ವಚನಕಾರರ ದೃಷ್ಟಿಯಲ್ಲಿ ಆತ್ಮ ಸೌಂದರ್ಯ | ಡಾ. ಎಂ. ಮಕ್ತುಂಬಿ, ಭಾಲ್ಕಿ.

ಅಧ್ಯಾತ್ಮ ಸಾಧಕರಾಗಿದ್ದ ವಚನಕಾರರಿಗೆ ಆತ್ಮಸಾಕ್ಷಾತ್ಕಾರವು ಉಳಿದ ಸಾಧನೆಗಳಂತೆ ಮಹತ್ವದ್ದಾಗಿತ್ತು. ಅವರು ಪುರವನ್ನು ಗೆದ್ದಂತೆ; ಪರವನ್ನು ಗೆದ್ದವರು. ಮನೆಯನ್ನು ಗೆದ್ದಂತೆ ಮಾರೂ ಗೆದ್ದವರು; ಆತ್ಮ ಸಾಕ್ಷಾತ್ಕಾರ ಮಾಡಿಕೊಂಡವರಿಗೆ ಎಲ್ಲವೂ ಶಿವಮಯವಾಗಿಯೇ ಕಾಣುತ್ತದೆ; ಸಮಾನವಾಗಯೇ ಕಾಣುತ್ತದೆ. ಈ ದರ್ಶನದ ಹಿನ್ನೆಲೆಯಲ್ಲಿಯೇ ವಚನಕಾರರು ಎಲ್ಲ ತಾರತಮ್ಯಗಳನ್ನು ಮೀರಿ ನಿಂತರು‌. ತಾವು ಬದುಕಿದ್ದ ಯುಗಮಾನವನ್ನು ಎಲ್ಲ ಭೇದಗಳಿಂದ ಬಿಡುಗಡೆ ಮಾಡುವ ಚಳಿವಳಿಯೊಂದನ್ನು ರೂಪಿಸಿದರು‌. ಅದು ಆತ್ಮಸಾಕ್ಷಾತ್ಕಾರದ ಸಾಧನೆಯಾಗಿದ್ದಂತೆ; ಸಮಾಜದಲ್ಲಿದ್ದ ಪರಮಾತ್ಮನ ಶ್ರೇಯ ಸಾಧನೆಯ ಚಳುವಳಿಯೂ ಆಗಿದ್ದಿತು. ಅವರು ಆತ್ಮದ ಆಧಾರದ ಮೇಲೆ ಸಮಾನತೆಯನ್ನು ಸ್ಥಾಪಿಸಲು ಬಯಸಿದರು. ಎಲ್ಲ ಮನುಷ್ಯರಲ್ಲಿಯೂ ಆತ್ಮವಿದೆ. ಅದು ಒಂದೇ ಒಂದು. ಆತ್ಮವಿರುವರೆಲ್ಲರೂ ಸಮಾನರು. ಆತ್ಮದಲ್ಲಿಯೇ ಪರಮಾತ್ಮನಿದ್ದಾನೆ. ಆದುದರಿಂದ ಸಮಾಜದ ವ್ಯಕ್ತಿಗಳು ತಮ್ಮಲ್ಲಿರುವ ಆತ್ಮಗತ ಪರಮಾತ್ಮನನ್ನು ಕಾಣುವ ಸಾಧನೆ ಮಾಡಬೇಕು. ಅಧ್ಯಾತ್ಮ ಸಾಧನೆಯೆಂಬುದು ಎಲ್ಲರ ಸ್ವತ್ತು. ಅದರಲ್ಲಿ ಪಾಲುದಾರಿಕೆ ಎಲ್ಲರಿಗೂ ಇದೆ. ಹೀಗೆ ಸಾರುವುದರ ಮೂಲಕ ಅಂದಿನ ಕಾಲದ ಸಮಾಜಕ್ಕೆ ಮೊಟ್ಟ ಮೊದಲಿಗೆ ಧಾರ್ಮಿಕ, ಅಧ್ಯಾತ್ಮಿಕ ಸಾಧನೆಯ ಸ್ವಾತಂತ್ರ್ಯವನ್ನು ಒದಗಿಸಿಕೊಟ್ಟರು. ಆತ್ಮದ ವಿಕಾಸದಿಂದಲೇ ಮನುಷ್ಯನು ಮಹಾತ್ಮನಾಗುತ್ತಾನೆಂದು ಸಾರಿದರು. ಹೊರಗಿನ ಏನೆಲ್ಲ ಸೌಂದರ್ಯಗಳಿಗಿಂತಲೂ ಆತ್ಮದ ಸೌಂದರ್ಯವು ವಚನಕಾರರಿಗೆ ಹಿರಿದಾಗಿತ್ತು.

