ನಾಥರು ಹಾಗೂ ಶರಣರು | ಡಾ. ಬಸವರಾಜ ಸಬರದ, ಬೆಂಗಳೂರು.

ಅಧ್ಯಾಯ – 01: ನಾಥರು ಹಾಗೂ ಶರಣರು

ಭಾರತದಲ್ಲಿ ಅನೇಕ ಧಾರ್ಮಿಕ ಪಂಥಗಳು ಆಗಿ ಹೋಗಿವೆ. ಧಾರ್ಮಿಕ ಕ್ಷೇತ್ರದಲ್ಲಿ ಅನೇಕ ಬೆಳವಣಿಗೆಗಳಾಗಿವೆ. ಧರ್ಮ ಮತ್ತು ಚಳುವಳಿಗಳು ಒಂದು ಕಡೆ ಕೂಡುವುದಿಲ್ಲವೆಂಬ ನಂಬಿಕೆಯಿದೆ. ಮತ-ಧರ್ಮಗಳ ಉದ್ದೇಶವೇ ಬೇರೆ, ಚಳುವಳಿಗಳ ಉದ್ದೇಶವೇ ಬೇರೆಯೆಂದು ಹೇಳಿಕೊಂಡು ಬರಲಾಗಿದೆ. ಆದರೆ ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕದ ಶರಣರು ಧರ್ಮವನ್ನು ಒಂದು ಚಳುವಳಿಯ ಹಾಗೆ ಬೆಳೆಸಿದರು. ಆಗ ಶರಣಧರ್ಮವು ಶರಣ ಚಳುವಳಿಯಾಗಿ ರೂಪಗೊಂಡಿತು. ಧಾರ್ಮಿಕ ಪರಂಪರೆಯಲ್ಲಿ ಹೀಗೆ ಧರ್ಮವೊಂದು ಚಳುವಳಿಯ ರೂಪ ಪಡೆದದ್ದು 12 ನೇಯ ಶತಮಾನದಲ್ಲಿ, ಅದೂ ಕರ್ನಾಟಕದಲ್ಲಿ ಕನ್ನಡದ ವಚನಗಳ ಮೂಲಕವೆಂಬ ಸಂಗತಿಯೇ ಅಚ್ಚರಿ ಹುಟ್ಟಿಸುವಂತಹದ್ದಾಗಿದೆ.

ಹತ್ತನೇ ಶತಮಾನದಲ್ಲಿ ಉತ್ತರ ಭಾರತದಲ್ಲಿ ಉದಯವಾದ ನಾಥಪಂಥ. ಶರಣ ಧರ್ಮಕ್ಕಿಂತಲೂ ಎರಡು ಶತಮಾನಗಳಷ್ಟು ಪ್ರಾಚೀನವಾದುದು. ಹತ್ತನೇ ಶತಮಾನದಲ್ಲಿ ಹುಟ್ಟಿದ ನಾಥಪಂಥ ಭಾರತದ ಉದ್ದಗಲಕ್ಕೂ ವ್ಯಾಪಿಸಿತ್ತು. ಭಾರತದಲ್ಲಿ ಇಂದಿಗೂ ನಾಥಪಂಥದ ಅನೇಕ ಮಠಗಳಿವೆ. ನಾಥಪಂಥದ ಅನುಯಾಯಿಗಳಿದ್ದಾರೆ. ಆದರೆ ಈ ಮಾತನ್ನು ವಚನ ಚಳುವಳಿಗೆ ಅನ್ವಯಿಸಿ ಹೇಳುವಂತಿಲ್ಲ. ವಚನ ಚಳುವಳಿ ನಡೆದದ್ದು ಹನ್ನೆರಡನೆಯ ಶತಮಾನದಲ್ಲಿ. 15 ನೇ ಶತಮಾನದ ಹೊತ್ತಿಗೆ ಅದರ ಚಳವಳಿಯ ಕಾವು ಕಡಿಮೆಯಾಗಿ ಅದು ವೀರಶೈವ ಮಠೀಯ ವ್ಯವಸ್ಥೆಯಾಗಿ ಬೆಳೆದುಕೊಂಡು ಬಂದಿತು. ಇಂದೂ ಕೂಡ ಅನೇಕ ವೀರಶೈವ ಮಠಗಳಿವೆ. ಆಧುನಿಕ ವಚನಕಾರರಿದ್ದಾರೆ. ಆದರೆ ಚಳುವಳಿ ಕಳೆದುಹೋಗಿದೆ. ಧರ್ಮವೊಂದು ಚಳುವಳಿಯಾಗಿ ರೂಪಗೊಂಡರೆ ಎಂಥಹ ಸವಾಲುಗಳನ್ನು ದುರಿಸಬೇಕಾಗುತ್ತದೆ ಎಂಬುದಕ್ಕೆ 12 ನೇ ಶತಮಾನದ ವಚನ ಚಳುವಳಿಯೇ ಜೀವಂತ ಉದಾಹರಣೆಯಾಗಿದೆ.

15 ನೇ ಶತಮಾನ, ವೀರಶೈವ ಧರ್ಮದ ಪುನರುತ್ಥಾನ ಕಾಲವೆಂದು ಹೇಳುತ್ತಾರೆ. ಈ ಮಾತು ಸತ್ಯವಿರಬಹುದು. ಆದರೆ ಅದು ವಚನ ಚಳುವಳಿಯ ಅವನತಿಯ ಕಾಲವೆಂಬ ಮಾತೂ ಕೂಡ ಅಷ್ಟೇ ಸತ್ಯವಾಗಿದೆ. 15 ನೇ ಶತಮಾನದಲ್ಲಿ ಬಂದ ನೂರೊಂದು ವಿರಕ್ತರು ಚಳುವಳಿಯನ್ನು ಕಿತ್ತೊಗೆದು ಮಠೀಯ ವ್ಯವಸ್ಥೆಯನ್ನು ಗಟ್ಟಿಗೊಳಿಸಿದರು. 10 ನೇ ಶತಮಾನದಲ್ಲಿ ಜನಿಸಿದ ನಾಥಪಂಥಕ್ಕೆ ಈ ದುರವಸ್ಥೆ ಬರಲಿಲ್ಲ. 15 ನೇ ಶತಮಾನದ ಹೊತ್ತಿಗೆ ವೀರಶೈವವೆಂಬುದು ಮಠೀಯ ವ್ಯವಸ್ಥೆಯಾಗಿ ಗಟ್ಟಿಗೊಂಡಿತು. 12 ನೇ ಶತಮಾನದಲ್ಲಿ ಕಾಯಕವೇ ಪೂಜೆಯಾಗಿತ್ತು, 15 ನೇ ಶತಮಾನದಲ್ಲಿ ಪೂಜೆಯೇ ಕಾಯಕವಾಯಿತು. ಶರಣರ ಕಾಲಕ್ಕೆ ವೃತ್ತಿ ಸೂಚಕ ಪದಗಳೇ ಅಡ್ಡ ಹೆಸರುಗಳಾಗಿದ್ದವು. ನೂರೊಂದು ವಿರಕ್ತರ ಕಾಲದಲ್ಲಿ ಅನುಷ್ಠಾನ-ಪೂಜೆ ಮಾಡುವ ಸ್ಥಳಗಳೇ ಅಡ್ಡ ಹೆಸರುಗಳಾದವು. ಹನ್ನೆರಡನೇ ಶತಮಾನದ ತೋಂಟದ ಗೊಗ್ಗಯ್ಯನವರು ತೋಟದಲ್ಲಿ ಕೃಷಿ ಕಾಯಕ ಮಾಡುತ್ತಿದ್ದರು. ಹೀಗಾಗಿ ಆವರಿದ್ದ ತೋಂಟದ ಅಡ್ಡ ಹೆಸರು ಕಾಯಕದ ಕುರುಹಾಗಿತ್ತು. 15 ನೇ ಶತಮಾನದಲ್ಲಿ ಬರುವ ತೋಂಟದ ಸಿದ್ಧಲಿಂಗೇಶ್ವರ ಅಡ್ಡ ಹೆಸರೂ ಕೂಡ ತೋಂಟದ ಎಂದಿದೆ. ಆದರೆ ಸಿದ್ಧಲಿಂಗೇಶ್ವರರು ತೋಟದಲ್ಲಿ ಅನುಷ್ಠಾನ ಮಾಡುತ್ತಿದ್ದರು. ಆದ್ದರಿಂದ ಆವರಿಗೆ ಆ ಅಡ್ಡಹೆಸರು ಬಂತು. ಹೀಗೆ ಕಾಯಕವೆಂಬುದು ಅನುಷ್ಠಾನವಾಗಿ-ಪೂಜೆಯ ಸಂಕೇತವಾಗಿ ಬದಲಾವಣೆ ಹೊಂದಿತು. ಶರಣರ ಕಾಲದಲ್ಲಿ ಚಳುವಳಿಯೇ ಜಂಗಮವಾಗಿತ್ತು. ವಿರಕ್ತರ ಕಾಲದಲ್ಲಿ ಜಂಗಮನೇ ಚಳುವಳಿಯನ್ನು ನುಂಗಿದ. 12 ನೇ ಶತಮಾನದಲ್ಲಿ ಸ್ಥಾವರ ಜಂಗಮ ಇವೆರಡೂ ಪದಗಳು ತದ್ವಿರುದ್ಧದ ಅರ್ಥವನ್ನು ಕೊಡುತ್ತಿದ್ದವು. ಶರಣರು ಹೇಳಿದ ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ವೆಂಬ ಮಾತು ಇದನ್ನೇ ಹೇಳುತ್ತದೆ. ಆದರೆ 15 ನೇ ಶತಮಾನದಲ್ಲಿ ಇವೆರಡೂ ಪದಗಳು ಒಂದಾಗಿ ಬಿಟ್ಟವು. ಮಠೀಯ ವ್ಯವಸ್ಥೆಯ ಬೆಳವಣಿಗೆಯಲ್ಲಿ ಪೀಠಾಧೀಶನಾದ ಜಂಗಮ, ಸ್ಥಾವರವಾಗಿ ಬಿಟ್ಟ. ಹೀಗೆ 12 ನೇ ಶತಮಾನದಲ್ಲಿ ಚಳುವಳಿಯಾಗಿದ್ದ ಧರ್ಮವು 15 ನೇ ಶತಮಾನದ ಹೊತ್ತಿಗೆ ವೀರಶೈವ ಮತವಾಗಿ ಬಿಟ್ಟಿತು. ಈಗಂತೂ ಅದು ಜಾತಿಯಾಗಿ ಬಿಟ್ಟಿದೆ.

ನಾಥಪಂಥದ ಬೆಳವಣಿಗೆ ಹಾಗೆ ತದ್ವಿರುದ್ಧವಾಗಿ ಬೆಳೆದುಕೊಂಡು ಬರಲಿಲ್ಲವಾದರೂ, ಮುಂದೆ ಬಂದ ನಾಥರು 10 ನೇ ಶತಮಾನದ ನಾಥರ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡರು. ನಂತರದಲ್ಲಿ ಬೆಳೆದ ಅನೇಕ ನಾಥಪಂಥಗಳು ವಾಮ ಮಾರ್ಗಕ್ಕಿಳಿದವು. ಹೀಗಾಗಿ 10 ನೇ ಶತಮಾನದ ನಾಥರ ಸಾಧನೆ-ಆಶಯಗಳು 12 ನೇ ಶತಮಾನದ ಹೊತ್ತಿಗೆ ಮರೆಯಾಗಿ ವಾಮ ಮಾರ್ಗವನ್ನನುಸರಿಸಿದ್ದವು. ಈ ಕಾರಣಕ್ಕಾಗಿಯೇ ಹನ್ನೆರಡನೆಯ ಶತಮಾನದ ಶರಣರು ಅನೇಕ ಸಂದರ್ಭಗಳಲ್ಲಿ ನಾಥರ ವಾಮ ಮಾರ್ಗದ ಕ್ರಿಯೆಗಳನ್ನು ವಿಡಂಬಿಸಿದ್ದಾರೆ. ಹೀಗೆ 10 ನೇ ಶತಮಾನದಲ್ಲಿ ಹುಟ್ಟಿದ ನಾಥಪಂಥ 12 ನೇ ಶತಮಾನದ ಹೊತ್ತಿಗೆ ಅದರ ಮೂಲೋದ್ದೇಶವನ್ನು ಮರೆತರೆ, 12 ನೇ ಶತಮಾನದಲ್ಲಿ ಹುಟ್ಟಿದ ವಚನ ಚಳುವಳಿ 15 ನೇ ಶತಮಾನದ ಹೊತ್ತಿಗೆ ನಿರ್ನಾಮವಾಯಿತು. ಇವೆರಡೂ ಸಂದರ್ಭಗಳು ಈ ವ್ಯವಸ್ಥೆಯ ದುರಂತಕ್ಕೆ ಕಾರಣವಾಗಿರುವ ಜೀವಂತ ಉದಾಹರಣೆಗಳಾಗಿವೆ.

ಈ ಹಿನ್ನಲೆಯಲ್ಲಿ ನಾಥಪಂಥವನ್ನು ಹಾಗೂ ವಚನ ಚಳುವಳಿಯನ್ನು ತೌಲನಿಕವಾಗಿ ವಿವೇಚಿಸಬೇಕಾಗಿದೆ. ನಾಥಪಂಥವನ್ನು, ವಚನ ಚಳುವಳಿಯನ್ನು ಪರಿಚಯಿಸುವುದು, ವೈಭವೀಕರಿಸುವುದೇ ಹೆಚ್ಚಾಗಿದೆ. ಆ ಪರಂಪರೆಗಳು ಆಯಾ ಕಾಲಘಟ್ಟದಲ್ಲಿನ ಒತ್ತಡದಲ್ಲಿ ಹೇಗೆ ಕುರೂಪಿಗಳಾಗಿ, ಕಾಣಿಸಿಕೊಂಡವೆಬುದನ್ನು ಗಂಭೀರವಾಗಿ ಚಿಂತಿಸಬೇಕಾಗಿದೆ, ಮುಕ್ತವಾಗಿ ಚರ್ಚಿಸಬೇಕಾಗಿದೆ. ಆಗ ಮಾತ್ರ ಧರ್ಮ, ಚಳುವಳಿ ಮತ್ತೆ ಅರ್ಥ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಧರ್ಮ ಮತ್ತು ಚಳುವಳಿಗಳು ಕಾಲ ಕಾಲಕ್ಕೆ ಈ ವ್ಯವಸ್ಥೆಯಲ್ಲಿ ಎದುರಿಸಿದ ಸವಾಲುಗಳು, ಅನುಭವಿಸಿದ ಸಂಕಟಗಳು ಮುಖ್ಯವೆಂದೆನಿಸಿದಾಗ ನಿಜವಾದ ಚರ್ಚೆ ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಎಲ್ಲವೂ ಇಲ್ಲಿ ವೈಭವೀಕರಣದ ವಸ್ತುಗಳಾಗಿ ಮಾರ್ಪಡುತ್ತವೆ. ಈ ನಿಟ್ಟಿನಲ್ಲಿ ಇಲ್ಲಿ ನಾಥರನ್ನು – ಶರಣರನ್ನು ಕುರಿತು ತೌಲನಿಕವಾಗಿ ವಿವೇಚಿಸಲಾಗಿದೆ.

ಅಧ್ಯಾಯ – 02: ನಾಥಪಂಥ

ನಾಥಪಂಥಕ್ಕೆ ಸಂಬಂಧಿಸಿದಂತೆ ಅನೇಕ ಕೃತಿಗಳು ಪ್ರಕವಾಗಿವೆ. ಅವುಗಳಲ್ಲಿ ಸಂಸ್ಕೃತ ಮತ್ತು ಹಿಂದಿ ಭಾಷೆಯಲ್ಲಿ ರಚನೆಯಾಗಿರುವ ಕೃತಿಗಳ ಸಂಖ್ಯೆ ಹೆಚ್ಚಾಗಿವೆ. ರಾಹುಲ್ ಭಾರತಿಯವರ ಕೃತಿಗಳು ನಾಥಪಂಥದ ಉಗಮ ವಿಕಾಸದ ಚರಿತ್ರೆಯನ್ನು ಕಟ್ಟಿಕೊಡುತ್ತವೆ. 1950 ರಲ್ಲಿ ಪ್ರಕಟವಾಗಿರುವ ಡಾ. ಹಜಾರಿ ಪ್ರಸಾದ್ ದ್ವಿವೇದಿಯವರ ನಾಥ ಸಂಪ್ರದಾಯಮ್ ಕೃತಿ ಗಮನಾರ್ಹವಾಗಿದೆ. 1958 ರಲ್ಲಿ ಡಾ. ಧರ್ಮವೀರ ಭಾರತಿ ಅವರಿಂದ ಸಿದ್ದ ಸಾಹಿತ್ಯ ಕೃತಿ ಪ್ರಕಟವಾಗಿದೆ.

ಕನ್ನಡದಲ್ಲಿ ಕೆಲವು ಕೃತಿಗಳು ಮಾತ್ರ ಅನುವಾದಗೊಂಡಿವೆ. ಗೋರಖನಾಥರ ಸಿದ್ಧ ಸಿದ್ಧಾಂತ ಪದ್ಧತಿ ಕೃತಿಯನ್ನು ಸಂಸ್ಕೃತದಿಂದ ಕನ್ನಡಕ್ಕೆ ಶ್ರೀ ಕಡವ ಶಂಭು ಶರ್ಮಾ ಅವರು 1958 ರಲ್ಲಿ ಅನುವಾದಿಸಿ ಪ್ರಕಟಿಸಿದ್ದಾರೆ. 2005 ರಲ್ಲಿ ಪ್ರಕಟವಾಗಿರುವ ನಾಥಪಂಥದ ಅನುವಾದಿತ ಕೃತಿಗಳು ನಾಥಪಂಥದ ಮಹತ್ವದ ದಾಖಲೆಯಾಗಿದೆ. ಈ ಕೃತಿಯನ್ನು ಕಡವ ಶಂಭು ಶರ್ಮಾ ಅವರೇ ಅನುವಾದಿಸಿದ್ದಾರೆ. ಚಿ. ಕುಲಕರ್ಣಿ ಅವರ ಶ್ರೀ ನವನಾಥ ಕಥಾಸಾರ 1977 ರಲ್ಲಿ ಬೆಳಗಾವಿಯ ಸರಸ್ವತಿ ಪುಸ್ತಕ ಭಂಡಾರದಿಂದ ಪ್ರಕಟವಾಗಿವೆ. ಬಿ. ಸಿದ್ದಪ್ಪನವರ ನಾಥಪಂಥ ಶೈವಧರ್ಮ ಕೃತಿ ಚಿತ್ರದುರ್ಗ ಜಿಲ್ಲೆಯ ನಾಥಪಂಥ ಸಮಾಜದಿಂದ ಪ್ರಕಟವಾಗಿದೆ. ಮ. ಸು. ಕೃಷ್ಣಮೂರ್ತಿಯವರ ಸಿದ್ಧ ಸಾಹಿತ್ಯ ಕೃತಿ ಮೈಸೂರು ವಿಶ್ವವಿದ್ಯಾಲಯದಿಂದ 1982 ರಲ್ಲಿ ಪ್ರಕಟವಾಗಿದೆ. ಶ್ರೀ ಜೋಗಿ ಆನಂದನಾಥರ ನಾಥಪಂಥ ಕ್ಷೇತ್ರ ಜೋಗಿಮಠ ಕೃತಿ ಮಂಗಳೂರಿನ ನಾಥ ಸಂಪ್ರದಾಯ ಪ್ರಚಾರ ಸಮಿತಿಯಿಂದ 2003 ರಲ್ಲಿ ಪ್ರಕಟವಾಗಿದೆ. ಡಾ. ರಮಹತ್ ತರೀಕರೆಯವರ ಕರ್ನಾಟಕದ ನಾಥಪಂಥ ಕನ್ನಡ ವಿಶ್ವವಿದ್ಯಾಲಯದಿಂದ 2007 ರಲ್ಲಿ ಪ್ರಕಟವಾಗಿದೆ. ಕನ್ನಡದಲ್ಲಿ ಇದುವರೆಗೆ ಪ್ರಕಟವಾಗಿರುವ ನಾಥಪಂಥದ ಸಂಶೋಧನಾ ಕೃತಿಗಳಲ್ಲಿ ತರೀಕೆರೆಯವರ ಕರ್ನಾಟಕದ ನಾಥಪಂಥ ಕೃತಿಯೇ ಗಮನಾರ್ಹವಾಗಿದೆ. ಅವರು ಭಕ್ತಿಪಂಥಗಳನ್ನು ಮುಖಾಮುಖಿಯಾಗಿಸುವ ಉದ್ದೇಶವೇ ಕುತೂಹಲಕಾರಿಯಾಗಿದೆ. ರಾಜ ಗುಹ್ಯ ಗ್ರಂಥದಲ್ಲಿ ನಾಥ ಪದವನ್ನು ಹೀಗೆ ವ್ಯಾಖ್ಯಾನಿಸಲಾಗಿದೆ.

ನಾಕಾರೋನಾದಿರೂಪಂ ಥಕಾರಃ ಸ್ಥಾಪತೇ ಸದಾ |
ಭುವನ ತ್ರನುಮೇವೈಕಃ ಶ್ರೀ ಗೋರಕ್ಷ ನಮೋಸ್ತು ತೇ ||

ನಾ ಎಂದರೆ ಅನಾದಿರೂಪ ಎಂದರೆ ಮೂರು ಲೋಕಗಳ ಸ್ಥಿತಿಗೆ ಕಾರತವಾದುದು. ಅನಾದಿ ಪರಶಿವನಿಗೆ ನಾಥ ಎಂಬುದು ಪರ್ಯಾಯ ನಾಮವಾಗಿದೆ. ಮತ್ಯ್ಸೇಂದ್ರನಾಥನ ಶಿಷ್ಯನಾಗಿದ್ದ ಗೋರಖನಾಥ ಈ ಪಂಥದ ಪ್ರವರ್ತಕನಾಗಿದ್ದಾನೆ.

ನಾಥಪಂಥದಲ್ಲಿ ಹನ್ನೆರಡು ಶಾಖೆಗಳಿದ್ದುದು ತಿಳಿದು ಬರುತ್ತದೆ.

  1. ಸತ್ಯನಾಥೀ
  2. ಧರ್ಮನಾಥೀ
  3. ರಾಮನಾಥೀ
  4. ನಾಟೇಶ್ವರಿ
  5. ಕನ್ನಣ
  6. ಕಪಿಲಾನೀ
  7. ವೈರಾಗಿ
  8. ಮಾನನಾಥಿ
  9. ಆಯೀಪಂಥ
  10. ಪಾಗಲ್ ಪಂಥ
  11. ಧಜಪಂಥ
  12. ಗಂಗಾನಾಥಿ

12 ಶಾಖೆಗಳ ಮಹತ್ವವನ್ನು ಕುರಿತಂತೆ ಕೆಲವು ಕೃತಿಗಳಲ್ಲಿ – ಲೇಖನಗಳಲ್ಲಿ ಚರ್ಚೆ ನಡೆದಿದೆ. ಚೌರಾಸಿ ಸಿದ್ಧರಲ್ಲಿ ಪ್ರಮುಖನಾದವನು ಕಣ್ಣಪಾ. ಈತ ಕರ್ನಾಟಕದವನಾಗಿದ್ದನೆಂಬುದ ಪ್ರಮುಖ ಸಂಗತಿಯಾಗುತ್ತದೆ.

ನಾಥಪಂಥದಲ್ಲಿ ನವನಾಥರಿಗೆ ಮಹತ್ವದ ಸ್ಥಾನವಿದೆ. ಆದರೆ ನವನಾಥರ ಪಟ್ಟಿಯಲ್ಲಿ ಅನೇಕ ಬದಲಾವಣೆಗಳಿವೆ. ಕಡವ ಶಂಭು ಶರ್ಮ ಅವರು ಅನುವಾದಿಸಿರುವ ನವನಾಥ ಕಥಾ ದಲ್ಲಿ ಬರುವ ಒಂಭತ್ತು ನಾಥರ ಪರಿಚಯ ಹೀಗಿದೆ.

ಜ್ಯೋತಿ ಸ್ವರೂಪನೂ, ಓಂಕಾರ ಸ್ವರೂಪನೂ ಆದ ಮಹೇಶ್ವರನೇ ಆದಿನಾಥನು.
ಧರಣೀ ಸ್ವರೂಪಿಣಿಯಾದ ಪಾರ್ವತಿಯೇ ಪ್ರಖ್ಯಾತನಾದ ಉದಯನಾಥನು.
ಬ್ರಹ್ಮನೇ ಸತ್ಯನಾಥನು.
ವಿಷ್ಣುವೇ ಸಂತೋಷನಾಥನು.
ವಾಯು ಸ್ವರೂಪ ಶೇಷನಾಗನೇ ಅಚಲನಾಥನು.
ಆಕಾಶ ಸ್ವರೂಪನಾದ ಗಣೇಶನೇ ಗಜ ಕಂಥಡಿನಾಥನು.
ವನಸ್ಪತಿ ಸ್ವರೂಪನಾದ ಚಂದ್ರನೇ ಚೌರಂಗಿನಾಥನು.
ಮಾಯಾ ಸ್ವರೂಪನಾದ ಕರುಣಾಳುವೇ ಮತ್ಸ್ಯೇಂದ್ರನಾಥನು.
ಅಲಕ್ಷ್ಯ ಸ್ವರೂಪನಾದ ಅಯೋನಿ ಶಂಕರನೇತ್ತನೇ ಗೋರಖನಾಥನು.

ಈ ನವನಾಥರ ಸ್ವರೂಪವನ್ನು ಕುರಿತಂತೆ ಅನೇಕ ಸಿದ್ಧಯೋಗಿಗಳು ವಿವರಿಸಿದ್ದಾರೆ. ನಾಥಪಂಥದಲ್ಲಿ ಮತ್ಸ್ಯೇಂದ್ರ ಗೋರಖನಾಥ ಪ್ರಸಿದ್ಧರಾಗಿದ್ದಾರೆ. ಇವರು ಗುರು ಶಿಷ್ಯರು. ಮಸ್ಯೇಂದ್ರನಾಥರು ಬಂಗಾಳದ ಚಂದ್ರಗಿರಿಯಲ್ಲಿ ಜನಿಸಿದರೆ, ಗೋರಖನಾಥನು ನೇಪಾಳದಲ್ಲಿ ಜನಿಸಿದ್ದಾರೆ. ಆದರೆ ಇವರ ಜೀವನ ಚರಿತ್ರೆಗೆ ಸಂಬಂಧಿಸಿದಂತೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. Briggs ಪ್ರಕಾರ ಇವರಿಬ್ಬರು ಪಂಜಾಬ್ ಭಾಗದವರಾಗಿದ್ದು, ನಂತರ ಬಂಗಾಲದ ಕಡೆಗೆ ಚಲಿಸಿದರೆಂದು ತಿಳಿದು ಬರುತ್ತದೆ. ಇವರಿಬ್ಬರೂ ದತ್ತಾತ್ರೇಯನಿಂದ ಗುರುದೀಕ್ಷೆ ಪಡೆದರೆಂದು ಮರಾಠಿ ಭಕ್ತಿ ಪರಂಪರೆ ಹೇಳುತ್ತದೆ. ಮತ್ಸ್ಯೇಂದ್ರನಾಥನು ಹೋಗಿ ನೆಲೆಸಿದ ರಾಜ್ಯವು ಕೇರಳ ಪ್ರದೇಶವೆಂದು ಕದ್ರಿಯ ಸ್ಥಳ ಪುರಾಣಗಳು ಹೇಳುತ್ತವೆ. ಆದರೆ ಈ ಗುರು-ಶಿಷ್ಯರು 10 ನೇ ಶತಮಾನದವರೆಂಬುದರಲ್ಲಿ ಸಂಶಯಗಳಿಲ್ಲ. ಸಂಶೋಧಕ ಪಿ. ಬಿ. ದೇಸಾಯಿಯವರು ಗೋರಖನು ಪಟ್ಟದಕಲ್ಲಿನಲ್ಲಿ ಹುಟ್ಟಿದವನೆಂದು ಹೇಳುತ್ತಾರೆ.

