
ಕಣ್ಣು ಕಳೆದ ಮತ್ತೆ ಅಂಜನಕ್ಕೆ ತಿಳಿವುದೇ?
ಆತ್ಮನಿದ್ದಲ್ಲಿ ಅರಿಯದೆ ಅಸು
ಸತ್ತ ಮತ್ತೆ ಮೋಕ್ಷವನರಸಲುಂಟೆ?
ಎಚ್ಚರಿಕೆ ತನಗಿದ್ದಲ್ಲಿ ನಾನೊಂದು ನಿಶ್ಚಯದ ಮದ್ದು ತಂದೆ,
ಆ ಮದ್ದಿನ ಭೇದ ಘಟಕ್ಕೆ ಕೇಡಿಲ್ಲ.
ಆತ್ಮಂಗೆ ಭವವಿಲ್ಲ, ಅರಿವಿಂಗೆ ತುದಿ ಮೊದಲಿಲ್ಲ.
ಇದು ನಿರಿಗೆ ಕೊಳಬಲ್ಲಡೆ,
ಗುರುವಿಂಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಧನ
ರೋಗ ಹೋಯಿತ್ತು, ಬೇಗ ಅರಿದುಕೊಳ್ಳಿ,
ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗ ಸಾಕ್ಷಿಯಾಗಿ.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-56/ವಚನ ಸಂಖ್ಯೆ-116)
ಶರಣ ವೈದ್ಯ ಸಂಗಣ್ಣನವರು 12 ನೇ ಶತಮಾನದ ಅನುಭವ ಮಂಟಪದ ಮಹಾನುಭಾವಿಯಾಗಿದ್ದ ವಚನಕಾರರು. ಇವರ ವೈಯಕ್ತಿಕ ಅಂಶಗಳ ಮಾಹಿತಿ ಲಭ್ಯವಿರುವುದಿಲ್ಲ. ಕೆಲವು ವಿಧ್ವಾಂಸರ ಪ್ರಕಾರ ಇವರು ಮೂಲತಃ ಆಸ್ಸಾಂದವರಾಗಿರಬಹುದೆಂಬುದು. ಆದರೆ ವಚನ ಪಿತಾಮಹರಾದ ಫ. ಗು. ಹಳಕಟ್ಟಿಯವರ ಪ್ರಕಾರ ಇವರು ಕಲಬುರಗಿ ಭಾಗದವರಾಗಿಬಹುದೆಂಬುದು. ಯಾವುದಕ್ಕೂ ಸಂಶೋಧನೆ ಆಗಬೇಕು. ಇವರ ಕಾಯಕ ವೈದ್ಯ ಸೇವೆ. ಇವರ ಅಂಕಿತನಾಮ “ಮರುಳಶಂಕರಪ್ರಿಯ ಸಿದ್ದರಾಮೇಶ್ವರ”. ಇವರ 21 ವಚನಗಳು ಲಭ್ಯವಾಗಿವೆ.
ಈ ವಚನದಲ್ಲಿ ಗುರುವಿಂಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಧನ ಅರ್ಪಿಸಲು ವಚನಕಾರರು ಹೇಳುತ್ತಾರೆ. ಇದು ಶರಣ ಸಂಪ್ರದಾಯದ ತ್ರಿವಿಧ ಮಾರ್ಗವನ್ನು ಸಾರುತ್ತದೆ. ಈ ತತ್ವವನ್ನು ವಚನಗಳಲ್ಲಿ ಸಾಮಾನ್ಯವಾಗಿ ‘ತ್ರಿಸ್ಥಲ’ ಎಂದು ವಿವರಿಸಲಾಗಿದೆ. ಅರಿವಿಲ್ಲದ ಧರ್ಮ ವ್ಯರ್ಥ, ಆತ್ಮಜ್ಞಾನವಿಲ್ಲದ ಮೋಕ್ಷವಿಲ್ಲ. ಗುರು-ಲಿಂಗ-ಜಂಗಮಗಳಿಗೆ ದೇಹ-ಮನ-ಧನ ಸಮರ್ಪಣೆ ಮಾಡುವುದೇ ಶರಣಮಾರ್ಗದ ಮೂಲ ತತ್ವವಾಗಿದೆ.