ಆತ್ಮ ಸೌಂದರ್ಯವೆಂದರೆ ಇನ್ನೊಂದು ಅರ್ಥದಲ್ಲಿ ಅದು ಆತ್ಮದ ಅರಿವಿನ ಪ್ರಕಾಶವೇ ಆಗಿದೆ. ಆತ್ಮದ ಅರಿವಿನ ಪ್ರಕಾಶದಲ್ಲಿಯೇ ಪರಮಾತ್ಮನನ್ನು ನೋಡಬೇಕಾಗಿದೆ. ಅವರ ಪರಮಾತ್ಮನು ಬೇರೆ ಯಾರೂ ಆಗಿರುವುದಿಲ್ಲ. ಅಲ್ಲಿ ಸ್ವಸ್ವರೂಪದ ದರ್ಶನವಾಗುತ್ತದೆ. ಆತ್ಮದ ಸೌಂದರ್ಯವು ಶಾಶ್ವತ, ಅದಕ್ಕೆ ಯಾವುದೇ ಓರೆಕೊರೆಗಳಿಲ್ಲ. ಅದು ಚಿರಂತನ; ನಿತ್ಯ ನೂತನ, ಚಿರ ಯೌವ್ವನದಿಂದ ಕೂಡಿದ್ದು, ಅದಕ್ಕೆ ಅಳಿವಿಲ್ಲ; ಸಾವಿಲ್ಲ; ಕೇಡಿಲ್ಲ ವೃದ್ಧಾಪ್ಯವಿಲ್ಲ; ಜಾಡ್ಯವಿಲ್ಲ; ಆದುದರಿಂದ ಅದು ನಿತ್ಯ ಸೌಂದರ್ಯ ಪ್ರದೀಪ್ತವಾಗಿರುತ್ತದೆ. ಈ ದೃಷ್ಟಿಕೋನದಿಂದಲೇ ವಚನಕಾರರು ಆತ್ಮವನ್ನು ಕುರಿತು ಚಿಂತನೆ ಮಾಡಿದ್ದಾರೆ. ತನ್ಮೂಲಕ ತಮ್ಮ ತಾವು ಕಂಡುಕೊಂಡಿದ್ದಾರೆ. ತಮ್ಮ ಯುಗಮಾನದ ಸಾಧಕರಿಗೆಲ್ಲ ಆತ್ಮ ದರ್ಶನ ಹೊಂದಿ ಆನಂದಗೊಳ್ಳಲು ಆರುಹಿರುವರು. ಇಲ್ಲಿ ಪ್ರಾತಿನಿಧಿಕವಾದ ಕೆಲವು ವಚನಕಾರರ ವಚನಗಳ ಮೂಲಕ ಆತ್ಮ ಸೌಂದರ್ಯದ ವಿವೇಚನೆ ಮಾಡಲಾಗಿದೆ.

ಶಿವಯೋಗಿ ಸಿದ್ಧರಾಮರು “ಆತ್ಮಸಾಧಕರು ಚಿರಂಜೀವಿಯಾಗಿರುತ್ತಾರೆ, ಅವರು ಪರಬ್ರಹ್ಮ ಸ್ವರೂಪದಲ್ಲಿ ಲೀನವಾಗಿರುತ್ತಾರೆ” ಎಂದು ಹೇಳುತ್ತಾರೆ. ಚಿರಂಜೀವಿ ಎಂಬ ಶಬ್ದವೇ ಅಪೂರ್ವ ಸೌಂದರ್ಯವನ್ನು ಪ್ರತಿಧ್ವನಿಸುವ ಶಬ್ದವಾಗಿದೆ. ಆತ್ಮವು ಅಮರ. ಅದಕ್ಕೆ ಸಾವಿಲ್ಲ. ಹುಟ್ಟು ಇಲ್ಲ. ಹುಟ್ಟು ಸಾವು ಇಲ್ಲದುದೆ ಚಿರಂಜೀವಿ ಅದುವೆ ಬ್ರಹ್ಮ- ಆತ್ಮ.