ಗೋದಾವರಿ ತೀರದ ತ್ರ್ಯಯಂಬಕೇಶ್ವರದಲ್ಲಿ ಗೋರಖನಾಥನು ತಪಸ್ಸು ಮಾಡಿದ ಗುಹೆ ಇದೆ. ನಾಥರನ್ನು ಕುರಿತು ಅನೇಕ ಐತಿಹ್ಯಗಳಿವೆ, ಪುರಾಣ ಕಥೆಗಳಿವೆ. ಕದ್ರಿಯ ಸ್ಥಳ ಪುರಾಣದಲ್ಲಿ ಹನುಮಂತದೇವರ ಆಗಮನವಿದೆ. ಹನುಮಂತನೂ ಕೂಡ ಬುಡಕಟ್ಟುಗಳ ಮೂಲದಿಂದ ಬೆಳೆದು ಬಂದವನು. ಬ್ರಹ್ಮಚಾರಿಯಷ್ಟೇ ಅಲ್ಲ ಮಹಾಯೋಗಿ, ಅಪ್ರತಿಮ ಶಕ್ತಿವಂತ. ಕೇರಳದ ಸ್ತ್ರೀ ರಾಜ್ಯದ ರಾಣಿ ಪಿಂಗಳೆ ತನಗೆ ಗಂಡು ಸಂತಾನಬೇಕೆಂದು ಹನುಮಂತನಲ್ಲಿ ಪ್ರಾರ್ಥಿಸುತ್ತಾಳೆ. ಆಗ ಆ ಹನುಮಂತನು ಒಬ್ಬ ತೇಜಸ್ವಿ ಪುರುಷ ರಾಣಿಯಲ್ಲಿಗೆ ಬರುವಂತೆ ಮಾಡುತ್ತಾನೆ. ಆತನೇ ಮತ್ಸ್ಯೇಂದ್ರನಾಥನಾಗಿರುತ್ತಾನೆ. ಮತ್ಸ್ಯೇಂದ್ರನು ರಾಣಿಯ ಪ್ರೇಮಪಾಶದಲ್ಲಿ ಮುಳುಗಿ ಹೋದಾಗ, ಶಿಷ್ಯನಾಗಿದ್ದ ಗೋರಖನಾಥನು ಮದ್ದಳೆ ಬಾರಿಸುವವನ ವೇಷದಲ್ಲಿ ಸ್ತ್ರೀ ರಾಜ್ಯ ಪ್ರವೇಶಿಸಿ, ಅಲ್ಲಿಂದ ಮತ್ಸ್ಯೇಂದ್ರನನ್ನು ಕರೆದುಕೊಂಡು ಬರುತ್ತಾನೆ. ಅತಿಭೋಗದಲ್ಲಿ ನಿರತನಾಗಿದ್ದ ಗುರುವಿಗೆ ಯೋಗಮಾರ್ಗವನ್ನು ತೋರಿಸುತ್ತಾನೆ. ಇಂತಹ ನಾಥರ ಅನೇಕ ಕತೆಗಳು ಜನಮನದಲ್ಲಿ ಬೆಳೆದುಕೊಂಡು ಬಂದಿವೆ. ನಾಥರ ಅನೇಕ ಪವಾಡಗಳು ವೈಭವೀಕರಣಕೊಡಿವೆ. ಹೀಗೆ ನಾಥರ ಚರಿತ್ರೆಯನ್ನು ಕಟ್ಟಿಕೊಡಲು ಹೋದಾಗ, ಪುರಾಣಗಳಲ್ಲಿ ಮುಳಗುವ ಅಪಾಯವೂ ಇದೆ.

ತ್ಸ್ಯೇಂದ್ರನಾಥನು ಸ್ತ್ರೀ ರಾಜ್ಯದಿಂದ ಹೊರಟು, ನೇತ್ರಾವತಿ ನದಿದಾಟಿ ಮಂಗಳೂರಿನ ಸಮೀಪದ ಕದ್ರಿಯ ಕದಳಿ ವನಕ್ಕೆ ಬಂದು ಅಲ್ಲಿ ಮಂಜುನಾಥ ದೇವರನ್ನು ಸ್ಥಾಪಿಸಿದನೆಂದು, ಕದಲೀ ಮಂಜುನಾಥ ಮಹಾತ್ಮ ಹೇಳುತ್ತದೆ. ಮತ್ಸ್ಯೇಂದ್ರನೇ ಕದ್ರಿಯ ಮಂಜುನಾಥನೆಂಬ ನಂಬಿಕೆಯೂ ಜನಸಮುದಾಯದಲ್ಲಿದೆ. ಕರಾವಳಿ ಪ್ರದೇಶದಲ್ಲಿ ಮೀನಿನ ಮೇಲೆ ಕುಳಿತ ಮತ್ಸ್ಯೇಂದ್ರನ ಹಲವಾರು ಮೂರ್ತಿಗಳಿವೆ. ಅಲ್ಲಮಪ್ರಭುವಿನ ಗುರು ಅನಿಮಿಷಯ್ಯನು ಮೂಲತಃ ಮತ್ಸ್ಯೇಂದ್ರನಾಥನಾಗಿದ್ದನೇ? ಎಂಬಂತಹ ಪ್ರಶ್ನೆಗಳೂ ಇವೆ. ಮತ್ಸ್ಯೇಂದ್ರನು ಮೂಲತಃ ಬೌದ್ಧ ತಾಂತ್ರಿಕ ಪಂಥದವನೋ? ಅಥವಾ ಕೌಳ ಪಂಥದಿಂದ ಬಂದವನೊ? ಎಂಬ ವಿಷಯ ಕುರಿತಂತೆ ಚರ್ಚೆಗಳಿವೆ.

ಆದರೆ ನಾಥಪಂಥದಲ್ಲಿ ಗೋರಖನಾಥ ಜನಪ್ರಿಯನಾಗಿದ್ದಾನೆ. ಈ ದೇಶದಲ್ಲಿರುವ ಬಹುಸಂಖ್ಯಾತ ನಾಥ ಮಠಗಳು ಗೋರಖನಾಥನ ಹೆಸರಿನಲ್ಲಿವೆ. ನಾಥಪಂಥಕ್ಕೆ ಗೋರಖಪಂಥವೆಂತಲೂ ಕರೆಯುತ್ತಾರೆ. ಬೌದ್ಧ ವಜ್ರಯಾನ ಪಂಥಕ್ಕೆ ಶೈವ ಸಂಸ್ಕಾರ ನೀಡಿದ ಕೀರ್ತಿ ಗೋರಖನಾಥನಿಗೆ ಸಲ್ಲುತ್ತದೆ. ಬಸವ ಕಲ್ಯಾಣ ತಾಲೂಕಿನ ಗೋರಟಾ ಗ್ರಾಮದಲ್ಲಿ ಗೋರಖನಾಥನ ದೊಡ್ಡ ಮೂರ್ತಿಯಿದೆ. 10 ನೇ ಶತಮಾನದಲ್ಲಿ ಬೀದರ ಜಿಲ್ಲೆ ನಾಥರ ಸಾಧನಾ ಕೇಂದ್ರವಾಗಿತೆಂಬುದಕ್ಕೆ ಕೆಲವು ಪುರಾವೆಗಳಿವೆ. ಇಂದಿಗೂ ಕೂಡ ಈ ಜಿಲ್ಲೆಯಲ್ಲಿ ಮತ್ಸ್ಯೇಂದ್ರನಾಥ, ಗೋರಖನಾಥರ ಹೆಸರುಗಳನಿಟ್ಟುಕೊಂಡಿರುವ ವ್ಯಕ್ತಿಗಳಿದ್ದಾರೆ. ಮಾಜಿ ಸಚಿವ ಶ್ರೀ ವೈಜನಾಥ ಪಾಟೀಲರು ಬೀದರ ಜಿಲ್ಲೆಯ ಔರಾದ ತಾಲೂಕಿನ ಹಕ್ಯಾಳ ಗ್ರಾಮದವರು. ಜನತಾದಳದ ಅಧ್ಯಕ್ಷರಾಗಿದ್ದ ಕಾಶೀನಾಥ ಬೇಲೂರೆ ಭಾಲ್ಕಿ ತಾಲೂಕಿನವರು. ಈ ಜಿಲ್ಲೆಯಲ್ಲಿ ಮತ್ಸ್ಯೇಂದ್ರನಾಥ, ಕಾಶೀನಾಥ, ವೈಜನಾಥ, ಮಲ್ಲಿನಾಥ ಹೆಸರಿನ ಅನೇಕ ವ್ಯಕ್ತಿಗಳಿದ್ದಾರೆ. ಈಗಿನ ದೀಕ್ಷವಂತ ಲಿಂಗಾಯತರಿಗೆಲ್ಲ ಈ ಹೆಸರುಗಳಿವೆ. 10 ನೇ ಶತಮಾನದಲ್ಲಿ ನಾಥಪಂಥದ ಅನುಯಾಯಿಗಳಾಗಿದ್ದ ಈ ಸಮುದಾಯ 12 ನೇ ಶತಮಾನದಲ್ಲಿ ಲಿಂಗಾಯತರಾದರೆ? ಆದಿಲಿಂಗಾಯತರಲ್ಲಿ ನಾಥ ಹೆಸರಿನ ವ್ಯಕ್ತಿಗಳಿಲ್ಲ. ಈ ಬಗೆಗೆ ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ.

ನಾಥಪಂಥದ ಅನೇಕ ದಾರ್ಶನಿಕ ಗ್ರಂಥಗಳಿವೆ. ಅವುಗಳಲ್ಲಿ ಕೆಲವು ಕೃತಿಗಳನ್ನು ಕಡವ ಶಂಭು ಶರ್ಮ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಅಥ ಸಿದ್ದ ಸಿದ್ದಾಂತ ಪದ್ಧತಿ, ಸ್ವಯಂಬೋಧ-ಅಮನಸ್ಕ ಯೋಗ, ಅಮರೌಘ ಶಾಸನ, ಗೋರಕ್ಷಾ ಪದ್ಧತಿ ಕನ್ನಡಕ್ಕೆ ಅನುವಾದನಗೊಂಡ ಕೃತಿಗಳಾಗಿವೆ. ಇವುಗಳಲ್ಲದೇ ಅವಧೂತ ಗೀತಾ, ಹಠ ಯೋಗ ಪ್ರದೀಪಿಕಾ, ಗೋರಕ್ ಸಂಹಿತಾ ದಂತಹ ಕೃತಿಗಳು ಕನ್ನಡಕ್ಕೆ ಅನುವಾದವಾಗಬೇಕಾಗಿದೆ.

ನಾಥರ ದರ್ಶನದ ಮೂಲಸಿದ್ಧಾಂತಗಳು ಶೈವಧರ್ಮದಲ್ಲಿ ಅದರಲ್ಲೂ ಕಾಳಾಮುಖರಲ್ಲಿ ಕಾಣಿಸಿಕೊಳ್ಳುತ್ತವೆ. ನಾಥಪಂಥ ಶೈವಧರ್ಮ ಮತ್ತು ಕರ್ನಾಟಕ ನಾಥ ಪಂಥ ಶೈವ ಸಮಾಜದ ಸಂಕ್ಷಿಪ್ತ ಪರಿಚಯ ಎಂಬ ಬಿ. ಸಿದ್ದಪ್ಪನವರ ಕೃತಿಯಲ್ಲಿ ಹಾಗೂ ಎಸ್. ಎಸ್. ಹಿರೇಮಠರ ಕಾಳಾಮುಖ ದರ್ಶನ ಕೃತಿಗಳಲ್ಲಿ ಈ ವಿಷಯ ಪ್ರಸ್ತಾಪವಾಗಿದೆ.

ನಾಥ ಎಂದರೆ ಒಡೆಯ ಎಂದರ್ಥವಾಗುತ್ತದೆ. ನಾಥ ಎಂದರೆ ಇಂದ್ರಿಯ ಎಂಬರ್ಥವೂ ಇದೆ. ಇಂದ್ರಿಯಗಳ ಮೇಲೆ ಹಿಡಿತವುಳ್ಳ ಯೋಗಿಗೆ, ಸಾಧಕನಿಗೆ, ಸಿದ್ಧನಿಗೆ ನಾಥನೆಂದು ಕರೆಯಲಾಗಿದೆ. ಕಪಾಲಮತ, ಸಿದ್ಧಮತ, ಅವಧೂತಮತ, ಯೋಗ ಮಾರ್ಗ, ಗೋರಖಪಂಥ ಎಂಬ ಹೆಸರುಗಳಿಂದಲೂ ನಾಥ ಪಂಥವನ್ನು ಕರೆಯುತ್ತಾರೆ. ಅದೈತ, ದೈತಗಳಿಗಿಂತ ಭಿನ್ನವಾದ ದರ್ಶನ ನಾಥರದು. ಗೋರಖನಾಥನು ಇದನ್ನು ದೈತಾತ ವಿವರ್ಜಿತ ಎಂದು ಕರೆದಿದ್ದಾನೆ. ಇದು ಅದ್ವಯವಾಗಿದೆ. ಜೀವ ಮತ್ತು ದೇವ, ವ್ಯಕ್ತಿ ಅಥವಾ ಚೈತನ್ಯ ಇವೆರಡೂ ಬೇರೆ ಬೇರೆಯೆಂದು ಅದು ಭಾವಿಸುವುದಿಲ್ಲ. ಇಲ್ಲಿ ಕೇವಲ ಶಿವನಿಲ್ಲ. ಶಿವನೊಂದಿಗೆ ಶಕ್ತಿಯೂ ಇದ್ದಾಳೆ. ಈ ಶಿವ ಶಿವೆಯರ ಮಿಲನವು, ಪ್ರಕೃತಿ ಪುರುಷರ ಮಿಲನವಾಗಿದೆ. ಎಲ್ಲವೂ ಅಭಿನ್ನವೆಂದು ನಾಥ ಸಿದ್ಧಾಂತ ಹೇಳುತ್ತದೆ. ದೇಹದೊಳಗೇ ದೇವರಿದ್ದಾನೆಂದು ಹೇಳುವ ನಾಥಪಂಥವು ಒಂದರ್ಥದಲ್ಲಿ ಶರಣ ಸಿದ್ಧಾಂತಕ್ಕೆ ಸಮೀಪವಾಗಿದೆ.

ನಾಥಪಂಥವು ಬ್ರಹ್ಮಚರ್ಯಕ್ಕೆ ಮಹತ್ವ ನೀಡುವುದರಿಂದ ಅದು ಸನ್ಯಾಸದ ಪರವಾಗಿದೆ. ಹೀಗಾಗಿ ಅಲ್ಲಿ ಸಂಸಾರಕ್ಕೆ ಪ್ರಾಮುಖ್ಯತೆಯಿಲ್ಲ. ವೀರ್ಯನಾಶವನ್ನು ತಡೆಯುವುದು ಇಲ್ಲಿಯ ದೊಡ್ಡ ಸಾಧನೆಯಾಗಿದೆ. ಗೋರಖನಾಥನು ಕೂಡ ಸ್ತ್ರೀ ಹಾನಿಕಾರಕ ಎಂದು ಹೇಳಿರುವುದು ಇದೇ ಕಾರಣಕ್ಕಾಗಿ ನಾಥಪಂಥದಲ್ಲಿ ಸ್ತ್ರೀಯ ಬಗೆಗೆ ಅನುಮಾನ ಮತ್ತು ಭಯಗಳಿವೆ. ಸ್ತ್ರೀಸಂಗ ಮಾಡಿದರೆ ಹೆಣ್ಣು ಹುಲಿ ಸಾಕಿದಂತೆಂದವರು ಭಾವಿಸುತ್ತಾರೆ. ನದಿ ತೀರದ ಮರ, ನಾರಿ ಸಂಗದಲ್ಲಿರುವ ಪುರುಷ ಎರಡೂ ನಾಶವಾಗುವ ಸಾಧ್ಯತೆ ಹೆಚ್ಚೆಂದವರು ನಂಬಿದ್ದಾರೆ. ಇದನ್ನು ರಹಮತ್ ತರೀಕೆರೆ ಹೀಗೆ ವಿಶ್ಲೇಷಿಸುತ್ತಾರೆ:

ನಾಥ ದರ್ಶನವು ಏಕರೂಪಿಯಲ್ಲ. ಅನೇಕ ದರ್ಶನಗಳಿಂದ ಕಾಲಕಾಲಕ್ಕೆ ಸ್ವೀಕಾರ ಮಾಡಿ ಪಡೆದ ಸಂಕರ ರೂಪಿ. ಷಡ್ದರ್ಶನಗಳಲ್ಲಿ ಒಂದಾದ ಯೋಗವು ಅದರ ತಾತ್ವಿಕ ಬುನಾದಿಯಾದರೆ, ವಜ್ರಯಾನ, ಶಾಕ್ತ, ಕೌಳ, ಕಾಪಾಲಿಕ ದರ್ಶನ ಹಾಗೂ ಆಚರಣೆಗಳು ಅದರ ಕಟ್ಟಡವಾದವು. ಭೈರವನು ನಾಥಪಂಥದ ಆರಾಧ್ಯ ದೈವವಾಗಿ ಉಳಿದಿರುವುದು ಕಾಪಾಲಿಕರ ಕುರುಹು; ತ್ರಿಕಾಲ ಹಾಗೂ ಸಕ್ತಿ ದೇವತೆಯ ಆರಾಧನೆಯು ಶಾಕ್ತ ಕುರುಹು. ದೇಹ, ವಜ್ರದ ಪ್ರಸ್ತಾಪ ಬರುವುದು ವಜ್ರಯಾನದ ಸಂಕೇತ.
(ನೋಡಿ: ಕರ್ನಾಟಕದ ನಾಥಪಂಥ ಕ.ವಿ.ವಿ. ಹಂಪಿ-2009, ಪುಟ ಸಂ. 28)

ಗೋರಖನಾಥನು ಎಲ್ಲ ದರ್ಶನಗಳ ಒಳಗಿದ್ದ ಅತಿರೇಕಗಳನ್ನು ಬಿಟ್ಟು ಕೊಟ್ಟು ಅವುಗಳಲ್ಲಿ ಸೂಕ್ತವೆನಿಸಿದ ಸಿದ್ಧಾಂತಗಳನ್ನಾಯ್ದುಕೊಂಡು ನಾಥಪಂಥವನ್ನು ರೂಪಿಸಿನೆಂಬುದು ಮಹತ್ವದ ಸಂಗತಿಯಾಗುತ್ತದೆ. ಗೋರಖನಾಥನು ಹೀಗೆ ಹೊಸ ಪಂಥವೊಂದನ್ನು ಕಟ್ಟುವಾಗ ಅನೇಕ ಸಂಘರ್ಷಗಳನ್ನೆದುರಿಸಿದ್ದಾನೆ. ಗೋರಖ ಸ್ಥಾಪಿಸಿದ ಈ ನಾಥಪಂಥದಲ್ಲಿ ವಜ್ರಯಾನ, ಕಾಪಾಲಿಕ, ಕೌಳ, ಸಿದ್ಧ, ಶೈವ ಹೀಗೆ ಹತ್ತು ಹಲವಾರು ಚಿಂತನೆಗಳಿವೆ. ಇಲ್ಲಿ ಬಹುಮುಖಿ ಅನುಸಂಧಾನ ನಡೆದಿದೆ. ನಾಥಪಂಥವು ಬಹುಪಂಥೀಯ ದರ್ಶನವಾಗಿ ಬೆಳೆದುದ್ದರಿಂದಲೇ ಇಂದಿಗೂ ಬೇರೆ ಬೇರೆ ರೂಪಗಳಲ್ಲಿ ಜೀವಂತವಾಗಿದೆ.

ನಾಥಪಂಥವನ್ನು ಹುಟ್ಟುಹಾಕಿದ ಗೋರಖನಾಥ ಅದ್ಭುತ ಸಾಧಕ, ಪ್ರಖರ ಚಿಂತಕ, ದೊಡ್ಡ ದಾರ್ಶನಿಕ. ಆತನದು ಬಹುಮುಖ ವ್ಯಕ್ತಿತ್ವ. ಸಂಘಟನಾ ಚತುರನಾಗಿದ್ದ ಗೋರಖನಾಥ ಈ ದೇಶದ ವಿವಿಧ ಭಾಗಗಳಲ್ಲಿ ಸುತ್ತಾಡಿ ನಾಥ ಪಂಥದ ಪ್ರಸಾರ ಮಾಡಿದ್ದಾನೆ. ಯಾವ ನಾಥರಲ್ಲೂ ಕಾಣದ ಆತ್ಮವಿಮರ್ಶೆ ಗೋರಖನಲ್ಲಿದೆ. ಆತ ರಚಿಸಿರುವ ಸಿದ್ದ ಸಿದ್ಧಾಂತ ಪದ್ಧತಿ ಯ ಕೊನೆಯ ಭಾಗವು ಆತ್ಮವಿಮರ್ಶೆಯ ಜೊತೆಗೆ ಯೋಗಿಗಳ ಅತಿರೇಕದ ವಿಮರ್ಶೆಯೂ ಆಗಿದೆ. ನಾಥದರ್ಶನ ಜನಪ್ರಿಯವಾದದ್ದು – ಜನಪರವಾದದ್ದು ಗೋರನಿಂದ. ಗೋರಖ ಬೋಧಿಸಿದ ಸಿದ್ದಾಂತಗಳಲ್ಲಿ ಎಲ್ಲಿಯೂ ಅತಿರೇಕಗಳಿಲ್ಲ. ಅದೊಂದು ಮಧ್ಯಮ ಮಾರ್ಗಿ ದರ್ಶನವಾಗಿದೆ. ಗೋರಖನಾತನು ಹೇಳಿದ ಮಾತುಗಳು ಸರಳ – ನೇರ ಹಾಗೂ ವಸ್ತುನಿಷ್ಠವಾಗಿವೆ. ಆತನ ನುಡಿಗಳಲ್ಲಿ ವಾಸ್ತವತೆಯಿದೆ, ವೈಜ್ಞಾನಿಕತೆಯಿದೆ.

ಮದ್ಯ, ಮಾಂಸ, ಭಂಗಿ ಸೇವನೆಗಳನ್ನು ಗೋರಖನು ನಿಷೇಧಿಸಿದ. ಆದರೆ ಮುಂದೆ ಬಂದ ನಾಥರು ಅವೇ ಮುಖ್ಯವೆಂದು ಅವುಗಳನ್ನೆಲ್ಲ ಸೇವಿಸಿದರು. ದೇಹ ದಂಡನೆ ಮಾಡುವುದು, ಬಂದ ಸುಖವನ್ನು ನಿರಾಕರಿಸುವುದು, ತನ್ನ ಸಾಧನೆಗಳ ಬಗೆಗೆ ತಾನೇ ಅಹಂಕಾರ ಪಡುವುದು ತಪ್ಪೆಂದು ಗೋರಖನು ಸಿದ್ಧ ಸಿದ್ಧಾಂತ ಪದ್ಧತಿ ಯಲ್ಲಿ ತಿಳಿಸಿ ಹೇಳಿದ್ದಾನೆ. ಶಿವನಿಂದ ಅವನ ಶಕ್ತಿ ಯವಾಗಲೂ ಪ್ರತ್ಯೇಕವಾಗಿರಲು ಸಾಧ್ಯವೇ ಇಲ್ಲವೆಂದು ಹೇಳಿದ ಗೋರಖನು ಅದನ್ನು ಶಕ್ತಿಯುಕ್ತಂ ಎಂದು ಕರೆಯುತ್ತಾನೆ. ಗಂಡು ಹೆಣ್ಣು ಕೂಡಿದಾಗಲೇ ಶಿವಶಕ್ತಿಯಾಗುತ್ತದೆಂದು ಹೇಳುವುದರ ಮೂಲಕ ಮಹಿಳಾ ಸಾಧ್ಯತೆಗಳನ್ನು ಗೋರಖ ಗೌರವಿಸಿದ್ದಾನೆ. ಆದರೆ ಗೋರಖನು ಬದುಕಿದ್ದ ಕೊನೆಯ ದಿನಗಳಲ್ಲಿಯೇ ನಾಥಪಂಥ ವಿಭಜನೆಯಾಯಿತು. ಮುಂದೆ ಬಂದ ನಾಥರು ಗೋರಖನಾಥನ ಸಿದ್ಧಾಂತವನ್ನೇ ಬುಡಮೇಲು ಮಾಡಿದರು. ಯಾವುದನ್ನು ಗೋರಖನು ನಿಷೇಧವೆಂದು ಹೇಳಿದ್ದನೋ ಅದನ್ನೆಲ್ಲವನ್ನೂ ಅವರು ಅನುಭವಿಸಿದರು. ಹೀಗಾಗಿ ಗೋರಖನ ನಂತರ ನಾಥಪಂಥ ಅನಾಥವಾಯಿತು.

ನಾಥಪಂಥ ಮಹಿಳೆಯರನ್ನು ನಿರಾಕರಿಸಲಿಲ್ಲ. ಸಾಧನೆಯ ವಿಷಯ ಬಂದಾಗ ಆಕೆಯನ್ನು ಶಕ್ತಿಯೆಂದೇ ಅವರು ಆರಾಧಿಸಿದರು. ಮತ್ಸ್ಯೇಂದ್ರನಾಥನ ನಾರೀಸಾಧನೆ ಪ್ರಕರಣವು ಈ ಕಾರಣದಿಂದ ಗಮನಾರ್ಹವಾಗಿದೆ. ಯೋಗಿಗಳು ಯೋಗಿನಿಯರನ್ನು ಹುಡುಕಿಕೊಂಡು ಹೋಗುತ್ತಿದ್ದಂತೆ, ಯೋಗಿಗಳನ್ನು ಯೋಗಿನಿಯರು ಹಿಂಬಾಲಿಸುತ್ತಿದ್ದ ಪ್ರಸಂಗಗಳೂ ಇವೆ. ತಾಂತ್ರಿಕ ಪಂಥಗಳ ಯೋಗಿನಿಯರಿಗೂ, ಕಪಾಲಿಕ ಜೋಗಿಗಳಿಗೂ ಸಂಬಂಧವಿರುವುದನ್ನು ಗಮನಿಸಬೇಕಾಗುತ್ತದೆ. ಹೀಗಾಗಿ ಗೋರಖನು ಹೇಳಿದ ನಾಥದರ್ಶನದಲ್ಲಿ ಮಹಿಳೆಗೆ ಪೂಜ್ಯಸ್ಥಾನವಿದೆ. ನಂತರದ ನಾಥರು ಇದಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ.

ನಾಥಪಂಥದಲ್ಲಿ ಅನೇಕ ಸಾಧಕಿಯರಿದ್ದಾರೆ. ಚೌರಾಸಿ ಸಿದ್ದರಲ್ಲಿ ಮಣಿಭದ್ರಾ, ಮೇಖಲಿಪಾ, ಕನಖಲಿಪಾ ಎಂಬಂಥ ಮೂರು ಯೋಗಿನಿಯರ ಪ್ರಸ್ತಾಪವಿದೆ. ಹಿಮಾಚಲ ಪ್ರದೇಶದ ಜ್ವಾಲಾಮಾಯಿ ನಾಥರ ಶಕ್ತಿದೇವತೆಯಾಗಿದ್ದಾಳೆಂದು ಡಾ. ತರೀಕೆರೆ ಉಲ್ಲೇಖಿಸಿದ್ದಾರೆ. ಪಿಂಗಳಾದೇವಿಯೆಂಬ ಯೋಗಿನಿ ಕುರಿತು ಅನೇಕ ಐತಿಹ್ಯಗಳಿವೆ. ಈಕೆ ಕದ್ರಿಮಠದ ಸ್ಥಳ ಪುರಾಣದಲ್ಲಿ ಪಿಂಗಳೆಯಾಗಿ ಕಾಣಿಸಿಕೊಂಡಿದ್ದಾಳೆ.

ಬಾರಾ ಪಂಥಗಳಲ್ಲಿ ಒಂಭತ್ತನೆಯದಾದ ಆಯೀ ಪಂಥವು ಬಹುಮುಖ್ಯವಾದುದು. ಈ ಪಂಥದ ಸ್ಥಾಪಕಿಯಾದ ವಿಮಲಾದೇವಿಯು, ಮಹತ್ವದ ಯೋಗಿನಿಯಾಗಿದ್ದಾಳೆಂದು ತಿಳಿದು ಬರುತ್ತದೆ. ಈಕೆ ಬಂಗಾಳದವಳಾಗಿದ್ದಳು ಮತ್ತು ಗೋರಖನಾಥನ ಶಿಷ್ಠೆಯಾಗಿದ್ದಳೆಂಬುದು ಮುಖ್ಯವಾಗುತ್ತದೆ. ಬಂಗಾಳವು ಶಕ್ತಿ ದೇವತೆಗಳ ಸೀಮೆ. ಅದೇ ರೀತಿ ನೇಪಾಳವು ಕುಮಾರಿ ಪೂಜೆಗೆ ಪ್ರಸಿದ್ಧಿ ಪಡೆದಿದೆ. ನೇಪಾಳದ ಮೃಗಸ್ಥಲಿ ಬೆಟ್ಟದ ಹತ್ತಿರ ಪಶುಪತಿನಾಥನ ಮಡದಿ ಗುಹೇಶ್ವರಿಯ ಆರಾಧನೆಯಿದೆಯೆಂದು ಡಾ. ತರೀಕೆರೆ ವಿವರಿಸಿದ್ದಾರೆ. (ನೋಡಿ; ಕರ್ನಾಟಕದ ನಾಥಪಂಥ, ಪು. 81) ದಕ್ಷಿಣದ ಕಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಯೋಗಿನಿಯರ ಪ್ರಸ್ತಾಪವಿರದಿದ್ದರೂ ಮಹಾರಾಷ್ಟ್ರದ ನವನಾಥರಲ್ಲಿ ಗೌರಾಯಿ, ಗಂಗಾದೇವಿ, ಮುಕ್ತಾಯಿಯರು ಕಾಣಿಸಿಕೊಳ್ಳುತ್ತಾರೆ.

