ವಚನಗಳಲ್ಲಿ ವೈಚಾರಿಕ ಪ್ರಜ್ಞೆ | ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ಭಕ್ತಿ ಸುಭಾಷೆಯ ನುಡಿಯ ನುಡಿವೆ,
ನುಡಿದಂತೆ ನಡೆವೆ,
ನಡೆಯೊಳಗೆ ನುಡಿಯ ಪೂರೈಸುವೆ,
ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕೈಯಲ್ಲಿ.
ಒಂದು ಜವೆ ಕೊರತೆಯಾದಡೆ
ಎನ್ನನದ್ದಿ ನೀನೆದ್ದು ಹೋಗು,
ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-115/ವಚನ ಸಂಖ್ಯೆ-441)

ವಚನಗಳಲ್ಲಿ ವೈಚಾರಿಕ ಪ್ರಜ್ಞೆ ಎನ್ನುವ ಶೀರ್ಷಿಕೆಯಲ್ಲಿ 2 ಶಬ್ದಗಳಿವೆ ಒಂದು “ವಚನ” ಮತ್ತೊಂದು “ವೈಚಾರಿಕತೆ”. ಇವೆರಡೂ ಶಬ್ದಗಳ ಅರ್ಥವನ್ನು ನೋಡಿಕೊಂಡು ಮುಂದೆ ಹೋಗೋಣ.

ವಚನಗಳ ಅರ್ಥ ಮತ್ತು ಸ್ವರೂಪ:
ಒಂದು ಭಾಷೆ, ಅದಕ್ಕೆ ಒಂದು ಲಿಪಿ, ಸಾಕ್ಷರತೆಯಿಂದ ಸಾಹಿತ್ಯ ರಚನೆ, ಸಾಹಿತ್ಯದೊಂದಿಗೆ ಅಕ್ಷರೀಕರಣ ಇವು ಸಮಾಜವನ್ನು ಅಥವಾ ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಸಮಷ್ಠಿಯನ್ನೂ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಪ್ರಭಾವಶಾಲಿಯಾಗಿ ಒಂದುಗೂಡಿಸುವ ಕೆಲಸವನ್ನು ಮಾಡುತ್ತದೆ. ಸಾಹಿತ್ಯ ಎನ್ನುವ ಜ್ಞಾನದೀಪ್ತಿ ಜನಾಂಗದಿಂದ ಜನಾಂಗಕ್ಕೆ ಅವಿಚ್ಛಿನ್ನವಾಗಿ ಹರಿಯುವ, ಜ್ಞಾನಗಂಗೆಯಂತೆ ಪ್ರವಹಿಸುವುದರ ಮೂಲಕ ಜನರನ್ನು ಸುಸಂಸ್ಕೃತರನ್ನಾಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಕನ್ನಡ ಸಾಹಿತ್ಯದ ಲೋಕದಲ್ಲಿ ವಚನ ಸಾಹಿತ್ಯದ ಆಂದೋಲನದಿಂದ ಒಂದು ಸುವರ್ಣ ಯುಗದ ಆರಂಭವಾಯಿತು ಎನ್ನಬಹುದು. ವಚನ ಚಳುವಳಿ ಜನಪರ ಸಾಹಿತ್ಯಕ್ಕೆ ಕನ್ನಡದವರು ಜಗತ್ತಿಗೆ ನೀಡಿದ ಬಹುದೊಡ್ಡ ಕೊಡುಗೆ. 11 ನೇ ಶತಮಾನದ ಅಂತ್ಯ ಭಾಗದಿಂದ ವಚನಾಂದೋಲನಕ್ಕೆ ಪ್ರೇರಣೆ ಮತ್ತು ಪ್ರಭಾವ ಬೀರಲು ಪ್ರಾರಂಭವಾಯಿತು ಎಂದು ಹೇಳಬಹುದು. ಕೊಂಡಗುಳಿ ಕೇಶಿರಾಜ, ಕೆಂಭಾವಿ ಭೋಗಣ್ಣ, ತೆಲುಗು ಬೊಮ್ಮಣ್ಣ, ಏಕಾಂತದ ರಾಮಿತಂದೆ, ಮಾದಾರ ಚೆನ್ನಯ್ಯ, ಜೇಡರ ದಾಸಿಮಯ್ಯ ಮುಂತಾದವರು ತಮ್ಮ ಅನುಭಾವದಿಂದ ರಚಿಸಿದ ವಚನಗಳು ಬಹಳವಾಗಿ ಸಮಾಜವನ್ನು ಆಕರ್ಷಿಸಿದವು. ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ಧಾರ್ಮಿಕ ಕ್ಷೇತ್ರಗಳನ್ನು ಏಕ ಕಾಲಕ್ಕೆ ವ್ಯಾಪಿಸಿದ ವಚನ ಸಾಹಿತ್ಯ ಅತ್ಯಂತ ಅಲ್ಪ ಸಮಯದಲ್ಲಿಯೇ ಉನ್ನತ ಸ್ಥಾನಕ್ಕೆ ಏರಿದ್ದು ಅಸಾಧಾರಣ, ಅಪ್ರತಿಮ ಮತು ಆಶ್ಚರ್ಯಕರವಾದದ್ದು. ಈ ವಚನ ಸಾಹಿತ್ಯಕ್ಕೆ ತನ್ನದೇ ಆದ ಅರ್ಥ ಮತ್ತು ಸ್ಪಷ್ಟ ನಿರೂಪಣೆ ಇದೆ. ರಾಜಾಶ್ರಯರಹಿತ ಸಾಹಿತ್ಯವೆನ್ನುವುದನ್ನು ನಾವು ಅರಿಯಬಹುದು.

ಕಿಟೆಲ್‌ ಶಬ್ದಕೋಶದಲ್ಲಿ ವಚನ ಎನ್ನುವ ಶಬ್ದಕ್ಕೆ Speaking, Uttering, Message, Promise ಎಂಬ ಅರ್ಥವನ್ನು ನೀಡುತ್ತದೆ. ನುಡಿದಂತೆ ನಡೆದ ಮತ್ತು ನಡೆದಂತೆ ನುಡಿದ ಶರಣರು ಮಾತಿಗೆ ತಪ್ಪುವವರಲ್ಲ ಎನ್ನುವ ಶಬ್ದಕ್ಕೆ ಲಿಂಗ ಸಾಕ್ಷಿಯಾಗಿ, ಕೂಡಲಸಂಗಮದೇವನ ಸಾಕ್ಷಿಯಾಗಿ ಎಂದು ಹೇಳುವ ಮೂಲಕ ವಚನ ಎನ್ನುವ ಶಬ್ದಕ್ಕೆ ದೈವತ್ವದ ಕಲ್ಪನೆಯನ್ನು ನೀಡತಾ ಹೋಗತಾರೆ. ಈ ಶಬ್ದ ನಡೆನುಡಿಗಳು ಒಂದಾದ ನೆಲೆ ಎನ್ನಬಹುದು. ವಚನ ಎನ್ನುವುದು ಪ್ರತಿಜ್ಞೆ, ಆತ್ಮಸಾಕ್ಷಿಯ ಮಾತು, ನಡೆದಂತೆ ನುಡಿದ ಪಥವಾಗಿದೆ.

ವಚನ ಸಾಹಿತ್ಯದ ಕೆಲವು ಪ್ರಮುಖ ಲಕ್ಷಣಗಳು: 

  • ಸಾಮಾಜಿಕ ವಿಮರ್ಶೆ: ವಚನಗಳು ಜಾತಿ ವ್ಯವಸ್ಥೆ, ಮೂಢನಂಬಿಕೆಗಳು ಮತ್ತು ಅಸಮಾನತೆಗಳಂತಹ ಸಾಮಾಜಿಕ ಸಮಸ್ಯೆಗಳನ್ನು ಪ್ರಶ್ನಿಸುತ್ತವೆ.
  • ಭಕ್ತಿ ಮತ್ತು ಆಧ್ಯಾತ್ಮಿಕತೆ: ವಚನಗಳು ಜ್ಞಾನ ಅಥವಾ ಅರಿವಿನಲ್ಲಿನ ಭಕ್ತಿಯನ್ನು ಮತ್ತು ಆಧ್ಯಾತ್ಮಿಕ ಅನುಭವಗಳನ್ನು ವ್ಯಕ್ತಪಡಿಸುತ್ತವೆ.
  • ವೈಯಕ್ತಿಕ ಅನುಭವಗಳು: ಎಲ್ಲ ವಚನಕಾರರು ವೈಯಕ್ತಿಕ ಅನುಭವಗಳು ಮತ್ತು ಆಂತರಿಕ ಜ್ಞಾನವನ್ನು ಹಂಚಿಕೊಂಡಿದ್ದಾರೆ.
  • ಶರಣ ಸಿದ್ಧಾಂತಗಳು: ವಚನಗಳು ಶರಣ ಸಿದ್ಧಾಂತಗಳಾದ ಪಂಚಾಚಾರ, ಷಟಸ್ಥಲ ಮತ್ತು ಅಷ್ಟಾವರಣಗಳನ್ನು ಪ್ರತಿಪಾದಿಸುತ್ತವೆ, ಈ ಎಲ್ಲ ಸಿದ್ಧಾಂತಗಳೂ ಕೂಡ ಸಮಾಜದಲ್ಲಿರುವ ಸಮಾನತೆಯನ್ನು ಪ್ರತಿಪಾದಿಸುತ್ತದೆ.

ಚೆನ್ನಬಸವಣ್ಣನವರ ಈ ವಚನದಲ್ಲಿ ವಚನದ ರಚನೆಯ ಬಗ್ಗೆ ತಿಳಿಸಿದ್ದಾರೆ:

ವಚನ ರಚನೆಯ ಅನುಭಾವವ ಬಲ್ಲೆವೆಂದೆಂಬರು
ವಚನವಾವುದು ರಚನೆ ಯಾವುದು?
ಅನುಭಾವವಾವುದು ಹೇಳಿರಣ್ಣಾ?
ವಚನ: ಆತ್ಮತುಷ್ಟಿಯನರಿವುದು.
ರಚನೆ: ಸ್ಥಾವರ ಲಿಂಗ ಜಂಗಮ ತ್ರಿವಿಧದಲ್ಲಿ ಕಾಣಬಲ್ಲರೇ,
ಅನುಭಾವ: ಕಾಮದಿಚ್ಛೆಗೆ ಹರಿದು
ಮದಮಚ್ಚರವಿಲ್ಲದಿರಬೇಕು,
ಆಸೆಯಾಮಿಷ ಹರುಷದಿಚ್ಛೆಗೆ
ಹರಿದು[ಯಾ]ಚಕನಾಗದಿರಬೇಕು.
ಕಾಮ ಕ್ರೋಧ ಲೋಭ ಮೋಹ
ಮದ ಮಚ್ಚರ ಆಶೆಯಾಮಿಷ
ರೋಷಾದಿಗಳಂ ಹರಿದೊದೆದು
ಏಕೋಗ್ರಾಹಿಯಾಗಿ ನಿಂದಲ್ಲೇ ಅನುಭಾವಿ.
ನಾಲ್ಕು ವೇದಶಾಸ್ತ್ರಂಗಳ ಬಲ್ಲೆವೆಂದು
ನುಡಿವಾತನನುಭಾವಿಯೆ? ಅಲ್ಲ,
ಅವು ಬ್ರಹ್ಮನೆಂಜಲು,
ಇವ ಬಲ್ಲೆವೆಂದು ನುಡಿವಾತನನುಭಾವಿಯೆ? ಅಲ್ಲ,
ಆತನು ಇದಿರ ನಂಬಿಸಿ ಉಂಬ ಭುಂಜಕನಯ್ಯಾ
ಕೂಡಲಚೆನ್ನಸಂಗಮದೇವಾ.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-217/ವಚನ ಸಂಖ್ಯೆ-526)

ವಚನದಲ್ಲಿ ಬರುವ ಪಾರಿಭಾಷಿಕ ಶಬ್ದಗಳ ಅರ್ಥ;
ಭುಂಜಕ: ತಿನಿಸುಬಾಕ, ಹೊಟ್ಟೆಬಾಕ.

ವಚನ, ರಚನೆ ಮತ್ತು ಅನುಭಾವ ಇವುಗಳ ಮೂರರ ತ್ರಿವೇಣಿ ಸಂಗಮವೇ ವಚನ ಎನ್ನುವ ಅರ್ಥ ನೀಡುತ್ತದೆ ಈ ವಚನ. ವಚನ ಸೃಷ್ಟಿ ಮತ್ತು ಕೇವಲ ಓದುವುದು ವಚನದ ಭಾಷ್ಯವಲ್ಲ. ಅದು ಆತ್ಮತೃಪ್ತಿ ಅಥವಾ ಆತ್ಮಸಾಕ್ಷಿ ಮತ್ತು ಲಿಂಗಸಾಕ್ಷಿಯಾಗಿ ನಡೆದಂತೆ ನುಡಿದಾಗ ಮಾತ್ರ ವಚನವಾಗುತ್ತದೆ ಮತ್ತು ಸಮಗ್ರ ಸಾಹಿತ್ಯವಾಗುತ್ತದೆ.

ದುಬೈ ಮತ್ತು ಚೈನೀಸ್‌ ತೈಪೆ ದೇಶದ ಪ್ರವಾಸ ಮಾಡಿದವರಿಗೆ ದುಬೈನ ಬುರ್ಜ್‌ ಖಲೀಫಾ ಮತ್ತು ತೈಪೆಯಲ್ಲಿನ ತೈಪೆ101ಎಂಬ ಎರಡು ಗಗನ ಚುಂಬಿ ಕಟ್ಟಡಗಳನ್ನು ನೋಡೇ ನೋಡಿರತಾರೆ. ನನಗೂ ಈ ಎರಡೂ ಗಗನ ಚುಂಬಿ ಕಟ್ಟಡಗಳನ್ನು ನೋಡುವ ಸೌಭಾಗ್ಯ ಹಲವು ಸಾರಿ ಬಂದಿದೆ. ಲಿಫ್ಟ್‌ನಲ್ಲಿ ಒಂದೊಂದೇ ಮಹಡಿಯನ್ನು ಏರೀ ತುತ್ತ ತುದಿಗೆ ಹೋದಾಗ ನಮಗೆ ಇಡೀ ನಗರದ ವಿಶಾಲ ದೃಶ್ಯ ಕಣ್ಣಿಗೆ ಕಟ್ಟಿ ಮನೋಲ್ಲಾಸ ಮತ್ತು ಏರಿದ ಎತ್ತರದ ಮಹತ್ವ ತಿಳಿಸಿ ಕೊಡುತ್ತದೆ.

ಹಾಗೆಯೇ ವಚನಕಾರರು ತಮ್ಮ ಮನಸ್ಸನ್ನು ಮತ್ತು ಅನುಭಾವದ ಅರಿವನ್ನು ಆ ಎತ್ತರಕ್ಕೆ ಕೊಂಡೊಯ್ದು ವಚನಗಳನ್ನು ರಚಿಸಿದ್ದಾರೆ ಮತ್ತು ಅದರ ಎತ್ತರವನ್ನು ಅರಿಯಬೇಕಾದರೆ ನಮ್ಮ ಅರಿವನ್ನು, ನಮ್ಮ ತಿಳುವಳಿಕೆಯನ್ನು ಆ ಮಟ್ಟಕ್ಕೆ ಅಥವಾ ಆ ಎತ್ತರಕ್ಕೆ ಕೊಂಡೊಯ್ದು ಅಧ್ಯಯನ ಮಾಡಿ ಅದರ ವಿಶ್ಲೇಷಣೆಯನ್ನು ಮಾಡಬೇಕಾಗುತ್ತದೆ. ಹಾಗಾದರೆ ವಚನಗಳು ಎಂದರೆ ಏನು ಅನ್ನೋದನ್ನ ಅವಿರಳಜ್ಞಾನಿ ಚೆನ್ನಬಸವಣ್ಣನವರು ತಮ್ಮ ಒಂದು ವಚನದಲ್ಲಿ ವಿವರಿಸಿದ್ದಾರೆ.

ಪಾತಾಳದಗ್ಘವಣಿಯ ನೇಣಿಲ್ಲದೇ ತೆಗೆಯಬಹುದೆ,
ಸೋಪಾನ ಬಲದಿಂದಲ್ಲದೆ?
ಶಬ್ದ ಸೋಪಾನವ ಕಟ್ಟಿ ನಡೆಯಿಸಿದರು ನಮ್ಮ ಪುರಾತರು,
ಶಬ್ದಸೋಪಾನದ ಬಲದಿಂದ
ನಿಃಶಬ್ದ ಸೋಪಾನವ ಕಟ್ಟಿ ನಡೆಯಿಸಿದರು
ನಮ್ಮ ಪುರಾತನರು
ದೇವಲೋಕಕ್ಕೆ ಬಟ್ಟೆ ಕಟ್ಟಿ ಕಾಣಿರೋ,
ಮರ್ತ್ಯರ ಮನದ ಮೈಲಿಗೆಯ ಕಳೆಯಲೆಂದು
ಗೀತಮಾತೆಂಬ ಜ್ಯೋತಿಯ ಬೆಳಗಿ ಕೊಟ್ಟರು,
ಕೂಡಲಚೆನ್ನಸಂಗನ ಶರಣರು.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-23/ವಚನ ಸಂಖ್ಯೆ-50)

ವಚನದಲ್ಲಿ ಬರುವ ಪಾರಿಭಾಷಿಕ ಶಬ್ದಗಳ ಅರ್ಥ;
ಅಗ್ಘವಣಿ: ನೀರು, ಉದಕ.
ಸೋಪಾನ: ಮೆಟ್ಟಿಲು.
ಬಟ್ಟೆ: ದಾರಿ.
ಮರ್ತ್ಯರು: ಮನುಷ್ಯರು, ಅಲ್ಪಜ್ಞಾನಿಗಳು.

ಶಬ್ದ ಸೋಪಾನವ ಕಟ್ಟಿ ಎಂಥಾ ಪದ ಪ್ರಯೋಗ ಅದು. ಭಾರೀ ಭಾರೀ ಪ್ರಯತ್ನ ಪಟ್ಟು, ಶಬ್ದಗಳನ್ನು ಹಿಂದ ಮುಂದ ಇಟ್ಟು ಮಾಡಿ ಅಳೆದೂ ಸುರಿದು ತೂಗಿ ನೋಡಿ ಬರದರ ಬರಲಾರದಂಥಾ ಸಾಹಿತ್ಯ ಚೆನ್ನಬಸವಣ್ಣನವರ ಲೇಖನಿಯಿಂದ ಹೊರಡತದ. ವಚನ ಸಾಹಿತ್ಯಕ್ಕೊಂದು ಭಾಷ್ಯ ಕೊಡತಾರೆ. ಭಾಳ ಸೂಕ್ಷ್ಮ ಮತ್ತು ಸುಂದರವಾದ ಭಾಷ್ಯ. 

ದೇವಲೋಕಕ್ಕೆ ಬಟ್ಟೆ (ದಾರಿ) ಕಟ್ಟಿ ಕಾಣಿರೋ, ಮರ್ತ್ಯರ ಮನದ ಮೈಲಿಗೆ ಕಳೆಯಲೆಂದು ಗೀತಮಾತೆಂಬ ಜ್ಯೋತಿಯ ಬೆಳಗಿ ಕೊಟ್ಟರು ಕೂಡಲಚೆನ್ನಸಂಗನ ಶರಣರು.

