್ನು ಕಳೆದು ಸುಜ್ಞಾನವೆಂಬ ಬೆಳಕನ್ನು” ನೀಡುವವನು.

ಮಾನವ ಸಮುದಾಯದ ಅಭಿವೃದ್ಧಿಗೆ ಧರ್ಮ ಮತ್ತು ಧರ್ಮಾಚರಣೆಗಳು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತವೆ. “ಅರಿವು” ಮತ್ತು “ಆಚಾರ” ಯಾವುದೇ ಧರ್ಮದ ಎರಡು ಕಣ್ಣುಗಳು. ಮಾನವರಲ್ಲಿ “ಮರಹು” ಎಂಬುದು ಹೆಚ್ಚು. ಇದನ್ನೇ ನಮ್ಮ ಶರಣರು “ಮಾಯೆ” ಎಂದು ಕರೆದಿದ್ದಾರೆ. ಮರಹು ಎಂಬ ಮಾಯೆ ಅವರಿಸಿ ಮೈಮನ ಅರಿವಿನಿಂದ ದೂರವಾಗಲು ಕಾರಣವಾಗುತ್ತದೆ. ಮಾನವರ ಎಲ್ಲ ಕಷ್ಟ-ಕಾರ್ಪಣ್ಯಗಳಿಗೆ ಮಾಯೆ-ಭ್ರಮೆಗಳು ಕಾರಣವಾಗುತ್ತವೆ. ಇಂತಹ ಮಾಯೆ (ಅಜ್ಞಾನ) ಯನ್ನು ಕಳೆದು ಮಾನವರಲ್ಲಿ ನಿಜವಾದ ಅರಿವು (ಸಾತ್ವಿಕ ಶಕ್ತಿ) ಜಾಗೃತಗೊಳಿಸಲು ಜೀವಾತ್ಮನಿಗೆ ಗುರುವಿನ ಬೋಧನಾಮೃತದ ಅವಶ್ಯಕತೆ ಇದೆ. ಈ ಕಾರಣದಿಂದಾಗಿ ಜೀವಾತ್ಮ ಗುರುವಿನ ಕರುಣೆಯನ್ನು ಬಯಸುತ್ತಾನೆ. ಗುರುವಿನ ಕರುಣೆ ಪಡೆದ ಜೀವಾತ್ಮ ಮಾಂಸಪಿಂಡವಾಗಿದ್ದವನು ಮಂತ್ರಪಿಂಡವಾಗಿ ಮರುಹುಟ್ಟು ಪಡೆಯುತ್ತಾನೆ. ಅದಕ್ಕೆಂದೇ “ಪೂಜಾಮೂಲ ಗುರುಪಾದ, ಮಂತ್ರಮೂಲ ಗುರುವಾಕ್ಯ, ಮುಕ್ತಿಮೂಲ ಗುರುಕರುಣೆ” ಎನ್ನಲಾಗಿದೆ.

ಗುರುವನ್ನು ಜಂಗಮಲಿಂಗ, ಚರಲಿಂಗ ಎಂದು ಕರೆಯಲಾಗಿದೆ. ನಿಜವಾದ ಗುರು ತನ್ನಲ್ಲಿರುವ ಜ್ಞಾನವನ್ನು ತನ್ನಲ್ಲೇ ಕೇಂದ್ರೀಕರಿಸಿಕೊಳ್ಳದೇ ಅದನ್ನು ಹಂಚುತ್ತಾ ಹೋಗುವುದರಿಂದ ಗುರುವನ್ನು ಜಂಗಮಲಿಂಗ ಎಂದು ಕರೆಯಲಾಗಿದೆ. ಉಪಾಸ್ಯ ವಸ್ತುಗಳನ್ನು ಆರು ವಿಧದಲ್ಲಿ ವಿಂಗಡಿಸಬಹುದು.