ಚಿರಂಜೀವಿ ಎಂದಡೆ ನಿರೋಗಿ;
ಚಿರಂಜೀವಿ ಎಂದಡೆ ಸಶಕ್ತ;
ಚಿರಂಜೀವಿ ಎಂದಡೆ ಬಹುಕಾಲ ಬದುಕುವವನು.
ಚಿರಂಜೀವಿ ಎಂದಡೆ ಪ್ರಳಯವ ಮೀರುವವನಲ್ಲ.
ಕಪಿಲಸಿದ್ಧಮಲ್ಲಿಕಾರ್ಜುನಾ,
ಬ್ರಹ್ಮವೆಂಬ ಶಬ್ದ ಬೇರುಂಟೆ?
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-162/ವಚನ ಸಂಖ್ಯೆ-521)

ಮುಕ್ತಾಯಕ್ಕನವರು ಅಜಗಣ್ಣನ ಸತ್ಸಂಗದಲ್ಲಿ ಆತ್ಮಸಾಧನೆಯ ಪರಿಯನ್ನು ಕಲಿತಿರುವರು. ಅಣ್ಣನ ಆತ್ಮ ಸಾಕ್ಷಾತ್ಕಾರದ ವಿಚಾರವನ್ನು ನೆನಪಿಸಿಕೊಳ್ಳುತ್ತಾರೆ.

ಸ್ಫಟಿಕಪ್ರಜ್ವಲಜ್ಯೋತಿ ಘಟದೊಳಗೆ ತೋರುತ್ತಿರೆ,
ದಿಟಪುಟವನತಿಗಳೆದು ಸಟೆಯ ಬಳಸುವರೆ?
ಅಂತರಂಗದ ಶುದ್ಧಿಯ ಬಹಿರಂಗಕ್ಕೆ ತಂದು
ಸಂತೈಸಲರಿಯದೆ ಮರುಳಾದಿರಣ್ಣಾ.
ಜಂತ್ರದ ಕೀಲಕೂಟದ ಸಂಚದ ಭೇದವು ತಪ್ಪಿ,
ಮಂತ್ರ ಭಿನ್ನವಾಗಿ ನುಡಿವರೆ ಅಜಗಣ್ಣ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-405/ವಚನ ಸಂಖ್ಯೆ-1130)

ಈ ವಚನದಲ್ಲಿ ಬರುವ ಪಾರಿಭಾಷಿಕ ಶಬ್ದಗಳ ಅರ್ಥ:
ಘಟ: ದೇಹ, ಗಿಡ, ಕೊಡ.
ದಿಟಪುಟ: ನಿಶ್ಚಯ.
ಸಟೆ: ಸುಳ್ಳು.
ಜಂತ್ರ: ಯಂತ್ರ.

ಆತ್ಮವು ಸ್ಫಟಿಕದಂತೆ ಪರಿಶುಭ್ರ, ಅದರ ಬೆಳಕು ಪ್ರಜ್ವಲ ಜ್ಯೋತಿಪ್ರಕಾಶದಿಂದ ಕೂಡಿದುದು. ಆತ್ಮ ಸಾಕ್ಷಾತ್ಕಾರ ಮಾಡಿಕೊಂಡವನಿಗೆ ಯಾವುದರ ಹಂಗೂ ಇಲ್ಲ. ಆತ್ಮವು ಸಕ್ಕರೆಯಂತೆ ಮಧುರವಾದುದು, ಅದರ ಸವಿಯೂ ಅನಿರ್ವಚನೀಯವಾದುದು. ಸಕ್ಕರೆಯನ್ನು ತಿಂದೆ ಅನುಭವಿಸಬೇಕು. ಸಕ್ಕರೆ ತಿನ್ನುವುದು ಎಂದರೆ ಸಕ್ಕರೆಯಂತಿರುವ ಆತ್ಮದ ಅನುಭವ ಮಾಡಿಕೊಳ್ಳುವುದು ಎಂದರ್ಥ. ಇದನ್ನು ಶರಣೆ ಅಮುಗೆ ರಾಯಮ್ಮನವರು ಸುಂದರವಾಗಿ ವಿವರಿಸಿದ್ದಾರೆ.