ಕೊಲ್ಲಾಪುರದಲ್ಲಿಯೂ ಗೋರಖನಾಥ ಮಠವಿದೆ. ಇದು ಶಕ್ತಿ ದೇವತೆಗಳ ಕೇಂದ್ರವಾಗಿದೆ. ಕೌಳರಿಗೂ ಭೈರವಾರಾಧನೆಗೂ ನಾಥಪಂಥಗಳಿಗೂ ಸಂಬಂಧಗಳು ತಳಕು ಹಾಕಿಕೊಂಡಿವೆ. ನಾಥರ ಹಾಗೂ ಕೌಳರ ಮಠಗಳಲ್ಲಿ ಶಕ್ತಿ ದೇವತೆಗಳಿವೆ. ಚುಂಚನಗಿರಿಯ ಕಂಬದಮ್ಮ. ಲುಂಕೆಮಲೆಯ ತುಪ್ಪದಮ್ಮ. ಚಂದ್ರಗುತ್ತಿಯ ಗುತ್ತೆಮ್ಮ, ಸವದತ್ತಿ ಎಲ್ಲಮ್ಮ, ಮುನಿರಾಬಾದ್ ಹುಲಿಗೆಮ್ಮ ಈ ಮೊದಲಾದ ಶಕ್ತಿ ದೇವತೆಗಳನ್ನು ಹೆಸರಿಸಬಹುದಾಗಿದೆ. ಈ ಕಾರಣದಿಂದಲೂ ಕಾಪಾಲಿಕನಾಥರಲ್ಲಿ ಸ್ತ್ರೀಗೆ ಪೂಜ್ಯನೀಯ ಸ್ಥಾನವಿದೆ. ನಾಥಪಂಥದಲ್ಲಿ ಕೆಲವು ಪ್ರಮುಖ ಸಾಧಕಿಯರು ಆಗಿ ಹೋಗಿದ್ದಾರೆ.

ಮಹಿಳೆಯ ವಿಚಾರವಾಗಲಿ, ಸಂಸಾರದ ವಿಚಾರವಾಗಲಿ ನಾಥಪಂಥಗಳಲ್ಲಿ ಒಂದೇ ಅಭಿಪ್ರಾಯವಿಲ್ಲ. ಗೋರಖನಂಥವರು ಮಹಿಳೆಗೆ ಪ್ರಾಧಾನ್ಯತೆ ನೀಡಿದರೆ, ನಂತರದ ನಾಥರು ಅವಳನ್ನು ಭೋಗದ ವಸ್ತುವೆಂದು ತಿಳಿದುಕೊಂಡಿದ್ದಾರೆ. ಇಂತಹ ವೈರುಧ್ಯಗಳನ್ನು ಕುರಿತಂತೆ ಡಾ. ತರೀಕೆರೆ ಮಹತ್ವದ ಮಾತುಗಳನ್ನಾಡಿದ್ದಾರೆ.

ಸಿದ್ಧ ಮತ್ತು ನಾಥ ದರ್ಶನಗಳು, ಬ್ರಹ್ಮಚರ್ಯ ಸನ್ಯಾಸಗಳ ಮಹತ್ವವನ್ನು ಹೇಳುತ್ತವೆ. ಆದರೆ ಸಿದ್ಧರ ಜೀವನದ ತುಂಬ ಸ್ತ್ರೀಯರ ಜತೆಗಿನ ಪ್ರೀತಿ ಸಂಘರ್ಷಗಳೇ ತುಂಬಿವೆ. ಇದೊಂದು ವೈರುಧ್ಯ ನಾಥರು ತಮ್ಮ ಶೈಲಿಯಲ್ಲಿ ಧರಿಸುವ ಉಂಗುರ ಹಾಗೂ ಸಿಂಗನಾದಿಗಳು ಮೂಲತಃ ಯೋನಿ ಲಿಂಗಗಳ ಸಂಕೇತಗಳು. ಅವರು ಶಾಕ್ತ ಪೀಠಗಳಿಗೆ ನಡೆದುಕೊಳ್ಳುತ್ತಾರೆ. ಮಚೇಂದ್ರ ಕೊಟ್ಟ ಸಂತಾನಶಕ್ತಿಯುಳ್ಳ ವಿಭೂತಿಯನ್ನು ಧರಿಸಲು ನಿರಾಕರಿಸುವ ಮಹಿಳೆ; ಯೋಗಿಯನ್ನು ಹೊರಬಿಡದಂತೆ ತನ್ನ ವಶದಲ್ಲಿ ಇರಿಸಿಕೊಳ್ಳುವ ಸ್ತ್ರೀ ರಾಜ್ಯದ ಪಿಂಗಳೆ; ಯೋಗಿಗೆ ಸವಾಲು ಹಾಕುವ ಕೊಲ್ಲಾಪುರದ ಮಾಯಿ; ತ್ಸ್ಯೇಂದ್ರನನ್ನು ಹಿಂಬಾಲಿಸಿ ಬರುವ ಮಂಗಳಾದೇವಿ, ರೇವಣಸಿದ್ಧೇಶ್ವರ ಪುರಾಣದಲ್ಲಿ ಗೋರಖನಿಗೆ ಇಬ್ಬರು ಹೆಂಡಿರು! ನಾಥರು ವೀರ್ಯಪಾತ ಮಾಡದೆ ವಿರಕ್ತಿಯ ಸಂಕೇತವಾಗಿ ಭಗವಾ (ಕಾವಿ) ಧರಿಸುತ್ತಾರೆ. ಆದರೆ ಈ ಕಾವಿಯ ಮೂಲವೆಂಬುದು ಸ್ತ್ರೀಯ ರಕ್ತದಲ್ಲಿದೆ. (ನೋಡಿ: ಕರ್ನಾಟಕದ ನಾಥಪಂಥ, ಪು. 91)

ಇಂತಹ ಅನೇಕ ನಂಬಿಕೆಗಳು, ವೈರುಧ್ಯಗಳು ನಾಥರಲ್ಲಿ ಕಾಣಿಸಿಕೊಳ್ಳುತ್ತವೆ. ಇದು ಬಹುಪಂಥಗಳ ಸಂಗಮವಾಗಿರುವುದರಿಂದ ವೈರುಧ್ಯಗಳು ಸಹಜವಾಗಿವೆ. ಇಂತಹ ವೈರುಧ್ಯಗಳ ನಡುವೆಯೂ ಅನೇಕ ಸತ್ಯಗಳು ಮೈಚಾಚಿಕೊಂಡಿವೆ.

ಅಧ್ಯಾಯ – 03: ನಾಥರ ಶರಣರ ಸಂಬಂಧ

ಕನ್ನಡನಾಡಿನಲ್ಲಿ 12 ನೇ ಶತಮಾನದಲ್ಲಿ ಶಿವಶರಣರಿಂದ ನಡೆದ ವಚನ ಚಳುವಳಿ ಈ ನಾಡು ಕಂಡ ಪ್ರಥಮ ಚಳವಳಿಯಾಗಿದೆ. ಈಗಾಗಲೇ ವಚನ ಸಾಹಿತ್ಯವನ್ನು, ವಚನ ಚಳುವಳಿಯನ್ನು ಕುರಿತು ಅನೇಕ ಕೃತಿಗಳು ಪ್ರಕಟವಾಗಿವೆ. ಹೀಗಾಗಿ ಇಲ್ಲಿ ವಚನ ಚಳವಳಿಯನ್ನು ಕುರಿತು ಹೇಳದೇ, ವಚನಕಾರರಿಗೂ ನಾಥರಿಗೂ ಇರುವ ಸಂಬಂಧದ ಬಗೆಗೆ ಚರ್ಚಿಸಲಾಗಿದೆ.

ಭಾರತದಲ್ಲಿ 10 ನೇ ಶತಮಾನದಲ್ಲಿ ಹುಟ್ಟಿಕೊಂಡ ನಾಥ ಪಂಥದಲ್ಲಿ ಮುಖ್ಯವಾಗಿ ಎರಡು ಬೆಳವಣಿಗೆಗಳು ಕಾಣಿಸುತ್ತವೆ. ಬುದ್ದನ ನಂತರ ಹೀನಯಾನ ಮಹಾಯಾನಗಳೆಂಬ ಎರಡು ಮುಖ್ಯ ಪಂಥಗಳು ಬೆಳೆದ ವಿಷಯ ಎಲ್ಲರಿಗೂ ಗೊತ್ತಿದೆ. ತಾಂತ್ರಿಕ ಶೈವಪಂಥಕ್ಕೆ ಹತ್ತಿರವಾದದ್ದೆಂದರೆ, ಬೌದ್ಧಪಂಥದ ವಜ್ರಯಾನ. ಈ ವಜ್ರಯಾನದಿಂದ ನಾಥಪಂಥ ಹುಟ್ಟಿತೆಂದು ಕೆಲವು ವಿದ್ವಾಂಸರು ಹೇಳಿದ್ದಾರೆ. ಶೈವಧರ್ಮದ ಶಾಖೆಗಳಾದ ಕಾಳಾಮುಖ ಮತ್ತು ಪಾಶುಪತ ಶಾಖೆಗಳ ಬೆಳವಣಿಯಿಂದ ನಾಥಪಂಥ ಹುಟ್ಟಿತೆಂದು ಕೆಲವು ಸಂಶೋಧಕರು ಹೇಳಿದ್ದಾರೆ. ಭೈರವಾರಾಧನೆಯ ನಾಗಾರ್ಜುನಾದಿ ಪರಂಪರೆಯ ಜೋಗಿಗಳದು ಒಂದು ಶಾಖೆಯಾದರೆ, ಶಿವನ ಆರಾಧನೆಯ ರೇವಣಸಿದ್ದ ಮೊದಲಾದ ಸಿದ್ದರದು ಮತ್ತೊಂದು ಶಾಖೆಯಾಗಿತ್ತು. ಶ್ರೀಶೈಲದ ಜೋಗಿಗಳು ಮೊದಲನೇ ಶಾಖೆಯವರಾದರೆ, ರೇವಣಸಿದ್ಧ, ರುದ್ರಮುನಿ, ಮುಕ್ತಿಮುನಿನಾಥ ಈ ಮೊದಲಾದ ಸಿದ್ದರು ಎರಡನೆಯ ಶಾಖೆಯವರಾಗಿದ್ದಾರೆ. ಸಿದ್ಧರಾಮ ಚಾರಿತ್ರ‍್ಯ ಗ್ರಂಥದಲ್ಲಿ ವಿಕಾರಿಸಿದ್ಧ ಸಂಪ್ರದಾಯ ಶಿವಸಿದ್ಧ ಸಂಪ್ರದಾಯಗಳೆಂಬ ಎರಡು ಶಾಖೆಗಳ ಪ್ರಸ್ತಾಪವಿದೆ.

ನಾಥಪಂಥ ವಿಶ್ವವಿಶಾಲವಾದುದಾಗಿದೆ. 12 ನೇ ಶತಮಾನದ ಶರಣರು ಉದಯವಾಗುವುದಕ್ಕಿಂತ ಮೊದಲೇ ಅದು ಈ ದೇಶದಲ್ಲಿ ಬೆಳೆದು ನಿಂತಿದೆ. ನಾಥಪಂಥವು ನೇಪಾಳದಲ್ಲಿ ವಿಶಾಲವಾಗಿ ಹಬ್ಬಿದೆ. ಈ ರೀತಿಯ ವಿಶ್ವವ್ಯಾಪ್ತಿ ಬೆಳವಣಿಗೆ ವಚನ ಚಳವಳಿಗಿಲ್ಲ. ಈ ಚಳವಳಿ ಕೇವಲ ಕನ್ನಡ ನಾಡಿಗೆ ಮಾತ್ರ ಸೀಮಿತವಾಗಿತ್ತು. ವಚನ ಚಳವಳಿಯೊಂದಿಗೆ ನಾಥ ಪಂಥವನ್ನು ತೌಲನಿಕವಾಗಿ ಅಧ್ಯಯನ ಮಾಡುವಲ್ಲಿಯೂ ಅನೇಕ ಸಮಸ್ಯೆಗಳಿವೆ. ವಚನ ಚಳವಳಿಯ ಸಿದ್ಧಾಂತ, ಧೋರಣೆ ತುಂಬ ಸ್ಪಷ್ಟವಾಗಿದ್ದರೆ, ನಾಥಪಂಥದ ಸಿದ್ದಾಂತ, ಧೋರಣೆ, ತುಂಬ ಸಂಕೀರ್ಣವಾಗಿದೆ.

ಈ ಎಲ್ಲ ಸಂಗತಿಗಳನ್ನು ಗಮನಿಸಿ, ಕೆಲವು ಆಧುನಿಕ ವಿದ್ವಾಂಸರು ಶರಣರಿಗೆ ನಾಥರೇ ಪ್ರೇರಣೆಯಾಗಿದ್ದಾರೆಂದು ಹೇಳಿದ್ದಾರೆ. ಅವರ ಹೇಳಿಕೆಗಳನ್ನಿಲ್ಲಿ ನೋಡಬಹುದಾಗಿದೆ.

  1. ನಾಥ ಸಂಪ್ರದಾಯದಿಂದ ಸ್ಫೂರ್ತಿ ಪಡೆದ ಶ್ರೀ ಪ್ರಭುದೇವರು ಲಿಂಗವಂತ ಮತದ ದ್ಧಾರಕರಾಗಿರುವ ಸಂಭವವಿದೆ. – ಶಂಬಾ ಜೋಷಿ (ಶಂಭಾ ಕೃತಿ ಸಂಪು-2 ಪು-227).
  2. ಲಿಂಗಾಯತ ವಚನಕಾರರ ಕ್ರಾಂತಿಕಾರಕ ಪ್ರಖರತೆಯು ವಾರಸಾ ಪಂಥದ ಸಂಪ್ರದಾಯದ್ದೇ ಆಗಿದೆಯೆಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಕೇವಲ ಬಸವೇಶ್ವರರ ವಚನಗಳನ್ನು ಗಮನಿಸಿದರೂ ಅಲ್ಲಿ ಗೋರಕ್ಷವಾಣಿಯ ಧ್ವನಿಯೇ ಹೊಸ ರೂಪದಲ್ಲಿ ಮೂಡಿ ಬಂದಿದೆ ಎಂದೆನಿಸುತ್ತದೆ. ಡಾ. ರಾಮಚಂದ್ರ ಚಿಂತಾಮಣಿ ಢೇರೆ (ನಾಥ ಸಂಪ್ರದಾಯದ ಇತಿಹಾಸ, ಪು.229/ಲಿಂಗಾಯತ ಸಂಪ್ರದಾಯ-ಪು.227 ರಿಂದ 230 ರ ವರೆಗೆ)
  3. ಹೀಗೆ ಶಂಬಾ ಜೋಷಿ, ಡೇರೆಯವರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಶಂಕರ ಮೊಕಾಶಿ ಪುಣೇಕರ್ ಹಾಗೂ ಕೆ. ಜಿ. ನಾಗರಾಜಪ್ಪ ಅವರು ಇದೇ ಅಭಿಪ್ರಾಯ ಹೊಂದಿದ್ದಾರೆ. ಶರಣರು ಪ್ರತಿಪಾದಿಸಿರುವ ಕ್ರಾಂತಿಕಾರಕ ಪರಿಕಲ್ಪನೆಗಳು ನಾಥ ಪಂಥಗಳಿಂದ ಬಂದವುಗಳಾಗಿವೆಯೆಂದುದು ಹೇಳಿದ್ದಾರೆ.
  4. ಈ ವಿದ್ವಾಂಸರ ಅಭಿಪ್ರಾಯಗಳಿಗೆ ಆಧಾರಗಳಿಲ್ಲ. ವಚನಕಾರರ ಅಂಕಿತಗಳಲ್ಲಿ ನಾಥ ಎಂದು ಬಂದಾಕ್ಷಣ ಅವರು ನಾಥಪಂಥದ ಅನುಯಾಯಿಗಳಾಗುವುದಿಲ್ಲ. ಸಿದ್ಧರಾಮನು ಸಿದ್ಧನಾಥ ಪರಂಪರೆಯ ಮೂಲದವನೆಂದಾಕ್ಷಣ ಆತ ನಾಥ ಸಂಪ್ರದಾಯಕ್ಕೆ ಸೇರಿದ ಶರಣನಾಗುವುದಿಲ್ಲ. ಬಹು ಮುಖ್ಯವಾದ ಸಂಗತಿಯೆಂದರೆ ಶರಣರಿಗೂ ನಾಥರಿಗೂ ಮುಖಾಮುಖಿಯೇ ಆಗಿಲ್ಲ. ಶೂನ್ಯ ಸಂಪಾದನೆಯಲ್ಲಿ ಬರುವ ಗೋರಕ್ಷನು ಗೋರಖನಾಥನಲ್ಲ. ನಾಥಪಂಥದ ಗೋರಖನಾಥನಿಗೂ, ಅಲ್ಲಮನೊಂದಿಗೆ ಸಂವಾದಕ್ಕಿಳಿಯುವ ಗೋರಕ್ಷನಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಈ ಸತ್ಯಗಳನ್ನರಿಯದೇ ಅನೇಕರು ನಾಥರಿಂದಲೇ ವಚನ ಚಳವಳಿ ಹುಟ್ಟಿತೆಂದು ಹೇಳಿರುವುದು ಅಸಂದ್ಧವಾಗಿದೆ. ಯಾವ ವಚನಕಾರನೂ ತನ್ನ ವಚನದಲ್ಲಿ ಗೋರಖನಾಥನನ್ನಾಗಲಿ, ತ್ಸ್ಯೇಂದ್ರನಾಥನನ್ನಾಗಲಿ ಸ್ಮರಿಸುವುದಿಲ್ಲ. ಬದಲಾಗಿ ನಾಥರ ಆಚರಣೆಗಳನ್ನು ಶರಣರು ತೀವ್ರವಾಗಿ ಖಂಡಿಸಿದ್ದಾರೆ.
  5. 12 ನೇ ಶತಮಾನದ ವಚನ ಚಳವಳಿ ಪ್ರಾರಂಭವಾಗುವುದಕ್ಕಿಂತ ಮೊದಲೇ, ಕನ್ನಡ ನಾಡಿನಲ್ಲಿ ನಾಥಪಂಥವು ತನ್ನ ಪ್ರಭಾವವನ್ನು ಬೀರಿತ್ತು. ಕಪ್ಪಡಿಸಂಗಮದ ಮೂಲದೇವತೆಯೇ ಸಂಗಮನಾಥನಾಗಿದ್ದಾನೆ. ಹಿಂದಿನ ಕಪ್ಪಡಿಸಂಗಮವೇ ಇಂದಿನ ಕೂಡಲಸಂಗಮವಾಗಿದೆ. ಶರಣರ ಮೇಲೆ ಅರವತ್ತುಮೂರು ಪುರಾತನರ ಪ್ರಭಾವವಾಗಿರುವಂತೆ, ನವನಾಥ ಸಿದ್ಧರ ಪ್ರಭಾವ ಅಷ್ಟಾಗಿ ಆಗಿಲ್ಲವೆಂದೇ ಹೇಳಬೇಕಾಗುತ್ತದೆ. ಆದರೆ ಅವರು ಬರುವದಕ್ಕಿಂತ ಮೊದಲೇ ಕಪ್ಪಡಿಸಂಗಮ, ಶ್ರೀಶೈಲ ಇವು ಪ್ರಮುಖ ನಾಥ ಕೇಂದ್ರಗಳಾಗಿದ್ದವೆಂಬುದನ್ನು ಗಮನಿಸಬೇಕಾಗುತ್ತದೆ. ಅನೇಕ ವಚನಕಾರರ ಅಂಕಿತಗಳಲ್ಲಿ ನಾಥ ಪದ ಇರುವದನ್ನು ಕಾಣಬಹುದಾಗಿದೆ. ಸೊನ್ನಲಿಗೆಯ ಸಿದ್ಧರಾಮನು ಸಿದ್ದನಾಥ ಮೂಲದವನೆಂದು ತಿಳಿದುಬರುತ್ತದೆ. ಅಲ್ಲಮಪ್ರಭು ಕಾಶ್ಮೀರಿಶೈವದಿಂದ ಪ್ರಭಾವ ಹೊಂದಿದ್ದು, ನಾಥರನ್ನು ಆತನು ಜೋಗಿಗಳೆಂದು ಕರೆದಿದ್ದಾನೆ.
  6. ಶರಣ ಜೇಡರ ದಾಸಿಮಯ್ಯನ ಅಂಕಿತ ರಾಮನಾಥ, ಅಮುಗೆ ದೇವಯ್ಯನ ಸಿದ್ಧ ಸೋಮನಾಥ, ತುರುಗಾಹಿ ರಾಮಣ್ಣನ ಅಂಕಿತ ಗೋಪತಿನಾಥ, ಜೋದರ ಮಾಯಣ್ಣನ ಅಂಕಿತ ಶಂಭು ಸೋಮನಾಥ, ತಳವಾರ ಕಾಮಿದೇವನ ಕಾಮಹರಪ್ರಿಯ ರಾಮನಾಥ, ದಶಗಣ ಸಿಂಗಿದೇವನ ಅಂಕಿತ ನಾಚಯ್ಯಪ್ರಿಯ ಮಲ್ಲಿನಾಥ, ಬಹುರೂಪಿ ಚೌಡಯ್ಯನ ಅಂಕಿತ ರೇಕಣ್ಣಪ್ರಿಯ ರಾಮನಾಥ, ಗೊಗ್ಗವ್ವಯ ಅಂಕಿತ ನಾಸ್ತಿನಾಥ, ದುಗ್ಗಳೆಯ ಅಂಕಿತ ದಾಸಯ್ಯಪ್ರಿಯ ರಾಮನಾಥ. ಹೀಗೆ ಈ ಎಲ್ಲ ಶರಣರ ಅಂಕಿತಗಳಲ್ಲಿ ನಾಥ ಪದ ಬರುತ್ತದೆ. ಹಾಗೆಂದಾಕ್ಷಣ ಇವರಾರೂ ನಾಥರ ಸಿದ್ಧಾಂತಗಳನ್ನು ಅನುಸರಿಸಿದವರಲ್ಲ. ಇವರ ಪೂರ್ವಜರು ನಾಥ ಪರಂಪರೆಗೆ ಸೇರಿರಬೇಕೆಂದು ಇದರಿಂದ ಸ್ಪಷ್ಟವಾಗುತ್ತದೆ.
  7. ಸಿದ್ದರಾಮನಿಗೆ ಸಂಬಂಧಿಸಿದಂತೆ ಅನೇಕ ಶಾಸನಗಳಿವೆ. ಸೊರಬ ತಾಲೂಕಿನ ಕೋಳಿಶಾಲೆ ಶಾಸನದ ಆರಂಭದಲ್ಲಿ ಸಿದ್ಧರಾಮನಾಥ ಶರಣರು ಎಂಬ ಸಾಲುಗಳಿವೆ. ಧಾರವಾಡ ಜಿಲ್ಲೆಯ ಸಂಗೂರ ಶಾಸನದ ಆರಂಭದಲ್ಲಿ ಶ್ರೀ ಸಿದ್ಧರಾಮನಾಥ ಶರಣು ಎಂದಿದೆ. ಮುದ್ದೇಬಿಹಾಳ ತಾಲೂಕಿನ ಪಡೇಕನೂರ ಶಾಸನದಲ್ಲಿ ಸಿದ್ದೇಂದ್ರ ಚಕ್ರವರ್ತಿ ಶ್ರೀರಾಮನಾಥ ಎಂದು ಕರೆಯಲಾಗಿದೆ. ಇದನ್ನೆಲ್ಲ ಗಮನಿಸಿದರೆ ಇವರ ಪೂರ್ವಜರು ನಾಥ ಪರಂಪರೆಯವರಾಗಿದ್ದು, ಈ ಶರಣರು ಮಾತ್ರ ನಾಥ ಪಂಥವನ್ನು ತೊರೆದು ಶರಣ ಧರ್ಮವನ್ನು ಕಟ್ಟಿದವರಾಗಿದ್ದಾರೆ.
  8. 12 ನೇ ಶತಮಾನದ ಶರಣರ ಮೇಲೆ ನಾಥ ಪಂಥದ ಪ್ರಭಾವವಾಗಿಲ್ಲ. 10 ನೇ ಶತಮಾನದಲ್ಲಿಯೇ ಗೋರಖನಾಥ, ತ್ಸ್ಯೇಂದ್ರನಾಥ ಈ ಮೊದಲಾದ ನವನಾಥಸಿದ್ದರು ಆಗಿ ಹೋಗಿದ್ದರಿಂದ ಅವರ ಪ್ರಭಾವ ಅಂದಿನ ಪರಿಸರದ ಮೇಲಾಗಿತ್ತೆಂಬುದು ಸುಳ್ಳಲ್ಲ. ಕೆಲವು ಶರಣರ ಪೂರ್ವಿಕರು ನಾಥ ಸಿದ್ಧಾಂತಗಳ ಪ್ರಭಾವಕ್ಕೆ ಒಳಗಾಗಿದ್ದರು. ಬಸವಣ್ಣನವರು ಶೈವ ಬ್ರಾಹ್ಮಣ ಮನೆತನದಲ್ಲಿ ಹುಟ್ಟಿದರು. ಹಾಗೆಂದಾಕ್ಷಣ ಅವರನ್ನು ಬ್ರಾಹ್ಮಣರೆಂದು ತಿಳಿಯಬೇಕಾಗಿಲ್ಲ. ವೇದ ಉಪನಿಷತ್ತುಗಳನ್ನು, ವೈದಿಕ ಧರ್ಮದ ಮೌಡ್ಯತೆಗಳನ್ನು ಬಸವಣ್ಣ ವಿರೋಧಿಸಿದರು. ತಾನು ಹಾರುವನೆಂದೆಡೆ ಕೂಡಲಸಂಗ ಮೆಚ್ಚುವನೇ” ಎಂದು ಹೇಳಿದರು. ನಾಥ ಪಂಥದ ಮನೆತನಗಳಿಂದ ಬಂದಿದ್ದರೂ ಶರಣರು ಚಳವಳಿಯನ್ನು ಕಟ್ಟಿದ ಮೇಲೆ ನಾಥಪಂಥದ ಮೌಡ್ಯಾಚರಣೆಗಳನ್ನು ನೇರವಾಗಿ ವಿರೋಧಿಸಿದರು. ನಾಥರದು ಸಿದ್ಧಪಥವಾದರೆ, ಶರಣರದು ಕ್ರಾಂತಿಪಥ. ಹೀಗಿರುವಾಗ ಶರಣರ ಕ್ರಾಂತಿಯ ಬೀಜಗಳನ್ನು ನಾಥರಲ್ಲಿ ಹುಡುಕುವುದು ತಪ್ಪಾಗುತ್ತದೆ. ಧಾರ್ಮಿಕ ಕ್ಷೇತ್ರದಲ್ಲಿ ಮೊದಲು ಕ್ರಾಂತಿ ಮಾಡಿದವರೇ ಶರಣರಾಗಿದ್ದಾರೆ. ನಾಥರೆಂದೂ ಕ್ರಾಂತಿಕಾರಿಗಳಾಗಿರಲಿಲ್ಲ. ಇದನ್ನು ಸರಿಯಾಗಿ ಗ್ರಹಿಸದ ಡೇರೆಯವರು ಶರಣರ ಕ್ರಾಂತಿಗೆ, ವಾರಸಾನಾಥ ಸಂಪ್ರದಾಯದ ಪ್ರಭಾವವಾಗಿದೆಯೆಂದು ಹೇಳಿರುವುದು ಸತ್ಯಕ್ಕೆ ದೂರವಾದುದಾಗಿದೆ.
  9. 12 ನೇ ಶತಮಾನದಲ್ಲಿ ಗೋರಖನಾಥ, ತ್ಸ್ಯೇಂದ್ರನಾಥ ಈ ಮೊದಲಾದ ನಾಥರ ಸಿದ್ಧಾಂತಗಳು, ಶರಣರಿಗೆ ಲಭಿಸಿರಲೇ ಇಲ್ಲ. ಕನ್ನಡ ನಾಡಿನಲ್ಲಿ ಈ ಸಂದರ್ಭದಲ್ಲಿ ಕಾಪಾಲಿಕರು ನಾಥರಾಗಿ ಇನ್ನೂ ರೂಪಾಂತರಗೊಂಡಿರಲಿಲ್ಲ. ಜನಸಾಮಾನ್ಯರ ನಡುವೆ ಕೆಲವು ನಾಥರ ಆಚರಣೆಗಳು ಜೀವಂತವಾಗಿದ್ದವು. ಶರಣರು ಅವುಗಳನ್ನೆಲ್ಲಾ ನೇರವಾಗಿಯೇ ವಿರೋಧಿಸಿದ್ದಾರೆ. ನಾಥರಿಗೂ ಶರಣರಿಗೂ ಸೈದ್ಧಾಂತಿಕವಾಗಿ ಯಾವುದೇ ಸಾಮ್ಯತೆಯಿಲ್ಲ. ಆದರೆ ಕೆಲವು ವಿಷಯಗಳಲ್ಲಿ ಅಲ್ಲಲ್ಲಿ ಸಾಮ್ಯತೆ ಕಾಣಿಸುತ್ತದೆ. ನಾಥ ಸಂಪ್ರದಾಯವು ಅವೈದಿಕ ಪಂಥವಾಗಿರುವುದರಿಂ, ಶರಣರೂ ಕೂಡ ವೈದಿಕವನ್ನು ವಿರೋಧಿಸುತ್ತಲೇ ಬಂದಿದ್ದರಿಂದ ಕೆಲವು ವಿಷಯಗಳಲ್ಲಿ ಸಾಮ್ಯತೆ ಕಾಣಿಸುತ್ತದೆಯೇ ಹೊರತು ಶರಣರ ಕ್ರಾಂತಿಗೆ, ನಾಥರ ಸಿದ್ಧಾಂತವು ಪ್ರೇರಣೆಯಾಗಲು ಸಾದ್ಯವೇ ಇಲ್ಲ. ನಾಥರ ಚಿಂತನೆಯೇ ಬೇರೆ, ಶರಣರ ಮಾರ್ಗವೇ ಬೇರೆ. ಶರಣರನ್ನು ಸೂಫಿಗಳ ಜತೆಗೆ, ಕೀರ್ತನಕಾರರ ಜತೆಗೆ, ತತ್ವಪದಕಾರರ ಜತೆಗೆ ಹೋಲಿಸಿ ತೌಲನಿಕ ಅಧ್ಯಯನ ಮಾಡಿದಾಗ ಕೆಲವು ಸಾಮ್ಯ ವಿಚಾರಗಳು ಕಾಣಿಸುತ್ತವೆಯೆಂದ ಮಾತ್ರಕ್ಕೆ ಒಂದರಿಂದ ಮತ್ತೊಂದು ಭಕ್ತಿಪಂಥ ಬೆಳೆದು ಬಂದಿತೆಂದು ಅರ್ಥವಲ್ಲ. ಹಾಗೊಂದು ವೇಳೆ ನಾಥರು ಕ್ರಾಂತಿಕಾರರಾಗಿದ್ದರೆ ಅದೇ ಪ್ರಥಮ ಚಳವಳಿಯಾಗಿರುತ್ತಿತ್ತು. ಚಳವಳಿಯ ಕನಸನ್ನೂ ಕಾಣದ ನಾಥರು ಅದ್ದೇಗೆ ಶರಣರ ಮೇಲೆ ಪ್ರಭಾವ ಬೀರಲು ಸಾಧ್ಯ? ಈ ವಿಷಯದ ಬಗೆಗೆ ಹೆಚ್ಚಿನ ಸಂಶೋಧನೆಗಳು ನಡೆಯಬೇಕಾಗಿದೆ.