ದೇವತಾ ಪೂಜೆ

  1. ಭೂತ ಪೂಜೆ (ಭೂಮಿ, ನೀರು, ವಾಯು, ಅಗ್ನಿ, ಆಕಾಶ ಪೂಜೆ)
  2. ಪ್ರಾಣಿ ಪೂಜೆ (ಚೇತನ ಪೂಜೆ)
  3. ವತೃ ಪೂಜೆ (ಪ್ರಾಣಿಗಿಂತ ಮಾನವ ಶೇಷ್ಠ / ಹಿರಿಯರ ಪೂಜೆ)
  4. ಗುರು ಪೂಜೆ (ವಿಭೂತಿ ಪೂಜೆ, ಭೂತಿಯಿಂದ ವಿಭೂತಿಯಾದ ವಿಭೂತಿಯಾದ ವಿಭೂತಿ ಪುರುಷರ ಪೂಜೆ)
  5. ದೇವ ಪೂಜೆ (ಇಷ್ಟಲಿಂಗ / ಮಹಾಲಿಂಗ ಪೂಜೆ)

ಈ ಆರೂ ಪೂಜೆಗಳಲ್ಲಿ ಮುಖ್ಯವಾಗಿ ಗುರು ಪೂಜೆಗೆ ಅಂತಿಮದಲ್ಲಿ ಇಷ್ಟಲಿಂಗ / ಮಹಾಲಿಂಗ ಪೂಜೆಗೆ ಮಹತ್ವವಿದೆ. ಜೀವಾತ್ಮನು ಒಳಗಿರುವ ಪರಮಾತ್ಮನ ಇರುವನ್ನು ಇಷ್ಟಲಿಂಗದ ರೂಪದಲ್ಲಿ ಉಪಾಸೆ, ಅಂಗ-ಲಿಂಗ ಒಂದಾಗುವ ಲಿಂಗಾಂಗ ಸಾಮರಸ್ಯವನ್ನು ಗುರು ಕರುಣೆಯಿಂದ ಪಡೆದುಕೊಳ್ಳುತ್ತಾನೆ. ಈ ಕಾರಣದಿಂದ ಶರಣ ಧರ್ಮದಲ್ಲಿ ಗುರುವಿನ ಕರುಣೆ ಎರಡು ರೂಪದಲ್ಲಿ ದೊರೆಯುತ್ತದೆ. ಒಂದು ಆತ್ಮ ಬೋಧನೆಯ ರೂಪದಲ್ಲಿ ಇನ್ನೊಂದು ಶಿವಯೋಗ ಸಾಧನೆಗೆ ಇಷ್ಟಲಿಂಗ ರೂಪದಲ್ಲಿ ತನ್ನೊಳಗೆ ಆವರಿಸಿಕೊಳ್ಳುವ ಮಾಯೆಯೆಂಬ ಮರುಹಿನಿಂದ ಮುಕ್ತನಾಗಲು ಬಯಸುವ ಜೀವಾತ್ಮನು ಗುರುಕರುಣೆಯ ಸ್ಥಲದಲ್ಲಿ ನಿಂತು ಅರುಹು ಪಡೆದುಕೊಂಡು ಸಂಸಾರ ಹೇಯಗೊಳಿಸಿಕೊಂಡು ಮಾಯಾ ಮುಕ್ತನಾಗುತ್ತಾನೆ. ಮಾಯಾ ಮುಕ್ತನಾಗಲು ಬಯಸುವ ಸಾಧಕ ಅಥವಾ ಶಿಷ್ಯನು ಗುರುವಿಗೆ ತನುವನ್ನು ಲಿಂಗಕ್ಕೆ ಮನವನ್ನು ನೀಡುತ್ತಾನೆ. ಗುರುವಿನ ಆಪ್ತ ಶಿಷ್ಯನಾಗಿ ಲಿಂಗದ ಭಕ್ತನಾಗಿ ಸಂಪೂರ್ಣವಾಗಿ ತನ್ನನ್ನು ಗುರು-ಲಿಂಗಕ್ಕೆ ಸಮರ್ಪಿಸಿಕೊಳ್ಳುತ್ತಾನೆ. ಗುರು ಕರುಣೆಯಿಂದ ದೊರೆಯುವ ಬೋಧನೆ ಮತ್ತು ಉಪದೇಶಾಮೃತ ಜೀವಾತ್ಮನನ್ನು ಅಜ್ಞಾನದಿಂದ ಸುಜ್ಞಾನದೆಡೆಗೆ, ಮೃತದಿಂದ ಅಮೃತದೆಡೆಗೆ, ಅಂಧಕಾರದಿಂದ ಬೆಳಕಿನೆಡೆಗೆ, ಅಸತ್ಯದಿಂದ ಸತ್ಯದೆಡೆಗೆ ಕರೆದೊಯ್ಯುತ್ತದೆ. ಗುರುಕರುಣ ಕ್ರಿಯೆಯಲ್ಲಿ ಪಕ್ವವಾಗುವ ಶಿಷ್ಯನ ಪರಮಾವಧಿಯ ಅವಸ್ಥೆಯನ್ನು ಜಂಗಮಮೂರ್ತಿ, ವ್ಯೋಮಕಾಯ, ಮಹಾಶಿವಯೋಗಿ, ಪರಮಜ್ಞಾನಿ, ವೈರಾಗ್ಯಮೂರ್ತಿ ಅಲ್ಲಮ ಪ್ರಭುಗಳ ಒಂದು ವಚನದ ಮೂಲಕ ದರ್ಶಿಸುವ ಪ್ರಯತ್ನ ಇಲ್ಲಿದೆ.

ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದಡೆ
ಆಗಲಿ ಮಹಾಪ್ರಸಾದವೆಂದೆನಯ್ಯಾ
ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ಧಿಯ ಕಲಿಸಿದಡೆ
ಆಗಲಿ ಮಹಾಪ್ರಸಾದವೆಂದೆನಯ್ಯಾ.
ದ್ವಾಪರದಲ್ಲಿ ಶ್ರೀಗುರು ಶಿಷ್ಯಂಗೆ ಝಂಕಿಸಿ ಬುದ್ಧಿಯ ಕಲಿಸಿದಡೆ
ಆಗಲಿ ಮಹಾಪ್ರಸಾದವೆಂದೆನಯ್ಯಾ.
ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸಿದಡೆ
ಆಗಲಿ ಮಹಾಪ್ರಸಾದವೆಂದೆನಯ್ಯಾ.
ಗುಹೇಶ್ವರಾ ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾನು ಬೆರಗಾದೆನು.
(ಸಮಗ್ರ ವಚನ ಸಂಪುಟ: ಒಂದು-2016/ಪುಟ ಸಂಖ್ಯೆ-142/ವಚನ ಸಂಖ್ಯೆ-52)

ಅಲ್ಲಮ ಪ್ರಭುದೇವರ ಈ ವಚನವು ಗುರು-ಶಿಷ್ಯ ಸಂಬಂಧದ ಶ್ರೇಷ್ಠತೆಗೆ ಹಿಡಿದ ಕನ್ನಡಿ. ಈ ವಚನವನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಅರ್ಥೈಸಲಾಗುತ್ತದೆ. ಆದರೆ ಈ ವಚನದ ಒಳನೋಟ ಅದ್ಭುತವಾಗಿದೆ. “ಮಹಾಪ್ರಸಾದ” ಎಂಬ ಪದ ಪುನಃ ಪುನಃ ಪುನರುಕ್ತಿಯಾಗಿ ಗುರುವಿನ ಕರುಣೆಯನ್ನು ಪ್ರತಿನಿಧಿಸುತ್ತದೆ. ಇಲ್ಲಿ ಬಳಸಲ್ಪಟ್ಟಿರುವ ನಾಲ್ಕು ಯುಗಗಳು ಶಿಷ್ಯನ ವಿವಿಧ ಗುಣ ಸ್ವಭಾವಗಳನ್ನು ಪ್ರತಿನಿಧಿಸುತ್ತದೆ.

ಪ್ರಾರಂಭದ ಹಂತದಲ್ಲಿ ಪ್ರಾಪಂಚಿಕ ಮೋಹಪಾಶದಲ್ಲಿ ಸಿಲುಕಿರುವ ಶಿಷ್ಯನನ್ನು ಲಿಂಗಮೋಹಿಯಾಗಿಸುವಲ್ಲಿ ಗುರು ಶ್ರಮಿಸಬೇಕಾಗುತ್ತದೆ. ಶಿಷ್ಯನನ್ನು ಶಿವಪಥಕ್ಕೆ ತರಬೇಕಾದ ಸಂದರ್ಭದಲ್ಲಿ ಅವನನ್ನು ಆವರಿಸಿಕೊಂಡಿರುವ ಮಾಯೆ, ಭ್ರಮೆಗಳನ್ನು ಕಳಚಬೇಕಾದ ಶ್ರೀಗುರು ಶಿಷ್ಯನಿಗೆ ಬಡಿದು, ಬೈದು ಝಂಕಿಸಿ ಬುದ್ಧಯನ್ನು ಕಲಿಸಬೇಕಾಗುತ್ತದೆ. ಇದೇನು ಅಷ್ಟು ಸುಲಭದ ಕೆಲಸವಲ್ಲ. ಗುರುವಿನ ಸಾಮರ್ಥ್ಯವೆಲ್ಲ ಇಲ್ಲಿ ಸ್ರವಿಸುತ್ತದೆ. ಶಿಷ್ಯನ ಹಿತವನ್ನೇ ಬಯಸುವ ಗುರು ಶಿಷ್ಯನಿಗೆ ದಂಡನೆಯನ್ನು ವಿಧಿಸುವುದು ಅನಿವಾರ್ಯವಾಗುತ್ತದೆ. ಇದು ಗುರುಪ್ರೇಮ. ಶಿಲೆ ಮೂರ್ತಿಯಾಗಿವ ಹಂತ.

