
ರಾಯಚೂರು ಜಿಲ್ಲೆ ಬಿಸಿಲನಾಡು ಎಂದೇ ಹೆಸರುವಾಸಿ. ಅದರಷ್ಟೇ ಸಾಹಿತ್ಯದಿಂದ ನೆತ್ತಿಯನ್ನು ತಂಪಾಗಿಸಬಲ್ಲ ಶರಣರು, ದಾಸರು, ಸಂತರು, ಮಹಾಂತರ, ಸಾಹಿತಿಗಳ, ನಾಡು ರಾಯಚೂರು. ಆಂಧ್ರಪ್ರದೇಶದ ಗಡಿಭಾಗಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆಯಾದರೂ, ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಜಿಲ್ಲೆ ಇದಾಗಿದೆ. ಹನ್ನೆರಡನೇ ಶತಮಾನದ ಬಸವಾದಿ ಶರಣರ ಸಾಲಿನಲ್ಲಿ ಕಾಣಸಿಗುವ ಪ್ರಮುಖ ಶರಣರಾದ ಬಿಬ್ಬಿಬಾಚಯ್ಯನವರು ಕೂಡ ರಾಯಚೂರು ಜಿಲ್ಲೆಯ ಶರಣರೇ ಆಗಿದ್ದಾರೆ.
ಶರಣ ಬಿಬ್ಬಿಬಾಚಯ್ಯನವರು ಮೂಲತಃ ರಾಯಚೂರು ಜಿಲ್ಲೆಯ ಗಬ್ಬೂರಿನವರಾಗಿದ್ದು, ಪೂರ್ವಾಶ್ರಮದಲ್ಲಿ ಬ್ರಾಹ್ಮಣರಾದರೂ ಬಸವಣ್ಣನವರ ಪ್ರಭಾವಕ್ಕೆ ಒಳಗಾಗಿ ಕಲ್ಯಾಣಕ್ಕೆ ತೆರಳಿ ಇಷ್ಟಲಿಂಗ ದೀಕ್ಷೆ ಪಡೆದು ಶರಣರಾದವರು, ಅನುಭವ ಮಂಟಪದಲ್ಲಿ ಸಕ್ರಿಯವಾಗಿ ಭಾಗವಹಿಸಿದವರು ಹಾಗೂ 770 ಅಮರ ಗಣಂಗಳಲ್ಲಿ ಇವರೂ ಒಬ್ಬರು.
ಶರಣ ಬಿಬ್ಬಿಬಾಚಯ್ಯನವರ ವಚನಾಂಕಿತ “ಏಣಾಂಕಧರ ಸೋಮೇಶ್ವರಾ”. ಇಲ್ಲಿಯವರೆಗೂ ಇವರು ರಚಿಸಿದ ಲಭ್ಯವಿರುವ ವಚನಗಳು 102. ಅವುಗಳಲ್ಲಿ ಪ್ರಸಾದ ಮಹತ್ವವನ್ನು ಸಾರುವ ವಚನಗಳ ಜೊತೆಗೆ ಕೆಲವು ಬೆಡಗಿನ ವಚನಗಳಾಗಿವೆ.
ಬಸವಾದಿ ಶರಣರು ಕಾಯಕಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ, ಅದು ಯಾವುದಾದರೂ ಸರಿ ಮೇಲು ಕೀಳು ಎಂಬುದಿಲ್ಲ. ಶರಣ ಬಿಬ್ಬಿ ಬಾಚಯ್ಯನವರ ಕಾಯಕ ಮಹಾಮನೆಯಲ್ಲಿ ಅಡುಗೆ ವ್ಯರ್ಥವಾಗದಂತೆ ನೋಡಿಕೊಳ್ಳುವುದು ಹಾಗೂ ಪ್ರಸಾದದ ಮಹತ್ವವನ್ನು ಎಲ್ಲ ಶರಣರಿಗೆ ತಿಳಿಸುವುದು.
ಬಸವಣ್ಣನ ಪ್ರಸಾದವ ಕೊಂಡ ಕಾರಣ
ಎನಗೆ ಭಕ್ತಿ ಸಾಧ್ಯವಾಯಿತ್ತು.