ಹಠಯೋಗ ಲಂಬಿಕೆಯೆಂದು
ಆಕುಂಚನವೆಂದು
ವಜ್ರ ಅಮರಿಯ ಕಲ್ಪವೆಂದು
ಮಲಮೂತ್ರಂಗಳ ಸೇವಿಸುತ್ತ,
ಇದು ಪೂರ್ವ ನವನಾಥಸಿದ್ಧರ ಮತೋಕ್ತವೆಂದು
ಕಾಪಾಲಿಕಾಚರಣೆಯ ಆಚರಿಸುವವರಲ್ಲ ಶರಣರು.
ಮೇಣು, ತಲೆಯೊಳಗಣ ವಾತ ಪಿತ್ಥ ಶ್ಲೇಷ್ಮವ ತೆಗೆದು
ಅಮೃತವೆಂದು ಬಿನುಗು ದೃಷ್ಟವ ತೋರುವರಲ್ಲ ಶರಣರು.
ದ್ರವಿಸುವ ದೇಹದಲ್ಲಿ ಅಪ್ಪುವಿನ ಫಲರಸಕ್ಷೀರ ಘೃತ
ಮೊದಲಾದವ ಸೇವಿಸುತ್ತ,
ಅನ್ನವ ಬಿಟ್ಟೆವೆಂಬ ಭೂತಚೇಷ್ಟಕರಲ್ಲ ಶರಣರು.
ಇಂತಿವೆಲ್ಲವು ಕಾಕು ಸಟೆ ಭ್ರಾಂತೆಂದು ತಿಳಿದು,
ನಿರ್ಧರ ನಿಜದಿ ನಿಂದರು,
ಗುಹೇಶ್ವರಾ ನಿಮ್ಮ ಶರಣರು ಅಗ್ರಗಣ್ಯರು.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-603/ವಚನ ಸಂಖ್ಯೆ-1582)

ಇದು ಪೂರ್ವ ನವನಾಥಸಿದ್ಧರ ಮತೋಕ್ತವೆಂದು ಕಾಪಾಲಿಕಾಚರಣೆಯ ಆಚರಿಸುವವರಲ್ಲ ಶರಣರು ಅಲ್ಲಮಪ್ರಭುವಿನ ಈ ವಚನದಲ್ಲಿ ನವನಾಥ ಸಿದ್ಧರನ್ನು ನೇರವಾಗಿ ವಿರೋಧಿಸಲಾಗಿದೆ. ಮಲಮೂತ್ರಗಳನ್ನು ಸೇವಿಸಿದ ಇವರೆಂತಹ ಸಾಧಕರು? ಎಂದು ಪ್ರಭು ನೇರವಾಗಿ ಪ್ರಶ್ನಿಸಿದ್ದಾರೆ. ವಾತ, ಪಿತ್ತ, ಫಗಳನ್ನು ಅಮೃತವೆಂದು ತಿಳಿಯುವ ನಾಥರನ್ನು, ಪ್ರಭುದೇವರು ಭೂತಚೇಷ್ಟಕರೆಂದು ವಿಡಂಬಿಸಿದ್ದಾರೆ. ಫಲ, ರಸ, ಕ್ಷೀರ, ತುಪ್ಪ ಪದಾರ್ಥಗಳನ್ನು ಸೇವಿಸಿ ಅನ್ನವನ್ನು ಬಿಟ್ಟಿದ್ದೇವೆಂದು ಹೇಳುತ್ತ ತಿರುಗಿದ ನಾಥರನ್ನು ಶರಣರು ಸುಳ್ಳುಗಾರರೆಂದು ಕರೆದಿದ್ದಾರೆ. ಗುಹೇಶ್ವರಾ ನಿಮ್ಮ ಶರಣರು ಅಗ್ರಗಣ್ಯರು ಎಂದು ಈ ವಚನದ ಕೊನೆಯಲ್ಲಿ ಪ್ರಭುದೇವರು ಹೇಳಿರುವ ಮಾತು ತುಂಬ ಮುಖ್ಯವಾದುದಾಗಿದೆ.

ಶೈವ ಸೈವೆರಗಾದ,
ಪಾಶುಪತಿ ಪಥವನರಿಯ,
ಕಾಳಾಮುಖಿ ಕಂಗೆಟ್ಟ,
ಮಹಾವ್ರತಿ ಮದವೇರಿದ,
ಸನ್ಯಾಸಿ ಸಂಸಾರಿಯಾದ,
[ಜೋಗಿ] ಮರುಳಾಗಿ ತಿರುಗಿದ.
ಈ [ಆರು]ವಲ್ಲೆನೆಂದು ಕಳೆದು,
ಕೂಡಲ ಚನ್ನಸಂಗನ ಶರಣರು
ಆರ ಮೀರಿ ಬೇರೆನಿಂದನು.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-248/ವಚನ ಸಂಖ್ಯೆ-616)

ಈ ವಚನದಲ್ಲಿ ಚೆನ್ನಬಸವಣ್ಣನವರು ನಾಥಪಂಥದ ಮೂಲಪುರುಷರಾದ ಪಾಶುಪತಿಗಳನ್ನು, ಕಾಪಾಲಿಕರನ್ನು ನೇರವಾಗಿ ವಿಡಂಬಿಸಿದ್ದಾರೆ. ಇವರದು ಭಕ್ತಿಯೇ ಅಲ್ಲವೆಂದು ಹೇಳಿದ್ದಾರೆ. ಇವರು ಮರುಳರಂತೆ ತಿರುಗುತ್ತಿದ್ದರೆಂದು ವಿಡಂಬಿಸಿದ್ದಾರೆ.

ಯೋಗಿ, ಜೋಗಿ, ತಪಸಿ, ಸನ್ಯಾಸಿ,
ನರಮಾಂಸಕ, ನೀಲಪಟರು ಸುಳಿವರು ಕ್ಷುಧೆ ಕಾರಣ.
ತೋರಿ, ಮಾರಿಯುಂಬು ಬೆವಹಾರಗಳು!
ನಿರ್ಣಯ ನಿರ್ಲೇಪಭಕ್ತಿಯುಳ್ಳವರನಲ್ಲದೊಲ್ಲ,
ಸಕಳೇಶ್ವರದೇವ.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-205/ವಚನ ಸಂಖ್ಯೆ-472)

ಸಕಲೇಶ ಮಾದರಸರ ಈ ವಚನವನ್ನು ಗಮನಿಸಿದಾಗ ನಾಥರ ಬಗೆಗೆ ಶರಣರು ಹೊಂದಿದ್ದ ಅಭಿಪ್ರಾಯಗಳು ಎಂತಹವೆಂಬುದು ಸ್ಪಷ್ಟವಾಗುತ್ತದೆ. ಜೋಗಿಗಳು ನಾಥಪಂಥದ ಪ್ರಮುಖರು. ಭಾರತದಲ್ಲಿ ಅನೇಕ ಜೋಗಿಮಠಗಳಿವೆ. ಇಂತಹ ಜೋಗಿಗಳನ್ನು ಬೆವಹಾರಿಗಳೆಂದು ಸಕಳೇಶ ಮಾದರಸರು ಹೇಳಿದ್ದಾರೆ. ಇವರು ನಿಜವಾದ ಭಕ್ತರಲ್ಲವೆಂದು ಸ್ಪಷ್ಟಪಡಿಸಿರುವ ಈ ವಚನಕಾರ ಸಕಳೇಶ ಮಾದರಸರು ನಾಥರನ್ನು ನೇರವಾಗಿಯೇ ಟೀಕಿಸಿದ್ದಾರೆ.

ಬಸವ ಶಿಖಾಮಣಿ ಎಂಬ ಕೃತಿಯಲ್ಲಿ ಬಸವಣ್ಣನು ಶಿವಪೂಜೆಯಲ್ಲಿರುವಾಗ ಕಾಲಮೇಘ ಜೋಗಿ ಹಾಗೂ ಚಂದ್ರ ಜೋಗಿ ಎಂಬುವರು ಕಲ್ಯಾಣ ಪಟ್ಟಣಕ್ಕೆ ಬಂದು ಬೆಂಕಿ ಹಚ್ಚುತ್ತಾರೆ. ಆಗ ಬಸವಣ್ಣನವರು ಬೆಂಕಿಗೆ ಸನ್ನೆ ಮಾಡಲು ಅದು ಜೋಗಿಗಳ ಬೆನ್ನು ಹತ್ತುತ್ತದೆ. ಕಡೆಗೆ ಜೋಗಿಗಳು ಬಸವಣ್ಣನಿಗೆ ಮೊರೆ ಹೋಗಿ ಪ್ರಾಣ ಉಳಿಸಿಕೊಳ್ಳುತ್ತಾರೆಂದು ರಾವುಳ ಮತ ಪ್ರಕಾಶಿಕೆ (ಪು. 16) ಕೃತಿಯಲ್ಲಿ ಹೇಳಲಾಗಿದೆ. ಈ ಸಂಗತಿಯನ್ನು ಡಾ. ರಹಮತ್ ತರೀಕೆರೆಯವರು ತಮ್ಮ ಕರ್ನಾಟಕದ ನಾಥಪಂಥ” ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ.

ಹೀಗೆ ನಾಥರನ್ನು ವಚನಕಾರರು ವಿಡಂಬಿಸುತ್ತಲೇ ಬಂದಿದ್ದಾರೆ. ತಮ್ಮ ಕಾಲಘಟ್ಟದಲ್ಲಿ ಕಂಡ ನಾಥರ ಆಚರಣೆಗಳನ್ನು ನೋಡಿ ಶರಣರು ಅವರನ್ನು ಟೀಕಿಸುತ್ತಲೇ ಬಂದಿದ್ದಾರೆ. ಒಂದೇ ಒಂದು ವಚನದಲ್ಲಿ ನಾಥರ ಬಗೆಗೆ ಒಳ್ಳೆಯ ಅಭಿಪ್ರಾಯವನ್ನು ಶರಣರು ವ್ಯಕ್ತಪಡಿಸಿಲ್ಲ. ಸತ್ಯಸಂಗತಿ ಹೀಗಿರುವಾಗ ಶರಣರ ಕ್ರಾಂತಿಗೆ ನಾಥರು ಹೇಗೆ ಪ್ರೇರಣೆಯಾಗುತ್ತಾರೆ? ಶರಣರನ್ನು ಸರಿಯಾಗಿ ಅಧ್ಯಯನ ಮಾಡಲಾರದ ಕೆಲವು ವಿದ್ವಾಂಸರು ಹೇಳಿದಾಕ್ಷಣ ಅದು ಸತ್ಯವಾಗುವುದಿಲ್ಲ. ವಚನ ಚಳವಳಿಯನ್ನು ತಪ್ಪಾಗಿ ಅರ್ಥೈಸಿದ ವಿದ್ವಾಂಸರೇ ಹೆಚ್ಚಾಗಿದ್ದಾರೆ. ಆದರೆ ಕೊನೆಗೆ ಉಳಿಯುವುದು ಸತ್ಯವೇ ಹೊರತು, ಅಭಿಮಾನವಲ್ಲ. ಈ ಸಂಗತಿಯನ್ನು ಯುವ ಪೀಳಿಗೆ ಸರಿಯಾಗಿ ತಿಳಿದುಕೊಳ್ಳಬೇಕಾಗಿದೆ.

ನಾಥಪಂಥದ ಬಗೆಗೆ ಹೇಳುವಾಗ ಒಂದು ಮಾತನ್ನು ಮರೆಯಬಾರದು. ನಾಥರ ಯೋಗದರ್ಶನವು ದೇಹ ಮತ್ತು ಮನಸ್ಸುಗಳ ಸಮನ್ವಯ ಸಿದ್ಧಾಂತವಾಗಿ ಬೆಳೆಯಲು ಬೌದ್ಧರ ಅನಾತ್ಮವಾದವೇ ಮುಖ್ಯ ಪ್ರೇರಣೆಯಾಗಿದೆ. ವಜ್ರಯಾನ ಪಂಥದಿಂದ ನಾಥಪಂಥ ಬೆಳೆದು ಬಂದುದರಿಂದ ಅಲ್ಲಿ ಕೆಲವು ವೈಚಾರಿಕ ಸಂಗತಿಗಳಿವೆ. ಈ ವೈಚಾರಿಕತೆ ಕಾಪಾಲಿಕರಲ್ಲಾಗಲಿ, ಕೌಳರಲ್ಲಾಗಲಿ ಕಾಣಿಸುವುದಿಲ್ಲ.

ವಚನ ಚಳವಳಿಯನ್ನು ಹೋಲುವಂತಹ ಭಕ್ತಿಪಂಥ ಜಗತ್ತಿನಲ್ಲಿಯೇ ಇಲ್ಲ. ಶರಣರ ಹೋರಾಟ ಕೇವಲ ಧಾರ್ಮಿಕ ಕ್ಷೇತ್ರಕ್ಕೆ ಸೀಮಿತವಾಗಿರದೇ ಅದು ಸಾಮಾಜಿಕವೂ ಆಗಿತ್ತು. ಅಸಮಾನತೆಯ ವ್ಯವಸ್ಥೆಯನ್ನು ಹೊಡೆದೋಡಿಸಲು ಶರಣರು ಚಳವಳಿ ಮಾಡಿದರು. ಅದು ಮುಂದೆ ದೊಡ್ಡ ಕ್ರಾಂತಿಯಾಗಿ ಕಾಣಿಸಿಕೊಂಡಿತು. ಧಾರ್ಮಿಕ ಕ್ಷೇತ್ರಕ್ಕೂ ಕ್ರಾಂತಿಗೂ ಸಂಬಂಧವೇ ಇಲ್ಲ. ಇವೆರಡೂ ಪರಸ್ಪರ ವಿರುದ್ಧವಾದ ಕ್ಷೇತ್ರಗಳು. ಆದರೆ ಶರಣರು ಇವೆರಡನ್ನೂ ಕೂಡಿಸಿಕೊಂಡೇ ಹೋರಾಡಿದರು. ಆದುದರಿಂದ ಅವರದು ಸಮಾಜೋಧಾರ್ಮಿಕ ಚಳವಳಿಯಾಗಿದೆ. ಇಂತಹ ಸಾಧ್ಯತೆಗಳನ್ನು ಭಾರತದ ಯಾವುದೇ ಭಕ್ತಿಪಂಥದಲ್ಲಿ ಕಾಣಲು ಸಾಧ್ಯವಿಲ್ಲ.

ಸಾಹಿತ್ಯ ಕ್ಷೇತ್ರದಲ್ಲಿಯೂ ಶರಣರು ಕ್ರಾಂತಿಕಾರಕ ಹೆಜ್ಜೆಗಳನ್ನಿಟ್ಟರು. ಅದುವರೆಗೆ ಸಾಹಿತ್ಯ ಮಾತ್ರವಿತ್ತು. ಆದರೆ ಶರಣರು ಬಂದ ಮೇಲೆ ಅದು ಚಳವಳಿ ಸಾಹಿತ್ಯವಾಯಿತು. ಚಳವಳಿ ಮಾಡುತ್ತ, ಸಾಹಿತ್ಯ ಬರೆಯುತ್ತ, ಧಾರ್ಮಿಕ ಕ್ಷೇತ್ರದ ಮೂಲಕ ಸಾಮಾಜಿಕ ಬದಲಾವಣೆಗೆ ಕೈಹಾಕಿದ ಶರಣರದು ವಿಶಿಷ್ಟ ಚಳವಳಿಯಾಗಿದೆ, ವಿಶಿಷ್ಟ ಧರ್ಮವಾಗಿದೆ, ವಿಶಿಷ್ಟ ಸಾಹಿತ್ಯವಾಗಿದೆ. ಈ ಸತ್ಯವನ್ನು ತಿಳಿದುಕೊಳ್ಳದೇ ಇತರ ಭಕ್ತಿಪಂಥಗಳ ಜೊತೆಗೆ, ಇತರ ಸಾಹಿತ್ಯದ ಜೊತೆಗೆ ಶರಣರನ್ನು ಹೋಲಿಸಿ ತುಲನೆ ಮಾಡುವುದು ಸರಿಯಾದ ಕ್ರಮವೆನಿಸಲಾರದು. ಎಲ್ಲ ಭಕ್ತಿ ಪಂಥಗಳಲ್ಲೂ ಕೆಲವು ಒಳ್ಳೆಯ ಮೌಲ್ಯಗಳಿರುತ್ತವೆ. ಹಾಗೆಂದಾಕ್ಷಣ ಅದು ವಚನ ಚಳವಳಿಯಾಗಲಾರದು. ಎಲ್ಲ ಸಾಹಿತಿಗಳಲ್ಲಿಯೂ ಕೆಲವು ಒಳ್ಳೆಯ ವಿಚಾರಗಳಿರುತ್ತವೆ. ಹಾಗೆಂದಾಕ್ಷಣ ಅದು ಶರಣ ಸಾಹಿತ್ಯವಾಗಲಾರದು. ಶರಣರ ಧರ್ಮದ ಗುರಿಯೇ ಬೇರೆಯಾಗಿದೆ. ಅವರ ಸಾಹಿತ್ಯ ರಚನೆಯ ಉದ್ದೇಶವೇ ಬೇರೆಯಾಗಿದೆ. ಈ ವಿಷಯಗಳಲ್ಲಿ ಶರಣರು ಯಾರೊಂದಿಗೂ ಹೋಲಿಕೆಯಾಗುವುದಿಲ್ಲ. ಅವರಿಗೆ ಅವರದೇ ಆದ ಸಾಮಾಜಿಕ ಸಿದ್ಧಾಂತಗಳಿವೆ, ಧಾರ್ಮಿಕ ವ್ಯಾಖ್ಯೆಗಳಿವೆ. ಅವುಗಳನ್ನು ಸರಿಯಾಗಿ ಆರ್ಥ ಮಾಡಿಕೊಂಡಾಗ ಅವರ ಭಕ್ತಿಪಂಥವು ಉಳಿದ ಭಕ್ತಿಪಂಥಗಳಿಗಿಂತ ಭಿನ್ನವಾಗಿಯೇ ಕಾಣುತ್ತದೆ.

ವಚನ ಚಳವಳಿಯೂ ಒಂದು ಭಕ್ತಿ ಪಂಥವೇ ಆಗಿದೆ. ಆದರೆ ಅದು ಉಳಿದ ಭಕ್ತಿಪಂಥಗಳಂತಿಲ್ಲ. ಶರಣರೂ ಕೂಡ ಧರ್ಮ, ದೇವರು, ದೇವಾಲಯದ ಬಗಗೆ ಪ್ರಸ್ತಾಪಿಸಿದ್ದಾರೆ. ಆದರೆ ಅವರ ಧಾರ್ಮಿಕ ಪರಿಕಲ್ಪನೆಗಳೇ ಬೇರೆಯಾಗಿವೆ. ದಯೆಯೇ ಅವರ ಧರ್ಮವಾಗಿದೆ. ಅಂತಃಕರಣವೇ ಆ ಧರ್ಮದ ತಾಯಿ ಬೇರಾಗಿದೆ. ಶರಣರ ಆರಾಧ್ಯ ದೇವರು ಶಿವನಲ್ಲ, ಹರನಲ್ಲ, ಪರಮೇಶ್ವರನಲ್ಲ, ಆತ್ಮಪರಮಾತ್ಮನಾದ ನರಹರನಾಗಿ ಬೆಳೆಯುವ ಬಹುಮಹತ್ವದ ಬೆಳವಣಿಗೆ ಅಲ್ಲಿದೆ. ಅಂತೆಯೇ ಅವರಲ್ಲಿ ಶಿವನಿಗಿಂತ ಶಿವಶರಣನೇ ಅಧಿಕನಾಗಿ ಕಾಣಿಸಿಕೊಳ್ಳುತ್ತಾನೆ. ಶರಣರದು ಸಾಧನಾ ಮಾರ್ಗವಾಗಿದೆ, ಬಯಲು ತತ್ವವಾಗಿದೆ. ಶರಣರಲ್ಲಿಯೂ ದೇವಾಲಯದ ಪ್ರಸ್ತಾಪವಿರುತ್ತದೆ. ಆದರೆ ಅದು ಉಳಿದ ದೇವಾಲಯಗಳಂತಲ್ಲ. ಅವರ ದೇಹವೇ ದೇವಾಲಯವಾಗಿದೆ. ಶಿರವೇ ಹೊನ್ನ ಕಳಶವಾಗಿದೆ. ಸ್ಥಾವರ ದೇವಾಲಯಗಳಿಗೆ ಅಳಿವಿದೆ. ಅಂತೆಯೇ ಅವರು ಸ್ಥಾವರವನ್ನು ನಿರಾಕರಿಸಿದರು. ಚಲನಶೀಲತೆಯನ್ನು (ಜಂಗಮವನ್ನು) ಒಪ್ಪಿಕೊಂಡರು. ಹೀಗಾಗಿ ಶರಣರದು ಚಲನಶೀಲ ಧರ್ಮವಾಗಿದೆ.

ಅಷ್ಟಾವರಣ, ಷಟ್‌ಸ್ಥಲ, ಪಂಚಾಚಾರಗಳ ಮೂಲಕ ಶರಣರು ಧಾರ್ಮಿಕ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿದ್ದಾರೆ. ಭಕ್ತ ಶರಣನಾಗಲಿಕ್ಕೆ, ಆತ್ಮಪರಮಾತ್ಮನಾಗಿ ಬೆಳೆಯಲಿಕ್ಕೆ ಇವೆಲ್ಲ ಸಾಧನಾ ಮಾರ್ಗಗಳಾಗಿವೆ. ಈ ಸಾಧನಾ ಮಾರ್ಗಗಳು ಶೈವರಿಗಿಂತ, ನಾಥರಿಗಿಂತ ಭಿನ್ನವಾಗಿವೆ ಮತ್ತು ವೈಜ್ಞಾನಿಕವಾಗಿವೆ.

ಶರಣರ ಸಾಮಾಜಿಕ ಸಿದ್ಧಾಂತಗಳು ಯಾವ ಧರ್ಮದಲ್ಲಿಯೂ ಕಾಣಿಸುವುದಿಲ್ಲ. ಕಾಯಕ ದಾಸೋಹ ಸಮಾನತೆಯ ಮೌಲ್ಯಗಳನ್ನು ಬೆಳೆಸಿದ ವಚನ ಚಳವಳಿ ಆ ಮೂಲಕ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದೆ. ಲಿಂಗ ಅಸಮಾನತೆಯನ್ನು ಹೊಡೆದೋಡಿಸಿದ ವಚನ ಚಳವಳಿ, ಈ ನಾಡು ಕಂಡ ಪ್ರಪ್ರಥಮ ಕ್ರಾಂತಿಯಾಗಿದೆ. ಹೀಗಾಗಿ ವಚನ ಚಳವಳಿಯನ್ನು, ಶರಣರ ಭಕ್ತಿ ಪಂಥವನ್ನು ವಿಶೇಷವಾಗಿ ನೋಡಬೇಕಾಗುತ್ತದೆ. ಜಾತಿ ವರ್ಗ ವರ್ಣ ಲಿಂಗ ಅಸಮಾನತೆಯನ್ನು ಹೊಡೆದೋಡಿಸಿದ ವಚನ ಚಳವಳಿ, ಈ ನಾಡು ಕಂಡ ಪ್ರಥಮ ಕ್ರಾಂತಿಯಾಗಿದೆ. ಹೀಗಾಗಿ ವಚನ ಚಳವಳಿಯನ್ನು, ಶರಣರ ಭಕ್ತಿ ಪಂಥವನ್ನು ವಿಶೇಷವಾಗಿ ನೋಡಬೆಕಾಗುತ್ತದೆ.

ಅಧ್ಯಾಯ – 04: ಸಾಮ್ಯತೆ

ಭಾರತೀಯ ಭಕ್ತಿ ಪಂಥಗಳ ತೌಲನಿಕ ಅಧ್ಯಯನ ಮಾಡಿದಾಗ ಆಯಾ ಪಂಥಗಳ ನಡುವೆ ಸಾಮ್ಯತೆ ಹಾಗೂ ಭಿನ್ನತೆ ಕಾಣಿಸಿಕೊಳ್ಳುವುದು ಸಹಜ. ಅಂತಹದೇ ಸಾಮ್ಯತೆಭಿನ್ನತೆಗಳು ನಾಥಪಂಥ ಹಾಗೂ ವಚನ ಚಳವಳಿಯಲ್ಲಿ ಕಾಣಿಸಿಕೊಂಡಿವೆ. ಈ ಎರಡೂ ಭಕ್ತಿ ಪಂಥಗಳ ನಡುವಿರುವ ಸಾಮ್ಯತೆಯ ಅಂಶಗಳನ್ನಿಲ್ಲಿ ಗುರುತಿಸಲಾಗಿದೆ.