ಈ ವಚನದ ಅನ್ವಯ ನಾಲ್ಕು ರೀತಿಯ ಶಿಷ್ಯರನ್ನು ಗುರುತಿಸಬಹುದು.

ಕೃತಯುಗದ ಶಿಷ್ಯ: ಸಂಸಾರ ಸುಖ, ಭೋಗ, ವೈಭೋಗದಲ್ಲಿ ಮೈಮರೆತವನು.
ತ್ರೇತಾಯುಗದ ಶಿಷ್ಯ: ತನ್ನ ಶಕ್ತಿ, ಸಾಧನೆಯಲ್ಲಿ ಅನುರಕ್ತನಾದವನು.
ದ್ವಾಪರಯುಗದ ಶಿಷ್ಯ: ಸದಾ ತನ್ನ ಯಶಸ್ಸು, ಕೀರ್ತಿಗಾಗಿ ಹಪ ಹಪಸುವವನು.
ಕಲಿಯುಗದ ಶಿಷ್ಯ: ಸದಾ ಜ್ಞಾನಕ್ಕಾಗಿ ಹಂಬಲಿಸುವವನು. ಗುರು ಸಾನಿಧ್ಯ ಬಯಸಿ ಸಿಜ್ಞಾನಕ್ಕಾಗಿ ಧ್ಯಾನಿಸುವವನು.

ಅಲ್ಲಮ ಪ್ರಭುಗಳು ಈ ವಚನದಲ್ಲಿ ಪ್ರತಿಯೊಂದು ಯುಗವನ್ನು ಸಾಂಕೇತಿಕವಾಗಿ ಬಳಸಿಕೊಂಡಿದ್ದಾರೆ. ಪ್ರತಿಯೊಂದು ಯುಗದ ಧರ್ಮವನ್ನು ಶಿಷ್ಯನ ಗುಣ ಸ್ವಭಾವವಾಗಿ ಚಿತ್ರಿಸುತ್ತಾರೆ. ಕೃತಯುಗವು ಯುಗಗಳಲ್ಲಿ ಪ್ರಥಮ ಯುಗ. ಈ ಯುಗದ ಮಾನವರ ಪ್ರವೃತ್ತಿ ಸುಖ-ಭೋಗ-ಲಾಲಸೆ. ಅದನ್ನು ಶಿಷ್ಯನಿಗೆ ಹೋಲಿಸುತ್ತಾರೆ. ಪ್ರಾಪಂಚಿಕ ಸುಖ-ಭೋಗ-ಲಾಲಸೆಯಲ್ಲಿ ಮುಳುಗಿದ ಶಿಷ್ಯನನ್ನು ಶ್ರೀಗುರು ಬಡಿದು ಬುದ್ಧಿಯನ್ನು ಕಲಿಸಲೇಬೇಕಾಗುತ್ತದೆ. ಬಡಿದು, ಶಿಕ್ಷಿಸಿ ಅವನ ಭೋಗಾಸಕ್ತಿಯನ್ನು ಕಳೆಯಲು ಕರುಣಾಮಯಿಯಾದ ಶ್ರೀಗುರು ಪ್ರಯತ್ನ ಪಡುತ್ತಾನೆ. ಅದರಲ್ಲಿ ಶ್ರೀಗುರು ಯಶಸ್ವಿಯಾಗುತ್ತಾನೆ. ಇದು ನಿಜಕ್ಕೂ ಶ್ರೀಗುರುವಿನ ಕರುಣಪ್ರಸಾದ, ಮಹಾಪ್ರಸಾದ. ಅದನ್ನು ಶಿಷ್ಯನಾದವನು “ಆಗಲಿ ಮಹಾಪ್ರಸಾದ” ಎಂದು ಸ್ವಿಕರಿಸಲೇಬೇಕು.