ಒಟ್ಟಾರೆ ಇಡೀ ವಚನದ ಸಾರಾಂಶ ಏನಂದರೆ, ಅದೊಂದು ನೀರು ಮತ್ತು ಅದೊಂದು ಬೆಳಕು. ವಚನ ಸಾಹಿತ್ಯ ಅಂದರೆ ಅಂತರಂಗದಲ್ಲಿರುವಂಥಾ ಶುದ್ಧವಾದ ನೀರನ್ನ ದೊರಕಿಸಿಕೊಳ್ಳುವುದಕ್ಕೆ ಉಳಿದಂಥಾ ಸಾಧಕರಿಗೆ ಸಹಾಯ ಮಾಡುವ ಸಲುವಾಗಿ ಮಾಡಿದಂಥಾ ಒಂದು ಸಾಧನ. ಭಾವಿಯಿಂದ ನಾವು ನೀರು ತೆಗೆಯಬೇಕೆಂದರೆ ಹಗ್ಗ ಬಳಸಿ ನೀರನ್ನು ತೆಗೆಯಬೇಕು ಅಥವಾ ಮೆಟ್ಟಲಿನಿಂದ ಕೆಳಗಿಳಿದು ನೀರು ತೆಗೆಯಬೇಕು. ಹಾಗೆಯೇ ಪ್ರತಿಯೊಬ್ಬ ಮನುಷ್ಯನ ಅಂತರಂಗದಲ್ಲಿ ಜ್ಞಾನವೆಂಬ ಜಲ ಇರುತ್ತದೆ. ಆ ಜಲವನ್ನ ತಗೀಬೇಕಾದರೆ ನಮಗ ಶಬ್ದ ಸೋಪಾನದ ಅವಶ್ಯಕತೆ ಇದೆ ಅನ್ನುವಂಥಾ ಮಾತನ್ನ ಹೇಳಿ ಚೆನ್ನಬಸವಣ್ಣನವರು ಪ್ರತಿಯೊಬ್ಬ ಮಾನವನ ಮನದ ಮೈಲಿಗೆಯನ್ನು ಕಳೆಯುವಂಥಾ ಸಾಹಿತ್ಯ ಇದು ಅಂತಾ ಹೇಳತಾರೆ.

Pre-Classic ಯುಗದಿಂದಲೂ ಅಂದರೆ 3/4/5 ನೇ ಶತಮಾನದಿಂದಲೂ ಭಕ್ತ ಮತ್ತು ಭಗವಂತನ ನಡುವಿನ ಸಂಬಂಧವನ್ನು ಕಂಡುಕೊಳ್ಳಲು ಸಂಸ್ಕೃತವನ್ನೇ ಅಪ್ಪಿಕೊಳ್ಳಲಾಗಿತ್ತು ಮತ್ತು ಬಳಸಿಕೊಂಡು, ಆಡಿಕೊಂಡು ಬರಲಾಗಿತ್ತು. ಭಾರತದ ಬಹುತೇಕ ಭಾಷೆಗಳು ಸಂಸ್ಕೃತದಿಂದ ಉದಯಿಸಿದ್ದವಾಗಿದ್ದಂಥವು. ಕನ್ನಡ ಭಾಷೆ ಮತ್ತು ಭಾಷಿಕರೂ ಕೂಡ ಸಂಸ್ಕೃತ ಭಾಷೆಯನ್ನು ಅವಲಂಬಿಸಿದ್ದ ಕಾಲವದು. ಇಂಥ ಸಂಸ್ಕೃತಮಯವಾಗಿದ್ದ ಕಾಲಘಟ್ಟದಲ್ಲಿ ಕನ್ನಡ ಭಾಷೆಯ ಹಿರಿಮೆ ಗರಿಮೆಗಳನ್ನು ಬೆಳೆಸಿ ಹೆಚ್ಚಿಸಿದ್ದು ಬಸವಾದಿ ಶರಣರು ಹಾಗೂ ಈ ಅವಲಂಬನೆಯನ್ನು ಛಿದ್ರಗೊಳಿಸಿದ್ದು 12 ನೇ ಶತಮಾನದ ವಚನ ಚಳುವಳಿ. ನಿರಾಕಾರ ಶಿವನ ಸಾಕ್ಷಾತ್ಕಾರ ಮಾಡಿಕೊಳ್ಳಲು ನನ್ನ ಮಾತೃಭಾಷೆಯಾದ ಕನ್ನಡದಲ್ಲಿಯೇ ಸಾಧ್ಯವಿದೆ ಅನ್ನುವುದನ್ನು ಇಡೀ ಜಗತ್ತಿಗೆ ತಿಳಿಸಿಕೊಟ್ಟವರು ಬಸವಾದಿ ಶರಣ ವಚನಕಾರರು. ಆ ಕಾಲಘಟ್ಟದಲ್ಲಿನ ಸಂಘರ್ಷಮಯ ಶ್ರೇಣೀಕೃತ ಸಮಾಜದಲ್ಲಿ ಇದು ಸಣ್ಣ ವಿಷಯವೇನಲ್ಲಾ. “ದೇವರಿಗೇ ಕನ್ನಡ ಕಲಿಸಿದವರು ವಚನಕಾರರು, ನಂಬಿ ಕರೆದರೆ ಓ ಎಂಬನೇ ಶಿವನು” ಅಂತಾ ಕನ್ನಡದಲ್ಲಿಯೇ ಹೇಳತಾರೆ. ಹಾಗಾಗಿ ಎಲ್ಲ ವಚನಕಾರರ ದೇವರಿಗೆ ಕನ್ನಡ ಬರುತ್ತಿತ್ತು. ದೇವರಿಗೂ ತಮ್ಮ ಮಾತೃಭಾಷೆಯಾದ ಕನ್ನಡವನ್ನು ಕಲಿಸಿ ದೇವರನ್ನೂ ತಮ್ಮ ಮಾತೃಭಾಷೆಯಾದ ಕನ್ನಡದಲ್ಲಿಯೇ ಮಾತನಾಡಿಸಿದವರು ವಚನಕಾರರು. ಇದು ನಮಗೆ ಇವತ್ತಿಗೂ ಮಾದರಿ.

ಕನ್ನಡದಲ್ಲಿಯೇ ಚಿಂತನೆ ಮಾಡಿ ಬದುಕನ್ನು ಹಸನು ಮಾಡಿಕೊಂಡವರು ವಚನಕಾರರು. ಇದು ಸಂಸ್ಕೃತ ಭಾಷೆಯ ಹಿಡಿತದಿಂದ ಕನ್ನಡವು ಹೊರಬರುವ ಮತ್ತು ಪಾರಾಗುವ ಪ್ರಕ್ರಿಯೆಯ ಮೊದಲ ಘಟ್ಟ. ಪ್ರಾದೇಶಿಕವಾಗಿ ಹರಿದು ಹಂಚಿ ಹೋಗಿದ್ದ ಕನ್ನಡ ಪ್ರದೇಶಗಳ ಸನ್ನಿವೇಶವನ್ನು ಬದಲಿಸಿ ಒಟ್ಟುಗೂಡಿಸಿದ್ದು ವಚನ ಚಳುವಳಿ. ವಚನಕಾರರು 12 ನೇ ಶತಮಾನದಲ್ಲಿ ಕನ್ನಡದಲ್ಲಿಯೇ ವಚನಗಳನ್ನು ರಚಿಸಿದೇ ಹೋಗಿದ್ದರೆ ಬಹುಶಃ ಕನ್ನಡ ನಶಿಸಿ ಹೋಗುತ್ತಿತ್ತೋ ಏನೋ.

ಕಳೆದ 30/35 ವರ್ಷಗಳ ನನ್ನ ವಚನ ಸಾಹಿತ್ಯದ ಅಧ್ಯಯನದಲ್ಲಿ ಕಂಡುಕೊಂಡ ಸತ್ಯ ಅಂದರೆ ವಚನ ಬೇರೆ ಅಲ್ಲ ವಾಸ್ತವತೆ ಬೇರೆ ಅಲ್ಲ ವಚನಕ್ಕೆ ಸರಿಯಾಗಿ ನಿರ್ವಚನ ಆಗಿ ಅದು ಕಾಲ ಕಾಲಕ್ಕೆ ಪಚನಗೊಳ್ಳತಾನೆ ಇದೆ.

  • ಓದಿದಷ್ಟೂ ಓದಿಸಿಕೊಳ್ಳುವ,
  • ಬರೆದಷ್ಟೂ ಬರೆಸಿಕೊಳ್ಳುವ,
  • ಚಿಂತಿಸಿದಷ್ಟೂ ಚಿಂತನೆಗೆ ಹಚ್ಚಿಸುವ,
  • ವಿವರಿಸಿದಷ್ಟೂ ವಿಹಂಗಮ ನೋಟಕ್ಕೆ ಎಡೆ ಮಾಡಿಕೊಳ್ಳುವ,

ಯೋಗ ಮತ್ತು ಯೋಗ್ಯತೆ ವಚನ ಸಾಹಿತ್ಯಕ್ಕೆ ಇದೆ.

  • ಕಾಲವಾಗಿ 12 ನೇ ಶತಮಾನ.
  • ಪುಣ್ಯಕ್ಷೇತ್ರವಾಗಿ ಕಲ್ಯಾಣ.
  • ರಾಜನಾಗಿ ಬಿಜ್ಜಳ.
  • ವ್ಯಕ್ತಿಯಾಗಿ ಬಸವಣ್ಣ.
  • ಭಾಷೆಯಾಗಿ ಕನ್ನಡ.
  • ವಿದ್ಯಮಾನವಾಗಿ ವಚನ ಚಳುವಳಿ.
  • ಶಕ್ತಿಯಾಗಿ ವಚನಗಳು.
  • ಭಾವನೆಯಾಗಿ ಅನುಭವ.
  • ಅಭಿವ್ಯಕ್ತಿಯಾಗಿ ಅನುಭಾವ.

ಹೀಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಜಾತಿ-ಜನಾಂಗವನ್ನೂ ಮೀರಿದ ಒಂದು ಸಾಹಿತ್ಯವೆಂದರೆ ಅದು ವಚನ ಸಾಹಿತ್ಯ. ಅದಕ್ಕಾಗಿಯೇ ಸರಿ ಸುಮಾರು 900 ವರ್ಷಗಳಾದರೂ ಇಂದಿಗೂ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಮತ್ತು ಗೌರವದಿಂದ ವಚನ ಸಾಹಿತ್ಯವನ್ನು ನಾವು ಆರಾಧಿಸುತ್ತೇವೆ. ಗೋಪಾಲ ಕೃಷ್ಣ ಅಡಿಗರು ಹೇಳುವ ಹಾಗೆ:

ಹೊಸ ನೆತ್ತರು ಉಕ್ಕಿ ಉಕ್ಕಿ ಆರಿ ಹೋಗುವ ಮುನ್ನ
ಹರೆಯದೀ ಮಾಂತ್ರಿಕನ ಮಾಟ ಮುಸುಳುವ ಮುನ್ನ
ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ
ಈ ಕ್ಷುಬ್ದ ಸಾಗರವು ಬತ್ತಿ ಹೋಗುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು

ಹೀಗೆ ವಚನಕಾರರು ತಮ್ಮ ರಕ್ತ ಆರಿ ಹೋಗುವ ಮುನ್ನ ಹೊಸ ನಾಡನ್ನು ಕಟ್ಟಿದ್ದಾರೆ. ಈ ಕನ್ನಡ ನಾಡಿನಲ್ಲಿ ಅವರ ರಕ್ತ ಇನ್ನೂ ಆರಿ ಹೋಗಿಲ್ಲ ಎನ್ನುವುದಕ್ಕೆ ಇಡೀ ವರ್ಷಪೂರ್ತಿಯಾಗಿ ನಡೆಯುವ ಕನ್ನಡ ನಾಡು-ನುಡಿಯ ಉತ್ಸವಗಳು ಸಾಕ್ಷೀಭೂತವಾಗಿವೆ.

ಈ ಸಂದರ್ಭ ನೆನಪ ಆದ ಕೂಡಲೇ ಮತ್ತೆ ಮತ್ತೆ ನನಗೆ ನೆನಪಾಗೋದು ಗಿರೀಶ ಕಾರ್ನಾಡ್‌ ಅವರ ಒಂದು ಮಾತು. ತುಂಬಾ ಜನಜನಿತವಾದ ಮಾತು. ಬಹಳ ಜನ ಹೇಳತಾರೆ. ನಾನಂತೂ ಅದನ್ನು ಮತ್ತೆ ಮತ್ತೆ ಹೇಳತೇನೆ. ಯಾಕಂದರೆ ಆ ಮಾತಿಗೆ ಸಾರ್ವಕಾಲಿಕ ಪ್ರಸ್ತುತತೆ ಇದೆ ಅನ್ನುವ ಅರ್ಥದಲ್ಲಿ. ಅವರು ತಮ್ಮ ತಲೆದಂಡ ನಾಟಕದ ಲೇಖಕನ ನುಡಿಯಲ್ಲಿ ಬರೀತಾರೆ:

“ನೋಯುವ ಹಲ್ಲಿಗೆ ನಾಲಗೆ ಮತ್ತೆ ಮತ್ತೆ ಹೊರಳುವಂತೆ ಪ್ರತಿಯೊಬ್ಬ ಕನ್ನಡಿಗ ಮತ್ತೆ ಮತ್ತೆ 12 ನೇ ಶತಮಾನದ ಬೆರಗುಗೊಳಿಸುವ ಪ್ರತಿಭೆಗೆ, ಆ ಉತ್ಸಾಹಕ್ಕೆ, ಮೌಲಿಕ ಪ್ರಶ್ನೆಗಳನ್ನು ಕೇಳುವ ಎದೆಗಾರಿಕೆಗೆ, ಗೆಲುವಿಗೆ, ನೋವಿಗೆ ಮರಳುವದು ಮತ್ತು ಅದನ್ನು ಹೊಸ ಸಂದರ್ಭದಲ್ಲಿ ಅರ್ಥೈಸಲು ಯತ್ನಿಸುವುದು ಅನಿವಾರ್ಯ”.

ಯಾವಾಗ್ಯಾವಾಗ ನಮ್ಮ ಮನಸ್ಸಿಗೆ ನೋವಾಗತದೆಯೋ, ಇಲ್ಲಿ ಹಲ್ಲನ್ನು ಪ್ರಾತಿನಿಧಿಕವಾಗಿ ಹೇಳತಾರೆ ಒಂದು ರೂಪಕದ ಅರ್ಥದಲ್ಲಿ. ಈ ಹಲ್ಲು ನೋವಾಗತಿದ್ದಂಗೆ ನಮಗೆ ಗೊತ್ತಿಲ್ಲದ ಹಾಗೆ ಅಪ್ರಜ್ಞಾಪೂರ್ವಕವಾಗಿ ನಮ್ಮ ನಾಲಿಗೆ ಹಲ್ಲಿನ ಹತ್ತಿರ ಹೋಗಿ ಅಪ್ಪ ನಾನಿದ್ದೀನಿ ನಿನ್ನ ಜೊತೆಗೆ ನಾನು ನಿನ್ನ ನೋವನ್ನು ಮಾಯಿಸತೇನೆ ಅಂತ ಹೇಳಿ ಅದರ ಹತ್ತಿರ ಹೋಗಿ ಒಂದಿಷ್ಟು ಸಾಂತ್ವನ ಹೇಳತದಲ್ಲಾ ಹಾಗೆ ವಚನ ಸಾಹಿತ್ಯ, ವಚನ ಕ್ರಾಂತಿ ಅನ್ನೋದು, ಶರಣರ ಮಾತುಗಳೆಲ್ಲವೂ ಯಾವ ಸಂದರ್ಭದಲ್ಲಿ ನಮ್ಮ ಮನಸ್ಸುಗಳಿಗೆ, ನಮ್ಮ ಸಮಾಜಕ್ಕೆ ನೋವಾಗತದೆ ಅಂಥ ಸಂದರ್ಭದಲ್ಲಿ ಆ ವಚನಗಳು ಒಂದು ರೀತಿಯ ಮುಲಾಮಿನ ರೀತಿಯಲ್ಲಿ ಕೆಲಸ ಮಾಡತಾವೆ. ಮಾರ್ಗ ತೋರಿಸತಾವೆ. ಮಾಯಿಸಲಿಕ್ಕೆ ಅಷ್ಟೇ ಅಲ್ಲಾ ಮುಂದಿನ ಮುಂಗಾಣಿಕೆಯನ್ನೂ ಕೊಡಲಿಕ್ಕೆ ಅನ್ನೋ ಅರ್ಥದಲ್ಲಿ ಈ ಮಾತನ್ನು ಗಮನಿಸಬೇಕು.

ವಚನ ಸಾಹಿತ್ಯದ ಇತಿಹಾಸ ಅಥವಾ ವಚನ ಸಾಹಿತ್ಯ ಹುಟ್ಟಿದ್ದು ಹೇಗೆ ಅಂತ ವ್ಯಕ್ತಿ ಸ್ವಾತಂತ್ರ್ಯದ ಮೂರ್ತಿರೂಪ, ವೈರಾಗ್ಯಮೂರ್ತಿ ಅಕ್ಕ ಮಹಾದೇವಿಯ ಒಂದು ವಚನ ನಿರೂಪಣೆ ಮಾಡತದ.

ಮರ ಮರ ಮಥನಿಸಿ ಕಿಚ್ಚು ಹುಟ್ಟಿ
ಸುತ್ತಣ ತರುಮರಾದಿಗಳ ಸುಡಲಾಯಿತ್ತು.
ಆತ್ಮ ಆತ್ಮ ಮಥನಿಸಿ ಅನುಭಾವ ಹುಟ್ಟಿ
ಹೊದ್ದಿರ್ದ ತನುಗುಣಾದಿಗಳ ಸುಡಲಾಯಿತ್ತು.
ಇಂತಪ್ಪ ಅನುಭಾವರ ಅನುಭಾವವ ತೋರಿ
ಎನ್ನೊಡಲನುಳುಹಿಕೊಳ್ಳಾ ಚೆನ್ನಮಲ್ಲಿಕಾರ್ಜುನ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-114/ವಚನ ಸಂಖ್ಯೆ-324)

ಈ ವಚನದಲ್ಲಿ ಬರುವ ಪಾರಿಭಾಷಿಕ ಶಬ್ದಗಳ ಅರ್ಥ:
ಮಥನಿಸಿ: ಘರ್ಷಣೆ.

ಮರ ಮರಗಳು ಒಂದಕ್ಕೊಂದು ತಿಕ್ಕಿದಾಗ ಅಗ್ನಿ ಹುಟ್ಟಿ ಕಾಳ್ಗಿಚಾಗಿ ಪರಿವರ್ತನೆ ಆಗತದ. ಹಾಗೆಯೇ ಅನುಭಾವಿಗಳು ತಮ್ಮ ತಮ್ಮ ನಡುವಿನ ಜ್ಞಾನದಿಂದ ಸಂಘರ್ಷವನ್ನು ಏರ್ಪಡಿಸಿ ಜ್ಞಾನಾಗ್ನಿಯ ಜನನಕ್ಕೆ ಕಾರಣರಾಗತಾರೆ. ಅದರ ಪರಿಣಾಮ ಅಂದರೆ ಅದನ್ನ ಕೇಳಿದಂಥಾ ಸಾವಿರಾರು ಜನರ ಅಜ್ಞಾನ ಹರಿದು ಜ್ಞಾನ ಮೂಡುತ್ತದೆ. ಎಂಥಾ ಅದ್ಭುತ ಸಾಹಿತ್ಯ. ಹಾಗಾದರೆ ವಚನಕಾರರು ಎಷ್ಟು ವಚನಗಳನ್ನು ಬರೆದಿರಬಹುದೆನ್ನುವದಕ್ಕೆ ಸಿದ್ಧರಾಮೇಶ್ವರರ ಈ ವಚನ ಒಂದು ಸಾಕ್ಷಿಯಾಗಬಹುದು.

