ನಿಜ ಶರಣ ಹಡಪದ ಅಪ್ಪಣ್ಣನವರು / ಶ್ರೀಮತಿ. ಅನುಪಮ ಪಾಟೀಲ, ಹುಬ್ಬಳ್ಳಿ.

ಇಂತಹ ಮಹಾನ ಶರಣ “ನಿಜಸುಖಿ ಅಪ್ಪಣ್ಣನವರ ಜಯಂತಿ” ನಿಮಿತ್ಯ ಲೇಖನ.

12 ನೆಯ ಶತಮಾನ ಮೌಢ್ಯತೆಯನ್ನು ಬದಿಗೆ ಸರಿಸಿದಂತಹ ವೈಚಾರಿಕತೆಯ ಯುಗ. ಸಮಾನತೆ ಮತ್ತು ಸೌಹಾರ್ದತೆಯನ್ನು ಕಂಡಂತಹ ಯುಗ, ಬಸವ ಯುಗ. ಈ ಬಸವಯುಗದ ಪ್ರಮುಖ ಶರಣರ ಹಡಪದ ಅಪ್ಪಣ್ಣನವರು.

ಹಡಪದ ಅಪ್ಪಣ್ಣನವರ ಜನ್ಮ ಸ್ಥಳ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿಹಾಳ ಗ್ರಾಮ. ಇದು ಬಸವಣ್ಣವರ ಜನ್ಮ ಸ್ಥಳ ಇಂಗಳೇಶ್ವರದಿಂದ ಕೇವಲ 6 ಕಿ.ಮೀ ದೂರದವಿದೆ. ಬಸವಣ್ಣನವರ ಬಗ್ಗೆ ತಿಳಿದ ಅಪ್ಪಣ್ಣನವರು ಪತ್ನಿ ಸಮೇತ ಸಂಗಮಕ್ಕೆ ಬಂದು ನೆಲೆಸುತ್ತಾರೆ. ನಂತರ ಅವರ ಸಂಗಡ ಕಲ್ಯಾಣಕ್ಕೂ ಬರುತ್ತಾರೆ. ಬಸವಣ್ಣನವರ ಆಪ್ತ ವಲಯದಲ್ಲಿದ್ದ ಅಪ್ಪಣ್ಣನವರು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿರುತ್ತಾರೆ. ಹಡಪದರ ಮುಖ ನೋಡಿದರೆ ಅಪಶಕುನ ಎಂಬ ಮೌಡ್ಯವನ್ನು ಧಕ್ಕರಿಸಿದಂತೆ ಬಸವಣ್ಣನವರು ಯಾರೆ ತಮ್ಮನ್ನು ಭೇಟಿ ಆಗಲು ಬಂದರೂ ಹಡಪದ ಅಪ್ಪಣ್ಣನವರನ್ನು ಭೇಟಿ ಆಗಿಯ ಬರಬೇಕೆಂಬ ನಿಯಮ ಮಾಡಿದ್ದರು. ಬಸವಣ್ಣನವರ ಬಾಲ್ಯದ ಒಡನಾಡಿಗಳಾಗಿದ್ದ ಅಪ್ಪಣ್ಣನವರು ವಿಶ್ವದ ಪ್ರಥಮ ಪ್ರಜಾಪ್ರಭುತ್ವ ಎಂದೆ ಹೆಸರಾದಂತಹ “ಅನುಭವ ಮಂಟಪದಲ್ಲಿ” ಬಸವಣ್ಣನವರಿಗೆ ಪ್ರಧಾನ ಕಾರ್ಯದರ್ಶಿಗಳಾಗಿ ಅವರಿಗೆ ಬಲಗೈಯಾಗಿ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ಅಪ್ಪಣ್ಣನವರ ಕಾರ್ಯಕ್ಷಮತೆಗೆ ಸಲ್ಲುತ್ತದೆ.