  1. ನಾಥಪಂಥಕ್ಕೆ ಶೈವ ಧರ್ಮದ ಪಾಶುಪತ, ಕಾಪಾಲಿಕಗಳ ಮೂಲ ಬೇರುಗಳಿರುವುದರಿಂದ ಈ ಪಂಥವು ಸಹಜವಾಗಿಯೇ ಅವೈದಿಕ ನೆಲೆಯಲ್ಲಿ ಬೆಳೆದುಕೊಂಡು ಬಂದಿದೆ. ವಚನ ಚಳವಳಿಯ ಮೂಲ ಹೋರಾಟವೇ ವೈದಿಕ ಧರ್ಮದ ವಿರುದ್ಧ ನಡೆದುದಾಗಿದೆ. ಹೀಗಾಗಿ ಇವೆರಡೂ ಭಕ್ತಿ ಪಂಥಗಳು ಅವೈದಿಕವಾಗಿವೆ.
  2. ಅವಧೂತರೆಂದರೆ ಅತ್ಯಾಶ್ರಮಿಗಳು, ಅತ್ಯಾಶ್ರಮಿಗಳೆಂದರೆ ವರ್ಣಾಶ್ರಮವನ್ನು ಮೀರಿದವರು. ಅವಧೂತರಾಗುವುದರ ಮೂಲಕ ನಾಥಪಂಥವು ಚಾತುರ್ವಣ್ರ ಧರ್ಮವನ್ನು ಉಲ್ಲಂಘಿಸಿದೆ. ವಚನ ಚಳವಳಿ ಚಾತುರ್ವಣ್ರದ ವಿರುದ್ಧವೇ ಹೋರಾಟವನ್ನು ಪ್ರಾರಂಭಿಸಿದೆ. ಹೀಗಾಗಿ ಈ ಭಕ್ತಿ ಪಂಥಗಳೆರಡೂ ಚಾತುರ್ವಣ್ರದ ವಿರೋಧಿಗಳಾಗಿವೆ.
  3. ನಾಥಪಂಥದ ಪ್ರಮುಖ ಸಾಧಕನಾದ ಗೋರಖನಾಥನು ವಾಮಾಚಾರದ ವಿರುದ್ಧ ನೇರವಾಗಿ ಪ್ರತಿಭಟಿಸಿದ್ದಾನೆ. ವಚನಕಾರರು ವಾಮಾಚಾರವನ್ನು ವಿರೋಧಿಸುತ್ತಲೇ ಬಂದಿದ್ದಾರೆ. ವಾಮಾಚಾರ ಹಾಗೂ ಮೌಡ್ಯತೆಯ ವಿರುದ್ಧ ಶರಣರ ಅನೇಕ ವಚನಗಳಿವೆ.
  4. ನಾಥಪಂಥವು ಗುರು ಪಂಥವಾಗಿರುವುದರಿಂ, ಗುರು ಪಂಥಗಳಲ್ಲಿ ಪುಸ್ತಕದ ವಿದ್ಯೆಗೆ ಮಹತ್ವವಿಲ್ಲ. ವೇದಶಾಸ್ತ್ರಪುರಾಣಗಳನ್ನು ನಂಬುವ ಯೋಗಿಗಳಿಗೆ ಮುಕ್ತಿ ಸಿಗುವುದಿಲ್ಲವೆಂದು ಗೋರಖನಾಥ ಹೇಳಿದರೆ, ವೇದಶಾಸ್ತ್ರಪುರಾಣಗಳ ವಿರುದ್ಧ ವಚನ ಚಳವಳಿ ವಿವರವಾಗಿ ಹೇಳಿದೆ. ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನ್ನಿಕ್ಕುವೆ, ಆಗಮದ ಮೂಗ ಕೊಯಿವೆ ಎಂದು ಬಸವಣ್ಣ ನೇರವಾಗಿಯೇ ಇವುಗಳನ್ನು ವಿರೋಧಿಸಿದ್ದಾರೆ.
  5. ನಾಥಪಂಥವು ಸಂಕರ ಪಂಥವಾಗಿದೆ. ಇಲ್ಲಿ ಜಾತಿಯ ಮಾತೇ ಬರುವುದಿಲ್ಲ. ಇದೇ ರೀತಿ ವಚನ ಚಳವಳಿಯು ಜಾತಿ, ವರ್ಣ, ವರ್ಗ ಅಸಮಾನತೆಯನ್ನು ನೇರವಾಗಿಯೇ ವಿರೋಧಿಸಿದೆ.
  6. ನಾಥರು, ದೇವರು ಆತ್ಮ ಪುನರ್ಜನ್ಮ – ವರ್ಣಾಶ್ರಮಗಳನ್ನು ಒಪ್ಪುವುದಿಲ್ಲ. ಸ್ವರ್ಗನರಕಗಳನ್ನು ನಂಬುವುದಿಲ್ಲ. ವಚನಕಾರರೂ ಕೂಡ ಇವುಗಳನ್ನು ಒಪ್ಪುವುದಿಲ್ಲ. ಆದರೆ ಶರಣರು ಆತ್ಮನ ಮೂಲಕ ಪರಮಾತ್ಮನನ್ನು, ಇಹದ ಮೂಲಕ ಪರವನ್ನು ಕಂಡಿದ್ದಾರೆ. ಸ್ವರ್ಗಲೋಕ ನರಕಲೋಕ ಬೇರಿಲ್ಲ ಕಾಣಿರೊ ಎಂದು ಹೇಳಿದ್ದಾರೆ.
  7. ನಾಥಪಂಥದಲ್ಲಿ ಕೆಳ ಜಾತಿಗಳು ಕೆಳ ಸಮುದಾಯಗಳು ತಮ್ಮ ಅಸ್ಮಿತೆಯನ್ನು ಕಂಡುಕೊಂಡಿವೆ. ವಚನ ಚಳವಳಿಯಲ್ಲಿಯೂ ಅಸ್ಪೃಶ್ಯರು, ದುಡಿಯುವ ವರ್ಗದವರೇ ಚಳವಳಿಯ ಬೆನ್ನೆಲುಬಾಗಿದ್ದಾರೆ. ಇವರೆಲ್ಲ ಮಾದಾರ ಚೆನ್ನಯ್ಯನ ಗೋತ್ರದವರೆಂದು ಹೇಳಿಕೊಂಡಿದ್ದಾರೆ.
  8. ಗೋರಖನಾಥನು ದೇಹವನ್ನು ಪವಿತ್ರವೆಂದು ಹೇಳಿದ್ದಾನೆ. ಬಸವಣ್ಣನು ದೇಹವೇ ದೇಗುಲವೆಂದು ಹೇಳಿದ್ದಾನೆ.
  9. ನಾಥರ ಯೋಗ ದರ್ಶನವು ದೇಹ ಮನಸ್ಸುಗಳ ಸಮನ್ವಯ ಸಿದ್ಧಾಂತವಾಗಿದೆ. ವಚನಕಾರರೂ ಕೂಡ ಮನಸ್ಸನ್ನು ನಿಯಂತ್ರಿಸುವ ಮೂಲಕ ದೇಹದಲ್ಲಿರುವ ಆತ್ಮನನ್ನು ಪರಮಾತ್ಮನನ್ನಾಗಿ ಕಂಡುಕೊಂಡಿದ್ದಾರೆ.
  10. ನಾಥಪಂಥವು ದೈತವನ್ನು ವಿರೋಧಿಸುತ್ತದೆ. ಜೀವ ದೇವರಲ್ಲಿ ಅದು ಭಿನ್ನತೆಯನ್ನು ಕಾಣುವುದಿಲ್ಲ. ವಚನಕಾರರಲ್ಲಿ ಜೀವನೇ ದೇವನಾಗಿ, ಭಕ್ತನೇ ಭಗವಂತನಾಗಿ ಬೆಳೆದು ನಿಲ್ಲುತ್ತಾನೆ.
  11. ನಾಥಪಂಥಗಳಲ್ಲಿ ಸಾಂಕೇತಿಕ ಭಾಷೆಯಿದೆ. ಇದನ್ನವರು ಉಲಟಾ ಬಾಂಸಿಯೆಂದು ಕರೆದಿದ್ದಾರೆ. ಶರಣರೂ ಕೂಡ ಬೆಡಗಿನ ಭಾಷೆಯನ್ನು ಬಳಸಿದ್ದಾರೆ. ಅನೇಕ ಬೆಡಗಿನ ವಚನಗಳನ್ನು ಕಾಣಬಹುದಾಗಿದೆ. ಇವೆರಡೂ ಭಕ್ತಿ ಪಂಥಗಳು ಸಾಂಕೇತಿಕ ಭಾಷೆಯನ್ನು ಸಾಧನೆಯ ಸಂದರ್ಭದಲ್ಲಿ, ಧ್ಯಾನದ ಸಂದರ್ಭದಲ್ಲಿ ಬಳಸುತ್ತಿರಬಹುದಾಗಿದೆ.
  12. ನಾಥಪಂಥದಲ್ಲಿ ಮತ್ಸ್ಯೇಂದ್ರನಾಥ, ಗೋರಖನಾಥರಂಥ ಮಹಾನ್‌ ಸಾಧಕರಾಗಿದ್ದರೆ. ಶರಣರಲ್ಲಿ ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿಯವರಂಥ ಮಹಾನುಭಾವಿಗಳಾಗಿದ್ದಾರೆ.
  13. ನಾಥಫಂಥ ಗುರು ಪಂಥವಾಗಿರುವದರಿಂದ ಇಲ್ಲಿ ಗುರುವಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಶರಣರಲ್ಲಿಯೂ ಕೂಡ ಗುರುವಿಗೆ ಪ್ರಮುಖ ಸ್ಥಾನವಿದ್ದು, ಗುರುಲಿಂಗಜಂಗಮರಿಗೆ ತನುಮನಧನಗಳನ್ನು ನೀಡಬೇಕೆಂದು ಹೇಳಲಾಗಿದೆ.
  14. ಗ್ರಂಥ ಪ್ರಮಾಣವನ್ನು ನಾಥರು ಶಬ್ದ ಪ್ರಮಾಣವನ್ನು ನಿರಾಕರಿಸಿದ್ದಾರೆ. ಶರಣರೂ ಕೂಡ ಶಬ್ದ ಪ್ರಮಾಣವನ್ನು ಒಪ್ಪುವುದಿಲ್ಲ. ಶರಣರಿಗೆ ಯಾವುದೇ ಧಾರ್ಮಿಕ ಗ್ರಂಥವಿಲ್ಲ. ಶಬ್ದವೆಂಬುದು ಸೂತಕವೆಂದವರು ಹೇಳಿದ್ದಾರೆ.
  15. ನಾಥಪಂಥವು ಅನುಭವ ಪ್ರಾಮಾಣ್ಯವನ್ನು ಒಪ್ಪುತ್ತದೆ. ಶರಣರೂ ಕೂಡ ಅನುಭವಕ್ಕೆ ಮಹತ್ವದ ಸ್ಥಾನ ಕೊಟ್ಟಿದ್ದಾರೆ. ಅನುಭವದಿಂದಲೇ ಅನುಭಾವವನ್ನು ಕಂಡುಕೊಂಡಿದ್ದಾರೆ.
  16. ಧ್ಯಾನ ಧಾರಣೆಯ ಮೂಲಕ ಕುಂಡಲಿನಿಯ ಸುಷುಮ್ನ ಮಾರ್ಗವನ್ನು ತೆರೆದು ಬ್ರಹ್ಮರಂಧ್ರದಲ್ಲಿ ಹಾದು ಶಿವನೊದಿಗೆ ಸಮರಸಗೊಂಡಾಗ ನಾಥರಿಗೆ ಕೈವಲ್ಯಾವಸ್ಥೆಯ ಸಮಾಧಿ ಪ್ರಾಪ್ತವಾಗುತ್ತದೆ. ಷಟ್‌ಸ್ಥಲಗಳ ಮೂಲಕ ಭಕ್ತ ಶರಣನಾಗಿ ಬೆಳೆದು ಆತ್ಮಪರಮಾತ್ಮ ಒಂದೇ ಆಗುವ ಐಕ್ಯಸ್ಥಿತಿ ಶರಣರಲ್ಲಿ ಮಹತ್ವದ್ದಾಗಿದೆ.
  17. ಗೋರಖನ ಪ್ರಮಾಣ ಗ್ರಂಥವಾದ ಸಿದ್ದ ಸಿದ್ಧಾಂತ ಪದ್ಧತಿ ಯಲ್ಲಿ ವಿಭೂತಿ, ಕೌಪೀನ, ಕಪ್ಪರ, ಶಂಖ, ಪಾದುಕೆ, ಕುಂಡಲ, ಜಪಮಾಲೆಗಳ ಬಗೆಗೆ ಹೇಳಲಾಗಿದೆ. ಶರಣರು ಅಷ್ಟಾವರಣಗಳಲ್ಲಿ ಇವುಗಳನ್ನು ಕಂಡುಕೊಂಡಿದ್ದಾರೆ.
  18. ನೇಪಾಳವು ನಾಥಪಂಥದ ತವರು, ಮಂಗಳೂರಿನ ಕದರಿ ನಾಥರ ಪ್ರಮುಖ ಸಾಧನಾ ಕೇಂದ್ರವಾಗಿದೆ. ಬಸವಕಲ್ಯಾಣವು ಶರಣರ ಚಳವಳಿಯ ಕೇಂದ್ರ ಸ್ಥಾನವಾಗಿದ್ದು, ಕೂಡಲಸಂಗಮ ಬಸವಣ್ಣನವರ ಐಕ್ಯಸ್ಥಾನವಾಗಿದೆ.
  19. ನಾಥರ ತಂತ್ರಸಾಧನೆ ವೇದದ ವಿರುದ್ಧವಾಗಿತ್ತು. ಶ್ರೀಶೈಲ ಎಲ್ಲ ತಂತ್ರ ಸಾಧನೆಗಳ ಕೇಂದ್ರವಾಗಿತ್ತು. ಅನುಭವ ಮಂಟಪ ಶರಣರಿಗೆ ವಾಕ್ ಸಾಧನೆಯ ಕೇಂದ್ರವಾಗಿತ್ತು. ಅಲ್ಲಿ ಅವರು ವೇದ, ಉಪನಿಷತ್ತುಗಳನ್ನು ನೆರವಾಗಿ ವಿರೋಧಿಸಿದರು. ಅದು ಕಲ್ಯಾಣ ಶರಣರ ಕ್ರಾಂತಿಯ ತಾಣವಾಗಿತ್ತು.
  20. ನವನಾಥರು ರಸವಿದ್ಯೆಯಲ್ಲಿ ಸಿದ್ದಿ ಪಡೆದರೆ, ಶರಣರು ಶಿವಯೋಗದ ಮೂಲಕ ಆಧ್ಯಾತ್ಮ ಸಾಧನೆಯನ್ನು ಕಂಡುಕೊಂಡಿದ್ದಾರೆ.
  21. ನಾಥರಲ್ಲಿ ಕೆಳವರ್ಗದಿಂದ ಬಂದ ಅನೇಕ ಸಾಧಕರಿದ್ದಾರೆ. ಅವರಲ್ಲಿ ಕಸಗೂಡಿಸುವ ಜಾಡಮಾಲಿ ಸಮಾಜದ ಜಾಲಂದರನಾಥರು ಮುಖ್ಯರಾದರೆ, ರೇವಣಸಿದ್ದರು ಕುರುಬ ಸಮುದಾಯದಿಂದ ಬಂದ ಸಾಧಕರಾಗಿದ್ದಾರೆ. ಶರಣರ ಚಳವಳಿ ಅದು ಕಾಯಕ ಜೀವಿಗಳ ಚಳವಳಿಯಾಗಿದೆ. ಅಲ್ಲಿ ದಲಿತರು, ಅಸ್ಪೃಶ್ಯರು, ಕೆಳ ವರ್ಗದ ಶೂದ್ರರೇ ಪ್ರಮುಖರಾಗಿದ್ದಾರೆ. ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ ಹಿರಿಯ ಸಮಕಾಲೀನ ಶರಣರಾಗಿದ್ದಾರೆ.
  22. ನಾಥ ಪಂಥದಲ್ಲಿ ಚಕ್ರದ ಬಗ್ಗೆ ಹೀಗೆ ಹೇಳಲಾಗಿದೆ.

ಚತುರ್ದಲ ವಿಶಿಷ್ಟ ಮೂಲಾಧಾರ ಚಕ್ರ ಸ್ಥಾಯ ಮೂಷಕವಾಹನಾಯ
ಷಡ್ಡಲವಿಶಿಷ್ಟ ಸ್ವಾಧಿಷ್ಠಾನ ಚಕ್ರಸ್ಥಾಯ ಹಂಸವಾಹನಾದಿ
ದಶದಲ ವಿಶಿಷ್ಟ ಮಣಿಪೂರಕ ಚಕ್ರಸ್ಥಾಯ ಗರುಡವಾಹನಾದಿ
ದ್ವಾದಶದಲ ವಿಶಿಷ್ಟಾನಾಹತ ಚಕ್ರಸ್ಥಾಯ ವೃಷಭವಾಹನಾದಿ
ಷೋಡಶದಲ ವಿಶಿಷ್ಟ ವಿರುದ್ಧ ಚಕ್ರಸ್ಥಾಯ ಸಾಂಗೋಪಾಂಗ ಸಹಿತಾಯ
ದ್ವಿದಲ ವಿಷ್ಟಾಜ್ಞಾಚಕ್ರಸ್ಥಾಯ ಸಾಂಗೋಪಾಂಗಸಹಿತಾಯ
ಸಹಸ್ರದಲ ವಿಶಿಷ್ಟ ಬ್ರಹ್ಮ ಚಕ್ರಸ್ಥಾಯ ಸಾಂಗೋಪಾಂಗಸಹಿತಾಯ.
(ನಾಥಪಂಥದ ಅನುವಾದಿತ ಕೃತಿಗಳು/ಸಂ. ಡಾ. ಶ್ರೀಧರ ಎಚ್. ಜಿ / ಪು. 260, 200)

ಅಲ್ಲಮನ ವಚನದಲ್ಲಿ ಚಕ್ರದ ಪ್ರಸ್ತಾಪ ಹೀಗಿದೆ:

ಗುದಸ್ಥಾನದಲ್ಲಿ ಆಧಾರಚಕ್ರ,
ಪೃಥ್ವಿಯೆಂಬ ಮಹಾಭೂತ,
ಚತುಃಕೋಣೆ ಚೌದಳ ಪದ್ಮ,
ಅಲ್ಲಿ ಇಹ ಅಕ್ಷರ ನಾಲ್ಕು_, , , ,
ಅದರ ವರ್ಣ ಸುವರ್ಣ,
ಅದಕ್ಕೆ ಅಧಿದೇವತೆ ದಾಕ್ಷಾಯಣಿ.
ಲಿಂಗಸ್ಥಾನದಲ್ಲಿ ಸ್ವಾಧಿಷ್ಠಾನಚಕ್ರ,
ಅಪ್ಪುವೆಂಬ ಮಹಾಭೂತ,
ಧನುರ್ಗತಿ, ಷಡುದಳ ಪದ್ಮ,
ಅಲ್ಲಿ ಇಹ ಅಕ್ಷರವಾರು , , , , , ,
ಅದರ ವರ್ಣ ಪಚ್ಚೆಯ ವರ್ಣ,
ಅದಕ್ಕೆ ಅಧಿದೇವತೆ ಬಹ್ಮನು.
ನಾಭಿಸ್ಥಾನದಲ್ಲಿ ಮಣಿಪೂರಕವೆಂಬಚಕ್ರ,
ತೇಜವೆಂಬ ಮಹಾಭೂತ,
ತ್ರಿಕೋಣೆ, ದಶದಳ ಪದ್ಮ ಅಲ್ಲಿ ಇಹ ಅಕ್ಷರ ಹತ್ತು_
, , , , , , , , , ,
ಅದರ ವರ್ಣ ಕೃಷ್ಣವರ್ಣ,
ಅದಕ್ಕೆ ಅಧಿದೇವತೆ ವಿಷ್ಣು.
ಹೃದಯಸ್ಥಾನದಲ್ಲಿ ಅನಾಹತಚಕ್ರ,
ವಾಯುವೆಂಬ ಮಹಾಭೂತ,
ಷಟ್ಕೋಣೆ, ದ್ವಾದಶಗಳ ಪದ್ಮ ,
ಅಲ್ಲಿ ಇಹ ಅಕ್ಷರ ಹನ್ನೆರಡು_
, , , , , , , , , , , ,
ಅದರ ವರ್ಣ ಕುಂಕುಮವರ್ಣ,
ಅದಕ್ಕೆ ಅಧಿದೇವತೆ ಮಹೇಶ್ವರನು.
ಕಂಠಸ್ಥಾನದಲ್ಲಿ ವಿಶುದ್ಧಿಚಕ್ರ, ಆಕಾಶವೆಂಬ ಮಹಾಭೂತ,
ವರ್ತುಲಾಕಾರ, ಷೋಡಶದಳ ಪದ್ಮ,
ಅಲ್ಲಿ ಇಹ ಅಕ್ಷರ ಹದಿನಾರು
, , , , , , , , ಲ್ಯು, ಲ್ಯೂ , , , , , ಅಂ, ಅಃ,
ಅದರ ವರ್ಣ ಶ್ವೇತವರ್ಣ,
ಅದಕ್ಕೆ ಅಧಿದೇವತೆ ಸದಾಶಿವನು.
ಭ್ರೂಮಧ್ಯಸ್ಥಾನದಲ್ಲಿ ಆಜ್ಞಾಚಕ್ರ, ಮನವೆಂಬ ಮಹಾಭೂತ,
ತಮಂಧಾಕಾರ, ದ್ವಿದಳಪದ್ಮ,
ಅಲ್ಲಿ ಇಹ ಅಕ್ಷರವೆರಡು_ ಹಂ, ಕ್ಷಂ,
ಅದರ ವರ್ಣ ಮಾಣಿಕ್ಯವರ್ಣ,
ಅದಕ್ಕೆ ಅಧಿದೇವತೆ ಶ್ರೀಗುರು.
ಉನ್ಮನೀಜ್ಯೋತಿ ಬ್ರಹ್ಮರಂಧ್ರದ ಮೇಲೆ. ಸಹಸ್ರದಳ ಪದ್ಮ,
ಅಲ್ಲಿ ಅಮೃತವಿಹುದು, ಅಲ್ಲಿ `ಓಂಕಾರಸ್ವರೂಪವಾಗಿ
ಗುಹೇಶ್ವರಲಿಂಗವು ಸದಾಸನ್ನಹಿತನು.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-69/ವಚನ ಸಂಖ್ಯೆ-188)

ಹೀಗೆ ಚಕ್ರದ ಮಹತ್ವವನ್ನು ಕುರಿತು ಅಲ್ಲಮ ಪ್ರಭುಗಳು ಚರ್ಚಿಸಿದ್ದಾರೆ.

  1. ದುಸ್ತರವಾದ ಮಾಯಾನದಿಯನ್ನು ದಾಟುವುದಕ್ಕೆ ಭಕ್ತಿಯೆಂಬ ದೋಣಿಯನ್ನು ಬಿಟ್ಟರೆ ಬೇರೆ ಸಾಧನಗಳಿಲ್ಲ ಎಂದು ನಾಥರು ಹೇಳಿದ್ದಾರೆ. ವೇದಪ್ರಿಯನಲ್ಲ, ನಾದ ಪ್ರಿಯನಲ್ಲ ಭಕ್ತಿ ಪ್ರಿಯ ನಮ್ಮ ಕೂಡಲಸಂಗಮದೇವ ಎಂದು ಶರಣರು ಹೇಳಿದ್ದಾರೆ.
  2. ನಾಥರಲ್ಲಿಯೂ ಕೆಲವು ಯೋಗಿನಿಯರ ಪ್ರಸ್ತಾಪವಿದೆ. ಚೌರಾಸಿ ಸಿದ್ಧರಲ್ಲಿ ಮಣಿಭದ್ರಾ, ಮೇಖಲಿಪಾ, ಕನಖಲಿಪಾ ಎಂಬ ಮೂರು ಯೋಗಿನಿಯರು ಬರುತ್ತಾರೆ. ರಾಜತ್ವವನ್ನು ಬಿಟ್ಟು ನಾಥದೀಕ್ಷೆ ಪಡೆದ ಶೃಂಗಾರ ಶತಕದ ಕವಿ ಭರ್ತೃಹರಿಯ ಜತೆಯಲ್ಲಿದ್ದ ಪಿಂಗಳಾದೇವಿ ಎಂಬ ಯೋಗಿನಿಯ ಪ್ರಸ್ತಾಪ ಬರುತ್ತದೆ. ನಾಥರ ಬಾರಾ ಪಂಥಗಳಲ್ಲಿ ಒಂದಾದ ಆಯಿಪಂಥದ ಸ್ಥಾಪಕಿಯಾದ ಭಗವತಿ ವಿಮಲಾದೇವಿಯು ಒಬ್ಬ ಯೋಗಿನಿಯಾಗಿದ್ದು, ಈಕೆ ಗೋರಖನ ಶಿಷ್ಯಳಾಗಿದ್ದಾಳೆ. ಮಹಾರಾಷ್ಟ್ರದ ನವನಾಥರಲ್ಲಿ ಗೌರಾಯಿ, ಗಂಗಾದೇವಿ, ಮುಕ್ತಾಯಿಯರು ಬರುತ್ತಾರೆ. ನಾಥರ ಪವಿತ್ರ ಕ್ಷೇತ್ರವಾದ ತ್ರ‍್ಯಂಬಕೇಶ್ವರವು ಕೌಳಗಿರಿಯ ಬುಡದಲ್ಲಿದೆ. ಈ ಕೌಳಗಿರಿಯು ಕೌಳಯೋಗಿನಿಯರ ತಾಣವಾಗಿತ್ತು. (ವಿವರಗಳಿಗೆ ನೋಡಿ: ಕರ್ನಾಟಕ ನಾಥಪಂಥ/ರಹಮತ್ ತರೀಕೆರೆ/ಪು: 81/2009)

    ಹೀಗೆ ನಾಥ ಪಂಥದಲ್ಲಿ ಯೋಗಿನಿಯರ ಪ್ರಸ್ತಾಪವಿದ್ದರೆ, ವಚನ ಚಳವಳಿಯಲ್ಲಿ ನೂರಾರು ಶರಣೆರಯರ ಪ್ರಸ್ತಾಪವಿದ್ದು, ಅದರಲ್ಲಿ 39 ವಚನಕಾರ್ತಿಯರಿದ್ದಾರೆ. ಅಕ್ಕಮಹಾದೇವಿ, ಮುಕ್ತಾಯಕ್ಕ, ಅಕ್ಕಮ್ಮ, ಸೂಳೆಸಂಕವ್ವ, ಕಾಳವ್ವ, ಗೊಗ್ಗವ್ವ ಈ ಮೊದಲಾದವರನ್ನು ಹೆಸರಿಸಬಹುದಾಗಿದೆ.

    1. ಲೋಕದ ಎಲ್ಲರನ್ನೂ ಭೇದಭಾವವಿಲ್ಲದೇ ಕಾಣಬೇಕೆಂದು ನಾಥ ದರ್ಶನ ಹೇಳಿದರೆ ಸಕಲ ಜೀವಿಗಳಿಗೂ ಲೇಸನೇ ಬಯಸಬೇಕೆಂದು ಶರಣರು ಹೇಳಿದ್ದಾರೆ. ಒಬ್ಬ ನಾಥನು ಮತ್ತೊಬ್ಬ ನಾಥನನ್ನು ಭೇಟಿಯಾದಾಗ ಆದೇಶ ಎಂದು ನಮಸ್ಕರಿಸುತ್ತಾರೆ. ಒಬ್ಬ ಶರಣ ಮತ್ತೊಬ್ಬ ಶರಣನನ್ನು ಕಂಡಾಗ ಶರಣು ಶರಣಾರ್ಥಿ ಎಂದು ನಮಸ್ಕರಿಸುತ್ತಾರೆ.
    2. ನಾಥರಲ್ಲಿ ವಿರಕ್ತ ಭಾವವಿದೆ. ಹಳೆಯ ಚಿಂದಿಯಿಂದ ಮಾಡಿದ ಬಟ್ಟೆಯಿಂದ ದೇಹ ಮುಚ್ಚಿಕೊಂಡು ನಾಥರು ಹಾಳು ದೇಗುಲಗಳಲ್ಲಿ ವಾಸವಾಗಿರುತ್ತಾರೆ. ಇಂತಹ ಅವಧೂತರು ಗುರುವನ್ನು ಪೂಜಿಸಿ ಕೊಂಡಿರುತ್ತಾರೆಂದು ಚರ್ಪಟನಾಥನು ಹೇಳಿದರೆ, ಹಸಿವಾದೊಡೆ ಭಿಕ್ಷಾನ್ನಗಳುಂಟು, ಶಯನಕ್ಕೆ ಹಾಳು ದೇಗುಲವುಂಟೆಂದು” ಅಕ್ಕಮಹಾದೇವಿ ಹೇಳಿದ್ದಾರೆ.
    3. ತಾ ಓಷ್ಠ ನಾ ಪಾರಸಂ ಮುಂತಾದವರನ್ನು ಕಪಾಲಪಟಾನ ಅಮರೀಪಾ, ಖರ್ಪಧಾರಣ, ಸ್ವಕೀಯವೀರ್ಯವನ್ನು ತಾನೇ ದ್ರವೀಕರಿಸಿ ಪಾನ ಮಾಡುವುದು, ಲೇಪ ಮಾಡುವುದು ಮುಂತಾದ ಅಬದ್ಧ ಕಾರ್ಯ ಮಾಡುವವರಿಗೆ ಯಾವುದೇ ಫಲ ದೊರೆಯದೆಂದು ಗೋರಖನಾಥನು ಹೇಳಿದ್ದಾನೆ. (ಸಿದ್ದ ಸಿದ್ದಾಂತ ಪದ್ಧತಿ 680) ಕಾಪಾಲಿಕಾಚರಣೆಯನಾಚಾರಿಸುವವರಲ್ಲ ಶರಣರು ಎಂದು ಅಲ್ಲಮಪ್ರಭು ಹೇಳಿದ್ದಾರೆ. (ವ. 1582) ಗೋರಖನಾಥನು ಅಬದ್ಧ ಕಾರ್ಯ ಮಾಡಬಾರದೆಂದು ತನ್ನ ಸಿದ್ದ ಸಿದ್ಧಾಂತ ಪದ್ಧತಿ ಯಲ್ಲಿ ಹೇಳಿದ್ದ. ಆದರೆ ಕಾಪಾಲಿಕರಲ್ಲಿ ಈ ಆಚರಣೆಗಳಿರುವುದನ್ನು ಅಲ್ಲಮಪ್ರಭು ವಿಡಂಬಿಸಿದ್ದಾರೆ.
    4. ಅಲ್ಲಮಪ್ರಭು ತನ್ನ ಗುರುಪರಂಪರೆಯನ್ನು ಹೇಳಿಕೊಂಡಿರುವ ವಚನದಲ್ಲಿ ಗಣನಾಥ ಎಂಬ ಪದವು ಎಲ್ಲನಾಥರ ಹೆಸರಿನೊಂದಿಗೆ ಜೋಡಣೆಯಾಗಿದೆ. ಆದರೆ ಈ ವಚನವು ಹೆಚ್ಚಿನ ವಚನಗಳಲ್ಲಿ ಸೇರಿದೆ.