ಎರಡನೇಯ ಯುಗವಾದ ತ್ರೇತಾಯುಗದಲ್ಲಿ ಶಕ್ತಿ ಮತ್ತು ಸಿದ್ಧಿಗಳ ಸಾಧನೆಯ ಯುಗವಾಗಿತ್ತು. ರಾಮ-ರಾವಣರ ಸಾತ್ವಿಕ-ತಾಮಸಗಳ ಶಕ್ತಿ ಮತ್ತು ಸಿದ್ಧಿ ಸಾಧನೆಗಾಗಿ ಹೋರಾಡಿದ ಯುಗ. ಇದನ್ನೇ ಪ್ರಭುಗಳು ಇನ್ನೊಂದು ವರ್ಗದ ಶಿಷ್ಯರ ಗುಣ ಸ್ವಭಾವಕ್ಕೆ ಹೋಲಿಸುತ್ತಾರೆ. ತನ್ನ ಶಕ್ತಿ-ಸಾಧನೆಯ ಕುರಿತು ಅತಿಯಾದ ಮೋಹ-ಕಾಮನೆ (Over Confidence) ಹೊಂದಿದ ಶಿಷ್ಯನನ್ನು ವಿಮುಖಗೊಳಿಸಿ ಸತ್ಯ ದಾರಿಯೆಡೆಗೆ ತರುವುದು ಗುರುವಿಗೆ ಬಹಳ ಮುಖ್ಯವಾಗುತ್ತದೆ. ಆಗ ಶರೀಗುರು ಶಿಷ್ಯನಿಗೆ ಬೈದು ಬುದ್ಧಿವಾದ ಹೇಳಬೇಕಾಗುತ್ತದೆ. ಆಗ ಶಿಷ್ಯನು ತನ್ನ ಹಿತ ಕಾಪಾಡುವ ಗುರು ಬೈದರೂ ಅವನ ಆ ಕರುಣೆಯ ಪ್ರಸಾದವನ್ನು ಮಹಾಪ್ರಸಾದವೆಂದು ಸ್ವೀಕರಿಸಲೇಬೇಕು ಹಾಗೂ ಸ್ವೀಕರಿಸುತ್ತಾನೆ.

ದ್ವಾಪರ ಯುಗವು ಮೂರನೆಯ ಯುಗವಾಗಿದ್ದು ಇದು ಸದಾ ಪರಾಕ್ರಮ, ವಿಜಯ, ಯಶಸ್ಸು, ಕೀರ್ತಿಗಾಗಿ ಪರಿತಪಿಸಿದ ಯುಗ. ಪಾಂಡವ-ಕೌರವರ ಮಧ್ಯೆ ನಡೆದ ಕುರುಕ್ಷೇತ್ರ ಯುದ್ಧಕ್ಕೆ ಸಾಕ್ಷಿಯಾದ ಯುಗ. ಯಾವ ಶಿಷ್ಯ ಕೇವಲ ತನ್ನ ಪರಾಕ್ರಮ, ವಿಜಯ, ಯಶಸು, ಕೀರ್ತಿಗಾಗಿ ಹಂಬಲಿಸುತ್ತಿರುತ್ತಾನೋ ಅಂತಹ ಶಿಷ್ಯನನ್ನು ದ್ವಾಪರಯುಗದ ಶಿಷ್ಯ ಎನ್ನಲಾಗಿದ್ದು ಶ್ರೀಗುರುವು ಶಿಷ್ಯನ ಅವನತಿಗೆ ಕಾರಣವಾಗುವ ಅಹಂಕಾರದ ಈ ಮೂಲಾಂಶಗಳನ್ನು ಗದರಿಸಿ, ಸಿಟ್ಟು ಮಾಡಿಕೊಂಡು ಬುದ್ಧಿ ಕಲಿಸುತ್ತಾನೆ. ಶಾಶ್ವತ ಸುಖದ ಮಾರ್ಗ ತೋರಿಸುತ್ತಾನೆ. ಶ್ರೀಗುರುವಿನ ಇಂತಹ ಕರುಣೆಯ ಪ್ರಸಾದವನ್ನು ಶಿಷ್ಯನಾದವನು ಮಹಾಪ್ರಸಾದವೆಂದು ಸ್ವೀಕರಿಸಲೇಬೇಕು ಹಾಗೂ ಸ್ವೀಕರಿಸುತ್ತಾನೆ.