ಚೆನ್ನಬಸವಣ್ಣನ ಪ್ರಸಾದವ ಕೊಂಡ ಕಾರಣ
ಎನಗೆ ಜ್ಞಾನ ಸಾಧ್ಯವಾಯಿತ್ತು.
ಪ್ರಭುದೇವರ ಪ್ರಸಾದವ ಕೊಂಡ ಕಾರಣ
ಎನಗೆ ವೈರಾಗ್ಯ ಸಾಧ್ಯವಾಯಿತ್ತು.
ಇಂತೀ ಮೂವರು ಒಂದೊಂದು ಕೊಟ್ಟ ಕಾರಣ
ಎನಗೆ ಸರ್ವವೂ ಸಾಧ್ಯವಾಯಿತ್ತು.
ಏಣಾಂಕಧರ ಸೋಮೇಶ್ವರಾ,
ನಿಮ್ಮ ಶರಣರೆನ್ನ ಮಾತಾಪಿತರು.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-152/ವಚನ ಸಂಖ್ಯೆ-392)
ಮೇಲಿನ ವಚನದಲ್ಲಿ ತಮ್ಮ ಸಮಕಾಲೀನ ಶರಣರಾದ ಬಸವಣ್ಣ, ಚೆನ್ನಬಸವಣ್ಣ, ಅಲ್ಲಮಪ್ರಭುವರು ಈ ಮೂವರ ಪ್ರಸಾದವನ್ನು ಕೊಂಡ ಕಾರಣವೇ ಎನಗೆ ಭಕ್ತಿ, ಜ್ಞಾನ, ವೈರಾಗ್ಯ, ಪ್ರಾಪ್ತಿಯಾಯಿತು ಎಂದು ಸ್ತುತಿಸಿದ್ದಾರೆ. ನಿಮ್ಮ ಶರಣರೇ ಎನ್ನ ಮಾತಾ ಪಿತರು ಎಂದಿದ್ದಾರೆ. ಈ ಮೂಲಕ ಶರಣರ ಸಂಗವೇ ತಮಗೆ ಸರ್ವಸ್ವವು ಎಂದು ತಿಳಿಸುತ್ತಾರೆ.
ಇಷ್ಟಲಿಂಗಕ್ಕೆ ದೃಷ್ಟಾರ್ಪಿತ, ಪ್ರಾಣಲಿಂಗಕ್ಕೆ ತೃಪ್ತಿ ಅರ್ಪಿತ,
ಮಹಾಜ್ಞಾನ ಘನಲಿಂಗಕ್ಕೆ ಪರಮ ಪರಿಣಾಮವೆ ಅರ್ಪಿತ.
ಇಂತೀ ತ್ರಿವಿಧ ಅರ್ಪಣದಲ್ಲಿ ಸುಚಿತ್ತನಾಗಿರಬೇಕು,
ಏಣಾಂಕಧರ ಸೋಮೇಶ್ವರಲಿಂಗವನರಿವುದಕ್ಕೆ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-129/ವಚನ ಸಂಖ್ಯೆ-297)
ಸ್ಥೂಲ, ಸೂಕ್ಷ್ಮ, ಕಾರಣದಲ್ಲಿ ಇಷ್ಟ ಪ್ರಾಣ ಭಾವವನ್ನು ಸಮರ್ಪಿಸಿ, ತ್ರಿವಿಧದಲ್ಲೂ ಶುದ್ಧವಾಗಿರಬೇಕು ಏಣಾಂಕಧರ ಸೋಮೇಶ್ವರ ಲಿಂಗವನ್ನು ಅರಿವುದಕ್ಕೆ ಎನ್ನುವ ವಚನವನ್ನು ನೋಡಿದಾಗ ಇವರು ಪರಮಪ್ರಸಾದಿ ಶರಣರು ಎಂದು ತಿಳಿಯಬಹುದಾಗಿದೆ.