ಅಲ್ಲಯ್ಯಗಳ ವಚನ ಎರಡೆಂಬತ್ತು ಕೋಟಿ.
ಅಪ್ಪಯ್ಯಗಳ ವಚನ ನಾಲ್ಕು ಲಕ್ಷದ ಮೂವತ್ತಾರು ಸಾಸಿರ.
ಎಮ್ಮಯ್ಯಗಳ ವಚನ ವಚನಕ್ಕೊಂದು.
ನೀಲಮ್ಮನ ವಚನ ಲಕ್ಷದ ಹನ್ನೊಂದು ಸಾಸಿರ.
ಗಂಗಾಂಬಿಕೆಯ ವಚನ ಲಕ್ಷದ ಎಂಟು ಸಾಸಿರ.
ಎಮ್ಮಕ್ಕ ನಾಗಾಯಿಯ ವಚನ
ಮೂರುಲಕ್ಷದ ತೊಂಬತ್ತಾರು ಸಾಸಿರ.
ಮಡಿವಾಳಣ್ಣನ ವಚನ ಮೂರು ಕೋಟಿಮುನ್ನೂರು.
ಹಡಪದಯ್ಯಗಳ ವಚನ ಹನ್ನೊಂದು ಸಾಸಿರ.
ಮರುಳಸಿದ್ಧನ ವಚನ ಅರುವತ್ತೆಂಟು ಸಾಸಿರ.
ಇಂತಪ್ಪ ವಚನದ ರಚನೆಯ ಬಿಟ್ಟು,
ಹುಡಿಮಣ್ಣ ಹೊಯ್ಯದೆ ಮಾಬನೆ,
ಕುತ್ಸಿತ ಕಾವ್ಯಾಲಂಕಾರ ನೋಡುವರ ನೋಡಿ,
ಮಹಾದೇವ ಕಪಿಲಸಿದ್ಧಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-493/ವಚನ ಸಂಖ್ಯೆ-1587)

ಈ ವಚನದಲ್ಲಿ ಬರುವ ಪಾರಿಭಾಷಿಕ ಶಬ್ದಗಳ ಅರ್ಥ:
ಸಾಸಿರ: ಸಾವಿರ.
ಮಾಬನೆ: ಬಿಡುವನೆ.
ಕುತ್ಸಿತ: ಕೆಟ್ಟ ಬುದ್ಧಿ, ಅಹಂಕಾರ.

ವಚನದಲ್ಲಿ ನಿರೂಪಿಸಿದಂತೆ ಲಕ್ಷಕೋಟಿ ಲೆಕ್ಕದಲ್ಲಿ ವಚನ ಸಾಹಿತ್ಯ ರಚನೆಯಾಗಿದೆ ಎಂದು ತಿಳಿದರೂ, ಬಸವಾದಿ ಶರಣರ ಕಾಲಘಟ್ಟದಲ್ಲಿ ವಿಪುಲವಾದ ವಚನ ಸಾಹಿತ್ಯ ರಚನೆಯಾಗಿದೆ ಎನ್ನಬಹುದು. ಒಟ್ಟಾರೆ ಈ ವಚನ ಸಾಹಿತ್ಯ ಅಂದಿನ ಕಾಲಘಟ್ಟದ ಧಾರ್ಮಿಕ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಂಘರ್ಷಗಳ ನಡುವೆ ಪ್ರಾರಂಭವಾಗಿ ಚಳುವಳಿಯ ರೂಪ ಪಡೆದುಕೊಂಡಿತು. ಇದು ಜನರ ಮನಸ್ಸಿನ ಮೈಲಿಗೆಯನ್ನು ಕಳೆಯುವಂಥಾ ಸಾಹಿತ್ಯ ಜೊತೆಗೆ ಅಜ್ಞಾನವನ್ನು ಕಳೆಯುವ ಸಲುವಾಗಿ ಸೃಷ್ಠಿಯಾದಂಥಾ ಸಾಹಿತ್ಯವೇ ಹೊರತು ಉಳಿದ ಯಾವ ಉದ್ದೇಶಗಳಿಗೂ ಸೃಷ್ಠಿಯಾದದ್ದಲ್ಲಾ. ಬಸವಾದಿ ಶರಣರು ಬದುಕಿದ ಕಾಲಘಟ್ಟದ ಸನ್ನಿವೇಶಗಳು ಮತ್ತು ಸಂಘರ್ಷದ ವಾತಾವರಣದಲ್ಲಿ ಅತ್ಯಂತ ಉತ್ಕೃಷ್ಟ ಸಾಹಿತ್ಯ ನಿರ್ಮಾಣ ಮಾಡಿದ್ದಾರೆ.

ಇಂಥಾ ಒಂದು ವಚನ ಸಾಹಿತ್ಯ ಸರಿ ಸುಮಾರು 900 ವರ್ಷಗಳ ಹಿಂದೆ ಹುಟ್ಟಿತು. ನೂರಾರು ಶರಣರು ವಚನಕಾರರು ಇದಕ್ಕೆ ಉತ್ಕೃಷ್ಠ ಕೊಡುಗೆಯನ್ನು ನೀಡಿದ್ದಾರೆ. ಇಂಥ ವಚನ ಸಾಹಿತ್ಯದ ಮೂಲ ಉದ್ದೇಶ ಇಹಪರವನ್ನು ಬೆಸೆಯುವ ಶಿವನ ಪ್ರಕಾಶ ಮತ್ತು ಅಂತರಂಗವನ್ನು ಅರಳಿಸುವ ಬೆಳಕು.

ವೈಚಾರಿಕತೆಯ ಅರ್ಥ ಮತ್ತು ಸ್ವರೂಪ:
ವೈಚಾರಿಕತೆ ಎಂಬ ಶಬ್ದವು ಇಂಗ್ಲೀಷಿನ Rational ಪದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ ಬಳಸುವ ಶಬ್ದ. ಲ್ಯಾಟಿನ್‌ ಭಾಷೆಯ Ratio ಎಂಬ ಶಬ್ದದಿಂದ ಉತ್ಪತ್ತಿಯಾದದ್ದು. ಮೂಲಭೂತವಾಗಿ ವೈಚಾರಿಕತೆ ಎನ್ನುವಂಥದ್ದು ವಾಸ್ತವಿಕ ಮತ್ತು ವೈಜ್ಞಾನಿಕ ವಿಚಾರಗಳನ್ನು ಪುರಸ್ಕರಿಸುವ ಶಬ್ದಗಳಾಗಿವೆ. ವೈಚಾರಿಕತೆ ಎಂದರೆ ತರ್ಕದಿಂದ, ಪುರಾವೆಗಳಿಂದ ಮತ್ತು ವಿವೇಚನೆಯಿಂದ ನಿರ್ಣಯಿಸುವ ದೃಷ್ಟಿಕೋಣ.

  • ತರ್ಕ: Logical, ವಿಚಾರಪೂರ್ಣ, ಅರ್ಥಪೂರ್ಣ ಆಲೋಚನಾ ಸಾಮರ್ಥ್ಯ.
  • ಪುರಾವೆ: Evidence, Proof.
  • ವಿವೇಚನೆ: Judgemental, ಯಾವುದು ಸರಿ ಯಾವುದು ತಪ್ಪು ಎನ್ನುವ ನಿರ್ಧಾರ.

ವೈಚಾರಿಕ ಪ್ರಜ್ಞೆಗೆ ಮೂಲಭೂತವಾಗಿ ಬೇಕಾದದ್ದು ಜ್ಞಾನ ಅಂರೆ Knowledge. ಹಲವಾರು ಜನ ಈ ವೈಚಾರಿಕತೆಯನ್ನು ಅನುಭವಕ್ಕೆ ತಪ್ಪಾಗಿ ಹೋಲಿಸುತ್ತಾರೆ. ಆದರೆ ಮೂಲಭೂತವಾಗಿ ವೈಚಾರಿಕತೆಗೆ ಅನುಭವಕ್ಕಿಂತ ಹೆಚ್ಚಾಗಿ ಕಾರಣ (Reasoning) ಮತ್ತು ಬುದ್ಧಿಶಕ್ತಿ (Knowledge) ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಅನುಭವ ಎಂದರೆ ಯಾವುದನ್ನಾದರೂ ಓದುವುದಕ್ಕಿಂತ, ಅದನ್ನು ಸ್ವತಃ ಮಾಡುವುದರಿಂದ ಬರುವ ತಿಳುವಳಿಕೆ. ಅನುಭವಿಸುವುದರಿಂದ ಪಡೆದ ಪ್ರಾಯೋಗಿಕ ಜ್ಞಾನ (Practical Knowledge/e. g; Swimming-Cycling).

ಅಮೇರಿಕಾದ ಪ್ರಖ್ಯಾತ ತತ್ವಜ್ಞಾನಿ ವಿಲಿಯಮ್‌ ಕ್ಲಾಸ್‌ ಫ್ರಾಂಕೆನಾ (June 21, 1908 – Oct 22, 1994) ಅವರು ವೈಚಾರಿಕತೆಯ ಪ್ರಮುಖ ಅಂಶಗಳನ್ನು ಗುರುತಿಸಿದ್ದಾನೆ:

  • ತಾರ್ಕಿಕ ಆಲೋಚನೆ (Logical Reasoning): ಯಾವುದೇ ವಿಷಯವನ್ನು ಕುರುಡಾಗಿ ನಂಬದೆ, “ಏಕೆ”, “ಹೇಗೆ” (Why-Why Analysis) ಎಂದು ಪ್ರಶ್ನಿಸಿ ತರ್ಕದ ಮೂಲಕ ಸತ್ಯವನ್ನು ಅರಿಯುವುದು.
  • ಪುರಾವೆ ಆಧಾರಿತ (Evidence, Proof): ಕೇವಲ ನಂಬಿಕೆಗಳಿಗಿಂತ ಹೆಚ್ಚಾಗಿ ಸಾಕ್ಷ್ಯಾಧಾರಗಳು ಮತ್ತು ಪ್ರಾಯೋಗಿಕ ಜ್ಞಾನಕ್ಕೆ ಒತ್ತು ನೀಡುವುದು.
  • ಮುಕ್ತ ಮನೋಭಾವ (Open Mindedness): ಹೊಸ ಪುರಾವೆಗಳು ಲಭ್ಯವಾದಾಗ, ಹಳೆಯ ನಂಬಿಕೆಗಳನ್ನು ಬದಲಾಯಿಸಿಕೊಳ್ಳುವ ಹೊಂದಾಣಿಕೆ.

ಇದಿಷ್ಟು ವಚನ ಮತ್ತು ವೈಚಾರಿಕತೆಯ ವ್ಯಾಖ್ಯಾನಗಳು. ಮುಂದುವರೆದು ವಚನಗಳಲ್ಲಿ ಈ ವೈಚಾರಿಕ ಚಿಂತನೆ ಹೇಗೆ ಬಳಕೆಯಾಗಿದೆ ಎನ್ನುವುದನ್ನು ಪರಿಶೀಲಿಸೊಣ.

12 ನೇ ಶತಮಾನದ ವಚನ ಸಾಹಿತ್ಯವು ಕೇವಲ ಭಕ್ತಿ ಮಾರ್ಗವಲ್ಲ, ಬದಲಾಗಿ ಮೌಢ್ಯ, ಲಿಂಗ ಮತ್ತು ಜಾತಿ ಅಸಮಾನತೆಯನ್ನು ಪ್ರಶ್ನಿಸಿದ ಮಹಾನ್ ವೈಚಾರಿಕ ಕ್ರಾಂತಿಯಾಗಿದೆ. ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಮೊದಲಾದ ಶರಣರು ಅನುಭವ, ಮತ್ತು ಅರಿವಿನ ಆಧಾರದ ಮೇಲೆ ಸಮಾಜವನ್ನು ವಿಶ್ಲೇಷಿಸಿ, ಆಚಾರವೇ ಲಿಂಗವೆಂದು ಸಾರುವ ಮೂಲಕ ವೈಜ್ಞಾನಿಕ ಚಿಂತನೆ ಮತ್ತು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದರು. 

ವೈಚಾರಿಕತೆಯ ಹಿನ್ನೆಲೆಯಲ್ಲಿ ಕಲ್ಯಾಣದ ಕ್ರಾಂತಿಯನ್ನು ಅಧ್ಯಯನವನ್ನು ಮಾಡಿದಾಗ ಕಂಡು ಬರುವ ಮಹತ್ವದ ಅಂಶ ಅಂದರೆ ಕಾಯಕವನ್ನು ದೈವತ್ವಕ್ಕೆ ಏರಿಸಿ ಅದರ ಮೂಲಕ ಮಾನವ ಸಂಪನ್ಮೂಲ ಅಭಿವೃದ್ಧಿಯನ್ನು ಮಾಡುವುದರ ಜೊತೆಗೆ ಸಾಮಾಜಿಕ ಸಮಾನತೆ, ಆರ್ಥಿಕ ಸಮಾನತೆಯನ್ನು ತಂದಿದ್ದು. ಕಲ್ಯಾಣದ ಕ್ರಾಂತಿ ಹೆಣ್ಣು, ಹೊನ್ನು ಮತ್ತು ಮಣ್ಣಿಗಾಗಿ ನಡೆದದ್ದಲ್ಲ. ಸಮಾಜದಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಶ್ರೇಣೀಕೃತ ಸಮಾಜದಲ್ಲಿನ ಅಸಮಾನತೆಯನ್ನು ತೆಗೆದು ಹಾಕಿ ಸಮಾನತೆಯನ್ನು ತರುವ ಯಶಸ್ವಿ ಪ್ರಯೋಗ. ಕಲ್ಯಾಣದ ಕ್ರಾಂತಿ ಬಹಳ ಸಂಕೀರ್ಣವಾದದ್ದು.

  • ಒಂದು ಕಡೆ ರಾಜರ ಆಡಳಿತ ಇನ್ನೊಂದು ಕಡೆ ತಳಸ್ಥರದ ಪ್ರಜೆಗಳು.
  • ಬಸವಣ್ಣನವರ ಸಾಮಾಜಿಕ ಸುಧಾರಣೆಗೆ ಮೇಲ್ವರ್ಗದ ಜನರ ಪ್ರತಿರೋಧ.
  • ಶ್ರೇಣೀಕೃತ ಸಮಾಜ.
  • ಪ್ರಭುದ್ಧ ಚಿಂತಕರು ಒಂದು ಕಡೆಯಾದರೆ ಇನ್ನೊಂದು ಕಡೆ ಅಶಿಕ್ಷಿತ ಆಯಗಾರರು.
  • ಶ್ರೀಮಂತರು ಒಂದು ಕಡೆಯಾದರೆ ಇನ್ನೊಂದು ಕಡೆ ಬಡವರು.
  • ತಮ್ಮ ಉಪಜೀವನಕ್ಕೆ ಕುಲಕಸುಬನ್ನು ನಂಬಿದ ಆಯಗಾರರು ಒಂದು ಕಡೆಯಾದರೆ, ಇನ್ನೊಂದು ಕಡೆ ವೈದಿಕ ಪರಂಪರೆಯ ಮೂಲಕ ಈ ಜನರನ್ನು ಶೋಷಣೆ ಮಾಡುವ ವೈದಿಕರು.

ಒಟ್ಟಾರೆ, ಅಂದಿನ ಸಮಾಜದಲ್ಲಿ ಒಂದು ಗೊಂದಲ ಹಾಗೂ ವಿಷಮಯ ವಾತಾವರಣವಿತ್ತು. ಇಂತಹ ವಿಷಮ ಪರಿಸ್ಥಿತಿಯಲ್ಲಿ ಬಸವಣ್ಣನವರು ಅತ್ಯಂತ ಶ್ರಮವಹಿಸಿ ಈ ವಾತಾವರಣವನ್ನು ನಿವಾರಿಸಲು ಪ್ರಯತ್ನಿಸಿ ಯಶಸ್ವಿಯಾದರು. ಕಲ್ಯಾಣದ ಕ್ರಾಂತಿಯು ಬಹಳ ವೈಚಾರಿಕವಾಗಿ ವೈವಿಧ್ಯಮಯವಾದದ್ದು.

  • ಸಾಹಿತ್ಯ ಕ್ರಾಂತಿ.
  • ಧಾರ್ಮಿಕ ಕ್ರಾಂತಿ.
  • ಸಾಮಾಜಿಕ ಕ್ರಾಂತಿ.
  • ಆರ್ಥಿಕ ಕ್ರಾಂತಿ.
  • ನೈತಿಕ ಕ್ರಾಂತಿ.

ಹೀಗೆ ಹತ್ತು ಹಲವಾರು ಸ್ಥರದಲ್ಲಿ ಕಲ್ಯಾಣ ಕ್ರಾಂತಿಯಾದದ್ದು ಗಮನಾರ್ಹ. ತಲ ತಲಾಂತರದಿಂದ ಬೆಳೆದು ಬಂದ ಸಾಮಾನ್ಯ ಜನ-ಜೀವನ ಮತ್ತು ಪಾರಂಪರಿಕ ಸಂಸ್ಕೃತಿ ತನ್ನ ಅಸ್ತಿತ್ವವನ್ನು ಇಂದಿಗೂ ಉಳಿಸಿಕೊಂಡಿದೆ.

ವಚನಗಳಲ್ಲಿನ ಮುಖ್ಯ ವೈಚಾರಿಕ ಅಂಶಗಳು:

  • ಮೂಢನಂಬಿಕೆಗಳ ವಿರೋಧ: ಬಾಹ್ಯ ಆಚರಣೆ, ಮೂರ್ತಿ ಪೂಜೆ, ಮತ್ತು ಮೂಢನಂಬಿಕೆಗಳನ್ನು ಖಂಡಿಸಿ, ಆಂತರಿಕ ಶುದ್ಧತೆ ಮತ್ತು ಅರಿವಿಗೆ ಒತ್ತು ನೀಡಿದ್ದಾರೆ.
  • ಸಾಮಾಜಿಕ ಸಮಾನತೆ: ಜಾತಿ ಬೇಧವನ್ನು ತೀವ್ರವಾಗಿ ವಿರೋಧಿಸಿ, “ಕುಲವೊಂದೇ” ಎಂದು ಸಾರುವ ಮೂಲಕ ಸಮಾಜದಲ್ಲಿ ಸಮಾನತೆಯನ್ನು ಪ್ರತಿಪಾದಿಸಿದ್ದಾರೆ.
  • ಲಿಂಗ ಸಮಾನತೆ: ಮಹಿಳೆಯರ ಸಬಲೀಕರಣ ಮತ್ತು ಸ್ವಾತಂತ್ರ್ಯಕ್ಕೆ ಬುನಾದಿ ಹಾಕಿ, ಶರಣೆಯರು ನಿರ್ಭೀತಿಯಿಂದ ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದ್ದಾರೆ.
  • ಕಾಯಕ ಮತ್ತು ದಾಸೋಹ ತತ್ವ: “ಕಾಯಕವೇ ಕೈಲಾಸ” ಎಂಬ ತತ್ವದ ಮೂಲಕ ಕೆಲಸವನ್ನು ಪೂಜೆಯೆಂದೂ, ದೈಹಿಕ ಶ್ರಮದ ಮಹತ್ವವನ್ನೂ ಎತ್ತಿ ಹಿಡಿದಿದ್ದಾರೆ.
  • ಅನುಭಾವ ಮತ್ತು ಅರಿವು: ಬರಿಯ ಶಾಸ್ತ್ರಜ್ಞಾನಕ್ಕಿಂತ “ಅನುಭವ” ಮತ್ತು “ಅರಿವು” (ಜ್ಞಾನ) ಮುಖ್ಯವೆಂದು, ಮನುಷ್ಯ ತನ್ನ ವಿವೇಕದಿಂದ ಸತ್ಯವನ್ನು ಅರಿಯಬೇಕೆಂದು ಒತ್ತಿ ಹೇಳಿದ್ದಾರೆ.
  1. ಮೂಢನಂಬಿಕೆಗಳ ವಿರೋಧ: ಬಾಹ್ಯ ಆಚರಣೆ, ಮೂರ್ತಿ ಪೂಜೆ, ಮತ್ತು ಮೂಢ ನಂಬಿಕೆಗಳನ್ನು ಖಂಡಿಸಿ, ಆಂತರಿಕ ಶುದ್ಧತೆ ಮತ್ತು ಅರಿವಿಗೆ ಒತ್ತು ನೀಡಿದ್ದಾರೆ.