ನಾಲ್ಕನೆಯ ಯುಗವು ಕಲಿಯುಗ. ಇದು ಜ್ಞಾನ-ವಿಜ್ಞಾನದ ಮಹಾಯುಗ. ಕಲಿಯುಗದ ಶಿಷ್ಯನಲ್ಲಿ ಪ್ರಭುಗಳು ಈ ಗುಣ ಲಕ್ಷಣಗಳನ್ನು ಸಾಂಕೇತಿಸುತ್ತಾರೆ. ಶಿವಪಥದೆಡೆಗೆ ಸಾಗಲು, ಲಿಂಗಸುಖ ಹೊಂದಲು ಬೇಕಾದ ಜ್ಞಾನವನ್ನು ಪಡೆಯಲು ಹಂಲಿಸುವ ಶಿಷ್ಯನನ್ನು ಶ್ರೀಗುರು ಇಲ್ಲಿ ಆದರಿಸುತ್ತಾರೆ, ಗೌರವಿಸುತ್ತಾರೆ. ಅವನ ನಿಷ್ಠೆ, ಧೃಢತೆ, ತ್ಯಾಗ ಮನೋಭಾವನೆಗೆ ಕೈಮುಗಿದು ಹೃದಯಾರೆ ಅಪ್ಪಿಕೊಳ್ಳುತ್ತಾರೆ. ಇದು ವಿಮಲಜ್ಞಾನ ಪಡೆಯಲು ಕಾತರಿಸುವ ಶಿಷ್ಯನ ಮನೋಸ್ಥಿತಿ. ಪರಮ ತತ್ವದ ಲಿಂಗಾಂಗ ಸಾಮರಸ್ಯದ ಮಹಾಪ್ರಸಾದವನ್ನು ಶ್ರೀಗುರು ಶಿಷ್ಯನಿಗೆ ದಯಪಾಲಿಸುತ್ತಾನೆ.

ಶ್ರೀಗುರು ಹೀಗೆ ಕಾಲಕಾಲಕ್ಕೆ ತಕ್ಕಂತೆ ಶಿಷ್ಯನನ್ನು ತಿದ್ದುವ ಹಂತಗಳನ್ನು ಪ್ರಭುಗಳು ಯುಗೀಯ ಮನೋಧರ್ಮದ ಶಿಷ್ಯರಲ್ಲಿ ಸಾಂಕೇತಿಸಿ ಗುರುವಿನ ಬೋಧನಾ ಕ್ರಮಗಳನ್ನು (ಕಲೇ) ನಾಲ್ಕು ಹಂತಗಳಲ್ಲಿ ವಿಭಜಿಸಿ “ಕಾಲದ ಕಟ್ಟಳೆಗೆ ಬೆರಗಾದೆ” ಎಂದು ಉದ್ಧರಿಸುತ್ತಾರೆ, ಅಚ್ಚರಿಗೊಳ್ಳುತ್ತಾರೆ. ಯುಗಗಳಿಗೆ ತಕ್ಕಂತೆ ಬೋಧನಾ ಕ್ರಮಗಳನ್ನು ಗಮನಿಸಿಕೊಂಡು ಬಂದಾಗ:

ಶ್ರೀಗುರು ಶಿಷ್ಯನಿಗೆ ಬಡಿಯುವುದು ಎಂದರೆ ತಮ್ಮ ಶ್ರೀಹಸ್ತವನ್ನು ಮಸ್ತಕದ ಮೇಲಿಟ್ಟು ಅನುಗ್ರಹಿಸುವುದು.
ಆರೀಗುರು ಶಿಷ್ಯನಿಗೆ ಬೈಯ್ಯುವುದು ಎಂದರೆ ಶಿಷ್ಯನಿಗೆ ಪವಿತ್ರ ಮಂತ್ರ ಕಲಿಸುವುದು.
ಶ್ರೀಗುರು ಶಿಷ್ಯನಿಗೆ ಝಂಕಿಸುವುದು ಎಂದರೆ ಶಿಷ್ಯನ ದೃಷ್ಟಿಯಲ್ಲಿ ತಮ್ಮ ದೃಷ್ಟಿ ನೆಟ್ಟು ಅವನ ಅಂತರಂಗದ ಎಲ್ಲಾ ಮಾಯಾ-ಕಲ್ಮಶಗಳನ್ನು ತೊಳೆಯುವುದು.
ಶ್ರೀಗುರು ಶಿಷ್ಯನಿಗೆ ವಂದಿಸುವುದು ಎಂದರೆ ಶಿಷ್ಯನ ಕರಸ್ಥಲದಲ್ಲಿ ಇಷ್ಟಲಿಂಗವನ್ನು ಮನಸ್ಥಲದಲ್ಲಿ, ಪ್ರಾಣಲಿಂಗವನ್ನು ಭಾವಸ್ಥಲದಲ್ಲಿ ತೃಪ್ತಿಲಿಂಗ (ಭಾವಲಿಂಗ) ವನ್ನು ಸ್ಥಾಪಿಸಿ ಅನುಗ್ರಹಿಸುವುದು.