          ಅನಾದಿಗಣನಾಥನ ಶಿಷ್ಯನು ಆದಿಗಣನಾಥನು.
          ಆದಿಗಣನಾಥನ ಶಿಷ್ಯನು ಆಧ್ಯಾತ್ಮಗಣನಾಥನು.
          ಆಧ್ಯಾತ್ಮ ಗಣನಾಥನ ಶಿಷ್ಯನು ಆತ್ಮ ಗಣನಾಥನು.
          ವೋಮಸಿದ್ಧಗಣನಾಥನ ಶಿಷ್ಯನು ಬಸವನೆಂಬ ಗಣನಾಥನು.
          ಬಸವನೆಂಬ ಗಣನಾಥನ ಶಿಷ್ಯನು ಅನಿಮಿಷನೆಂಬ ಗಣನಾಥನು.
          ಅನಿಮಿಷನೆಂಬ ಗಣನಾಥನ ಶಿಷ್ಯನು ಅಲ್ಪಪ್ರಭುವೆಂಬ ಗಣನಾಥನು.
          ಇಂತು ಅನಾದಿವಿಡಿದು ಬಂದ ಅನುಪಮ ಲಿಂಗವು,
          ಗುಹೇಶ್ವರನೆಂಬ ಹೆಸರನೊಳಕೊಂಡು,
          ಎನ್ನ ಕರಸ್ಥಲಕ್ಕೆ ಸಾಧ್ಯವಾಯಿತ್ತು ಕಾಣಾ ಸಿದ್ಧರಾಮಯ್ಯಾ.
          (ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-239/ವಚನ ಸಂಖ್ಯೆ-756)

          “ಇಂತು ಅನಾದಿವಿಡಿದು ಬಂದ ಅನುಪಮ ಲಿಂಗವು, ಗುಹೇಶ್ವರನೆಂಬ ಹೆಸರನೊಳಕೊಂಡು, ಎನ್ನ ಕರಸ್ಥಲಕ್ಕೆ ಸಾಧ್ಯವಾಯಿತ್ತು ಕಾಣಾ ಸಿದ್ಧರಾಮಯ್ಯಾಎಂದು ವಚನದ ಕೊನೆಯಲ್ಲಿ ಹೇಳಲಾಗಿದೆ. ಅಲ್ಲಮಪ್ರಭು, ಸಿದ್ಧರಾಮನ ಮುಂದೆ ತನ್ನ ಗುರು ಪರಂಪರೆಯನ್ನು ಹೇಳಿದ್ದಾನೆ. ಆದರೆ ಇಲ್ಲಿ ಬರುವ ನಾಥರ ಹೆಸರುಗಳಾವುವೂ ನವನಾಥರ ಹೆಸರುಗಳಲ್ಲ. ಇವರಲ್ಲಿ ಬಸವನೆಂಬ ಗಣನಾಥ ಕೂಡ ಸೇರಿಕೊಂಡಿದ್ದಾನೆ. ಅಲ್ಲಮಪ್ರಭು ತನ್ನ ಗುರು ಪರಂಪರೆಯಲ್ಲಿ ಈ ನಾಥರ ಹೆಸರನ್ನು ಹೇಳಿರುವಂತೆ. ಮುಂದೆ ಬಂದ ನಾಥರು ಅಲ್ಲಮಪ್ರಭುವಿನ ಹೆಸರನ್ನು ತಮ್ಮ ರಚನೆಗಳಲ್ಲಿ ಹೇಳಿದ್ದಾರೆ.

          ಶ್ರೀ ಆದಿನಾಥ ಮತ್ಸ್ಯೇಂದ್ರನಾಥ ಶಾಖರಾನಂದ ಭೈರವಾ …
          ಕಾವೇರೀ ಪೂಜ್ಯಪಾದಸ್ಟ ನಿತ್ಯನಾಥ್ ನಿರಂಜನಃ
          ಕಪಾಲಿ ಬಿಂದುನಾಥಚ್ಚ ಕಾಕಂಶೀಶ್ವರಾಹ್ವಯಃ
          ಅಲ್ಲಾಮಃ ಪ್ರಭುದೇವಶ್ಚ ಘೋಷಾಚೋಲೀ ಚ । ಟಿಂಚಿಣಿ…..
          (ಸಿದ್ಧಸಾಹಿತ್ಯ/ಮ. ಸು. ಕೃಷ್ಣಮೂರ್ತಿ/ಪು. 153)

          ಹೀಗೆ ನಾಥರು ಅಲ್ಲಮಪ್ರಭುವನ್ನು, ಅಲ್ಲಮಪ್ರಭುನಾಥರನ್ನು ತಮ್ಮ ರಚನೆಗಳಲ್ಲಿ ಸ್ಮರಣೆ ಮಾಡಿದ್ದಾರೆ. ಹೀಗಾಗಿ ನಾಥರಿಗೂ ವಚನಕಾರರಿಗೂ ಒಂದು ರೀತಿಯ ಆಧ್ಯಾತ್ಮ ಸಂಬಂಧವಿರುವುದನ್ನು ಕಾಣಬಹುದಾಗಿದೆ. ಆದರೆ ಅಲ್ಲಮಪ್ರಭುವಿನ ಮೇಲೆ ಯಾವುದೇ ನಾಥರ ಪ್ರಭಾವವಾಗಿಲ್ಲ. ಕೌಳ, ನಾಥ ಪಂಥಗಳನ್ನು ಅರಗಿಸಿಕೊಂಡು ಮುನ್ನಡೆದ ಹೊಸಮಾರ್ಗವನ್ನು ಅಲ್ಲಮನಲ್ಲಿ ಕಾಣಬಹುದಾಗಿದೆ.

          1. ಕುಂಡಿಲಿನಿ ಕುರಿತು ನಾಥರು ಮತ್ತು ಶರಣರು ವಿವರಿಸಿದ್ದಾರೆ. ಗೋರಖನಾಥನ ಯೋಗಬೀಜಂ ಅಧ್ಯಾಯದಲ್ಲಿ ಕುಂಡಿಲಿನಿ ಕುರಿತು ಹೀಗೆ ಹೇಳಲಾಗಿದೆ.

          ವಜ್ರಾಸನಸ್ಥಿತೋ ಯೋಗೀ ಚಾಲಯಿತ್ವಾ ಕುಂಡಲೀ
          ಕುರ್ಯಾದಂತರ ಭಸ್ಮಾ ಕುಂಡಲೀಮಾಶು ಬೋಧಯೇತ್ ಗೋರಖನಾಥ.
          (ನಾಥಪಂಥದ ಅನುವಾದಿತ ಕೃತಿಗಳು, ಪು-256, 2005)

          ಕುಂಡಲಿ ಭ್ರೂಮಧ್ಯವನೊಂದಿನಿಂದು,
          ಪೂರ್ವ ಹೃದಯವ ಪೂರೈಸಿ,
          ಮಧ್ಯ ಹೃದಯವನವಗ್ರಹಿಸಿ, ಊರ್ಧ್ವ ಹೃದಯವನೊಡಗೂಡಿ,
          ಪಶ್ಚಿಮಚಕ್ರದಲ್ಲಿ ಪ್ರಾಣನಿವಾಸಿಯಾಗಿಪ್ಪನಾ ಶರಣ.
          ಓಂ ಮೂಲದ ಆ [ಪಶ್ಚಿಮ] ಶಿಖಾಚಕ್ರದಲ್ಲಿ ಮನೋಭಾವವಡಗಿ,
          ಸಹಸ್ರದಳ ಕಮಲದ ಬಯಲೊಳಗೆ ಬಯಲಾಗಿ,
          ನೀನು ತಾನಾದ ಚೆನ್ನಬಸವಣ್ಣನ ಶ್ರೀಪಾದಕ್ಕೆ
          ಶರಣೆಂದು ಬದುಕಿದೆನು ಕಾಣಾ,
          ಕಪಿಲಸಿದ್ಧಮಲ್ಲಿಕಾರ್ಜುನ.
          (ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-138/ವಚನ ಸಂಖ್ಯೆ-452)

          ಕುಂಡಲಿ ಭೂಮಧ್ಯವನೊಂದಿ ನಿಂದು, ಪೂರ್ವ ಹೃದಯವ ಪೂರೈಸಿ ಮಧ್ಯ ಹೃದಯವನವಗ್ರಹಿಸಿ, ಊರ್ಧ್ವ ಹೃದಯವನನೊಡಗೂಡಿ ಪಶ್ಚಿಮಚಕ್ರದಲ್ಲಿ ಪ್ರಾಣನಿವಾಸಿಯಾಗಿಪ್ಪನಾ ಶರಣ … …” ಹೀಗೆ ಗೋರಖನಾಥ ಹಾಗೂ ಸಿದ್ಧರಾಮ ಇವರು ತಮ್ಮ ರಚನೆಗಳಲ್ಲಿ ಕುಂಡಲಿನಿಯ ಶಕ್ತಿ ಸಾಧ್ಯತೆಗಳನ್ನು ವಿವರಿಸಿದ್ದಾರೆ.

          ಕುಂಡಲಿನಿಯು ರುದ್ರ ಗ್ರಂಥಿಯನ್ನು ಬೇಧಿಸಿಕೊಂಡು ಶಿವನೊಡನೆ ಸಾಮರಸ್ಯ ಪಡೆಯುವುದು. ಸೂರ್ಯ ಚಂದ್ರರನ್ನು ಒಂದಾಗಿ ಸೇರಿಸುವುದರಿಂದ ಅವುಗಳ ಯೋಗ ಉಂಟಾಗುವುದೆಂದು ಗೋರಖನಾಥ ಹೇಳಿದರೆ, ಶರಣನಾದವನು ಕುಂಡಲಿಯ ಪಶ್ಚಿಮ ಚಕ್ರದಲ್ಲಿ ಪ್ರಾಣ ನಿವಾಸಿಯಾಗಿರುವನೆಂದು ಸಿದ್ಧರಾಮ ಹೇಳಿದ್ದಾನೆ.

          1. ಶುಕ್ರಾಧಿಕೇಷು ಪುರುಷೋಧಾಧಿಕ ಕನ್ಯಕಾ,
            ಸಮಂ ಶುಕ್ರರಕ್ತಾಬ್ಯಾಂ ನಪುಂಸಂಕಃ |
            ಪರಸ್ಪರಂ ಚಿಂತಾವ್ಯಾಕುಲತ್ವಾ ದಂಧಃ
            ಕುಬ್ಬೋವಾಮನಃ ರಕ್ತ ಪಂಗುರಂಗಹೀನಶ್ಚ ಭವತಿ ।ಗೋರಖನಾಥ
            (ನಾಥ ಪಂಥದ ಅನುವಾದಿತ ಕೃತಿಗಳು, ಪು. 365)

          ಗೋರಖನಾಥನು ಈ ಶ್ಲೋಕದಲ್ಲಿ ಶಿಶುವಿನ ಜನನ ಹೇಗಾಗುತ್ತದೆ ಎಂಬುದನ್ನು ಕುರಿತು ಹೇಳಿದ್ದಾನೆ. ಸ್ತ್ರೀಯ ಗರ್ಭಾಶಯದಲ್ಲಿ, ಪುರುಷ ವೀರ್ಯವು ಅಧಿಕವಾಗಿ ಸೇರಿದರೆ ಗಂಡು ಮಗುವಾಗುತ್ತದೆ. ಸ್ತ್ರೀಯ ರಜಸ್ಸು ಅಧಿಕವಾಗಿ ಸೇರಿದರೆ ಹೆಣ್ಣು ಮಗುವಾಗುತ್ತದೆ. ಗಂಡು ಹೆಣ್ಣಿನ ರಜೋವೀರ್ಯಗಳು ಸಮಪ್ರಮಾಣದಲ್ಲಿ ಸೇರಿದರೆ ನಪುಂಸಕ ಮಗುವಾಗುತ್ತದೆಂದು ಹೇಳಲಾಗಿದೆ. ಇದೇ ವಿಷಯವನ್ನು ಶರಣರು ತಮ್ಮ ವಚನಗಳಲ್ಲಿ ಪ್ರಸ್ತಾಪಿಸಿದ್ದಾರೆ.

          ಕಾಮನ ಮಂದಿರದಡವಿಯೊಳಗೆ
          ಶುಕ್ಲಶೋಣಿತವೆಂಬ ಮಡಕೆಯ ಮಾಡಿ
          ಮೂತ್ರ ಶ್ರೇಷ್ಠ ಅಮೇಧ್ಯವೆಂಬ ಪಾಕದ್ರವ್ಯಂಗಳ
          ಮಡಕೆಯಲ್ಲಿ ನಿಶ್ಚಯಿಸಿ,
          ಆ ಮಡಕೆಯನೊಡೆದಾ[ತ ಬಸವಣ್ಣ] ಕಾಣಾ,
          ರೇಕಣ್ಣಪ್ರಿಯ ನಾಗಿನಾಥಾ ಬಸವಣ್ಣನಿಂದ ಬದುಕಿದೆನು.
          (ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-67/ವಚನ ಸಂಖ್ಯೆ-146)

          ಬಹುರೂಪಿ ಚೌಡಯ್ಯನವರು ತನ್ನ ಈ ವಚನದಲ್ಲಿ ಶುಕ್ಲ ಶೋಣಿತವೆಂಬ ಮಡಿಕೆಯಲ್ಲಿ ಮಗು ಹೇಗೆ ಜನಿಸುತ್ತದೆ ಎಂಬುದನ್ನು ವಿವರಿಸಿದ್ದಾರೆ. ಶುಕ್ಲ ಶೋಣಿತದ ಮಿಲನವಾಗುವುದು ರತಿಕೂಟದಲ್ಲಿ, ರತಿ ಸಂಯೋಗದಿ ಗರ್ಭಿಣಿಯಾಗುವ ವಿಷಯವನ್ನು ಅಲ್ಲಮಪ್ರಭು ಹೇಳಿದ್ದಾನೆ. ಬೀಜವಿಲ್ಲದ ವೃಕ್ಷ ಬೆಳೆಯಬಲ್ಲುದೋ ಎಂದು ಅಮುಗೆ ರಾಯಮ್ಮ ಪ್ರಶ್ನಿಸಿದ್ದಾಳೆ. ಬೀಜ ನೆಲೆಯಿಲ್ಲದೆ ಹುಟ್ಟಬಹುದೇ?” ಎಂದು ಅರಿವಿನ ಮಾರಿ ತಂದೆ ಹೇಳಿದ್ದಾನೆ.

          ಹೀಗೆ ಅನೇಕ ವಿಷಯಗಳಲ್ಲಿ ನಾಥರಿಗೂ ಶರಣರಿಗೂ ಸಾಮ್ಯತೆ ಇದೆ. ಇವೆರಡೂ ಭಕ್ತಿ ಪಂಥಗಳಾದುದರಿಂದ ಅವೈದಿಕ ನೆಲೆಯಲ್ಲಿ ಹುಟ್ಟಿದ ಧರ್ಮಗಳಾಗಿರುವದರಿಂದ ಹಲವು ವಿಷಯಗಳಲ್ಲಿ ಸಾಮ್ಯತೆಯನ್ನು ಕಾಣಬಹುದಾಗಿದೆ.

          ಅಧ್ಯಾಯ – 05: ಭಿನ್ನತೆ

          ನಾಥರಲ್ಲಿ, ಶರಣರಲ್ಲಿ ಅನೇಕ ಸಾಮ್ಯತೆಗಳಿರುವಂತೆ, ಹಲವು ಭಿನ್ನತೆಗಳೂ ಇವೆ. ಇವೆರಡೂ ಭಕ್ತಿ ಪಂಥಗಳು ಅವೈದಿಕ ಮೂಲದವುಗಳಾಗಿದ್ದರೂ ಅನೇಕ ವಿಷಯಗಳಲ್ಲಿ ಎರಡೂ ಭಕ್ತಿ ಪಂಥಗಳ ನಡುವೆ ಭಿನ್ನತೆಯಿರುವುದು ಕಂಡು ಬರುತ್ತದೆ.

          1. ನಾಥಪಂಥದಲ್ಲಿ ಕಾಪಾಲಕರು, ಕೌಳರು ಇರುವುದರಿಂದ, ಅವರ ಅಚರಣೆಗಳನ್ನು ಶರಣರು ನೇರವಾಗಿಯೇ ವಿರೋಧಿಸಿದ್ದಾರೆ.

          ಒಲೆಯಡಿಯನುರುಹಿದಡೆ [ಹೊಗೆ]
          ಗೋಳಕನಾಥನ ಕೊರಳ ಸುತ್ತಿತ್ತು,
          ಮಹೀತಳನ ಜಡೆ ಸೀಯಿತ್ತು,ಮರೀಚಿಕನ ಶಿರ ಬೆಂದಿತ್ತು,
          ರುದ್ರನ ಹಾವುಗೆ ಉರಿಯಿತ್ತು,
          ದೇವಗಣಂಗಳು ನಿವಾಟವಾದರು,
          ಮಡದಿಯರೈವರು ಮುಡಿಯ ಹಿಡಿದುಕೊಂಡು ಹೋದರು,
          ಕೂಡಲಸಂಗಮದೇವ ಭಸ್ಮಧಾರಿಯಾದ.
          (ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-266/ವಚನ ಸಂಖ್ಯೆ-931)

          ಆದ್ಯರಲ್ಲ ವೇದ್ಯರಲ್ಲ ಸಾಧ್ಯರಲ್ಲದ ಹಿರಿಯರ ನೋಡಾ.
          ತನುವಿಕಾರ ಮನವಿಕಾರ ಇಂದ್ರಿಯವಿಕಾರದ ಹಿರಿಯರ ನೋಡಾ.
          ಶಿವಚಿಂತೆ ಶಿವಜ್ಞಾನಿಗಳ ಕಂಡಡೆ, ಆಳವಾಡಿ ನುಡಿವರು,
          ಗುಹೇಶ್ವರನರಿಯದ ಕರ್ಮಿಗಳು.
          (ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-47/ವಚನ ಸಂಖ್ಯೆ-129)

          ಬಸವಣ್ಣ, ಅಲ್ಲಮಪ್ರಭು ಇನ್ನೂ ಮುಂತಾದ ಶರಣರು ನಾಥರ ವಿಕಾರಗಳನ್ನು ನೋಡಿ ವಿಡಂಬಿಸಿದ್ದಾರೆ.

          1. ಯೋಗ ಸಾಧನೆಯೇ ಅಂತಿಮ ಗುರಿಯೆಂದು ತಿಳಿದಿದ್ದ ನಾಥರು ಸದಾ ಯೋಗ ಸಾಧನೆಯಯಲ್ಲಿಯೇ ಮಗ್ನರಾಗಿರುತ್ತಿದ್ದರು. ನಾಥರ ಈ ಹಠಯೋಗವನ್ನು ಕೈಬಿಟ್ಟ ಶರಣರು ಶಿವಯೋಗವನ್ನು ಸಾಧಿಸಿದರು.
          2. ನಾಥ ಪಂಥವು ಮೂಲತಃ ಗುರುಪಂಥವಾಗಿದೆ. ಗುರು ಪಂಥದಲ್ಲಿ ಗುರುವಿಗೆ ಶಿಷ್ಯನು ಶಿಶು ಮಗನಾಗಿರುತ್ತಾನೆ. ಅರಿವೇ ಗುರುವೆಂದು ನಂಬಿದ ಶರಣ ಮಾರ್ಗದಲ್ಲಿ ಶಿಷ್ಯನು ಗುರುವಿನ ಸಮಾನವಾಗಿ ಬೆಳೆದು ನಿಲ್ಲುತ್ತಾನೆ.
          3. ನಾಥರು ಕಾಯವಾದಿಗಳು, ಶರಣರು ಕಾಯಕವಾದಿಗಳು, ಕಾಯಕವೇ ಕೈಲಾಸವೆಂದು ನಂಬಿದವರು.
          4. ನಾಥರದು ಆಧ್ಯಾತ್ಮ ಸಾಧನೆಯಾದರೆ, ಶರಣರದು ಅನುಭಾವ ಸಾಧನೆಯಾಗಿದೆ. ಆಧ್ಯಾತ್ಮ ವ್ಯಕ್ತಿಗತವಾಗಿದೆ, ಅನುಭಾವ ಸಮಾಜಮುಖಿಯಾಗಿದೆ.
          5. ನಾಥರ ಆದಿದೈವ ಕಾಳಭೈರವ, ಶರಣರು ಈ ಭೈರವನನ್ನು ಕುಂಟ ಭೈರವನೆಂದು ವಿಡಂಬರಿಸಿದ್ದಾರೆ.

          ಜಕ್ಕಿ ಜನ್ನಿ ಎಕ್ಕನಾತಿ ಮಾಯಿರಾಣಿ
          ಕುಕ್ಕನೂರ ಬಸದಿ ಚೌಡಿ ಮೈಲಾರ
          ಜಿನ್ನನು ಕುಂಟಭೈರವ ಮೊದಲಾದ
          ಭೂತ ಪ್ರೇತ ಪಿಶಾಚಿ ದೇವರೆಲ್ಲರೂ
          ಅಕ್ಕಸಾಲೆಯ ಕುಪ್ಪಟ್ಟಿಗೆ ಬಂದರಾಗಿ,
          ಇದೇ ಸುಡುಗಾಡ ಕಾಣಾ, ಕಲಿದೇವರದೇವಯ್ಯ.
          (ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-248/ವಚನ ಸಂಖ್ಯೆ-604)

          1. ನಾಥರು ಭಂಗಿ ಸೇವನೆ ಮಾಡುತ್ತಿದ್ದರು, ಮದ್ಯಪಾನ ಮಾಡುತ್ತಿದ್ದರು. ಇದನ್ನು ಶರಣರು ನೇರವಾಗಿಯೇ ವಿರೋಧಿಸಿದರು. ಮದ್ಯಪಾನಿಗೆ ಲಿಂಗದೀಕ್ಷೆ ಮಾಡಬಾರದೆಂದು ಚೆನ್ನಬಸವಣ್ಣ ತನ್ನ ವಚನವೊಂದರಲ್ಲಿ ಹೇಳಿದ್ದಾನೆ.

          ಮದ್ಯಪಾನಿಗೆ ಲಿಂಗಸಾಹಿತ್ಯವ ಮಾಡಿದಾತ
          ಹಿಂಗದೆ ನರಕದಲಾಳುತ್ತಿಪ್ಪನು.
          ಮಾಂಸಾಹಾರಿಗೆ ಲಿಂಗಸಾಹಿತ್ಯವ
          ಮಾಡಿದಾತನ ವಂಶಕ್ಷಯವೆಂದುದು.
          ಜೂಜುಗಾರಂಗೆ ಲಿಂಗಸಾಹಿತ್ಯವ ಮಾಡಿದಾತ
          ರೌರವನರಕಕ್ಕೆ ಹೋಹನು.
          ಸೂಳೆಗೆ ಲಿಂಗಸಾಹಿತ್ಯವ ಮಾಡಿದಾತ
          ಏಳೇಳು ಜನ್ಮದಲ್ಲೂ ಶ್ವಾನನ ಗರ್ಭದಲ್ಲಿ ಬರುತಿಪ್ಪನು.
          ಅಂಗಹೀನಂಗೆ ಲಿಂಗಸಾಹಿತ್ಯವ ಮಾಡಿದಾತ ಲಿಂಗದ್ರೋಹಿ,
          ಆತನ ಮುಖವ ನೋಡಲಾಗದು.
          “ಮದ್ಯಪಾನೀ ಮಾಂಸಭಕ್ಷೀ ಶಿವದೀಕ್ಷಾವಿವರ್ಜಿತಃ
          ದ್ಯೂತೀ ವೇಶ್ಯಾಂಗಹೀನಶ್ಚ ತದ್ಗುರೋರ್ದರ್ಶನಂ ತ್ಯಜೇತ್”
          ಇದು ಕಾರಣ ಕೂಡಲಚೆನ್ನಸಂಗನಲ್ಲಿ ವಿಚಾರಿಸದೆ
          ಲಿಂಗವ ಕೊಟ್ಟ ಗುರುವಿಂಗೆ ನರಕ ತಪ್ಪದು.
          (ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-64/ವಚನ ಸಂಖ್ಯೆ-159)

          1. ನಾಥರು ಆರಾಧಿಸುವ ಭೈರವನು ತ್ರಿಶೂಲ ಹಿಡಿದು, ಅಸುರರ ಮಾಲೆಗಳನ್ನು ಕೊರಳೊಳಗೆ ಹಾಕಿಕೊಂಡಿದ್ದಾನೆ. ಆದರೆ ಶರಣರು ಈ ಭೈರವ ಶಿವನನ್ನು ವಿಡಂಬಿಸಿದ್ದಾರೆ.

          ಅಸುರರ ಮಾಲೆಗಳಿಲ್ಲ, ತ್ರಿಶೂಲ ಡಮರುಗವಿಲ್ಲ,
          ಬ್ರಹ್ಮಕಪಾಲವಿಲ್ಲ, ಭಸ್ಮಭೂಷಣನಲ್ಲ,
          ವೃಷಭವಾಹನನಲ್ಲ, ಋಷಿಯರುಗಳೊಡನಿದ್ದಾತನಲ್ಲ.
          ಎಸಗುವ ಸಂಸಾರದ ಕುರುಹಿಲ್ಲದಾಂತಗೆ
          ಹೆಸರಾವುದಿಲ್ಲೆಂದನಂಬಿಗರ ಚೌಡಯ್ಯ.
          (ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-23/ವಚನ ಸಂಖ್ಯೆ-46)

          ಎಸಗುವ ಸಂಸಾರ ಕುರುಹಿಲ್ಲದಾತಂಗೆ ಹೆಸರಾವುದಿಲ್ಲವೆಂದಂಬಿಗರ ಚೌಡಯ್ಯ ಎಂದು ಈ ವಚನದ ಕೊನೆಯಲ್ಲಿ ಹೇಳಿದ್ದಾನೆ.

          1. ಶಿವ ಮತ್ತು ಭೈರವನ ಬಗೆಗೆ ನಾಥರು ಮತ್ತು ಶರಣರಲ್ಲಿ ಭಿನ್ನಾಭಿಪ್ರಾಯಗಳಿವೆ. ನಾಥರು ಮಂತ್ರವಿದ್ಯೆಯನ್ನು ಒಪ್ಪುತ್ತಾರೆ. ಅವರಲ್ಲಿ ಅನೇಕ ಮಾಂತ್ರಿಕರಿದ್ದಾರೆ. ಶರಣರು ಮಂತ್ರ-ತಂತ್ರಗಳನ್ನು ಒಪ್ಪುವುದಿಲ್ಲ. ತಮ್ಮ ಅನೇಕ ವಚನಗಳಲ್ಲಿ ಈ ವಿಷಯ ಕುರಿತು ಶರಣರು ವಿಡಂಬನೆ ಮಾಡಿದ್ದಾರೆ.
          2. ನಾಥರು ಯಾತ್ರೆಗೆ ಹೋಗುತ್ತಿದ್ದರು. ಪುಣ್ಯಕ್ಷೇತ್ರಗಳಲ್ಲಿ ವಾಸಿಸುತ್ತಿದ್ದರು. ಕಾಶಿಯ ವಿಶ್ವನಾಥ, ಕೇದಾರದ ಕೇದಾರನಾಥ ಪರಂಪರೆಗಳು ನಾಥರಲ್ಲಿವೆ. ಆದರೆ ಶರಣರು ಈ ಕ್ಷೇತ್ರಗಳನ್ನು ನಿರಾಕರಿಸಿದರು. ದೇವರು ದೇವಾಲಯಗಳಲ್ಲಿಲ್ಲವೆಂದು ಹೇಳಿದರು.

          ಕಾಶಿಯಾತ್ರೆಗೆ ಹೋದೆನೆಂಬ
          ಹೇಸಿಮೂಳರ ಮಾತ ಕೇಳಲಾಗದು!
          ಕೇತಾರಕ್ಕೆ ಹೋದೆನೆಂಬ
          ಹೇಸಿಹೀನರ ನುಡಿಯ ಲಾಲಿಸಲಾಗದು!
          ಸೇತುಬಂಧ ರಾಮೇಶ್ವರಕ್ಕೆ ಹೋದೆನೆಂಬ
          ಸರ್ವಹೀನರ ಮುಖವ ನೋಡಲಾಗದು!
          ಪರ್ವತಕ್ಕೆ ಹೋದೆನೆಂಬ
          ಪಂಚಮಹಾಪಾತಕರ ಮುಖವ ನೋಡಲಾಗದು!
          ಅದೆಂತೆಂದಡೆ:
          ಕಾಯವೆ ಕಾಶಿ, ಒಡಲೇ ಕೇತಾರ,
          ಮಾಡಿನೀಡುವ ಹಸ್ತವೇ ಸೇತುಬಂಧರಾಮೇಶ್ವರ,
          ಮಹಾಲಿಂಗವ ಹೊತ್ತಿರುವ ಶಿರಸ್ಸೆ ಶ್ರೀಶೈಲಪರ್ವತ ನೋಡಾ.
          ಇಂತಿವನರಿಯದೆ ಪರ್ವತಕ್ಕೆ ಹೋಗಿ,
          ಪಾತಾಳಗಂಗೆಯ ಮುಳುಗಿ,
          ತಲೆಯ ಬೋಳಿಸಿಕೊಂಡು, ಗಡ್ಡವ ಕೆರೆಸಿಕೊಂಡು,
          ಮೀಸೆಯ ತರಿಸಿಕೊಂಡು,
          ಗಂಗೆಯೊಳು ಕೋಣನ ಹಾಂಗೆ ಮೈಗೆಟ್ಟು ಫಕ್ಕನೆ ಮುಳುಗಿ,
          ಅಲ್ಲಿಂದ ಬಂದು ಅನ್ನವಸ್ತ್ರವಂ ಕಾಸುವೀಸವಂ ಕೊಟ್ಟು,
          ಪಾಪ ಹೋಯಿತ್ತೆಂದು,
          ಅಲ್ಲಿಂದ ಬಂದು ಲಿಂಗವಡಿಗಡಿಗೆ ಹಾಯ್ದು,
          ಬಾರದ ಪಾಪವ ತಾವಾಗ ಬರಸಿಕೊಂಡು,
          ತಗರ ಜನ್ಮದಲ್ಲಿ ಹುಟ್ಟುವರಯ್ಯ.
          ಕೋಲು ಪುಟ್ಟಿಯಂ ಕೊಟ್ಟು ಅಟ್ಟಿಸಿ ಬಿಟ್ಟ ಬಳಿಕ,
          ಅಲ್ಲಿಂದ ಬಂದವರಿಗೆ ಇಲ್ಲಿದ್ದವರು ಹೋಗಿ,
          ಇದಿರುಗೊಂಡು ಕರತರುವುದಕ್ಕೆ!
          ಕತ್ತೆ ಮೂಳಹೊಲೆಯರಿರ, ನೀವು ಕೇಳಿರೋ,
          ಅದಂತೆಂದಡೆ:
          ಶ್ರೀಮಹಾಪರ್ವತಕ್ಕೆ ಹೋದವರು ತಿರಿಗಿಬಪ್ಪರೆ?
          ಶ್ರೀಮಹಾಮೇರುವಿಗೆ ಹೋದವರು ಮರಳಿಬಪ್ಪರೆ?
          ಛೀ! ಛೀ! ನೀಚ ಮೂಳ ದಿಂಡೆಯ ನೀಳಹೊಲೆಯರೆಂದಾತ
          ನಮ್ಮ ದಿಟ್ಟ ವೀರಾಧಿವೀರನಂಬಿಗರ ಚೌಡಯ್ಯನು.
          (ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-43/ವಚನ ಸಂಖ್ಯೆ-110)

          ಈ ವಚನದಲ್ಲಿ ಅಂಬಿಗರ ಚೌಡಯ್ಯನು ಕಾಶಿ ಯಾತ್ರೆಗೆ ಹೋಗುವವರನ್ನು ಹೇಸಿಮೂಳರೆಂದು ಕರೆದಿದ್ದಾನೆ. ಕೇದಾರಕ್ಕೆ ಹೋಗುವವರನ್ನು ದೇಸಿಹೀನರೆಂದು ವಿಡಂಬಿಸಿದ್ದಾನೆ.