ಕತ್ತಲೆಯ ಮನೆಯಲ್ಲಿ ಸಕ್ಕರೆಯ ಸವಿದವನಂತಿರಬೇಕು.
ಬಟ್ಟಬಯಲಲ್ಲಿ ನಿಂದು ಇಷ್ಟಲಿಂಗವ ಕಂಡವನಂತಿರಬೇಕು.
ಇದಕ್ಕೆ ಗುರುವಿನ ಹಂಗೇಕೆ? ಲಿಂಗದ ಪೂಜೆ ಏಕೆ?
ಸಮಯದ ಹಂಗೇಕೆ? ತನ್ನ ತಾನು ಅರಿದವಂಗೆ
ಏಣಾಂಕನ ಶರಣನ ಸಂಗವೇಕೆ?
ಇಷ್ಟವನರಿದವಂಗೆ ನಾನೇನು, ನೀನೇನು ಎಂಬ
ಗೊಜಡಿನ ಭ್ರಮೆಯೇಕೆ ಅಮುಗೇಶ್ವರಾ?
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-239/ವಚನ ಸಂಖ್ಯೆ-619)

ವಚನದಲ್ಲಿ ಬರುವ ಪಾರಿಭಾಷಿಕ ಶಬ್ದಗಳ ಅರ್ಥ:
ಏಣಾಂಕ: ಚಂದ್ರ, ಶಿವ.
ಗೊಜಡಿ: ಗೋಜು, ಗೊಂದಲ.

ಆತ್ಮದ ದರ್ಶನವೆಂದರೆ ತನ್ನ ಒಳಗಿನ ಅರಿವನ್ನು ತಾನು ತಿಳಿದುಕೊಳ್ಳವುದು.ಅರಿವು ಅದೊಂದು ಬೆಳಗು. ಶರಣ ಪುರದ ನಾಗಣ್ಣನವರು ಆತ್ಮದ ವಿಶೇಷಗಳಾಗಿರುವ ನಿರಾಳ, ಶೂನ್ಯ, ಬಯಲು ಇಂತಹ ಶಬ್ದಗಳಿಂದ ನಿರ್ವಚಿಸುತ್ತಾರೆ. ಆತ್ಮವು ನಿರಾಳವಾಗಿದೆ; ಅದು  ಶೂನ್ಯ ಸ್ವರೂಪವಾಗಿದೆ. ಆತ್ಮದ ಅನುಭವವೆಂದರೆ ಅದು ಪರಮ ಆನಂದದ ಅನುಭವ:

ಅನಿರ್ವಾಚ್ಯವೆ ವಾಚ್ಯವಾಗಿ ಭಾವಿಸಲಿಲ್ಲದ ಬಯಲು.
ಅಗಮ್ಯವೆ ಮನವಾಗಿ ಆನಂದದೊಳಿಪ್ಪ ನೋಡಾ
ಮಹಾಮಹಿಮ ಅಮರಗುಂಡದ ಮಲ್ಲಿಕಾರ್ಜುನ
ನಿರಾಳ ನಿಃಶೂನ್ಯವೆ ತನುವಾಗಿ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-2/ವಚನ ಸಂಖ್ಯೆ-2)

ಆತ್ಮದಲ್ಲಿ ಜ್ಯೋತಿಯಿದೆ; ಜ್ಯೋತಿಯ ಪ್ರಕಾಶದಂತೆ ಆತ್ಮವು ಸದಾ ಹೊಳೆಯುತ್ತಲಿರುತ್ತದೆ. ಅದುವೆ  ಅರಿವಿನ ಪ್ರಕಾಶ;