ಅಪ್ಪಣ್ಣನವರು ಬಸವಣ್ಣನವರಿಗೆ ಆಪ್ತ ಕಾರ್ಯದರ್ಶಿ ಮಾತ್ರವಲ್ಲ ತಮ್ಮ ಜೀವನದ ಒಡನಾಡಿಯ ಆಗಿದ್ದರು. ಪ್ರತಿ ಕ್ಷಣದಲ್ಲೂ ಬಸವಣ್ಣನವರಿಗೆ ಪ್ರತಿಯೊಂದು ಮಾಹಿತಿಯನ್ನು ನೀಡುತ್ತಿದ್ದರು. ಕಲ್ಯಾಣಕ್ಕೆ ಬರುವ ಶರಣ ಸಮೂಹಕ್ಕೆ ತಾಂಬೂಲ ಕೊಟ್ಟು ಸ್ವಾಗತಿಸುತ್ತಿದ್ದರು. ಒಂದು ಕ್ಷಣವಾದರೂ ಬಸವಣ್ಣನವರನ್ನು ಬಿಟ್ಟಿರದ ಜೀವ ಅಪ್ಪಣ್ಣನವರದ್ದು. ಇದು ಕಲ್ಯಾಣ ಕ್ರಾಂತಿಯ ಕೊನೆಯ ದಿನಗಳಲ್ಲೂ ಸಾಬೀತಾಗಿದೆ.

ಶರಣರಾದ ಹರಳಯ್ಯ, ಶೀಲವಂತ ಮತ್ತು ಮಧುವರಸರನು ಎಳೆ ಹೂಟೆ ಶಿಕ್ಷೆಯಾಗಿ, ಅಪ್ಪ ಬಸವಣ್ಣನವರಿಗೆ ಗಡಿಪಾರು ಶಿಕ್ಷೆಯಾಗಿ ಕಂಡ ಕಂಡಲ್ಲಿ ಶರಣರ ಹತ್ಯೆಯಾಗತೊಡಗಿತು. ಪಟ್ಟು ಬಿಡದ ಶರಣರು “ಪ್ರಾಣ ಬಿಟ್ಟೇವು ವಚನಗಳನ್ನು ಸುಡಲು ಬಿಡುವುದಿಲ್ಲ” ಎಂಬ ದಿಟ್ಟ ನಿಲುವಿನಿಂದ ಒಬ್ಬೊಬ್ಬರು ಒಂದೊಂದು ಕಡೆ ವಚನಗಳ ಕಟ್ಟುಗಳನ್ನು ಹೊತ್ತು ನಡೆದರು. ಸಿದ್ಧರಾಮರು, ಉರಿಲಿಂಗಪೆದ್ದಿಗಳು ಸೋಲಾಪುರದ ಹಾದಿ ಹಿಡಿದರೆ, ಚೆನ್ನಬಸವಣ್ಣನವರ ಜೊತೆಗೆ ಅಸಂಖ್ಯಾತ ಶರಣರು ಉಳವಿಯ ಕಡೆಗೆ ನಡೆಯುತ್ತಾರೆ ಆದರೆ ಅಪ್ಪಣ್ಣನವರು ಬಸವಣ್ಣನವರ ಹತ್ತಿರ ಸಂಗಮಕ್ಕೆ ಹೋಗುತ್ತಾರೆ. ಆಗ ಬಸವಣ್ಣನವರು ನೀಲಾಂಬಿಕೆ ತಾಯಿಯವರನ್ನು ಕರೆತರಲು ಕಳಿಸುತ್ತಾರೆ. ಅಪ್ಪಣ್ಣನವರು ತಾಯಿಯವರನ್ನು ಕರೆದುಕೊಂಡು ತಂಗಡಗಿಯ ಹತ್ತಿರ ಬರುವಷ್ಟರಲ್ಲಿ ಸಂಗಮದಲ್ಲಿ ಘೋರಾತಿ ಘೋರ ಘಟನೆ ನಡೆದ ಹೋಗುತ್ತದೆ. ಅಪ್ಪ ಬಸವಣ್ಣನವರು ಲಿಂಗೈಕ್ಯರಾದ ಸುದ್ದಿ ಬರಸಿಡಿಲಿನಂತೆ ತಿಳಿದು ಬರುತ್ತದೆ. ಅಲ್ಲಿಯೆ ನೀಲಮ್ಮ ತಾಯಿಯವರು ಅಪ್ಪಣ್ಣನವರು “ಅಲ್ಲಿದ್ದ ಸಂಗಯ್ಯ ಇಲ್ಲಿಲ್ಲವೆ” ಎಂದು ಕರಸ್ಥಲದ ಮಧ್ಯದಲ್ಲಿದ್ದ ಲಿಂಗದಲ್ಲಿ ಬಸವಣ್ಣನವರನ್ನು ಕಾಣುತ್ತ ಲಿಂಗೈಕ್ಯರಾಗುತ್ತಾರೆ.