ಶೋಷಣೆಯ ವಿರುದ್ಧ ಚಳುವಳಿಯನ್ನೇ ಸಾರುವಲ್ಲಿ ಶ್ರೇಣೀಕೃತ ಸಮಾಜದಲ್ಲಿದ್ದ ಮೂಢ ನಂಬಿಕೆಗಳಿಂದ ಮಾಡುವ ಶೋಷಣೆಗಳು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಮೊದಲನೇಯ ಪ್ರತಿಭಟನೆಯೇ ಮೂರ್ತಿಪೂಜೆ. ಶರಣ ಗೋಲಗೇರಿಯ ಗೊಲ್ಲಾಳೇಶ್ವರರ ಈ ವಚನ ಅತ್ಯಂತ ಸಮರ್ಥವಾಗಿ ಚಿತ್ರಿಸುತ್ತದೆ.

ಕಲ್ಲು ಲಿಂಗವಲ್ಲ, ಉಳಿಯ ಮೊನೆಯಲ್ಲಿ ಒಡೆಯಿತ್ತು.
ಮರ ದೇವರಲ್ಲ, ಉರಿಯಲ್ಲಿ ಬೆಂದಿತ್ತು.
ಮಣ್ಣು ದೇವರಲ್ಲ, ನೀರಿನ ಕೊನೆಯಲ್ಲಿ ಕದಡಿತ್ತು.
ಇಂತಿವನೆಲ್ಲವನರಿವ ಚಿತ್ತ ದೇವರಲ್ಲ.
ಕರಣಂಗಳ ಮೊತ್ತದೊಳಗಾಗಿ ಸತ್ವಗೆಟ್ಟಿತ್ತು.
ಇಂತಿವ ಕಳೆದುಳಿದ ವಸ್ತುವಿಪ್ಪೆಡೆ ಯಾವುದೆಂದಡೆ;
ಕಂಡವರೊಳಗೆ ಕೈಕೊಂಡಾಡದೆ,
ಕೊಂಡ ವ್ರತದಲ್ಲಿ ಮತ್ತೊಂದನೊಡಗೂಡಿ ಬೆರೆಯದೆ,
ವಿಶ್ವಾಸ ಗ್ರಹಿಸಿ ನಿಂದಲ್ಲಿ ಆ ನಿಜಲಿಂಗವಲ್ಲದೆ,
ಮತ್ತೊಂದು ಪೆರತನರಿಯದೆ ನಿಂದಾತನೆ ಸರ್ವಾಂಗಲಿಂಗಿ,
ವೀರಬೀರೇಶ್ವರಲಿಂಗದೊಳಗಾದ ಶರಣ.

(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-35/ವಚನ ಸಂಖ್ಯೆ-88)

ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ.
ಪೆರತ: ಬೇರೊಂದು, ಮತ್ತೊಂದು.

ಈ ವಚನವು ಬಹಿರಂಗದ ಸಾಕಾರ ಮೂರ್ತಿಪೂಜೆಗಿಂತ ನಿರಾಕಾರ ಸ್ವರೂಪವಾದ ಅಂತರಂಗದ ಅರಿವೇ ನಿಜವಾದ ದೇವರು ಎನ್ನುವ ತತ್ವ ಸಿದ್ಧಾಂತವನ್ನು ತಿಳಿಸಿಕೊಡುತ್ತದೆ. ಭೌತಿಕ ವಸ್ತುಗಳಾದ ಕಲ್ಲು, ಮರ, ಮಣ್ಣುಗಳಲ್ಲಿ ದೈವತ್ವವನ್ನು ಹುಡುಕುವ ಬದಲು ಕಾಯಕದ ಮೂಲಕ ಸತ್ಯವನ್ನು ಅರಿಯಬೇಕೆಂದು ನಿರೂಪಣೆ ಮಾಡುತ್ತದೆ.

ಭೌತಿಕ ವಸ್ತುಗಳಿಂದ ಮಾಡಿದ ವಿಗ್ರಹಗಳನ್ನು ಪೂಜಿಸುವುದು ಪುರಾತನ ಕಾಲದಿಂದ ಹಿಡಿದು ಇಂದಿನವರೆಗೂ ಅಸ್ತಿತ್ವದಲ್ಲಿದೆ. ಕಲ್ಲು, ಮಣ್ಣು, ಮರ, ಲೋಹ ಇತ್ಯಾದಿಗಳನ್ನು ಬಳಸಿ ತಯಾರಿಸಿದ ಆಕೃತಿಗೆ ಪ್ರಾಣಪ್ರತಿಷ್ಠೆಯನ್ನು ಮಾಡಿ ದೇವರೆಂಬ ಸ್ಥಾನಕೊಟ್ಟು ಪೂಜಿಸುತ್ತಾ ಬಂದಿದ್ದಾರೆ. ಮೂರ್ತಿಪೂಜೆ ಎನ್ನುವುದು Text Culture ಅಂದರೆ ಕಟ್ಟಲ್ಪಟ್ಟಿದ್ದು. ಜನಪದರ ಸಂಸ್ಕೃತಿ Living Culture ಅಂದರೆ ಇಲ್ಲಿ ಯಾವುದೂ ಸ್ಥಿರವಾಗಿರುವುದಿಲ್ಲ ಅಂದರೆ ದೇವರು ಅನ್ನುವದು Permanent ಅಲ್ಲಾ. ಪ್ರತಿಯೊಬ್ಬರ ಅಂತರಂಗದ ಅರಿವಿನ ದೇವರು ವಿಭಿನ್ನ ಆಯಾಮದ ಪೂಜೆಯನ್ನು ಬಯಸುತ್ತದೆ. ಜನಪದರ ಸಂಸ್ಕೃತಿಯ Living Culture ಹಿನ್ನೆಲೆಯಲ್ಲಿ ಕಟ್ಟಿಕೊಂಡ ಬಸವಾದಿ ಶರಣರು ಬಹಿರಂಗದ ಮೂರ್ತಿಪೂಜೆಯನ್ನು ಖಂಡನೆ ಮಾಡುತ್ತಾ ಇಷ್ಟಲಿಂಗಪೂಜೆ ಅಥವಾ ಏಕದೇವೋಪಾಸನೆಯನ್ನು ಆಚರಿಸುತ್ತಾ ಬಂದರು. ಹಾಗಾಗಿ ಮಾನವ ನಿರ್ಮಿತ Text Culture ನ ದೇವತೆಗಳನ್ನು ಈ ವಚನದಲ್ಲಿ ಶರಣ ವೀರ ಗೊಲ್ಲಾಳೇಶ್ವರರು ಪ್ರಶ್ನಿಸಿದ್ದಾರೆ. ಇಂದಿಗೂ ಭೌತಿಕ ವಸ್ತುಗಳನ್ನು ದೇವರೆಂದು ನಂಬಿ ಪೂಜಿಸುತ್ತಾ ಬಂದಿದ್ದಾರೆ ಎಂಬ ಮಾತು ಇದ್ದರೂ ಕೂಡ ಮಾನವ ನಿರ್ಮಿತ ವಸ್ತುಗಳೇ ದೇವರಾದ ಪರಿ ಹೇಗೆ? ಎಂಬುದು ಇಲ್ಲಿ ಪ್ರಶ್ನೆಯಾಗಿ ಉಳಿದಿದೆ ಎನ್ನುವುದಂತೂ ಸತ್ಯ. ಒಟ್ಟಾರೆಯಾಗಿ, ವಚನಗಳು ಮೂಢನಂಬಿಕೆಯ ಬದಲು ವೈಚಾರಿಕತೆ, ಶೋಷಣೆಯ ಬದಲು ಸಮಾನತೆ ಮತ್ತು ಅಜ್ಞಾನದ ಬದಲು ಅರಿವನ್ನು ಬಿತ್ತಿದ, ಇಂದಿಗೂ ಪ್ರಸ್ತುತವಾಗಿರುವ ಸಾಹಿತ್ಯವಾಗಿದೆ.

  • ಸಾಮಾಜಿಕ ಸಮಾನತೆ: ಜಾತಿ ಬೇಧವನ್ನು ತೀವ್ರವಾಗಿ ವಿರೋಧಿಸಿ, “ಕುಲವೊಂದೇ” ಎಂದು ಸಾರುವ ಮೂಲಕ ಸಮಾಜದಲ್ಲಿ ಸಮಾನತೆಯನ್ನು ಪ್ರತಿಪಾದಿಸಿದ್ದಾರೆ.

ನಾವು ಶರಣರ ಸಾಮಾಜಿಕ ಕ್ರಾಂತಿ ಅನ್ನೋ ಶಬ್ದ ಪದೆ ಪದೆ ಬಳಸುತ್ತೇವೆ. ಕ್ರಾಂತಿಯ ಬಗ್ಗೆ ನಮಗೆ ಹಲವಾರು ವಿಭಿನ್ನ ಮತ್ತು ಚಿತ್ರ-ವಿಚಿತ್ರವಾದ ಪರಿಕಲ್ಪನೆಗಳಿವೆ. ಕ್ರಾಂತಿ ಅಂದರ ಇವತ್ತು ಒದರಾಡೋದು, ನಾಳೆ ಪ್ರತಿಭಟನೆ ಮಾಡೋದು, ನಾಡದ ಅದರ ಪ್ರತಿಫಲ ಬರಬೇಕು ಅಂತ ನಿರೀಕ್ಷೆ ಮಾಡೋದು. ಇದು ನಮ್ಮ ಕ್ರಾಂತಿಯ ಪರಿಕಲ್ಪನೆ. ಆದರೆ ಕ್ರಾಂತಿ ಅನ್ನೋದು ಇಷ್ಟು ಸೀಮಿತ ಆಗಿರೋದಿಲ್ಲ ಅಂತ ಬಹಳಷ್ಟು thinkers’ ಹೇಳತಾರೆ. ನಿಜವಾದ ಕ್ರಾಂತಿ ಅನ್ನೋದು ಅದು ಎಲ್ಲ ಸ್ಥಾವರಗಳನ್ನು ನಿರಂತರವಾಗಿ ಕೆಣಕುತ್ತಾ ಹೋಗತಾನೆ ಇರುತ್ತದೆ. ಅದಕ್ಕೆ ಅಂತ್ಯ ಅನ್ನೋದೇ ಇರೋದಿಲ್ಲ.

900 ವರ್ಷಗಳ ಹಿಂದೆ ಬಸವಣ್ಣನ ನೇತೃತ್ವದಲ್ಲಿ ಹಲವಾರು ಶರಣರು ನಡೆಸಿದ ಆ ಕ್ರಾಂತಿಯ ಅಗತ್ಯ ಇವತ್ತಿಗೂ ಇದೇ ಅಂದರೆ ಅದರ ಅರ್ಥ ಆ ಕ್ರಾಂತಿ ಅಲ್ಲೇ ಮುಗಿದು ಹೋಗಲಿಲ್ಲ. ಅಥವಾ ಅದರ ಅವತ್ತೇ ಅದರ ಎಲ್ಲ ಪರಿಣಾಮಗಳೂ ಬಂದು ಹೋಗಿಲ್ಲ. ಆ ಕ್ರಾಂತಿಯ ಬೀಜಗಳಲ್ಲಿ ಎಲ್ಲ ಕಾಲಕ್ಕೂ ಸಲ್ಲುವಂಥಾ ಸಿದ್ಧಾಂತಗಳು ಇದಾವೆ ಅನ್ನೋದನ್ನ ನಾವು ಗಮನಿಸಬೇಕು. ಆ ಕ್ರಾಂತಿ ಜೀವಂತ ಇರೋದಕ್ಕೇನೆ ನಾವು ಮತ್ತೆ ಮತ್ತೆ ಆ ವಿಷಯವನ್ನು ಚರ್ಚೆ ಮಾಡತಾ ಇದೇವೆ ಅನ್ನೋದನ್ನ ನಾವು ಗಮನಿಸಬೇಕು.

ನಮಗ ಇವತ್ತೂ ಪ್ರಸ್ತುತ ಯಾಕ ಅಂದರೆ ಇವತ್ತಿನ ಕಾಲಕ್ಕೆ ಬೇಕಾಗುವ ಮೌಲ್ಯಗಳನ್ನು ವಚನ ಸಾಹಿತ್ಯ ಅಥವಾ ಶರಣ ಸಾಹಿತ್ಯ, ಶರಣ ಕ್ರಾಂತಿ, ಬಸವಣ್ಣನವರ ವಚನಗಳು ಶರಣರ ವಚನಗಳು ನಮಗ ಕಟ್ಟಿ ಕೊಡೋದರಿಂದ ಅವುಗಳು ನಮಗೆ ಪ್ರಸ್ತುತ ಆಗತಾವ. ಇದು ಕ್ರಾಂತಿಯ ನಿಜವಾದ ಪರಿಕಲ್ಪನೆ. ಅಂದರೆ ಈ ಕಾಲದ ನಿರಂತರತೆಯ ಜೊತೆಗೆ ಸಾಗತಾ ಸಾಗತಾ ಒಂದು ಹೊಸ ಬೆಳಕನ್ನು ಕೊಡೋದು ಮತ್ತು ಸ್ಥಗಿತತೆಯನ್ನು ಚಲನಶೀಲಗೊಳಿಸುವುದು. ಎಲ್ಲನೂ ಮಾಡತಾ ಇರೋದು ಕ್ರಾಂತಿ. ಕಾರ್ನಾಡ ಅವರು ಇನ್ನೊಂದು ಅದ್ಭುತ ಮಾತನ್ನ ಹೇಳತಾರೆ “ನಿಜವಾದ ಕ್ರಾಂತಿ ಕೊನೆಯಿಲ್ಲದ ಒಂದು ಪ್ರಕ್ರಿಯೆ Endless Process” ಎನ್ನುವ ಅರ್ಥದಲ್ಲಿ. ನಿಜವಾದ ಕ್ರಾಂತಿ ಒಂದು ಕೊನೆಯಿಲ್ಲದ ಪ್ರಕ್ರಿಯೆಯಾಗಿರುವುದರಿಂದ ಹಾಗೂ ಅದರ ಪರಿಣಾಮಗಳು ದೂರಗಾಮಿಯಾಗಿರುವುದರಿಂದ ಸೋಲು ಅಥವಾ ಗೆಲುವು ಅದರ ಒಂದು ಅವಸ್ಥೆಯನ್ನು ಮಾತ್ರ ಸೂಚಿಸುತ್ತದೆ.

ಡಾ. ಗಿರೀಶ ಕಾರ್ನಾಡ ಅವರು ಮತ್ತೆ ಬಸವಣ್ಣನವರ ಬಗ್ಗೆ ಹೇಳತಾರೆ; “ತಾನು ಹುಟ್ಟು ಹಾಕಿದ ಕ್ರಾಂತಿ ಒಂದಿಲ್ಲೊಂದು ದಿನ ಯಶಸ್ವಿಯಾಗುತ್ತದೆ ಎಂದು ಬಸವಣ್ಣ ನಂಬಿದ್ದ”. ನಂಬಿಕೆ ಅನ್ನೋದು ಬಹಳ ದೊಡ್ಡದು. ಅದು ಮುಂದಿನ ದಿನಮಾನಗಳಲ್ಲಿ ಎಂದಾದರೂ ಒಂದು ದಿನ ಇದು ಯಶಸ್ವಿಯಾಗತದೆ ಅನ್ನುವ ದೊಡ್ಡ ನಂಬಿಕೆ, ಭರವಸೆ ಬಸವಣ್ಣನವರದು. ಒಂದು ದಿವಸ ಇದು ವರ್ಣಾಶ್ರಮ ಧರ್ಮ, ಈ ಜಾತಿ ವ್ಯವಸ್ಥೆ ಇವೆಲ್ಲಾ ಅಳಿದು ಹೋಗತಾವೆ ಎಂಬ ಗಟ್ಟಿಯಾದ ವಿಶ್ವಾಸ ಆತನದಾಗಿತ್ತು ಅಂತಾ ಅವರು ಹೇಳತಾರೆ. ಈ ವಿಶ್ವಾಸಾನೇ ಇವತ್ತಿನವರೆಗೂ ಶರಣ ಕ್ರಾಂತಿಯನ್ನು ಮುನ್ನಡೆಸಿಕೊಂಡು ಬಂದಿದೆ. ಇವತ್ತು ನಾವು ಮತ್ತೆ ಮತ್ತೆ ಆ ವಿಷಯವನ್ನು ಪ್ರಸ್ತಾಪಿಸುವುದರ ಹಿಂದಿರುವುದು ಆ ಕ್ರಾಂತಿಯ ನಿರಂತರತೆ ಅನ್ನೋದನ್ನ ನಾವು ಗಮನಿಸಬೇಕು.

ಇಂಥ ಒಂದು ಮಹಾನ್‌ ಕ್ರಾಂತಿಗೆ ಬಸವಣ್ಣ ಕರೆ ಕೊಡೋದಕ್ಕೆ ಅಥವಾ ಒಂದು ಕ್ರಾಂತಿಯನ್ನ ಆರಂಭ ಮಾಡಿದ್ದಕ್ಕೆ ಆವತ್ತಿನ ಒತ್ತಾಸೆಗಳು, ಒತ್ತಡಗಳು ಏನಿದ್ದವು ಅನ್ನೋದನ್ನ ಈಗಾಗಲೇ ಸಾಕಷ್ಟು ವಿದ್ವಾಂಸರು ಗುರುತಿಸಿದ್ದಾರೆ. ಮುಖ್ಯವಾಗಿ ರಾಜಪ್ರಭುತ್ವ, ಪುರೋಹಿತಶಾಹಿ, ಮೂಲಭೂತವಾದ, ವರ್ಣಾಶ್ರಮ ಧರ್ಮ, ಜನರ ಅಜ್ಞಾನ ಹೀಗೆ ದೊಡ್ಡ ಪಟ್ಟಿ ಮಾಡಿಕೊಂಡು ಹೋಗಬಹುದಾದ ಹಲವಾರು ಸಮಾಜ ವಿರೋಧಿ ಕೃತ್ಯಗಳು ನಡೆದು ಒಂದು ವ್ಯವಸ್ಥೆಯನ್ನು ಸ್ಥಗಿತಗೊಳಿಸಿದಾಗ ಯಾವುದು ಹರಿಯದ ನೀರು ಹೇಗೆ ಒಂಥರಾ ಅದು ಕೊಳೆತು ನೀರು ಹೊಲಸ ನಾರತದಲ್ಲಾ ಅಂಥಾ ಒಂದು ಸ್ಥಗಿತ ಸ್ಥಿತಿ ನಿರ್ಮಾಣವಾದಾಗ ಈ ಸ್ಥಗಿತ ಸ್ಥಿತಿಯನ್ನು ಚಲನಶೀಲಗೊಳಿಸುವ ಸಲುವಾಗಿ ಬಸವಣ್ಣನವರು ಕ್ರಾಂತಿ ಮಾಡಿದರು. ಅದನ್ನು ಬಹಳ ಮುಖ್ಯವಾದ ಪಾರಿಭಾಷಿಕ ಶಬ್ದಗಳಲ್ಲಿ ಹೇಳತಾರೆ “ಅದು ಸ್ಥಾವರಗೊಂಡದ್ದನ್ನು ಜಂಗಮಗೊಳಿಸೋದು”. ಒಂದು Static ಇನ್ನೊಂದು Dynamic ಅನ್ನೋ ಅರ್ಥದಲ್ಲಿ.

