ಡೋಹರ ಕಕ್ಕಯ್ಯನವರ ವಚನ – ನಿರ್ವಚನ | ಶ್ರೀಮತಿ. ಸಂಗೀತಾ ಕೊಡ್ಲಿ, ಕಲಬುರಗಿ.

ಎನ್ನ ಕಷ್ಟ ಕುಲದಲ್ಲಿ ಹುಟ್ಟಿದೆನೆಂಬ ಕರ್ಮವ ಕಳೆದು
ಮುಟ್ಟಿ ಪಾವನವ ಮಾಡಿ
ಕೊಟ್ಟನಯ್ಯಾ ಎನ್ನ ಕರಸ್ಥಲಕ್ಕೆ ಲಿಂಗವ!
ಆ ಲಿಂಗ ಬಂದು ಸೋಂಕಲೊಡನೆ
ಎನ್ನ ಸರ್ವಾಂಗದ ಅವಲೋಹವಳಿಯಿತ್ತಯ್ಯಾ!
ಎನ್ನ ತನುವಿನಲ್ಲಿ ಗುರುವ ನೆಲೆಗೊಳಿಸಿದ,
ಎನ್ನ ಮನದಲ್ಲಿ ಜಂಗಮವ ನೆಲೆಗೊಳಿಸಿದ,
ಎನ್ನ ಅರುಹಿನಲ್ಲಿ ಪ್ರಸಾದವ ನೆಲೆಗೊಳಿಸಿದ!
ಇಂತೀ ತ್ರಿವಿಧ ಸ್ಥಾನವ ಶುದ್ಧವ ಮಾಡಿ
ಚತುರ್ವಿಧಸಾರಾಯಸ್ಥಲವ ಸಂಬಂಧವ ಮಾಡಿದ
ಸಂಗನ ಬಸವಣ್ಣನ ಕರುಣದಿಂದ
ಪ್ರಭುದೇವರ ಶ್ರೀಪಾದವ ಕಂಡು ಬದುಕಿದೆನು ಕಾಣಾ!
ಅಭಿನವ ಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-336/ವಚನ ಸಂಖ್ಯೆ-987)

ಡೋಹರ ಕಕ್ಕಯ್ಯ ಶರಣರು ಅನುಭವಮಂಟಪದ ಅನುಭಾವಿಗಳು. ಅಮರಗಣಂಗಳಲ್ಲಿ ಹಿರಿಯರಾಗಿರುವ ಇವರು ಮೂಲತಃ ಮಧ್ಯಪ್ರದೇಶದ ಮಾಳವ್ಯ ಪ್ರದೇಶದಿಂದ ಕಲ್ಯಾಣಕ್ಕೆ ಬಂದವರು. ಕಲ್ಯಾಣದಲ್ಲಿ ತೊಗಲು ಹದ ಮಾಡುವ ಕಾಯಕ ಕೈಗೊಳ್ಳುವುದರ ಮುಖಾಂತರ ಕಾಯಕ ಕಲ್ಪತರುವಾದರು. ಇವರ ತಂದೆ ಮುದಿವೀರ. ತಾಯಿ ಭೀವ್ವಾ ಮಡದಿ ಮಲ್ಲಿದೇವಿಯವರು. ಮಲ್ಲಿದೇವಿಯವರನ್ನು ಭಿಷ್ಟಾದೇವಿ ಎಂದೂ ಕರೆಯುವರು. ಧೂಳಯ್ಯ ಎಂಬ ಮಗನು ಇವರಿಗಿದ್ದನು. ಬಸವ ಕಲ್ಯಾಣದ ಸಮೀಪದ ತೊಗಲೂರು ಇವರ ಕಾಯಕ ನೆಲೆ, ಮುಂದೆ ಇವರು ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲ್ಲೂಕಿನ ಕಕ್ಕೇರಿ ಎನ್ನುಗ್ರಾಮದಲ್ಲಿ ಲಿಂಗೈಕ್ಯರಾದರು. ಇವರ ವಚನಾಂಕಿತಅಭಿನವಮಲ್ಲಿಕಾರ್ಜುನ”. ಇವರ ಆರು ವಚನಗಳು ಇಲ್ಲಿಯವರೆಗೆ ಲಭ್ಯವಾಗಿವೆ.

ವಚನ ನಿರ್ವಚನ:
ಡೋಹರ ಕಕ್ಕಯ್ಯನವರ ಈ ವಚನ ಅವರು ತಮ್ಮ ಆತ್ಮವಿಮರ್ಶೆ ಮಾಡಿಕೊಂಡಂತೆ ಇದೆ. ಒಂದರ್ಥದಲ್ಲಿ ಹನ್ನೆರೆಡನೆಯ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದ ಸಮಾನತೆ ತತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ಪ್ರತಿಯೊಂದು ಸಾಲು ಬಸವಣ್ಣನವರಿಂದ ತಾನೆ ಯಾವ ಮಟ್ಟಕ್ಕೇರಿದೆನೆಂಬುದನ್ನು ತಿಳಿಸುತ್ತದೆ.

ಮೊದಲನೆಯ ಸಾಲಿನಲ್ಲಿಯೆ ಅವರು ಜಾತಿಯತೆಯಿಂದ ಎಷ್ಟರ ಮಟ್ಟಿಗೆ ಬೆಂದವರು, ನೊದವರಾಗಿದ್ದರೆಬುದು ತಿಳಿದು ಬರುತ್ತದೆ. ತಾನು ಹುಟ್ಟಿದ್ದು ಕೀಳು ಕುಲವೆಂದವರು ಕರೆಯದೆ ಅದು ಕಷ್ಟ ಕುಲವಾಯಿತು ಎನ್ನುತ್ತಾರೆ. ಇಂತಹದರಲ್ಲಿ ಹುಟ್ಟಿ ಅವಮಾನ ಎದುರಿಸಬೇಕಾಯಿತೆ ಹೊರತು ಮತ್ತಾವ ಸುಖ ಲಭಿಸಲಿಲ್ಲ ಎನ್ನುತ್ತ ಅಂತಹ ಸುಖ ಕೊಟ್ಟು ಗುರುವಾದವರು ಬಸವಣ್ಣನವರು ಎನ್ನುತ್ತಾರೆ.

