
ವಾಯುವಿನ ಗುಣವ ಸರ್ಪ ಬಲ್ಲುದು.
ಮಧುರದ ಗುಣವ ಇರುಹೆ ಬಲ್ಲುದು.
ಗೋತ್ರದ ಗುಣವ ಕಾಗೆ ಬಲ್ಲುದು.
ವೇಳೆಯ ಗುಣವ ಕೋಳಿ ಬಲ್ಲುದು.
ಇದು ಕಾರಣ, ಮನುಷ್ಯಜನ್ಮದಲ್ಲಿ ಬಂದು,
ಶಿವಜ್ಞಾನಾನುಭವವನರಿಯದಿರ್ದಡೆ,
ಆ ಕಾಗೆ ಕೋಳಿಗಿಂದ ಕರಕಷ್ಟ ಕಾಣಾ, ಕಲಿದೇವರದೇವ.
(ಮಡಿವಾಳ ಮಾಚಿದೇವರ ಸಮಗ್ರ ವಚನಗಳು-2022 / ಸಂ. ಅಶೊಕ ದೊಮ್ಮಲೂರು / ಪುಟ ಸಂಖ್ಯೆ-225 / ವಚನ ಸಂಖ್ಯೆ-268)
ಅನುಭವ ಮಂಟಪದ ಮಹಾನ್ ಅನುಭಾವಿಗಳು ಮಡಿವಾಳ ಮಾಚಿದೇವರು. ಇವರ ಜನ್ಮಸ್ಥಳ ವಿಜಾಪುರ ಜಿಲ್ಲೆಯ ದೇವರ ಹಿಪ್ಪರಗಿ. ಇವರ ಗುರು ಶ್ರೀ. ಮಲ್ಲಿಕಾರ್ಜುನ, ತಂದೆ ಪರವತಯ್ಯಾ, ತಾಯಿ ಸುಜ್ಞಾನವ್ವ. ಹೆಂಡತಿ ಮಲ್ಲಿಗೆಮ್ಮ. ಕಾಯಕ ಶರಣರ ಬಟ್ಟೆಗಳನ್ನು ಮಡಿ ಮಾಡುವುದು. ಐಕ್ಯಸ್ಥಳ ದೇವರ ಹಿಪ್ಪರಗಿ ಅಂತಾ ಕೆಲವು ಉಲ್ಲೇಖಗಳಿ ಇದ್ದರೆ ಇನ್ನೂ ಕೆಲವು ಉಲ್ಲೇಖಗಳು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗೊಡಚಿ ಎಂದು ತಿಳಿಸುತ್ತವೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕಾರಿಮನಿಯೂ ಕೂಡ ಶರಣ ಮಡಿವಾಳ ಮಾಚಿದೇವರ ಐಕ್ಯಸ್ಥಳವೆಂದು ಬಿಂಬಿಸುತ್ತವೆ. ಈ ನಿಟ್ಟಿನಲ್ಲಿ ಸಂಶೋಧನೆಗಳು ಆಗಬೇಕಾಗಿದೆ.. ಅಂಕಿತನಾಮ “ಕಲಿದೇವರದೇವಾ” ಇಲ್ಲಿಯವರೆಗೆ ಶರಣ ಮಡಿವಾಳ ಮಾಚಿದೇವರು ಬರೆದಿರುವ ವಚನಗಳು 346. 2022 ರಲ್ಲಿ ಶ್ರೀ. ಅಶೋಕ ದೊಮ್ಮಲೂರು ಅವರು ಸಂಪಾದಿಸಿದ “ಮಡಿವಾಳ ಮಾಚಿದೇವರ ಸಮಗ್ರ ವಚನಗಳು” ಪುಸ್ತಕದಲ್ಲಿ 390 ಇನ್ನೂ ಹೆಚ್ಚಿನ ವಚನಗಳನ್ನು ಸಂಗ್ರಹಿಸಿ ಒಟ್ಟು 736 ವಚನಗಳನ್ನು ಕ್ರೋಢೀಕರಿಸಲಾಗಿದೆ.