ಜ್ಯೋತಿ ನಾಲ್ಕರೊಳಗೆ ಆತ್ಮನೈದಾನೆ.
ಆತ್ಮನೊಳಗೆ ಸಾಕಾರನೈದಾನೆ.
ಸಾಕಾರದೊಳಗೆ ಸೂಕ್ಷ್ಮನೈದಾನೆ.
ಈಸುವನರಿದಾತಂಗೆ ಆ ಕಾಯ
ಕೆಡದೆಂದನಂಬಿಗರ ಚೌಡಯ್ಯ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-60/ವಚನ ಸಂಖ್ಯೆ-149)

ದಿಟ್ಟ ಗಣಾಚಾರಿ ಅಂಬಿಗರ ಚೌಡಯ್ಯ ಶರಣರು ಆತ್ಮಸಂಗಾತ ಕಾಯವು ಕೆಡದ ಕಾಯ. ಅದು ಪ್ರಸಾದ ಕಾಯ; ಪ್ರಸನ್ನ ಕಾಯ; ಅದು ಶಿವಸುಂದರವಾದ ಕಾಯ. ಅದರೊಳಗೆ ಆತ್ಮ ಜ್ಯೋತಿಯು ಬೆಳಗುತ್ತಲೇ ಇರುತ್ತದೆ ಎಂದಿರುವರು.

ಶರಣ ದಾಸೋಹದ ಸಂಗಣ್ಣನವರು ಮುತ್ತಿನ ನೀರು, ರತ್ನದ ಬೆಂಕಿ, ಕಾಮನಬಿಲ್ಲು; ಸಮುದ್ರದ ಹೊಳಪು ಇಂತಹ ಸುಂದರವಾದ ಉಮಪೆಗಳ ಆಧಾರದಿಂದ ಆತ್ಮದ ಸೌಂದರ್ಯವನ್ನು ತಿಳಿಸುತ್ತಾರೆ. ಇದು ಕೇವಲ ವಾಚ್ಯ ಮಾತ್ರ ಆತ್ಮದ ಸೌಂದರ್ಯವು ಶಂಭುವಿನಿಂದ ಅತ್ತತ್ತ ಎಂದು ಹೇಳುವ ಶರಣರು ಅದಕ್ಕೆ ಶಿವನಗಿಂತಲೂ ಹಿರಿದು ಸ್ಥಾನ ನೀಡುತ್ತಾರೆ:

ಮುತ್ತಿನ ನೀರಿನಂತೆ, ರತ್ನದ ಬೆಂಕಿಯಂತೆ,
ಸುರಚಾಪದಂತೆ, ಶರಧಿಯ ಹೊಳೆಯಂತೆ,
ವರವಳಿದ ಶಿಲಾಮೂರ್ತಿಯಂತೆ,
ದೃಷ್ಟವಿದ್ದು ನಷ್ಟವಪುದು ನಿಜ
ನಿಷ್ಠೆವಂತನ ಸಾವಧಾನದ ಸಂಬಂಧ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-399/ವಚನ ಸಂಖ್ಯೆ-1140)

ವಚನದಲ್ಲಿ ಬರುವ ಪಾರಿಭಾಷಿಕ ಶಬ್ದಗಳ ಅರ್ಥ:
ಸುರಚಾಪ: ಕಾಮನಬಿಲ್ಲು.
ಶರಧಿ: ಸಮುದ್ರ, ಕಡಲು.
ಅತಿಬಳ: ಶಿವ, ಬಲಶಾಲಿ, ಶಕ್ತಿಶಾಲಿ.