ಎರಡನೇಯ ಸಾಲು ಬಸವಣ್ಣನವರು “ಎನ್ನ ಮುಟ್ಟಿ ಲಿಂಗ ಕೊಟ್ಟರು” ಎನ್ನುವಲ್ಲಿ ಅವರೇ ಎನಗೆ ಲಿಂಗದೀಕ್ಷೆ ನೀಡಿದರು ಎಂಬುದು ಹೇಳುತ್ತಾರೆ. ಇಂತಹ ಜನರ ನೆರಳು ಬಿದ್ದರೆ ಪಾಪವೆಂಬ ಭಾವನೆಯಿದ್ದ ಕಾಲಘಟ್ಟದಲ್ಲಿ ಬಸವಣ್ಣನವರು ಮುಟ್ಟಿದರು ಎಂದು ಹೇಳವಲ್ಲಿ ವಚನಕಾರರು ಅಭಿಮಾನ ಪಡುತ್ತಾರೆ.

ತನುವು ಸೊಂಕಲೊಡನೆ ಇಂದ್ರಿಯಗಳು ಅರಿಷಡ್‌ವರ್ಗಗಳು ಮಲತ್ರಯಗಳು, ಪಂಚಸೂತಕಗಳು, ಸಪ್ತವ್ಯಸನಳು ಇವೆಲ್ಲವುಗಳಿಂದ ಇಷ್ಟಲಿಂಗ ಮುಕ್ತಿಗೊಳಿಸಿತು ಎನ್ನುತ್ತಾರೆ. ಲಿಂಗ ಅನುಭವದ ಮೂಲ ನಿಜವಾದ ಅನುಭಾವವಾಗಿದ್ದು ಸಂಪೂರ್ಣವಾಗಿ ವ್ಯಕ್ತಿಯ ಆಂತರಿಕ ಸ್ಥಿತಿಯನ್ನು ತೊಳೆದು ಭಕ್ತಿ ಮೂಡಿಸುತ್ತದೆ. ಲಿಂಗದ ಅನುಭವ ಕೇವಲ ಭಾವನೆ ಮಾತ್ರವಲ್ಲ ಅದು ದೇಹ ಮನಸ್ಸಿನ ಸಮಗ್ರ ಪವಿತ್ರತೆಯನ್ನು ತಂದು ಕೊಡುತ್ತದೆ. ಅದಕ್ಕಾಗಿಯೇ ಶರಣರು ಸರ್ವಾಂಗದ ಅವಲೋಹನ ಅಳಿದು ಹೋಯಿತು ಎನ್ನುತ್ತಾರೆ.

ಯಾವ ಜನರಿಗೆ ದೇವರು ಧರ್ಮಗಳೆಲ್ಲ ದೂರವಾಗಿದ್ದವೋ ಅಂತಹವರ ಎದೆಯ ಮೇಲೆ ಲಿಂಗ ಕಟ್ಟುವ ಮೂಲಕ ಬಸವಣ್ಣನವರು ಇಡೀ ಸರ್ವಾಂಗ ಜನರ ಬಂಧನವನ್ನೇ ಅಳಿಸಿಬಿಟ್ಟರು ಎನ್ನುವಲ್ಲಿ ಇಡೀ ಬಸವಣ್ಣನವರ ಕಾರ್ಯವೈಖರಿಯನ್ನು ನಮ್ಮ ಗಮನಕ್ಕೆ ತರುತ್ತಾರೆ.

ಮುಂದುವರೆದು ಅವಲೋಹವೆ ಕಳೆದರು ಎನ್ನುತ್ತಾರೆ. ಮುಂದಿನ ಮೂರು ಸಾಲುಗಳಲ್ಲಿ ಎನ್ನ ತನು, ಮನ ಮತ್ತು ಅರಿವುಗಳಲ್ಲಿ ಗುರು ಜಂಗಮ ಪ್ರಸಾದ ನೆಲೆಗೊಳಿಸಿ ಅಂತರಂಗದ ಕೀಳರಿಮೆ, ಅರಿಷಡ್ವರ್ಗಗಳನ್ನು ಅಳಿಸಿ ತನ್ನ ವ್ಯಕ್ತಿತ್ವವನ್ನೆ ಹಸನುಗೊಳಿಸಿದ ಬಸವಣ್ಣನವರ ಮಹಿಮೆ ಅರಿಯುವದು ಸಾಮಾನ್ಯರಿಗೆ ಸಾಧ್ಯವಿಲ್ಲವೆಂಬ ಸೂಚ್ಯಾರ್ಥವು ಇಲ್ಲಿ ಕಾಣಬಹುದು.

ಶ್ರೀಮತಿ ಸಂಗೀತಾ ಕೊಡ್ಲಿ,
ಶರಣ ತತ್ವ ಚಿಂತಕರು,
ಗೋದೂತಾಯಿ ನಗರ,
ಕಲಬುರಗಿ.
ಮೋಬೈಲ್.‌ ಸಂ. 94490 03269.

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನಸಾಹಿತ್ಯ ಮಂದಾರ ಫೌಂಡೇಶನ್ ದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in

Loading

This Post Has One Comment

  1. Rajashekhar padshetty

    Very nicely explained the meaning of this vachana.

Leave a Reply