ವಚನಕಾರರಾದ ಮಡಿವಾಳ ಮಾಚಿದೇವರು ಈ ವಚನದಲ್ಲಿ ಪ್ರಕೃತಿಯಲ್ಲಿರುವ ಮೂಕ ಸಂಕುಲವಾದ ಪ್ರಾಣಿ-ಪಶುಗಳನ್ನು ನಿದರ್ಶನವಾಗಿಟ್ಟುಕೊಂಡು ಹೇಗೆ ಬದುಕು ರೂಪಿಸಿಕೊಳ್ಳಬೇಕು ಎನ್ನುವುದನ್ನು ಮಾತನಾಡುವ ಮಾನವ ಕುಲಕ್ಕೆ ಸಂದೇಶವನ್ನು ಕೊಡುತ್ತಾರೆ. ಸರ್ಪ, ಇರುವೆ, ಕಾಗೆ, ಕೋಳಿ ಇವುಗಳಿಗೆ ಮಾತನಾಡುವ ಶಕ್ತಿ ದೇವರು ಕೊಡಲಿಲ್ಲ ಆದರೆ ಅವುಗಳಲ್ಲಿರವ ಜ್ಞಾನ ಕಂಡರೆ ಮಾನವ ಲೋಕ ಮೂಕವಾಗಬೇಕಾಗುತ್ತದೆ. ಈ ಪಶು ಪಕ್ಷಿ ಪ್ರಾಣಿಗಳು ಕಾಯಕ ಮಾಡುತ್ತ ದಾಸೋಹಗೈಯುತ್ತ, ನಾಳಿನ ಚಿಂತೆಯಿಲ್ಲದೆ ಇಂದು ಸಿಕ್ಕಿದ್ದರಲ್ಲಿಯೇ ತಿಂದು ಇನ್ನೂ ಉಳಿದವುಗಳಿಗೆ ಹಂಚುತ್ತವೆ ಎಂಬ ವಾಸ್ತವಿಕ ಸತ್ಯವನ್ನು ಈ ವಚನದಲ್ಲಿ ಕಾಣುತ್ತೇವೆ.
ಹಾವು ವಾಯು ಗುಣವನ್ನು ಬಹು ಬೇಗನೆ ಅರಿಯುತ್ತದೆ. ಗಾಳಿಯನ್ನು ಸೇವಿಸಿ ಅನೇಕ ತಿಂಗಳುಗಳ ಕಾಲ ಬದುಕುವುದೆಂಬುದು ಅನುಭಾವಿಗಳ ಮಾತು. ಮಳೆಗಾಲ ಪ್ರಾರಂಭವಾಗುವಾಗ ಮಳೆ ಬಂದು ಎಲ್ಲೆಡೆಯೂ ತಂಪಾದ ಗಾಳಿ ಬೀಸಲು ಪ್ರಾರಂಭಿಸಿದಾಗ ಸರ್ಪ ಅದನ್ನು ಮೊದಲು ತಿಳಿದುಕೊಳ್ಳುವದೆಂಬುದು ವಚನಕಾರ ಅಭಿಪ್ರಾಯವಾಗಿದೆ. ಹಾಗೇಯೇ ಸಿಹಿಯ ಗುಣವನ್ನು ಇರುವೆ ಬಲ್ಲದೆಂಬುದು ಎರಡನೆಯ ಸಾಲಿನಲ್ಲಿ ಬರುವ ಅರ್ಥವಾಗಿದೆ. ಎಲ್ಲಿ ಸಿಹಿ ಇರುತ್ತೊ ಆ ಕಡೆ ಅದು ಅರಿಸಿ ಹೋಗಿ ಅದರ ಸವಿಯನ್ನು ಪಡೆಯುತ್ತದೆ. ಕಾಗೆ ದಾಸೋಹ ಜ್ಞಾನಕ್ಕೆ ಉದಾಹರಣೆಯಾಗಿದೆ. ಕಾಗೆ ತನಗೆ ಆಹಾರ ಸಿಕ್ಕಾಗ ಒಬ್ಬಂಟಿಯಾಗಿ ತಿನ್ನುವುದಿಲ್ಲ, ಮತ್ತೆ ಮತ್ತೆ ಕೂಗುತ್ತ ತನ್ನ ಬಳಗವನ್ನೆಲ್ಲ ಕರೆದುಕೊಂಡೆ ತಿನ್ನುತ್ತದೆ. ಕೋಳಿಯಂತು ತನ್ನ ವೇಳೆಗೆ ಸರಿಯಾಗಿ ತಾನು ಕೂಗುತ್ತ ಮಲಗಿದ ಮಾನವ ಕುಲ ಎಬ್ಬಿಸುವದು.