ದೇಹದೊಳಗಿರುವ ಆತ್ಮದ ಪರಿಯನ್ನು ಕುರಿತು ಹೇಳುತ್ತಲೇ ಶರಣ ಜೇಡರ ದಾಸಿಮಯ್ಯನವರು ಅದರ ಸೌಂದರ್ಯದ ಕಡೆಗೆ ಬೆರಳು ತೋರುತ್ತಾರೆ: ಅದು ಮರದ ಒಳಗೆ ಇರುವ ಮಂದ ಅಗ್ನಿಯಂತಿದೆ. ತುಪ್ಪದ ಕಂಪಿನಂತೆ ಇದೆ. ಮರವಿದೆ ಅದರೆ ಅದರ ಒಳಗಿರುವ ಅಗ್ನಿ ಕಾಣಲಾರದು. ಹಾಲಿದೆ ಅದರೊಳಗಿನ ಕಂಪಿನ ತುಪ್ಪವು ಕಾಣಲಾರದು. ಹಾಗೆಯೇ ದೇಹದೊಳಗಿನ ಆತ್ಮವು ಕಾಣಲಾರದು. ಅದರ ದರ್ಶನವು ಸುಂದರಕ್ಕೆ ಸುಂದರವಾಗಿದೆ:

ಮರನೊಳಗಣ ಮಂದಾಗ್ನಿಯ ಉರಿಯದಂತಿರಿಸಿದೆ
ನೊರೆವಾಲೊಳಗೆ ತುಪ್ಪದ ಕಂಪಿಲ್ಲದಂತಿರಿಸಿದೆ
ಶರೀರದೊಳತ್ಮನನಾರು ಕಾಣದಂತಿರಿಸಿದೆ
ನೀ ಬೆರಸುವ ಭೇದಕ್ಕೆ ಬೆರಗಾದೆನಯ್ಯಾ! ರಾಮನಾಥ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-291/ವಚನ ಸಂಖ್ಯೆ-841)

ಶರಣ ಆದಯ್ಯನವರು ಆತ್ಮಜ್ಯೋತಿಯೆಂದು ಹೇಳುವುದರ ಮೂಲಕ ಅದನ್ನೊಂದು ಬೆಳಕಿನ ರೂಪವಾಗಿ ಕಾಣುತ್ತಾರೆ:

ಅಂತರಂಗದ ಆತ್ಮಜ್ಯೋತಿ ಬಹಿರಂಗವ
ಮುಟ್ಟಿ ಮುಟ್ಟದು ನೋಡಾ‌.
ಓದುವಾದಿಂಗೆ ನಿಲುಕದು, ಶ್ರುತಿಸ್ಮೃತಿಗಳಿಗೆ
ಅಳವಡದು ನೋಡಯ್ಯಾ.
ಸೌರಾಷ್ಟ್ರ ಸೋಮೇಶ್ವರ ಲಿಂಗದ
ಅನುಸಂಧಾನದಲ್ಲಿ ನಿಂದುದು ನೋಡಾ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-280/ವಚನ ಸಂಖ್ಯೆ-774)

ದೇಹ, ಹೆಣ್ಣು, ಹೊನ್ನು, ಮಣ್ಣು ಇವುಗಳಿಗಿಂತಲೂ ಅತ್ಯಂತ ಸುಂದರವಾದದ್ದು ಆತ್ಮ. ಇವುಗಳನ್ನು ಹಿಡಿದರೆ ಆತ್ಮಸಾಧನೆ ಸಾಧ್ಯವಿಲ್ಲ. ಮೋಳಿಗೆಮಾರಯ್ಯ ಶರಣರು ಇದನ್ನು ಹೀಗೆ ಹೇಳುತ್ತಾರೆ:

ಮಣ್ಣು ದೇಹ, ಹೊನ್ನು ಪ್ರಾಣ, ಹೆಣ್ಣು ಸಕಲಪ್ರಪಂಚು.
ಈ ಮೂರರೊಳಗೆ ಒಂದು ಬಿಟ್ಟೊಂದ ಹಿಡಿದೆಹೆನೆಂದಡೆ,
ಹಿಂಗಲಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-733/ವಚನ ಸಂಖ್ಯೆ-2026)

ವಚನದಲ್ಲಿ ಬರುವ ಪಾರಿಭಾಷಿಕ ಶಬ್ದಗಳ ಅರ್ಥ:
ಪ್ರಪಂಚು: ಸಂಸಾರಸುಖದಲ್ಲಿ ಮುಳುಗಿರುವವನು.