“ಬಸವಪ್ರಿಯ ಕೂಡಲಚನ್ನಬಸವಣ್ಣ“ ಎಂಬ ವಚನಾಂಕಿತದಿಂದ ಸುಮಾರು 251 ವಚನಗಳನ್ನು ಬರೆದಿರುವ ಹಡಪದ ಅಪ್ಪಣ್ಣನವರು ಅನುದಿನವೂ ಅನುಕ್ಷಣವೂ ಅಣ್ಣನವರ ದಿವ್ಯ ಸಾನಿಧ್ಯದಲ್ಲಿ ಇರುತ್ತಿದ್ದರು. ಅಪ್ಪಣ್ಣನವರು ತಮ್ಮ ಅಪಾರ ಜ್ಞಾನದಿಂದ ಕಾರ್ಯಕ್ಷಮತೆಯಿಂದ ಎಲ್ಲರ ಶರಣರ ಮೆಚ್ಚುಗೆಗೆ ಪಾತ್ರರಾಗಿ “ನಿಜಸುಖಿ ಅಪ್ಪಣ್ಣ” ಎಂಬ ಬಿರುದನ್ನು ಪಡೆದರು. ಹಡಪದ ಅಪ್ಪಣ್ಣನವರ ಧರ್ಮಪತ್ನಿ ಲಿಂಗಮ್ಮನವರೂ ಕೂಡ ಮಹಾಜ್ಞಾನಿಗಳಾಗಿದ್ದರು. ನಿಜಮುಕ್ತೆ ಲಿಂಗಮ್ಮನವರು ಅಂತನೆ ಪ್ರಖ್ಯಾತಿ ಪಡೆದರು. ಲಿಂಗಮ್ಮನವ 114 ವಚನಗಳು “ಅಪ್ಪಣ್ಣಪ್ರಿಯ ಚೆನ್ನಬಸವಣ್ಣ” ಎಂಬ ಅಂಕಿತದದಿಂದ ಲಭ್ಯವಿವೆ.

ಏನೇನು ಇಲ್ಲದಾಗ ನೀವಿಲ್ಲದಿದ್ದಡೆ
ನಾನಾಗಬಲ್ಲೆನೆ ಅಯ್ಯಾ?
ಆದಿ ಅನಾದಿ ಇಲ್ಲದಂದು ನೀವಿಲ್ಲದಿದ್ದಡೆ
ನಾನಾಗಬಲ್ಲೆನೆ ಅಯ್ಯಾ?
ಮುಳುಗಿ ಹೋದವಳ ತೆಗೆದುಕೊಂಡು,
ನಿಮ್ಮ ತೊತ್ತಿನ ತೊತ್ತಿನ ಪಡಿದೊತ್ತಿನ ಮಗಳೆಂದು
ರಕ್ಷಣೆಯ ಮಾಡಿದ ಶಿಶುವಾದ ಕಾರಣ
ಹಡದಪ್ಪಣ್ಣನೆ ಎನ್ನ ಕರಸ್ಥಲಕ್ಕೆ
ಲಿಂಗವಾಗಿ ಬಂದು ನೆಲೆಗೊಂಡನು.
ಚೆನ್ನಮಲ್ಲೇಶ್ವರನೆ ಎನ್ನ ಮನಸ್ಥಲಕ್ಕೆ
ಪ್ರಾಣವಾಗಿ ಬಂದು ಮೂರ್ತಗೊಂಡನು.
ಆ ಕರಸ್ಥಲದ ಲಿಂಗವನರ್ಚಿಸಿ ಪೂಜಿಸಿ
ವರವ ಬೇಡಿದಡೆ ತನುವ ತೋರಿದನು;
ಆ ತನುವಿಡಿದು ಮಹಾಘನವ ಕಂಡೆ;
ಆ ಘನವಿಡಿದು ಮನವ ನಿಲಿಸಿದೆ.
ಮನವ ನಿಲಿಸಿ ನೋಡುವನ್ನಕ್ಕ
ಪ್ರಾಣದ ನೆಲೆಯನರಿದೆ ಪ್ರಣವವನೊಂದುಗೂಡಿದೆ.
ಕಾಣಬಾರದ ಕದಳಿಯನೆ ಹೊಕ್ಕು
ನೂನ ಕದಳಿಯ ದಾಂಟಿದೆ; ಜ್ಞಾನಜ್ಯೋತಿಯ ಕಂಡೆ.
ತಾನುತಾನಾಗಿಪ್ಪ ಮಹಾಬೆಳಗಿನಲ್ಲಿ ಓಲಾಡಿ ಸುಖಿಯಾದೆನಯ್ಯಾ,
ಚೆನ್ನಮಲ್ಲೇಶ್ವರನ ಕರುಣದ ಶಿಶುವಾದ ಕಾರಣದಿಂದ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-479/ವಚನ ಸಂಖ್ಯೆ-1300)