ಹೀಗೆ ಸ್ಥಾವರವನ್ನು ಜಂಗಮಗೊಳಿಸೋದು ಆ ಕ್ರಾಂತಿಯ ಮುಖ್ಯ ಉದ್ದೇಶ ಆಗಿತ್ತು ಅನ್ನೋದನ್ನು ನಾವು ಮುಖ್ಯವಾಗಿ ಗಮನಿಸಬೇಕು. ಮುಖ್ಯವಾಗಿ ಜಾತೀಯತೆ, ವರ್ಣ ವ್ಯವಸ್ಥೆ, ಪುರೋಹಿತಶಾಹಿ ಮತ್ತು ವರ್ಗ, ವರ್ಣ, ಲಿಂಗ ತಾರತಮ್ಯವಿರುವಂಥಾ ಒಂದು ವ್ಯವಸ್ಥೆ ಇತ್ತಲ್ಲಾ ಅದನ್ನು ಕಣ್ಣಾರೆ ನೋಡಿದ ಬಸವಣ್ಣನವರು ಅದರ ವಿರುದ್ಧವಾಗಿ ಒಂದು ಕ್ರಾಂತಿಯನ್ನು ಸಾರಿದರು. ತನ್ನ ಸಹ ಚಿಂತಕ ಶ್ರಮಜೀವಿಗಳನ್ನು ಕಾಯಕ ಜೀವಿಗಳನ್ನು ಕಟ್ಟಿಕೊಂಡು ಆ ಇಡೀ ಸಂಘಟನೆಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಿದರು. ಈ ಅಪೂರ್ವ ಕ್ರಾಂತಿಗೆ ನಾಂದಿ ಹಾಡಿದ ಅವರ ಕ್ರಾಂತಿಯ ಬಹು ಮುಖ್ಯ ನಡೆಗಳನ್ನು ನಾಲ್ಕು ಮುಖ್ಯವಾದ ಅಂಶಗಳಲ್ಲಿ ಗುರುತಿಸಬಹುದು. ಆ ಕ್ರಾಂತಿಯ ನಡೆ ಅದರ ಚಲನಶೀಲತೆ ಹೇಗಿತ್ತು ಇವೆಲ್ಲಾ ಪ್ರಸ್ತುತ ಆಗೋ ಹಿನ್ನೆಲೆಯಲ್ಲಿ ಗಮನಿಸಬೇಕು.

  • ಒಂದನೇಯದ್ದು ಸ್ಥಾವರ ವ್ಯವಸ್ಥೆಯನ್ನು ಪ್ರಶ್ನಿಸೋದು. Questioning ಇದೆಯಲ್ಲಾ ಅದು ಭಾಳ ಮುಖ್ಯ. ಕ್ರಾಂತಿಯ ಮೊದಲನೇಯ ಘಟ್ಟ ಇದು ಪ್ರಶ್ನೆ ಮಾಡೋದು.
  • ಎರಡನೇಯದ್ದು ಪ್ರಶ್ನೆಗೆ ಉತ್ತರಾ ಸಿಗಲಿಲ್ಲಾ ಅಂದರೆ ಪ್ರತಿಭಟನೆ ಮಾಡೋದು.
  • ಮೂರನೇಯದ್ದು ಪ್ರಶ್ನಿಸುವುದು ಪ್ರತಿಭಟನೆ ಮಾಡೋದು ಇವೆರಡಕ್ಕೂ ಬಗ್ಗಲಿಲ್ಲಾ ಅಂದರೆ ನಿರಾಕರಿಸುವುದು ಬೇಡಾ ಅನ್ನೋದು.
  • ನಾಲ್ಕನೇಯದ್ದು ಈ ಮೂರೂ ಹಂತಗಳನ್ನು ದಾಟಿ ಪ್ರಶ್ನೆ, ಪ್ರತಿಭಟನೆ, ನಿರಾಕರಣೆ ಇವುಗಳನ್ನು ದಾಟಿದ ಮೇಲೆ ಒಂದು ಖಾಲಿ ಜಾಗ ಅಥವಾ ನಿರ್ವಾತ (Vacuum) ಆಗುತ್ತಲ್ಲಾ ಅಲ್ಲಿ ಒಂದು ಪರ್ಯಾಯವನ್ನು ಕಟ್ಟಿ ಕೊಡೋದು. ಇದು ಭಾಳ ಮುಖ್ಯವಾದದ್ದು. ಬಸವಣ್ಣನವರು ಮಾಡಿದ್ದು ಇದನ್ನೇ. ಬರೀ ಪ್ರಶ್ನೆ, ಪ್ರತಿಭಟನೆ, ನಿರಾಕರಣೆ ಮಾಡಲಿಲ್ಲಾ. ಅದರ ಜೊತೆಗೆ ಹೊಸದನ್ನ ಕಟ್ಟಿಕೊಡುವ ಕೆಲಸವನ್ನು ಶುರು ಮಾಡಿದರು. ಇದು ಕ್ರಾಂತಿಯ ಪ್ರಸ್ತುತತೆ. ಒಂದು ಹೊಸದನ್ನ ಕಟ್ಟಿ ಕೊಡುವುದು ಇದರ ನಾಲ್ಕನೇಯ ಸಂಗತಿ.
  • ಬಸವಣ್ಣನವರು ಆಳುವವರನ್ನು ಎಚ್ಚರಿಸಲಿಲ್ಲಾ …
  • ಆಳಿಸಿಕೊಳ್ಳುವವರನ್ನು ಎಚ್ಚರಿಸಿದರು …

ಇಡೀ ಪ್ರಪಂಚದ ದಾರ್ಶನಿಕರನ್ನು ಕುರಿತು ಅಧ್ಯಯನ ಮಾಡಿದಾಗ ನಮಗೆ ಕಂಡು ಬರುವುದು ಬಸವಣ್ಣನವರು ಒಬ್ಬರೇ ತಾವು ಹುಟ್ಟಿದ ಜಾತಿಯ ಕಟ್ಟೆಯನ್ನು ಬಿಟ್ಟು ಕೆಳಗಿಳಿದು ಬಂದು ಸಮಾಜದ ತೀರ ಕಟ್ಟ ಕಡೆಯ ವ್ಯಕ್ತಿಯನ್ನೂ ಕೂಡ ಅಪ್ಪಿಕೊಂಡು ಸಮ-ಸಮಾಜವನ್ನು ಕಟ್ಟಿದ್ದು ಇಡೀ ವಿಶ್ವಕ್ಕೇ ಮಾದರಿ. ಇದು ಶರಣ ಕ್ರಾಂತಿ ಅಥವಾ ಶರಣ ಸಂಸ್ಕೃತಿ ಅಥವಾ ಸಾಮಾಜಿಕ ಸುಧಾರಣೆಯ ಮಹತ್ವದ ಸಿದ್ಧಾಂತ. ಇದನ್ನು ಪುಷ್ಟೀಕರಿಸುವಂತೆ ಬಸವಣ್ಣನವರ ಒಂದು ವಚನ ಇಲ್ಲಿ ಅತ್ಯಂತ ಪ್ರಸ್ತುತ ಅಂತ ನನಗನಿಸತದೆ. ಈಗಿನ ಪ್ರಸ್ತುತ ಕಾಲಘಟ್ಟದಲ್ಲಿ ನಮ್ಮ ಧರ್ಮವೇ ಶ್ರೇಷ್ಠ ಅಂತಾ ಎಲ್ಲಾ ಧರ್ಮಗಳೂ ಹೊಡದಾಡತಾ ಇದಾವಲ್ಲಾ ಯಾವ ಧರ್ಮದಲ್ಲಿ ನಿಜವಾಗಿಯೂ ಮನುಷ್ಯತ್ವವನ್ನು ಪ್ರೀತಿಸುವ ಶ್ರೇಷ್ಠತೆ ಇದೇ ಅನ್ನೋದನ್ನ ಗುರುತಿಸುವುದು ಸಂಸ್ಕೃತಿ. ಅಂಥಾ ಸಂಸ್ಕೃತಿಯನ್ನು ಬೆಂಬಲಿಸುವುದು ಅದು ನಿಜವಾದ ಧರ್ಮ. ತಮ್ಮ ಧರ್ಮ ಅಥವಾ ಜಾತಿಯನ್ನು ಬಿಟ್ಟ ಹೊರಗೆ ನಡೆಯಲು ಬಸವಣ್ಣನವರಿಗೆ ಎಷ್ಟು ಕಷ್ಟ ಆಗಿರಬೇಕು. ಅದಕ್ಕಾಗಿ ಬಸವಣ್ಣನವರ ಪ್ರಸ್ತುತತೆ ಮತ್ತೆ ನಮಗೆ ಇಲ್ಲಿ ಹೆಚ್ಚಾಗತದೆ.

ಉತ್ತಮಕುಲದಲ್ಲಿ ಹುಟ್ಟಿದೆನೆಂಬ
ಕಷ್ಟತನದ ಹೊರೆಯ ಹೊರಿಸದಿರಯ್ಯಾ,
ಕಕ್ಕಯ್ಯನೊಕ್ಕುದನಿಕ್ಕ ನೋಡಯ್ಯಾ,
ದಾಸಯ್ಯಾ ಶಿವದಾನವನೆರೆಯ ನೋಡಯ್ಯಾ,
ಮನ್ನಣೆಯ ಚೆನ್ನಯ್ಯನೆನ್ನುವ ಮನ್ನಿಸ.
ಉನ್ನತ ಮಹಿಮ,
ಕೂಡಲಸಂಗಮದೇವಾ, ಶಿವಧೋ ಶಿವಧೋ!
(ಸಮಗ್ರ ವಚನ ಸಂಪುಟ: ಒಂದು-2021 / ಪುಟ ಸಂಖ್ಯೆ-90 / ವಚನ ಸಂಖ್ಯೆ-344)

ನಾನು ಶ್ರೇಷ್ಠ ಕುಲದಲ್ಲಿ ಹುಟ್ಟಿದೆ ಅನ್ನೋದು ಅದು ನಿಜವಾದ ಕಷ್ಟದ್ದು. ಅದರ ಹೊರೆಯನ್ನು ಹೊರಲಾರೆ. ಅದು ಸಾಧ್ಯನೇ ಇಲ್ಲಾ ಅನ್ನುವಂಥಾ ಒಂದು ಸಂಸ್ಕೃತಿಯನ್ನು ಬೆಳೆಸುವುದು ಇದೆಯಲ್ಲಾ ಅದು ನಿಜವಾದ ಸಂಸ್ಕೃತಿ. ಅದನ್ನು ಬಸವಣ್ಣನವರು ನಿಭಾಯಿಸಿದ ರೀತಿ with Perseverance, Patience, Commitment & Compassion ಅದ್ಭುತವಾದದ್ದು. ಅದಕ್ಕೇನೆ 900 ವರ್ಷಗಳಾದರೂ ಕೂಡ ನಾವು ಪದೇ ಪದೇ ಬಸವಣ್ಣನವರನ್ನು ನೆನಪಿಸಿಕೊಳ್ಳತಾ ಇರೋದು.

ಸಾಮಾಜಿಕ ಸಮಾನತೆಯನ್ನು ಜಾರಿಗೆ ತಂದ ದಾರ್ಶನಿಕರು ಬಸವಣ್ಣನವರು. ಅವರ ಒಂದು ವಚನ ಈ ಎಲ್ಲ ತತ್ವ ಸಿದ್ಧಾಂತಗಳಿಗೆ ಮುನ್ನುಡಿಯಂತಿದೆ. ಕಾಯಕವೇ ಕೈಲಾಸ ಎಂದ ಬಸವಣ್ಣನವರು “ಕಾಯಕ ಯೋಗಿಗಳ ನಾಯಕ” ಎನ್ನುವ ಮೂಲಕ ಶ್ರೇಣೀಕೃತ ಸಮಾಜದಲ್ಲಿ ತುಳಿತಕ್ಕೊಳಗಾದ ಕಾಯಕ ಯೋಗಿಗಳಿಂದ ಆರ್ಥಿಕ ಮತ್ತು ಸಮಾಜೋಧಾರ್ಮಿಕ ಚಳುವಳಿಯನ್ನು ಹುಟ್ಟು ಹಾಕಿದರು. ಶ್ರಮಿಕ ವರ್ಗದವರನ್ನು ಮೇಲಕ್ಕೆತ್ತುವ ಕೆಲಸವನ್ನು ಬಸವಣ್ಣನವರು ಮಾಡಿದರು. ಅವರ ಕಾಯಕಕ್ಕೆ ದೈವತ್ವವನ್ನು ಕೊಡುವ ಮೂಲಕ ಅವರ ಕಾಯಕಕ್ಕೆ ನ್ಯಾಯ ಒದಗಿಸಿದರು.

ದೇವ ಸಹಿತ ಭಕ್ತ ಮನೆಗೆ ಬಂದಡೆ
ಕಾಯಕವಾವುದೆಂದು ಬೆಸಗೊಂಡೆನಾದಡೆ
ನಿಮ್ಮಾಣೆ! ನಿಮ್ಮ ಪುರಾತರಾಣೆ! ತಲೆದಂಡ! ತಲೆದಂಡ!
ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಸಿದಡೆ
ನಿಮ್ಮಾಣೆ ನಿಮ್ಮ ರಾಣೀವಾಸದಾಣೆ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-118/ವಚನ ಸಂಖ್ಯೆ-453)

ಬಸವಣ್ಣನವರ ಈ ವಚನ ಕಾಯಕ ಸಿದ್ಧಾಂತದ ದೈವತ್ವಕ್ಕೆ ಹಿಡಿದ ಕನ್ನಡಿ ಎನ್ನಬಹುದು. ಭಕ್ತರೇ ಆಗಲಿ ಅಥವಾ ದೇವರೇ ಆಗಲಿ ನನ್ನ ಮನೆಗೆ ಬಂದರೆ ಅವನ ಕುಲ, ಜಾತಿ ಹಾಗು ಕಾಯಕವನ್ನು ನಾನು ಕೇಳಿದರೆ ಕೂಡಲಸಂಗಮನ ಮೇಲೆ ಆಣೆ ಅಂತಾರೆ ಬಸವಣ್ಣನವರು. ಇದು ಕಾಯಕವನ್ನು ದೈವತ್ವಕ್ಕೇರಿಸಿದ ಪ್ರಪಂಚದ ಮೊಟ್ಟ ಮೊದಲನೇ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯ Economic Model. ಇದರ Total Application ನಾವು ಕಾಣಬೇಕಾದರೆ ಜಪಾನ್‌ ದೇಶ ಆರ್ಥಿಕವಾಗಿ ದೈತ್ಯ ಶಕ್ತಿಯಾಗಿ ಬೆಳೆದದ್ದನ್ನು ನೆನಪಿಸಿಕೊಳ್ಳಬೇಕಾಗುತ್ತದೆ.

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜಪಾನ್‌ ಮೇಲೆ ಅಣುಬಾಂಬ್‌ ದಾಳಿಯಾದಾಗ ಇಡೀ ಜಪಾನ್‌ ದೇಶ ಛಿದ್ರ ಛಿದ್ರವಾಗಿ ಹೋಗತದೆ. ಆದರೆ, ಅಲ್ಲಿಂದ 50 ವರ್ಷಗಳಲ್ಲಿ ಜಪಾನ್‌ ದೇಶ ಆರ್ಥಿಕವಾಗಿ ಬಲಾಢ್ಯ ರಾಷ್ಟ್ರವಾಗಿ ಬೆಳೀತದೆ. ಅದೇ ಒಂದು ಸಾಹಸ ಗಾಥೆ.

ಫ್ರಾನ್ಸ್‌ ದೇಶದಲ್ಲರುವ OECD (Organization of Economic Co-Operation & Development) ಎನ್ನುವ ಸಂಸ್ಥೆ ಇದೆ. ಇಂಥ ಅಭೂತಪೂರ್ವ ಸಾಧನೆ ಮಾಡಿದ್ದು ಹೇಗೆ ಎನ್ನುವದನ್ನು 1998 ರಲ್ಲಿ ಈ ಸಂಸ್ಥೆ ಜಪಾನ್‌ ದೇಶವನ್ನು ಕೇಳತದೆ. ಈ ಪ್ರಶ್ನೆಗೆ 2001 ರಲ್ಲಿ ಜಪಾನ್‌ ದೇಶ ಬೃಹತ್ 20 volume ಗಳಲ್ಲಿ ವರದಿಗಳ ಮೂಲಕ ಉತ್ತರ ನೀಡತದೆ. ಎಲ್ಲ 20 Volume ಗಳನ್ನೂ ಇಂಗ್ಲೀಷಿಗೆ ಭಾಷಾಂತರಿಸಿ ಪ್ಯಾರಿಸ್‌ನ OECD ಕಛೇರಿಯಲ್ಲಿ ಇಡಲಾಗಿದೆ. ನಾನು ಮೊದಲನೇಯ ಪ್ರತಿಯನ್ನು ಓದಿದಾಗ ಅದ್ಭುತ ಮತ್ತು ಆಶ್ಚರ್ಯಕರ ಸಂದೇಶ ಸಿಗತದೆ. ಅದರ ಮೊದಲನೇ ಪ್ಯಾರಾದಲ್ಲಿ ಅವರು ಹೇಳತಾರೆ.

  • After the destruction we have not started Engg or Medical colleges or any other technical training centers to rebuild our country.
  • In fact, we gave responsibility to our own people who are Carpenters, Masons, Blacksmiths, Weavers and so on and depended on them.
  • These people built an economically strong nation and much more than that is they went on to start Engg & Medical Colleges, which the younger generation carried forward the legacy of nation building.

ಇದು ಆಯಗಾರ ಪರಿಕಲ್ಪನೆಯ Model. ಇದನ್ನು ಅಳವಡಿಸಿಕೊಂಡು ಜಪಾನ್‌ ದೇಶ ಆರ್ಥಿವಾಗಿ ಸಧೃಢವಾಗಿದ್ದು ನಮ್ಮ ಕಣ್ಣ ಮುಂದೆಯೇ ಇದೆ. ಇದು ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯ ಪರಿಕಲ್ಪನೆಯ ಒಂದು ಉದಾಹರಣೆ.

ಇದನ್ನೇ ಬಸವಣ್ಣನವರು 12 ನೇ ಶತಮಾನದಲ್ಲಿ ಹೇಳಿದ್ದರು ಎನ್ನುವುದು ಆಶ್ಚರ್ಯಕರ ಮತ್ತು ಭಾರತದಲ್ಲಿ ಇದನ್ನು ನಾವು ಗಮನಿಸಲಿಲ್ಲ ಎನ್ನುವುದು ಅಷ್ಟೇ ಖೇದಕರವಾದದ್ದು.