ಶರಣ ಬಿಬ್ಬಿ ಬಾಚಯ್ಯನವರು ಹಾಗೂ ಚೆನ್ನವೀರ ಶರಣರು ಇವರಿಬ್ಬರೂ ತುಂಬಾ ಆತ್ಮೀಯರಾಗಿದ್ದು ಕಲ್ಯಾಣದಿಂದ ಇಬ್ಬರೂ ರಾಯಚೂರು ಜಿಲ್ಲೆಗೆ ಬರುತ್ತಾರೆ, ಶರಣ ಬಿಬ್ಬಿ ಬಾಚಯ್ಯನವರು ಒಕ್ಕುಮಿಕ್ಕ ಪ್ರಸಾದವನ್ನು ಮಹಾಲಿಂಗ ಪ್ರಸಾದವಿದೆಂದು ಅತ್ಯಂತ ಶ್ರದ್ಧಾ ಭಕ್ತಿಯಿಂದ ಬಂಡಿಯ ತುಂಬಿಸಿಕೊಂಡು ರುದ್ರಾಕ್ಷಿಗಳಿಂದ ಬಂಡಿಯನ್ನು ಅಲಂಕರಿಸಿ ಹಾಗೂ ಬಂಡಿಗೆ ಗೆಜ್ಜೆಗಳನ್ನು ಕಟ್ಟಿ ಜಲ್ ಜಲ್ ಎನಿಸುತ್ತಾ, ಶಿವ ನಾಮಸ್ಮರಣೆ ಮಾಡುತ್ತಾ, ಗಬ್ಬೂರಿನ ಕಡೆಗೆ ಪ್ರಯಾಣಿಸುತ್ತಿರುತ್ತಾರೆ, ಪ್ರತಿದಿನವೂ, ತ್ರಿಕಾಲ ಇಷ್ಟಲಿಂಗ ಪೂಜೆಯ ನಂತರ ಶರಣರ ಒಕ್ಕುಮಿಕ್ಕ ಮಹಾಲಿಂಗ ಪ್ರಸಾದವನ್ನು ಭಕ್ತಿಯಿಂದ ಸ್ವೀಕರಿಸುತ್ತಿದ್ದರು.
ಭಕ್ತರೊಬ್ಬರು ಶರಣ ಬಿಬ್ಬಿ ಬಾಚಯ್ಯನವರನ್ನು ಗಬ್ಬೂರಿಗೆ ಕರೆದರು, ಪ್ರಸಾದ ತುಂಬಿದ ಬಂಡಿಯೊಂದಿಗೆ ಗಬ್ಬೂರಿಗೆ ಬರುತ್ತಿರುವಾಗ, ಬಂಡಿಯಲ್ಲಿನ ಪ್ರಸಾದಕ್ಕೆ ಹೊದಿಸಿದ್ದ ವಸ್ತ್ರವು ಜಾರಿ ಆ ಪ್ರಸಾದವನ್ನು ಕಂಡ ಅಲ್ಲಿನ ವೈದಿಕರು ಶರಣರು ಊರೊಳಗೆ ಬರದಂತೆ ತಡೆದು ನಿಲ್ಲಿಸಿ, ಇದೇನಿದು ಶಿವನಾಮ ಸ್ಮರಣೆ ಮಾಡುತ್ತ, ರುದ್ರಾಕ್ಷಿಯಿಂದ ಅಲಂಕರಿಸಿದ ಬಂಡಿಯಲ್ಲಿ, ಸತ್ತ ಶವದ ವಾಸನೆ ಬರುತ್ತಿರುವ, ಎಂಜಲನ್ನು ತುಂಬಿ, ಸುಂದರ ಹೊದಿಕೆಯನ್ನು ಹೊದಿಸಿ, ತಂದಿರುವಿರಿ, ನೀವ್ಯಾರು? ನಮ್ಮ ಅಗ್ರಹಾರಕ್ಕೆ ನಿಮಗೆ ಪ್ರವೇಶವಿಲ್ಲವೆಂದು, ನಿಂದಿಸಿ ಟೀಕಿಸುತ್ತಾರೆ.