ಎಂದು ಬಸವಾದಿ ಶರಣರ ಮನೆಯ ಮಗಳಾಗಿ ನಾನು ನಿಜ ಮುಕ್ತಳಾದೆನು ಎನ್ನುತ್ತಾರೆ ಶರಣೆ ಲಿಂಗಮ್ಮನವರು.

ಬನವಾಸಿಯ ಮಧುಕೇಶ್ವರ ದೇವಾಲಯದ ಶಿವೊತ್ಸವ ಮಂಟಪದ ಗಗ್ಗರಿ ಕಲ್ಲಿನ ಮೇಲಿರುವ ಶರಣರ ಶಿಲ್ಪಗಳಲ್ಲಿ ಅಪ್ಪಣ್ಣನವರ ವಿಗ್ರಹವೂ ಕೂಡ ಇದೆ. ಅಪ್ಪಣ್ಣನವರು ಬರೆದ ವಚನಗಳಲ್ಲಿ ಹೆಚ್ಚಿನವು ಬೆಡಗಿನ ವಚನಗಳು ಮತ್ತು ಹೆಚ್ಚಾಗಿ ಷಟಸ್ಥಲ ತತ್ವ ನಿರೂಪಣೆಗೆ ಹೆಚ್ಚಿನ ಆಧ್ಯತೆ ನೀಡಿದ್ದಾರೆ. ಮತ್ತು ಗ್ರಹಿಸಲು ಸುಲಭವಾದ ವಚನಗಳಾಗಿವೆ.

ಹೊತ್ತುಹೊತ್ತಿಗೆ ಲಿಂಗಪೂಜೆಯ ಮಾಡಿಯೂ
ಮತ್ತೆಯು ಸತ್ಯವಾವುದು,
ನಿತ್ಯವಾವುದೆಂದರಿಯದೆ ಕೆಟ್ಟರೆಲ್ಲ ಜಗವು.
ಸತ್ಯವಾಗಿ ನುಡಿವ ಶರಣರ ಕಂಡರೆ,
ಕತ್ತೆಮಾನವರೆತ್ತಬಲ್ಲರೊ?
ಅಸತ್ಯವನೆ ನುಡಿದು, ಹುಸಿಯನೆ
ಬೋಧಿಸುವ ಹಸುಕರ ಕಂಡರೆ,
ಇತ್ತ ಬನ್ನಿ ಎಂಬರು.
ಇಂತಪ್ಪ ಅನಿತ್ಯದೇಹಿಗಳ ಭಕ್ತರೆಂದು ಜಂಗಮವೆಂದು
ನೋಡಿದರೆ, ನುಡಿಸಿದರೆ, ಮಾತನಾಡಿದರೆ, ನೀಡಿದರೆ,
ಅಘೋರನರಕವೆಂದು ನಮ್ಮ ಆದ್ಯರ ವಚನ ಸಾರುತಿದೆ,
ಬಸವಪ್ರಿಯ ಕೂಡಲಚೆನ್ನಬಸಣ್ಣಾ.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-452/ವಚನ ಸಂಖ್ಯೆ-1085)

ಅಂತ ಡಾಂಭಿಕರ ಬಗ್ಗೆ ಎಚ್ಚರಿಸುತ್ತಾರೆ.