ಬಸವಣ್ಣನವರು ಹಲವಾರು ವಚನಗಳ ಮೂಲಕ ಆತ್ಮ ಸೌಂದರ್ಯದ ಸ್ವರೂಪವನ್ನು ವಿವರಿಸಿದ್ದಾರೆ. ಅಂತರಂಗದಲ್ಲಿರುವ ಆತ್ಮವನ್ನು ಶುದ್ಧೀಕರಿಸಿಕೊಳ್ಳುವುದೇ ಅದರ ಸೌಂದರ್ಯೀಕರಣದ ಪರಿಯಾಗಿದೆ. ಅದನ್ನು ಬಿಟ್ಟು ಏನು ಮಾಡಿದರೂ ಪ್ರಯೋಜನವಿಲ್ಲ:

ಹುತ್ತವ ಬಡಿದಡೆ ಹಾವು ಸಾಯಬಲ್ಲುದೆ ಅಯ್ಯಾ?
ಅಘೋರ ತಪವ ಮಾಡಿದಡೇನು?
ಅಂತರಂಗ ಆತ್ಮ ಶುದ್ಧಿಯಿಲ್ಲದವರನೆಂತು ನಂಬುವನಯ್ಯಾ
ಕೂಡಲಸಂಗಮದೇವಾ?
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-34/ವಚನ ಸಂಖ್ಯೆ-117)

ಅರಿಷಡ್ವರ್ಗಾದಿಗಳನ್ನು ನಿವಾರಿಸಿಕೊಳ್ಳುವುದರಿಂದ ಆತ್ಮ ಸುಂದರವಾಗುತ್ತದೆ. ಅದು ನಡೆಯದಿದ್ದಲ್ಲಿ ಆತ್ಮವು ದರ್ಶನವಾಗುವುದಿಲ್ಲ.

ವಚನಕಾರರು ಆತ್ಮ ಸಾಧಕರಾಗಿದ್ದರು. ಆತ್ಮದ ಅಪೂರ್ವ ಸೌಂದರ್ಯವು ಅವರ ಅನುಭವಕ್ಕೆ ಬಂದಿತ್ತು. ಅನುಭವವು ಇಲ್ಲಿ ವಚನಗಳಾಗಿ ನಮಗೆ ದಕ್ಕಿವೆ. ತಮ್ಮಲ್ಲಿ ಆತ್ಮವಿರುವಂತೆ, ಜಗದ ಮಾನವರಲ್ಲೂ ಆತ್ಮವಿದೆ. ಅದರ ಉತ್ಥಾನವಾಗಬೇಕೆಂದು ಹಂಬಲಿಸಿದ ವಚನಕಾರರು ಅದರ ಸೌಂದರ್ಯ ದರ್ಶನಕ್ಕಾಗಿಯೇ ಬದುಕಿದರು. ಸಾಧ್ಯವಾದಷ್ಟನ್ನು ಸಾಧಿಸಿದರು.

ಈ ಲೇಖನದ ಉಪನ್ಯಾಸವನ್ನು ಈ ಲಿಂಕನಲ್ಲಿ ನೋಡಬಹುದು.

ಡಾ. ಎಮ್. ಮಕ್ತುಂಬಿ,
ಅಧ್ಯಕ್ಷರು,
ಶಬನಮ್‌ ಎಜ್ಯುಕೇಶನ್‌ ಮತ್ತು ಚಾರಿಟೇಬಲ್‌ ಟ್ರಸ್ಟ್‌ (ರಿ).
ಭಾಲ್ಕಿ, ಬೀದರ ಜಿಲ್ಲೆ.
ಮೋಬೈಲ್‌ ನಂ. 92420 56469

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನಸಾಹಿತ್ಯ ಮಂದಾರ ಫೌಂಡೇಶನ್ ದ ಸಂಚಾಲಕರನ್ನು ಸಂಪರ್ಕಿಸಬೇಕಾದ
    • ಮೋಬೈಲ್ ನಂ. 9741 357 132
    • e-Mail ID: info@vachanamandara.in / admin@vachanamandara.in

Loading

Leave a Reply