ಮೂರ್ತಿಪೂಜೆ, ಮೂರ್ತಿ, ದೇವಾಲಯ ಎಲ್ಲವನ್ನೂ ನಿರಾಕರಿಸಿದ ಬಸವಣ್ಣ, ಅಲ್ಲಮ ಪ್ರಭು ಅಥವಾ ಇತರೆ ಎಲ್ಲ ವಚನಕಾರರು ದೇವರನ್ನು ಎಲ್ಲಿ ಕಂಡರು ಅನ್ನೋದು ಭಾಳ ಮುಖ್ಯ. ಇಲ್ಲಿ ಒಂದು ವಚನವನ್ನು ನಾನು ಉದಾಹರಣೆಗೆ ಹೇಳತೇನೆ. ಅಲ್ಲಮ ಒಂದು ಮೂರ್ತಿಯ ಎದುರು ನಿಂತಕೊಂಡು ಒಂದು ಪ್ರಶ್ನೆ ಮಾಡತಾನೆ.

ನಾ ದೇವನಲ್ಲದೆ ನೀ ದೇವನೆ?
ನೀದೇವನಾದಡೆ ಎನ್ನನೇಕೆ ಸಲಹೆ?
ಆರೈದು, ಒಂದು ಕುಡಿತೆ ಉದಕವನೆರೆವೆ,
ಹಸಿದಾಗ ಒಂದು ತುತ್ತು ಓಗರವನಿಕ್ಕುವೆ,
ನಾ ದೇವ ಕಾಣಾ ಗುಹೇಶ್ವರಾ!
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-181 / ವಚನ ಸಂಖ್ಯೆ-558)

“ನಾ ದೇವನಲ್ಲದೆ ನೀ ದೇವನೇ?” ಅಂತಾ ನೇರವಾಗಿ ಒಂದು ಮೂರ್ತಿಯ ಎದುರಿಗೆ ನಿಂತು ಕೇಳತಾರೆ. ಇದು ವಚನ ಕ್ರಾಂತಿಯ ನಾಲ್ಕು ಹಂತಗಳು ಹೇಗೆ ಬೆಳೆದು ಬಂದವು ಅನ್ನೋದು. ನಾ ದೇವನಲ್ಲದೆ ನೀ ದೇವನೆ? ನೀದೇವನಾದಡೆ ಎನ್ನನೇಕೆ ಸಲಹೆ? ಅಂತಾ ಪ್ರಶ್ನೆ. ಅಂದರೆ ವ್ಯವಸ್ಥೆ ನಂಬಿದ್ದ ಸ್ಥಾವರಗಳ ಬಗ್ಗೆ ಒಂದು ಪ್ರಶ್ನೆ. ನೀ ದೇವನಾದರೆ ನನ್ನನ್ಯಾಕೆ ಸಲಹಲಿಕ್ಕೆ ಆಗತಾ ಇಲ್ಲಾ ಅಂತಾ ಕಲ್ಲಿನ ಮೂರ್ತಿಗೆ ಕೇಳೋದು ಇದು ಪ್ರಶ್ನೆ, ಪ್ರತಿಭಟನೆ. ಮುಂದಿನ ಭಾಗದಲ್ಲಿ ಆರೈದು ಒಂದು ಕುಡಿತೆ ಉದಕವನೆರೆವೆ ಯಾರಾದರೂ ನೀರಡಿಸಿ ಬಂದರೆ ನಾನು ಒಂದು ಗುಟುಕು ನೀರು ಕೊಡತೇನೆ. ಹಸಿದಾಗ ಒಂದು ತುತ್ತು ಅನ್ನವನ್ನು ಕೊಡುತ್ತೇನೆ. ಹಾಗಾಗಿ ನಾ ದೇವ ಕಾಣಾ ಗುಹೇಶ್ವರಾ. ಇದು ಪರ್ಯಾಯ. ಕಲ್ಲಿನ ಮೂರ್ತಿಗೆ ಇದು ಸಾಧ್ಯ ಇಲ್ಲಾ. ಒಂದು ಹನಿ ನೀರು ಕೊಡೋದಿಕ್ಕೂ ಆಗೋದಿಲ್ಲ. ಒಂದು ತುತ್ತು ಅನ್ನ ಕೋಡೋದಕ್ಕೂ ಆಗೋದಿಲ್ಲ.

ಎಷ್ಟು ಜನಾ ಕೊರೋನಾ ಕಾಲದಲ್ಲಿ ಸತ್ತರು. ಒಬ್ಬ ಕಲ್ಲಿನ ದೇವರಾದರೂ ಎದ್ದು ಬಂದು ರಕ್ಷಿಸಲಿಲ್ಲ. ಯಾರಿಗೂ ಅನ್ನ ಕೊಡಲಿಲ್ಲ. ನೀರು ಕೊಡಲಿಲ್ಲಾ. ಕೊನೇಗೂ ಮನುಷ್ಯತ್ವ ಉಳ್ಳಂಥ ಹೃದಯಗಳು ಕೋಟಿ-ಕೋಟಿಗಟ್ಟಲೆ ದಾನ ಮಾಡಿದರು. ಎಷ್ಟೋ ಜನ ವೈದ್ಯರು ಬದುಕನ್ನು ಉಳಿಸಿದರು. ಇದನ್ನೆಲ್ಲಾ ಮಾಡಿದ್ದು ಮನುಷ್ಯರೇ ಹೊರತು ಕಲ್ಲಿನ ಮೂರ್ತಿಗಳಲ್ಲಾ. ಇದು ನೋಡಿ ಮನುಷ್ಯರಲ್ಲಿ ದೈವತ್ವ ಇದೇ ಅನ್ನೋದನ್ನ ತೋರಿಸಿ ಕೊಟ್ಟವರು ವಚನಕಾರರು. ಇದು ಪರ್ಯಾಯ.

ದೇವರುಗಳಿಗೆ ಬದಲಾಗಿ ಮನುಷ್ಯನಲ್ಲಿರುವ ದೇವತ್ವವನ್ನು ಜಾಗೃತಗೊಳಿಸಿ ಕೊಟ್ಟರಲ್ಲಾ ಇದು ಇಡೀ ವಚನ ಸಾಹಿತ್ಯದ ಒಂದು Process ಆಗಿರೋದು. ಮನುಷ್ಯರಲ್ಲಿ ದೇವತ್ವ ಇದೆ ಅನ್ನೋದು ತೋರಿಸಿ ಕೊಟ್ಟಿದ್ದು ವಚನಕಾರರು. ಇದು ಪರ್ಯಾಯ. ದೇವರುಗಳಿಗೆ ಬದಲಾಗಿ ಮನುಷ್ಯರಲ್ಲಿರುವ ದೇವತ್ವವನ್ನು ಜಾಗೃತಗೊಳಿಸಿ ಕೊಟ್ಟರಲ್ಲಾ ಇದು ಪರ್ಯಾಯ.

ಬಸವಣ್ಣನವರ ಹಲವಾರು ವಚನಗಳಲ್ಲಿ ಈ ತರಹದ ಒಂದು Process ನ್ನ ನಾವು ಕಾಣತೇವೆ. ಬಸವಣ್ಣನವರ ವ್ಯಕ್ತಿತ್ವ ಮತ್ತು ವೈಯಕ್ತಿಕ ಬದುಕಿನಲ್ಲಿ ಇಂಥವುದನ್ನು ಗುರುತಿಸಬಹುದು. ನಾಲ್ಕು ಅಂಶಗಳಾದ ಪ್ರಶ್ನೆ, ಪ್ರತಿಭಟನೆ, ನಿರಾಕರಣೆ ಮತ್ತು ಪರ್ಯಾಯ ಈ ನಾಲ್ಕೂ ಅಂಶಗಳ ಈ ಪ್ರಕ್ರಿಯೆಯಲ್ಲಿ ತಮ್ಮ ಬದುಕಿನಲ್ಲಿ ಹೇಗೆ ಅಳವಡಿಸಿಕೊಂಡರು ಅನ್ನೋದಕ್ಕೆ ನಾನು ಉದಾಹರಣೆ ಕೊಡತೇನೆ.

ಬಸವಣ್ಣನವರು ತಾವು ಹುಟ್ಟಿದ ಧರ್ಮ ಎಲ್ಲರಿಗೂ ಸಮಾನ ಅವಕಾಶ ಕೊಡೋದಿಲ್ಲಾ ಅನ್ನೋ ಕಾರಣಕ್ಕೆ ಅಂದಿನ ಸಮಾಜವನ್ನು ನೇರವಾಗಿ ಪ್ರಶ್ನಿಸತಾರೆ. ಬಸವಣ್ಣನವರ ಉಪನಯನದ ಸಂದರ್ಭವನ್ನು ಇಲ್ಲಿ ನಾವು ಗಮನಿಸಬೇಕು. ಯಾಕೆ ಎಲ್ಲರಿಗೂ ಸಮಾನ ಅವಕಾಶ ಕೊಡೋದಿಲ್ಲಾ. So, ಈ ಪ್ರಶ್ನೆಗಳಿಗೆ ಉತ್ತರಾ ಕೊಡದೇ ಇರುವ ಸಮಾಜಕ್ಕೆ ಅವರು ಪ್ರಶ್ನಿಸಿ ಅದನ್ನು ಪ್ರತಿಭಟಿಸತಾನೆ. ಹಾಗಿದ್ದರೆ ನಾನ್ಯಾಕೆ ಇಲ್ಲಿರಬೇಕು. ನೀವು ಏನ್‌ ಮಾಡತಾ ಇದ್ದೀರಿ ಅಂತಾ ಪ್ರತಿಭಟಿಸತಾರೆ. ಅದಕ್ಕೂ ಬಗ್ಗದೇ ಇದ್ದಾಗ ನಿರಾಕರಿಸತಾರೆ. ಕೊನೇಯ ಹಂತದಲ್ಲಿ ಈ ಮೂರೂ ಹಂತಗಳು ದಾಟಿದ ಮೇಲೆ ಇದು ನಿಮ್ಮ ಧರ್ಮದಲ್ಲಿ ಸಾಧ್ಯ ಇಲ್ಲಾ ಅಂದಾಗ ಒಂದು ಹೊಸದಾದ ಪರ್ಯಾಯ ಧರ್ಮವನ್ನು ಕಟ್ಟಿ ಕೊಡತಾರೆ. ಲಿಂಗಾಯತ ಧರ್ಮವನ್ನು ಅಥವಾ ಶರಣ ಧರ್ಮವನ್ನು ಸಕಲ ಜೀವಾತ್ಮರಗೂ ಲೇಸನ್ನೇ ಬಯಸುವಂಥ ಒಂದು ಹೊಸ ಪರ್ಯಾಯ ಧರ್ಮವನ್ನು ಕಟ್ಟಿ ಕೊಡತಾರೆ.

ಇಡೀ ವಚನ ಸಾಹಿತ್ಯವನ್ನು ಪ್ರಶ್ನೆ, ಪ್ರತಿಭಟನೆ, ನಿರಾಕರಣೆ ಮತ್ತು ಪರ್ಯಾಯ ಎನ್ನುವ ಒಂದು ನಾಲ್ಕು ಪರಿಕಲ್ಪನೆಗಳ ಹಿನ್ನೆಲೆಯಲ್ಲಿ ಹ್ಯಾಗಿತ್ತು ಅನ್ನೋದನ್ನ ಬಸವಣ್ಣನವರು ತಮ್ಮ ಬದುಕಿನಲ್ಲಿ ಮಾಡಿ ತೋರಸತಾರೆ. ಹೀಗೆ ತಮ್ಮ ಬದುಕಿನಲ್ಲಿ ಮಾಡಿದ್ದನ್ನೇ ಆ ಕ್ರಾಂತಿಯ ಮೂಲ ಬೀಜಗಳನ್ನಾಗಿ ಮಾಡಕೋತಾರೆ. ಹೀಗೆ ಒಂದು ಐತಿಹಾಸಿಕ ಪರಿಪೇಕ್ಷದಲ್ಲಿ ಒಂದು ಕ್ರಾಂತಿಯನ್ನ ಶುರು ಮಾಡಿ ಸಮಾಜದಲ್ಲಿ ಸಮಾನತೆಯನ್ನು ತರುವುದರಲ್ಲಿ ಯಶಸಿಯಾಗುತ್ತಾರೆ.

  • ಲಿಂಗ ಸಮಾನತೆ: ಮಹಿಳೆಯರ ಸಬಲೀಕರಣ ಮತ್ತು ಸ್ವಾತಂತ್ರ್ಯಕ್ಕೆ ಬುನಾದಿ ಹಾಕಿ, ಶರಣೆಯರು ನಿರ್ಭೀತಿಯಿಂದ ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದ್ದಾರೆ.

12 ನೇ ಶತಮಾನದಲ್ಲಿ ಬಸವಣ್ಣನವರ ಕ್ರಾಂತಿಯು ಶ್ರೇಣೀಕೃತ ಸಮಾಜದಲ್ಲಿನ ದೀನ ದಲಿತರನ್ನು ಮೇಲೆತ್ತುವುದರ ಜೊತೆಗೆ ಕಡೆಗಣಿಸಲ್ಪಟ್ಟ ಮಹಿಳೆಯರನ್ನು ಉದ್ಧರಿಸುವುದಾಗಿತ್ತು. ಅಕ್ಷರಲೋಕಕ್ಕೆ ಅಪರಿಚಿತರಾದಂತ ಮಹಿಳೆಯರಿಗೆ ಆತ್ಮ ಗೌರವ ಕೊಟ್ಟು ಅಷ್ಟೇ ಅಲ್ಲ ಅವರನ್ನು ವಚನಕಾರ್ತಿಯರನ್ನಾಗಿ ಮಾಡಿದ್ದು 12 ನೇ ಶತಮಾನದ ಕಲ್ಯಾಣ ಕ್ರಾಂತಿಯ ಬಹುದೊಡ್ಡ ಸಾಧನೆ.

ವಚನ ಸಾಹಿತ್ಯದಲ್ಲಿ ಒಟ್ಟು 250 ಕ್ಕೂ ಹೆಚ್ಚು ಶರಣೆಯರ ಉಲ್ಲೇಖ ಬರುತ್ತದೆ. ಹೆಸರುಗಳು ಒಂದಕ್ಕೊಂದು ಸೇರಿರಬಹುದು. ಮಹಾದೇವಿ ಅಂತಾನೇ ಸುಮಾರು 8/9 ಶರಣೆಯರ ಹೆಸರುಗಳಿವೆ. ಗುಡ್ಡವ್ವೆ ಅಂತಾನೇ 3 ಹೆಸರುಗಳಿವೆ. ಒಟ್ಟಾರೆ ವಚನ ಸಾಹಿತ್ಯದಲ್ಲಿ If we delete the cross-reference names, ನಮಗ ಸುಮಾರು 235 ಶರಣೆಯರ ಉಲ್ಲೇಖ ಸಿಗುತ್ತದೆ. ಅದರಲ್ಲಿ ಪ್ರಮುಖವಾಗಿ 39 ಶರಣೆಯರು ವಚನಗಳನ್ನು ಬರದಿರುವ ಉಲ್ಲೇಖ ಇದೆ. ಕೆಲವರು ಒಂದೊಂದೇ ವಚನಗಳನ್ನು ಬರೆದಿದ್ದಾರೆ.

ಸಂವೇದನೆ:
ಸಂವೇದನೆ ಬಹಳ ಸಂಕೀರ್ಣ ಶಬ್ದ. ಭಾಷಾ ಶಾಸ್ತ್ರದ ಪ್ರಕಾರ ಮೂರು ಶಬ್ದಗಳನ್ನು ಒಳಗೊಂಡಿದೆ. ಮೂರು ಶಬ್ದಗಳ ಸಂಗಮ ಈ “ಸಂವೇದನೆ”

  1. Cognition / Awareness – ಅರಿವು, ಜ್ಞಾನ
  2. Feeling / Sensitivity – ಭಾವನೆ, ಅನುಭಾವ
  3. Conation – ಸಂಕಲ್ಪ, ಇಚ್ಛಾಶಕ್ತಿ.

ಅರಿವು, ಭಾವನೆ, ಸಂಕಲ್ಪಗಳು ಅಥವಾ ಜ್ಞಾನ, ಅನುಭಾವ, ಇಚ್ಛಾಶಕ್ತಿಗಳ ಸಂಗಮ ಈ ಸಂವೇದನೆ ಅನ್ನುವ ಶಬ್ದ. ಮನಸ್ಸಿಗೆ ತಟ್ಟುವುದು, ಅಂತರಾಳದ ಅಭಿವ್ಯಕ್ಕಿ, ಅಂತರಂಗದ ನೋವು ನಲಿವಿನ ಬಾಹ್ಯ ನಿರೂಪಣೆ ಇವು ಕೆಲ ವ್ಯಾಖ್ಯಾನಗಳು.

ಪ್ರಪ್ರಥಮ ಸಂವೇದನೆಯ ವಿಷಯವೇ ಲಿಂಗ ಸಮಾನತೆ. ಪುರುಷ ಮತ್ತು ಮಹಿಳೆಯರ ದೇಹ ರಚನೆಯ ಅಂತರ ಮತ್ತು ವೈಜ್ಞಾನಿಕವಾಗಿ ಪೂರಕವಾಗಿ ರಚನೆಯಾಗಿರತಕ್ಕಂತ ದೇಹ ರಚನೆ. ಸ್ತ್ರೀತನ ಮತ್ತು ಪುರುಷತನವನ್ನು ಕೇವಲ ದೈಹಿಕ ಕಾರಣಗಳಿಂದಾಗಿಯೇ ಬೇರೆ ಬೇರೆ ಮಾಡಿದರು. ಪುರುಷರು ಶಕ್ತಿಗೆ ಉದಾಹರಣೆಯಾದರೆ, ಸ್ತ್ರೀಯರು ಸಹನಶೀಲತೆ ಮತ್ತು ಸಂವೇದನೆಗೆ ಉದಾಹರಣೆಯಾದದ್ದನ್ನು ನಾವು ಎಲ್ಲ ಕಾಲಕ್ಕೂ ಕಾಣಬಹುದು. ಈ ಸಂವೇದನೆಯನ್ನು ಶರಣ ಜೇಡರ ದಾಸಿಮಯ್ಯನವರು, ಶರಣೆ ಸತ್ಯಕ್ಕ ಮತ್ತು ಶರಣೆ ಗೊಗ್ಗವ್ವೆಯರು ತಮ್ಮ ವಚನಗಳಲ್ಲಿ ವ್ಯಕ್ತಪಡಿಸಿದ್ದಾರೆ.