ಇವರ ವಚನಗಳಲ್ಲಿ ಶರಣರಿಗಿರಬೇಕಾದ ಕಾಯಕ ನಿಷ್ಟೆ ದಾಸೋಹ, ವೈರಾಗ್ಯ, ಭಕ್ತಿ, ಆಚಾರ – ವಿಚಾರಗಳನ್ನು ವಿಡಂಬಿಸಿ ಅಜ್ಞಾನಿಗಳನ್ನು ಸುಜ್ಞಾನಗಳನ್ನಾಗಿ ಮಾಡಲು ಯತ್ನಿಸಿದ್ದಾರೆ.

ವೇಶವ ಹೊತ್ತು, ಆಶೆ ರೋಷವ ಬಿಡದೆ, ದೇಶವ ತಿರುಗಿ,
ಹೊರವೇಶದ ವಿಭೂತಿ, ರುದ್ರಾಕ್ಷಿ ಕಾವಿ
ಕಾಷಾಯಾಂಬರವ ಧರಿಸಿ ಫಲವೇನು?
ಕಾಯ ಕೆಡದು, ಕ್ರೋಧ ಬಿಡದು,
ಲೋಭ ಹಿಂಗದು, ಮೋಹ ನಿಲ್ಲದು,
ಮದ ಹೆರೆಸಾರದು, ಮತ್ಸರ ಬೆಂದು ಹೋಗದು,
ಇವೆಲ್ಲ ಜಂಗಮ ಭಕ್ತರೆಂದು
ಸುಳಿದವರ ಕಂಡು ನಾಚಿತ್ತು ಎನ್ನ ಮನ.
ಭಕ್ತಜಂಗಮ ಘನವನೇನೆಂದು ಉಪಮಿಸುವೆ?
ರೂಪಿನ ಹಾಗೆ, ನೆಳಲಿನ ಹಾಗೆ, ದೇಹದ ಹಾಗೆ,
ಪ್ರಾಣದ ಹಾಗೆ, ಭಾವದ ಹಾಗೆ, ಕರ್ಪುರದ ಹಾಗೆ,
ಆವಿಯ ಹಾಗೆ, ನೀರ ಹಾಗೆ,
ಎರಡೊಂದಾದರೆ ತೆರಹಿಲ್ಲ ಆ ನಿಲುವಿಂಗೆ
ನಮೋ ನಮೋ ಎನುತಿರ್ದೆ ಕಾಣಾ,
ಬಸವಪ್ರಿಯ ಕೂಡಲ ಚೆನ್ನಬಸವಣ್ಣ.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-425/ವಚನ ಸಂಖ್ಯೆ-1035)

ಅಂತರಂಗದ ಅರಿಷಡ್ವರ್ಗಗಳನ್ನು ನಿಗ್ರಹಿಸದ ಕೆಲ ಮಠಾಧಿಪತಿಗಳನ್ನು ಕಂಡಾಗ ಈ ಅಪ್ಪಣ್ಣನವರ ಈ ವಚನ ನೆನಪಾಗುತ್ತದೆ.

ಹಸಿವಿನಾಶೆಗೆ ಅಶವನ ಕೊಂಬರು,
ವಿಷಯದಾಸೆಗೆ ಹುಸಿಯ ನುಡಿವರು.
ಹಸನಾಗಿ ವ್ಯಸನವ ಹೊತ್ತು;
ಭಸಿತವ ಹೂಸಿ ವಿಶ್ವವ ತಿರುಗಿದರು.
ಈ ಹುಸಿಯ ಬಿಟ್ಟು, ಮಾಯೆಯ
ಮಸಕವ ಮಾಣ್ಪಲ್ಲದೆ
ನಮ್ಮ ಬಸವಪ್ರಿಯ ಚೆನ್ನಬಸವಣ್ಣನ ಕೂಡ.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-444/ವಚನ ಸಂಖ್ಯೆ-1066)