ಈ ಇಡೀ ವಚನದ ಅರ್ಥಪೂರ್ಣ ಸಾಲು “ಶಿವ ಜ್ಞಾನವನ್ನರಿಯದಿದ್ದಡೆ” ಎಂಬುದಾಗಿದೆ. ಮಾನವನ ಅತಿಮುಖ್ಯ ಲಕ್ಷಣವೆಂದರೆ ಶಿವಜ್ಞಾನಿಯಾಗುವದು. ಅದು ಅಂತರ್‌ಜ್ಞಾನ ಮತ್ತು ಬಹಿರ್‌ಜ್ಞಾನ ತತ್ವಗಳನ್ನೊಳಗೊಂಡಿದೆ. ಇದಕ್ಕೆ ಪೂರಕವಾಗಿ ಪಂಚಾಚಾರ, ಷಟ್‌ಸ್ಥಲಗಳ ಅಧೀನರಾಗಿ ನಡೆಯಬೇಕು. ಇಷ್ಟಲಿಂಗ ಹಿಡಿದು ಮೂರು ಕಾಲ ಕುಳಿತರೆ ಸಾಲದು. ಆ ಪೂಜೆ ಅರಿವಿನ ಮಾರ್ಗದಿಂದ ನಡೆಯಬೇಕು. ಪರಧನ, ಪರಸತಿ, ಪರದೈವದ ಚಿಂತನೆಯ ಬಿಟ್ಟು ಏಕಲಿಂಗಾನಿಷ್ಟನಾಗಿ ಶಿವಾಚಾರಯುಳ್ಳವರಾಗಿ ಮುನ್ನಡೆಯಬೇಕು.
ಇಂತಹ ಸ್ಥಿತಿಗೆ ಆತ ಬರಬೇಕಾದರೆ ಬಹಿರಂಗದ ಕಾರ್ಯಗಳು ಅಷ್ಟೆ ಜ್ಞಾನದಿಂದ ಕೂಡಿರಬೇಕು. ಪಂಚಾಚಾರಗಳು ಅಂತಹ ಶಕ್ತಿ ಸಾಧಕರಿಗೆ ನೀಡುತ್ತವೆ. ಲಿಂಗಾಚಾರವಂತನಾಗುವದರೊಂದಿಗೆ ಸದಾಚಾರಿಯಾಗಿ ಎಲ್ಲರೂ ನನ್ನವರೆನ್ನುತ್ತ, ಕಾಯಕನಿಷ್ಠಗಳಾಗಿ, ದಾಸೋಹನಿಷ್ಟರಾಗಿ ಅಷ್ಟೆ ವಿನಯವಂತರಾಗಿ ನಡೆಯಬೇಕಾಗುವದು. ಸಮಾಜಕ್ಕೆ ಮಾನವೀಯತೆ ಮೌಲ್ಯಗಳಿಗೆ ಧಕ್ಕೆ ಬಂದಾಗ ಗಣಾಚಾರಿಯಾಗಿ ನಡೆದುಕೊಳ್ಳಬೇಕಾಗುತ್ತದೆ. ಅಂತಹ ಜ್ಞಾನಿಯಾಗದಿದ್ದಡೆ ಆ ಹಾವು, ಇರುವೆ, ಕಾಗೆಗಳಿಗಿಂತ ಮಾನವ ಕಡೆಗಾಯಾಗುತ್ತಾನೆ.
ಅದಕ್ಕಾಗಿ ಮಾನವ ಜನ್ಮದ ಮೂಲ ತತ್ವವನ್ನು ತಿಳಿದುಕೊಂಡು ಅರಿವು ಉಳ್ಳವರಾಗಿ ಬದುಕನ್ನು ರೂಪಿಸಿಕೊಂಡು ಇಹಪರಗಳೆರಡನ್ನೂ ಗೆಲ್ಲಬೇಕೆಂಬುವುದೇ ಈ ವಚನದ ಮುಖ್ಯ ಅರ್ಥವಾಗಿದೆ.
ಶ್ರೀಮತಿ ಸರೋಜಾ ಜಾಕರೆಡ್ಡಿ
ಶರಣ ಸಾಹಿತ್ಯ ಚಿಂತಕರು
ಗೋದೂತಾಯಿ ನಗರ,
ಕಲಬುರಗಿ.
ಮೋಬೈಲ್. ಸಂ. 84534 31313
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ ದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in
![]()





Total views : 51417
Just perfect super 👌