ಇದು ಗುರು-ಶಿಷ್ಯರ ಸಂಬಂಧದಲ್ಲಿ ನಡೆಯುವ ಗುರು-ಕರುಣೆಯ ಪ್ರಸಾದ ಕ್ರಿಯರ.ದರೆ ಅನುಗ್ರಹ ವಿಧಾನ. ಇದರಿಂದ ಶಿಷ್ಯನ ಮೋಹ-ಪಾಶ, ಭವ-ಬಂಧನ ಮುಕ್ತಿ ಆಗುವುದು. ಅಹಂಕಾರ ಅಳಿದು, ದೇಹಭಾವ ನಾಶವಾಗಿ ದೇವಭಾವ ಅಂಕುರವಾಗುತ್ತದೆ. ಸ್ವಕೀರ್ತಿ, ಯಶಸ್ಸು, ಸಿದ್ಧಿ, ಸಾಧನೆಗಳಿಂದ ಅಲಿಪ್ತವಾಗುವುದು. ಭೂತಿ ವಿಭೂತಿಯಾಗುವುದು. ಕೊನೆಗೆ ಅಂಗ ಲಿಂಗವಾಗುವುದು. ಲಿಂಗಾಂಗ ಸಾಮರಸ್ಯ ಹೊಂದುವುದು. ಇದನ್ನೇ ಅಲ್ಲಮ ಪ್ರಭುಗಳು ಶ್ರೀಗುರುವಿನ ಕರುಣೆಯ ಮಹಾಪ್ರಸಾದ ಎಂದಿರುವರು. ಗುರುಪೂರ್ಣಿಮೆ ಅಂಥ ಸದ್ಗುರುವಿನ ಮಹಿಮೆಯನ್ನು ಸಾರುವ ಸುದಿನ. ಈ ಒಂದು ವಚನ-ನಿರ್ವಚನದ ಮೂಲಕ ನಾನು ಗುರುಪೂರ್ಣಿಮೆಗೆ ಜಗತ್ತಿನ ಎಲ್ಲ ಮಹಾಗುರುಗಳಿಗೆ, ನನಗೆ ಅರಿವನ್ನು ಕರುಣಿಸಿದ ಸಮಸ್ತ ಗುರುವೃಂದದ ಚರಣಗಳಿಗೆ ಭಕ್ತಿ ಪ್ರಣಾಮಗಳನ್ನು ಸಲ್ಲಿಸುತ್ತಾ ನುಡಿ ನಮನಗಳನ್ನು ಸಮರ್ಪಿಸುತ್ತಿದ್ದೇನೆ.

ಶರಣು ಶರಣಾರ್ಥಿಗಳು.

ಡಾ. ಪುಷ್ಪಾ ಶಲವಡಿಮಠ,
ಕನ್ನಡ ಉಪನ್ಯಾಸಕರು,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಚಿಕ್ಕ ಬಾಸೂರು, ಹಾವೇರಿ ಜಿಲ್ಲೆ.
ಮೋಬೈಲ್‌. ಸಂ. 97407 38330

 ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನಸಾಹಿತ್ಯ ಮಂದಾರ ಫೌಂಡೇಶನ್‌ ಸ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in | admin@vachanamandara.in

Loading

This Post Has One Comment

  1. ಮಂಜುಳಾ, ವಿ. ಸಾತೇನಹಳಿ

    Pushpa Shalawadimath madam nimma Guruvina mattu Guruvina lekhana Chennagi moodi bandide Congratulations madam👌💐🤝🙏

Leave a Reply