ಈ ವಚನದಲ್ಲಿ ವೇಷಧಾರಿ ಭಕ್ತರನ್ನು ಹಂಗಿಸುತ್ತ ಮಾನವ ಜನ್ಮದ ಘನತೆಯನ್ನರಿಯದೆ, ಪಾರಮಾರ್ಥಿಕ ಬದುಕಿನಿಂದ ದೂರವಾಗಿ ಲೌಕಿಕದ ವಿಷಯಾಸಕ್ತಿಗೆ ಸೋತು ಬದುಕನ್ನು ನಾಶಮಾಡಿಕೊಳ್ಳುವರ ಬಗ್ಗೆ ಹೇಳಿದ್ದಾರೆ.

ಬದುಕಿನುದ್ದಕ್ಕೂ ಬಸವಣ್ಣನವರನ್ನು ಆವರಿಸಿಕೊಂಡಿದ್ದ ಹಡಪದ ಅಪ್ಪಣ್ಣನವರು ಅತ್ಯುನ್ನತ ರೀತಿಯಲ್ಲಿ ಬದುಕಿ ಮಾದರಿಯಾದರು, ಬಸವಣ್ಣನವರನ್ನು ಪ್ರಾಣವೆಂದು ನಂಬಿ ಬದುಕಿದ್ದ ಅಪ್ಪಣ್ಣನವರು ತಂಗಡಗಿಯಲ್ಲಿ ಬಸವ ಬಯಲಲ್ಲಿ ಬಯಲಾಗಿ 9 ಶತಮಾನಗಳು ಕಳೆದರೂ ಅಜರಾಮರರಾಗಿ ನಮ್ಮೆಲ್ಲರ ಹೃದಯದಲ್ಲಿ ಅಜರಾಮರಗಾಗಿ ಉಳಿದಿದ್ದಾರೆ. ಅವರ ನಡೆ – ನುಡಿ, ಬದುಕು ಮತ್ತು ಆದರ್ಶಮಯ ಸಿದ್ದಾಂತ ನಮ್ಮೆಲ್ಲರಿಗೂ ಸ್ಪೂರ್ತಿ ಮಾದರಿಯಾಗಿದೆ. ಅಸಮ ಸಮಾಜದ ಶೋಷಣೆಯನ್ನು ವಿರೋಧಿಸಿ ಹೊಸ ಸಮಾಜದ ಸ್ಥಾಪನೆಗೆ ಹೋರಾಡಿದ್ದ ಬಸವಣ್ಣ, ಅಲ್ಲಮ, ಮಾಚಿದೇವ ಮುಂತಾದ ಶರಣರಂತೆಯ ಅಪ್ಪಣ್ಣನವರೂ ಕೂಡ ಪೂಜನೀಯರಾಗಿದ್ದಾರೆ. ಬಸವ ಕೇಂದ್ರಿತ ವಿರಾಟ ಸಾಮಾಜಿಕ ಆಂದೋಲನವು ಸರಿದಾರಿಯಲ್ಲಿ ಸಾಗಲು ಅಪ್ಪಣ್ಣನವರ ಕೊಡುಗೆಯೂ ಅಪಾರ ಅವರ ಕಾಯಕ ನಿಷ್ಠೆ, ಭಕ್ತಿ ವೈರಾಗ್ಯಗಳು ಮತ್ತು ದಾಸೋಹಗಳು ನಮಗೆಲ್ಲ ದಾರಿ ದೀಪವಾಗಿವೆ.

ಶರಣು ಶರಣಾರ್ಥಿಗಳು

ಶ್ರೀಮತಿ. ಅನುಪಮ ಪಾಟೀಲ,
ನಂ. 10, ದೇಸಾಯಿ ಪಾರ್ಕ್‌,
ಕುಸೂಗಲ್‌ ರಸ್ತೆ, ಕೇಶ್ವಾಪೂರ,
ಹುಬ್ಬಳ್ಳಿ – 580 023.
ಮೋ. ಸಂ. +91 9845810708.

 ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in

Loading

Leave a Reply