“ಕಣ್ಣು ಕಳೆದ ಮತ್ತೆ ಅಂಜನಕ್ಕೆ ತಿಳಿವುದೇ?”
ಕಣ್ಣು ಕಳೆದುಕೊಂಡವನಿಗೆ ಅಂಜನ (ಕಣ್ಣಿಗೆ ಹಾಕುವ ಕಾಡಿಗೆ/ಔಷಧಿ) ಉಪಯೋಗವಿಲ್ಲ. ಹಾಗೆಯೇ ಅರಿವಿಲ್ಲದವನಿಗೆ ಶಾಸ್ತ್ರ-ಪೂಜೆ-ವಿಧಿ ಸಂಪ್ರದಾಯ ಎಲ್ಲವೂ ವ್ಯರ್ಥ. ಅರಿವು (ಜ್ಞಾನ) ಇದ್ದಾಗಲೇ ಧರ್ಮ-ಪೂಜೆ-ಸಂಪ್ರದಾಯಗಳು ಫಲಿಸುತ್ತವೆ. ಜ್ಞಾನವಿಲ್ಲದೆ ಮಾಡಿದ ಕ್ರಿಯೆಗಳು ಅಂಧನಿಗೆ ಅಂಜನ ಹಚ್ಚಿದಂತೆ ಯಾವುದೇ ಫಲ ಕೊಡುವುದಿಲ್ಲ. ಹೀಗಾಗಿ ಶರಣ ಮಾರ್ಗದಲ್ಲಿ ಮೊದಲ ಹೆಜ್ಜೆ “ಅರಿವು”. ಅರಿವು ಬಂದಾಗ ಮಾತ್ರ ಆತ್ಮಜ್ಞಾನ, ಲಿಂಗಭಾವ, ಗುರುವಿನ ಅನುಗ್ರಹ ಫಲಿಸುತ್ತದೆ. ಇದನ್ನು ಬಸವಣ್ಣನವರು “ಅರಿವಿಲ್ಲದವರೆಲ್ಲರೂ ಕತ್ತಲಿನಲ್ಲಿ ತಿರುಗಾಡಿದಂತೆ” ತಮ್ಮ ಒಂದು ವಚನದಲ್ಲಿ ಸೂಕ್ಷ್ಮವಾಗಿ ತಿಳಿಸಿದ್ದಾರೆ.
“ಆತ್ಮನಿದ್ದಲ್ಲಿ ಅರಿಯದೆ, ಹಸು ಸತ್ತ ಮತ್ತೆ ಮೋಕ್ಷವನರಸಲುಂಟೆ?”
ಆತ್ಮದ ನಿಜ ಸ್ವರೂಪವನ್ನು ಅರಿಯದೆ ಇದ್ದರೆ, ಅದು ಕೇವಲ ದೇಹದೊಳಗೆ ನಿಷ್ಕ್ರಿಯವಾಗಿರುತ್ತದೆ. ಅಜ್ಞಾನದಲ್ಲಿ ಬದುಕಿದವನು ಸತ್ತು ಹೋದರೆ ಆತ್ಮಜ್ಞಾನವಿಲ್ಲದ್ದಕ್ಕಾಗಿ ಮೋಕ್ಷ ಸಿಗುವುದಿಲ್ಲ. ಹೇಗೆಂದರೆ, ಹಸು ಸತ್ತು ಹೋದರೆ ಹೇಗೆ ಹಾಲು ಸಿಗುವುದಿಲ್ಲವೊ ಮೋಕ್ಷವು ದೇಹ ಮರಣದ ನಂತರ ಸ್ವಯಂ ಸಿಗುವುದಿಲ್ಲ. ಅದು ಜೀವಂತವಾಗಿದ್ದಾಗಲೇ ಅರಿವಿನಿಂದ ಪಡೆದುಕೊಳ್ಳಬಹುದು.