ಮೊಲೆ ಮುಡಿ ಬಂದಡೆ ಹೆಣ್ಣೆಂಬರು.
ಗಡ್ಡ ಮೀಸೆ ಬಂದಡೆ ಗಂಡೆಂಬರು.
ನಡುವೆ ಸುಳಿವ ಆತ್ಮನು
ಹೆಣ್ಣೂ ಅಲ್ಲ ಗಂಡು ಅಲ್ಲ ಕಾಣಾ! ರಾಮನಾಥ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-292/ವಚನ ಸಂಖ್ಯೆ-846)

ಮೊಲೆ ಮುಡಿ ಬಂದಡೆ ಹೆಣ್ಣೆಂಬರು.
ಮೀಸೆಕಾಸೆ ಬಂದಡೆ ಗಂಡೆಂಬರು
ಈ ಉಭಯದ ಜ್ಞಾನ,
ಹೆಣ್ಣೊ ಗಂಡೊ ನಾಸ್ತಿನಾಥಾ?
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-301/ವಚನ ಸಂಖ್ಯೆ-778)

ಮೊಲೆ ಮುಡಿ ಇದ್ದುದೆ ಹೆಣ್ಣೆಂದು ಪ್ರಮಾಣಿಸಲಿಲ್ಲ.
ಕಾಸೆ ಮೀಸೆ ಕಠಾರವಿದ್ದುದೆ ಗಂಡೆಂದು ಪ್ರಮಾಣಿಸಲಿಲ್ಲ.
ಅದು ಜಗದ ಹಾಹೆ; ಬಲ್ಲವರ ನೀತಿಯಲ್ಲ,
ಏತರ ಹಣ್ಣಾದಡೂ ಮಧುರವೆ ಕಾರಣ,
ಅಂದವಿಲ್ಲದ ಕುಸುಮಕ್ಕೆ ವಾಸನೆಯೆ ಕಾರಣ,
ಇದರಂದವ ನೀನೇ ಬಲ್ಲೆ ಶಂಭುಜಕ್ಕೇಶ್ವರಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-446/ವಚನ ಸಂಖ್ಯೆ-1226)

ಈ ಮೂರೂ ವಚನಗಳಲ್ಲಿ ಕಂಡು ಬರುವ ಒಂದೇ ಆಶಯ, ಸ್ತ್ರೀ ಪುರುಷರು ದೈಹಿಕವಾಗಿ ಬೇರೆ ಬೇರೆ ಅನಿಸಿದರೂ ಸಾಹಿತ್ಯಿಕ ಮತ್ತು ಸಾಮಾಜಿಕ ಕಳಕಳಿಯ ವಸ್ತುನಿಷ್ಠ ಚಿಂತನೆಯಲ್ಲಿ ಸರಿ ಸಮಾನರು.

ಸ್ತ್ರೀಯರಲ್ಲಿ ಸಮಾನತೆ, ಬಂಧುಗಳಲ್ಲಿ ಸಮಾನತೆ ಮತ್ತು ಸಮಾಜದಲ್ಲಿ ಸಮಾನತೆ ಕಾಣದೇ ಪೂಜಿಸಿ ಏನು ಫಲ, ಎಲ್ಲವೂ ವ್ಯರ್ಥ ಅಂತಾರೆ ಬಸವಣ್ಣನವರು.

ಲಿಂಗವ ಪೂಜಿಸಿ ಫಲವೇನಯ್ಯಾ,
ಸಮರತಿ ಸಮಕಳೆ ಸಮಸುಖವನರಿಯದನ್ನಕ್ಕ?
ಲಿಂಗವ ಪೂಜಿಸಿ ಫಲವೇನಯ್ಯಾ,
ಕೂಡಲಸಂಗಮದೇವರ ಪೂಜಿಸಿ
ನದಿಯೊಳಗೆ ನದಿ ಬೆರೆಸಿದಂತಾಗದನ್ನಕ್ಕ?
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-83/ವಚನ ಸಂಖ್ಯೆ-930)

ಸ್ಟೇಫನಿ ತವ್ಹಾ ಲಾಮಾ ರೇವಾಲ್ (ಫ್ರಾನ್ಸ್)‌:
ಫ್ರಾನ್ಸ್‌ನ ಮಹಿಳೆ ಡಾ. ಸ್ಟೇಫನಿ ತವ್ಹಾ ಲಾಮಾ ರೇವಾಲ್ ದಕ್ಷಿಣ ಏಷಿಯಾ ದೇಶಗಳ ಅಧ್ಯಯನ ಕೇಂದ್ರ (Centre for South Asian Studies: CNRS-EHESS) ದಲ್ಲಿನ ಅವರ ಸಂಶೋಧನಾ ಪ್ರಭಂಧ “Electoral Reservations, Political Representation and Social Change in India” ಪರಿವರ್ತನೆ ಯಲ್ಲಿ ಮಹಿಳೆಯರ ಪಾತ್ರವನ್ನು ವಿಶ್ಲೇಷಣೆ ಮಾಡಿದ್ದಾರೆ. ‌

  • ಅಮೇರಿಕಾದಲ್ಲಿ 1779 ರಿಂದ ಚುನಾವಣೆ ನಡೀತಾ ಇದ್ದರೂ ಮಹಿಳೆಯರಿಗೆ ಮತದಾನದ ಹಕ್ಕು ಸಿಕ್ಕಿದ್ದು 1924 ರಲ್ಲಿ. ಕಪ್ಪು ಜನಾಂಗದ ಮಹಿಳೆಯರು ಮತದಾನ ಮಾಡಿದ್ದು 1940 ರಲ್ಲಿ.
  • ಇಂಗ್ಲಂಡಿನಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ನೀಡಿದ್ದು 1926 ರಲ್ಲಿ.
  • ಜರ್ಮನಿ ಮತ್ತು ಫ್ರಾನ್ಸ್‌ ನಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಸಿಕ್ಕಿದ್ದು 1945 ರಲ್ಲಿ.
  • ಸ್ವಿಟ್ಝರ್‌ ಲ್ಯಾಂಡ್‌ ನಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಬಂದಿದ್ದು 1972 ರಲ್ಲಿ.
  • ಆದರೆ ಭಾರತದಲ್ಲಿ ಸ್ವಾತಂತ್ರ್ಯ ಬಂದಾಗ ಮಹಿಳೆಯರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಯಿತು.

ಮಹಿಳಾ ಹಕ್ಕು, ಸ್ತ್ರೀ ಸ್ವಾತಂತ್ರ್ಯ ಮಹಿಳಾ ಶೋಷಣೆ ಅಂತೆಲ್ಲಾ ಘೋಷಣೆಗಳನ್ನು ಕೂಗುತ್ತಾ ಇದ್ದೇವೆ. 12 ನೇ ಶತಮಾನದಲ್ಲಿ ಮಹಿಳೆಯರಿಗೆ ಎಷ್ಟು ಗೌರವ ಕೊಟ್ಟಿದ್ದರು ಬಸವಣ್ಣನವರು ಅಂದರೆ ವಿಶ್ವ ನಾಯಕ ಎನ್ನುವದು ಸಾರ್ಥಕ. ಅವರ ಒಂದು ವಚನವನ್ನು ನೋಡಿ ಮುಂದೆ ಹೋಗೋಣ. 

ಎಮ್ಮ ತಾಯಿ ನಿಂಬಿಯವ್ವೆ ನೀರನೆರೆದುಂಬಳು,
ಎಮ್ಮಯ್ಯ ಚೆನ್ನಯ್ಯ ರಾಯಕಂಪಣವ ಹೊರುವ,
ಎಮಗೆ ಆರೂ ಇಲ್ಲವೆಂಬಿರಿ,
ಎಮ್ಮಕ್ಕ ಕಂಚಿಯಲಿ ಬಾಣಸವ ಮಾಡುವಳು,
ಎಮಗೆ ಆರೂ ಇಲ್ಲವೆಂಬಿರಿ,
ಎಮ್ಮ ಅಜ್ಜರ ಅಜ್ಜರು ಹಡೆದ ಭಕ್ತಿಯ
ನಿಮ್ಮ ಕೈಯಲು ಕೊಂಬೆ,
ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-92/ವಚನ ಸಂಖ್ಯೆ-352)

ಮಹಿಳೆಯರ ಪ್ರತಿ ಬಸವಣ್ಣನವರಿಗೆ ಎಂಥ ಉದಾತ್ತ ಚಿಂತನೆ ಇತ್ತು ಎನ್ನುವುದನ್ನು ಈ ವಚನ ಸಾರುತ್ತದೆ. ಎಷ್ಟೇ ಸುಂದರವಾಗಿರುವ ಹೆಣ್ಣಮಗಳನ್ನು ನೋಡಿದರೂ ಅವಳು ತಾಯಿ ಎನ್ನುವ ಕಲ್ಪನೆಯೇ ಅತ್ಯಂತ ಶ್ರೇಷ್ಠ ಮನೋಧರ್ಮ. ಇದಕ್ಕಾಗಿಯೇ ಬಸವಣ್ಣನವರನ್ನು ನಾವು ವಿಶ್ವನಾಯಕನೆಂದು ಹೆಮ್ಮೆಯಿಂದ ಹೇಳಿಕೊಳ್ಳುವುದು.

ಇದನ್ನೇ ಸ್ಟೇಫನಿ ತವ್ಹಾ ಲಾಮಾ ರೇವಾಲ್ ತಮ್ಮ ಸಂಶೋಧನ ಪ್ರಬಂಧದಲ್ಲಿ ಬಾರತದಲ್ಲಿ ಮಹಿಳೆಯರಿಗೆ ಎಂಥ ಉತ್ತಮ ಸ್ಥಾನವಿತ್ತು ಎಂಬುದನ್ನು ಪ್ರತಿಪಾದಿಸಿದ್ದು.

  • ಕಾಯಕ ಮತ್ತು ದಾಸೋಹ ತತ್ವ: “ಕಾಯಕವೇ ಕೈಲಾಸ” ಎಂಬ ತತ್ವದ ಮೂಲಕ ಕೆಲಸವನ್ನು ಪೂಜೆಯೆಂದೂ, ದೈಹಿಕ ಶ್ರಮದ ಮಹತ್ವವನ್ನೂ ಎತ್ತಿ ಹಿಡಿದಿದ್ದಾರೆ.

ಕಾಯಕಕ್ಕೆ ಪರ್ಯಾಯ ಶಬ್ದವಿಲ್ಲ. ಇಂಗ್ಲೀಷಿನಲ್ಲಿ at best we can sayWork”. ಬಸವಣ್ಣನವರು ಕಾಯಕಕ್ಕೆ ನೀಡುವ ವ್ಯಾಖ್ಯಾನ ಅತ್ಯಂತ ವಿಭಿನ್ನವಾಗಿದೆ. ಕಾಯಕವನ್ನು ದೈವತ್ವಕ್ಕೆ ಹೋಲಿಸುತ್ತಾರೆ. ಕಾಯಕವು 3 ಅಂಶಗಳನ್ನು ಒಳಗೊಂಡಿದೆ.

Kayaka is having:

  • Self-Responsibility         : Take care of our self (ತನ್ನನ್ನು ತಾನು ರಕ್ಷಿಸಿಕೊಳ್ಳುವ ಜವಾಬ್ದಾರಿ).
  • Family Responsibility   : Take care of our family (ತನ್ನ ಕುಟುಂಬವನ್ನು ರಕ್ಷಿಸಿಕೊಳ್ಳುವ ಜವಾಬ್ದಾರಿ).
  • Social Responsibility     : Take care of all living beings in the world (ಸಮಷ್ಠಿಯನ್ನು ರಕ್ಷಿಸುವ ಜವಾಬ್ದಾರಿ).

12 ನೇ ಶತಮಾನದ ಕಾಲಘಟ್ಟದಲ್ಲಿನ ಕಾಯಕ ಕೇಂದೀಕೃತ ಸಾಮಾಜಿಕ ಬದುಕು ಅತ್ಯಂತ ಉದಾತ್ತವಾಗಿತ್ತು. ಎಲ್ಲ ಕಾಯಕಗಳೂ ಕೂಡ ಒಬ್ಬರನ್ನೊಬ್ಬರ ಆವಶ್ಯಕತೆಗಳ ಹಿತದೃಷ್ಟಿಯಿಂದ ಅವಲಂಬಿಸಿರುವಂಥವುಗಳಾಗಿದ್ದವು. ಕಮ್ಮಾರ, ಕುಂಬಾರ, ಚಮ್ಮಾರ, ಬಡಿಗೇರ, ಹೂಗಾರ ಮುಂತಾದ 102 ವೃತ್ತಿಗಳನ್ನೊಳಗೊಂಡ ಕಾಯಕಜೀವಿಗಳು ಅತ್ಯಂತ ಸ್ವಾಭಿಮಾದಿಂದ ಮತ್ತು ಶ್ರದ್ಧೆಯಿಂದ ಕಾಯಕ ಮಾಡಿಕೊಂಡಿದ್ದಂಥ ಕಾಲಘಟ್ಟವದು. ಕಾಯಕವನ್ನು ಎಲ್ಲರೂ ಮಾಡಬೇಕೆಂಬುದು ಕಡ್ಡಾಯವಾಗಿತ್ತು. ಎಲ್ಲರೂ ದುಡಿದೇ ಊಟ ಮಾಡಬೇಕೆಂಬುದು ಅಲಿಖಿತ ಶಾಸನವಾಗಿತ್ತು. ಕಾಯಕದಿಂದ ಬಂದ ಸಂಪಾದನೆಯನ್ನು ತನಗೆ ಎಷ್ಟು ಬೇಕೋ ಅಷ್ಟನ್ನು ಬಳಸಿಕೊಂಡು ಉಳಿದದ್ದನ್ನು ಸಮಷ್ಠಿಗೆ ದಾಸೋಹದ ಮೂಲಕ ಅರ್ಪಿಸುವುದು ಶ್ರೇಷ್ಠ ಕಾರ್ಯಗಳಲ್ಲೊಂದಾಗಿತ್ತು. ಎಲ್ಲ ಕಾಯಕಗಳೂ ಸರ್ವಸಮಾನವಾಗಿ ಕಂಡಂಥ ಕಾಲಘಟ್ಟ ಅದು 12 ನೇ ಶತಮಾನದ ಕಾಲಘಟ್ಟ.  

ಸ್ಕಾಟ್ಲಂಡ್‌ ಮೂಲದ ಆಡಮ್‌ ಸ್ಮಿಥ್‌ ಎಂಬ ರಾಜಕೀಯ ತತ್ವಜ್ಞಾನಿ ಕಾಯಕವನ್ನು “ಘನತೆ (Dignity)” ಎಂದನು. ಬಸವಣ್ಣನವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಾಯಕವನ್ನು “ದೈವತ್ವಕ್ಕೆ ಹೋಲಿಸುತ್ತಾರೆ. ಎಲ್ಲ ಕುಶಲಕರ್ಮಿಗಳನ್ನು “ಆಯಗಾರರು” ಎಂಬ ಆಧ್ಯಾತ್ಮಿಕ ಹೆಸರನ್ನು ಬಳಸಲಾಯಿತು. ಬ್ರಿಟೀಷ್‌ ಸಮಾಜವಾದಿಗಳು ಮತ್ತು ತತ್ವಜ್ಞಾನಿಗಳಾದ ಜೆ. ಎಸ್‌. ಮಿಲ್‌ (1806-1873) ಮತ್ತು ಜೆರೇಮಿ ಬೆಂಥಮ್‌ (17481832) ಮುಂತಾದವರು ಧರ್ಮ, ಸಾಮಾಜಿಕ, ರಾಜಕೀಯ ತಳಹದಿಯ ಮೇಲೆ ಆರ್ಥಿಕ ಸುಧಾರಣೆಗಳನ್ನು ತರಲು ಪ್ರಯತ್ನಿಸಿದರು. ಜರ್ಮನಿಯ ಕಾರ್ಲ ಮಾರ್ಕ್ಸ (18181883) ಇದಕ್ಕೆ ಉತ್ತಮ ಉದಾಹರಣೆ. ಆದರೆ ಸಂಪೂರ್ಣ ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯನ್ನು ಕ್ರೋಢೀಕರಿಸಲು ಆಗಲೇ ಇಲ್ಲ. ಆದರೆ ಬಸವಣ್ಣನವರು ಭಕ್ತಿ ಚಳುವಳಿಯ ಮೂಲಕ ತಂದ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯ ಕ್ರಾಂತಿ ಇಡೀ ವಿಶ್ವದಲ್ಲಿಯೇ ಅತ್ಯದ್ಭುತ. ಎಲ್ಲ ಬಸವಾದಿ ಶರಣರು ತಮ್ಮ ವಚನಗಳಲ್ಲಿ ಕಾಯಕದ ಪರಿಕಲ್ಪನೆಯನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.

ಶರಣ ಮನಸಂದ ಮಾರಿತಂದೆಯವರು:
ಕಾಯವಿಡಿದಿಹನ್ನಬರ ಶಿವಭಕ್ತಂಗೆ ಕಾಯಕವೆ ಕೈಲಾಸ.
ಕಾಯಕವಿಲ್ಲದವನ ಅರಿವು ವಾಯವಾಯಿತ್ತು.
ಅಡುಗೂಲಿಯ ಮನೆಯಂತೆ ಗಡಿಗೆಯ ಗಂಜಿಯಾಸೆಬೇಡ.
ಕೊಡುವರೆಂದೊಬ್ಬರ ಮನೆಗೆ ಅಡಿಗಡಿಗೆ ಹೋಗಬೇಡ.
ಇಂತಿವರಡಿಯ ಕಾಬುದಕ್ಕೆ ಮೊದಲೆ ಅಡಗಿದೆಯಲ್ಲಾ,
ಮನಸಂದಿತ್ತು ಮಾರೇಶ್ವರಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-92/ವಚನ ಸಂಖ್ಯೆ-352)

ಕಾಯವಿಡಿದಿಹನ್ನಬರ ಶಿವಭಕ್ತಂಗೆ ಕಾಯಕವೇ ಕೈಲಾಸ ಎಂಬಲ್ಲಿ ದೇಹವಿರುವವರೆಗೂ ಶರಣನು ಶ್ರದ್ಧೆಯಿಂದ ಮಾಡುವ ಕಾಯಕವು ಕೈಲಾಸಕ್ಕೆ ಸಮಾನ. ಇದು ಶ್ರಮದ ಗೌರವ, ನಿಷ್ಠೆ ಮತ್ತು ಸಮತೆಯನ್ನು ಎತ್ತಿ ಹಿಡಿಯುವ ಶರಣ ಸಂಸ್ಕೃತಿಯ ಮೂಲಮಂತ್ರವಾಗಿದೆ. ಇದು ಕಾಯಕದ ಶ್ರೇಷ್ಠತೆ ಮತ್ತು ಜ್ಯೇಷ್ಠತೆಯನ್ನು ತಿಳಿಸುತ್ತದೆ.

ಕಾಯಕಯೋಗಿ ಶರಣ ನುಲಿಯ ಚಂದಯ್ಯನವರು:
ಸತ್ಯ ಶುದ್ಧ ಕಾಯಕದಿಂದ ಬಂದ ದ್ರವ್ಯದಲ್ಲಿ
ಚಿತ್ತ ವಿಚ್ಛಂದವಾಗದಿರಬೇಕು.
ನೇಮದ ಕೂಲಿಯಂದಿನ ನಿತ್ಯ ನೇಮದಲ್ಲಿ ಸಂದಿಲ್ಲದಿರಬೇಕು.
ನೇಮದ ಕೂಲಿಯ ಬಿಟ್ಟು
ಹೇಮದಾಸೆಗೆ ಕಾಮಿಸಿ ದ್ರವ್ಯವ ಹಿಡಿದಡೆ
ತಾ ಮಾಡುವ ಸೇವೆ ನಷ್ಟವಯ್ಯಾ.
ನಿನ್ನಾಸೆಯ ವೇಷದ ಪಾಶಕ್ಕೆ ನೀನೆ ಹೋಗು.
ನನಗೆ ನಮ್ಮ ಜಂಗಮದ ಪ್ರಸಾದದಾಗೆ
ಚಂದೇಶ್ವರಲಿಂಗಕ್ಕೆ ಪ್ರಾಣವಯ್ಯಾ.
(ಸಮಗ್ರ ವಚನ ಸಂಪುಟ: ಏಳು-2021 / ಪುಟ ಸಂಖ್ಯೆ-461 / ವಚನ ಸಂಖ್ಯೆ-1327)

ಸತ್ಯ ಶುದ್ಧ ಕಾಯಕದಿಂದ ಬಂದ ದ್ರವ್ಯದಲ್ಲಿ ಚಿತ್ತ ವಿಚ್ಛಂದವಾಗದಿರಬೇಕು” ಎನ್ನುವಲ್ಲಿ ಕಾಯಕದ ಗಳಿಕೆಯಲ್ಲಿ ಮನಸ್ಸು ಚಂಚಲವಾಗದೆ, ಪ್ರಾಮಾಣಿಕತೆಯಿಂದ ದುಡಿದ ಹಣದಲ್ಲಿ ದಾಸೋಹಕ್ಕೆ ವಿನಿಯೋಗಿಸಬೇಕು ಎಂಬ ತತ್ವವನ್ನು ಇದು ಪ್ರತಿಪಾದಿಸುತ್ತದೆ. 