          1. ನಾಥರಲ್ಲಿ ವಜ್ರಕಾಯದವರಿದ್ದರು, ಶರಣರು ಕಾಯದ ಬಗೆಗೆ ತಮ್ಮದೇ ನಿಲುವನ್ನು ತಾಳಿದ್ದಾರೆ. ದೇಹವನ್ನು ಬೆಳೆಸುವುದಾಗಲಿ, ಅದನ್ನು ದಂಡಿಸುವುದಾಗಲಿ ಮುಖ್ಯವಲ್ಲವೆಂದು ಹೇಳಿದ ಶರಣರು, ದೇಹವನ್ನು ದೇವಾಲಯವನ್ನಾಗಿ ಮಾಡಿಕೊಂಡರು.

          ಕಾಯವುಳ್ಳನ್ನಕ್ಕ ಶರಣರ ಸಂಗದಿಂದ ಅರಿಯಬೇಕು.
          ಜೀವವುಳ್ಳನ್ನಕ್ಕ ಅರಿವಿನ ಮುಖದಿಂದ ಅರಿಯಬೇಕು.
          ಅರಿವನ್ನಬರ ಗುಹೇಶ್ವರನೆಂಬ ಕುರುಹಾಯಿತ್ತು.
          (ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-409/ವಚನ ಸಂಖ್ಯೆ-1095)

          ಎಂದು ಅಲ್ಲಮ ಪ್ರಭುಗಳು ವಚನದಲ್ಲಿ ಹೇಳಿದ್ದಾರೆ.

          1. ನಾಥ ದರ್ಶನವು ಅನೇಕ ದರ್ಶನಗಳಿಂದ ಕೂಡಿದೆ. ಅದೊಂದು ಸಂಕರ ರೂಪಿ ಪಂಥವಾಗಿದೆ. ಕೌಳ, ಕಾಪಾಲಿಕ, ಪಾಶುಪತ, ಈ ಮೊದಲಾದ ಶೈವ ಶಾಖೆಗಳು ನಂತರದ ಕಾಲದಲ್ಲಿ ನಾಥ ಪಂಥದಲ್ಲಿ ಸೇರಿಕೊಂಡವು. ಕೌಳ ಪಂಥದಿಂದ ಬಂದ ನಾಥರು ಕೆಳಜಾತಿ ಹೆಣ್ಣನ್ನು ಮುದ್ರೆಯನ್ನಾಗಿ ಮಾಡಿಕೊಂಡು ಸಾಧನೆಯ ಹೆಸರಿನಲ್ಲಿ ಭೋಗಲೋಲುಪರಾಗಿದ್ದರು. ಶರಣರು ಇಂತಹ ಭೋಗಲೋಲುಪರನ್ನು ನೇರವಾಗಿ ವಿರೋಧಿಸಿದ್ದಾರೆ.

          ಭಕ್ತನ ಮನ ಹೆಣ್ಣಿನೊಳಗಾದಡೆ,
          ವಿವಾಹವಾಗಿ ಕೂಡುವುದು.
          ಭಕ್ತನ ಮನ ಮಣ್ಣಿನೊಳಗಾದಡೆ,
          ಕೊಂಡು ಆಲಯವ ಮಾಡುವುದು.
          ಭಕ್ತನ ಮನ ಹೊನ್ನಿನೊಳಗಾದಡೆ,
          ಬಳಲಿ ದೊರಕಿಸುವುದು ನೋಡಾ,
          ಕಪಿಲಸಿದ್ಧಮಲ್ಲಿಕಾರ್ಜುನಾ.
          (ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-252/ವಚನ ಸಂಖ್ಯೆ-826)

          ಭಕ್ತನ ಮನ ಹೆಣ್ಣಿನೊಳಗಾದರೆ ವಿವಾಹವಾಗಿ ಕೂಡುವುದೆಂದು ಸಿದ್ಧರಾಮೇಶ್ವರ ಸ್ಪಷ್ಟಪಡಿಸಿದ್ದಾನೆ.

          ದಾಸಿಯ ಸಂಗ ಎರಡನೆಯ ಪಾತಕ,
          ವೇಶಿಯ ಸಂಗ ಮೂರನೆಯ ಪಾತಕ.
          ಮೀಸಲಳಿದ ಪರಸ್ತ್ರೀಯರ ಸಂಗ ಪಂಚಮಹಾಪಾತಕ.
          ಇನಿಸು ಶಿವಭಕ್ತರಿಗೆ ಸಲ್ಲವು.
          ಇವನರಿದರಿದು ಮಾಡಿದನಾದರೆ,
          ಯಮಪಟ್ಟಣದೆ ವಾಸವಾಗಿಪ್ಪರಲ್ಲದೆ,
          ಈ ದೇಶಕ್ಕೆ ಮರಳಿ ಬರಲಿಲ್ಲ ನೋಡಾ,
          ಬಸವಪ್ರಿಯ ಕೂಡಲಚೆನ್ನಬಸವಣ್ಣ.
          (ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-392/ವಚನ ಸಂಖ್ಯೆ-967)

          ಹಡಪದ ಪ್ಪಣ್ಣ ಈ ವಚನದಲ್ಲಿ ದಾಸಿಯ ಸಂಗ ಎರಡನೆಯ ಪಾತಕವೆಂದು ಹೇಳಿದ್ದಾನೆ. ಪರಸತಿಯರನ್ನು, ಪರಸ್ತ್ರೀಯರನ್ನು ಮುಟ್ಟಬಾರದೆಂದು ಶರಣರು ಸ್ಪಷ್ಟಪಡಿಸಿದ್ದಾರೆ.

          1. ಸ್ತ್ರೀಯರ ಬಗ್ಗೆ ಅನುಮಾನ ಮತ್ತು ಭಯವನ್ನು ಹೊಂದಿದ್ದ ನಾಥರು, ಹೆಣ್ಣನ್ನು ಮಾಯೆಯೆಂದೇ ತಿಳಿದಿದ್ದರು. ಆದರೆ ಶರಣರು ಹೆಣ್ಣನ್ನು ಸಾಕ್ಷಾತ್ ಕಪಿಲಸಿದ್ಧ ಮಲ್ಲಿಕಾರ್ಜುನನೆಂದು ಗೌರವಿಸಿದರು. ಹೊನ್ನು, ಹೆಣ್ಣು, ಮಣ್ಣು ಮಾಯೆಲ್ಲ. ಮನದ ಮುಂದಣ ಆಸೆಯೇ ಮಾಯೆಯೆಂದು ಅಲ್ಲಮಪ್ರಭು ಸ್ಪಷ್ಟಪಡಿಸಿದರು.
          2. ನಾಥಪಂಥದ ಕೌಳರು ಪಂಚ ಮಕಾರವಾದಿಗಳಾಗಿದ್ದರು. ಮಧು, ಮದಿರೆ ಇವರಿಗೆ ಅನಿವಾರ್ಯವಾಗಿತ್ತು. ಪಂಚ ಮಕಾರಗಳನ್ನು ಶರಣರು ನೇರವಾಗಿ ತಿರಸ್ಕರಿಸಿದರು.

          ಶೈವ ಸೈವೆರಗಾದ,
          ಪಾಶುಪತಿ ಪಥವನರಿಯ,
          ಕಾಳಾಮುಖಿ ಕಂಗೆಟ್ಟ,
          ಮಹಾವ್ರತಿ ಮದವೇರಿದ,
          ಸನ್ಯಾಸಿ ಸಂಸಾರಿಯಾದ,
          [ಜೋಗಿ] ಮರುಳಾಗಿ ತಿರುಗಿದ.
          ಈ [ಆರು]ವಲ್ಲೆನೆಂದು ಕಳೆದು,
          ಕೂಡಲ ಚನ್ನಸಂಗನ ಶರಣರು
          ಆರ ಮೀರಿ ಬೇರೆನಿಂದನು.
          (ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-248/ವಚನ ಸಂಖ್ಯೆ-616)

          ಚೆನ್ನಬಸವಣ್ಣ ಮುಂತಾದ ವಚನಕಾರರು ನಾಥರ ಈ ವಿಚಾರಗಳನ್ನು ನೇರವಾಗಿಯೇ ತಿರಸ್ಕರಿಸಿದ್ದಾರೆ.

          1. ನಾಥರು ಮತ್ತು ಕೌಳನಾಥರು ಶಕ್ತಿ ದೇವತೆಗಳ ಆರಾಧಕರಾಗಿದ್ದರು. ಚುಂಚನಗಿರಿಯಲ್ಲಿ ಕಂಬದಮ್ಮ, ಲುಂಕೆ ಮಲೆಯಲ್ಲಿ ತುಪ್ಪದಮ್ಮ, ಚಂದ್ರಗುತ್ತಿಯಲ್ಲಿ ಗುತ್ತೆಮ್ಮ, ಕದ್ರಿಯಲ್ಲಿ ಮರುಳು ಧೂಮಾವತಿ, ಏಕನಾಥ ಜೋಗನಾಥರ ಆವರಣದಲ್ಲಿಯೇ ಎಲ್ಲಮ್ಮ ನೆಲೆಸಿದ್ದಾಳೆ. ಸವದತ್ತಿ ಗುಡ್ಡದಲ್ಲಿ ಜೋಗಪ್ಪಗಳು ಕಾಣಿಸಿಕೊಳ್ಳುತ್ತಾರೆ. ಅಲ್ಲಿ ಜೋಗುಳದ ಬಾವಿಯಿದೆ. ನಾಥಪಂಥದ ಜೊಗಿಗಳೇ ಜೋಗಪ್ಪಗಳಾಗಿದ್ದಾರೆ. ನಾಥಪಂಥದ ಲಾಂಛನವಾದ ತ್ರಿಶೂಲವು ಶಕ್ತಿಯ ಸಂಕೇತವಾಗಿದೆ. ಶರಣರು ಏಕದೇವೋಪಾಸಕರು, ಅವರಿಗೆ ಇಷ್ಟ ಲಿಂಗವೇ ಸಾಧನೆಯ ಪ್ರತೀಕ. ಹಾಗಾಗಿ ಅವರು ಭೈರವ, ಜೋಗಿಗಳನ್ನು ತಮ್ಮ ವಚನಗಳಲ್ಲಿ ವಿಡಂಬಿಸಿದ್ದಾರೆ. ಚೆನ್ನಬಸವಣ್ಣನ ವಚನದಲ್ಲಿ ಕ್ಷುದ್ರ ದೇವತೆಗಳೆಂದು ಕರೆದಿದ್ದಾರೆ.

          ಬ್ರಹ್ಮನನಾರಾಧಿಸಿ ನಿರ್ಮೂಲವಾದರಯ್ಯ.
          ವಿಷ್ಣುವನಾರಾಧಿಸಿ ಭವಭವಕ್ಕೆ ಬಂದರಯ್ಯ.
          ಭೈರವನನಾರಾಧಿಸಿ ಬಾಹಿರವೋದರಯ್ಯಾ,
          ಮೈಲಾರನನಾರಾಧಿಸಿ ಕುರುಳು ಬೆರಳ ಕಡಿಸಿಕೊಂಡು
          ನಾಯಾಗಿ ಬಗಳುತಿಪ್ಪರು,
          ಜಿನನನಾರಾಧಿಸಿ ಲಜ್ಜೆ ನಾಚಿಕೆದೊರೆದರು ನೋಡಾ,
          ನಮ್ಮ ಕೂಡಲಚೆನ್ನಸಂಗಯ್ಯನನಾರಾಧಿಸಿ ದೇವಾ,
          ಭಕ್ತಯೆಂದೆನಿಸಿಕೊಂಬರು ನೋಡಯ್ಯಾ.
          (ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-59/ವಚನ ಸಂಖ್ಯೆ-149)

          ಚೆನ್ನಬಸವಣ್ಣ ಹಾಗೂ ಇತರ ಅನೇಕ ಶರಣರು ಭೈರವನ ಆರಾಧನೆಯನ್ನು ಟೀಕಿಸಿದ್ದಾರೆ.

          1. ಶರಣರು ಇಷ್ಟಲಿಂಗ ಪೂಜಕರಾಗಿದ್ದರು. ಜಾತಿ, ಜನಾಂಗ, ವರ್ಣ, ವರ್ಗ, ಲಿಂಗಭೇದಗಳೆನ್ನದೆ ಭಕ್ತರಾಗಲು ಬಂದವರಿಗೆ ಇಷ್ಟಲಿಂಗ ಕಡ್ಡಾಯವಾಗಿತ್ತು. ಆ ಕಾಲದಲ್ಲಿಯೂ ಕೆಲವರು ಇಷ್ಟಲಿಂಗ ಕಟ್ಟಿಕೊಳ್ಳದೇ ಪೂಜೆ ಮಾಡದೆ, ಹಾಗೆಯೇ ಭಕ್ತರಾಗಬೇಕೆಂದು ಬಂದವರಿದ್ದರು. ಅಂತವರನ್ನು ಅಲ್ಲಮಪ್ರಭು ಜೋಗಿಗಳಿಗೆ ಹೋಲಿಸಿದ್ದಾರೆ. ಜೋಗಿನಾಥರು ಇಷ್ಟಲಿಂಗ ಉಪಾಸಕರಾಗಿರಲಿಲ್ಲ.

          ಅಂಗಜಂಗುಳಿಗಳೆಲ್ಲಾ ಅಶನಕ್ಕೆ ನೆರೆದರು.
          ಲಿಂಗದ ಹವಣನಿವರೆತ್ತ ಬಲ್ಲರು?
          ಕಾಯಜೀವಿಗಳು ಕಳವಳಧಾರಿಗಳು,
          ದೇವರ ಸುದ್ದಿಯನಿವರೆತ್ತ ಬಲ್ಲರು?
          ಮದ್ಯಪಾನವನುಂಡು ಮದವೆದ್ದ ಜೋಗಿಯಂತೆ ನುಡಿವರು.
          ಗುಹೇಶ್ವರನ ನಿಲವನಿವರೆತ್ತ ಬಲ್ಲರು.

          ಜೋಗಿಗಳು ಮದ್ಯಪಾನಿಗಳೆಂಬ ಸುದ್ದಿ ಶರಣರ ಕಾಲಕ್ಕೆ ಜನಜನಿತವಾಗಿತ್ತು. ಅಂತೆಯೇ ಅಲ್ಲಮಪ್ರಭು ಈ ವಚನದಲ್ಲಿ ಇಷ್ಟಲಿಂಗವಿಲ್ಲದವರನ್ನು ಜೋಗಿಗಳಿಗೆ ಹೋಲಿಸಿದ್ದಾನೆ.

          ಚಿತ್ತ ಶುದ್ಧವಿಲ್ಲದವರಲ್ಲಿ ಮನ ಸಂಚಲ ನಿಲ್ಲದು.
          ಮನ ಸಂಚಲ ನಿಲ್ಲದವರಲ್ಲಿ ಶಿವಧ್ಯಾನ ಕರಿಗೊಳ್ಳದು.
          ಶಿವಧ್ಯಾನ ಕರಿಗೊಳ್ಳದವನ ಮಾತು ಸಟೆ.
          ಗುಹೇಶ್ವರಲಿಂಗವನರಿಯದ ಭ್ರಾಂತಿಯೋಗಿಗಳ ಮನ
          ಬೇತಾಳನಂತೆ ಕಾಡುವುದು.
          (ಸಮಗ್ರ ವಚನ ಸಂಪುಟ: ಎರಡು2021/ಪುಟ ಸಂಖ್ಯೆ-437/ವಚನ ಸಂಖ್ಯೆ-1175)

          ತಮ್ಮ ವಚನದಲ್ಲಿ ಪ್ರಭು ನಾಥಯೋಗಿಗಳನ್ನು, ಭ್ರಾಂತಿ ಯೋಗಿಗಳೆಂದು ಕರೆದಿದ್ದಾನೆ. ಗುಹೇಶ್ವರ ಲಿಂಗವನರಿಯದ ಭ್ರಾಂತಿ ಯೋಗಿಗಳ ಮನ ಬೇತಾಳನಂತೆ ಕಾಡುವುದು ಎಂದು ಹೇಳಿದ್ದಾನೆ.

          1. ಶರಣರ ಪ್ರಕಾರ ಭಕ್ತಿಗೆ ಮಹತ್ವದ ಸ್ಥಾನವಿದೆ. ಭಕ್ತನೇ ಭಗವಂತನಾಗುವ ಸಾಧ್ಯತೆಯನ್ನವರು ಕಂಡುಕೊಂಡಿದ್ದಾರೆ. ಭಕ್ತಿಯ ಹೆಸರಿನಲ್ಲಿ ಅನೇಕ ವಿಚಾರಗಳನ್ನು ಮಾಡುತ್ತಿದ್ದ ಕೌಳನಾಥರನ್ನು ಚೆನ್ನಬಸವಣ್ಣ ತೀವ್ರವಾಗಿ ವಿಡಂಬಿಸಿದ್ದಾನೆ.

          ಶೈವ ಸೈವೆರಗಾದ,
          ಪಾಶುಪತಿ ಪಥವನರಿಯ,
          ಕಾಳಾಮುಖಿ ಕಂಗೆಟ್ಟ,
          ಮಹಾವ್ರತಿ ಮದವೇರಿದ,
          ಸನ್ಯಾಸಿ ಸಂಸಾರಿಯಾದ,
          [ಜೋಗಿ] ಮರುಳಾಗಿ ತಿರುಗಿದ.
          ಈ [ಆರು]ವಲ್ಲೆನೆಂದು ಕಳೆದು,
          ಕೂಡಲ ಚನ್ನಸಂಗನ ಶರಣರು
          ಆರ ಮೀರಿ ಬೇರೆನಿಂದನು.
          (ಸಮಗ್ರ ವಚನ ಸಂಪುಟ: ಮೂರು2021/ಪುಟ ಸಂಖ್ಯೆ248/ವಚನ ಸಂಖ್ಯೆ616)

          ಎಂದು ಚೆನ್ನಬಸವಣ್ಣ ಈ ವಚನದಲ್ಲಿ ಸ್ಪಷ್ಟವಾಗಿ ಹೇಳಿದ್ದಾನೆ. ವಜ್ರಯಾನದ ಸಾಧಕರಿಗಿಂತ, ಶೈವ ಸಾಧಕರೇ ನಾಥ ಪಂಥದಲ್ಲಿ ಹೆಚ್ಚಾಗಿದ್ದರು. ಇಂತಹ ಪಾಶುಪತ ಕಾಳಾಮುಖ ನಾಥರನ್ನು ಮತ್ತು ಅವರ ಭಕ್ತಿಯ ಮಾರ್ಗವನ್ನು ನಿರಾಕರಿಸಲಾಗಿದೆ.

          1. ಭಕ್ತಿಯ ಹೆಸರಿನಲ್ಲಿ ನಾಥರು ಅನೇಕ ವಾಮಾಚಾರಗಳನ್ನು ಮಾಡುತ್ತಿದ್ದರು. ಮದ್ಯಪಾನ ಮಾಡುತ್ತ, ಭಂಗಿ ಸೇದುತ್ತ, ಸದಾ ನಿಶೆಯಲ್ಲಿರುತ್ತಿದ್ದರು. ಇಂತವರಿಂದ ಭಕ್ತಿ ಮಾರ್ಗ ಬೆಳೆಯದೆಂದು

          ಅಲ್ಲಮಪ್ರಭು ತಮ್ಮ ವಚನವೊಂದರಲ್ಲಿ ಸ್ಪಷ್ಟಪಡಿಸಿದ್ದಾನೆ.

          ಕೊಂಕಣ ದ್ವೀಪದಲ್ಲಿ ಒಂದು ಕಪಿ ಹುಟ್ಟಿತ್ತು;
          ತಪವ ಮಾಡುವ ಸಪ್ತ ಋಷಿಯರ ನುಂಗಿತ್ತು;
          ನವನಾಥಸಿದ್ಧರ ತೊತ್ತಳದುಳಿಯಿತ್ತು;
          ಅರುಹಿರಿಯರ ತಲೆಯ ಮೆಟ್ಟಿ ಅರಿಯಿತ್ತು;
          ಕಪಿಜನ ವೈರಿ ಸರ್ಪನ ಹೇಳಿಗೆಯಲ್ಲಿ ನಿದ್ರೆಗೆಯ್ಯಿತ್ತು;
          ಯೋಗಿಗಳ ಭೋಗಿಗಳ ಕೊಲ್ಲದ ಕೊಲೆಯ ಕೊಂದಿತ್ತು;
          ಕಾಮನ ಅರೆಯ ಮೆಟ್ಟಿ ಕೂಗಿತ್ತು;
          ಕೋಳಿಯ ಹಂಜರನ ನಾಸಿಕ ಬೆಕ್ಕ ನುಂಗಿತ್ತು;
          ಕೋಳಿಯ ಅರ್ಕಜದ ಅರಿವನರಿವ
          ಅರುಹಿರಿಯರ ಮಿಕ್ಕು;
          ಭಾವಸೋಂಕನುಂಡು ಕೊಕ್ಕರನಾಯಿತ್ತು.
          ಹಿಂದಿರ್ದ ಕೋಳಿಯ ಕೊಕ್ಕರನ ಕಪಿಯ,
          ಭಾವವ ಅರಿಯದಿರ್ದ ಕಾರಣ,
          ಕೆದರಿದ ಚರಣ ಉಡುಗಿ,
          ಮರಣವರಿಯದೆ, ಕರಣದೇಹತ್ವವಿಲ್ಲದೆ,
          ಲಿಂಗೈಕ್ಯ ತಾನೆ ಪ್ರಾಣ ಪುರುಷ.
          ಇದನರಿದು ನುಂಗಿದಾತನೆ ಪರಮಶಿವಯೋಗಿ;
          ಭಂಗವರಿಯದ, ಜನನದ ಹೊಲಬರಿಯದ,
          ಭಾವದ ಜೀವವರಿಯದ!
          ಇದು ಕಾರಣ ಗುಹೇಶ್ವರಾ,
          ನಿಮ್ಮ ಶರಣನು ಲಿಂಗಸ್ವಯಶಕ್ತಿಶರಣ ತಾನೆ.
          (ಸಮಗ್ರ ವಚನ ಸಂಪುಟ: ಎರಡು2021/ಪುಟ ಸಂಖ್ಯೆ121/ವಚನ ಸಂಖ್ಯೆ371)

          ಇಂತಹ ಇನ್ನೂ ಅನೇಕ ವಚನಗಳಲ್ಲಿ ನಾಥರ ಬಗೆಗೆ, ಅವರ ಆಚರಣೆಗಳ ಬಗೆಗೆ ಅವರು ನಂಬಿದ್ದ ಸಿದ್ಧಾಂತಗಳ ಬಗೆಗೆ ಶರಣರು ವಿಡಂಬನೆ ಮಾಡಿದ್ದಾರೆ. ಅವರ ನಿಲುವುಗಳನ್ನು ವಿರೋಧಿಸಿದ್ದಾರೆ.

          1. ನವನಾಥ ಸಿದ್ಧರ ಸಾಧನೆ ಅಪ್ರತಿಮವಾದುದು. ಆದರೆ ಅ ಸಾಧನೆಯ ಮಾರ್ಗವು ಶರಣರಿಗೆ ಸರಿ ಕಾಣಲಿಲ್ಲ. ಕೊನೆಗೆ ಬಂದ ಕಪಿಯಿಂದ ಆ ಸಿದ್ಧಾಂತ ನಾಶವಾಯಿತೆಂದು ಬಸವಣ್ಣ ತಮ್ಮ ವಚನವೊಂದರಲ್ಲಿ ಹೇಳಿದ್ದಾನೆ.

          ಒಲೆಯಡಿಯನುರುಹಿದಡೆ [ಹೊಗೆ]
          ಗೋಳಕನಾಥನ ಕೊರಳ ಸುತ್ತಿತ್ತು,
          ಮಹೀತಳನ ಜಡೆ ಸೀಯಿತ್ತು,
          ಮರೀಚಿಕನ ಶಿರ ಬೆಂದಿತ್ತು,
          ರುದ್ರನ ಹಾವುಗೆ ಉರಿಯಿತ್ತು,
          ದೇವಗಣಂಗಳು ನಿವಾಟವಾದರು,
          ಮಡದಿಯರೈವರು ಮುಡಿಯ ಹಿಡಿದುಕೊಂಡು ಹೋದರು,
          ಕೂಡಲಸಂಗಮದೇವ ಭಸ್ಮಧಾರಿಯಾದ.
          (ಸಮಗ್ರ ವಚನ ಸಂಪುಟ: ಒಂದು2021/ಪುಟ ಸಂಖ್ಯೆ266/ವಚನ ಸಂಖ್ಯೆ931)

          ಈ ವಚನದಲ್ಲಿ ಬಸವಣ್ಣನು ಗೋರಖನಾಥನನ್ನು ಗೋಳಖನಾಥನೆಂದು ಕರೆದಿದ್ದಾನೆ. ರುದ್ರನ ಹಾವುಗೆ ಉರಿಯಿತ್ತೆಂದು ವಚನದ ಕೊನೆಯಲ್ಲಿ ಹೇಳಲಾಗಿದೆ.

          1. ನಾಥಪಂಥ ಪ್ರಾರಂಭವಾದ ಸಂದರ್ಭದಲ್ಲಿ ಸ್ತ್ರೀಯರಿಗೆ ದೀಕ್ಷೆಯಿರಲಿಲ್ಲ. ನಂತರದ ವರ್ಷಗಳಲ್ಲಿ ಮಹಿಳಾ ಸಾಧಕಿಯರೂ ನಾಥಪಂಥದ ಪರಿಚಾರಕೆಯರಾದರು. ಆದರೆ ಶರಣರಲ್ಲಿ ಪ್ರಾರಂಭದಿಂದಲೇ ಬಹುಸಂಖ್ಯೆಯ ಶರಣರೆಯರು ವಚನ ಚಳವಳಿಯನ್ನು ಪ್ರವೇಶಿಸಿದರು. ಶರಣರಿಗೆ ಸಮಾನವಾಗಿ ಸಾಧನೆ ಮಾಡಿ ತೋರಿಸಿದರು.
          2. ಲೈಂಗಿಕತೆಯನ್ನು ಆಧ್ಯಾತ್ಮದ ಚೌಕಟ್ಟಿನಲ್ಲಿ ತರುವ ಕೌಳರ ತಾಂತ್ರಿಕ ಪ್ರಯೋಗಗಳನ್ನು ಅಲ್ಲಮಪ್ರಭು ಮೊದಲಾದ ಶರಣರು ನಿರಾಕರಿಸಿದರು. ಕಾಪಾಲಿಕ – ಕೌಳರನ್ನು ಕೂಡಿಸಿಕೊಂಡು ನಡೆದ ನಾಥಪಂಥದ ತಾಂತ್ರಿಕ ಮಾರ್ಗದ ಅವನತಿಯನ್ನು ಅಲ್ಲಮಪ್ರಭು ತನ್ನ ವಚನವೊಂದರಲ್ಲಿ ಸ್ಪಷ್ಟಪಡಿಸಿದ್ದಾನೆ.

          ಆಸೆಯೆಂಬ ಶೂಲದ ಮೇಲೆ,
          ವೇಷವೆಂಬ ಹೆಣನ ಕುಳ್ಳಿರಿಸಿ;
          ಧರೆಯ ಮೇಲುಳ್ಳ ಹಿರಿಯರು
          ಹೀಂಗೆ ಸವೆದರು ನೋಡಾ!
          ಆಸೆಯ ಮುಂದಿಟ್ಟುಕೊಂಡು
          ಸುಳಿವ ಹಿರಿಯರ ಕಂಡು,
          ಹೇಸಿಕೆಯಾಗಿತ್ತು ಕಾಣಾ
          ಗುಹೇಶ್ವರಲಿಂಗಕ್ಕೆ ಸಂಗನಬಸವಣ್ಣಾ.
          (ಸಮಗ್ರ ವಚನ ಸಂಪುಟ: ಎರಡು2021/ಪುಟ ಸಂಖ್ಯೆ148/ವಚನ ಸಂಖ್ಯೆ466)

          ಈ ವಚನದಲ್ಲಿ ಅಲ್ಲಮಪ್ರಭು ಹಿರಿಯರ ಸಾಧನೆಯ ಮಾರ್ಗದ ವಿಫಲತೆಯನ್ನು ಹೇಳಿದ್ದಾನೆ. ಇವರ ಸಾಧನಾ ಮಾರ್ಗದ ವಿಧಾನದ ಬಗೆಗೆ ಶರಣರ ಪ್ರತಿಕ್ರಿಯೆ ತೀವ್ರವಾದುದಾಗಿದೆ.