“ಎಚ್ಚರಿಕೆ ತನಗಿದ್ದಲ್ಲಿ ನಾನೊಂದು ನಿಶ್ಚಯದ ಮದ್ದ ತಂದೆ, ಆ ಮದ್ದಿನ ಭೇದ ಘಟಕ್ಕೆ ಕೇಡಿಲ್ಲ”
ಅರಿವು (ಎಚ್ಚರಿಕೆ) ಇದ್ದಲ್ಲಿ ಗುರುತಿನ ಔಷಧಿ ಫಲಿಸುತ್ತದೆ. ಆ ಔಷಧಿಯೇ ಆತ್ಮಜ್ಞಾನ. ಇದರಿಂದ ಜನನ-ಮರಣ ಎಂಬ ರೋಗವೇ ನಿವಾರಣೆಯಾಗುತ್ತದೆ. ಆ ಮದ್ದಿನಿಂದ ಈ ಘಟಕ್ಕೆ (ದೇಹಕ್ಕೆ) ಕೇಡಿಲ್ಲ. ಆ ಔಷಧಿಯ (ಜ್ಞಾನ/ಅರಿವಿನ) ಗುಟ್ಟು ತಿಳಿದರೆ, ದೇಹಕ್ಕೆ (ಘಟಕ್ಕೆ) ಯಾವ ತೊಂದರೆಯೂ ಬರುವುದಿಲ್ಲ.
“ಆತ್ಮಂಗೆ ಭವವಿಲ್ಲ. ಅರಿವಿಂಗೆ ತುದಿ ಮೊದಲಿಲ್ಲ.”
ಆತ್ಮಕ್ಕೆ ಜನನ-ಮರಣಗಳ ಸಂಬಂಧವಿಲ್ಲ; ನಿಜವಾದ ಅರಿವು (ಜ್ಞಾನ) ಕ್ಕೆ ಆರಂಭವೂ ಇಲ್ಲ, ಅಂತ್ಯವೂ ಇಲ್ಲ.
“ಇದು ನಿರಿಗೆ ಕೊಳಬಲ್ಲಡೆ, ಗುರುವಿಂಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಧನ”
ಈ ತತ್ವವನ್ನು ಅರಿತವನು ಗುರುವಿಗೆ ತನ್ನ ದೇಹವನ್ನು, ಲಿಂಗಕ್ಕೆ ತನ್ನ ಮನಸ್ಸನ್ನು, ಜಂಗಮಕ್ಕೆ ತನ್ನ ಸಂಪತ್ತನ್ನು ಸಮರ್ಪಣೆ ಮಾಡುತ್ತಾನೆ.
“ರೋಗ ಹೋಯಿತು; ಬೇಗ ಅರಿದುಕೊಳ್ಳಿ’
ಈ ಮಾರ್ಗವನ್ನು ಅನುಸರಿಸಿದರೆ ಅಜ್ಞಾನವೆಂಬ ರೋಗ ಅಳಿಯುತ್ತದೆ. ಅದಕ್ಕಾಗಿ ಶರಣ ವೈದ್ಯ ಸಂಗಣ್ಣನವರು ಬೇಗನೆ ಎಚ್ಚೆತ್ತುಕೊಳ್ಳಲು ತಿಳಿಸುತ್ತಾರೆ. ಏಕೆಂದರೆ, ಸಮಯ ಯಾರ ಕೈಯಲ್ಲಿ ಇಲ್ಲ. ಈ ಸಮಯ ಅಳಿದು ಹೋಗುವ ಮೊದಲೇ ತಮ್ಮನ್ನು ತಾವು ಅರಿತುಕೊಳ್ಳಲು ಹೇಳುವರು.
ಶ್ರೀಮತಿ ಗೌರಿ ಓಂಪ್ರಕಾಶ ಕರಣಗಿ,
ಇಂಗ್ಲೀಷ ಉಪನ್ಯಾಸಕರು,
ಗುಲ್ಬರ್ಗ ಕಮ್ಯುನಿಟಿ ಕಾಲೇಜ್ ಫಾರ್ ವುಮೆನ್,
ವಿಕಾಸ ಅಕಾಡೆಮಿ ಆವರಣ,
ಐವಾನ್-ಎ-ಶಾಹಿ,
ಕಲಬುರಗಿ.
ಮೋಬೈಲ್. ಸಂ: 84534 07425
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ ದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in
![]()





Total views : 51417