ಒಂದು ಕಾಯಕ ಜೀವಿಗಳನ್ನೊಳಗೊಂಡ ಪ್ರಬುದ್ಧ ಸಮಾಜವನ್ನು ಕಟ್ಟಲು ಟೊಂಕ ಕಟ್ಟಿ ನಿಂತ ಬಸವಣ್ಣನವರು ತಮ್ಮ ಕಾರ್ಯವಿಧಾನಗಳು ಮತ್ತು ತತ್ವಗಳನ್ನು ಪ್ರಯೋಗಿಸಿ ಯಶಸ್ವಿಯಾದ ಒಬ್ಬ ಶಕ್ತಿಶಾಲಿ ಸಮಾಜೋ-ಆರ್ಥಿಕ ಚಿಂತಕರು. ಕಾಯಕ ಮತ್ತು ದಾಸೋಹವೆಂಬ ಎರಡು ತತ್ವಗಳನ್ನು ಜಾರಿಗೆ ತರುವ ಮೂಲಕ ಒಂದು ಹೊಸ ಕ್ರಾಂತಿಜ್ಯೋತಿಯನ್ನು ಬೆಳಗಿಸಿ ಸಮಾಜದಲ್ಲಿ ಸರ್ವ ಸಮಾನತೆಯ ನಾಂದಿಯನ್ನು ಹಾಡಿದರು. ಬಸವಣ್ಣನವರ ಈ ವಚನ ಈ ಸರ್ವ ಸಮಾನತೆಯ ಆರ್ಥಿಕ ಕ್ರಾಂತಿಯ ಶಿವನ ಪ್ರಕಾಶವೆನ್ನಬಹುದು.   

ನಾನು ಆರಂಬವ ಮಾಡುವೆನಯ್ಯಾ, ಗುರುಪೂಜೆಗೆಂದು,
ನಾನು ಬೆವಹಾರವ ಮಾಡುವೆನಯ್ಯಾ, ಲಿಂಗಾರ್ಚನೆಗೆಂದು,
ನಾನು ಪರಸೇವೆಯನು ಮಾಡುವೆನಯ್ಯಾ, ಜಂಗಮ ದಾಸೋಹಕ್ಕೆಂದು.
ನಾನಾವಾವ ಕರ್ಮಂಗಳ ಮಾಡಿದಡೆಯು
ಆ ಕರ್ಮಫಲಭೋಗವ ನೀ ಕೊಡುವೆ ಎಂಬುದ ನಾನು ಬಲ್ಲೆನು.
ನೀ ಕೊಟ್ಟ ದ್ರವ್ಯವ ನಿಮಗಲ್ಲದೆ ಮತ್ತೊಂದಕ್ಕೆ ಮಾಡೆನು,
ನಿಮ್ಮ ಸೊಮ್ಮಿಂಗೆ ಸಲಿಸುವೆನು.
ನಿಮ್ಮಾಣೆ ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-193/ವಚನ ಸಂಖ್ಯೆ-709)

ಕಾಯಕ ತತ್ವದ ರಾಯಭಾರಿಯಾಗಿರುವ “ಆಯ್ದಕ್ಕಿ ಲಕ್ಕಮ್ಮ” ನವರ ಕಾಯಕ ನಿಷ್ಠೆ, ನೈತಿಕತೆಯ ಪ್ರಜ್ಞೆ ಅನುಪಮ ಮತ್ತು ಅಲೌಕಿಕವಾದದ್ದು. ಅದ್ಭುತ ವಚನದ ಮೂಲಕ ನೈತಿಕ ಆದರ್ಶ ಅಥವಾ ಸ್ಥೈರ್ಯ (Esprit de Corps-Morale) ಹೇಗಿರಬೇಕೆಂಬುದನ್ನು ನಿರೂಪಿದ್ದಾರೆ. ಮನಃಶುದ್ಧಿಯಿಂದ ಕಾಯಕ ಮಾಡಿದರೆ ಎಲ್ಲೆಡೆ ಸಂಪತ್ತಿನ ಮಳೆಯಾಗುತ್ತದೆ ಎನ್ನುವುದನ್ನು ಹೇಳಿದ್ದಾರೆ.  

ಮನ ಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ
ಸದ್ಭಕ್ತಂಗೆ ಎತ್ತ ನೋಡಿದತ್ತತ್ತ ಲಕ್ಷ್ಮಿ ತಾನಾಗಿಪ್ಪಳು
ಮಾರಯ್ಯಪ್ರಿಯ ಅಮರೇಶ್ವರಲಿಂಗದ ಸೇವೆಯುಳ್ಳನ್ನಕ್ಕರ.
(ಸಮಗ್ರ ವಚನ ಸಂಪುಟ: ಒಂದು-2021 / ಪುಟ ಸಂಖ್ಯೆ-867 / ವಚನ ಸಂಖ್ಯೆ-724)

ಕಾಯಕದಲ್ಲಿ ನಿರತರಾದವರು ಹೇಗಿರಬೇಕೆಂಬುದು ಈ ವಚನದ ಸಾರಾಂಶ. ಇದೇ ಆಧುನಿಕ ಮಾನವ ಸಂಪನ್ಮೂಲ ನಿರ್ವಣಾ ವಿಜ್ಞಾನ ನೈತಿಕ ಆದರ್ಶ ಅಥವಾ ಸ್ಥೈರ್ಯ (Esprit de Corps-Morale) ಎನ್ನುವ ತತ್ವ. ನೈತಿಕ ಶುದ್ಧವಿದ್ದಲ್ಲಿ ಸಮಾಜವು ಉನ್ನತ ಮಟ್ಟಕ್ಕೆ ಏರುವುದರಲ್ಲಿ ಸಂಶಯವೇ ಇರುವುದಿಲ್ಲ. ಇಂಥ ಉದಾತ್ತ ಚಿಂತನೆಯನ್ನು ಶರಣೆ ಆಯ್ದಕ್ಕಿ ಲಕ್ಕಮ್ಮನವರು 12 ನೇ ಶತಮಾನದಲ್ಲಿಯೇ ನಮ್ಮ ಮುಂದೆ ತೆರೆದಿಟ್ಟಿದ್ದಾರೆ.

ದಾಸೋಹ:
ಆತ್ಮ ಹೋಗಿ ಪರಮಾತ್ಮನನ್ನು ಸೇರಬೇಕು. ಜೀವ ಹೋಗಿ ಶಿವನನ್ನು ಕೂಡಬೇಕು. ಇದು ಅದ್ವೈತದ ಸಿದ್ಧಾಂತ. ಬಸವಣ್ಣನವರು ಇದನ್ನು ತಪ್ಪು ಅಂತಾರೆ. ಜೀವ ಹೋಗಿ ದೇವರ ಮನೆಯಲ್ಲಿ ಕುಳಿತರೆ ಸಮಾಜಕ್ಕೆ ಏನು ಉಪಯೋಗ ಅಂತ ಪ್ರಶ್ನಿಸಿದರು ಬಸವಣ್ಣನವರು. ಸೋಹಂ ಅಂದರೆ ಸಃ-ಅಹಂ (ಅವನೇ ನಾನು) ಅಂದರೆ ಅದ್ವೈತ ತತ್ವದಲ್ಲಿ ನಾನೇ ಅವನು. ದಾಸೋಹಂ (ದಾಸ ನಾನು). ಅಂದರೆ ನಿಸ್ವಾರ್ಥ ಸೇವೆ. ಸಕಲ ಜೀವಿಗಳ ನಿಸ್ವಾರ್ಥ ಸೇವೆ. ಉದಾಹರಣೆಗಾಗಿ ಎತ್ತು ಕೂಡ ದಾಸೋಹ ಮಾಡುತ್ತದೆ. ಹೊಟ್ಟನ್ನು ತಾನು ತಿಂದು ಕಾಳನ್ನು ನಮಗೆ ನೀಡುತ್ತದೆ. ಹೊಲ ಕೂಡ ದಾಸೋಹ ಮಾಡುತ್ತದೆ. ಮಣ್ಣನ್ನು ತಾನು ತಿಂದು ಬೇಳೆಯನ್ನು ನಮಗೆ ನೀಡುತ್ತದೆ. ಆಕಳು ಕೂಡ ದಾಸೋಹ ಮಾಡುತ್ತದೆ. ಜೋಳದ ಕಣಿಕೆಯನ್ನು ತಾನು ತಿನ್ನುತ್ತದೆ. ಹಾಲನ್ನು ನಮಗೆ ನೀಡುತ್ತದೆ. ಹೀಗೆ ಶೇಷವನ್ನು ತಾನು ಇಟ್ಟುಕೊಂಡು ವಿಶೇಷವನ್ನು ಸಮಾಜಕ್ಕೆ ನೀಡುವುದೇ ದಾಸೋಹ.

ಬಸವಣ್ಣನವರ ವಚನ:
ಜನ್ಮ ಜನ್ಮಕ್ಕೆ ಹೋಗಲೀಯದೆ,
“ಸೋSಹಂ” ಎಂದೆನಿಸದೆ “ದಾಸೋಹಂ” ಎಂದೆನಿಸಯ್ಯಾ.
ಲಿಂಗಜಂಗಮದ ಪ್ರಸಾದವ ತೋರಿ ಬದುಕಿಸಯ್ಯಾ
ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021 / ಪುಟ ಸಂಖ್ಯೆ-123 / ವಚನ ಸಂಖ್ಯೆ-474)

ದೈವತ್ವ ಸಮಾಜಕ್ಕೆ ಉಪಯೋಗ ಬರಬೇಕು. ದೈವತ್ವದ ಸಾಮಾಜೀಕರಣವೇ “ದಾಸೋಹ”. ಬಸವಣ್ಣನವರ ಅತಿ ದೊಡ್ಡ ಕಲ್ಪನೆ ಎಂದರೆ ಕನಸು ಹಸಿವುಮುಕ್ತ ಸಮಾಜ. ಬಸವ ಕಲ್ಯಾಣದಲ್ಲಿ ಇಂದಿಗೂ ಬಂದವರ ಓಣಿ, ಅಂಬಲಿ ಓಣಿ, ಗಂಜಿಕೇರಿ ಮುಂತಾದ ಹೆಸರಿನ ಓಣಿಗಳು ಇದ್ದಾವೆ. ಬಂದವರಿಗೆ ಮಜ್ಜಿಗೆ, ಗಂಜಿ, ಅಂಬಲಿ ಕೊಟ್ಟು ಸತ್ಕರಿಸಲಾಗುತ್ತಿತ್ತು. ಅತ್ಯಂತ ವ್ಯಸ್ಥಿತವಾಗಿ ಊರನ್ನು ಬೆಳೆಸಲಾಗಿತ್ತು. ಹಸಿವು ಮುಕ್ತ ಸಮಾಜವನ್ನು ಕಟ್ಟುವುದಕ್ಕೆ ತಂದ ಪರಿಕಲ್ಪನೆಯೆ ಕಾಯಕ ಮತ್ತು ದಾಸೋಹ.

ಅಮೂಲ್ಯವಾದ ತತ್ವಗಳನ್ನು ತಮ್ಮ ವಚನಗಳಲ್ಲಿ ಕ್ರೋಢೀಕರಿಸಿ ಸಮಾಜವನ್ನು ಎಚ್ಚರಿಸಿದವರು 12 ನೇ ಶತಮಾನದ ವಚನಕಾರರು ಮತ್ತು ವಚನಕಾರ್ತಿಯರು. ಇವರ ವಚನಗಳು ಸಾಮಾಜಿಕ ಸಮಸ್ಯೆ, ವೈಚಾರಿಕ ನಿಲುವುಗಳನ್ನು ನಮ್ಮದುರಿಗೆ ತಂದು ನಿಲ್ಲಿಸುತ್ತವೆ. ಹೀಗೆ ಶರಣರು ನಮಗಾಗಿ ಬದುಕಿ ತಮ್ಮ ಗುರುತುಗಳಾದ ವಚನಗಳನ್ನು ಬಿಟ್ಟು ಹೋಗಿದ್ದಾರೆ. ನಮಗೆ ವಚನಗಳು ಅರಿವನ್ನು ಹುಟ್ಟಿಸಬೇಕು. ಆಗ ಶರಣರು ಕಂಡ ಕನಸು ನನಸಾಗುತ್ತದೆ ಅವರು ನಮಗಾಗಿ ಮಾಡಿದ ತ್ಯಾಗ ಸಾರ್ಥಕವಾಗುತ್ತದೆ ಅಂತ ಹೇಳತಾ ಶರಣ ಮೋಳಿಗೆ ಮಾರಯ್ಯನವರ ಒಂದು ವಚನದ ಮೂಲಕ ಈ ಲೇಖನಕ್ಕೆ ಅಲ್ಪ ವಿರಾಮ ಹೇಳುತ್ತೇನೆ ಯಾಕಂದರೆ ಇಂಥ ಉದಾತ್ತ ಚಿಂತನೆಗಳಿಗೆ ಎಂದೂ ಪೂರ್ಣವಿರಾಮ ಇರೋದಿಲ್ಲ.   

ಆನೆ ಕುದುರೆ ಭಂಡಾರವಿರ್ದಡೇನೊ?
ತಾನುಂಬುದು ಪಡಿಯಕ್ಕಿ, ಒಂದಾವಿನ ಹಾಲು, ಮಲಗುವುದರ್ಧ ಮಂಚ.
ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ.
ಒಡಲು ಭೂಮಿಯ ಸಂಗ, ಒಡವೆ ತಾನೇನಪ್ಪುದೊ?
ಕೈವಿಡಿದ ಮಡದಿ ಪರರ ಸಂಗ, ಪ್ರಾಣ ವಾಯುವಿನ ಸಂಗ.
ಸಾವಿಂಗೆ ಸಂಗಡವಾರೂ ಇಲ್ಲ ಕಾಣಾ,
ನಿಃಕಳಂಕ ಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-560/ವಚನ ಸಂಖ್ಯೆ-1504)

ಶರಣು ಶರಣಾರ್ಥಿಗಳು.

ಸಂಗ್ರಹ ಮತ್ತು ಲೇಖನ:
ಡಾ. ವಿಜಯಕುಮಾರ ಕಮ್ಮಾರ,
“ಸವಿಚರಣ” ಸುಮತಿ ಇಂಗ್ಲೀಷ್‌ ಶಾಲೆಯ ಹತ್ತಿರ,
ಸುಭಾಷ್‌ ನಗರ, ಕ್ಯಾತ್ಸಂದ್ರ,
ತುಮಕೂರು – 572 104.
ಮೋ. ನಂ: +91 9741 357 132.
ಈ-ಮೇಲ್‌: vijikammar@gmail.com

ಸಹಾಯಕ ಗ್ರಂಥಗಳು:

  • ಆಧುನಿಕ ಜಗತ್ತಿಗೆ ಶ್ರೀ ಬಸವೇಶ್ವರರ‌ ಹೊಸ ಸಂದೇಶ: ಡಾ. ಎಸ್‌. ವಿ. ಅಯ್ಯನಗೌಡರ, ಶ್ರೀಮತಿ. ಶಕುಂತಲಾ.
  • ನಾನು ಕಲಬುರ್ಗಿ: ಡಾ. ರಾಜೇಂದ್ರ ಚೆನ್ನಿ, ಡಾ. ರಹಮತ್‌ ತರೀಕೆರೆ, ಡಾ. ಮೀನಾಕ್ಷಿ ಬಾಳಿ.
  • ಬಸವಣ್ಣನ ವಚನಗಳ ವರ್ಣನಾತ್ಮಕ ವ್ಯಾಕರಣ: ಡಾ. ನಾಗರಾಜ ದೊರೆ.
  • ಶರಣರು ಮತ್ತು ಕಾಯಕ: ಡಾ. ಬಸವರಾಜ ಮಲಶೆಟ್ಟಿ.
  • ವಚನಗಳಲ್ಲಿ ನೈತಿಕ ದೃಷ್ಟಿ: ಡಾ. ಉಷಾಕಿರಣ್.‌
  • ವಚನಗಳಲ್ಲಿ ಶರಣ ಪರಿಕಲ್ಪನೆ: ಡಾ. ಎಂ. ಬಿ. ಹೂಗಾರ.
  • ವಚನಗಳಲ್ಲಿ ಮಾಯೆ, ಸಂಸಾರ: ಡಾ. ಶೈಲಜಾ ಉಡಚಣ.
  • ವಚನಗಳಲ್ಲಿ ದೃಷ್ಟಾಂತಗಳು: ಡಾ. ರಾಜಶೇಖರ ಜಮದಂಡಿ.
  • ವಿಚಾರ ಸಮರ: ಶ್ರೀ. ದುಂಡಪ್ಪ ರುದ್ರಪ್ಪ ಕೋರಿ.
  • ದಲಿತ ವಚನಕಾರರು-ವೈಚಾರಿಕ ಪ್ರಜ್ಞೆ: ಡಾ. ಮಹೇಂದ್ರ ಜಿ. ಹರಿಹರ.
  • ವಚನಧರ್ಮ-ವೈಚಾರಿಕ ವಿವೇಚನೆ: ಶ್ರೀ. ಪ್ರಕಾಶ ಗಿರಿಮಲ್ಲನವರ.
  • ವಚನ ಸಾಹಿತ್ಯ ಮತ್ತು ಆಧುನಿಕ ಕನ್ನಡ ಸಾಹಿತ್ಯ ಮುಖಾಮುಖಿ: ಸಂ. ಡಾ. ವೀರಣ್ಣ ರಾಜೂರ.
  • ವಚನ ಸಾಹಿತ್ಯದಲ್ಲಿ ಸಮಾಜೋ-ಭಾಷಿಕ ಚಿಂತನೆಗಳು: ಡಾ. ವಿ. ಶಿವಾನಂದ.
  • ಪರ್ಯಾಯ ಸಂಸ್ಕೃತಿ ವಚನ ಸಂಪುಟ: ಡಾ. ಸಿ. ವೀರಣ್ಣ.
  • ಸಂಸ್ಕೃತಿ ಕಥನ: ಸಂ. ಶ್ರೀ. ಅಗ್ರಹಾರ ಕೃಷ್ಣಮೂರ್ತಿ.
  • ಯುಗಯಾತ್ರೀ ಭಾರತೀಯ ಸಂಸ್ಕೃತಿ: ಸಂ. ಡಾ. ಹರಿದಾಸ ಭಟ್ಟಾಚಾರ್ಯ.
  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ:
    • ಮೋಬೈಲ್ ನಂ. 9741 357 132
    • e-Mail ID: info@vachanamandara.in / admin@vachanamandara.in

Loading

Leave a Reply