ಶರಣರು ಮಹಾಪ್ರಸಾದ ಹಾಗೂ ಅದರ ಮಹತ್ವದ ಬಗ್ಗೆ ತಿಳಿ ಹೇಳಿ ಎಚ್ಚರಿಸಿದರೂ ಕೇಳದ ವಿಪ್ರರು ಬಂಡಿಯಲ್ಲಿ ತುಂಬಿದ್ದ ಪ್ರಸಾದವನ್ನು ಕಟ್ಟಿಗೆಯಿಂದ ಚಿಮ್ಮಿ ನೆಲಕ್ಕೆ ಬೀಳಿಸುತ್ತಾರೆ, ಚಿಮ್ಮಿದ ಪ್ರಸಾದದ ಪ್ರತಿ ಅಗುಳುಗಳು ಬೆಂಕಿಯ ಕಿಡಿಗಳಾಗಿ ವ್ಯಾಪಿಸಿ ಅಗ್ರಹಾರವನ್ನೇ ವ್ಯಾಪಿಸುತ್ತದೆ. ಜೀವ ಉಳಿಸಿಕೊಳ್ಳಲು ಶಿವಭಕ್ತರ ಮನೆಯನ್ನು ಆಶ್ರಯಿಸುತ್ತಾ ವಿಪ್ರರು, ಪ್ರಸಾದದ ಮಹತ್ವವನ್ನು ಅರಿತು ಸೋತು ಶರಣಾಗಿ ಕ್ಷಮಿಸಿ ಎಂದು ಶರಣ ಬಿಬ್ಬಿ ಬಾಚಯ್ಯನವರ ಪಾದಕ್ಕೆರಗುತ್ತಾರೆ, ತಾವೂ ಶಿವ ನಾಮಸ್ಮರಣೆ ಮಾಡುತ್ತಾರೆ. ನಂತರ ಸುಟ್ಟ ಮನೆಮಾರುಗಳು ಪುನಃ ಮೊದಲಿನಂತಾಗುತ್ತವೆ. ಇದನ್ನು ಕಂಡ ಅಲ್ಲಿನ ಜನ ಅತ್ಯಂತ ಭಕ್ತಿ ಗೌರವದಿಂದ ಶರಣ ಬಿಬ್ಬಿ ಬಾಚಯ್ಯನವರನ್ನು ಗಬ್ಬೂರಿನಲ್ಲಿಯೇ ಉಳಿಸಿಕೊಳ್ಳುತ್ತಾರೆ. ಈ ಪ್ರಸಂಗವನ್ನು ಪಾಲಪುರ್ಕಿ ಸೋಮನಾಥನು ತನ್ನ ಬಸವ ಪುರಾಣದಲ್ಲಿ ತಿಳಿಸಿದ್ದಾನೆ.
ನಂತರ ಇವರ ಆತ್ಮೀಯ ಶರಣರಾದ ಚೆನ್ನವೀರ ಶರಣರ ಜೊತೆಗೂಡಿ ಗಬ್ಬೂರಿನಲ್ಲಿ ಕೆಲಕಾಲ ಬಸವ ತತ್ವವನ್ನು ಪ್ರಸಾರ ಮಾಡುತ್ತಾ ಜನರನ್ನು ಸನ್ಮಾರ್ಗದೆಡೆಗೆ ಕೊಂಡೊಯ್ಯುತ್ತಾರೆ, ನಂತರ ಈಗಿನ ಶಕ್ತಿನಗರದ ಸೂಗೂರು ಭಕ್ತರು ಬಂದು ಚೆನ್ನವೀರ ಶರಣರನ್ನು ತಮ್ಮೂರಿಗೆ ಆಹ್ವಾನಿಸುತ್ತಾರೆ. ಚೆನ್ನವೀರ ಶರಣರು ಅಲ್ಲಿ ತೆರಳಿದ ನಂತರ ಅದು ದೇವಸೂಗೂರು ಎಂದು ಪ್ರಖ್ಯಾತಿ ಪಡೆಯುತ್ತದೆ. ಗಬ್ಬೂರಿನ ಬೆಟ್ಟದ ಮೇಲೆ ಚೆನ್ನವೀರ ಶರಣರು ಅಂದರೆ ಈಗಿನ ಸೂಗೂರೇಶ್ವರರು ತಂಗಿದ್ದ ಸ್ಥಳದಲ್ಲಿಯೇ ಅವರ ದೇವಾಲಯವನ್ನು ಕಾಣಬಹುದಾಗಿದೆ,