          1. ಸಮಸ್ತ ಜೀವಜಂತುಗಳು ಸಾಯುವುದಕ್ಕಾಗಿಯೇ ಜನ್ಮ ಪಡೆಯುತ್ತವೆ. ಜನ್ಮವನ್ನು ಪಡೆಯುವದಕ್ಕಾಗಿಯೇ ಸಾಯುತ್ತವೆ ಎಂಬ ನಾಥರ ವಿಚಾರಧಾರೆಯನ್ನು ಶರಣರು ಒಪ್ಪಲಿಲ್ಲ. ಶರಣರಲ್ಲಿ ಪುನರ್ಜನ್ಮದ ಪರಿಕಲ್ಪನೆಯೇ ಇಲ್ಲ. ಸಕಲ ಜೀವರಾಶಿಗಳನ್ನು ಸಮಾನವಾಗಿ ಕಂಡ ಶರಣರು, ಭಕ್ತನ ಸಾಧನೆಯ ಮಾರ್ಗದ ಮಹತ್ವವನ್ನು ತಿಳಿಸಿ ಇದೇ ಜನ್ಮ ಕಡೆ ಎಂದು ಸ್ಪಷ್ಟಪಡಿಸಿದರು.
          2. ನಾರಲ್ಲಿ ಗೋರಖನಾಥನ “ಸಿದ್ಧ ಸಿದ್ಧಾಂತಕೃತಿ 2005 ರಲ್ಲಿ ಅನುವಾದಗೊಂಡಿದೆ. ಇತರೆ ನಾಥರ ರಚನೆಗಳು ಕನ್ನಡಕ್ಕೆ ಇನ್ನೂ ಬಂದಿಲ್ಲ. ಆದರೆ ನೂರಾರು ವಚನಕಾರರು ವಚನಗಳನ್ನು ರಚಿಸಿದಂತೆ, ಇಲ್ಲಿ ಎಲ್ಲ ನಾಥರೂ ತಮ್ಮ ಅನುಭವಗಳನ್ನು ಹಿಡಿದಿಟ್ಟರೆಂಬ ವಿಷಯ ಸ್ಪಷ್ಟವಾಗಿಲ್ಲ. ಹೀಗಾಗಿ ಸಾಹಿತ್ಯ ರಚನೆಯಲ್ಲಿಯೂ ಈ ಎರಡು ಪಂಥಗಳಲ್ಲಿ ವ್ಯತ್ಯಾಸವಿದೆ.
          3. ಉತ್ತರಾಪಥದ ಮೇಲೆ ಮೇಘವರ್ಷ ಕರೆಯಲು,
            ಆ ದೇಶದಲ್ಲಿ ಬರನಾಯಿತ್ತು!
            ದೇಶದ ಪ್ರಾಣಿಗಳೆಲ್ಲರೂ ಮೃತವಾದರು!
            ಅವರ ಸುಟ್ಟ ರುದ್ರಭೂಮಿಯಲ್ಲಿ,
            ನಾ ನಿಮ್ಮನರಸುವೆ ಗುಹೇಶ್ವರಾ.
            (ಸಮಗ್ರ ವಚನ ಸಂಪುಟ: ಎರಡು2021/ಪುಟ ಸಂಖ್ಯೆ148/ವಚನ ಸಂಖ್ಯೆ466)

          ಈ ವಚನದಲ್ಲಿ ಅಲ್ಲಮಪ್ರಭು ಹೇಳಿರುವ ಉತ್ತರಾಪಥವೆಂದರೆ ಅದು ಕೌಳ ಶೈವದ ಒಂದು ಮಾರ್ಗವಾಗಿದೆ. ಮೇಘವರ್ಷವೆಂದರೆ ವಿಷಯೇಂದ್ರಿಯದ ಮಳೆಯಾಗಿದೆ. ಈ ಕೌಳ ಮಾರ್ಗದ ವಾಮಾಚರದ ವಿಷಯಾಸಕ್ತಿಯಲ್ಲಿ ಮುಳಗಿದವರೆಲ್ಲ ಮೃತರಾದರೆಂದು ಹೇಳಿರುವ ಅಲ್ಲಮನ ಈ ವಚನವು ನಾಥರ ದುಃಸ್ಥಿತಿಯನ್ನು ಹೇಳುತ್ತದೆ.

          1. ಬೌದ್ಧ ಮತ್ತು ಶೈವ ವಿಚಾರಧಾರೆಗಳ ಪ್ರೇರಣೆ ಪ್ರಭಾವಗಳಿಂದ ಹುಟ್ಟಿದ ನಾಥ ಪಂಥವು ಹಠಯೊಗದ ತಳಹದಿಯ ಮೇಲೆ ನಿಂತಿದೆ. ಗೋರಖನಾಥನು ಆರಂಭಿಸಿದ ಯೋಗ ಪ್ರಧಾನವಾದ ನಾಥ ಸಂಪ್ರದಾಯದ ಬಗೆಗೆ ಅನೇಕ ಶರಣರು ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗೆ ನಾಥರಲ್ಲಿ ಶರಣರಲ್ಲಿ ಅನೇಕ ಭಿನ್ನತೆಗಳಿವೆ. ಇನ್ನೂ ಅನೇಕ ವಚನಗಳಲ್ಲಿ ಇದನ್ನು ಕಾಣಬಹುದಾಗಿದೆ.

          ಅಧ್ಯಾಯ – 06: ಸಮಾರೋಪ

          ನಾಥರು ಮತ್ತು ಶರಣರು ಭಕ್ತಿ ಪಂಥಗಳಲ್ಲಿ ಹೆಚ್ಚು ಸಾಧನೆ ಮಾಡಿದವರಾಗಿದ್ದಾರೆ. ಕರ್ನಾಟಕದ ಭಕ್ತಿ ಪಂಥಗಳಲ್ಲಿ ನಾಥರ ಬಗೆಗೆ ಹೆಚ್ಚಿನ ಅಧ್ಯಯನ ನಡೆಯಬೇಕಾಗಿದೆ. ಕರ್ನಾಟಕದಲ್ಲಿ ಅನೇಕ ನಾಥ ಸಾಧಕರಿದ್ದಾರೆ. ಅವರ ಬಗೆಗೆ ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ. ಕರ್ನಾಟಕದ ನಾಥಪಂಥವು ಬಹುಮುಖಿ ನೆಲೆಗಳಿಂದ ಕೂಡಿದ್ದು, ಬಹುಚಿಂತನೆಯ ಸೂಕ್ಷ್ಮತೆಗಳು ಅಲ್ಲಿವೆ.

          ಶೂನ್ಯ ಸಂಪಾದನೆಗಳಲ್ಲಿ ಬರುವ ಗೋರಕ್ಷನ ಪ್ರಸಂಗವು ಜನಪ್ರಿಯವಾದುದಾಗಿದೆ. ಬಹಳಷ್ಟು ಓದುಗರು ಮತ್ತು ಕೆಲವು ವಿದ್ವಾಂಸರು ಗೋರಕ್ಷನೇ ಗೋರಖನಾಥನೆಂದು ತಿಳಿದುಕೊಂಡಿದ್ದಾರೆ. 10 ನೇ ಶತಮಾನದ ಗೋರಖನಾಥನಿಗೂ, 12 ನೇ ಶತಮಾನದ ಗೋರಕ್ಷನಿಗೂ ಯಾವುದೇ ಸಂಬಂಧವಿಲ್ಲ. ಆದರೆ 12 ನೇ ಶತಮಾನದಲ್ಲಿ ಬರುವ ಗೋರಕ್ಷನು ವಜ್ರಕಾಯಿಯಾಗಿದ್ದು, ಈತನು ನಾಥ ಪರಂಪರೆಯಿಂದ ಬಂದ ನಾಥ ಸಾಧಕನಾಗಿದ್ದಾನೆ. ಮತ್ಸ್ಯೇಂದ್ರನಾಥ ಮತ್ತು ಗೋರಖನಾಥರನ್ನು ಶರಣರಲ್ಲಿ ಅಲ್ಲಮಪ್ರಭು ಬಸವಣ್ಣ ಇವರಿಗೆ ಹೋಲಿಸಲಾಗುತ್ತಿದೆ. ಈ ಹೋಲಿಕೆ ಸರಿಯಾದುದಲ್ಲ. ಅಲ್ಲಮನ ವ್ಯಕ್ತಿತ್ವವೇ ಬೇರೆ. ಮಚೇಂದ್ರನಾಥನ ವ್ಯಕ್ತಿತ್ವವೇ ಬೇರೆ. ಅಲ್ಲಮನಂತಹ ಸಾಧಕ, ಅನುಭಾವಿ ಭಕ್ತಿ ಪಂಥಗಳಲ್ಲಿ ತುಂಬ ವಿರಳವೆಂದೇ ಹೇಳಬಹುದಾಗಿದೆ.

          ಕರ್ನಾಟಕದ ನಾಥರ ಚರಿತ್ರೆಯನ್ನು ಬರೆಯುವಾಗ ಇಲ್ಲಿರುವ ಅನೇಕ ನಾಥ ಕೇಂದ್ರಗಳನ್ನು ಅಧ್ಯಯನ ಮಾಡಬೇಕಾಗುತ್ತದೆ. ಮಂಗಳೂರಿನ ಕದ್ರಿಯ ಜೋಗಿಮಠ, ವಿಟ್ಲದ ಜೋಗಿಮಠ, ಕುಂದಾಪುರದ ಹಲವರಿ ಕೋಡಶಾಹಿಮಠ, ಶಿವಮೊಗ್ಗ ಜಿಲ್ಲೆಯ ಚಂದ್ರಗುತ್ತಿಯ ಜೋಗಿಮಠ, ಬೆಳಗಾವಿ ಜಿಲ್ಲೆಯ ಖಾನಾಪುರದ ಹಂಡಿ ಬಡಿಗನಾಥ ಮಠ, ಲುಂಕೆಯ ಮಲೆ ಮಠ, ಖಾನಾಪುರ ತಾಲೂಕಿನ ಡೊಂಗರಗಾಂವಿನಲ್ಲಿರುವ ಸಿದ್ಧ ಮತ್ಸ್ಯೇಂದ್ರನಾಥ ದಾದಾಕಾ ಮಠ, ಕಿರುವಳೆಯಲ್ಲಿರುವ ಶ್ರೀಗುರು ಗೋರಕ್ಷನಾಥ ಮಠ, ಸವದತ್ತಿಯ ಎಲ್ಲಮ್ಮನ ಗುಡ್ಡದಲ್ಲಿರುವ ಜೋಗಿನಾಥ ಮಠ ಈ ಮುಂತಾದ ನಾಥ ಮಠಗಳ ಸಂಶೋಧನೆ ನಡೆದು, ನಾಥರ ಸ್ಮಾರಕಗಳ ಬಗೆಗೆ ಕೃತಿ ತರುವುದು ಬಹುಮಹತ್ವದ ವಿಷಯವಾಗಿದೆ. ಈಗಾಗಲೇ ಶರಣರ ಸ್ಮಾರಕಗಳ ಬಗೆಗೆ ಕೃತಿಗಳು ಪ್ರಕಟವಾಗಿವೆ.

          ಬೀದರ, ಕಲಬುರಗಿ ಜಿಲ್ಲೆಗಳಲ್ಲಿ ಪ್ರಸಿದ್ಧಿ ಪಡೆದಿರುವ ಜೋಗಿಮಠಗಳಿರದಿದ್ದರೂ, ಇಲ್ಲಿ ಅನೇಕ ಜೋಗಿಗಳಾಗಿ ಹೋಗಿದ್ದಾರೆ. ಜೋಗಿನಾಥರ ಅಧ್ಯಯನವೇ ವಿಶೇಷವಾದುದಾಗಿದೆ. ಈ ಪ್ರದೇಶಗಳಲ್ಲಿ ಇಂದಿಗೂ ನಾಥರ ಹೆಸರುಗಳೇ ಪ್ರಧಾನವಾಗಿ ಕಾಣಿಸಿಕೊಳ್ಳುತ್ತವೆ. ಹಿಂದಿನ ಸಚಿವರಾಗಿದ್ದ ದಿವಂಗತ ವೈಜನಾಥ ಪಾಟೀಲ, ವಿಶ್ವನಾಥ ಪಾಟೀಲ, ಕಾಶೀನಾಥ ಬೇಲೂರ, ಇವರೆಲ್ಲ ಲಿಂಗಾಯತ ಸಚಿವರಾಗಿದ್ದು ಈ ಪ್ರದೇಶದಲ್ಲಿ ನಾಥರಿಗೂ ಲಿಂಗಾಯತರಿಗೂ ಇರುವ ಸಂಬಂಧದ ಬಗೆಗೆ ಹೆಚ್ಚಿನ ಅಧ್ಯಯನವಾಗಬೇಕಾಗಿದೆ. ಇವರೆಲ್ಲ ದೀಕ್ಷ ಲಿಂಗಾಯತರಾಗಿದ್ದು, ಇವರು ಬಸವಣ್ಣನವರ ಕಾಲಕ್ಕೆ ದೀಕ್ಷೆ ಪಡೆದುಕೊಂಡು ಲಿಂಗಾಯತರಾಗಿದ್ದಾರೆ. ಆದರೆ ಇವರ ಪೂರ್ವಜರು ನಾಥ ಪರಂಪರೆಗೆ ಸೇರಿರಬಹುದಾಗಿದೆ. ಶರಣರು ಉದಯವಾಗುವದಕ್ಕಿಂತ ಮೊದಲು ಈ ಪ್ರದೇಶದಲ್ಲಿ ನಾಥರು, ಜೈನರು ಹೆಚ್ಚು ಸಂಖ್ಯೆಯಲ್ಲಿದ್ದರು. ಈ ಜೈನರು ನಾಥರು ಬಸವಣ್ಣನವರಿಂದ ದೀಕ್ಷೆ ಪಡೆದು ದೀಕ್ಷ ಲಿಂಗಾಯತರಾಗಿರಬಹುದಾಗಿದೆ. ಏಕೆಂದರೆ ದೀಕ್ಷ ಲಿಂಗಾಯತರು ಈ ಪ್ರದೇಶವನ್ನು ಬಿಟ್ಟರೆ ಬೇರೆ ಪ್ರದೇಶಗಳಲ್ಲಿ ಕಾಣಿಸುವುದಿಲ್ಲ. ಇವರ ಬಗೆಗೂ ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ. ಬೀದರ ಜಿಲ್ಲೆಯಲ್ಲಿ ಮತ್ಸ್ಯೇಂದ್ರನಾಥ ಎಂಬ ಹೆಸರನ್ನು ಹೆಚ್ಚಾಗಿ ದಲಿತರು ಇಟ್ಟುಕೊಂಡಿದ್ದಾರೆ. ಹೀಗಾಗಿ ಮಚೇಂದ್ರನಾಥನಿಗೂ ದಲಿತರಿಗೂ ಇರುವ ಸಂಬAಧದ ಬಗೆಗೆ ಅಧ್ಯಯನಗಳು ನಡೆಯಬೇಕಾಗಿದೆ.

          ಶರಣರಿಗೆ ಬೌದ್ಧ ಚಿಂತನೆ ಬಂದದ್ದು ನಾಥರ ಮೂಲಕವೆಂಬ ಚರ್ಚೆಯಿದೆ. ನಾಥರಲ್ಲಿರುವ ವೈಚಾರಿಕತೆಗೆ ಬೌದ್ಧರ ವಜ್ರಯಾನ ಪಂಥವೇ ಮುಖ್ಯ ಕಾರಣವಾಗಿದೆ. ಹೀಗಾಗಿ ಬೌದ್ಧ ನಾಥ ಶರಣ ಚಿಂತನೆಗಳ ಬಗೆಗೆ ತೌಲನಿಕ ಅಧ್ಯಯನ ನಡೆಯಬೇಕಾದ ಅಗತ್ಯವಿದೆ.

          ಕೂಡಲಸಂಗಮವು 12 ನೇಯ ಶತಮಾನಕ್ಕಿಂತ ಮೊದಲು ನಾಥ ಕೇಂದ್ರವಾಗಿತ್ತು. ಸಂಗಮನಾಥ ದೇವಾಲಯ ಅಲ್ಲಿದೆ. ಅಂತೆಯೇ ಅದು ಕಪ್ಪಡಿ ಸಂಗಮವಾಗಿತ್ತು. ನಾಥರಲ್ಲಿ ಕಪ್ಪಡಿಯೆಂಬ ಪದಕ್ಕೆ ವಿಶಿಷ್ಟವಾದ ಅರ್ಥವಿದೆ. ಬಸವಣ್ಣನವರು ಕೂಡಲಸಂಗಮದಲ್ಲಿ ವಿದ್ಯಾಭ್ಯಾಸ ಮಾಡಿದ್ದರಿಂದ ಅಲ್ಲಿ ನಾಥ ಮಠವಿದ್ದುದ್ದರಿಂದ ಬಸವೇಶ್ವರ ನಾಥ ಪಂಥದ ಅನುಯಾಯಿಯೆಂದು ಕಪಟರಾಳ ಕೃಷ್ಣರಾಯರಂತಹ ಸಂಶೋಧಕರು ಹೇಳಿರುವುದುಂಟು. ಬಸವಣ್ಣ ಶೈವ ಬ್ರಾಹ್ಮಣ ಮನೆತನದಲ್ಲಿ ಹುಟ್ಟಿದ ಮಾತ್ರಕ್ಕೆ ಬ್ರಾಹ್ಮಣನಾಗಲಿಲ್ಲ. ಕೂಡಲಸಂಗಮದಲ್ಲಿ ಓದಿದಾಕ್ಷಣ ನಾಥನಾಗಲಿಲ್ಲ. ಈ ಎಲ್ಲ ನೆಲೆಗಳನ್ನು ದಾಟಿ ಬಂದ ಬಸವಣ್ಣ ಲಿಂಗಾಯತ ಧರ್ಮದ ಸಂಸ್ಥಾಪಕನಾದ. ಈ ಸತ್ಯವನ್ನರಿಯದ ಕೆಲವರು ತಮಗೆ ತಿಳಿದಂತೆ ಮಾತನಾಡುತ್ತಾರೆ. ಅಲ್ಲಮ, ಬಸವಣ್ಣ, ಸಿದ್ಧರಾಮರಂತಹ ಶರಣರನ್ನು ನಾಥ ಪರಂಪರೆಗೆ ಸೇರಿಸಿಬಿಡುತ್ತಾರೆ. ಯಾರು ಏನೇ ಹೇಳಲಿ, ಏನೇ ಬರೆಯಲಿ ಸತ್ಯವಾವುದೆಂಬುದನ್ನು ಪ್ರಾಜ್ಞರು ತಿಳಿದುಕೊಳ್ಳಬೇಕು.

          ಶರಣರು ಜಾತ್ರೆ ಉತ್ಸವಗಳ ವಿರೋಧಿಯಾಗಿದ್ದರು. ದೇವಸ್ಥಾನಗಳಿಂದ ದೂರವಿದ್ದರು. ಆದರೆ ನಂತರದ ವರ್ಷಗಳಲ್ಲಿ ಒಬೊಬ್ಬ ಶರಣರ ಬಗೆಗೆ ಒಂದೊಂದು ದೇವಸ್ಥಾನ ನಿರ್ಮಾಣವಾದವು. ಅನೇಕ ಶರಣರ ಹೆಸರಿನಲ್ಲಿ ಜಾತ್ರೆಗಳು ಪ್ರಾರಂಭವಾದವು. ಸೊಲ್ಲಾಪುರದಲ್ಲಿ ಸಿದ್ಧರಾಮನ ಜಾತ್ರೆ, ಉಳುವಿಯಲ್ಲಿ ಚೆನ್ನಬಸವಣ್ಣನ ಜಾತ್ರೆ ಹೀಗೆ ಅನೇಕ ಜಾತ್ರೆಗಳು ನಡೆಯತೊಡಗಿದವು. ಇಂತಹ ಜಾತ್ರೆಗಳ ಬಗೆಗೆ ಇಂತಹ ದೇವಸ್ಥಾನಗಳ ಬಗೆಗೆ ಅಧ್ಯಯನ ನಡೆದಿಲ್ಲ. ನಾಥರ ಜಾತ್ರೆಗಳಂತೂ ಪ್ರಸಿದ್ಧವಾಗಿವೆ. ಈ ಎಲ್ಲ ದೇವಸ್ಥಾನ ಮಠಗಳ ಜಾತ್ರೆಗಳ ಬಗೆಗೆ ತೌಲನಿಕ ಅಧ್ಯಯನ ನಡೆದರೆ, ಜಾತ್ರೆಯಲ್ಲಿನ ಆಚರಣೆಗಳ ಮೂಲಕ ಮಠ ದೇವಸ್ಥಾನಗಳಲ್ಲಿ ನಡೆಯುವ ಪೂಜೆಗಳ ಮೂಲಕ ಸಾಂಸ್ಕೃತಿಕ ಸಂಗತಿಗಳು ಹೊರಬರುತ್ತವೆ. ಹೀಗಾಗಿ ಈ ಅಧ್ಯಯನಗಳಿಗೆ ಮಹತ್ವದ ಸ್ಥಾನವಿದೆ. ನಾಥರು ಮತ್ತು ಶರಣರ ಹೆಸರಿನಲ್ಲಿ ನಡೆಯುತ್ತಿರುವ ಇಂದಿನ ಜಾತ್ರೆಗಳಲ್ಲಿ ಗೋರಖನಾಥ, ಬಸವಣ್ಣ ಇವರ ಮೂಲ ಸಿದ್ಧಾಂತಗಳು ಕಾಣಿಸುವುದಿಲ್ಲ. ಬದಲಾಗಿ ಅವು ಜನಪದೀಕರಣಗೊಂಡು ತಮ್ಮದೇ ಆದ ರೀತಿಯಲ್ಲಿ ಬೆಳೆದ ಸಂಕರರೂಪಗಳಾಗಿವೆ. ಈ ಸಂಕರತನವನ್ನು ವಿರೋಧಿಸದೆ ಸೂಕ್ಷ್ಮ ಅಧ್ಯಯನಕ್ಕೊಳಪಡಿಸಿ ಕರ್ನಾಟಕದ ಭಕ್ತಿ ಪಂಥಗಳ ಹೊಸ ಬೆಳವಣಿಗೆಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.

          ನಾಥರಲ್ಲಿ, ಅದರಲ್ಲಿಯೂ ಗೋರಖನಾಥನು ವಿಚಾರವಾದಿಯಾಗಿದ್ದನೆಂದು ತಿಳಿದುಬರುತ್ತದೆ. ಮತ್ಸ್ಯೇಂದ್ರನಾಥನು ಬೌದ್ಧ ತಾಂತ್ರಿಕ ಪಂಥದವನೆಂದು ಕೆಲವರು ಹೇಳುತ್ತಾರೆ. ಆದರೆ ಬೌದ್ಧ ವಜ್ರಯಾನ ಪಂಥಕ್ಕೆ ಶೈವ ರೂಪ ಕೊಟ್ಟವನು ಗೋರಖನಾಥ. ಹೀಗಾಗಿ ಈ ಇಬ್ಬರು ನಾಥರ ಬಗೆಗೆ ವಿಶೇಷ ಅಧ್ಯಯನಗಳು ನಡೆಯಬೇಕಾಗಿದೆ. ಕರ್ನಾಟಕದಲ್ಲಿ ನಾಥರೂ – ಕಾಪಾಲಿಕರೂ ಕೂಡಿಕೊಂಡ ಬಳಿಕ ಅನೇಕ ಕಾಪಾಲಿಕ ಆಚರಣೆಗಳು ಈ ಪಂಥದಲ್ಲಿ ಮುಂದುವರೆದವು. ಇಂತಹ ಕಾಪಾಲಿಕರ ಮೌಡ್ಯಾಚರಣೆಗಳನ್ನು ಕಂಡು ಶರಣರು ನಾಥರನ್ನು ವಿರೋಧಿಸುವುದುಂಟು. ಇದನ್ನು ಸರಿಯಾಗಿ ಅರ್ಥೈಸಿಕೊಳ್ಳಲಾರದ ಕೆಲವು ವಿದ್ವಾಂಸರು ಶರಣರ ಬಗೆಗೆ Statement ಕೊಟ್ಟು, ತಾವು ಪ್ರಚಾರ ಪಡೆಯಲು ಪ್ರಯತ್ನಿಸಿದ್ದಾರೆ. ಅವರಲ್ಲಿ ಡಾ. ರಹಮತ್ ತರೀಕೆರೆ ಪ್ರಮುಖರಾಗಿದ್ದಾರೆ. ಕರ್ನಾಟಕದ ನಾಥಪಂಥ ಎಂಬ ತಮ್ಮ ಕೃತಿಯಲ್ಲಿ ಅವರು ಹೀಗೆ ಹೇಳಿದ್ದಾರೆ.

          ವೈದಿಕ ವಿರೋಧಿಯಾದ ಶರಣರು, ನಾಥರ ಕಾಪಾಲಿಕರ ವಿಷಯ ಬಂದಾಗ ವೈದಿಕ ನಿಲುವನ್ನೇ ತಳೆಯುತ್ತಾರೆ. ಉದಾಹರಣೆಗೆ ಅವರು ನಾಯಿಯನ್ನು ಅಪಾವಿತ್ರ‍್ಯದ ಸಂಕೇತವಾಗಿಸಿದರು. ಭೈರವಾರಾಧನೆಯ ಬಲಿ, ಮಾಂಸಾಹಾರ, ಮದ್ಯಪಾನಗಳನ್ನು ತಿರಸ್ಕರಿಸಿದರು. ಶರಣರು ಗೋರಖನನ್ನು ಸೋಲಿಸುವ ಕಥನಗಳು ಹುಟ್ಟಿದ್ದನ್ನು ಈ ಹಿನ್ನೆಲೆಯಲ್ಲಿ ಗಮನಿಸಬೇಕು. (ಕರ್ನಾಟಕದ ನಾಥಪಂಥ, ಪು: 97, 2009 ಕ.ವಿ.ವಿ. ಹಂಪಿ)

          ತಮ್ಮ ಬದುಕಿನುದ್ದಕ್ಕೂ ವೈದಿಕತೆಯನ್ನು ವಿರೋಧಿಸುತ್ತ ಬಂದ ಶರಣರು ಹೇಗೆ ವೈದಿಕ ನಿಲುವನ್ನು, ತಾಳುತ್ತಾರೆ? ಇವರಿಗಿರುವ ಅಧ್ಯಯನ ಕೊರತೆಯ ಬಗ್ಗೆ ಕನಿಕರವೆನಿಸುತ್ತದೆ. ಮೌಡ್ಯಾಚರಣೆಗಳು ಹೊರಗಿರಲಿ, ಒಳಗಿರಲಿ, ಶರಣರು ಅವುಗಳನ್ನು ವಿರೋಧಿಸುತ್ತ ಬಂದಿದ್ದಾರೆ. ವೈದಿಕರ ಮೌಡ್ಯಾಚರಣೆಗಳನ್ನು ವಿರೋಧಿಸಿದಂತೆ ಶರಣರು, 63 ಪುರಾತನ ಮೌಡ್ಯಾಚರಣೆಗಳನ್ನೂ ವಿರೋಧಿಸಿದ್ದಾರೆ. ದಾಸನ ಹಾಗೆ ವಸ್ತ್ರವ ಕೊಟ್ಟವನಲ್ಲ ವೆಂದು ತಮ್ಮ ಸಮಕಾಲೀನ ಶರಣರ ಹಿಂಸಾಭಕ್ತಿಯನ್ನು, ದಾನಭಕ್ತಿಯನ್ನು ವಿರೋಧಿಸಿದ್ದಾರೆ. ಶರಣರನ್ನು ಕುರಿತು ಹೀಗೆ ಬೀಸು ಹೇಳಿಕೆ ಕೊಡುವುದು ಸರಿಯಾದುದಲ್ಲ. ಇಂತಹ Coment ಗಳು ಬರುತ್ತಲೇ ಇರುತ್ತವೆ. ಇದಕ್ಕೆ ಹೆಚ್ಚಿನ ಮಹತ್ವ ನೀಡದೆ ಇಂತಹ ಸಾಧಕರ ಬಗೆಗೆ ಹೊಸ ಹೊಸ ಅಧ್ಯಯನಗಳನ್ನು ಮಾಡುತ್ತಲೇ ಹೋಗಬೇಕಾಗುತ್ತದೆ.

          ಡಾ. ಬಸವರಾಜ ಸಬರದ,
          ಮನೆ ನಂ. 1, 2 ನೇ ಮೇನ್‌, 2 ನೇ ಕ್ರಾಸ್‌,
          ಅಮರಜ್ಯೋತಿ ಲೇ ಔಟ್, ಕುಪ್ಪಸ್ವಾಮಿ ಪಾರ್ಕ್,
          ಹೆಬ್ಬಾಳ,
          ಬೆಂಗಳೂರು-560032,
          ಮೋಬೈಲ್‌ ಸಂ. 98866 19220

          • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
          • ವಚನಸಾಹಿತ್ಯ ಮಂದಾರ ಫೌಂಡೇಶನ್‌ (ರಿ) ದ ಸಂಚಾಲಕರನ್ನು ಸಂಪರ್ಕಿಸಬೇಕಾದ:
            • ಮೋಬೈಲ್ ನಂ. 9741 357 132
            • e-Mail ID: info@vachanamandara.in / admin@vachanamandara.in

          Loading

          Leave a Reply