ಶರಣ ಬಿಬ್ಬಿ ಬಾಚಯ್ಯನವರು ಗಬ್ಬೂರಿನ ಕಟ್ಟೆಯ ಮೇಲೆ ಕುಳಿತು ಜನರಿಗೆ ಶರಣತತ್ವ ಬೋಧಿಸುತ್ತಿದ್ದ ಸ್ಥಳವೇ ಈಗಿನ ಅರ್ಪಣ ಕಟ್ಟೆ. ಅದೇ ಸ್ಥಳದಲ್ಲೇ ಶರಣ ಬಿಬ್ಬಿಬಾಚಯ್ಯನವರು ಲಿಂಗೈಕ್ಯರಾಗಿದ್ದಾರೆಂಬ ಪ್ರತೀತಿ ಇದೆ. ಅವರ ಅರ್ಪಣ ಕಟ್ಟೆಯಿಂದ ದೇವಸೂಗೂರಿಗೆ ದಾರಿಯೂ ಇದೆ. ಇಂದಿಗೂ ಸುತ್ತಮುತ್ತಲಿನ ಜನರು ಹೊಲಗದ್ದೆಗಳಲ್ಲಿ ಕೆಲಸಕ್ಕೆ ಹೋಗುವಾಗ ಶರಣರ ಅರ್ಪಣ ಕಟ್ಟೆಗೆ ನಮಸ್ಕರಿಸಿಯೇ ತೆರಳುತ್ತಾರೆ. ಸುತ್ತಲೂ ಹೊಲಗಳಿಗೆ ಹೋಗಲು ಜನ ತಮ್ಮ ಪಾದರಕ್ಷೆಗಳನ್ನು ದೂರದಲ್ಲೇ ಬಿಟ್ಟು ಹೋಗುತ್ತಾರೆ, ಇಂದಿಗೂ ಅವರ ತತ್ವಾದರ್ಶಗಳು ನಮ್ಮೆಲ್ಲರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ.
ಇನ್ನು ಅವರ ವಚನಗಳಂಥೂ ಅತ್ಯಂತ ಅರ್ಥಗರ್ಭಿತ ಹಾಗೂ ಬೆಡಗಿನ ವಚನಗಳಾಗಿದ್ದು ಅವುಗಳನ್ನು ಅರ್ಥೈಸಿಕೊಂಡಾಗ ಸಿಗುವ ಆನಂದಕ್ಕೆ ಪಾರವೇ ಇರುವುದಿಲ್ಲ, ಶರಣ ಬಿಬ್ಬಿ ಬಾಚಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶವಾಗಿದೆ, ಅವರ ವಚನಗಳು ಸದಾ ನಮ್ಮನ್ನು ಜಾಗ್ರತಗೊಳಿಸುತ್ತಿರುತ್ತವೆ. ಬಿಸಿಲನಾಡಿನಲ್ಲಿ ಶರಣ ಸಾಹಿತ್ಯದ ತಂಪೆರೆದವರೇ ಮಹಾಪ್ರಸಾದಿ ಶರಣ ಬಿಬ್ಬಿ ಬಾಚಯ್ಯನವರು. ಪ್ರತಿವರ್ಷ ಹೋಳಿ ಹುಣ್ಣಿಮೆ ದಿನದಂದು ಇವರ ಜಯಂತಿಯನ್ನು ಆಚರಿಸಲಾಗುತ್ತದೆ.
ಶ್ರೀ. ಲೋಕೇಶ್ ಎನ್.
ಶರಣ ತತ್ವ ಚಿಂತಕರು, ಲೇಖಕರು ಹಾಗೂ ಯುವ ಉದ್ಯಮಿಗಳು,
ಮಾನವಿ – 584 123,
ರಾಯಚೂರು ಜಿಲ್ಲೆ.
ಮೋಬೈಲ್ ಸಂ. 99725 36176.
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ ದ ಸಂಚಾಲಕರನ್ನು ಸಂಪರ್ಕಿಸಬೇಕಾದ
- ಮೋಬೈಲ್ ನಂ. 9741 357 132
- e-Mail ID: info@vachanamandara.in / admin@vachanamandara.in
![]()






Total views : 57596